(ಕಂಸಾಸುರ ಯುದ್ಧಕ್ಕೆ ಬರುವಿಕೆ)

ಸೋಮಶೇಖರ: ಯಲಾ ! ಖೋಡಿ ದನುಜನೇ ಕೇಳು ! ಅಂಥ ಬಾಹು ಬಲಾಢ್ಯ ಪರಾಕ್ರಮಶಾಲಿ ನೀನಾದದ್ದೇ ಆದರೆ ಗಢಣದಿಂದ ಯನ್ನಯ ಯೆದುರಿನೋಳ್ ನಿಂದು ಖಾಡಾ ಖಾಡಿ ಯುದ್ಧವನ್ನು ಮಾಡಿ ಸಡಗರದಿಂದ ಯನ್ನನ್ನು ಜಯಿಸೋ ದನುಜಾ-ನಿನ್ನ ಕೊಲ್ಲುವುದೇ ಸಹಜಾ ॥

ಕಂಸಾಸುರ: ಕೇಳುತ್ತೀಯೇನೋ ನರ ಮಾನವಾ! ಚಂಡದಾನವರೆಂಬ ಬೆದರಿಕೆಯು ನಿನಗಿಲ್ಲದೇ, ಪ್ರಚಂಡ ದನುಜನಾದ ಯನ್ನಯ ಕೈಗೆ ಸಿಕ್ಕಿ ಯನ್ನ ಅಂಬುಜಾಕ್ಷಿಯಾದ ಸುವರ್ಣೆಯನ್ನು ಕೂಡಿ ಕೊಂಡಿದ್ದೀಯಾ ! ಗಂಡಭೇರುಂಡನಂತೆ ಮೆರೆಯುವ ಇಗೋ ಈ ಗಧಾ ದಂಡದಿಂದ ನಿನ್ನ ಮಂಡೆಯನ್ನು ಖಂಡ್ರಿಸಿ ತುಂಡು ತುಂಡನ್ನು ಮಾಡಿ ಅಂಥಪ್ಪ ಕಂಡಗಳನ್ನು ಭಕ್ಷಿಸುತ್ತೇನೆ. ಅತಿ ಜಾಗ್ರತೆ ಯುದ್ಧಕ್ಕೆ ಸಿದ್ಧನಾಗೋ ನರಾಧಮಾ-ನೋಡೆನ್ನ ಪರಾಕ್ರಮಾ ॥

ದರುವು

ಯುದ್ಧಕ್ಕೆ ಸನ್ನದ್ಧನಾಗೋ  ಒಂದು
ಗುದ್ದಿಗೆ ಮರ್ದಿಪೆ ಸಾಗೋ ॥
ಮದ್ಯ ಪಾನವ ಮಾಡಿ  ಮದಮಾಂಸಗಳ ತಿಂದು
ಕೊಬ್ಬಿದ ನಿನ್ನನೂ  ಕೊಲ್ಲುವೆನೀಗಲೇ                                     ॥1 ॥

ಕಂಸಾಸುರದರುವು

ಬಲ್ಲೆ ಬಲ್ಲೆನು ನಿಲ್ಲೆಲೋ  ಈ
ಮಲ್ಲ ಯುದ್ಧದಿ ನೋಡೆಲೋ ॥
ಹುಲುಮಾನವ ನಿನ್ನ  ಮಲ್ಲಸಾಹಸದಂತೆ
ಗುಲ್ಲು ಮಾಡದೆ ಯನ್ನ  ವಲ್ಲಭೆಯನು ಬಿಡೋ                          ॥2 ॥

ಸೋಮಶೇಖರದರುವು

ಬಿಡು ಬಿಡು ಯಲೋ ನಿನ್ನನಾ  ಈಗ
ಕಡಿದು ಬಿಸಾಡುವೆ ಮುನ್ನ ನಾ ॥
ತಡಬಡವ್ಯಾತಕೆ ಜಡ ಮತಿ ಮಸ್ತಕ
ಹೊಡೆಯುವೆ ಪಿಡಿದಿಹ  ಖಡ್ಗದಿ ನಿನ್ನನೂ                                 ॥3 ॥

ಕಂಸಾಸುರದರುವು

ಇಷ್ಠು ಪೌರುಷವ್ಯಾಕೋ ಮಾನವಾ
ಭ್ರಷ್ಠ ಗಧೆ ಪೆಟ್ಟು ತಿನ್ನುವಾ ॥
ದೃಷ್ಠಿಸಿ ನೋಡಿಂತು  ಪೆಟ್ಟನು ಹೊಯ್ಯುತಾ
ಹೊಟ್ಟೆ ಬಗೆದು ಯಮ  ಪಟ್ಟಣಕೊಯ್ಯುವೆ                               ॥4 ॥

ಸೋಮಶೇಖರ: ಭಳಿರೇ ! ನಿಶಾಚರನಾದ ಕಂಸ ದೈತ್ಯನೇ ಕೇಳು ! ಮಹಾಚಂಡ ಪರಾಕ್ರಮನಂತೆ ಬಂದು ಗರ್ಜಿಸುತ್ತಾ ಇದ್ದೀ ! ಅಂತೊಪ್ಪ ಉದ್ಧಂಡ ಪರಾಕ್ರಮಶಾಲಿ ನೀನಾದದ್ದೇ ಆದರೆ ಗಂಡುಗಲಿಯಾದ ಯನ್ನೊಡನೆ ತಂಡ ತಂಡಮಾಗಿ ಪುನಃ ಯುದ್ಧವನ್ನು ಮಾಡಿದ್ದೇ ಆದರೆ, ಯನ್ನ ಕರಾಗ್ರದಲ್ಲಿ ಮೆರೆದು ಝಳಪಿಸುವ ಖಡ್ಗಾಯುದಿಂದ ಈ ಪೊಡವಿಗೆ ನಿನ್ನ ಬಲಿಯನ್ನು ಕೊಡುತ್ತೇನೆ. ಮುದದಿಂದ ಯುದ್ಧಕ್ಕೆ ಸನ್ನದ್ಧನಾಗೋ ದಾನವಾ – ಕತ್ತರಿಸುವೆ ನಿನ್ನ ದೇಹವಾ ॥

ಕಂಸಾಸುರ: ಯಲಾ ! ಪುಂಡ ಮಾನವನೇ ಕೇಳು, ಇಗೋ ಈ ಮಂಡಲದ ದಂಡು ದಳವಾಯಿ ಸೈನಿಕರನ್ನು ಒಂದೇ ತುತ್ತಿಗೆ ನುಂಗಿರುತ್ತೇನೆ. ಅದರಂತೆ ಭಂಡನಾದ ನಿನ್ನನ್ನು ಕಂಡು ಯನ್ನ ಗಧಾ ದಂಡದಿಂದ ತುಂಡು ತುಂಡನ್ನು ಮಾಡಿ ಕೋರೆ ದವಡೆಗಳಿಂದ ಅಗಿದು ಗುಟಕ್ ಗುಟಕ್ ಎಂದು ನುಂಗುತ್ತೇನೆ ನೋಡೋ ಮಾನವಾ – ನಿನ್ನ ನಾ ತಿಂಬುವಾ ॥

ಸೋಮಶೇಖರದರುವು

ಹಿಡಿರೋ ಹಿಡಿರೋ ಕಡು ದುರಾತ್ಮನಾ
ಕೇಳ್ ಪೊಡವಿನರರ
ಪಿಡಿದು ವಡಲ ಬಡುಕ ದೈತ್ಯನಾ                                          ॥1 ॥

ಕಂಸಾಸುರದರುವು

ನುಂಗುವೆ ನಿನ್ನ ಅಂಗ ಸಹಿತದೀ
ಯಲೋ ಮಂಗ ಮನುಜ
ಗಂಗಾಧರ ಕೃಪಾಂಗ ಮಿಲ್ಲದೇ                                             ॥2 ॥

ಸೋಮಶೇಖರದರುವು

ಸಿಡಿಲಾರ್ಭಟದಿ ಕಡಿದ ಸೋಮನೂ
ಗಡಗಡನೆ ನಡುಗಿ
ಪೊಡವಿ ಮೇಲೆ ದೈತ್ಯ ಮಡಿದನೂ                                        ॥3 ॥

ಭಾಗವತರದರುವು

ಮಡಿದ ದೈತ್ಯನೊಡಲ ಗರ್ಭದೀ
ಸಿಡಿದಾಗ ಬಂದ
ಪೊಡವಿ ಮೇಲೆ ಗಂಧರ್ವತ್ವದೀ                                            ॥4 ॥

ಭಳಿರೇ ಜ್ಯೇಷ್ಠ ಬಳ್ಳಾ ಪುರವರಾ
ಘಳಿಲಾನೇ ಬಂದು
ಇಳೆಯೊಳೆನ್ನ ಸಲಹೋ ಭವಹರಾ                                       ॥5 ॥

 

(ಕಂಸಾಸುರನ ಗರ್ಭದಿಂದ ಗಂಧರ್ವ ಬರುವಿಕೆ)

ಸೋಮಶೇಖರ: ಯಲಾ ! ಗರ್ಭ ಸಂಧಾನಿಯೇ, ನೀ ಧಾರು ? ನಿನ್ನ ಪಟ್ಟಣ ದಾವುದು ? ನಿನ್ನ ಪೆತ್ತಂಥಾ ಜನನೀ ಜನಕರು ಧಾರು ? ಏನು ಕಾರಣ ಈ ದುಷ್ಠನಾದ ದೈತ್ಯನ ಗರ್ಭದಲ್ಲಿ ವಾಸವಾಗಿದ್ದೆ. ದಿಟ್ಟ ತರಮಾಗಿ ಪೇಳೈ ಯೋಗ ಸಂಧಾನಿ ॥

ಗಂಧರ್ವ: ಪರಶಿವನ ವರದಿಂದ ಪುಟ್ಟಿದ ಸುಕುಮಾರನೇ ಕೇಳು ! ಗವನೆಂಬ ಗಂಧರ್ವನಾದ ನಾನು ಸುರಪುರಕ್ಕೆ ಸಂಚರಿಸುತ್ತಿರಲೂ, ಸಿಂಧೂ ನದಿಯ ಸರೋವರದ ಬಳಿಯಲ್ಲಿರುವ ಶುಕನೆಂಬ ಮುನಿಯು ಅರ್ಘ್ಯವಂ ಸೂರ‌್ಯನಿಗೆ ಅರ್ಪಿಸುತ್ತಿರಲೂ, ಆ ಸಮಯದಲ್ಲಿ ಅಯ್ಯನೆಂಬ ತೇಜಿಯನ್ನೇರಿ ನಾನು ಸುರಪುರಕ್ಕೆ ಸಂಚರಿಸುತ್ತಿರಲೂ ಅದರ ಬಾಯಿಂದ ಬಿಳಿ ನೊರೆಯು ವರಮುನೀಂದ್ರನ ಮೇಲೆ ಸುರಿದ ಕಾರಣ ಆ ತಪಸ್ವಿಯು ಕೋಪದಿಂದ ಅಸುರನಾಗೆಂದು ಶಾಪವಂ ಕೊಡಲು ಈ ಶಾಪವು ಎಂದಿಗೆ ಪರಿತ್ಯಾಗವಾಗುವುದೆಂದು ಕೇಳಲೂ ವರ ವೀರ ಸೋಮಶೇಖರನ ಯುದ್ಧರಂಗದಲ್ಲಿ ಹರಣವನ್ನು ತೊರೆಯಲು ಅಂದಿಗೆ ನಿನ್ನ ಶಾಪ ಪರಿತ್ಯಾಗವಾಗುವುದೆಂದು ಹೇಳಲೂ, ಇಂದಿಗೆ ಶಾಪವಿಮೋಚನೆಯಾಯಿತು. ಇನ್ನು ನಮ್ಮ ನಿವಾಸಕ್ಕೆ ಪೋಗಿ ಬರುತ್ತೇನೆ, ನಿಮಗೆ ವಂದನೆಯೈ ರಾಜಕುಮಾರ – ಶತೃಜನ ಭಯಂಕರಾ ॥

ಸೋಮಶೇಖರ: ಹೇ ಕಾಂತೆ,  ಹೇ ರಮಣೆ, ಹೇ ನಲ್ಲೇ ! ಇಗೋ ಈ ಭಂಡನಾದ ದೈತ್ಯನನ್ನು ನಷ್ಠಪಡಿಸಿ ಇರುತ್ತೇನೆ, ಇದಿಗೋ ಈ ದೊಡ್ಡಗುಡ್ಡದಂತೆ ಬಿದ್ದಿರುವಂಥವನನ್ನು ನೋಡಿದೆಯಾ, ಅಲ್ಲದೇ ಬ್ರಹ್ಮಾಂಡ ಮಾದ ಇವನ ಅಂಗವನ್ನು ಚೆನ್ನಾಗಿ ನೋಡಿದೆಯಾ. ತಡವರಿಸದೆ ನಿನ್ನ ಮನಸ್ಸಿನಲ್ಲಿ ಆನಂದಕರಮಾಗಿ ಇರುತ್ತೀಯೇನೆ ಕಾಂತೆ – ಸದ್ಗುಣವಂತೆ ॥

ಸುವರ್ಣೆ: ನಮೋನ್ನಮೋ ಹೇ ಪ್ರಾಣಕಾಂತ ! ಕಂದರ್ಪ ಸಮರೂಪನಾದ ನೀವು ನಮ್ಮ ತಂದೆ ತಾಯಿಗಳನ್ನು ತಿಂದ ಹಗೆಯನ್ನು ಕೊಂದ ಕಾರಣದಿಂದ ಮನದೊಂದಿಗೆ ಪರಮಾನಂದ ಭರಿತಳಾಗಿ ಒಂದು ಮಾತನ್ನು ಪೇಳುತ್ತೇನೆ ಲಾಲಿಸಬೇಕೈ ಕಾಂತ-ಮಹಾಸಮರಂಥಾ ॥

ದರುವು

ಧಾರುಣಿ ಪಾಲ  ಕೇಳೈ
ನಾರಿಯ ಲೋಲ ॥ಪ ॥ರಮಣಾ ॥
ವೀರಸೇನನ ದೊರೆಯೂ
ಧೀರತನದೀ ಪೊರೆದಾ ॥
ಧರಣಿ ಹೇಮಾವತಿಯ
ಪೊರೆದು ಪಾಲಿಪುದು  ರಮಣಾ                      ॥1 ॥ಧಾರುಣಿಪಾಲ ॥

ಮುದ್ದು ಮೋಹನ ಕೇಳು
ಇದ್ದ ಪರಿಯ ಬೇಗಾ ॥
ಸಿದ್ಧದಿಂ ತೆರಳುವುದು
ಉದ್ಯಾನ ವನಕೇ  ರಮಣಾ                           ॥2 ॥ಧಾರುಣಿಪಾಲ ॥

ಜ್ಯೇಷ್ಠ ಬಳ್ಳಾ ಪುರದಾ
ದೃಷ್ಠಿ ಮೂರುಳ್ಳ ಶಿವನೂ ॥
ಕಷ್ಠವ ಪರಿಹರಿಸೀ
ಶ್ರೇಷ್ಠದಿಂ ಪೊರೆವಾ ॥ರಮಣಾ                      ॥3 ॥ಧಾರುಣಿಪಾಲ ॥

ಸುವರ್ಣೆ: ಅಂಗಜ ಸಮರೂಪನಾದ ಹೇ ಕಾಂತ ! ಅಂಗಜವೈರಿ – ಭವಭಂಗ ಶಂಭುಲಿಂಗನ ಕೃಪಾಂಗದಿಂದ ಯನ್ನ ಜನಕನಾದ ವೀರಸೇನ ನೃಪಾಲನು ಪೊರೆದು ಪಾಲಿಸಿದ ಈ ಹೇಮಾವತಿ ಪಟ್ಟಣವನ್ನು ತುಂಗ ವಿಕ್ರಮರಾದ ನೀವು ಪಾಲಿಸುವುದಲ್ಲದೇ, ಶೃಂಗಾರಕರಮಾದ ನಮ್ಮ ಕಾನನಕ್ಕೆ ಪೋಗಿ ಮಂಗಳಕರಮಾದ ಕೊಳದಲ್ಲಿ ಜಳಕವನ್ನಾಡಿ ಕಂಗಳಿಗೆ ಪ್ರಿಯವಾದ ಚೆಲುವ ವೃಕ್ಷಗಳ ಮೇಲೆ ಒಪ್ಪುವಾ ಪಕ್ಷಿ ಜಾತಿಗಳನ್ನು ವಿನಯದಿಂ ನೋಡಿ ನಿಮ್ಮ ಸಂಗಡ ಬರುವೆನಾದ ಕಾರಣ ಮಂಗಳಕರಮಾಗಿ ಪೋಗೋಣ ದಯಮಾಡಿಸಬೇಕೈ ಕಾಂತ – ಪರಮ ದಯಾವಂತ ॥

ಸೋಮಶೇಖರ: ಪ್ರದ್ಯುಮ್ನ ವಾಹನದಂತೆ ಮೃದು ನುಡಿಗಳನ್ನು ನುಡಿಯುವ ಪದ್ಮಲೋಚನೆಯಾದ ತರುಣಿಯೇ ಕೇಳು  ನಿನ್ನ ಮಧುರ ತರಮಾದ ಮೃದು ನುಡಿಗಳನ್ನು ಕೇಳಿ ಮಧುರ ಸಕ್ಕರೆ ಜೇನು ಸವಿದಂತೆ ಇರುವುದಾದ ಕಾರಣ ಉದ್ಯಾನವನಕ್ಕೆ ಪೋಗೋಣ ನಡಿಯೇ ಕಾಂತೇ – ಸರಸ ಧೀಮಂತೆ॥

ಭಾಗವತರು: ಈ ಪ್ರಕಾರಮಾಗಿ ಸೋಮಶೇಖರನೂ, ಸುವರ್ಣಾದೇವಿಯೂ ಸಹ ವನ ವಿಹಾರ ಗೈಯುತ್ತಾ ಅಮೃತ ಸಮೋಪಮಾನಮಾದ ಕೊಳದಲ್ಲಿ ಜಲ ಕ್ರೀಡೆಯಾಡುತ್ತಿರಲೂ, ಸುವರ್ಣಾದೇವಿಯ ರತ್ನ ಪಾವುಗೆಯು ಕಾಣದೆ ನೀರಿನಲ್ಲಿ ಬೀಳಲು, ಮೆಟ್ಟಿದ್ದ ಇನ್ನೊಂದು ಪಾವುಗೆಯನ್ನು ಅಲ್ಲಿಯೇ ಯೆಸೆದು ಸತಿಪತಿಗಳು ಅರಮನೆಗೈದು ಸುಖ ಸಲ್ಲಾಪದಿಂದಿರಲೂ ಆ ಪಾವುಗೆಯು ಒಬ್ಬ ಶಬರನಿಗೆ ಸಿಕ್ಕಲು ಅದಂ ತಂದು ತನ್ನ ರಾಜನಾದ ಉಗ್ರಬಾಹುಕನಿಗೆ ತಂದೊಪ್ಪಿಸಲು ರಾಜನು ತನ್ನ ಮಂತ್ರಿಯೊಡನೆ ಇಂತೆಂದನೈಯ್ಯ ಭಾಗವತರೇ ॥

 

(ಉಗ್ರಬಾಹುಕ ಬರುವಿಕೆ)

ಉಗ್ರಬಾಹುಕ: ಭಳಿರೇ, ಸೇವಕಾ, ಹೀಗೆ ಬಾ ! ಮತ್ತೂ ಒಂದು ಸಾರಿ ಹೀಗೆ ನಿಲ್ಲು, ಭಲಾ, ದ್ವಾರಪಾಲಕಾ ! ಈ ಸಪ್ತಕುಲಾಚಲ ಪರ್ವತಂಗಳೋಳ್ ಮಹಾ ಶ್ರೇಷ್ಠದಿಂದೊಪ್ಪಲ್‌ಪಟ್ಟ, ಕನಕಾಚಲ ಪರ್ವತ ಶಿಖರಾಗ್ರದೋಳ್ ಮೆರೆಯುವ ಕೈಲಾಸ ಪಟ್ಟಣಕ್ಕೆ ಶ್ರೇಷ್ಠವೆಂದೆನಿಸುವಾ, ದೃಷ್ಠಿ ಮೂರುಳ್ಳ ನಿಟಿಲಾಕ್ಷನ ಕರುಣ ಕಟಾಕ್ಷದಿಂದ ಪರಮೈಶ್ವರ‌್ಯ ಮಣಿ ಖಚಿತ ಮಾಣಿಕ್ಯದಿಂ ಪ್ರಕಾಶಿಸುವ ಸಿರಿ ಸಂಪತ್ಕಳಾದಿ ವೈಭವದಿಂದೊಪ್ಪಿ, ದೇಶ ದೇಶದ ಮಾನವಾಧಿಪರಿಗೆ ಅಸಮ ಕೋವಿದನೆಂದೆನಿಸಿ ಪ್ರಸಿದ್ಧಿಯನ್ನು ವಹಿಸಿರುವಂಥ ಈ ವಸುಧೆಯೋಳ್ ಕುಸುಮ ಕೇಸರಿಯ ನಗರವನ್ನು ಕುಶಲತನದಿಂ ಪಾಲಿಸುವ ಉಗ್ರಬಾಹುಕ ಅರಸ ಶಿಖಾಮಣಿಯೆಂದು ಗ್ರಹಿಸುವಂಥವನಾಗೋ ದೂತ – ರಾಜ ಸಂಪ್ರೀತ ॥

ಭಳಿರೇ, ಭಟ ಸಾರಥಿಯೇ  ಈ ಸಭಾ ಸ್ಥಾನಕ್ಕೆ ಬಂದ ಕಾರಣವೇನೆಂದರೆ, ಇಂದಿನಾ ದಿನ ನಮ್ಮ ರಾಜಾಸ್ಥಾನಕ್ಕೆ ರತ್ನ ನಿರ್ಮಿತವಾದ ಒಂದು ಪಾವುಗೆಯು ಬಂದಿರುವುದರಿಂದ ರತ್ನ ಪರೀಕ್ಷೆಗಳ ಉದ್ದಿಶ್ಯಮಾಗಿ ಬಂದು ಇರುತ್ತೇನಾದ ಕಾರಣ ಅತಿಜಾಗ್ರತೆಯಿಂದ ಸುಗುಣ ಸುಬುದ್ಧಿಯೆಂಬ ಯನ್ನ ಪ್ರಧಾನಿಯನ್ನು ಕರೆಸೋ ಚಾರಕಾ-ದ್ವಾರ ಪಾಲಕಾ ॥

 

(ಸುಗುಣ ಸುಬುದ್ಧಿಯೆಂಬ ಪ್ರಧಾನಿ ಬರುವಿಕೆ)

ಸುಗುಣ ಸುಬುದ್ಧಿ: ಅಯ್ಯ ಸಾರಥೀ, ಹೀಗೆ ಬಾ ! ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಯಲಾ, ದ್ವಾರ ತಿಷ್ಠ ! ಶ್ರೀಮದ್ರಾಜಾಧಿರಾಜ ಕಂಠೀರವ ಭೂಪಾಲರೆಂದೆನಿಸಿ ಒಪ್ಪುವಾ ಅಗಣಿತಮಾದ ಅರಸರಿಂದಲೂ ಕಪ್ಪಕಾಣಿಕೆಯನ್ನು ತಪ್ಪದೇ ಗ್ರಹಿಸುವ ಕಪ್ಪುಗೊರಳನ ಕರುಣ ಕಟಾಕ್ಷದಿಂದ ಕುಸುಮಕೇಸರಿಯೆಂಬ ಪಟ್ಟಣವನ್ನು ಕುಶಲತನದಿಂದ ಪರಿಪಾಲಿಸುವಾ ವಸುಧೀಶ ಉಗ್ರಬಾಹುಕ ರಾಜರ ಸಮ್ಮುಖದೋಳ್ ಹಿತದಿಂದ ರಾಜ್ಯಭಾರವನ್ನು ನಡೆಸುವ ಸುಗುಣ ಸುಬುದ್ಧಿಯೆಂಬ ಪ್ರಧಾನೋತ್ತಮನು ನಾನೇ ಅಲ್ಲವೇನಯ್ಯ ಸಾರಥೀ – ಸಂಧಾನ ಮತಿ ॥

ಅಯ್ಯ ಕವಾಟ ಸೇವಕಾ ! ಈ ಸಭಾ ಪಾಂಡಿತ್ಯರ ಬಳಿಗೆ ಬಂದ ಕಾರಣವೇನೆಂದರೇ ನಮ್ಮ ದೊರೆಯಾದ ಉಗ್ರಬಾಹುಕರಾಜರು ಕರೆಸಿದ ಕಾರಣ ಬಾಹೋಣವಾಯ್ತು, ಅತಿಜಾಗ್ರತೆಯಿಂದ ಭೇಟಿಯನ್ನು ಮಾಡಿಸೋ ಚಾರ – ನಿನ್ನ ಕೊರಳಿಗೆ ಪುಷ್ಪಾಹಾರ ॥ನಮೋನ್ನಮೋ ದೊರೆಯೇ- ಧೈರ‌್ಯದಲ್ಲಿ ಕೇಸರಿಯೇ ॥

ಉಗ್ರಬಾಹುಕ: ಅಷ್ಠೈಶ್ವರ‌್ಯದಿಂದ ಬಾರೈ ಪ್ರಧಾನಿ – ವಾರುಧಿ ಸಮಾನಿ ॥

ಸುಗುಣ ಸುಬುದ್ಧಿ: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನು ? ತ್ವರಿತದಿಂದ ಪೇಳಬೇಕೈ ರಾಜ- ಮಾರ್ತಾಂಡತೇಜ ॥

ದರುವುಜಂಪೆ

ಮಾತು ಪೇಳುವೆ ನಿನಗೆ  ಮಂತ್ರಿಶೇಖರ ಕೇಳೈ
ದೂತ ತಂದಿತ್ತಿಹನೂ  ರತ್ನಾಪಾವುಗೆಯೂ, ಪಾವುಗೆಯೂ            ॥1 ॥

ಥಳಥಳಿಸುವ ಪಾವುಗೆಯೂ  ನೀಲಾಮಣಿ ನಿರ್ಮಿತವೂ
ಇಳೆಯೊಳಗೆ ಧಾರಿದನೂ  ಧರಿಸೂತಿಹರಿನ್ನೂ  ಕೇಳಿನ್ನೂ          ॥2 ॥

ಉಗ್ರಬಾಹುಕ: ಅಯ್ಯ ಪ್ರಧಾನಿ ! ಈ ಕ್ಷಿತಿಯೊಳಗೆ ಅರ್ತಿಯಿಂದ ನಾನು ಧಾತ್ರಿಯನ್ನು ಪಾಲಿಸುತ್ತಿರಲೂ ಓರ್ವ ಶಬರನು ಈವತ್ತಿನಾ ದಿನದಲ್ಲಿ ಪೃಥ್ವಿ ಹೇಮಾವತಿಯ ವನಾಂತರದ ಬಿತ್ತರದ ಸರೋವರದಲ್ಲಿ ಸಿಕ್ಕಿದ ವಿಚಿತ್ರತರಮಾದ ಈ ರತ್ನಪಾವುಗೆಯನ್ನು ಇತ್ತು ಇರುವನಾದ ಕಾರಣ ಈ ಪೃಥ್ವಿಯೋಳ್ ಧರಿಸತಕ್ಕಂಥವರು ಧಾರೋ ವಿಸ್ತರಿಸಿ ಯನ್ನೊಡನೆ ಬಿತ್ತರಿಸೈ ಮಂತ್ರಿ – ಕಾರ‌್ಯೇಷು ತಂತ್ರಿ ॥

ದರುವು

ಪೃಥ್ವಿಪಾಲನೆ ಕೇಳೈ  ಮತ್ತೆ ಹೇಮಾವತಿಯಾ
ಪೃಥ್ವಿಮೋಹಿನಿ ಧರಿಪ  ರತ್ನಾ ಪಾವುಗೆಯೂ ॥

ಸುಗುಣ ಸುಬುದ್ಧಿ: ಪಟು ಭಟಾಗ್ರಣಿಯಾದ ಹೇ ರಾಜ ! ಈ ಸೃಷ್ಠಿಯೋಳ್ ಕಂಗಳಿಗೆ ಶ್ರೇಷ್ಠಮಾಗಿ ತೋರಲ್‌ಪಟ್ಟ ಹೇಮಾವತಿಯ ಬಟ್ಟ ಕುಚದ ಮೋಹನ ರೂಪ ಲಾವಣ್ಯ ಕೋಟಿಕಂದರ್ಪ ಸಮರೂಪವನ್ನು ಪೋಲ್ವ ನಟನೆಗಾರ್ತಿಯಳಾದ ಸುವರ್ಣೆ ಜಗನ್ಮೋಹನೆ ಮೆಟ್ಟುವಂಥ ಶ್ರೇಷ್ಠಮಾದ ಪಾವುಗೆಯೂ ನವರತ್ನ ಮಯದಿಂದೊಪ್ಪಲ್ ಪಟ್ಟಿರುವುದಾದ ಕಾರಣ ತಮ್ಮ ಇಷ್ಠಾನುಸಾರವೇನು? ವಿಸ್ತರಿಸಬೇಕೈ ರಾಜ – ರವಿಸಮತೇಜ ॥

ದರುವುಜಂಪೆ

ಸುಂದರಾಂಗನೆಯನ್ನು  ತಂದು ವದಗಿಸೋ ಮಂತ್ರೀ
ಇಂದು ಧರಣೀಯೊಳಗೆ  ಡಂಗೂರ ಹೊಡೆಸೋ  ನೀ ಹೊಡೆಸೋ ॥3 ॥

ಅಷ್ಠಾ ಮೂರುತಿ  ದೃಷ್ಠಿ ಫಲಿಸಿತು ನಮಗೆ
ದಿಟ್ಟಾ ಕೋಮಲೆಯರನು  ಕೊಟ್ಟು ನೀ ಕರೆಸೋ ನೀ ಕರೆಸೋ    ॥4 ॥

ಉಗ್ರಬಾಹುಕ: ಹೇ ಮಂತ್ರೀ, ಜ್ಯೇಷ್ಠ ಬಳ್ಳಾಪುರ ವಾಸನಾದ ಶಂಕರ ಮೂರ್ತಿಯ ದಯಾರಸವು ನಮಗೆ ಫಲಿಸಿದ್ಧರಿಂದ ಆ ತರಳ ಸುಂದರಿಯಾದ ಸುವರ್ಣೆಯನ್ನು ಈ ಸಭಾಸ್ಥಾನಕ್ಕೆ ಕರೆದುಕೊಂಡು ಬರುವಂಥವರಿಗೆ ಪರಮ ಸಂತೋಷದಿಂದ ಅವರವರು ಬೇಡಿದ ಇಷ್ಠಾರ್ಥಗಳನ್ನು ಧರಣೀಶನು ಕರುಣಿಸಿ ಕೊಡುತ್ತಾನೆಂದು ಈ ಪುರದ ರಾಜ ಬೀದಿಯೋಳ್ ಡಂಗೂರ ಸಾರಿ ಬಾರೈಯ್ಯ ಸಚಿವರಾ- ಸಿಂಧು ಗಂಭೀರಾ ॥

ಸುಗುಣ ಸುಬುದ್ಧಿ: ಹೇ ರಾಜೇಂದ್ರಾ ! ನಿಮ್ಮ ಆಜ್ಞೆ ಪ್ರಕಾರವಾಗಿ ಆ ತರುಣಿಯನ್ನು ಕರೆ ತರುವ ನಿಮಿತ್ಯವಾಗಿ ಈ ಪುರಪರಿವಾರಗಳಲ್ಲಿ ಡಂಗುರವನ್ನು ಹೊಡೆಸಿದ ಕಾರಣ ಯಾರೋ ಓರ್ವ ಮುದಿನಾರಿಯು ನಾನು ತರುತ್ತೇನೆಂದು ಬರುತ್ತಾ ಇದ್ದಾಳೈಯ್ಯಾ ನೃಪಾಲಕಾ – ಕ್ಷೋಣಿಜನಪಾಲಕಾ॥

 

(ತಾಟಗಿತ್ತಿ ಬರುವಿಕೆ)

ತೆರೆದರುವು

ಕುಟಿಲೆಯು ಬಂದಳು ತಾಟಕಿಯೂ ॥ಪ ॥
ಪಟು ತರದಿಂದಲೀ  ನಟನೆಯು ನಟಿಸುತಾ
ಕುಟಿಲತನದಿ ಅಟ  ನಟಿಸುತ ದಿಟದೊಳೂ                              ॥1 ॥

ಮಿಡುಕುತ ತಡಕುತ  ಒಡಲನು ಬಡಿಯುತಾ
ಗಡ ಗಡ ನಡುಗುತ  ಬಡನಡು ಬಳಕುತಾ                              ॥2 ॥

ಗರ ಗರ ತಿರುಗುತ  ಹರನನು  ಸ್ಮರಿಸುತಾ
ಯರಗುತ ಸೊರಗುತ  ಕೊರಗುತ ಮರುಗುತಾ                       ॥3 ॥

ಪೀಠಿಕೆಯಲಾ ! ಕುಟಿಲ ಸಂಧಾನಿಯೇ ! ಈ ಕುಠಾರದೊಳು ವಿಕಟಕವಿಯಂತೆ ವಿಕಟವಾಗಿ ಮಾತನಾಡಿಸುವ ಅಕಟಕಟ ನೀ ಧಾರೋ – ಇತ್ತ ಕಡೆ ಬಾರೋ ॥

ಯಲಾ ಕುಟಿಲ ಸಂಧಾನಿಯೇ ! ನಟನೆಗಾರ್ತಿಯರೊಳಗೆ ಕುಟಿಲ ಕುಂತಳೆಯಾದ ಮಟಮಾಯಗಾತಿಯೆಂಬ ಪ್ರಸಿದ್ಧಿಯನ್ನು ವಹಿಸಿ ಸಕುಟುಂಬ ಸಮೇತರಾಗಿ ಪ್ರಕಟಿಸುವ ಮಾನ್ಯರನ್ನು ವಿಕಟತ್ವದಿಂದ ಅಗಲಿಸುವ ಚಿತ್ತಿನಿ ಜಾತಿಗೆ ಸಂಬಂಧಪಟ್ಟಿರುವ ತಟವಟಕಿಯೆಂಬ ತಾಟಕಿಯಾದ ಮಟು ಮಾಯಗಾತಿಯು ನಾನೇ ಅಲ್ಲವೇನಯ್ಯ ಕುಟಿಲ ಸಂಧಾನಿಯೇ ॥

ಹೇ ಮಾವನಾದ ಸಾರಥೀ  ಹೇಮಾವತಿಯ ಕಾಮಿನಿಯನ್ನು ಪ್ರೇಮದಿಂದ ತಂದವರಿಗೆ ಕಾಮಿತಾರ್ಥವನ್ನು ಕೊಡುತ್ತೇನೆಂದು ಸ್ವಾಮಿಯಾದ ರಾಯನು ನೇಮಿಸುತ್ತಿರುವನಾದ ಕಾರಣ ಆ ಮಹಿಪನ ಸಮೀಪಕ್ಕೆ ಬಂದು ಇರುತ್ತೇನೆ, ಕೋಮಲೆಯು ಬಂದು ಇರುವಳೆಂದು ಭೂಮಿಪಗೆ ತಿಳಿಸೋ ಮಾವ – ಇದೇ ನನ್ನ ಸ್ವಭಾವ ॥ಪರಾಕು ಪರಾಕೈಯ್ಯ ದೊರೆಯೇ – ಮೋಹದ ಅರಗಿಳಿಯೇ ॥

ಉಗ್ರಬಾಹುಕ: ಹೇ ಮಾನಿನಿಯಾದ ತಾಟಕೀ ! ಹೇಮಾವತಿಯ ಪಟ್ಟಣಕ್ಕೆ ಪೋಗಿ ನಿನ್ನ ಕುಟಿಲ ಮಾಯಗಳಿಂದ ಚತುರೋಪಾಯವನ್ನು ನಟಿಸಿ ಬಟ್ಟಕುಚದ ಬಾಲೆಯನ್ನು ಈ ಪಟ್ಟಣಕ್ಕೆ ವಡಗೊಂಡು ಬಂದು ಯನ್ನ ವಶವನ್ನು ಮಾಡಿದ್ದೇ ಆದರೆ ಈ ಅಷ್ಠೈಶ್ವರ‌್ಯದಿಂದೊಪ್ಪಲ್ ಪಟ್ಟಾವಳಿಯ ವಸ್ತ್ರಾಭರಣ ವನ್ನು ನಿನಗೆ ಕೊಟ್ಟು ಕಳುಹಿಸುತ್ತೇನೆ, ಎಷ್ಠು ದಿವಸಗಳೊಳಗಾಗಿ ಕರೆತಂದು ಬಿಡುತ್ತೀಯಾ ತಟ್ಟನೇ ಪೇಳುವಂಥವಳಾಗೇ ಕುಟಿಲ ಸಂಧಾನಿಯೇ ॥

ತಾಟಗಿತ್ತಿ: ಹೋ ರಾಜಕುಮಾರನೇ, ಆ ನಾರಿಯಳನ್ನು ಚಾರುತರಮಾದ ಯನ್ನ ಚತುರೋಪಾಯ ಗಳಿಂದ ಇನ್ನು ಆರು ತಿಂಗಳಿಗೆ ಸರಿಯಾಗಿ ತರುತ್ತೇನೆ ನೀನಾತುರ ಪಡದೆ ಭೋರನೆ ವೀಳ್ಯವನ್ನು ಸಾರಬಹುದೈಯ್ಯ ರಾಜ – ಈ ಮಾತು ಸಹಜಾ ॥

ಉಗ್ರಬಾಹುಕ: ಭಲಾ ಭಲಾ. ಷಹಭಾಷ್, ಎಲೈ ಮಂತ್ರೀ, ಈ ಕುಟಿಲ ತಾಟಕಿಗೆ ಒಪ್ಪಿದ ವೀಳ್ಯವನ್ನು ಕೊಟ್ಟು ಕಳುಹಿಸೋ ಪ್ರಧಾನಿ – ವಾರುಧಿಸಮಾನಿ ॥

ಸುಗುಣ ಸುಬುದ್ಧಿ: ಅದೇ ಪ್ರಕಾರ ಆಗಬಹುದೈಯ್ಯ ರಾಜೇಂದ್ರಾ ॥ಅಮ್ಮಾ ತಾಟಕಿ ! ವೀಳ್ಯವನ್ನು ತೆಗೆದುಕೊಳ್ಳಬಹುದಮ್ಮಾ ಮಟುಮಾಯಗಾತಿ ॥

ತಾಟಗಿತ್ತಿ: ಹೇ ಮಂತ್ರಿ ಕುಲೋತ್ತಮಾ ! ವೀಳ್ಯವನ್ನು ತೆಗೆದುಕೊಂಡು ಇರುತ್ತೇನೆ. ನಾನಿನ್ನು ಪೋಗಿ ಬರುತ್ತೇನೈಯ್ಯ ಮಂತ್ರಿ – ನೀ ಬಹು ತಂತ್ರೀ ॥

 

(ತಾಟಗಿತ್ತಿ ಹೇಮಾವತಿಗೆ ಹೋಗುವಿಕೆ)

ಭಾಗವತರದರುವು

ತಡ ಬಡವಿಲ್ಲದೇ  ನಡೆದಳು ತಾಟಕಿ
ಪೊಡವಿ ಹೇಮಾವತಿಗೆ  ಪುರಕೇ                                           ॥1 ॥

ಕಡಲನು ದಾಟುತಾ  ನಡೆದಳು ತಾಟಕಿ
ಕಡು ಭರದೀ ವನಕೇ  ಬನಕೇ                                               ॥2 ॥

ಪೊಡವಿಪ ಸತಿಯನು  ನೋಡುತ ಮಾಯದಿ
ಗಡ ಗಡ ನಡುಗುತ್ತಾ  ಬರುತಾ                                            ॥3 ॥

ಬಿದ್ದಿಹ ಮುದುಕಿಯ  ಸುದ್ದಿಯ ಕಾಣುತಾ
ಚದುರಗೆ ಪೇಳಿದಳೂ  ಅವಳೂ                                            ॥4 ॥

ಸುವರ್ಣೆ: ಕರುಣಾ ಸಾಗರನಾದ ಪ್ರಾಣಕಾಂತನೇ ಕೇಳು ! ಸೊರಗಿ ಚೈತನ್ಯವಿಲ್ಲದೇ ಮರುಗಿ ಕೊರಗುತ್ತಾ ಹರಣ ಪೋದವಳಂತೆ ಬಿದ್ದಿರುವ ಮುದಿ ನಾರಿಯಳನ್ನು ಕಂಡು ಯನ್ನ ಮನಸ್ಸು ಕರಗಿ ನೀರಾಗಿರುವುದಾದ ಕಾರಣ ಪರಮ ಹರುಷದಿಂದ ಇವಳ್ಯಾರೋ ವಿಚಾರಿಸುತ್ತೇನೈ ಕಾಂತ – ಸದ್ಗುಣವಂತಾ ॥

ಸೋಮಶೇಖರ: ಮತ್ತಗಜಗಮನೆಯಾದ ಚಿತ್ತದೊಲ್ಲಭೆಯೇ ಕೇಳು ! ಮತ್ತೆ ಪೃಥ್ವಿಯ ಮೇಲೆ ಬಿದ್ದು ಇರುವಂಥವಳು ಭೂತ ಪ್ರೇತ ಪಿಶಾಚವೋ ಮತ್ತಾರೋ ಇವಳಿರುವ ರೀತಿಯನ್ನು ಚೆನ್ನಾಗಿ ತಿಳಿದು ಅರಮನೆಯ ದೂತಿಯ ಕೆಲಸಕ್ಕೆ ಪ್ರೀತಿಯಿಂದ ಕರೆದುತಾರೆ ಕನ್ನೇ – ಸುಗುಣ ಸಂಪನ್ನೇ ॥

ಸುವರ್ಣೆ: ಅದೇ ಪ್ರಕಾರ ಕರೆದುಕೊಂಡು ಬರುತ್ತಾ ಇದ್ದೇನೈಯ್ಯ ಕಾಂತ-ಕಾಮಿನಿ ವಸಂತ ॥

ದರುವು

ಬಂದಿಹಳ್ಯಾರೇ  ಸುಂದರಿ ಬಾರೇ
ಬಂದಿಹಳ್ಯಾರೇ ॥ಪ ॥
ಮಂದಗಮನೆ ಕೇಳು  ಇಂದು ವನದ ಮಧ್ಯೆ
ಕಂದೀ ಕುಂದು ತ ಮರು  ಗಿಂದು ದುಃಖಿಸಲೇಕೇ ॥ಬಮದಿಹಳ್ಯಾರೇ ॥1 ॥

ಚಿಂತಿಸಲೇಕೇ  ಕಾಂತೆಯೆ ನಿನ್ನ  ಅಂತರಂಗಕ್ಕೇ ॥
ದಂತಿಗಮನೆ ಕೇಳು  ಅಂತರಂಗದೊಳಿಷ್ಠು
ಸಂತಾಪವೇಕಮ್ಮಾ  ಚಿಂತಿಪುದನು ಪೇಳೇ ॥ಬಂದಿಹಳ್ಯಾರೇ     ॥2 ॥

ಸುವರ್ಣಾದೇವಿ: ಹೇ ಕಾಂತಾಮಣಿ, ಇಷ್ಠು ಚಿಂತಾಕ್ರಾಂತಳಾಗಿ ಮನದಿ ಚಿಂತಿಸುವ ಅಂತರಂಗವೇನೋ ಪೇಳುವುದಲ್ಲದೇ ಧಾವ ಭೂಕಾಂತನ ಮಡದಿಯೋ  ಕಾಂತಾರದಿ ಚರಿಸುವ ಭೂತ ಪ್ರೇತವೋ, ಇಂತೊಪ್ಪ ಮನಾಂತರದ ಹಾದಿಯೋಳ್ ಕುಳಿತು ಯೇಳುವುದಕ್ಕೆ ಸ್ವತಂತ್ರವಿಲ್ಲದೇ ವಿಭ್ರಾಂತಿಯನ್ನು ಹೊಂದಿ ಇರುತ್ತೀಯಲ್ಲಾ, ನಿನ್ನ ಅಂತರಂಗದ ಆಲೋಚನೆಯನ್ನು ಸಂತೋಷದಿಂದ ಪೇಳಮ್ಮಾ ನಾರಿ – ಕೇಳುತ್ತಿರುವೆನು ಸಾರಿ ॥

ದರುವು

ಯೇನೇಳಲಮ್ಮಾ  ಯನ್ನಯ ಬಾಳು
ಯೇನೇಳಲಮ್ಮಾ ॥ಪ ॥

ನಾನು ಮಾಣಿಕ ಶೆಟ್ಟಿ  ಮಾನವತಿಯು ಕಾಣೆ
ತಾನು ಮಡಿಯಲು ಬೇಗ  ಜ್ಞಾನಶೂನ್ಯಳು ಆದೇ ॥                  ॥1 ॥

ಹಡಗು ಮುಳುಗಿ ಯನ್ನಾ  ವಡೆಯನು ಮಡಿಯಲೂ
ಕಡುಪಾಪಿಯೆಂದೆನ್ನಾ  ಕಡೆಗೈದು ನೂಕಿತೂ ॥                        ॥2 ॥

ತಾಟಗಿತ್ತಿ: ಅಮ್ಮಯ್ಯ ನಾನೇನಂಥ ಹೇಳಲೇ ತಾಯೇ  ನಿನ್ನಂಥ ಠೀವಿಯಿಂದ ಇದ್ದಂಥವಳೇ, ಆದಾಗ್ಯೂ ಮಾಣಿಕ್ಯ ಶೆಟ್ಟಿಯೆಂಬುವನಿಗೆ ಯನ್ನನ್ನು ಕೊಟ್ಟಲಾಗಾಯ್ತು ಇಷ್ಠು ಕಷ್ಠವನ್ನು ಪಟ್ಟವಳಲ್ಲವಾದ ಕಾರಣ, ಅಂತೊಪ್ಪ ಶೆಟ್ಟಿಯು ಸತಿ ಸುತರನ್ನು ಹಿಂದಿಟ್ಟುಕೊಂಡು ಪಟ್ಟೆಜಲ್ಲಿ ಮುಂತಾದ ಮುತ್ತು ರತ್ನಗಳ ವ್ಯಾಪಾರಕ್ಕಾಗಿ ಪಟ್ಟಣ ವಾಸಿಗಳಿಗೆ ಹಡಗತ್ತಿ ಪೋಗುತ್ತಿರಲೂ ಥಟ್ಟನೇ ಅಂತೊಪ್ಪ ಹಡಗು ಮುಳುಗಿ ವಿಶಿಷ್ಠರೂ ಜಲಸ್ಥಾಪನೆಯಾಗಲೂ, ಶ್ರೇಷ್ಠಮಾದ ಗಂಗೆಯು ಯನ್ನನ್ನು ಕಡು ಪಾಪಿಯೆಂದು ನೂಕಿ ಬಿಟ್ಟು ಇರುವುದಾದಕಾರಣ ದಿಟ್ಟಮಾದ ಬೈಲಿನೊಳು ಕಣ್ಣು ಬಿಟ್ಟು ನೋಡಲು ಯನ್ನ ದೃಷ್ಠಿಗೆ ಈ ಪಟ್ಟವು ಕಾಣಿಸಿದ್ಧರಿಂದ ಥಟ್ಟನೆ ಬಂದು ಯನ್ನ ಅಷ್ಠೈಶ್ವರ‌್ಯವನ್ನು ನೆನೆಸಿಕೊಂಡು ಇಷ್ಠುದುಃಖಿಸುತ್ತಾ ಇಲ್ಲಿ ಬಿದ್ದಿರುತ್ತೇನಮ್ಮಾ ತಾಯೇ – ಕರುಣವಿಟ್ಟು ಕಾಯೇ ॥

ದರುವು

ಅಕ್ಕಾ ನಿಮ್ಮಯ ಮರೆ  ಹೊಕ್ಕೆನು ಕೃಪೆಯಿಂದಾ
ಅಕ್ಕರದಿಂ ಸಲಹು  ದಿಕ್ಕಿಲದವಳನ್ನೂ                                    ॥3 ॥

ನಂದಿವಾಹನ ಶಿವನೂ  ಇಂದು ನಿನ್ನನು ಪೊರೆವಾ
ಸುಂದರೀ ಯನ್ನನೂ  ಚಂದಾದಿ ಸಲಹಮ್ಮಾ                           ॥4 ॥

ತಾಟಗಿತ್ತಿ: ಅಯ್ಯೋ ಅಕ್ಕಯ್ಯ, ನಾನು ಏನಂಥ ಹೇಳಲಮ್ಮಾ ತಾಯೇ ! ಯನ್ನ ಪತಿ ಸುತರನ್ನು ಹತಗೊಳಿಸಿ ನಮ್ಮ ಪಟ್ಟಣಕ್ಕೆ ಹೇಗೆ ಮುಖವೆತ್ತಿ ಪೋಗಲಮ್ಮಾ ತಾಯೇ ! ಸತಿಪತಿಯರಾದ ನಿಮ್ಮೀರ್ವರ ಚರಣಕ್ಕೆ ನಮಿಸುತ್ತೇನೆ, ಹಿತದಿಂದ ಯನ್ನನ್ನು ಪಥವೇರಿಸಬಾರದೇ. ಅನಾಥಳಾದ ಯನ್ನನ್ನು ದೂತಕಿಯ ಕೆಲಸದಲ್ಲಿರಿಸಲೂ ಪ್ರೀತಿಯಿಂದ ನಿಮ್ಮ ಸೇವಾ ಸತ್ಕಾರ‌್ಯವನ್ನು ಮಾಡಿದರೆ ನಾ ಮಾಡಿದ ಪಾಪವು ಪೋಗುವುದಾದ ಕಾರಣ, ಅಯ್ಯೋ ಅಮ್ಮಯ್ಯ, ನಿಮ್ಮನ್ನು ಮರೆಹೊಕ್ಕಿರುತ್ತೇನೆ, ನಂದಿ ವಾಹನ ಚಂದ್ರಶೇಖರನು ಚಂದದಿಂದ ನಿಮ್ಮನ್ನು ಪೊರೆಯಲಮ್ಮಾ ತಾಯೇ – ಕರುಣಿಸೆನ್ನ ಕಾಯೇ ॥

ದರುವು

ಬಾರಮ್ಮಾ ಪೊರೆವೇ  ಹಿರಿಯವಳಾಗಿ
ಅರಮನೆಗಿರುವೇ ॥ಪ ॥
ನಿರುತ ಸೌಖ್ಯಗಳಿಂದಾ  ಪೊರೆವ ಜ್ಯೇಷ್ಠಾಬಳ್ಳಾ
ಪುರದ ಸೋಮೇಶನ  ಚರಣವ ಸ್ಮರಿಸುತ್ತಾ ॥ಬಾರಮ್ಮಾ ಪೊರೆವೇ ॥

ಸುವರ್ಣೆ: ಹೇ ಮುದಿನಾರಿಯಾದ ತರುಣಿಯೇ ಕೇಳು ! ನಮ್ಮ ಚದುರತರಮಾದ ಮಂದಿರದಲ್ಲಿ ಮುದದಿಂದ ಸುದತಿಯರಂತೆ ವಪ್ಪಿ, ಯನ್ನ ಹೃದಯ ವಲ್ಲಭನಾದ ರಾಯನಿಗೂ ಚದುರೆ ಸುಂದರಿಯಾದ ನನಗೂ, ವಿಧ ವಿಧಮಾದ ಶೈತ್ಯೋಪಚಾರ ಮಾಡುತ್ತಾ ಬದಲುತ್ತರವನ್ನು ಕೊಡದೇ ಮಂದಿರದ ಸದನಕ್ಕೆ ಪೋಗಿ ಮುದದಿಂದ ನೀನು ಅಧಿಕಳಾಗಿ ಬಾಳಿಕೊಂಡು ಇರುವವಳಾಗಮ್ಮಾ ಮುದಿನಾರಿ ॥