ಸುಸ್ಥಿರ ಅಭಿವೃದ್ಧಿಗೆ ನಮ್ಮಲ್ಲಿರುವ ಜೀವಿ ವೈವಿಧ್ಯ ಅತ್ಯಗತ್ಯ. ಜೀವಿ ವೈವಿಧ್ಯದ ವಿಶೇಷಗಳನ್ನು ಎಲ್ಲರೂ ಗ್ರಹಿಸುವುದು ಸಮಯೋಚಿತ. ಬಲಿಷ್ಠ ರಾಷ್ಟ್ರಗಳು ನಮ್ಮ ಜೀವಿ ಸಂಪನ್ಮೂಲವನ್ನು ಭಕ್ಷಿಸುವ ಮುನ್ನ ಜೀವಿ ವೈವಿಧ್ಯತೆಯನ್ನು ಅಧ್ಯಯನ ಮಾಡಿ ದಾಖಲೆ ಇಟ್ಟುಕೊಳ್ಳುವುದು ನಮಗೇ ಕ್ಷೇಮ. ಪ್ರೊ. ಸಿ.ಡಿ. ಪಾಟೀಲರ ಕೃತಿ ಈ ವಿಷಯಗಳನ್ನು ಕುರಿತು ಮುಖ್ಯವಾದ ಸಂಗತಿಗಳನ್ನು ಚಿತ್ರಗಳಿಂದ, ಕೋಷ್ಟಕಗಳಿಂದ ಮತ್ತು ಅಂಕಿಅಂಶಗಳಿಂದ ನೀಡಿದ್ದಾರೆ. ಸೂಕ್ಷ್ಮಾಣು ಪ್ರಭೇದಗಳ ಸಂಖ್ಯೆಯನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿದ್ದಾರೆ. ಜೀವಿ ವೈವಿಧ್ಯವನ್ನು ರಕ್ಷಿಸುವಲ್ಲಿ ಸೂಕ್ಷ್ಮಾಣುಗಳ ಪಾತ್ರವನ್ನು ವಿವರಿಸಿದ್ದಾರೆ. ಕಶೇರುಕಗಳ ಹಾಗೂ ಸಸ್ಯಗಳ ಪ್ರಭೇದಗಳ ಸಂಖ್ಯೆ ಸಹ ಕ್ಷೀಣಿಸುತ್ತಿರುವುದು ಕಂಡು ಬಂದಿದೆ. ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಪಟ್ಟಿಯನ್ನು ಲೇಖಕರು ನಮೂದಿಸಿದ್ದಾರೆ. ಇವೆಲ್ಲ ಬಹಳ ಅಮೂಲ್ಯವಾದ ವಾಸ್ತವಾಂಶಗಳು. ಮುಂದಿನ ದಿನಗಳಲ್ಲಿ ಕಣ್ಮರೆಯಾಗಲಿರುವ ಪ್ರಭೇದಗಳ ಸಂಖ್ಯೆ ೮೮ ಎಂದು ಪಟ್ಟಿಯಲ್ಲಿ ದಾಖಲಿಸಲಾಗಿದೆ. ಪರಿಸರ ಸಂರಕ್ಷಣೆಗೆ ಬದ್ಧರಾಗಿರುವ ಕಾರ್ಯಕರ್ತರಿಗೆ ಈ ಕಿರುಹೊತ್ತಿಗೆಯಲ್ಲಿರುವ ಪಟ್ಟಿಗಳು, ಅಂಕಿ ಅಂಶಗಳು ಬಹಳ ಉಪಯುಕ್ತವಾಗಬಲ್ಲದು. ಪರಿಸರ ಚಳುವಳಿಗೆ ಪೂರಕವಾದ ಕೃತಿಯನ್ನೇ ಪ್ರೊ. ಸಿ.ಡಿ. ಪಾಟೀಲರು ರಚಿಸಿಕೊಟ್ಟಿದ್ದಾರೆ.

ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ನೆನಪಿಗಾಗಿ ಪ್ರಕಟಿಸುತ್ತಿರುವ ಈ ಕಿರುಹೊತ್ತಿಗೆಗೆ ಕರ್ನಾಟಕ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಧನಸಹಾಯ ನೀಡಿದ್ದಾರೆ. ಈ ಇಲಾಖೆಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತದೆ.

ಎಂ..ಸೇತುರಾವ್
ಪ್ರಧಾನ ಸಂಪಾದಕ
ಜೂನ್ ೧೯೯೯