ಸೋಮಶೇಖರ: ಪತಿವ್ರತಾ ಶಿರೋಮಣಿಯಾದ ಹೇ ತಾಯೇ ! ಈ ಪೊಡವಿಯೋಳ್ ಕಡು ದುರಾತ್ಮಕನಾದ ವಿಕ್ರಮನ ಘನ ಪರಾಕ್ರಮ ನುಡಿಗಳನ್ನು ಕೇಳಿ ! ಇಕೋ ಯನ್ನ ಕರಾಗ್ರದೋಳ್ ಮೆರೆಯುವ ಖಡ್ಗವು ಝಳಪಿಸುವ ಕಾರಣದಿ ಸಡಗರದಿಂದ ನಿಮ್ಮ ಅಡಿಗೆರಗುವೆನು, ವಡಲೊಳಗೆ ಚಿಂತೆಯ ಮಾಡದೆ ಈ ಪೊಡವಿಯೋಳ್ ಮೃಡನಡಿಯಂ ಪಿಡಿದಿರುವ ಕಂದನಿಗೆ ಕಡುಕಾತುರದಿಂದ ಅಪ್ಪಣೆಯ ಸಾರೇ-ಶರಧಿಗಂಭೀರೇ ॥

ದರುವು

ಕಂದಯ್ಯ ಏನಿದು ನಡತೇ  ಇಂತಾ ನಡತೇ ॥ಇಂತಾ
ಮಂದ ಬುದ್ಧಿಗಳಿಂದ  ತೊಂದರೆ ಬಂತೇ                           ॥ಅ.ಪ. ॥

ತಂದೆ ತಾಯಿಯ ಮಾತು ಜರಿದೂ  ಪೋಗುವುದೂ  ನಿಮಗೇ
ಚಂದ ವಲ್ಲವು ಹಿಂದೆ  ವ್ಯಥೆಪಟ್ಟರಳಿದೂ ॥
ಇಂದುವಂಶದ ರಾಜರುಗಳೂ  ಬಹುನೊಂದೂ  ಅಂದು
ಮುಂದಣದ ಪರಿಯನ್ನೂ  ಅರಿಯದೆ ಇರ್ದೂ                           ॥1 ॥

ಕನಕಪುತ್ಥಳಿ: ಹೇ ಕಂದಾ ! ಹೇ ಬಾಲ. ಹೇ ಮಗುವೇ, ಸಕಲ ವಿದ್ಯೆಗಳಲ್ಲಿ ಪ್ರಸಿದ್ದಿಯನ್ನು ಹೊಂದಿದ ಹೇ ಕಂದಾ ! ಅಂದ ಚಂದಗಳಿಂದ ಪ್ರಜ್ವಲಿಸುವ ನಿಮ್ಮ ತಂದೆ ತಾಯಿಗಳ ಮಾತನ್ನು ಕೇಳದಿರಲು ಸಂದೇಹವಿಲ್ಲದೇ ಚಂದವಲ್ಲವಾದ ಕಾರಣ, ಇಂದುವಂಶಜನಾದ ಸಾರಂಗಧರನು ಮೊದಲಾದ ನಳ ಮಾಂಧಾತರು ಮುಂದಣದ ಕುಂದು ಸಂಭವಿಸುವುದು ಅರಿಯದೆ ನೊಂದು ಇರುವರಾದ ಕಾರಣ ಇಂದು ನೀವೀರ್ವರೂ ತಂದೆ ತಾಯಿಗಳ ಮಾತನ್ನು ಜರಿದು ಪೋಗುವುದು ಚಂದವಲ್ಲಪ್ಪಾ ಕಂದಗಳಿರಾ॥

ದರುವು

ಸೋಮಶೇಖರ ಏನೋ ನಡತೇ  ಇಂತಾ ನಡತೇ  ನೀವೂ
ಕಾಮಿನಿಯನು ಬಯಸೀ  ಪೋಗುವುದೇ ನೀತೇ ॥
ಭೂಮಿ ಜ್ಯೇಷ್ಠ ಬಳ್ಳಾಪುರದಾ  ಪರಮೇಶಾ  ನಿಮ್ಮಾ
ಪ್ರೇಮದಿಂದಲಿ ಪೊರೆವಾ  ವರದ ಸೋಮೇಶಾ                        ॥2 ॥

ಕನಕಪುತ್ಥಳಿ: ಹೇ ಕಂದಾ ! ಹೇ ಪುತ್ರಾ ! ಹೇ ಸುತನೇ ! ಇಂದು ಈ ಚಿಕ್ಕಪ್ರಾಯದಲ್ಲಿ ಮಂದ ಮತಿಯಾದ ವೈರಿಯನ್ನು ಜಯಿಸಬೇಕೆಂದೂ ಸುಂದರಾಂಗಿಯಳ ಹೊಂದಬೇಕೆಂದು ಚಂದದಿಂದ ಪೋದರೆ ಕುಂದು ಸಂಭವಿಸುವುದಾದ ಕಾರಣ ನಂದನರಾದ ನೀವೀರ್ವರೂ ಮಂದಿರದಲ್ಲಿ ಚಂದದಿಂದಿದ್ದರೇ ಇಂದುಶೇಖರ ಶಂಕರನು ನಿಮ್ಮನ್ನು ಚಂದದಿಂದಾ ಪೊರೆಯುವನಪ್ಪಾ ಕುವರಾ-ನಿಮಗೇತಕ್ಕೆ ಬವರಾ ॥

ದರುವು

ಬೇಡಿಕೊಂಬೆನು ಮಾತೆ  ರೂಢಿಯೊಳು ವಿಖ್ಯಾತೆ
ಗಾಢ ಕಳುಹಿಸು ಕರವಾ  ಜೋಡಿಸಿ ನಮಿಪೆವೂ                       ॥1 ॥

ಕುಶಲದಿ ಪೇಳುವೆವೂ  ಅಸಮ ಸಾಹಸವೆಲ್ಲಾ
ಪಸುಳೆಯೆಂದೂ ಜರಿದೂ  ಅಪಹಾಸ್ಯ ಮಾಡುವರೇ                  ॥2 ॥

ಮಂಗಳಾಂಗಿಯೆ ಶಂಭು  ಲಿಂಗನ ಜಪಿಸುತ್ತಾ
ಮಂಗಳಕರ ಮಾಗೀ  ಶೃಂಗಾರ ದಿಂದಲೀ                              ॥3 ॥

ಸೋಮಶೇಖರ: ಹೇ ಜನನೀ, ಹೇ ಮಾತೆ, ಹೇ ತಾಯೇ ! ಈ ಧಾತ್ರಿಯೋಳ್ ನಿಮ್ಮ ಗರ್ಭಾಬ್ಧಿಯೋಳ್ ಪುಟ್ಟಿದ ಸುಕುಮಾರರೆಂದು ನಿಮ್ಮ ಚಿತ್ತದೋಳ್ ತಿಳಿದು ಈ ಪರಿಯ ಅಪಹಾಸ್ಯದ ಮಾತುಗಳು ಆಡುವುದು ಉಚಿತವಲ್ಲವಾದ ಕಾರಣ ಇಗೋ ನರಸುರಾದಿಗಳು ನಮಗೆ ಎಷ್ಠು ಮಾತ್ರಕ್ಕೂ ಅಪರಿಮಿತವಲ್ಲವಾದ ಕಾರಣ ಜ್ಯೇಷ್ಠ ಬಳ್ಳಾಪುರವಾಸನನ್ನು ನಿನ್ನ ಮನಸ್ಸಿನೋಳ್ ಜಪಿಸುತ್ತಾ ಸುಕ್ಷೇಮದಿಂದ ಪೋಗಿಬಾರೆಂದು ಅಪ್ಪಣೆಯನ್ನು ಸಾರೇ-ಶರಧಿ ಗಂಭೀರೇ ॥

ಕಂದಾರ್ಧಪೂರ್ವಿ

ಕಂದಾ ಆನಂದದಿ ಕೇಳ್  ವಂದನೆ ಗೈಯುವೆ ನಿಮಗೇ
ಇಂದೀ ಪರಿಯಿಂದಲಿ ನೀವೂ  ಮುಂದಣದ ಯೋಚನೆ
ಯಂ ಗೈಯದೇ  ಚಂದವಲ್ಲವೋ ಮುಂದೇ ॥
ಕಂದಾ ಸುಂದರನೇ  ಆನಂದಾದೀ ॥
ಇಂದು ಶುಭಕರನೇ ॥
ಮಂದಿ ಸಂದಣಿ ಸರ್ವ  ಬಂಧು ಬಾಂಧವರನ್ನು
ನಂದಿವಾಹನ ಶಿವನಾ  ಚಂದದಿಂ ಭಜಿಸುತ್ತಾ ॥
ಕಂದಾ ಸುಂದರನೇ  ಆನಂದದೀ
ಇಂದು ಶುಭಕರನೇ ॥

ಕನಕಪುತ್ಥಳಿ: ಹರನ ವರದಿಂದ ಪುಟ್ಟಿದ ಹೇ ಕಂದಗಳಿರಾ  ಪರಿ ಪರಿಯ ವಿಧದಿಂದ ನಾನು ಪೇಳುವ ಮಾತನ್ನು ಕೇಳದೆ ದುರುಳತನದಿಂದ ನೀ ಪೋಗುವುದು ಉಚಿತವಲ್ಲವಾದ ಕಾರಣ, ಪೂರ್ವಕ್ಕೆ ರಾವಣ ಕುಂಭಕರ್ಣ ಆ ಮಹಾದೈತ್ಯರಿಗೂ ವೈರತ್ವವೆಂಬುದು ಅಸಾಧ್ಯಮಾಗಿ ಕಷ್ಠಪಟ್ಟಿರುವರಾದ ಕಾರಣ ಚಂದವಾದ ನಮ್ಮ ಮಾತುಗಳನ್ನು ಕೇಳಿ ಆನಂದದಿಂದ ಅರಮನೆಯೊಳಿರ್ದರೇ ಈ ಸೃಷ್ಠಿಯಂ ಪರಿಪಾಲಿಸುವ ಜ್ಯೇಷ್ಠ ಬಳ್ಳಾಪುರವಾಸ ಸೋಮೇಶ್ವರನು ಸರ್ವ ಸೌಖ್ಯಗಳನ್ನು ಕೊಟ್ಟು ಸುಖದಿಂದ ಸಲಹುವನಪ್ಪಾ ಬಾಲಾ-ಸದ್ಗುಣಶೀಲಾ ॥

ಕಂದಾರ್ಧರೇಗುಪ್ತಿ

ಅಮ್ಮಾ ನಿಮ್ಮ ಕುಮಾರಗೇ  ಸಮ್ಮತದಲಿ ನೇಮವನಿತ್ತು
ಸುಮ್ಮನೇ ಕಳುಹೇ  ಬ್ರಹ್ಮಾ ನಮ್ಮ ಫಣಿಯೋಳ್
ಗಮ್ಮನೇ ಬರೆದಿರುವ ಪರಿಯಾ ॥
ಕ್ರಮವ ತಪ್ಪುವರೇ  ಅಮ್ಮಯ್ಯ ಕೇಳೇ
ಕ್ರಮವ ತಪ್ಪುವರೇ ॥
ಸಮ್ಮತಿಯಿಂದಲೀ  ನಮ್ಮ ಕಳುಹಿಸದೀರೇ
ಉಮ್ಮಳಿಸುತ ಬೇಗಾ  ಗಮ್ಮನೆ ಪೋಗುವೆವೂ ॥
ಕ್ರಮವ ತಪ್ಪುವರೇ  ಅಮ್ಮಯ್ಯ ಕೇಳೆ
ಕ್ರಮವ ತಪ್ಪುವರೇ ॥

ಸೋಮಶೇಖರ: ಹೇ ಜನನೀ, ಹೇ ಮಾತೆ, ಹೇ ತಾಯೇ ! ಈ ಕ್ಷಿತಿಯೊಳಗೆ ಬ್ರಹ್ಮನು ಬರೆದಿರುವ ಲಿಖಿತವನ್ನು ಮೀರಲಳವಲ್ಲವಾದ ಕಾರಣ ಆ ದೃಷ್ಠಿ ಮೂರುಳ್ಳ ಫಾಲಾಕ್ಷನ ಕರುಣ ಕಟಾಕ್ಷದಿಂದ ನಿಮ್ಮ ಕುಕ್ಷಿಯೊಳಗೆ ಪುಟ್ಟಿದ ಸುಕುಮಾರರಿಗೆ ಅಕ್ಷಯವಾಗಲೆಂದು ಈ ಕ್ಷಣವೇ ನೇಮವನ್ನು ಕೊಟ್ಟು ರಕ್ಷಿಸದೇ ಹೋದರೇ, ನೀವು ಉಪೇಕ್ಷೆಯನ್ನು ಮಾಡಿದ್ದೇ ಆದರೇ ಈ ಕ್ಷಣವೇ ಚೋರತ್ವದಿಂದ ನಾವಿಬ್ಬರೂ ಪಾರಿ ಹೋಗುತ್ತೇವಲ್ಲದೇ ಕ್ರೂರಮಾಗಿ ನಿಮ್ಮೊಳು ಮಾತನಾಡುವುದಿಲ್ಲಮ್ಮಾ ಜನನೀ – ಫಣಿರಾಜವೇಣೀ ॥

ದರುವು

ಮಗುವೇ ನಿಮ್ಮನು ಬಿಟ್ಟು  ಹೇಗೆ ಸೈರಿಸಲಿ ನಾ
ಸುಗುಣ ಸಂಪನ್ನರೇ  ಅಗಲೀ ಇರಲಾರೆ ನಾ                           ॥ಪ ॥

ಕಂದನೇ ಕೇಳೈಯ್ಯ  ಚಂದವಲ್ಲವು ನಿಮಗೇ
ಮಂದಾಗಮನೆಯರು  ನಿಂದಿಪರು ಯಮಗೇ                          ॥1 ॥

ಹಗೆಯ ಬಯಸಿ ನೀವೂ  ಜಗದಿ ಪೋಗುವರೇನೋ
ನಗಧರ ತನಯನು  ಹೇಗೆ ಲಿಖಿಸಿರುವನೋ                           ॥2 ॥

ಧರೆ ಜ್ಯೇಷ್ಠ ಬಳ್ಳಾ  ಪುರದಾ ಸೋಮೇಶ್ವರನಾ
ಚರಣವ ಸ್ಮರಿಸುತ್ತಾ  ಹರುಷದಿಂದಿರು ಕುವರಾ                        ॥3 ॥

ಕಂದಮುಖಾರಿ ದ್ವಿಪದೆ

ಕಂದರಾಡಿದ ಮಾತು  ಕಾಮಿನಿ ಕರ್ಣದೊಳು ಕೇಳಿ
ಕಂದಿ ಕಡು ನೊಂದಳಾ ಕಮಲಾಯತಾಕ್ಷಿ
ತಂದೆ ತಾಯಿಯ ಮಾತು  ವಂದಾರು ಮೀರಿ ನಡೆವರ್ಗೆ
ಸಂದೇಹವಿಲ್ಲದೇ ಕಂದಮ್ಮಾ  ಜನನಿ ಜೂಜನಾಡಬೇಡೆ
ನಲೂ ಜವದಿ ಭೂಮಿಪರೆಲ್ಲಾ  ಸನುಮತದಿ ಮೋಸಗಳ ಹೊಂದಿ
ವನವಾಸಗಳ ಪೋಗಿ  ಯನ್ನ ತನುಜರೇ ಕೇಳಿ
ತಾರತಮ್ಯಗಳನು  ಇಂದು ನೀವು ಮಾಡಿ ಕಂದಯ್ಯ
ಪೂರ್ವ ಜನ್ಮದಲಿ ಮಾಡಿದ  ಸುಕೃತ ಫಲಗಳನು ಸಾರ
ಧಾವ ರಾಜ್ಯವನು, ಧಾವ ಭೂಮಿಯನು ಪಸುಬಾಲಕರಾಗಿ
ನೀಲಾವತಿಯನು ಸೇರಿ  ಮಧುರವಾಣಿಯನು ತರುವಿರೋ
ಯನ್ನ ಮೋಹದ ಅರಗಿಣಿಯೇ  ಯನ್ನ ಮೋಹದಾ ಗಿಣಿಯೇ
ಸುಖದಿಂದ ಪೋಗಿ ಬನ್ನಿರೈಯ್ಯಿ ಕಂದಗಳಿರಾ ॥

ಚಿತ್ರಶೇಖರ: ಹೇ ತಾಯೇ, ಹೇ ಜನನೀ, ಹೇ ಮಾತೇ ! ನಿಮ್ಮ ಗರ್ಭಾಬ್ಧಿಯೋಳ್ ಪುಟ್ಟಿದ ಸುಕುಮಾರರಿಗೆ ಸುಕ್ಷೇಮದಿಂದ ಪೋಗಿಬಾರೆಂದು ಅಪ್ಪಣೆಯನ್ನು ಪಾಲಿಸಬೇಕಮ್ಮಾ ತಾಯೇ – ಹಿಮಾಂಶು ಮುಖಛಾಯೇ ॥

ಕನಕಪುತ್ಥಳಿ: ಪ್ರಾಣದೊಲ್ಲಭನಾದ ರಾಯನೇ ಕೇಳು ! ನಮ್ಮ ಮುದ್ದು ಕುಮಾರರಿಗೆ ನಾನೆಷ್ಠು ವಿಧವಾಗಿ ಪೇಳಿದಾಗ್ಯೂ ಪ್ರಯೋಜನವಿಲ್ಲವಾಯಿತು. ಆದಕಾರಣ ವೈರಿಗಳನ್ನು ಜಯಿಸಿ ಬರಲು ಅಪ್ಪಣೆಯನ್ನು ದಯಪಾಲಿಸಬಹುದೈ ರಮಣಾ-ಸದ್ಗುಣಾಭರಣಾ ॥

ವಜ್ರಮಕುಟ: ಅಯ್ಯ ಪ್ರಧಾನಿ, ಯಮ್ಮಯ ಕುಮಾರ ಕಂಠೀರವರು ಪರರಾಯರ ಮೇಲೆ ಯುದ್ಧ ಸನ್ನದ್ಧರಾಗಿ ಪೋಗುವರಾದ ಕಾರಣ ಅವರಿಗೆ ಬೇಕಾದ ಚಂದ್ರಾಯುಧವೇ ಮೊದಲಾದ ಶಸ್ತ್ರಾಸ್ತ್ರಗಳನ್ನೂ ಭಟಸೇನೆಯನ್ನೂ ಸಿದ್ಧಪಡಿಸೈ ಮಂತ್ರಿಶೇಖರಾ-ರಾಜಕಾರ‌್ಯ ದುರಂಧರಾ ॥

ಮಂತ್ರಿ: ತಮ್ಮ ಆಜ್ಞೆ ಪ್ರಕಾರ ಸಕಲ ಸನ್ನಾಹಗಳನ್ನು ಸಿದ್ಧಪಡಿಸಿರುತ್ತೇನೈ ರಾಜ-ಭಾನುಸಮತೇಜ॥

ದರುವು

ಪೋಗಿ ಬಾರಲೋ ನೀನು ಕಂದಾ ॥ಪ ॥
ನಾಗಧರನ ಕೃಪೆಯಿಂದಾ ॥
ಪೋಗಿ ಬಾರಲೋ ನೀನೂ ಕಂದಾ ॥ಅ.ಪ. ॥
ಅಂಗಜವೈರಿ ನಿ  ನ್ನಂಗದಿ ಧ್ಯಾನಿಸೀ
ಶೃಂಗಾರ ಕರನಿಗೇ  ಮಂಗಳಕರವಿತ್ತು ಪೋಗಿ ಬಾರಲೋ ॥      ॥1 ॥

ಧರಣಿ ಜ್ಯೇಷ್ಠ ಬಳ್ಳಾ  ಪುರವ ಪಾಲಿಸುವಂತಾ
ಹರನು ಸೋಮೇಶ್ವರನಾ  ಸ್ಮರಿಸುತ್ತಾ ಸಂಭ್ರಮದೀ ॥ಪೋಗಿ ಬಾರಲೋ   ॥2 ॥

ಕನಕಪುತ್ಥಳಿ: ಸುಕುಮಾರ ಕಂಠೀರವ ಭೂಪಾಲರೇ ಕೇಳಿ ! ಸೋಮಶೇಖರನ ಕರುಣಕಟಾಕ್ಷದಿಂದ ನೀವೀರ್ವರೂ ಪೋಗಿ ಜಯಶೀಲರಾಗಿ ಬನ್ನಿರಪ್ಪಾ ಕಂದಗಳಿರಾ ॥

ಸೋಮಶೇಖರ: ಭಳಿರೇ ಯನ್ನ ತಮ್ಮನಾದ ಚಿತ್ರಶೇಖರನೇ ಕೇಳು ! ಈವತ್ತಿನಾ ದಿನದಲ್ಲಿ ನಮ್ಮ ಮಾತಾಪಿತೃಗಳು ಶತೃನಿಗ್ರಹವನ್ನು ಮಾಡಿಕೊಂಡು ಬರಬಹುದೆಂದು ಉತ್ತಮವಾದ ನೇಮವನ್ನು ಕೊಟ್ಟು ಇರುತ್ತಾರಾದ ಕಾರಣ ನಾವು ಸರ್ವ ಸನ್ನಾಹ ಪ್ರಯುಕ್ತಮಾಗಿ ಕುದುರೆಯ ಆಲಯಕ್ಕೆ ಪೋಗಿ ಕ್ರಮವಾದ ಎರಡು ತೇಜಿಗಳನ್ನು ತೆಗೆದುಕೊಂಡು ನಮ್ಮ ಇಷ್ಠದೇವರಾದ ಸೋಮೇಶ್ವರನ ಆಲಯಕ್ಕೆ ಪೋಗಿ ಭಕ್ತಿ ಭಾವಗಳಿಂದ ಕಾಮಾರಿಯನ್ನು ಪೂಜಿಸಿ ಅಪ್ಪಣೆಯನ್ನು ಕೈಗೊಂಡು ಮುಂದೆ ಪೋಗೋಣ ಬಾರೈಯ್ಯ ಅನುಜಾ – ಪುರವೈರಿಯ ತನುಜಾ ॥

ಚಿತ್ರಶೇಖರ: ಭಳಿರೇ ಅಗ್ರಜ ಭವ ! ತಮ್ಮ ಉತ್ತರಕ್ಕೆ ಪ್ರತಿ ಉತ್ತರವನ್ನು ಬಿತ್ತರಿಸದೇ ನಿಮ್ಮ ಆಜ್ಞಾನುಸಾರವಾಗಿ ಬರುತ್ತಾ ಇರುವೆನೋ ಅಣ್ಣಾ-ಪುತ್ಥಳಿಯ ಬಣ್ಣಾ ॥

 

(ನೀಲಾವತಿ ಪಟ್ಟಣಕ್ಕೆ ಹೋಗುವಿಕೆ)

ಭಾಗವತರದರುವುತ್ರಿವುಡೆ

ಹೊರಟರೈ ಕಲಿ ಭಟ ಕುಲೇಂದ್ರರೂ
ಕರಿ ತುರಗ ಝೇಂಕಾರದಿಂದಲೀ
ದುರದೊಳಗೆ ವೈರಿಗಳ ಜಯಿಸಲು  ಬಿರುದುಗಳ ವಹಿಸೀ           ॥1 ॥

ಇಟ್ಟರಾಗಲೇ ಮಣಿ ಕಿರೀಟವ
ತೊಟ್ಟು ಉಕ್ಕಿನ ಕವಚವನ್ನು
ದಟ್ಟಿ ಕಟ್ಟಿದ ವೀರಗಾಸಿಯ  ದಿಟ್ಟ ಕೋವಿದರೂ                         ॥2 ॥

ಧರಿಸಿ ನೀಲಾಂಜನವು ಕಣ್ಣಿಗೆ
ವೊರಸುತಲಿ ಮೀಸೆಯನು ತಿರುಹುತಾ
ಇರಿಸಿದರು ಅದೃಶ್ಯ ಬೇಳ್ವೆಯ  ಸರಸ ಕೋವಿದರೂ                  ॥3 ॥

ಚಂದ್ರ ಆಯುಧ ಕನ್ನಗತ್ತರೀ
ಮಂದವಾದ ಮಂಕು ಬೂದಿಯು
ಚಂದ ಚಂದದ ಕಣ್ಣು ಕಪ್ಪುಗ  ಳಿಂದ ಮೆರೆಯುತಿರೇ                   ॥4 ॥

ಹೊಡೆಸಿದರು ರಣಭೇರಿ ವಾದ್ಯವ
ಬಿಡದೆ ಧರಿಸಿದ ಪ್ಯಾಂಡೆಯನು ತಾ
ಪೊಡವಿಯೊಳು ಮೃಡ ಧ್ಯಾನ ಮಾಡುತಾ  ನಡೆಸಿದರು ದಂಡ    ॥5 ॥

ಚಿತ್ರಶೇಖರ: ಭಳಿರೇ ಅಗ್ರಜಭವ ! ನೀಲಾವತಿಯೆಂಬ ಪಟ್ಟಣವು ಇದೇ ಅಲ್ಲವೇ ಭಲಾ ಭಲಾ !
ಗಗನ ಮಾರ್ಗಕ್ಕೆ ಮುಟ್ಟುವ ಅಗಳು ಕೋಟೆಗಳನ್ನು ಹೇಗೆ ದಾಟುವುದೈ ಅಣ್ಣಾ-ಅಮಿತ
ಗುಣರನ್ನ ॥

ಸೋಮಶೇಖರ: ಹೇ ಅನುಜಾ ! ಮಹಾ ಶ್ರೇಷ್ಠಮಾದ ತೇಜಿಗಳಿಂದ ಈ ಕೋಟೆ ಕೊತ್ತಲುಗಳನ್ನು ಲಂಘಿಸಿ ಪಟ್ಟಣದ ಕವಾಟಗಳನ್ನು ಬಟ್ಟ ಬಯಲು ಮಾಡಿ, ಕಟ್ಟು ಕಾವಲಿರುವ ಕಲಿಭಟರನ್ನು ಕುಟ್ಟಿ ಕುಟ್ಟಿ ನಷ್ಠಪಡಿಸಿ ಭ್ರಷ್ಠ ತೇಲಿಸುವುದಕ್ಕೆ ದಿಟ್ಟನೆದ್ದು ಬಾರೋ ಸಹೋದರಾ – ಅರಿಜನ ಭಯಂಕರಾ॥

ಚಿತ್ರಶೇಖರ: ತಮ್ಮ ಅಪ್ಪಣೆಯಂತೆ ನಡೆದುಕೊಳ್ಳುತ್ತೇನೈ ಅಣ್ಣಾ-ಕರುಣ ಸಂಪನ್ನ ॥

 

(ವಿಕ್ರಮರಾಯ ಬರುವಿಕೆ)

ತೆರೆದರುವುತ್ರಿವುಡೆ

ಶ್ರೀಕರದಿ ಚಕ್ರೇಶನೆನಿಸುವಾ
ವಿಕ್ರಮಾರ್ಕನು ಭುಜಬಲಿಷ್ಠನು
ಉಕ್ಕಿ ರೌದ್ರವ ರಭಸದಿಂದಲಿ  ದಿಟ್ಟ ವಿಕ್ರಮನೂ                       ॥1 ॥

ದುಷ್ಠ ರಾಯರ ಗರ್ವ ಮುರಿಯುತಾ
ಶ್ರೇಷ್ಠ ವಿಕ್ರಮ ಘನ ಪರಾಕ್ರಮಾ
ಅಷ್ಠ ಭೋಗೈಶ್ವರ‌್ಯದಿಂದಲೀ  ಶ್ರೇಷ್ಠದಿಂದಿರಲೂ                ॥2 ॥

ಭೂತ ಪ್ರೇತಾ ಅಖಿಲ ಗಣಗಳ
ಖ್ಯಾತಿ ಯಿಂದಲಿ ತಾನು ಇರಿಸುತಾ
ಮಾತು ಮಾತಿಗೆ ಭೀತಿ ತತ್ತರ  ಭೂತ  ಪತಿಯಿಂದಾ                 ॥3 ॥

ಭೇರಿ ವಾದ್ಯದ ಬಿರುದು ಬಾವಲಿ
ಮೊರೆಯುತಿರಲೂ ಭೋರ್ಗರೆಯುತಿರೇ
ಸಾರಿದವು ಘಂಟೆಗಳು ಝಣ ಝಣ  ತ್ಕಾರದಿಂದಾಗ                 ॥4 ॥

ಮಂಡಲದಿ ಕೋದಂಡನೆನಿಸುತಾ
ಕೆಂಡಗಣ್ಣಿನ ಮೃಡನ ಭಜಿಸುತಾ
ಚಂಡ ವಿಕ್ರಮ ಚೋರ ವಾರ್ತೆಯ  ಕಂಡು ತಾ ಬಂದಾ              ॥5 ॥

ವಿಕ್ರಮರಾಯ: ಯಲಾ, ಕವಾಟ ಭಟ ಸಾರಥಿಯೇ ಹೀಗೆ ಬಾ, ಮತ್ತೂ ಒಂದು ಸಾರಿ ಹೀಗೆ ನಿಲ್ಲು, ಯಲಾ ಮಾನುಷ್ಯನೇ ಈ ಅಟ್ಟಣೆಯೋಳ್ ದಿಟ್ಟತರಮಾಗಿ ಚಟುಲ ಭಯಂಕರವಿಲ್ಲದೇ ನಿಟಿಲಾಂಬಕನಂತೆ ಬಂದು ನಿಂತು ತಟ ತಟನೇ ಮಾತನಾಡಿಸುವ ಸುಭಟ ನೀ ಧಾರೋ – ಬದಲುತ್ತರವ ಸಾರೋ ॥

ಯಲಾ ! ಕಿಂಕರನೇ ಕೇಳು ! ಈ ಪೊಡವಿಯೋಳ್ ಕಡುರಮ್ಯತರಮಾಗಿ ಬೆಡಗಿನಿಂದೊಪ್ಪುವಾ ಅಮರೇಂದ್ರನ ಪಟ್ಟಣವನ್ನು ಗಢಣದಿಂ ಧಿಕ್ಕರಿಪಂತೆ ತತ್ತಳಿಸಿ ಕಡುಸೌಂದರ್ಯದಿಂದ ರಾಜಿಸುವ ವಜ್ರ ವೈಢೂರ‌್ಯ ಗೋಮೇಧಿಕ ಮಣಿ ಮಾಣಿಕ್ಯದಿಂದೊಪ್ಪಲ್‌ಪಟ್ಟ ಪೊಡವಿ ನೀಲಾವತಿಯ ಒಡೆಯನೆಂದೆನಿಸಿ, ಗರುಡ ಗಂಧರ್ವ ಯಕ್ಷ ಕಿನ್ನರ ಕಿಂಪುರುಷರಲ್ಲದೇ ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೇ ಮೊದಲಾದ ಬ್ರಹ್ಮಾಂಡಮಾಗಿ ಅಡಗಿರ್ಪ ಈ ವರ ಸಭಾಸ್ಥಾನದೋಳ್ ಧರಣೀಧರರಿಗೆಲ್ಲಾ ಬೇಡಿದ ಇಷ್ಠಾರ್ಥವನ್ನು ಸಡಗರದಿಂದ ಪಾಲಿಸುವ ವೈರಿಗಳ ಮಿಂಡನೆಂದೆನಿಸಿ, ಪಾದದೋಳ್ ಮುತ್ತಿನ ಪ್ಯಾಂಡೆಯನ್ನು ಧರಿಸಿ ಗಢಣದಿಂ ಹೂಂಕರಿಪ ಕರಿಸಿಂಹ ಶಾರ್ದೂಲ ಗಂಡಭೇರುಂಡ ಭೂತ ಭೇತಾಳಾದಿ ಸಮೂಹದೊಡನೆ ನಭ್ರಡ್ವರದೋಳ್ ವಿಭ್ರಾಜಿಸುವ ಕೋಟಿ ಶಶಿಯಂತೆ ಪ್ರಜ್ವಲಿಸುವ ಭುಜಬಲ ಪರಾಕ್ರಮ ಶೌರಿ ವಿಕ್ರಮ ರಾಜ ವೈಭವರೆಂದು ತಿಳಿಯೋ ದ್ವಾರತಿಷ್ಠ-ಬೇಡು ನಿನ್ನಿಷ್ಠ ॥

ಯಲಾ ! ಕವಾಟ ಶಿಖಾಮಣಿ ! ಯನ್ನ ಅಷ್ಠ ಪ್ರಧಾನರೋಳ್ ಮಹಾಶ್ರೇಷ್ಠನೆಂದೆನಿಸುವ ಕಾರ‌್ಯಪರನೆಂಬ ಪ್ರಧಾನಿಯನ್ನು ಅತಿಜಾಗ್ರತೆ ಕರೆಸೋ ಚಾರ-ಯನ್ನ ಆಜ್ಞಾಧಾರ ॥

 

(ಕಾರ್ಯಪರನೆಂಬ ಮಂತ್ರಿ ಬರುವಿಕೆ)

ಕಾರ್ಯಪರ: ಯಲಾ, ಕವಾಟ ಶಿಖಾಮಣಿ ! ನಮ್ಮ ಸಮುದಾಯದೋಳ್ ಬಂದು ನಿಂದು ನಮ್ಮನ್ನು ಧಾವ ಸಂಸ್ಥಾನಾಧಿಪತಿಗಳೆಂದು ಬಿತ್ತರಿಸುತ್ತಾ ಇದ್ದೀ. ಆದರೆ ವಿಸ್ತರಿಸಿ ಪೇಳುತ್ತೇನೆ, ಕೇಳೋ ಸಾರಥಿ॥

ಅಯ್ಯ, ಕವಾಟ ಸೇವಕಾ ! ಈ ಸಪ್ತದ್ವೀಪಂಗಳ ಮಧ್ಯರಾಷ್ಟ್ರದೋಳ್ ಮಹಾಶ್ರೇಷ್ಠದಿಂದೊಪ್ಪಲ್ ಪಟ್ಟ ಜಂಬೂದ್ವೀಪ ಮೊದಲಾಗಿ ಆಧಿಪತ್ಯವೆನಿಸಿಕೊಂಬ ಪಂಚದ್ವೀಪಂಗಳೋಳ್ ದೇಶಗಳು ಯಾವುವೆಂದರೆ ಮಾಳ ಮಲೆಯಾಳ, ಚೋಳ ಬಂಗಾಳ ನೇಪಾಳ, ಗೌಳ, ಲಲಾಟ ಕರ್ನಾಟಕ, ಟೆಂಕಣ ಕೊಡಗು ದೇಶಾದಿ ಕಾಶ್ಮೀರ ನವಖಂಡ ದೇಶಗಳುಂಟು. ಅಂತೊಪ್ಪ ದೇಶಂಗಳೋಳ್ ಕನಕಾಚಲಕ್ಕೆ ಪಶ್ಚಿಮ ದಿಗ್ಭಾಗದೋಳ್ ಪ್ರಕಾಶಿಸುವ ನೀಲಾವತಿಯೆಂಬ ಪಟ್ಟಣಕ್ಕೆ ಕಾರಣಕರ್ತನಾದ ಪರಾಕ್ರಮನೆಂದೆನಿಸುವ ವಿಕ್ರಮರಾಯಂಗೆ ಪಟು ಭಟರಾದಿ ವೀರರೋಳ್ ಶ್ರೇಷ್ಠನೆಂದೆನಿಸಿಕೊಂಡು ಮೆರೆಯುವ ಕಾರ‌್ಯಪರನೆಂಬ ಪ್ರಧಾನೋತ್ತಮನು ನಾನೇ ಅಲ್ಲವೇನಯ್ಯ ಸೇವಕಾ-ಭಕ್ತಿಯೋಳ್ ಭಾವಕ ॥

ಅಪ್ಪಾ ಸೇವಕ ! ನಮ್ಮ ದೊರೆಯಾದ ವಿಕ್ರಮರಾಯರು ಕರೆಸಿದ ಕಾರಣ ಬಾಹೋಣವಾಯ್ತು! ಧಾವಲ್ಲಿರುವರೋ ತೋರಿಸೋ ಚಾರಕಾ-ಯನ್ನ ಆಜ್ಞಾಧಾರಕಾ ॥

ನಮೋನ್ನಮೋ ಹೇ ರಾಜ-ಆಶ್ರಿತ ಕಲ್ಪಭೋಜ ॥

ವಿಕ್ರಮ: ಶುಭಕರಮಾಗಿ ಬಾರೈ ಕಾರ‌್ಯಪರಾ – ಸಕಲ ನೀತಿಪರಾ ॥

ಕಾರ್ಯಪರಯನ್ನನ್ನು ಕರೆಸಿದ ಕಾರ‌್ಯಾರ್ಥವೇನೈ ಭೂಪ – ಕೀರ್ತಿಕಲಾಪ ॥

ವಿಕ್ರಮ: ಅಷ್ಠ ಪ್ರಧಾನರೋಳ್ ಮಹಾಶ್ರೇಷ್ಠನೆಂದೆನಿಸುವ ಯನ್ನ ಇಷ್ಠ ಪ್ರಧಾನಿಯೇ ಕೇಳು ! ಈ ಸೃಷ್ಠಿಯೊಳು ಮಹಾ ಶ್ರೇಷ್ಠದಿಂದೊಪ್ಪಲ್‌ಪಟ್ಟ ಈ ಪಟ್ಟಣಕ್ಕೆ ಕೆಟ್ಟ ಚೋರರ ದೃಷ್ಠಿ ವುಂಟಾಯಿತೆಂದು ಪಟ್ಟಣದ ಕಲಿಭಟರು ಬಗೆ ಬಗೆಯಾಗಿ ಸುದ್ಧಿಗಳನ್ನು ಮುಟ್ಟಿಸಿದರಾದ ಕಾರಣ ಯಮ್ಮಯ ಪಟ್ಟಣಕ್ಕೆ ಕಟ್ಟಳೆಯನ್ನಿಟ್ಟಿದ್ದು ನಿಷ್ಪಲವಾಯಿತಲ್ಲೋ ಮಂತ್ರೀ, ಭ್ರಷ್ಠರು ಮಾಡಿರುವ ಕೆಟ್ಟ ಕಾರ‌್ಯಗಳನ್ನು ಯನಗೆ ತಿಳಿಸೈ ಸಚಿವರಾ-ಸಿಂಧು ಗಂಭೀರಾ ॥

ದರುವು

ಶ್ರೇಷ್ಠ ವಿಕ್ರಮ ಕೇಳೈ  ಇಷ್ಠಾದಿಂದಲಿ ನೀನೂ
ಯೆಷ್ಠೆಂತಾ ಪೇಳಲೀ  ಕೆಟ್ಟೀತು ಪುರವೂ                                 ॥1 ॥

ಇರುಳು ಕನ್ನವ ಕೊರೆದೂ  ಪರಿವಾರ ಮಾನ್ಯರನೂ
ಪರಿಹಾಸ್ಯ ಮಾಡುತ್ತಾ  ಬರೆದ ಲಿಖಿತವನೂ                            ॥2 ॥

ಜಗದೊಳಗೆ ಜ್ಯೇಷ್ಠ ಬಳ್ಳಾ  ನಗರವನು ಪಾಲಿಸುವಾ
ನಗಜಾರಮಣನೇ ಬಲ್ಲಾ  ಸೊಗಸಿನ ವಿಟರಾ                          ॥3 ॥

ಕಾರ್ಯಪರ: ಚೆಲುವ ಚೆನ್ನಿಗ ಪರಾಕ್ರಮಿಯಾದ ರಾಜೇಂದ್ರನೇ ಲಾಲಿಸು ! ಗನ್ನ ಘಾತುಕರಾದ ಚೋರರು ಯನ್ನ ಮಂದಿರಕ್ಕೆ ಕನ್ನವಂ ಯಿಕ್ಕಿ ಚಿನ್ನ ಮುಂತಾದ ಮಣಿಖಚಿತ ದ್ರವ್ಯ ಆಭರಣವನ್ನು ಅಪಹರಿಸಿ ಮತ್ತೆ ಯನ್ನಯ ಕರಕ್ಕೆ ಓಲೆಯಂ ಕಟ್ಟಿ ಬಿನ್ನಾಣದಿಂದ ಹೊರಟು ಮಹೋನ್ನತವಾದ ಪರಿವಾರ ಮಾನ್ಯರನು ಭಂಗಿಸಿ ಅತ್ಯುನ್ನತಮಾದ ಯನ್ನಯ ವಸ್ತ್ರಾಭರಣಗಳನ್ನು ಅನ್ಯರ ವಶಮಾಡದೆ ಫನ್ನಗಾಧರನ ಆಲಯಕ್ಕೆ ಪೋಗಿ ಶಂಕರನ ಅಧಾರ್ಂಗಿಗೆ ಚೆನ್ನಾಗಿ ಧರಿಸಿ ಕನ್ನಮಯಮಾಗಿ ಪೋಗಿ ಇರುತ್ತಾರೈಯ್ಯಾ ದೊರೆಯೆ – ಧೈರ‌್ಯದಲ್ಲಿ ಕೇಸರಿಯೇ ॥

ದರುವು

ಸಗಡರದಿಂದಲಿ  ಕಡುಗಲಿ ಭಟರನೂ
ಬಿಡದೆ ಕರೆಸೋ ಮಂತ್ರೀ, ತಂತ್ರೀ                                        ॥1 ॥

ಅಡರಿ ಬರುವ ಚೋರ  ರೆಡೆಮುಡಿ ಕಟ್ಟುತಾ
ವಡನೆ ತರಲು ಈಗಾ, ಬೇಗಾ                                              ॥2 ॥

ಮೃಡನ ಕರುಣದೋಳ್  ಹಡೆದಿಹ ಸುತೆಯಳ
ಕೊಡಲು ನುಡಿಯಬಹುದೇ  ಅಹುದೇ                                     ॥3 ॥

ವಿಕ್ರಮ: ಸಾರಷಡ್ವಿವೇಕನೆಂದೆನಿಸುವ ವರ ಪ್ರಧಾನಿಯೇ ಕೇಳು ! ಕಡುಪರಾಕ್ರಮಿಗಳಂತೆ ಮೆರೆಯುವ ರಾವುತ ಭಟರನ್ನು ಕರೆಸಿ, ಆ ಚೋರರನ್ನು ಬಿಡದೆ ಹೆಡಮುಡಿಯಂ ಕಟ್ಟಿ ವಡನೇ ತರಬಹುದಲ್ಲದೇ, ಹಿಡಿದು ತರದಿರುವ ಬಾಯಿ ಬಡುಕನಿಗೆ ಪೊಡವೀಶನಿಂದ ಆಜ್ಞೆಯುಂಟಾಗಿರುವುದೆಂದು ಪೇಳುವುದಲ್ಲದೇ ಮೃಡನ ವರದಿಂದ ಜನಿಸಿದ ಕಡುಸೌಂದರ್ಯವತಿಯಳಾದ ನಂದನೆಯನ್ನು ಬೇಡಿದ ಬಡಚೋರರನ್ನು ಸದೆ ಬಡಿದು ಯಮನ ಪಟ್ಟಣಕ್ಕೆ ಕಳುಹಿಸುತ್ತೇನೆ ಅತಿ ಜಾಗ್ರತೆ ಆಜ್ಞಾಪಿಸೈಯ್ಯ ಮಂತ್ರಿಶೇಖರಾ-ರಾಜಕಾರ‌್ಯ ದುರಂಧರಾ ॥

ಕಾರ್ಯಪರು: ಅದೇ ಪ್ರಕಾರ ಆಜ್ಞಾಪಿಸುತ್ತೇನೈ ಭೂಪಾಲಕಾ-ಕ್ಷೋಣಿಜನಪಾಲಕಾ ॥

 

(ವಾಲೆಕಾರ ಬರುವಿಕೆ)

ದರುವು

ಬಂದಾನು ವಾಲೆಕಾರ  ವೈಭವದಿಂದಾ
ಬಂದಾನು ವಾಲೆಕಾರ ॥ಪ ॥
ಬಂದನು ವೋಲೆಕಾರ  ಮಂದಹಾಸಗಳಿಂದ
ಇಂದುಧರಗೇ ತಾ  ವಂದಿಸುತಲಿ ಬೇಗಾ ಬಂದಾನು ವಾಲೆಕಾರ  ॥1 ॥

ಕೋಲ ಕೈಯಲಿ ಪಿಡಿದು  ಮೇಲು ವಸ್ತ್ರವ ಪೊದೆದು
ಕಾಲ ವೈರಿಯ ಸ್ಮರಿಸೀ  ವೋಲೆಕಾರನು ಬಂದಾ  ಬಂದಾನು ವೋಲೆಕಾರ  ॥2 ॥

ವಾಲೆಕಾರ: ಅಯ್ಯ, ಮಾನುಷ್ಯನೇ ನಮ್ಮ ದೊರೆಯಾದ ವಿಕ್ರಮರಾಯರ ಚಿತ್ತಕ್ಕೆ ಈ ದಿನ ಮಹಾ ಗಡಿಬಿಡಿಯಾದ್ದರಿಂದ ಪ್ರಧಾನೋತ್ತಮರ ಆಜ್ಞೆವುಂಟಾಗಿರುವುದಾದ ಕಾರಣ ಅತಿ ತೀವ್ರದಿಂದ ಬಂದು ಇರುತ್ತೇನೆ. ಈಗ ವೋಲೆಕಾರನು ಬಂದು ಇರುವನೆಂದು ಪ್ರಧಾನೋತ್ತಮರಿಗೆ ಪೇಳಿ ಬಾರೋ ದೂತ – ಕೇಳೆನ್ನ ಮಾತ ॥

ನಮೋನ್ನಮೋ ಮಂತ್ರಿವರ‌್ಯರೇ ॥

ಕಾರ್ಯಪರ: ಅಯ್ಯ ವೋಲೆಕಾರ ! ಇಗೋ ಈ ದಿನ ರಾತ್ರಿ ವೇಳೆಯಲ್ಲಿ ಅಂತಪ್ಪ ಚೋರರು ಕಳ್ಳತನಕ್ಕಾಗಿ ಬರುತ್ತಾರೆ. ಅವರನ್ನು ಪತ್ತೆ ಮೂಲಕವಾಗಿ ಹಿಡಿದುಕೊಂಡು ಬರಬೇಕು. ಇದಕ್ಕೆ ತಪ್ಪಿ ನಡೆದರೆ ನಿಮಗೆ ಘೋರ ಶಿಕ್ಷೆಯುಂಟಾಗುವುದು ಆದಕಾರಣ ಭಯ ಭಕ್ತಿಯಿಂದ ವೀಳ್ಯವನ್ನು ತೆಗೆದುಕೊಳ್ಳುವವನಾಗೋ ವೋಲೆಕಾರ-ಯನ್ನ ಆಜ್ಞಾಧಾರ ॥

ವಾಲೆಕಾರ: ತಮ್ಮ ಅಪ್ಪಣೆ ಪ್ರಕಾರ ಚೋರರನ್ನು ಹಿಡಿದು ಎಳೆ ತರುವೆನೈ ಸ್ವಾಮಿ – ಭಕ್ತಜನ ಪ್ರೇಮಿ॥