ಕಾಯಂ ನೆರಳಿಗೆ ತರಕಾರಿ ಚಪ್ಪರ, ಸೆಗಣಿಗಾಗಿ ಪಕ್ಕದಲ್ಲೇ ಗೋಬರ್ ಸ್ಲರಿ, ನೀರಿಗಾಗಿ ಹತ್ತಿರದಲ್ಲೇ ನಲ್ಲಿ… ! ಇಷ್ಟೆಲ್ಲಾ ಕಾಯಂ ರಚನೆಗಳು ಇದ್ದ ಮೇಲೆ ಅಜೋಲಾ ಘಟಕ ನಿರ್ಮಾಣಕ್ಕೆ ಇನ್ನೇನು ಬೇಕು ?

ಫಲ್ಗುಣಿಯ ರೈತ ಗೋಪಾಲ್ ಅವರ ತೋಟದಲ್ಲಿ ಇಂಥದ್ದೊಂದು ‘ಸುಸ್ಥಿರ ಅಜೋಲಾ ಘಟಕವಿದೆ’. ಅವರ ಐದೂವರೆ ಎಕರೆ ಜೀವವೈವಿಧ್ಯದ ತೋಟಕ್ಕೆ ಪ್ರವೇಶಿಸುತ್ತಲೇ ಬಲಬದಿಯಲ್ಲಿ ಈ ಅಜೋಲಾ ಘಟಕ ಸ್ವಾಗತಿಸುತ್ತದೆ. ಅಪರೂಪದ ಜೀವ ವೈವಿಧ್ಯ ತೋಟ ನಿರ್ಮಾಣಕ್ಕಾಗಿ ಅವರು ಅಳವಡಿಸಿಕೊಂಡಿರುವ ಕೃಷಿ ಚಟುವಟಿಕೆಗಳಲ್ಲಿ ಅಜೋಲಾ ಬೆಳೆ ಕೂಡ ಒಂದು.

ಗೋಪಾಲ್, ಅಜೋಲಾವನ್ನು ಪ್ಲಾಸ್ಟಿಕ್ ಹೊದಿಸಿದ ಗುಂಡಿಯಲ್ಲಿ ಬೆಳೆದಿದ್ದಾರೆ. ಈ ಗುಂಡಿ ಸಮೀಪದಲ್ಲೇ ಎರೆಗೊಬ್ಬರದ ಘಟಕವಿದೆ. ಅದರ ಪಕ್ಕ ‘ಸಾವಯವ ಯೂರಿಯಾ’ ಘಟಕವಿದೆ. ಅಜೊಲ್ಲಾಕ್ಕೆ ಬೇಕಾದ ನೀರು ಸರಬರಾಜಿಗೆ ಒಂದು ತೊಟ್ಟಿ ಮಾಡಿಕೊಂಡಿದ್ದಾರೆ. ಅದಕ್ಕೆ ನಲ್ಲಿ ಸಂಪರ್ಕವಿದೆ.

ಈ ಘಟಕಕ್ಕೆ ನೆರಳಾಗಿ ಚಪ್ಪರ ನಿರ್ಮಿಸಿದ್ದಾರೆ. ಅದರ ಮೇಲೆ ಬಳ್ಳಿ ತರಕಾರಿಗಳನ್ನು ಬೆಳೆಸಿದ್ದಾರೆ. ಈ ಚಪ್ಪರ ಅಜೋಲಾ ತೊಟ್ಟಿಯನ್ನು ಬಿಸಿಲಿನಿಂದ ರಕ್ಷಿಸುತ್ತದೆ. ಒಂದು ಕಡೆ ಅಜೋಲಾ ಆಕಳುಗಳಿಗೆ ಮೇವಾದರೆ, ಬಸಳೆ, ಚಪ್ಪರದವರೆಯಂತಹ ತರಕಾರಿಗಳು ಗೋಪಾಲ್ ಕುಟುಂಬಕ್ಕೆ ಪೌಷ್ಟಿಕ ಆಹಾರವಾಗುತ್ತಿದೆ. ಅಜೋಲಾ ಪಶು ಆಹಾರ ಕೊಳ್ಳುವುದನ್ನು ತಪ್ಪಿಸಿದರೆ, ಬಳ್ಳಿ, ತರಕಾರಿಗಳು ಹಣ ಉಳಿಸುತ್ತಿವೆ.

ಚಪ್ಪರದ ಬಳ್ಳಿಗಳ ಸೂರು ಶಾಶ್ವತವಾಗಿರುವುದರಿಂದ ನೆರಳು ಕಾಯಂ ಆಗಿರುತ್ತದೆ. ನೀರು ಬದಲಾಯಿಸುವ ಅವಧಿ ಕಡಿಮೆ. ಪ್ಲಾಸ್ಟಿಕ್ ಶೀಟ್ ಹರಿಯುವುದಿಲ್ಲ. ಹೀಗಾಗಿ ಇವರದ್ದೊಂದು ‘ಸುಸ್ಥಿರ ವಿಧಾನ’. ಈ ವಿಧಾನದಿಂದ ಗೋಪಾಲ್ ಅವರಿಗೆ ಶ್ರಮ ಉಳಿತಾಯವಾಗಿದೆ. ಕನಿಷ್ಠ ಆರು ತಿಂಗಳವರೆಗೆ ನಿರಂತವಾಗಿ ಅಜೋಲಾವನ್ನು ತೆಗೆಯುತ್ತಾರೆ. ಮೂರು ವರ್ಷದಿಂದ ಇದೇ ವಿಧಾನವನ್ನು ಅನುಸರಿಸುತ್ತಿದ್ದಾರೆ.

‘ಆರಂಭದಲ್ಲಿ ಸ್ವಲ್ಪ ಶ್ರಮವಹಿಸಿ, ಹಣ ಖರ್ಚು ಮಾಡಿ ಇಂಥ ಘಟಕಗಳನ್ನು ನಿರ್ಮಿಸಿದರೆ, ಪದೇ ಪದೇ ನೀರು ಬದಲಾಯಿಸುವ, ಪ್ಲಾಸ್ಟಿಕ್‌ಗೆ ಹಣ ಹೊಂದಿಸುವ ಶ್ರಮ ತಪ್ಪುತ್ತದೆ’ ಎನ್ನುತ್ತಾರೆ ಗೋಪಾಲ್.