ಪ್ರಾಚೀನ ಯುಗ, ಮಧ್ಯಯುಗ ಮತ್ತು ಆಧುನಿಕ ಯುಗಗಳಲ್ಲಿ ಸ್ತ್ರೀಯರ ಸ್ಥಾನಮಾನಗಳು ಏರು ಪೇರಾಗಿರುವುದು ಕಂಡುಬರುತ್ತದೆ. ಒಂದು ಕಾಲದಲ್ಲಿ ಸ್ತ್ರೀ ದೇವರಿಗೆ ಸಮೀಪವಾದ ಸ್ಥಾನಮಾನವನ್ನು ಪಡೆದು ಪೂಜಿಸಲ್ಪಟ್ಟಿದ್ದಾಳೆ. ಮತ್ತೊಮ್ಮೆ ಪುರುಷನ ಕೈಗೊಂಬೆಯಾಗಿ ಪರಿಗಣಿಸಲ್ಪಟ್ಟಿದ್ದಾಳೆ. ಇನ್ನೊಮ್ಮೆ ಪುರುಷನಿಗೆ ಸರಿಸಮಾನವಾಗಿ ಗೌರವಿಸಲ್ಪಟ್ಟಿದ್ದಾಳೆ.

ಕ್ರಮೇಣ ಹೆಣ್ಣನ್ನು ಉಪಭೋಗದ ವಸ್ತುವನ್ನಾಗಿ ಪರಿಗಣಿಸಲ್ಪಟ್ಟು, ಆಕೆಯನ್ನು ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮದುವೆ ಮಾಡಿಕೊಳ್ಳುವಾಗ ಮತ್ತು ಶುಭಕಾರ್ಯಗಳಲ್ಲಿ ಭಾಗವಹಿಸುವಾಗ ಅಂಗ ಸಾಮುದ್ರಿಕೆ, ಆಕೆಯ ಆಕಾರ, ಕೂದಲು, ಸುಳಿ, ಮುಂತಾದ ದೇಹದ ಪ್ರತಿಯೊಂದು ಅಂಗಗಳನ್ನು ಪರಿಶೀಲಿಸಿ ಆರಿಸುತ್ತಾರೆ. ಜೊತೆಗೆ ದೇಹದ ಆಕಾರ, ಕೂದಲು, ಸುಳಿ, ಅಂಗಸಾಮುದ್ರಿಕೆಗಳ ಬಗೆಗೆ ತಮ್ಮದೇ ಆದ ಕೆಲವೊಂದು ನಂಬಿಕೆಗಳನ್ನು ಹೊಂದಿದ್ದಾರೆ. ಕೆಲವೆಡೆ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುವುದುಂಟು. ವಿಶೇಷವಾಗಿ ಮದುವೆ ಮಾಡಿಕೊಳ್ಳುವ ಪೂರ್ವದಲ್ಲಿಯೇ ಅನುಭವಿ ಹಿರಿಯರಿಂದ ಹೆಣ್ಣಿನ ದೇಹದ ಅಂಗಾಂಗಗಳ ಪರೀಕ್ಷೆ ಮಾಡಿಸುವ ರೂಢಿ ಬಂತು. ಈ ಅನುಭವಿ ಹಿರಿಯ ಹೆಂಗಸರು ಊರೂರಿಗೆ ಇರುತ್ತಿದ್ದು, ಯಾರಾದರೂ ಹೆಣ್ಣು ನೋಡಲು ಹೋಗುವಾಗ ಆ ಹಿರಿಯ ಹೆಂಗಸರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಹೆಣ್ಣಿನ ಅಂಗಾಂಗಗಳ ಆಧಾರ ಹಾಗೂ ಆಕೆಯ ಮೈಮೇಲಿನ ರೋಮ, ಸುಳಿಗಳು ಮುಂತಾದವುಗಳ ಆಧಾರದ ಮೇಲೆ ಪತಿವ್ರತಾ ಸ್ತ್ರೀ, ವಿಧವಾಸ್ತ್ರೀ, ದರಿದ್ರಸ್ತ್ರೀ, ಭಾಗ್ಯವತೀಸ್ತ್ರೀಗಳೆಂದು ವಿಭಾಗೀಕರಣ ಮಾಡಿಕೊಳ್ಳುವರು. ಅಂಗಾಂಗಗಳನ್ನು ನೂಲು ಹಿಡಿದು ಅಳತೆಯನ್ನು ನೋಡುವ ಕ್ರಮವು ಸಹ ಇದೆ.

ಸ್ತ್ರೀಯಳ ತಲೆಯು ದೊಡ್ಡದಿದ್ದರೆ ದುರ್ಮಾರ್ಗಿಯೂ, ಹಿಂಭಾಗದಲ್ಲಿ ಎತ್ತರವಿದ್ದರೆ ಪತಿಗೆ ಕೇಡು ಬಯಸುವವಳೂ, ತಲೆಯಲ್ಲಿ ಕೂದಲು ಸುಳಿಯಿದ್ದರೆ ಮುಂಡೆಯೂ, ತಲೆಯ ಕೂದಲು ಬಿರುಸಾಗಿದ್ದರೆ ಜಗಳಗಂಟಿಯೂ, ಎದುರು ಕೂದಲಿದ್ದರೆ ಹಾದರಗಿತ್ತಿಯೂ, ಮುಂಡೆಯೂ ಆಗುವಳು. ಕೂದಲು ದೀರ್ಘವಾಗಿಯೂ, ಮೃದುವಾಗಿಯೂ, ಕಪ್ಪಾಗಿಯೂ ಇದ್ದರೆ ಭಾಗ್ಯವಂತಿ. ಹಣೆಯು ಸಮವಾಗಿದ್ದರೆ ಸಂಪತ್ತುಶಾಲಿಯು, ಅಗಲವಿದ್ದರೆ ಮಾವನಿಗೂ, ಗಂಡನಿಗೂ ವಿರೋಧಿಯೂ, ಹಣೆಯಲ್ಲಿ ಸುಳಿಯಿದ್ದರೆ, ವ್ಯಭಿಚಾರಿಯೂ, ಮುಂಡೆಯೂ ಆಗುವಳು. ಹಣೆಯಲ್ಲಿ ಮಚ್ಚೆಯಂಥ ತಿಲಕವಿದ್ದರೆ ಪ್ರಥಮ (ಚೊಚ್ಚಿಲ) ದಲ್ಲಿ ಉತ್ತಮ ಗಂಡು ಮಗುವನ್ನು ಹಡೆಯುವವಳು ಆಗುವಳು.

ಹುಬ್ಬುಗಳು ವಿಶೇಷ ಅಗಲವಿದ್ದರೆ ಬಿದಿಗೆಯ ಚಂದ್ರನಂತೆ, ಬೊಗ್ಗಿದ್ದರೆ ಐಶ್ವರ್ಯವಂತೆಯೂ, ಗಂಟುಗಟ್ಟಿದಂಥವು ಇದ್ದರೆ ಹಾದರಗಿತ್ತಿಯೂ, ದರಿದ್ರೆಯೂ ಹುಬ್ಬುಗಳಲ್ಲಿ ಸುಳಿಯಿದ್ದರೆ ಕುಲಕಂಟಕಿಯೂ ಆಗುವಳು.

ಕಣ್ಣುಗಳು ತಾವರೆಯ ಎಸಳಿನಂತಿದ್ದರೆ ಸುಮಂಗಲೆಯೂ, ಸೊಟ್ಟಾಗಿದ್ದರೆ ದುಷ್ಟೆಯೂ, ಗುಂಡಾಗಿದ್ದರೆ ಗಂಡನನ್ನು ಹಾಳು ಮಾಡುವವಳೂ, ತಗ್ಗಾಗಿದ್ದರೆ ದುರ್ಮಾರ್ಗಿಯೂ, ಹಳದಿ ವರ್ಣವಿ‌ದ್ದರೆ ಹಾದರಗಿತ್ತಿಯೂ, ಕಪಿಲ ವರ್ಣವಿದ್ದರೆ ಕಷ್ಟಜೀವಿಯೂ, ಬೆಕ್ಕಿನ ಕಣ್ಣಿನಂತಿದ್ದರೆ ಪುಕ್ಕೆಯೂ, ಮೇಲ್ ಗಣ್ಣಿದ್ದರೆ ಮೇಲಾದ ಧನವಂತಿಯೂ, ಬಾರು ಗಣ್ಣಿದ್ದರೆ ದೂರದೃಷ್ಟಿಯೂ, ಕಡೆನೋಟದವಳು, ಬಡವಿಯೂ, ಚಂಚಲ ನೋಟದವಳು ಹಂಚಿಕೆಯಿಂದ ಹಾದರ ಮಾಡುವವಳು ಆಗುವಳು.

ಕಿವಿಗಳು ಮೆತ್ತಗಿದ್ದರೆ ರತ್ನಾಭರಣಗಳನ್ನು ಧರಿಸುವವಳು, ಗಟ್ಟಿ ಇದ್ದರೆ ಶ್ರೇಷ್ಟವಾದ ಬಂಗಾರದ ಒಡವೆಗಳನ್ನು ಧರಿಸುವವಳೂ ಆಗುವಳು. ಕಿವಿಗಳು ದೀರ್ಘವಾಗಿ ವಿಶಾಲವಾಗಿದ್ದರೆ ಭಾಗ್ಯವತಿ, ವಕ್ರವಾಗಿದದರೆ ದರಿದ್ರಳು, ಮೂಗು ಚಿಕ್ಕದಾಗಿ ಸಮವಾಗಿದ್ದರೆ ಸದ್ಗುಣವುಳ್ಳವಳು, ಉದ್ದವಾಗಿಯೂ ದೊಡ್ಡವಾಗಿಯೂ ಇದ್ದರೆ ದುರ್ಗಣವುಳ್ಳವಳು, ಸಂಪಿಗೆಯ ತೆನೆಯಂತಿದ್ದರೆ ಸುಮಂಗಲೆಯೂ, ಸೊಟ್ಟಗಿದ್ದರೆ ಕೆಟ್ಟ ನಡತೆಯುಳ್ಳವಳು, ಎಡಮೂಗಿನ ಮಚ್ಚೆಯಿದ್ದರೆ ಧನವಂತಿಯೂ ಮೂಗಿನ ಹೊರಳಿಯಲ್ಲಿ ಸುಳಿಯಿದ್ದರೆ ದುರುಳೆಯು ಆಗಿರುತ್ತಾಳೆ.

ಬಾಯಿ ಬಹಳ ದೊಡ್ಡದಿದ್ದರೆ ಅಡ್ಡದಾರಿ ಹಿಡಿಯುವವಳು, ತೆರವಾಯಿಯಿದ್ದರೆ ಗುರು ಹಿರಿಯರಿಗೆಲ್ಲ ಹೊರತಾಗುವವಳೂ ಮುಗುಳ್ನಗೆಯವಳು, ಹಾದರಗಿತ್ತಿಯೂ ಆಗುವಳು, ಹಲ್ಲುಗಳು ಸಮವಾಗಿದ್ದು ಚಂದವಿದ್ದರೆ ಸುಖಿಯೂ, ಡೊಂಕು ಡೊಂಕಾಗಿದ್ದರೆ ದುಷ್ಟೆಯೂ, ಬಿಡಿಬಿಡಿಸಿ ಇಟ್ಟಂತಿದ್ದರೆ ಬಡವೆಯೂ, ಸುಟ್ಟ ಹಾಗಿದರೆ ಕೆಟ್ಟವಳೂ, ಶುಭ್ರವಾಗಿಯೂ ಚಿಕ್ಕದಾಗಿಯೂ ಸಮವಾಗಿದ್ದರೆ ಸಂಪತ್ತುಳ್ಳವಳು, ದೊಡ್ಡದಾಗಿಯೂ ಹೆಚ್ಚು ಕಡಿಮೆಯಾಗಿಯೂ ಇದ್ದರೆ ಕಷ್ಟ ಪಡುವವಳು ಆಗುವಳು. ನಾಲಿಗೆಯು ದೊಡ್ಡದಾಗಿದ್ದರೆ ಕುಲಹೀನೆಯೂ, ಹಳದಿ ವರ್ಣವಿದ್ದರೆ ದುಷ್ಟಳೂ ಆಗುವಳು.

ಕುತ್ತಿಗೆಯು ಶಂಖದಂತಿದ್ದರೆ ಅತ್ತೆ, ಮಾವ, ಭಾವ, ಮೈದುನರಿಗೆಲ್ಲ ಹಿತಸ್ಥಳೂ, ಧನವಂತಳು, ದುಂಡಾಗಿಯೂ, ನುಣುಪಾಗಿಯೂ, ಮೂರು ಮಡಿಕೆಗಳುಳ್ಳದ್ದಾಗಿಯೂ ಇದ್ದರೆ ಸಂಪತ್ತುಳ್ಳವಳು. ಅತಿ ದೀರ್ಘವಾಗಿಯೂ, ಅತಿ ಕುರಚಾಗಿಯೂ ಇದ್ದರೆ ದರಿದ್ರಳು. ಎತ್ತರವಿದ್ದರೆ ವಂಶನಾಶಿನಿಯೂ, ಸಣ್ಣದಾಗಿದ್ದರೆ ಹಣವಂತಿಯೂ, ಬಹಳ ಸಣ್ಣದಾಗಿದ್ದರೆ ಬಂಜೆಯೂ ಆಗುವಳು. ಕುತ್ತಿಗೆಯಲ್ಲಿ ಸುಳಿ ಇದ್ದರೆ ಬಂಜೆಯೂ, ಮಚ್ಚೆಯಿದ್ದರೆ ಚೊಚ್ಚಿಲ ಗಂಡುಮಗುವನ್ನು ಹಡೆಯುವವಳು ಆಗುವಳು. ಸ್ವರವು ಕೋಗಿಲದಂತಿದ್ದರೆ ಸುಖವಂತೆಯೂ, ಕಾಗೆಯಂತಿದ್ದರೆ ಮುಂಡೆಯೂ, ಬೆಕ್ಕಿನಂತಿದ್ದರೆ ಕಳ್ಳಿಯೂ ಆಗುವಳು.

ಭುಜಗಳು ಗಡತರವಿದ್ದರೆ ದುಃಖಿಯೂ, ಅತಿ ಚಿಕ್ಕದಿದ್ದರೆ ವಿಧವೆಯೂ ಆಗುವಳು. ಭುಜದಲ್ಲಿ ಕೂದಲಿದ್ದರೆ ದರಿದ್ರೆಯೆಂದು ತಿಳಿಯಬೇಕು. ಹೆಗಲು ಎತ್ತರವಿದ್ದರೆ ಒಡಹುಟ್ಟಿದವರಿಗೆ ಕೇಡು, ಅಗಲವಿದ್ದರೆ ಬಳಗವಂತಿಯು, ಹೆಗಲ ಮೇಲೆ ಕೂದಲಿದ್ದರೆ ಹಾದರಗಿತ್ತಿಯೂ, ತುಡುಗಿಯೂ, ಬಡವಿಯೂ ಆಗುವಳು. ಹೆಗಲ ಮೇಲೆ ಸುಳಿಯಿದ್ದರೆ ಮುಂಡೆ ಆಗುವಳು. ಬಗಲಲ್ಲಿ ಕೂದಲಿದ್ದರೆ ದುಃಖಿಯೂ, ಮಚ್ಚೆಯಿದ್ದರೆ ವಂಶನಾಶಿನಿಯೂ ಆಗುವಳು.

ಮೊಲೆಗಳು ಗುಂಡಾಗಿ ಎರಡೂ ಸಮವಿದ್ದರೆ ಪುತ್ರ ಪೌತ್ರಾಭಿಯುಳ್ಳವಳೂ, ಬಲಮೊಲೆ ಎಡಮೊಲೆಗಿಂತ ಸಣ್ಣದಿದ್ದರೆ ಭಾಗ್ಯವತಿಯೂ, ಬಲಮೊಲೆ ಎಡಮೊಲೆಗಿಂತ ದೊಡ್ಡದಿದ್ದರೆ ಬಡವೆಯು, ಉದ್ದವಾಗಿದ್ದರೆ ಜಿದ್ದ ನಡೆಸುವವಳು, ಮೊಲೆಯಲ್ಲಿ ಕೂದಲು ಬೆಳೆದಿದ್ದರೆ ಮುಂಡಯಾಗುವಳು.

ಪಕ್ಕೆಗಳು ಬಡಕಾಗಿದ್ದರೆ ಗಂಡನಿಗೆ ಅರಿಷ್ಟವು, ಅಲ್ಲಿ ಕೂದಲು ಬೆಳೆದಿದ್ದರೆ ಮುಂಡೆಯೂ ಹಾದರಗಿತ್ತಿಯೂ ಆಗುವಳು, ಕೈಗಳೆರಡೂ ಸಮವಾಗಿದ್ದು ಶೋಭಿಸುತ್ತಿದ್ದರೆ ಧನವಂತಿಯೂ, ಸಮವಾಗಿಲ್ಲದಿದ್ದರೆ ದುಃಖಿಯೂ ಆಗುವಳು, ಸೊಟ್ಟಾಗಿಯೂ ಕಠಿಣವಾಗಿಯೂ ಇದ್ದರೆ ದುರಾಚಾರಿಣಿಯೂ. ಅಂಗೈಗಳು ಮೃದುವಾಗಿದ್ದರೆ ಧನವಂತಿಯೂ, ಬಿರುಸಾಗಿದ್ದರೆ ಬಡವಿಯೂ ಆಗುವಳು.

ಹೊಟ್ಟೆಯು ದೊಡ್ಡದಿದ್ದರೆ ಕಷ್ಟಜೀವಿಯೂ, ಮುಂಡೆಯು, ಕಪ್ಪೆಯ ಹೊಟ್ಟೆಯಂತಿದ್ದರೆ ಸಂಪತ್ತುಶಾಲಿಯೂ, ಜೋಲು ಬಿದ್ದಿದ್ದರೆ ಮಾವನಿಗೆ ಅರಿಷ್ಟ. ಹೊಟ್ಟೆ ಮೃದುವಾಗಿಯೂ ವಿಶಾಲವಾಗಿಯೂ ಇದ್ದರೆ ಸಂತಾನವುಳ್ಳವಳು. ಹೊಟ್ಟೆಯ ಮೇಲೆ ಮೂರು ಮಡಿಕೆಗಳು ಇದ್ದರೆ ಭೋಗವತಿಯಾಗುವಳು.

ಹೊಕ್ಕಳು ವಿಶಾಲವಾಗಿದ್ದು ಎಡದಿಂದ ಬಲಕ್ಕೆ ಸುತ್ತಿದರೆ ಪುತ್ರವತಿಯೂ ಧನವಂತಿಯೂ, ಚಿಕ್ಕದಾಗಿ ಕೂದಲು ಬೆಳೆದಿದ್ದರೆ ಸಂತಾನಹೀನತೆಯೂ, ಹೊಕ್ಕಳಲ್ಲಿ ಸುಳಿ ಇದ್ದರೆ ಹಾದರಗಿತ್ತಿಯೂ ಆಗುವಳು, ಬಲಬಾಗ ತಿರುಗಿ ತಗ್ಗಾಗಿದ್ದರೆ ಆಯುಷ್ಯ ವೃದ್ಧಿಯುಳ್ಳವಳು, ಎಡಭಾಗ ತಿರುಗಿದ್ದರೆ ಆಯುಷ್ಯ ಕ್ಷೀಣವಾಗಿರುತ್ತದೆ.

ನಡುವು ಸಣ್ಣದಿದ್ದರೆ ಶ್ರೀಮಂತ ಮಡದಿಯೂ, ದೊಡ್ಡದಿದ್ದರೆ ಕಡುಬಡವಿಯೂ ಆಗುವಳು, ಸೊಂಟದಲ್ಲಿ ಸುಳಿ ಇದ್ದರೆ ಸಂತಾನಹೀನೆಯಾಗುವಳು, ಬೆನ್ನು ಅಗಲವಿದ್ದರೆ ಬಳಗವಂತಿಯೂ, ಉದ್ದವಾಗಿದ್ದರೆ ಒಡಹುಟ್ಟಿದವರಿಗೆ ಹಾನಿ ತರುವವಳೂ ಆಗುವಳು.

ಯೋನಿಯು ಅಗಲವಾಗಿಯೂ ತ್ರಿಕೋಣಾಕಾರವಾಗಿಯೂ ಇದ್ದರೆ ಸಂಪತ್ ಶಾಲಿಯೂ ಅಲ್ಪಾಯುಷಿಯೂ, ಚಿಕ್ಕದಾಗಿಯೂ, ಉದ್ದವಾಗಿಯೂ, ವಿಶೇಷ ಕೂದಲುಗಳಿಂದ ಮುಚ್ಚಿದ್ದರೆ ಬಡವಿಯೂ, ಕಡುದುಃಖಿಯೂ, ಅರಳೆ  ಎಲೆಯಂತಿದ್ದರೆ ಪುಣ್ಯಶಾಲಿಯೂ, ವಿಶಾಲವಾಗಿದ್ದರೆ ಮಾನಗೇಡಿಯೂ, ಕರ‍್ರಗಿದ್ದರೆ ಅಲ್ಪಾಯುಷಿಯೂ, ಒಣಗಿದಂತಿದ್ದರೆ ಕುಟುಂಬದವರಿಗೆಲ್ಲ ಕಂಟಕಿಯೂ ಆಗುವಳು. ಯೋನಿಯ ಎಡಭಾಗದಲ್ಲಿ ಸುಳಿ ಇದ್ದರೆ ದುಃಖಿಯಾಗುವಳು

ತೊಡೆಗಳು ಆನೆಯ ಸೊಂಡೆಯಂತೆ ಮನೋಹರವಾಗಿದ್ದರೆ ಬಡವನ ಮಡದಿಯೂ, ಗುಂಡಾಗಿದ್ದರೆ ಮುಂಡೆಯೂ, ಸಣ್ಣಾಗಿದ್ದು ಕೂದಲಿದ್ದರೆ ದರಿದ್ರೆಯೂ ಆಗುವಳು. ತೊಡೆಯಲ್ಲಿ ಸುಳಿ ಇದ್ದರೂ, ಮಚ್ಚೆ ಇದ್ದರೂ ಮುಂದೆ ಹಾದರಗಿತ್ತಿ ಆಗುವಳು, ಜಂಘೆಗಳು ಗುಂಡಾಗಿದ್ದು ರೋಮಗಳಿಲ್ಲದೆ ಶೋಭಿಸುತ್ತಿದ್ದರೆ ದನಧಾನ್ಯ ಸಂಪನ್ನೆಯೂ, ಗುಂಡಾಗಿಲ್ಲದೆ ವಿಶೇಷ ಕೂದಲುಗಳಿದ್ದರೆ ಮುಂಡೆಯೂ, ಗಡುತರವಿದ್ದರೆ ಬಡವಿಯೂ ಆಗುವಳು

ಪಾದಗಳು ಶರೀರಕ್ಕನುಸರಿಸಿ ಅಚ್ಚುಕಟ್ಟಾಗಿದ್ದರೆ ಸುಖವಂತೆಯೂ, ದೊಡ್ಡವು ಇದ್ದರೆ ದುಃಖಿಯೂ, ಚಿಕ್ಕವಿದ್ದರೆ ದರಿದ್ರೆಯೂ ಆಗುವಳು, ಪಾದದ ಮೇಲ್ಬಾಗವೂ ಆಮೆಯ ಬೆನ್ನಿನ ಚಿಪ್ಪಿನಂತಿದ್ದರೆ ಪುಣ್ಯವಂತಿಯೂ, ನಿಲ್ಲುವಾಗ ಬಲಗಾಲ ಮೇಲೆ ಭಾರಹಾಕಿ ಎಡಗಾಲು ಸಡಿಲಬಿಟ್ಟು ನಿಂತರೆ ಮುಂಡೆಯೂ, ಎಡಗಾಲ ಮೇಲೆ ಬಾರ ಹಾಕಿ ಬಲಗಾಲು ಸಡಿಲಬಿಟ್ಟು ನಿಂತರೆ ಮುತ್ತೈದೆಯೂ ಆಗುವಳು, ಹಿಮ್ಮಡಿಯು ದುಂಡಾಗಿದ್ದು ಕೆಂಪಗಿದ್ದರೆ ಧನವಂತಿಯೂ ಆಗುವಳು, ಪಾದದ ಬೆರಳುಗಳು ಒಂದಕ್ಕೊಂದು ಹತ್ತಿಕೊಂಡಿದ್ದರೆ ಭೋಗವತಿಯೂ, ಅಂಗಲಾಗಿದ್ದರೆ ದುಃಖಿಯೂ ಆಗುವಳು, ಹೆಬ್ಬೆರಳಿಗಿಂತ ಅದರ ಪಕ್ಕದಲ್ಲಿ ಇರುವ ಬೆರಳು ಉದ್ದವಾಗಿದ್ದರೆ ಮುಂಡೆಯೂ, ನಡೆಯುವಾಗ ಕಿರುಬೆರಳು ಭೂಮಿಗೆ ಹತ್ತದಿದ್ದರೂ ವ್ಯಭಿಚಾರಿ ಆಗುವಳು, ಯಾರ ನಡಿಗೆಯು ಬಿರುಸಾಗಿರುವುದೋ ಅವಳು ಮುಂಡೆಯೆಂದು ತಿಳಿಯಬೇಕು. ಕಾಲಿನ ಉಗುರು ಕೆಂಪಾಗಿಯೂ, ಉದ್ದವಾಗಿಯೂ, ಮೃದುವಾಗಿಯೂ ಇದ್ದರೆ ಸುಖವಂತಳು. ಕರ‍್ಗಿದ್ದರೆ ಶೋಕವಂತಳು. ಹಳದಿ ಬಣ್ಣವಿದ್ದರೆ ದುಷ್ಟೆಯು, ಬೆಳ್ಳಗಿದ್ದರೆ ಕಷ್ಟವನ್ನು ಅನುಭವಿಸುವವಳೂ, ತಾವರೆ ಬಣ್ಣದಂತಿದ್ದರೆ ಶ್ರೀಮಂತೆಯೂ, ಬೆಳ್ಳಗಿದ್ದರೆ ರೋಗಿಯೂ, ಕರ‍್ರಗಿದ್ದರೆ ದುಃಖಿಯೂ ಆಗುವಳು. ಅಂಗಾಲದಲ್ಲಿ ಪದ್ಮ ಮೀನಿನ ರೇಖೆಗಳಿದ್ದರೆ ಅರಸನ ಮಡದಿಯೂ ಆಗುವಳು.

ಮಂಡೆಯಲ್ಲಿ ಜೋಡುಸುಳಿ ಇದ್ದರೆ ಗಂಡನು ಸಾಯುವನು. ಹುಬ್ಬಿನ ಮೇಲಿರಲು ಧನಕ್ಷಯ. ಭುಜದಲ್ಲಿದ್ದರೆ ಗಂಡನಲ್ಲಿ ಮೋಹ. ಮೊಲೆಯ ಮೇಲಿರಲು ಮೋಹ ಕೆಡುವಳು, ಮೊಲೆಯ ಮಧ್ಯದಲ್ಲಿರಲು ವೈಧವ್ಯ, ಹೊಟ್ಟೆಯ ಮೇಲಿರಲು ಪತಿವ್ರತೆ. ಹೊಕ್ಕಳದಲ್ಲಿದ್ದರೆ ಭಾಗ್ಯವಂತಿ. ಬೆನ್ನಿನ ಮೇಲೆ ಇದ್ದರೆ ಪೆಟ್ಟು ತಿನ್ನುತ್ತಾಳೆ. ಕುಂಡೆಯ ಮೇಲಿದ್ದರೆ ಸೂಳೆಯಾಗುವಳು. ತೊಡೆಯ ಮೇಲಿದ್ದರೆ ದಾರಿದ್ರ. ಕುಂಡಿಯ ಮೇಲಿದ್ದರೆ ಪರಗೃಹದಲ್ಲಿ ದಾಸಿವೃತ್ತಿ. ಕಂಠದಲ್ಲಿದ್ದರೆ ಸಂತಾನ. ಮುಖದಲ್ಲಿದ್ದರೆ ವೈಧವ್ಯ ಪ್ರಾಪ್ತಿ.

ಚಂದ್ರಬಿಂಬದಂತೆ ಮುಖವು, ಕಮಲದಂತೆ ನೇತ್ರಗಳು, ಅರ್ಧಚಂದ್ರಾಕೃತಿಯಂತೆ ಹಣೆಯೂ, ಬಿಲ್ಲಿನಂತೆ ಹುಬ್ಬುಗಳೂ, ಸಂಪಿಗೆಯ ಮೂಗಿನಂತೆ ಮೂಗು, ಡಾಳಿಂಬರ ಬೀಜದಂತೆ ಹಲ್ಲು, ಮೃದುವಾದ ದೇಹ, ಶಂಖದಂತಿರುವ ಕಂಠವು, ಚಿಕ್ಕದಾಗಿರುವ ನಡ, ಕಮಲಗಳಾಗಿರುವ ಪಾದವು, ಲಜ್ಜಾದಿ ವಿನಯಗಳು, ಧರ್ಮಬುದ್ಧಿ ಇತ್ಯಾದಿ ಲಕ್ಷಣಗಳುಳ್ಳ ಸ್ತ್ರೀಯು ಪುಣ್ಯವಂತೆಯೂ ಪತಿವ್ರತೆಯೂ ಆಗಿ ಸುಮಂಗಲತ್ವ ಪಡೆಯುತ್ತಾಳಂತೆ.

ಅತಿ ಜಾಗ್ರತೆಯಾಗಿ ನಡೆಯುವುದು, ಚಂಚಲವಾದ ಕಣ್ಣುಗಳು, ಕಾಲು ಕಿರುಬೆರಳು ಮೇಲಕ್ಕೆ ಎದ್ದಿರುವುದು, ಜೋತಾಡುತ್ತಿರುವ ಕೂದಲು, ದುರಾಲೋಚನೆ, ಅತಿ ಚಮತ್ಕಾರವಾದ ಮಾತು, ಬಹು ನಾಚಿಕೆಯಿಂದ ನಟಿಸುವುದು, ಇತ್ಯಾದಿ ಲಕ್ಷಣಗಳುಳ್ಳ ಸ್ತ್ರೀಯು ಜಾರಿಣಿಯಾಗುತ್ತಾಳೆ.

ದೊಡ್ಡ ಶರೀರ, ಜೋತಾಡುತ್ತಿರುವ ಕೂದಲು, ದೂರಾಲೋಚನೆ, ಪದೇ ಪದೇ ಮುಖ ಬೆವರುವುದು, ಬಹು ಸಣ್ಣ ಕಣ್ಣುಗಳು, ದುರಾಚಾರ ಕಂಠವು, ದುರಾಚಾರ ಮತ್ತು ಅಶುಚಿ ಈ ಲಕ್ಷಣವುಳ್ಳವರು ದರಿದ್ರ ಸ್ತ್ರೀಯಾಗಿರುತ್ತಾರೆ.

ಬಲಭಾಗದ ಅಂಗಗಳಿಗಿಂತಲೂ ಎಡಭಾಗದ ಅಂಗಗಳು ದೊಡ್ಡದಾಗಿಯೂ, ಕಪ್ಪಾದ ದೀರ್ಘ ಕೇಶಗಳೂ, ಸಂತೋಷವುಳ್ಳ ಮುಖ, ಸಣ್ಣ ಹೊಕ್ಕಳು ಆಳವಾಗಿ ಇರೋಣ, ಮೃದುವಾಗಿಯೂ ಸ್ವಲ್ಪ ದೀರ್ಘವಾಗಿಯೂ ಇರುವ ನಾಲಿಗೆ, ಮೃದುವಾಗಿಯೂ ಕೆಂಪಾಗಿಯೂ ಇರುವ ಬೆರಳು ಇತ್ಯಾದಿ ಲಕ್ಷಣಗಳುಳ್ಳ ಸ್ತ್ರೀ ಭಾಗ್ಯವತಿಯಾಗುತ್ತಾಳೆ.

ನೂಲು ಹಿಡಿದು ಆಳತೆ ನೋಡುವ ಕ್ರಮ

ಸ್ತ್ರೀಯರ ಎಡಹಸ್ತದ ಐದು ಬೆರಳುಗಳನ್ನು ಮೂರು ಮೂರು ಕಂಡಿನ ಅಳತೆ ಮತ್ತು ಆಯುಷ್ಯ ರೇಖೆಯ ಬುಡದಿಂದ ಸ್ತ್ರೀಪುರುಷರಿಬ್ಬರ ಕೂಡಿದ ರೇಖೆಯ ಕೊನೆಯವರೆಗೆ ಅಳತೆ. ಈ ಅಳತೆಗಳನ್ನು ನೂಲಿನಿಂದ ಹಿಡಿದು ಒಟ್ಟನ್ನು ಮೂರು ಪಟ್ಟು ಮಾಡಿ ಆಕೆಯ ಎಡಗಾಲಿನ ಹೆಬ್ಬೆಟ್ಟಿನಿಂದ ಕುಂಕುಮ ಧರಿಸತಕ್ಕ ಸ್ಥಳದವರೆಗೆ ಹಿಡಿಯತಕ್ಕದ್ದು. ನೂಲಿನ ಅಳತೆಯು ಕುಂಕುಮ ಧರಿಸತಕ್ಕ ಸ್ಥಳದ ಮೇಲೆ ಬಂದರೆ ಉತ್ತಮ. ಕುಂಕುಮ ಧರಿಸತಕ್ಕ ಸ್ಥಳದಲ್ಲಿ ಬಂದರೆ ಮಧ್ಯಮ. ಕುಂಕುಮದ ಕೆಳಗೆ ಬಂದರೆ ಕನಿಷ್ಠ.

ಉಪಸಂಹಾರ

ಮಾನವನಿಗೆ  ಪ್ರಕೃತಿಯಲ್ಲಿರುವ ಗಾಳಿ, ಬೆಳಕು, ಕಲ್ಲು, ಮಣ್ಣು ಸಸ್ಯ ಮುಂತಾದವುಗಳು ಅತ್ಯಗತ್ಯವಾಗಿ ಬೇಕೆಬೇಕು. ಜೀವನಾವಶ್ಯಕವಾಗಿರುವ ಇವುಗಳ ಬಗೆಗಿನ ಅವನ ಭಾವನೆಗಳು ಅವನ ಬದುಕಿನುದ್ದಕ್ಕೂ ಹರಿದು ಬಂದವು. ಆರ್ಥಿಕ ಅಪೇಕ್ಷೆಗಾಗಿ ಒಂದುಗೂಡಿ ಮನುಷ್ಯ ಹೇಗೆ ದೈಹಿಕವಾಗಿ ಚಲಿಸುತ್ತಾನೆಯೋ, ಮಾನಸಿಕವಾಗಿಯೂ ಚಲಿಸುತ್ತಾನೆ. ಇಂತಹ ಸಂದರ್ಭಗಳಲ್ಲಿ ತಾನು ಪಡೆದ ಜ್ಞಾನದ ಪರಿಣಾಮವಾಗಿ ಹಲವಾರ ನಂಬಿಕೆ ಆಚರಣೆಗಳನ್ನು ಬೆಳೆಸಿಕೊಂಡನು. ದಿನ ನಿತ್ಯದ ಬದುಕೆಗೆ ಬೇಕಾಗುವ ಗಾಳಿ, ನೀರು, ಕಲ್ಲುಗಳ ಬಗೆಗಿನ ಅವನ ಜ್ಞಾನದ ಪರಿಣಾಮವಾಗಿ ‘ಸುಳಿ’ ಗಳನ್ನು ಸೃಷ್ಟಿಸಿಕೊಂಡನು. ಗಾಳಿ ಮಾನವನ ಜೀವನಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದರೂ, ಆ ಗಾಳಿಯು ಸಾಧಾರಣವಾಗಿದ್ದರೆ ಒಳ್ಳೆಯದಾಗಿಯೂ, ತಂಗಾಳಿಯಾಗಿದ್ದರೆ ಜೀವನಕ್ಕೆ ಆಹ್ಲಾದಕರವಾಗಿಯೂ, ಜಾಸ್ತಿಯಾಗಿದದು ಸುಳಿಯುತ್ತಿದ್ದರೆ ಸುಳಿಗಾಳಿಯನ್ನು ಕಂಡುಕೊಂಡನು. ಈ ಸುಳಿಗಾಳಿಯು ಜೀವನಕ್ಕೆ ವ್ಯತ್ಯಯವನ್ನುಂಟು ಮಾಡುವುದಲ್ಲದೆ, ಹಲವಾರು ಸಂದರ್ಭಗಳಲ್ಲಿ ವಿಕೋಪಕ್ಕೆ ಹೋಗಿ ನಾನಾ ರೀತಿಯ ಗಾಳಿಯಲ್ಲಿರುವ ಸುಳಿಯು ಮಾನವನ ಜೀವನಕ್ಕೆ ತೊಂದರೆಯನ್ನು ಕೊಡುವುದೆಂಬ ಕಾರಣಕ್ಕಾಗಿ ಹಾಗೂ ತನ್ನ ಆರ್ಥಿಕ, ಸಾಮಾಜಿಕ ಜೀವನಕ್ಕೆ ಏರುಪೇರನ್ನುಂಟು ಮಾಡುತ್ತದೆ ಎಂಬ ಕಾರಣಕ್ಕಾಗಿ ಗಾಳಿಯಲ್ಲಿ ಸುಳಿಯನ್ನು ಗುರುತಿಸಿಕೊಂಡನು. ಹಾಗೂ ಅದರ ಬಗೆಗೆ ತನ್ನ ಕಲ್ಪನಾಶಕ್ತಿಯನ್ನು ಬೆಳೆಸಿಕೊಂಡು ಆ ಸುಳಿಗಾಳಿಯು ತೊಂದರೆಯ ಪ್ರತೀಕವಾಗುತ್ತದೆ ಎಂದುಕೊಂಡನು.

ನೀರು ಮಾನವನ ಜೀವನಕ್ಕೆ  ಅತ್ಯವಶ್ಯಕವಾಗಿ ಬೇಕಾಗಿರುವ ಒಂದು ವಸ್ತು. ಈ ನೀರು ನಿಲ್ಲುವ ಕೆರೆ, ಬಾವಿ, ಹಳ್ಳ, ನದಿಗಳಲ್ಲಿ ಮಾನವನು ತನ್ನ ಬಹುಪಾಲು ಜೀವನದ ಮುಖ್ಯ ಕೆಲಸಗಳನ್ನು ತೀರಿಸಿಕೊಂಡು ಬರುತ್ತಿದ್ದಾನೆ. ಇಂತಹ ಹಳ್ಳ, ನದಿಗಳಲ್ಲಿ ಹರಿಯುವ ನೀರಿನಲ್ಲಿ ತಾನು, ತನ್ನ ದನಕರುಗಳ ಸ್ವಚ್ಛತೆಯನ್ನು ಮಾಡಿಕೊಂಡು ಬಂದಿದ್ದಾನೆ. ಈ ಹರಿಯುವ ನೀರು ಸರಳವಾಗಿ ಹರಿಯದೆ ತಿರುಗುತ್ತಾ ಹರಿದಾಗ ಸುಳಿಯು ಉಂಟಾಗುತ್ತದೆ. ಈ ಸುಳಿ ಇರುವ ಜಾಗವು ನೀರಿನಲ್ಲಿ ಅಪಾಯಕಾರಿಯಾದುದು ಹಾಗೂ ಅಲ್ಲಿ ನೀರು ಆಳವಾಗಿದ್ದು ಅಲ್ಲಿಗೆ ಹೋಗುವ ಜೀವ, ವಸ್ತುಗಳನ್ನು ಮುಳುಗಿಸಿಕೊಂಡು ಬಿಡುತ್ತದೆ. ಹಾಗಾಗಿ ಅಂತಹ ಕಡೆಗಳಲ್ಲಿ ಹಿರಿಯರು ಜಾಗರೂಕತೆಯಿಂದ ಇರಲು ಹೇಳುತ್ತಿರುತ್ತಾರೆ. ಹಾಗೂ ಆ ಸುಳಿ ತೀರಾ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅಂತಹ ಸುಳಿಯನ್ನು ‘ತಿರುಗುಣಿ’ ಅಥವಾ ‘ಮಡ’ ಎಂದು ಕರೆಯುತ್ತಾರೆ. ಗಾಳಿ ಮತ್ತು ನೀರಿನಲ್ಲಿ ಸುಳಿಯನ್ನು ಕಂಡುಕೊಂಡಿರುವಾಗ ಮಾನವನು ಕಲ್ಲಿನಲ್ಲಿಯೂ ಸಹ ಸುಳಿಯನ್ನು ಕಂಡುಕೊಂಡನು. ಕಲ್ಲಿನಲ್ಲಿರುವ ಸುಳಿಯು ಕಲ್ಲನ್ನು ಬೇರ್ಪಡಿಸಲು ತುಂಬಾ ಸಹಾಯಕಾರಿಯಾಗುವುದಲ್ಲದೆ, ಶಿಲ್ಪಕಲೆಗೆ ಸಂಬಂಧಿಸಿದ ಸೂಕ್ಷ್ಮ ಕೆಲಸಗಳಿಗೆ ಅಂತಹ ಕಲ್ಲನ್ನು ಸಾಮಾನ್ಯವಾಗಿ ಉಪಯೋಗಿಸುವುದಿಲ್ಲ.

ಸಸ್ಯ ಜಗತ್ತು ಈ ಪ್ರಕೃತಿಯ ಅತ್ಯಮೂಲ್ಯವಾದ ಕೊಡುಗೆ. ಪರಿಸರ ಸಮತೋಲನಕ್ಕಾಗಿ ಸಸ್ಯಗಳು ಬಹಳಷ್ಟು ಸಹಾಯಕಾರಿಯಾಗಿವೆ. ಜೊತೆಗೆ ಅವುಗಳನ್ನು ಮಾನವನು ಆಹಾರಕ್ಕಾಗಿ ಬಹಳಷ್ಟು ಬಳಸುತ್ತಿದ್ದಾನೆ. ಅಂತಹ ಸಸ್ಯಗಳಲ್ಲೂ ಸಹ ಮನುಷ್ಯನು ಸುಳಿ ಬೀಳುವುದನ್ನು ಗುರುತಿಸಿಕೊಮಡನು. ಜೋಳ ಮತ್ತು ತೆಂಗಿನ ಸುಳಿಗಳು ಆ ಸಸ್ಯಗಳ ನಾಶಕ್ಕಾಗಿರುವ ರೋಗಗಳೆಂದೇ ಕರೆಯಬೇಕು. ಏಕೆಂದರೆ ರೈತರು ಸುಳಿ ಎಂದು ಕರೆಯುವ ಇವು ಜೋಳ ಮತ್ತು ತೆಂಗಿನ ವಿಚಾರದಲ್ಲಿಒ ಅವುಗಳ ಜೀವಕ್ಕೆ ಕುತ್ತು ತರುವಂತಹವುಗಳಾಗಿವೆ. ಈ ರೋಗಗಳು ಬಿದ್ದಾಗ ಆ ಸಸ್ಯಗಳು ಒಣಗಿ ಹೋಗುತ್ತವೆ. ಒಣಗಿದ ಸಸ್ಯಗಳಿಂದ ಯಾವುದೇ ರೀತಿಯ ಫಲ ಕಾಣಲು ಸಾಧ್ಯವಿಲ್ಲ. ಹಾಗಾಗಿ ಈ ಸಸ್ಯಗಳಿಗೆ ಬೀಳುವ ಸುಳಿಗಳನ್ನು ಆಧುನಿಕ ವಿಜ್ಞಾನಿಗಳು ಆ ಸಸ್ಯದ ರೋಗಗಳೆಂದು ಗುರುತಿಸುತ್ತಾರೆ. ಜನಪದರು ಸುಳಿ ಎಂದು ಕರೆಯುತ್ತಾರೆ.

ಜನಪದರು ಭೌತಿಕ ಮತ್ತು ಸಸ್ಯ ಜಗತ್ತಿನಲ್ಲಿ ಸುಳಿಯನ್ನು ಕಂಡುಕೊಂಡಂತೆ ಜೀವ ಜಗತ್ತಿನಲ್ಲಿ ಸಹ ಸುಳಿಯನ್ನು ಕಂಡುಕೊಂಡನು. ಜೀವ ಜಗತ್ತಿನಲ್ಲಿ ಕುದುರೆ, ಆಕಳು (ಹಸು), ಎತ್ತು (ಹೋರಿ), ಎಮ್ಮೆ, ಕುರಿ, ಆಡು (ಮೇಕೆ) ಮುಂತಾದ ಪ್ರಾಣಿ ವರ್ಗ ಹಾಗೂ ಮನುಷ್ಯ (ಹೆಣ್ಣು ಮತ್ತು ಗಂಡು)ರಲ್ಲಿಯೂ ಸುಳಿಗಳಿರುವುದನ್ನು ಕಂಡುಕೊಂಡನು. ಮೇಲೆ ಹೇಳಿದ ಪ್ರಾಣಿವರ್ಗ ಹಾಗೂ ಮನುಷ್ಯ (ಹೆಣ್ಣು ಮತ್ತು ಗಂಡು) ವರ್ಗಗಳಲ್ಲಿ ಸುಳಿಗಳನ್ನು ಗುರುತಿಸಿಕೊಂಡಿದ್ದರೂ, ಬಹುಮುಖ್ಯವಾಗಿ ಪರಿಗಣನೆಗೆ ತೆಗೆದುಕೊಂಡಿರುವುದು ಕುದುರೆ,  ಎತ್ತು ಮತ್ತು ಹೆಣ್ಣಿನ ಮೈಮೇಲೆ ಇರುವ ಸುಳಿಗಳ ಬಗೆಗೆ. ಈ ಮೂರುಜೀವಿಗಳ ಬಗೆಗಿನ ಸುಳಿಗಳ ಬಗ್ಗೆ ಕೊಟ್ಟಿರುವ ಮಹತ್ವವನ್ನು ಗಮನಿಸಿದರೆ, ಅವುಗಳನ್ನು ಮಾನವನು ತನ್ನ ಆರ್ಥಿಕ-ಸಾಂಸ್ಕೃತಿಕ ಜೀವನದ ಬಹುಮುಖ್ಯ ಅಂಗವೆಂದು ತಿಳಿದುಕೊಂಡಿರುವುದು ಗೊತ್ತಾಗುತ್ತದೆ. ಅಲ್ಲದೆ ಎತ್ತು, ಕುದುರೆಗಳು ಆರ್ಥಿಕ ಚಟುವಟಿಕೆಯ ಅಂಗಗಳಾಗಿದ್ದು, ಅವುಗಳನ್ನು ಕೊಳ್ಳುವಲ್ಲಿ ಮತ್ತು ಮಾರುವಲ್ಲಿ ಲಾಭಾಕಾಂಕ್ಷಿಯಾಗಿದ್ದ ಮನಸ್ಸು ‘ಸುಳಿ’ ಯನ್ನು ಗಮನಕ್ಕೆ ತೆಗೆದುಕೊಂಡಿರುವುದು ತಿಳಿದು ಬರುತ್ತದೆ. ಸಮಾನಳಾಗಿದ್ದ ಹೆಣ್ಣು ಕಾಲಾನಂತರದಲ್ಲಲಿ ಗಂಡಿನ ತುಳಿತಕ್ಕೆ ಒಳಗಾಗಿ, ಉಪಭೋಗದ ವಸ್ತುವಾಗಿ ಮಾರ್ಪಟ್ಟಳು. ಉಪಭೋಗದ ವಸ್ತು ಎಂದು ಪರಿಗಣಿಸಲ್ಪಟ್ಟ ಹೆಣ್ಣಿನ ಲಕ್ಷಣ ಮತ್ತು ಸುಳಿಗಳನ್ನು ನೋಡಲು ಪ್ರಾರಂಭಿಸಿದರು. ಜೊತೆಗೆ ಗಂಡು ತನ್ನ ಮೂಗಿನ ನೇರಕ್ಕೆ ಹೆಣ್ಣಿನ ಮೇಲೆ ‘ಲಕ್ಷಣ’, ‘ಸುಳಿ’ ಮುಂತಾದವುಗಳನ್ನು ಹೇರಿದನು. ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದನು. ಹಾಗೂ ಹೆಣ್ಣಿನ ಸುಳಿ ಮತ್ತು ಲಕ್ಷಣಗಳನ್ನು ಹೆಣ್ನಿನಿಂದಲೇ ಪರೀಕ್ಷೆಗೆ ಒಳಪಡಿಸಿದನು. ಇದು ಒಂದು ರೀತಿಯಲ್ಲಿ ಹೆಣ್ಣಿನಿಂದಲೇ ಹೆಣ್ಣಿನ ಶೋಷಣೆಯನ್ನು ಮಾಡಲು ಅನುಕೂಲವಾಯಿತು.

ಧರ್ಮಗಳನ್ನು ರೂಪಿಸಿಕೊಂಡ ಹಾಗೆ ಸಮಾಜದ ನೀತಿ ನಿಯಮಗಳನ್ನು ಮನುಷ್ಯನೇ ನಿರ್ಮಿಸಿಕೊಂಡನು. ಎಷ್ಟಾದರೂ ಮನುಷ್ಯ ಸ್ವಾರ್ಥಿ. ಎಲ್ಲಾ ನಿಯಮಗಳನ್ನು ತನಗಾಗಿಯೇ ಮಾಡಿಕೊಂಡನು. ಜಾತಿ ಪದ್ಧತಿಯ ಉಚ್ಛ ನೀಚ ಕಲ್ಪನೆಯಂತೆ ಗಂಡಸಿಗೆ ಶ್ರೇಷ್ಠ ಸ್ಥಾನವನ್ನು ತಾನೇ ಕೊಟ್ಟುಕೊಂಡನು. ಹೆಂಗಸು ನಿಕೃಷ್ಟ ವ್ಯಕ್ತಿಯಾದಳು. ಅದರಲ್ಲೂ ಕೆಟ್ಟ ಸುಳಿಗಳಿರುವ ಹೆಂಗಸನ್ನು ಯಾರೂ ಮದುವೆಯಾಗುತ್ತಿರಲಿಲ್ಲ. ಕೆಟ್ಟ ಸುಳಿಗಳನ್ನು ಎಷ್ಟೋ ಸಾರಿ ಮನೆಯ ಹಿರಿಯರು ಮಗುವಿದ್ದಾಗಲೇ ಸುಟ್ಟು ಹಾಕುವುದರ ಮುಖಾಂತರ ಹೋಗಲಾಡಿಸಲು ಪ್ರಯತ್ನಿಸುತ್ತಿದ್ದರು. ಆ ಪ್ರಯತ್ನದಲ್ಲಿ ವಿಫಲವಾಗುವುದರ ಜೊತೆಗೆ ಶಾಶ್ವತವಾಗಿ ಆ ಜಾಗದಲ್ಲಿ ಗಾಯದ ಕಲೆಯನ್ನು ಮಾಡುತ್ತಿದ್ದರು. ಅಂತ ಹೆಣ್ಣು ಹುಟ್ಟಿದ ಮನೆಗೋ ಅಥವಾ ಕೊಟ್ಟ ಮನೆಗೋ ಕೇಡುಂಟು ಮಾಡುವವಳು ಎಂಬ ನಂಬಿಕೆಯಿಂದಾಗಿ ಶಾಶ್ವತವಾಗಿ ಆ ಹೆಣ್ಣಿನ ನೆಮ್ಮದಿಯನ್ನು ಕಲಕುತ್ತಿದ್ದರು. ಅಲ್ಲದೆ ಕುಟುಂಬ ಸಂಸ್ಕೃತಿಯ ಬಹುಮುಖ್ಯ ಅಂಗವಾದ ಮದುವೆ, ಮುಂಜಿಯಂತಹ ಹಲವಾರು ಪವಿತ್ತ ಕಾರ್ಯಗಳಿಗೆ ಅಂತಹ ಹೆಣ್ಣಿನ ಪಾಲ್ಗೊಳ್ಳುವಿಕೆಯನ್ನು ತಡೆ ಹಿಡಿಯುತ್ತಿದ್ದರು. ಆ ಮುಖಾಂತರ ಅವರ ಸ್ವಾತಂತ್ರ್ಯವನ್ನು ಮಣ್ಣುಪಾಲು ಮಾಡುತ್ತಿದ್ದರು. ಇದು ಒಂದು ರೀತಿಯಲ್ಲಿ ಮನುವಿನ “ಸ್ತ್ರೀ ಸ್ವಾತಂತ್ರ್ಯಮರ್ಹತಿ” ಎನ್ನುವುದನನ್ನು ಸತ್ಯ ಮಾಡುವ ಕ್ರಮವಲ್ಲದೆ ಬೇರೇನೂ ಅಲ್ಲ. ಸಮಾಜವು ಕೆಟ್ಟ ಸುಳಿ ಇರುವವಳು ಎಂಬ ಕಾರಣಕ್ಕಾಗಿ ಆಕೆಗೆ ಸಮಾಜದಲ್ಲಿ ತಕ್ಕ ಸ್ಥಾನಮಾನವನ್ನು ಕೊಡದೆ ಹೀಯಾಳಿಸಿ, ಗೋಳಾಡಿಸುತ್ತಿತ್ತು. ಪರಂಪರೆಯು “ನಸ್ತ್ರೀ ಸ್ವಾತಂತ್ರ್ಯಮರ್ಹತಿ” ಅಂದರೆ ಹೆಂಗಸು ಸ್ವಾತಂತ್ರಯಕ್ಕೆ ಯೋಗ್ಯಳಲ್ಲವೆಂದು ಹೇಳಿ, ಅದರಂತೆ ಆಕೆಗೆ ಸಮಾಜದಲ್ಲಿ ತಕ್ಕ ಸ್ಥಾನಮಾನಗಳನ್ನು ಕೊಡದೆ ಹೀಯಾಳಿಸಿ, ಗೋಳಾಡಿಸಿದ ಗಂಡು “ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ”  – ಎಲ್ಲಿ ಸ್ತ್ರೀಯರಿಗೆ ಪೂಜ್ಯತೆ ಇದೆಯೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆಂಬ ಉಕ್ತಿಯಿಂದ, ನೊಂದ ಹೆಂಗಸಿಗೆ ಸಮಾಧಾನವನ್ನು ಅವನೇ ಹೇಳಿದನು. ಹಾಗಾಗಿ ಸ್ತ್ರೀಯನ್ನು ದೇವತೆ ಎಂತಲೋ, ಸೇವಕಿ ಎಂತಲೋ ಪರಿಣಿಸಿದರೇ ಹೊರತು ಅವಳನ್ನು ಒಬ್ಬ ಮನುಷ್ಯಳು ಎಂದು ಪರಿಗಣಿಸಲಿಲ್ಲ. ಇಲ್ಲಿ ಸ್ತ್ರೀಯು ಪುರುಷನ ಸೊತ್ತು ಉಪಭೋಗದ ವಸ್ತುವೆಂದು ಪರಿಗಣಿಸಲ್ಪಟ್ಟಿದ್ದಾಳೆ. ಪತ್ನಿಯೆಂದರೆ ಪುರುಷ ತನಗಿಷ್ಟ ಬಂದಂತೆ ಬಳಸುವ ವಸ್ತು. ನಿರ್ಜೀವ ವಸ್ತುವನ್ನು ಬಳಸುವಂತೆ ಪತ್ನಿಯನ್ನು ಪುರುಷರು ಬಳಸುವರು. ಇಷ್ಟೆಲ್ಲಾ ದಬ್ಬಾಳಿಕೆ ಆದಾಗಲೂ ಹೆಣ್ಣು ತನ್ನ ಪ್ರತಿಭಟನೆಯನ್ನು ಹೆಚ್ಚಿನದಾಗಿ ತೋರಿಸಲಿಲ್ಲವೇನೋ ಅನ್ನಿಸುತ್ತೆ. ಜೊತೆಗೆ ತನ್ನ ಪ್ರತಿಭಟನೆಯ ಕಾವನ್ನು, ದಬ್ಬಾಳಿಕೆಯು ಬೇರೆ ಬೇರೆ ರೂಪಗಳಲ್ಲಿ ಹೇಗೆ ನಡೆಯುತ್ತದೆಯೋ ಆ ರೀತಿಯಲ್ಲಿ ಮುಂದುವರೆಸಿಕೊಂಡು ಬರುತ್ತಿಲ್ಲ ಎನ್ನಿಸುತ್ತದೆ. ಜೊತೆಗೆ ಹೆಣ್ಣಾಗಲಿ, ಗಂಡಾಗಲಿ ದೈಹಿಕವಾಗಿ ಎಷ್ಟೇ ದುರ್ಬಲರಾಗಿರಲಿ, ಎಲ್ಲರೂ ತಮ್ಮ ಆತ್ಮ ಗೌರವದ ವಸ್ತು ಸ್ವಾತಂತ್ರ‍್ಯದ ಕಾವಲುಗಾರರು ತಾವೇ ಎಂಬುದು ಮಾನವ ಕುಟುಂಬಕ್ಕೆ ನಂಬಿಕೆ ಹುಟ್ಟಿದಾಗ ಸ್ವಾತಂತ್ರಯ್ ಮೊಟಕಾಗುವುದಿಲ್ಲ.

ವಿಜ್ಞಾನದ ಮಹಿಮೆಯಿಂದ ಶ್ರಮವನ್ನು, ಕಾಲವನ್ನು ಉಳಿಸುವ ಯಂತ್ರಗಳು ಹುಟ್ಟಿದವು. ಹಾಗಾಗಿ ಪ್ರಾಣಿಗಳ ಮತ್ತು ಮನುಷ್ಯರ ಶ್ರಮ ಮತ್ತು ಕಾಲದ ಉಳಿತಾಯವಾಯಿತು. ತಾಂತ್ರಿಕತೆಯ ಅವಿಷ್ಕಾರಕ್ಕಿಂತ ಮೊದಲು ಒಂದೂರಿನಿಂದ ಇನ್ನೊಂದೂರಿಗೆ ಪ್ರಯಾಣಿಸಲು, ನೀರು ತರಲು, ಭಾರದ ವಸ್ತುಗಳನ್ನು ಸಾಗಿಸಲು, ದನಕರುಗಳನ್ನು ಮೇಯಿಸಲು ಕುದುರೆಯನ್ನು ಬಳಸುತ್ತಿದ್ದರು. ಜೊತೆಗೆ ರಾಜ ಮಹಾರಾಜರ ಕಾಲದಲ್ಲೂ ಸಹ ಕುದುರೆಯ ಬಳಕೆ ಅತ್ಯಧಿಕವಾಗಿತ್ತು. ಅಂದರೆ ಮಾನವನ ಆರ್ಥಿಕತೆಯ ಒಂದಂಗವಾಗಿ ಕುದುರೆಯು ಬಳಕೆಯಾಗುತ್ತಿತ್ತು. ಹಾಗಾಗಿ ಅದರ ಕೊಡುಕೊಳ್ಳುವಿಕೆಯ ಸಂದರ್ಭದಲ್ಲಿ ಅದರ ಬಣ್ಣ, ಆಕಾರ, ಲಕ್ಷಣ, ವಂಶ, ಸುಳಿ ಮತ್ತು ಅದರ ದೈಹಿಕ ಆರೋಗ್ಯದ ಬಗೆಗೆ ಗಮನವಿಟ್ಟು ನೋಡುತ್ತಿದ್ದರು. ಕುದುರೆಯನ್ನು ಕೊಳ್ಳುವಾಗ ಕದರ ಆಯಾಲು (ಕುತ್ತಿಗೆಯ ಮೇಲಿನ ಜವೆಗೂದಲು) ಇಳಿ ಬೀಳುವ ಬಗೆಗೆ ಇರುವ ಮನೋಭಾವವನ್ನು ನೋಡಿದರೆ, ನಮಗೆ ಇಲ್ಲಿಯೂ ಗಂಡಿನ ಮೇಲುಗಾರಿಗೆ ಗೊತ್ತಾಗುತ್ತದೆ. ಮೊದಲಿನಿಂದಲೂ ನೋಡಿದಾಗ ಗಂಡು ಬಲ, ಹೆಣ್ಣು ಎಡ ಎಂಬುದು ಸರ್ವವಿಧಿತವಾದುದು. ಅಂದರೆ ಗಂಡಿನ ಎಡಕ್ಕೆ ಹೆಣ್ಣು ಎಂಬುದು. ಬಲಭಾಗ ಶ್ರೇಷ್ಠವಾದುದು ಮತ್ತು ಬಲಯುತವಾದುದು. ಹಾಗಾಗಿ ಗಂಡು ಬಲಕ್ಕೆ ಇರುವುದು (ಮದುವೆ ಮುಂತಾದ ಕಾರ್ಯಗಳಲ್ಲಿ). ಇಲ್ಲಿಯು ಅಂದರೆ ಕುದುರೆಯ ಆಯಾಲು ಗಂಡು ಆಗಿದ್ದರೆ ಬಲಕ್ಕೆ ಬೀಳಬೇಕು, ಹೆಣ್ಣು ಆಗಿದ್ದರೆ ಎಡಕ್ಕೆ ಬೀಳಬೇಕು. ಹಾಗಿದ್ದರೆ ಶ್ರೇಷ್ಠ ಎಂಬ ಮನೋಭಾವವಾಗಿದೆ. ಹಾಗೆಯೇ ಬಣ್ಣದ ವಿಷಯದಲ್ಲಿಯೂ ಸಹ ಒಳ್ಳೆಯದು ಕೆಟ್ಟದ್ದು ಎಂಬ ಮನೋಭಾವವು ಸಹ ಪರಂಪರೆಯಿಂದ ಬಂದುದಾಗಿದೆ.

ಇನ್ನು ಸುಳಿಗಳ ಬಗೆಗಿನ ನಿರ್ಧಾರಗಳೂ ಸಹ ಏಕಪ್ರಕಾರವಾಗಿರದೆ, ಪ್ರಾಂತದಿಂದ ಪ್ರಾಂತಕ್ಕೆ ಬದಲಾಗಿರುವುದನ್ನು ಕಾಣಬಹುದು. ಅಂದರೆ ಸುಳಿಗಳು ಕೊಡುವ ಫಲಾಫಲಗಳು ಸಹ ವಿಭಿನ್ನವಾಗಿವೆ. ಉದಾ : ಕುದುರೆಯ ‘ಗಂಗಾವಾಟ (ಬಂಗಾರಪಟ) ಸುಳಿ’ಯು ಕೆಲವರಿಗೆ ಒಳ್ಳೆಯದಾಗಬಹುದು, ಕೆಲವರಿಗೆ ಕೆಟ್ಟದಾಗಬಹುದು. ಹಾಗೆಯೇ ಕುದುರೆಯಲ್ಲಿ ಎಣಿಸಿದಂತೆ ಒಳ್ಳೆಯ ಸುಳಿಗಳಿದ್ದು, ಅದು ಮೂಲತಹ ಕೆಲಸ ಮಾಡದ ಮನೋಸ್ಥಿತಿಯನ್ನು ಹೊಂದಿದ್ದರೆ ಅಂತಹ ಕುದುರೆಯನ್ನು ಕೊಂಡವನ ಗತಿ ಅಧೋಗತಿಯೇ ಸರಿ. ಹಾಗಿಯೇ ಒಳ್ಳೆಯ ಮತ್ತು ಕೆಟ್ಟ ಸುಳಿಗಳು ಎಂಬುದು ವ್ಯಕ್ತಿಯ ಮಾನಸಿಕ ಭಾವನೆಗೆ ಬಿಟ್ಟದ್ದೇ ಹೊರತು ನಿರ್ದಿಷ್ಟವಾದ ಫಲವನ್ನು ನೀಡುತ್ತದೆ ಎಂಬುದು ಸುಳ್ಳು.

“ಹೆಂಡತಿ ಇಲ್ಲದವನಿಗೆ ಮನೆ ಇಲ್ಲ ದನಾ ಇಲ್ಲದವನಿಗೆ ದಗದ (ಕೆಲಸ) ಇಲ್ಲ” ಎಂಬ ಗಾದೆಯಂತೆ ರೈತರಿಗೆ ದನಗಳು ಅತಿ ಮುಖ್ಯವಾದ ಆಶ್ರಯಗಳಾಗಿವೆ. ಹಾಗಾಗಿ ಇಂತಹ ದನಗಳೇ ಆರ್ಥಿಕತೆಯ ಒಂದು ಭಾಗವಾಗಿ ಪರಿಗಣಿಸಲ್ಪಟ್ಟವು. ಇಲ್ಲಿಯು ಅಂದರೆ ಕೊಡುಕೊಳ್ಳುವಿಕೆಯ ಸಂದರ್ಭದಲ್ಲಿ ದನದ ಬಣ್ಣ, ಆಕಾರ, ಲಕ್ಷಣ, ವಂಶ, ಸುಳಿ ಮತ್ತು ಅದರ ದೈಹಿಕತೆಯ ಬಗೆಗಿನ ಗಮನ ಹೆಚ್ಚಾಯಿತು. ಸುಳಿಗಳನ್ನು ಕುರಿತು ವಿಜ್ಞಾನ ಪ್ರಾರಂಭವಾಯಿತು. ಸುಳಿಗಳ ಬಗೆಗೆ ಒಳ್ಳೆಯದು ಕೆಟ್ಟದ್ದು ಎಂಬ ಭಾವನೆ ಬೆಳೆಯಿತು. ಒಳ್ಳೆಯ ಸುಳಿ ಇದ್ದ ಎತ್ತಿಗೆ ಹೆಚ್ಚಿನ ಬೇಡಿಕೆ ಹಾಗೂ ಹಣದ ಹೆಚ್ಚಳಿಕೆಯೂ ಅಯಿತು.

ಕೆಲವು ವಿಶಿಷ್ಟ ಸುಳಿಯ ದನಗಳು ಅಂದರೆ ದವಣಿ ಸುಳಿಯ ದನ ಮನೆಯಲ್ಲಿದ್ದರೆ ಕೆಟ್ಟ ಸುಳಿಯ ದನವಿದ್ದರೂ ಸಹ ಅದರ ಕೆಟ್ಟ ಪರಿಣಾಮವಾಗುವುದಿಲ್ಲ ಎಂದು ನಂಬುವರು. ಹಾಗೆಯೇ ಎತ್ತಿಗೆ ಲಂಗಟ ಸುಳಿ ಇರಬಾರದು ಕೆಟ್ಟದ್ದು. ಆದರೆ ಆ ಸುಳಿಯ ಹತ್ತಿರವೇ ಇನ್ನೊಂದು ಸುಳಿ ಇದ್ದರೆ, ಅಂದರೆ ಎರಡು ಸುಳಿಗಳಿದ್ದರೆ ಒಳ್ಳೆಯದು. ಅಂದರೆ ಇನ್ನೊಂದು ಹೆಚ್ಚಿನ ಸುಳಿ ಇದೆ ಎಂಬ ಏಕೈಕ ಕಾರಣಕ್ಕಾಗಿ ಕೆಟ್ಟ ಸುಳಿಯೂ ಸಹ ಒಳ್ಳೆಯದಾಗುವುದು. ಇನ್ನು ಕೆಲವೆಡೆ ಒಳ್ಳೆಯ ಸುಳಿ ಇದ್ದ ಎತ್ತು, ಕುದುರೆಗಳನ್ನು ಮಾರದೆ ಇರುತ್ತಾರೆ. ಸತ್ತರೆ ಮನೆಯಲ್ಲೇ ಹುಗಿಯುವುದುಂಟು. ಇನ್ನೂ ಸುಳಿಗಳು ಕೊಡುವ ಫಲಗಳು ವಿರುದ್ಧ ದಿಕ್ಕಗಳಲ್ಲಿರುವುದನ್ನು ಕಾಣಬಹುದು. ಉದಾ : ಬಾಸಿಂಗ ಸುಳಿ ದನವಿದ್ದರೆ ಆ ದನದ ಒಡೆಯನ ಹೆಂಡತಿ  ಸಾಯುವಳು ಎಂದು ಒಂದೆಡೆ ಇದ್ದರೆ, ಅಂತಹ ಎತ್ತು ಇದ್ದರೆ ಮನೆಯಲ್ಲಿ ಲಗ್ನವಾಗುವುದು ಎಂದು ಇನ್ನು ಕೆಲವಡೆ ಇದೆ. ‘ಎದುರುಪಾಮ’ ಇರುವ ಎತ್ತು ಬಹಳ ಬಲಿಷ್ಠವಾಗಿದ್ದು ವ್ಯವಸಾಯದಲ್ಲಿ ತುಂಬಾ ಚುರುಕಾಗಿಯೂ, ಚೆನ್ನಾಗಿಯೂ ಎಳೆಯುವುದು ಎನ್ನುವರು. ಆದರೆ ಕೆಲವೆಡೆ ಇದಕ್ಕೆ ವಿರುದ್ಧವಾದ ಫಲಿತಾಂಶಗಳನ್ನು ಕೊಟ್ಟಿರುವುದು ಉಂಟು. ಕೆಟ್ಟ ಸುಳಿಗಳಿದ್ದ ದನ ಮನೆಯಲ್ಲೇ ಹುಟ್ಟಿದರೆ ಅದಕ್ಕೆ ರಿಯಾಯಿತಿ ತೋರುವುದನ್ನು ಕಾಣಬಹುದು.

ಇನ್ನು ಸುಳಿಗಳನ್ನು ಹೆಸರಿಸುವ ಹೆಸರುಗಳನ್ನು ನೋಡಿದರೆ, ಅವುಗಳ ಬಗೆಗಿರುವ ಮನೋಭಾವ ಚೆನ್ನಾಗಿ ಅರ್ಥವಾಗುತ್ತದೆ. ಉದಾಹರಣೆಗೆ ಕೆಟ್ಟ ಸುಳಿಗಳಿಗೆ ಇಟ್ಟಿರುವ ಸಿದಿಗಿಸುಳಿ, ಮೂತ್ರಿಸುಳಿ, ಕತ್ತರಿ ಸುಳಿ, ಮುಟ್ಟಿನ ಸುಳಿ, ಕಸಬರಿಗೆ ಸುಳಿ, ಲಂಗಟ ಸುಳಿ, ಬೇಡಿ ಸುಳಿ, ಜಾರಮಸ್ತಕ, ಅಡಕ ಸುಳಿ, ಉರ್ಲಸುಳಿ, ಗೂಟಾಪಳಿಸುಳಿ ಮುಂತಾದವು. ಒಳ್ಳೆಯ ಸುಳಿಗಳಿಗೆ ಇಟ್ಟಿರುವ ದವಣಿ ಸುಳಿ, ರಾಶಿಸುಳಿ, ಬಾಸಿಂಗ ಸುಳಿ, ಮಸ್ತಕ ಸುಳಿ, ಕಂಠಾಭರಣ ಸುಳಿ, ದೇವಮಣಿ ಸುಳಿ ಮುಂತಾದವುಗಳು. ಇವುಗಳನ್ನು ಗಮನಿಸಿದರೆ ಕೆಟ್ಟ ಫಲ ನೀಡುವವು ಎಂಬ ಕಾರಣಕ್ಕಾಗಿ ಸಂಸ್ಕೃತಿಯಲ್ಲಿರುವ ಕೆಟ್ಟ ಹೆಸರುಗಳನ್ನು ಇಡಲಾಗಿದೆ. ಹಾಗೆಯೇ ಒಳ್ಳೆಯ ಸುಳಿಗಳಿಗೆ ಒಳ್ಳೆಯ ಫಲ ನೀಡುತ್ತವೆ ಎಂಬುದಕ್ಕಾಗಿ ಸಂಸ್ಕೃತಿಯಲ್ಲಿರುವ ಒಳ್ಳೆಯ ಸುಳಿಗಳಿಗೆ ಒಳ್ಳೆಯ ಫಲ ನೀಡುತ್ತವೆ ಎಂಬುದಕ್ಕಾಗಿ ಸಂಸ್ಕೃತಿಯಲ್ಲಿರುವ ಒಳ್ಳೆಯ ಪದಗಳನ್ನು ಬಳಸಲಾಗಿದೆ.

‘ಕಸಬರಿಗೆ ಸುಳಿ ಎತ್ತು ಕೊಂಡವನ ಮನೆಯನ್ನೇ ಸಾರಿಸುತ್ತದೆ ಹಾಗು ಬೇಡಿ ಸುಳಿ ಇರುವ ಎತ್ತನ್ನು ಕೊಂಡವನಿಗೆ ಬೇಡಿ ಬೀಳುತ್ತೆ ಎಂಬ ನಂಬಿಕೆಗಳನ್ನು ನೋಡಿದಾಗಿ ಆಶ್ಚರ್ಯವೆನ್ನಿಸುತ್ತದೆ. ಬೇಡಿ ಹಾಕುವುದು ನಮ್ಮ ದೇಶಕ್ಕೆ ಬಂದುದು ಬ್ರಿಟಿಷರು ನಮ್ಮ ದೇಶವನ್ನು ಆಳಲು ಪ್ರಾರಂಭಿಸಿದಾಗ. ಹಾಗಾಗಿ ಈ ನಂಬಿಕೆ ಇತ್ತೀಚಿನದಾಗಿರಬಹುದು. ಬೇಡಿ ಸುಳಿ ಎತ್ತುಗಳನ್ನು ಮಾರುವಾಗ ಕಾಲನ್ನು ಕೆಸರಿನಿಂದ ಮುಚ್ಚುವುದುಂಟು. ಅಂದರೆ ಇಲ್ಲಿಯ ವ್ಯಾಪಾರದಲ್ಲಿಯೂ ಮೋಸವನ್ನು ಕಾಣಬಹುದು. ಸಾಮಾನ್ಯವಾಗಿ ಎತ್ತಿನ ವ್ಯಾಪಾರವನ್ನು ಮಾಡುವಾಗ ಹಣದ ಬದಲಾಗಿ ಮನುಷ್ಯನ ಬೆರಳುಗಳ ಮೂಲಕ ಅಂದರೆ ಬೆರಳುಗಳನ್ನೇ ಹಣಗಳ ಹಾಗೆ ರೂಪಾಂತರಗೊಳಿಸುವ ಮುಖಾಂತರ ವ್ಯಾಪಾರ ಮಾಡುತ್ತಾರೆ. ಕೆಟ್ಟ ಸುಳಿಯ ದನಗಳನ್ನು ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರು, ಹೊಸದಾಗಿ ವ್ಯವಸಾಯ ಆರಂಭಿಸುವವರು ಕೊಳ್ಳುವರು ಅಥವಾ ಮಾಂಸಕ್ಕಾಗಿ ಕೊಳ್ಳುವರು. ಅಂದರೆ ಇಲ್ಲಿಯೂ ಬಡವರು ಮತ್ತು ಮಾಂಸ ತಿನ್ನುವವರೇ ದಬ್ಬಾಳಿಕೆಗೆ ಒಳಗಾಗುವರು. ಏಕಂದರೆ ಕಡಿಮೆ ಹಣಕ್ಕೆ ಸಿಗುವುದು ಎಂಬ ಕಾರಣಕ್ಕಾಗಿ ಅವರೇ ಅವನ್ನು ಕೊಂಡುಕೊಳ್ಳುವರು.

ಇಂದು ದಟ್ಟವಾಗಿರುವ ವೈಜ್ಞಾನಿಕತೆಯಿಂದಾಗಿ ಅಲ್ಪಸ್ವಲ್ಪ ಸುಳಿಗಳ ಬಗೆಗಿನ ನಂಬಿಕೆಗಳು ಕಡಿಮೆಯಾಗುತ್ತಿವೆ. ಅವುಗಳ ಬಗೆಗಿನ ಅಲ್ಪಸ್ವಲ್ಪ ವ್ಯಾಮೋಹವು ಸಹ ಕಡಿಮೆಯಾಗಿದೆ. ಜೊತೆಗೆ ಇಂದಿನ ಬಹುರಾಷ್ಟ್ರೀಯ ಕಂಪನಿಗಳ ಪ್ರಪಂಚೀಕರಣದಿಂದಾಗಿ ಎಲ್ಲವೂ ಸಾರ್ವತ್ರಿಕರಣಗೊಳಗಾಗುತ್ತಿದೆ. ಜೊತೆಗೆ ಇಲ್ಲಿಯ ಎಲ್ಲಾ ಪಾರಂಪರಿಕ ಜ್ಞಾನಗಳು ಪ್ರಪಂಚದೆಡೆಗೆ ಸಾಗುತ್ತಿವೆ. ಸಮೂಹ ಮಾಧ್ಯಮಗಳ ಮುಖೇನವಾಗಿ ಇಡೀ ಜಗತ್ತೇ ಒಂದು ವಿಶಾಲವಾದ ಹಳ್ಳಿಯಾಗಿರುವ ಕಾಲದಲ್ಲಿ ಸುಳಿಗಳ ಬಗೆಗಿನ ಜ್ಞಾನ ತಿಳಿದ ಬಹುರಾಷ್ಟ್ರೀಯರು ಪೇಟೆಂಟ್ ಮುಖಾಂತರ ಒಳ್ಳೆಯ ಸುಳಿಯ ದನಗಳನ್ನು ಸೃಷ್ಟಿಸಿಕೊಡುವುದಿಲ್ಲ ಎಂದು ಹೇಗೆ ಹೇಳುವುದು. ಜೊತೆಗೆ ಸೌಂದರ್ಯ ಸ್ಪರ್ಧೆಗೋಸ್ಕರವಾಗಿ (ಸ್ಪರ್ಧೆಯು ಬಯಸುವ ರೀತಿಯಲ್ಲಿ) ಎದೆ-ಟೊಂಕ-ತೊಡೆಗಳನ್ನು ವೈಜ್ಞಾನಿಕ ಪದ್ಧತಿಯಿಂದ ಬೆಳೆಸಿಕೊಳ್ಳುತ್ತಿರುವ ಕಾಲದಲ್ಲಿ, ಬೇಕಾದ ಒಳ್ಳೆಯ ಸುಳಿಗಳನ್ನು ಉಳಿಸಿಕೊಂಡು (ಬೆಳಸಿಕೊಂಡು) ಕೆಟ್ಟ ಸುಳಿಗಳನ್ನು ಸಹ ಅಳಿಸಿ ಹಾಕಿಕೊಳ್ಳುವ ಕಾಲ ಬರುವುದಿಲ್ಲ ಎಂದು ಹೇಗೆ ಹೇಳುವುದು.

ಸಸ್ಯಗಳಲ್ಲಿರುವ ಸುಳಿಗಳ ಬಗೆಗೆ ಹೇಳುವುದಾದರೆ, ಜೋಳದ ಸುಳಿಯನ್ನು ಬರದ ರೀತಿಯಲ್ಲಿ ತಡೆಗಟ್ಟುವ ಕಾಲ ದೂರವಿಲ್ಲ. ಏಕೆಂದರೆ ಜೋಳದ ಬೆಳೆಯೊಂದರಿಂದಲೇ ಕಾರ್ಗಿಲ್ ನಂತಹ ಸಂಸ್ಥೆಗಳು ಇಂದು ಪ್ರಪಂಚದ ವ್ಯಾಪಾರೀಕರಣದಲ್ಲಿ ಬಹಳಷ್ಟು ಸಾಧಿಸಿವೆ. ಇಂದು ಬಹುರಾಷ್ಟ್ರೀಯ ಕಂಪನಿಗಳು ಹರಡಿಕೊಂಡಿರುವ ವ್ಯಾಪ್ತಿ, ದೇಶ ದೇಶಗಳ ಒಳ ಹೊರಗನ್ನು ಬದಲಿಸಬಲ್ಲ ಶಕ್ತಿ ಸೂಕ್ಷ್ಮ ಸ್ತರಗಳಿಗೆ ಹೋಗುತ್ತಿದೆ. ಅವುಗಳ ಶೋಷಣೆ ನಮಗೆ ಅರಿವಿಲ್ಲದಂತೆ ನಮ್ಮನ್ನು ಆವರಿಸಿಕೊಳ್ಳಬಲ್ಲ, ಅದೃಶ್ಯರೂಪ ತಾಳುತ್ತಿದೆ. ಇದು ಪ್ರಧಾನವಾಗಿ ಬಡ ದೇಶದಲ್ಲಿ ಸಿಗುವ ಸಂಪನ್ಮೂಲಗಳ ಲೂಟಿ ಹಾಗೂ ಅಗ್ಗದ ಶ್ರಮದ ಲೂಟಿಯ ರೂಪದಲ್ಲಿದೆ. ಜೋಳದ ಕೃಷಿಯಲ್ಲಿ ಕೈ ಚಾಚಿದ ಕಾರ್ಗಿಲ್ ಕಂಪನಿಗೆ ಬಿತ್ತನೆ ಬೀಜ ಮಾರಾಟದಿಂದ ಬರುವ ಲಾಭ ಅಷ್ಟೇನು ಮುಖ್ಯವಾಗಿಲ್ಲ. ಬದಲಾಗಿ ಜೋಳದಲ್ಲಿರುವ ಸಿಟ್ರಿಕ್ ಆಸಿಡ್ ಅನ್ನು ಕೋಳಿ ಆಹಾರ ತಯಾರಿಸಲು ಬಳಸುತ್ತಿದೆ. ಕಾರ್ಗಿಲ್ ಕಂಪನಿ ಜಗತ್ತಿನ ಕೋಳಿ ಆಹಾರ ಮಾರುಕಟ್ಟೆಯ ಶೇ. ೯೦ ರಷ್ಟು ಹತೋಟಿ ಹೊಂದಿದ್ದು, ಭಾರತದಲ್ಲೂ ಸಂಸ್ಕರಣಾ ಘಟಕ ಸ್ಥಾಪಿಸಿದೆ. ನಮ್ಮ ರೈತರು ಶ್ರಮದಿಂದ ಬೆಳೆದ ಜೋಳವನ್ನು ಅಗ್ಗದ ದರದಲ್ಲಿ ಕೊಂಡು ಕೋಳಿ ಆಹಾರ ತಯಾರಿಸಿ ಅಪಾರ ಲಾಭ ಮಾಡುತ್ತಿದ್ದಾರೆ.