ಮಕ್ಕಳಿಗೆ ಅಜೀರ್ಣವಾದಾಗ ಕುಡಿಸುವ ಓಮ್ವಾಟರ್ ಗೊತ್ತಲ್ಲ, ಅದರಲ್ಲಿ ಮುಖ್ಯ ವಸ್ತು ಸಬ್ಬಸಿಗೆ. ಸಬ್ಬಸಿಗೆಯನ್ನು ಕೊತ್ತಂಬರಿ, ಹರಿವೆಯಂತೆ ಹಿತ್ತಲಲ್ಲಿ ಬೆಳೆಯಲಾಗದು. ಆದರೆ ಟೆರೇಸ್ನಲ್ಲಿ ಬೆಳೆಯಬಹುದು. ಸುವಾಸನೆಯೇ ಸಬ್ಬಸಿಗೆಯ ಶತ್ರುವೂ ಹೌದು. ಸೊಪ್ಪು ತರಕಾರಿಯಾಗಿ ಜನಪ್ರಿಯವಾಗದಿರಲು ಕಾರಣವೂ ಹೌದು. ಇದರಲ್ಲಿ ಶೇ.೮೮ ತೇವಾಂಶ ಶೇ.೩ರಷ್ಟು ನಾರಿನಂಶಗಳಿವೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಥಿಯಾಮಿನ್, ರಿಬೋಫ್ಲಾವಿನ್, ನಿಯಾಸಿನ್ ಮುಂತಾದ ಖನಿಜಗಳಿವೆ. ಕಾರ್ಬೋಹೈಡ್ರೇಟ್, ಸಾರಜನಕದ ಪ್ರಮಾಣವು ಹೆಚ್ಚಾಗಿದೆ.
ಹೊಲಗದ್ದೆಗಳಲ್ಲಿ ಅಂತರಬೆಳೆ, ಉಪಬೆಳೆಗಾಗಿ ಬೆಳೆಯಬಹುದು. ವಾರದ ಸಂತೆಯೊಂದಿಗೆ ಸಂಬಂಧವಿರಬೇಕು. ಮಾರಾಟದ ವ್ಯವಸ್ಥೆಯಿರಬೇಕು. ಬೀಜದ ಮಾರುಕಟ್ಟೆಯ ವಿವರ, ಸುಗಂಧ ತೈಲದ ವಿವರ ಕೃಷಿ ಇಲಾಖೆಯಲ್ಲಿ ಲಭ್ಯವಿಲ್ಲ. |
ಶಿರಸಂಗಿ ದಾಟಿ ಸವದತ್ತಿಯ ರಸ್ತೆಯಲ್ಲಿ ನಮ್ಮ ಟಾಟಾಸುಮೋ ಸಾಗುತ್ತಿತ್ತು. ರಸ್ತೆಯ ಅಕ್ಕಪಕ್ಕ ಕಣ್ಣು ಹಾಯಿಸಿದಷ್ಟೂ ಹೊಲಗಳು ಅಥವಾ ಹೊಲಗಳಲ್ಲೇ ಸೀಳಿ ಮಾಡಿದ ರಸ್ತೆ. ಸೂರ್ಯಕಾಂತಿ, ಸಜ್ಜೆ, ಈರುಳ್ಳಿ, ಜೋಳ, ಕಬ್ಬು ಹೀಗೆ ಏನೆಲ್ಲಾ ಬೆ ವೈವಿಧ್ಯ. ಬಯಲುಸೀಮೆಯ ಹೊಲಗಳನ್ನು ನೋಡುವುದೇ ಚಂದ. ರೈತರಿಗೆ ಸದಾ ಒಂದಿಲ್ಲೊಂದು ಕೆಲಸ. ಎಮ್ಮೆಗಳನ್ನು ಮೇಯಿಸಲು ನಿಂತ ಹೆಣ್ಣುಮಕ್ಕಳು, ಹೊಲಗಳ ಬದು ಕಟ್ಟುತ್ತಲೋ, ನೀರು ಬಿಡತ್ತಲೋ ಇರುವ ಯಜಮಾನರು… ಇದ್ದಕ್ಕಿದ್ದಂತೆ ನಮ್ಮ ಜೊತೆಗಿದ್ದ ದಂತಿಯವರು ಗಾಡಿ ನಿಲ್ಲಿಸಲು ಹೇಳಿದರು. ನಾವೆಲ್ಲಾ ಏನಾಯಿತೆಂದು ಸುತ್ತಮುತ್ತಲೂ ಇಣುಕಿದೆವು.
ಇಬ್ಬರು ಹೆಣ್ಣುಮಕ್ಕಳು ಹೊಲದಲ್ಲಿ ಹಸಿರು ಗಿಡಗಳನ್ನು ಕೀಳುತ್ತಿದ್ದರು. ದಂತಿಯವರು ಅವರನ್ನು ಕರೆದು ವ್ಯಾಪಾರ ಮಾಡತೊಡಗಿದರು. ಸುವಾಸನೆ ಘಮ್ಮನೆ ಮೂಗನ್ನು ತುಂಬಿತು. ನಾವೆಲ್ಲಾ ಇಳಿದು ಹತ್ತಿರ ಹೋದೆವು. ಹೊಲದಲ್ಲಿ ಅಲ್ಲಲ್ಲಿ ಸಬ್ಬಸಿಗೆಯ ಗಿಡಗಳಿದ್ದವು. ಈರುಳ್ಳಿಯೊಂದಿಗಿನ ಉಪಬೆಳೆ. ವಾರದ ಸಂತೆಗಾಗಿ ಕೊಯ್ಲು ಸಾಗಿತ್ತು. ನಮ್ಮದು ಹೊಲದೆದುರೇ ಫ್ರೆಶ್ ವ್ಯಾಪಾರ. ಒಂದು ಕಟ್ಟಿಗೆ ಒಂದೂವರೆ ರೂಪಾಯಿಗಳು. ಮೊದಲು ಐದು ಕಟ್ಟು ವ್ಯಾಪಾರವಾಯಿತು. ಜೊತೆಯಲ್ಲಿದ್ದ ಗಣೇಶ್, ಡ್ರೈವರ್ ಸಾಹೇಬ್ರು, ಎಲ್ಲರಿಗೂ ಬೇಕಾಯಿತು. ಶಾಂತಮ್ಮ ದಂತಿಯವರು ಮಕ್ಕಳಿಗೆ ಎರಡು ಕಟ್ಟು ಹೆಚ್ಚಿಗೆ ಕೊಳ್ಳಿರಿ ಎಂದರು. ಅಣ್ಣನಿಗೆ, ಬೀಗರಿಗೆ, ನೆಂಟರಿಗೆ, ಸಾಂಬಾರಿಗೆ, ಬೋಂಡಕ್ಕೆ, ಪಲ್ಯಕ್ಕೆ, ಪರೋಟಕ್ಕೆ… ಹೀಗೆ ಪಟ್ಟಿ ಬೆಳೆಯುತ್ತಾ ಬೆಳೆಯುತ್ತಾ ಮೂವತ್ತು ಕಟ್ಟುಗಳ ಹೊರೆ ಸಿದ್ಧವಾಯಿತು. ಹೊಲದ ಪರಿಮಳವೆಲ್ಲಾ ನಮ್ಮೊಂದಿಗೆ ಹರಿಯಿತು.
ಸಬ್ಬಸಿಗೆ ಗಿಡ ನೋಡಲು ಹೊಲಕ್ಕೆ ಹೆಜ್ಜೆಯಿಟ್ಟೆ. ಮಾರು ದೂರ ಸಾಗುವಲ್ಲಿ ಚಪ್ಪಲಿ ಕಪ್ಪನೆಯ ಬೂಟಾಗಿತ್ತು. ಹೆಜ್ಜೆ ಎತ್ತಿಡಲಾಗದಷ್ಟು ಭಾರ. ಹೊಲಕ್ಕೆ ಆಗಷ್ಟೇ ನೀರು ಹಾಯಿಸಿದ್ದರಂತೆ. ಕಪ್ಪುಮಣ್ಣು ಅಂಟುಮುದ್ದೆಯಾಗಿತ್ತು. ರಸ್ತೆಯ ಮೇಲಿದ್ದವರೆಲ್ಲಾ ನಗತೊಡಗಿದರು. ಹಟದಿಂದ ಗಿಡದ ಬುಡಕ್ಕೆ ಹೋದೆ. ಎಳೆಯ ಗಿಡಗಳಲ್ಲಿ ಸುವಾಸನೆ ಕಡಿಮೆ. ಬೆಳೆದ ಗಿಡದ ಬೇರಲ್ಲೂ ಸುಗಂಧವಿದೆ. ಕಪ್ಪು ಮಣ್ಣಿಗೆ ನೀರು ಕೊಟ್ಟಾಗ ಮೇಲೆ ಕಾಣಿಸದು. ಅಡಿಯಲ್ಲಿ ತೇವಾಂಶ ಹಾಗೇ ಉಳಿದಿರುತ್ತದೆ.
ಶಿರಸಂಗಿಯ ಅಣ್ಣಪ್ಪ ಹಿರೇಮಠರವರು ಒಂದು ಎಕರೆ ಹೊಲದಲ್ಲಿ ಬಿತ್ತಿದ್ದಾರೆ. ಈರುಳ್ಳಿ ಗಿಡವೇಳುವ ಮೊದಲೇ ಸಬ್ಬಸಿಗೆ ಕೊಯ್ಲಿಗೆ ಬರುತ್ತದೆಯಂತೆ. ಅದಕ್ಕಾಗಿ ದೂರ ದೂರಕ್ಕೆ ೨೦೦ ಗ್ರಾಂ ಸಬ್ಬಸಿಗೆ ಬೀಜ ಬಿತ್ತಿದ್ದಾರೆ. ಈರುಳ್ಳಿಗೆ ಹಾಕಿದ ಎಂಟು ಟನ್ ಕೊಟ್ಟಿಗೆ ಗೊಬ್ಬರವೇ ಇದಕ್ಕೂ ಅನ್ವಯ. ಕಪ್ಪು ಮಣ್ಣಾಗಿದ್ದಕ್ಕೆ ವಾರಕ್ಕೊಮ್ಮೆ ನೀರು ಸಾಕು. ಸೆಪ್ಟೆಂಬರ್ನಲ್ಲಿ ಬಿತ್ತಿದ್ದು, ನವೆಂಬರ್ ಅಂತ್ಯಕ್ಕೆ ಕೊಯಲು. ಇವರು ಸಬ್ಬಸಿಗೆಯನ್ನು ಕಾಳಾಗಲು ಬಿಡುವುದಿಲ್ಲ. ಸುಗಂಧ ತೈಲ ಮಾಡಲೂ ಅಲ್ಲ. ಕೇವಲ ಹಸಿರು ಸೊಪ್ಪು ತರಕಾರಿಯಾಗಿ ಉಪಯೋಗ.
ಗುಲ್ಬರ್ಗಾದ ಸೀರಟಿಗೆಯ ಲಾಲ್ಸಿಂಗ್ ಎರಡು ಗುಂಟೆ ಜಾಗದಲ್ಲಿ ಸಬ್ಬಸಿಗೆ ಬೆಳೆದಿದ್ದಾರೆ. ಸೋವಾ ಎನ್ನುವ ಹೆಸರಿನ ತಳಿ. ಕೃಷಿ ಇಲಾಖೆಯಿಂದ ಖರೀದಿ. ಜುಲೈ ಮೊದಲ ವಾರದಲ್ಲಿ ಬಿತ್ತನೆ. ಒಂದು ಟನ್ ಕೊಟ್ಟಿಗೆ ಗೊಬ್ಬರ ನೀಡುತ್ತಾರೆ. ದಿನಾಲೂ ನೀರು ಬಿಡುತ್ತಾರೆ. ಇವರ ಹೊಲ ಕಪ್ಪುಮಿಶ್ರಿತ ಕೆಂಪು ಮಣ್ಣು. ೨೦ ದಿನಗಳಿಗೆ ಮೊದಲ ಕೊಯ್ಲು. ಪ್ರತಿ ಕೊಯ್ಲಿನ ನಂತರ ರಾಸಾಯನಿಕ ಗೊಬ್ಬರ ನೀಡುತ್ತಾರೆ (೧೬-೧೬-೧೬) ಮತ್ತು ಯಥೇಚ್ಛ ನೀರು. ಇದರಿಂದ ಗಿಡಗಳು ಬೇಗ ಬೆಳೆಯುತ್ತವೆ ಮತ್ತು ಪ್ರತಿವಾರವೂ ಕೊಯ್ಲು ಮಾಡಬಹುದು ಎನ್ನುತ್ತಾರೆ ಲಾಲ್ಸಿಂಗ್.
೨೦X೨೦ ಅಡಿಗಳ ಮಡಿಗಳನ್ನು ಮಾಡಿದ್ದಾರೆ. ಪ್ರತಿ ಮಡಿಯಿಂದಲೂ ವಾರಕ್ಕೆ ೩೦ ಕಟ್ಟುಗಳನ್ನು ಕೊಯ್ಯುತ್ತಾರೆ. ಐದು ಅಥವಾ ಆರು ಕೊಯ್ಲಿನ ನಂತರ ಗಿಡಗಳನ್ನು ಕೀಳುತ್ತಾರೆ. ಇವರಿಗೂ ಸಬ್ಬಸಿಗೆಯ ಬೀಜಗಳ ಉಪಯೋಗ ಅಥವಾ ಸುಗಂಧ ತೈಲದ ಬಗ್ಗೆ ಗೊತ್ತಿಲ್ಲ.
ಈ ಇಬ್ಬರು ರೈತರಿಗೂ ಸಬ್ಬಸಿಗೆಗೆ ಕೀಟಬಾಧೆ ಇರುವ ಬಗ್ಗೆ ಗೊತ್ತಿಲ್ಲ. ಆದರೂ ಸಬ್ಬಸಿಗೆಗೆ ಬೂದಿ ರೋಗ ಇದೆಯಂತೆ ಎನ್ನುವ ವಿಷಯ ಕೇಳಿದ್ದಾರೆ.
ಕೃಷಿ ಇಲಾಖೆಯ ಪ್ರಕಾರ ಮರಳು ಮಣ್ಣು ಹಾಗೂ ಜೇಡಿಮಣ್ಣು ಹೊರತುಪಡಿಸಿ, ಉಳಿದೆಲ್ಲಾ ಮಣ್ಣುಗಳಲ್ಲೂ ಸಬ್ಬಸಿಗೆ ಬೆಳೆಯುತ್ತದೆ. ಹೆಚ್ಚು ಬೆಳಕು, ತೇವಾಂಶಭರಿತ ತಂಪು ಹವೆ ಅವಶ್ಯಕ. ಮಳೆಗಾಲ ಒಳ್ಳೆಯದಲ್ಲ. ಮನೆಯ ಹಿತ್ತಲಲ್ಲಿ ಬಿಸಿಲು, ಬೆಳಕು ಬೀಳದ ಕಾರಣ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಟೆರೇಸ್ನಲ್ಲಿ ಬೆಳೆಯಬಹುದು. ಬೀಜಕ್ಕೋಸ್ಕರ ಬೆಳೆಯುವುದಾದರೆ ಬೆಳೆಯ ಅವಧಿ ಐದೂವರೆ ತಿಂಗಳು. ಸುಗಂಧ ತೈಲಕ್ಕಾದರೆ ಮೂರು ತಿಂಗಳಿಗೆ ಹೂತುಂಬಿ ಬೀಜವಾಗುತ್ತಿರುವಂತೆಯೇ ಕೊಯ್ಲಾಗಬೇಕು. ಸೊಪ್ಪನ್ನು ಎರಡು ದಿನ ಬಾಡಿಸಿ ಭಟ್ಟಿ ಇಳಿಸಲಾಗುತ್ತದೆ. ಒಂದು ಹೆಕ್ಟೇರಿಗೆ ಮೂರು ಟನ್ ಸೊಪ್ಪು ಸಿಗುತ್ತದೆ. ಅದರಿಂದ ೨೦ ಕಿಲೋಗ್ರಾಂ ತೈಲ ತೆಗೆಯಬಹುದೆಂದು ಇಲಾಖೆಯ ಅಂಕಿಅಂಶ ದಾಖಲಾತಿಯಲ್ಲಿದೆ.
ಯಾವುದೇ ಗಾಯಗಳಿಗೆ ಸಬ್ಬಸಿಗೆ ಸೊಪ್ಪಿನ ರಸ ಹಚ್ಚಿದರೆ ರಕ್ತ ಬೇಗ ನಿಲ್ಲುತ್ತದೆ. ಗಾಯ ಬಲುಬೇಗ ಒಣಗಿ ವಾಸಿಯಾಗುತ್ತದೆ ಎನ್ನುವ ಅನುಭವ ಲಾಲ್ಸಿಂಗ್ರವರದು. ಆಯುರ್ವೇದದಲ್ಲಿ ಸಬ್ಬಸಿಗೆಯಿಂದ ಮಲಬದ್ಧತೆ ನಿವಾರಣೆ, ನಿಯಮಿತ ಋತುಸ್ರಾವ, ವಾಕರಿಕೆ, ಬಿಕ್ಕಳಿಗೆ, ಅಜೀರ್ಣ ನಿವಾರಣೆ, ವಾತ ಹಾಗೂ ಗಂಟುನೋವುಗಳ ಶಮನ, ಬಾಣಂತಿಯರು ಸೊಪ್ಪಿನ ರಸ ಕುಡಿಯುವುದರಿಂದ ಎದೆಹಾಲಿನ ಪ್ರಮಾಣ ಹೆಚ್ಚುತ್ತದೆ ಎನ್ನುವ ಲಿಖಿತವಿದೆ.
ಸಬ್ಬಸಿಗೆ ಬೆಳೆದ ಕರಾವಳಿಯ ರೈತರಿದ್ದರೆ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳುವಿರಾ?
Leave A Comment