(ಸಹೋದರರು ಚೋರತನಕ್ಕೆ ಬರುವಿಕೆ)
ದರುವು॥ತ್ರಿವುಡೆ
ಬಂದರೀರ್ವರು ಚಂದ್ರಚೂಡನ
ನಂದನರು ಆನಂದದಿಂದಲೀ
ತಂದರೈ ಮಣಿ ಮಂತ್ರ ಯಂತ್ರವು ಆಯುಧವು ಸಹಿತಾ ॥1 ॥
ಉಟ್ಟ ದಟ್ಟಿಯ ವೀರಗಾಸಿಯ
ಕಟ್ಟಿ ನೊಸಲೋಳಿಟ್ಟ ತಿಲಕವಾ
ದಿಟ್ಟ ವಾಯಸ ವಾಯ ಕಳವಿಗೆ ಪಟ್ಟದಾ ದೊರೆಗೇ ॥2 ॥
ಇಂದುವದನೆಗೆ ಪೇಳಿ ಹೊರಟರು
ಮಂದಿರವನೂ ಹರುಷದಿಂದಲೀ
ಬಂದು ಕಂಡರು ಪುರವ ಕಾದಿಹ ಮಂದಿ ಸಂದಣಿಯಾ ॥3 ॥
ಅಕ್ಕರಿಂದಲಿ ತೆಗೆದು ಬೇಳ್ವೆಯಾ
ದಿಕ್ಕು ದಿಕ್ಕಿಗೆ ಚೆಲ್ಲುತಾಕ್ಷಣಾ
ಇಕ್ಕಿದರು ಗಜ ವಾಜಿ ಗಳಿಗೆ ಸೊಕ್ಕಿತಾ ಮದವೂ ॥4 ॥
ಸಡಗರದಿ ಮೃಡನಡಿಯ ಸ್ಮರಿಸುತಾ
ಬಿಡದೆ ವಜ್ರಾಯುಧವ ಕರದೊಳೂ
ಪಿಡಿದ ರಾಕ್ಷಣಾ ಕನ್ನಗತ್ತರಿ ಜಡಿದು ತ್ವರಿತದಲೀ ॥5 ॥
ಸೋಮಶೇಖರ: ಅರ್ಕ ಶರ ಸಮರೂಪನಾದ ಅನುಜನೇ ಕೇಳು ! ನಮ್ಮ ಘನ ಪರಾಕ್ರಮಗಳಿಂದ ವಿಕ್ರಮನ ಅರಮನೆಯನ್ನು ಚಂದ್ರಾಯುಧಗಳಿಂದ ಕನ್ನವನ್ನು ಕೊರೆಯೋಣ. ಘಕ್ಕನೆದ್ದು ಬಾರೈ ಅನುಜಾ-ಪುರವೈರಿಯ ತನುಜ ॥
ಚಿತ್ರಶೇಖರ: ಹಾಗಾದರೆ ವಳಿತಾಯಿತೋ ಅಗ್ರಜಾ ! ತಮ್ಮ ಆಜ್ಞಾನುಸಾರಮಾಗಿ ನಡೆದುಕೊಂಡು ಇರುತ್ತೇನೆ ಮಹಾ ಪರಾಕ್ರಮಶಾಲಿಯಾದ ವಿಕ್ರಮನ ಅರಮನೆಗೆ ಕನ್ನವನ್ನಿಡಲು ಪೋಗೋಣ ನಡಿಯಯ್ಯ ಅಣ್ಣಾ ಅಮಿತಗುಣರನ್ನ ॥
ಸೋಮಶೇಖರ: ಅನುಜಾ ಚಿತ್ರಶೇಖರಾ ! ಇಗೋ ವಿಕ್ರಮನ ಅರಮನೆಗೆ ಕನ್ನವನ್ನು ಕೊರೆದು ಇರುತ್ತೇನೆ. ಒಳಪ್ರವೇಶವನ್ನು ಮಾಡಿ ಬೇಳ್ವೆಯನ್ನು ಚೆಲ್ಲಿ ಅವನ ಕರಕ್ಕೆ ವೋಲೆಯಂ ಬಂಧಿಸಿ ಸಕಲೈಶ್ವರ್ಯವನ್ನು ಅಪಹರಿಸೋಣ ದಿಗ್ಗನೆದ್ದು ಬಾರೈ ಅನುಜಾ – ಬಾಲಾರ್ಕತೇಜ ॥
ಚಿತ್ರಶೇಖರ: ಅದೇ ಪ್ರಕಾರ ಪೋಗೋಣ ನಡಿಯೋ ಅಣ್ಣಾ – ಪುತ್ಥಳಿಯ ಬಣ್ಣಾ ॥
(ವಿಕ್ರಮ ಮತ್ತು ಕಾರ್ಯಪರ ಸಂಭಾಷಣೆ)
ವಿಕ್ರಮ: ಯಲಾ ! ವೋಲೆಕಾರ ಮೀರಿದ ಜಾರ ಚೋರರನ್ನು ಹಿಡಿದು ತರುತ್ತೇನೆಂದು ಭೋರನೇ ವೀಳ್ಯವನ್ನು ಸಾರಿದೆಯೆಲ್ಲೋ ! ತೀವ್ರದಿಂದ ತೋರಿಸೋ ಚಾರ – ತಿಳಿಯಿತು ನಿನ್ನ ವಿಚಾರ ॥
ವಾಲೆಕಾರ: ಸ್ವಾಮೀ ! ಮಹಾರಾಜರೇ ! ಅಂತೊಪ್ಪ ಚೋರರನ್ನು ಪಿಡಿಯುವುದಕ್ಕೆ ನಮ್ಮಿಂದ ಎಷ್ಠು ಮಾತ್ರಕ್ಕೂ ಆಗುವುದಿಲ್ಲ. ಇನ್ನು ನಮ್ಮಗಳ ಅಪರಾಧವನ್ನು ಕ್ಷಮಿಸಿಬೇಕಯ್ಯ ದೊರೆಯೇ॥
ವಿಕ್ರಮ: ಅಯ್ಯ ಭಟ ಸಾರಥೀ ! ಯನ್ನ ವರ ಪ್ರಧಾನಿಯನ್ನು ಕರೆದು ತಾರೈ ಸಾರಥಿ-ಸಂಧಾನ ಮತಿ ॥
ಕಾರ್ಯಪರ: ನಮೋನ್ನಮೋ ರಾಜವೈಭವರೇ ! ಈ ಪುರದೊಳಗಿರುವ ಪ್ರಜಾಪ್ರಮುಖರೆಲ್ಲರೂ ಪುರಸೂರೆ ಹೋಯಿತೆಂದು ಪರಿ ಪರಿಯ ವಿಧದಿಂದ ಬಂದು ಅವರಿಗೆ ಆದ ಅಪಮಾನವನ್ನು ದ್ರವ್ಯನಷ್ಠವನ್ನು ಯನ್ನೊಡನೆ ಪೇಳಿ ಪುರವನ್ನು ಬಿಟ್ಟು ಪರ ರಾಯರ ನಗರವನ್ನು ಸೇರಿಕೊಳ್ಳುತ್ತೇವೆಂದು ಪೇಳುತ್ತಾ ಇದ್ದಾರೈಯ್ಯಾ ಭೂಪ-ಕೀರ್ತಿಕಲಾಪ ॥
ವಿಕ್ರಮ: ಅಷ್ಠ ಪ್ರಧಾನರೊಳಗೆ ಶ್ರೇಷ್ಠನೆಂದೆನಿಸುವ ಯನ್ನಿಷ್ಠ ಪ್ರಧಾನಿಯೇ ಕೇಳು ! ಶ್ರೇಷ್ಠರಾದ ಚೋರರು ನಿನ್ನೆಯ ರಾತ್ರಿಯಲ್ಲಿ ಉತ್ಕೃಷ್ಠಮಾಗಿ ಮಾಡಿರುವ ಕೆಟ್ಟ ಕಾರ್ಪಣ್ಯಗಳನ್ನು ಪೇಳುತ್ತೇನೆ ಕಿವಿಗೊಟ್ಟು ಕೇಳೋ ಮಂತ್ರಿ – ಕಾರ್ಯೇಷು ತಂತ್ರೀ ॥
ದರುವು
ಯೆಂತೂ ಪೇಳಲಿ ಕೇಳೈಯ್ಯ ಮಂತ್ರೀಶನೇ
ಪಂಥದಿಂದಲಿ ಚೋರರೂ ॥
ಅಂತಃಪುರವ ಪೊಕ್ಕು ಸ್ವಂತ ಧನ ಕನಕವಾ
ಪಂಥಕಾರಿಗಳೈದರೋ ॥
ಚಿಂತಿಪುದ್ಯಾಕೆ ಅಂತರಂಗದ ಸುದ್ಧಿಯಾ ॥1 ॥
ಭದ್ರ ಮಂಟಪದೊಳಗೇ ನಿದ್ರೆಯು ಪೋಗೆ
ಸದ್ದು ಗೈಯದೇ ವಳಗೇ ॥
ಸಿದ್ಧಾದಿಂದಲಿ ವೋಲೆ ಸುದ್ಧಿಯ ರಚಿಸುತ್ತಾ
ಇದ್ದ ಆಯುಧಗಳೆಲ್ಲಾ ॥
ವಂದನು ಬಿಡದೇ ಕದ್ದು ಪೋದರು ಕಳ್ಳರೂ ॥2 ॥
ವಿಕ್ರಮ: ಅಯ್ಯ ಮಂತ್ರಿ ಇಂದ್ರ ಭವನದಂತೆ ಸೌಂದರ್ಯಮಾಗಿ ಅಂದ ಚಂದಗಳಿಂದ ಹೊಂದಿ ಇರುವ ಕುಂದಣದ ಮಣಿಮಂಚದ ಮೇಲೆ ಸುಂದರ ಚಂದ್ರಕಾಂತೆ ಸಮೇತನಾಗಿ ಹೊಂದಿ ನಿದ್ರೆಯನ್ನು ಪೋಗುತ್ತಿರುವಲ್ಲಿ ಬಂದಿದ್ದ ಚೋರರು ಬೇಳ್ವೆ ಚೆಲ್ಲಿದರಾದ ಕಾರಣ, ಮಂದಮತಿ ಕವಿದಿರುವ ಸಮಯದಲ್ಲಿ ಯನ್ನ ಕರ ಕಂಕಣಕ್ಕೆ ಓಲೆಯನ್ನು ಬಂಧಿಸಿ ಧನಕನಕ ವಜ್ರ ವೈಢೂರ್ಯ ಮುಂತಾದ ಚಂದ್ರಾಯುಧಗಳನ್ನು ಸಹ ಕದ್ದುಕೊಂಡು ಪೋದರಾದ ಕಾರಣ ಮುಂದಿನ ಯೋಚನೆಯನ್ನು ತಿಳಿಸೋ ಪ್ರಧಾನಿ – ವಾರುಧಿ ಸಮಾನಿ ॥
ದರುವು
ಇದಕ್ಕೊಂದುಪಾಯವನ್ನೂ ವಿಕ್ರಮ ಕೇಳೂ
ಮುದದಿಂದ ಪೇಳುವೆನೂ ॥
ಉದ್ಯಾನದೊಳು ಯಿರ್ಪ ಶುದ್ಧ ಕೇಸರಿಯನ್ನು
ಮರ್ದಿಸಿ ಬಂದವಗೇ ॥
ಸುದ್ಧಿಯ ಪೇಳೂ ಮುದ್ದುಕನ್ನೆಯ ಕೊಡುವೆನೂ ॥1 ॥
ಮಂತ್ರಿ: ಹೇ ರಾಜ ಶ್ರೇಷ್ಠನೇ ಈ ಕ್ಷಿತಿಯೊಳಗೆ ನಿಮ್ಮ ರತಿಕೇಳಿಯ ಮಂದಿರಕ್ಕೆ ಕನ್ನವನ್ನಿಟ್ಟು ಸಕಲ ಸೌಭಾಗ್ಯವನ್ನು ಅಪಹರಿಸಿಕೊಂಡು ಪೋದಂಥ ಚೋರರು ಶತೃತ್ವದಿಂದ ನಿಮ್ಮ ಪುತ್ರಿಯಳನ್ನು ಕದ್ದೊಯ್ದರೇ ಈ ಧಾತ್ರಿಯೊಳಗೆ ಅಪಕೀರ್ತಿಯು ಬರುವುದಾದ ಕಾರಣ ತಂತ್ರದಿಂದ ಈ ಕಾರ್ಯವನ್ನು ಜಯಿಸಬೇಕಲ್ಲದೇ ಈ ಕ್ಷಿತಿಯಲ್ಲಿ ಅತಿಶಯವಾಗಿ ತೋರುವ ಶೃಂಗಾರದ ವನಾಂತರದಲ್ಲಿ ಶತೃಮದ ಭಂಗವೆಂಬ ಕೇಸರಿಯನ್ನು ಕೊಂದು ಬಂದವರಿಗೆ ತನ್ನ ಪುತ್ರಿಯನ್ನು ಕೊಟ್ಟು ವಿವಾಹ ಗೈಯುತ್ತೇನೆಂದು ಆಜ್ಞೆಯನ್ನು ಮಾಡಬಹುದೈ ದೊರೆಯೇ-ಚಿಂತಿಪುದು ಸರಿಯೇ ॥
ವಿಕ್ರಮ: ಅಯ್ಯ ಕರಣೀಕರೇ ! ಕಳ್ಳತನಕ್ಕಾಗಿ ಬಂದಿದ್ದ ಚೋರರು ಯನ್ನಯ ಕರಕ್ಕೆ ವೋಲೆಯನ್ನು ಕಟ್ಟಿ ಇರುತ್ತಾರೆ. ಇಂತೊಪ್ಪ ಓಲೆಯಂ ಯನ್ನ ಮುಂದೆ ಸವಿಸ್ತಾರವಾಗಿ ಓದಿ ಪೇಳಬಹುದೈಯ್ಯ ಪಾಂಡಿತ್ಯರೇ ॥
ಚೂರ್ಣಿಕೆ–ಸೌರಾಷ್ಟ್ರ
ಶ್ರೀಮನ್ ಮಸ್ತಬಿರುದಂಭೋಳಿ ಸ್ಥಂಬಿತವಾದ ಪೃಥ್ವಿಯೊಳಗೆ ಶ್ರೀಕರವೆಂದೆನಿಸುವ ರತ್ನಾಪುರಿಯನ್ನು ಪಾಲಿಸುವ ವಜ್ರಮಕುಟ ನಮ್ಮಯ್ಯ ವನಿತೆಯರ ಕುಲಕ್ಕೆ ಶ್ರೀಮಂತ ಮಣಿಯೆಂದೆನಿಪ ಜನನೀ ಆಕೆಯ ಪೆಸರು ಕನಕ ಪುತ್ಥಳಿಯೂ ಸೋಮಶೇಖರ ಚಿತ್ರಶೇಖರ ಯೆಂದೆಂಬ ನಾಮವೊಪ್ಪುವುದೆಮಗೇ ಪ್ರೇಮದಿಂ ಮಂದಿರದಿ, ಬಾಳುವಿರೀ ನಿಮ್ಮ ಬಿರುದಂ ಕೇಳಿ ಬಹಳ ಕೋಪದಿಂದ ಬಂದು ಹೊಕ್ಕೆವು, ನಿಮ್ಮ ಮಂದಿರವ ನಾವು, ಅಡಿಗಳನು ಮುಟ್ಟಿ ಬಿರುದು ತೆಗೆಯಲು, ನಿಮಗೆ ಅಪಕೀರ್ತಿಯೆಂದೂ ಮಿಕ್ಕಾದ ಆಭರಣವೆಲ್ಲವನು ಕದ್ದೊಯ್ದೆವೀಗಾ ಈ ಧಾತ್ರಿಯೊಳು ನಾವು ನಿಮ್ಮ ವಲ್ಲಭೆಯ ಮುಟ್ಟಿದರೆಂಬ ಖತಿಬ್ಯಾಡ ನಿಮಗೆ ನಮ್ಮ ಮಾತೆಗಿಮ್ಮಡಿಯು ಕೇಳು ದೊರೆಯೇ ನಮ್ಮ ತಮ್ಮನಿಗೆ ನಿಮ್ಮ ಕುವರಿಯನು ಕೊಟ್ಟೂ ಬಹು ಹಿತದಿಂದ ಬಾಳುವುದು, ಬಹುಲೇಸು ನಿಮಗೇ ! ಕೊಡದಿರ್ದೊಡಾ ಲಲನೆಯನು ನಮ್ಮ ಪಟ್ಟಣಕೆ ಕರೆದೊಯ್ವೆವೆಂಬ ವಕ್ಕಣಿಯನೂ, ಕೇಳು ರಾಜ ವಿಕ್ರಮನೇ ॥
ವಿಕ್ರಮ: ಅಯ್ಯ ಪ್ರಧಾನಿ ! ನಮ್ಮ ಪಟ್ಟಣದ ಬಳಿಯಲ್ಲಿರುವ ಉದ್ಯಾನವನದಲ್ಲಿ ವಾಸವನ್ನು ಮಾಡುತ್ತಿರುವ ಶುದ್ಧವಾದ ಸಿಂಹವನ್ನು ಮರ್ದನ ಮಾಡಿ ಅದರ ಬಾಲವನ್ನು ಕೊಯ್ದು ತಂದವರಿಗೆ ನಮ್ಮ ಮುದ್ದು ನಂದನೆಯಳಾದ ರತ್ನಾದೇವಿಯನ್ನು ಕೊಟ್ಟು ವಿವಾಹ ಮಾಡುತ್ತೇನೆಂದು ವಿಕ್ರಮ ರಾಜರಿಂದ ಆಜ್ಞೆವುಂಟಾಯಿತೆಂದು ಶುದ್ಧವಾಗಿ ಡಂಗೂರವ ಹೊಡೆಸಿ ಪ್ರಸಿದ್ದಿಯನ್ನು ಪಡಿಸಿ ಬಾರೈ ಸಚಿವರಾ-ಸಿಂಧು ಗಂಭೀರಾ ॥
ಮಂತ್ರಿ: ಅದೇ ಪ್ರಕಾರ ಮಾಡುತ್ತೇನೈ ದೊರೆಯೇ – ಧೈರ್ಯದಲ್ಲಿ ಕೇಸರಿಯೇ ॥ಅಯ್ಯ ಸಾರಥೀ! ನಮ್ಮ ರಾಜರ ಆಜ್ಞೆಯನ್ನು ನಮ್ಮ ಪುರದಲ್ಲಿ ಡಂಗೂರ ಹೊಡೆಯಿಸೋ ಸೇವಕಾ-ಭಕ್ತಿಯಲ್ಲಿ ಭಾವಕ ॥
ಸಾರಥಿ: ಅಯ್ಯ ಪುರಜನರೇ ಕೇಳಿ ! ನಮ್ಮ ಪುರದ ಶೃಂಗಾರ ವನಾಂತರದಲ್ಲಿರುವ ಶತೃಮದ ಭಂಗವೆಂಬ ಸಿಂಹವನ್ನು ಕೊಂದು ಅದರ ಬಾಲವನ್ನು ಕೊಯ್ದು ತಂದವರಿಗೆ ತನ್ನ ಪುತ್ರಿ ರತ್ನಾದೇವಿಯನ್ನು ಕೊಟ್ಟು ವಿವಾಹ ಗೈಯುತ್ತೇನೆಂದು ನಮ್ಮ ರಾಜರ ಆಜ್ಞೆಯುಂಟಾಗಿರುವುದಾದ ಕಾರಣ ಧಾರಾದರೂ ಬಲಶಾಲಿಗಳಿದ್ದರೇ ಸಿಂಹವನ್ನು ಕೊಂದು ರಾಜಸುತೆಯಳನ್ನು ವಿವಾಹ ಮಾಡಿಕೊಳ್ಳಬಹುದೈ ಪುರಪ್ರಜೆಗಳಿರಾ ॥
(ಸೋದರರು ಉದ್ಯಾನವನಕ್ಕೆ ಬರುವಿಕೆ)
ಸೋಮಶೇಖರ: ಭಳಿರೇ ಕವಾಟ ಶಿಖಾಮಣಿ ! ನಾವು ಉದ್ಯಾನವನಕ್ಕೆ ಪೋಗಬೇಕಾದ ಕಾರಣ ಈವತ್ತಿನ ದಿನ ನಿಮ್ಮ ಪಟ್ಟಣದ ಬಳಿಯ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ದಿಗ್ಭಾಗಗಳ ಪೈಕಿ ಯಾವ ಭಾಗದ್ವಾರದಲ್ಲಿ ಪೋಗಬೇಕಪ್ಪಾ ಸಾರಥೀ ॥
ಸಾರಥಿ: ಹೇ ಸ್ವಾಮೀ ! ಈ ಪಟ್ಟಣದ ಪೂರ್ವಭಾಗಕ್ಕೆ ಸರಿಯಾಗಿ ಹೋದರೆ ಉದ್ಯಾನವನವು ಸಿಕ್ಕುವುದಯ್ಯ ಬುದ್ಧಿ – ಚೋರರ ಪ್ರಸಿದ್ಧಿ ॥
ಚಿತ್ರಶೇಖರ: ಭುಜಬಲ ಪರಾಕ್ರಮಶಾಲಿಯಾದ ಅಗ್ರಜನೇ ಕೇಳು ! ಕಡು ಸೌಂದರ್ಯದಿಂದ ರಾಜಿಸುವ ಶೃಂಗಾರ ಕರಮಾದ ಕಾಂತಾರ ಭೂಮಿಯೋಳ್ ಗಡ ಬಡಿಸಿ ಆರ್ಭಟಿಸಿ ಬರುವ ಸಿಂಹದ ಗರ್ಜನೆಗೆ ಸಡಗರದಿ ಭೀತಿಯುಂಟಾಗಿರುವುದಾದ ಕಾರಣ ಇದಕ್ಕೆ ಏನು ಮಾಡಬೇಕಪ್ಪಾ ಅಗ್ರಜ ವೀರಾ-ಬಲುಧೀರಾ ॥
ಸೋಮಶೇಖರ: ಅನುಜಾ ಚಿತ್ರಶೇಖರಾ ! ಮೂಢತನದಿಂದ ಇಂತೊಪ್ಪುವ ಮಾತನಾಡುತ್ತೀಯಾ. ಇಂತ್ತಾ ಶುನಕ ಮುಂಡೇದನ್ನು ಕಂಡು ಭಯಪಡದೆ ಮೃಡನ ಧ್ಯಾನವನ್ನು ಮಾಡಿ ಧೈರ್ಯಗುಂದದೆ ಇರುವಂತ್ತಾವನಾಗು. ನಾನು ಬಿಡದೆ ಅದರೊಡನೆ ಕಾದಾಡಿ ಅದನ್ನು ಕೆಡವುತ್ತೇನೆ. ನೋಡುವಂಥವನಾಗೋ ಚಿಣ್ಣಾ-ತಿಳಿಯಿತು ನಿನ್ನ ಬಣ್ಣಾ ॥
ಸಿಂಹವನ್ನು ಹೊಡೆಯುವ – ದರುವು
ನೋಡೋ ಪೊಡವಿಗಡರಿ ಬರುವುದೂ
ಕಡು ಜವದಿ ಸಿಂಹ
ಗಢನೆ ಘರ್ಜನೆಯಿಂದ ನೆಗೆವುದೂ ॥1 ॥
ಸಿಡಿಲು ಘರ್ಜನೆಯಂತೆ ಸಿಂಹವೂ
ಗಡಬಡಿಸಿ ಬೇಗಾ
ಪೊಡವಿ ಗಿರಿಗಳೆಲ್ಲಾ ಸಿಡಿದವೂ ॥2 ॥
ಕಿಡಿಗಳುದುರಿ ದವಡೆ ಕಡಿಯುತಾ
ಬಡಿಯುತ್ತ ಬಾಲ
ನಡೆದು ಮುಂದೆ ಪುಟವ ನೆಗೆಯುತಾ ॥3 ॥
ಕಡಿವೆಯಿದನು ಖಡ್ಗದಿಂದಲೀ
ಹಿಡಿ ಹಿಡಿರೊ ಬೇಗಾ
ತಡವು ಮಾಡದೆ ಗಢಣದಿಂದಲೀ ॥4 ॥
ಕಡಿದ ಗಾಯ ಕಡರಿ ಸಿಂಹವೂ
ಕಡು ಗಢಣದಿಂದಾ
ಅಡರಿ ನಭಕೆ ಬಿಡುತ ಪ್ರಾಣವೂ ॥5 ॥
ಜ್ಯೇಷ್ಠ ಬಳ್ಳಾಪುರದ ಶಿವನನೂ
ಇಷ್ಠಾದಿ ಭಜಿಸೀ
ಹೊಟ್ಟೆಯಿಂದ ಹೊರಟ ಮನುಜನೂ ॥6 ॥
(ಸಿಂಹದ ಗರ್ಭದಿಂದ ರಾಜಕುಮಾರ ಬರುವಿಕೆ)
ಭಾಗವತರು: ಈ ಪ್ರಕಾರವಾಗಿ ಸೋಮಶೇಖರನು ಸಿಂಹದೊಡನೆ ಕಾದಾಡಿ ಅದನ್ನು ಕೊಂದು ಹಾಕಲೂ ತಕ್ಷಣವೇ ಕೋಟಿ ಸೂರ್ಯ ತೇಜದಂತೆ ಪ್ರಕಾಶಿಸುವ ಗಂಧರ್ವಾಕಾರನಾದ ಒಬ್ಬ ರಾಜಕುಮಾರನು ಸಿಂಹದ ಗರ್ಭದಿಂದ ಹೊರ ಬರಲು ಅದಂ ಕಂಡು ಸೋಮಶೇಖರನು ಇಂತೆಂದನೈಯ್ಯ ಭಾಗವತರೇ॥
ಸೋಮಶೇಖರ: ಯಲಾ ! ಗರ್ಭ ಸಂಧಾನಿಯೇ ! ನೀ ಧಾರು? ಯಕ್ಷಕಿನ್ನರ ಕಿಂಪುರುಷನೋ ನೀ ಧಾರು? ನಿನ್ನಯ ಪಟ್ಟಣ ಧಾವುದು? ನಿನ್ನಯ ಜನನೀ ಜನಕರ ಪೆಸರೇನು? ಏನು ನಿಮಿತ್ಯಾರ್ಥಮಾಗಿ ಈ ಕೇಸರಿಯ ಗರ್ಭದಲ್ಲಿ ವಾಸವಾಗಿದ್ದೆ, ಪೇಳುವಂಥವನಾಗೋ ಸುಂದರಾಂಗ॥
ಸಿಂಹದ ಗರ್ಭದಿಂದ ಬಂದ ರಾಜಕುಮಾರನ ಮಾತು
ಭುಜಬಲ ಪರಾಕ್ರಮ ಶಾಲಿಗಳಾದ ಸೋಮಶೇಖರ ಚಿತ್ರಶೇಖರರೇ ಕೇಳಿ ! ಕಳಿಂಗ ದೇಶಾಧಿಪತಿಯಾದ ಕುಮಾರನೆಂದೆನಿಸಿ ಒಂದಾನೊಂದು ಕಾಲದೋಳ್ ಚಂದವಾದ ಮೃಗಬೇಟೆಯನ್ನಾಡಲು ನಂದನ ವನವಂ ಪ್ರವೇಶಿಸಿ ಒಂದು ಹರಿಣವಂ ಕಂಡು ಬೆಂಬತ್ತಿ ಕೊಂದ ಕಾರಣ ಅಲ್ಲಿದ್ದ ಯತಿ ಮೌನಿಯು ಕಂಡು ಪ್ರೇಮದಿಂ ಸಾಕಿದ ಕಂದನಂ ಕೊಂದೆಯೆಂದು ಕಡು ಕೋಪದಿಂದ ಸಿಂಹವಾಗಿ ಪುಟ್ಟುವುದೆಂದು ಶಾಪವಂ ಕೊಡಲು ಈ ಶಾಪವು ಎಂದಿಗೆ ಪೋಗುವುದೆಂದು ಕೇಳಿದ ಕಾರಣ ಸೋಮಶೇಖರರಿಂದ ಸಿಂಹವನ್ನು ಕೊಂದ ಕಾಲಕ್ಕೆ ಈ ಶಾಪ ಪರಿಹಾರವಾಗುವುದೆಂದು ಹೇಳಿದ ಕಾರಣ ನಿಮ್ಮ ಚರಣ ದರುಶನದಿಂದ ನಾನು ಧನ್ಯನಾದೆನು. ಇನ್ನು ನಮ್ಮ ಪಟ್ಟಣಕ್ಕೆ ಪೋಗಿ ಬರುತ್ತೇನೆ. ನಿಮಗೆ ವಂದನೆಗಳೈ ರಾಜಕುಮಾರರೇ॥
ಸೋಮಶೇಖರ: ಭಲಾ ! ತಮ್ಮನಾದ ಚಿತ್ರಶೇಖರನೇ ಕೇಳು ! ಇಗೋ ಈ ಕ್ರೂರ ಸಿಂಹವನ್ನು ಕೊಂದು ಇರುತ್ತೇನೆ. ಇದರ ಕುರುಚು ಬಾಲವನ್ನು ಕೊಯ್ದುಕೊಂಡು ಬಾರೈ ಅನುಜಾ – ಪುತ್ಥಳಿಯ ತನುಜಾ॥
ಚಿತ್ರಶೇಖರ: ಭಲಾ ! ಅಣ್ಣಾ, ಅಗ್ರಜಭವಾ ! ಅತಿ ತೀವ್ರದಿಂದ ಕೊಯ್ದುಕೊಂಡು ಬರುತ್ತೇನಲ್ಲದೇ ಈ ವನ ಮಧ್ಯದಲ್ಲಿರುವ ಬನ್ನಿ ಮಾಂಕಾಳಿಯ ಆಲಯಕ್ಕೆ ಪೋಗಿ ಆ ದೇವಿಯನ್ನು ಪೂಜಿಸಿ ನಮ್ಮ ಇಷ್ಠಾರ್ಥವನ್ನು ಬೇಡುವುದಕ್ಕೆ ಹೋಗೋಣ ಬಾರೈ ಅಗ್ರಜಾ ॥
(ಬನ್ನಿ ಮಾಂಕಾಳಿಯ ಸ್ತೋತ್ರ)
ದರುವು
ಭದ್ರಕಾಳಿ ಕ್ಷುದ್ರ ವೈರಿ ರುದ್ರಮಂಗಳೇ
ರೌದ್ರಮುಖಿಯೇ ರುದ್ರನರಸೀ ಮುದ್ದು ಮಂಗಳೇ ॥1 ॥
ಚಂಡಿ ಚಾಮುಂಡೇಶ್ವರಿಯೇ ಮಂಡಲಾಗ್ರಣೀ
ರುಂಡಮಾಲೆ ದಂಡವು ಕೋ ದಂಡ ಗುಣಮಣೀ ॥2 ॥
ರಕ್ತಬೀಜ ಅಸುರ ರಕ್ತ ಭಕ್ತಮಾಲೆಯೇ
ಶಕ್ತಿ ಮಾರಿ ಶೌರಿ ಯೆಮಗೇ ಮುಕ್ತಿಗಳ ನೀಯೇ ॥3 ॥
ಪೊಡವಿ ಜ್ಯೇಷ್ಠ ಬಳ್ಳಾಪುರದ ಮೃಡನ ರಾಣಿಯೇ
ಬಿಡದೆ ನಿಮ್ಮ ಭಜನೆ ಮಾಡಿ ಅಡಿಗೆ ಯೆರಗುವೇ ॥4 ॥
ಮಂಗಳಾರತಿ॥ಅಟತಾಳ
ಶ್ರೀ ಅಂಬಿಕಾದೇವಿ ಜಯ ಮಂಗಳಂ ಅಂಬಾ
ಶ್ರೀ ಅಂಬಿಕಾದೇವಿ ಜಯ ಮಂಗಳಂ ॥ಪ ॥
ಶಂಭುವಿನ ರಾಣಿ, ನಿಮಗೆ ಶುಭಮಂಗಳಂ
ಅಂಬಾ ಶ್ರೀ ಅಂಬಿಕಾ ದೇವಿ, ಜಯ ಮಂಗಳಂ ॥1 ॥
ಶುಂಭ ದೈತ್ಯರ ಸಂಭ್ರಮದಿ ಕೊಂದು
ಶಾಂಭವಿಯೆಂಬ ನಾಮವೊಂದೆ ಬಿಂಬ ಮಂಗಳೇ ॥ಅಂಬಾ ॥2 ॥
ಮಂಗಳ ತುಂಗ ಧವ ಳಾಂಗ ಬಳ್ಳಾಪುರೀ
ಸಂಗಮೇಶನರ್ಧಾಂಗಿನಿಗೆ ಮಂಗಳಂ ॥3 ॥
ಅಂಬಾ ಶ್ರೀ ಅಂಬಿಕಾ ದೇವಿ ॥
ಸೋಮಶೇಖರ: ಅಪ್ಪಾ ಅನುಜಾ, ಇನ್ನು ನಮ್ಮ ಆಸ್ಥಾನ ಮಂದಿರಕ್ಕೆ ಪೋಗೋಣ ಬಾರೈ ಅನುಜಾ-ಪುರ ವೈರಿಯ ತನುಜಾ ॥
ಚಿತ್ರಶೇಖರ: ಅಣ್ಣಾ ! ಅಗ್ರಜ ಭವಾ, ಅದೇ ಪ್ರಕಾರ ಪೋಗೋಣ ನಡಿಯಪ್ಪಾ ಅಣ್ಣಾ-ಪುತ್ಥಳಿಯ ಬಣ್ಣಾ॥
(ಅಗಸಮಾರ ಬರುವಿಕೆ)
ತೆರೆ–ದರುವು
ಓಡಿ ಬಂದನೂ ರಜಕಾ ಓಡಿ ಬಂದನೂ ॥ಪ ॥
ವಡನೆ ಮಲಿನ ಬಟ್ಟೆ ಹೊರಲು
ಕಡಬವನ್ನು ಹುಡುಕುತಾಗ ॥
ಗೋಡೆಯೆಡೆಗೆ ಬಂದು ನೋಡಿ
ಹಿಡಿದು ಅದನು ಎಳೆದು ತರಲೂ ॥1 ॥
ಜುಟ್ಟು ಹಿಡಿದು ಎಳೆದು ತಂದು
ಅಟ್ಟಿಯೊಳಗೆ ನಿಲಿಸಿ ಕಟ್ಟಿ ॥
ಬಟ್ಟೆ ಗಂಟು ಹೊರಿಸಿ ಬೇಗಾ
ತಟ್ಟನೆಂದು ಅಟ್ಟಿ ಅದನೂ ॥2 ॥
ದೂರದಿಂದ ಬರುತ ಕಂಡ
ಕ್ರೂರ ಸಿಂಹ ಬಿದ್ದಿರುವುದಾ ॥
ಹಾರಿ ಬೆದರಿ ಧರೆಗೆ ಬಿದ್ದು
ಭೋರನೆಂದು ಅಳುತ ಯೆದ್ದು ॥3 ॥
ದರುವು
ಅಪ್ಪಪ್ಪ ಸಾಯುತ್ತಿದ್ದೆ ಅಮ್ಮಮ್ಮ ಸಾಯುತಿದ್ದೆ
ಅವ್ವವ್ವ ಸಿಕ್ಕುತಿದ್ದೆನೇ ॥ಪ ॥
ಅಯ್ಯೋ ಅಯ್ಯೋ ಸಿಂಹದ ಬಾಯಿಗೆ ನಾನು
ಅಯ್ಯೋ ಅಯ್ಯೋ ಅನ್ಯಾಯವಾಗಿ ನಾನೂ ॥1 ॥
ಮಕ್ಕಳೊಂದಿಗ ನಾನು ಚಿಕ್ಕಪ್ರಾಯದ ಹುಡುಗಾ
ಲೆಕ್ಕವಿಲ್ಲದ ರೊಕ್ಕಾ ದಕ್ಕಾದೆ ಸಿಕ್ಕುತಿದ್ದೆನೇ ॥2 ॥
ಅಯ್ಯಯ್ಯೋ. ಅಪ್ಪಪ್ಪ, ಅಮ್ಮಮ್ಮ ಅವ್ವವ್ವಾ ॥
ಅವುದೌದು ಸಿಕ್ಕುತಿದ್ದೆನೇ ಅಯ್ಯಯ್ಯೋ ॥2 ॥
ನನ್ನಂತಾ ಕುಂಟಾನು ನೆಂಟರೊಂದಿಗೆ ಸಹಾ
ಕುಂಟ ಕತ್ತೆಯ ಬಿಟ್ಟು ಅಮ್ಮಮ್ಮಾ ॥3 ॥
ಮಾರ: ಓಹೋ ಸೆಟ್ಟಿಗನು ಓಡೋತದಲ್ಲಾ, ವುಶ್ಯೋ, ವುಶ್ಯೋ, ಚೋ, ಚೋ, ಅಯ್ಯಯ್ಯಪ್ಪ ಅನ್ಯಾಯವಾಗಿ ನನ್ನ ಪ್ರಾಣ ಹೋತಿತ್ತಲ್ಲಪ್ಪ, ಮೊನ್ನೆ ಮದುವೆಯಾದೆನಲ್ಲಪ್ಪಾ, ಇಕ್ಕಳರಾಗಿ ಒಕ್ಕಳ ಅವರೇಕಾಳು ಖರ್ಚು ಮಾಡಿ ಯಿನ್ನ ಒಂದೊಂದರೊಂದು ಕಾಣಲಿಲ್ಲ. ಅನ್ಯಾಯವಾಗಿ ಇದರ ಬಾಯಿಗೆ ಸಿಕ್ಕಿದ್ದೆನಲ್ಲಾ. ಮತ್ತೆ ನನ್ನ ಗುಂಡಿಗೆ ಹೊಡಕೊಳತೈತೆ. ವಂದ ರೋಟು ತಾಳು ಹಂಗಾದರೆ ಮರ ಹತ್ತಿ ನಾ ನೋಡ್ತೀನಿ. ಪರಾಣ ಹೋಗೈತೋ ಇಲ್ಲೊ, ಏನಾದರೂ ಆಗಲಿ ಜಳವೆ ತಕ್ಕೊಂಡು ಹೆಟ್ಟಿ ನೋಡ್ತೀನಿ. ಚೋ ಚೋ ಚೋ ಅಯ್ಯಯ್ಯೋ ಎದ್ದು ಬತ್ತಾದಲ್ಲಪ್ಪಾ ಇಲ್ಲಾ ಕಾಣಪ್ಪ. ಉಸುರಾಡೋದಿಲ್ಲಾ. ಸತ್ತು ಬಿದ್ದಂಗೈತೇ. ನಿನ್ನೆ ದಿವಸ ವಿಕ್ರಮರಾಯನು ಟಮ್ಕಿ ವೊಡಿಸಿದ್ದಾ ಯಲೋ ಭಾಗವತಣ್ಣಾ, ಇದರ ಬಾಲವೇನೋ ತಿಂದಾಕೈತೆ. ಇದರ ನಾಲಿಗೆ ತಕ್ಕೊಂಡ್ಹೋಗಿ ಕೊಟ್ಟು, ದೊರೆ ಮಗಳನ್ನು ಮದುವೆ ಆಗಿ ಬರ್ತೀನಿ, ಇನ್ನು ಮೇಲೆ ನನ್ನ ಧಿಮಾಕಾದ್ರು ನೋಡು ॥
(ಅಗಸ ವಿಕ್ರಮನ ಬಳಿಗೆ ಬರುವಿಕೆ)
ದರುವು
ಪೊಡವಿಪತಿಯೇ ಯನ್ನಾ ನುಡಿಯ ಲಾಲಿಸಿ ಕೇಳು
ಕಡಿದೆನು ಸಿಂಹವನೂ ಕೇಳ್ ನಾನು ॥1 ॥
ತಂದೆನು ಗುರುತನೂ ನಂದನೆಯಳ ಯನ
ಗಿಂದು ಮದುವೆ ಮಾಡೋ ನೀ ನೋಡೋ ॥2 ॥
ಅಗಸ: ಪೊಡವಿಪತಿಯಾದ ವಿಕ್ರಮರಾಯನೇ ಕೇಳು. ನೀವು ಡಂಗೂರ ಹೊಯ್ಸಿದ ಕಾರಣ ಅಡವಿ ಉದ್ಯಾನವನಕ್ಕೆ ಪೋಗಿ ಗಡಬಡಿಸಿ ಬಂದ ಸಿಂಹವನ್ನು ಕೊಡಲಿ ಆಯುಧಗಳಿಂದ ಹೊಡ ವಡೆದು ಅದರ ನಾಲಿಗೆಯ ಗುರುತನ್ನು ತಂದು ಇರುತ್ತೇನೆ, ಅಲ್ಲದೆ ನೀವು ನುಡಿದ ವಚನದ ಪ್ರಕಾರ ಯನಗೆ ನಿಮ್ಮಡದಿಯು ಹಡೆದಿರುವ ಸುತೆಯಳನ್ನು ಕೊಟ್ಟು ಮದುವೆ ಮಾಡಿಸುವಂಥವನಾಗೋ ಭೂಪ-ಕೀರ್ತಿ ಕಲಾಪ ॥
ವಿಕ್ರಮ: ಅಯ್ಯ ಸಾರಥೀ ! ಅಡವಿ ಉದ್ಯಾನವನಕ್ಕೆ ಹೋಗಿ ಅಲ್ಲಿ ಬಿದ್ದಿರುವ ಸಿಂಹವನ್ನು ನೋಡಿಕೊಂಡು ಬಾರೈಯ್ಯ ಸಾರಥೀ-ಸಂಧಾನಮತಿ ॥
ಸಾರಥೀ: ಹೇ ಸ್ವಾಮೀ ರಾಜೋತ್ತಮನೇ ತಮ್ಮ ಆಜ್ಞೆ ಪ್ರಕಾರ ಪೋಗಿ ನೋಡುವಲ್ಲಿ ಬಿದ್ದಿರುವ ಸಿಂಹವನ್ನು ಹದ್ದುಕಾಗೆಗಳು ಕೀಳುತ್ತಾ ಇದ್ದವೈಯ್ಯ ಭೂಪ-ಕೀರ್ತಿ ಕಲಾಪ ॥
ವಿಕ್ರಮ: ಅಯ್ಯ ಪ್ರಧಾನಿ ! ಈ ಜಗದೊಳಗೆ ಯನ್ನ ಮುದ್ದು ನಂದನೆಯಳಾದ ರತ್ನಾದೇವಿಯನ್ನು ರಾಜಾಧಿರಾಜರು ಬಂದು ಕೇಳುವಲ್ಲಿ ಮೆಚ್ಚದೇ ಇಚ್ಛೆಯಿಂದಿರಲೂ ಈ ರಜಕನಿಗೆ ಕೊಡಬೇಕೆಂದು ಅಜನು ಬರೆದಿರುವನಾದ ಕಾರಣ, ರಾಜಿಯಿಂದ ನಾನು ಕೊಟ್ಟ ವಚನಕ್ಕೆ ತಪ್ಪದೇ ಆ ಮಡಿವಾಳನಿಗೆ ಕೊಟ್ಟು ವಿವಾಹವನ್ನು ಗೈಯುತ್ತೇನೆ, ನೀನು ಕರಣೀಕರನ್ನು ಕರೆಸಿ ಶುಭಲಗ್ನಾದಿಗಳನ್ನು ನೋಡಿಸಿ ಲಗ್ನಪತ್ರಿಕೆಯನ್ನು ಬರೆಯಿಸೈಯ್ಯ ಮಂತ್ರೀ – ಕಾರ್ಯೇಷು ತಂತ್ರೀ ॥
ಕಾರ್ಯಪರ: ಹೇ ರಾಜ ತಮ್ಮ ಆಜ್ಞೆ ಪ್ರಕಾರ ಲಗ್ನಪತ್ರಿಕೆಯನ್ನು ಬರೆಸಲುದ್ಯುಕ್ತಮಾಗಿ ಕರಣೀಕರನ್ನು ಕರೆಸಿ ಶುಭಕರಮಾದ ಶಕುನಗಳನ್ನು ನೋಡುವುದಕ್ಕೆ ಅರಮನೆಯಿಂದ ಹೊರಡಲು ಮಾರ್ಜಾಲಗಳು ಕಾದಾಡಿದವು. ವಾಯಸಗಳು ಕೂಗಿದವು, ಕಟ್ಟಿಗೆ ಹೊರೆ ಮುಂತಾದ ಬಾಂಡಗಳು ಎದುರಾದವು. ಇಂತೊಪ್ಪ ದುಃಶಕುನಗಳು ಆಗಿರುವುದಾದ ಕಾರಣ ಈ ದಿನವನ್ನು ಬಿಟ್ಟು ನಾಳೆ ಪ್ರಾತಃಕಾಲಕ್ಕೆ ಸರಿಯಾಗಿ ನೋಡಿಸುತ್ತೇನೆ. ತಾವು ಅರಮನೆಗೆ ದಯಮಾಡಿಸಬಹುದೈ ರಾಜ-ರವಿಸಮತೇಜ ॥
ವಿಕ್ರಮ: ಅದೇ ಪ್ರಕಾರ ಹೋಗೋಣ ನಡಿಯೈಯ್ಯ ಪ್ರಧಾನಿ-ವಾರುಧಿ ಸಮಾನಿ ॥
ಅಗಸ: ಯಲಾ ಸೇವಕಾ ! ಈ ದಿವಸ ಮೊದಲಾಗಿ ಯಾರಾದರೂ ನನ್ನನ್ನು ಅಗಸಮಾರನೆಂದು ಕರೆಯಕೂಡದು. ಧೀರ ವಿಕ್ರಮನ ಅಳಿಯ ಶೂರನೆಂದು ಕರೆಯಬೇಕು. ಇದಕ್ಕೆ ತಪ್ಪಿ ನಡೆದರೆ ಇಪ್ಪತ್ತು ರೂಪಾಯಿ ಸಜಾ. ಆರು ತಿಂಗಳು ಜುಲುಮಾನಿ ಆಗತದೆ ತಿಳಿಯಿತೋ ನಾಳೆ ಮುಹೂರ್ತಕಾಲಕ್ಕೆ ಸರಿಯಾಗಿ ನನ್ನ ಬಂಧು ಜನಗಳೆಲ್ಲರೂ ಬರುತ್ತಾರೆ. ಆದ್ದರಿಂದ ಈ ಊರು ಒಕ್ಕಲು ಬಟ್ಟೆಯೆಲ್ಲಾ ನನ್ನ ಮನೆಯಲ್ಲಿ ಇದ್ದಾವೆ ನೀನು ಜಾಗ್ರತೆಯಿಂದ ಪೋಗಿ ಸೀರೆ ಹಚ್ಚಡಗಳನ್ನು ತೆಗೆದುಕೊಂಡು ಬಂದು ಈ ಅರಮನೆಯ ಚಪ್ಪರವನ್ನು ಶೃಂಗಾರ ಮಾಡ್ತಾ ಇದ್ದಾರೆ. ಬರುವ ಬಂಧು ಜನಗಳಿಗೆ ಬಿಡದಿ ಮನೆ ಮಾಡುವುದಕ್ಕಾಗಿ ನಾನು ಪೋಗಿ ಬರುತ್ತೇನೈಯ್ಯ ಚಾರ ತಿಳಿಯಿತೇ ವಿಚಾರ ॥
ಸಾರಥಿ: ಅದೇ ಪ್ರಕಾರ ಪೋಗಿ ಬರುವುದಯ್ಯ ಅಗಸ ಮಾರಯ್ಯ ॥
Leave A Comment