ಭಾರತ ಸ್ವಾತಂತ್ರ್ಯದ ಸುವರ್ಣ ವರ್ಷವನ್ನು ಆಚರಿಸಿದ ಸಂದರ್ಭದಲ್ಲಿ ದೇಶದ ಪ್ರಗತಿ ಮತ್ತು ಜನಜೀವನದ ಉತ್ತಮೀಕರಣಗಳಿಗಾಗಿ ಕಳೆದ ಐದು ದಶಕಗಳಲ್ಲಿ ದೇಶವು ಹುಟ್ಟುಹಾಕಿದ, ಹಮ್ಮಿಕೊಂಡ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು, ಕಾರ್ಯಕ್ರಮಗಳು ಉತ್ತರೋತ್ತರವಾಗಿ ಬೆಳೆದು, ಅವುಗಳ ಸಾಧನೆಗಳು ಇಂದು ಮುಂಚೂಣಿ ಕ್ಷೇತ್ರಗಳಲ್ಲಿವೆ. ಅರ್ಧದಶಕದ ಮೈಲುಗಲ್ಲಿನ ಬಳಿ ಒಮ್ಮೆ ನಿಂತು, ಪ್ರಗತಿಪರ ಸ್ವಾವಲಂಬನೆಗೆ ಅನುವಾದ ಈ ಸಾಧನೆಗಳನ್ನು ಸ್ಮರಿಸಿ, ಅವುಗಳಿಂದ ಸ್ಫೂರ್ತಿ ಪಡೆದು ಮುಂದುವರಿಯುವುದು ಯುಕ್ತ.

ಭಾರತೀಯ ಅಂತರಿಕ್ಷ ತಂತ್ರಜ್ಞಾನವು ಸೀಮೋಲ್ಲಂಘನ ಮಾಡಿ ವಾಣಿಜ್ಯ ಕ್ಷೇತ್ರಕ್ಕೂ ಅಡಿಯಿಟ್ಟಿದೆ. ನಮ್ಮ ಅತ್ಯಗತ್ಯ ಆಧಾರವಾದ ಆರೋಗ್ಯದ ಬಗೆಗೆ ಕಳೆದ ಐದು ದಶಕಗಳಲ್ಲಿ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಜೀವ ವಿಜ್ಞಾನದ ಅನನ್ಯ ಭವಿಷ್ಯದ ಹೊಸ್ತಿಲಲ್ಲಿ ನಿಂತಿರುವ ಈ ಪರ್ವಕಾಲದಲ್ಲಿ ಜೀವಿ ವೈವಿಧ್ಯದ ಅತ್ಯಂತ ಸಂಪದ್ಭರಿತ ದೇಶಗಳಲ್ಲಿ ಒಂದಾದ ಭಾರತವು ಈ ವೈವಿಧ್ಯಮಯ ಜೀವಿಗಳು ಮತ್ತು ಪರಿಸರಗಳನ್ನು ದೇಶದ ಉಳಿವು ಮತ್ತು ಅಭಿವೃದ್ಧಿಗಳಿಗಾಗಿ ಸಂರಕ್ಷಿಸಬೇಕಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಸೀಮ ಯಶಸ್ಸು ಸಾಧಿಸಿದ್ದೇವೆ. ಈ ಕ್ಷೇತ್ರದಲ್ಲಿ ಇನ್ನೂ ಕ್ರಾಂತಿಕಾರಿ ಬೆಳವಣಿಗೆಗಳು ತಿರುವಿನಂಚಿನಲ್ಲಿದೆ.

ಇಪ್ಪತ್ತೊಂದನೆ ಶತಮಾನಕ್ಕೆ ಕಾಲಿಡುತ್ತಿರುವ ಸಂಧಿಕಾಲದಲ್ಲಿ ಈ ಎಲ್ಲ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ಸುವರ್ಣೋತ್ಸವದ ನೆನಪಿಗೆ ಪುಸ್ತಕ ಮಾಲಿಕೆಯನ್ನು ಹೊರತರಲು ಕರಾವಿಪ ನಿರ್ಧರಿಸಿತು. ಇದರ ಫಲಶ್ರುತಿ ಐದು ವಿಶಿಷ್ಟ ಹೊತ್ತಗೆಗಳು.

ಭೂಮಿಯ ಮೇಲೆ ಜೀವಿಗಳ ಹಂಚಿಕೆ ಸಮನಾಗಿಲ್ಲ. ಅನೇಕ ಶರತ್ತುಗಳು ಇದಕ್ಕೆಕಾರಣ. ಭೂಮಿಯ ಮೇಲೆ ಕೊಟ್ಯಾನು ಕೋಟಿ ಜೀವಿಗಳಿವೆ. ಇವುಗಳಲ್ಲಿ ಕೆಲವನ್ನು ಮಾತ್ರ ಮಾನವ ಗುರುತಿಸಿದ್ದಾನೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯು ಭೂಮಿಯನ್ನು ಇಂದಿನ ಸ್ಥಿತಿಗೆ ಅಂದರೆ ಸುಸ್ಥಿತಿಗೆ ತರುವಲ್ಲಿ ಪಾಲ್ಗೊಂಡಿವೆ. ಉದಾಹರಣೆಗೆ ಸೈನೋಬ್ಯಾಕ್ಟೀರಿಯಾಗಳು ಆಕ್ಸಿಜನ್ ಉತ್ಪಾದನೆಗೆ ಕಾರಣವಾಗಿ, ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣವನ್ನು ಕಡಿಮೆ ಮಾಡಿದವು. ಆಕ್ಸಿಜನ್ ಇರದಿದ್ದರೆ ಮಾನವ ಬದುಕುತ್ತಿದ್ದನೇ?

ಭೂಮಿಯ ಮೇಲೆ ಹಾಗೂ ನಮ್ಮ ದೇಶದಲ್ಲಿ ಎಷ್ಟು ಸಸ್ಯ-ಪ್ರಾಣಿಗಳಿವೆ. ಅವುಗಳಿಂದ ನಮಗೇನು ಲಾಭವಿದೆ. ಅವುಗಳ ನಾಶಕ್ಕೆ ಯಾರು ಹಾಗೂ ಹೇಗೆ ಕಾರಣ ಎಂಬುದನ್ನು ವಿವರಿಸಲಾಗಿದೆ. ಸರ್ವನಾಶವಾದ ಹಾಗೂ ಸರ್ವನಾಶದ ಅಂಚಿಗೆ ಬಂದು ನಿಂತ ಸಸ್ಯ-ಪ್ರಾಣಿಗಳ ಪಟ್ಟಿಯೂ ನಮ್ಮ ಮುಂದಿದೆ. ಜೀವಿವೈವಿಧ್ಯ ರಕ್ಷಣೆಯಲ್ಲಿ ನಮ್ಮ ಪಾತ್ರ ಬಹಳ ಇದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅಲ್ಲದೆ ಜನ ಸಾಮಾನ್ಯರಿಗೂ ಈ ಪುಸ್ತಕ ಸಹಕಾರಿಯಾಗಬಹುದು.

ಭಾರತದ ಸುವರ್ಣ ಸ್ವಾತಂತ್ಯ್ರೋತ್ಸವದ ಅಂಗವಾಗಿ ಕರಾವಿಪ ಈ ಪುಸ್ತಕವನ್ನು ಮುದ್ರಿಸಿದೆ. ಈ ಪುಸ್ತಕವನ್ನು ರಚಿಸಿಕೊಟ್ಟ ರಾಯಚೂರು ಎಲ್.ವಿ.ಡಿ. ಕಾಲೇಜಿನ ಪ್ರೊ. ಸಿ.ಡಿ. ಪಾಟೀಲರಿಗೆ ಕೃತಜ್ಞತೆಗಳು. ಈ ಪುಸ್ತಕದಲ್ಲಿರುವ ಕೆಲವು ಚಿತ್ರಗಳನ್ನು ಲೇಖಕರೇ ಬರೆದಿದ್ದಾರೆ. ಈ ಮಾಲಿಕೆಯ ಪ್ರಧಾನ ಸಂಪಾದಕರಾಗಿ, ಸಂಪಾದನೆ ಮತ್ತು ತಿದ್ದುಪಡಿಗಳ ಹೊಣೆ ಭರಿಸಿದ ಪ್ರೊ. ಎಂ.ಎ.ಸೇತುರಾವ್ ಅವರಿಗೆ ಕರಾವಿಪ ಆಭಾರಿಯಾಗಿದೆ. ಈ ಪುಸ್ತಕವನ್ನು ಮುದ್ರಿಸಿಕೊಟ್ಟ ಮೆ. ದಿಕ್ಸೂಚಿ ಪ್ರಿಂಟರ್ಸ್‌ರವರಿಗೆ ಸಹ ಕೃತಜ್ಞತೆಗಳು.

ಡಾ.ಎಸ್.ಜೆ.ನಾಗಲೋಟಿಮಠ
ಅಧ್ಯಕ್ಷರು, ಕರಾವಿಪ
ಜೂನ್ ೧೯೯೯
ಬೆಂಗಳೂರು