ಸಾರಥಿ: ಅದೇ ಪ್ರಕಾರ ಆಗಬಹುದಮ್ಮಾ ತಾಯೇ – ಮನ್ನಿಸಿ ಕಾಯೇ ॥

ದರುವು

ಚಂದ್ರನಂದದೀ ಬಂದನ್ಯಾರೆಲೋ  ಹೇ ಸುಂದರಾಂಗ
ಚಂದ್ರನಂದದೀ ಬಂದನ್ಯಾರೆಲೋ ॥ಪ ॥
ಸುಂದರಾಂಗ ಕೇಳೋ ನಮ್ಮ
ಚಂದ್ರ ಶಾಲೆಯ ಮುಂದಣಾದೀ ॥
ಬಂದು ನಿಂತ ಅಂದವೇನೋ
ಚಂದದಿಂದ ಇಂದು ಪೇಳೋ                                               ॥1 ॥

ವಸುಧೆ ಪಾಲ ಕೇಳು ಯಾವ
ದೇಶದರಸನಾಗಿ ಇರುವೇ ॥
ಕುಶಲದಿಂದ ಪೆಸರು ಪೇಳು
ವಶವ ಆಗುವೆ ವ್ಯಸನವೇಕೇ                                                ॥2 ॥

ಇಂದು ಜ್ಯೇಷ್ಠ ಬಳ್ಳಾಪುರದಾ
ಚಂದ್ರ ಚೂಡ ಪೊರೆವ ನಮ್ಮ ॥
ಚಂದದಿಂದ ಮಂದಿರದೊಳು
ಬಂದು ಸುಖವ ಇಂದು ತೋರೋ                                         ॥3 ॥

ಸುವರ್ಣೆ: ಕಂದರ್ಪ ಸಮರೂಪನಾದ ಹೇ ಸುಂದರಾಂಗ ! ನಮ್ಮ ಮಂದಿರದ ಚಂದ್ರ ಶಾಲೆಗಳ ಮುಂದೆ ಅಂದವಾಗಿ ಬಂದು ನಿಂದಿರುವ ಚಂದ್ರನೋ ದೇವೇಂದ್ರನೋ ಎಂಬಂತೆ ತೋರುತ್ತಿರುವ ನಿಮ್ಮನ್ನು ನಾ ತಿಳಿಯೇ  ನಿಮ್ಮ ಅಂದವಾದ ಸೌಂದರ‌್ಯವನ್ನು ನೋಡಿದರೆ ಕಂದರ್ಪನ ತಂದೆಯಾದ ಮುಕುಂದನೋ, ಚಂದ್ರಶೇಖರನೋ ಅಲ್ಲದಿರೆ ನೀ ಧಾರು ? ಚಂದದಿಂದ ಯನ್ನೊಡನೆ ತಿಳಿಸುವುದಲ್ಲದೇ, ಇಂದು ಇಲ್ಲಿಗೆ ನೀವು ಬಂದು ಇರುವ ಆನಂದವೇನೋ  ನಿಮ್ಮ ತಂದೆ ತಾಯಿಗಳ ಪೆಸರೇನೋ ! ನಿರ್ಬಂಧಕರಮಾದ ಸ್ಮರನ ಮೋಹದಿಂದ ಮರುಳಾಗಿ ಬಂದಿರುವ ಯನ್ನೊಡನೆ ಪೇಳಿ, ಇಂದು ಯನ್ನ ಮಂದಿರಕ್ಕೆ ದಯಮಾಡಿಸಬೇಕೈ ಪ್ರಿಯಾ – ಚನ್ನಿಗರಾಯ ॥

ದರುವು

ರಾಜಪುತ್ರಿಯೇ ಪೇಳ್ವೆ ವಿವರವಾ ॥ಪ ॥
ಅಬ್ಜಲೋಚನೆ ಕೇಳೆ ತರುಣಿ
ವಜ್ರ ಮಕುಟ ಧರಣಿಧರನಾ ॥
ಪ್ರಜ್ವಲಿಸುವ ತನುಜರೆನಿಸೀ
ನಿರ್ಜರೇಶನ ಕರುಣದಿಂದಾ                                                 ॥1 ॥

ಮತ್ತೆ ಕ್ಷಿತಿಯ ಕರ್ತನನ್ನು
ವತ್ತಿಗೆಲಿದು ಮತ್ತೆ ಸುತೆಯ ॥
ಚಿತ್ರಶೇಖರಗೊಲಿಸಿ ಬೇಗಾ
ಅರ್ತಿಯಿಂದ ಪರಿಣಯವನೂ                                              ॥2 ॥

ಸೋಮಶೇಖರ: ಚಿತ್ತಜನ ಪೊಸಕಾಂತೆ ! ಕತ್ತಿಯನ್ನು ಝಳಪಿಸಲೂ ತತ್ಥಳಿಪ ಕಾಂತಿಗಿಮ್ಮಿಗಿಲಾದ ಪುತ್ಥಳಿಯ ಪ್ರತಿಮೆಯಂತೊಪ್ಪುವಾ ತರುಣಿಯೇ ಕೇಳು ! ಈ ಪೃಥ್ವಿಗುತ್ತಮವಾದ ರತ್ನಾಪುರಿಯೆಂಬ ಪಟ್ಟಣಕ್ಕೆ ಕಾರಣಕರ್ತನಾಗಿ ಪ್ರಜ್ವಲಿಪ ವಜ್ರಮಕುಟರಾಯನ ಚಿತ್ತಕ್ಕೆ ವಪ್ಪುವಾ ಕನಕಪುತ್ಥಳಿಯ ಉದರದೋಳ್ ಚಿತ್ತಜಾರಿಯ ವರದಿಂದ ಚಿತ್ತೈಸಿದ ಸೋಮಶೇಖರ ಚಿತ್ರಶೇಖರರೆಂದು ಬಿತ್ತರದಿ ಪೃಥ್ವಿಯ ಪಾಲಿಸುತ್ತಿರಲೂ, ಮತ್ತೆ ನೀಲಾವತಿಗೆ ಕರ್ತನಾದ ವಿಕ್ರಮ ಭೂಪತಿಯ ವನದ ಸಿಂಹವನು ಕೊಂದು ಮತ್ತೆ ಮೋಹದಪುತ್ರಿ ರತ್ನಾದೇವಿಯನ್ನು ಚಿತ್ರಶೇಖರನಿಗೆ ಅರ್ತಿಯಿಂದ ಪರಿಣಯವನ್ನು ಮಾಡಿ ಈ ಧಾತ್ರಿಗೆ ಕರ್ತರಾಗಿ ಇರುತ್ತೇವೆ ನಾರಿ-ಮದನ ಕಠಾರಿ ॥

ದರುವು

ರಾಜಪುತ್ರಿಯೇ ಪೇಳ್ವೆ
ಅಲ್ಲಿ ತಿಳಿದೆ ನಿನ್ನ ಪರಿಯಾ
ಖುಲ್ಲ ದನುಜ ಎಲ್ಲಿ ಇರುವ ॥
ಕೊಲ್ವೆ ನೆಂದು ಕೋಪದಿಂದಾ
ನಿಲ್ಲದಿಲ್ಲಿ ಗೈದು ಬೇಗಾ                                                       ॥3 ॥

ಧರಣಿ ಜ್ಯೇಷ್ಠ ಬಳ್ಳಾ ಪುರದ
ಗರಳ ಧರನು ಪೊರೆವ ನಿನ್ನಾ ॥
ತರಳೆ ನಿನ್ನ ಜನಕ ನ್ಯಾರು
ಪರಿಯ ವಿವರದಿಂದ ಪೇಳೂ                                                ॥4 ॥

ಸೋಮಶೇಖರ: ಹೇ ನಾರಿ ! ಕುಸುಮ ಶರನರ್ಧಾಂಗಿಯಂದದಿ ಪ್ರಕಾಶಿಸುವ ಕುಸುಮಗಂಧಿಯೇ ಕೇಳು ! ಈ ವಸುಧೆಗೆ ಉತ್ತಮವಾದ ನೀಲಾವತಿಯ ನಗರವನ್ನು ಅಸಮ ಸಾಹಸದಿಂದ ಪಾಲಿಸುತ್ತಿರಲೂ, ಯೆಸೆವ ಜಾಂಬವ ಪಕ್ಷಿಯಿಂದ ಕುಶಲತರಮಾಗಿ ನೀನು ಬಿಸು ಸುಯ್ಯುವುದನ್ನು ತಿಳಿದು, ಅಸಮ ಕೋವಿದನಾದ ಅಸುರನನ್ನು ಸಂಹರಿಸಬೇಕೆಂದು ಮೊಸೆ ಮೊಸೆದು ಕೋಪಾತುರನಾಗಿ ಈ ವಸುಧೆಗೆ ಚಿತ್ತೈಸಿರುತ್ತೇನೆ, ಶಶಿಧರನು ರಕ್ಷಿಸುವನಾದ ಕಾರಣ ಕುಸುಮಗಂಧಿಯೇ ನಿನ್ನ ಪೆತ್ತಂಥ ಜನನೀ ಜನಕರ ಪೆಸರೇನು ? ನೀನು ಈ ಸ್ಥಿತಿಯಲ್ಲಿರಲು ಕಾರಣವೇನು ? ವಿಶದಮಾಗಿ ಉಸುರಬೇಕೇ ನಾರೀ – ನವರಸ ಪೋರಿ ॥

ದರುವು

ಸುಂದರಾ ಸುಗುಣ ರಾ  ಜೇಂದ್ರ ವಂದಿಪೆ ಚಂದ್ರಾ
ಮುಂದಿನ ಪರಿ ರಾಜೇಂದ್ರಾ ॥ಪ ॥
ಮಂದಗಮನೆ ಮಾತೆ  ಇಂದು ಧಾತ್ರಿಯ ಪೊರೆದಾ
ತಂದೆ ವೀರಸೇನಾನೆಂದೂ  ತಿಳಿದು  ಚಂದದೊಳಿಂದೂ            ॥1 ॥

ಸುವರ್ಣೆ: ಚಂದ್ರಶೇಖರನ ವರದಿಂದ ಪುಟ್ಟಿದ ಸುಂದರ ರಾಜಶೇಖರನೇ ಕೇಳು ! ಇಂದು ಈ ಧಾತ್ರಿಯನ್ನು ಚಂದದಿಂದ ಪರಿಪಾಲಿಸಿದಾ ದುರಧೀರ ರಣಶೂರ ವೀರಸೇನನೇ ನಮ್ಮ ಜನಕ, ಆತನ ಅರ್ಧಾಂಗಿನಿಯೆನಿಸಿ ಮಂದಗಮನೆಯಾದ ಸುಂದರವತಿಯೇ ಇಂದು ಯನ್ನ ಹಡೆದ ಜನನಿ ಯೆಂದು ತಿಳಿದು ಅಂದವಾದ ಮಂದಿರಕ್ಕೆ ಚಂದಿರನಂ ಪೋಲ್ವ ಸುಂದರಾಂಗರಾದ ನೀವು ಚಂದದಿಂದ ದಯಮಾಡಿಸಬೇಕೈ ನಲ್ಲಾ – ಕೇಳೆನ್ನ ಸೊಲ್ಲಾ ॥

ದರುವು

ಜನಪ ಸುತರಿಲ್ಲೆಂದೂ  ಅನುನಯದೈತಂದೂ
ಜನಕ ತಪ ಮಾಡಲಂದೂ ॥
ಪನ್ನಗೇಶನ ವರದೀ  ಮುನ್ನ ನಾ ಪುಟ್ಟಿದೆನೂ
ಕನ್ನೆ ಸುವರ್ಣೆ ಯೆನ್ನುವರೂ  ಯನ್ನ  ಧರೆಯೊಳು ಜನರೂ         ॥2 ॥

ಸುವರ್ಣೆ: ಮನ್ಮಥ ಸಮರೂಪನಾದ ಹೇ ರಾಜ ! ಈ ಪೃಥ್ವಿಯೋಳ್ ನಮ್ಮ ಪಿತನಾದ ವೀರಸೇನ ಭೂಪೋತ್ತಮನು ಸುತರಿಲ್ಲದ ಕಾರಣದಿಂದ ರತಿಪತಿಯ ವೈರಿಯಾದ ಶಂಕರ ಮೂರ್ತಿಯನ್ನು ಸ್ಥಿರಕಾಲ ತಪವನ್ನಾಚರಿಸಿ ಸುತೆ ಸುವರ್ಣೆಯೆಂಬ ಯನ್ನನ್ನು ಪಡೆದು ಹಿತದಿಂದ ಆದರಿಸುತ್ತಾ ಸತತವೂ ಈ ಧಾತ್ರಿಯನ್ನು ಪಾಲಿಸಿದನೈ ರಾಜ – ಅರ್ಕಸಮತೇಜಾ ॥

ದರುವು

ಧಾತ್ರಿ ಹೇಮಾವತಿಯೊಳ್  ಹತ್ತು ಯೋಜನಗಳೂ
ದೈತ್ಯನೂ ಭರದಿ ಕೇಳೂ ॥
ಅರ್ತಿಯಿಂದಿರುವಂಥ  ಭೃತ್ಯ ಮಾರ್ಬಲವನ್ನೂ
ತುತ್ತಿಗೆ ನುಂಗುತ್ತಾ ಅವನೂ
ಮತ್ತೇ  ಯನ್ನ ನುಳುಹಿದನೂ                                               ॥3 ॥

ಸುವರ್ಣೆ: ಹೇ ರಾಜ ! ಈ ಮಂಡಲದಿ ಮಾರ್ತಾಂಡ ಧರನಂತೆ ಒಪ್ಪುವಾ ವೀರಸೇನ ಭೂಪೋತ್ತಮನು ಪ್ರಚಂಡತನದಿಂದ ಹೇಮಾವತಿಯ ಹತ್ತು ಯೋಜನದ ಪಟ್ಟಣವನ್ನು ಪಾಲಿಸುತ್ತಿರಲೂ ಚಂಡದಾನವನು ಚಿತ್ತೈಸಿ ದಂಡು ದಳವಾಯಿ ಮಾರ್ಬಲವನ್ನೂ ಸೈನ್ಯದವರನ್ನೂ ಕಂಡ ಕಂಡ ಹಿಂಡಿ ಹಿಪ್ಪೆಯ ಮಾಡಿ ಈ ಮಂಡಲವನ್ನೆಲ್ಲಾ ಸೇವಿಸಿದ ಪುಂಡ ರಕ್ಕಸನು ಯನ್ನ ಘನ ಸೌಂದರ್ಯವನ್ನು ಕಂಡು ಇರಿಸಿಕೊಂಡ ಕಾರಣ ಅಂಡಲೆದು ದುಃಖಪಡುತ್ತಾ ಇರುವೆನೈ ರಾಯ – ಮತ್ತೂ ಪೇಳುವೆನೈ ಪ್ರಿಯಾ ॥

ದರುವು
ಬಾರೋ ಸುಂದರಾ  ಸುಖವ  ತೋರೊ ಚಂದಿರಾ॥

ಬಾರೋ ಪ್ರಿಯನೇ  ಸುರತಾ  ತೋರೊ ರಾಯನೇ ॥ಪ ॥
ಮಾರನಾಸ್ತ್ರಕೆ ಮನವೂ
ಸೂರೇ ಹೋಯಿತೋ ರಾಯ
ಸೇರಿ ಸುರತ ದೊಳಗೇ
ಸಾರೋ ಗಮ್ಮನೇ  ರಮಣಾ                                               ॥1 ॥

ಬಿಲ್ಲುಗಾರನ ಶರಕೇ
ತಲ್ಲಣಿಸುವುದೆದೆಯೂ ॥
ಗುಲ್ಲು ಕುಚಗಳ ಮಧ್ಯೆ
ಜಲ್ಲು ಯೆನುತಿದೇ  ರಮಣಾ                                                ॥2 ॥

ಬಾಲ ಪ್ರಾಯವು ನಿಮ್ಮಾ
ಪಾಲು ಮಾಡುವೆ ಪ್ರಿಯಾ ॥
ಲೋಲನೆ ಬಳ್ಳಾ ಪುರದಾ
ಶೂಲಿ ಸಲಹುವಾ  ರಮಣಾ                                                 ॥3 ॥

ಸುವರ್ಣೆ: ಕಂದರ್ಪ ಸಮರೂಪನಾದ ಹೇ ಕಾಂತ ! ಕಂದರ್ಪನ ಶರ ತಾಗಿ ನಿಮ್ಮ ಚಂದವಾದ ಚರಣ ಕಮಲವನ್ನು ಪಿಡಿದು ವಂದಿಸಿ ಬೇಡುವಂಥ ಸುಂದರವತಿಯ ಕುಂಭ ಕುಚಗಳೆರಡನ್ನು ಅಕ್ಕರದಿಂದ ಪಿಡಿದು ಸಕ್ಕರೆಯ ಚಂದುಟಿಗೆ ಸಮವಾದ ಉಪರತಿಯ ಬೆರಸಿ, ಆನಂದಪಡಿಸಿದರೇ, ಚಂದ್ರಶೇಖರನು ಚಂದದಿಂದ ರಕ್ಷಿಸುವನೈಯ್ಯ ಕಾಂತ ! ಆದ ಕಾರಣ ಹೇ ಕಾಂತ ಮುಂದೇನು ಯೋಚನೆಯಂ ಮಾಡದೇ ನಮ್ಮ ಮಂದಿರದ ಭೋಗ ಮಂಟಪಕ್ಕೆ ಪೋಗೋಣ ದಯಮಾಡಿಸಬೇಕೈ ರಮಣಾ-ಸದ್ಗುಣಾಭರಣ ॥

ದರುವು

ನಡಿ ನಡಿ ನಡಿ ನಡಿಯೇ  ನಾ ಕಂಡೇನು
ತಡಿ ತಡಿ ಮಡದಿಯಳೇ ॥ಪ ॥
ಪೊಡವಿ ಹೇಮಾವತೀ  ಒಡೆಯಾನ ನುಂಗಿದಾ
ಕಡುಪಾಪಿ ಕಂಸನಾ  ಕಡಿಯಾದೆ ಬಿಡೆ ನಾನು          ॥1 ॥ನಡಿ ನಡಿ ॥

ಮಂದಿ ಮಾರ್ಬಲಗಳನೂ  ತಿಂದಿರುವಂಥ
ಬಂಧು ಬಳಗವನ್ನೂ ॥
ಸುಂದರಾಂಗಿಯೇ ಕೇಳು  ಕೊಂದಂಥ ಅವನನ್ನೂ
ಕೊಂದೆನಲ್ಲದೇ ನಿನ್ನೋ  ಳೊಂದಿ ಸುಖವನು ತೋರೇ ॥2 ॥ನಡಿ ನಡಿ ॥

ನಟನೆ ತೋರುವುದೇತಕೇ  ಪಟುತರದಿಂದಾ
ಕುಟಿಲವಿಲ್ಲವೇ ಮನಕೇ ॥
ಜ್ಯೇಷ್ಠಾ ಬಳ್ಳಾಪುರದ  ಅಷ್ಠಮೂರ್ತಿಯ ಭಜಿಸಿ
ದುಷ್ಠ ದೈತ್ಯನ ನಾನು  ಕುಟ್ಟಿ ಕೆಡಹದೆ ಬಿಡೆನೂ ॥ನಡಿ ನಡಿ ನಡಿ ನಡಿಯೇ   ॥3 ॥

ಸೋಮಶೇಖರ: ಹೇ ರಮಣೀ ! ಮನ್ಮಥನ ಕೈಯಲ್ಲಿರುವ ಪುಷ್ಪ ಮಾರ್ಗಣದಂತೆ ಪ್ರಕಾಶಿಸುವ ಹೇ ಕಾಂತೆ ! ನಿನ್ನ ಅಂತರಂಗದೋಳ್ ಕಂತುವಿನ ತಾಪಕ್ಕೆ ಸೈರಿಸಲಾರದೆ ಮೋಹಭ್ರಾಂತಿಯನ್ನು ಹೊಂದಿ ಯಾತಕ್ಕೆ ಚಿಂತಿಸುತ್ತಾ ಇದ್ದೀ, ಆದರೇ ಅಂತರದಿ ನಾನು ಪಂಥವನ್ನು ಮಾಡಿರುವ ಕಾರಣ ಅಂತಕಾರನಾದ ಅಸುರನನ್ನು ಕೊಂದು ಅಂತಕನಪುರಕ್ಕೆ ಕಳುಹಿಸುವ ಪರಿಯಂತರವೂ ಕಂತುವಿನ ಕೇಳಿಯೋಳ್ ನಿನ್ನ ಕೂಡದೇ ಕಂತುವೈರಿಯಾದ ಶಂಕರನನ್ನು ಜಪಿಸುತ್ತಾ ಮಹಾಶಾಂತನಾಗಿ ಇರುತ್ತೇನೆ ಕಮಲಾಕ್ಷಿ – ಹೋ ಸಾರಸಾಕ್ಷಿ ॥

ದರುವು

ತಾಳಲಾರೆನು ತಾಪ ರಮಣಾ
ಕೇಳೂ ಪೇಳುವೆ ಸುಗುಣಾ
ಉಳುಹಲೀ ಇನ್ನೆಂತು ಪ್ರಾಣಾ ॥
ಪುಲ್ಲಬಾಣನ ಶರಕೇ  ನಿಲ್ಲಾದೆನ್ನಯ ಮನ
ತಲ್ಲಣಿಸುತಲಿದೇ  ಕಲ್ಲು ಮನಸು ಬಿಡೂ                                  ॥1 ॥

ಪಂಥವ್ಯಾತಕೋ ಪ್ರಾಣಕಾಂತಾ
ಅಂತರಂಗದೊಳಿಂಥ
ಭ್ರಾಂತನ್ನು ಬಿಡು ನೀ ಧೀಮಂತಾ ॥
ಕಂತುಕೇಳಿ ಯೊಳಗಾನಂತ ಸುಖದಿಂದಿರೇ
ಕಂತು ವೈರಿಯು ನಮ್ಮ  ಸಂತಸದಿಂ ಪೊರೆವಾ                       ॥2 ॥

ಸುವರ್ಣೆ: ಪುಲ್ಲ ಶರ ಸಮರೂಪನಾದ ರಾಯನೇ ಕೇಳೂ. ಪುಲ್ಲಶರನಾದ ಮನ್ಮಥನು ಮನದೊಳಗೆ ಮೆಲ್ಲ ಮೆಲ್ಲನೆ ಬಂದು, ಪುಲ್ಲಶರ ಮಾರ್ಗಣವನ್ನು ಠೇಂಕರಿಸಿ ಎಸೆಯುವ ಬಾಣಗಳ ಭಾದೆಗೆ ಗುಲ್ಲ ಕುಚಗಳ ಮಧ್ಯದಲ್ಲಿ ಝಲ್ಲೆಂದು ತಲ್ಲಣಿಸುವುದಾದ ಕಾರಣ ವಲ್ಲಭೆಯ ಮೇಲೆ ಪೂರ್ಣ ಕಟಾಕ್ಷವಿಟ್ಟು ಚಂದದಿಂದ ಮಾಡಿರುವ ಶಪಥವನ್ನು ಬಿಟ್ಟು ಉಲ್ಲಾಸದಿಂದ ತಬ್ಬಿ ತಕ್ಕೈಸಿ ಸುಖಿಸಿದರೇ ಮಲ್ಲೇಶನಾದ ಕಾಲಕಂಧರನು ಕರುಣಿಸುವನೈ ನಲ್ಲಾ-ಕೇಳೆನ್ನಾ ಸೊಲ್ಲಾ ॥

ದರುವು

ಬಿಡು ಬಿಡು ಮಡದಿಯೇ  ವಡಲೊಳು ಮಿಡುಕಿಸಿ
ಗಡ ಬಡ ಪಡುತಿಹರೇ  ನಾರಿ                                               ॥1 ॥

ಕಡುಗಲಿ ದನುಜನ  ಸಡಗರ ದಿಂದಲೀ
ಕಡಿಯುವೆ ಸಮರಸದೀ  ಮುದದೀ                                        ॥2 ॥

ಜ್ಯೇಷ್ಠ ಬಳ್ಳಾಪುರ  ಅಷ್ಠಮೂರ್ತಿಯ ಮನ
ದಿಷ್ಠದಿ ಕೂಡುವೆನೇ  ನಾನು                                                 ॥3 ॥

ಸೋಮಶೇಖರ: ನಾಗ ಮಲ್ಲಿಗೆಯಂತೆ ಸೊಗಯಿಸುವಾ, ಸೋಗಕಂಗಳೆಯಾದ ಸುವರ್ಣೆಯೇ ಕೇಳು  ಬಗೆ ಬಗೆಯ ವಿಧದಿಂದ ಸೋಗ ಕಲೆಯನ ಕೇಳಿಯೋಳ್ ಭೋಗಿಸುವುದೆಂದು ಅಗಲದೇ ಪೇಳುತ್ತಾ ಇದ್ದೀ, ಜಗದೊಳಗೆ ಯನಗೆ ಹಗೆಯಾದ ದೈತ್ಯನನ್ನು ಮುಗಿಸಿಕೊಂಡನಲ್ಲದೇ ಹಗರಣವು ಸಂಭವಿಸುವುದಾದ ಕಾರಣ ನಗಜಾರಮಣನಾದ ಶಂಕರನ ಪಾದಾರವಿಂದವನ್ನು ಭಜಿಸುತ್ತಾ ನಗೆ ಮುಖದಿಂದ ನಿನ್ನೊಡನೆ ಸೊಗಸಾಗಿ ಆಗಮಿಸುತ್ತೇನೆ. ಒಂದು ಕ್ಷಣ ಮಾತ್ರ ಸೈರಿಸೇ ನಾರೀ-ಮದನ ವೈಯ್ಯರೀ ॥

ದರುವು

ಲಾಲಿಸೆನ್ನ ಮಾತ  ಬೇಗ
ಪಾಲಿಸೆನ್ನ ಕಾಂತ ॥
ಬಾಲೆಯಾದ ಯನ್ನೊಳು ಸ್ಮರನ
ಕೇಳಿಯೊಳಗೆ ಸುಖಿಸೋ ಪ್ರಿಯಾ                                        ॥1 ॥

ಚಿಕ್ಕ ಪ್ರಾಯದವಳ ನೋಡಿ
ಸೊಕ್ಕಿ ಗಮ್ಮನೆ ಕೂಡಿ ॥
ತಕ್ಕ ಸುರತ ವಾಡದಿರಲೂ
ಗಕ್ಕನೆನ್ನ ಪ್ರಾಣ ಬಿಡುವೇ                                                    ॥2 ॥

ಸುವರ್ಣೆ: ಹೇ ನಲ್ಲಾ, ಹೇ ಕಾಂತ ! ಹೇ ಪ್ರಿಯಾ ! ಪ್ರಮುಖರೊಳು ಚೆಲುವ ಹಿಮಕರನಂತೆ ಪ್ರಜ್ವಲಿಪ ನಿಮ್ಮ ಚೆಲುವಿಕೆಯನ್ನು ಕಂಡು ಮಮಕರದಿಂದ ಬಂದ ಕಾಮಿನಿಯನ್ನು ಸುಖಿಸದೇ ಸುಮನಸದೀ ಕ್ರೂರಮಾಗಿ ಮಾತನಾಡುತ್ತಾ ಭ್ರಮಕರವಿಲ್ಲದೇ ಈ ರೀತಿಯಿಂದ ಇದ್ದರೇ ಈ ಭೂಮಿಯ ಮೇಲೆ ಯನ್ನ ಪ್ರಾಣವನ್ನಿರಿಸುವುದು ಸಾಮಾನ್ಯವಲ್ಲವೋ ಕಾಂತ-ನಿನಗೇತಕೆ ಈ ಪಂಥ ॥

ಸೋಮಶೇಖರ: ಹೋ ಮಧುರವಾಣಿ, ಹಾಗಾದರೆ ಯನ್ನಯ ಸದನಕ್ಕೆ ವದಗೀ ವಾಮಭಾಗದ ತೊಡೆಯ ಮೇಲೆ ಮುದದಿಂದ ಕುಳಿತುಕೊಳ್ಳುವಂಥವಳಾಗೇ ನಾರಿ – ಮದನ ಕಠಾರಿ ॥

ಸುವರ್ಣೆ: ಅದೇ ಪ್ರಕಾರ ಕುಳಿತು ಕೊಳ್ಳುವೆನೈ ಮೃಡರಾಜ ಪತಿಯೇ ॥

(ಸೋಮಶೇಖರನು ಸುವರ್ಣೆಯನ್ನು ಕೂಡುವಿಕೆ)

ದರುವು

ಮತ್ಸ್ಯಕಂಗಳೆ ನಡಿಯೇ  ಮೆಚ್ಚಿದೆ ನಿನ್ನಾ
ಇಚ್ಛೆಯಿಂದಲಿ ಕೂಡುವೇ ॥ಪ ॥
ಮುಚ್ಚು ಮರೆ ಯಿನ್ಯಾಕೆ ಮನದೊಳು
ಮತ್ಸ್ಯಕೇತನ ಭೋಗದಿಂದಲೀ ॥
ಇಚ್ಛೆಯಿಂದಲಿ ಸಲಿಸಿ ಬೇಗದೀ
ಮೆಚ್ಚಿಸುವೆ ಕೇಳ್ ಮತ್ಸ್ಯಗಂಧಿಯೇ                                       ॥1 ॥

ಸುಂದರೀ ಮೋಹದಲೀ  ಇಂದಿನಾ ದಿನಾ
ಹೊಂದುವೆ ಸುಖದಿಂದಲೀ ॥
ಅಂದ ಚಂದಗಳಿಂದ ವಪ್ಪುವಾ
ಸುಂದರತ್ವದ ಮೋಹದಿಂದಲೀ ॥
ಇಂದು ನಿನ್ನೊಳು ಹೊಂದಿ ಬೇಗದೀ
ನಂದ ಸುಖದೊಳ ಗೊಂದಿ ಬಾಳುವೇ                                    ॥2 ॥

ಮರುಗಲ್ಯಾತಕೆ ಪೋಗುವಾ  ಬಳ್ಳಾಪುರದ
ಉರಗ ಭೂಷಣ ಕಾಯುವಾ ॥
ಗರಳ ಕಂಧರನಾದ ಶಂಕರ
ಚರಣ ಕಮಲವ ಸೇವೆ ಗೈಯುತಾ ॥
ಪರಮ ಸಂತಸದಿಂದ ಬೇಗನೇ
ಸ್ಮರನ ಕೇಳಿಯ ಚಿಂತಿಸುವೆನೇ                                           ॥3 ॥

ಸೋಮಶೇಖರ: ಹೇ ಕಾಂತೆ, ಹೇ ರಮಣಿ, ಹೇ ನಲ್ಲೇ ! ಕುಸುಮ ಗಂಧಿಯರೊಳಗೆ ಶಶಿಬಿಂಬದಂತೆಸೆವ ಕುಸುಮಲೋಚನೆಯಾದ ಸುವರ್ಣೆಯೇ ಕೇಳು ! ಈ ಸಮಯದಲ್ಲಿ ನಿನ್ನ ಕುಶಲತರಮಾದ ಇಷ್ಠಾನು ಸಾರಮಾಗಿ ಕುಸುಮ ಶರ ಕೇಳಿಯೋಳ್ ರತಿಸುಖವನ್ನು ತೋರುತ್ತೇನೆ. ಪ್ರಕಾಶಮಯವಾಗಿರುವ ಮಂದಿರಕ್ಕೆ ನಿನ್ನ ಮನಸ್ಸಿನಲ್ಲಿ ವ್ಯಸನವನ್ನು ಮಾಡದೆ ಕುಶಲತನದಿಂದ ಪೋಗೋಣ ನಡಿಯೇ ಕಾಂತೇ – ಸರಸ ಧೀಮಂತೇ ॥

ಸುವರ್ಣೆ: ಹೇ ರಾಜ ! ಕಂದರ್ಪನಂತೆ ಯನ್ನ ಮಂದಿರಕ್ಕೆ ನೀ ಬಂದು ಯನ್ನ ಸುಂದರತರಮಾದ ಮಣಿ ಮಂಚದ ಮೇಲೆ ಚಂದ್ರನಂತೆ ಕುಳಿತು ಗಂಧ ಕಸ್ತೂರಿ ಪುನಗು ಜವ್ವಾಜಿಯನ್ನು ಲೇಪಿಸಿ ಮದನ ಮೋಹದ ಹಾಸಿಗೆಯ ಮೇಲೆ ಪವಡಿಸಿ ಅಂದ ಚಂದದಿಂದ ಗಂಡ ಭೇರುಂಡದಂತೆ ತಬ್ಬಿ ತಕ್ಕೈಸಿ ಸುರತವೆಂಬ ಶರಧಿಯೊಳು ಮುಳುಗಿದಂತೆ ಪರಮಾನಂದದಿಂದ ಭೋಗಿಸುವುದಕ್ಕೆ ದಯಮಾಡಿಸಬಹುದೈ ನಲ್ಲಾ – ಕೇಳೆನ್ನಾ ಸೊಲ್ಲಾ ॥

ಸೋಮಶೇಖರ: ಅಗತ್ಯಮಾಗಿ ಪೋಗೋಣ ನಡಿಯೇ ನೀರೇ – ಶರಧಿ ಗಂಭೀರೇ ॥

 

(ಕಂಸಾಸುರ ಬರುವಿಕೆ)

ತೆರೆದರುವುತ್ರಿವುಡೆ

ಕುಟಿಲದಾನವ ಘೋರ ರಭಸದೀ
ಕೋಟಿ ಸಿಡಿಲಾರ್ಭಟ ಗಳಿಂದಲೀ
ಕಟಿಕಟಿನೇ ಪಲ್ಕಡಿದು ಕೋಪದಿ  ಕುಟಿಲ ರಾಕ್ಷಸನೂ                 ॥1 ॥

ಹೆಗಲ ಮೇಲೈ ಕೋಟಿ ಪೆಣಗಳು
ಮಿಗಿಲು ಕಂಕುಳೊಳತ್ತು ಕೋಟಿಯು
ಅಗಿವ ಪೆಣಗಳು ಆರು ಕೋಟಿಯು  ಸೊಗಸಿನಿಂದಾಗಾ              ॥2 ॥

ಮರಗಿಡಗಳಾ ಕಿತ್ತು ತುಳಿಯುತಾ
ಗಿರಿಗಳನು ತಾ ಯೆತ್ತಿ ಯೆಸೆಯುತಾ
ಭರದಿ ಗಧೆಯಪ್ಪಳಿಸಿ ತಿರುವುತಾ  ಭೋರನೈ ತಂದಾ              ॥3 ॥

ಅಬ್ಬರದಿ ನಿಬ್ಬರಕೆ ಯೆಗರುತಾ
ಉಬ್ಬಿದಾರ್ಭಟ ಗೊಂಡು ಕೂಗುತಾ
ಹೆಬ್ಬುಲಿಯು ಶಬ್ದಕ್ಕೆ ನಡುಗಿತು  ಭುವನ ಬೊಬ್ಬಿಡುತಾ               ॥4 ॥

ಮಂಡಲ್ಹೇ ಮಾವತಿಯ ಪುಂಡನು
ಕಂಡನಾಗಲೇ ಕಂಸದಾನವ
ಚಂಡ ಕೋಪದಿ ಕೆಂಡ ವುಗುಳುತಾ  ಕಂಡ ಖತಿಗೊಂಡಾ           ॥5 ॥

ದರುವುಜಂಪೆ

ಹೊಸ ಗಮಲು ಮುಸುಗುತಿದೆ  ಬಿಸಜಾಕ್ಷಿ ಮನೆ ಮುಂದೇ
ಹೊಸ ಮನುಜರ‌್ಯಾರೋ  ಬಂದಿಹರೋ ಬಂದಿಹರೋ        ॥1 ॥

ನರರಾ ಕಂಪುಗಳೀಗಾ  ವೊರಸೀ ಪೋಗುತಲಿದೇ
ತರಳಾಕ್ಷಿ ಕರೆ ತಂದವಳೇನೋ ನೋಡುವೆನೂ, ನೋಡುವೆನೂ  ॥2 ॥

ಕಂಸ ದೈತ್ಯ: ಭಳಿರೇ ! ಬಟ್ಟ ಕುಚದ ವೈಯ್ಯರಿಯಾದ ಹೇ ತರುಣಿ ! ಈ ಸೃಷ್ಠಿಯೋಳ್ ಇಂದಿನ ದಿನ ನಮ್ಮ ಪಟ್ಟಣದೀ ಮಹಾಶ್ಚರ‌್ಯಕರಮಾದ ಕಪಟ ಮಾನವರ ಹೊಸಗಮಲು ಹೊಸವಾಸನೆಯು ಸ್ಪಷ್ಠವಾಗಿ ತೋರುತ್ತಿದೆಯಾದ ಕಾರಣ, ನಿನ್ನ ಮನಸ್ಸಿನೋಳ್ ಕುಟಿಲವನ್ನೆಣಿಸದೆ ಆ ಭ್ರಷ್ಠ ಮಾನವನನ್ನು ಎಲ್ಲಿ ಇಟ್ಟಿದ್ದೀಯೋ, ದಿಟ್ಟನಾದ ಯನ್ನ ಮುಂದೆ ಥಟ್ಟನೇ ತಂದು ತೋರಿಸೇ ತರುಣೀ – ಕಸ್ತೂರಿಯ ಭರಣಿ ॥

ದರುವು

ಮಿಂಡನನೂ ತೋರದಿರೇ  ಖಂಡ್ರಿಸುವೆ ನಿನ್ನವನಾ
ಗುಂಡಿಗೆಯ ಬಗೆ ಬಗೆದು  ಕಂಡವ ಮೆಲ್ಲುವೆನೂ ತಿನ್ನುವೆನೂ       ॥3 ॥

ಆಗಾಲಿ ಅದಕೇನೂ  ನಾಗ ವೇಣಿಯೇ ಕೇಳು
ಈಗಾ ಬಂದವನನ್ನೂ  ಬೇಗ ಕೊಲ್ಲುವೆನೂ, ನಾ ಬಿಡೆನೂ           ॥4 ॥

ಕಂಸ ದೈತ್ಯ: ಲಾಲಿಸೇ ನಾರೀಮಣಿ ! ಈ ಭೂಮಂಡಲದೊಳು ದಂಡಧರನಂತೊಪ್ಪುವಾ ಪ್ರಚಂಡದಾನವನೆಂಬ ಬೆದರಿಕೆಯು ನಿನಗಿಲ್ಲದೇ, ಚಂಡ ಪರಾಕ್ರಮಿಯಾದ ನಾನು ಇಲ್ಲದ ವೇಳೆಯಲ್ಲಿ ಪುಂಡ ಮಾನವನನ್ನು ಕೂಡಿ ಗಂಡನೆಂದು ಬಚ್ಚಿಟ್ಟಿದ್ದೀಯಾ, ಈ ಮಂಡಲದ ದಂಡು ಧಾಳಿಯನ್ನು ಸೂರೆಗೊಂಡ ಯನ್ನ ಮುಂಗಡೆ ಆ ಪುಂಡ ಮಾನವನನ್ನು ಖಂಡಿತವಾಗಿ ಕರೆದುಕೊಂಡು ಬಂದರೆ ಸಮಾ, ಇಲ್ಲವಾದದ್ದೆ ಆದರೇ ನಿನ್ನ ದುಂಡವಾದ ಮಂಡೆಯನ್ನು, ಇಗೋ ಈ ಗಧಾದಂಡದಿಂದ ತುಂಡು ತುಂಡನು ಮಾಡಿ ಕಂಡ ಮಾಂಸಾದಿಗಳನ್ನು ಕೆಂಡದಲ್ಲಿ ಸುಟ್ಟು ಮೆಲ್ಲುತ್ತೇನೆ ಕನ್ನೇ – ದನುಜ ಕುಲಚನ್ನೇ ॥

ದರುವು

ಅಕಟಕಟಾ ಮನದೊಳಗೆ  ಕುಟಿಲಾ ವಿಲ್ಲೆನುತಿದ್ದೇ
ನಿಟಿಲಾಕ್ಷ ಕೊಟ್ಟಿಹನೇ  ಪಟುತರ ವೈರಿಯನೂ  ಶತೃವನೂ        ॥5 ॥

ಕಂಸ ದೈತ್ಯ: ಕೇಳೆ, ಅಂಬುಜಾಕ್ಷಿ ! ಈ ಕುಂಭಿಣಿಯೊಳೊಪ್ಪುವಾ ಶುಂಭಾದಿ ಶುಂಭ, ತಾರಕಾ, ವರ ವಿದ್ಯುಂನ್ಮಾಲಿ ದಾನವರಲ್ಲದೇ ರಾವಣ ಕುಂಭಕರ್ಣ ಮೊದಲಾದ ರಾಕ್ಷಸರೊಳಗೆ ಮಹಾಶ್ರೇಷ್ಠನೆಂದೆನಿಸಿ ಕೊಂಬ ಯನ್ನ ಅಂಬುಜಾಕ್ಷಿಯನ್ನು, ನರನೆಂದೆನಿಸಿ ಕೊಂಬ ಮಾನವನು ಬಂದು ಸಂಭ್ರಮದಿ ಕೂಡಿಕೊಂಡಿರಲು ಈ ಮಂಡಲದೋಳ್ ಮುಖವೆತ್ತಿ ತಿರುಗದ ಹಾಗೆ ಅಪಮಾನ ಸಂಭವಿಸಿತಾದ ಕಾರಣ, ಈ ಕುಂಭಿಣಿಯ ಕರ್ತನಾದ ಶಂಭು ಶಂಕರನು ಸಂಭ್ರಮದಿ ವೈರಿಯನ್ನು ಕೊಂದು, ಮಾಂಸವನ್ನು ಭಕ್ಷಿಸಲೆಂದು ಕಳುಹಿಸಿದ್ದಾನಾದ ಕಾರಣದಿಂದ ಜಾಗ್ರತೆಯಾಗಿ ಬಂದಿರುವ ವಿಟನನ್ನು ತಂದು ತೋರಿಸು ಸುವರ್ಣೆ-ಜನಗ್ಮೋಹನೇ ॥

ದರುವು

ಯೆಂತು ಮಾಡಲಿ ಬಂದಾ  ಅಂತಕಾಂತಕನಿವಾ
ಕಾಂತನೇ ನಿನಗೆ ಬಂ  ತೆಲ್ಲೋ ಕಂಟಕವಾ                             ॥1 ॥

ಯೆಲ್ಲೀ ಬಚ್ಚಿಡಲೀ ಮ  ತ್ತೆಲ್ಲಿಗೆ ಕಳುಹಲೀ
ನಲ್ಲಾನೇ ನಿನ್ನನೂ  ಯೆಂತು ನಾ ಸಲಹಲೀ                             ॥2 ॥

ಜೀಯಾ ಶಂಕರ ಪ್ರಿಯಾ  ಕಾಯ್ವುದೆಮ್ಮಯ ಪರಿಯಾ
ಕೈಯ್ಯರೆ ನಿಮ್ಮ ಕೊಲ್ಲಿಸಿದೆನೂ ರಾಯಾ                                 ॥3 ॥

ಸುವರ್ಣೆ: ಹೇ ನಲ್ಲಾ, ಹೇ ಸುಗುಣಾ ! ಹೇ ಕಾಂತ ! ಕಂತುವಿನ ಕೂಟದೋಳ್ ಸರ್ವತಾ ಕೂಡುವುದಿಲ್ಲವೆಂದು ಪಂಥದಿಂದ ಧಿಕ್ಕರಿಸಿದ ಕಾಂತನನ್ನು ಮೋಹಭ್ರಾಂತಿಯಿಂದ ಅಂತರಿಸಲೂ ಅಂತಕಾಂತಕನಾದ ಪ್ರಳಯ ಕಾಲರುದ್ರನಂತೆ ಬಂದು ನಿಂದಿರುವ ಇಂಥಪ್ಪ ದೈತ್ಯನ ವಶಕ್ಕೆ ಎಂತು ನಿಮ್ಮನ್ನು ಕಳುಹಲಿ. ಯಾವ ಅಂತರಂಗದಲ್ಲಿ ಅಡಗಿಸಲಿ, ಚಿಂತಿಸುವ ಪರಿಯನ್ನು ಪರಿಹರಿಸೈ ಕಾಂತ – ಸದ್ಗುಣವಂತಾ ॥

ಸೋಮಶೇಖರ: ಹೇ ಕಾಂತೆ, ಮಕರಧ್ವಜನ ಪುಷ್ಪ ಮಾರ್ಗಣದಂತೆ ವೊಪ್ಪುವಾ ಹೇ ರಮಣೀ! ಇಗೋ, ದೈತ್ಯನು ನಿಬ್ಬರದಿ ಆರ್ಭಟಿಸಿ ಉಬ್ಬುಬ್ಬಿ ಕೂಗುವ ದನುಜನ ಆರ್ಭಟಕ್ಕೆ ಯಾತಕ್ಕೆ ಭಯಪಡುತ್ತಾ ಇದ್ದೀ, ಸರ್ವಮಂಗಳೆಯ ಅರಸನನ್ನು ಭಜಿಸುತ್ತಾ ಕೊಬ್ಬಿದ ಇವನ ಭುಜಬಲವನ್ನು ಒಂದು ಕ್ಷಣ ಮಾತ್ರದಲ್ಲಿ ಸೂರೆಗೊಳ್ಳುತ್ತೇನೆ, ನೋಡುವಂಥವಳಾಗೇ ನಾರೀ – ನವರಸ ಪೋರಿ ॥

ಸುವರ್ಣೆ: ಅದೇ ಪ್ರಕಾರ ಶರ್ವಾಣಿ ಪತಿಯನ್ನು ಧ್ಯಾನಿಸುತ್ತೇನೈ ರಮಣಾ – ಕರುಣಾಭರಣ ॥