ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ
ಜವಳಿ ವರ್ತಕರಾದ ಹಣಬೆ ಶ್ರೀಕಂಠಪ್ಪನವರ ಮಗ ಬಿ.ಎಸ್ಸಿ., ಪದವೀಧರರಾದ
ಶ್ರೀ ಎಚ್.ಎಸ್. ಸುಬ್ಬರಾಯಪ್ಪನವರು 02-08-1963 ರಂದು ಬರೆಯಲಾರಂಭಿಸಿ 15-08-1963 ರಂದು ಮುಕ್ತಾಯಗೊಳಿಸಿದ ಸುವರ್ಣಾದೇವಿ ಪರಿಣಯಕ್ಕೆ ಶುಭಮಸ್ತು
ಇಷ್ಠದೇವತಾ ಪ್ರಾರ್ಥನೆ
ಪಂಚಬ್ರಹ್ಮ ಸ್ವರೂಪಾಯ
ಪಂಚವಕ್ತ್ರಾಬ್ಧ ಶೋಭಿನೇ ॥
ಪಂಚಾಕ್ಷರ ರಂಜಿತಾಯ
ನಮಸ್ತೇ ಪಂಚ ಮೂರ್ತಯೇ ॥1 ॥
ವಂದನೆ
ದರುವು॥ತ್ರಿವುಡೆ
ಗಿರಿಜೆ ಪುತ್ರನ ಸ್ಮರಿಸಿ ಮುದದಲೀ
ಶಾರದೆಯನೂ ಭಜಿಸಿ ವಿಧದಲೀ
ಧಾರುಣಿ ವರ ಕವಿಯು ಋಷಿಗಳಿ ಗೆರಗಿ ವಿನಯದಲೀ ॥1 ॥
ಯಕ್ಷಗಾನ ಸುವರ್ಣ ಪರಿಣಯಾ
ಅಕ್ಷರಂಗಳು ಕ್ರಮವ ತಪ್ಪಿರೇ
ಅಕ್ಷಿಮೂರುಳ್ಳವನ ಸ್ಮರಿಸೀ ತಿದ್ದಿ ಬರೆದಿಹೆನೂ ॥2 ॥
ಧರಣಿಗಧಿಕವು ಜ್ಯೇಷ್ಠ ಬಳ್ಳಾ
ಪುರದ ಹಣಬೇ ಸುಬ್ಬರಾರ್ಯನು
ಹರನು ಸೋಮೇಶ್ವರನ ಕರುಣದಿ ಬರೆದನೀ ಕಥೆಯಾ ॥3 ॥
ಮೆರೆವ ತುಲಸೀ ರಾಮದಾಸರ
ಪರಮ ಶಿಷ್ಯರು ರಾಮದಾಸರು
ಕರುಣದಿಂದಲಿ ಬರೆಯಲೆನಗೇ ದಾರಿ ತೋರಿದರು ॥4 ॥
ಜ್ಯೇಷ್ಠ ಬಳ್ಳಾಪುರದಿ ನೆಲೆಸಿದಾ
ಅಷ್ಟ ಮೂರ್ತಿಯ ಭಜಿಸಿ ಬರೆದಿಹ
ಶ್ರೇಷ್ಠ ಕಥೆಯಾದರದಿ ಕೇಳಲು ಕಷ್ಠ ಪರಿಹರವೂ ॥5 ॥
ಕಥಾ ಪ್ರಾರಂಭ
ಗಣಸ್ತುತಿ – ದರುವು॥ಜಂಪೆ
ಶ್ರೀಗೌರೀ ವರಪುತ್ರ ಸ್ಥಿತ ಭವ್ಯ ಚಾರಿತ್ರ
ಯೋಗಿ ಸಜ್ಜನ ಗಾತ್ರ ದೇವ ಗಣರಾಜ ಗಣರಾಜ ॥1 ॥
ನಿಟಿಲಾ ನೇತ್ರನ ಸುತನೇ ಸ್ಫಟಿಕಾ ಕುಂಡಲ ಧರನೇ
ಪಟುತರ ಶಕ್ತಿಯ ನಿತ್ತು ಸಲಹೋ ಗಣನಾಥ, ಗುಣಭರಿತಾ ॥2 ॥
ಇಂದುಧರ ಶಂಕರನಾ ಕಂದಾ ಗಣನಾಥನೇ
ಚಂದದಿಂ ಭಜಿಸುವೆನು ಕೊಡು ಯನಗೆ ಮತಿಯಾ ಸನ್ಮತಿಯಾ ॥3 ॥
ಜ್ಯೇಷ್ಠ ಬಳ್ಳಾಪುರದಾ ಅಷ್ಠಮೂರುತಿ ಶಿವನಾ
ಇಷ್ಠಾ ಪುತ್ರನೇ ಕಥೆಗೆ ಪಾಲಿಸು ಮಂಗಳವಾ ಸಂಪದವಾ ॥4 ॥
ಭಾಗವತರು: ಜ್ಯೇಷ್ಠಪಿತ ವಂದಿತ, ಪರಮೇಷ್ಠಿ ನಮಿತ ಸೃಷ್ಠಿಯೊಳತಿಶಯ. ಜ್ಯೇಷ್ಠ ಬಳ್ಳಾಪುರ ನಿಲಯ ಅಷ್ಠ ಮೂರುತಿ ದೃಷ್ಠಿ ಮೂರುಳ್ಳವನ ಇಷ್ಠ ಸುಪುತ್ರನಾದ ಹೇ ಗಜಾನನಾ, ಕುಂಜರಾನನಾ, ತಾವು ಈ ವರ ಸಭೆಗೆ ದಯಮಾಡಿಸಿದ್ಧರಿಂದ ಇಲ್ಲಿ ನೆರೆದಿರುವ ಸಭಿಕರಿಗೆಲ್ಲಾ ಬಹಳ ಹರುಷವಾಯಿತು. ಈಗ ನಾವು ಅಭಿನಯಿಸುವ ಯಕ್ಷಗಾನ ಸುವರ್ಣಾದೇವಿ ಪರಿಣಯವೆಂಬ ಕಥಾ ನಾಟಕಕ್ಕೆ ಯಾವ ವಿಘ್ನವೂ ಬಾರದಂತೆ ನಿರ್ವಿಘ್ನವನ್ನು ದಯಪಾಲಿಸಿ ತಾವು ರಜತಪಟ್ಟಣಕ್ಕೆ ತೆರಳಬಹುದೈ ಸ್ವಾಮಿ ವಿನಾಯಕನೇ – ವಿಘ್ನ ಪರಿಹಾರಕನೇ ॥
ಶಾರದಾಸ್ತುತಿ – ದರುವು
ಕಂಬು ಕಂದರೀ ಅಂಬಾ ಶಾರ ದಾಂಬ ಭಜಿಪೆನೂ
ಜಂಭಾರಿ ನುತೇ ಕುಂಭಿಣಿಯೊಳು ನಂಬಿ ನುತಿಪೆನೂ ॥1 ॥
ಅತಿ ಹರುಷದೀ ಸ್ತುತಿಪೆ ನಿನ್ನನೂ ಸತತ ದೇವಿಯೇ
ಕೃತಿಗೆ ವರವಾ ನಿತ್ತು ಪಾಲಿಸೇ ಮಾತೆ ವಾಣಿಯೇ ॥2 ॥
ಧರಣಿ ಜ್ಯೇಷ್ಠ ಬಳ್ಳಾಪುರದಾ ವರ ಸೋಮೇಶನಾ
ಸ್ಮರಿಪ ನಿನ್ನಯಾ ತರಳನನ್ನೂ ಪೊರೆಯೇ ಅನುದಿನಾ ॥3 ॥
ಪೀಠಿಕೆ: ಅಯ್ಯ ಸೂತ್ರಧಾರ ಹೀಗೆ ಬಾ. ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಅಪ್ಪಾ ಸಾರಥೀ! ಈಗ ಬಂದವರು ಧಾರೆಂದು ನಯ ವಿನಯ ಭಯ ಭಕ್ತಿಗಳಿಂದ ಪರಿ ಪರಿ ಅಂಜಲೀಕೃತನಾಗಿ ವಿಚಾರಿಸುತ್ತಿರುವೆ ಆದರೆ ಯಮ್ಮ ವಿದ್ಯಮಾನವನ್ನು ಬಿತ್ತರಿಸುತ್ತೇನೆ. ಚಿತ್ತವಿಟ್ಟು ಕೇಳಪ್ಪಾ ಚಾರ – ಸಿಂಧು ಗಂಭೀರಾ ॥
ಅಪ್ಪಾ ! ಸಾರಥೀ. ಈರೇಳು ಲೋಕಗಳನ್ನು ತನ್ನ ಉದರದಲ್ಲಿಟ್ಟು ಪೋಷಿಸುವ ಶ್ರೀಮನ್ನಾರಾಯಣನ ನಾಭಿಕಮಲದಲ್ಲಿ ಉದ್ಭವಿಸಿ ಸತ್ಯಲೋಕಕ್ಕೆ ಅಧಿಪತಿಯಾದ ಸಚರಾಚರ ಪ್ರಾಣ ಜಾಲಂಗಳನ್ನು ತ್ರಾಣದಿಂದ ಸೃಷ್ಠಿಸುವಂಥ ಚತುರಾನನನಿಗೆ ನಿಜ ಸತಿಯಾಗಿ ಈ ತ್ರಿಜಗದೋಳ್ ಸಕಲ ವಿದ್ಯಾಕರ್ತಳೆಂದೆನಿಸಿ ವರ ಭರತ ಶಾಸ್ತ್ರಕೋವಿದೆಯಾದ ಶಾರದಾದೇವಿಯೆಂದು ತಿಳಿಯಪ್ಪಾ ಚಾರ – ಇದೇ ನಮ್ಮ ವಿಚಾರ ॥
ಅಪ್ಪಾ ಸೂತ್ರಧಾರ ಯಮ್ಮನ್ನರ್ಚಿಸುವ ಹೆಚ್ಚಿನ ಭಕ್ತರಿಗೆ ಇಷ್ಠಾರ್ಥಮಂ ಪಾಲಿಸಿ ಪೊರೆಯಲ್ಕೆ ಸಾರಿ ಬಂದಿರುವೆನಲ್ಲದೇ ಈಗ ನೀವು ಅಭಿನಯಿಸುವ ಸುವರ್ಣಾದೇವಿ ಪರಿಣಯವೆಂಬ ಕಥಾನಾಟಕಕ್ಕೆ ಯಾವ ವಿಘ್ನವೂ ಬಾರದಂತೆ ಸರ್ವ ವಿಘ್ನೋಪಶಾಂತಿಯಾಗಲೆಂದು ಆಶೀರ್ವಾದವಂ ದಯಪಾಲಿಸಲು ಆಗಮಿಸಿದ್ದಾಯಿತು. ನಾನು ಈ ವಸುಧೆಗೆ ಬಂದು ಬಹಳ ಹೊತ್ತಾಯಿತು ಇನ್ನು ಅಜಪುರಿಗೆ ಪೋಗಿಬರುತ್ತೇನೈ ಸೂತ್ರಧಾರ – ಮುಂದೆ ನಡೆಯಲಿ ಕಥಾನುಸಾರ ॥
ಪೂರ್ವ ಕಥಾ ಸೂಚನೆ
ದರುವು॥ತ್ರಿವುಡೆ
ಕೇಳಿರೀಗ ಸುವರ್ಣ ಪರಿಣಯಾ
ಪೇಳುವೆನು ನಾ ಹರುಷದಿಂದಲೀ
ಭಾಳ ಲೋಚನ ಶಿವನ ಕರುಣದಿ ಬಹಳ ವಿನಯದಲೀ ॥1 ॥
ಪೃಥ್ವಿಪಾಲಕ ವಜ್ರಮಕುಟಗೇ
ಪುತ್ರ ಸಂತಾನಗಳು ಇಲ್ಲದೇ
ಮತ್ತೆ ಪೃಥ್ವಿಯನಾಳುತಿರ್ದನು ಅರ್ತಿಯಿಂದಾ ॥2 ॥
ನಂದನರು ತನಗಿಲ್ಲದಿರುತಿರೇ
ಇಂದು ಧರನಾ ತಪವ ಗೈಯಲೂ
ಚಂದ್ರಶೇಖರ ನೊಲಿದು ಈರ್ವರು ಕಂದರನು ಕೊಡಲೂ ॥3 ॥
ಭೂಮಿಪಾಲಕ ತನ್ನ ಸುತರಿಗೇ
ನಾಮಕರಣವ ರಚಿಸಿ ಬೇಗನೇ
ಪ್ರೇಮದಿಂ ಪಾಲಿಸುತಲಿರ್ದನು ಸ್ವಾಮಿ ಕೃಪೆಯಿಂದಾ ॥4 ॥
ದೇವ ದುಂದುಭಿ ಮೊಳಗಿದವು ಕೇಳ್
ಯುವತಿಯರು ನೃತ್ಯವನು ಪಾಡಲು
ಭುವನ ಮಧ್ಯದಿ ಪುಷ್ಪವೃಷ್ಠಿಯು ಠೀವಿಯಿಂ ಪರಿಯೇ ॥5 ॥
ಶ್ರೇಷ್ಠರೆನಿಸುವ ಅಷ್ಠದಿಕ್ಕಿನ
ದುಷ್ಠರಾಯರ ಗರ್ವ ಮುರಿಯುತಾ
ಅಷ್ಠ ಭೋಗದಿ ಇರುತಲಿರ್ದರು ತುಷ್ಠರಾಗೀ ॥6 ॥
ಭೂಪರೀರ್ವರು ಸರಸದಿಂದಲೀ
ಕಪ್ಪಕಾಣಿಕೆ ತೆಗೆದುಕೊಳ್ಳುತಾ
ತಪ್ಪದೇ ತಮ್ಮ ರಾಜ್ಯಭಾರವ ನಾಳುತಿಹರೂ ॥7 ॥
ಸೃಷ್ಠಿಕಧಿಕಾವಾಗಿ ಮೆರೆಯುವಾ
ಜ್ಯೇಷ್ಠ ಬಳ್ಳಾಪುರ ಮಹೇಶನಾ
ನಿಷ್ಠೆಯಿಂದಲಿ ಭಜಿಸಿದವರಿಗೆ ಕಷ್ಠ ಪರಿಹರವೂ ॥8 ॥
ಭಾಗವತರು: ಇಂತ್ತೊಪ್ಪುವ ವಜ್ರಮಕುಟರಾಯನು ಪೂರ್ಣ ವಿವೇಕಿಯೆಂಬ ತನ್ನ ಪ್ರಧಾನಿಯೊಡನೆ ಇಂತೆಂದನೈಯ್ಯ ಭಾಗವತರೇ ॥
(ವಜ್ರಮಕುಟರಾಯ ಬರುವಿಕೆ)
ತೆರೆ–ದರುವು
ಕ್ಷಿತಿಯೊಳಧಿಕ ರತ್ನಾಪುರವನೂ
ಅತಿಶಯದಿ ಪೊರೆವಾ
ಕ್ಷಿತಿಪ ವಜ್ರ ಮಕುಟರಾಯನೂ ॥1 ॥
ತರಣಿ ತೇಜದಂತೆ ಹೊಳೆಯುತಾ
ರಾರಾಜಿಸುವ
ಕರದಿ ಧನುವ ಭರದಿ ಪಿಡಿಯುತಾ ॥2 ॥
ಧರಣಿ ಜ್ಯೇಷ್ಠ ಬಳ್ಳಾಪುರವನೂ
ಪೊರೆವ ಗೌರೀ
ವರನ ಸ್ಮರಿಸಿ ನೃಪನು ಬಂದನೂ ॥3 ॥
ಪೀಠಿಕೆ: ಯಲಾ ದ್ವಾರಪಾಲಕಾ ಹೀಗೆ ಬಾ. ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಯಲಾ. ಮಾನುಷ್ಯನೇ ಈ ಸೃಷ್ಠಿಯೋಳ್ ಮಹಾಶ್ರೇಷ್ಠವೆನಿಸಿದ ಕನಕಾಚಲ ಪರ್ವತಕ್ಕೆ ದಕ್ಷಿಣ ದಿಗ್ಭಾಗದೋಳ್ ಕಡು ಸೌಂದರ್ಯಮಾಗಿ ಅಡಗಿರ್ಪ ಅಮರೇಂದ್ರನ ಪಟ್ಟಣವನ್ನು ಧಿಕ್ಕರಿಸುತ್ತಾ ವಜ್ರ ವೈಢೂರ್ಯಗಳಿಂದ ಅಲಂಕೃತವಾಗಿ ರಾಜಿಸುವ ಪೊಡವಿ ರತ್ನಾಪುರಿಗೆ ಒಡೆಯನೆಂದೆನಿಸಿ ಗರುಡ ಗಂಧರ್ವ ಯಕ್ಷ, ರಾಕ್ಷಸ, ಋಷಿ ಸಿದ್ಧ ಸಾಧ್ಯರಿಂದ ಒಡಗೂಡಿ ಈ ವರ ಸಭಾಸ್ಥಾನದೋಳ್ ದ್ವಿಜರಾದಿಯಾಗಿ ಯನ್ನ ಯೆದುರಿನೋಳ್ ನಿಂದು ವರ ಚತುರ್ವೇದ ಪುರಾಣ ವ್ಯಾಕರಣ ಅಲಂಕಾರಭರಿತ ಶಾಸ್ತ್ರ ಪ್ರವೀಣತೆಯಿಂದ ಸರಸ ಸಂಗೀತ ಸಲ್ಲಾಪದೊಡನೆ ರಂಭಾ ಊರ್ವಶೀ, ತಿಲೋತ್ತಮೆಯರ ಸಂಭ್ರಮದೋಳ್ ವಿಭ್ರಾಜಿಸುತ್ತಾ ಮೂರು ಲೋಕಕ್ಕೆ ಉದ್ಧಂಡನೆನಿಪ ಬಿರುದಂ ಪೊಗಳಿಸಿಕೊಳ್ಳುವ ವಜ್ರಮಕುಟರಾಯರೆಂದು ಈ ಪಡೊವಿಯೋಳ್ ಒಂದೆರಡು ಬಾರಿ ಜಯಭೇರಿ ಹೊಡೆಯಿಸೋ ಚಾರಕಾ ಯನ್ನ ಆಜ್ಞಾಧಾರಕಾ ॥
ಈ ವರ ಸಭಾಸ್ಥಾನಕ್ಕೆ ನಾನು ಬಂದ ಪರಿಯಾಯವೇನೆಂದರೆ ಯನ್ನ ಅಷ್ಠ ಪ್ರಧಾನರೋಳ್ ಮಹಾಶ್ರೇಷ್ಠನೆಂದೆನಿಸುವ ಯನ್ನ ಇಷ್ಠಪ್ರಧಾನಿಯನ್ನು ಕಾಣುವ ಉದ್ಧಿಶ್ಯ ಬಾಹೋಣವಾಯಿತು ಅತಿಜಾಗ್ರತೆ ಆಸ್ಥಾನಕ್ಕೆ ಕರೆಸೋ ದೂತ – ಕೇಳೆನ್ನ ಮಾತ ॥
(ಪೂರ್ಣವಿವೇಕಿಯೆಂಬ ಮಂತ್ರಿ ಬರುವಿಕೆ)
ಪೀಠಿಕೆ: ಯಲಾ ! ಚಾರ ಹೀಗೆ ಬಾ ! ಮತ್ತೂ ಒಂದು ಸಾರಿ ಹೀಗೆ ನಿಲ್ಲು, ಭಳಿರೇ ಸಾರಥೀ. ಈಗ ಬಂದವರು ದಾರೆಂದು ಅಂಜಲೀ ಬದ್ಧನಾಗಿ ವಿಚಾರಿಸುತ್ತಿರುವೆ. ಆದರೆ ಯಮ್ಮ ವಿದ್ಯಮಾನವನ್ನು ಹೇಳುತ್ತೇನೆ. ಸ್ವಸ್ಥಿರ ಚಿತ್ತದಿಂದ ಕೇಳೋ ಸಾರಥೀ – ಸಕಲ ಸಂಧಾನಮತಿ ॥
ಈ ಕ್ಷೋಣಿಯೋಳ್ ವಾಣಿಪತಿ ಹಿಮ್ಮಿಗಿಲಾಗಿ ಮೆರೆಯುವಾ ಮಣಿಮಾಣಿಕ್ಯ ವಜ್ರವೈಢೂರ್ಯ ಗೋಮೇಧಿಕ ಪುಷ್ಯರಾಗ ಮೊದಲಾದ ನವರತ್ನಗಳಿಂದೊಪ್ಪುವಾ ಕನಕ ನಿರ್ಮಿತವಾದ ಈ ರತ್ನಾಪುರಿಯೆಂಬ ಪಟ್ಟಣಕ್ಕೆ ಕಾರಣಕರ್ತನಾಗಿ ಪರಿಪಾಲಿಸುವಂಥ ಧುರಧೀರ ರಣಶೂರ ಹಮ್ಮೀರ ಗುಣಪೂರ ಬಹುಪರಾಕ್ರಮಶಾಲಿಯಾದ ವಜ್ರಮಕುಟರಾಯರ ಸಮ್ಮುಖದೋಳ್ ರಾಜಿಸುವಂತಾ ಅಷ್ಠ ಪ್ರಧಾನರೋಳ್ ಶ್ರೇಷ್ಠನಾದ ಪೂರ್ಣ ವಿವೇಕಿಯೆಂಬ ಪ್ರಧಾನೋತ್ತಮನೆಂದು ತಿಳಿಯೋ ಭಟನೇ- ಭಟರೋಳ್ ಪ್ರಖ್ಯಾತನೇ ॥
ಕನಕಮಯದಿಂದ ವಿರಾಜಿಸುವ ಈ ವರ ಸಭಾಸ್ಥಾನಕ್ಕೆ ನಾನು ಆಗಮಿಸಿದ ಕಾರಣವೇನೆಂದರೇ ನಮ್ಮ ರಾಜರು ಕರೆಸಿದ ಕಾರಣ ಬಾಹೋಣವಾಯ್ತು. ಈಗ ಧಾವಲ್ಲಿರುವರೋ ತೋರಿಸೋ ಚಾರಕಾ- ದ್ವಾರಪಾಲಕಾ ॥
ಪ್ರಧಾನಿ: ನಮೋನ್ನಮೋ ಹೇ ರಾಜ – ಆಶ್ರಿತಕಲ್ಪಭೋಜ ॥
ವಜ್ರಮಕುಟ: ಧೀರ್ಘಾಯುಷ್ಯಮಸ್ತು ಬಾರೈ ಮಂತ್ರೀ – ಕಾರ್ಯದಲ್ಲಿ ಸ್ವತಂತ್ರೀ ॥
ಪ್ರಧಾನಿ: ಕರಿಗಳ ಹಿಂಡಿಗೆ ಕೇಸರಿಯಂತೊಪ್ಪುವಾ, ಹೇ ರಾಜೇಂದ್ರಾ ! ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಅಭಿಪ್ರಾಯವೇನು ! ಸವಿಸ್ತಾರವಾಗಿ ಪೇಳಿದ್ದೇ ಆದರೇ ಆಜ್ಞಾಬದ್ಧನಾಗಿ ನಡೆದುಕೊಳ್ಳುತ್ತೇನೈ ಭೂಪ-ಕೀರ್ತಿಕಲಾಪ ॥
ದರುವು॥ಜಂಪೆ
ಮಂತ್ರಿಶೇಖರ ಕೇಳೈ ತ್ವರಿತಾದಿಂದಲಿ ಪೇಳ್ವೆ
ಚಿಂತಿಸುವ ಕಾರ್ಯದ ಪರಿಯಾ ನೀನರಿಯಾ ನೀನರಿಯಾ ॥1 ॥
ಲೋಕಾಧಿಪತಿಗಳಿಗೆ ಲೇಖನ ಮುಖದೊಳಗೇ
ಲಿಖಿಸುತಲಿ ಪತ್ರವನು ಕಾಣಿಕೆಯ ತರಿಸೋ ನೀ ತರಿಸೋ ॥2 ॥
ವಜ್ರಮಕುಟ: ಅಯ್ಯ ಮಂತ್ರಿಶೇಖರಾ ! ಈ ಧರಣಿಯೋಳ್ ಮುರಹರನ ಕರುಣ ಕಟಾಕ್ಷದಿಂದ ಒಪ್ಪುವಾ ವೀರಾಧಿವೀರರೋಳ್ ಮಹಾಶೂರರೆಂದೆನಿಸಿ ಪುರ ಪರಿವಾರಗಳನ್ನು ಪರಿಪಾಲಿಸುವಂಥ ಸಿರಿ ಸಂಪತ್ಕಳಾದಿ ಸುಖ ಸೌಖ್ಯದೊಡನೇ ನಿರುತ ದೇಶಾಧಿ ನಗರಗಳನ್ನು ಪರಿಪಾಲಿಸುವ ಧರಣೀಧರರಿಗೆಲ್ಲಾ ಕರಲೇಖನ ಮುಖಾಂತ್ರದಿ ವೋಲೆಯನ್ನು ಕಲ್ಪಿಸಿ ಪರರಾಯರುಗಳಿಂದ ಕಪ್ಪಕಾಣಿಕೆಗಳನ್ನು ತ್ವರಿತದಿಂದಲಿ ತರಿಸೈ ಪ್ರಧಾನಿ-ನೀತಿಜ್ಞಾನಿ ॥
ದರುವು
ಪೊಡವೀಶ ಕೇಳೈಯ್ಯ ಸಡಗರದಿಂದಲೀ
ಒಡನೇ ನುಡಿಯುವೆ ನಾನು ಕೇಳೈಯ್ಯ ಭೂಪಾ ॥1 ॥
ದೇಶಾಧೀಶರು ಯೆಲ್ಲಾ ಕೋಶಾದ ಧನವೆಲ್ಲಾ
ಲೇಸಿನಿಂದಲಿ ತಂದು ಒಪ್ಪಿಸುತಿಹರೂ ॥2 ॥
ಪ್ರಧಾನಿ: ಹೇ, ರತ್ನಾಪುರವರಾಧೀಶ್ವರಾ ! ಈ ವಸುಧೆಯೋಳ್ ಪಶುಪತಿಯ ಕರುಣದಿಂದ ಅಸಮ ಸಾಹಸವುಳ್ಳ ದೇಶಾಧಿಪತಿಗಳೆಲ್ಲರೂ ತಮ್ಮ ಕುಶಲತರಮಾದ ಆಜ್ಞೆ ಪ್ರಕಾರವಾಗಿ ಭಯಭ್ರಾಂತಿಯನ್ನು ಹೊಂದಿರುವರಲ್ಲದೇ ಪೊದೆಗಳಲ್ಲಿ ಅಡಗಿ ಮಥನಿಸುವ ದುರ್ಗಾಧಿಪತಿಗಳೆಲ್ಲರೂ ಶರಣು ಶರಣೆಂದು ಸೇವಿಸುತ್ತಾ ವಸ್ತು ವಾಹನಾದಿ ಕಪ್ಪಕಾಣಿಕೆಯಂ ಛತ್ರಿಚಾಮರ ಮುಂತಾದುವುಗಳ ಸಹಿತವಾಗಿ ಸ್ವಸ್ಥಿರದಿ ತಂದು ಆಸ್ಥಾನಕ್ಕೆ ವಪ್ಪಿಸಿದ್ದಾರೈ ಭೂಪ-ಕೀರ್ತಿ ಕಲಾಪ ॥
ದರುವು॥ಜಂಪೆ
ಮಂಡಲದ ದೊರೆಗಳೊಳು ಕೊಂಡು ತಾರದೆ ಧನವಾ
ಭಂಡನಾಗಿರುವಾ ವು ದ್ಧಂಡ ನಾರೈಯ್ಯ ಪೇಳೈಯ್ಯ ॥3 ॥
ವಜ್ರಮಕುಟ: ಅಯ್ಯ ಪ್ರಧಾನಿ ! ಈ ಸಪ್ತದ್ವೀಪಂಗಳೊಳು ಮಹಾ ಶ್ರೇಷ್ಠದಿಂದೊಪ್ಪುವಾ ದೇಶಂಗಳು ಯಾವುವೆಂದರೇ ಮಾಳ ಮಲೆಯಾಳ ಚೋಳ ಬಂಗಾಳ ದ್ರಾವಿಡ ದೇಶಂಗಳುಂಟು. ಅಂತ್ತೊಪ್ಪ ದೇಶಗಳ ಅರಸರಲ್ಲಿ ಕಪ್ಪಕಾಣಿಕೆಯನ್ನು ತಂದೊಪ್ಪಿಸಿದವರು ಧಾರು ? ಕೊಡದೆ ದಿಕ್ಕರಿಸಿದವರಾರು? ಪೇಳೈಯ್ಯ ಪ್ರಧಾನಿ-ವಾರುಧಿ ಸಮಾನಿ ॥
ದರುವು
ಚಕ್ರಾಧಿಪತಿ ಕೇಳೈ ವಿಕ್ರಮನೆಂಬುವ ಪ
ರಾಕ್ರಮಿ ಕೊಡದಿರುವ ಲಾಲಿಸು ರಾಯ ॥3 ॥
ಪ್ರಧಾನಿ: ನೃಪಕುಲೋತ್ತಮರಿಂದ ವಂದಿಸಲ್ಪಡುವ ಪಾದ ಪದ್ಮವುಳ್ಳ ಹೇ ರಾಜೇಂದ್ರಾ ! ಅಪರಿಮಿತವಾದ ದೇಶಂಗಳನ್ನು ಪಾಲಿಸುವ ಅರಸರ ಪೈಕಿ ಕಪ್ಪ ಕಾಣಿಕೆಯನ್ನು ವೊಪ್ಪಿಸಿರುವವರು ಧಾರೆಂದರೇ ! ಅಂಗವಂಗ ಕಳಿಂಗ ಕಾಶ್ಮೀರ ಟೆಂಕಣ ಕೊಂಕಣ ಕೊಡಗು ದೇಶಗಳನ್ನಾಳುವ ದೇಶಾಧಿಪತಿಗಳೆಲ್ಲಾ ಬಂಗಾರದ ಪಲ್ಲಕ್ಕಿಯೂ ಶೃಂಗಾರವಾದ ಭೂಷಣಂಗಳೂ ಮುಂತಾಗಿ ಕಳುಹಿಸಿದ್ದಾರಲ್ಲದೇ ನೀಲಾವತಿಯನ್ನು ಪಾಲಿಸುವ ವಿಕ್ರಮನು ಮಾತ್ರ ಬಹುಕಾಲದಿಂದಲೂ ಧನ ಕನಕ ವಸ್ತು ವಾಹನಾದಿಗಳನ್ನು ಕಳುಹಿಸದೆ ಧಿಕ್ಕರಿಸುತ್ತಾನೈ ಭೂಪಾಲ-ಕ್ಷೋಣಿಜನಪಾಲ ॥
ದರುವು॥ಜಂಪೆ
ಸೃಷ್ಠಿಗಧಿಕವಾದ ಜ್ಯೇಷ್ಠ ಬಳ್ಳಾಪುರದ
ಅಷ್ಠಾಮೂರ್ತಿಯ ಭಜಿಸಿ ಭ್ರಷ್ಠಾನ ಕರೆಸೋ ನೀ ಕರೆಸೋ ॥4 ॥
ವಜ್ರಮಕುಟ: ಅಯ್ಯ ಮಂತ್ರಿ ! ಈ ಧಾತ್ರಿಯೋಳ್ ಉಮಾವಲ್ಲಭನ ಕರುಣ ಕಟಾಕ್ಷದಿಂದ ನಮಗೆ ವೈರಿಗಳಾದವರು ಯಾರನ್ನೂ ಕಾಣಲಿಲ್ಲಾ. ಈಗಿನ ವೇಳೆಯಲ್ಲಿ ಈ ಮಹಿಯೋಳ್ ಪುಂಡ ಮನುಷ್ಯನಾದ ವಿಕ್ರಮರಾಯನು ಮಾತ್ರ ಪ್ರಬಲಿಸಿದನಾದ ಕಾರಣ ಆತನ ಪಟ್ಟಣಕ್ಕೆ ದಂಡೆತ್ತಿ ಪೋಗುವ ಉದ್ಧಿಶ್ಯವಾಗಿ ಸಕಲ ಸನ್ನಾಹ ತಮ್ಮಟೆ ಭೇರಿ ವಾದ್ಯದೊಡನೆ ಸೇನಾಧಿಪತಿಗಳನ್ನು ಕೂಡಿಸಿ ಯುದ್ಧಕ್ಕೆ ಸನ್ನದ್ಧನಾಗುವುದಲ್ಲದೇ ಈ ಕಾಲಕ್ಕೆ ವೈರಿಗಳನ್ನು ಮಂಡಲೇಶ್ವರನು ಕಲ್ಪಿಸಿದನಲ್ಲೋ ಸಚಿವರಾ-ಸಿಂಧು ಗಂಭೀರಾ ॥
ದರುವು
ಧಾತ್ರಿಯ ಪರಶಿವ ತ್ರಿ ನೇತ್ರನಾ ದಯದಿಂದಾ
ಶತೃವನು ರಣದಲ್ಲೀ ಜೈಸಿ ನಾ ಬರುವೇ ॥4 ॥
ಪ್ರಧಾನಿ: ಹೇ ರಾಜಾಧಿರಾಜ ಮಹಾರಾಜನೇ ಕೇಳು ! ಈ ಮಂಡಲದ ನಗಜಾರಮಣನಾದ ಶಂಕರನು ನಮಗೆ ಈ ಕಾಲಕ್ಕೆ ಪ್ರಚಂಡ ಹಗೆಯನ್ನು ತೋರಿಸಿದನಾದ ಕಾರಣ ಪ್ರಚಂಡನಾದ ನಾನು ತಮ್ಮ ಆಜ್ಞಾನುಸಾರವಾಗಿ ಗಂಡುಗಲಿ ವಿಕ್ರಮನ ಪುಂಡನ್ನಡಗಿಸುವ ಉದ್ಯುಕ್ತವಾಗಿ ದಂಡೆತ್ತಿ ಪೋಗಬೇಕಾದ ಕಾರಣದಿಂದ ಸನ್ನದ್ಧನಾಗಿ ಪೋಗಿ ಮಂಡಲೇಶ್ವರನ ವರವನ್ನು ಬೇಡಲು, ಖಂಡ ಪರಶುವು ವಾಮ ಭಾಗದೊಳು ವರವನ್ನಿತ್ತ ಕಾರಣ ಅದೇ ಸಂಶಯಚಿತ್ತನಾಗಿ ಹಗೆಯನ್ನು ಕಂಡು ಹಿಡಿಯಲು ಚಂಡ ಪರಾಕ್ರಮರಾದ ಭೂತ ಪಿಶಾಚಿಗಳು ಕಾವಲಿರುವರಾದ ಕಾರಣ ಮನ ಭ್ರಮಣೆಯಿಂದ ಇರುತ್ತೇನೆ. ತಾವು ಈಗಿನ ವೇಳೆಯಲ್ಲಿ ಶಾಂತಚಿತ್ತರಾಗಿ ಇರಬಹುದೈ ರಾಜೇಂದ್ರಾ-ಸದ್ಗುಣಸಾಂದ್ರ ॥
ವಜ್ರಮಕುಟ: ಹಾಗಾದರೆ ಅರಮನೆಗೆ ಹೋಗೋಣ ಬಾರೈ ಮಂತ್ರಿಶೇಖರಾ-ರಾಜಕಾರ್ಯ ದುರಂಧರಾ॥
ಭಾಗವತರ – ಕಂದ॥ಕೇದಾರಗೌಳ
ಇಂತು ರಾಜನು ಸಚಿವ ಶ್ರೇಷ್ಠನು
ಚಿಂತೆಗೈಯುತಾ ಶಾಂತಿ ಯಿಂದಿರೇ
ಕಂತುರೂಪ ನೃಪಾಲ ಪುತ್ರರು ಹರುಷದಿಂ ಬಂದು ॥
ಕಂತು ವೈರಿಯ ಸ್ಮರಿಸಿ ಮನದಲೀ
ಭ್ರಾಂತಿಯನು ತಾ ಪಡುತಲಿರುವ
ಮಂತ್ರಿಯೂ ವರಪಿತನ ಚರಣಕೆ ನಮಿಸಿದರು ಬೇಗಾ ॥
(ಸೋಮಶೇಖರ ಚಿತ್ರಶೇಖರ ಬರುವಿಕೆ)
ತೆರೆ–ದರುವು
ವಜ್ರ ಮಕುಟ ಸುತರು ಬಂದರೂ
ನಿರ್ಜರರ ಪೋಲ್ವ
ಭರ್ಜರಿಯಿಂ ಪ್ರಜ್ವಲಿಸುವರೂ ॥1 ॥
ವಜ್ರ ಆಯುಧ ಪಿಡಿದು ಕರದಲೀ
ಮೂಜಗದ ಜನರೂ
ಜರ್ಜರಿಸುವ ಘರ್ಜಿನಿಂದಲೀ ॥2 ॥
ಶಿರದಿ ಮಣಿ ಕಿರೀಟ ಕುಂಡ್ಲವೂ
ನವರತ್ನ ಮಯದೀ
ಮೆರೆವ ಹಾರ ಕೊರಳ ಪದಕವೂ ॥3 ॥
ಕೋಟಿ ಸೂರ್ಯ ಕಳೆಯು ಹೊಂದುತಾ
ಪ್ರಕಾಶಿಸುತ್ತಾ
ಭಟರು ವಂದಿ ಯವರು ಪೊಗಳುತಾ ॥4 ॥
ವರುಷ ಹದಿನಾರು ಪ್ರಾಯದೀ
ತಿರುವುತ್ತಾ ಮೀಸೇ
ಭರದಿ ಬಂದರು ಬಹಳ ಶೌರ್ಯದೀ ॥5 ॥
ಜ್ಯೇಷ್ಠ ಬಳ್ಳಾಪುರ ನಿವಾಸನೇ
ಸಲಹಯ್ಯ ದೇವಾ
ಅಷ್ಠಮೂರ್ತಿ ಮೃಡ ಮಹೇಶನೇ ॥6 ॥
ಸೋಮಶೇಖರ: ಅಹೋ ! ಮಾನುಷ್ಯನೇ ಹೀಗೆ ಬಾ. ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಭಳಿರೇ! ಕವಾಟ ಶಿಖಾಮಣಿ ! ಈಗ ಯನ್ನಟ ದಾಯದೋಳ್ ಬಂದು ನಟಣೆಯಿಂದೊಪ್ಪಲ್ಪಟ್ಟ ವರಸಭಾ ಮಂಟಪದಲ್ಲಿ ನಿಂದು ಹೇ ಭಟನೇ ! ಭಟ ವಿಧವರಿತು ತಟತಟನೇ ಮಾತನಾಡಿಸುವ ಭಟ ನೀ ಧಾರೋ ಯನ್ನೊಳು ಸಾರೋ ॥
ಯಲಾ ! ಚಾರ ಶಿಖಾಮಣಿ. ಈ ಪೊಡವಿಯೋಳ್ ಕಡುಮೂರ್ಖರಾಯರ ತುಡುಕಿನಿಂದಿಡಿಯಿಡಿದು, ಹೊಡೆ ಹೊಡೆದು ಭೂಪಾಲರೆಂದೆನಿಸಿ ಬೆಡಗಿನಾಸ್ಥಾನ ಮಂಟಪಕ್ಕೆ ಹಿಮಾಂಶು ವಸ್ತುವೇ ರೂಪಾಗಿ ಪಟು ದಂಭೋಳಿ ವಿಶ್ವಂಭರ ನಾಥನಂ ಭಜಿಸಿ ಗಂಡುಗಲಿಗಳ ಮಿಂಡರೆಂಬ ಪ್ರಚಂಡ ಬಿರುದಂ ಪಡೆದು ಇರುವ ವಜ್ರಮಕುಟರ ಪುತ್ರ ಸುಂದರಗಾತ್ರರೆಂಬ ನಭ್ರಡ್ವರದೋಳ್ ವಿಭ್ರಾಜಿಸುವ ರಿಪುತ್ಕಾಂಡ ಮಂಡಲದೋಳ್ ಸ್ತಂಭೆರುವೆಂಬ ಕದಾಂಬಕ್ಕೆ ಪ್ರಜ್ವಲಿಪ ಶತೃಮದ ಕುಂಭಿಣಿ ಧರಾಧರರಿಗೆಲ್ಲಾ ದಿಕ್ಕು ದೇಶಗಳನ್ನು ಮುಕ್ಕರಿಪಂತೆ ಕೈವಶಮಾಡಿಕೊಂಡು ಕಪ್ಪ ಕಾಣಿಕೆಯನ್ನು ಕೈಗೊಳ್ಳುವ ತಪ್ಪದೇ ಸರ್ಪಭೂಷಣನಿಗೆ ವಂದಿಸುವ ಸೋಮಶೇಖರ ಭೂಪಾಲನೆಂದು ತಿಳಿಯೋ ಚಾರ-ಶರಧಿ ಗಂಭೀರಾ ॥
ಭಲಾ ! ದ್ವಾರಪಾಲಕ ಈ ಸಭಾಸ್ಥಾನಕ್ಕೆ ನಾನು ಬಂದ ಕಾರಣವೇನೆಂದರೆ ಯನ್ನ ತಮ್ಮನಾದ ಚಿತ್ರಶೇಖರನನ್ನು ಕಾಣುವ ಉದ್ದಿಶ್ಯ ಬಾಹೋಣವಾಯ್ತು. ಧಾವಲ್ಲಿದ್ದಾನೋ ಅತಿಜಾಗ್ರತೆ ಕರೆಸೋ ದೂತ-ಕೇಳೆನ್ನ ಮಾತ ॥
ಚಿತ್ರಶೇಖರ: ಅಹೋ ಮಾನುಷ್ಯನೇ ಹೀಗೆ ಬಾ. ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಭಳಿರೇ ಕವಾಟ ಶಿಖಾಮಣಿ ಈ ಸೃಷ್ಠಿಯೋಳ್ ಅಷ್ಠೈಶ್ವರ್ಯದಿಂದೊಪ್ಪಲ್ಪಟ್ಟ ರತ್ನಾಪುರಿಯ ಪಟ್ಟಣಕ್ಕೆ ಅಷ್ಠಮೂರುತಿ ಶಂಕರನ ಕಟಾಕ್ಷವುಳ್ಳ, ಈ ಸೃಷ್ಠಿಗೆ ಪ್ರತಿಷ್ಠನಾದ ಭುಜಬಲ ಶೌರಿ ವಜ್ರಮಕುಟ ರಾಜ ಸುಪತ್ರನೆಂದೆನಿಸಿ ಇಗೋ ಯಮ್ಮ ಅಣ್ಣನಾದ ದುರಧೀರ ರಣಶೂರ ಗುಣಪೂರ ಸೋಮಶೇಖರನೆಂಬ ಅಭಿದಾನವುಳ್ಳ ಭೂಪಾಲಕನ ಅನುಜ ಚಿತ್ರಶೇಖರನೆಂಬ ನಾಮವನ್ನು ಗ್ರಹಿಸಿ ಶಿರಸಾವಹಿಸಿ ಬಾಹೋಣವಾಯ್ತು. ಯನ್ನ ಅಗ್ರಜನು ಧಾವಲ್ಲಿರುವನೋ ಶೀಘ್ರದಿಂದ ತೋರಿಸೋ ಚಾರ-ಯನ್ನ ಆಜ್ಞಾಧಾರ ॥
ನಮೋನ್ನಮೋ ಅಣ್ಣಯ್ಯ-ನಿಮ್ಮಡಿಗಳಿಗೆ ದಮ್ಮಯ್ಯ ॥
Leave A Comment