(ಸುವರ್ಣಾದೇವಿ ತಪೋಗೃಹ ಸೇರುವಿಕೆ)

ಶ್ರೀಗೌರೀಸ್ತೋತ್ರ

ದರುವು

ಕಾಯಮ್ಮಾ ಶ್ರೀ ಗೌರೀ  ಕಾಯಮ್ಮಾ ಶೌರೀಯೇ
ಕಾಯ್ವರಿನ್ಯಾರಿಲ್ಲಾ  ಕಾರುಣ್ಯ ನಿಧಿಯೇ                                  ॥1 ॥

ದುರುಳಾ ರಾಜನು ಈಗಾ  ವ್ರತಭಂಗ ಗೈಯುವನೇ
ಸರಸಿಜಾಕ್ಷಿಯೆ ನಿನ್ನಾ  ಚರಣಾ ನಂಬಿದೆನೇ                            ॥2 ॥

ಪತಿಯು ಅಳಿದು ಇಹನೆಂದು  ವ್ಯಥೆಪಡುತಿರುವೇನೇ
ಸುತೆಯಾಳ ಸಲಹಮ್ಮಾ  ಶಿತಿಕಂಠ ಸತಿಯೇ                         ॥3 ॥

ಇಳೆಯೊಳಗೆ ಆ ಜ್ಯೇಷ್ಠಾ  ಬಳ್ಳಾಪುರವ ಪೊರೆವ
ವ್ಯಾಳ ಭೂಷಣ ಪ್ರಿಯೇ  ಸಲಹಮ್ಮಾ ಯನ್ನಾ                          ॥4 ॥

ಶ್ರೀಗೌರೀ ದಂಡಕ

ಶ್ರೀ ಕೈಲಾಸವಾಸನರ್ಧಾಂಗೀ  ರುದ್ರಾಣಿ ವಾಣಿ
ಫಣಿವೇಣಿ ಕಲ್ಯಾಣಿ  ಕಾತ್ಯಾಯಿನಿ  ಕಾರುಣ್ಯನಿಧಿ
ನಿಮ್ಮ ಚರಣಾರವಿಂದವಂ ಚೆನ್ನಾಗಿ ನಂಬಿರುವೆ
ಕನ್ನೆಯಳ ಅನ್ಯರ ವಶ ಮಾಡದಂತೆ ರಕ್ಷಿಸೀ
ಇನ್ನು ಈ ಕವಾಟ ದ್ವಾರಗಳು ಚೆನ್ನಾಗಿ ಬಂಧಿಸಿ
ಇನ್ಯಾವ ಮಾನವರಿಗೂ ಬಾರದಂತಿರ್ಪುದಲ್ಲದೇ
ತನ್ನ ಇನಿಯನಿಗೆ ಪ್ರಾಣದಾನವ ಕೊಟ್ಟು
ಉನ್ನತಮಾಗಿ ಕನ್ನೆಯನು ಸಲಹಮ್ಮಾ
ಪನ್ನಗಾಧರನ ಪತ್ನಿ ಓನ್ನಮೋ ಓಂಕಾರಿ
ಗೌರೀ ನಮಸ್ತೇ ನಮಸ್ತೇ ನ್ನಮಃ ॥

ಸುವರ್ಣೆ: ಹೇ ಮಹಾದೇವ ! ಹೋ ಶಾಂಭವೀ ಪತೇ, ಈ ದುರುಳನಾದ ಉಗ್ರಬಾಹುಕನ ವಶಕ್ಕೆ ಯನ್ನನ್ನು ಸಿಲುಕಿಸದಂತೆ  ಈ ಕವಾಟ ದ್ವಾರಗಳು ನಿರ್ಬಂಧಕರಮಾದ ಅಸಾಧ್ಯಮಾಗಿ ಯನ್ನ ಪತಿವ್ರತಾ ಧರ್ಮವನ್ನು ಉದ್ಧಾರ ಮಾಡಬೇಕೈ ಸಾಂಬಮೂರ್ತಿ ॥

ಕಂದ

ಕನ್ನೆಯು ಗೃಹವಂ ಸೇರಲೂ
ಚನ್ನಿಗನಿತ್ತಲ್ ಬತ್ತಿದ ಸ್ವಪ್ನವು ತೋರೆ ॥
ಉನ್ನತದಿ ಚಿತ್ರಶೇಖರಾ
ತನ್ನ ಮಾವನ ಬಳಿಗೆ ಬಂದು ಖಿನ್ನತೆಯೊಳಾಗಂ ॥

ಭಾಗವತರು: ಈ ಪ್ರಕಾರವಾಗಿ ತಾಟಗಿತ್ತಿಯ ಕುಟಿಲ ಮಾಯೆಗಳಿಂದ ಸೋಮಶೇಖರನು ಮರಣವನ್ನೈದೂ, ಸುವರ್ಣಾದೇವಿಯು ಕುಸುಮಕೇಸರಿಯ ಪಟ್ಟಣದೋಳ್ ತಪೋಗೃಹವಂ ಸೇರಿ, ಕವಾಟದ್ವಾರಗಳಂ ಬಂಧಿಸಿ, ಗೌರೀ ಪೂಜೆಯಲ್ಲಿರಲೂ, ಇತ್ತಲಾ ಚಿತ್ರಶೇಖರನ ಕನ್ನೈದಿಲೆ ಹಾರವು ಬಾಡಿ ದುಸ್ವಪ್ನವಾಗಲೂ ಚಿಂತಾಕ್ರಾಂತನಾಗಿ ತನ್ನ ಮಾವನಾದ ವಿಕ್ರಮಭೂಪನೊಡನೆ ಇಂತೆಂದನೈಯ್ಯ ಭಾಗವತರೇ ॥

(ವಿಕ್ರಮ ಭೂಪನಲ್ಲಿ ಚಿತ್ರಶೇಖರನ ಬಿನ್ನಪ)

ದರುವು

ಮಾವಯ್ಯ ಕೇಳು  ಪ್ರೇಮದಿ ಪೇಳ್ವೆ
ಮಾವಯ್ಯ ಕೇಳೂ ॥ಪ ॥
ಕಾಮಿನಿ ನೆವದೊಳೂ  ಸೋಮಶೇಖರ ತಾನು
ಕಾಮವೈರಿಯ ಭಜಿಸಿ  ಹೇಮಾವತಿಗೇ ಪೋದಾ                      ॥1 ॥

ಸುಂದರವಾದಂಥ  ಚನ್ನೈದಿಲೆಯ ಹಾರ
ಅಂದವು ಕೆಡುತಲೀ  ಕುಂದುತ್ತಾ ಬಂದಿತೂ ಮಾವಯ್ಯ              ॥2 ॥

ಮುಂದೇನು ಗತಿಯಿದ  ರಂದವು ತಿಳಿಯದೂ
ಚಂದಾದಿಂ ಪೋಗಲು  ವಂದನೇ ಗೈಯುವೇ ಮಾವಯ್ಯ           ॥3 ॥

ಪರಿ ಪರಿ ವಿಧದೊಳೂ  ಹಿರಿಯನ ಕಾಣದೇ
ಕರಕರಸುತಲಿದೇ  ನರ ವರ ಮನದೊಳಗೇ ಮಾವಯ್ಯ             ॥4 ॥

ಜ್ಯೇಷ್ಠ ಬಳ್ಳಾ ಪುರದಾ  ಅಷ್ಠಮೂರ್ತಿಯ ಭಜಿಸಿ
ಸೃಷ್ಠೀ ಹೇಮಾವತಿಗೇ  ಥಟ್ಟಾನೇ ಪೋಗುವೆನೂ ಮಾವಯ್ಯ ಕೇಳೂ ॥5 ॥

ಚಂದ್ರಶೇಖರ: ಹೇ ಮಾವನಾದ ವಿಕ್ರಮ ಭೂಪ-ಶೌರ‌್ಯಾಟೋಪ  ನಿಮ್ಮನ್ನು ಚಂದದಿಂದ ಕರೆಸಿದ ಅಂದವೇನೆಂದು ಕೇಳಿದರೆ, ಸುಂದರ ಪುರುಷನಾದ ಅಣ್ಣಯ್ಯನು ಮಂದಗಮನೆಯನ್ನು ಬಯಸಿ ಪೋದಲಾಗಾಯಿತು ಇಂದಿನವರೆವಿಗೂ ಬಾರದ್ದರಿಂದ ಒಂದು ನೆಲೆಯನ್ನು ಯನ್ನೊಂದಿಗೆ ಇಟ್ಟಿರುವ ಕನ್ನೈದಿಲೆಯ ಪುಷ್ಪಾಹಾರವನ್ನು ನೋಡಲು ಕಂದಿ ಕಪ್ಪಾಗಿರುವುದಾದ ಕಾರಣ ಒಂದು ಅರೆಕ್ಷಣವೂ ತಡಿಯದೇ ಮುಂದೆ ಹೇಮಾವತಿಯ ಪಟ್ಟಣಕ್ಕೆ ಇಂದಿನ ದಿನವೇ ಪೋಗಿ ಬರುತ್ತಾ ಇದ್ದೇನೆ. ಆದ್ದರಿಂದ ನಿಮ್ಮ ಪಾದಕ್ಕೆ ವಂದಿಸುವೆನು ಆಶೀರ್ವದಿಸಿ ಕಳುಹೈ ಮಾವ-ದಿನಕರ ಪ್ರಭಾವ ॥

ವಿಕ್ರಮ: ಹೇ ಅಳಿಯನಾದ ಚಿತ್ರಶೇಖರನೇ ಕೇಳು. ಇಂತೊಪ್ಪ ಕಾರ‌್ಯಕ್ಕೆ ಪೋಗಬೇಕಾದ ಕಾರಣ ದಳಪತಿ ಸೈನ್ಯ ಸಮೇತನಾಗಿ ವಿಚಿತ್ರಕರಮಾದ ಹೇಮಾವತಿಗೆ ಪೋಗಿಬಾರಪ್ಪಾ ಚಿತ್ರಶೇಖರಾ-ಶತೃಜನ ಭಯಂಕರಾ॥

ಚಿತ್ರಶೇಖರ: ಅದೇ ಪ್ರಕಾರ ಪೋಗಿ ಬರುತ್ತೇನೈ ಮಾವ-ಕರುಣ ಪ್ರಭಾವ ॥

 

(ಚಿತ್ರಶೇಖರನು ಹೇಮಾವತಿಗೆ ಬರುವಿಕೆ)

ದರುವುಜಂಪೆ

ವರ ಚಿತ್ರಶೇಖರನೂ  ಭರದಿ ಪೈಣವ ಹೊರಟಾ
ಪುರವ ಸೇರುತ ತಾನು  ಅರಮನೆಯ ಕಂಡಾ  ತಾ ಕಂಡಾ        ॥1 ॥

ಆ ದ್ವಾರಗಳನೆಲ್ಲಾ  ಛಿದ್ರಿಸಿ ಒಳಹೊಕ್ಕು
ನಿದ್ರೆ ಗೈಯುವುದನ್ನು  ಶೀಘ್ರದಿಂ ಕಂಡು ತಾ ಕಂಡು                  ॥2 ॥

ಚಂದ್ರಶೇಖರ: ಆಹಾ ! ಅಯ್ಯೋ ಅಣ್ಣಯ್ಯ ಇಂಥಪ್ಪ ರಜತ ಮಯದಿಂದೊಪ್ಪಲ್‌ಪಟ್ಟ ಮಂದಿರದ ಮಣಿಮಂಚದ ಮೇಲೆ ಶಯನಗೈದಿರುವ ಕಾರಣವೇನು ? ಮುಖವೆತ್ತಿ ಯನ್ನೊಡನೆ ಮಾತನಾಡ ಬಾರದೇ, ಅಯ್ಯೋ ಸೋಮಶೇಖರಾ-ಕರುಣಾಕರಾ ॥

ದರುವು

ಅಯ್ಯೋ ಅಣ್ಣಾ  ಅಯ್ಯೋ ಅಣ್ಣಯ್ಯ
ಸಾಯಲೆಂತು ನೀ  ಬಂದಿತೋ ಅಣ್ಣಾ                                    ॥1 ॥

ಮಾಯ ಪಕ್ಷಿಯ  ನುಡಿ ಕೇಳಿ ಬಂದೇ
ಕಾಯವನ್ನು ನೀ  ತೋರದಲ್ಲೋ ತಂದೇ                                ॥2 ॥

ಹೆಣ್ಣಾ ಬಯಸೀ  ಅಣ್ಣಾ ನೀ ಬಂದೇ
ಚಿಣ್ಣಾನೋರ್ವಗೆ  ಗತಿ ಯಾರೋ ಮುಂದೇ                             ॥3 ॥

ಜ್ಯೇಷ್ಠಾ ಬಳ್ಳಾ  ಪುರದಾ ಸೋಮೇಶಾ
ನಿಷ್ಠೆಯಿಂ ಸ್ಮರಿಸುವೆ  ಪೊರೆಯೋ ಗೌರೀಶಾ                          ॥4 ॥

ಚಿತ್ರಶೇಖರ: ಅಕಟಕಟಾ, ಅಯ್ಯೋ ಅಣ್ಣಯ್ಯ ಮಟು ಮಾಯಗಳನ್ನು ನಟಿಸಿ ಕುಟಿಲತ್ವಗಳಿಂದ ಘಟ ಪ್ರಯೋಗವನ್ನು ಮಾಡಿದವರು ಯಾರೋ, ಅಂತೊಪ್ಪ ಕುಟಿಲ ಮಾನವರನ್ನು ಕಠಿಣತರಮಾಗಿ ಶಿಕ್ಷಿಸಿ ಯಮನ ಪಟ್ಟಣಕ್ಕೆ ಕಳುಹಿಸುತ್ತೇನೆ. ದೃಷ್ಠಿಸಿ ಯನ್ನೊಡನೆ ಮಾತನಾಡಬಾರದೇ, ಅಯ್ಯೋ ಕೆಟ್ಟೆನಲ್ಲೋ ಅಣ್ಣಯ್ಯ, ಇನ್ಯಾವ ಸೃಷ್ಠಿಗೆ ಪೋಗಲಿ. ಸೃಷ್ಠಿಪತಿಯಾದ ಶಂಕರನೇ, ದಿಟ್ಟನಾದ ಅಣ್ಣಯ್ಯನಿಗೆ ಪ್ರಾಣದಾನವನ್ನು ಕೊಟ್ಟು ರಕ್ಷಿಸಬಾರದೇ ಶಂಕರಾ – ಕರುಣಾಕರಾ ॥

ಯಲಾ ! ಸಾರಥೀ, ಯಮ್ಮ ಅಣ್ಣಯ್ಯನಿಗೆ ಅನ್ನಪಾನಾದಿಗಳನ್ನು ಮಾಡುವ ಉದ್ಧಿಶ್ಯವಾಗಿ ಅಗ್ನಿಯನ್ನು ಹುಡುಕಲು, ಆ ಕುಂಡದಲ್ಲಿ ಕರ್ನಪತ್ರಗಳೆರಡೂ ಯನಗೆ ಸಿಕ್ಕಿರುವುದರಿಂದ ಮುನ್ನಿನಂತೆ ರೂಪು ತಿದ್ದಬೇಕಾದ ಕಾರಣ ನೀನು ಕಾರಕಡಕೇರಿಗೆ ಪೋಗಿ ಅಲ್ಲಿ ಅನೇಕ ಮುಟ್ಟುಗಳಿರುತ್ತವೆ. ಅವುಗಳಲ್ಲಿ ಉನ್ನತಮಾದ ಸಾಮಾನುಗಳನ್ನು ತೆಗೆದುಕೊಂಡು ಬಿನ್ನಾಣತರಮಾಗಿ ಬಾರೈ ಸಾರಥೀ – ಸಂಧಾನಮತೀ॥

ಸಾರಥಿ: ಸ್ವಾಮಿ, ಚಿತ್ರಶೇಖರ ಭೂಪಾಲರೇ ! ತಮ್ಮ ಅಪ್ಪಣೆ ಪ್ರಕಾರ ಹೇಳಿದ ಸಾಮಾನುಗಳನ್ನು ತಂದು ಇರುತ್ತೇನೆ. ಸ್ವೀಕರಿಸಬಹುದೈ ಸ್ವಾಮೀ – ಭಕ್ತಜನ ಪ್ರೇಮಿ ॥

(ಅನುಜನು ಅಗ್ರಜನಿಗೆ ಕರ್ನಪತ್ರ ಧರಿಸುವಿಕೆ)

ದರುವು

ಶಂಭೋ ಕಾಯೋ  ಶಂಭೋ ಕಾಯೋ
ನಂಬಿದೆನೈಯ್ಯ  ಶಂಭೋ ಕಾಯೋ                                    ॥ಪ ॥

ಕುಂಭಿಣಿಯೊಳಗೇ  ಅಂಬಿಕಾ ವರನೇ
ಸಂಭ್ರಮದೀ ಸ್ವ  ಯಂಭೇಶ್ವರನೇ                                        ॥1 ॥

ಚಿಣ್ಣಾ ನೋರ‌್ವಾ  ನಾದೇನೈಯ್ಯ
ಅಣ್ಣಯ್ಯನಾ  ಪ್ರಾಣವೀಯಾ                                                ॥2 ॥

ಮೃತ್ಯುಂಜಯನೇ  ಮೃತ್ಯುಜಯನೇ
ಧಾತ್ರಿ ಜ್ಯೇಷ್ಠನೇ  ಪೃಥ್ವೀಶ್ವರನೇ                                           ॥3 ॥

ಕಂದಸಾವೇರಿ ರಾಗ

ಹೇ ಶಂಭೋ, ಹೇ ಶಂಕರಾ, ಹೇ ವಿರೂಪಾಕ್ಷ
ಹೇ ಫಾಲಾಕ್ಷ, ಹೇ ಅಂಬಿಕಾಪತಿ, ಈ ಕುಂಭಿಣಿ
ಯೊಳಗೆ ನಿಮ್ಮ ಕಂದನಾದ ಅಣ್ಣಯ್ಯನಿಗೆ
ಪ್ರಾಣದಾನವನ್ನು ಕೊಟ್ಟು ಸಂಭ್ರಮದಿ
ಸಲಹಬೇಕೈಯ್ಯ ಸ್ವಯಂಭೇಶ್ವರಾ
ಶ್ರೀ ನಮಸ್ತೇ ನಮಸ್ತೇ ನಮಸ್ತೇರ್ನ್ನಮಃ ॥

(ಸೋಮಶೇಖರ ಮೂರ್ಛೆ ತಿಳಿದೇಳುವಿಕೆ)

ಸೋಮಶೇಖರ: ಆಹಾ, ಎಷ್ಠು ಹೊತ್ತು ನಿದ್ರೆಗೈಯುತ್ತಿದ್ದೆನೇ ಮುದ್ದುಮೋಹನೇ ॥

ತದ್ರೂಪನಾದ ಚಿತ್ರಶೇಖರನೇ ಕೇಳು. ನಾನಿದ್ದ ಮಂದಿರದಲ್ಲಿ ಮುದ್ದು ಮೋಹನೆಯಾದ ಸುವರ್ಣೆಯ ಸದ್ದಿಲ್ಲದೇ ಸದ್ದಣಗಿರುವ ಕಾರಣವೇನೋ ಅನುಜಾ – ಸಾಂಮ್ರಾಟ ತನುಜ ॥

ಚಿತ್ರಶೇಖರ: ಅಣ್ಣಾ ! ಪುತ್ಥಳಿಯ ಬಣ್ಣಾ ! ಹೆಣ್ಣಿ ಗೋಸ್ಕರಮಾಗಿ ಬಂದು, ಕಣ್ಣಿನೋಳ್ ಮಣ್ಣು ಹೊಯಿದಂತೆ ನೀನು ಪ್ರಾಣವನ್ನು ಅಳಿದಿರುವ ಕಾಲದೋಳ್ ಕಣ್ಣು ಮೂರುಳ್ಳ ಶಂಕರನ ಕರುಣದಿಂದ ನಿನ್ನ ಪ್ರಾಣವನ್ನು ಪಡೆದಿರುತ್ತೇನೆ, ಕನ್ನೆ ಕಾಮಿನಿಯಾದ ಸುವರ್ಣಾ ಅತ್ತಿಗೆಯೂ ಬೆನ್ನಿಂದೆ ಗೋಡೆಯೋಳ್ ತನ್ನ ಕರದಲ್ಲಿ ಬರೆದಿರುವ ಲಿಪಿಯನ್ನು ತಿಳಿಯಬಹುದೈ ಅಗ್ರಜವೀರಾ-ಬಲುಧೀರಾ॥

ಸೋಮಶೇಖರ: ಅದು ಏನೋ ಚೆನ್ನಾಗಿ ಓದುವಂಥವನಾಗೋ ತಮ್ಮಾ – ಲಿಖಿಸಿದ ಬ್ರಹ್ಮಾ ॥

(ಚಿತ್ರಶೇಖರ ಲಿಪಿ ಓದುವಿಕೆ)

ಚೂರ್ಣಿಕೆಸೌರಾಷ್ಟ್ರ ರಾಗ

ಶ್ರೀಮಸ್ತು ಸುವರ್ಣಾದೇವಿ ಚಿತ್ರಶೇಖರನಿಗೆ
ಪ್ರೇಮದಿಂದೆರಗಿ ಮಾಡುವ ಬಿನ್ನಪವಾ ॥
ಕುಸಮ ಕೇಸರಿಯನಾಳ್ವ ಉಗ್ರಬಾಹುಕನು
ಜವದಿಂದ ನಾವು ಬಾಳುವುದ ಕೇಳಿ ಅವನು ನನ್ನ ಬಯಸೀ
ಬೇಡಿದ ವಸ್ತುವನಿತ್ತು  ಘಾತಕಿ ತಾಟಕಿಯ ಕಳುಹೇ
ಗಾಢದಿಂ ಬಂದೆಮ್ಮ ಒಡಗೂಡಿದಂತಿರ್ದು
ವಸುಧೀಶ ಸೋಮಶೇಖರನ ಮೋಸದಿಂ ಕೊಂದು
ಯನ್ನನ್ನು ಕುಸುಮ ಕೇಸರಿಯ ಸೇರಿಸಿದಳು
ಪರಪುರುಷರೆನಗೆ ಪಿತಮಾತೆ ಗುರುದೈವ
ಒಡಹುಟ್ಟಿದವರ ಸಮಾನವು  ನಿಮ್ಮ ಬರುವಿಕೆಯ
ನೋಡುವೆನು ನಾನು ಆರು ಮಾಸಗಳ ಪರಿಯಂತರವು
ಬಳಿಕ ಹರಣವನು ತೊರಕೊಂಬೆನೆಂದು
ಅತ್ತಿಗೆಯು ಬರೆದಿರುವಳಲ್ಲೋ ಭೂಪಾಲಕಾ ॥

ದರುವುಜಂಪೆ

ನಡಿ ನಡಿಯೋ ಅನುಜನೇ  ಮಡದಿಯನು ಕೊಂಡೊಯ್ದ
ಕಡುಮೂರ್ಖ ಪೊಡವಿಪನ  ಬಿಡೆ ನಾನು ಅನುಜಾ, ಇದು ಸಹಜಾ ॥1 ॥

ಕಡಲಾ ಜಾಣೆಯು ಮಾಯ  ಬಿಡದೆ ಕುಟಿಲತೆ ಮಾಡಿ
ಕುಡಿತೆ ಕಂಗಳೆಯನ್ನು  ಕೊಂಡೊಯ್ದಳಲ್ಲೋ ನೀ ಕೇಳೋ          ॥2 ॥

ಪುಂಡ ಲಂಡನ ಕಂಡು  ಖಂಡ್ರಿಸುವೆ ಮಂಡೆಯನು
ರುಂಡ ಮಾಲೆಯ ಧರಿಸಿ  ಭಂಡುಗೆಡಿಸುವೆನೂ ನಾ ಬಿಡೆನೂ      ॥3 ॥

ಸೋಮಶೇಖರ: ಈ ಪೊಡವಿಯೋಳ್ ಮೃಡನ ವರದಿಂದ ಉದ್ಭವಿಸೀ ಮೆರೆಯುವ ಉಡುರಾಜ ಕಳೆಯುಳ್ಳ ಚಿತ್ರಶೇಖರನೇ ಕೇಳು. ಕಡುಪರಾಕ್ರಮಿಯಾದ ಉಗ್ರಬಾಹುಕನು ನಮ್ಮ ಮಡದಿಯಳಾದ ಸುವರ್ಣಾದೇವಿಯನ್ನು ಬಿಡದೆ ಕರೆಸಿಕೊಂಡಿರುವನಾದ ಕಾರಣ ಆತನನ್ನು ಪಿಡಿದು ಇಗೋ ಮಿಡಿ ಮಿಡಿಕಿಸುವ ಖಡ್ಗಾಯುಧದಿಂದ ಅವನ ಪಡೆಯನ್ನು ಅಡಗಿಸಿ ಗರ್ಭದಾ ಒಡಲನ್ನು ಬಗೆದು ಕರುಳುಗಳನ್ನು ತೆಗೆದು ರುಂಡ ಮಾಲೆಯನ್ನು ಧರಿಸುತ್ತೇನೆ. ಸಡಗರದಿಂದ ಕುಸುಮ ಕೇಸರಿಯ ಪಟ್ಟಣಕ್ಕೆ ಹೊರಡೈಯ್ಯ ಚಿತ್ರಶೇಖರಾ – ಅರಿಜನ ಭಯಂಕರಾ ॥

ಚಿತ್ರಶೇಖರ: ನಿಟಿಲಾಕ್ಷನ ವರದಿಂದ ಪುಟ್ಟಿದ ಪಟುಭದ್ರನಾದ ಅಣ್ಣಯ್ಯನೇ ಕೇಳು ! ಇಂತೊಪ್ಪ ಚಟುಲ ತರಮಾದ ಉಗ್ರಕೋಪವನ್ನು ಧರಿಸಿದರೆ ತಮ್ಮಟದಾಯವೆಲ್ಲಾ ತಟತಟನೇ ಚಿಟಿಲ್ ಚಿಟಿಲ್ ಎಂದು ಭೋರ್ಗರಿಸುವುದಾದ ಕಾರಣ ತಾಮಸದೀ ಶಾಂತ ಚಿತ್ತರಾಗಿರುವುದಲ್ಲದೇ ಬಟ್ಟು ಕುಚದ ಬಾಲೆಯನ್ನು ಸಾಧಿಸುವುದಕ್ಕೆ ನಾವುಗಳು ಈ ರೂಪಿನಿಂದ ಪೋದರೆ ಪ್ರಕಟವಾಗುವುದಾದ ಕಾರಣ ನಿನಗೆ ಕುಟಿಲ ತೀರ್ಥವನ್ನು ತಳೆದು ಮರ್ಕಟವನ್ನು ಮಾಡಿಕೊಂಡು ನಟನೆ ತರಮಾದ ಸಿದ್ಧರ ವೇಷವನ್ನು ಧರಿಸಿ ಕುಸುಮಕೇಸರಿಯ ಪಟ್ಟಣಕ್ಕೆ ಹೊರಟು ಹೋಗುತ್ತೇನೈ ಅಣ್ಣಾ – ಪುತ್ಥಳಿಯ ಬಣ್ಣಾ ॥

ಸೋಮಶೇಖರ: ಆಹಾ, ಅಗತ್ಯಮಾಗಿ ಪೋಗೋಣ ನಡಿಯೈಯ್ಯ ಚಿತ್ರಶೇಖರಾ ॥

(ಚಿತ್ರಶೇಖರ ಸಿದ್ಧರ ವೇಷದಲ್ಲಿ ಬರುವಿಕೆ)

ದರುವು

ಸಿದ್ಧರ ವೇಷವ ಧರಿಸೀ  ನಂದನರೂ
ಮುದ್ದು ಕಿನ್ನರಿಯಾನಿರಿಸೀ ॥ಪ ॥
ಸಿದ್ಧದಿಂದಣ್ಣನಾ  ಮುದ್ದು ಮರ್ಕಟ ಮಾಡಿ
ಬಂದಾನು ಶೀಘ್ರದಲಿ                                        ॥1 ॥ಹರ ಹರಾ ॥

ಪಶುಪಾಲನ ಚಿತ್ರದಲ್ಲೀ  ವಸುಧೆಯೊಳು
ಶಶಿಧರನ ಜಪಿಸುತ್ತಲೀ
ಅಸಮ ಸಾಹಸದಿಂದಾ  ಕುಸುಮಕೇಸರಿ ಪುರ
ಬಯಸುತ್ತಾ ಬೇಗದಲ್ಲಿ                                       ॥2 ॥ಹರ ಹರಾ ॥

ರುದ್ರಾಕ್ಷಿ ಜಪ ಮಾಲೆಯ  ಧರಿಸೀದ
ಭದ್ರಾ ಕೃಷ್ಣಾಂಜಿನವಾ ॥
ರುದ್ರಾನ ರೂಪಿನೋಳ್  ಇರ್ದಕುಮಾರರೂ
ನಿರ್ಧರದೀ ತಾ ಬಂದರೂ                                  ॥3 ॥ಹರ ಹರಾ ॥

ನಿಟಿಲಾಕ್ಷ ವರ ಪುತ್ರನೂ  ಪಟು ತರದೀ
ಕುಟಿಲಾ ವೇಷದಿ ಬಂದನೂ ॥
ನಟನೆಯಿಂದಲಿ ಬಂದಾ  ಮರ್ಕಟನೊಡಗೊಂಡು
ಅಕಟಕಟ ಯೇನೆಂಬೆನೂ                                   ॥4 ॥ಹರ ಹರಾ ॥

ಪುರಹರ ಹರನೇ ಪೊರೆಯೋ  ಕರುಣಾದಿ
ಗಿರಿಜೆಯ ವರನೆ ಪೊರೆಯೋ ॥
ಧರಣಿ ಜ್ಯೇಷ್ಠ ಬಳ್ಳಾ  ಪುರದ ಶಂಕರ ನಿನ್ನಾ
ಚರಣವ ನಂಬಿರುವೆನೋ                                   ॥5 ॥ಹರ ಹರಾ ॥

ಸುಗುಣ ಸುಬುದ್ಧಿ: ನಮೋನ್ನಮೋ ಹೇ. ಸಿದ್ಧಪುರುಷರೇ ॥

ಸಿದ್ಧರು: ಸುಕ್ಷೇಮದಿಂದ ಬಾಳುವಂಥವನಾಗೈ ಮಂತ್ರೀಶಾ ॥

ಸುಗುಣ ಸುಬುದ್ಧಿ: ಹೇ ಋಷಿಕುಲೋತ್ತಮರೇ  ಈ ನವರತ್ನ ಖಚಿತವಾದ ಸಿಂಹ ಪೀಠದೋಳ್ ಕುಳಿತು ಕೊಳ್ಳುವುದಲ್ಲದೇ ಇಂತೊಪ್ಪ ಸತ್ಪುರುಷರ ದರ್ಶನವಾದ ಕಾರಣದಿಂದ ಶತಪಾತಕವೂ ಹರಿದು ಹೋದಂತೆ ತೋರುತ್ತಿದೆಯಾದ ಕಾರಣ ಮತ್ಯಾವ ದೇಶಗಳನ್ನು ಸಂಚರಿಸುತ್ತಾ ಈ ಸ್ಥಳಕ್ಕೆ ಏನು ನಿಮಿತ್ಯಾರ್ಥವಾಗಿ ಚಿತ್ತೈಸಿದ್ದೀರಿ. ನಿಮ್ಮ ವೃತ್ತಾಂತವನ್ನು ವಿಸ್ತಾರಮಾಗಿ ಯನ್ನೊಡನೆ ವಿಸ್ತರಿಸಬೇಕೈ ಮೌನೀ – ಸುರಸಮ ಜ್ಞಾನಿ ॥

ಸಿದ್ಧರು: ಅಯ್ಯ ಮಂತ್ರೀಶಾ ! ಅನಂತ ದೇಶಗಳನ್ನು ಸಂಚರಿಸುತ್ತಾ ಅರ್ತಿಯಿಂದ ಪಟ್ಟಣಕ್ಕೆ ಪಂಚರಾತ್ರಿ, ಗ್ರಾಮಕ್ಕೆ ಏಕರಾತ್ರಿ ಈ ಪರಿ ತಿರುಗುತ್ತಾ ಈ ಪೃಥ್ವಿಗೆ ಚಿತ್ತೈಸಿರುತ್ತೇನಾದ ಕಾರಣ ಮತ್ತೆ ಯನ್ನಯ ನಾಮವು ಸೋಮನಾಥ ನಿರಂಜನಮೂರ್ತಿಯೆಂದು ವಿಸ್ತರಿಸಿ ಕರೆಯುವರೈಯ್ಯ ಸಚಿವರಾ – ಸಿಂಧು ಗಂಭೀರಾ ॥

ಮಂತ್ರಿ: ಹೇ ಸಿದ್ಧಪುರುಷೋತ್ತಮರೇ ! ಮತ್ತೆ ನಮ್ಮ ದೇಶಾಧಿಪತಿಯಾದ ಉಗ್ರಬಾಹುಕ ರಾಜರ ಸಭಾಸ್ಥಾನಕ್ಕೆ ಚಿತ್ತೈಸಬೇಕೈ ಮೌನೀ – ಸುರಸಮಜ್ಞಾನಿ ॥

ಸಿದ್ಧರು: ಆಹಾ, ಅಗತ್ಯಮಾಗಿ ಚಿತ್ತೈಸುತ್ತೇವಯ್ಯ ಮಂತ್ರಿವರ‌್ಯಾ ॥

ಮಂತ್ರಿ: ಹೇ ಉಗ್ರಬಾಹುಕ ರಾಜ ಭೂಪೋತ್ತಮರೇ, ಭೂತ ಪೇತ ಭವಿಷ್ಯದ್ವರ್ತಮಾನವನ್ನು ತಿಳಿದಂಥ ಒಬ್ಬ ಮಹಾತ್ಮನು ಬಂದು ಇದ್ದಾನೈಯ್ಯಾ ರಾಜೇಂದ್ರಾ – ಸದ್ಗುಣ ಸಾಂದ್ರ ॥

ಉಗ್ರಬಾಹುಕ: ಹೇ ಮಂತ್ರೀ ! ಆ ಮಹಾತ್ಮರನ್ನು ಮರ‌್ಯಾದೆಯಿಂದ ಆಸ್ಥಾನಕ್ಕೆ ಆಗಮಿಸೈಯ್ಯ ಮಂತ್ರೀ – ಕಾರ‌್ಯೇಷು ತಂತ್ರೀ ॥

ಸುಗುಣ ಸುಬುದ್ಧಿ: ಅದೇ ಪ್ರಕಾರ ಮಾಡುತ್ತೇನೈ ದೊರೆಯೇ – ಧೈರ‌್ಯದಲ್ಲಿ ಕೇಸರಿಯೇ ॥

ಉಗ್ರಬಾಹುಕ: ನಮೋನ್ನಮೋ ಸಿದ್ಧಪುರುಷರೇ ॥

ಸಿದ್ಧರು: ಅಷ್ಠೈಶ್ವರ‌್ಯ ಸಿದ್ಧಿರಸ್ತು ಬಾರೈ ನೃಪೋತ್ತಮಾ ॥

ಉಗ್ರಬಾಹುಕ: ಅಯ್ಯ ತಾಪಸೋತ್ತಮಾ, ಈ ಪೃಥ್ವಿಯೋಳ್ ದ್ವೀಪಾಂತರದಿಂದ ಮುತ್ತಿನಾ ಮಣಿ ಯಂತೊಪ್ಪುವಾ ಸ್ತ್ರೀರತ್ನವನ್ನು ತರಿಸಿರುತ್ತೇನೆ, ಅಂತೊಪ್ಪ ಮತ್ತ ಗಜಗಾಮಿನಿಗೆ ಚಿತ್ತಜನಗ್ರಹವೂ ಸೋಂಕಿರುವುದಾದ ಕಾರಣ ಮುಖವೆತ್ತಿ ಮಾತನಾಡದೆ ಚಪಲ ಚಿತ್ತದಿಂದ ಇರುತ್ತಾಳೆ. ಅವಳ ನಿಮಿತ್ಯಾರ್ಥಮಾಗೀ ನಿಮ್ಮ ಚಿತ್ತದಲ್ಲಿ ಮತ್ಯಾವ ವಿದ್ಯೆಯನ್ನು ಕಲಿತು ಇದ್ದೀರೋ ಯನ್ನ ಮುಂದುಗಡೆ ವಿಸ್ತರಿಸಬೇಕೈ ತಾಪಸೋತ್ತಮಾ ॥

ದರುವು

ಪೊಡವೀಪತಿಯೇ ಕೇಳು  ಕಡಲಾ ಜಾಣೆಯಳಿಗೆ
ಪಿಡಿದಿಹ ಗ್ರಹವನ್ನು  ಬಿಡಿಸುವೆನೈಯ್ಯ                                   ॥1 ॥

ಕಡು ಚಲ್ವೆ ಮುಖವನ್ನು  ನೋಡಿದಾ ಮಾತ್ರಕ್ಕೆ
ಓಡಿ ಹೋಗುವುದಯ್ಯ  ಮೂಢಗ್ರಹವೀಗಾ                               ॥2 ॥

ಕಿಡಿಗಣ್ಣಾ ಮೃಡನಾಣೆ  ಜಲಜಾಕ್ಷಿಯಳ ನಿಮ್ಮ
ವಡನೇ ಕೂಡಿಸುವೆನೂ  ಪೊಡವಿಪಾಲಕನೇ                           ॥3 ॥

ಕಂದಸಾವೇರಿ ರಾಗ

ಶ್ರೀರಾಜ ವಂಶೋತ್ಪನ್ನ ಕೇಳೈ  ಕಾಶ್ಮೀರ
ನವ ಖಂಡ, ಕೊಂಕಣ ಅಖಿಳ ದೇಶಗಳಾ
ಶಂಖಿನೀ ಜಾತಿಯ ಸ್ತ್ರೀಯರ ಮಂಕು ಬುದ್ಧಿ
ಗಳನ್ನು ಬಿಡಿಸುವಾ, ಜನವೇಶ್ಯಾ ನಾರಿವೇಶ್ಯಾ,
ರಜವೇಶ್ಯಾ, ಭೂತ ಪ್ರೇತಗಳ ಉಚ್ಛಾಟನಾ
ಅಗ್ನಿಸ್ತಂಭನ, ಖಡ್ಗಸ್ತಂಭನ, ಜಲಸ್ತಂಭನಾ
ಸರ್ವಾಂಜನಾ, ದೂರಗಮನ ದೂರ ದೃಷ್ಠಿ
ಇಂದ್ರಜಾಲ, ಮಹೇಂದ್ರಜಾಲ, ಮಣಿಮಂತ್ರ
ತಂತ್ರ ಶುದ್ಧಕ್ರಿಯಾ, ಸಾಮುದ್ರಿಕೆಯಾ,
ಅಂಜನವೂ ಬೇಳ್ವೆಯೂ ಅಂತೊಪ್ಪ
ಕಾಮಗ್ರಹವನ್ನು ಸೋಂಕಿದ ಕಾಮಿನಿಯರನ್ನು
ಪ್ರೇಮದಿಂದ ನಿಮ್ಮ ವಶ ಮಾಡುತ್ತೇನೆ
ಕಾಮಿತಾರ್ಥವನ್ನು ಪಾಲಿಸಬೇಕೈ ಭೂಪಾಲಕಾ ॥

ಉಗ್ರಬಾಹುಕ: ಹಾಗಾದರೆ ಆ ನಾರಿಯನ್ನು ಯನ್ನ ವಶಮಾಡಿದ್ದೇ ಆದರೇ ನಾನು ಪರಿಪಾಲಿಸುವ ರಾಜ್ಯದಲ್ಲಿ ಅರ್ಧ ರಾಜ್ಯವನ್ನು ನಿಮಗೆ ಧಾರಾಕೃತಮಾಗಿ ಕೊಡುತ್ತೇನಲ್ಲದೇ, ಪರಮ ಸುಂದರಮಾದ ನಾರೀಮಣಿ ಇಗೋ, ಈ ಅರಮನೆಯಲ್ಲಿರುತ್ತಾಳೆ. ಯನ್ನ ಮೇಲೆ ಪೂರ್ಣ ಕಟಾಕ್ಷವಿಟ್ಟು ಈ ಕಾರ‌್ಯವನ್ನು ಜಾಗ್ರತೆಯಾಗಿ ನೆರವೇರಿಸಿಕೊಡಬೇಕೈ ಮುನಿಯೇ – ನಿನ್ನಿರವು ನಾನರಿಯೇ ॥

ಸಿದ್ಧರು: ತೀವ್ರದಿಂದ ಆರು ದಿವಸದೊಳಗಾಗಿ ಸರಿಗೂಡಿಸುತ್ತೇನೈ ದೊರೆಯೇ – ಚಿಂತಿಸುವುದು ಸರಿಯೇ ॥