(ಅಗಸಮಾರನ ನೆಂಟರು ಬರುವಿಕೆ)

ದರುವು

ಬಂದರಣ್ಣಾ ! ಬಂಧು ಬಾಂಧವ  ರಿಂದು ನೋಡಿರಿ
ಮುಂದೆ ರಜಕಾ  ತೊರೆದರೆಲ್ಲ  ಬಂದರೀಪರೀ ॥ಪ ॥
ಕುಂಟು ಕತ್ತೇ  ತಿಮ್ಮ ನಾನು  ನೆಂಟನಲ್ಲವೇ ॥
ಬಾನೆ ಹೊಟ್ಟೆ, ಬಸವ ನಾನು  ಭಾಗ್ಯನಲ್ಲವೇ                           ॥1 ॥

ಮೀನು ಮೀಸೆ  ದಾಸ ನಾನು  ಭಾಗ್ಯನಲ್ಲವೇ
ದೊಡ್ಡ ಕೊಡಲಿ  ಯಡ್ಡ ನಾನು  ದೊಡ್ಡನಲ್ಲವೇ                          ॥2 ॥

ಮೊಂಡು ಮೋರೆ  ಮಾರ ನಾನು  ಮಾವನಲ್ಲವೇ
ಗಂಟು ಮೂಗಿನ  ಹನುಮ ನಾನು  ನೆಂಟನಲ್ಲವೇ                      ॥3 ॥

ಸೋತ ಕೈ ಚಿ  ಕಲಕಿ ನಾನು  ಸೊಸೆಯಳಲ್ಲವೇ
ಬಾಳು ಕೀಳೋ  ಬಂಜೆ ನಾನು  ಭಾಗ್ಯಳಲ್ಲವೇ                        ॥4 ॥

ಮೂಳ ಕಿವಿಯ  ಮುತ್ತಿ ನಾನು  ಮುಖ್ಯಳಲ್ಲವೇ
ಅಕ್ಕ ತಂಗೇರ್  ಬಂದೆವೀಗಾ  ಅಕ್ಕರಿಂದಲೀ                           ॥5 ॥

ದೊಡ್ಡ ದೊಡ್ಡೋರ್  ಬಂದರೀಗ  ಕಡಬ ನೇರುತಾ
ವಡ ಬೋಯಿ  ಜನಗಳೆಲ್ಲಾ  ಬಿಡದಿ ಸೇರುತ್ತಾ                         ॥6 ॥

ನೆಂಟರು: ಬಾರಲಾ -ಮಾವಯ್ಯ ವೋವೋ ನೀನ್ಯಾವಾಗ ಬಂದೆಲಾ ಭಾವ, ಅಕ್ಕ ಮಕ್ಕಳು ಯಾಕಲಾ ಬರಲಿಲ್ಲಾ. ನೀನೂ ಬಂದೆಲಾ ಮಾರಣ್ಣ. ಏನಣ್ಣಾ ನಿಮ್ಮೂರ ಸಮಾಚಾರ. ಅದಂಗಿರಲಿ. ಲೋ ಬಿರಿಬಿರಿನ ಬಾರೋ. ಡೊಲಾವು ನಡಿರಪ್ಪಾ ವೊತ್ತಾಯ್ತು ॥

ವಿಕ್ರಮ: ಅಯ್ಯ ಪ್ರಧಾನಿ ! ಯನ್ನ ಸುಂದರ ಮಂದಹಾಸ ಇಂದುವಂದನೆಯಾದ ಚಂದಿರ ಚಕೋರನಂತೆಸೆವ ಚಂದ್ರಮತೀ ಕಾಂತೆಯಳನ್ನು ಅಂದವಾದ ಈ ಸಭಾಸ್ಥಾನಕ್ಕೆ ಚಂದದಿಂದ ಕರೆಸೈಯ್ಯ ಪ್ರಧಾನಿ-ವಾರುಧಿ ಸಮಾನಿ ॥

ಕಾರ್ಯಪರ: ಅದೇ ಪ್ರಕಾರ ಕರೆಸುತ್ತೇನೈ ಅರಸೇ – ಕೇಳೆನ್ನ ಭಾಷೆ ॥

 

(ಚಂದ್ರಮತೀದೇವಿ ಮತ್ತು ರತ್ನಾದೇವಿ ಬರುವಿಕೆ)

ದ್ವಿಪದೆಕಾಂಭೋದಿ ರಾಗ

ಶ್ರೀ ದುರ್ಗಿಪತಿಯಾದ ಚಂದ್ರಶೇಖರನ ಚಂದದಿಂ ಭಜಿಸೀ
ಮಾಧವನ ಮನದೊಳಗೆ  ಮಾನಿನಿಯು ತಾ ನೆನೆದೂ ॥
ಮಂದಹಾಸಗಳಿಂದ ಸುಂದರಿಯು ತಾನೆದ್ದು ಚಂದದಲೀ
ಕಂದರ್ಪ ಸತಿಯಂತೆಸೆವಾ  ಸುಂದರಾಂಗನೆಯರೊಂದಾಗೀ ॥
ಪರಮಾನಂದದೋಳ್ ಬಂದು  ಮುಖಮಜ್ಜನವ ಮಾಡೀ
ವರ ಚಂದ್ರಗಾವಿಯ ಸೀರೆ  ಚಂದದಿಂದಲಿ ಉಟ್ಟೂ ॥
ಇಂದ್ರ ನೀಲದ ರವಿಕೆ  ಇಂದುಮುಖಿಯು ತಾ ತೊಟ್ಟು
ಚಂದವೆಂದೆನಿಪ ವೊಡ್ಯಾಣವಳವಡಿಸಿ ಸಡಗರದೀ ॥
ಮೆರೆವ ಕಸ್ತೂರಿಯ ಬೊಟ್ಟು  ವಿನಯದಿಂದಿಟ್ಟೂ
ಸರಸಿಜಾಕ್ಷಿಯು ಸಕಲ ದಿವ್ಯಾಭರಣಗಳ ಧರಿಸೀ ॥
ಗಂಧ ಕಸ್ತೂರಿ ಪುನಗು ಗಮಕದಿಂದಲಿ ಪೂಸೀ
ಕರ್ಪೂರ ವೀಳ್ಯವನು ಕರದೊಳಗೆ ಪಿಡಿದೂ ॥
ಧರಣಿಪ ವಿಕ್ರಮನ ಸತಿ  ಚಂದ್ರಮತೀ ದೇವಿಯೂ
ವರಸುತೆ ರತ್ನಾದೇವಿಯಂ ವೊಡಗೂಡಿ ಸಂಭ್ರಮದೀ ॥
ಪೊಡವಿ ಜ್ಯೇಷ್ಠ ಬಳ್ಳಾಪುರ ವಾಸನಂ ನೆನೆದೂ
ಸಡಗರದಿ ತಾ ಬಂದೂ ತೆರೆಯೊಳಗೆ ನಿಂದೂ ॥

ದರುವು

ಹರಿಣಾಂಕಾ ಮುಖಿಯೇ ಪ್ರಾಣಾ  ನಾಥನಾ ಬಳಿಗೆ ಬೇಗಾ
ಹರಿಣಾಂಕಾ ಶಂಕರನಾ  ಸ್ಮರಿಸುತ್ತಾ ಬಾರೇ ನೀರೇ                 ॥1 ॥

ಹರಿಣಾಕಂ ಗಾಳೆ ನಿನಗೇ  ಪರಿಣಾಮ ವಾರ್ತೆಯನ್ನು
ಪರಿ ಪರಿಯ ವಿಧಗಳಿಂದ  ಅರುಹುವೆನೂ ಬಾರೇ ಬೇಗಾ            ॥2 ॥

ಕಾಂತನಾ ಮಣಿಯೇ ಈಗಾ  ಸಂತೋಷಪಡುತ ಬೇಗಾ
ಕಾಂತನಾ ಸನ್ನಿಧಿಗೇ  ಎಂತು ಪೋಗುವ ಬಾರೇ                       ॥3 ॥

ಚಿಂತಿಪುದು ಯಾಕೆ ಜ್ಯೇಷ್ಠ  ಬಳ್ಳಾಪುರವ ಪೊರೆಯುತಿರುವ
ಕಂತೂವೈರಿಯು ನಮ್ಮಾ  ಸಂತಸಾದಿಂದಲಿ ಪೊರೆವಾ             ॥4 ॥

ಚಂದ್ರಮತೀದೇವಿ: ಅಪ್ಪಾ ! ಸಾರಥೀ ಹೀಗೆ ಬಾ. ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಅಪ್ಪಾ ಸಾರಥೀ ಈ ಧಾರುಣಿಯೊಳು ಪರಮೈಶ್ವರ‌್ಯ ಸೌಭಾಗ್ಯ ಸಂಪದದಿ ಮೆರೆಯುವ ಸುರರಾಜನಗರಕ್ಕೆ ಮಿಗಿಲೇಳು ಕಳೆಯಂತೆ ರಾಜಿಸುವ ನೀಲಾವತಿಯ ಪಟ್ಟಣಕ್ಕೆ ಕಾರಣಕರ್ತರಾದ ಭುಜಬಲ ಪರಾಕ್ರಮ ಶೌರಿ ವಿಕ್ರಮ ರಾಜರ ಚಿತ್ತಕ್ಕೆ ಒಪ್ಪುವಾ, ಕುಲಾಂಗನೆಯೆಂದೆನಿಸಿಕೊಂಡಿರುವ ಸುಂದರವತಿಯಳಾದ ಚಂದ್ರಮತೀ ದೇವಿಯೆಂದು ತಿಳಿಯಪ್ಪಾ ದೂತ-ಲಾಲಿಸೆನ್ನ ಮಾತ ॥

ಅಪ್ಪಾ  ದೂತ ಶಿಖಾಮಣಿ  ಗಿರಿಜಾರಮಣನಾದ ಶಂಕರನು ಕರುಣ ಕಟಾಕ್ಷದಿಂದ ರಕ್ಷಿಸುವನಾದ ಕಾರಣ ಭುಜಬಲ ಪರಾಕ್ರಮ ಶೌರಿ ಭೂರಮಣನಾದ ವೀರ ವಿಕ್ರಮರಾಯರು ಕರೆಸಿದ ಕಾರಣ ಬಾಹೋಣವಾಯಿತು. ಅತಿಜಾಗ್ರತೆಯಿಂದ ಚರಣ ದರುಶನ ಮಾಡಿಸಪ್ಪಾ ಚಾರ – ಇದೇ ನಮ್ಮ ವಿಚಾರ ॥

ರತ್ನಾದೇವಿ: ಅಪ್ಪಾ! ಭಟಸಾರಥಿಯೇ  ಹೀಗೆ ಬಾ. ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಅಣ್ಣಯ್ಯ ದೂತ ಶಿಖಾಮಣಿ. ಈ ಕುಂಭಿಣಿಯೊಳು ಶಂಭುವಿನ ಕೃಪೆಯಿಂದ ಸಂಭ್ರಮದೀ, ಜಂಭಾರಿಯ ನಗರಕ್ಕೆ ಇಮ್ಮಿಗಿಲಾಗಿ ಲಂಭಿಸುವ ಬ್ರಹ್ಮಾಂಡ ನವರತ್ನಗಳಿಂದ ಮೆರೆವ ಕುಂಭಿಣಿ ನೀಲಾವತಿಯ ಸಂಭ್ರಮದಿಂ ಪರಿಪಾಲಿಸುವ ತುಂಬುರ ನಾರದ ಋಷಿ ಸಿದ್ಧ ಸಾಧ್ಯರಿಂದೊಡಗೂಡಿ ಪರಿವಾರ ಸುಭಟರಿಂದೊಪ್ಪುವಾ ಭುಜಬಲ ಪರಾಕ್ರಮ ಶೌರಿ ವಿಕ್ರಮನರ್ಧಾಂಗಿನಿ ಸುಂದರವತಿಯಳಾದ ಚಂದ್ರಮತೀ ದೇವಿಯ ಗರ್ಭದೋಳ್ ಉದ್ಭವಿಸಿದಂಥ ರತ್ನಾದೇವಿಯೆಂದು ತಿಳಿಯಪ್ಪಾ ಚಾರ-ಶರಧಿ ಗಂಭೀರಾ ॥

ಅಪ್ಪಾ ಸಾರಥೀ ಈ ಸಭಾ ಸ್ಥಾನಕ್ಕೆ ನಾನು ಬಂದ ಕಾರಣವೇನೆಂದರೇ ಯನ್ನ ಮಾತೆಯವರನ್ನು ಕಾಣುವ ಉದ್ಧಿಶ್ಯ ಬಾಹೋಣವಾಯ್ತು. ಧಾವಲ್ಲಿರುವರೋ ತೋರಿಸೋ ಸಾರಥಿ-ಸಂಧಾನಮತೀ॥

ನಮೋನ್ನಮೋ ಹೇ ಜನನೀ – ಅಂಬುಜವರ್ನನಿ ॥

ಚಂದ್ರಮತಿ: ಸೌಮಂಗಲ್ಯಾಭಿವೃದ್ಧಿರಸ್ತು ಬಾರಮ್ಮಾ ಪುತ್ರೀ – ಸೌಂದರ‌್ಯಗಾತ್ರಿ ॥

ರತ್ನಾದೇವಿ: ಇಷ್ಠು ಸಡಗರದಿಂದ ಆಸ್ಥಾನಕ್ಕೆ ಆಗಮಿಸಿದ ಕಾರ‌್ಯಾರ್ಥವೇನಮ್ಮಾ ಮಾತೆ-ಭುವನ ಸಂಪ್ರೀತೆ॥

ಚಂದ್ರಮತಿ: ನಿನ್ನ ಜನಕನು ಕರೆಸಿದ ಕಾರಣ ಬಂದು ಇರುತ್ತೇನೆ ಅವರಿಂದ ವಿಚಾರವನ್ನು ತಿಳಿದು ನಿನಗೆ ಅರುಹುತ್ತೇನೆ. ನೀನು ಶೀಘ್ರದಿಂದ ಅಂತಃಪುರಕ್ಕೆ ತೆರಳಮ್ಮಾ ಬಾಲೆ – ಸದ್ಗುಣ ವಿಶಾಲೆ ॥

ರತ್ನಾದೇವಿ: ಅದೇ ಪ್ರಕಾರ ಪೋಗಿ ಬರುತ್ತೇನಮ್ಮಾ ತಾಯೇ – ಕರುಣದಿಂದೆನ್ನ ಕಾಯೇ ॥

ಚಂದ್ರಮತಿ: ಅಪ್ಪಾ ! ಸಾರಥಿ ಯನ್ನ ಪ್ರಾಣಕಾಂತನು ಧಾವಲ್ಲಿರುವರೋ ತೋರಿಸಪ್ಪಾ ಸಾರಥೀ – ಸಂಧಾನ ಮತಿ ॥

ನಮೋ ನಮಸ್ಕಾರಂಗಳೈಯ್ಯಾ ರಾಯ – ಯನ್ನ ಮನೋಪ್ರಿಯಾ ॥

ವಿಕ್ರಮ: ಶುಭ ಮಂಗಳವತಿಯಳಾಗಿ ಶೀಘ್ರದಿಂದ ಬಾ ಕಾಂತೆ – ಸರಸ ಧೀಮಂತೆ ॥

ದರುವುರೇಗುಪ್ತಿ ರಾಗ

ಕಂದರ್ಪಾ ಸುಂದರಾ  ನಂದಾ ಭರಿತಾದಿಂದಾ
ಚಂದಾದಿಂ ಕರೆಸೀದ  ಅಂದವೇನೈ ಪ್ರಿಯಾ                            ॥1 ॥

ಕಾಮಿನಿ ಮಣಿಯ ರಿಂ  ದೇನೂ ಕಾರ‌್ಯಗಳುಂಟು
ಪ್ರೇಮದಿಂದಲಿ ತಿಳಿಸೈ  ರಮಣನೇ ನೀನೆನಗೇ                        ॥2 ॥

ಕಪಟ ನಾಟಕ ಜ್ಯೇಷ್ಠಾ  ಬಳ್ಳಾಪುರವನು ಪೊರೆವಾ
ಆಪದ್ಭಾಂಧವ ಶಂಭು  ಲಿಂಗನು ಸಲಹುವಾ                            ॥3 ॥

ಚಂದ್ರಮತಿ: ವಿಷ್ಣು ಶರ ಸಮರೂಪನಾದ ಹೇ ನಲ್ಲಾ ! ಈ ಕ್ಷಿತಿಯೊಳಗೆ ಅತಿಶಯವಾಗಿ ನಿಮ್ಮ ಸತಿಯಳನ್ನು ಮನ್ನಣೆ ಮಮತೆಗಳಿಂದ ಕರೆಸಿದ ಕಾರಣಾರ್ಥವೇನೊ. ಈ ಧಾತ್ರಿಯನ್ನು ಪರಿಪಾಲಿಸುವ ಮನ್ಮಥನ ವೈರಿಯಾದ ಶಂಕರನು ಕರುಣದಿಂದ ರಕ್ಷಿಸುವನಾದ ಕಾರಣ ಧೀರತನದಿಂದ ವೀರ ವಿಕ್ರಮರಾದ ತಾವು ಅಪ್ಪಣೆಯಂ ಪಾಲಿಸಬೇಕೈ ನಲ್ಲಾ – ಕೇಳೆನ್ನ ಸೊಲ್ಲಾ ॥

ದರುವು

ಚಿತ್ತಜನರಗಿಳಿ  ಪುತ್ಥಳಿ ಬೊಂಬೆಯೇ
ಬಿತ್ತರಿಸುವೆ ರಮಣೀ  ಕೇಳ್ ತರುಣೀ ॥
ಪುತ್ರಿಯಳಿಗೆ ಯೀ  ವತ್ತಿನ ದಿನದಲೀ
ಪ್ರಸ್ತವ ಸಾಗಿಸುವೇ  ನಾ ಮಾಳ್ಪೆ                                          ॥1 ॥

ವಿಕ್ರಮ: ಚಿತ್ತಜನರಗಿಳಿಯಂತೊಪ್ಪುವಾ ಪುತ್ಥಳಿ ಪ್ರತಿಮೆಯೇ ಕೇಳು. ಈವತ್ತಿನಾ ದಿನದಲ್ಲಿ ಮತ್ತಗಮನೆಯಳಾದ ಪುತ್ರಿ ರತ್ನಾದೇವಿಗೆ ಪ್ರಸ್ತವನು ಸಾಗಿಸುವ ಬಿತ್ತರವನ್ನು ವಿಸ್ತರಿಸುವೆನು, ಚಿತ್ತವಿಟ್ಟು ಲಾಲಿಸೇ ಕಾಂತೇ – ಮತಿಗುಣವಂತೆ ॥

ದರುವು

ನಾಗವೇಣಿಯ ಕೊಟ್ಟು  ಈಗಲೇ ರಜಕಗೇ
ಸಾಗಿಸುವೆನು ಮದುವೇ  ಕೇಳ್ ಮದುವೇ ॥
ಭೋಗ ಮಂಟಪದೊಳು  ಆಗಮಿಸುತ ನೀನು
ಜಾಗರೂಕದೊಳಿರುವೇ  ನೀನಿರುವೇ                                     ॥2 ॥

ಕೊಟ್ಟೆನು ವಚನವಾ  ಸೃಷ್ಠಿಯೊಳಗೆ ನಾನು
ಸಟೆಯ ನುಡಿವನಲ್ಲೇ  ಕೇಳ್ ನಲ್ಲೇ ॥
ಜ್ಯೇಷ್ಠ ಬಳ್ಳಾಪುರದ  ಅಷ್ಠಮೂರ್ತಿ ಶಿವನಾ
ದೃಷ್ಠಿ ಫಲಿಸಲಿಲ್ಲೇ  ಹೇ ನಲ್ಲೇ                                               ॥3 ॥

ವಿಕ್ರಮ: ಹೇ ಕಮಲಾಕ್ಷಿ ! ಹೋ ಸಾರಸಾಕ್ಷಿ ! ಈ ಕ್ಷಿತಿಯೊಳಗೆ ಅಕ್ಷಯತರಮಾಗಿ ಯನ್ನಯ ಸುವಾಕ್ಯಗಳಿಂದ ಈ ರಜಕಾಧ್ಯಕ್ಷ ಮಾಣಿಕ್ಯನಿಗೆ ನಮ್ಮ ಕಕ್ಷಿಯೋಳ್ ಪುಟ್ಟಿದ ಲಲಿತಾಂಗಿಯನ್ನು ಕೊಟ್ಟು ಶೋಭಾಯ ಮಂಟಪದಿ ನಿಕ್ಷೇಪಕರಮಾಗಿ ಅಕ್ಷತೆಗಳಿಂದ ಧಾರೆಯನ್ನೆರೆದು ಅಕ್ಷಿ ಅರ್ತಿಗಳಿಂದ ಪರಿಣಯ ಮಾಡುತ್ತೇನೆ ಪಂಕಜಾಕ್ಷಿ – ಹೇ ಸಾರಸಾಕ್ಷಿ ॥

ಚಂದ್ರಮತಿ: ಆಹಾ ! ವಿಧಿಯೇ ! ಯನ್ನ ಉದರದೋಳ್ ವಜ್ರ ಕಠಾರಿಯು ವೊಡ್ಡಿದಂತಾಯಿತಲ್ಲೈ ರಮಣಾ – ಮತ್ತೂ ಪೇಳುತ್ತೇನೈ ಕಾಂತ ॥

ದರುವು

ಭೂಮಿಪಾಲನೇ, ಪ್ರೇಮಿಸೋ ಬಿನ್ನಪಾ ॥ಪ ॥
ಭಾಮಮಣಿಯು, ನಮ್ಮ ಸುತೆಯು
ಭ್ರಮಕರಾದಿ ಪರೀಣತೆಯೂ ॥
ಅಮಮ ಯಿಂತಾ ರಜಕಗಿತ್ತು
ಸುಮನಸದಿಂ ಬಾಳುವುದಕೇ                                               ॥1 ॥

ಚಂದ್ರಮತಿ: ಹೇ ಭೂ ಲಲಾಮ  ಕೋಮಲಾಂಗಿಯಳಾದ ಕಾಮಿನಿ ರತ್ನಾದೇವಿಯಳನ್ನು ಸೋಮನ ಕಳೆಯುಳ್ಳ ಭೂಮಿಪಾಲಕರಿಗೆ ಕೊಡತಕ್ಕ ಪ್ರಯತ್ನವಿಲ್ಲದೇ ಕಾಮಿನಿಯರ ಅಂಗ ವಸ್ತ್ರಾದಿಗಳನ್ನು ತೊಳೆಯತಕ್ಕ ಅಗಸಮಾರನಿಗೆ ಕೊಟ್ಟು ಭಾಮಿನಿಯರೋಳ್ ಅಪಹಾಸ್ಯಕ್ಕೆ ಈಡಾಗುವರೇನೈ ನಲ್ಲಾ- ನಿಮಗಿದು ತರವಲ್ಲಾ ॥

ದರುವು

ಕೊಡುವರೇನಿದೂ, ಮಲಿನಾ  ಮಡಿಯ ಮಾಳ್ಪಗೇ ॥
ಪೊಡವಿಯಾಳ್ವ ಒಡೆಯರೆಲ್ಲಾ
ದುಡುಕುತನವ ಕಂಡು ಮನದೀ ॥
ಬೆಡಗಿನಿಂದ ನಗುವರಿನ್ನೂ
ಹುಡುಗತನವಿದೇನು ಬಿಡೂ                                                 ॥2 ॥

ಚಂದ್ರಮತಿ: ಹೇ ಪೊಡವೀಶನೇ  ಮುಂದೆ ಪೊಡವಿಪಾಲಕರೊಳಗೆ ಮುಖವೆತ್ತಿ ತಿರುಗದ ಹಾಗೆ ಅಪಮಾನ ಅಪಹಾಸ್ಯಕ್ಕೆ ಅಪನಿಂದ್ಯಕ್ಕೆ ಒಳಪಟ್ಟು ನಾಚಿಸುವರಲ್ಲೈ ರಮಣಾ. ಇದಕ್ಕೆ ಹೇಗೆ ಸೈರಿಸಲೋ ಪ್ರಿಯಾ. ಸರ್ವತಾ ಈ ರಜಕನಿಗೆ ನಮ್ಮ ಸುತೆಯನ್ನು ಕೊಡುವುದೂ ಆಗದ್ದಾಗದೋ ಕಾಂತ – ಅಸಾಧ್ಯ ಬಿಡು ಪಂಥ॥

ವಿಕ್ರಮ: ಹೋ ಮಧುರ ವಾಣಿ  ವಿಧ ವಿಧವಾಗಿ ಆಗದ್ದಾಗದೆಂಬ ಮೃದು ನುಡಿಗಳಿಂದ ಯನ್ನ ಯೆದುರಿನೋಳ್ ನಿಂದು ಅವಿಧೇಯಳಾಗಬೇಡ ಕಂಡ್ಯಾ, ಆವುದೇ ನಾರೀಮಣಿ ಮದವೈರಿಯ ನುಡಿಯನ್ನು ಮೀರಿ, ಕೇಳದಿರುವ ಸತಿಯಳಿದ್ದೇನು ಫಲ. ಯನ್ನೆದುರಾಗಿ ನಿಂದು ವಾದಿಸದೆ ಮುದದಿಂದ ಮಂದಿರಕ್ಕೆ ನೀ ಸರಿದು ಪೋಗೆ – ನೀ ವಿಧೇಯಳಾಗೇ ॥

ಚಂದ್ರಮತಿ: ಹೇ ಪ್ರಾಣಕಾಂತ ! ಇದೇನು ಕುಂದು ತಂದೊಡ್ಡಿದೆಯೋ ರಮಣಾ ! ನಾನ್ಯಾಂಗೆ ಸೈರಿಸಲೋ ಪ್ರಿಯಾ ! ನಿಮ್ಮ ಅಂದವಾದ ಚರಣಕ್ಕೆ ವಂದಿಸುತ್ತೇನೇ ಸರ್ವತಾ ಚಂದವಲ್ಲವೋ ನಾಥ- ಅಪಮಾನ ವಿಪರೀತ ॥

ವಿಕ್ರಮ: ಛೇ ವಚನಗೇಡಿ ! ಯನ್ನ ಮುಂದೆ ಎಷ್ಠು ಮಾತ್ರಕ್ಕೂ ನಿಲ್ಲದೇ ಮಂದಿರಕ್ಕೆ ತೆರಳುವಂಥವಳಾಗೆ ದರಿದ್ರಗೇಡಿ ॥

ಚಂದ್ರಮತಿ: ಅದೇ ಪ್ರಕಾರ ಪೋಗಿ ಬರುತ್ತೇನೈ ನಲ್ಲಾ – ನಿಮಗಿದು ಸಲ್ಲಾ ॥

(ಮಾತೆ ಸುತೆಯರ ಸಂಭಾಷಣೆ)

ಚಂದ್ರಮತಿ: ಅಪ್ಪಾ ಸಾರಥೀ. ಯನ್ನ ಪ್ರಾಣಪ್ರಿಯನಿಗೆ ಎಷ್ಠು ವಿಧವಾಗಿ ಹೇಳಿದರೂ ಕೇಳದೇ ಹೋದರು. ರಾಜಸುತೆಯನ್ನು ರಜಕನಿಗೆ ಕೊಟ್ಟು ಪರಿಣಯವೆಸಗಿದರೆಂಬ ವಾರ್ತೆಯನ್ನು ಕೇಳಿದ ಸರಿರಾಜರು ನಗುವರಲ್ಲದೇ ಬಂಧು ಜನಗಳಲ್ಲಿ ಅಪಮಾನಕ್ಕೀಡಾಗುವ ಕಾಲ ವದಗಿತಲ್ಲಪ್ಪಾ ಸಾರಥೀ॥ಈ ವಾರ್ತೆಯನ್ನು ಮನದೊಳಗೆ ಅಡಗಿಸಿಕೊಂಡು ಫಲವೇನು ? ಈಗ ಈ ಸಮಾಚಾರವನ್ನು ಯನ್ನ ಸುತೆಗೆ ಅರುಹಬೇಕಾದ ಕಾರಣ, ಅತಿಜಾಗ್ರತೆ ರತಿದೇವಿ ಸಮರೂಪಳಾದ ರತ್ನಾದೇವಿ ಸುತೆಯಳನ್ನು ಈ ಸಭಾಸ್ಥಾನಕ್ಕೆ ಕರೆದುಕೊಂಡು ಬಾರೈ ಸಾರಥೀ-ಚಮತ್ಕಾರ ಮತಿ ॥

ರತ್ನಾದೇವಿ: ನಮೋನ್ನಮೋ ಹೇ ತಾಯೇ – ಬಾಲಾರ್ಕ ಛಾಯೇ ॥

ಚಂದ್ರಮತಿ: ಶುಭಮಸ್ತು ಮಂಗಳಕರವಾಗಿ ಬಾರಮ್ಮಾ ಪುತ್ರಿ – ಸೌಂದರ‌್ಯಗಾತ್ರಿ ॥

ರತ್ನಾದೇವಿ: ಯನ್ನಿಷ್ಠು ಅವಸರದಿಂದ ಕರೆಸಿದ ಕಾರಣವೇನಮ್ಮಾ ಜನನೀ – ಅಂಬುಜವರ್ನನಿ॥

ಚಂದ್ರಮತಿ: ಪೇಳುತ್ತೇನೆ ಲಾಲಿಸಮ್ಮಾ ಬಾಲೆ – ಸದ್ಗುಣ ವಿಶಾಲೆ ॥

ದರುವು

ಸುತೆಯೇ ರತ್ನಾದೇವಿ  ನೀತಿ,
ಚತುರೆಯೇ ಕೇಳೇ ॥ಪ ॥
ಪತಿಯು ಪೇಳಿದನೀಗಾ  ಅತಿಕಠೋರದ ವಾಕ್ಯ
ಸುತೆಯೇ ಪೇಳುವುದ್ಹೇಗೆ ಇನ್ನೂ  ನಿನಗೆ
ವಾರ್ತೆಯ ನಾನೂ                                                            ॥1 ॥

ಚಂದ್ರಮತಿ: ಮೃದು ಹೃದಯಳಾದ ಚದುರ ಪದುಮದಳಾನನೆಯೇ ಲಾಲಿಸು. ನಿನ್ನ ಜನಕನು ಪೇಳಿದ ಕರ್ಣ ಕಠೋರವಾದಂಥ ವಾಕ್ಯವನ್ನು ನಿನ್ನೊಳಗೆ ಏನೆಂದು ಅರುಹಲಮ್ಮಾ ಬಾಲೆ-ಸುಗುಣ ವಿಶಾಲೆ॥

ದರುವು

ಜನನಿಯೇ ಪೇಳಮ್ಮ  ಜನಕನ ವಚನವನೂ
ವಿನಯದಿ ಕೇಳುವೆನೂ ॥ಪ ॥
ಮನದೊಳಗೆ ಅತಿದುಗುಡಾ  ನೀನು ಪಡುತಿರಲೇನೂ
ಅನುನಯದೊಳು ತಿಳಿಸು ನೀನೂ  ನಿನ್ನ
ಮನದ ದುಃಖವನೂ                                                          ॥1 ॥

ರತ್ನಾದೇವಿ: ಮಾನಿನಿಯರೊಳು ಶಿರೋರತ್ನವೆನಿಸಿದ ಹೇ ಜನನೀ  ನೀನು ಅನುಮಾನಿಸದೆ ಮನೋದುಃಖಕ್ಕೆ ಕಾರಣವಾದ ಯನ್ನ ಜನಕನ ನುಡಿಯನ್ನು ಯನ್ನೊಳಗೆ ಅನುನಯದೊಳು ಪೇಳಿದ್ದೇ ಆದರೆ ವಿನಯದಿಂದ ಲಾಲಿಸುವೆನಮ್ಮಾ ತಾಯೇ ಹಿಮಾಂಶು ಮುಖಛಾಯೇ ॥

ದರುವು

ಸರಸಿಜಾಕ್ಷಿಯೇ ಲಾಲಿಸಿನ್ನೂ  ಪೇಳ್ವೆ ನಾನೂ ॥ಪ ॥ಪತಿಯು
ವರೆದಂಥ ಮಾತನೂ  ಕೇಳಮ್ಮ ನೀನು ॥ಅ ॥ಪ ॥
ದುರುಳ ರಜಕನು ಸಿಂಹವನ್ನೂ  ಕೊಂದು ತಾನು  ಅದರ
ಗುರುತನ್ನು ತಂದಿಹನೂ  ಪೇಳಲಿನ್ನೇನೂ ॥
ಪರಿಣಯದೊಳು ನಿನ್ನ ಅವನೂ  ಸೇರುತಿಹನೂ  ಎಂಬ
ಧರಣಿಪನ ನುಡಿ ಕೇಳಿ  ವ್ಯಥೆ ಪಡುತಿಹೆನೂ                             ॥1 ॥

ಚಂದ್ರಮತಿ: ಸರಸಿಜಾಕ್ಷಿಯಾದ ರತ್ನಾದೇವಿಯೇ ಲಾಲಿಸು. ಪತಿಯು ಪೇಳಿದ ಅತಿದುಃಖಕರವಾದ ವಾರ್ತೆಯನ್ನು ಪೇಳುತ್ತೇನೆ. ನೀನು ಮನದಲ್ಲಿ ದುಗುಡವನ್ನು ತಾಳದೆ ಧೃಡಮನದಿಂದ ಚಿತ್ತವಿಸಮ್ಮಾ ಮತ್ತಗಮನೇ ॥ಅಮ್ಮಾ ಮಗಳೇ, ನಮ್ಮ ಪುರದ ಅಡವಿ ಉದ್ಯಾನವನದಲ್ಲಿದ್ದ ಶತೃಮದ ಭಂಗವೆಂಬ ಸಿಂಹವನ್ನು ಕೊಂದು ಅದರ ಗುರುತನ್ನು ತಂದವರಿಗೆ ನಿನ್ನನ್ನು ಕೊಟ್ಟು ಪರಿಣಯ ಮಾಡುತ್ತೇನೆಂದು ಸಾರಿ ಪೇಳಿದ ನಿನ್ನಯ ಜನಕನು, ಆ ಕೇಸರಿಯನ್ನು ಮರ್ದಿಸಿದ ಮಲಿನ ಬಟ್ಟೆಗಳನ್ನು ತೊಳೆಯುವ ದುರುಳ ರಜಕನಿಗೆ ನಿನ್ನನ್ನು ಕೊಟ್ಟು ಪರಿಣಯವೆಸಗುವೆನೆಂದು ಪೇಳಿದರಮ್ಮಾ ರಾಜೀವಲೋಚನೇ- ಮುಂದೇನು ಯೋಚನೇ ॥

ದರುವು

ಜನಕ ವಿಕ್ರಮರಾಯ ಪ್ರಿಯೇ  ಯನ್ನ ತಾಯೇ ॥ಪ ॥ನಿನಗೆ
ಬಿನ್ನವಿಸುವೆ ನಾನೂ  ಕರುಣ ವಾರಿಧಿಯೇ ॥ಅ ॥ಪ ॥
ಯೇನು ಲಿಖಿಸಿದ ಬ್ರಹ್ಮತಾಯೇ  ವಿಧಿ ಮಾಯೇ  ಇದನು
ಅನಿಮಿಷಾದಿಗಳೆಲ್ಲಾ  ಮೀರಲಾರರರಿಯೇ ॥
ಘನ ಶಂಭುಲಿಂಗನ ಸತಿಯೇ  ಪಾರ್ವತಿಯೇ  ಎಂದು
ಅನುದಿನ ಸ್ಮರಿಸಿದರೇ  ಪೊರೆವಳು ತಾಯೇ                            ॥1 ॥

ರತ್ನಾದೇವಿ: ಹೇ ಜನಕನ ಪ್ರಿಯೆ, ಯನ್ನ ಪ್ರೀತಿಯ ತಾಯೆ  ನಿನ್ನ ಮುದ್ದು ಕುವರಿಯ ಬಿನ್ನಪವನ್ನು ಲಾಲಿಸಬೇಕಮ್ಮಾ ಮಾತೆ. ಹರೀಣಾಪಿ ಹರೇಣಾಪಿ ಬ್ರಹ್ಮಣಾಪಿ ಸುರೈರಪಿ  ಲಲಾಟ ಲಿಖಿತಾ ರೇಖಾ ಪರಿಮಾಣಂತು ನ ಶಕ್ಯತೇ ॥ಎಂಬ ಶೃತಿ ವಚನವಿರುವುದಾದ್ದರಿಂದ ಹಣೆಯಲ್ಲಿ ಬರೆದ ಲಿಖಿತವನ್ನು ಮೀರಲು ಹರಿಹರ ಬ್ರಹ್ಮಾದಿಗಳಿಗೂ ಅಶಕ್ಯವಾಗಿರುವಾಗ ಇನ್ನು ಮಾನವರುಗಳಾದ ನಮ್ಮಗಳ ಪಾಡೇನು ತಾಯೆ. ಈ ವಿಧಿಮಾಯೆಗೆ ಚಿಂತಿಸಿ ಫಲವೇನಮ್ಮಾ ಜನನೀ. ಅಂತರಂಗದೋಳ್ ಕಂತು ವೈರಿಯಾದ ಅಂತಕಾಂತಕನ ಕಾಂತೆಯಾದ ಶ್ರೀ ಶರ್ವಾಣಿಯನ್ನು ಚಿಂತಿಸುತ್ತಾ ನಿರಂತರವೂ ಸ್ಮರಿಸುತ್ತಿರ್ದರೇ ಸಂತವಿಸಿ ಸಲಹವುಳಾದ ಕಾರಣ ಆ ಉಮಾದೇವಿಯನ್ನು ಧ್ಯಾನಿಸೋಣ ಬಾರಮ್ಮಾ ಮಾತೆ-ಬಿಡು ಮನೋವ್ಯಥೇ ॥

ಚಂದ್ರಮತಿ: ಅದೇ ಪ್ರಕಾರ ಧ್ಯಾನಿಸೋಣ ಬಾರಮ್ಮಾ ಪುತ್ರೀ  ಚಾರುಚರಿತ್ರೀ ॥

 

(ಸಿದ್ಧರು ಬರುವಿಕೆ)

ದರುವು

ಗಂಗಾ ವಲ್ಲಭ ಶಂಭೋ  ಅಂಗಜ ಮದಹರಾ
ತುಂಗ ವಿಕ್ರಮ ಭವ  ಭಂಗ ಕೃಪಾಂಗ                       ॥ಪ ॥ಗಂಗಾ ॥

ಸಿದ್ಧರಾಕಾರದಿಂ  ಮುದ್ದು ಕಿನ್ನರಿ ಪಿಡಿದೂ
ರುದ್ರಾರೂಪಿನೊಳು  ಇದ್ದ ಕುಮಾರರೂ                     ॥1 ॥ಗಂಗಾ ॥

ಭಸಿತ ರುದ್ರಾಕ್ಷಿಯು  ಎಸೆವ ಸಿಂಹದ ಬಾಲ
ಹಸನಾದ ಕಿರುಜಡೆ  ವಸುಧೆ ಪಾಲಕರೂ                   ॥2 ॥ಗಂಗಾ ॥

ಇಟ್ಟ ಕಿರೀಟವೂ  ತೊಟ್ಟ ಪುಲಿಯ ಚರ್ಮಾ
ಮೆಟ್ಟಿದಾ ಪಾವುಗೆ  ದಿಟ್ಟ ರೈತರಲೂ                         ॥3 ॥ಗಂಗಾ ॥

ಕಾಮಾಕ್ಷತೆಯ ನಿಟ್ಟು  ಹೇಮ ಪಾತ್ರೆಯ ಪಿಡಿದೂ
ಆ ಮಹಾಕಾಳಿಯ  ಪ್ರೇಮದಿಂ ಭಜಿಸೀ                      ॥4 ॥ಗಂಗಾ ॥

ಜ್ಯೇಷ್ಠ ಬಳ್ಳಾಪುರದ  ಅಷ್ಠ ಮೂರ್ತಿಯ ಭಜಿಸಿ
ಪಟ್ಟಣದ ವಳ ಹೊಕ್ಕು  ಪೇಟೆ ಬೀದಿಯೊಳೂ              ॥5 ॥ಗಂಗಾ ॥

ಕಾರ್ಯಪರ: ಶಿರ ಸಾಷ್ಠಾಂಗ ಬಿನ್ನಪಂಗಳೈಯ್ಯ ಸಿದ್ಧಪುರುಷರೇ ॥

ಸಿದ್ಧರು: ಸುಖೀಭವ  ಜಯ ಸುಖೀಭವ  ಸ್ಥಿರ ಪಟ್ಟವಾಳಬಹುದೈಯ್ಯ ನೃಪಕುಲೋತ್ತಮರೇ॥

ಕಾರ್ಯಪರ: ಹೇ ಸಿದ್ಧಪುರುಷರೇ  ನಿಮ್ಮ ದರುಶನದಿಂದ ಯನ್ನ ಜನ್ಮವು ಸಾಫಲ್ಯವಾಯಿತು. ಆದಕಾರಣ ನಿಮ್ಮಂಥ ಸತ್ಪುರುಷರಲ್ಲಿ ಕೆಲವು ಕಾರ‌್ಯಗಳುಂಟು ಆದ್ದರಿಂದ ಈ ಪೀಠವನ್ನು ಅಲಂಕರಿಸಬಹುದೈ ಸಿದ್ಧಪುರುಷರೇ ॥

ಸಿದ್ಧರು: ಆಹಾ ! ಅಗತ್ಯಮಾಗಿ ಈ ಪೀಠವನ್ನು ಅಲಂಕರಿಸುತ್ತೇವಯ್ಯ ನೃಪಕುಲೋತ್ತಮರೇ ॥

ಕಾರ್ಯಪರ: ಹೇ  ರಾಜಕುಲ ಶಿಖಾಮಣಿಯೇ ಕೇಳು ! ಅದ್ಭುತಮಾದ ಕೇಸರಿಯನ್ನು ಮರ್ದಿಸಿದಂಥ ಯುದ್ಧ ಸನ್ಯಾಸಿಗಳು ಇವರೇ ಇದ್ದಹಾಗೆ ಕಾಣುತ್ತದೆ. ತಾವು ಇವರನ್ನು ನಿರ್ಧರಿಸಬೇಕೈ ರಾಜ – ಅರ್ಕಸಮತೇಜ ॥

ವಿಕ್ರಮ: ಹೇ ಮಹಾತ್ಮರೇ ! ಋಷಿಕುಲ ಸಾರ್ವಭೌಮರಂತೆ ಪ್ರಕಾಶಿಸುವ ಹೇ ಸಿದ್ಧಪುರುಷೋತ್ತಮರೇ! ಕೇಳಿ, ನೀವು ವಾಸವನ್ನು ಮಾಡುವ ಕ್ಷೇತ್ರ ಯಾವುದು ? ನಿಮ್ಮ ದೇಶವನ್ನಗಲಿ ಬಂದ ಕಾರಣವೇನು. ವಿಶೇಷಮಾದ ಯಾವ ಮೃಗದ ಬಾಲವಿದು, ಬೇಸರಪಡದೆ ಯನ್ನೊಡನೆ ಉಸುರಬೇಕೈ ಮುನಿಕುಲ ತಿಲಕರೇ – ಸಿದ್ಧಪುರುಷರೇ ॥

ಸಿದ್ಧರು: ಅಸಾಧ್ಯ ಮಾದಂಥ ಮಾತನಾಡಿದರೇ ಅಗತ್ಯವಾಗಿ ಪೇಳುತ್ತೇವಯ್ಯ ಭೂಪ – ನಿನಗ್ಯಾತಕೆ ಕೋಪ॥

ದರುವು

ವಿಕ್ರಮಾ ಕೇಳೂಪ  ರಾಕ್ರಮವೆಲ್ಲವಾ
ಚಕ್ರಾಧಿಪತಿ ಕೇಳೈ  ಪೇಳುವೆವೀಗಾ ನಾವೀಗಾ                        ॥1 ॥

ಉದ್ಯಾನ ವನದೊಳಗೇ  ಇರ್ದಾ ಕೇಸರಿಯನ್ನೂ
ಸಿದ್ಧನಿವನು ಬೇಗಾ  ಕೊಂದಿಹ ರಾಜ ರವಿತೇಜಾ                      ॥2 ॥

ಮುದ್ದು ಕಿನ್ನರಿಯೊಳಗೆ  ವಾದ್ಯವಾ ಬಾರಿಸುತಾ
ಪದ್ಯವಾತನು ಪೇಳೆ  ಕೇಳಲು ಚಂದಾ ಬಹು ಚಂದಾ                 ॥3 ॥

ಸಿದ್ಧರು: ಈ ವಸುಧೆಯೋಳ್ ಅಸಮ ಸಾಹಸನಾದ ವೀರ ವಿಕ್ರಮ ಕುಲಾಗ್ರಣಿಯೇ – ನಿನಗಾರು ವಣಿಯೇ ಪಶುಪತಿಯ ಕರುಣದೋಳ್ ವಪ್ಪಿ ಯಿರುವ ಪುಣ್ಯನದಿ ಮೊದಲಾಗಿ ಋಷಿ ಸಿದ್ಧ ಸಾಧ್ಯರನ್ನು ನೋಡುತ್ತಾ ಈ ದೆಶೆಗೆ ಪೂರ್ವಭಾಗದೋಳ್ ವಪ್ಪಿ ಇರುವ ವನವಂ ಪ್ರವೇಶಿಸಿ ಶಶಿಧರನಂ ಜಪಿಸುತ್ತಾ ಇರುವಲ್ಲಿ ರಾಕ್ಷಸಾಕಾರವಾಗಿ ಯಿರುವ ಒಂದು ಕೇಸರಿಯು ಬರಲಾಗಿ ಈ ನಮ್ಮ ಚಿಕ್ಕ ಸಿದ್ಧನು ಕೊಂದು ಅದರ ಕುರುಚು ಬಾಲವನ್ನು ಈ ಮುದ್ದು ಕಿನ್ನರಿಗೆ ಕಟ್ಟಿಕೊಂಡು ಪಶುಪತಿಯ ಭಜನೆಯಂ ಮಾಡುತ್ತಾ ಭೃಂಗಿ ನಾಟ್ಯ ವಿನೋದಾರ್ಥಮಾಗಿ ಬಂದು ಇರುತ್ತೇವಯ್ಯ ರಾಜ – ಈ ಮಾತು ಸಹಜಾ ॥

ವಿಕ್ರಮ: ಮೌನಿಕುಲ ತಿಲಕರಂತೆ ವಜ್ರಕಾಯವ ಪಿಡಿದು ಪ್ರಜ್ವಲಿಪ ಹೇ ಋಷಿ ಸಿದ್ಧ ಸಾಧ್ಯರೇ ಕೇಳಿ ಈ ಜಗದೊಳಗೆ ಕೇಸರಿಯ ಗರ್ಜಿಸಿಕೊಂದ ನಿರ್ಜರರಂತೆ ಪ್ರಕಾಶಿಸುವ ನಿಮ್ಮನ್ನು ಮೆಚ್ಚಿ ಇರುವೆನು. ಮೂಜಗದ ಮೋಹಿನಿಯಂತೆ ಪ್ರಜ್ವಲಿಪ ನನ್ನ ಮುದ್ದು ನಂದನೆಯಳಾದ ರತ್ನಾದೇವಿಯನ್ನು ಕಲ್ಯಾಣ ಮಂಟಪದಿ ಯನ್ನ ಮನೋ ಇಷ್ಠದಂತೆ ರಜಕನಿಗೆ ಒಪ್ಪಿಸಿ ನಿಮಗೆ ಕಲ್ಯಾಣವನ್ನು ಮಾಡಬೇಕಾದ ಕಾರಣ ನಿಮ್ಮೊಳು ಯಾರಿಗೆ ಇಷ್ಠವೋ ತಿಳಿಸಿ ನಮ್ಮ ಮಂದಿರಕ್ಕೆ ದಯ ಮಾಡಿಸಬಹುದೈ ಮೌನೀ-ಸುರಸಮಜ್ಞಾನಿ ॥

(ಸಿದ್ಧರು ನಿರೂಪು ತೋರುವಿಕೆ)

ಸೋಮಶೇಖರ: ಹೇ ರಾಜ ! ನಮ್ಮಗಳ ನಿಜ ವೃತ್ತಾಂತವನ್ನು ಬಿತ್ತರಿಸುತ್ತೇನೆ. ಚಿತ್ತವಿಟ್ಟು ಲಾಲಿಸೈ ಭೂಪ. ಪೊಡವಿ ರತ್ನಾಪುರಿಯಂ ಪರಿಪಾಲಿಸುವ ವೀರ ವಜ್ರ ಮಕುಟರಾಯರ ಪುತ್ರರಾದ ಸೋಮಶೇಖರ ಚಿತ್ರಶೇಖರರೆಂಬ ಅಭಿದಾನವುಳ್ಳ ನಾವುಗಳು ನಿಮ್ಮ ಭುಜಬಲ ಪರಾಕ್ರಮವನ್ನು ತಿಳಿಯಲು ಚೋರತ್ವದಿಂದ ಈ ಪುರವನ್ನು ಪ್ರವೇಶಿಸಿ, ಕ್ರೂರ ಸಿಂಹವನ್ನು ಮರ್ದಿಸಿ, ಮಾರುವೇಷ ಧರಿಸಿ ನಿನ್ನ ಸನ್ನಿಧಿಗೆ ಬಂದು ಇರುತ್ತೇವೆ. ಅದ್ಭುತಮಾದ ಕೇಸರಿಯನ್ನು ಕೊಂದು ಇರುವ, ಇಗೋ ಈ ನನ್ನ ತಮ್ಮನಾದ ಚಿತ್ರಶೇಖರನಿಗೆ ನಿಮ್ಮ ನಂದನೆಯಳನ್ನು ಕೊಟ್ಟು ಲೋಕಪ್ರಸಿದ್ಧಮಾಗಿ ಪರಿಣಯವನ್ನು ಮಾಡಬಹುದೈ ರಾಜ – ಆಶ್ರಿತ ಕಲ್ಪಭೋಜ ॥

ವಿಕ್ರಮ: ಅಯ್ಯ ಪ್ರಧಾನಿ ! ಈ ರಾಜಪುತ್ರರನ್ನು ಕರೆದುಕೊಂಡು ಹೋಗಿ ಮಾನ ಸನ್ಮಾನಗಳಿಂದ ವಸ್ತ್ರಾಭರಣ ಭೂಷಣಗಳ ಕೊಡಿಸಿ ಬರುವಾಗ್ಗೆ ನಮ್ಮ ಪಟ್ಟಣವನ್ನು ಅಲಂಕಾರ ಮಾಡಿಸಿ ಬೇಕಾದ ಪದಾರ್ಥಗಳ ಸಹಿತವಾಗಿ ನಮ್ಮ ಸಕಲ ಜನರಾದ ಬಂಧು ಮಿತ್ರಾದಿಗಳನ್ನು ಕರೆಸುವುದಲ್ಲದೇ ನಮ್ಮ ಸೌಂದರ್ಯವತಿಯಳಾದ ಚಂದ್ರಮತಿಯನ್ನೂ, ನನ್ನ ನಂದನೆಯಳಾದ ರತ್ನಾದೇವಿಯನ್ನೂ ಸಹ ಅತಿಜಾಗ್ರತೆಯಿಂದ ಕರೆಸೋ ಮಂತ್ರೀ – ಕಾರ‌್ಯೇಷು ತಂತ್ರಿ ॥