“ಶಸ್ತ್ರಚಿಕಿತ್ಸೆ ಮಾಡುವ ವೈದ್ಯ ಕೊಳೆ ಇಲ್ಲದ ಸ್ವಚ್ಛವಾದ ಮತ್ತು ಬಿಗಿಯಾದ ಉಡುಪನ್ನು ಧರಿಸಬೇಕು. ತಲೆಯ ಕೂದಲು ಮತ್ತು ಉಗುರುಗಳನ್ನು ಮೋಟಾಗಿ ಕತ್ತರಿಸಿಕೊಂಡಿರಬೇಕು. ಶಸ್ತ್ರಚಿಕಿತ್ಸೆ ಮಾಡುವಾಗ ಅವನಿಗೆ ಭಯವಿರಬಾರದು, ಧೈರ್ಯವಾಗಿ, ಆತ್ಮವಿಶ್ವಾಸದಿಂದ ಚಿಕಿತ್ಸೆ ನಡೆಸಬೇಕು. ತಾನು ಮಾಡುವ ಶಸ್ತ್ರಚಿಕಿತ್ಸೆಯ ವಿಷಯ ಸಂಪೂರ್ಣವಾಗಿ ತಿಳಿಯದಿದ್ದರೆ ಶಸ್ತ್ರಚಿಕಿತ್ಸೆ ಮಾಡಲೇಬಾರದು. ಶಸ್ತ್ರಗಳನ್ನು ನೋಡಿ ಭಯಪಡಬಾರದು. ಅಗತ್ಯವಾದ ಶಸ್ತ್ರಗಳು ಹರಿತವಾಗಿವೆ ಎಂದು ಖಚಿತಮಾಡಿಕೊಳ್ಳಬೇಕು. ಅವು ಕಯಗೆ ನಿಲುಕುವಂತೆ ಹತ್ತಿರ ಇಟ್ಟುಕೊಳ್ಳಬೇಕು. ಶಸ್ತ್ರಚಿಕಿತ್ಸೆ ಮಾಡುವವನಿಗೆ ವ್ರಣ ಮತ್ತು ಶಲ್ಯಗಳ ಸ್ಥಾನಭೇದಗಳು ಚೆನ್ನಾಗಿ ಗೊತ್ತಿರಬೇಕು. ಶಸ್ತ್ರಚಿಕಿತ್ಸೆಯನ್ನು ಆದಷ್ಟು ಬೇಗ ಮಾಡಿ ಮುಗಿಸಬೇಕು. ಹುಣ್ಣುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆರೆದಾಗ ರೋಗಿಯು ರಕ್ತ, ಕೀವು ಮೊದಲಾದವನ್ನು ನೋಡದಂತೆ ಎಚ್ಚರಿಕೆ ವಹಿಸಬೇಕು.”

ಇದನ್ನು ಓದುತ್ತಿದ್ದರೆ ಆಧುನಿಕ ಯುಗದಲ್ಲಿ ಶಸ್ತ್ರ ಚಿಕಿತ್ಸೆಯನ್ನು ‘ಆಪರೇಷನ್‌’ನಲ್ಲಿ ಚೆನ್ನಾಗಿ ಬಲ್ಲ ಹಿರಿಯ ಉಪಾಧ್ಯಾಯರು ವೈದ್ಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ ಎನ್ನಿಸುವುದಿಲ್ಲವೆ?

ಈ ಮಾತುಗಳನ್ನು ಬರೆದವನು ಆಧುನಿಕ ಕಾಲದ ಶಸ್ತ್ರವೈದ್ಯ ನಿಪುಣನಲ್ಲ. ಪ್ರಾಚೀನ ಭಾರತ೫ದ ಶಸ್ತ್ರವೈದ್ಯ ನಿಪುಣ ಸುಶ್ರುತಾಚಾರ್ಯರು. ಈತನ ಕಾಲ ನಿಖರವಾಗಿ ತಿಳಿಯದು. ಕ್ರಿಸ್ತಪೂರ್ವ ೨೫೬೦ ರಿಂದ ೨೪೮೭ ಎಂದು ಹೇಳುತ್ತಾರೆ. ಎಂದರೆ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಿದ್ದರು ಎಂದಾಯಿತು. (ಎರಡು ಸಾವಿರದ ನಾಲ್ಕು ನೂರು ವರ್ಷಗಳು ಹಿಂದಿದ್ದರು ಎಂದೂ ಕೆಲವರ ಅಭಿಪ್ರಾಯ.) ಪ್ರಾಚೀನ ಕಾಲಕ್ಕೆ ಸೇರಿದವರು ಎನ್ನುವುದರಲ್ಲಿ ಅನುಮಾನವಿಲ್ಲ. ಇವರು ಆಯುರ್ವೇದ ಪದ್ಧತಿಯ ವೈದ್ಯರು.

ಶಸ್ತ್ರಚಿಕಿತ್ಸೆ ಮಾಡುವವರ ತಿಳಿವಳಿಕೆ ಮತ್ತು ಕೌಶಲವನ್ನು ನೋಡಿ ಬೆರಗಾಗುತ್ತೇವೆ. ಅವರಿಂದ ಜನರಿಗಾಗುವ ಸೇವೆ ಅಮೂಲ್ಯವಾದದ್ದು. ನೋವನ್ನು ಹೋಗಿಸುತ್ತಾರೆ, ಪ್ರಾಣ ಉಳಿಸುತ್ತಾರೆ. ಈಚೆಗೆ ಶಸ್ತ್ರಚಿಕಿತ್ಸೆ ಅಗಾಧವಾಗಿ ಬೆಳೆದಿದೆ ಎಂದು ಹೇಳುತ್ತೇವೆ. ಅಪಘಾತದಲ್ಲಿ ಅಥವಾ ಕಾಯಿಲೆಯಿಂದ ಕೈ ಅಥವಾ ಕಾಲು ಕೊಳೆತಿದ್ದರೆ, ತೀರ ರೋಗಗ್ರಸ್ಥವಾಗಿದ್ದರೆ ಆ ಅಂಗವನ್ನು ಕೊಯ್ದು ಹಾಕಿ ರೋಗಿಯನ್ನು ಉಳಿಸುತ್ತಾರೆ. ಹುಣ್ಣುಗಳಿಂದ ಕೀವು, ಕೆಟ್ಟ ರಕ್ತ ತೆಗೆದುಹಾಕುತ್ತಾರೆ. ಮೂತ್ರಕೋಶದಲ್ಲಿ ಕಲ್ಲಿನಂತಹ ಗಟ್ಟಿ ಪದಾರ್ಥ ಕೂಡಿಕೊಳ್ಳುತ್ತದೆ. ಇದಕ್ಕೆ ಅಶ್ಮರ ಎನ್ನುತ್ತಾರೆ. ಶಸ್ತ್ರಚಿಕಿತ್ಸೆ ಮಾಡಿ ಇದನ್ನು ತೆಗೆದುಹಾಕಬೇಕು. ಇಲ್ಲವಾದರೆ ರೋಗಿ ಸಾಯಬಹುದು. ಈಚೆಗೆ ‘ಪ್ಲ್ಯಾಸ್ಟಿಕ್‌ ಸರ್ಜರಿ’ ಬೆಳೆಯುತ್ತಿದೆ. ಯಾವುದಾದರೂ ಅಂಗ-ಉದಾಹರಣೆಗೆ, ಮೂಗು-ಚೆನ್ನಾಗಿಲ್ಲ ಎನ್ನಿಸಿದರೆ ಶಸ್ತ್ರಚಿಕಿತ್ಸೆ ಮಾಡಿ ಅದರ ಆಕಾರ ಚೆಂದವಾಗಿ ಕಾಣುವಂತೆ ಮಾಡುತ್ತಾರೆ. ‘ಹರ್ನಿಯ’ ಎನ್ನುವುದು ತುಂಬ ಅಪಾಯಕಾರಿಯಾದ ರೋಗ. ಶಸ್ತ್ರಚಿಕಿತ್ಸೆ ಮಾಡಿ ರೋಗಿಯನ್ನು ಉಳಿಸುತ್ತಾರೆ. ಎಷ್ಟೋ ರೋಗಗಳಿಗೆ ಔಷಧ ಕೊಟ್ಟು ಪ್ರಯೋಜನವಿಲ್ಲ. ಶಸ್ತ್ರಚಿಕಿತ್ಸೆ ಮಾಡಿದರೆ ಮಾತ್ರ ರೋಗಿ ಉಳಿದಾನು.

ಶಸ್ತ್ರಚಿಕಿತ್ಸೆ ಎಷ್ಟು ಬೆಳೆದಿದೆ ಎಂದು ಅಚ್ಚರಿಪಡುತ್ತೇವೆ ಅಲ್ಲವೆ?
ಸುಶ್ರುತರು ಈ ಎಲ್ಲ ಶಸ್ತ್ರಚಿಕಿತ್ಸೆಗಳನ್ನೂ ಮಾಡುತ್ತಿದ್ದರು ಎಂದರೆ ಇನ್ನೂ ಆಶ್ಚರ್ಯದ ಸಂಗತಿ ಅಲ್ಲವೆ!

ಸುಶ್ರುತರ ಬಾಲ್ಯ ಮತ್ತು ವಿದ್ಯಾಭ್ಯಾಸ

ಸುಶ್ರುತ ಗಾಂಧಾರ ದೇಶದ ವಿಶ್ವಾಮಿತ್ರರ ಮಗನೆಂದು ಗ್ರಂಥಗಳಿಂದ ತಿಳಿದುಬರುತ್ತದೆ. ವಿಶ್ವಾಮಿತ್ರನು ಗಾಂಧಾರ ದೇಶದ ರಾಜನೋ ಅಥವಾ ಋಷಿಯೋ ಇದ್ದಿರಬಹುದು. ಗಾಂಧಾರ ದೇಶವು ಇಂದಿನ ಆಫ್ಘಾನಿಸ್ತಾನವೆಂದು ಕೆಲವು ಚರಿತ್ರಕಾರರು ತಿಳಿಸಿದ್ದಾರೆ. ಇಂದಿಗೂ ಸಹ ಅಲ್ಲಿಯ ಬುಡಕಟ್ಟಿನ ಜನರಲ್ಲಿ ಅನೇಕರ ಹೆಸರುಗಳು, ಸುಶ್ರುತ್‌, ಸುರಾಟ್‌, ಸೌರಾಟಿ, ಸುಹ್ರಾದಿ ಇತ್ಯಾದಿಯಾಗಿವೆ. ಇವೆಲ್ಲ ‘ಸುಶ್ರುತ’ ಎನ್ನುವುದರ ಬೇರೆ ರೂಪಗಳು.

ಅಂದಿನ ವಿಶ್ವವಿದ್ಯಾಲಯ ಕೇಂದ್ರಗಳಲ್ಲಿ ಸ್ನಾತಕೋತ್ತರ ಚಿಕಿತ್ಸಾ ಪ್ರಾವೀಣ್ಯ ಪಡೆಯಲು ವಿದ್ಯಾರ್ಥಿಯು ಸಾಂಖ್ಯದರ್ಶನ, ಸಾಹಿತ್ಯ, ತರ್ಕ, ವೇದಾಂತ, ನ್ಯಾಯ ಮುಂತಾದ ಶಾಸ್ತ್ರಗಳ ಪ್ರಾವೀಣ್ಯತೆಯನ್ನು ಪಡೆದಿರಬೇಕಿತ್ತು. ಇಪ್ಪತ್ತು ವರ್ಷಗಳಾದರೂ ವಯಸ್ಸಾಗಿರಬೇಕಿತ್ತು. ಅವರು ಆರೋಗ್ಯವಂತರಾಗಿ ದೃಢಕಾಯರಾಗಿ ಇರಬೇಕಿತ್ತು. ಅವರ ಮನಸ್ಸು ಆರೋಗ್ಯಕರವಾಗಿರಬೇಕಿತ್ತು.

ಸುಶ್ರುತನು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಂದೆಯ ಬಳಿಯೇ ಮುಗಿಸಿದ. ಅವರ ಅಪ್ಪಣೆಯಂತೆ ಆಯುರ್ವೇದ ಪ್ರೌಢಾಭ್ಯಾಸವನ್ನು ಅದರಲ್ಲೂ ಚಿಕಿತ್ಸೆಗಳಲ್ಲಿ ಪ್ರಾಮುಖ್ಯವಾದ, ಶೀಘ್ರ ಫಲಪ್ರದಾಯಿಯಾದ ಶಲ್ಯ ಶಾಲಾಕ್ಯ ತಂತ್ರಗಳನ್ನು ಅಭ್ಯಸಿಸಲು ಧನ್ವಂತರೀ ಸ್ವರೂಪರಾದ ಕಾಶೀರಾಜ ದಿವೋದಾಸರ ಸನ್ನಿಧಿಗೆ ಬಂದ. ಅವರು ಬಹುದ ದೊಡ್ಡ ‘ಸರ್ಜನ್‌’-ಶಸ್ತ್ರವೈದ್ಯರು. ಸುಶ್ರುತ ತಾನು ಬಂದ ಉದ್ದೇಶವನ್ನು ನಿವೇದಿಸಿದನು. ಅವರು ಆತನಿಗೆ ಶಸ್ತ್ರಶಾಸ್ತ್ರ ಬೋಧಿಸಿದ ಗುರುಗಳು.

ಸುಶ್ರುತನ ವ್ಯಕ್ತಿತ್ವ

ಸುಶ್ರುತನ ವ್ಯಕ್ತಿತ್ವದ ವಿಚಾರದಲ್ಲಿ ನಮಗೆ ತಿಳಿದಿರುವುದು ಇಷ್ಟು, ಆತ ಆಜಾನುಬಾಹುವಾಗಿದ್ದು ಉದ್ದನೆಯ ಬೆರಳುಗಳು, ಉದ್ದನೆಯ ತೆಳುವಾದ ನಾಲಿಗೆ, ಸಮರ್ಥವಾದ ತುಟಿ, ಹೊಳಪಿನ ದಂತಪಂಕ್ತಿ, ಎತ್ತರವಾದ ಮುಖ, ತೇಜಃಪುಂಜವಾದ ಕಣ್ಣುಗಳು, ಸುಂದರವಾದ ಮೂಗು. ಒಟ್ಟಿನಲ್ಲಿ ನೋಡುವುದಕ್ಕೆ ಸಂತೋಷವಾಗುವ ರೂಪ. ನೋಡುತ್ತಲೆ ಗೌರವ ಮೂಡುತ್ತಿತ್ತು. ಅವನ ಮಾತು ಮೃದು, ನಯ. ಅವನು ಎಷ್ಟು ಕಷ್ಟವನ್ನಾದರೂ ಸಹಿಸಬಲ್ಲ. ಆಯಾಸವಿಲ್ಲದೆ ಬಹು ಹೊತ್ತು ಕೆಲಸ ಮಾಡಬಲ್ಲ. ಕೆಲಸ ಎಂದರೆ ಉತ್ಸಾಹ. ಮಾತಿನಲ್ಲಿ, ನಡತೆಯಲ್ಲಿ ವಿನಯವಂತ . ಅವನಿಗೆ ಅಸಾಧಾರಣ ಜ್ಞಾಪಕಶಕ್ತಿ.

ವೈದ್ಯ ಹೀಗಿದ್ದರೇ ರೋಗಿಗಳಿಗೆ ಎಷ್ಟೋ ಧೈರ್ಯಬರುತ್ತದೆ, ಅಲ್ಲವೆ? ಧೈರ್ಯದಿಂದ, ವಿಶ್ವಾಸದಿಂದ ಅವನ ಬಳಿಗೆ ಹೋಗುತ್ತಾರೆ.

ಭಗವಾನ್‌ ದಿವೋದಾಸರಲ್ಲಿ ಆಯುರ್ವೇದ ಮತ್ತು ಶಲ್ಯ ಶಾಲಾಕ್ಯ ಚಿಕಿತ್ಸೆಗಳಲ್ಲಿ ಶಿಕ್ಷಣ ಪಡೆಯಲು ಬೇರೆ ಬೇರೆ ದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಅವರುಗಳಲ್ಲಿ ಔಷಧೇನವ ಔತರಣ, ಔರಭ್ಯ, ಪೌಷ್ಕಲಾವತ, ಕರವೀರ ಮತ್ತು ಗೋಪುರರಕ್ಷಿತ ಇವರು ಸುಶ್ರುತನ ಮುಖ್ಯ ಸಹಪಾಠಿಗಳು.

ಕರುಣಾಳುವಾದ ಭಗವಾನ್‌ ದಿವೋದಾಸರು ವಿದ್ಯಾಭ್ಯಾಸ ಕಾಲದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳನ್ನು ವಿವರಿಸುತ್ತಾ, “ನೀವು ವಿದ್ಯಾರ್ಥಿಗಳು. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ಸುಳ್ಳು ಹೇಳುವುದು, ಆಲಸ್ಯ, ಅಪಹಾಸ್ಯ ಮಾಡುವುದು , ಚಾಡಿಕೋರತನ ಇವುಗಳನ್ನು ಬಿಡಬೇಕು. ತಲೆಯ ಕೂದಲನ್ನು ಮೋಟಾಗಿ ಕತ್ತರಿಸಿಕೊಳ್ಳಬೇಕು. ಸದಾ ಶುಚಿಯಾಗಿರಬೇಕು. ನಿಮ್ಮ ಬಟ್ಟೆ ಶುಭ್ರವಾಗಿರಬೇಕು. ಶುಭ್ರವಸ್ತ್ರವನ್ನು ಉಟ್ಟು, ಬ್ರಹ್ಮಚರ್ಯವನ್ನು ಕಾಪಾಡಿಕೊಂಡು ಗುರುದೇವರಲ್ಲಿ ಭಕ್ತಿಯಿನ್ನಿಡಬೇಕು” ಎಂದು ಬೋಧಿಸುತ್ತಿದ್ದರು.

“ನೀವು ಎಲ್ಲಿ ವಾಸಮಾಡಬೇಕು, ಎಲ್ಲೆಲ್ಲಿ ಓಡಾಡಬಹುದು ಎನ್ನುವುದನ್ನು ನಾನು ಹೇಳುತ್ತೇನೆ. ನೀವು ಎಂತಹ ಹಾಸಿಗೆಯಲ್ಲಿ ಎಲ್ಲಿ ಮಲಗಬೇಕು ಎಂದೂ ಹೇಳುತ್ತೇನೆ. ಇಂತಹ ಆಹಾರ ತೆಗೆದುಕೊಳ್ಳಬೇಕೆಂದು ನಿಯಮ ಮಾಡುತ್ತೇನೆ. ಎಂತಹ ಉಡುಪು ಧರಿಸಬೇಕು ಎಂದು ತಿಳಿಸುತ್ತೇನೆ. ಈ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು . ಗುರುಹಿರಿಯರಿಗೆ ಸಂತೋಷವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು. ಇದಕ್ಕೆ ತಪ್ಪಿದರೆ ನೀವು ಕಲಿಯುವ ವಿದ್ಯೆ ಸಾರ್ಥಕವಾಗುವುದಿಲ್ಲ”  ಎಂದು ಹೇಳಿದರು.

ಎಷ್ಟು ಕಟ್ಟುನಿಟ್ಟಿನ ಗುರುಗಳು ಎನ್ನಿಸುತ್ತದೆ,  ಅಲ್ಲವೇ?

ಸುಶ್ರುತರ ಗುರು ದಿವೋದಾಸರು ಶಿಷ್ಯರ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಿನಿಂದ ಇದ್ದರು, ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ನಿರೀಕ್ಷಿಸುತ್ತಿದ್ದರು ಎನ್ನಿಸುತ್ತದೆ ಅಲ್ಲವೆ?

ಆ ಕಟ್ಟುನಿಟ್ಟದ ಗುರುಗಳು ತಮ್ಮ ವಿಷಯದಲ್ಲಿ ಶಿಷ್ಯರಿಗೆ ಹೇಳುತ್ತಿದ್ದುದನ್ನು ಕೇಳಿ:

“ಶಿಷ್ಯರಾದ ನೀವು ಸನ್ಮಾರ್ಗ ಪ್ರವರ್ತಕರಾಗಿ ನಾನು ತಿಳಿಸಿದ ಎಲ್ಲಾ ನಿಯಮವನ್ನೂ ಪಾಲಿಸಿದ್ದರೂ ಸಹ ಗುರುವಾದ ನಾನು ನಿಮಗೆ ಉಚಿತ ವಿದ್ಯಾಭ್ಯಾಸ ಮಾಡಿಸದೆ ವಂಚನೆ ಮಾಡಿದರೆ ನನ್ನ ವಿದ್ಯಾ ಫಲವು ಪಾಪಿಷ್ಟವಾಗಿ ಕ್ಷೀಣಿಸುತ್ತದೆ.”

ಎಂಥ ಪ್ರಾಮಾಣಿಕತೆ!

ಭಗವಾನ್ದೀರೋದಾಸರು

ಈ ವಿಶಿಷ್ಟ ಗುರುಗಳು ಯಾರು?

ಅವರು ಶಕರಾಜನ ವಂಶಸ್ಥರಾಗಿ ಅಬ್ಜ ದೇವತೆಯ ವರಪ್ರಸಾದದಿಂದ ಕಾಶೀ ರಾಜರ ಪರಂಪರೆಯಲ್ಲಿ  ಜನ್ಮ ತಾಳಿದವರು ಎಂದು ಹೇಳುತ್ತಾರೆ. ದಿವೋದಾಸರು ತಮ್ಮ ವಿಚಾರವಾಗಿ ಹೀಗೆ ಹೇಳಿದ್ದಾರೆ. “ಮುದಿತನ, ರೋಗರುಜಿನ ಮರಣಗಳನ್ನು ನಿವಾರಿಸಿದ ಧನ್ವಂತರಿಯಾದ ನಾನು ಶಲ್ಯ ಚಿಕಿತ್ಸಾ ಪ್ರಧಾನವಾದ ಆಯುರ್ವೇದಶಾಸ್ತ್ರವನ್ನು ಉಪದೇಶ ಮಾಡಲು ಪುನಃ ಕಾಶೀರಾಜನ ಮಗನಾಗಿ ಜನಿಸಿ ಈ ಲೋಕಕ್ಕೆ ಬಂದಿದ್ದೇನೆ” ಎಂದಿದ್ದಾರೆ. ಭಗವಾನ್‌ ಧನ್ವಂತರೀ ಸ್ವರೂಪಿಯಾದ ಭಗವಾನ್‌ ದಿವೋಧಾಸರಲ್ಲಿ ಸುಶ್ರುತ ಮುಂತಾದವರು, ಶಲ್ಯತಂತ್ರ (ಕಂಠದ ಕೆಳಗೆ ಇರುವ ದೇಹದಲ್ಲಿ ಉತ್ಪನ್ನವಾಗುವ ವ್ರಣಗಳ ಶಸ್ತ್ರಚಿಕಿತ್ಸೆಯನ್ನು ನೀಡುವುದು) ಶಾಲಾಕ್ಯ (ಕತ್ತಿನ ಬುಡದಿಂದ ಮೇಲೆ, ಕಿವಿ, ಮೂಗು, ಕಣ್ಣು, ಬಾಯಿ ಮೊದಲಾದ ಅವಯವಗಳಲ್ಲಿ ಉಂಟಾಗುವ ರೋಗಗಳನ್ನು ಶಲಾಕಾ ಯಂತ್ರದಿಂದ ನಿವಾರಿಸುವ ವಿಧಾನ) ಇವುಗಳನ್ನು ಕಲಿತರು.

ಸುಶ್ರುತ ಸಂಹಿತೆ

ಸುಶ್ರುತರು ಬರೆದ ಈ ಗ್ರಂಥ ಅನೇಕ ವಿಷಯಗಳನ್ನೊಳಗೊಂಡು, ವಿಸ್ತಾರವಾಗಿದ್ದು ಇತರರು ಬರೆದ ಗ್ರಂಥಗಳಿಗಿಂತ ಉತ್ತಮೋತ್ತಮವೆಂದು ಮಾನ್ಯತೆ ಪಡೆದಿದೆ. ಆಚಾರ್ಯ ಸುಶ್ರುತರು ಪುನರ್ ನಾಸಾಂಗ ರಚನೆ ಅಂಗೋಸ್ಥಿ ವಿಚ್ಛೇದನ, ಗುಲ್ಮೋನ್ಮೂಲನ, ಗರ್ಭಾಶಯದಿಂದ ಮೃತಗರ್ಭ ಅಥವಾ ಶಿಶುವನ್ನು ಜೀವಂತವಾಗಿ ಹೊರಗೆ ತೆಗೆಯುವುದು, ಮೂತ್ರಾಶಯದಲ್ಲಿನ ಆಶ್ಮರಿ, ಭಗಂಧರ, ರಕ್ತಾರ್ಶಸ್‌, ಅಂತ್ರವೃದ್ಧಿ ಮುಂತಾದ ರೋಗಗಳ ಮೇಲೆ ನಡೆಸಿದ ಪ್ರಯೋಗ ಮತ್ತು ಶಸ್ತ್ರಚಿಕಿತ್ಸೆಗಳನ್ನು ಇಂದಿಗೂ ಪಾಶ್ಚಾತ್ಯ ಶಸ್ತ್ರಶಾಸ್ತ್ರಜ್ಞರು ಹೊಗಳಿದ್ದಾರೆ.

“ಈ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು”

(ಪುನರ್ ನಾಸಾಂಗರಚನೆ ಎಂದರೆ ಮೂಗಿನ ಆಕಾರವನ್ನು ತಿದ್ದುವುದು. ಅಂಗೋಸ್ಠಿ ವಿಚ್ಛೇದನ ಎಂದರೆ ಮೂಳೆಗಳು ಮತ್ತು ಅಂಗಾಂಗಳನ್ನು ಕತ್ತರಿಸಿ ತೆಗೆಯುವುದು. ಗುಲ್ಮೋನ್ಮೂಲನ ಎಂದರೆ ಗೆಡ್ಡೆಗಳನ್ನು ತೆಗೆಯುವುದು. ಭಗಂಧರ ಎನ್ನುವುದು ತುಂಬ ನೋವನ್ನುಂಟುಮಾಡುವ ಒಂದು ಕಾಯಿಲೆ. ರಕ್ತಾರ್ಶಸ್‌ ಎಂದರೆ ರಕ್ತಹೊರಬೀಳುವ ಮೂಲವ್ಯಾಧಿ ಎನ್ನುವ ನೋವಿನ ಕಾಯಿಲೆ.. ಅಂತ್ರವೃದ್ಧಿಗೆ ಇಂಗ್ಲಿಷಿನಲ್ಲಿ ‘ಹರ್ನಿಯ’ ಎನ್ನುತ್ತಾರೆ. ಒಂದು ಅಂಗದ ಭಾಗ ಯಾವುದಾದರೂ ಕಾರಣದಿಂದ ತನ್ನ ಸ್ಥಾನದಿಂದ ಆಚೆಗೆ ಚಾಚಿಕೊಂಡಿರುವುದು ಅಂತ್ರವೃದ್ಧಿ.)

ಸುಶ್ರುತರ ವಿದ್ಯಾಪ್ರೌಢಿಮೆಯನ್ನು ಚೀನಾದ ವಿಜ್ಞಾನಿ ತುಚ್ಛಿಯವರು ತಾವು ಸಂಸ್ಕೃತದಲ್ಲಿ ರಚಿಸಿದ ಭೇಷಜ ಗ್ರಂಥದಲ್ಲಿ “ಸುವೈದ್ಯನು, ಭೇಷಜ ಕುಶಲನಾಗಿ, ಮಿತ್ರನಾಗಿ, ಸುಶ್ರುತನಂತೆ ಸುಶಿಕ್ಷಿತನಾಗಿ” ಇರಬೇಕೆಂದು ಹೊಗಳಿದ್ದಾರೆ. ಸುಶ್ರುತನನ್ನು ಭೈಷಜ ವಿದ್ಯೆಯ ಪರಮಾಚಾರ್ಯನೆಂದು ಪ್ರಶಂಶಿಸಿದ್ದಾರೆ.

ನಾಗಾರ್ಜುನನೂ ಸಹ ಸುಶ್ರುತನನ್ನು ತನ್ನ ಪೂಜ್ಯ ಆಚಾರ್ಯನೆಂದು ನಮಿಸಿದ್ದಾನೆ.

ಬೋಟಾಂಗಿನಿಯಲ್ಲಿ ಸಿಕ್ಕಿರುವ ತಾಳೆಗರಿಗಳಲ್ಲಿ ಸುಶ್ರುತನ ಹೆಸರು ಮತ್ತು ಅವನಿಂದ ತಯಾರಿಸಲ್ಪಟ್ಟ ಔಷಧಿಗಳ ವಿವರಣೆ ಇದೆ.

ಸುಶ್ರುತ ಸಂಹಿತೆಯು ಅರಬ್ಬಿ, ಲ್ಯಾಟಿನ್‌, ಇಂಗ್ಲಿಷ್‌, ಫ್ರೆಂಚ್‌ ಮುಂತಾದ ಭಾಷೆಗಳಿಗೆ ತರ್ಜುಮೆಯಾಗಿ ವಿಜ್ಞಾನಿಗಳ ಮಾನ್ಯತೆ ಪಡೆದಿದೆ. ಆಧುನಿಕ ಶಸ್ತ್ರಚಿಕಿತ್ಸಕರಿಗೂ ಮಾರ್ಗದರ್ಶಕವಾಗಿದೆ. ಔಷಧಸೇನ ಮುಂತಾದವರು ಬರೆದ ಗ್ರಂಥಗಳು ಕ್ರಮೇಣ ಕಳೆದುಹೋದವು. ಸುಶ್ರುತ ಸಂಹಿತೆಯು ಮಾತ್ರ ನಮಗೆ ದೊರಕಿದೆ.

ಅವರ ಸಂಹಿತೆಯು ಅವರ ಕಾಲದಲ್ಲಿ ರೋಗ ಚಿಕಿತ್ಸೆ ಹೇಗೆ ನಡೆಯುತ್ತಿತ್ತು, ಜನರ ಜೀವನ ಹೇಗೆ ಸಾಗುತ್ತಿತ್ತು ಎಂಬ ವಿಷಯಗಳನ್ನು ಕುರಿತು ಬಹು ಸ್ವಾರಸ್ಯವಾದ ವಿಷಯಗಳನ್ನು ತಿಳಿಸುತ್ತದೆ.

ಸುಶ್ರುತನ ಕಾಲದ ಯಂತ್ರಗಳು ಶಸ್ತ್ರಗಳು

ಸುಮಾರು ಐದು ಸಹಸ್ರ ವರ್ಷಗಳ ಹಿಂದೆ ಭಾರತೀಯರು ಉತ್ತಮ ಆಯುಧಗಳನ್ನು ನಿರ್ಮಿಸುವ ಪ್ರಾಜ್ಞತೆ ಪಡೆದಿದ್ದರು. ಸುಶ್ರುತನ ಕಾಲದಲ್ಲಿ ಚಿಕಿತ್ಸೆಗಾಗಿ ಒಟ್ಟು ಒಂದು ನೂರ ಒಂದು ಯಂತ್ರಗಳು ಉಪಯೋಗದಲ್ಲಿದ್ದುವು. ಶರೀರದಲ್ಲಿನ ಶಲ್ಯಗಳನ್ನು ಹೊರತೆಗೆಯಲು ಪಶುಪಕ್ಷಿ ಮುಖಾಕಾರವಾಗಿರುವ ತುಕ್ಕು ಹಿಡಿಯದಂತಿರುವ ಸುವರ್ಣಾದಿ ಐದು ಲೋಹಗಳಿಂದ ನಿರ್ಮಾಣವಾದ ಯಂತ್ರಗಳಿದ್ದುವು. ಇದಲ್ಲದೆ ಬಿದಿರು, ದಾರ, ಕೊಂಬು, ನರಗಳು, ಕಡೆಗೆ ಹುಲ್ಲನ್ನೂ (ದರ್ಭೆ) ಯಂತ್ರಕ್ಕಾಗಿ ಉಪಯೋಗಿಸುತ್ತಿದ್ದರು.

ಕತ್ತರಿಸುವುದಕ್ಕೆ ಕೊಯ್ಯುವುದಕ್ಕೆ ಇಪ್ಪತ್ತು ಬಗೆಯ ಶಸ್ತ್ರಗಳನ್ನು ಬಳಸುತ್ತಿದ್ದರು. ಇವುಗಳಲ್ಲಿ ಮಂಡಲಾಗ್ರ, ಕರಪತ್ರ, ವೃದ್ಧಿಪತ್ರ, ನಖಶಸ್ತ್ರ, ಮುದ್ರಿಕಾ, ಉತ್ಪಲ ಪತ್ರಿಕಾ, ಅರ್ಧಧಾರಾ, ಸೂಚಿ, ಕಶಪತ್ರ ಇವು ಕೆಲವು. ಈಗ ಶಸ್ತ್ರಕ್ರಿಯೆಯಲ್ಲಿ ಉಪಯೋಗಿಸುವ ಅನೇಕ ಶಸ್ತ್ರಗಳು ಸುಶ್ರುತನ ಕಾಲದ ಶಸ್ತ್ರಗಳನ್ನೇ ಹೋಲುತ್ತವೆ. ಅವರ ಕಾಲದ ಇನ್ನು ಕೆಲವು ಶಸ್ತ್ರಗಳು ಈಗ ಕಾಣಸಿಕ್ಕುವುದಿಲ್ಲ.

ಬುದ್ಧಿವಂತನಾದ ವೈದ್ಯನು ಶಸ್ತ್ರಕರ್ಮ ಮಾಡುವಾಗ ಸ್ವಬುದ್ಧಿಯಿಂದ ಯೋಚಿಸಿ ಯುಕ್ತ ಶಸ್ತ್ರಗಳನ್ನು ಪ್ರಯೋಗಿಸಬೇಕು. ಶರೀರದಲ್ಲಿ ಪ್ರಕಾರಗಳು ಅಸಂಖ್ಯ. ಇವಕ್ಕೆ ತಕ್ಕಂತೆ ಯೋಗ್ಯವಾದ ಹೊಸ ಯಂತ್ರಗಳನ್ನು ಕಂಡುಹಿಡಿಯಬೇಕು ಎನ್ನುವುದು ಸುಶ್ರುತರ ಅಭಿಪ್ರಾಯ.

ಸುಶ್ರುತ ಪ್ರಯೋಗಶಾಲೆ

ಸುಶ್ರುತನು ಮತ್ತು ಅವನ ಸಂಗಡಿಗರು  ತಾವು ಸೇರಿದ ದೇಶಗಳನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡರು . ಸುಶ್ರುತನ ಶಸ್ತ್ರಚಿಕಿತ್ಸಾಲಯವು ಸಿಂಧೂ ಪ್ರಾಂತದ ತಕ್ಷಶಿಲಾ ಪರಿಸರದಲ್ಲಿತ್ತೆಂದು ಊಹಿಸಲಾಗಿದೆ. ಸುಶ್ರುತನು, ತಾನು ಗುರುವಿನಿಂದ ಕಲಿತ ಮತ್ತು ತಾನೇ ಚಿಂತಿಸಿ ನಿರ್ಧರಿಸಿದ ವಿಷಯಗಳನ್ನು ಸಂಹಿತೆಯ ರೂಪದಲ್ಲಿ ಬರೆದು ಅನೇಕ ಶಿಷ್ಯರಿಗೆ ಬೋಧಿಸಿದನು. ಇವರಲ್ಲನೇಕರು ಉತ್ತರಭಾರತದ ಅನೇಕ ರಾಜರ ಆಶ್ರಯದಲ್ಲಿ ನೆಲಸಿ ಹಲವು ಗ್ರಂಥಗಳನ್ನು ರಚಿಸಿದರು. ರಾಜರು ತಮ್ಮ ಸೈನಿಕರ ಮತ್ತು ಪ್ರಜೆಗಳ ಆರೋಗ್ಯ ರಕ್ಷಣೆಗೆ ವೈದ್ಯರನ್ನು ನೇಮಿಸುತ್ತಿದ್ದರು.

ಶಸ್ತ್ರಚಿಕಿತ್ಸೆಯನ್ನು ಮಾಡುವ ಸ್ಥಳ ಮತ್ತು ಕಟ್ಟದ ಹೇಗಿರಬೇಕೆಂಬುದನ್ನು ಸುಶ್ರುತಾಚಾರ್ಯರು ವಿವರಿಸಿದ್ದಾರೆ.

ರೋಗಿಯ ಮನಸ್ಸು ಶಾಂತವಾಗಿರಬೇಕು. ಅದನ್ನು ಕಲಕುವ ಯಾವ ಕಾರಣಕ್ಕೂ ಅವಕಾಶ ಇರಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ಸುಶ್ರುತರು ಕೆಲವು ನಿಯಮಗಳನ್ನು ಹೇಳುತ್ತಾರೆ. ಕಟ್ಟಡವು ಪ್ರಶಾಂತವಾದ ಪರಿಸರದಲ್ಲಿರಬೇಕು. ಕೇಳಲು ಕರ್ಕಶವಾದ ಶಬ್ದಗಳು ಇರಬಾರದು. ಋತುಗಳ ಹವೆಯನ್ನು ನಿಯೊಂತ್ರಿಸುವಂತ  ಎತ್ತರವಾದ ಕಿಟಕಿ ಬಾಗಿಲುಗಳನ್ನು ಹೊಂದಿದ್ದು ಎತ್ತರವಾದ ಛಾವಣಿ ಹೊಂದಿರಬೇಕು. ನೆಲ ಮತ್ತು ಗೋಡೆಗಳು ಸ್ವಚ್ಛವಾಗಿರಬೇಕು. ಗೋಡೆಗಳ ಮೇಲೆ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುವಂತಹ ದೇವರ ಇಲ್ಲವೆ ವನಸ್ಪತಿಗಳ ಚಿತ್ರಗಳಿರಬೇಕು.

ಶಸ್ತ್ರಕರ್ಮವನ್ನು ಮಾಡಲು ಮೊದಲೇ ಸಿದ್ಧತೆಗಳನ್ನು ಹೇಗೆ ಮಾಡಿಕೊಳ್ಳಬೇಕೆಂಬುದನ್ನು ವಿವರವಾಗಿ ಸೂಚಿಸಿದ್ದಾರೆ. ಯಂತ್ರ, ಶಸ್ತ್ರಗಳು, ಕ್ಷಾರ , ಅಗ್ಗಿಷ್ಟಿಕೆ, ಸಲಾಕೆಗಳು, ಶೃಂಗಯಂತ್ರ, ಸೋರೆಬುರುಡೆ, ನೇರಳೆ ಹಣ್ಣಿನ ಮುಖಭಾಗದಂತೆ ಇರುವ ಬತ್ತಿಗಳು, ರಕ್ತವನ್ನು ದೇಹದಿಂದ ತೆಗೆಯಲು ಜಿಗಣೆಗಳು, ಹತ್ತಿಯ ಉಂಡೆಗಳಲು, ವ್ರಣಸ್ರಾವ ಮಾಡಲು ಶುಭ್ರವಾದ, ಸುತ್ತಲೂ ಹೊಲಿದ ಬಟ್ಟೆಯ ತುಂಡುಗಳು, ವ್ರಣ ಬಂಧನ ಮಾಡಲು ದಪ್ಪನಾದ ಮತ್ತು ಉದ್ದನೆಯ ಬಿಳಿಯ ಅಥವಾ ಹಳದಿ ಬಟ್ಟೆಯ ಸುರುಳಿಗಳು, ಗಟ್ಟಿಯಾಗಿ ತುಂಡಾಗದಿರುವಂತಹ ದಾರದ ಉಂಡೆ ಮತ್ತು ವ್ರಣಹಾರೀ ಎಲೆಗಳು, ಶುದ್ಧ ಜೇನುತುಪ್ಪ, ತುಪ್ಪ, ಮೇದಸ್ಸು  (ಕೊಬ್ಬು), ನವಿಲು ಉಡ ಪಾರಿವಾಳ ಇವುಗಳ ಕೊಬ್ಬು , ಹಾಲು, ಸಿದ್ಧಪಡಿಸಿದ ತೈಲಗಳು, ತಣ್ಣೀರು ಮತ್ತು ಬಿಸಿನೀರು, ನೀರು ತುಂಬುವ ಪಾತ್ರೆಗಳು, ಹಾಲಿನಲ್ಲಿ ಕದಡಿ ಗಟ್ಟಿಯಾದ ಹಿಟ್ಟುಗಳು, ಕಷಾಯಗಳು, ವ್ರಣಗಳ ಮೇಲೆ ಮತ್ತು ಸುತ್ತಲಿನ ಭಾಗದ ಮೇಲೆ ಹಚ್ಚಲು ಲೇಪಗಳು, ತಣ್ಣೀರು ಮತ್ತು ಬಿಸಿನೀರನ್ನು ತುಂಬಿದ ಹಂಡೆಗಳು, ಗಂಡೂಷ (ಬಾಯಿ ಮುಕ್ಕಳಿಸಲು)ಕ್ಕಾಗಿ ಬೇಕಾದ ಲೋಟ, ಚಂಬು, ಸಣ್ಣಮೂತಿ ಇರುವ ಹೂಜಿ, ಮೆತ್ತನೆಯ ಹಾಸಿಗೆ, ಬೆಚ್ಚನೆಯ ಹೊದಿಕೆ ಮುಂತಾದ ಸಾಮಾನುಗಳನ್ನು ಅಣಿಮಾಡಿಕೊಂಡಿರಬೇಕು ಎನ್ನುತ್ತಾರೆ ಸುಶ್ರುತಾಚಾರ್ಯರು.

ಶಸ್ತ್ರಕ್ರಿಯೆ ಮಾಡುವ ಜಾಗದಲ್ಲಿ ಹಿತಕರವಾದ ಮತ್ತು ಗಾಳಿಯನ್ನು  ಶುದ್ಧಿಮಾಡುವ ಧೂಪಗಳನ್ನು ಹಾಕಬೇಕು. ರೋಗಿಯ ಮನಸ್ಸನ್ನು ಉಲ್ಲಾಸಗೊಳಿಸುವಂತೆ ಸಂಗೀತವನ್ನೂ ಏರ್ಪಡಿಸಬೇಕು.

ಶಸ್ತ್ರಚಿಕಿತ್ಸೆ ಮಾಡುವ ವೈದ್ಯನಿಗೆ ಸಹಾಯ ಮಾಡಲು ಇತರ ವೈದ್ಯರಿರಬೇಕು. ಅವರು ಮೃದು ಸ್ವಭಾವದವರಾಗಿರಬೇಕು. ತಮ್ಮ ಕೆಲಸದಲ್ಲಿ ಶ್ರದ್ಧೆ ಇರಬೇಕು. ರೋಗಿಗಳಿಗೆ ಸೇವೆ ಮಾಡಬೇಕೆಂಬ ಮನೋಧರ್ಮ ಇರಬೇಕು. ಅವರು ಸ್ವತಃ ಆರೋಗ್ಯವಂತರೂ ದೃಢಕಾಯರೂ ಆಗಿರಬೇಕು,

ಶಸ್ತ್ರಚಿಕಿತ್ಸೆಗೆ ತೊಡಗುವ ಚಿಕಿತ್ಸಕ (ಧನ್ವಂತರಿ) ಪ್ರಾರ್ಥನಾದಿಗಳನ್ನು ಮುಗಿಸಿ, ಶುದ್ಧವಾದ ಮತ್ತು ಬಿಗಿಯಾದ ಉಡುಪು ಧರಿಸಬೇಕು. ಪಾದರಕ್ಷೆಗಳನ್ನು ಧರಿಸಿರಬೇಕು. ತಲೆಯ ಕೂದಲು ಮತ್ತು ಉಗುರುಗಳನ್ನು ಮೋಟಾಗಿ ಕತ್ತರಿಸಿಕೊಂಡಿರಬೇಕು. ಈಶಾನ್ಯ ಬಾಗಿಲಿನಿಂದ ಶಸ್ತ್ರಾಗಾರವನ್ನು ಪ್ರವೇಶಿಸಬೇಕು. ಶಸ್ತ್ರಪ್ರಯೋಗ ಮಾಡುವಾಗ ಅವನಿಗೆ ಭಯವಿರಬಾರದು. ಹಸ್ತಕೌಶಲ ಇರಬೇಕು, ತಾನು ಮಾಡುವ ಶಸ್ತ್ರಚಿಕಿತ್ಸೆಯ ವಿಷಯ ಅವನಿಗೆ ಚೆನ್ನಾಗಿ ತಿಳಿದಿರಬೇಕು. ವ್ರಣ ಮತ್ತು ಶಲ್ಯಗಳ ಸ್ಥಾನಭೇದಗಳನ್ನು ಚೆನ್ನಾಗಿ ತಿಳಿದುಕೊಂಡಿರಬೇಕು. ಹರಿತವಾದ ಮತ್ತು ಉಪಯುಕ್ತ ಶಸ್ತ್ರಗಳನ್ನು ಕೈಗೆ ನಿಲುಕುವಂತೆ ಇಟ್ಟುಕೊಳ್ಳಬೇಕು. ಇಂತಹ ಚಿಕಿತ್ಸಕನು ದಕ್ಷವಾಗಿ ಚಿಕಿತ್ಸೆ ಮಾಡಬಲ್ಲನು. ಶಸ್ತ್ರಕ್ರಿಯೆಯನ್ನು ಸಾಧ್ಯವಾದಷ್ಟು ಜಾಗ್ರತೆಮಾಡಿ ಮುಗಿಸಿಬಿಡಬೇಕು. ಇದರಿಂದ ರೋಗಿಗೆ ಹೆಚ್ಚು ಆಯಾಸವುಂಟಾಗುವುದಿಲ್ಲ. ಶುದ್ಧ ಮತ್ತು ಹರಿತವಾದ ಶಸ್ತ್ರಗಳನ್ನು ಉಪಯೋಗಿಸುವುದರಿಂದ ರೋಗಿಗೆ ಹೆಚ್ಚು ನೋವುಂಟಾಗುವುದಿಲ್ಲ. ಅಲ್ಲದೆ ವ್ರಣಭೇದಾದಿಗಳಲ್ಲಿ (ಹುಣ್ಣುಗಳನ್ನು ತೆರೆದಾಗ) ರಕ್ತ, ಕೀವು ಇವುಗಳನ್ನು ರೋಗಿಯು ನೋಡದಂತೆ ಎಚ್ಚರವಹಿಸಬೇಕು.

ಶಸ್ತ್ರವೈದ್ಯ ಪ್ರವೀಣ (ಸುಶ್ರುತರು ಶಸ್ತ್ರವೈದ್ಯ ನಡೆಸುತ್ತಿರುವುದು)

ರೋಗಿಗಳಿಗೆ ಗಮನ, ಆರೈಕೆ

 

ರೋಗಿಗಳಿಗೆ ಸಕಾಲಕ್ಕೆ ಆಹಾರಾದಿಗಳನ್ನು ಕೊಟ್ಟು ಉಪಚರಿಸಲು ಶಸ್ತ್ರಚಿಕಿತ್ಸಕರಿಗೆ ಸಹಾಯಕರಾಗಿ ಪರಿಚಾರಕರನ್ನು ನೇಮಿಸಿಕೊಳ್ಳಬೇಕು. ಈ ಪರಿಚಾರಕರು  ರೋಗಿಯ ಸ್ಥಿತಿಯನ್ನು ಆಗಿಂದಾಗ್ಗೆ ಚಿಕಿತ್ಸಕರಿಗೆ ವರದಿ ಮಾಡುತ್ತಿರಬೇಕು.

ಬಾವು, ಕೀವು ತುಂಬಿದ ವ್ರಣಗಳು, ಇಂತಹವುಗಳನ್ನು  ಛೇದಿಸುವಾಗ ರೋಗಿಗೆ ಲಘು ಆಹಾರ ಕೊಟ್ಟು, ಆತನನ್ನು ಪೂರ್ವಾಭಿಮುಖವಾಗಿ ಕೂಡಿಸಿ ವೈದ್ಯರು ಪಶ್ಚಿಮಾಭಿಮುಖರಾಗಿ ಶಸ್ತ್ರಕ್ರಿಯೆ ಮಾಡಬೇಕು.

ಮೂಢಗರ್ಭೋದರ (ಗರ್ಭಾಶಯದಲ್ಲಿ ಬೆಳೆದ ವ್ರಣ), ಮೂಲವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು, ಭಗಂದರ, ಮತ್ತು ಕಣ್ಣು, ಕಿವಿ, ಮೂಗುಗಳ ರೋಗಗಳಿಗೆ ಶಸ್ತ್ರಕ್ರಿಯೆ ಮಾಡುವಾಗ ರೋಗಿಗೆ ಆಹಾರ ಕೊಡಬಾರದು. ಶಸ್ತ್ರಕ್ರಿಯೆ ತೃಪ್ತಿಕರವಾಗಿ ನಡೆದ ನಂತರ ರೋಗಿಯನ್ನು ವಿಶಾಲವಾದ, ಶಾಂತವಾಗಿರುವ ಮತ್ತು ಹೆಚ್ಚು ವಾಯು ಸಂಚಾರವಿಲ್ಲದ ರುಗ್ಣಾಲಯಕ್ಕೆ ವರ್ಗಾಯಿಸಬೇಕು. ಮೆತ್ತಗಿರುವ ಹಾಸಿಗೆಯಲ್ಲಿ ಮಲಗಿಸಬೇಕು. ಔಷಧ ಮತ್ತು ಲಘು ಆಹಾರವನ್ನು ಅವಶ್ಯಕ ಕಾಲದಲ್ಲಿ ಕೊಡಬೇಕು. ವ್ರಣರೋಗಿಗೆ ಹಗಲು ನಿದ್ರೆ ಮಾಡಲು ಅವಕಾಶ ಕೊಡಬಾರದು.

ಹೀಗೆಂದು ಶಸ್ತ್ರಕ್ರಿಯೆ ಮಾಡುವ ಮೊದಲಿನ ಮತ್ತು ಅನಂತರದ ವಿಧಾನಗಳನ್ನು ಸುಶ್ರುತಾಚಾರ್ಯರು ವಿವರಿಸಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡುವ ಚಿಕಿತ್ಸಾಲಯದಲ್ಲಿ ಅದಕ್ಕೆ ಅವಶ್ಯಕವಾದ ಸಾಮಗ್ರಿಗಳೆಲ್ಲಕವೂ ತಕ್ಷಣ ದೊರೆಯುವಂತೆ ಇರಬೇಕು. ಅದಕ್ಕಾಗಿ, ರೋಗಿಗಳ ಅವಶ್ಯಕತೆಗೆ ಅನುಗುಣವಗಿ ಕೊಡುವ ಆಹಾರ ಮತ್ತು ಔಷಧಿ ಸಾಮಗ್ರಿಗಳನ್ನು, ಮತ್ತು ವನಸ್ಪತಿಗಳನ್ನು ಚಿಕಿತ್ಸಾಲಯದ ಉದ್ಯಾನದಲ್ಲೇ ಬೆಳಸಬೇಕು ಎಂದು ಹೇಳುತ್ತಾರೆ.

ಸುಶ್ರುತರ ಕಾಲದಲ್ಲಿ ವೈದ್ಯಕ್ಕೆ ಸಂಬಂಧಪಟ್ಟಂತಹ ಜನಜೀವನ

ಭಾರತದ ಉತ್ತರಭಾಗಕ್ಕೆ ಆರ್ಯಾವರ್ತವೆಂದು ಹೆಸರು. ಪವಿತ್ರ ಗಂಗೆಯ ಪೂರ್ವಭಾಗಗಳೆಲ್ಲಾ ತಪೋವನಗಳಿಂದಲೂ, ವಿಜ್ಞಾನಿಗಳಾದ ತಪಸ್ವಿಗಳಿಂದಲೂ ನಿಬಿಡವಾಗಿತ್ತು. ಜನತೆಗೆ ತಮ್ಮ ವೃತ್ತಿಗನುಸಾರವಾದ ವಿದ್ಯೆ ಕಲಿಯಲು ಅವಕಾಶವಿತ್ತು. ರಾಜರುಗಳ ಆಸ್ಥಾನದಲ್ಲಿ ಶಸ್ತ್ರಚಿಕಿತ್ಸಕರಿಗೆ ಪ್ರತ್ಯೇಕ ಬಹುಮಾನ್ಯ ಸ್ಥಾನವಿತ್ತು. ಶಸ್ತ್ರಚಿಕಿತ್ಸಕರ ಸೇವೆ ಸಾಮಾನ್ಯ ಜನತೆಗೂ ಲಭಿಸುವಂತೆ ಅವರನ್ನು  ಗ್ರಾಮಾಂತರ ಪ್ರದೇಶಗಳಲ್ಲಿ ನೆಲಸುವಂತೆ ಪ್ರೋತ್ಸಾಹಿಸುವ ವ್ಯವಸ್ಥೆಯಿತ್ತು. ಅವರ ಜೀವನಕ್ಕೆ ಮತ್ತು ವೃತ್ತಿಗೆ ಅವಶ್ಯಕವಾದ ಅನುಕೂಲ ಕಲ್ಪಿಸಿಕೊಡುವ ಹೊಣೆಯ ಅಂಶ ಗ್ರಾಮಸ್ಥರ ಮೇಲೂ ಇದ್ದಿತು. ರೋಗ ನಿವಾರಣೆಗೆ ಬೇಕಾದ ಮುಖ್ಯ ಔಷಧಗಳನ್ನು ರಾಜಧಾನಿಯಲ್ಲಿ ರಾಜವೈದ್ಯರು ಸಿದ್ಧಪಡಿಸಿ ಗ್ರಾಮಾಂತರಗಳಿಗೂ ಕಳುಹಿಸುತ್ತಿದ್ದರು. ಗ್ರಾಮಗಳಲ್ಲಿ ನೆಲಸಿದ ವೈದ್ಯರು ಗ್ರಾಮ ಪರಿಸರದಲ್ಲಿ ಬೆಳೆಯುವ ಮೂಲಿಕೆಗಳನ್ನು ಸಂಗ್ರಹಿಸಿ ಔಷಧಿಗಳನ್ನು ತಯಾರಿಸುತ್ತಿದ್ದರು. ಇದರೊಂದಿಗೆ ಮೂಲಿಕೆಗಳ ಗುಣವೀರ್ಯ ವಿಪಾಕಗಳನ್ನು ಪರಿಶೀಲಿಸಿ ಬರೆದಿಡುತ್ತಿದ್ದರು. ಪ್ರಾಣಿ ಪಕ್ಷಿಗಳ ಹಾಲು, ಮಾಂಸ, ಮೂಳೆ ಮುಂತಾದ ಅಂಗಗಳ ಔಷಧೋಪಯುಕ್ತ ಗುಣಗಳೂ ಇವರ ವಿಮರ್ಶೆಗೊಳಪಟ್ಟಿತ್ತು. ಆಗಾಗ್ಗೆ ವೈದ್ಯವಿದ್ಯಾಪ್ರವೀಣರೂ, ಋಷಿಪುಂಗವರೂ, ಶರದೃತುವಿನಲ್ಲಿ ಸಭೆ ಸೇರಿ ಸಂಗ್ರಹಿಸಿದ ಮೂಲಿಕೆ ಮತ್ತು ಇತರೆ ಔಷಧೋಪಯುಕ್ತ ವಸ್ತುಗಳನ್ನು ಪ್ರದರ್ಶಿಸುತ್ತಿದ್ದರು. ಗ್ರಾಮಾಂತರ ವೈದ್ಯರ ಮಕ್ಕಳು ಮನೆಯಲ್ಲೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ರಾಜಬೊಕ್ಕಸದ ನೆರವಿನಿಂದ ಆಸುಪಾಸಿನ ವಿದ್ಯಾಕೇಂದ್ರಗಳಲ್ಲಿ ಮತ್ತು ಪ್ರಖ್ಯಾತ ಮತ್ತು ಸನ್ಮಾನಿತ ವೈದ್ಯರಲ್ಲಿ ಕರ್ಮಪದಾಭ್ಯಾಸಕ್ಕೆ ಅನುವು ದೊರೆಯುತ್ತಿತ್ತು. ವಿದ್ಯಾಭ್ಯಾಸ ಮುಗಿದ ನಂತರ ರಾಜನ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ವಿದ್ವತ್ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಆಯುರ್ವೇಧಶಾಸ್ತ್ರ ಸಾಮರ್ಥ್ಯವನ್ನು ತೋರ್ಪಡಿಸಿ ತೇರ್ಗಡೆಯಾಗಬೇಕಿತ್ತು. ಹಾಗೆ ತೇರ್ಗಡೆಹೊಂದಿ ಸಮರ್ಥರೆಂದು ಸಭೆ ಮಾನ್ಯಮಾಡಿದವರಿಗೆ ರಾಜನು ಸನ್ನದನ್ನೂ ಮಾಸಾಶನವನ್ನೂ ಕೊಟ್ಟು ಸತ್ಕರಿಸುತ್ತಿದ್ದನು.

ವೈದ್ಯರಿಗೆ ರಾಜರೂ ಜನಸಾಮಾನ್ಯರೂ ತುಂಬಾ ಗೌರವ ಕೊಡುತ್ತಿದ್ದರು. ಎಲ್ಲ ಅನುಕೂಲಗಳನ್ನೂ ಮಾಡಿಕೊಡುತ್ತಿದ್ದರು. ಜನರ ಹಿತಕ್ಕಾಗಿ ಕೆಲಸ ಮಾಡಬೇಕು, ತಮ್ಮ ಕರ್ತವ್ಯದ ಹೊಣೆಯನ್ನು ತಿಳಿದುಕೊಂಡಿರಬೇಕು ಎಂದೂ ನಿರೀಕ್ಷಿಸುತ್ತಿದ್ದರು. ವೈದ್ಯನು ರೋಗಿಗೆ ಸರಿಯಾಗಿ ಔಷಧ ಕೊಟ್ಟು ಅಗತ್ಯವಾದರೆ ಶಸ್ತ್ರಚಿಕಿತ್ಸೆ ಮಾಡಿ, ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗಿತ್ತು. ಹೀಗೆ ಮಾಡದೆ ಹೋದರೆ, ತನ್ನ ಕೆಲಸದಲ್ಲಿ ಉದಾಸೀನ ಮಾಡಿದರೆ, ಹಣವನ್ನೆ ಮುಖ್ಯ ಎಂದು ಭಾವಿಸಿ ಹಣಕ್ಕೆ ಆಸೆಪಟ್ಟು, ರೋಗಿಯನ್ನು ಸರಿಯಾಗಿ ನೋಡಿಕೊಳ್ಳದೆ ಹೋದರೆ, ತನ್ನ ಎಚ್ಚರಗೇಡಿನಿಂದ ರೋಗಿಯ ಸ್ಥಿತಿ ಕೆಡುವುದಕ್ಕೆ ಅಥವಾ ಅವನು ಸಾಯುವುದಕ್ಕೆ ಕಾರಣನಾದರೆ, ಅಂತಹ ವೈದಯನಿಗೆ ಕ್ರೂರ ಶಿಕ್ಷೆ ವಿಧಿಸಲಾಗುತ್ತಿತ್ತು. ರಾಜ ಅವನ ಸನ್ನದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ. ಇದರಿಂದ ಆತ ಮತ್ತೆ ವೈದ್ಯನಾಗಿ ವೃತ್ತಿಯನ್ನು ಮುಂದುವರೆಸುವುದು ಸಾಧ್ಯವಾಗುತ್ತಿರಲಿಲ್ಲ. ವೈದ್ಯನ ಕರ್ತವ್ಯಲೋಪವನ್ನು ಅವನಿಗೆ ಕೊಟ್ಟ ಶಿಕ್ಷೆಯನ್ನು ಬಹಿರಂಗವಾಗಿ ರಾಜನ ಸೇವಕರು ಘೋಷಿಸುತ್ತಿದ್ದರು.

ರಾಜನು ಜನಗಳ ಆರೋಗ್ಯ ಸಾಧಕವಾದ ಆಹಾರ ವಿಹಾರ, ಔಷಧೋಪಚಾರಗಳನ್ನು ನಿರೂಪಿಸುವ ಕಾಯಚಿಕಿತ್ಸಕರನ್ನು ನೇಮಿಸುತ್ತಿದ್ದ. ಸಯನ್ಯದ ಆರೋಗ್ಯ ರಕ್ಷಣೆ, ಆಗಾಗ್ಗೆ ಸಂಭವಿಸುತ್ತಿದ್ದ ಯುದ್ಧಗಳಲ್ಲಿ ಗಾಯಗೊಂಡ ಸೈನಿಕರಿಗೆ ಮುರಿದ ಮೂಳೆಗಳ ಬಂಧನ, ರಕ್ತದಾನ ಮುಂತಾದ ಶಸ್ತ್ರಚಿಕಿತ್ಸೆ ಮಾಡಲು ಧನ್ವಂತರಿ ವಿಭಾಗವನ್ನು ತೆರೆಯಲು ಎಲ್ಲ ನೆರವು ನೀಡುತ್ತಿದ್ದ. ವೈದ್ಯರು ಚಿಕಿತ್ಸೆಗೆ ಬೇಕಾದ ಎಲ್ಲಾ ಯಂತ್ರ, ಶಸ್ತ್ರಗಳನ್ನೂ ವಿಪುಲವಾಗಿ ಸಂಗ್ರಹಿಸುತ್ತಿದ್ದರು. ಮುಖ್ಯಧನ್ವಂತರಿಗೆ ಅನೇಕ ಜನ ಪ್ರವೀಣರ ಸಹಾಯ ನೀಡಲಾಗುತ್ತಿತ್ತು.

ಜನತೆಯ ಆರೋಗ್ಯ

ಸುಶ್ರುತನು ಹೇಳುವಂತೆ ಜನತೆಯು ಪೂರ್ಣಾರೋಗ್ಯ ಹೊಂದಿ ರೋಗಗಳು ಬಾರದಂತೆ ದೇಹವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಇದಕ್ಕಾಗಿ ಹುಟ್ಟಿನಿಂದಲೇ ಮಕ್ಕಳ ಆರೋಗ್ಯದ ಕಡೆ ಗಮನವಿರಬೇಕು. ಆದ್ದರಿಂದಲೇ ಪ್ರಸೂತಿನಿಲಯದಿಂದಲೇ ಮಕ್ಕಳ ಆರೋಗ್ಯ ರಕ್ಷಣೇಯ ವಿಧಿ ವಿಧಾನಗಳನ್ನು ನಿರೂಪಿಸಿರುತ್ತಾನೆ.

ಪ್ರಸೂತಿಗಾರವು ಹವಾನಿಯಂತ್ರಿತ ಮತ್ತು ಕೀಟ ಪರಿಹಾರಕ ಧೂಪಗಳಿಂದ ಸಂಸ್ಕರಿಸಲ್ಪಟ್ಟಿರಬೇಕು. ಸುತ್ತಲೂ ಗೋಮಯ ಸಂಸ್ಕರಣವಾಗಬೇಕು, ಎಂದರೆ ಸಗಣಿಯಿಂದ ಶುದ್ಧಗೊಳಿಸಬೇಕು. ಹೆಚ್ಚು ಬೆಳಕು ಕೊಡದ ದೀಪದ (ಹರಳೆಣ್ಣೆ) ಬೆಳಕಿರಬೇಕು. ಮಗುವನ್ನು ಬಾಣಂತಿಯನ್ನು ಬೆಚ್ಚಗಿಡಲು ಪ್ರಸೂತಿಗಾರದಲ್ಲಿ ಯಾವಾಗಲೂ ಅಗ್ಗಿಷ್ಟಿಕೆ ಉರಿಯುತ್ತಿರಬೇಕು. ಸೊಳ್ಳೆ ಇತ್ಯಾದಿ ಕೀಟದ ಕಾಟ ತಪ್ಪಿಸಲು ಬಗಿನಿ, ಯಗಚಿ, ಬೇವು, ಸಣ್ಣ ಈಚಲು ಇಂತಹ ಕೀಟನಿವಾರಕ ಗಿಡದ ಕೊಂಬೆಗಳನ್ನು ನೇತುಹಾಕಿರಬೇಕು.

ಮಗು ಹುಟ್ಟಿದ ಕೂಡಲೇ ಅದಕ್ಕೆ ಸ್ನಾನ ಮಾಡಿಸಿ ಮೆತ್ತಗೆ ಮಡಿಸಿದ ಹಾಸಿಗೆಯಲ್ಲಿ ಮಲಗಿಸಬೇಕು. ಮಗುವಿನ ಮೆದುಳಿನ ಆರೋಗ್ಯವನ್ನೂ ಶಕ್ತಿಯನ್ನೂ ಬೆಳಸಲು ಎಣ್ಣೆಯಿಂದ ತೊಯ್ಸಿದ ಹತ್ತಿಯನ್ನು ನೆತ್ತಿಗೆ ಇಡಬೇಕು.

ತಾಯಿಯ ಹಾಲು ಸಾಲದಿದ್ದರೆ ಅಥವಾ ಶುದ್ಧವಾಗಿ ಇಲ್ಲದಿದ್ದರೆ ಮಗುವಿಗೆ ಆರೋಗ್ಯಕರವಾದ ಹಾಲನ್ನು ಕೊಡಲು ದಾದಿಯರನ್ನು ನೇಮಿಸಿಕೊಳ್ಳುತ್ತಿದ್ದರು. ಅಂತಹ ದಾದಿಯರಿಗೆ ಧಾತ್ರಿ ಎಂದು ಹೆಸರು.

ಧಾತ್ರಿಯನ್ನು ನೇಮಿಸಿಕೊಳ್ಳುವಾಗ ಆಕೆಯ ಹಾಲು ಆರೋಗ್ಯಕರವಾಗಿರಬೇಕೆಂದು ಹಿಂದೆಯೇ ಹೇಳಿದೆಯಷ್ಟೆ. ಆರೋಗ್ಯಕರವಾದ ಹಾಲನ್ನುಳ್ಳ ಧಾತ್ರಿಯ ಲಕ್ಷಣಗಳನ್ನೂ ಸಹ ನಿರೂಪಿಸಿದ್ದಾರೆ.

ಆಕೆಯ ಹಾಲಿನ ಪರೀಕ್ಷೆಯನ್ನೂ ಮಾಡಬೇಕೆಂದು ಹೇಳಿ ಹಾಲಿನ ಲಕ್ಷಣಗಳನ್ನೂ ನಿರೂಪಿಸಿದ್ದಾರೆ.

ಧಾತ್ರಿಯ ಲಕ್ಷಣ

ಮಗುವಿಗೆ ಹಾಲು ಕೊಡಲು ನೇಮಿಸಿಕೊಳ್ಳುವ ದಾದಿಯು ಕುರೂಪಿಯಾಗಿರಬಾರದು ದುಃಖಿತಳಾಗಿರಬಾರದು. ಕೆಟ್ಟ ಹೆಂಗಸಾಗಿರಬಾರದು. ಹಾಲು ಕುಡಿಯುವ ವಯಸ್ಸಿನ ಅವಳ ಮಕ್ಕಳು ಬದುಕಿರಬೇಕು. ಹೆಚ್ಚು ಹಾಲುಳ್ಳವಳಾಗಿರಬೇಕು.

ಮಕ್ಕಳಿಗೆ ಮೊಲೆಹಾಲು ಕುಡಿಸುವ ವಿಧಾನವನ್ನು ಈ ರೀತಿ ವಿವರಿಸುತ್ತಾರೆ. ಮಗುವು ತಲೆಯನ್ನು ಹೆಚ್ಚಾಗಿ ಎತ್ತಿ ಹಾಲು ಕುಡಿಯುವಂತಾದರೆ ಮುಂದೆ ಹುಟ್ಟುವ ಅದರ ಹಲ್ಲು ಉಬ್ಬಾಗುತ್ತವೆ.  ಆದುದರಿಂದ ಹಾಲು ಕುಡಿಸುವಾಗ ತಲೆಯನ್ನು ಹೆಚ್ಚು ಎತ್ತಲು ಅವಕಾಶವಿಲ್ಲದಂತೆ ಕುಡಿಸಬೇಕು.

ಆಕೆಯ ಹಾಲು ತಣ್ಣಗೆ ಕೊಳೆಯಿಲ್ಲದೆ ತೆಳ್ಳಗೆ, ಶಂಖದ ಬಣ್ಣದಂತೆ ಬೆಳ್ಳಗೂ, ನೀರಿಗೆ ಸುರಿದರೆ ಬೆರೆತು ನೊರೆಯಿಲ್ಲದೆ ದಾರದಂತಾಗದೆ, ಮೇಲೆ ತೇಲದೆಯೂ, ಪೂರ್ತಿ ಮುಳುಗದೆಯೂ ಇದ್ದರೆ ಅದು ಶುದ್ಧವಾದ ಹಾಲೆಂದೂ, ಆರೋಗ್ಯಕರವೆಂದೂ ಭಾವಿಸತಕ್ಕದ್ದೆನ್ನುತ್ತಾರೆ. ಇಂತಹ ಹಾಲನ್ನು ಕುಡಿಸಿದರೆ ಮಗುವಿನ ಆರೋಗ್ಯ ಮತ್ತು ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ಔಷಧಿಯು ಜೀರ್ಣವಾಗುವುದಕ್ಕೆ ಮೊದಲು ಹಾಲನ್ನು ಕುಡಿಸಬಾರದು. ಬಾಣಂತಿ ಅಥವಾ ಧಾತ್ರಿಯು ಆರೋಗ್ಯಕರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನೆ ಸೇವಿಸಬೇಕು. ಆರೋಗ್ಯಕರವಲ್ಲದ ಅಥವಾ ಸುಲಭವಾಗಿ ಜೀರ್ಣವಾಗದ ಆಹಾರವನ್ನು  ಸೇವಿಸಿದರೆ ಅದರ ಪರಿಣಾಮವು ಮಗುವಿನ ಶರೀರದಲ್ಲಿ ಉಂಟಾಗುತ್ತದೆ.

ಮಕ್ಕಳಿಗೆ ಕೊಡುವ ಔಷಧ ಪ್ರಮಾಣವನ್ನೂ ಸಹ ಅವುಗಳ ಬೆಳವಣಿಗೆಗೆ ತಕ್ಕಂತೆ ಸುಶ್ರುತರು ನಿರ್ಧರಿಸಿದ್ದಾರೆ.

ಶಿಶುಪಾಲನೆ

ಮಗುವಿಗೆ ನೋವಾಗದಂತೆಯೂ, ಹಿತವಾಗುವಂತೆಯೂ ಎತ್ತಿಕೊಳ್ಳಬೇಕು. ಗಟ್ಟಿಯಾಗಿ ಕೂಗಿ ಹೆದರಿಸಬಾರದು. ನಿದ್ರೆಯಲ್ಲಿರುವ ಮಗುವನ್ನು ತಟ್ಟನೆ ಎಚ್ಚರಿಸಬಾರದು. ಮತ್ತೊಬ್ಬರು ಎತ್ತಿಕೊಂಡಿರುವ ಮಗುವನ್ನು ಹಿಡಿದು ಎಳೆದುಕೊಳ್ಳಬಾರದು. ಕೆಲವರು ಮಗುವನ್ನು ಹಾರಿಸುತ್ತಾರೆ. ಇದು ಮಗುವಿನ ಹೃದಯಕ್ಕೆ ಹಾನಿಕರ. ಮಗುವಿನ ಪಾಲನೆಗಾಗಿ ನೇಮಿಸಿದ ಆಳು ಮಗುವನ್ನು ಆಡಿಸುವಾಗ ಶಿಕ್ಷಿಸಬಾರದು, ಗದರಿಸಬಾರದು. ಅದಕ್ಕೆ ಹಿತಕರವಾದ ಆಟಪಾಟಗಳಿಂದ ರಮಿಸಬೇಕು ಹಿತಕರವಾದ ಆಟಪಾಟಗಳಿಂದ ರಮಿಸಬೇಕು ಹಿತಕರವಾಗಿ ಸಂಬೋಧಿಸಬೇಕು. ಇದರಿಂದ ಮಗುವಿನ ಚಿತ್ತವೃತ್ತಿಯು ವೃದ್ಧಿಹೊಂದಿ, ಅದು ಒಳ್ಳೆಯ ಮನಸ್ಸುಳ್ಳದ್ದಾಗಿ ನಿರೋಗಿಯಾಗಿ, ಸದಾ ಸಂತೋಷಯುಕ್ತವಾಗಿ ಬಲಾಢ್ಯವಾಗಿ ಬೆಳೆಯುತ್ತದೆ. ತೊಡೆ ಬಲಿತು ಶಕ್ತಿ ಬರುವವರೆವಿಗೂ ನಿಲ್ಲಿಸಬಾರದು, ನಡೆಸಲೂಬಾರದು.

ಆಹಾರ ವಿಧಿ

ಆ ಕಾಲದಲ್ಲಿ ಹಾಲು ಮುಖ್ಯ ಆಹಾರವಾಗಿತ್ತು. ಪ್ರತಿಯೊಬ್ಬರೂ ಆಯಾ ವಯಸ್ಸಿಗನುಗುಣವಾಗಿ ಹಾಲನ್ನು ಕಾಯಿಸದೆ ಅಥವಾ ಕಾಯಿಸಿ ಆರಿಸಿ ಸುಖೋಷ್ಣವಾಗಿ ಸೇವಿಸುತ್ತಿದ್ದರು. ಬೆಳಗ್ಗೆ ಹಣ್ಣು ಮತ್ತು ಹಾಲನ್ರನು ಸೇವಿಸುತ್ತಿದ್ದರು. ಮಧ್ಯಾಹ್ನ (ಇಂದಿನ ಕಾಲಮಾನದ) ೧ ರಿಂದ ೨ ಗಂಟೆಗೆ ಸಾಧಾರಣವಾಗಿ ದಪ್ಪ ಅಕ್ಕಿ, ಗೋಧುವೆ, ಉದ್ದು, ಕಡಲೆ, ತೊಗರಿ ಮುಂತಾದ ಧಾನ್ಯಗಳನ್ನೂ ನೆಲ್ಲಿಕಾಯಿ, ಒಂದೆಲಗ, ದಾಡಿಮ ಜೀರಿಕಾದಿಗಳಾದ ತಂಬೂಳಿಗಳನ್ನು, ಮೊಸರು ಮಜ್ಜಿಗೆಗಳನ್ನೂ ಹೇರಳವಾಗಿ ಉಪಯೋಗಿಸುತ್ತಿದ್ದರು. ಹುಡುಗರೂ ಯುವಕ ಯುವತಿಯರೂ ಗೆಡ್ಡೆಗೆಣಸುಗಳನ್ನು ಬಳಸುತ್ತಿರಲಿಲ್ಲ. ಧಾನ್ಯಗಳ ಪಿಷ್ಠಗಳನ್ನು ತೈಲ ತುಪ್ಪಗಳಲ್ಲಿ ಬೇಯಿಸಿದ ಅಪೂಪ (ವಡೆ) ಚಕ್ಕುಲಿ ಮುಂತಾದ ತಿನಿಸುಗಳನ್ನೂ ತಯಾರಿಸುತ್ತಿದ್ದರು. ಎಳ್ಳೆಣ್ಣೆ, ಸಾಸುವೆ ಎಣ್ಣೆ, ಕುಸುಂಬಿ ಎಣ್ಣೆ, ಹಿಪ್ಪೆ ಬೀಜದ ಎಣ್ಣೆ ಇವುಗಳು ಔಷಧಿಗೂ ಆಹಾರಕ್ಕೂ ಉಪಯುಕ್ತವಾಗಿದ್ದುವು. ಖರ್ಜೂರ, ದ್ರಾಕ್ಷಿ, ಜೇನುತುಪ್ಪ, ಕಲ್ಸಕ್ಕರೆ ಇವುಗಳು ಕೂಡ ಹೇರಳವಾಗಿ ಉಪಯೋಗಿಸಲ್ಪಡುತ್ತಿದ್ದವು.

ಚರಕ ಸುಶ್ರುತರ ಕಾಲದಲ್ಲಿ ಮಾಂಸಾಹಾರ ವಾಡಿಕೆಯಲ್ಲಿತ್ತು. ಮೇಕೆ, ಕಾಡುಹಂದಿ, ಕೋಳಿ, ಪಾರಿವಾಳ, ತಿತ್ತಿರಿ, ಮೊಲ, ಜಿಂಕೆ, ವಿವಿಧ ಜಾತಿಯ ಮೀನು, ಸಾರಂಗ, ಕುರಿ ಇವುಗಳು ಮಾಂಸಾಹಾರಕ್ಕಾಗಿ ಉಪಯೋಗಿಸಲ್ಪಡುತ್ತಿದ್ದುವು. ಉಡ, ಮೊಲ, ನಾಗರಹಾವು, ಪುನುಗಿನ ಬೆಕ್ಕು,ಹದ್ದು, ಕಾಗೆ, ಗೂಬೆ, ಕೆಂಪು ಕಗೆ, ಕಾಡುಗುಬ್ಬಿ, ಗಿಣಿ, ನವಿಲು, ದನ ಮುಂತಾದ ಪ್ರಾಣಿಗಳ ರಕ್ತ, ಮಾಂಸ, ಮೇದಸ್ಸುಗಳನ್ನು ರೋಗ ಪರಿಹಾರಾರ್ಥವಾಗಿ ವೈದ್ಯರು ಉಪಯೋಗಿಸುತ್ತಿದ್ದರು. ಪ್ರತಿ ಮನೆಯಲ್ಲೂ ತಾತ್ಕಾಲಿಕ ಔಷಧಕ್ಕೆ ಮತ್ತು ವ್ಯಂಜನಕ್ಕೆ ಉಪಯೋಗಿಸಲು ಹಿಪ್ಪಲಿ, ಜೀರಿಗೆ, ಶುಂಠಿ, ತುಲಸಿ, ಕರಿ ತುಲಸಿ, ಕಾಮ ಕಸ್ತೂರಿ, ಮಜ್ಜಿಗೆ ಹುಲ್ಲು, ಪರಿಮಳ, ಗಂಧಿನೀ ಹುಲ್ಲು, ನಾರಂಬಾಳೆ, ಮರುಗ, ಬಿಳೀನುಗ್ಗೆ, ಕೆಂಪು ನುಗ್ಗೆ, ಕೆಂಪು ಮತ್ತು ಬಿಳಿ ಸಾಸುವೆ, ಕೊಮ್ಮೆ, ಬಟಾಣಿ, ಕಾಡುಕಡಲೆ ಮುಂತಾದವುಗಳನ್ನು ಸಂಗ್ರಹಿಸುತ್ತಿದ್ದರು.

ಸೊಪ್ಪುಗಳು ಆಹಾರಕ್ಕೂ ಔಷಧಿಗೂ ಉಪಯೋಗದಲ್ಲಿತ್ತು. ಕಿರುಸಾಲೆ, ಬಸಳೆ, ಹರಿವೆ, ಚಕ್ಕೋತ, ದೊಡ್ಡ ಒಂದೆಲಗ, ಅಣ್ಣೇ, ಗಣಿಕೆ, ಗೋರಂಟಿ, ಗೋಣಿ, ಕಾಡಚಕ್ಕೋತ, ತೇರಣದ ಸೊಪ್ಪು, ಕರಿಬೇವು, ಅಗುಳು ಶುಂಠಿ, ಅಗಸೆ ಇವುಗಳು ಉಪಯೋಗದಲ್ಲಿದ್ದವು.

ಸುಶ್ರುತನ ಕಾಲದ ಜನರು ಎತ್ತರವಾಗಿರುತ್ತಿದ್ದರು. ಉದ್ದನೆಯ ಕೈಕಾಲುಗಳುಳ್ಳವರು, ಬಲಿಷ್ಠರೂ, ಕಷ್ಟಸಹಿಷ್ಣುಗಳು. ಅವರು ಬಹು ಅಲಂಕಾರಪ್ರಿಯರೂ ಆಗಿದ್ದರು. ವಿವಿಧ ಹೂಗಳ ಮಾಲೆಗಳನ್ನು ಧರಿಸುತ್ತಿದ್ದರು. ಹೆಂಗಸರು, ಮಕ್ಕಳಿಗೆ ಬರಬಹುದಾದ ಸಾಮಾನ್ಯ ಕಾಯಿಲೆಗಳ ನಿವಾರಣೆಗೆ ಕಷಾಯಾದಿ ಔಷಧಿಗಳನ್ನು ತಯಾರಿಸಲು ತಿಳಿದಿದ್ದರು. ಹೊಲ, ಗದ್ದೆ, ವನಗಳಲ್ಲಿ ಸಿಕ್ಕಬಹುದಾದ ಗೆಡ್ಡೆಗೆಣಸುಗಳನ್ನು ಔಷಧಿಗಾಗಿ ಶೇಖರಿಸುತ್ತಿದ್ದರು.

ದಾದಿಯರು ಮತ್ತು ಶಸ್ತ್ರಾಗಾರ ಚಿಕಿತ್ಸಾಲಯಗಳಲ್ಲಿ ಸ್ತ್ರೀ ಸಹಾಯಕರು

ಹೆರಿಗೆ ಅವರವರ ಮನೆಗಳಲ್ಲಿಯೆ ನಡೆಯುತ್ತಿತ್ತು. ಅದಕ್ಕೆ ಅನುಕೂಲವಾಗುವಂತೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದರು. ಬೇರೆಬೇರೆ ಕಾಲದಲ್ಲಿ ಗಾಳಿ ಬೇರೆಬೇರೆ ರೀತಿಗಳಲ್ಲಿ ಅಶುದ್ಧವಾಗುತ್ತದೆ. ಬಾಣಂತಿಗೆ ಮತ್ತು ಮಗುವಿಗೆ ತೊಂದರೆಯಾಗದಂತೆ ಧೂಪವನ್ನು ಮತ್ತು ವಾಯುಶುದ್ಧಿಕರವಾದ ಮತ್ತು ವಿಷಹರವಾದ ಬೇವು, ಇಡುಸೋಗೆ, ಲಕ್ಕಿ ಮೊದಲಾದ ಮೂಲಿಕೆಗಳನ್ನು ಬಾಗಿಲು, ಕಿಟಕಿಗಳಿಗೆ ಕಟ್ಟುತ್ತಿದ್ದರು. ಮಗುವಿನ ಆಹಾರ ಮತ್ತು ಆರೋಗ್ಯಕ್ಕೆ ಹೆಚ್ಚು ಗಮನ ಕೊಡುತ್ತಿದ್ದರು. ಮಗುವಿಗೆ ಶುದ್ಧ ಹಾಲನ್ನು ಕೊಡಲು ಸಹ ಬಾಣಂತಿಗೆ ಔಷಧ ಮತ್ತು ಆಹಾರ ನಿರೂಪಣೆಯನ್ನು ಮಾಡಿದ್ದರು. ಬಾಣಂತಿಗೆ ಕೊಡಲು ಕಷಾಯ, ಲೇಹ್ಯ ಮತ್ತು ಜೀರ್ಣಕಾರಿ ಔಷಧಗಳನ್ನು ನಿಯಮಿಸಿದ್ದರು. ಮಗುವಿನ ಯೋಗಕ್ಷೇಮವನ್ನು ನೋಡಿಕೊಳ್ಳಲು ನಾಲ್ಕು ವರ್ಣಕ್ಕೆ ಸೇರಿದ ಸ್ತ್ರೀಯರನ್ನು ಆರಿಸಿ ಅವರಿಗೆ ಶಿಕ್ಷಣವನ್ನು ಸಹ ಕೊಡುತ್ತಿದ್ದರು. ಅರಮನೆಯಲ್ಲಿ ದಕ್ಷರಾದ ವೈದ್ಯರ ನೇತೃತ್ವದಲ್ಲಿ ರಾಜರ ಮಕ್ಕಳಿಗೆ ಆರೋಗ್ಯ ಶಿಕ್ಷಣಗಳನ್ನು ಕೊಡಲಾಗುತ್ತಿತ್ತು. 

ಪ್ರಾಚೀನ ಭಾರತದಲ್ಲಿ ಪ್ಲಾಸ್ಟಿಕ್‌ ಸರ್ಜರಿಗೆ ಬಳಸುತ್ತಿದ್ದ ಆಯುಧಗಳು. ರೋಗಿ ಶಸ್ತ್ರಚಿಕಿತ್ಸೆಗೆ ಮೊದಲು, ಅನಂತರ. ಸಾರ್ವಜನಿಕರು ಅನುಸರಿಸಬೇಕಾಗಿದ್ದ ಆರೋಗ್ಯ ನಿಯಮಗಳು

 ಉಷಃಕಾಲದಲ್ಲಿ ಮಕ್ಕಳೂ, ವೃದ್ಧರೂ, ಗರ್ಭಿಣಿಯರ ವಿನಃ ಉಳಿದೆಲ್ಲರೂ ನಿದ್ರೆಯಿಂದ ಎಚ್ಚರಗೊಂಡು, ಮಲಮೂತ್ರಾದಿಗಳನ್ನು ವಿಸರ್ಜಿಸಲು ನಿರ್ಮಿಸಲಾಗಿದ್ದ ಜಾಗಗಳಲ್ಲಿ ವಿಸರ್ಜಿಸಿ ನಂತರ ಅವುಗಳನ್ನು ಮಣ್ಣು ಮತ್ತು ಎಲಗಳಿಂದಲೂ ಮುಚ್ಚುತ್ತಿದ್ದರು. ಸ್ತ್ರೀಯರಿಗೂ, ಪುರುಷರಿಗೂ ಇದಕ್ಕಾಗಿ ಪ್ರತ್ಯೇಕ ಜಾಗಗಳನ್ನು ಮೀಸಲಿಡುತ್ತಿದ್ದರು. ಯಾವ ಜಾತಿಯವರೇ ಆಗಲಿ ಕಷ್ಟ ಪಟ್ಟು ಕೆಲಸ ಮಾಡಬೇಕಾಗಿತ್ತು. ಎಲ್ಲರೂ ಪ್ರಾಣಾಯಾಮ ಮಾಡುತ್ತಿದ್ದರು. ಸ್ನಾನಕ್ಕೆ ಮೊದಲು ಸುಗಂಧ ತೈಲಗಳನ್ನು ಮೈಗೆ ಲೇಪಿಸಿ ಹರಿಯುವ ಜಲ ಅಥವಾ ತಟಾಕಗಳಲ್ಲಿ ಸ್ನಾನ ಮಾಡುತ್ತಿದ್ದರು. ಅನಂತರ ಶುಭ್ರವಸ್ತ್ರವನ್ನುಟ್ಟು ಪುಷ್ಪಾಲಂಕೃತವಾಗಿ ಅವರವರ ಪದ್ಧತಿ ಅನುಕೂಲತೆಗೆ ತಕ್ಕಂತೆ ದೇವರ ಪ್ರಾರ್ಥನೆ ಮಾಡುತ್ತಿದ್ದರು. ನಂತರ ವಿದ್ಯಾಭ್ಯಾಸ ಮಾಡಲು ಗುರುಕುಲಕ್ಕೆ ಹೋಗುತ್ತಿದ್ದರು. ಸ್ನಾನ ಮಾಡುವಾಗ ಹಚ್ಚಿಕೊಂಡ ತೈಲವನ್ನು ತೊಳೆಯಲು ಸುಗಂಧ ತೊಗಟೆಗಳ ಮತ್ತು ಸೀಗೆಕಾಯಿಪುಡಿ ಮತ್ತಿತರ ಚೂರ್ಣಗಳನ್ನು ಉಪಯೋಗಿಸುತ್ತಿದ್ದರು. ಮಧ್ಯಾಹ್ನ ಊಟ ಮಾಡುವ ಮೊದಲು ಅತಿಥಿಗಳಿಗೆ ಊಟ ಉಪಚಾರ ಮಾಡುತ್ತಿದ್ದರು. ಪಶುಪಕ್ಷಿಯಾದಿಗಳಿಗೆ ಅನ್ನವನ್ನು ಹಾಕುತ್ತಿದ್ದರು. ವೈದ್ಯ ವೃತ್ತಿಯನ್ನು ಕೈಗೊಂಡ ವಿದ್ಯಾರ್ಥಿಗಳು ಗುಡ್ಡ ಕಾಡುಗಳಿಗೆ ಹೋಗಿ ಮೂಲಿಕೆಗಳನ್ನು ಸಂಗ್ರಹ ಮಾಡುತ್ತಿದ್ದರು. ಹೊಸ ಮೂಲಿಕೆಗಳ ಗುಣ ವೀರ್ಯ ವಿಪಾಕಗಳನ್ನು ಪ್ರಯೋಗಶಾಲೆಯಲ್ಲಿ ಕಂಡುಕೊಳ್ಳುತ್ತಿದ್ದರು.

ನಿದ್ರೆ

ನಿದ್ರಾಸೇವನೆಯ ವಿಚಾರದಲ್ಲಿ ಬಹು ಅಮೂಲ್ಯವಾದ ನಿಯಮಗಳನ್ನು ಸುಶ್ರುತ ಸಂಹಿತೆಯು ಪ್ರತಿಪಾದಿಸುತ್ತದೆ. ಸಾಧಾರಣವಾಗಿ ಯಾರೂ ಹಗಲಿನಲ್ಲಿ ನಿದ್ರೆ ಮಾಡಬಾರದು. ಆದರೆ ಬಾಲಕರು, ಮುದುಕರು ಬಡಕಲು ದೇಹಿಗಳು, ಊಟವಿಲ್ಲದವರು, ಕೊಬ್ಬು ಮತ್ತು ರಸಗಳು (ಧಾತುಗಳು) ಕ್ಷೀಣಿಸಿರುವವರು ಒಂದು ಮುಹೂರ್ತ (ಮುಕ್ಕಾಲು ಗಂಟೆ) ಕಾಲ ಹಗಲು ನಿದ್ರೆ ಮಾಡುವುದು ನಿಷಿದ್ಧವಲ್ಲ. ರಾತ್ರಿ ಎಚ್ಚರವಾಗಿರುವವರು, ಎಚ್ಚರವಾಗಿದ್ದ ಕಾಲದ ಅರ್ಧದಷ್ಟು ಕಾಲ ಹಗಲು ನಿದ್ರೆ ಮಾಡಬಹುದು. ಹಗಲು ನಿದ್ರೆ ಮಾಡುವುದರಿಂದ ಮೈ ಮತ್ತು ಮನಸ್ಸುಗಳ ಲವಲವಿಕೆ ಹೋಗುತ್ತದೆ. ಅಜೀರ್ಣಾದಿ ರೋಗಗಳೂ, ಕೆಮ್ಮು, ಉಬ್ಬಸ, ನೆಗಡಿ, ತಲೆಭಾರ, ಮೈಕೈ ಕತ್ತರಿಸುವಿಕೆ, ಆಹಾರದ ಮೇಲೆ ನಿರಾಸಕ್ತಿ, ಜ್ವರ ಮತ್ತು ಕಫ ಸಂಬಂಧವಾದ ರೋಗಗಳು ಉಂಟಾಗುವುವು. ರಾತ್ರಿ ಕಾಲದಲ್ಲಿ ಕೆಲಸ ಮಾಡುವವರಿಗೂ ಸಹ ಈ ರೋಗಗಳು ಬರುವ ಸಾಧ್ಯತೆ ಇದೆ. ನಿದ್ರೆ ಮಾಡುವವರ ಹಾಸಿಗೆ ಬಹು ಮೆತ್ತಗಿರಬಾರದು, ಗಡುಸಾಗಿಯೂ ಇರಬಾರದು, ತಲೆದಿಂಬು ಹೆಚ್ಚು ಎತ್ತರವಿರಬಾರದು.

ಹೇಗೆ, ಯಾವಾಗ ಊಟ ಮಾಡಬೇಕು?

ಕಾಲಕ್ಕೆ ಮೀರಿ ಊಟ ಮಾಡಬಾರದು. ಹಿಂದೆ ತೆಗೆದುಕೊಂಡ ಆಹಾರ ಜೀರ್ಣವಾಗದೆ ಇರುವಾಗ ಉಪಾಹಾರವನ್ನಾಗಲೀ, ಭೋಜನವನ್ನಾಗಲೀ ಮಾಡಬಾರದು. ಹಗಲು ಮಧ್ಯಾಹ್ನಾನಂತರ ಮತ್ತು ರಾತ್ರಿ ೮ ಗಂಟೆಯ ಒಳಗೆ ಊಟಮಾಡಿದರೆ ಚೆನ್ನಾಗಿ ಜೀರ್ಣವಾಗಿ ಆರೋಗ್ಯ ಉಂಟಾಗುತ್ತದೆ. ಹೆಚ್ಚು ಹುಳಿರಸ ಪ್ರಾಧಾನ್ಯವಾಗಿರುವ ಆಹಾರವನ್ನು ಸೇವಿಸಬಾರದು. ಅಕಾಲದಲ್ಲಿ ಊಟ ಮಾಡಿದರೆ ಅಗ್ನಿಮಾಂದ್ಯದಿಂದ ದೇಹಾಲಸ್ಯ, ಹೊಟ್ಟೆಯಲ್ಲಿ ಆಟಾಟೋಪ, ಗಂಟಲುರಿ, ತಲೆನೋವುಗಳಿಗೆ ಎಡೆಯುಂಟಾಗುತ್ತದೆ. ಊಟ ಮಾಡಿದ ನಂತರ ಹಲ್ಲಿಗೆ ಸಿಕ್ಕಿಕೊಂಡಿರುವ ಆಹಾರದ ತುಣುಕುಗಳನ್ನು ಹುಲ್ಲುಕಡ್ಡಿಯಿಂದ ತೆಗೆದು ಚೆನ್ನಾಗಿ ಬಾಯಿ ಮುಕ್ಕಳಿಸಬೇಕು. ಆಗಾಗ್ಗೆ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿ ಕೆಟ್ಟವಾಸನೆ ಬರುವುದಿಲ್ಲ. ಪ್ರಾತಃಕಾಲ ತುಂಬಾ ಊಟ ಮಾಡಬಾರದು. ರಾತ್ರಿ ಬಹಳ ಹೊತ್ತಿನ ಮೇಲೆ ಸಹ, ಅಕಾಲದಲ್ಲಿ ಊಟ ಮಾಡಿದರೆ ಅದು ಅಜೀರ್ಣಾದಿ ರೋಗಗಳನ್ನು ಉಂಟುಮಾಡುವುದು ಊಟದ ನಂತರ ಏಲಕ್ಕಿ, ಬಾಲ ಮೆಣಸು, ಸೋಂಪು, ಜೀರಿಗೆ ಕಾಳುಗಳನ್ನು ಸೇವಿಸಬೇಕು. ಇದರಿಂದ ಕಫ ಶೋಧನೆಯಾಗುವುದು. ರಾತ್ರಿ ಊಟದ ನಂತರ ಮಲಗುವುದಕ್ಕೆ ಮೊದಲು ಮೂವತ್ತು ನಲವತ್ತು ಗಜದಷ್ಟು ದೂರವಾದರೂ ನಡೆಯಲೇಬೇಕು. ಎಡಮಗ್ಗುಲಾಗಿ ಮಲಗುವುದರಿಂದ ಹೃದಯ ಮತ್ತು ಜಠರ ಕ್ರಿಯೆಗಳಿಗೆ ಹೆಚ್ಚು ಅನುಕೂಲವಾಗುವುದು. ಹಳಸಿದ ಅನ್ನವನ್ನೂ, ಅತಿಯಾಗಿ ಬೇಯಿಸಿದ ಅಡಿಗೆಯನ್ನು ಪುನಃ ಬಿಸಿ ಮಾಡಿದ, ಸೀದುಹೋಗಿರುವ ಅನ್ನವನ್ನೂ ಉಪಯೋಗಿಸಬಾರದು. ಊಟ ಪ್ರಾರಂಭಿಸುವಾಗ ಕಹಿ ಮತ್ತು ವ್ಯಂಜನಗಳನ್ನು, ಗಟ್ಟಿಯಾಗಿರುವ ಕರಿದ ಭಕ್ಷ್ಯಗಳನ್ನು ತಿನ್ನಬಾರದು. ನೆಲ್ಲಿಕಾಯಿ ತಂಬೂಳಿಯನ್ನು ನಿತ್ಯ ಉಪಯೋಗಿಸುವುದರಿಂದ ಶಿರಾಧಮನಿಗಳ ಕಾರ್ಯಗಳಲ್ಲಿ ದೋಷವುಂಟಾಗುವುದಿಲ್ಲ. ರಕ್ತದ ಒತ್ತಡ (ಬ್ಲಡ್‌ ಪ್ರೆಷರ್) ಬರುವುದಿಲ್ಲ. ಗಡ್ಡೆಗಳ ಪಲ್ಯ, ಬೇಯಿಸಿದ ಕಾಳುಗಳು, ಕಬ್ಬಿನ ರಸ ಮುಂತಾದವುಗಳನ್ನು ಊಟಕ್ಕೆ ಮೊದಲು ಸೇವಿಸಬೇಕು. ಊಟದ ನಂತರ ಸೇವಿಸಲೇಬಾರದು. ಪ್ರತಿ ರಾತ್ರಿ ಒಂದೇ ಗೊತ್ತಾದ ಕಾಲಕ್ಕೆ ಊಟ ಮಾಡಬೇಕು. ಎಂದಾದರೂ ಬಹಳ ತಡವಾದರೆ ಊಟವನ್ನೇ ಬಿಡುವುದು ಒಳ್ಳೆಯದು. ಹಾಲು ಮುಂತಾದ ದ್ರವಾಹಾರಗಳನ್ನೇ ಉಪಯೋಗಿಸಬೇಕು.

ಮುಖ ಪ್ರಕ್ಷಾಲನ (ಬಾಯಿ ಮುಕ್ಕಳಿಸುವುದು)

ಆಹಾರ ರುಚಿಯನ್ನು ಅನುಭವಿಸಲು ಊಟಕ್ಕೆ ಮೊದಲು ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಕು. ಊಟದ ಮಧ್ಯೆ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುವುದರಿಂದ ಅನ್ನನಾಳ ಶುದ್ಧಿಯಾಗಿ ಅನ್ನವು ಚೆನ್ನಾಗಿ ಜೀರ್ಣವಾಗುತ್ತದೆ. ಊಟದ ನಂತರ ಮೂರುಸಾರಿ ಬಾಯಲ್ಲಿ ನೀರು ತುಂಬಿಕೊಂಡು ಮುಕ್ಕಳಿಸಬೇಕು. ಅಲ್ಲದೆ ಉಪಾಹಾರ ಮಾಡಿದಾಗ ಪೇಯಗಳನ್ನು ಸೇವಿಸುವಾಗ ಮುಕ್ಕಳಿಸುವುದು ಅಗತ್ಯ. ಅದರಿಂದ ಬಾಯಲ್ಲಿ ದುರ್ಗಂಧ ಉಂಟಾಗುವುದಿಲ್ಲ. ಬಾಯಿ ರಸದೋಷದಿಂದ ಬರುವ ದುರ್ಗಂಧ ಪೀಡಿತವಾದ ಜೊಲ್ಲು ಕ್ರಮೇಣ ದಂತಕ್ಷಯ, ವಸಡಿನಲ್ಲಿ ರಕ್ತ ಮತ್ತು ಕೀವು ಆಗಿ ಬಾಯಲ್ಲೆಲ್ಲಾ ಹುಣ್ಣು, ಹುಳುಕು ಹಲ್ಲು, ಗಂಟಲಿನಲ್ಲಿ ಕಫದೂಷ್ಟವಾಗಿ ಗ್ರಂಥಿಗಳು ಕ್ರಿಮಿಪೂರಿತವಾಗಿ ಮತ್ತು ಕಿರುನಾಲಿಗೆಗಳ ರೋಗಗಳು ಸಂಭವಿಸುತ್ತವೆ. ಮಾತನಾಡುವಾಗ ಬಾಯಿಯ ವಾಸನೆಯಿಂದ ಇತರರೂ ಬೇಜಾರು ಮಾಡಿಕೊಳ್ಳುವರು. ಕಾಲಕ್ರಮೇಣ ಬಹುಕಷ್ಟ ಕೊಡುವ ರೋಗಗಳು ಉಂಟಾಗುವುವು. ಈ ಸಲಹೆಯನ್ನು ಆಬಾಲ ವೃದ್ಧರಾಗಿ ಎಲ್ಲರೂ ಆರೋಗ್ಯವಂತರಾಗಿರಲಉ ಪಾಲಿಸಲೇಬೇಕೆಂದು ಸುಶ್ರುತರು ಒತ್ತಿ ಹೇಳಿದ್ದಾರೆ.

ಸುಶ್ರುತರ ಶಸ್ತ್ರಚಿಕಿತ್ಸಾ ಪ್ರವೀಣತೆ

ದೇಹದ ಯಾವ ಸೂಕ್ಷ್ಮ ಭಾಗಗಳೂ ಹೋಗದಂತೆ ಅತಿ ವಿವರವಾಗಿ ಚರ್ಮ, ಮೂಳೆ ಮತ್ತು ಅದರ ಸಂದಿಗಳು, ಮೆದುಳು, ಕೂದಲಿನ ರಂಧ್ರಗಳು ಮುಂತಾದವುಗಳನ್ನು ತಿಳಿದುಕೊಂಡಿದ್ದರು. ಅಲ್ಲದೆ ಗರ್ಭಧಾರಣೆ, ತಾಯಿಯ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆ ಮತ್ತು ಶಿಶು ಪ್ರಸವ, ಮೆದುಳು, ಹೃದಯ ಮತ್ತು ಮೂತ್ರಾಶಯಗಳ ಅನುಬಂಧ, ಗರ್ಭಾಶಯ ರೋಗಗಳಲ್ಲಿ ಸತ್ತ ಮಗುವನ್ನು ಹೊರಗೆ ತೆಗೆಯುವುದು ಇತ್ಯಾದಿ ಕ್ರಿಯೆಗಳನ್ನು ಶಸ್ತ್ರಚಿಕಿತ್ಸೆಯಿಂದ ಮಾಡಬಲ್ಲವರಾಗಿದ್ದರು. ಮುರಿದ ಮೂಗಿಗೆ ಹೊಸ ಮೂಳೆಯನ್ನು ಸೇರಿಸಿ ದೇಹದ ಬೇರೆ ಕಡೆಯ ಚರ್ಮವನ್ನು ಜೋಡಿಸುವುದು, ಮೂಳೆಗಳನ್ನು ಸಂಗ್ರಹಿಸಿ, ಅವುಗಳು ಕೆಡದಮತೆ ತುಪ್ಪ ಎಣ್ಣೆಗಳಲ್ಲಿಟ್ಟು ಅಪಘಾತಗಳಿಂದ ಮುರಿದ ಮೂಳೆಗಳನ್ನು ಅಳವಡಿಸುವ ಅವರ ವಿಜ್ಞಾನವು ಪಾಶ್ಚಾತ್ಯ ಶಸ್ತ್ರಚಿಕಿತ್ಸಕರನ್ನು ಆಶ್ಚರ್ಯಗೊಳಿಸಿದೆ. ಸುಶ್ರುತರು ಶಸ್ತ್ರವೈದ್ಯರು, ಆದರೂ ಆರೋಗ್ಯಸಾಧನೆಯ ವಿಷಯವನ್ನು ಚೆನ್ನಾಗಿ ತಿಳಿದವರು. ಬೇರೆಬೇರೆ ಋತುಗಳಲ್ಲಿ ಅನುಸರಿಸಬೇಕಾದ ನಿಯಮಗಳು, ವಿವಿಧ ತರಕಾರಿ ಧಾನ್ಯಗಳು, ಮಾಂಸ ಮದ್ಯಗಳು, ಹರಿಯುವ ತಟಾಕ ಮತ್ತು ನೀರಿನ ಗುಣದೋಷಗಳು, ಸಾಂಕ್ರಾಮಿಕ ರೋಗಗಳು ಮತ್ತು ಅದರ ನಿವಾರಣೆ, ಆಗಿನ ಕಾಲದಲ್ಲಿ ಆಚರಿಸಬೇಕಾಗಿದ್ದ ನಿಯಮಗಳು ಚಿನ್ನ ಬೆಳ್ಳಿ ತಾಮ್ರ ಮುಂತಾದ ಎಲ್ಲ ಲೋಹಗಳ ಔಷಧಗಳ ಉಪಯೋಗಗಳು ಇತ್ಯಾದಿಗಳನ್ನೆಲ್ಲಾ ಸುಶ್ರುತ ಸಂಹಿತೆಯಲ್ಲಿ ವಿವರಿಸಿದ್ದಾರೆ. ಒಂದುಸಾವಿರದ ಇನ್ನೂರು ಕಾಯಿಲೆಗಳನ್ನು ವಣಿಸಿ, ವಿವರಿಸಿ ಚಿಕಿತ್ಸೆ ತಿಳಿಸಿದ್ದಾರೆ.

ವೇದಕಾಲದ ನಂತರ ಜನಿಸಿದ ಮಹಾವ್ಯಕ್ತಿಗಳ ಪರಂಪರೆಯಲ್ಲಿ ಆಯುರ್ವೇಧಶಾಸ್ತ್ರವನ್ನು ಬೋಧಿಸಿದರು. ಮತ್ತು ಸಂಹಿತೆಗಳನ್ನು ಮುಂದಿನ ಪೀಳಿಗೆಗಾಗಿ ರಚಿಸಿ ಜಗತ್ತಿನಲ್ಲಿ ಶ್ರೇಷ್ಠಸ್ಥಾನವನ್ನು ಗಳಿಸಿಕೊಟ್ಟವರು ಅಗ್ನಿವೇಶ, ದಿವೋದಾಸ, ಕಾಶ್ಯಪ, ಚರಕಾಚಾರ್ಯರು, ಸುಶ್ರುತಾಚಾರ್ಯರು ಮತ್ತು ಇವರ ಮೇಧಾವಿ ಸಂಗಡಿಗರು.

ನಾವೀಗ ಬಹುಮಟ್ಟಿಗೆ ನೆಚ್ಚಿರುವುದು ಪಾಶ್ಚಾತ್ಯ ವೈದ್ಯ ವಿಜ್ಞಾನವನ್ನು. ಭಾರತದ ಆಯುರ್ವೇದ ವಿಷಯ ನಮ್ಮಲ್ಲಿ ಬಹುಮಂದಿಗೆ ಸಾಕಷ್ಟು ತಿಳಿಯದು. ಪ್ರಾಚೀನ ಭಾರತದಲ್ಲಿ ಶಸ್ತ್ರಚಿಕಿತ್ಸೆ ಬೆಳದಿರಲಿಲ್ಲ ಎಂಬ ಭಾವನೆ ಭಾರತದಲ್ಲಿ ಬಹುಮಂದಿಗಿದೆ. ಯಾವ ವಿಜ್ಞಾನವೂ ಪರಿಪೂರ್ಣವಲ್ಲ. ಎಲ್ಲ ವಿಜ್ಞಾನಗಳೂ ಬೆಳೆಯುತ್ತಲೇ ಬಂದಿವೆ. ನಮ್ಮ ಆಯುರ್ವೇದವನ್ನು ತಿಳಿದುಕೊಂಡು ಅದರ ಲಾಭವನ್ನು ಪಡೆಯದೆ ಹೋದರೆ ನಮ್ಮ ಹಿರಿಯರು ಗಳಿಸಿದ್ದ ಹಿರಿಯ ಜ್ಞಾನವನ್ನು ಹೂತಿಟ್ಟು ನಷ್ಟ ಮಾಡಿದ ತಪ್ಪು ನಮಗೆ ಆಗುತ್ತದೆ. ಜೊತೆಗೆ, ನಮ್ಮ ದೇಶದಲ್ಲಿ ಮಾತ್ರ ಲಭ್ಯವಿರುವ ಈ ಜ್ಞಾನದ ಪ್ರಯೋಜನದಿಂದ ನಮ್ಮನ್ನು ನಾವೇ ವಂಚಿಸಿಕೊಂಡಂತೆ ಆಗುತ್ತದೆ.