ತಾಟಗಿತ್ತಿ: ಕೋಗಿಲೆಯ ಸ್ವರದಂತೆ ರಾಗ ರಚನೆಗಳಿಂದ ಕೂಗಿ ಪೇಳುವ ನಾಗವೇಣಿಯಾದ ಸುಗುಣಿಯೇ ಕೇಳು ! ಈಗಲೇ ಅರಮನೆಗೆ ಪೋಗಿ ನಾಗಲೀಕದಿಂದ ಆಗಬೇಕಾದ ಪದಾರ್ಥಗಳನ್ನು ಆಗಮಿಸಿ ಬರುವಾಗ್ಗೆ ಸುಗುಣನಾದ ಕಾಂತನಿಗೆ ಜಗದೊಳಗೆ ಮೃಗಬೇಟೆಗೆ ಪೋಗತಕ್ಕ ಸ್ಥಳಗಳಲ್ಲಿ ಹಗೆಗಳಾದವರೂ ಇರುವುದರಿಂದ ಮುಂಚಿತವಾಗಿಯೇ ಬರುವ ಹಗರಣವನ್ನು ನೀಗಬೇಕಾದ ಕಾರಣ ಜಗಪತಿಯ ಪ್ರಾಣದ ನೆಲೆಯನ್ನು ಸೊಗಸಾಗಿ ತಿಳಿದು ಯನಗೆ ಪೇಳಮ್ಮಾ ಸುದತೀ – ತಿಳಿಯಿತು ನಿನ್ನ ಮಂದಮತಿ ॥

ಸುವರ್ಣೆ: ಆಹಾ ! ಅಗತ್ಯಮಾಗಿ ನಿಗಮ ಕೋವಿದನಾದ ಕಾಂತನನ್ನು ಕೇಳಿ ಪೇಳುತ್ತೇನೆ, ನೀನು ಅರಮನೆಗೆ ತೆರಳುವವಳಾಗೇ ಮುದಿ ಮಾನಿನಿ ॥

ದರುವು

ಸುಗುಣ ಭೂಪನೇ, ಕೇಳು  ಯನ್ನ ರಮಣನೆ ॥ಪ ॥
ಜಗದ ಪತಿಯೇ ವನಕೆ ನೀವು
ಮೃಗದ ಬೇಟೆ ಗೈದು ಪೋಗೆ ॥
ಹಗೆಗಳುಂಟು ನಿಮಗೆ ಅಲ್ಲಿ
ಹಗರಣವಿದು ಕೇಳು ರಮಣಾ                                               ॥1 ॥

ಸುಂದರಾಂಗ ನಿಮ್ಮ ಅಡಿಗೆ
ವಂದಿಸುತಲಿ ಬೇಡಿಕೊಂಬೆ ॥
ಒಂದು ನುಡಿಯೂ ಪ್ರಾಣ ನೆಲೆಯಾ
ಚಂದದಿಂದ ಅರುಹ ಬೇಕೋ                                               ॥2 ॥

ಜ್ಯೇಷ್ಠ ಬಳ್ಳಾಪುರದ ಒಡೆಯ
ಅಷ್ಠಮೂರ್ತಿ ಶಿವನು ಪೊರೆವ ॥
ಶ್ರೇಷ್ಠದಿಂದ ನಿಮ್ಮ ಸತಿಯ
ಳಿಷ್ಠವನ್ನು ಸಲಿಸೋ ರಮಣಾ                                               ॥3 ॥

ಸುವರ್ಣೆ: ಶರ್ವಾಣಿ ಪತಿ ವರದಿಂದ ಜಾಣ ಚನ್ನಿಗನಾದ ರಾಯನೇ ಕೇಳು, ಈ ಕ್ಷೋಣಿಯೋಳ್ ನಿಮ್ಮ ಚರಣಕಮಲಕ್ಕೆ ವಿನಯದಿಂದ ನಮಿಸುತ್ತೇನೆ. ನೀವು ಕಾನನಕ್ಕೆ ಮೃಗ ಬೇಂಟೆಯನ್ನು ಆಡುವ ಉದ್ಯುಕ್ತಮಾಗಿ ಪೋಗುವ ಕಾಡಿನೋಳ್ ದಾನವರು ಮುಂತಾದ ಕ್ರೂರ ಮೃಗಗಳ ಹಗೆತನವು ಇರುವ ಕಾರಣ ಯನಗೆ ನಂಬಿಕೆ ಇರುವಂತೆ ನಿಮ್ಮ ಪ್ರಾಣದ ನೆಲೆಯನ್ನು ಜಾಣತನದಿಂದ ಪೇಳಬೇಕೈ ಸುಗುಣಾ – ಸುಮಶರ ಭರಣಾ ॥

ಸೋಮಶೇಖರ: ಕನ್ನೆ ಕೇಳ್ ಸುವರ್ಣೆ ! ಬಿನ್ನಾಣದಿಂದ ಕೇಳುವ ಜೀವರತ್ನದ ನೆಲೆಯು ಪನ್ನಗಾಧರನ ಕೃಪೆಯಿಂದ ಯನ್ನ ಕರ್ಣದೋಳ್ ಚಿನ್ನ ಮಾಣಿಕ್ಯದಿಂದ ಒಪ್ಪುವಾ ಕರ್ಣ ಪತ್ರವೆರಡನ್ನು ಭಿನ್ನಿಸಿದರೆ ಚಿನ್ಮಯ ರೂಪು ಕುಂದುವುದಾದ ಕಾರಣ ಇನ್ನಾರ ಸಂಗಡಲೂ ವರ್ಣಿಸದೇ ನಿನ್ನ ಮನಸ್ಸಿನಲ್ಲಿಯೇ ಇಟ್ಟುಕೊಂಡಿರುವಂಥವಳಾಗೇ ಕನ್ನೆ – ಸುಗುಣ ಸಂಪನ್ನೆ ॥

ಸುವರ್ಣೆ: ತಮ್ಮ ಆಜ್ಞಾನುಸಾರಮಾಗಿ ಇರುತ್ತೇನೆ ತಾವು ಅರಮನೆಗೆ ದಯಮಾಡಿಸಬಹುದೈ ಕಾಂತ – ಸರಸ ಧೀಮಂತ ॥

ಸುವರ್ಣೆ: ಹೇ ತಾಟಕೀ – ಬಿನ್ನಾಣಗಾತಕಿ, ನಿನ್ನೆ ರಾತ್ರಿಯೋಳ್ ಯನ್ನ ಪ್ರಾಣನಾಥನು ಕನ್ನೆಯಳಾದ ಯನ್ನ ಸುರತದೋಳ್ ಸುಖಿಸುವ ಸಮಯದಿ ಬಿನ್ನಾಣದಿಂದ ಕೇಳಲೂ, ಉನ್ನತಮಾದ ಕರ್ಣದೊಳು ವಪ್ಪುವಾ ಕನ್ನೈದಿಲೆಯ ಪುಷ್ಪವೆರಡು ಭಿನ್ನಸಿದರಲ್ಲದೇ ಇನ್ನಾವುದರಿಂದಲೂ ಭಯವಿಲ್ಲಮ್ಮಾ ದೂತೆ- ಸತ್ಯ ಸಂಜಾತೆ॥

ದರುವು

ಅಮ್ಮಯ್ಯ ಬಾರೀಗ ಮನೆಗೇ
ಉಮ್ಮಾಲಿ ಕಿಡುವೆನು ನಿನಗೇ ॥ಪ ॥
ಸಮ್ಮತಿಯಿಂದಲೀ  ಗಮ್ಮಾನೆ ಮಾಡಿದ
ಸುಮ್ಮಾನದಡಿಗೆಯಾ  ಉಣ್ಣಾಲಿಕಿಡುವೆನೂ ॥                         ॥1 ॥

ಅಣ್ಣಯ್ಯನನು ಕರೆ ತಂದೂ
ಎಣ್ಣೆ ಮಜ್ಜನ ಮಾಡಿಸಿಂದೂ ॥ಅಣ್ಣಯ್ಯನನು ॥
ಸಣ್ಣಕ್ಕಿ ಬೋನವಾ  ಬೆಣ್ಣೆಯ ಕರಗಿಸಿ
ಬಿನ್ನಾಣಗಾರಗೆ  ಉಣ್ಣಾಲಿಕಿಡುವೆನೂ                                     ॥2 ॥

ಅಕ್ಕಯ್ಯ ಬಾರಮ್ಮಾ ಯಿನ್ನೂ
ತಕ್ಕ ಪುರುಷರಾಯನನ್ನೂ ॥ಅಕ್ಕಯ್ಯ ॥
ಚಿಕ್ಕಾ ಮನೆಗೆ ಪೋಗಿ  ಅಕ್ಕಾರದಿಂದಲೀ
ಉಕ್ಕುವ ಕಾಮಾದಿಂ  ಸೊಕ್ಕಿಸಿ ಬೆರೆಯಮ್ಮಾ ॥                      ॥3 ॥

ತಾಟಗಿತ್ತಿ: ಹೇ ಭೃಂಗಕುಚದ ಬಾಲೆ ! ಮಂಗಳಕರಜ್ವಾಲೆ, ಶೃಂಗಾರದ ಅರಮನೆಯಲ್ಲಿ ಅಂಗನೆಯು ನಾನು ಮಾಡಿರುವ ಶಾಕಪಾಕಾದಿ ಭೋಜನಕ್ಕೆ ನಿನ್ನ ಅಂಗದೊಲ್ಲಭನನ್ನು ಸಂಗಡದಿ ಒಡಗೊಂಡು ಬಂದು ಭೃಂಗಾಮಲಕ ತೈಲವನ್ನೊತ್ತಿ ಅಭ್ಯಂಗನವಗೈದು ಸಂಗಡದಿ ಮೃಷ್ಠಾನ್ನ ಭೋಜನವನ್ನು ಗೈದು ರಂಗು ಮಂಟಪವನೇರಿ ಬಂಗಾರಮಯವಾದ ಮಂಚದ ಮೇಲೆ ವೊಪ್ಪಿ ಅಂಗಜನ ಕೇಳಿಯೋಳ್ ಸಂಗ್ರಹಿಸುವ ಕಾರಣಕ್ಕೆ ಶೃಂಗಾರವಾಗಿ ಚಿತ್ತೈಸಬೇಕಮ್ಮಾ ರಂಭೆ-ಪುತ್ಥಳಿಯ ಬೊಂಬೆ॥

ಸುವರ್ಣ: ಆಹಾ, ಅಗತ್ಯಮಾಗಿ ಬರುತ್ತಾ ಇದ್ದೇವೆ ನೀನು ಜಾಗ್ರತೆಯಾಗಿ ಅರಮನೆಗೆ ಪೋಗಬಹುದಮ್ಮಾ ನಾರಿ-ನೀನುಪಕಾರಿ ॥

ಸುವರ್ಣೆ: ಹೇ ಕಾಂತ – ಕಾರ‌್ಯವಂತಾ ! ಷಡ್ರಸಾನ್ನ ಭೋಜನವಗೈದು ಸುಖ ನಿದ್ರೆಯನ್ನು ಗೈಯುವುದಕ್ಕೆ ಮಂದಿರಕ್ಕೆ ದಯಮಾಡಿಸಬೇಕೈ ಉಡುರಾಜ ಪತಿಯೇ ॥

ಸೋಮಶೇಖರ: ಆಹಾ ! ಅಗತ್ಯಮಾಗಿ ಪೋಗೋಣ ನಡಿಯೇ ಕಾಂತೆ – ನೀ ದಯಾವಂತೆ ॥

 

(ಸತಿಪತಿಯರು ನಿದ್ರೆಗೈಯುತ್ತಿರುವಿಕೆ)

ಭಾಗವತರು: ಕೇಳಿದರೇನಯ್ಯ ಸಭಾ ಪೂಜ್ಯರೇ ! ಈ ಸೃಷ್ಠಿಪತಿಯಾದ ಸೋಮಶೇಖರ ಭೂಪಾಲನು ತನ್ನ ಪ್ರಾಣದೊಲ್ಲಭೆಯಾದ ಸುವರ್ಣಾದೇವಿಯೊಡನೆ ಪ್ರಾಣದ ನೆಲೆಯನ್ನು ಪೇಳಲೂ, ಆ ಸುವರ್ಣಾದೇವಿ ಮಂದಮತಿಯಿಂದ ಮುಂದೆ ಬರುವ ಕೇಡನ್ನು ಅರಿಯದೇ ಬಂದಿರುವ ಮಾಯಗಾತಿಗೆ ಪೇಳಲೂ ಈ ಸತಿಪತಿ ಈರ್ವರೂ ಸಕಲ ಆಗಮ ತೀರಿಸಿಕೊಂಡು ಸಜ್ಜಾಗೃಹವಂ ಸೇರಿ ಶಯನದಿಂದ ಮೈಮರೆತು ಇರುತ್ತಿರಲೂ ಮಧ್ಯರಾತ್ರಿ ಸಮಯದಲ್ಲಿ ಆ ಮಾಯಗಾತಿಯು ದಿಗ್ಗನೆದ್ದು ಭೂವಲ್ಲಭನ ಕೊಲ್ಲಬೇಕೆಂದು ಸಮೀಪಕ್ಕೆ ಬಂದು ಕರ್ನಪತ್ರವೆರಡನ್ನು ತೆಗೆದು ಕಲ್ಲಿನಿಂದ ಕುಟ್ಟಲೂ, ಸೃಷ್ಠಿಪಾಲನ ಪ್ರಾಣ ಥಟ್ಟನೆ ಹೋದ ಕಾರಣ ತಾಂಬ್ರ ಜೂಟಗಳು ಧ್ವನಿಗೈಯುವಾ ಸಮಯವಾಗಲೂ ಆ ಕಪಟ ಮಾಯಗಾತಿಯು ಚಪ್ಪಾಳೆ ಹೊಡೆಯಲೂ ಮತ್ತೇನೆನುತಿರ್ದಳೂ ॥

ತಾಟಗಿತ್ತಿ: ಓಹೋ, ಬಟ್ಟ ಕುಚದ ಬಾಲೆ, ಸೃಷ್ಠಿಪತಿಯಾದ ಸೋಮಶೇಖರಗೆ ಕೆಟ್ಟರೋಗವು ಬಂದು ಥಟ್ಟನೇ ಪ್ರಾಣವಂ ಬಿಟ್ಟು ಇರುತ್ತಾನೆ. ದಿಟ್ಟನೆದ್ದು ನೋಡುವಂಥವಳಾಗೇ ದಿಟ್ಟ ಮೋಹನೆ॥

ಸುವರ್ಣೆ: ಅಕಟಕಟಾ ! ಅಯ್ಯೋ ತಾಟಕಿ ! ಯನ್ನ ಉದರದೋಳ್ ವಜ್ರದ ಕಠಾರಿಯನ್ನು ವಡ್ಡಿದಂತಾಯಿತಲ್ಲೇ ಹಿತದ್ರೋಹಿ ॥

ದರುವು

ಇದು ಯೇನಿದುವೇ  ಚೋದ್ಯಾವಮ್ಮಾ
ಚದುರನಿಗೇ ಸಾವು ದಗೀತಮ್ಮಾ                                          ॥1 ॥

ಮುದಿ ನಾರಿಯಳೂ  ವಿಧಿಯಂತೆ ಬಂದೂ
ಹೃದಯೇಶ್ವರನಾ  ಕೊಂದಿಹಳಿಂದೂ                                     ॥2 ॥

ಸುವರ್ಣೆ: ಅಯ್ಯೋ, ಕೆಟ್ಟೆನಲ್ಲೇ ಮಟು ಮಾಯಗಾತಕಿ ! ಯನ್ನ ಇಷ್ಠಪ್ರಿಯನನ್ನು ಕೊಂದೆಯೇನೆ ಹಿತ ದ್ರೋಹಿಯಾದ ಪಾಪಿರಂಡೇ ತಟ್ಟಿ ಎಬ್ಬರಿಸಿದರೂ ನಿಟ್ಟುಸಿರು ಕಾಣಲಿಲ್ಲವೇ, ಆಹಾ, ಶತದ್ರೋಹಿಯಾದ ತಾಟಕಿಯೇ, ಅಯ್ಯೋ ಅಕಟಕಟಾ ಶಿವಮಹದೇವಾ! ದಿಕ್ಕಿಲ್ಲವಾಯಿತೋ ಪ್ರಾಣನಾಥ ॥

(ಸುವರ್ಣೆ ಮೂರ್ಛೆ ಹೋಗುವಿಕೆ)

ತಾಟಗಿತ್ತಿ: ಕ್ಷಣ ಮಾತ್ರ ಸೈರಿಸುವಂಥವಳಾಗೇ ಮುದ್ದುಮೋಹನೆ ॥

(ಸುವರ್ಣಾದೇವಿ ಪ್ರಲಾಪ)

ದರುವು

ಅಯ್ಯಯ್ಯೋ ಪ್ರಿಯಾ  ಕೈಯಾರೆ ಕೊಂದೇ
ಅಯ್ಯಯ್ಯೋ ಪ್ರಿಯಾ ॥ಪ ॥
ರಾಯ ನಿಮ್ಮಯ ಶೌರ‌್ಯ  ಕಾಯವ ಕಂಗೆಟ್ಟೂ
ಮಾಯಕಾತಿಯು ನಿಮ್ಮಾ  ನ್ಯಾಯದಿ ಕೊಂದಳೋ ॥               ॥1 ॥

ನಿಮ್ಮ ಜೀವದ ನೆಲೆ  ಇಮ್ಮಾಯ ತಿಳಿಯುತ್ತಾ
ಸಮ್ಮತಿಯಿಂದಲೀ  ನಿಮ್ಮಾನೆ ಕೊಂದಳೋ ॥                        ॥2 ॥

ಯೆಂದು ನೋಡುವೆ ನಿಮ್ಮ  ಚಂದಿರಾ ಮುಖವನ್ನೂ
ಚಂದ್ರಶೇಖರ ಬಂದು  ಇಂದೆನ್ನ ಸಲಹನೇ ॥ಅಯ್ಯಯ್ಯೋ ಪ್ರಿಯಾ ॥3 ॥

ದ್ವಿಪದೆಪೂರ್ವಿ ರಾಗ

ಆಹಾ, ಯನ್ನ ಪ್ರಾಣದೊಲ್ಲಭನೇ ಬಲ್ಲರಿಗೆ ಬಲ್ಲಿದನೇ
ಬಲುಗೈಯ ಧೀರಾ  ಸರಸ ಕೋವಿದ ಚೆಲ್ವ
ವೀರ ವಿಕ್ರಮಭೂಪನೇ  ಭುಜಬಲ ಪರಾಕ್ರಮನೇ
ಯನ್ನಂತ ಕಡುಪಾಪಿ  ಇನ್ನುಂಟೇ ಜಗದೊಳಗೇ
ತಂದೆ ತಾಯಿ ಒಡಹುಟ್ಟಿದ  ಬಂಧು ಬಳಗವು ಸಹಿತ
ಇಂದು ದೈತ್ಯನು ತಿಂದುದಾನೆಲ್ಲಾ ನಿನ್ನಿಂದ ಮರೆತಿದ್ದೆನೋ
ಯನ್ನ ಬಲುಮೆಯಿಂದ ತಾಟಕಿಯ ಕರೆತಂದೂ, ಇಂದಿವಳ
ಭಾದೆಯಿಂದ ಜೀವದ ನೆಲೆಯಂದು ಕೇಳಿ ಪೇಳುತ ಬೇಗಾ
ಮರಣ ಹಾರೈಸಿದೆನೋ ರಮಣಾ ಸಲೆ ಕರ್ಮಿ ನಾನು
ಅಯ್ಯಯ್ಯೋ ನಾ ನಿನ್ನ ಕೈಯ್ಯರ ಕೊಲ್ಲಿಸಿದೆನೇ ಪ್ರಿಯನೇ
ಕುಂದಿತೇ ನಿನ್ನ ಮೈಯ ನಸುಗೆಂಪು, ನಿನ್ನ ಲಾವಣ್ಯ
ಪೂರ್ಣಚಂದ್ರನು ಪೊಳೆಯುವ ಅಂದದೊಳಗಿರ್ದೆ
ಕಂದಿ ಕಪ್ಪಾಯಿತೇ ಕಾಮಜನ ರೂಪ ಕುಂಭಿಣಿ ಪತಿಯೇ
ಹೊಂಬಾಳೆಯಂತೆಸೆವಾ ತೊಡೆಗಳೆರಡು ಬಾಡಿದವೋ
ಕಸ್ತೂರಿವೋಲ್ ತಿದ್ದಿದಾಮೀಸೆ, ಸೊಕ್ಕಿ ಸೊರಗಾದವೋ
ಚಂದ್ರನಂತೆಸೆವ ಕದಪಂಗಳು ಬತ್ತಿದವಲ್ಲೋ ಚಿತ್ತದೊಲ್ಲಭನೇ
ಕರಿಯಭಂಟನ ಕೊಂದ  ತೊಂಡನೂರಿಯಂತೆ
ಕೊಂದಳೀ ತರುಣಿ ನಿಷ್ಕರುಣಿ ಸಿಂಧು ಗಂಭೀರಾ
ಕರ್ಣಪತ್ರವನು ಕಲ್ಲಿಂದ ಕುಟ್ಟಿದರೆ ಯನ್ನೇನೆಂದು ಬೈದೆಯೋ
ಯನ್ನ ಮನರನ್ನ, ಯನ್ನನಗಲಿ ಸುರಕನ್ನೆಯರ ನೆನದಪೆಯೋ
ನಿನ್ನ ಸಂಗಡಲೇ ನಾ ಬಹೆನೋ ಇನ್ಯಾಕೆ ಈ ಜನ್ಮ
ಇನಿತು ಪರಿಯಲೀ ಕನ್ನೆ, ಇನಿಯನಂಬಲಿಸುತ್ತಾ
ಕಂಬನಿಗರೆದಳಾ ತರುಣಿ ಗೋಳಿಡುತಾ
ಕರಪಲ್ಲವದೊಳಿರ್ಪ ಯಿನಿತು ಚಂದ್ರಾಯುಧದೀ
ಶಿರವ ಛೇದಿಸಿಕೊಂಡು, ಯನ್ನ ಹರಣನೂ
ನಿಮ್ಮ ಚರಣಾರವಿಂದಕ್ಕೆ ಅರ್ಪಿಸುವೆನೋ

ಹರ ಹರಾ ಜ್ಯೇಷ್ಠ ಬಳ್ಳಾ ಪುರವರಾ. ನೀ ಸಲಹೋ
ಹಾ ರಮಣಾ, ಹಾಯೆಂದು, ಹಂಬಲಿಸುತಿರ್ದಳೂ ॥

ತಾಟಗಿತ್ತಿ: ಆಹಾ, ಎಲಾ, ಹುಡುಗೀ, ತಡಬಡವಿಲ್ಲದೆ ಮಡಿದಿರುವ ಒಡೆಯನನ್ನು ಕಂಡು ಗೋಳಾಡುತ್ತಾ ಮಿಡ ಮಿಡಕಿಸುತ್ತಾ ಖಡ್ಗ ಕಠಾರಿಯಿಂದ ಏತಕ್ಕೆ ಪ್ರಾಣವನ್ನು ಕಳೆದುಕೊಳ್ಳುತ್ತೇನೆಂದು ಪೇಳುತ್ತೀಯಾ, ಒಂದರ ಘಳಿಗೆ ತಡೆದು ಯನ್ನ ಹಿಂದುಗಡೆ ಬಂದರೇ ಇವನಿಗಿಮ್ಮಡಿಯಾದ ಕಡು ಚೆಲ್ವನನ್ನು ಕೂಡಿಸುತ್ತೇನೆ, ನಿನ್ನನ್ನು ಕೈ ಬಿಡುವುದಿಲ್ಲ ದುಡುಕುಪಡದೆ ಸಡಗರದಿ ಯೆದ್ದು ಬರುವವಳಾಗೇ ಮುದ್ದು ಮೋಹನೆ ॥

(ಸುವರ್ಣಾದೇವಿತಾಟಗಿತ್ತಿಯರ ಸಂವಾದ)

ಸುವರ್ಣೆದರುವು

ಬಿಡು ಬಿಡೇ ಕೈಯ್ಯ  ಬಿಡು ಬಿಡೇ ॥ಪ ॥
ಬಿಡೆನಮ್ಮಾ ಖಡ್ಗವಾ  ತಡೆಯಾದೆ ತಾಟಕಿ
ಕಡುಪಾಪಿ ಜನ್ಮವಾ  ಬಿಡುವೆ ನೀಕ್ಷಣದೊಳು ॥ಬಿಡು ಬಿಡೇ         ॥1 ॥

ತಾಟಗಿತ್ತಿದರುವು

ಕೊಡೆನಮ್ಮಾ ಖಡ್ಗ  ಕೊಡೆನಮ್ಮಾ ॥ಪ ॥
ಕೊಡೆನಮ್ಮಾ ನಿನಗಿಷ್ಠು  ಕಡುಕೋಪವೇತಕ್ಕೆ
ಮಡಿದಿರುವನ ಬಿಟ್ಟೆ  ನ್ನೊಡನೆ ಬಾರಮ್ಮಯ್ಯ ॥ಕೊಡೆನಮ್ಮಾ     ॥2 ॥

ಸುವರ್ಣೆದರುವು

ಎಲ್ಲೀಗೇ ತಾಯೇ  ಎಲ್ಲೀಗೇ ॥ಪ ॥
ಎಲ್ಲಿಗೆ ಬರಲಮ್ಮಾ  ನಲ್ಲಾನಗಲಿ ನಾನು
ನಿಲ್ಲಾದೆನ್ನಯ ಮನ  ಝಲ್ಲು ಝಲ್ಲೆನುತಿದೇ ॥                         ॥3 ॥

ತಾಟಗಿತ್ತಿದರುವು

ಶಶಿಮುಖೀ  ಇಷ್ಠು  ವ್ಯಸನವೇಕೇ ॥ಪ ॥
ಕುಸುಮ ಕೇಸರಿ ಯಾಳ್ವ  ವಸುಧೀಶರಾಯನಾ
ವಶವ ಮಾಡುವೆ ನೀಗಾ  ಕುಶಲದೀ ಬಾರಮ್ಮಾ ॥ಶಶಿಮುಖೀ     ॥4 ॥

ಸುವರ್ಣೆದರುವು

ಜೀಯಾನೇ, ಶಿವಾ  ಕಾಯ್ವನೇ ॥ಪ ॥
ಮಾಯಕಾತಿಯು ಒಬ್ಬ  ರಾಯನ ವಶ ಮಾಡೆ
ಕಾಯವ ತೊರೆಕೊಂಬೆ  ಪ್ರಿಯನಗಲಿ ಬರೇ ॥ಜೀಯಾನೇ          ॥5 ॥

ತಾಟಗಿತ್ತಿದರುವು

ತಡವೇಕೇ ಹುಡುಗೀ  ತಡವೇಕೇ ॥ಪ ॥
ತಡವೇಕೆ ನಿನ್ನನೂ  ಬಿಡಲೀಕೆ ಬಂದೆನೇ
ಒಡನೆ ಹೊರಡದೆ ಇರೆ  ಮುಡಿಯ ಪಿಡಿದೊಯ್ಯುವೇ ತಡವೇಕೇ   ॥6 ॥

ಸುವರ್ಣೆ: ಅಯ್ಯೋ ಪರಮ ಪಾಪಿಯಾದ ತಾಟಕಿ  ಬರಿದೇ ಈ ಪರಿಯಾ ಕರಿಗೊಳಿಸುತ್ತಾ ಆತುರವನ್ನು ಯಾತಕ್ಕೆ ಪಡಿಸುತ್ತೀಯಾ ! ಕರುಣಾಸಾಗರನಾದ ಕಾಂತನಿಗೆ ಶೈತ್ಯೋಪಚಾರವನ್ನು ರಚಿಸಿ ಬರುತ್ತಾ ಇದ್ದೇನೆ. ಕ್ಷಣಮಾತ್ರ ಸೈರಿಸೇ ಮಾಯಗಾತಿ – ಬಿನ್ನಾಣಗಿತ್ತಿ ॥

ತಾಟಗಿತ್ತಿ: ಹೋ ಕಮಲಾಕ್ಷಿ ! ಹಾಗಾದರೆ, ಈ ಕ್ಷಣವನ್ನು ಬಿಟ್ಟು ಇನ್ನೊಂದು ಕ್ಷಣಮಾತ್ರ ಸಾವಕಾಶ ಬಿಟ್ಟಿರುತ್ತೇನೆ, ನಿನ್ನ ಅಪೇಕ್ಷೆಯನ್ನು ತೀರಿಸಿಕೊಂಡು ಬೇಗ ಹೊರಡುವವಳಾಗೇ ಪದ್ಮಾಯತಾಕ್ಷಿ – ಹೋ ಸಾರಸಾಕ್ಷಿ ॥

ಸುವರ್ಣೆ: ಹೇ ಮುಕುಂದಪ್ರಿಯಾ, ಹೋ, ಮಂದಾಕಿನೀಧರಾ. ಈ ಮಂದಿರಕ್ಕೆ ಕದ ದ್ವಂದ್ವಗಳು ಬಾರದಂತೆ ಕವಾಟದ್ವಾರಗಳು ಬಂಧಕವಾಗಿರಲಿ. ಇಂದು ಈ ತಾಟಕಿಯು ಯಳದೊಯ್ದು ಪೋಗುತ್ತಾಳೆ. ಚಂದದಿಂದ ಯನ್ನನ್ನು ಕಾಯಬೇಕೈ ಚಂದ್ರಶೇಖರಾ – ಗರಳ ಕಂಧರಾ ॥

ಹೇ ತಾಟಕಿ ! ಬಿನ್ನಾಣಗಾತಕಿ  ನಿನ್ನ ಬೆದರಿಕೆಗೆ ಬೆರಗಾಗಿ ನಿನ್ನ ಹಿಂದುಗಡೆ ಬರುತ್ತಾ ಇದ್ದೇನೆ ಸುಂದರ ತರಮಾದ ಕುಸುಮ ಕೇಸರಿಯ ಪಟ್ಟಣಕ್ಕೆ ಪೋಗೋಣ ನಡಿಯೇ ನಾರೀ – ಮುದಿನಾರಿ॥

ತಾಟಗಿತ್ತಿ: ಕಂತುವಿನ ವಾಹನದಂತೆ ನುಡಿಯುವ ಗುಣವಂತೆಯೇ ಕೇಳೂ. ಇಂತೊಪ್ಪ ಪುಷ್ಪ ರಥವನ್ನು ನಾನು ತರಿಸಿ ಇರುತ್ತೇನೆ. ಅಂತರದಿ ಭ್ರಾಂತಿಗೊಳ್ಳದೆ ಕುಳಿತುಕೋ ಕಾಂತೆ – ನಿನಗ್ಯಾಕೆ ಚಿಂತೆ ॥

ಭಾಗವತರದರುವು

ಕುಟಿಲೇ ತಾಟಕಿ ಮನದಿ  ಕಪಟಾ ಕೃತ್ಯವ ನಟಿಸೀ
ಪಟು ಪರಾಕ್ರಮಿಯನ್ನು  ಕುಟಿಲದಿಂ ಕೊಂದೂ, ತಾ ಕೊಂದು      ॥1 ॥

ಬಿಸಜಾಕ್ಷಿ ತಾಟಕಿಯು  ಕುಟಿಲ ಮಾಯಗಳಿಂದ
ಶಶಿಮುಖಿಯ ಪೊರಡಿಸಿದಳ್  ಕುಸುಮಾಕೇಸರಿಗೇ  ಆ ಪುರಿಗೇ  ॥2 ॥

ವಸುಧೀಶ ಉಗ್ರಬಾ  ಹುಕನ ಸನ್ನಿಧಿಗಾಗ
ಬಿಸಜಾಕ್ಷಿ ಕರೆತಂದೂ  ಬೆಸಗೊಂಡಳಾಗ, ತಾನಾಗ                 ॥3 ॥

(ತಾಟಗಿತ್ತಿಯು ಸುವರ್ಣೆಯೊಂದಿಗೆ ಉಗ್ರಬಾಹುಕನ ಸನ್ನಿಧಿಗೆ ಬರುವಿಕೆ)

ದರುವು

ಪೊಡವೀಶ ನೋಡೈಯ್ಯ  ಕಡುಚಲ್ವೆ ಸುಂದರಿಯಾ
ವಡಗೊಂಡು ಬಂದಿರುವೆ  ಸಡಗರದಿಂದಾ  ದಯದಿಂದಾ           ॥1 ॥

ಸುಂದರಾಂಗಿಯ ನಿಮಗೆ  ತಂದು ವದಗಿಸಿ ಇರುವೆ
ಮುಂದೆನಗೆ ವೊಂಧನವಾ  ಚಂದಾದಿಂದೀಯೋ, ನೀ ಕಾಯೋ ॥2 ॥

ತಾಟಗಿತ್ತಿ: ಹೇ ರಾಜ, ಕುಸುಮ ಕೇಸರಿಯ ಪಟ್ಟಣವನ್ನು ಪರಿಪಾಲಿಸುವ ವಸುಧೀಶ ಉಗ್ರಬಾಹುಕ ರಾಜನೇ ಕೇಳು, ನಿಮ್ಮ ಕುಶಲತರಮಾದ ಆಜ್ಞೆ ಪ್ರಕಾರ ಯೆಸೆವ ಹೇಮಾವತಿಗೆ ಪೋಗಿ ಅಸಮ ಸಾಹಸಮಾದ ತಂತ್ರವನ್ನು ಕಲ್ಪಿಸಿ ಶಶಿಮುಖಿಯಳಾದ ಸುವರ್ಣೆ ಸುಂದರಿಯನ್ನು ತಂದು ನಿಮ್ಮ ವಶಕ್ಕೆ ಒಪ್ಪಿಸಿರುವೆನು. ನಿಮ್ಮ ಮನಸ್ಸಿನಲ್ಲಿ ಸಂತೋಷಕರಮಾಗಿ ಯನಗೆ ಸಲ್ಲತಕ್ಕ ಬಹುಮಾನಗಳನ್ನು ದಯಪಾಲಿಸಬೇಕೈ ಸ್ವಾಮಿ – ಭೃತ್ಯ ಜನಪ್ರೇಮೀ ॥

ಉಗ್ರಬಾಹುಕ: ಭಲೇ ಭಲೇ ಶಹಭಾಷ್ ಮಂತ್ರೀ  ನಮ್ಮ ಬೊಕ್ಕಸ ಭಂಡಾರಕ್ಕೆ ಇಗೋ ಈ ಮುದಿನಾರಿಯನ್ನು ಗಕ್ಕನೇ ಕರೆದುಕೊಂಡು ಪೋಗಿ ಅಕ್ಕರದಿಂದ ತನಗೆ ಬೇಕಾದಷ್ಠು ಧನಕನಕ ಮುಂತಾದ ವಸ್ತ್ರಾಭರಣ ಭೂಷಣಗಳನ್ನು ಕೊಟ್ಟು ಸೊಕ್ಕು ಜವ್ವನೆಯು ಸಂತೋಷಪಡುವಂತೆ ತಕ್ಕಷ್ಠು ಮಾನ ಸನ್ಮಾನಗಳನ್ನು ಮಾಡಿ ಜಾಗ್ರತೆಯಿಂದ ಬಾರೈ ಪ್ರಧಾನಿ – ವಾರುಧಿಗೆ ಸಮಾನಿ ॥

ಮಂತ್ರಿ: ಹೇ ರಾಜ ! ನಿಮ್ಮ ಉತ್ತರಕ್ಕೆ ಪ್ರತಿ ಉತ್ತರವನ್ನು ಕೊಡದೆ ನಿಮ್ಮ ಆಜ್ಞಾನುಸಾರಮಾಗಿ ನಡೆದುಕೊಳ್ಳುತ್ತೇನೈ ರಾಜ-ರವಿಕೋಟಿ ತೇಜ ॥

ಮಂತ್ರಿ: ಅಮ್ಮಾ ತಾಟಕಿ, ಇಗೋ, ಈ ಬಹುಮಾನಗಳನ್ನು ಸ್ವೀಕರಿಸಬೇಕಮ್ಮಾ ಮಟು
ಮಾಯಗಾತಕಿ॥

ತಾಟಗಿತ್ತಿ: ಅಯ್ಯ ಮಂತ್ರಿ ಕುಲೋತ್ತಮನೇ, ನಿಮ್ಮ ಉತ್ತಮವಾದ ಮಾತಿನ ಪ್ರಕಾರ ಅಷ್ಠೈಶ್ವರ‌್ಯಮಾದ ಬಹುಮಾನವನ್ನು ಸ್ವೀಕರಿಸಿರುತ್ತೇನೈ. ಇನ್ನು ನಾನು ಹೊರಡುವೆನೈ ಮಂತ್ರಿ ಕುಲೋತ್ತಮರೇ॥

(ಉಗ್ರಬಾಹುಕ ಸುವರ್ಣೆಯರ ಸಂಭಾಷಣೆ)

ದರುವುಜಂಪೆ

ವಾರೆ ಗಣ್ಣಿನ ಬಾಲೆ  ನೀರೆ ನಿನ್ನನು ಕಂಡು
ಸೂರೆ ಹೋಯಿತೆ ತರುಣಿ  ಯನ್ನಯ ಮನಸು, ಕೇಳ್ ಮನಸು    ॥1 ॥

ತೋರೆ ನಿನ್ನಯ ಉರುತ  ಗುರುಕುಚಗಳ ಬೆರಗನೂ
ಸುರತಾ ಸುಖದೊಳು ನಿನ್ನ  ಭರದಿ ಸೇರುವೆನೇ ಬೆರೆಯುವೆನೇ   ॥2 ॥

ಕಾಮಿನಿ ಮಣಿ ನಿನ್ನ  ಕಾಮಿಸಿ ಭ್ರಮಿಸಿರುವೆ
ಪ್ರೇಮದಿಂದಲಿ ಯನ್ನ  ನೇಮದಿಂ ಕೂಡೇ ರತಿಕ್ರೀಡೆ                 ॥3 ॥

ಉಗ್ರಬಾಹುಕ: ಪ್ರದ್ಯುಮ್ನ ವಾಹನದಂತೆ ಮುದ್ದು ಮುದ್ದಾಗಿ ಮೃದು ನುಡಿಗಳನ್ನು ನುಡಿಯುವ ಪದ್ಮಲೋಚನೆಯಾದ ಮೋಹನಾಂಗಿಯೇ ಕೇಳು, ನೀನಿದ್ದ ಸೌಂದರ್ಯವನ್ನು ತಿಳಿದು ಕಾಮಾಂಧಕಾರನಾಗಿ ಯನ್ನ ಸಾನಿಧ್ಯಕ್ಕೆ ಖುದ್ದಾಗಿ ಕರೆಸಿದೆ, ತದ್ರೂಪು ನಿನ್ನ ಮುದ್ದು ಮುಖದ ಅಂದ ಚಂದಗಳನ್ನು ಕಂಡು ಬೆದರಿ ಧಗ ಧಗಾಯಮಾನವಾಗಿ ಇರುವೆನಾದ ಕಾರಣ ಬದಲು ಯೋಚನೆಯಂ ಗೈಯದೇ ಯನ್ನ ಮದನ ಸದನಕ್ಕೆ ಸಿದ್ಧಳಾಗೇ ಮುದ್ದು ಮೋಹನ್ನೆ ॥

ದರುವು

ದೊರೆರಾಯ ಕೇಳೈಯ್ಯ  ಪರನಾರಿ ಯನ್ನನೂ
ಸುರತಾದಿ ನೆರೆಯಲ್ಕೆ  ಕರೆಯಲು ಬಹುದೇನೈ ದೊರೆರಾಯ      ॥1 ॥

ತರವಲ್ಲಾ ತರುಣಿಯಾ  ದುರುಳಾ ಬುದ್ಧಿಗಳಿಂದಾ
ಕೊರಳ ನರಿಯಲು ಬೇಡ  ಶರಣೆಂಬೆ ರಾಜನೇ ದೊರೆರಾಯ       ॥2 ॥

ಹರ ಹರ ನಾನೆಂತು  ಪರಿಭವ ಗೈಯಲೀ
ಪರಮ ಪಾಪಿಯು ಯನ್ನ  ಸೆರೆಯ ನೊಡ್ಡುವನಲ್ಲಾ ॥ದೊರೆರಾಯ ॥3 ॥

ಸುವರ್ಣೆ: ಅಯ್ಯೋ ! ದೇವ ದೇವೋತ್ತಮ  ದೇವತಾ ಸಾರ್ವಭೌಮನಾದ ಹೇ ಮುಕ್ಕಣ್ಣ ಪ್ರಭುವೇ ಈ ಕಡುಮೂರ್ಖನಾದ ದೊರೆಯು, ಸೊಕ್ಕು ಜವ್ವನೆಯಾದ ಯನ್ನ ಮೇಲೆ ಅಕ್ಕರ ಮಿಲ್ಲದೇ, ಸೊಕ್ಕಿ ಕಾತುರದಿ ಬರುತ್ತಿರುವನಲ್ಲದೇ, ಇನ್ನಾವ ದಿಕ್ಕಿನೋಳ್ ಠಕ್ಕಿಸಿದರೂ ಬಿಡದಿರುವನಲ್ಲಾ ದೇವಾ ! ಅಯ್ಯೋ ಕಾಠಿಣ್ಯ ಪಾಪಿ ಮಿಕ್ಕ ನಾರಿಯರಂತೆ ತಿಳಿಯದೇ ನಿಮ್ಮ ಅಕ್ಕ ತಂಗಿಯರ ಸಮವೆಂದು ತಿಳಿದು ಹೊಕ್ಕ ಕಡೆ ನನ್ನ ಮುಟ್ಟದೇ ಕಕಲಾತಿಯನ್ನು ಬಿಟ್ಟು ದೂರ ಸಾರೋ ದೊರೆಯೇ – ನಿನಗಿದು ಸರಿಯೇ ॥

ಉಗ್ರಬಾಹುಕ: ಕುಡಿತೆ ಕಂಗಳೆಯಾದ ಹೇ ತರುಣಿ ! ಕಡು ಸೊಬಗಿನಿಂದ ನಿನ್ನ ಬಡ ನಡುವು ಬಳುಕುತ್ತಿರುವ ಬೆಡಗನ್ನು ಕಂಡು ಮಿಡು ಮಿಡುಕಿ ಸಡಗರದಿ ಗಾಢಾಗ್ನಿ ಸುಡುವುದಾದ ಕಾರಣ ನಾ ತಡೆಯಲಾರೆ. ಕಡು ತೀವ್ರದಿಂದ ಯನ್ನ ತೊಡೆಯ ಮೇಲೆ ಕುಳಿತುಕೊಳ್ಳುವುದಕ್ಕೆ ಬಂದರೇ ಸಮಾ. ಇಲ್ಲವಾದರೇ ನೀನು ಎಡನುಡಿಯನ್ನು ನುಡಿದು ತಡವನ್ನು ಮಾಡಿದ್ದೇ ಆದರೆ, ನಿನ್ನ ಜಡೆ ಮುಡಿಯನ್ನು ಪಿಡಿದು ಝೇಂಕರಿಸಿ ಯನ್ನ ಶಯನಾಗೃಹಕ್ಕೆ ತಡೆಯದೆ ಎಳೆದುಕೊಂಡು ಪೋಗಿ ಘಡಿಘುಡಿಸುವ ರತಿಕ್ರೀಡೆಯಿಂದ ಸುಖಪಡುತ್ತೇನೆ. ತಡಮಾಡದೆ ನಡಿಯೇ ನಾರಿ – ಮದನ ವೈಯ್ಯರಿ ॥

ಕಂದಾರ್ಧಪೂರ್ವಿ

ದೊರೆಯೇ ನೀ ಪರಿ  ದುರುಳ ವಿಚಾರ ಮದಾಂಧದೀ
ಹರುಷವಿದೇತಕೇ  ಕರುಣಾಂಭೋ ನಿಧಿ
ಧೀರನೇ ಪುರಹರ ನರಸಿಯ ಪೂಜೆ ಗೈವೇ ॥
ಧರಣೀಶ ಕೇಳೂ  ಸ್ಮರಿಸುವೆ ತಾಳು
ಧರಣೀಶ ಕೇಳೂ ॥
ಆರು ಮಾಸಗಳನ್ನಾ  ಚರಿಸೀದ ನಂತರಾ
ಮಾರ ಸುರತಕೆ ಇನ್ನೂ  ಬೆರೆಯಲು ಬರುವೆನೂ ॥
ಧರಣೀಶ ಕೇಳು  ಸ್ಮರಿಸುವೆ ತಾಳು
ಧರಣೀಶ ಕೇಳು ॥

ಸುವರ್ಣೆ: ಅಂಗಜನ ಮೋಹ ಕಾತುರದಿಂದ ಭಂಗಪಡಿಸುವ ಹೇ ದೊರೆಯೇ ! ಈ ಜಗವನ್ನು ಪರಿಪಾಲಿಸುವ ಸರ್ವಮಂಗಳೆಯಾದ ಶ್ರೀ ಗೌರಿ ದೇವಿಯನ್ನೂ ಮಂಗಳಕರಮಾಗಿ ಆಚರಿಸುವ ವ್ರತನೇಮ ಇರುವುದರಿಂದ ಆರು ತಿಂಗಳ ಪರಿಯಂತರವು ಯನ್ನನ್ನು ಸಂಗ್ರಹಿಸದೇ ಶೃಂಗಾರಕರ ಮಾದ ಒಂದು ಅರಮನೆಯನ್ನು ಅಂಗನೆಯಾದ ಯನಗೆ ಬಿಡಿಸಿಕೊಡೈ ದೊರೆಯೇ – ಸೊಕ್ಕಿದ ಮದಕರಿಯೇ ॥

ಉಗ್ರಬಾಹುಕ: ಪುತ್ಥಳಿಯ ಪ್ರತಿಮೆಯಂತೊಪ್ಪುವ ಚಿತ್ತಜನರ ಗಿಳಿಯೇ, ಮುತ್ತಿನಾ ಮಣಿಯೇ! ನಿನ್ನ ಚಿತ್ತದೋಳ್ ಕಾತ್ಯಾಯಿನಿಯ ಪೂಜಿಸತಕ್ಕ ಪ್ರತಿಜ್ಞೆಯ ಪ್ರಕಾರ ಉತ್ತರವನ್ನು ಬಿತ್ತರಿಸಿರುತ್ತೇನೆ, ಉತ್ತಮವಾದ ಇಗೋ ಇಂತೊಪ್ಪ ಮಂದಿರಕ್ಕೆ ಪೋಗಿ ಇಷ್ಠಾರ್ಥವನ್ನು ಪ್ರಯತ್ನಿಸಿ ಅತ್ಯಂತ ಸಂತೋಷದಿಂದ ಇರುವಂಥವಳಾಗೇ ಕಾಂತೇ – ನಿನ್ನಂತರವು ತಿಳಿಯಬಂತೇ ॥