ನಮ್ಮ ಭೂಮಿಯ ಮೇಲಿನ ವಸ್ತುಗಳಲ್ಲಿಯ ವ್ಯತ್ಯಾಸದ ವ್ಯಾಪ್ತಿ, ವೈವಿಧ್ಯತೆಯ ಪರಿಕಲ್ಪನೆಯನ್ನು ಈ ಪುಸ್ತಕ ಮಾಡಿಕೊಡುತ್ತದೆ. ಜೀವಿವೈವಿಧ್ಯ ಪದವು ಜೈವಿಕ ವೈವಿಧ್ಯದ ಸಂಕ್ಷಿಪ್ತ ರೂಪ. ಅಂದರೆ ಜೈವಿಕ ವೈವಿಧ್ಯವು ಜೀವಿಗಳಲ್ಲಿಯ ವೈವಿಧ್ಯವನ್ನು ತಿಳಿಸುತ್ತದೆ. ಜೈವಿಕ ವೈವಿಧ್ಯವು ಸಾಮಾನ್ಯವಾಗಿ ಜೀವಿಗಳ ಸಂಖ್ಯೆ, ವೈವಿಧ್ಯ ಹಾಗೂ ಅವುಗಳಲ್ಲಿ ಬದಲಾವಣೆ ಹೊಂದುವ ಗುಣಗಳನ್ನು ವಿವರಿಸುತ್ತದೆ. ಒಂದು ಪ್ರದೇಶದಲ್ಲಿಯ ವಂಶವಾಹಿಗಳ ಪ್ರಭೇದಗಳ ಹಾಗೂ ಪರಿಸರ ವ್ಯವಸ್ಥೆಯ ಒಟ್ಟು ಮೊತ್ತವೇ ‘ಜೀವಿವೈವಿಧ್ಯ’, ಜೀವಿಗಳಿಂದಲೇ ಈ ಭೂಮಿಗೊಂದು ಅರ್ಥ ಹಾಗೂ ಅಸಾಮಾನ್ಯ ಸ್ಥಾನಮಾನ ಬಂದಿದೆ.

ಬರಿಗಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳಿಂದ ಹಿಡಿದು ೨೫ ಆನೆಗಳಷ್ಟು ಭಾರವಿರುವ ದೈತ್ಯ ತಿಮಿಂಗಿಲಗಳವರೆಗಿನ ಜೀವಿಗಳಿಗೆ ಭೂಮಿ ಆಶ್ರಯ ನೀಡಿದೆ. ಭೂಮಿಯ ಮೇಲಿನ ಜೀವಿವೈವಿಧ್ಯದ ವಿರಾಟ ರೂಪ ಯೋಚನೆಗೂ ಮೀರಿದ್ದು, ಇತ್ತಿತ್ತವಾಗಿ ಜೀವಿವೈವಿಧ್ಯವನ್ನು ವಂಶವಾಹಿ, ಪ್ರಭೇದ, ಸಮೂಹ ಹಾಗೂ ಪರಿಸರ ವ್ಯವಸ್ಥೆಗಳಿಂದ ವ್ಯಾಖ್ಯಾನಿಸುತ್ತಾರೆ. ಇವೆಲ್ಲವೂ ಜೈವಿಕ ವ್ಯೂಹದ ಮಟ್ಟಗಳು.

ಅನುವಂಶಿಕ ವೈವಿಧ್ಯವು ಜೀವಿ ಸಂದಣಿಗಳ ಪಿತ್ರಾರ್ಜಿತ ಬದಲಾವಣೆಗಳನ್ನು ಸೂಚಿಸುತ್ತದೆ. ಪ್ರಭೇದದ ಅಳತೆಗೋಲಿನಿಂದ ಜೀವ ಜಗತ್ತನ್ನು ಅಳೆಯುವುದು ಜೀವವಿಜ್ಞಾನದ ಸಂಪ್ರಾದಯ. ಹಲವಾರು ಸಾಮಾನ್ಯ ಗುಣ ಲಕ್ಷಣಗಳುಳ್ಳ, ಪರಸ್ಪರ ಲೈಂಗಿಕ ಸಂತಾನೋತ್ಪತ್ತಿ ಮಾಡಬಲ್ಲ ಜೀವಿಗಳಿಗೆ ಪ್ರಭೇದ ಎನ್ನುತ್ತಾರೆ. ಉದಾಹರಣೆಗೆ ಹೋಮೋ ಸ್ಯಾಪಿಯನ್ಸ್ (Homo sapiens) ಅಂದರೆ ಮಾನವ ಜಾತಿ. ಅಲ್ಲದೆ ಎಲ್ಲ ಆಲದ ಮರಗಳಿಗೆ ಫೈಕಸ್ ಬೆಂಗಾಲೆನ್ಸಿಸ್ (Ficus bengalensis) ಎಂದು ಕರೆಯುತ್ತಾರೆ.

ಭೂಮಿಯ ಮೇಲಿನ ಜೀವ ಸಂಪತ್ತು ಕೋಟ್ಯಾನು ಕೋಟಿ ವರ್ಷಗಳ ಜೀವ ವಿಕಾಸದ ಉತ್ಪನ್ನ. ಪುರಾತನ ಜೀವ ವೈವಿಧ್ಯವನ್ನು ತಿಳಿದುಕೊಳ್ಳಲು ಪಳೆಯುಳಿಕೆ ದಾಖಲೆಗಳು ಸಹಕಾರಿಯಾಗಿವೆ. ಸುಮಾರು ೩೯೦-೩೪೦ ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವಿಗಳು ಉದಯಿಸಿರುಬಹುದೆಂದು ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ಮೊಟ್ಟಮೊದಲು ಹುಟ್ಟಿದ್ದು ಆದಿಮ ಕೋಶಕೇಂದ್ರಿ ಜೀವಿ. ಅದು ಈಗಿನ ಸೈನೋಬ್ಯಾಕ್ಟೀರಿಯಾದಂತಿತ್ತು. ಸುಮಾರು ೧೪೦ ಕೋಟಿ ವರ್ಷಗಳ ಹಿಂದೆ ಸಕೋಶ ಕೇಂದ್ರಿ ಜೀವಿ ಉದಯಿಸಿತೆಂದು ದಾಖಲೆಗಳು ತಿಳಿಸುತ್ತವೆ. ಕಾಲಾನುಕ್ರಮದಲ್ಲಿ ಅನೇಕ ಜೀವಿ ಪ್ರಭೇದಗಳು ಹುಟ್ಟಿ ನಾಶವಾದವು. ಸುಮಾರು ೪೪ ಕೋಟಿ ವರ್ಷಗಳ ಹಿಂದೆ ಭೂವಾಸಿಗಳು ಜನಿಸಿದವು. ಕಾರ್ಬೋನಿಫೆರಸ್ ಕಾಲದಲ್ಲಿ ಕೀಟಗಳು ಪಳೆಯುಳಿಕೆಗಳಲ್ಲಿ ದೊರೆತವು. ಸಿನೋಜೋಯಿಕ್ ಕಾಲದಲ್ಲಿ ಅಂದರೆ ೬.೬ ಕೋಟಿ ವರ್ಷಗಳ ಹಿಂದೆ ವೈವಿಧ್ಯವು ದ್ವಿಗುಣವಾಯಿತು. ಸಾಗಣೆ ಊತಕಗಳುಳ್ಳ ಭೂಸಸ್ಯಗಳ ಉದಯವಾದದ್ದು ೪೦-೪೪ ಕೋಟಿ ವರ್ಷಗಳ ಹಿಂದೆ. ಕ್ರೆಟೇನಿಯಸ್ ಯುಗದ ಮಧ್ಯದಲ್ಲಿ ಸಸ್ಯಗಳ ವೈವಿಧ್ಯ ಹೆಚ್ಚಿತು.

ಭೂಮಿಯ ಮೇಲೆ ಜೀವಿವೈವಿಧ್ಯವು ಸಮನಾಗಿ ಹಂಚಿಕೆಯಾಗಿಲ್ಲ. ಅದು ಮಳೆ, ಲವಣದ ಪ್ರಮಾಣ, ಎತ್ತರ, ಆಕ್ಷಾಂಶ ಮೊದಲಾದವುಗಳನ್ನು ಅವಲಂಬಿಸಿದೆ. ಭೂಮಿಯ ಅಕ್ಷಾಂಶವು ಹೆಚ್ಚಿದಂತೆ ವೈವಿಧ್ಯವು ಕಡಿಮೆಯಾಗುತ್ತದೆ. ಅಂದರೆ ಉಷ್ಣವಲಯದ ಪ್ರದೇಶಗಳಲ್ಲಿ ಪ್ರಭೇದಗಳ ಸಂಖ್ಯೆ ಹೆಚ್ಚು. ಸಮಶೀತೋಷ್ಣ ಪ್ರದೇಶದಲ್ಲಿ ಸ್ವಲ್ಪ ಕಡಿಮೆ ಹಾಗೂ ದೃವ ಪ್ರದೇಶಗಳಲ್ಲಿ ಇನ್ನೂ ಕಡಿಮೆ. ಸಮುದ್ರ ಮಟ್ಟದಿಂದ ಭೂಮಿಯ ಎತ್ತರ ಹೆಚ್ಚಿದಂತೆ ಪ್ರಭೇದಗಳ ಸಂಖ್ಯೆ ಕಡಿಮೆಯಾಗುತ್ತದೆ. ಭೂವೈವಿಧ್ಯವು ಮಳೆ ಹಾಗೂ ಖನಿಜಾಂಶಗಳನ್ನು ಅವಲಂಬಿಸಿದೆ. ನೀರಿನಲ್ಲಿ ಕರಗಿದ ಲವಣಾಂಶಗಳ ಪ್ರಮಾಣಕ್ಕನುಗುಣವಾಗಿ ಜೀವಿಗಳನ್ನೂ ಕಾಣಬಹುದು.

ಇಂದಿನವರೆಗೆ ಕೋಟ್ಯಾನು ಕೋಟಿ ಜೀವಿಗಳನ್ನು ವರ್ಗೀಕರಿಸಿದ್ದರೂ ಕೂಡ, ನಮ್ಮ ಅರಿವಿಗೆ ಬಾರದ ಇನ್ನೂ ಅನೇಕ ಜೀವಜಂತುಗಳಿವೆ. ಅವುಗಳನ್ನು ಗುರುತಿಸಿ, ವರ್ಗೀಕರಿಸುವುದೆಂದರೆ ಕರಡಿಯ ಮೈಮೇಲಿನ ಕೂದಲುಗಳನ್ನು ಎಣಿಸಿದಷ್ಟು ಕಷ್ಟ. ಹಾಗೆ ನೋಡಿದರೆ ಇದು ಮಾನವನಿಗೆ ಕಷ್ಟದ ಕೆಲಸವಲ್ಲ. ಆತ ಕೊನೆಯ ಪ್ರಭೇದವನ್ನು ಗುರುತಿಸಿದಾಗ ಭೂಮಿಯ ಮೇಲೆ ಕೆಲವೇ ಪ್ರಭೇದಗಳು ಉಳಿದಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ.