ಒಬ್ಬ ಧಾಂಡಿಗ ನೆಲಕ್ಕೆ ಬಿದ್ದಿದ್ದ. ಅವನು ಇಂಗ್ಲಿಷರವನು. ಹದಿನೈದು ವರ್ಷದ ಬಂಗಾಲಿ ಹುಡುಗನೊಬ್ಬ ಅವನಿಗೆ ಬಲವಾಗಿ ಪೆಟ್ಟು ಹಾಕಿತ್ತಿದ್ದಲ ಸುತ್ತಲೂ ನೂರಾರು ಜನ ಸೇರಿದ್ದರು. ಕರಲವರಿಗೆ ಭಯ, ಆಶ್ಚರ್ಯ, ಇನ್ನು ಕೆಲವರಿಗೆ ಹಿಗ್ಗು, ಉತ್ಸಾಹ. ಮಾತೇ ಹೊರಡದೆ ಮೂಕರಾಗಿ ನಿಂತವರು ಕೆಲವರು. ಕುಣಿದು ಕೇಕೆ ಹಾಕುತ್ತಿದ್ದರು ಇನ್ನು ಕೆಲವರು. ಅಂದಿನವರೆಗೆ ಅಂಥ ಘಟನೆ ನಡೆದಿರಲಿಲ್ಲ. ಬಿಳಿಯನೊಬ್ಬ ಭಾರತದ ಬಾಲಕನಿಂದ ಹೀಗೆ ಹೊಡೆಸಿಕೊಳ್ಳುವ ಪ್ರಸಂಗ ಬಂದಿರಲಿಲ್ಲ.

ಬಾಲಕನ ಬಂಧನ

ಕೆಳಕ್ಕೆ ಬಿದ್ದಿದ್ದವನು ಒಬ್ಬ ಪೋಲಿಸ್ ಅಧಿಕಾರಿ. ಅವನ ಉಡುಪಿನ ಗುಂಡಿಗಳು ಕಿತ್ತು ಹೋಗಿದ್ದವು. ಅವನ ಹ್ಯಾಟು ದೂರದಲ್ಲಿ ಬಿದ್ದಿತ್ತು; ಅವನನ್ನು ಹೊಡೆಯುತ್ತಿದ್ದ ಬಾಲಕ ಯಾರು? ಯಾರು ಆ ಧೈರ್ಯಶಾಲಿ ಹುಡುಗ? ಎಲ್ಲರ ಮನಸ್ಸಿನಲ್ಲೂ ಇದೇ ಪ್ರಶ್ನೆ. ಕೆಲವರು ತಮ್ಮ ಪಕ್ಕದಲ್ಲಿದ್ದವರನ್ನು ಕೇಳಿದರು. ಅವರು ಮತ್ತೊಬ್ಬರನ್ನು ಕೇಳಿದರು. ಕೊನೆಗೆ ಒಂದಿಬ್ಬರು ಕಾಲೇಜು ವಿದ್ಯಾರ್ಥಿಗಳು ಹೇಳಿದರು:

“ಅವನು ಸುಶೀಲ ಕುಮಾರ ಸೇನ್. ನಮಗೆ ಗೊತ್ತು. ನಮ್ಮ ಕಾಲೇಜಿಗೆ ಬರುತ್ತಾನೆ. ನಮ್ಮ ಸ್ನೇಹಿತ ಅವನು”.

ಸುಶೀಲ ಕುಮಾರ ಸೇನ್ ಕಲ್ಕತ್ತದ ನ್ಯಾಷನಲ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ. ಕೆಲವೇ ಕ್ಷಣಗಳಲ್ಲಿ ಅವನ ಕಡೆಗೆ ಅಕ್ಕಪಕ್ಕದಲ್ಲಿದ್ದ ಪೋಲೀಸರು ಧಾವಿಸಿ ಬಂದರು, ಹುಡುಗನ ಕೈಯಿಂದ ತಮ್ಮ ಅಧಿಕಾರಿಯನ್ನು ಬಿಡಿಸಿ ಮೇಲಕ್ಕೆ ಎತ್ತಿದರು. ಅವನು ಕುಂಟುತ್ತಾ ಎದ್ದು ನಿಂತ. ಅವನ ಹ್ಯಾಟು ಹುಡುಕಿ, ಧೂಳು ಒರೆಸಿ ತಲೆಯ ಮೇಲೆ ಇಟ್ಟರು. ಇಬ್ಬರು ಅವನನ್ನು ಮೆಲ್ಲನೆ ನಡೆಸಿಕೊಂಡು ಹೊರಟರು. ಉಳಿದ ಪೋಲೀಸರು ಸುಶೀಲ ಕುಮಾರ ಸೇನ್ ನನ್ನು ಹೊಡೆಯುತ್ತಾ ದರದರನೆ ಎಳೆದುಕೊಂಡು ಹೋದರು.

 

ಹುಡುಗನೊಬ್ಬ ಇಂಗ್ಲಿಷ್ ಅಧಿಕಾರಿಗಳಿಗೆ ಹೊಡೆಯುತ್ತಿದ್ದ.

ಇಂಗ್ಲಿಷರ  ಸಂಚು

ಈ ಘಟನೆ ನಡೆದಿದ್ದು ಕಲ್ಕತ್ತದ ಲಾಲ್ ಬಜಾರಿನಲ್ಲಿ. ಅದೂ, ಪೋಲೀಸ್ ನ್ಯಾಯಾಲಯದ ಮುಂದೆ. ೧೯೦೭ರ ಆಗಸ್ಟ್ ೨೬ ರಂದು. ಆಗ ನ್ಯಾಯಾಲಯದ ಒಳಗೆ ಬಿಪಿನಚಂದ್ರ ಪಾಲ್ ಎಂಬ ರಾಷ್ಟ್ರ ನಾಯಕರ ವಿಚಾರಣೆ ನಡೆಯುತ್ತಿತ್ತು. ಅವರು “ವಂದೇ ಮಾತರಂ” ಎಂಬ ಹೆಷರಿನ ಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿದ್ದರು. ಆ ಪತ್ರಿಕೆಯಲ್ಲಿ ಇಂಗ್ಲಿಷ್ ಸರಕಾರದ ದಬ್ಬಾಳಿಕೆಯನ್ನು ಖಂಡಿಸುವ ಹಾಗೂ ಸ್ವಾತಂತ್ಯ್ರದ ಹಿರಿಮೆಯನ್ನು ಸಾರುವ ಲೇಖನಗಳು ಅಚ್ಚಾಗಿದ್ದವು. ಅವನ್ನೆಲ್ಲಲ ಬರೆಯುತ್ತಿದ್ದವರು ಇನ್ನೊಬ್ಬ ಖ್ಯಾತ ದೇಶನಾಯಕರಾಗಿದ್ದ ಅರವಿಂದ ಘೋಷ್. ಅರವಿಂದರು ಕಲ್ಕತ್ತದ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ತುಂಬ ಮೇಧಾವಿ ಮತ್ತು ಚಾಣಾಕ್ಷ ಕ್ರಾಂತಿಕಾರಿ ನಾಯಕ. ಅವರು ಲೇಖನಗಳನ್ನು ಮೊನಚಾಗಿಯೂ ಕಾನೂನಿನ ಹಿಡಿತಕ್ಕೆ ಸಿಕ್ಕದಂತೆ ಜಾಣತನದಿಂದಲೂ ಬರೆಯುತ್ತಿದ್ದರು. ಯುವಕರಿಗೆ ಹಾಗೂ ಸುಶೀಲ ಕುಮಾರ ಸೇನ್ ರನಂಥ ಸಾವಿರಾರು ವಿದ್ಯಾರ್ಥಿಗಳಿಗೆ “ವಂದೇ ಮಾತರಂ” ಪತ್ರಿಕೆ ಓದದಿದ್ದರೆ ಜೀವ ನಿಲ್ಲುತ್ತಿರಲಿಲ್ಲ. ಅಷ್ಟೊಂದು ಅಚ್ಚುಮೆಚ್ಚಿನದಾಗಿತ್ತು ಅದು.

ಆ ಪತ್ರಿಕೆಯನ್ನು ಏನಾದರೂ ಮಾಡಿ ಕೊನೆಗಾಣಿಸಬೇಕೆಂದು, ಅರವಿಂದ ಘೋಷರ ಮೇಲೆ ತಪ್ಪು ಹೊರಿಸಿ ಅವರಿಗೆ ಶಿಕ್ಷೆ ವಿಧಿಸಬೇಕೆಂದೂ ಇಂಗ್ಲಿಷ್ ಸರಕಾರ ಸಂಚು ಮಾಡಿತು. ಅದಕ್ಕಾಗಿ ಮೊದಲು ಬಿಪಿನಚಂದ್ರ ಪಾಲರ ಮೇಲೆ ಮೊಕದ್ದಮೆ ಹೂಡಿತು. ಬಿಪಿನ ಚಂದ್ರರು ಅರವಿಂದರ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಬೇಕೆಂಬುದು ಸರಕಾರದ ಉದ್ದೇಶ. ಆದರೆ ದೇಶಭಕ್ತ ಬಿಪಿನ ಚಂದ್ರರು ಎಂದಾದರೂ ಹಾಗೆ ಮಾಡಿಯಾರೇ? ಅಂಥ ಹೇಳಿಕೆ ಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಸಾರಿದರು.

ನಿರಪರಾಧಿಯ ನೆರವಿಗೆ

ಈ ವಿಚಾರಣೆಯ ವಿವರ ತಿಳಿದುಕೊಳ್ಳಲು ದೇಶ ಪ್ರೇಮಿ ತರುಣರಿಗೆ ಕುತೂಹಲ. ಅದಕ್ಕಾಗಿ ಅವರು ನ್ಯಾಯಾಲಯದ ಮುಂದೆ ಕಿಕ್ಕಿರಿದು ಸೇರಿದ್ದರು. ಒಳಗೆ ನ್ಯಾಯಾಧೀಶರಿಂದ ವಿಚಾರಣೆ ನಡೆಯುತ್ತಿತ್ತು. ಪ್ರಖ್ಯಾತ ವಾಗ್ಮಿಯಾದ ಬಿಪಿನಚಂದ್ರಪಾಲರ ವಾದವನ್ನು ಅಲ್ಲಿದ್ದವರೆಲ್ಲ ಮೈಮರೆತು ಕೇಳುತ್ತಿದ್ದರು. ಅಷ್ಟರಲ್ಲಿ ಹೊರಗೆ ಭಾರಿ ಕೋಲಾಹಲವೆದ್ದಿತು.

“ಅದೇನು ಗಲಾಟೆ?” ಎಂದು ಕೇಳೀದರು.

“ಜನರು ಘೋಷಣೆ ಹಾಕುತ್ತಿದ್ದಾರೆ ಮಹಾಸ್ವಾಮಿ” ಎಂದರು ಬಾಗಿಲಲ್ಲಿ ಇದ್ದ ನೌಕರರು.

“ಏನು ಘೋಷಣೆ ಅದು?”

“ಸರಕಾರಕ್ಕೆ ಧಿಕ್ಕಾರ, ಭಾರತಮಾತೆಗೆ ಜಯಕಾರ”

ಅಷ್ಟರಲ್ಲಿ ಇನ್ನೊಮ್ಮೆ, ಮತ್ತೊಮ್ಮೆ ಗರ್ಜನೆ ಕೇಳಿಬಂತು. ನ್ಯಾಯಾಧೀಶರಿಗೆ ಗಾಬರಿಯಾಗಿ ಸಹನೆ ಮೀರಿತು. ಹೊರಗೆ ಸೇರಿದ್ದವರನ್ನು ಚದುರಿಸಿ, ಗದ್ದಲ ತಪ್ಪಿಸುವಂತೆ ಆಜ್ಞ ಮಾಡಿದರು. ಹಿರಿಯ ಪೋಲೀಸ್ ಅಧಿಕಾರಿ ಹೊಗೆ ಹೋಗಿ ಅಲ್ಲಿದ್ದ ಪೇದೆಗಳಿಗೆ ಸೂಚನೆ ಕೊಟ್ಟ. ಪೋಲೀಸರ ದೊಣ್ಣೆಗಳು ಜನರ ಮೇಲೆ ಎರಗಿ ಬಂದವು. ಆ ಕಾಲದಲ್ಲಿ ಆರು ಅಡಿ ಉದ್ದದ ಲಾಠಿಗಳನ್ನು ಬಳಸಲಾಗುತ್ತಿತ್ತು. ಜನರ ತಲೆ ಮುಖ ಕೈಕಾಲು ಯಾವುದನ್ನೂ ನೋಡದೆ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಯಿತು. ಬೀದಿಯಲ್ಲಿ ಹೋಗುತ್ತಿದ್ದ ನಿರಪರಾಧಿಗಳಿಗೂ ಏಟು ತಪ್ಪಲಿಲ್ಲ. ತಲೆ ಒಡೆಯಿತು, ಮೂಳೆ ಮುರಿಯಿತು, ರಕ್ತ ಹರಿಯಿತು. ಸುಶೀಲ ಕುಮಾರ ಸೇನ್ ಅದನ್ನು ಕಂಡು ಕೆಂಡವಾದ. ಬ್ರಿಟಿಷ್ ಪೋಲೀಸ್ ಅಧಿಕಾರಿಗೆ ಬುದ್ಧಿ ಕಲಿಸಲು ಮುಂದಕ್ಕೆ ನುಗ್ಗಿದ.

ದಿಟ್ಟ ಹೇಳಿಕೆ

ಸುಶೀಲನನ್ನು ಎಳೆದುಕೊಂಡು ಹೋಗಿ ಸೆರೆಮನೆಗೆ ದೂಡಿದರು. ಅವನಿಗೆ ಇಡೀ ದಿನ ಅನ್ನ ನೀರು ಕೊಡಲಿಲ್ಲ. ರಾತ್ರಿಯೆಲ್ಲ ಸೊಳ್ಳೆಗಳ ಕಡಿತ. ಹೊಲಸು ನೀರು ನಿಂತ ನೆಲ, ಅವನಿಗೆ ನಿದ್ದೆ ಹತ್ತುವುದು ಹೇಗೆ? ನಿಂತು, ಕುಳಿತು ಹೇಗೋ ಸಮಯ ಕಳೆದ. ಪೋಲೀಸರ ಹೊಡೆತಗಳಿಂದ ಮೈಕೈ ನೋಯುತ್ತಿತ್ತು.

ಮರುದಿನ ಬೆಳಿಗ್ಗೆ ಅವನ ವಿಚಾರಣೆ. ಅವನಿಂದ ಪೆಟ್ಟು ತಿಂದಿದ್ದ ಪೋಲೀಸ್ ಅಧಿಕಾರಿ ನ್ಯಾಯಾಲಯಕ್ಕೆ ಮೊದಲೇ ದೂರು ಸಲ್ಲಿಸಿದ್ದ. ಆತ ನ್ಯಾಯಾಧೀಶರ ಎದುರಲ್ಲಿ, “ನನ್ನನ್ನು ಈ ಹುಡುಗ ಹೊಡೆದ” ಎಂದು ನಾಚಿಕೆ ಇಲ್ಲದೆ ಹೇಳಿಕೊಂಡ. ಕ್ರಿಮಿನಲ್ ದಾವಾ ಹೂಡಲಾಯಿತು.

ಕಿಂಗ್ಸ್ ಫರ್ಡ್ ಎಂಬ ಇಂಗ್ಲಿಷಿನವನು ಆಗ ಮುಖ್ಯ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಆಗಿದ್ದ. ಅವನ ಮುಂದೆ ವಿಚಾರಣೆ ನಡೆಯಿತು.

“ನೀನು ಮಾಡಿದ್ದು ತಪ್ಪ ಎಂದು ಒಪ್ಪಿಕೊ. ಕ್ಷಮಾಪಣೆ ಕೇಳಿಕೋ” ಎಂದು ಸುಶೀಲ ಕುಮಾರ ಸೇನ್ ಗೆ ಹೇಳಲಾಯಿತು.

ಅದಕ್ಕೆ ಅವನೆಂದ : “ನಾನು ಮಾಡಿದ್ದು ತಪ್ಪೋ ಸರಿಯೋ ನನಗೆ ಗೊತ್ತಿಲ್ಲ. ನಾನು ಸೀಲ್ಡಾದಿಂದ ಬರುತ್ತಿದ್ದೆ. ಲಾಲ್ ಬಜಾರಿನ ಹತ್ತಿರ ದೊಡ್ಡ ಗುಂಪು ಕಂಡಿತು. ನನು ಹತ್ತಿರ ಹೋಗಿ, ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಹಣಕಿ ನೋಡಿದೆ. ಆಗ ಈ ಸಾರ್ಜೆಂಟ್ ತನ್ನ ಕೈಗೆ ಸಿಕ್ಕಿದವರನ್ನೆಲ್ಲ ಹೊಡೆಯಲು ಆರಂಭಿಸಿದ. ನನಗೂ ಏಟು ಬಿತ್ತು. ನಾನೂ ಒಂದು ವಾಪಸ ಕೊಟ್ಟೆ. ಆಗ ಅವನು ಮತ್ತೆ ಮತ್ತೆ ನನಗೆ ಹೊಡೆದ. ಆಗ ಇನ್ನು ಕೆಲವು ಪೋಲೀಸ್ ಅಧಿಕಾರಿಗಳು ನನ್ನ ಮೇಲೆ ಏರಿಬಂದು ನನ್ನನ್ನು ರಸ್ತೆಯಲ್ಲಿ ಕೆಡವಿದರು”.

ಛಡಿ ಏಟಿನ ಶಿಕ್ಷೆ

ಕಿಂಗ್ಸ್ ಫರ್ಡನಿಗೆ ದೇಶಭಕ್ತರನ್ನು ಕಂಡರೆ ದ್ವೇಷ. ಅವನು ಎಷ್ಟೋ ಸ್ವಾತಂತ್ಯ್ರ ಹೋರಾಟಗಾರರಿಗೆ ಕ್ರೂರ ಶಿಕ್ಷೆಗಳನ್ನು ವಿಧಿಸಿದ್ದ. ಈಗಲೂ ಅವನು ಬೇರೆ ಸಾಕ್ಷಿಗಳ ಹೇಳಿಕೆಗೆ ಮೊದಲೇ : “ಬಂಗಾಲಿಗಳು ಪೋಲೀಸರನ್ನು ಎದುರಿಸಬಲ್ಲರು ಎಂಬ ಭಾವನೆ ತರುಣರಲ್ಲಿ ಬೆಳೆದಿದೆ” ಎಂದ.

ಆಗ ಸುಶೀಲನ ಕಡೆಯ ವಕೀಲರು, “ಪೋಲೀಸರೇನು ಕಮ್ಮಿ? ಬಂಗಾಲಿಗಳಿಗೆ ಏನು ಬೇಕಾದರೂ ಮಾಡಬಹುದೆಂದು ಅವರು ತಿಳಿದುಕೊಂಡಿದ್ದಾರೆ. ನಿನ್ನೆ ತಾನೆ ಈ ನ್ಯಾಯಾಲಯದಲ್ಲೇ ಅನೇಕರನ್ನು ಹೊಡೆದರು”. ಎಂದು ಗುಡುಗಿದರು.

ಸರಕಾರದ ಪಕ್ಷಪಾತಿ ಆಗಿದ್ದ ಕಿಂಗ್ಸ್ ಫರ್ಡ್, “ಈ ಹುಡುಗನಿಗೆ ಹದಿನೈದು ಛಡಿ ಏಟಿನ ಶಿಕ್ಷೆ” ಎಂದು ತೀರ್ಪು ನೀಡಿದ.

ಶಿಕ್ಷೆಯ ಖಂಡನೆ ಸುಶೀಲನ ಪ್ರಶಂಸೆ

ಪತ್ರಿಕೆಗಳಲ್ಲಿ ಸುಶೀಲನ ಸಾಹಸದ ಘಟನೆ ಪ್ರಕಟವಾಯಿತು. “ಸಂಧ್ಯಾ” ಎಂಬ ಪತ್ರಿಕೆಯಲ್ಲಿ ಬಂದ ವರದಿ ಓದಿ : “ಕೆಂಪುಮೂತಿಯ ಪೋಲೀಸನೊಬ್ಬ ಯಾವ ಪ್ರಚೋದನೆಯೂ ಇಲ್ಲದೆ ಸಿಕ್ಕಿದವರನ್ನೆಲ್ಲ ಥಳಿಸುತ್ತಿದ್ದ. ಅದನ್ನು ಸುಶೀಲ್ ನೋಡಿದ. ಕೂಡಲೇ ಅದನ್ನು ನಿಲ್ಲಿಸಲು ಹೋದ. ಅವನಿಗೂ ಪೆಟ್ಟು ಬಿತ್ತು. ಸುಶೀಲನ ವಯಸ್ಸು ಕೇವಲ ಹದಿನೈದು. ಕೆಂಪು ಮೋರೆಯವನಾದರೋ ಕಡಿದರೆ ನಾಲ್ಕು ಆಳು ಆಗುವ ಹಾಗಿದ್ದ. ಆದರೆ ಸುಶೀಲನ ಹೋರಾಟ ನಿಜಕ್ಕೂ ಹೆಮ್ಮೆ ತರುವಂಥದ್ದು. ಪರಂಗಿಯವನು ಹಣ್ಣುಗಾಯಿ ನೀರುಗಾಯಿ ಆದ. ಆ ಪರಂಗಿಗಳ ಬಡಿವಾರಕ್ಕೆ ಯಾರೂ ಹೆದರಬೇಕಾಗಿಲ್ಲ. ಒಳಗೆಲ್ಲ ಶುದ್ಧ ಪೊಳ್ಳು. ಸುಶೀಲ್ ಅವರ ಬಣ್ಣದ ಮುಖವಾಡ ಕಿತ್ತೆಸೆದು, ಈಗ ಗುಟ್ಟು ರಟ್ಟು ಮಾಡಿದ್ದಾನೆ”.

ಸುಶೀಲನಿಗೆ ಶಿಕ್ಷೆಯಾದ ಸುದ್ದಿ ಊರಿಂದ ಊರಿಗೆ ಹರಡಿತು. ಬಂಗಾಲವನ್ನೂ ದಾಟಿ ಹೊರಗಿನ ಪ್ರಾಂತಗಳಿಗೂ ಹಬ್ಬಿತು. ಇಂತಹ ಶಿಕ್ಷೆ ಕೊಟ್ಟವರು ಮನುಷ್ಯರಲ್ಲ, ರಾಕ್ಷಸರು – ಎಂದ ಜನ ಆಡಿಕೊಂಡರು. ತರುಣರಿಗೆ ಕಿಂಗ್ಸ್ ಫರ್ಡ್‌ನ ಮೇಲೆ ಕೋಪ, ತಿರಸ್ಕಾರ ಹುಟ್ಟಿತು. “ದಿ ನೇಷನ್” ಎಂಬ ಪತ್ರಿಕೆ ಅವನ ಕ್ರೂರ ತೀರ್ಪನ್ನು ಖಂಡಿಸಿತು. “ವಿದ್ಯಾವಂತ ವ್ಯಕ್ತಿಯನ್ನು ರಾಜಕೀಯ ಅಪರಾಧಕ್ಕಾಗಿ ಛಡಿಯಿಂದ ಹೊಡೆಯುವುದು ನಿಜಕ್ಕೂ ಹೊಸ ಕಳಂಕ” ಎಂದು ಬರೆಯಿತು.

ಧೀರ ಮನಸ್ಸು

ಜೈಲಿನಲ್ಲಿ ಎಳೆಯನಾದ ಸುಶೀಲ ಕುಮಾರನ ಬಟ್ಟೆ ಬಿಚ್ಚಿದರು. ಬರಿಮೈಯಲ್ಲಿ ಕಂಬಕ್ಕೆ ಕಟ್ಟಿದರು. ಹಿಂದಿನ ದಿನ ಪೋಲೀಸ್ ಅಧಿಕಾರಿಗಳ ಹೊಡೆತ ಒದೆತಗಳಿಂದ ಅವನ ಶರೀರವೆಲ್ಲ ಜರ್ಜರಿತವಾಗಿತ್ತು. ಅದರ ಮೇಲೆ ಈಗ ಛಡಿ ಏಟಿನ ಶಿಕ್ಷೆ! ಛಡಿ ಎಂದರೆ ಹದವಾಗಿ ಬಳಕುವ ಬೆತ್ತ. ಅದನ್ನು ನೆನೆಸಿಕೊಂಡರೇ ಮೈ ಝುಂ ಅನ್ನುತ್ತದೆ. ಇನ್ನು ಕಣ್ಣಾರೆ ನೋಡಿದರಂತೂ ಹುಡುಗರಿಗೆ ಹಾಗಿರಲಿ, ದೊಡ್ಡವರಿಗೂ ಎದೆ ಡವಡವ ಅನ್ನುತ್ತದೆ. ಒಬ್ಬ ದೆವ್ವದಂಥ ಸಿಪಾಯಿ ಅಂಥ ಛಡಿ ಹಿಡಿದು ಸುಶೀಲನ ಮುಂದೆ ಪ್ರತ್ಯಕ್ಷನಾದ. ಛಡಿಯನ್ನು ಮೇಲೆ ಎತ್ತಿ ಹೊಡೆಯಲು ಸಿದ್ಧನಾದ. ಆ ದೃಶ್ಯ ಕಂಡು ಬೇರೆ ಯಾರೇ ಆದರೂ ಹೆದರಿ ಕಂಗಾಲಾಗಿ ಚೀರಿಕೊಳ್ಳುತ್ತಿದ್ದರು. ಆದರೆ ಸುಶೀಲ ಅಲುಗಾಡಲಿಲ್ಲ. ದಿಟ್ಟವಾಗಿ, ಗಂಭೀರವಾಗಿ ನಿಂತಿದ್ದ. ಸೊಯ್ಯನೆ ಬೆತ್ತ ಗಾಳಿಯನ್ನು ಸೀಳಿಕೊಂಡು ಬಂತು. ಫಳ್ ಎಂದು ದೇಹಕ್ಕೆ ಅಪ್ಪಳಿಸಿ ಪುನಃ ಮೇಲೆ ಹೋಯಿತು.

ಏಟು ಬಿದ್ದ ಜಾಗದಲ್ಲಿ ಹೆಬ್ಬೆರಳ ಗಾತ್ರದ ಬಾಸುಂಡೆ. ತಟ್ಟನೆ ಇನ್ನೊಂದು ಏಟು. ಚರ್ಮ ಕಿತ್ತು ಬಂದು ರಕ್ತ ಚಿಮ್ಮಿತು. ಆದರೆ ಹೊಡೆತ ನಿಲ್ಲಲಿಲ್ಲ. ಮತ್ತೊಂದು, ಮಗದೊಂದು ಹೊಡೆತ. ಸುಶೀಲ ಕಲ್ಲಿನಂತೆ ನಿಂತಿದ್ದ. ಆಚೀಚೆ ಸರಿಯಲಿಲ್ಲ. ಎಳ್ಳಷ್ಟೂ ಭಯಪಡಲಿಲ್ಲ. ಕೂಗಲಿಲ್ಲ, ಕಿರುಚಲಿಲ್ಲ. ಹಾಲಾಹಲ ಕುಡಿದ ಶಿವನಂತೆ ನೋವು ನುಂಗಿಕೊಂಡು ಶಾಂತವಾಗಿ ನಿಂತಿದ್ದ. ಛಡಿ ಏಟು ಹದಿನೈದು ಮುಗಿಯಿತು. ಕಷ್ಟಪಟ್ಪು ಬಟ್ಟೆ ತೊಟ್ಟುಕೊಂಡು ಸುಶೀಲ ಹೊರಗೆ ಬಂದ. ಯಾರೋ ಪುಣ್ಯಾತ್ಮರು ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಔಷಧೋಪಚಾರ ಮಾಡಿದರು.

“ವಂದೇ ಮಾತರಂ” ಪತ್ರಿಕೆ ಸುಶೀಲ ಕುಮಾರನ ಧೈರ್ಯವನ್ನು ಹಾಡಿ ಹೊಗಳಿತು : “ನಿರ್ದಯವಾಗಿ ಹೊಡೆಯುತ್ತಿದ್ದರೂ, ಅವನು ಕದಲದೆ ನಿಂತಿದ್ದ. ಏಕೆಂದರೆ ಆಡಳಿತಶಾಹಿ ಜನರ ಎದುರಿಗೆ ಹೇಡಿತನ ತೋರಿಸಿದರೆ ಸ್ವದೇಶಕ್ಕೆ ಅವಮಾನ ಆಗುತ್ತದೆ ಎಂದು ಅವನು ಎಣಿಸಿದ್ದ”.

ಸನ್ಮಾನ

ಸುಶೀಲನ ಅಧ್ಯಾಪಕರು ಮತ್ತು ಸಹಪಾಠಿಗಳೆಲ್ಲ ಅವನಿಗೆ ಸನ್ಮಾನಿಸಲು ನಿಶ್ಚಯಿಸಿದರು. ಜೊತೆಗೆ ಪೋಲೀಸರ ದಬ್ಬಾಳಿಕೆಯನ್ನು ಖಂಡಿಸುವುದೂ ಅವರ ಉದ್ದೇಶವಾಗಿತ್ತು. ಅದಕ್ಕಾಗಿ ಶಿಕ್ಷೆ ಕೊಟ್ಟ ದಿನ ಕಲ್ಕತ್ತದ ನ್ಯಾಷನಲ್ ಕಾಲೇಜಿಗೆ ರಜೆ ಘೋಷಿಸಲಾಯಿತು. ಮರುದಿನ, ಅಂದರೆ ಅಗಸ್ಟ್  ೨೮ ರಂದು, ಸುಶೀಲನಿಗೆ ಸನ್ಮಾನ ಸಮಾರಂಭ. ಕಾಲೇಜು ಚೌರದಲ್ಲಿ ಭಾರೀ ಬಹಿರಂಗ ಸಭೆ. ಪುರಜನರು, ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದರು. ಸುಶೀಲನನ್ನು ವೇದಿಕೆಯ ಮೇಲೆ ಹತ್ತಿಸಿ ಕೊಡಿಸಲಾಯಿತು. ಹಿರಿಯ ನಾಯಕರು ಅವನನ್ನು ಕುರಿತಯ ಮೆಚ್ಚುಗೆಯ ಮಾತುಗಳನ್ನು ಆಡಿದರು. ಸಭೆಯಲ್ಲಿದ್ದ ಅನೇಕರು ಎದ್ದು ಬಂದು ಸುಶೀಲನಿಗೆ ಹೂವಿನ ಹಾರಗಳನ್ನು ಹಾಕಿದರು.

ಈ ಕಾಲದಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರು ಪ್ರಸಿದ್ಧ ಜನನಾಯಕರು. ಬಂಗಾಲದಲ್ಲಿ ಆಗ ಅವರಿಗಿಂತ ದೊಡ್ಡ ಮುಖಂಡರು ಇರಲಿಲ್ಲ. “ಬಂಗಾಲದ ಅನಭಿಷಿಕ್ತ ದೊರೆ” ಎಂದು ಅವರಿಗೆ ಹೆಸರು. ಅವರಿಗೂ ಸುಶೀಲ ಕುಮಾರನ ಸನ್ಮಾನದ ವಿಷಯ ತಿಳಿಯಿತು. ಆದರೆ ಅವರಿಗೆ ತುರ್ತಾದ ಬೇರೆ ಕೆಲಸ ಇದ್ದಿತು. ಸಭೆಗೆ ಬರಲು ಬಿಡುವು ಇರಲಿಲ್ಲ. ಸುಶೀಲನಿಗೆ ತಾವೂ ಸಹ ಏನಾದರೂ ಬಹುಮಾನ ಕೊಡಬೇಕೆಂದು ಅವರಿಗೆ ಅನ್ನಿಸಿತು. ಕೊನೆಗೆ ಅವರು ಒಂದು ಚಿನ್ನದ ಪದಕವನ್ನು ಸಭೆಯ ಅಧ್ಯಕ್ಷರಿಗೆ ಕಳೂಹಿಸಿಕೊಟ್ಟರು. “ಇದನ್ನು ನನ್ನ ಪರವಾಗಿ ದಯವಿಟ್ಟು ವೀರ ಸುಶೀಲ ಕುಮಾರನಿಗೆ ಕೊಡಿ” ಎಂದು ಹೇಳಿ ಕಳುಹಿಸಿದರು. ಆ ದಿನ ಸಭೆಯಲ್ಲಿ ಸುಶೀಲನಿಗೆ ಆ ಪದಕ ತೊಡಿಸಲಾಯಿತು. ಸಭೆಯಿಂದ ಪ್ರಚಂಡ ಕರತಾಡನ ಕೇಳಿ ಬಂತು. ಸಹಸ್ರಾರು ಕಂಠಗಳು ಒಮ್ಮೆಗೇ “ವಂದೇ ಮಾತರಂ” ಘೋಷಿಸಿದವು. ಉತ್ಸಾಹವೋ ಉತ್ಸಾಹ.

ಮೆರವಣಿಗೆ, ಉತ್ಸಾಹ

ಸಭೆ ಮುಗಿಯಿತು. ಆದರೆ ಸಭಿಕರಿಗೆ ಮತ್ತು ಸುಶೀಲನ ಸಹಪಾಠಿಗಳಿಗೆ ಸಮಾಧಾನ ಆಗಲಿಲ್ಲ. ಅವರೆಲ್ಲ ಸೇರಿ ಒಂದು ಕುದುರೆಗಾಡಿಯನ್ನು ತಂದರು. ಸುಶೀಲನನ್ನು ಗಾಡಿಗೆ ಹತ್ತಿಸಿದರು. ನಗರದ ಮುಖ್ಯ ರಸ್ತೆಗಳಲ್ಲಿ ಭಾರಿ ಮೆರವಣಿಗೆ ಹೊರಟಿತು. ದಾರಿಯ ಉದ್ದಕ್ಕೂ ಘೋಷಣೆಗಳು, ಜಯಕಾರಗಳು. ಯುವಕರು ತಮಗೆ ಅತ್ಯಂತ ಮೆಚ್ಚಿನದಾಗಿದ್ದ ಒಂದು ಬಂಗಾಲಿ ಹಾಡನ್ನು ಆವೇಶದಿಂದ ಹೇಳಿಕೊಂಡು ಕುಣಿಯುತ್ತಿದ್ದರು. ಆ ಹಾಡಿನ ಸಾರಾಂಶ: “ಓ ತಾಯಿ! ನಿನ್ನ ಸೇವೆಯಲ್ಲಿ “ವಂದೇ ಮಾತರಂ” ಉಚ್ಚರಿಸುತ್ತಾ ಪ್ರಾಣ ಹೋಗುವುದಾದರೆ ಹೋಗಲಿ. ಛೀ ಇಂಗ್ಲೀಷರೆ! ಛಡಿ ಏಟು ಹೊಡೆದು ನಮ್ಮ ತಾಯಿಯನ್ನು ಮರೆಯುವಂತೆ ಮಾಡುತ್ತೀರಾ? ನಾವು ಮಾತೆಯನ್ನು ಮರೆಯುವಂಥ ಮಕ್ಕಳಲ್ಲ ತಿಳಿಯಿರಿ!

ಸುಶೀಲ್ ಬಾಲ್ಯ

ಬಂಗಾಲದ ಸಿಲ್ಹೆಟ್ ಜಿಲ್ಲೆಯಲ್ಲಿ ಬನಿಯಾ ಚಂಗ್ ಎಂಬುದೊಂದು ಗ್ರಾಮ. ಸುಶೀಲ ಕುಮಾರ್ ಹುಟ್ಟಿದ್ದು ಆ ಹಳ್ಳಿಯಲ್ಲಿ ಸುಮಾರು ೧೮೯೨ ರಲ್ಲಿ. ಅಲ್ಲಿ ಸುತ್ತಲೂ ಹೊಲಗದ್ದೆಗಳು, ಅವುಗಳಾಚೆ ಕಾಡು, ನಡು ನಡುವೆ ತೊರೆ ಕಾಲುವೆಗಳು. ಸುಂದರ ಶಿಶುವಾಗಿದ್ದ ಸುಶೀಲ ದಿಟ್ಟನೆ ಬಾಲಕನಾಗಿ ಬೆಳೆದ. ಊರಿನ ಸುತ್ತ ಮುತ್ತ ಗೆಳೆಯರೊಡನೆ ಓಡಾಡುವಾಗ ಅವನಿಗೆ  ಧೈರ್ಯ, ಸಾಹಸದ ಗುಣಗಳು ಪ್ರಕೃತಿದತ್ತವಾಗಿ ಬಂದವು. ದೇಶಭಕ್ತಿ, ಸ್ವಾತಂತ್ಯ್ರ ಪ್ರೀತಿ ಅವನಲ್ಲಿ ಮೊಳೆಯಿತು. ಅಸತ್ಯ, ಅನ್ಯಾಯ ಕಂಡರೆ ಅವನಿಗೆ ಆಗದು. ಶಾಲೆಯಲ್ಲೂ ಅವನು ಚೂಟಿಯ ವಿದ್ಯಾರ್ಥಿ. ತನಗೆ ಎಷ್ಟೇ ತೊಂದರೆ ಆದರೂ, ಕಷ್ಟದಲ್ಲಿ ಇರುವ ಗೆಳೆಯರ ನೆರವಿಗೆ ಧಾವಿಸುತ್ತಿದ್ದ.

ಆಗ ಬಂಗಾಲದಲ್ಲಿ ಅನೇಕ ಪತ್ರಿಕೆಗಳು ದಾಸ್ಯದ ವಿರುದ್ಧ ಜನರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದವು. ಸುಶೀಲನು ಅಂತಹ ಪತ್ರಿಕೆಗಳನ್ನು ಓದುತ್ತಿದ್ದ. ಬಾಲಕರಲ್ಲೂ ಯುವಕರಲ್ಲೂ ದೇಶಭಕ್ತಿ ಬಿತ್ತಲು, ಹೋರಾಟದ ಕಿಚ್ಚು ಹುಟ್ಟಿಸಲು ಹಲವು ಸಂಸ್ಥೆಗಳೂ ಕೆಲಸಕ್ಕೆ ತೊಡಗಿದ್ದವು. ಸುಶೀಲನು ಅವುಗಳ ಸಂಪರ್ಕಕ್ಕೆ ಬಂದ. ಅವನು ಕಾಲೇಜಿಗೆ ಸೇರುವ ಸಮಯ ಬಂತು. ಆಗ ಬಂಗಾಲದ ಹಿರಿಯ ನಾಯಕರು ಸ್ವದೇಶಿ ಶಿಕ್ಷಣ ನೀಡಲು ಕಲ್ಕತ್ತದಲ್ಲಿ “ನ್ಯಾಷನಲ್ ಕಾಲೇಜ್” ಸ್ಥಾಪಿಸಿದರು. ಸುಶೀಲನೂ ಅದೇ ಕಾಲೇಜಿಗೆ ಸೇರಿಕೊಂಡ. 

ಸುಶೀಲನು ನೀರಿನಲ್ಲಿ ನಿಂತು ಪೋಲೀಸರಿಗೆ ಗುಂಡಿನಿಂದಲೇ ಉತ್ತರಕೊಟ್ಟ.

ಕ್ರಾಂತಿಯ ಕರೆ

ಛಡಿ ಏಟಿನ ಶಿಕ್ಷೆ ಆದ ಮೇಲೆ ಅವನ ಕೆಚ್ಚು ಇನ್ನೂ ಹೆಚ್ಚಿತು. ಜೀವನಪೂರ್ತಿ ದೇಶದ ಸ್ವಾತಂತ್ಯ್ರಕ್ಕಾಗಿಯೇ ಕೆಲಸ ಮಾಡಲು ನಿಶ್ಚಯಿಸಿದ. ಬ್ರಿಟಿಷರನ್ನು ಹೊಡೆದಟ್ಟಿ ಭಾರತವನ್ನು ಬಿಡುಗಡೆ ಮಾಡಲು ಸಶಸ್ತ್ರ ಹೋರಾಟ ನಡೆಸದೆ ವಿಧಿಯಲ್ಲ ಎಂದು ಹೇಳುತ್ತಿದ್ದ ಉಗ್ರವಾದಿ ದೇಶಭಕ್ತರು ಆಗ ಬಂಗಾಲದಲ್ಲಿ ಹೆಚ್ಚಾಗಿದ್ದರು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದು ಅವರ ವಾದ. ಅವರಿಗೆ ಕ್ರಾಂತಿಕಾರಿಗಳು ಎಂದು ಹೆಸರು. ಸುಶೀಲನಿಗೆ ಅಂತಹ ಕ್ರಾಂತಿಕಾರಿಗಳ ಪರಿಚಯ ಆಯಿತು. ಅವನು ಅವರ ಜೊತೆ ಸೇರಿಕೊಂಡ. ಬಾಂಬು, ಪಿಸ್ತೂಲು ಚಲಾಯಿಸುವ ವಿದ್ಯೆ ಕಲೆತ.

ಸುಶೀಲನು ತನ್ನ ಕನಸುಮನಸಿನಲ್ಲಿ ಒಬ್ಬ ವ್ಯಕ್ತಿಯನ್ನು ಮರೆಯಲಿಲ್ಲ. ಆ ವ್ಯಕ್ತಿಯೇ ಕಿಂಗ್ಸ್ ಫರ್ಡ್; ಛಡಿ ಏಟಿನ ಶಿಕ್ಷೆ ವಿಧಿಸಿದ್ದ ಕಿಂಗ್ಸ್ ಫರ್ಡ್ ನಿಗೆ ಏನಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ಸುಶೀಲ ಕುಮಾರ್ ಯೋಚಿಸುತ್ತಿದ್ದ. ಕೊನೆಗೆ, ಅದಕ್ಕಾಗಿ ಅವನೂ ಅವನ ಸ್ನೇಹಿತರೂ ಒಂದು ರಹಸ್ಯ ಯೋಜನೆ ಮಾಡಿದರು.

ಕಿಂಗ್ಸ್ ಫರ್ಡ್‌ಗೆ ಉಡುಗೊರೆ

೧೨೦೦ ಪುಟಗಳ ಒಂದು ದಪ್ಪ ಪುಸ್ತಕ ತಂದರು. ಅದರೊಳಗೆ ಮಧ್ಯದ ೬೦೦ ಪುಟಗಳಲ್ಲಿ ಹಳ್ಳ ಕೊರೆದರು. ಆ ಹಳ್ಳದೊಳಗೆ ಪಿಕ್ರಿಕ್ ಆಮ್ಲ ತುಂಬಿದ ಒಂದು ತಗಡಿನ ಡಬ್ಬಿ ಇಟ್ಟರು. ಬಾಂಬಿನ ತಯಾರಿಕೆಗೆ ಬಳಸುತ್ತಿದ್ದ ಮುಖ್ಯ ವಸ್ತುವೇ ಈ ಆಮ್ಲ. ಅದಕ್ಕೆ ಒಳ ತುದಿ ತಾಗುವಂತೆ ಪಾದರಸ ಫಲ್ಮಿನೇಟ್ ನಿಂದ ಮಾಡಿದ ಒಂದು ಬುತ್ತಿಯನ್ನು ಡಬ್ಬಿಗೆ ಜೋಡಿಸಲಾಯಿತು. ಬತ್ತಿಯ ಹೊರತುದಿಯ ಬಳಿ ಒಂದು ಮೊಳೆ ಮತ್ತು ಕೆಲವು ಸ್ಪ್ರಿಂಗ್ ಗಳು. ಆಮೇಲ ಪುಸ್ತಕವನ್ನು ಜೋಪಾನವಾಗಿ ಮುಚ್ಚಲಾಯಿತು. ಅದಕ್ಕೆ ಮೇಲೊಂದು ಬಣ್ಣದ ದಾರದ ಕಟ್ಟು. ( ಆ ದಾರ ಕತ್ತಿರಿಸುತ್ತಲೇ ಸ್ಪ್ರಿಂಗ್ ಗಳು ರಟ್ಟನ್ನು ತಳ್ಳುತ್ತವೆ. ಪುಸ್ತಕ ತೆರೆದುಕೊಂಡು ಮೊಳೆಯು ಬತ್ತಿಗೆ ತಾಗಿ ಹೊತ್ತಿಸುತ್ತದೆ. ಅದರಿಂದ ಆಮ್ಲದ ಬಾಂಬ್ ಸಿಡಿಯುತ್ತದೆ). ಇದಿಷ್ಟು ವ್ಯವಸ್ಥೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಮೊದಲೇ ಭಯಂಕರ ಸ್ಫೋಟದ ಅಪಾಯ!

ಇಂಥ ಭೀಷಣ ಅಸ್ತ್ರವನ್ನು ಒಂದು ದಿನ ಸುಶೀಲ ತೆಗೆದುಕೊಂಡು ಹೊರಟ. ಅವನು ತಲುಪಿದ್ದು ನೇರವಾಗಿ ಕಿಂಗ್ಸ್ ಫರ್ಡ್ ನ ಮನೆಯನ್ನು. ಅಲ್ಲಿ ಬಾಗಿಲ ಬಳಿ ಮನೆಯ ಸೇವಕ ಸಿಕ್ಕಿದ. “ಇದು ಸಾಹೇಬರಿಗೆ ಉಡುಗೊರೆ. ಅವರಿಗೆ ಕೊಡು” ಎಂದು ಹೇಳಿ ಸುಶೀಲನು ಪುಸ್ತಕವನ್ನು ಸೇವಕನಿಗೆ ಕೊಟ್ಟ. ತಾನು ಕೂಡಲೇ ಅಲ್ಲಿಂದ ಹೊರಟುಬಿಟ್ಟ. ಸೇವಕನು “ಉಡುಗೊರೆ” ಯನ್ನು ಸಾಹೇಬರ ಮೇಜಿನ ಮೇಲೆ ಇಟ್ಟ. ಕಿಂಗ್ಸ್ ಫರ್ಡ್ ಅದನ್ನು ಕೂಡಲೇ ಗಮನಿಸಲಿಲ್ಲ. “ಯಾರೋ ಸ್ನೇಹಿತರು ಓದಲು ತನ್ನಿಂದ ತೆಗೆದುಕೊಂಡು ಹೋಗಿದ್ದ ಪುಸ್ತಕವನ್ನು ವಾಪಸು ಕೊಟ್ಟಿರಬಹುದೆಂದು” ಎಂದುಕೊಂಡ. ಅದನ್ನು ಎತ್ತಿಕೊಂಡು ಉಳಿದ ಪುಸ್ತಕಗಳ ಜೊತೆಗೆ ಸೇರಿಸಿಬಿಟ್ಟ. ಅವನ ಅದೃಷ್ಟ ಚೆನ್ನಾಗಿತ್ತು.

ಕಿಂಗ್ಸ್ ಫರ್ಡ್ ನನ್ನು ಕೊನೆಗಾಣಿಸಲು ಕ್ರಾಂತಿಕಾರಿಗಳು ಇನ್ನೂ ಹಲವು ಪ್ರಯತ್ನಗಳನ್ನು ನಡೆಸಿದರು. ಸರಕಾರಕ್ಕೆ ಅವನ ಪ್ರಾಣರಕ್ಷಣೆಯ ಚಿಂತೆ ಹತ್ತಿತು. ಆಗ ಅವನಿಗೆ ಬಡ್ತಿ ಕೊಟ್ಟು ಮುಜಫರಪುರಕ್ಕೆ ವರ್ಗಾಯಿಸಿದರು. ಅಲ್ಲಿ ಸಹ ಅವನ ಮೇಲೆ ಬಾಂಬ್ ಹಾಕುವ ಪ್ರಯತ್ನ ನಡೆಯಿತು. ಆದರೆ ಅವನು ಉಳಿದುಕೊಂಡ, ಬೇರೆ ಇಬ್ಬರು ಸತ್ತರು. ಅದರ ತನಿಖೆ ಸಮಯದಲ್ಲಿ ಕಿಂಗ್ಸ್ ಫರ್ಡ್ ನಿಗೆ ಈ ಪುಸ್ತಕದ್ದೂ ನೆನಪು ಬಂತು. ಪೋಲೀಸರು ಅದನ್ನು ಹುಡುಕಿ ತೆಗೆದರು. ಸುರಕ್ಷತೆಯ ದೃಷ್ಟಿಯಿಂದ ಬಹಳ ಎಚ್ಚರಿಕೆ ವಹಿಸಿ ಅದನ್ನು ಬಿಚ್ಚಿ ನೋಡಿದರು. ಸ್ಪ್ರಿಂಗುಗಳು ತುಕ್ಕು ಹಿಡಿದಿದ್ದವು. ಆದರೆ ಒಳಗಿನ ಸ್ಫೋಟಕ ವಸ್ತು ಒಳ್ಳೆಯ ಸ್ಥಿತಿಯಲ್ಲೇ ಇದ್ದಿತು. ಒಂದು ವೇಳೆ ಕಿಂಗ್ಸ್ ಫರ್ಡ್  ಪುಸ್ತಕವನ್ನು ತೆರೆದಿದ್ದರೆ, ಸುಶೀಲನ ಪ್ರಯತ್ನ ಹಾಗೂ ಉದ್ದೇಶ ಸಫಲ ಆಗುತ್ತಿತ್ತು.

ಬಾರೀಂದ್ರರ ಗುರುಕುಲ

ಅರವಿಂದ ಘೋಷರ ತಮ್ಮನ ಹೆಸರು ಬಾರಿಂದ್ರ ಕುಮಾರ ಘೋಷ್. ನವಯುವಕ ಬಾರೀಂದ್ರ ಸನ್ಯಾಸಿಯಾದ. ಮಾನಿಕ್ ತಲ ಗಾರ್ಡನ್ ಎಂಬ ಜಾಗದಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದ. ಅಲ್ಲಿ ಹೊರನೋಟಕ್ಕೆ ನಡೆಯುತ್ತಿದ್ದುದು ದೇವರು – ಧರ್ಮಗಳ ಮಾತುಕತೆ. ನಿಜವಾಗಿ ನಡೆಯುತ್ತಿದ್ದುದು ರಹಸ್ಯ ಕ್ರಾಂತಿಕಾರಿ ಚಟುವಟಿಕೆ. ಬಾರಿಂದ್ರನು “ಯುಗಾಂತರ” ಎಂಬ ದೇಶಭಕ್ತಿ ಹರಡುವ ಪತ್ರಿಕೆಯನ್ನು ಪ್ರಾರಂಭಿಸಿದ. ಅದು ಬಹಳ ಜನಪ್ರೀಯವಾಯಿತು. ೧೯೮೦ರಲ್ಲೆ ಅದರ ಪ್ರಸಾರ ೨೦,೦೦೦ ದಾಟಿತ್ತು. ಆ ಪತ್ರಿಕೆಯ ಮೂಲಕ ಬಾರೀಂದ್ರನು ಜಾಣತನದಿಂದ ಸಶಸ್ತ್ರ ಕ್ರಾಂತಿಯ ವಿಚಾರವನ್ನು ಪ್ರಚಾರ ಮಾಡತೊಡಗಿದ. ಬ್ರಿಟಿಷ್ ಸರಕಾರದ ಅನ್ಯಾಯ, ದಬ್ಬಾಳಿಕೆಗಳು ಜನರಿಗೆ ಅರ್ಥವಾಗತೊಡಗಿದವು. ಒಮ್ಮೆ ಬಾರೀಂದ್ರನು “ಕಾಬೂಲಿ ಮಿಠಾಯಿ” ಎಂಬ ಲೇಖನ ಬರೆದ. ದೇಶದ ಯುವಕರು ಸುಮ್ಮನೆ ಕುಳಿತುಕೊಳ್ಳಬಾರದು, ಮಯ್ಯಿಗೆ ಮಯ್ಯಿ ತೀರಿಸಿಕೊಳ್ಳಬೇಕು ಎಂಬುದು ಅದರಲ್ಲಿದ್ದ ಅರ್ಥ. ಸುಶೀಲ ಕುಮಾರನಿಗೆ ಬಾರೀಂದ್ರನ ಮೇಲೆ ಅಪಾರ ಭಕ್ತಿ. ಬಾರೀಂದ್ರನ ಭಾಷಣ, ಲೇಖನ ಹಾಗೂ ಕಾರ್ಯಕ್ರಮಗಳಿಂದ ಸುಶೀಲನಿಗೆ ಪ್ರೇರಣೆ, ಪ್ರೋತ್ಸಾಹ ಸಿಕ್ಕಿತು.

ಬಾರೀಂದ್ರನು ಬಾಂಬ್ ತಯಾರಿಸುವ ಸಣ್ಣ ಕಾರ್ಖಾನೆ ಸ್ಥಾಪಿಸಿದ್ದ. ಅಲ್ಲದೆ, ಪಿಸ್ತೂಲು ಮತ್ತು ಮದ್ದು ಗುಂಡುಗಳನ್ನು ಶೇಖರಿಸಿ ಕ್ರಾಂತಿಯ ಚಟುವಟಿಕೆಗಳಿಗೆ ಒದಗಿಸುತ್ತಿದ್ದ. ಇದರಿಂದ ಅನೇಕ ಕಡೆಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ವಿರುದ್ಧ ಸೇಡಿನ ಕಿಡಿ ಹಾರತೊಡಗಿತು. ಸರಕಾರದ ದಬ್ಬಾಳಿಕೆಗೆ ಪ್ರತಿಭಟನೆ ಹೆಚ್ಚಿತು. ಬಾಂಬು, ಪಿಸ್ತೂಲುಗಳ ಗರ್ಜನೆ ಜೋರಾಯಿತು. ಕ್ರಾಂತಿಕಾರಿಗಳ ಗುಟ್ಟನ್ನು ಹೊರಗೆಡಹುತ್ತಿದ್ದ ದೇಶದ್ರೋಹಿಗಳಿಗೆ ಎದೆನಡುಕ ಹುಟ್ಟಿತು. ಕೊನೆಗೆ ಪೋಲಿಸರು ಅರವಿಂದ್ ಘೋಷ್, ಬಾರೀಂದ್ರ ಘೋಷ್ ಮುಂತಾದ ಹಲವು ಹತ್ತು ಉಗ್ರ ರಾಷ್ಟ್ರವಾದಿ ನಯಕರನ್ನು ಬಂಧಿಸಿದರು. ಅವರ ಮೇಲೆ ಒಳಸಂಚಿನ ಮೊಕದ್ದಮೆ ಹೂಡಿದರು. ಇದು “ಅಲಿಪುರ ಬಾಂಬ ಕೇಸ್” ಎಂದು ಪ್ರಸಿದ್ಧವಾಗಿದೆ.

ಪುನಃ ಬಂಧನ

ಇದೇ ಮೊದಕ್ಕಮೆಯ ಆರೋಪಿಗಳ ಪಟ್ಟಿಯಲ್ಲಿ ಸುಶೀಲ ಕುಮಾರನೂ ಸೇರಿದ್ದ. ಅವನಿಗಾಗಿ ಹುಡುಕಾಟ ಪ್ರಾರಂಭವಾಯಿತು. ಸುಶೀಲನು ಆಗಾಗ ತನ್ನ ಮನೆಗೆ ಹೋಗುತ್ತಿದ್ದ. ಅಲ್ಲಿ ಪೋಲೀಸರು ಹೊಂಚುಹಾಕಿ ಅವನನ್ನು ೧೯೦೮ ರ ಮೇ ೧೫ ರಂದು ಸೆರೆ ಹಿಡಿದರು. ಆಮೇಲೆ ಅವನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಅಲ್ಲಿ, ಅವನು ತಪ್ಪಿತಸ್ಥ ಅಲ್ಲ ಎಂದು ಸಹಾಯಕ ನ್ಯಾಯಾಧೀಶರೆಲ್ಲರೂ ಅಭಿಪ್ರಾಯಪಟ್ಟರು. ಆದರೆ ಮುಖ್ಯ ನ್ಯಾಯಾಧೀಶ ಆಗಿದ್ದವನು ಇಂಗ್ಲಿಷರವನು. ಅವನು ತನ್ನ ಸಂಗಡಿಗರ ಮಾತಿಗೆ ಒಪ್ಪಲಿಲ್ಲ. ಸುಶೀಲನಿಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿದ.

ಈ ತೀರ್ಪು ಸರಿಯಲ್ಲ ಎಂದು ಉಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಯಿತು. ಪುನಃ ವಿಚಾರಣೆ ನಡೆಯಿತು. ಅಲ್ಲಿ ಇದ್ದವರು ಇಬ್ಬರು ನ್ಯಾಯಾಧೀಶರು. ಅವರಲ್ಲಿ ಒಮ್ಮತ ಮೂಡಲಿಲ್ಲ. ಇಬ್ಬರೂ ಇಬ್ಬಗೆಯ ತೀರ್ಪು ಕೊಟ್ಟರು. ಆಗ ಕೊನೆಯ ನಿರ್ಧಾರ ತಿಳಿಸಲು ಮೂರನೆಯ ನ್ಯಾಯಾಧೀಶರಿಗೆ ಒಪ್ಪಿಸಲಾಯಿತು. ಸುಶೀಲನ ಮೇಲೆ ಹೊರಿಸಿದ ಆರೋಪಗಳಲ್ಲಿ ಹುರುಳಿಲ್ಲ ಎಂದರು ಅವರು. ೧೯೧೦ ರ ಫೆಬ್ರುವತಿ ೧೮ ರಂದು ಅವನ ಬಿಡುಗಡೆ ಆಯಿತು. ಅಂತೂ ಈ ವಿಚಾರಣೆಯ ಜಂಜಾಟದಲ್ಲಿ ೨೧ ತಿಂಗಳ ಜೈಲುವಾಸ ಕಳೆದು ಅವನು ಹೊರಗೆ ಬಂದ.

ಭೂಗತ ಕಾರ್ಯ

ಸುಶೀಲನಿಗೆ ಆಗ ೧೮ ವರ್ಷ. ಎಳೆಹರೆಯದ ಕುಡಿ ಮೀಸೆಯ ಯುವಕ. ಒಳ್ಳೆಯ ಮೈಕಟ್ಟು, ಸುಂದರ ರೂಪ. ಉಗ್ರ ದೇಶಭಕ್ತನಾದ ಅವನ ಮೇಲೆ ಬ್ರಿಟಿಷ್ ಸರಕಾರದ ಪೋಲೀಸರಿಗೆ ಸದಾ ಕಣ್ಣು. ಅದಕ್ಕಾಗಿ ಅವನು ಭೂಗತ ಕ್ರಾಂತಿಕಾರಿ ಆದ. ಸ್ವಾತಂತ್ಯ್ರದ ಹೋರಾಟಕ್ಕೆ ಜೀವನ ಮುಡುಪಾಗಿಟ್ಟ.

೧೯೧೪ ರಲ್ಲಿ ಮೊದಲ ಮಹಾಯುದ್ಧ ಆರಂಭವಾಯಿತು. ಆಗ ಬ್ರಿಟಿಷರು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಭಾರತದಿಂದ ಅವರನ್ನು ಓಡಿಸಲು ಅದು ಒಳ್ಳೆಯ ಅವಕಾಶ ಆಗಿತ್ತು. ಅದಕ್ಕಾಗಿ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರಗಳ ಅಗತ್ಯವಿತ್ತು, ಪರದೇಶಗಳಿಂದ ಅವನ್ನು ತರಿಸಲು ದೊಡ್ಡ ಮೊತ್ತದ ಹಣ ಬೇಕಾಗಿತ್ತು. ಆದರೆ, ಅದನ್ನು ಕೊಡುವವರು ಯಾರು? ಬಹುಪಾಲು ಶ್ರೀಮಂತರು ಸರಕಾರದ ಜೊತೆಗೇ ಸೇರಿಕೊಂಡಿದ್ದರು. ಅವರು ದೇಶಭಕ್ತ ಕ್ರಾಂತಿಕಾರಿಗಳನ್ನು ಪೋಲಿಸರಿಗೆ ಹಿಡಿದುಕೊಡುತ್ತಿದ್ದರು. ಆದ್ದರಿಂದ ಅಂಥ ಧನಿಕರ ಹಣವನ್ನು ಕಿತ್ತುಕೊಳ್ಳದೆ ವಿಧಿ ಇರಲಿಲ್ಲ. ಅಲ್ಲದೆ ಕ್ರಾಂತಿಯ ಕೆಲಸಕ್ಕೆ ಅಡ್ಡಿಯಾಗಿದ್ದ ದೇಶದ್ರೋಹಿ ಅಧಿಕಾರಿಗಳಿಗೂ ಬುದ್ಧಿ ಕಲಿಸುವುದು ಅನಿವಾರ್ಯ ಆಗಿತ್ತು.

ಆ ಸಮಯದಲ್ಲಿ ಸುರೇಶಚಂದ್ರ ಮುಖರ್ಜಿ ಎಂಬ ಪೋಲೀಸ್ ಅಧಿಕಾರಿ ಇದ್ದ. ಅವನು ಅಪರಾಧ ತನಿಖೆ ಇಲಾಖೆಯ ವಿಶೇಷ ವಿಭಾಗದಲ್ಲಿ ಇನ್ಸ್ ಪೆಕ್ಟರ್. ಅನೇಕ ಕ್ರಾಂತಿಕಾರಿ ದೇಶಭಕ್ತರನ್ನು ಪತ್ತೆಹಚ್ಚಿ ಬಂಧಿಸಿದ್ದವನು ಅವನು. ಹಲವು ಕ್ರಾಂತಿಕಾರಿಗಳ ಮುಖ ಪರಿಚಯ, ಅವರ ಚಲನವಲನಗಳ ಸುಳಿವು ಅವನಿಗೆ ತಿಳಿದಿತ್ತು. ಅದರಿಂದ ಅವನು ಹೆಚ್ಚುಕಾಲ ಜೀವಿಸಿದಷ್ಟೂ ಕ್ರಾಂತಿ ಕಾರ್ಯಕ್ಕೆ ಹೆಚ್ಚು ಅಪಾಯ ಎಂದು ಗುಪ್ತ ವಿಭಾಗದ ಮುಖಂಡನಾದ ಜತೀನ್ ಮುಖರ್ಜಿ ಯೋಚಿಸಿದ. ಸುರೇಶ ಮುಖರ್ಜಿಯ ಸಂಹಾರಕ್ಕೆ ಚಿತ್ತಪ್ರಿಯರಾಯ್ ಚೌಧುರಿ ಎಂಬ ಉತ್ಸಾಹಿ ತರುಣನ ನಾಯಕತ್ವದಲ್ಲಿ ಒಂದು ತಂಡ ತಯಾರಾಯಿತು. ಚಿತ್ತಪ್ರಿಯನಿಗೆ ಬಲಗೈಯಾಗಿ ನಿಂತವನು ಸುಶೀಲ ಕುಮಾರ್.

೧೯೧೫ ಫೆಬ್ರುವರಿ ೨೮ ರಂದು ಕಲ್ಕತ್ತ ವಿಶ್ವವಿದ್ಯಾನಿಲಯದ ಪದವೀದಾನ ಸಮಾರಂಭ. ಆ ದಿನ ಭಾಷಣ ಮಾಡಲು ದೆಹಲಿಯಿಂದ ವೈಸರಾಯ್ ಬರಲಿದ್ದ. ವೈಸರಾಯ್ ಎಂದರೆ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅತ್ಯುಚ್ಚ ಅಧಿಕಾರಿ. ಬ್ರಿಟಿಷ್ ಚಕ್ರವರ್ತಿಯ ಪ್ರತಿನಿಧಿ. ಅವನಿಗೆ ಸಮಾರಂಭದಲ್ಲಿ ಏನೂ ಅಪಾಯ ಆಗಬಾರದೆಂದು ಹಿರಿಯ ಪೋಲಿಸ್ ಅಧಿಕಾರಿಗಳೆಲ್ಲ ಮೊದಲೇ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಸುರೇಶಚಂದ್ರ ಮುಖರ್ಜಿಯು ಒಬ್ಬ ಸಬ್ ಇನ್ಸ್ ಪೆಕ್ಟರ್ ಮತ್ತು ಒಬ್ಬ ಕಾನ್ ಸ್ಟೇಬಲ್ ಜೊತೆಗೆ ಆ ದಿನ ಬೆಳಿಗ್ಗೆಯೇ ಹೊರಟ. ಸಭೆಯ ಜಾಗದ ಪಕ್ಕದಲ್ಲಿದ ಕಾರ್ನ್‌ವಾಲಿಸ್ ಚೌಕದಲ್ಲಿ ಪಾರ್ಕಿನ ನೈರುತ್ಯ ಮೂಲೆಯಲ್ಲಿ ನಿಂತು ಸುತ್ತಲೂ ನೋಡುತ್ತಿದ್ದ. ದೂರದಲ್ಲಿ ೪ -೫ ತರುಣರು ಸಂಶಯಕ್ಕೆ ಆಸ್ಪದ ಆಗುವ ರೀತಿಯಲ್ಲಿ ಓಡಾಡುತ್ತಿದ್ದರು. ಅವರ ಪೈಕಿ ಚಿತ್ತಪ್ರಿಯನೂ ಇರುವುದು ಸುರೇಶ ಮುಖರ್ಜಿಯ ಕಣ್ಣಿಗೆ ಬಿತ್ತು.

ದ್ರೋಹಿಗೆ ಶಿಕ್ಷೆ

ಚಿತ್ತಪ್ರಿಯನನ್ನು ಆ ಮೊದಲೇ ಅಪರಾಧಿ ಎಂದು ಸಾರಲಾಗಿತ್ತು. ಅವನಿಗಾಗಿ ಪೋಲೀಸರು ಅನೇಕ ದಿನಗಳಿಂಎ ಹುಡುಕುತ್ತಿದ್ದರು. ಅವನನ್ನು ಕಾಣುತ್ತಲೇ ಸುರೇಶ ಮುಖರ್ಜಿಯು ತನ್ನ ಕಾನ್ ಸ್ಟೇಬಲ್ ನನ್ನು ಹತ್ತಿರ ಕರೆದು ಚಿತ್ತಪ್ರಿಯನನ್ನು ತೋರಿಸಿ, “ತತ್ ಕ್ಷಣ ಅವನನ್ನು ಎಳೆದುಕೊಂಡು ಬಾ” ಎಂದು ಹೇಳಿದ. ಅದರಂತೆ ಆ ಪೇದೆ ಹೋಗಿ ಚಿತ್ತಪ್ರಿಯನನ್ನು ಕರೆದುಕೊಂಡು ಬಂದ. ಇನ್ ಸ್ಪೆಕ್ಟರ್ ಮುಖರ್ಜಿಯನ್ನು ವಿಚಾರಿಸಿಕೊಳ್ಳುವುದಕ್ಕಾಗಿಯೇ ಹೊಂಚು ಹಾಕುತ್ತಿದ್ದ ಚಿತ್ತಪ್ರಿಯನಿಗೆ ಸದವಕಾಶ ದೊರೆಯಿತು. ಮುಖರ್ಜಿಯು ತನ್ನ ಬಳಿಗೆ ಮೃತ್ಯುವನ್ನೇ ಕರೆಸಿಕೊಂಡಂತೆ ಆಯಿತು. ಅಧಿಕಾರಿಯ ಬಳಿಗೆ ಚಿತ್ತನು ಶಾಂತವಾಗಿ ನಡೆದುಕೊಂಡ ಬಂದ. ಅವನಿಗೆ ಬೆಂಗಾವಲಾಗಿ ಸುಶೀಲ ಕುಮಾರನೂ ಹಿಂಬಾಲಿಸಿದ. ಚಿತ್ತವನ್ನು ಹಿಡಿದುಕೊಳ್ಳಲು ಇನ್ ಸ್ಪೆಕ್ಟರ್ ಕೈ ಮುಂದೆ ಹೋಯಿತು. ಚಿತ್ತಪ್ರಿಯನೂ ಸ್ವಲ್ಪ ಮುಂದಕ್ಕೆ ಬಗ್ಗಿದ ಮತ್ತು ತಟ್ಟನೆ ಜೇಬಿನಿಂದ ಪಿಸ್ತೂಲು ತೆಗೆದು ಸುರೇಶನಿಗೆ ಹೊಡೆಯಲು ಎತ್ತಿದ. ಆದರೆ ಪಿಸ್ತೂಲಿನ ಕೀಲು ಅರ್ಧದಲ್ಲೇ ಸಿಕ್ಕಿಕೊಂಡಿತು. ಅಷ್ಟರಲ್ಲಿ ಸುಶೀಲ ಕುಮಾರ್ ತನ್ನ ಪಿಸ್ತೂಲಿನಿಂದ ಇನ್ ಸ್ಪೆಕ್ಟರನಿಗೆ ಗುಂಡು ಹಾರಿಸಿ ಕೆಲಸ ಪೂರೈಸಿದ. ಸುರೇಶ್ ಮುಖರ್ಜಿ ಕೆಳಗೆ ಬಿದ್ದ. ದೂರದಲ್ಲಿದ್ದ ೩ – ೪ ತರುಣರು ಓಡೋಡಿ ಬಂದರು. ಅವರು ಸಹ ಬಿದ್ದು ಒದ್ದಾಡುತ್ತಿದ್ದ ಪೋಲೀಸ್ ಅಧಿಕಾರಿಗೂ, ಕಾನ್ ಸ್ಟೇಬಲ್ ಶಿವಪ್ರಸಾದನಿಗೂ ಗುಂಡು ಹಾರಿಸಿದರು. ಅಧಿಕಾರಿಯ ಬಾಯಿ, ಎದೆ, ಬೆನ್ನು, ಹೊಟ್ಟೆ ಮತ್ತು ಭುಜಕ್ಕೆ ಒಟ್ಟು ಐದು ಗುಂಡುಗಳು ಹೊಕ್ಕಿದವು. ಅವನು ಸ್ಥಳದಲ್ಲೆ ಪ್ರಾಣಬಿಟ್ಟ. ಶಿವಪ್ರಸಾದನು ಸುಶೀಲನನ್ನು ಹಿಡಿದುಕೊಳ್ಳಲು ಹೆಜ್ಜೆ ಮುಂದಿಟ್ಟ. ಆದರೆ ಆಯಾಸದಿಂದ ಕುಸಿದು ನೆಲಕ್ಕೆ ಉರುಳಿದ. ಮೂರು ದಿನಗಳು ಆಸ್ಪತ್ರೆಯಲ್ಲಿ ನರಳುತ್ತಿದ್ದು ಅವನೂ ಸತ್ತು ಹೋದ. ಗುಂಡು ಹಾರಿಸಿದವರು ಯಾರು, ಎಲ್ಲಿ ಹೋದರು ಎಂಬುದರ ಸುಳಿವು ಪೋಲೀಸರಿಗೆ ಹತ್ತಲಿಲ್ಲ. ಅವರಲ್ಲಿ ಚಿತ್ತಪ್ರಿಯ ಇದ್ದನೆಂಬ ಸಂಗತಿ ಮಾತ್ರ ಗೊತ್ತಾಯಿತು.

ಕ್ರಾಂತಿಗೆ ಧನಸಂಗ್ರಹ

ಈ ಘಟನೆಯ ನಂತರ ಸುಶೀಲ ಕುಮಾರ್ ಇನ್ನೊಂದು ಸಾಹಸಕ್ಕೆ ಹೊರಟ. ಬಂಗಾಲದಲ್ಲಿ ನದಿಯಾ ಎಂಬುದು ಒಂದು ಜಿಲ್ಲೆ. ಆ ಜಿಲ್ಲೆಯಲ್ಲಿ ಪ್ರಾಗಪುರ ಎಂಬ ಊರು. ಅದು ಹೊಳೆಯ ದಡದಲ್ಲಿ ಇದೆ. ೧೯೧೫ ರ ಏಪ್ರಿಲ್ ೨೮ ರಂದು ಸಂಜೆ ಎರಡು ದೋಣಿಗಳು ಬಂದವು. ಊರಿನಿಂದ ಸ್ವಲ್ಪದೂರ ಸಾಗಿದ ಬಳಿಕ ಅವು ನಿಂತವು. ಐದಾರು ತರುಣರು ಕೆಳಗಿಳಿದರು. ದೋಣಿಗಳನ್ನು ಮರಕ್ಕೆ ಕಟ್ಟಿ ಹಾಕಿದರು. ದಟ್ಟವಾಗಿ ಮರಗಿಡಗಳು ಹಾಗೂ ಪೊದೆಗಳು ಇದ್ದ ಜಾಗದಲ್ಲಿ ತಂಗಿದರು. ಅವರು ದೂರದ ಪ್ರಯಾಣದಿಂದ ಬಂದಂತೆ ಕಾಣುತ್ತಿತ್ತು. ಎಲ್ಲರೂ ದಣಿದಿದ್ದರು. ಅವರ ಮುಂದಾಳು ಸುಶೀಲ ಕುಮಾರ್.

ಪ್ರಾಗಪುರದಲ್ಲಿ ಏಪ್ರಿಲ್ ಮೂವತ್ತರಂದು ಒಂದು ದರೋಡೆ ನಡೆಯಿತು. ದರೋಡೆಗಾರರು ಸಿಕ್ಕಲಿಲ್ಲ. ಪುನಃ ಮೇ ೨ ರಂದು ಇನ್ನೊಂದು ದರೋಡೆ ಆಯಿತು. ಸುತ್ತಲಿನ ಹಳ್ಳಿಗರಿಗೆ ಈ ತರುಣರ ಮೇಲೆ ಸಂಶಯ ಬಂತು. ಅವರು ಇವರನ್ನು ಅಟ್ಟಿಸಿಕೊಂಡು ಬಂದರು. ಆಗ ತರುಣರು ಸರಸರನೆ ದೋಣಿ ಹತ್ತಿ ನದಿಯಲ್ಲಿ ಪಾರಾದರು. ಎಲ್ಲರಿಗೂ ಬಹಳ ಹಸಿವು, ಆಯಾಸ ಆಗಿತ್ತು. ಸ್ವಲ್ಪದೂರ ಸಾಗಿ, ಹೊಳೆಯ ಎದುರು ದಡ ಮುಟ್ಟಿದರು. ಹೊಲದಲ್ಲಿ ಒಂದು ದನದ ಕೊಟ್ಟಿಗೆ ಕಂಡಿತು. ಸುತ್ತಮುತ್ತ ಯಾರೂ ಇರಲಿಲ್ಲ. ಇವರು ಇಳಿದು ಒಳಗೆ ಹೋಗಿ ಒಲೆ ಹಚ್ಚಿ, ಅಡುಗೆ ಪ್ರಾರಂಭಿಸಿದರು. ಹೊಗೆ ಮೇಲೆದ್ದಾಗ ಅದು ದೂರದಲ್ಲಿದ್ದ ಒಬ್ಬ ವ್ಯಕ್ತಿಯ ಗಮನ ಸೆಳೆಯಿತು. ಅವನು ಅಲ್ಲಿಗೆ ಬಂದು ನೋಡಿದಾಗ ಕಣ್ಣಿಗೆ ಕಂಡವರು ಅಪರಿಚಿತ ಜನ.

“ನೀವು ಯಾರು? ಎಲ್ಲಿಂದ ಬಂದವರು?” ಎಂದ.

“ನೀನು ಯಾರು? ನಿನಗೆ ಇಲ್ಲೇನು ಕೆಲಸ? ಹೋಗುತ್ತೀಯೋ ಇಲ್ಲವೋ?” ಎಂದು ಇವರು ಜೋರು ಮಾಡಿದರು.

ಅವನು ಅಲ್ಲಿಂದ ಸದ್ದಿಲ್ಲದೆ ಜಾರಿಕೊಂಡ. ಆದರೆ ಈ ತರುಣರ ಬಗ್ಗೆ ಅವನಿಗೆ ಸಂಶಯ. ಸಮೀಪದಲ್ಲೇ ಕ್ಲೈಪುರ ಎಂಬ ಊರು. ಅವನು ಅಲ್ಲಿನ ಪೋಲೀಸ್ ಠಾಣೆಗೆ ಹೋಗಿ ದೂರು ಕೊಟ್ಟ. ಕೂಡಲೆ ಅಲ್ಲಿಂದ ಪೋಲೀಸರ ತಂಡ ಸರಸರನೆ ಹೊರಟಿತು.

ಅನಿರೀಕ್ಷಿತ ದುರಂತ

ಇತ್ತ ದನದ ಕೊಟ್ಟಿಗೆಯಲ್ಲಿ ಅಡುಗೆ ಅರ್ಧ ಆಗಿತ್ತು. ಅಷ್ಟರಲ್ಲಿ ಪೋಲೀಸರು ಬರುವ ಸುಳಿವು ಹತ್ತಿತು. ಇನ್ನು ಊಟಕ್ಕೆ ಎಡೆಯಲ್ಲಿ? ಯುವಕರು ದೋಣಿಯ ಕಡೆಗೆ ಧಾವಿಸಿದರು. ಅದನ್ನು ಕಂಡ ಪೋಲೀಸರು ಗುಂಡು ಹಾರಿಸತೊಡಗಿದರು. ಆಗ ಸುಶೀಲನು ನೀರಿನಲ್ಲಿ ನಿಂತು ಪೋಲೀಸರಿಗೆ ಗುಂಡಿನಿಂದಲೇ ಉತ್ತರ ಕೊಟ್ಟ. ಅಪಾಯದಿಂದ ತನ್ನ ಸಂಗಡಿಗರನ್ನು ಪಾರು ಮಾಡುವುದು ಅವನ ಉದ್ದೇಶ.

“ಎಲ್ಲರೂ ಬೇಗ ಹತ್ತಿಕೊಳ್ಳಿ. ನಾನು ಅವರನ್ನು ವಿಚಾರಿಸಿಕೊಳ್ಳುತ್ತೇನೆ” ಎಂದು ಗೆಳೆಯರಿಗೆ ಹೇಳಿದ.

ತರುಣರೆಲ್ಲ ದೋಣಿ ಹತ್ತಿಕೊಂಡರು. ತಮ್ಮ ಪಿಸ್ತೂಲುಗಳನ್ನು ತೆಗೆದು ಗುಂಡಿನ ಕಾಳಗಕ್ಕೆ ಸಿದ್ಧರಾದರು. ಅವರಿಗೆ ಅಷ್ಟು ಹೊತ್ತೂ ರಕ್ಷಣೆಗಾಗಿ ನಿಂತಿದ್ದ ಸುಶೀಲ ಕುಮಾರ್ ಇನ್ನೇನು ಅವರ ಜೊತೆ ಸೇರುವುದರಲ್ಲಿದ್ದ. ಅಷ್ಟರಲ್ಲಿ ದೋಣಿಯ ಮೇಲೆ ನಿಂತಿದ್ದ ಒಬ್ಬ ಸಹಕಾರಿಯ ಕಾಲು ಜಾರಿತು. ತಟ್ಟನೆ ಅವನ ಕೈಲಿದ್ದ ಪಿಸ್ತೂಲಿನಿಂದ ಅನಪೇಕ್ಷಿತವಾಗಿ ಗುಂಡು ಹಾರಿತು. ಆ ಗುಂಡು ದೋಣಿ ಹತ್ತಲು ಹೊರಟಿದ್ದ ಮುಂದಾಳು ಸುಶೀಲನಿಗೇ ಬಡಿಯಿತು. ಸಂಗಡಿಗರು ಗಾಬರಿಯಾದರು. ಬೇಗ ಕೈ ಚಾಚಿ ತಮ್ಮ ನೆಚ್ಚಿನ ನಾಯಕನನ್ನು ದೋಣಿಯ ಒಳಕ್ಕೆ ಎಳೆದುಕೊಂಡರು. ಅವನ ಚಿಕಿತ್ಸೆತೆ ಗಮನ ಕೊಡಲು ಸ್ವಲ್ಪವೂ ಅವಕಾಶ ಇರಲಿಲ್ಲ; ಅನುಕೂಲವೂ ಇರಲಿಲ್ಲ. ದಡದಿಂದ ಪೋಲೀಸರ ಗುಂಡಿನ ಆರ್ಭಟ ಹೆಚ್ಚಾಯಿತು. ಇವರೂ ಗುಂಡು ಹಾರಿಸುತ್ತಾ ದೋಣಿಗಳನ್ನು ಸಾಧ್ಯವಾದಷ್ಟೂ ವೇಗದಿಂದ ನಡೆಸಿದರು.

ಪೋಲೀಸರಿಂದ ಪಾರು

ಆ ವೇಳೆಗೆ ಪೋಲೀಸರಿಗಾಗಿ ಕೆಲವು ದೋಣಿಗಳು ಬಂದವು. ಅವರು ಕ್ರಾಂತಿಕಾರರ ತಂಡವನ್ನು ಹಿಂಬಾಲಿಸ ತೊಡಗಿದರು. ಮುಂದೆ ಏನಾಗುವುದೆಂದು ನೋಡಲು ದಡದಲ್ಲಿ ಸೇರಿದ್ದ ಜನರು ನದಿಯ ಪಕ್ಕದಲ್ಲೇ ಬೊಬ್ಬೆ ಹಾಕುತ್ತಾ ಓಡಲು ಆರಂಭಿಸಿದರು. ಅಷ್ಟರಲ್ಲಿ ಸಂಜೆ ಆಯಿತು. ಆಕಾಶದಲ್ಲಿ ಮೋಡಗಳು ಕವಿದುಕೊಂಡವು. ಕಟ್ಟಲು ದಟ್ಟವಾಯಿತು. ಸ್ವಲ್ಪ ಹೊತ್ತಿನಲ್ಲೆ ಭೀಕರ ಬಿರುಗಾಳಿ, ಹೊಯ್ದಾಡುವ ಅಲೆಗಳು, ಧಾರಾಕಾರ ಮಳೆ ಯುವಕರಿಗೆ ಭಾರಿ ಗಂಡಾಂತರದ ಪರಿಸ್ಥಿತಿ. ಆದರೆ ಅವರು ಎದೆಗೆಡಲಿಲ್ಲ. ವೀರರ ಸಾಹಸ ಪರೀಕ್ಷೆ ಆಗುವುದು ವಿಪತ್ತಿನ ಸಮಯದಲ್ಲೆ. ಕಷ್ಟನಷ್ಟಗಳು ಹೆಚ್ಚಿದಷ್ಟೂ ಅವರ ಕೆಚ್ಚು ಹೆಚ್ಚುತ್ತದೆ. ಹೃದಯ ಗಟ್ಟಿಯಾಗುತ್ತದೆ. ಜೀವದ ಹಂಗು ತೊರೆದು ಸ್ವಾತಂತ್ಯ್ರದ ಹೋರಾಟಕ್ಕೆ ಹೊರಟವರಿಗೆ ಎಲ್ಲಿಯ ಪ್ರಾಣಭಯ?

ಭಯ ಆದದ್ದು ಪೋಲೀಸರಿಗೆ. ಮಳೆಗಾಳಿಗೆ ಅವರು ತತ್ತರಿಸಿಹೋದರು. ಸದ್ಯ, ದಡ ಸೇರಿದರೆ ಸಾಕು ಎಂದು ಚಡಪಡಿಸಿದರು. ಅವರಿಗೆ ಜೀವ ಉಳಿಸಿಕೊಳ್ಳುವ ಯೋಚನೆಯಾಯಿತು. ಅವರಿಗೆ ಜೀವ ಉಳಿಸಿಕೊಳ್ಳುವ ಯೋಚನೆ ಯಾಯಿತು. ಕ್ರಾಂತಿವೀರರನ್ನು ಹಿಂಬಾಲಿಸಲು ಅವರಿಗೆ ಧೈರ್ಯ ಆಗಲಿಲ್ಲ.

ಕೊನೆಯ ಸಂದೇಶ

ಇತ್ತ ನಡುನೀರಿನಲ್ಲಿ ಎರಡು ದೋಣಿಗಳು ಏಳುತ್ತಾ ಬೀಳುತ್ತಾ ಸಾಗಿದ್ದವು. ಸುಶೀಲ ಕುಮಾರನ ದೇಹದಿಂದ ರಕ್ತ ಸೋರಿಹೋಗುತ್ತಿತ್ತು. ಸಾವು ಸಮೀಪಿಸುತ್ತಿತ್ತು. ನದಿಯ ಮೇಲೆ ಮಳೆ, ಬಿರುಗಾಳಿಯ ಸ್ವಚ್ಛಂದ ಆರ್ಭಟ, ಪ್ರವಾಹದ ರಭಸ, ಹುಚ್ಚೆದ್ದ ಅಲೆಗಳ ಹೊಯ್ದಾಟ. ಆ ಸಾಹಸಿಗಳು ಮಿತಿಮೀರಿ ಪ್ರಯತ್ನಿಸಿ ಕೊನೆಗೂ ಎರಡು ದೋಣಿಗಳನ್ನೂ ಆದಷ್ಟು ಹತ್ತಿರಕ್ಕೆ ತಂದರು. ಒಬ್ಬ ಸಹಕಾರಿ ತನ್ನ ದಿಟ್ಟ ನಾಯಕನ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡ.

“ಸುಶೀಲ್, ಈಗ ಹೇಗಿದ್ದೀಯೆ”?

ಸುಶೀಲನಿಗೂ ಕೊನೆಯುಸಿರು ಎಳೆಯುತ್ತಿತ್ತು. ಬಾಯಿ ಒಣಗುತ್ತಿತ್ತು. ಆದರೂ ಸ್ಪಷ್ಟವಾದ ದನಿಯಲ್ಲಿ ಹೇಳಿದ:

“ಇನ್ನು ಕೆಲವೇ ನಿಮಿಷಗಳಲ್ಲಿ ನನ್ನ ಪ್ರಾಣ ಹೋಗುತ್ತದೆ. ಇದು ದುಃಖಪಡುವ ಸಮಯ ಅಲ್ಲ. ಚಿಂತೆ ಹಚ್ಚಿಕೊಂಡು ಹೊತ್ತು ಕಳೆಯಬೇಡಿ. ಸತ್ತ ದೇಹವನ್ನು ನದಿಗೆ ಎಸೆದುಬಿಡಿ….”

ಗೆಳೆಯರು ಮೂಕರಾಗಿ ಕುಳಿತರು. ಆ ಕಗ್ಗತ್ತಿಲಿನಲ್ಲಿ ತಮ್ಮ ವೀರನ ಮುಖವೂ ಅವರಿಗೆ ಸರಿಯಾಗಿ ಕಾಣದು. ಪುನಃ ಅವನ ದನಿ ಕೇಳಿಸಿತು:

“ದೇಹವನ್ನು ಗಂಗೆಗೆ ಅರ್ಪಿಸಿಬಿಡಿ. ದೋಣಿಯ ಭಾರ ಕಡಿಮೆಯಾಗುತ್ತದೆ. ನೀವು ಬೇಗ ಪಾರಾಗಿ…. ಇನ್ನೂ ಒಂದು ಮಾತು. ನನ್ನ ದೇಹವನ್ನು ನೀರಿಗೆ ಹಾಕುವ ಮೊದಲು ತಲೆಯನ್ನು ಕತ್ತರಿಸಿಬಿಡಿ. ಒಂದು ವೇಳೆ ಪೋಲೀಸರಿಗೆ ದೇಹ ಸಿಕ್ಕಿದರೂ, ಗುರುತು ಹಿಡಿಯಲು ಸಾಧ್ಯ ಆಗುವುದಿಲ್ಲ. ಮೊಕದ್ದಮೆ ಹೂಡಲು ಸಾಕ್ಷಿ ಪುರಾವೆಗಳು ಸಿಕ್ಕುವುದಿಲ್ಲ.”

ಎರಡೇ ನಿಮಿಷಗಳಲ್ಲಿ ಸುಶೀಲನ ಪ್ರಾಣ ಕೊನೆಗೊಂಡಿತು. ಗೆಳೆಯರ ದುಃಖಕ್ಕೆ ಪಾರವೇ ಇಲ್ಲ. ಆದರೂ ಅವರು ತಮ್ಮ ನಾಯಕನ ಆದೇಶವನ್ನು ಮರೆಯಲಿಲ್ಲ. ತಮ್ಮ ಕಣ್ಣೀರು ಒರೆಸಿಕೊಂಡರು. ಬಿಕ್ಕಳಿಕೆ ನುಂಗಿಕೊಂಡರು. ಚೂರಿ ಹಿರಿದು ಶವದ ತಲೆಯನ್ನು ಬೇರೆ ಮಾಡಿ, ದೇಹವನ್ನು ನೀರಿಗೆ ಇಳಿಸಿದರು. ಎಷ್ಟೋ ದೂರ ಮುಂದೆ ಹೋದ ಮೇಲೆ ತಲೆಯನ್ನೂ ನದಿಗೇ ಕೊಟ್ಟು ಬಿಟ್ಟರು. ರಾತ್ರಿ ಕಳೆಯುವ ಮೊದಲೇ ಎಲ್ಲರೂ ದಡ ಹತ್ತಿ ಕತ್ತಲಲ್ಲಿ ಪಾರಾಗತೊಡಗಿದರು.

ಬೆಳಗಾಯಿತು. ನದಿ ಉದ್ದಕ್ಕೂ ಪೋಲೀಸರಿಂದ ಹುಡುಕಾಟ ಶುರುವಾಯಿತು. ಮೂರು ದಿನ ಅವರು ತಡಕಾಡಿದರು. ೧೯೧೫ ರ ಮೇ ೬ ರಂದು ಕ್ರಿಸ್ತೋಪುರ್ ಚುರ್ ಎಂಬ ಗ್ರಾಮದ ಬಳಿಗೆ ಒಬ್ಬ ಪೋಲಿಸ್ ಪೇದೆ ಹೋದ. ಅವನಿಗೆ ನದಿಯ ಕೆಸರಿನಲ್ಲಿ ಹೂತ ಒಂದು ಬೊಂಬು ಕಂಡಿತು. ಅದರ ಪಕ್ಕದಲ್ಲೆ ನೀರಿನ ಮೇಲು ಭಾಗದಲ್ಲಿ ದೋಣಿಯ ಅಂಚು ಕಾಣುತ್ತಿತ್ತು. ಅವನು ಓಡಿಹೋಗಿ ಅಧಿಕಾರಿಗಳಿಗೆ ತಿಳಿಸಿದ. ಬಲೆಗಳನ್ನು ಇಳಿಬಿಟ್ಟು ಆ ಜಾಗವನ್ನೆಲ್ಲ ಶೋಧಿಸಲಾಯಿತು. ಅವರಿಗೆ ಸಿಕ್ಕಿದ್ದು ಒಂದು ಖಾಲಿ ಲೋಟಾ ಮತ್ತು ಕೆಲವು ಬಟ್ಟೆ ಚೂರುಗಳು ಅಷ್ಟೆ.

ವೀರನಿಗೆ ವಂದನೆ

ಭಾರತ ಸ್ವಾತಂತ್ಯ್ರಕ್ಕಾಗಿ ಬಂಗಾಲದಲ್ಲಿ ಸಾವಿರಾರು ಬಾಲಕರು, ತರುಣರು ಸಾಹಸದ ಕಾರ್ಯಗಳನ್ನು ಮಾಡಿದರು. ಅಪಾರ ಕಷ್ಟನಷ್ಟಗಳನ್ನು ಸಹಿಸಿದರು. ಪ್ರಾಣವನ್ನೇ ಬಲಿಗೊಟ್ಟರು. ಅಂತಹ ವೀರಕುಮಾರರ ಪೈಕಿ ಸುಶೀಲ ಕುಮಾರ ಸೇನ್ ಸಹ ಒಬ್ಬ. ಬಾಲ್ಯದಲ್ಲೆ ಹೋರಾಟದ ಕಣಕ್ಕೆ ಕಾಲಿಟ್ಟ ಅಸಂಖ್ಯ ಎಳೆಯರ ಪ್ರತಿನಿಧಿ ಅವನು. ಕೊನೆಯ ಉಸಿರಿನವರೆಗೂ ಅವನು ದೇಶದ ವಿಷಯವಾಗಿ ಯೋಚಿಸಿದನೇ ಹೊರತು, ತನ್ನ ಸ್ವಂತ ನೋವು ಸಾವುಗಳ ಬಗ್ಗೆ ಚಿಂತಿಸಲಿಲ್ಲ. ಆ ವೀರನ ಆತ್ಮಕ್ಕೆ ಅನಂತ ವಂದನೆಗಳು.

 

"ನನ್ನ ದೇಹವನ್ನು ನೀರಿಗೆ ಹಾಕುವ ಮೊದಲು ತಲೆಯನ್ನು ಕತ್ತಿರಿಸಿಬಿಡಿ"