ಮಂತ್ರಿ: ತಮ್ಮ ಆಜ್ಞೆ ಪ್ರಕಾರ ಕರೆಸುತ್ತೇನೈಯಾ ರಾಜ – ರವಿಕೋಟಿ ತೇಜಾ ॥

ಚಂದ್ರಮತಿ: ಶಿರಸಾಷ್ಠಾಂಗ ಬಿನ್ನಪಂಗಳೈ ರಾಯ – ಯನ್ನ ಮನೋಪ್ರಿಯಾ ॥

ವಿಕ್ರಮ: ಪರಮ ಮಾಂಗಲ್ಯವತಿಯಳಾಗಿ ಶೀಘ್ರದಿಂದ ಬರುವಂಥವಳಾಗೇ ಸಾರಸಾಕ್ಷಿ – ಹೋ ಕಮಲಾಕ್ಷಿ ॥

ಚಂದ್ರಮತಿ: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರ‌್ಯಾರ್ಥವೇನೈ ಇನಿಯಾ – ಮನ್ಮಥಕಳೆಯ॥

ದರುವು

ಚಂದ್ರ ವದನೆಯೇ ನಮ್ಮಾ  ನಂದನೆಗೆ ತಕ್ಕಂಥ
ಸುಂದರನಾ ತಂದಿರುವೇ  ಮುಂದೇ ನೀ ಪೇಳೆ, ನೀ ಕೇಳೆ          ॥1 ॥

ಮಧುರ ವಾಣಿಯ ಕೊಟ್ಟು  ಚದುರ ಚನ್ನಿಗನೀಗೇ
ಮದುವೆಯನು ಮಾಡುವೆನೇ  ಮುದದಿ ನೀ ಕೇಳೆ  ನೀ ಪೇಳೇ     ॥2 ॥

ಧರಣಿಗೆ ಜ್ಯೇಷ್ಠ ಬಳ್ಳಾ  ಪುರದ ಶಂಕರ ಪೊರೆವಾ
ತರುಣಿ ನಿನ್ನಯ ಮನಕೇ  ಪರಮಾ ಹರುಷಿತವೇ ಬಲು ಹಿತವೇ   ॥3 ॥

ವಿಕ್ರಮ: ಮನ್ಮಥನ ಕೈಯಲ್ಲಿರುವ ಪುಷ್ಪ ಮಾರ್ಗಣದಂತೆ ಪ್ರಕಾಶಿಸುವ ಹೇ ಕಾಂತೇ ! ನಮ್ಮ ಆತ್ಮ ನಂದನೆಯಾದ ರತ್ನಾದೇವಿಗೆ ತಕ್ಕಂಥ ಚಾರುತರಮಾದ ಸೌಂದರ‌್ಯ ಸಂಪನ್ನನೆಂದೆನಿಪ ವರ ಪರಾಕ್ರಮನನ್ನು ಕರೆಸಿ ಇರುತ್ತೇನಲ್ಲದೇ, ಯನ್ನ ಮನೋ ಇಷ್ಠಗಳಿಂದ ವಿವಾಹವನ್ನು ಮಾಡುವುದಕ್ಕೆ ಉದ್ಯುಕ್ತನಾಗಿರುವೆ ಪನ್ನಗ ಶಯನನ ಕೃಪೆಯಿಂದ ನಿನ್ನ ಮನಸ್ಸಿನೋಳ್ ಹರುಷಿತಳಾಗಿ ಇರಬೇಕೆ ರಮಣಿ – ಕಾಂತಿದ್ಯುಮಣಿ ॥

ಕಂದಾರ್ಧರೇಗುಪ್ತಿರಾಗ

ತುಂಗ ವಿಕ್ರಮ ಪತಿಯೇ ಕೇಳು  ಮುಂಗಾರಿಯ ಮಿಂಚಿನಂತೇ
ಕಂಗೊಳಿಸುತಿಹಾ  ಅಂಗಜ ಸಮರೂಪ ವರನಿಗೇ
ಮಂಗಳ ಕರದೀ ॥
ವೈವಾಹಗೈಯ್ಯ  ಭೃಂಗ ಕುಂತಳೆಯಾ
ವೈವಾಹ ಗೈಯ್ಯ ॥
ಮಂಗಳಕರ ಧವ  ಳಾಂಗ ಬಳ್ಳಾಪುರೀ
ಲಿಂಗಾ ಪಾಲಿಪನಮ್ಮಾ  ಅಂಗಾದಿ ಸ್ಮರಿಸುತ್ತಾ ॥
ಭೃಂಗ ಕುಂತಳೆಯಾ  ವೈವಾಹಗೈಯ್ಯ
ಭೃಂಗ ಕುಂತಳೆಯಾ ॥

ಚಂದ್ರಮತಿ: ಅಂಬುಧಿಗೆ ಚಂದಿರನಂತೆ ವಂದಿ ತೋರುವ ಹೇ ರಮಣನೇ ಕೇಳು, ಈ ಧಾತ್ರಿಯೋಳ್ ಗರಳ ಕಂಧರನಾದ ಶಂಕರನ ಕರುಣ ಕಟಾಕ್ಷದಿಂದ ಬಂದಿರುವ ಕಂದರ್ಪ ಸಮರೂಪನಾದ ಸುಂದರಾಂಗನಿಗೆ ಕುಸುಮಗಂಧಿನಿಯಳಾದ ರತ್ನಾದೇವಿಯನ್ನು ಕೊಟ್ಟು ಇಂದು ಮಂದಿರದಿ ಸಂದೇಹವಿಲ್ಲದೇ ಆನಂದಕರಮಾಗಿ ಮುಂದಿನ ಕಾರ‌್ಯಗಳನ್ನು ಪ್ರಯತ್ನಿಸಬೇಕೈ ರಮಣಾ – ಸದ್ಗುಣಾ ಭರಣ ॥

ವಿಕ್ರಮ: ಸುಂದರವತಿಯಳಾದ ಚಂದ್ರಮತಿ ಕಾಂತೆಯೇ ಕೇಳು ! ಇಳೆಯ ವಲ್ಲಭನಾದ ನನ್ನ ಅಳಿಯನಾದ ಚಿತ್ರಶೇಖರನಿಗೂ, ನಳಿನ ಮುಖಿಯಳಾದ ರತ್ನಾದೇವಿಗೂ ರತ್ನತೊಡಿಗೆ ಅಲಂಕಾರ ಮುಂತಾದ ವಸ್ತ್ರಾಭರಣವನ್ನು ಅಳವಡಿಸಿ ಕಲ್ಯಾಣ ಮಂಟಪಕ್ಕೆ ಬಿಜಯಂ ಗೈಯುವಂಥವಳಾಗೇ ಕಾಂತೆ – ಸರಸ ಧೀಮಂತೇ ॥

ಭಾಗವತರ ಕಂದರೇಗುಪ್ತಿ

ಕನಕ ಚಪ್ಪರವ ಹಾಕಿಸಿ
ಘನ ಮುತ್ತಿನ ತೋರಣ ಮುದದಿಂದ ಕಲ್ಪಿಸೀ ॥
ಮನ ಹರುಷದಿಂದ ಮದುವೆಗೆ
ಅನುವಿಟ್ಟನು ಅರ್ತಿಯಿಂದ ಜನಪತಿ ವಿಕ್ರಮಾ ॥                      ॥1 ॥

ಚಂದ್ರಮತಿ: ಪ್ರಾಣದೊಲ್ಲಭನಾದ ಹೇ ಕಾಂತ ! ಜಾಣತನದಿಂದ ಇಂತೊಪ್ಪ ವಧೂವರರಿಗೆ ವಸ್ತ್ರಾಭರಣಗಳನ್ನು ತೊಡಿಸಿ ಭೃಂಗ ಮಂಟಪದಲ್ಲಿ ಕುಳ್ಳಿರಿಸಿ ವೀರ ಕಂಕಣವನ್ನು ಧರಿಸಿ ಇರುತ್ತೇವೆ. ಇನ್ನು ಶುಭ ಮುಹೂರ್ತವನ್ನು ನಡೆಸಬಹುದೈ ರಾಯ – ಯನ್ನ ಮನೋಪ್ರಿಯಾ ॥

ವಿಕ್ರಮ: ಅಯ್ಯ ಪುರೋಹಿತರೇ ! ಈ ಶುಭ ಮುಹೂರ್ತಕ್ಕೆ ಸಮಯವಾಗಿ ಶುಭಮುಹೂರ್ತವನ್ನು ಕೂಡಿಸಿರುವುದರಿಂದ ಲಗ್ನಾಗಮ ಕರ್ತವ್ಯಗಳನ್ನು ನಡೆಸಬಹುದೈ ಪುರೋಹಿತರೇ – ಮಹೀಜನ ಮಿತ್ರರೇ ॥

ಪುರೋಹಿತರು: ನಿಮ್ಮ ಇಷ್ಠ ಪ್ರಕಾರ ಕಲ್ಯಾಣ ನಡೆಸುತ್ತೇವೈ ರಾಜೇಂದ್ರ – ಸದ್ಗುಣಸಾಂದ್ರ ॥

 

(ಚಿತ್ರಶೇಖರನಿಗೂ ರತ್ನಾದೇವಿಗೂ ಕಲ್ಯಾಣ)

ದರುವು

ಜಯ ಜಯ ಶುಭಗಾತ್ರ  ಜಯ ಜಯ ಮುನಿ ಮಿತ್ರ
ಜಯ ವಜ್ರಮಕುಟ ಪುತ್ರ  ಜಯ ಗುಣ ಚಾರಿತ್ರ                        ॥ಪ ॥

ಜಯ ಚಿತ್ರಶೇಖರನಾ  ಜಯ ರತ್ನಾದೇವಿಯನಾ
ಜಯ ತೆಂದು ಕರಪಿಡಿಸಿ  ಜಯ ಸತಿ ಪತಿಯರಿಗೇ                    ॥1 ॥

ನವರತ್ನ ತಂಬಿಗೆಯಾ  ಯುವತಿಯರು ಪಿಡಿಯುತ್ತಾ
ನವರತ್ನಾಮೃತವನ್ನ  ಭಿಷೇಕ ಮಾಡಿದರೂ                             ॥2 ॥

ಕಸ್ತೂರಿ ಗಂಧವನು  ಹಸ್ತದಲೀ ಲೇಪಿಸುತ್ತಾ
ಶಿಸ್ತಿಂದ ಕುಸುಮಗಳಾ  ಅವರು ಧರಿಸಿದರೂ                           ॥3 ॥

ಸೋಮಶೇಖರ: ಹೇ ಮಾವ  ದಿವಾಕರ ಪ್ರಭಾವ  ತ್ರಿಭುವನದೋಳ್ ವಧೂವರರಿಗೆ ವಿಭುದ ದಾನ ಕರ್ತವ್ಯಗಳಿಂದ ಶುಭ ಮುಹೂರ್ತವನ್ನು ನಡೆಸಬಹುದೈ ಪ್ರಭುವೇ – ಈ ಕಾರ‌್ಯ ಶುಭವೇ ॥

ವಿಕ್ರಮ: ವಳಿತಾಯಿತೈಯ್ಯ ಅಳಿಯಾ – ಪೌರುಷ ನಿಲಯಾ  ಅಯ್ಯ ಪುರೋಹಿತರೇ ಕಲ್ಯಾಣವನ್ನು ನಡೆಸಬಹುದೈಯ್ಯ ಭೂಸುರೋತ್ತಮರೇ ॥

ಪುರೋಹಿತರು: ತಮ್ಮ ಆಜ್ಞಾನುಸಾರಮಾಗಿ ಆಗಮಿಸುತ್ತೇನೈ ರಾಜ – ರವಿಸಮ ತೇಜಾ ॥

ಮಂಗಳಕರಮಾದ ಲಗ್ನಾಷ್ಠಕಾ

ಶ್ರೀರಾಯ ಹೊಯಿತಃ ಪ್ರಕಾಶ ಸುರನರ ಸೇವ್ಯಂ
ಶಿವಂ ಶಂಕರಂ ಪಾರಾವಾರ ಗಂಭೀರ ಮೌನಿ
ವಿನುತಂ, ಪದ್ಮಾಕ್ಷಮಿತ್ರಂ ಸದಾ ಭೂರಿ
ನೂತನ ರತ್ನ ನಿರ್ಮಿತ ಮಹಾಭೂಷಣಂ
ಮಹೇಶಂ ಶಿವಂ ಗೋರಾಡ್ವಾಹನ ಜಾಹ್ನವೀ
ಧರ ಶಿವಂ ಕುರ್ವಂತುರೇ ಮಂಗಳಂ ಶುಭ
ಮುಹೂರ್ತ ಸಾವಧಾನ ಶುಭಲಗ್ನ ಸಾವಧಾನ
ಗೌರೀ ಶಂಕರ ಧ್ಯಾನ ಸಾವಧಾನ                                         ॥1 ॥

ಭೂ ಚಕ್ರಾಧಿಪ ವಿಕ್ರಮಾರ್ಕನ ಸುತೆಯಂ
ಫಾಲಾಕ್ಷನೀಂ ಪಾಲಿಸೈ ರಕ್ಷಂಗೋಪರಿವಾರ
ಅಗ್ನಿನಯನಂ ಅಕ್ಷಾಫಲ ಶುಭಕರಂ  ಕುಕ್ಷಿ
ಜ್ಯೇಷ್ಠ ಬಳ್ಳಾ ಪುರೀಶಾ  ನಿರ್ಜರ ಪದಂ ಗಂಧರ್ವ
ಸಂರಕ್ಷಕಂ  ಯಕ್ಷಾರಕ್ಷಣ ಜಾಹ್ನವೀಧರ
ಶಿವಂ ಕುರ್ವಂತುರೇ ಮಂಗಳಂ ಶುಭಮು
ಹೂರ್ತ ಸಾವಧಾನ  ಶುಭಲಗ್ನಾ ಸಾವಧಾನ
ಗೌರೀ ಶಂಕರ ಧ್ಯಾನ ಸಾವಧಾನ ॥

ಪುರೋಹಿತರು: ಧನ ಧಾನ್ಯಂ ಬಹು ಪುತ್ರಲಾಭಂ ಶತಸಂವತ್ಸರಂ ದಂಪತಿ ಧೀರ್ಘಮಾಯುಃ ಶ್ರೀ ಶೋಭಕೃತುನಾಮ ಸಂವತ್ಸರೇ ಭಾದ್ರಪದ ಮಾಸೇ ಶುಭಕಾರ‌್ಯೆ ತದಿ ಮಹೋತ್ಸವೇನ ಚಿತ್ರಶೇಖರ ನಾಮ ದೇವಸ್ಯಾ ॥

ವಿಕ್ರಮ: ಹೇ ಸುಂದರ ಅಳಿಯಾ-ಚಂದಿರನ ಕಳೆಯಾ  ಮನದೊಂದಿಗೆ ಪರಮಾನಂದ ಕರಮಾಗಿ ಗಂಧ ವೀಳ್ಯವನ್ನು ಸ್ವೀಕರಿಸಬಹುದೈ ಸೋಮಶೇಖರಾ-ಕರುಣಾಕರಾ ॥

ಸೋಮಶೇಖರ: ಆಹಾ, ಸಂಭ್ರಮದಿಂದ ತಾಂಬೂಲವನ್ನು ಸ್ವೀಕರಿಸುತ್ತೇನೈ ಮಾವ-ಮಲ್ಲಿಗೆ ಪ್ರಭಾವ ॥

ಶೋಭಾನೆದರುವುಅಟತಾಳ

ಶೋಭಾನವೇ, ನಿತ್ಯ  ಶೋಭಾನವೇ ॥ಪ ॥
ಶೋಭಾನವೇ ನಿತ್ಯಾ  ಅಭವ ಕುಮಾರಗೇ
ತ್ರಿಭುವನ ಚರಿತಗೇ  ಶುಭವೆಂದು ಪಾಡಿರೇ                             ॥1 ॥

ವಿಕ್ರಮ ಸುತೆಯ ಪ  ರಾಕ್ರಮ ದಿಂದಲೀ
ಆಕ್ರಮಿಸಿದ ಚಿತ್ರ  ಶೇಖರ ಭೂಪನಿಗೇ                                   ॥2 ॥

ಮಂಡಲದೊಳು ಜ್ಯೇಷ್ಠ  ಬಳ್ಳಾಪುರವ ಪೊರೆವಾ
ಖಂಡೇಂದು ಮೌಳಿಯ  ವರದ ಕುಮಾರಗೇ                            ॥3 ॥

ಚಂದ್ರಮತಿ: ಅಮ್ಮಾ, ಪುತ್ರೀ  ನಿನ್ನ ಪತಿಯಾದ ಚಿತ್ರಶೇಖರನಿಗೆ ಇಗೋ ಈ ಮುತ್ತಿನ ಹಾರವನ್ನು ಅಲಂಕರಿಸಬಹುದಮ್ಮಾ ಪುತ್ರೀ – ಸೌಂದರ‌್ಯಗಾತ್ರೀ ॥

ರತ್ನಾದೇವಿ: ಅದೇ ಪ್ರಕಾರ ಅಲಂಕರಿಸುತ್ತೇನಮ್ಮಾ ಜನನೀ ಸುಚರಿತ್ರ ಮಾನಿನಿ ॥

ಮಂಗಳಾರತಿದರುವು

ರತ್ನದಾರತಿಯೆತ್ತಿರೇ  ಮುತ್ತೈದೆರೂ
ಚಿತ್ರಶೇಖರ ರಾಯಗೇ ॥ಪ ॥
ಧಾತ್ರಿ ನೀಲಾವತಿಯೊಳೊಪ್ಪುವಾ
ಕರ್ತ ವಿಕ್ರಮರಾಯ ಸುತೆಯಳಾ ॥
ರತ್ನಾದೇವಿಯ ಹಸ್ತ ಪಿಡಿದಿಹ
ಚಿತ್ರಶೇಖರ ಪೃಥ್ವಿ ಪಾಲಗೇ                                                 ॥1 ॥

ಕುಕ್ಷಿಯೊಳು ಬಳ್ಳಾಪುರೀ  ರಕ್ಷಿಸುವಂಥ
ಫಾಲಾಕ್ಷನೇ ಈ ಸಾರೀ ॥
ಕುಕ್ಷಿಯೊಳು ಶ್ರೀ ಲಕ್ಷ್ಮಿಯಂದದೀ
ಮೋಕ್ಷ ಕನ್ನೆಯರೆಲ್ಲಾ ಈ ಕ್ಷಣಾ ॥
ಲಕ್ಷಣಾದಿ ಭಜಿಸಿ ಭಾವದಿ
ಅಕ್ಷಯಂಗಳ ನೆನೆವುತಲಿ ನೀವ್                                           ॥2 ॥

ಸೋಮಶೇಖರ: ಹೇ ಮಾವನಾದ ವಿಕ್ರಮರಾಯನೇ ಕೇಳು ! ಇಂತೊಪ್ಪ ವಧೂ-ವರರಿಗೆ ನಿಮ್ಮ ಮೃದು ವಚನದಿಂದ ಆಶೀರ್ವಾದವನ್ನು ಮಾಡಿ ಚದುರತನದಿಂದ ಸಜ್ಜಾಗೃಹಕ್ಕೆ ಬಿಜಯಂಗೈಸಬಹುದೈ ಮಾವ-ದಿವಕರ ಪ್ರಭಾವ ॥

ವಿಕ್ರಮ: ನಿಟಿಲಾಕ್ಷನ ವರದಿಂದ ಪುಟ್ಟಿದ ಪಟುಭದ್ರನಾದ ಸೋಮಶೇಖರ ಅಳಿಯನೇ ಕೇಳು. ಇಂತೊಪ್ಪ ವಧೂವರರಿಗೆ ಆಶೀರ್ವಾದವನ್ನು ಮಾಡಿ ದಿಟ್ಟತನದಿಂದ ನಿನ್ನ ಅನುಜನಾದ ಚಿತ್ರಶೇಖರನಿಗೆ ಈ ಪಟ್ಟಣದ ಆಧಿಪತ್ಯವನ್ನು ಬಿಟ್ಟುಕೊಟ್ಟು ಪಟ್ಟಾಭಿಷೇಕವನ್ನು ಮಾಡಿಸಿರುತ್ತೇನೆ, ಪಟು ಪರಾಕ್ರಮರಾದ ನೀವೀರ್ವರೂ ಈ ಸೃಷ್ಠಿಯನ್ನು ಪಾಲಿಸುತ್ತಾ ಸುಖದಿಂದಿರುವುದಲ್ಲದೇ ನಿಮ್ಮ ಇಷ್ಠಾರ್ಥವನ್ನು ಯನ್ನೊಡನೆ ತಿಳಿಸಬೇಕೈ ಭೂಪ-ಕೀರ್ತಿಕಲಾಪ ॥

ಭಾಗವತರು: ಈ ಪ್ರಕಾರವಾಗಿರಲೂ ಒಂದು ದಿನ ರಾಜಾಸ್ಥಾನಕ್ಕೆ ಒಬ್ಬ ಶಬರನು ತಂದೊಪ್ಪಿಸಿದ ಜಾಂಬವ ಪಕ್ಷಿಯಿಂದ ಹೇಮಾವತಿನಗರದ ಸುವರ್ಣೆಯೆಂಬುವಳ ರೂಪು ಲಾವಣ್ಯಗಳನ್ನು ತಿಳಿದ ಸೋಮಶೇಖರನು ತನ್ನ ಮಾವನಾದ ವಿಕ್ರಮರಾಯನೊಡನೆ ಇಂತೆಂದನೈಯ್ಯ ಭಾಗವತರೇ ॥

ಸೋಮಶೇಖರ: ಪಟು ಪರಾಕ್ರಮಿಯಾದ ಹೇ ಮಾವ ! ಈ ಪಟ್ಟಣದ ಊರ ವಳೆಯಲ್ಲಿ ನಿಮ್ಮ ದಿಟ್ಟತರಮಾದ ಆಜ್ಞೆಯಿಂದ ಶೂಲಗಳಿಗೆ ಹಾಕಿಸಲ್ಪಟ್ಟ ಭೂತ ಪಿಶಾಚಿಗಳಿಗೆ ನಮ್ಮ ಪಟ್ಟಣದಿಂದ ಬರುವಾಗ್ಗೆ ಕೊಟ್ಟು ಇದ್ದ ಭಾಷೆಯ ಪ್ರಕಾರ ಅನ್ನಪಾನಾದಿಗಳನ್ನು ಸಂತುಷ್ಠ ಮಾಡಿ ಇಡಿಸುವುದಲ್ಲದೆ, ನಮ್ಮ ದಿಟ್ಟನಾದ ಚಿತ್ರಶೇಖರನನ್ನು ನಿಮ್ಮಲ್ಲಿಯೇ ಬಿಟ್ಟು ಹೇಮಾವತಿಯ ಪಟ್ಟಣಕ್ಕೆ ಪೋಗಿ ಬರುತ್ತೇನೈ ಮಾವ – ಇದೇ ಯನ್ನ ಮನೋಭಾವ ॥

ವಿಕ್ರಮ: ಹಾಗಾದರೆ ನೀನು ಓರ್ವನೇ ಪೋಗುವುದು ಉಚಿತವಲ್ಲವಾದ ಕಾರಣ ಚತುರಂಗ ಬಲ ಸಮೇತನಾಗಿ ಪೋಗಿಬಾರೈ ಸೋಮಶೇಖರಾ – ಕರುಣಾಕರಾ ॥

ಸೋಮಶೇಖರ: ಅಯ್ಯ ಸಾರಥೀ ! ಯನ್ನ ಅನುಜನಾದ ಚಿತ್ರಶೇಖರನನ್ನು ಅತಿಜಾಗ್ರತೆಯಿಂದ ಭೇಟಿ ಮಾಡಿಸೋ ಚಾರ – ಯನ್ನ ಆಜ್ಞಾಧಾರ ॥

ಚಿತ್ರಶೇಖರ: ಅಣ್ಣಾ ! ಅಗ್ರಜಭವ ! ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನು ? ಇನ್ಯಾವ ವೈರಿಗಳನ್ನು ಜಯ ಪ್ರಧಾನವನ್ನು ಮಾಡಬೇಕು, ಯನಗೆ ಅಪ್ಪಣೆಯನ್ನು ಕೊಟ್ಟರೆ ಶಿರಸಾವಹಿಸಿ ನಡೆದುಕೊಳ್ಳುತ್ತೇನೈ ಅಣ್ಣಾ-ಸಕಲ ಗುಣಪೂರ್ಣ ॥

ದರುವು

ಪೊಡವಿಪ ತನುಜ ಕೇಳ್  ತಡೆಯದೈದುವೆ ನಾಳೆ
ಪೊಡವಿ ಹೇಮಾವತಿಗೆ  ಆ ಪುರಕೇ                                       ॥1 ॥

ಚಂದದಿಂದಲಿ ಶಬರ  ತಂದ ಪಕ್ಷಿಯು ಪೇಳ್ದ
ಸುಂದರಾಂಗಿಯ ವಿವರಾ  ಕೇಳ್ ವಿವರಾ                               ॥2 ॥

ಧರಣಿಗೆ ಜ್ಯೇಷ್ಠ ಬಳ್ಳಾ  ಪುರವರ ದಯದಿಂದಾ
ತರುಣಿಯ ಪರಿಣಯಕೇ  ಪೋಗಲ್ಕೇ                                     ॥3 ॥

ಸೋಮಶೇಖರ: ಕುಂಭಿಣಿಯೊಳು ಶಂಭುವಿನ ವರದಿಂದ ಪುಟ್ಟಿದ ಅನುಜನೇ ಕೇಳ್, ಸಂಭ್ರಮದಿ ಕೂಡಿರುವ ಓಲಗದಿ ಒಪ್ಪಿರಲಾಗಿ ಗಾಂಭೀರ‌್ಯದಿಂದ ಒಬ್ಬ ವ್ಯಾಧನು ಜಾಂಬವ ಪಕ್ಷಿಯನ್ನು ತಂದು ವಪ್ಪಿಸಲೂ. ಆ ಪಕ್ಷಿಯನ್ನು ನಂಬಿಸಿ ಕೇಳಲಾಗಿ, ಸಂಭ್ರಮದಿ ಹೇಮಾವತಿಯೆಂಬ ಪಟ್ಟಣದಲ್ಲಿರುವ ಕಂಬುಕಂಠಿಯಳಾದ ಸುವರ್ಣೆಯೆಂಬುವಳ ವರ್ತಮಾನವನ್ನು ಕೇಳಿ ತುಂಬಾ ಅಪೇಕ್ಷೆವುಂಟಾಗಿರುವುದಾದ ಕಾರಣ ಸಂಭ್ರಮದಿಂದ ಪೋಗಿಬರುತ್ತೇನೈ ಸಹೋದರಾ – ಚಿತ್ರಶೇಖರಾ॥

ಚಿತ್ರಶೇಖರ: ಅಣ್ಣಯ್ಯ ಅಗ್ರಜಭವಾ  ಈ ಸೃಷ್ಠಿಯೊಳು ಪುಟ್ಟಿದಾರಭ್ಯದಿಂದ ಯನ್ನನ್ನು ಬಿಟ್ಟು ಅಗಲದೇ ಒಡಹುಟ್ಟಿದವನನ್ನು ಬಿಟ್ಟು ಪೋಗುತ್ತೇನೆಂದು ನಿಷ್ಠುರಮಾಗಿ ಪೇಳುತ್ತೀಯಲ್ಲಾ. ಎಷ್ಠು ಮಾತ್ರಕ್ಕೂ ನಿಮ್ಮ ಪಾದ ಸೇವಕನಾಗಿ ಹೊರಟು ಬರುತ್ತಾ ಇರುವೆನೋ ಅಣ್ಣಾ – ತಿಳಿಯಿತು ನಿನ್ನ ಬಣ್ಣಾ ॥

ಸೋಮಶೇಖರ: ಅನುಜಾ, ಚಿತ್ರಶೇಖರಾ ! ಈ ಪೃಥ್ವಿಯೋಳ್ ಬಹುಪ್ರಖ್ಯಾತಿಯನ್ನು ವಹಿಸಿ ಮತ್ತೆ ವಿಕ್ರಮನಲ್ಲಿ ಬಂಧುತ್ವ ಬೆಳಸಿ ರತ್ನಾದೇವಿಯನ್ನು ಬಿಟ್ಟು ಪೃಥ್ವಿಯನ್ನು ಸಂಚರಿಸಿದರೇ ಪೆತ್ತಂಥ ಪಿತ ಮಾತೆಯರಿಗೆ ಅಪಕೀರ್ತಿ ಬರುವುದಾದ ಕಾರಣ ಇಗೋ ರತ್ನಖಚಿತಮಾದ ಕನ್ನೈದಿಲೆಯ ಪುಷ್ಪಾಹಾರವನ್ನು ಇರಿಸಿಕೊಂಡು ಇದರಿಂದ ಯನ್ನಯ ಪ್ರಾಣದ ಜಯ ಅಪಜಯವನ್ನು ತಿಳಿಯುವುದಲ್ಲದೇ ಬಿತ್ತರದೀ ಆರು ತಿಂಗಳೊಳಗಾಗಿ ಚಿತ್ತೈಸುತ್ತೇನೆ, ಅತ್ತೆಯಾದ ಚಂದ್ರಮತೀದೇವಿಗೂ ಮತ್ತೆ ನಾದಿನಿಯಾದ ರತ್ನಾದೇವಿಗೂ ಬಿತ್ತರಿಸಿ ಇರುತ್ತೇನೆ. ಚಿತ್ತಜಾರಿಯ ಕರುಣವನ್ನು ಮಸ್ತಕದಲ್ಲಿ ತಳೆದು ಅರ್ತಿಯಿಂದ ಪೋಗಿ ಬರುತ್ತೇನೈ ಅನುಜ ಚಿತ್ರಶೇಖರಾ – ಶತೃಜನ ಭಯಂಕರಾ ॥

ಚಿತ್ರಶೇಖರ: ನಮೋನ್ನಮೋ ಅಣ್ಣಯ್ಯ ! ಸೋಮಶೇಖರನ ಕರುಣದಿಂದ ಪೋಗಿ ಬಾರೈ ಅಗ್ರಜಾ॥

 

(ಸೋಮಶೇಖರನು ಹೇಮಾವತಿಗೆ ಹೋಗುವಿಕೆ)

ಭಾಗವತರದರುವುಯಾಲಪದ

ಸೋಮಶೇಖರ ಭೂಪಾಲಕನೂ  ಕಾಮಿನಿ ಸುವರ್ಣೆಯ
ನೆವದೀ  ಪ್ರೇಮದಿಂದ ತಾನು ಹೊರಟನೂ ॥ಸೋಮ
ಶೇಖರನೂ  ಹೇಮಾವತಿಯ ಮಾರ್ಗವ ಪಿಡಿಯುತ್ತಾ                ॥1 ॥

ವಿಪಿನಾ ಕಾನನವನ್ನೂ ಪೊಕ್ಕು  ಕಪಿಲೇಶ ಮೌನಿಗೆ
ನಮಿಸೀ  ಗುಪಿತಾದಿಂದ ತಾನು ನಿಲ್ಲಲೂ ॥ಆ ತಾಪ
ಸ ಋಷಿಯು  ಅಪರಿಮಿತದಿ ಅರಸನ ಕಳುಹಲೂ                      ॥2 ॥

ಯೇಳು ಸುತ್ತಿನ ಕೋಟೆಯ ದಾಂಟಿ  ನೀಲಾದುಪ್ಪ
ರಿಗೆಗಳಾ ನೋಡಿ  ಬಹಳ ರತ್ನಾ ಖಚಿತದಾದ ಕೆಲ
ಸವಾ ॥ಆ ಪುರದಾ ಕಾಂತಿ  ಹೇಳುವವರಿಗೇ ಅಳವೇ ಬೆಳಕಾನೂ ॥3 ॥

ಇಂದ್ರಾ ಭವನಕಿಮ್ಮಿಗಿಲಾದ  ಸುಂದರ ಮಂದಿರವಾ
ಕಂಡೂ  ಕುಂದಾಣ ಕವಾಟ ದ್ವಾರದೀ ॥ಆ ಸುಂದಾ
ರಾಂಗೀ  ಅಂದು ಧ್ವನಿಯಾ ಕೇಳಿ ನಿಂತಾಳೂ                           ॥4 ॥

(ಸುವರ್ಣಾದೇವಿ ಬರುವಿಕೆ)

ದ್ವಿಪದೆಕಾಂಭೋಧಿ ರಾಗ

ಶ್ರೀ ಪಾರ್ವತೀಶನ ಸ್ತೋತ್ರೆ  ಸುಸ್ತಿರಾಗಾತ್ರೆ
ಸತ್ಯ ಚಾರಿತ್ರೆ, ಚಿತ್ರಭೂಷಣ ಪವಿತ್ರೆಯೆನಿಪಾ ॥
ಸುಂದರಿಯು ಸಂಭ್ರಮದಿ ತಾನೆದ್ದು  ಮುಖಮಜ್ಜನವಗೈದೂ
ಶಂಭುವಂ ನೆನೆದು  ಕೊಂಬುವರೇ ಬೆಲೆಯಿಲ್ಲವೆಂಬ ॥
ಝರ್ಝರಿಪ ಮೇಲು ಪಟ್ಟೆಯನು ತಾನುಟ್ಟೂ
ದಿಟ್ಟದಿಂ ತೊಟ್ಟಳಾ ರಮಣಿಯು ದಿವ್ಯಕಂಚುಕವಾ ॥
ಸೃಷ್ಟಿಯೊಳಗಳವಲ್ಲಾ  ಬಟ್ಟ ಕುಚದೊಯ್ಯರೀ
ಇಟ್ಟಳಾ ಸಡಗರದಿ  ಕಟ್ಟಾಣಿ ಮೇಲ್ ಕಂಠಿಹಾರವೂ ॥
ಥಳಥಳಿಪ ಚಂದ್ರಹಾರ  ಮುತ್ತುಕೆತ್ತಿದ ವಜ್ರಬಾವುಲಿ
ಬಿತ್ತರದ ವದನದೋಳ್  ಕಸ್ತೂರಿ ತಿಲಕವ ನಿಟ್ಟೂ ॥
ಕಡು ಸೊಬಗುಳ್ಳ ಕಡಗ ಕಂಕಣ  ವೀರಮುದ್ರಿಕೆಯ ಧರಿಸಿ
ಅಡಿಯೊಳಪ್ಪಿ ಮೆರೆವ  ಪಿಲ್ಲಿಗೆಜ್ಜೆ ಪಾವುಡವೂ ॥
ಕಟಿಮಧ್ಯದೊಳೆಸೆವಾ  ಸಡಗರದ ಅಪರಂಜಿಡಾಬು
ಸಕಲ ದಿವ್ಯಾಭರಣಗಳಂ  ಸಂತೋಷದಿಂದ ಧರಿಸೀ ॥
ಪೊಡವಿಪನ ನುಡಿಯ ಲಾಲಿಸಿ  ಕಡುರಮ್ಯತರಮಾದ
ಉಪ್ಪರಿಗೆಯಂ ಝಣ ಝಣತ್ಕಾರದಿಂದಿಳಿದೂ ॥
ಸುಂದರಾಂಗನ ಕಂಡು  ವೊಂದಾರು ಭುಜಮಾಗೀ
ಮೋಹದಿಂದುಬ್ಬೀ  ಅಂದು ಮೂರ್ಛೆಯ ಹೊಂದೀ
ಕಂದರ್ಪ ಶರ ಮುಂದಿರದಿ  ವಳಗೊಂಬೆನೆನುತಾ
ಜಯಲಕ್ಷ್ಮಿಯಂದದಲೀ  ಜನ ವೀರಸೇನನ ಸುತೆಯೂ
ಜ್ಯೇಷ್ಠ ಬಳ್ಳಾಪುರದ  ನಿಟಿಲಾಕ್ಷ ಸೋಮೇಶ್ವರನಾ
ನಿಷ್ಠೆಯಿಂ ಸ್ಮರಿಸಿ ಸಲಹೆನುತ  ಬಂದಳಾ ಚೆಲುವೆ ಸುಂದರಿಯೂ ॥

ತೆರೆದರುವು

ಕನ್ನೆ ತಾ  ಬಂದಳಾಗ  ಸುವರ್ಣೆ  ಮೋಹದಲ್ಲೀ
ಸುವರ್ಣೇ  ಮೋಹದಲ್ಲೀ  ಸಂಪನ್ನೇ  ಬೇಗದಲ್ಲೀ                     ॥1 ॥

ತನ್ನ ಮನಸಿ  ನೊಳಗೆ ತಾನು  ಪನ್ನಗೇಂದ್ರ  ಶಯನನನ್ನು
ಚೆನ್ನಾಗಿ  ಸ್ಮರಿಸುತ್ತಾ  ಕನ್ನೆ ಕಾಮಿನೀ ಬೇಗಾ                          ॥2 ॥

ಪಲ್ಲವ ಪಾ  ಣಿಯ ಸ್ಮರಿಸೀ  ಪುಲ್ಲಲೋ  ಚನೆ ತಾನು
ನಿಲ್ಲಾದೇ  ಬಂದಳಾಗಾ  ತಲ್ಲಣಿಸುತ್ತಲಿ ಬೇಗಾ                         ॥3 ॥

ಇಂದು ಜ್ಯೇಷ್ಠ ಬಳ್ಳಾಪುರದ  ಚಂದ್ರಧರನ ಸ್ಮರಿಸಿ ಮನದೀ
ಚಂದದಿಂದಾ ರಕ್ಷಿಸೆನುತಾ  ಸುಂದರಾವತಿಯು ಬೇಗಾ              ॥4 ॥

ಸುವರ್ಣೆ: ಅಯ್ಯ ಕವಾಟ ಸೇವಕಾ ! ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು, ಅಯ್ಯ ಸೇವಕಾ, ರಾಗ ರಚನೆಗಳಿಂದ ಭೋಗ ಮಂಟಪದಿ ನಿಂದು ಸೋಗಕಂಗಳೆಯನ್ನು ವಿನಿಯೋಗದಿಂದ ಕೇಳಲೂ ಈಗಲೇ ಪೇಳುತ್ತೇನಪ್ಪಾ ಚಾರಕ – ಸೌಂದರ‌್ಯತಿಲಕಾ ॥

ಅಪ್ಪಾ ರಾಜಸೇವಕಾ, ಈ ಭುವನದೋಳ್ ಶೃಂಗಾರ ಕರಮಾಗೀ, ಬಂಗಾರಮಯ ಮಾಗೀ, ಕಂಗಳಿಗೆ ಪ್ರಿಯಮಾಗೀ, ಕಳಿಂಗ ದೇಶಕ್ಕೆ ಮಿಗಿಲಾಗಿ, ಕಂಗೊಳಿಪ ಹೇಮಾವತಿಯೊಳಿರ್ಪ ರಂಗು ಮಂಟಪದಿ ಭೃಂಗ ಕುಂತಳೆಯಾದ ಸರ್ವಮಂಗಳೆಯ ಕೃಪೆಯಿಂದೊಪ್ಪುವಾ ಅಂಗನೆ ಸುವರ್ಣಾದೇವಿಯೆಂದು ಮಂಗಳಕರಮಾಗಿ ಕರೆಯುವರಲ್ಲದೇ, ಧವಳಾಂಗ ಸ್ವರೂಪಿಯಾದ ಅಂಗಜನ ಪಿತ ರಂಗನಾಯಕನ ಸಂಗಸಖನಾದ ಗಂಗಾ ವಲ್ಲಭನನ್ನು ಯನ್ನ ಅಂಗದಲ್ಲಿ ಮಂಗಳಕರಮಾಗಿ ಜಪಿಸುತ್ತಾ ಇರುತ್ತೇನಪ್ಪಾ ಚಾರ ತಿಳಿಯಿದೇ ಯನ್ನ ವಿಚಾರ ॥

ಅಯ್ಯ ಕವಾಟ ಸೇವಕಾ ! ಹತ್ತು ಯೋಜನದ ನಮ್ಮ ಪಟ್ಟಣದಲ್ಲಿಯೂ ಮತ್ತೆ ಅಸುರನ ವಾಸಸ್ಥಳವಾದ ಈ ಪುರದಲ್ಲಿ ನರ ಸಂಚಾರವಿಲ್ಲದಿರಲೂ, ಈವತ್ತಿನಾ ದಿನ ಮಾನವರ ಶಬ್ದವನ್ನು ಕೇಳಿ ಏಳು ಉಪ್ಪರಿಗೆಯ ತುದಿಯನ್ನು ಹತ್ತಿ ನೋಡುವಲ್ಲಿ, ಎತ್ತಲೂ ಕಾಣದೇ ಮುತ್ತು ರತ್ನಗಳ ಬಜಾರುಗಳನ್ನು ನೋಡುತ್ತಾ ಬರುತ್ತಿರುವಾ, ರಾಜಕುಮಾರನ ಸುಳಿವನ್ನು ಕಂಡು ಚಿತ್ತಚಂಚಲಮಾಗಿ ದೈತ್ಯನು ಬರುವ ಹೊತ್ತಾಯಿತೆಂದು ಆತನ ಮೃತ್ಯುವನ್ನು ಕಾಯಬೇಕೆಂದು ಬಂದು ಇದ್ದೇನಪ್ಪಾ ಭೃತ್ಯ – ಈ ಮಾತು ಸತ್ಯ ॥