(ಸಿದ್ಧರು ತಪೋಗೃಹದ ಬಳಿಗೆ ಪೋಗುವಿಕೆ)

ದರುವು

ಚದುರೆಯ ಅತ್ತಿಗೆ  ಕದವನು ತೆಗೆತೆಗೆ
ಮೈದುನ ಬಂದಿಹೆನೇ  ತಾಯೇ                                            ॥1 ॥

ಬೆದರದೆ ಹೃದಯದಿ  ಚದುರನ ತಂದಿಹೆ
ಮುದದಿ ಕದವ ತೆಗಿಯೇ  ತಾಯೇ                                        ॥2 ॥

ಚಿತ್ರಶೇಖರ: ಮದನ ಸತಿಯಳಂತೆ ಪ್ರಜ್ವಲಿಸುವ ಸುದತಿ ಸುವರ್ಣಾದೇವಿಯಾದ ಇಂದುವದನೆಯೇ ಕೇಳು ! ಚದುರ ಸೋಮಶೇಖರನ ಅನುಜ ಚಿತ್ರಶೇಖರನು ಬಂದು ಇದ್ದೇನೆ, ಬಂಧಿಸಿರುವ ಕವಾಟದ್ವಾರಗಳನ್ನು ತೆಗೆದು ಯನ್ನ ಯೆದುರಾಗಿ ನಿಂತು, ಮಧುರ ತರಮಾದ ಮಾತನಾಡುವಂಥ ವಳಾಗಮ್ಮಾ ಅತ್ತಿಗೆಯೇ – ಅಣ್ಣಯ್ಯನ ಸತಿಯೇ ॥

ದರುವು

ಅಣ್ಣಾಯ್ಯಾ ನೀ ಯನ್ನಾ  ಪುಣ್ಯಾದ ಸಿರಿಯಂತೆ
ಹೆಣ್ಣ ಕೂಗುವನ್ಯಾರೈಯ್ಯಾ  ನೀ ಪೇಳೈಯ್ಯ ॥
ಮನ್ನಣೆ ಯಿಂದಲಿ  ನಿನ್ನಯ ಪೆಸರೇನೂ
ಕನ್ನೆ ಯನ್ನೊಳು ತಿಳಿಸೈ  ಚೆನ್ನಾಗಿ ಪೇಳೈ ಅಣ್ಣಯ್ಯ ನೀಯನ್ನಾ   ॥1 ॥

ಸುವರ್ಣೆ: ಈ ವಸುಧೆಯೊಳು ಶಶಿಧರನಂದದೀ ಪ್ರಕಾಶಮಯಮಾಗೀ ತೋರುವ ಅಣ್ಣಯ್ಯನೇ ಕೇಳು! ಋಷಿ ವೇಷದಿಂದ ಬಂದು ಯನ್ನ ಪ್ರಾಣೇಶನ ಕುರುಹುಗಳನ್ನು ಪೇಳುತ್ತಾ ಇದ್ದೀಯಾ. ಅಸಮ ಸಾಹಸ ಪುರುಷರಾದ ಪತಿಯ ರೂಪಿನಿಂದ ನೀನಿರುವೆ, ನಿಮ್ಮ ವಸುಧೆ ಯಾವುದು ? ನಿಮ್ಮ ಪೆಸರೇನು ? ಕುಶಲದಿಂದ ಯನ್ನೊಡನೆ ಉಸುರಬೇಕೈ ಋಷಿಯೇ – ಅಸಮ ಸಾಹಸಿಯೇ॥

ದರುವು

ಚಿತ್ರಶೇಖರನಾ  ನೆತ್ತಿದೆ ನಿನ್ನಯ
ಮುತ್ತೈದೆತನವನ್ನೂ  ತಾಯೇ                                              ॥3 ॥

ಪೃಥ್ವಿಗಧಿಕ ಪುರ  ಜ್ಯೇಷ್ಠ ಬಳ್ಳಾಪುರ
ಕರ್ತನೇ ಪೊರೆಯುವನೇ  ತಾಯೇ                                       ॥4 ॥

ಚಿತ್ರಶೇಖರ: ಪುತ್ಥಳಿಯ ಪ್ರತಿಮೆಯಂತೊಪ್ಪುವಾ ಅತ್ತಿಗೆಯೇ ಕೇಳು. ಪೃಥ್ವಿ ರತ್ನಾಪುರಿಯ ವಜ್ರಮಕುಟನ ಸುಪುತ್ರರೆಂದೆನಿಸೀ ಮತ್ತೆ ಹೇಮಾವತಿಯ ಮಂದಿರದೊಳಗೆ ಚಿತ್ತಜನ ಸಮರೂಪನಾದ ಅಣ್ಣಯ್ಯನು ಮೃತ್ಯುವನ್ನು ಹೊಂದಿರಲೂ, ಕಾತ್ಯಾಯಿನೀ ಪತಿಯ ಕರುಣದಿಂದ ಆತನ ಪ್ರಾಣವನ್ನು ಯೆತ್ತಿ ಮತ್ತೆ ನೀನು ಲಿಖಿಸಿದ ಅರ್ಥವನ್ನು ತಿಳಿದು ಈ ಸ್ಥಳಕ್ಕೆ ಬಂದು ಇರುತ್ತೇನೆ, ಯನ್ನಯ ಪೆಸರು ಚಿತ್ರಶೇಖರನೆಂದು ಕರೆಯುವರಮ್ಮಾ ಅತ್ತಿಗೆಯೇ – ಅಣ್ಣಯ್ಯನ ಸತಿಯೇ ॥

ದರುವು

ತೋರೈಯ್ಯ ನೀ ಯನ್ನಾ  ಧೀರಾ ಪ್ರಾಣೀಶನಾ
ಶೆರಗೊಡ್ಡಿ ಬೇಡುವೆನಾ  ಮೈದುನ ನಿನ್ನಾ ॥
ಮಾರ ಸನ್ನಿಭ ಪ್ರಿಯನಾ  ವಿರಹ ಸೈರಿಸಲಾರೆ
ಸಾರಿ ತೋರಿಸು ನೀ ಯಿನ್ನೂ  ಪ್ರಾಣೇಶನನ್ನೂ ॥                     ॥2 ॥

ಸುವರ್ಣೆ: ಅಪ್ಪಾ, ಮೈದುನಾ ! ಕಪ್ಪುಗೊರಳನ ಕರುಣ ಕಟಾಕ್ಷದಿಂದ ಯನ್ನ ಪ್ರಾಣ ಪತಿಯನ್ನು ಪ್ರಾಣ ಜೀವಿತನನ್ನಾಗಿ ವಡಗೊಂಡು ಈ ಪರಿ ಬಂದು ಇದ್ದೇನೆಂದು ಪೇಳಿದೆಯಲ್ಲಾ  ಅಪರೂಪ ಕರಮಾದ ನೃಪತಿಯನ್ನು ರೂಪುಗಾರಿಕೆಯಲ್ಲಿ ತೋರಿಸಿ ಚಪಲ ಚಿತ್ತವನ್ನಾದರೂ ಹರಿಸಬಾರದೇನಪ್ಪಾ ಮೈದುನಾ – ತಿಳಿಸು ಕಾರ‌್ಯದ ಹದನಾ ॥

ಚಿತ್ರಶೇಖರ: ಪತಿವ್ರತಾ ಧರ್ಮವನ್ನು ಬಿಡದೆ ಪತಿಯೇ ಗತಿಯೆಂದು ಇರುವ ಅತ್ತಿಗೆಯೇ ಕೇಳು, ಅತಿ ತೀವ್ರದಿಂದ ನಿನ್ನ ಪತಿಯ ಮುಖದರುಶನವನ್ನು ಈ ವತ್ತಿಗೆ ಆರು ದಿವಸಗಳೊಳಗಾಗಿ ಸತಿಪತಿಯರೀರ್ವರಿಗೂ ಅತಿಶಯದೀ ಮುಹೂರ್ತವನ್ನು ನಡೆಯಿಸುತ್ತೇನೆ. ಈ ಮಾತು ಯತಾರ್ಥವೆಂದು ನಿನ್ನ ಚಿತ್ತದೋಳ್ ತಿಳಿದು ಸಂತೋಷಕರಮಾಗಿ ಇರುವಂಥವಳಾಗಮ್ಮಾ ಅತ್ತಿಗೆಯಮ್ಮನವರೇ ॥

ದರುವು

ವಸುಧೆ ಜ್ಯೇಷ್ಠ ಬಳ್ಳಾ  ಪುರದಾ ಸೋಮೇಶನೂ
ಹಸನಾಗಿ ಪೊರೆಯುವನೂ  ಹರುಷದಿ ಯಿನ್ನೂ
ಋಷಿಮುನಿ ಪೇಳಿದಾ  ವಿಷಯ ನಿಶ್ಚಯ ಮಾಗೇ
ಕುಶಲದಿಂ ಸಲಹುವನೂ  ವಿಷಕಂಠಹರನೂ                            ॥3 ॥

ಸುವರ್ಣೆ: ಹೇ ಶಂಕರಾ, ಹೇ ಮೃತ್ಯುಂಜಯ, ಹೇ ಕಾಲಕಂಧರಾ ! ಹೇ ಕರುಣಾಪಯೋನಿಧೇ! ಯನ್ನ ಮೈದುನನಾದ ಚಿತ್ರಶೇಖರನಿಗೆ ಜಯಪ್ರದವನ್ನು ಕೊಟ್ಟು ರಕ್ಷಿಸಬಾರದೇ ! ಹೇ ಮೈದುನಾ ! ನಿನ್ನ ಆಜ್ಞೆ ಪ್ರಕಾರ ಇರುತ್ತೇನೆ. ನಿಮ್ಮ ಕಾರ‌್ಯವನ್ನು ಜಾಗ್ರತೆಯಾಗಿ ಪೂರೈಸುವಂಥವನಾಗಪ್ಪಾ ಮೈದುನಾ- ತಿಳಿಯಿತು ಕಾರ‌್ಯದ ಹದನಾ ॥

ಸಿದ್ಧರು: ಅಮ್ಮಾ ಅತ್ತಿಗೆಯಮ್ಮನವರೇ, ಅದೇ ಪ್ರಕಾರ ಪೋಗಿ ಬರುತ್ತೇನಮ್ಮಾ ಅತ್ತಿಗೆಯೇ – ಅಣ್ಣಯ್ಯನ ಸತಿಯೇ ॥

(ಸಿದ್ಧರು ರಾಜಾಸ್ಥಾನಕ್ಕೆ ಬರುವಿಕೆ)

ಸಿದ್ಧರು: ಹೇ ಮಂತ್ರಿ ಕುಲೋತ್ತಮರೇ ಕೇಳಿ ! ನಿಮ್ಮ ರಾಜೋತ್ತಮನಾದ ಉಗ್ರಬಾಹುಕ ರಾಜನಿಗೆ ದ್ವೀಪಾಂತರದಿಂದ ತಂದಿರುವ ಮತ್ತಗಜಗಮನೆಯನ್ನು ಕರೆದು ಶುಭ ಮುಹೂರ್ತವನ್ನು ನಡೆಸುತ್ತೇನೆ. ಬೇಕಾದ ಪದಾರ್ಥಗಳನ್ನು ಸಿದ್ಧಪಡಿಸುವುದಲ್ಲದೇ ನಿಮ್ಮ ಪುತ್ರ ಮಿತ್ರಾದಿ ಬಂಧು ಬಾಂಧವರನ್ನು ಕರೆಸಿ ಧಾತ್ರೀಶನನ್ನು ಪ್ರಥಮ ಶಾಸ್ತ್ರಕ್ಕೆ ಅನುಕೂಲಿಸುವಂಥವನಾಗೈ ಮಂತ್ರೀ – ಕಾರ‌್ಯದಲ್ಲಿ ಸ್ವತಂತ್ರೀ॥

ಸುಗುಣ ಸುಬುದ್ದಿ: ಅಯ್ಯ ಸಿದ್ಧಪುರುಷರೇ ! ಮಹಾ ಸಂತೋಷಕರಮಾಗೀ ಕೂಡಿರುವಂಥ ಕಲ್ಯಾಣ ಪ್ರದೇಶಕ್ಕೆ ಯಮ್ಮ ರಾಜೋತ್ತಮರನ್ನು ಕರೆಸುತ್ತೇನಲ್ಲದೇ ಉತ್ತಮವಾದ ಮಿಥುನ ಲಗ್ನಕ್ಕೆ ಸರಿಯಾಗಿ ಧಾತ್ರೀಶನಿಗೆ ಶುಭಮುಹೂರ್ತವನ್ನು ನಡೆಸಬಹುದೈಯ್ಯ ಸಿದ್ಧಪುರುಷರೇ ॥

ಸಿದ್ಧರು: ಅಯ್ಯ ಉಗ್ರಬಾಹುಕ ರಾಜನೇ ! ತಾವು ಮಾಡಿರುವ ಪ್ರತಿಜ್ಞೆ ಪ್ರಕಾರ ಲಗ್ನವನ್ನು ನಡೆಸುತ್ತೇನೆ ಸಜ್ಜಾಗೃಹಕ್ಕೆ ಹೋಗೋಣ ಬಾರೈಯ್ಯ ನೃಪತಿ-ಬಿಡಿಸುವೆನು ಮಂದಮತಿ ॥

ಉಗ್ರಬಾಹುಕ: ಭಳಿರೇ ಶಹಬ್ಬಾಸ್. ಸಿದ್ಧ ಸೌಂದರ‌್ಯ ಪುರುಷನೇ ಕೇಳು ! ತದ್ರೂಪು ವಜ್ರವೈಢೂರ‌್ಯಾದಿ ರತ್ನ ತೊಡಿಗೆಯ ಅಲಂಕಾರವನ್ನು ನಿಮಗೆ ಸನ್ಮಾನದಿಂದ ನಡೆಸುತ್ತೇನೆ. ಜಾಗ್ರತೆಯಾಗಿ ಹೊರಡಬಹುದೈಯ್ಯ ಮೌನೀ – ಸುರಸಮಜ್ಞಾನಿ ॥

 

(ಸಿದ್ಧರು ರಾಜನನ್ನು ಮರ್ಕಟನ ಮಾಡಿ ಮರ್ಕಟನಾಗಿದ್ದ ಅಗ್ರಜನ ರೂಪು ತೋರಿಸುವಿಕೆ)

ಭಾಗವತರದರುವುಜಂಪೆ

ಶಿತಿಕಂಠಾ ವರಪುತ್ರಾ  ಚಿತ್ರಶೇಖರ ತಾನು
ಅರ್ತಿಯಿಂ ಮದುವೆಯ  ಮಾಡುವೆನೆನುತಾ ಪೋಗುತ್ತಾ           ॥1 ॥

ವರ ಉಗ್ರಬಾಹುಕನಾ  ಕರೆದೊಯ್ದು ಮಂದಿರಕೆ
ಭರದಿ ತೀರ್ಥವ ತಳೆದೂ  ಮರ್ಕಟನ ಮಾಡೀ  ತಾ ನೋಡಿ        ॥2 ॥

ಸೋಮಶೇಖರನಿಗೇ  ಕಾಮಿನಿ ಸುವರ್ಣೆಯನೂ
ಪ್ರೇಮದಿಂ ಲಗ್ನವನು  ಆಗಮಿಸಿ ರಚಿಸೀ, ನಿರ್ಧರಿಸೀ                 ॥3 ॥

ಧರಣಿಪನ ಕೋಶಗಳಾ  ಭರದಿ ತಮ್ಮೊಶಗೈದೂ
ಕರುಣದಿಂ ಮರ್ಕಟನಾ  ಕೊರಮನಿಗೇ ಕೊಟ್ಟೂ, ತಾ ಕೊಟ್ಟು      ॥4 ॥

ಸೃಷ್ಠಿಯಲ್ಲಿಹ ತಮ್ಮ  ಇಷ್ಠಾದಂಶವಕೊಂಡು
ಪಟ್ಟಣವ ಪಾಲಿಸುತಾ  ದಿಟ್ಟಾ ಕೋವಿದರೂ, ಕಲಿಭಟರೂ           ॥5 ॥

ಸೋಮಶೇಖರ ತಾನು  ಕಾಮಿನಿ ಸುವರ್ಣೆ ಸಹ
ಹೇಮಾವತಿಗೆ ಪೋದಾ  ಆಗಮಿಸೀ ಬಂದಾ  ತಾ ನಿಂದಾ          ॥6 ॥

ಭಾಗವತರು: ಕೇಳಿದರೇನಯ್ಯ ಭಾಗವತರೇ ! ಈ ಪ್ರಕಾರವಾಗಿ ಚಿತ್ರಶೇಖರನು ಉಗ್ರಬಾಹುಕ ರಾಜನನ್ನು ಸಜ್ಜಾಗೃಹಕ್ಕೆ ಕರೆದುಕೊಂಡು ಪೋಗಿ ಮಂಗಳಸ್ನಾನ ಮಾಡಿಸುವ ನೆವದಿಂದ ಆತನಿಗೆ ಕುಟಿಲ ತೀರ್ಥವನ್ನು ತಳೆದು ಮರ್ಕಟನ ಮಾಡಿ ಅದನ್ನು ಕೊರಮನಿಗೆ ಕೊಟ್ಟು ಕಳುಹಿಸಿ, ಮರ್ಕಟನಾಗಿದ್ದ ತನ್ನ ಅಣ್ಣಯ್ಯನನ್ನು ತೀರ್ಥವಂ ತಳೆದು ನಿಜರೂಪು ಬರಿಸಿ, ಸೋಮಶೇಖರ ಸುವರ್ಣಾ ದೇವಿಯರಿಗೆ ಅದೇ ಶುಭ ಮುಹೂರ್ತದಲ್ಲಿಯೇ ಲಗ್ನವಾಚರಿಸಿ ಹೇಮಾವತಿ ಪುರವನ್ನೂ ಕುಸುಮಕೇಸರಿ ಪಟ್ಟಣವನ್ನೂ ಒಂದುಗೂಡಿಸಿ, ಏಕಚಕ್ರಾಧಿಪತ್ಯವಾಗಿರಿಸಿ, ಚಿತ್ರಶೇಖರನ ಸತಿಯಾದ ರತ್ನಾದೇವಿಯನ್ನು ಒಡಗೊಂಡು ಬರುವಂತೆ ಮಾವನಾದ ವಿಕ್ರಮರಾಯನಿಗೆ ಹೇಳಿ ಕಳುಹಿಸಿದರೈಯ್ಯ ಭಾಗವತರೇ॥

ಸೋಮಶೇಖರ: ಬಲ್ಲಿದ ಬಹು ಪರಾಕ್ರಮ ಶಾಲಿಯಾದ ಅನುಜನೇ ಕೇಳು, ನಿಲ್ಲದೇ ಹೇಮಾವತಿಯ ನಗರವನ್ನು ಅಲ್ಲಿರುವ ರಾಜ ಬಜಾರಕ್ಕೆ ಸರಿಯಾಗಿ ಮಲ್ಲ ಸಾಹಸಿಗಳಾದಿಯಾಗಿ ಎಲ್ಲಾ ಪ್ರಜಾ ಪರಿಪಾಲಕರನ್ನು ಕೂಡಿಸಿ ಸಲ್ಲಲಿತೆಯಿಂದ ಪುರವನ್ನು ಪಾಲಿಸುವ ನಿಮಿತ್ಯಾರ್ಥಮಾಗೀ ನಿಲ್ಲದೇ ನೀಲಾವತಿಯ ಮಾನ್ಯ ಮಾವನವರಿಗೆ ನಿನ್ನ ವಲ್ಲಭೆಯನ್ನು ಅಲ್ಲಿಗೆ ಒಡಗೊಂಡು ಬರುವಂತೆ ಲಿಖಿತವನ್ನು ಲಿಖಿಸಿ, ನನ್ನ ವಲ್ಲಭೆಯಾದ ಸುವರ್ಣೆಯನ್ನು ಕರೆಸೋ ಅನುಜಾ-ಪುತ್ಥಳಿಯ ತನುಜಾ॥

ಚಿತ್ರಶೇಖರ: ತಮ್ಮ ಆಜ್ಞೆ ಪ್ರಕಾರ ಕರೆಸುತ್ತೇನೈ ಅಣ್ಣಾ – ಪುತ್ಥಳಿಯ ಬಣ್ಣಾ ॥

ಸುವರ್ಣೆ: ನಮೋನ್ನಮೋ ಹೇ ಕಾಂತ – ಕಾಮಿನಿ ವಸಂತಾ ॥

ಸೋಮಶೇಖರ: ದೀರ್ಘಾಯುಷ್ಯ ಶುಭಮಂಗಳ ವತಿಯಾಗಿ ಶೀಘ್ರದಿಂದ ಬರುವವಳಾಗೇ ರಮಣೀ – ಕಾಂತಿ ದ್ಯುಮಣಿ ॥

ಸುವರ್ಣೆ: ಹರನ ವರದಿಂದ ಪುಟ್ಟಿದ ವೀರಾಧಿ ವೀರನೇ ಕೇಳು, ತರಳಾಯತಾಕ್ಷಿಯಳಾದ ಯನ್ನನ್ನು ಕರೆಸಿದ ಕಾರಣಾರ್ಥವೇನು ! ಯನ್ನೊಡನೇ ಪೇಳಬೇಕಲ್ಲದೇ ಸುರತಾದಿ ಭೋಗದೋಳ್ ಸರಸದಿ ನೆರೆಯುವ ಪರಿಪಾಲಿಸುವ ಪುರವೈರಿಯು ನಿಮ್ಮನ್ನು ಪೊರೆಯುವನೈ ರಾಯ – ಭೂಪಕುಲವರ‌್ಯಾ॥

ಸೋಮಶೇಖರ: ಘನ ಸೌಂದರ್ಯವತಿಯಳಾದ ಸುವರ್ಣೆಯೇ ಕೇಳು ! ನಿನ್ನನ್ನು ಕರೆಸಿದ ಪರಿಯಾಯವೇನೆಂದರೇ ನಮ್ಮ ಜನನೀ ಜನಕರನ್ನು ನೋಡಿ ಇಂದಿಗೆ ಬಹಳ ದಿವಸಗಳಾದವು. ಇನ್ನು ನಮ್ಮ ಪಟ್ಟಣಕ್ಕೆ ಪೋಗೋಣ ನಡಿಯೇ ಕಾಂತೆ – ಸದ್ಗುಣವಂತೆ ॥

ಸುವರ್ಣೆ: ನಿಮ್ಮ ಇಷ್ಠಾನುಸಾರ ಬರುತ್ತಾ ಇದ್ದೇನೈ ಕಾಂತ – ಸದ್ಗುಣವಂತಾ ॥

ಚಿತ್ರಶೇಖರ: ಅಣ್ಣಯ್ಯ ಅಗ್ರಜಭವ ! ನಿಮ್ಮ ಆಜ್ಞೆ ಪ್ರಕಾರ ನಮ್ಮ ಮಾವನಾದ ವಿಕ್ರಮರಾಜರನ್ನಲ್ಲದೇ ಯನ್ನ ಸತಿಯಳಾದ ರತ್ನಾದೇವಿಯನ್ನು ಕರೆಸಿರುತ್ತೇನೆ, ಮತ್ತೆ ಯಾವ ಆಜ್ಞೆಯನ್ನು ಆಜ್ಞಾಪಿಸುತ್ತೀರೋ ಶಿರಸಾವಹಿಸಿ ನಡೆದುಕೊಳ್ಳುತ್ತೇನೈ ಅಣ್ಣಾ – ಕರುಣ ಸಂಪನ್ನ ॥

ಸೋಮಶೇಖರ: ಪಟು ಭಟಾಗ್ರಣಿಯಾದ ಅನುಜನೇ ಕೇಳು ! ನಮ್ಮ ಪಟ್ಟಣವಾಸಿಗಳನ್ನು ಬಿಟ್ಟು ಬಹಳ ದಿವಸಗಳಾದವು. ಥಟ್ಟನೇ ನಮ್ಮ ಪಟ್ಟಣಕ್ಕೆ ಪೋಗಿ ಶ್ರೇಷ್ಠರಾದ ಮಾತಾ ಪಿತೃಗಳನ್ನು ನೋಡುವಂಥ ಪ್ರೀತಿ ಇರುವುದರಿಂದ ಮೂರು ಪಟ್ಟಣದ ದಿಟ್ಟ ರಾವುತ ಭಟ ದಂಡು ದಳವಾಯಿ ವಿಶಿಷ್ಠರನ್ನೂ ಒಡಗೊಂಡು ನಾಳೆ ಸೂರ‌್ಯೋದಯ ಕಾಲಕ್ಕೆ ಹೊರಟು ಹೋಗೋಣ ನಡಿಯೋ ಸಹೋದರಾ – ಅರಿಜನ ಭಯಂಕರಾ ॥

ಚಿತ್ರಶೇಖರ: ಅದೇ ಪ್ರಕಾರ ಪೋಗೋಣ ನಡಿಯೋ ಅಣ್ಣಾ – ಅಮಿತಗುಣ ರನ್ನ ॥

 

 

(ಪುನಃ ರತ್ನಾವತಿಗೆ ಬರುವಿಕೆ)

ಭಾಗವತದರುವುತ್ರಿವುಡೆ

ಪೃಥ್ವಿಪಾಲಕ ವಜ್ರಮಕುಟನಾ
ಪುತ್ರರೆನಿಸುವ ಸೋಮಶೇಖರಾ
ಚಿತ್ರಶೇಖರಾ ಬಂದು ಹೊಕ್ಕರು  ರತ್ನಪುರವನ್ನೂ                     ॥1 ॥

ವಿಕ್ರಮಾರ್ಕಗೆ ಚಿತ್ರಶೇಖರಾ
ಅಕ್ಕರಿಂದಲಿ ಬರುವುದೆನುತಲೀ
ವಕ್ಕಣೆಯ ವೋಲೆಯನು ಕಳುಹಲು  ಅಕ್ಕರಿಂದಾಗ                   ॥2 ॥

ರಾಯ ಸದ ವೋಲೆಯನು ಕಳುಹಲೂ
ರಾಯ ವಿಕ್ರಮ ವಾಜಿ ವಾರಣ
ಪಾಯ ದಳ ಸಹ ಮಾಗಿ ಬಂದನು  ಪಯಣವನು ಬೆಳಸೀ           ॥3 ॥

ಅರಿಗಳಿಗೆ ಕೇಸರಿಯು ಯೆನಿಸುವಾ
ಮೂರು ದೊರೆಗಳ ದಂಡು ನಡೆಯಲೂ
ಸಾರಿದವು ಭೋರ್ಗರೆದು ಸೇನೆಯು  ಧಾರುಣಿಯ ಮೇಲೇ         ॥4 ॥

ಸೋಮಶೇಖರ: ನಮೋನ್ನಮೋ ಹೇ ತಂದೇ – ನಿಮ್ಮ ಚರಣಕ್ಕೆ ಶರಣೆಂದೇ ॥

ವಜ್ರಮಕುಟ: ಕ್ಷೇಮಾಭಿವೃದ್ಧಿಯಿಂದ ಶುಭಕರಮಾಗಿ ಬಾರೈ ಸೋಮಶೇಖರಾ – ಶತೃಜನ ಭಯಂಕರಾ॥

ಚಿತ್ರಶೇಖರ: ನಮೋನ್ನಮೋ ಹೇ ತಾಯೇ – ಬಾಲಾರ್ಕ ಮುಖಛಾಯೇ ॥

ಕನಕಪುತ್ಥಳಿ: ಪರಮೈಶ್ವರ‌್ಯ ಕರಮಾಗಿ ಬಾಳುವಂಥವರಾಗಿರೈ ಕಂದಗಳಿರಾ ॥

ದರುವು

ತಂದೆ ಬಂದೆವೈ  ವಂದಿಸಿದೇವೈ
ಮುಂದೆ ನಿಮ್ಮ  ಪಾದ ಯುಗಳ  ಇಂದು ಕಂಡೆವೈ                    ॥1 ॥

ವಿಕ್ರಮಾರ್ಕನಾ  ಸೊಕ್ಕು ಮುರಿದೆನಾ
ಅಕ್ಕರಿಂದ  ಕಾಣಿಕೆಯನೂ  ಯಿಕ್ಕಿಸಿದೆನಾ                              ॥2 ॥

ಸುಂದರಾಂಗಿಯಾ  ತಂದೆವೈ ರಾಯ
ಇಂದುಧರನಿ  ಗೊಂದಿಸುತಲೀ  ಬಂದೆವೀ ಪರಿಯಾ                  ॥3 ॥

ಸೋಮಶೇಖರ: ಹೇ ಜನಕಾ ! ತಮ್ಮ ಆಶೀರ್ವಾದ ಕರುಣ ಕಟಾಕ್ಷದಿಂದ ವೈರಿಗಳ ಜಯಪ್ರದವನ್ನು ನಿಗ್ರಹಿಸಿಕೊಂಡು ದಳಪತಿಯ ಸಮೇತವಾಗಿ ದಂಪತಿಯ ಸಮೇತ ಬಂದು ಇರುತ್ತೇವೈಯ್ಯ – ತಂದೇ – ನಿಮ್ಮ ಪಾದಕ್ಕೆ ಶರಣೆಂದೇ ॥

ವಜ್ರಮಕುಟರಾಯ: ಹೇ ಸುಕುಮಾರ ಕಂಠೀರವ ಭೂಪಾಲರೇ ಕೇಳಿ, ದಿಟ್ಟತರಮಾದ ಪಟು ಪರಾಕ್ರಮವನ್ನು ಕಂಡು ಈ ಪಟ್ಟಣದ ಆಧಿಪತ್ಯವನ್ನು ನಿಮ್ಮ ವಶಕ್ಕೆ ಬಿಟ್ಟು ಕೊಟ್ಟು ಪಟ್ಟಾಭಿಷೇಕವನ್ನು ಮಾಡಿರುತ್ತೇನೆ, ಶ್ರೇಷ್ಠರಾದ ಗುರುವಿನ ಕಟ್ಟಳೆಯನ್ನು ತರಿಸಿ ಪಟ್ಟಣಕ್ಕೆ ಹೋಗುವ ಪ್ರಯುಕ್ತ ಥಟ್ಟನೇ ಸ್ವಯಂಭೇಶ್ವರ ಸ್ವಾಮಿಯ ಆಲಯಕ್ಕೆ ದಿಟ್ಟನೆಂದು ಬನ್ನಿರೈ ಪುತ್ರಗಳಿರಾ ॥

ಸೋಮಶೇಖರ: ಅದೇ ಪ್ರಕಾರ ಶ್ರೀ ಸೋಮೇಶ್ವರನ ಚರಣ ಕಮಲವನ್ನು ಏಕಚಿತ್ತ ಮನೋಭಾವದಿಂದ ಪೂಜಿಸುತ್ತೇನೈ ಜನಕಾ-ಪ್ರಜಾ ಪರಿಪಾಲಕಾ ॥

ಸಂಪೂರ್ಣ

* * *

ಮಂಗಳಾರತಿ

ಮಂಗಳಂ ಮಂಗಳಂ  ಸ್ವಯಂಭೇಶಾ
ಮಂಗಳಂ ಮಂಗಳಂ ॥ಪ ॥
ಅಂಗಜ ವೈರಿಯು  ಶ್ರೀ ಗಂಗಾ ಜಡೆಧರಾ
ಮಂಗಳೆಯರಸ ಕೃ  ಪಾಂಗನಿಗೇ ॥
ತುಂಗ ವಿಕ್ರಮ ಧವ  ಳಾಂಗ ಲಿಂಗಯ್ಯಗೇ
ಅಂಗಾದಿ ಯೆತ್ತಿರೇ  ಮುತ್ತಿನಾರತಿಯಾ                 ॥1 ॥ಮಂಗಳಂ ॥

ಮಲೆತಾ ದಕ್ಷನ ಯೆದೇ  ಮಸ್ತಕಸೂಲಿಗೇ
ಛಲದಿಂದ ತ್ರಿಪುರರಾ  ಸುಟ್ಟಾವಗೇ ॥
ಲಲನೆ ಭಕ್ತಿಗೆ ಮೆಚ್ಚಿ  ಸುರಪುರವ ಕಾಯ್ದಂಥ
ಫಾಲಲೋಚನ ಶಂಭೋ  ಪಾರ್ವತಿ ಪತಿಗೇ          ॥2 ॥ಮಂಗಳಂ ॥

ಅಸಹಾಯ ಶೂರಗೆ  ಅಮರಾ ಪೂಜಿತನಿಗೇ
ಕುಶಲ ಕೋವಿದ ಬಿಸ  ಜಾಕ್ಷನಿಗೇ
ವೃಷಭವಾಹನನಾಗಿ  ಅಸಮರಾಕ್ಷಸರನ್ನು
ಭಸ್ಮಮಾಡುರುಹಿದಾ  ಭಸಿತಾ ಭೂಷಣಗೇ            ॥3 ॥ಮಂಗಳಂ ॥

ಹರಿ ಅಜಸುರರಿಗೇ  ಮರಣವ ತಪ್ಪಿಸೀ
ವರಗಳನಿತ್ತ ಪರಮೇಶ್ವರಗೇ ॥
ಸುರರಾ ಸಮೂಹದೀ  ಮೆರೆದು ಪಾಲಿಸುವಂಥ
ಗರಳ ಕಂಧರ ಪರ  ಬ್ರಹ್ಮ ಸ್ವರೂಪಗೇ                  ॥4 ॥ಮಂಗಳಂ॥

ಭೂಮಿ ಜ್ಯೇಷ್ಠ ಬಳ್ಳಾ  ಪುರವ ಪಾಲಿಪ ಶಂಭೋ
ಸೋಮಶೇಖರ ಚಿತ್ರಶೇಖರಗೇ ॥
ಕಾಮಿತ ಫಲವಿತ್ತು  ಕೈಲಾಸಕ್ಕೊಯಿದಂಥ
ಸ್ವಾಮಿಯೇ ಪಾಲಿಸೋ  ಶ್ರೀ ಸ್ವಯಂಭೇಶಾ           ॥5 ॥ಮಂಗಳಂ॥

* * *

ದರುವುತ್ರಿವುಡೆ

ಕೇಳಿರೀಗಲೇ ಸಭಿಕರೆಲ್ಲರೂ
ಪೇಳುವೆನು ಕಂದರ್ಪ ವೈರಿಯು
ಭಾಳನೇತ್ರನ ಶಿವನ ಕರುಣದಿ  ಬಹಳ ವಿನಯದಲೀ                 ॥1 ॥

ಈ ಕಥೆಯು ವರ ಜ್ಯೇಷ್ಠ ಪಟ್ಟಣ
ಶ್ರೀಕರನ ಶಿಶು ಭಂಟ ನೆನಿಸುವ
ಆ ಕವಿಯು ನಂಜುಂಡ ಶೆಟ್ಟಿಯು  ಪ್ರಕಟಿಸಿದ ಕಥೆಯಾ              ॥2 ॥

ವರುಷ ದುರ್ಮುಖಿ ಜ್ಯೇಷ್ಠ ಮಾಸದೊ
ಳಿರುವ ಬಹುಳಾ ಸೌಮ್ಯ ವಾರದೀ
ನೆರೆದ ಸಂಜೆಯೊಳಾರು ಘಳಿಗೆಲಿ  ಪ್ರಕಟಿಸಿದ ಕಥೆಯಾ            ॥3 ॥

ಹೇಳಿದವರಿಗೂ ಕೇಳಿದವರಿಗೂ
ಸೂರ‌್ಯ ಚಂದ್ರಮರಿರುವ ವರೆವಿಗೂ
ಪೇಳಲಿಲ್ಲವೇ ಪರಮ ಪದವಿಯೂ  ಪಾಲಿಸುವ ಹರನೂ              ॥4 ॥

ವರ ಗ್ರಹಂಗಳು ಇರುವ ವರೆವಿಗೆ
ನಿರುತ ಸ್ಮರಿಸಲು ದುರಿತ ಪರಿಹರ
ಪರಮ ಪುತ್ರರ ಪಾಲಿಸುವ ಶಿವ  ನೊಲವಿನಿಂದಾ                     ॥5 ॥

ಬರಹಗಾರನ ಸಮಾಪ್ತಿ ವಾಕ್ಯ: ಜ್ಯೇಷ್ಟ ಬಳ್ಳಾಪುರ ವಾಸನಾದ ಹೇ ಸ್ವಯಂಭೇಶ್ವರನೆ ಯನ್ನೀ ಬರವಣಿಗೆಯಲ್ಲಿ ಹಸ್ತ ದೋಷದಿಂದಾದ ಲೋಪಗಳಿದ್ದಲ್ಲಿ ಹಂಸಕ್ಷೀರ ನ್ಯಾಯದಂತೆ ಸ್ವೀಕರಿಸಿ ಯನ್ನ ಮನ್ನಿಸಿ ರಕ್ಷಿಸಬೇಕೋ ಶಂಕರಾ – ನಾ ನಿನ್ನ ಕಿಂಕರಾ ॥

*   *  *