ಸೋಮಶೇಖರ: ಧೀರ್ಘಾಯುಷ್ಯ ಶುಭಮಸ್ತು ಶೀಘ್ರದಿಂದ ಬಾರೈ ಅನುಜಾ – ಆಶ್ರಿತಕಲ್ಪಭೋಜ॥

ಚಿತ್ರಶೇಖರ: ಭಳಿರೇ ಅಗ್ರಜಾ ! ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಬಿನ್ನಾಣವೇನೋ ಚೆನ್ನಾಗಿ ಅಪ್ಪಣೆಯಂ ಕೊಟ್ಟರೆ ಮನ್ನಣೆ ಮಮತೆಗಳಿಂದ ಇನ್ನು ನಿಮ್ಮ ಪಾದಗಳಿಗೆ ನಮಿಸುವೆನೂ ಅಣ್ಣಾ ಕರುಣಾಗ್ರಗಣ್ಯ॥

ಸೋಮಶೇಖರ: ಭಳಿರೇ ಯನ್ನ ತಮ್ಮನಾದ ಚಿತ್ರಶೇಖರನೇ ಕೇಳು! ಇಗೋ ಯಮ್ಮ ರಾಜ್ಯದ ಕ್ರಮಗಳನ್ನು ಕಂಡು ಬಗೆಬಗೆಯ ಶೌರ‌್ಯಪ್ರತಾಪಗಳನ್ನು ತೋರಬೇಕಾದ ಕಾರಣ ಈ ತ್ರಿಜಗದೋಳ್ ನಮಗೆ ವೈರಿಗಳು ಯಾರು ಇದ್ದಾಗ್ಯೂ ಜಗದೊಡೆಯನಾದ ನಮ್ಮ ಪಿತನ ಪ್ರಧಾನಿಯಿಂದ ತಿಳಿದು ಹಗರಣದ ಯುದ್ಧರಂಗಕ್ಕೆ ಸನ್ನದ್ಧರಾಗಿ ಪೋಗಬೇಕಾದ ಕಾರಣ ಈಗಲೇ ಮಂತ್ರಿಯನ್ನು ಆಸ್ಥಾನಕ್ಕೆ ಕರೆದು ತಾರೋ ಅನುಜಾ-ಸಾಮ್ರಾಟ ತನುಜ ॥

ಚಿತ್ರಶೇಖರ: ತಮ್ಮ ಉತ್ತರಕ್ಕೆ ಪ್ರತಿ ಉತ್ತರವನ್ನು ಬಿತ್ತರಿಸದೇ ಪ್ರಧಾನಿಯನ್ನು ಕರೆಸುತ್ತೇನೈ ಅಣ್ಣಾ-ಅಮಿತಗುಣ ರನ್ನ ॥

ಪ್ರಧಾನಿ: ಪೊಡವೀಶನ ವರದಿಂದ ಪುಟ್ಟಿದ ಕಡು ಪರಾಕ್ರಮವುಳ್ಳ ಹೇ ರಾಜ ಕಂಠೀರವ ! ಇಷ್ಟು ಸಡಗರದಿಂದ ಕರೆಸಿದ ಕಾರ‌್ಯಾರ್ಥವೇನೋ ಯನ್ನೊಡನೇ ಪೇಳಬೇಕೈ ರಾಜಕುಮಾರ-ಸುಂದರಾಕಾರ॥

ದರುವುಜಂಪೆ

ಮಾವಕೇಳೈ ಮಂತ್ರಿ  ಭುವನದೊಳು ಮಲೆತಿರುವ
ಧಾವ ವೈರಿಗಳುಂಟು  ವಿವರದಿಂ ಪೇಳೈ, ನೀ ಹೇಳೈ               ॥1 ॥

ಚಪ್ಪನ್ನದೇಶದೊಳು  ವಪ್ಪುವ ಅರಸುಗಳೂ
ಕಪ್ಪಕಾಣಿಕೆಯನ್ನು  ವಪ್ಪಿಸಿದರೇ ಮಂತ್ರೀ ಹೇ ತಂತ್ರೀ               ॥2 ॥

ಜ್ಯೇಷ್ಠ ಬಳ್ಳಾಪುರದ  ಅಷ್ಠಮೂರ್ತಿಯ ಭಜಿಸಿ
ಭ್ರಷ್ಠಾ ವೈರಿಗಳನ್ನು  ತಟ್ಟನೇ ತಿಳಿಸೋ, ನೀ ತಿಳಿಸೋ             ॥3 ॥

ಸೋಮಶೇಖರ: ಶಿರಸಾಷ್ಠಾಂಗಳೈ ಮಾವ-ದಿವಾಕರ ಪ್ರಭಾವ ॥ಈ ನವ ಖಂಡ ಪೃಥ್ವಿಯೋಳ್ ಸಪ್ತದ್ವೀಪಂಗಳ ಮಧ್ಯರಾಷ್ಟ್ರದಲ್ಲಿ ವಪ್ಪಿಯಿರುವ ಚಪ್ಪನ್ನೈವತ್ತಾರು ದಿಗ್ದೇಶದ ಅರಸುಗಳು ನಮಗೆ ಶರಣಾಗತರಾಗಿ ಕಪ್ಪ ಮಣಿ ಮಾಣಿಕ್ಯ ನಿಧಿ ಗೋಮೇಧಿಕ ಮೊದಲಾದುವುಗಳನ್ನು ತಪ್ಪದೇ ತಂದು ವಪ್ಪಿಸಿರುವವರನ್ನು ಬಿಟ್ಟು, ತಪ್ಪಿ ಮಥನಿಸುವ ಶತೃಗಳು ಧಾರಿರುವರೋ ಅಪ್ಪಣೆಯನ್ನು ಕೊಟ್ಟರೇ ಕಪ್ಪುಗೊರಳನ ಕರುಣಕಟಾಕ್ಷದಿಂದ ತಂದು ಭಾಪುರಿ ನಮ್ಮಪ್ಪನ ಚರಣಾರವಿಂದಕ್ಕೆ ವಪ್ಪಿಸುವೆನೈ ಮಂತ್ರೀ-ಕಾರ‌್ಯೇಷು ತಂತ್ರೀ ॥

ದರುವು

ವೀರ ಬಾರೈಯ್ಯ  ಸುಕು  ಮಾರ ಕೇಳೈಯ್ಯ                            ॥ಪ ॥

ಧೀರನೆನಿಸು ಭುವನದೊಳಗೆ  ಮಾರಹರನ ಕರುಣದಿಂದ
ಸಾರಿ ನಗರಿಯಾಳ್ವ ನೃಪರು  ಸೇರಿಸಿದರು ಬಿರುದುಗಳನು  ವೀರ ಬಾರೈಯ್ಯ          ॥1 ॥

ಬಾಲಕೇಳು ಪೇಳುವೆನೂ  ನೀಲಾವತಿಯನಾಳ್ವ ನೃಪನು
ಲೋಲತನದಿ ಧನವ ಕೊಡದೆ  ಪಾಲಿಸುತಿಹ ವಿಕ್ರಮನೂ  ವೀರ ಬಾರೈಯ್ಯ ॥2 ॥

ಏಕ ಚಕ್ರದೊಡನೆ ತಾನ  ನೇಕ ರಾಜ್ಯವಾಳುತಿಹನೂ
ಲೋಕಕಧಿಕ ಬಿರುದು ಧರಿಸಿ  ಶಂಕರನ ಕರುಣದಿಂದಾ  ವೀರ ಬಾರೈಯ್ಯ    ॥3 ॥

ಪ್ರಧಾನಿ: ಹೇ ರಾಜಕುಮಾರ ಕಂಠೀರವ ಭೂಪಾಲನೇ ಕೇಳು ! ಈ ಮಂಡಲದೋಳ್ ಚಂಡಪ್ರಚಂಡರಾದ ಅರಸುಗಳೆಲ್ಲರೂ ತಂಡ ತಂಡವಾಗಿ ಬಿರುದನ್ನು ತಂದು ಮಂಡಲಾಧಿಪತಿಯಾದ ವಜ್ರಮಕುಟ ರಾಜನಿಗೆ ವಪ್ಪಿಸಿ ದಂಡಪ್ರಣಾಮವನ್ನು ಗೈದು ಪೋದರು. ಆದರೇ ನೀಲಾವತಿಯ ಜಗದ್ಭಂಡನಾದ ವಿಕ್ರಮನು ಮಾತ್ರ ಮೂರು ಲೋಕಕ್ಕೆ ಉದ್ಧಂಡನೆಂದು ಮುತ್ತಿನ ಪ್ಯಾಂಡೆಯನ್ನು ಪಾದಕ್ಕೆ ಧರಿಸಿಕೊಂಡು ಮಂಡಲದಿ ನಮ್ಮ ಬಿರುದುಗಳನ್ನು ಕೊಡದೆ ಮನದಿ ಮತ್ಸರಗೊಂಡು ಕೆಂಡಗಣ್ಣುಳ್ಳ ಮೃಡನ ಕರುಣದಿಂದ ಸುಂದರಾಂಗಿಯಾದ ರತ್ನಾದೇವಿಯೆಂಬ ನಂದನೆಯಂ ಪಡೆದು ಈ ಭೂಮಂಡಲವೆಲ್ಲಾ ಏಕಚಕ್ರದಿಂದ ಪಾಲಿಸುವನೈ ವೀರಾ-ಶರಧಿ ಗಂಭೀರಾ ॥

ಸೋಮಶೇಖರ: ಭಲೇ ! ಯನ್ನ ತಮ್ಮನಾದ ಚಿತ್ರಶೇಖರನೇ ಕೇಳು ! ನಮ್ಮ ತಂದೆಯವರಾದ ವಜ್ರಮಕುಟರಾಯರನ್ನು ಅತಿ ವಿನಯ ಭಯ ಭಕ್ತಿಗಳಿಂದ ಆಸ್ಥಾನಕ್ಕೆ ಅತಿಜಾಗ್ರತೆ ಕರೆದು ತಾರೋ ಅನುಜಾ-ಭಾಸ್ಕರ ತೇಜ ॥

ಚಿತ್ರಶೇಖರ: ಭಳಿರೇ ಅಗ್ರಜಾ ! ತಮ್ಮ ಉತ್ತರಕ್ಕೆ ಪ್ರತಿ ಉತ್ತರವನ್ನು ಬಿತ್ತರಿಸದೇ ತಮ್ಮ ಆಜ್ಞಾನುಸಾರ ಪಿತನನ್ನು ಕರೆದು ತರುವೆನೈ ಅಣ್ಣಾ-ಕರುಣ ಸಂಪನ್ನ ॥

ಸೋಮಶೇಖರ: ಶಿರಸಾಷ್ಠಾಂಗ ವಂದನೆಗಳೈ ಜನಕಾ – ಪ್ರಜಾಪರಿಪಾಲಕಾ ॥

ಚಿತ್ರಶೇಖರ: ಶಿರ ಸಾಷ್ಠಾಂಗ ಬಿನ್ನಪಂಗಳೈ ತಂದೇ – ತಮ್ಮ ಚರಣಕ್ಕೆ ಶರಣೆಂದೇ ॥

ವಜ್ರಮಕುಟ: ಸುಕ್ಷೇಮಾಭಿವೃದ್ಧಿಯನ್ನು ಹೊಂದಿ ಮಂಗಳಕರವಾಗಿ ಬನ್ನಿರೈ ಕಂದಗಳಿರಾ  ಅಲ್ಲದೇ ಇಷ್ಠು ಜಾಗ್ರತೆಯಿಂದ ಯನ್ನ ಕರೆಸಿದ ಅಂದವೇನೋ ಮಗುವೇ !

ದರುವು

ಕೊಡು ಕೊಡು ನೇಮವ ಭೂಪನೇ  ಬೇಗ
ತಡೆಯದೆ ವೈರಿ ಪ್ರತಾಪನೇ ॥
ಪೊಡವಿಪ ವಿಕ್ರಮನೆಡೆಗೆ ನಾ ಗೈಯುತಾ
ಅಡರಿ ನಾ ಹಿಡಿತಂದು ಅಡಿಯಲಿ ಕೆಡಹುವೇ ಕೊಡು                  ॥1 ॥

ಸೋಮಶೇಖರ: ಪುಲ್ಲಶರ ಸಮರೂಪನಾದ ಹೇ ತಂದೆ, ನಿಮ್ಮಡಿಗಳಿಗೆ ನಾ ಶರಣೆಂದೇ, ಗೌರೀ ವಲ್ಲಭನ ಮೆಲ್ಲಡಿಗಳನ್ನು ಜಪಿಸುತ್ತಾ ಬಿಲ್ಲು ಬಾಣ ಪ್ರಯುಕ್ತ ಮಾಗಿ ಸಲ್ಲಲಿತ ಸೌಂದರ್ಯದಿಂದ ನಿಲ್ಲದೇ ನೀಲಾವತಿಯ ನಗರವಂ ಪೊಕ್ಕು ಖುಲ್ಲವಿಕ್ರಮನ ಮಲ್ಲಸಾಹಸದಿಂದಲಿ ಪಿಡಿದು ಅಲ್ಲಿರುವ ರಿಪು ಸೈನ್ಯವನ್ನೂ ಇಕ್ಕೋ ಯನ್ನ ಕರಾಗ್ರದೋಳ್ ಝಳಪಿಸುವಾ ಖಡ್ಗದಿಂದ ಸೊಲ್ಲನ್ನಣಗಿಸಿ ನಿಲ್ಲದೇ ಇಲ್ಲಗೈದುವನಾದ ಕಾರಣ ಉಲ್ಲಾಸದಿಂದ ಆಶೀರ್ವಾದವನ್ನು ಮಾಡಿ ಅಪ್ಪಣೆಯನ್ನು ದಯಪಾಲಿಸೈ ತಂದೇ-ಬಿನ್ನವಿಸುವೆನು ಮುಂದೇ ॥

ದರುವು

ಲಾಲಿಸೆನ್ನ ಮಾತನು ನೀವೂ  ಪೋಗಾಬೇಡಿನ್ನೂ
ನೀಲಾವತಿಗೆ ಬಾಲಕರೆ ನೀವೂ ॥ಪ ॥
ಮಗುವೆ ಕೇಳೂ ಜಗದೊಳಿನ್ನೂ
ಹಗೆಯ ಬಯಸೀ ಪೋಗುವರೆ ನೀವ್ ॥
ಬಗೆ ಬಗೆಯಿಂ ನಗುವರೈಯ್ಯ
ಹಗರಣವಿದೇನು ಕಂದಾ ಲಾಲಿಸೆನ್ನಾ ॥                                 ॥1 ॥

ದೇಶ ಕೋಶ ಕಾಣದವರಾ
ದೇಶಕೀಗಾ ಪೋಪೆ ನೆಂಬೇ ॥
ಘಾಸಿ ಪಡುವೇ ವೈರಿ ಮುಖದೀ
ಲೇಸುಕಾಣೆ ನೈಯ್ಯ ಕಂದಾ ಲಾಲಿಸೆನ್ನಾ ॥                            ॥2 ॥

ವಜ್ರಮುಕುಟ: ಹೇ ಮಕ್ಕಳಿರಾ ! ಈ ಧಾತ್ರಿಯೋಳ್ ವಾರಿಜಮಿತ್ರನಂತೊಪ್ಪುವಾ  ಮಾರಾರಿಯ ವರದಿಂದ ಉದಿಸಿದ ಸುಕುಮಾರರೇ ಕೇಳಿ ! ಅರ್ತಿಯಿಂದ ಆಡುವ ಚಿಕ್ಕತನದಲ್ಲಿಯೇ ಧೀರತ್ವದಿ ಶತೃನಿಗ್ರಹವನ್ನು ಮಾಡುತ್ತೇವೆಂದು ಪೇಳುತ್ತಿರುವಿರಿ. ಮತ್ತೆ ನಿಮ್ಮನ್ನು ದೇಶಾಂತರ ಮಾರ್ಗವಾಗಿ ಚಿತ್ತೈಸಲು ಈ ಪೃಥ್ವಿಯೋಳ್ ಸುತ್ತಣದ ಅರಸುಗಳು ಬಿತ್ತರಿಸಿದಲ್ಲಿ ಹಾಸ್ಯವನ್ನು ಮಾಡುತ್ತಾರಾದ ಕಾರಣ ವಿಚಿತ್ರತರಮಾದ ಮಾತುಗಳನ್ನು ನೀವು ನುಡಿಯದೇ ನಿಮ್ಮ ಪಿತೃವಾಕ್ಯಗಳನ್ನು ಕೇಳುತ್ತಾ ಅತ್ಯಂತ ಸಂತೋಷದಿಂದ ಕಾಲ ಕಳೆಯಿರೈಯ್ಯ ಕಂದಗಳಿರಾ ॥

ದರುವು

ಮಂಡಲದೊಳು ಮಾರ್ತಾಂಡನೇ  ಈಗಾ
ಭಂಡ ನೃಪಾಲನ ಬೇಗನೇ ॥
ಖಂಡ್ರಿಸಿ ಪುಂಡನ ಸುತೆಯಳ ತರುವೇ
ಖಂಡ ಪರಶುವಿನಾಣೆಯು ಅನುಜಗೇ                                    ॥2 ॥

ಸೋಮಶೇಖರ: ಈ ಮಂಡಲದಿ ಮಾರ್ತಾಂಡನೆನಿಸುವ ಹೇ ಜೀಯಾ ಖಂಡ ಗರ್ವದೊಳೊಂದು ಪ್ಯಾಂಡೆಯಂ ಧರಿಸಿ ತಾನೇ ಉದ್ಧಂಡನೆಂದು ಬಿರುದಂ ಪೊಗಳಿಸಿಕೊಳ್ಳುವ ಪುಂಡ ವಿಕ್ರಮನನ್ನು ಕಂಡು ಬಂಡು ಗೆಡಿಸಿ ಅವನ ರಾಜ್ಯವಂ ಸದೆ ಬಡಿದು ಸಾಧಿಸುವ ಯೋಚನೆಗೈದು ಉದ್ಧಂಡ ಚಿತ್ರಶೇಖರನಿಗೆ ಅವನ ಸುತೆ ರತ್ನಾದೇವಿಯನ್ನು ಹೆಂಡತಿಯ ಮಾಡದಿರ್ದೊಡೆ ಕೆಂಡಗಣ್ಣುಳ್ಳ ಖಂಡ ಪರಶುವಿನ ಕರುಣದಿಂದ ನಿನ್ನ ವಡಲೊಳಗೆ ಉದಿಸಿದ ಸುಕುಮಾರನಲ್ಲೆಂದು ಖಂಡಿತವಾಗಿ ತಿಳಿದು ಜಾಗ್ರತೆಯಿಂದ ಅಪ್ಪಣೆಯನ್ನು ಕೊಟ್ಟು ಕಳುಹಿಸೈ ತಂದೇನಾ ಪೋಗುವುದೇ ಮುಂದೇ ॥

ದರುವು

ಪೋಪೆನೆಂಬಾ ವಚನವೇತಕ್ಕೇ  ಹೇ ಬಾಲಕರಿರಾ
ಈ ಪರಿಯಲೀ ಹಠವು ನಿಮಗೇಕೇ ॥ಪ ॥
ನೃಪರ ಕುಲದಿ ಜನಿಸಿ ನೀವು
ಅಪರಿಮಿತದ ಕಾರ‌್ಯಗಳಿಗೇ ॥
ಗುಪಿತದಿಂದ ಇರದೆ ಇಷ್ಠು
ಚಪಲವೇತಕಯ್ಯ ನಿಮಗೇ                                                  ॥3 ॥

ಇಂದು ಜ್ಯೇಷ್ಠ ಬಳ್ಳಾಪುರದ
ಚಂದ್ರಧರ ಶ್ರೀ ಗಿರಿಜೆ ಪ್ರಿಯನ ॥
ಮಂದಿರವನು ಬಿಡಲು ನೀವು
ಚಂದವಲ್ಲಾ ಕಂದಗಳಿರಾ                                                    ॥4 ॥

ವಜ್ರಮಕುಟ: ಶಶಿಧರನ ವರದಿಂದ ಪುಟ್ಟಿದ ಅಸಮ ಸಾಹಸಿಯಾದ ಸೋಮಶೇಖರನೇ ಕೇಳು! ಈ ವಸುಧೆಯೋಳ್ ಕುಶಲತರಮಾದ ವರಸಭಾಸ್ಥಾನದೋಳ್ ಇರದೆ ಹಸಿದ ಹೆಬ್ಬುಲಿಯಂತೆ ಮನದಿ ಮತ್ಸರಗೊಂಡು ಶತೃಗಳನ್ನು ಬಯಸುತ್ತಿರುವ ನಿಮ್ಮ ಅಸಮ ಸಾಹಸವನ್ನು ಕಂಡು ಹರುಷಿತನಾಗಿ ಇರುತ್ತೇನೆ. ಆದರೆ ಈ ದಿಶೆಗೆ ಅತಿಶಯವಾಗಿ ತೋರುವ ಶಶಿಧರನ ಮಂದಿರವನ್ನು ಬಿಟ್ಟು ಪೋಗುವುದು ಉಚಿತವಲ್ಲವಾದ ಕಾರಣ ಸರ್ವಥಾ ನಿಮಗೆ ಅಪ್ಪಣೆಯು ಸಲ್ಲದಪ್ಪಾ ಕಂದಗಳಿರಾ ॥

ದರುವು

ಮೃಡಪತಿ ಕುಲಜನೇ  ತಡೆಯದೆ ವೈರಿಯಾ
ಹಿಡಿದು ತರುವೆ ಈಗಾ  ಬೇಗಾ                                             ॥1 ॥

ಬಿಡು ಬಿಡು ಯಮ್ಮನು  ತಡೆಯದೆ ನುಡಿಯದೇ
ದೃಢದಿ ಪೋಗುವೆವೂ  ನಾವು                                              ॥2 ॥

ಧರಣಿ ಜ್ಯೇಷ್ಠ ಬಳ್ಳಾ  ಪುರದ ಸೋಮೇಶನಾ
ಚರಣವ ಸ್ಮರಿಸುವೆವೂ  ನಾವು                                            ॥3 ॥

ಸೋಮಶೇಖರಚಿತ್ರಶೇಖರ: ಭಳಿರೇ ಈ ಕ್ಷಿತಿಯೋಳ್ ರತಿಪತಿಯ ವೈರಿ ಶಿತಿಕಂಠ ಮತಸ್ಥನಾದ ಹೇ ತಂದೆ ! ನಿಮ್ಮಡಿಗಳಿಗೆ ನಾ ಶರಣೆಂದೆ ! ಅತಿಶಯ ಮಾದಂತಾ ನಿಮ್ಮ ಸುತರು ಎಷ್ಠು ಬೇಡಿಕೊಂಡಾಗ್ಯೂ ಪ್ರತಿ ಉತ್ತರವನ್ನು ಬಿತ್ತರಿಸುತ್ತೀರಿ. ಯತಾರ್ಥಮಾಗಿ ಈ ಪೃಥ್ವಿಯೋಳ್ ನಿಮ್ಮೊಡನೆ ಹಿತದಿಂದ ಮಾತನಾಡಿದೆ. ಚಿತ್ರಶೇಖರ ಸಮೇತನಾಗಿ ಪಾರ್ವತೀ ಪತಿಯಂ ಜಪಿಸುತ್ತಾ ಚೋರತ್ವದಿಂದ ಸಾರಿ ಹೋಗುತ್ತೇವಲ್ಲದೇ, ಇತರ ಚಿಂತೆಯನ್ನು ಬಿಟ್ಟು ಸಂತೋಷದಿಂದಿರೈ ಜನಕಾ-ಕ್ಷಿತಿಜನ ಪಾಲಕಾ॥

ವಜ್ರಮಕುಟ: ವಳಿತಾಯಿತೈಯ್ಯ ಪುತ್ರಾ ! ಹಾಗಾದರೆ ಉತ್ತಮವಾದ ನೇಮವನ್ನು ಬಿತ್ತರಿಸುತ್ತೇನೈಯ್ಯ ಸುತನೇ – ಶತೃಕುಲ ಮಥನೇ ॥

ದರುವು

ಪೋಗಿ ಬರುವು  ದಯ್ಯ ಈಗ  ಯುದ್ಧರಂಗಕೇ
ನಾಗಧರನ  ಕರುಣದಿಂದ  ಬೇಗ ಜಗಳಕೇ                             ॥1 ॥

ವಿಕ್ರಮನಾ  ಗೆಲಿದು ಪರಾ  ಕ್ರಮದ ತನದಲೀ
ಸೊಕ್ಕು ಮುರಿದು  ಅವನ ನೀವು  ಅಕ್ಕರಿಂದಲೀ                       ॥2 ॥

ಶತೃಕುಲವ  ನಾಶಮಾಡಿ  ಮಿತ್ರತನದಲೀ
ಪಿತೃಕುಲಕೆ  ಕೀರ್ತಿಯನ್ನು  ಪುತ್ರ ತರುತಲೀ                           ॥3 ॥

ಇಳೆಯು ಜ್ಯೇಷ್ಠ  ಬಳ್ಳಾಪುರದಾ  ವ್ಯಾಲ ಭೂಷಣಾ
ಘಳಿಲನೆನ್ನ  ಸುತರ ಸಲಹೋ  ಕಾಲ ಮರ್ಧನಾ                      ॥4 ॥

ವಜ್ರಮಕುಟ: ಸುಕುಮಾರ ಕಂಠೀರವ ಭೂಪಾಲರೇ ಕೇಳಿ ! ಗರಳ ಕಂಧರನಾದ ಗೌರೀವಲ್ಲಭನ ಕರುಣಕಟಾಕ್ಷದಿಂದ ನೀವೀರ್ವರೂ ಪರಿವಾರ ಸಮೇತರಾಗಿ ಪೋಗಿ ಆ ವೈರಿ ವಿಕ್ರಮನಂ ಪಿಡಿದು ಅವನ ಪಟ್ಟಣವನ್ನು ಸೂರೆಗೊಂಡು ಅವನ ಕುವರಿಯನ್ನು ಚಿತ್ರಶೇಖರನಿಗೆ ವಿವಾಹವಂಗೈದು ಶೌರ‌್ಯ ಪ್ರತಾಪಗಳಿಂದ ಕೀರ್ತಿಯನ್ನು ಹೊಂದಿ ಜ್ಯೇಷ್ಠ ಬಳ್ಳಾಪುರ ವಾಸನನ್ನು ಮನದಿ ಸ್ಮರಿಸುತ್ತಾ ಕ್ಷೇಮಾಭಿವೃದ್ದಿಯಿಂದ ಶುಭಕರಮಾಗಿ ಪೋಗಿ ಬನ್ನಿರೈಯ್ಯಿ ಪುತ್ರಗಳಿರಾ ॥

ಸೋಮಶೇಖರ: ಹೇ ಜನಕಾ ! ತಮ್ಮ ಆಶೀರ್ವಾದ ಕರುಣ ಕಟಾಕ್ಷದಿಂದ ನಾವೀರ್ವರೂ ಪೋಗಿ ವೈರಿಗಳ ಜಯ ಪ್ರಧಾನವನ್ನು ಮಾಡಿಕೊಂಡು ಬರುತ್ತೇವಯ್ಯ ತಂದೇ – ನಿಮ್ಮ ಪಾದಕ್ಕೆ ಶರಣೆಂದೇ॥

ಚಿತ್ರಶೇಖರ: ಹೇ ತಂದೇ. ತಮ್ಮ ಆಶೀರ್ವಾದ ಬಲದಿಂದಲೂ ಜ್ಯೇಷ್ಠ ಬಳ್ಳಾಪುರ ನಿಲಯ ಅಷ್ಠಮೂರುತಿ ದೃಷ್ಠಿಮೂರುಳ್ಳವನ ಕರುಣ ಕಟಾಕ್ಷದಿಂದಲೂ ನಾವುಗಳು ಪೋಗಿ ವೈರಿಗಳನ್ನು ಜಯಿಸಿ ವಿಜಯೋತ್ಸಾಹದಿಂದ ಬರುತ್ತೇವಯ್ಯ ತಂದೇ – ನಿಮ್ಮ ಚರಣಕ್ಕೆ ಶರಣೆಂದೇ ॥

ವಜ್ರಮಕುಟ: ಅಯ್ಯ ಸೇವಕಾ ! ನನ್ನ ಪ್ರಾಣದೊಲ್ಲಭೆಯಾದ ಕನಕ ಪುತ್ಥಳಿಯನ್ನು ಅತಿ ಜಾಗ್ರತೆಯಿಂದ ಕರೆಸೋ ಸಾರಥೀ – ಸಂಧಾನಮತೀ ॥

 

(ಕನಕಪುತ್ಥಳಿ ಬರುವಿಕೆ)

ದ್ವಿಪದೆಕಾಂಭೋಧಿರಾಗ

ಶ್ರೀ ಸೋಮನಾಥನಂ  ಚಿತ್ತದೊಳು ಭಜಿಸೀ
ಕಾಮಿನಿಯು ತಾನೆದ್ದು  ಮುಖಮಜ್ಜನವ ಮಾಡಿ ॥
ನವ ಮೋಹನಾಂಗೀ  ನವರತ್ನದಿಂದೊಪ್ಪುವಾ
ಜರತಾರಿ ಸೀರೆಯನುಟ್ಟೂ  ಕಂಚುಕವ ತಾ ತೊಟ್ಟೂ ॥
ಸಕಲ ದಿವ್ಯಾಭರಣವಂ  ಸಂಭ್ರಮದಿ ಧರಿಸೀ
ಕುರುಳು ಬೈತಲೆ ತಿದ್ದೀ  ಹರಳೊಲಿದು ಜಡೆಗಟ್ಟೀ ॥
ತರಳಾಯತಾಕ್ಷಿ ಫಣಿಗೆ  ಕಸ್ತೂರಿ ಬೊಟ್ಟು ತಾನಿಟ್ಟೂ
ಗಂಧ ಕಸ್ತೂರಿ ಪುನುಗು  ಜವ್ವಾಜಿಯಂ ಪೂಸೀ
ಕರವೀಳ್ಯವಂ ಕಾಮಿನಿಯು  ತಾ ಸವಿ ಸವಿದೂ
ಕನ್ನಡಿಯು ತಾ ಪಿಡಿದೂ  ನಟನೆಯಂ ತೋರುತಾ
ಘಲಿಘಲಿರೆಂಬ ಪಿಲ್ಲಿ ಮೆಂಟಿಕೆಯು ತಾನಿಟ್ಟೂ
ಕಟ್ಟಾಣೆಯ ಸರವೂ  ಸರಸದೊಳು ಧರಿಸೀ
ಮುತ್ತಿನಾ ಜಡೆಕುಚ್ಚು  ಮುದದಿಂದ ಧರಿಸೀ
ಶ್ರೀ ಲಕ್ಷ್ಮಿಯಂ ಪೋಲ್ವ  ವಜ್ರಮಕುಟನ ಸತಿಯು
ಬಡನಡುವಿನಾ ಕಾಂತೆ  ಬಲು ಸಮರಂತೆ
ಪೊಡವಿ ಜ್ಯೇಷ್ಠ ಬಳ್ಳಾಪುರ  ಮೃಡನೇ ಸಲಹೆನುತಾ
ಅಡಿಯಿಡುತ ತೆರೆಯೊಳಗೆ ನಡೆತಂದಳಾ ವಡತಿ ಬೇಗದಲೀ ॥

ತೆರೆದರುವು

ನೀತಿ ಕೋಮಲೆ ಪ್ರಾಣಾ  ನಾಥನಾ ತೋರಿಸಮ್ಮಾ
ಜಾತಿ ನಾಯಕ ನಗಲೀ  ಕಾತುರವೂ ಹೆಚ್ಚಿತಮ್ಮಾ                   ॥ಪ ॥

ಮತ್ತೆನ್ನಾ  ರಮಣನನ್ನೂ  ಬಿತ್ತರದೀ ತೋರಿಸಮ್ಮಾ
ಮುತ್ತಿನಾ ಹಾರ ಕೊಡುವೆ  ಅರ್ತಿಯಿಂದಲಿ ನಿಮಗೇ                  ॥1 ॥

ಕರುಣಾ ವಾರುಧಿ ಪ್ರಾಣಾ  ಪದಕವೆಲ್ಲೋದನಮ್ಮಾ
ತರುಣಿ ಮಣಿಯೇ ನೀನು ಬೇಗ  ಕರೆದು ತಂದು ತೋರಿಸಮ್ಮಾ   ॥2 ॥

ಜ್ಯೇಷ್ಠ ಬಳ್ಳಾಪುರದ ಒಡೆಯ  ಶ್ರೇಷ್ಠ ಶ್ರೀ ಸೋಮೇಶ ಭಕ್ತಾ
ದಿಟ್ಟ ಪ್ರಾಣಕಾಂತನನ್ನೂ  ನಿಷ್ಠೆಯಿಂದ ತೋರಿಸಮ್ಮಾ               ॥3 ॥

ಪೀಠಿಕೆ: ಅಪ್ಪಾ ಸೇವಕಾ ಹೀಗೆ ಬಾ. ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಅಪ್ಪಾ ಸೇವಕಾ  ಈ ತ್ರಿಜಗದೊಳ್ ಪರಮೈಶ್ವರ‌್ಯ ಮಣಿಖಚಿತ ಮಯವಾಗಿ ಪ್ರಕಾಶಿಸುವ ನಿರ್ಜರಾಧಿಪತಿಯ ಪುರಕ್ಕೆ ಮಿಗಿಲೇಳು ಕಳೆಯಿಂದ ರಾಜಿಸುವ ವಜ್ರವೈಢೂರ‌್ಯದಿಂದ ವಪ್ಪಲ್‌ಪಟ್ಟ ರತ್ನಾಪುರಿಯೆಂಬ ಪಟ್ಟಣಕ್ಕೆ ಕಾರಣಕರ್ತನಾದ ವಜ್ರಮಕುಟರಾಯರ ಚಿತ್ತಕ್ಕೆ ಒಪ್ಪುವಾ, ಸಜ್ಜಾಗೃಹದ ಮಾಣಿಕ್ಯವೆಂದೆನಿಪ ಕನಕಪುತ್ಥಳಿಯೆಂಬ ನಾರಿ ಶಿರೋಮಣಿಯು ನಾನೇ ಅಲ್ಲವೇನಪ್ಪಾ ಸೇವಕಾ – ಭಕ್ತಿಯೋಳ್ ಭಾವಕ॥

ಅಪ್ಪಾ ! ಚಾರಕಾ ! ಈ ವರ ಸಭಾಸ್ಥಾನಕ್ಕೆ ನಾ ಬಂದ ಕಾರಣವೇನೆಂದರೇ ಗಿರಿಜಾರಮಣನಾದ ಮೃತ್ಯುಂಜಯನು ಕರುಣ ಕಟಾಕ್ಷದಿಂದ ರಕ್ಷಿಸುವನಾದ ಕಾರಣ ಪರಮೈಶ್ವರ‌್ಯದಿಂದೊಪ್ಪುವಾ ಸುರವರ ಗರುಡ ಗಂಧರ್ವ ನರಪರಿವಾರದೊಡನೇ ರಾಜಿಸುವ ಯನ್ನ ಪ್ರಾಣಪತಿಯಾದ ವಜ್ರಮಕುಟ ರಾಜರು ಕರೆಸಿದ ಕಾರಣ ಬಾಹೋಣವಾಯ್ತು. ಧಾವಲ್ಲಿರುವರೋ ತೋರಿಸಪ್ಪಾ ಚಾರ – ನಿನ್ನ ಕೊರಳಿಗೆ ಪುಷ್ಪಹಾರ॥

ನಮೋನ್ನಮೋ ಹೇ ಕಾಂತ-ಕಾಮಿನಿ ವಸಂತ ॥

ವಜ್ರಮಕುಟ: ಧೀರ್ಘಾಯುಷ್ಯ ಶುಭಮಸ್ತು ಮಂಗಳಕರಮಾಗಿ ಬಾರೇ ರಮಣೀ – ಯನ್ನ ಮನೋನ್ಮಣೀ॥

ದರುವುಜಂಪೆ

ಕಂದರ್ಪಾ ಸುಂದರಾ  ನಂದಾ ಭರಿತಾದಿಂದಾ
ಮುಂದೆನ್ನ ಕರೆಸೀದ  ಅಂದವೇನಯ್ಯ ಹೇ ರಾಯ                     ॥1 ॥

ಕಾಮಿನಿ ಮಣಿಯರಿಂ  ದೇನು ಕಾರ‌್ಯಗಳುಂಟು
ಭೂಮಿಪ ಯನ್ನೊಳಗೆ  ಪ್ರೇಮದಿಂ ಪೇಳೈ, ನೀ ಹೇಳೈ              ॥2 ॥

ಸೃಷ್ಠಿಗಧಿಕಾ ವಾದ  ಜ್ಯೇಷ್ಠ ಬಳ್ಳಾಪುರದಾ
ನಿಟಿಲಾಕ್ಷ ಶಿವನಮ್ಮಾ  ಇಷ್ಠಾದಿಂ ಪೊರೆವಾ ರಕ್ಷಿಸುವಾ              ॥3 ॥

ಕನಕಪುತ್ಥಳಿ: ಹೇ ಪ್ರಾಣದೊಲ್ಲಭನಾದ ರಾಯನೇ ಕೇಳು ! ಈ ಕ್ಷೋಣಿಗುತ್ತಮವಾದ ಈ ಕ್ಷಿತಿಯನ್ನು ಪರಿಪಾಲಿಸುವ ಲಕ್ಷ್ಮೀಶನ ಸಖನಾದ ಪಾಲಾಕ್ಷನು ಸುಕ್ಷೇಮದಿಂದ ನಮ್ಮನ್ನು ರಕ್ಷಿಸುವನಾದ ಕಾರಣ ಅಕ್ಷಯಕರಮಾಗಿ ಯನ್ನನ್ನು ಕರೆಸಿದ ಕಾರಣಾರ್ಥವೇನು ? ಈ ಕ್ಷಣವೇ ನೀರಜಾಕ್ಷಿಯೋಳ್ ಉಸುರ ಬೇಕೈ ಕ್ಷಿತಿಪತಿ – ಕ್ಷೋಣಿಪತಿ ॥

ದರುವು

ಮತ್ತಗಮನೆ ಕೇಳು  ಪುತ್ಥಳಿ ಪ್ರತಿಮೆಯೇ
ಬಿತ್ತರಿಸುವೆ ತರುಣೀ  ಹೇ ರಮಣೀ                                        ॥1 ॥

ಪುತ್ರರು ಈ ಪರಿ  ಶತೃವ ಬಯಸುತಾ
ಪೃಥ್ವಿಗೆ ಪೋಗುವರೇ  ಹೇ ನಾರಿ                                           ॥2 ॥

ಮಧುರ ವಾಣಿಯೇ ಕೇಳು  ಮದನ ಸುಂದರರಾ
ಮುದದಿ ಪಯಣ ತಡಿಯೇ  ನೀ ನಡಿಯೇ                                ॥3 ॥

ವಜ್ರಮಕುಟ: ಮನ್ಮಥನ ಕೈಯಲ್ಲಿರುವ ಪುಷ್ಪ ಬಾಣಗಳಂತೆ ಪ್ರಕಾಶಿಸುವ ಹೇ ಕಾಂತೆ ! ನಮ್ಮ ಮುದ್ದುಕುಮಾರರಿಗೆ ನಾನು ಎಷ್ಠು ವಿಧವಾಗಿ ಹೇಳಿದರೂ ಕೇಳದೇ ಆ ವೈರಿ ವಿಕ್ರಮನ ಪಟ್ಟಣವನ್ನು ಕೈಗೊಂಡು ಜಯಪ್ರಧಾನವನ್ನು ಮಾಡಿ ಬರುತ್ತೇವೆಂದು ಪೇಳುತ್ತಾ ಇದ್ದಾರೆ. ನೀನಾದರೂ ತಕ್ಕ ಬುದ್ಧಿಯನ್ನು ಪೇಳಿ ನಮ್ಮ ಅಂದವಾದ ಮಂದಿರಕ್ಕೆ ಕರೆದುಕೊಂಡು ಬರುವವಳಾಗೇ ರಮಣೀ – ವರ ಮುತ್ತಿನಾಮಣಿ ॥

ಕನಕಪುತ್ಥಳಿ: ಅದೇ ಪ್ರಕಾರ ಬುದ್ಧಿಯನ್ನು ಪೇಳಿ ಕರೆದುಕೊಂಡು ಬರುತ್ತೇನೈ ರಾಯ-ಯನ್ನ ಮನೋ ಪ್ರಿಯಾ॥

(ತನಯರಿಗೆ ತಾಯಿಯ ಹಿತನುಡಿ)

ಕನಕಪುತ್ಥಳಿ: ಅಪ್ಪಾ ! ಸಾರಥಿ ! ಯನ್ನ ತನಯರಾದ ಸೋಮಶೇಖರ ಚಿತ್ರಶೇಖರರು ಧಾವಲ್ಲಿರುವರೋ ತೋರಿಸಪ್ಪಾ ಸಾರಥೀ – ಚಮತ್ಕಾರಮತಿ ॥

ಸೋಮಶೇಖರ: ನಮೋನ್ನಮೋ ಹೇ ಜನನೀ – ಸುಚರಿತ್ರ ಮಾನಿನಿ ॥

ಚಿತ್ರಶೇಖರ: ನಮೋನ್ನಮೋ ಹೇ ತಾಯೇ – ಕರುಣದಿಂದ ಕಾಯೇ ॥

ಕನಕಪುತ್ಥಳಿ: ಧೀರ್ಘಾಯುಷ್ಯ ಶುಭಮಂಗಳಕರವಾಗಿ ಬನ್ನಿರೈ ಕಂದಗಳಿರಾ ॥

ಸೋಮಶೇಖರ: ಹೇ ಜನನೀ  ದುರುಳ ವಿಕ್ರಮನನ್ನು ಜಯಿಸಿ ಕಪ್ಪವನ್ನು ತರಲು ನಾವು ಪೋಗುವೆವಾದ ಕಾರಣ ಅತಿ ಜಾಗ್ರತೆಯಿಂದ ಅಪ್ಪಣೆಯನ್ನು ಆಶೀರ್ವದಿಸಮ್ಮಾ ತಾಯೇ-ಬಾಲಾರ್ಕ ಛಾಯೇ ॥

ಚಿತ್ರಶೇಖರ: ಹೇ ಮಾತೇ. ಆ ಧೂರ್ತ ವಿಕ್ರಮನನ್ನು ಜಯಿಸಿ ಬರಲು ಆಶೀರ್ವದಿಸಿ ಕಳುಹಿಸಮ್ಮಾ ತಾಯೇ – ಅಪ್ಪಣೆಯನ್ನೀಯೇ ॥

ದರುವು

ಕಂದ ಪೋಗುವ ಬನ್ನಿರೋ  ಮಂದಿರದೊಳು
ಚಂದ ದಿಂದಿರ ಬನ್ನಿರೋ ॥ಪ ॥
ಸುಂದರಾಂಗರೆ ನಿಮ್ಮಾ  ತಂದೆಯ ನುಡಿ ಮೀರಿ
ಮುಂದೆ ಪೋಗುವರೇನಯ್ಯ ॥
ಕಂದನೇ ಕೇಳು  ಚಂದ ವಲ್ಲವು ನಿಮಗೇ                                 ॥1 ॥

ಕನಕಪುತ್ಥಳಿ: ಕುಸುಮಶರ ಸಮರೂಪರಾದ ಹೇ ಕಂದಗಳಿರಾ ! ಕುಶಲತನದಿಂದ ನಿಮ್ಮ ತಂದೆಯ ಮಾತು ಮನಸ್ಸಿಗೊಂದದೇ, ಇಂದು ಎಲ್ಲಿಗೆ ಪೋಪೆನೆಂದು ಬಿನ್ನಪವ ಪೇಳುತ್ತೀಯಾ. ಮಂದಿಸಂದಣಿಯು ಮುಂತಾದ ಮಂತ್ರಿಮಾನ್ಯರನ್ನು ಬಿಟ್ಟು ಇಂದು ಪೋಗುವುದು ಚಂದವಲ್ಲವಾದ ಕಾರಣ ಅಂದವಾದ ಮಂದಿರಕ್ಕೆ ಚಂದದಿಂದ ಪೋಗೋಣ ಬಾರೈ ಕಂದಾ-ನೀವು ಪೋಗುವುದೇನು ಚಂದಾ ॥

ದರುವು

ತರಳ ಪ್ರಾಯದೊಳು ನೀವೂ  ವೈರಿಯ ಬಯಸೀ
ತೆರಳಿ ಪೋಗುವರೇನಯ್ಯ ॥
ದುರುಳ ವಿಕ್ರಮನೊಳೂ  ಮರಳಿಯುದ್ಧವಗೈದು
ತರಳೆಯ ತರಲೋಸುಗಾ ॥
ಚೋರತ್ವದೀ  ಪರರಾಯರೊಳು ಕ್ರೋಧಿಸೀ                            ॥2 ॥

ಕನಕಪುತ್ಥಳಿ: ಕುಶಲ ಶಿರೋಮಣಿಯಾದ ಹೇ ಕೂಸೇ ! ಈ ಕ್ಷಿತಿಯೊಳಗೆ ಪತ್ನಿಗೋಸ್ಕರವಾಗಿ ಶತೃ ಮಥನಿಸುತ್ತೇನೆಂದು ಆತುರದಿಂದ ಪೋಗುತ್ತೇವೆಂಬ ಕಾತುರವನ್ನು ಬಿಟ್ಟು, ಪ್ರೀತಿಯಿಂದ ಯನ್ನ ಮಾತನ್ನು ಕೇಳದೆ ಪೋದರೆ, ಶತೃಗಳು ತನ್ನ ಪುತ್ರಿಯನ್ನಾದರೂ ಕೊಟ್ಟು ಹಿಂದಣದ ವೈರತ್ವವನ್ನು ಸಾಧಿಸುವರಾದ ಕಾರಣ ಇಂತೊಪ್ಪ ಚಿಕ್ಕತನದಲ್ಲಿಯೇ ನಿಮಗೆ ವೈರತ್ವವು ಪುಟ್ಟಿರುವುದು ಕಂಡರೆ ಯನ್ನ ಮನಸ್ಸಿಗೆ ಸಂಶಯವಾಗಿ ತೋರುವುದಪ್ಪಾ ಕಂದಗಳಿರಾ ॥

ದರುವು

ಮತ್ತೆ ನಾ ಮಾಡಿ ತಪವಾ  ಈ ಪೃಥ್ವಿಯೋಳ್
ಪೆತ್ತೆನು ಸುತರೀರ್ವರಾ ॥
ವ್ಯರ್ಥವಾಯಿತು ನಮ್ಮಾ  ಸತ್ಯಸಾಹಸವೆಲ್ಲಾ
ಮೃತ್ಯುವ ಬಯಸುವರೇ ॥
ಅರ್ತಿಗಳಿಂದ  ಮೃತ್ಯುಂಜಯನೇ ಪಾಲಿಸೋ                          ॥3 ॥

ಕನಕಪುತ್ಥಳಿ: ಚಂದ್ರಶೇಖರನ ವರದಿಂದ ಪುಟ್ಟಿದ ಹೇ ಕಂದಾ ! ಈ ಧರೆಯೊಳಗೆ ನನ್ನ ಸಮದ ನಾರಿಯರೆಲ್ಲರೂ ಪುತ್ರರಿಲ್ಲದ ಬಂಜೆಯಿವಳೆಂದು ಪರಿಹಾಸ್ಯವನ್ನು ಮಾಡಿದರಾದ ಕಾರಣ ಉರಗ ಭೂಷಣನಾದ ಗೌರೀವಲ್ಲಭನಂ ಕುರಿತು ಅಘೋರತರಮಾದ ತಪವನ್ನಾಚರಿಸಲು, ಆ ಶಂಕರ ಮೂರ್ತಿಯ ವರದಿಂದ ನಿಮ್ಮೀರ್ವರು ಸುತರನ್ನು ಪಡೆದು ಇರುತ್ತೇನಲ್ಲದೇ ಇತರ ಯೋಚನೆಯನ್ನು ಬಿಟ್ಟು ಸುಂದರತರಮಾದ ಅರಮನೆಗೆ ತೆರಳಿ ಬಾರಪ್ಪಾ ಕೂಸೇ-ಲಾಲಿಸೆನ್ನ ಭಾಷೆ ॥

ದರುವು

ಕೊಡು ಕೊಡು ಕಮಲಾಕ್ಷಿ  ತಡಮಾಡದೆ ಚಪಲಾಕ್ಷಿ
ಅಡಿಗೆರಗುವೆ ಸಡಗರದಲಿ  ಪೊಡವೀಂದ್ರಗೆ ಕೊಂಡು ನೇಮವಾ  ॥1 ॥

ಚಿಂತೆಯ ಮಾಡಲ್ಯಾಕೆ  ಭ್ರಾಂತಿಯನು ಬಿಡು ಜೋಕೆ
ದಂತಿಗಮನೆ ಅಂತರಂಗದಿ  ಸಂತಾಪ ವ್ಯಾತಕಮ್ಮಾ  ತಾಯೇ   ॥2 ॥

ಸೃಷ್ಠಿಗಧಿಕಮಾದ  ಜ್ಯೇಷ್ಠ ಬಳ್ಳಾ ಪುರದಾ
ಅಷ್ಠ ಮೂರ್ತಿ ಶಿವನ ಭಜಿಪೆ  ಇಷ್ಠದಿಂದ ಪಾಲಿಸಮ್ಮಾ ॥ತಾಯೇ ॥3 ॥ಕೊಡು