(ಕ್ರಿ. ಪೂ. ಆರನೇ ಶತಮಾನ)
(ರೋಗಗಳ ಕಾರಣಗಳು ಮತ್ತು ಔಷಧಗಳು)

ಆಯುರ್ವೇದದ ಮೂಲ ಪುರುಷನಾದ ಧನ್ವಂತರಿಯ ಶಿಷ್ಯ, ಸುಶ್ರುತ, ಭಾರತೀಯರಿಗೆ ಪೂಜನೀಯ. ಪ್ರಾಚೀನ ವೈದ್ಯಶಾಸ್ತ್ರ ಪಾರಂಗತರಲ್ಲಿ ಇವರಿಗೆ ಗಣ್ಯಸ್ಥಾನ. ಸುಶ್ರುತರ ಹುಟ್ಟು-ಸಾವುಗಳ ಬಗ್ಗೆ ಖಚಿತವಾಗಿ ಗೊತ್ತಿಲ್ಲ. ಆದರೆ ಇವರು ಕ್ರಿ. ಪೂ. ೬ನೆಯ ಶತಮಾನದಲ್ಲಿ ಇದ್ದರೆಂದು ಹೇಳಲಾಗುತ್ತದೆ. ಇವರು ರಚಿಸಿದ ವೈದ್ಯ ಸಂಹಿತೆ ಅವರ ಹೆಸರನ್ನೇ ಹೊತ್ತಿದೆ. ಅದು ಪ್ರಾಚೀನ ವೈದ್ಯಶಾಸ್ತ್ರದಲ್ಲಿ ಅಪೂರ್ವ ಗ್ರಂಥವೆಂದು ಮಾನ್ಯ ಮಾಡಲ್ಪಟ್ಟಿದೆ.
ದೇಹದ ಮೂಳೆಗಳು, ಕೀಲುಗಳು ಮತ್ತು ಸ್ನಾಯುಗಳ ಬಗ್ಗೆ ಲೆಕ್ಕ ಹಾಕಿದ್ದ ಸುಶ್ರುತ ಹೃದಯ, ಶಿರಸ್ಸು, ಪಕ್ವಾಶಯ, ಆಮಾಶಯ ಮತ್ತು ಗರ್ಭಾಶಯಗಳ ಕಾರ್ಯದ ಬಗ್ಗೆ ತಿಳಿವಳಿಕೆಯನ್ನೂ ಹೊಂದಿದ್ದರು. ಮನುಷ್ಯನ ಶರೀರದಲ್ಲಿ ವಾತ, ಪಿತ್ತ, ಕಫ ವಹಿಸುವ ಪಾತ್ರವನ್ನು ಗುರುತಿಸಿದ್ದರು. ಪಿತ್ತದ, ಕಫದ ಬಗೆಗಳನ್ನು ಪಟ್ಟಿಮಾಡಿದ ಸುಶ್ರುತ ಅವುಗಳ ದೋಷಗಳಿಂದಾಗುವ ರೋಗಗಳನ್ನು ವಿವರಿಸಿದ್ದಾರೆ. ರೋಗದ ಬೆಳವಣಿಗೆಯ ಘಟ್ಟಗಳು ಐದು. ಮೊದಲನೆಯ ಘಟ್ಟದಲ್ಲಿ ದೋಷಗಳು ಸಂಗ್ರಹವಾಗುತ್ತವೆ. ತರುವಾಯದ ಘಟ್ಟಗಳಲ್ಲಿ ಅವು ಹರಡಿಕೊಳ್ಳುತ್ತವೆ, ಪ್ರಕೋಪಗೊಳ್ಳುತ್ತವೆ, ಹುದುಗೆದ್ದು ಪ್ರಸರಣಗೊಳ್ಳುತ್ತವೆ. ಪೂರ್ವ ರೂಪದಲ್ಲಿ ಮತ್ತು ಅಂತ್ಯ ರೂಪದಲ್ಲಿ ಪ್ರಕಟಗೊಳ್ಳುತ್ತವೆ, ರೋಗಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ ಇವರು ಅವುಗಳ ಚಿಕಿತ್ಸೆಗೆ ಉಪಯುಕ್ತವಾದಂಥ ವನಸ್ಪತಿ ಮತ್ತು ಖನಿಜ ರೂಪದ ಔಷಧಗಳ ಬಗ್ಗೆ ಸಹ ತಿಳಿಸಿದ್ದಾರೆ.
ರೋಗದ ಚಿಕಿತ್ಸೆಯನ್ನು ಅದರ ಪ್ರಾರಂಭದ ಹಂತದಲ್ಲೇ ಪ್ರಾರಂಭಿಸಬೇಕು. ರೋಗ ಅತಿಯಾಗಿ ಉಲ್ಬಣಿಸಿ ಸಾವು ಸಮೀಪಿಸಿದಾಗ ಯಾವ ಚಿಕಿತ್ಸೆಯಿಂದಲೂ ಪ್ರಯೋಜನವಾಗದು ಎಂದು ಸುಶ್ರುತ ಸುಮಾರು ೨೪೦೦ ವರ್ಷಗಳಷ್ಟು ಹಿಂದೆ ಹೇಳಿದ ಮಾತು ಇಂದು ಕೂಡ ಪ್ರಸಕ್ತವಾಗಿದೆ.
ಪ್ರಾಚೀನ ಕಾಲದಲ್ಲಿಯೇ ಅದ್ಭುತ ಶಸ್ತ್ರಚಿಕಿತ್ಸೆ ಮಾಡಿ ಅನೇಕ ರೋಗಿಗಳನ್ನು ಇವರು ಬದುಕಿಸಿದ್ದರೆಂಬ ಪ್ರತೀತಿ ಇದೆ.