ಬರಿಗಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳಿಂದ ಹಿಡಿದು ೨೫ ಗಜಗಳಷ್ಟು ಭಾರವಿರುವ ದೈತ್ಯ ತಿಮಿಂಗಿಲಗಳವರೆಗಿನ ಜೀವಿಗಳಿಗೆ ನಮ್ಮ ಭೂಮಿ ಆಶ್ರಯ ನೀಡಿದೆ. ಭೂಮಿಯ ಮೇಲಿನ ಜೀವಿವೈವಿಧ್ಯದ ವಿರಾಟರೂಪ ಯೋಚನೆಗೂ ಮೀರಿದ್ದು. ಸುಮಾರು ೩೪೦-೩೯೦ ಕೋಟಿ ವರ್ಷಗಳ ಹಿಂದೆ ಜೀವಿ ಉದಯಿಸಿರಬಹುದೆಂದು ವಿಜ್ಞಾನಿಗಳ ಲೆಕ್ಕಚಾರ. ಕಾಲಾನುಕ್ರಮದಲ್ಲಿ ಅನೇಕ ಜೀವಿಗಳು ನಶಿಸಿ ಹೊಸ ಜೀವಿಗಳ ಉದಯವಾಗಿವೆ. ಇವುಗಳ ಹಂಚಿಕೆಯಲ್ಲೂ ವ್ಯತ್ಯಾಸವಿದೆ. ಜೀವಿಪರಭೇಧಗಳ ಎಣಿಕೆ ಮಾಡುವುದೆಂದರೆ ಆಕಾಶದಲ್ಲಿಯ ನಕ್ಷತ್ರಗಳನ್ನು ಎಣಿಸಿದಂತೆ.

ಜೀವಿಗಳಿಲ್ಲದೆ ನಮ್ಮ ಬದುಕು ಸಾಧ್ಯವೇ? ಅಸಾಧ್ಯ. ನಮ್ಮ ಆಹಾರ, ಆಶ್ರಯ, ಔಷಧ, ಮಾಂಸ, ಹಾಲು, ಬೆಣ್ಣೆ, ಉಣ್ಣೆ, ಚರ್ಮ, ಚೌಬಿನೆ, ವ್ಯವಸಾಯದ ಸಾಮಗ್ರಿಗಳು, ಪೀಠೋಪಕರಣಗಳು, ಇತ್ಯಾದಿಗಳು ದೊರೆಯುವುದು ಜೀವಿವೈವಿಧ್ಯದಿಂದಲೇ. ಅಷ್ಟೇ ಏಕೆ, ನಾವು ತಿಂದ ಆಹಾರ ಜೀರ್ಣವಾಗಲು ಕೆಲವು ಬ್ಯಾಕ್ಟೀರಿಯಗಳು ಪ್ರಮುಖ ಪಾತ್ರ ವಹಿಸಿವೆ. ಬ್ಯಾಕ್ಟೀರಿಯಾಗಳು ನಮ್ಮ ಹೊಟ್ಟೆಯಲ್ಲಿ ಇರದಿದ್ದರೆ ನಮಗೆ ಆಹಾರ ದಕ್ಕುತ್ತಿರಲಿಲ್ಲ.

ನಮ್ಮ ದೇಶದಲ್ಲಿ ಜೀವಿವೈವಿಧ್ಯ ಬಹಳ. ೨೦ನೇ ಶತಮಾನದ ಆದಿಯಲ್ಲಿ ಸುಮಾರು ೪೦,೦೦೦ ಹುಲಿಗಳಿದ್ದವಂತೆ, ಅವುಗಳ ಸಂಖ್ಯೆ ೪-೫ ಸಾವಿರಗಳು ಮಾತ್ರ. ಹೀಗೆ ಅನೇಕ ಸಸ್ಯ, ಪ್ರಾಣಿಗಳು ನಮ್ಮ ದೇಶದಿಂದ ಕಣ್ಮರೆಯಾಗಿವೆ. ಇದಕ್ಕೆ ಮುಖ್ಯ ಕಾರಣ ಜನಸಂಖ್ಯಾ ಸ್ಪೋಟ, ತಿಳಿಗೇಡಿತನ, ದಾರಿದ್ಯ್ರ, ಬಡತನ, ಕೆಲ ಸಾಹುಕಾರರ ಹಾಗೂ ಅಧಿಕಾರಿಗಳ ಸೊಕ್ಕು, ದರ್ಪ, ಮೋಜುಗಳು. ಪರಿಸ್ಥಿತಿ ಹೀಗಿದ್ದಾಗ್ಯೂ ಕೂಡ ನಾವು ನಮ್ಮ ಜೀವಿವೈವಿಧ್ಯವನ್ನು ರಕ್ಷಿಸಲೇ ಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು.

ಜೀವಿವೈವಿಧ್ಯ ಅಂದರೇನು, ಅವುಗಳಲ್ಲಿ ಎಷ್ಟು ಪ್ರಕಾರಗಳಿವೆ, ಅವುಗಳ ಅಳಿವಿಗೆ ಕಾರಣಗಳೇನು, ಅಳಿವಿನಂಚಿನಲ್ಲಿರುವ ಪ್ರಭೇದಗಳಾವುವು, ವಿವಿಧ ಆವಾಸಗಳಾವವು, ಅವುಗಳಿಗಾದ ತೊಂದರೆ ಏನು, ಜೀವಿವೈವಿಧ್ಯ ರಕ್ಷಣೆಯಲ್ಲಿ ಕಾನೂನಿನ ಪಾತ್ರವೇನು, ನಮ್ಮ ಪಾತ್ರವೇನು ಎಂಬ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.

ಈ ಪುಸ್ತಕವನ್ನು ಸಿದ್ದಪಡಿಸಲು ಅಸ್ಪದ ಮಾಡಿಕೊಟ್ಟ ಡಾ. ಎಸ್.ಜೆ.ನಾಗಲೋಟಿಮಠ ಹಾಗೂ ಪ್ರೊ. ಎಂ.ಎ. ಸೇತುರಾವ್ ಅವರಿಗೆ ನನ್ನ ವಂದನೆಗಳು.

ಸಿ.ಡಿ.ಪಾಟೀಲ
ರಾಯಚೂರು
೦೮-೦೫-೧೯೯೯