ವಿಶೇಷಯೋಜನೆಗಳು

) ಗಿರ್ ಸಿಂಹಧಾಮ ಯೋಜನೆ (ಒಟ್ಟು ಕ್ಷೇತ್ರ ೧೪೧೨.೧೩ .ಕಿಮೀ)

ಹಿಂದಿನ ಕಾಲದಲ್ಲಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ವಾಸಿಸುತ್ತಿದ್ದ ಸಿಂಹಗಳು ಈಗ ಗುಜರಾತಿನ ಗಿರ್ ಅರಣ್ಯಕ್ಕಷ್ಟೇ ಸೀಮಿತವಾಗಿವೆ. ಕೊನೆಗೆ ಉಳಿದುಕೊಂಡ ೨೦೦ ಸಿಂಹಗಳಿಗೂ ಆಹಾರ ಸಿಗದೆ, ಅವುಗಳ ಬದುಕು ಕಷ್ಟವಾಗಿತ್ತು. ಹಸಿವೆ, ರೋಗರುಜಿನ ಹಾಗೂ ಮನುಷ್ಯರ ಒತ್ತುವರಿಯಿಂದಾಗಿ ಇವೂ ಸರ್ವನಾಶವಾಗುವ ಭೀತಿಯಿತ್ತು. ಇವುಗಳ ರಕ್ಷಣೆಗಾಗಿ ಗುಜರಾತ ಸರಕಾರವು ೧೯೭೨ರಲ್ಲಿ ಯೋಜನೆಯನ್ನು ಜಾರಿಗೆ ತಂದಿತು.

೧೯೧೩ರಲ್ಲಿ ಕೆಲವೇ ಕೆಲವು ಸಿಂಹಗಳು ಗಿರ್ ಅರಣ್ಯದಲ್ಲಿದ್ದವು. ಆಗಿನ ಜುನಾಗಡದ ಮಹಾರಾಜರು ಅವುಗಳ ರಕ್ಷಣೆಗೆ ಮುಂದಾದರು. ಈಗ ಅಲ್ಲಿ ಸುಮಾರು ೩೦೦ ಸಿಂಹಗಳಿವೆ.

ಎಂಭತ್ತರ ದಶಕದಲ್ಲಿ ಸಂಭವಿಸಿದ ಚಕ್ರವಾತ (cyclone) ದಿಂದ ಗಿರ್ ಅರಣ್ಯಕ್ಕೆ ತುಂಬಾ ಧಕ್ಕೆಯಾಯಿತು. ಇದನ್ನರಿತ ಅಧಿಕಾರಿಗಳು ಸಿಂಹಕ್ಕೆ ಮತ್ತೊಂದು ಆವಾಸವನ್ನು ಹುಡುಕುವ ವಿಚಾರ ಮುಂದಿಟ್ಟರು. ೧೯೯೩ರಲ್ಲಿ ನಡೆದ ಕಾರ್ಯಾಗಾರದಲ್ಲಿ ಡಬ್ಲು.ಐ.ಐ. ಸಂಸ್ಥೆಯು, ರಾಜಸ್ಥಾನದ ದರ‍್ರ-ಜವಾಹರಸಾಗರ ಮತ್ತು ಸಿತಾಮಾತಾ ಹಾಗೂ ಮಧ್ಯಪ್ರದೇಶದ ’ಕುನೋ’ ಎಂಬ ಸ್ಥಳಗಳನ್ನು ಸಿಂಹಗಳಿಗೆ ಎರಡನೆಯ ಆವಾಸವಾಗಿ ಮಾಡಬೇಕೆಂದು ನಿರ್ಧರಿಸಿದರು. ಕೊನೆಗೆ ’ಕುನೋ’ದಲ್ಲಿ ಸಿಂಹಕ್ಕೆ ಎರಡನೆಯ ಆವಾಸ ಮಾಡುವ ನಿರ್ಣಯ ತೆಗೆದುಕೊಂಡರು.

ಮಧ್ಯಪ್ರದೇಶ ಸರಕಾರವು ಡಬ್ಲುಐಯ ಸಂಸ್ಥೆಯ ಸಲಹೆಯ ಮೇರೆಗೆ ೨೦ ವರ್ಷಗಳಲ್ಲಿ ಮುಗಿಸಬಹುದಾದ ಒಂದು ಯೋಜನೆಯನ್ನು ತಯಾರಿಸಿದೆ. ಈ ಯೋಜನೆ ಮೂರು ಹಂತಗಳಲ್ಲಿ ನಡೆಯುತ್ತದೆ. ಯೋಜನೆಗೆ ೬೪೦ ಮಿಲಿಯ ರೂಪಾಯಿಗಳು ಖರ್ಚಾಗುತ್ತವೆ.

೧೯೯೫-೨೦೦೦ರಲ್ಲಿ ನಡೆಯುವ ಹಂತದಲ್ಲಿ ಸಿಂಹಕ್ಕೆ ಸೂಕ್ತವಾದ ಆವಾಸ ನಿರ್ಮಾನ, ಅಲ್ಲಿರತಕ್ಕಂಥ ಜೀವಿಗಳ ಒತ್ತಡವನ್ನು ಕಡಿಮೆ ಮಾಡುವುದು, ಸಿಂಹಕ್ಕೆ ಬೇಟೆಗೆಂದು ಸೂಕ್ತ ಸ್ಥಳಗಳ ನಿರ್ಮಾಣ. ಎರಡನೆಯ ಹಂತದಲ್ಲಿ (೨೦೦೧-೨೦೦೫) ಸಿಂಹಗಳನ್ನು ಸ್ಥಳಾಂತರಿಸುವುದು. ಮೂರನೆಯ ಹಂತ (೨೦೦೬)-೨೦೧೫)ದಲ್ಲಿ ಯೋಜನೆಯ ಅಭಿವೃದ್ಧಿಯ ಬಗ್ಗೆ ವಿಚಾರಿಸುವುದು.

‘ಕುನೋ’ದ ಕ್ಷೇತ್ರ ೩೪೪.೬೮ ಚ.ಕಿಮೀ. ಅದನ್ನು ೩,೭೦೦ ಚ.ಕಿಮೀ. ದಷ್ಟು ವಿಸ್ತರಿಸುತ್ತಾರೆ. ಈ ಸ್ಥಳ ಬಹಳ ಸೂಕ್ತವಾಗಿದೆ. ಆದ್ದರಿಂದ ಸಿಂಹಗಳನ್ನು ಇಲ್ಲಿ ಸ್ಥಳಾಂತರಿಸಲು ಯೋಚಿಸಲಾಗಿದೆ.

) ಆನೆ ಯೋಜನೆ : 

 ೧೯೯೨ರಲ್ಲಿ ಈ ಯೋಜನೆ ಜಾರಿಗೆ ಬಂತು. ಮನುಷ್ಯರಿಗಾಗಿ ಆವಾಸ ನಿರ್ಮಾಣ, ಕೃಷಿ ಭೂಮಿಯಲ್ಲಿ ಹೆಚ್ಚಳ, ಅರಣ್ಯ ನಾಶ, ಸರಕಾರಿ ಯೋಜನೆಗಳ ವಿಸ್ತರಣೆಯಿಂದಾಗಿ ಆನೆಗಳ ಓಡಾಟಕ್ಕೆ, ಇಕ್ಕಟ್ಟಾಗಿ ನೀರು, ಮೇವಿಗೆ ತೊಂದರೆಯಾಗುತ್ತಿದೆ. ಅವುಗಳ ವಂಶಾಭಿವೃದ್ಧಿಗೂ ತೊಂದರೆಯಾಗಿದೆ. ಹೀಗಾಗಿ ಅವು ಗ್ರಾಮೀಣ ಪ್ರದೇಶಕ್ಕೆ ನುಗ್ಗುತ್ತಲಿವೆ. ಆನೆಗಳ ಆವಾಸವನ್ನು ಮೊದಲಿದ್ದ ಸ್ಥಿತಿಗೇ ತರಬೇಕು, ಜೀರ್ಣಗೊಂಡ ಅರಣ್ಯ ಪ್ರದೇಶಗಳನ್ನು ಸುಸ್ಥಿತಿಗೆ ತರಬೇಕು. ಆನೆಗಳ ವಲಸೆ ಮಾರ್ಗಗಳ ಮರುಸ್ಥಾಪನೆ ಮಾಡಬೇಕು. ಮನುಷ್ಯರೊಂದಿಗೆ ಆನೆಗಳ ಮುಖಾಮುಖಿ ತಪ್ಪಿಸಬೇಕು. ಹೀಗಾದಾಗ ಮಾತ್ರ ಆನೆಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಆದ್ದರಿಂದಲೇ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

) ಹುಲಿ ಯೋಜನೆ :
ಒಟ್ಟು ಕ್ಷೇತ್ರ ೨೮,೬೦೯ಚ.ಕಿಮೀ. ಭಾರತದಲ್ಲಿ ೧೯ ಹುಲಿ ಭಂಡಾರಗಳು ಸಾಪಿಸಲಾಗಿದೆ. ಕಾರಣ ಹುಲಿಗಳ ಸಂಖ್ಯೆ ತೀವ್ರಗತಿಯಲ್ಲಿ ಕುಸಿಯುತ್ತಿರುವುದನ್ನು ತಪ್ಪಿಸುವುದು. ಇಪ್ಪತ್ತನೆಯ ಶತಮಾನದ ಆದಿಯಲ್ಲಿ (೧೯೦೯-೧೯೧೦) ಭಾರತದಲ್ಲಿ ಸುಮಾರು ೪೦,೦೦೦ ಹುಲಿಗಳಿದ್ದವು. ೭೦ರ ದಶಕದಲ್ಲಿ ಹುಲಿಗಳ ಸಂಖ್ಯೆ ತೀವ್ರ ಕುಸಿದಿದ್ದರಿಂದ ೧, ಏಪ್ರಿಲ್ ೧೯೭೩ರಲ್ಲಿ ‘ಹುಲಿ ಯೋಜನೆ’ ಅಸ್ತಿತ್ವಕ್ಕೆ ಬಂದಿತು.  

ಉದ್ದೇಶ:

೧. ಭಾರತದ ಸಾಂಸ್ಕೃತಿಕ, ವೈಜ್ಞಾನಿಕ, ಆರ್ಥಿಕ ಮೌಲ್ಯಗಳ ರಕ್ಷಣೆ, ಜೀವ ಪರಿಸರ ಸಮತೋಲನ ಮತ್ತು ಸೌಂದರ್ಯೋಪಾಸನೆಗೆ ಅಗತ್ಯವಿದ್ದ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವುದು.

೨. ಜನತೆಯ ಶಿಕ್ಷಣ ಮತ್ತು ಮನರಂಜನೆಯ ದೃಷ್ಟಿಯಿಂದ ಜೈವಿಕವಾಗಿ ಮಹತ್ವದ್ದೇನಿಸಿದ ಕ್ಷೇತ್ರಗಳನ್ನು ಭಾರತದ ಪರಂಪರೆಯೆಂಬಂತೆ ಶಾಶ್ವತವಾಗಿ ಸಂರಕ್ಷಿಸಿಡುವುದು.

೩. ಈ ಭಂಡಾರದ ಒಳವಲಯದಲ್ಲಿ ಮನುಷ್ಯನ ಹಸ್ತಕ್ಷೇಪವೇ ಇರದಂತಾಗಬೇಕು; ಹೊರವಲಯದಲ್ಲಿ ಮನುಷ್ಯನ ಚಟುವಟಿಕೆಗಳು ಪರಿಸರ ಸಂವಧನೆಗೆ ಧಕ್ಕೆಯಾಗದಂತಿರಬೇಕು.

೪. ಅಲ್ಲಿದ್ದ ಜೀವ ಮಂಡಲವನ್ನು ಮೊದಲಿದ್ದ ನೈಸರ್ಗಿಕ ಸ್ಥಿತಿಗೇ ಮರಳಿಸಲು ಅಗತ್ಯವಿದ್ದಷ್ಟು ರಿಪೇರಿ ಕೆಲಸ ಮಾಡಬೇಕು.

೫. ವನ್ಯ ಜೀವಿಗಳ ಹಾಗೂ ಅವಕ್ಕೆ ಪೋಷಕವಾದ ವಾಸ ಕ್ಷೇತ್ರದ ವಿವಿಧ ಮುಖಗಳ ಬಗ್ಗೆ ಸಂಶೋಧನೆ ಮಾಡುವುದು ಹಾಗೂ ಅಲ್ಲಿನ ಸಸ್ಯ-ಪ್ರಾಣಿಗಳಲ್ಲಾಗುವ ಬದಲಾವಣೆಗಳನ್ನು ಜಾಗರೂಕತೆಯಿಂದ ದಾಖಲಿಸುವುದು.

ಈ ಯೋಜನೆ ಕಾರ್ಯರೂಪಕ್ಕೆ ಬಂದಂದಿನಿಂದ ಈಗ ನಮ್ಮ ದೇಶದಲ್ಲಿ ೪-೫ ಸಾವಿರ ಹುಲಿಗಳಿವೆ.

. ಹಿಮಾಲಯದ ಕಸ್ತೂರಿ ಜಿಂಕೆಗಳ ಯೋಜನೆ

‘ಕಸ್ತೂರಿ’ ಹೆಸರನ್ನು ನಾವೆಲ್ಲ ಕೇಳಿದ್ದೇವೆ. ಇದನ್ನು ಕಸ್ತೂರಿ ಮೃಗದಿಂದ ಪಡೆಯುತ್ತಾರೆ. ಹಿಮಾಲಯದ ತಪ್ಪಲಿನುದ್ದಕ್ಕೂ ಕಸ್ತೂರಿ ಮೃಗಗಳು ಹೇರಳವಾಗಿ ವಾಸಮಾಡಿಕೊಂಡಿದ್ದವು. ಕಸ್ತೂರಿಯನ್ನೂ ಪರಿಮಳ ದ್ರವ್ಯ ಹಾಗೂ ಔಷಧಗಳ ತಯಾರಿಕೆಯಲ್ಲಿ ಬಳಸುತ್ತಿರುವುದರಿಂದ ಈ ಮೃಗದ ಹತ್ಯೆ ನಡೆದಿದೆ. ಕಸ್ತೂರಿ ಮೃಗದ ಹಿಂಭಾಗದಲ್ಲಿ ಸುಗಂಧ ಗ್ರಂಥಿಗಳಿವೆ. ಕಸ್ತೂರಿ ಮೃಗ ಉದ್ರೇಕಗೊಂಡಾಗ ಗ್ರಂಥಿಗಳಿಂದ ಅಂಟಿನಂಥ ದ್ರವ ಸ್ರವಿಸುತ್ತದೆ. ಇದೇ ಕಸ್ತೂರಿ. ಕಸ್ತೂರಿ ಮೃಗವನ್ನು ಉದ್ರೇಕಗೊಳಿಸಲು ಅದರ ತಲೆಯನ್ನು ಕೆಳಗೆ ಮಾಡಿ ಕಟ್ಟಿ, ಕಾಯ್ದ ಸಲಾಕೆಗಳಿಂದ ಅದರ ಮೈಮೇಲೆ ಬರೆ ಎಳೆಯುತ್ತಾರೆ. ಆಗ ಪ್ರಾಣಿ ಉದ್ರೇಕಗೊಂಡು ಕಸ್ತೂರಿಯನ್ನು ಸ್ರವಿಸುತ್ತದೆ. ಕೊನೆಗೆ ಸಾವನ್ನಪ್ಪುತ್ತದೆ. ಇದರ ಆವಾಸವೂ ನಾಶವಾಗಿ ಈ ಪ್ರಾಣಿಗೆ ನೆಲೆ ಇಲ್ಲದಾಗಿದೆ. ಹೀಗಾಗಿ ಇವುಗಳ ಸಂಖ್ಯೆ ತೀರ ಕ್ಷೀಣಿಸಿತ್ತು. ಆದರೆ ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಘ ಮತ್ತು ಭಾರತ ಸರಕಾರದ ಜಂಟಿ ನೆರವಿನೊಂದಿಗೆ ಉತ್ತರ ಪ್ರದೇಶದ ‘ಕೇದಾರನಾಥ ಅಭಯಾರಣ್ಯ’ದಲ್ಲಿ ಕಸ್ತೂರಿ ಮೃಗಗಳ ಸಂರಕ್ಷಣ ಯೋಜನೆ ಜಾರಿಗೆ ಬಂದು, ಅವುಗಳಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ. 

 . ಮೊಳೆ ಮರಿ ಯೋಜನೆ:

ಭಾರತದಲ್ಲಿ ಮೊಸಳೆಗಳ ಮೂರು ಪ್ರಭೇದಗಳಿವೆ. ೧) ಉಪ್ಪು ನೀರಿನ ಮೊಸಳೆ ೨) ಸಿಹಿನೀರಿನ ಮೊಸಳೆ (ಮಗ್ಗರ್) ಹಾಗೂ ೩) ಘಡಿಯಾಲ್. ೧೯೭೦ರ ವೇಳೆಗೆ ನಮ್ಮ ದೇಶವನ್ನು ಸೇರಿಸಿ ಪ್ರಪಂಚದಾದ್ಯಂತ ಮೊಸಳೆಗಳ ಸಂಖ್ಯೆ ಬಹಳ ಕ್ಷೀಣಿಸಿತು. ಇವುಗಳ ಅಭಿವೃದ್ಧಿಗಾಗಿ ೧-೪-೧೯೭೫ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ ಹಾಗೂ ಭಾರತ ಸರಕಾರಗಳು ಸಂಯುಕ್ತವಾಗಿ ಒರಿಸ್ಸಾದಲ್ಲಿ ಮೊಸಳೆ ಮರಿ ಯೋಜನೆ ಪ್ರಾರಂಭವಾಯಿತು. ೧೯೭೫ರ ಜೂನ್ ತಿಂಗಳಲ್ಲಿ ಪ್ರಪಂಚದಲ್ಲಿಯೇ ಮೊಟ್ಟಮೊದಲು ಒರಿಸ್ಸಾದ ಟಿಕೆರ್‌ಪಾಡ್ ಎಂಬಲ್ಲಿ ಘಡಿಯಾಲ ಮೊಸಳೆಗಳನ್ನು ಸೆರೆಹಿಡಿದು ಅವುಗಳ ಮೊಟ್ಟೆಗಳನ್ನು ಮರಿಮಾಡಲಾಯಿತು. ಅದೇ ವರ್ಷ ಲಖನೌದ ಹತ್ತಿರ ಕುರ್‌ಕ್ರೇಲ್ ಎಂಬಲ್ಲಿ ಕೂಡುಮೊಟ್ಟೆಗಳನ್ನು ಮರಿಮಾಡಲಾಯಿತು.

 ಮೊಸಳೆ ಮರಿಯೋಜನೆಯನ್ನು ಅನಂತರ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಅಂದಮಾನ, ಅಸ್ಸಾಂ, ಬಿಹಾರ ಮತ್ತು ನಾಗಾಲ್ಯಾಂಡ್‌ಗಳಿಗೂ ವಿಸ್ತರಿಸಲಾಯಿತು. ಆಂಧ್ರಪ್ರದೇಶದ ಕೃಷ್ಣಾ ಅಭಯಾರಣ್ಯದ ಕ್ಷೇತ್ರ ೩೬೦೦ ಚ.ಕಿಮೀ. ಹಾಗೂ ಚಂಬಲ್ ಅಭಯಾರಣ್ಯದ ಕ್ಷೇತ್ರ ೫೪೦೦ ಚ.ಕಿಮೀ. ಆಂಧ್ರ ಪ್ರದೇಶದಲ್ಲಿ ಒಟ್ಟು ಐದು ಮೊಸಳೆ ಅಭಯಾರಣ್ಯಗಳಿವೆ. ಇಲ್ಲಿಂದ ೧೦೦೦ಕ್ಕೂ ಹೆಚ್ಚು ಮೊಸಳೆ ಮರಿಗಳನ್ನು ನಿಸರ್ಗಕ್ಕೆ ಬಿಡಲಾಗಿದೆ. ೧೯೭೭ರಲ್ಲಿ ೨೬ ಘಡಿಯಾಲ ಮರಿಗಳನ್ನು ಮಹಾನಂದಿ ನದಿಗೆ ಬಿಡಲಾಯಿತು. ೧೯೮೦ರ ವೇಳೆಗೆ ೧೦೭ ಮೊಸಳೆ ಮರಿಗಳನ್ನು ನದಿಗೆ ಬಿಡಲಾಯಿತು. ಮೊಸಳೆ ಮರಿ ಯೋಜನೆಯ ಪ್ರಯೋಜನೆಯಿಂದ ಮೊಸಳೆಗಳ ಸಂಖ್ಯೆಯಲ್ಲಿ ಅಭಿವೃದ್ಧಿಯಾಗಿದೆ.

. ಹಾಂಗಲ್ ಯೋಜನೆ:

ಕಾಶ್ಮೀರಿ ಕಡವೆ(ಹಾಂಗಲ್)ಯೂ ಸಹ ವಿನಾಶದ ಅಂಚಿಗೆ ಬಂದು ನಿಂತಿದೆ. ಈ ಪ್ರಾಣಿಗಳು ದಾಚಿಗಾಮ್ ವನ್ಯಧಾಮ ಹಾಗೂ ಹಿಮಾಚಲ ಪ್ರದೇಶ ಮತ್ತು ಜಮ್ಮುಕಾಶ್ಮೀರದ ಕೆಲವು ಪ್ರದೇಶಗಳಿಗೆ ಸೀಮಿತವಾಗಿವೆ. ದನ ಮತ್ತು ಕುರಿಗಳನ್ನು ಮೇಯಿಸಿದ್ದರಿಂದ ಇವುಗಳ ಆವಾಸ ಹಾಳಾಗಿ ಹೋಯಿತು. ಅಲ್ಲದೆ ಬೇಟೆಗಾರರ ಹಾವಳಿಯೂ ಹೆಚ್ಚಿ ಕಾಶ್ಮೀರಿ ಕಡವೆಗಳ ಸಂಖ್ಯೆ ಕ್ಷೀಣಿಸಿತು. ೧೯೭೦ರ ವೇಳೆಗೆ ಕೇವಲ ೨೦೦ ಕಡವೆಗಳು ಉಳಿದಿದ್ದವು. ಜಮ್ಮು-ಕಾಶ್ಮೀರ ಸರಕಾರವು “ಐಯುಸಿ ಎನ್” ಹಾಗೂ “ವಿಶ್ವ ನಿಸರ್ಗ ನಿಧಿ” ಸಂಸ್ಥೆಗಳ ಸಹಯೋಗದೊಂದಿಗೆ ಹಾಂಗಲ್ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯ ಫಲವಾಗಿ ೧೯೮೦ರ ವೇಳೆಗೆ ಇವುಗಳ ಸಂಖ್ಯೆ ೩೪೦ಕ್ಕೇರಿದೆ.

. ಮಣಿಪುರದ ಜಿಂಕೆ ಯೋಜನೆ: 

ಪ್ರಪಂಚದ ಅತ್ಯಂತ ಅಪರೂಪವಾದ ಪ್ರಾಣಿಗಳಲ್ಲೊಂದು ಮಣಿಪುರದ ಜಿಂಕೆ. ಇದು ಲೋಕ್‌ಘಾಟ್ ಸರೋವರದ ಆಗ್ನೇಯ ಭಾಗದಲ್ಲಿರುವ ಕೀಬುಲ್ ಲಾಮ್‌ಜೋ ಪ್ರಾಂತಕ್ಕಷ್ಟೇ ಸೀಮಿತವಾಗಿದೆ. ೧೯೭೭ರ ವೇಳೆಗೆ ಇವುಗಳ ಸಂಖ್ಯೆ ಕೇವಲ ೧೮ ಮಾತ್ರ. ಇದು ಗೊತ್ತಾದ ತಕ್ಷಣ ಈ ಯೋಜನೆಯನ್ನೂ ಜಾರಿಗೆ ತಂದು ಈ ಜಿಂಕೆಯ ಸಂರಕ್ಷಣೆಯ ಕಾರ್ಯ ಪ್ರಾರಂಭವಾಯಿತು.

. ರೈನೋ (ಘೇಂಡಾಮೃಗ) ಯೋಜನೆ: 

೧೯೮೭ರಲ್ಲಿ ಕೇಂದ್ರ ಸರಕಾರವು ರೈನೋಗಳನ್ನು ಸಂರಕ್ಷಿಸಲು ಅಸ್ಸಾಂದಲ್ಲಿ ಈ ಯೋಜನೆಯನ್ನು ಕೈಕೊಂಡಿತು. ಇಂದಿಗೂ ಕೂಡ ಇಲ್ಲಿ ರೈನೋಗಳನ್ನು ಸಂರಕ್ಷಿಸುವ ಕೆಲಸ ಚೆನ್ನಾಗಿ ನಡೆದಿದೆ.

. ಹಿಮಚಿರತೆ ಯೋಜನೆ:

ಹಿಮಾಲಯದ ಉದ್ದಕ್ಕೂ ಒಟ್ಟು ೧೨ ಹಿಮಚಿರತೆ ಅಭಯಾರಣ್ಯಗಳನ್ನು ಸ್ಥಾಪಿಸಿದೆ.

ಭಾರತ ಸರ್ಕಾರವು ೧೬ ತರಿ ಭೂಮಿ, ೧೫ ಕಾಂಡ್ಲವನ ಹಾಗೂ ೪ ಹವಳದ ದಿಬ್ಬಗಳನ್ನು ಸಂರಕ್ಷಿಸಲು ಮುಂದಾಯಿತು. ನಮ್ಮ ದೇಶದಲ್ಲಿ ೩೩ ಸಸ್ಯೋದ್ಯಾನಗಳು, ೩೩ ವಿಶ್ವವಿದ್ಯಾಲಯ ಸಸ್ಯೋದ್ಯಾನಗಳು, ೧೦೭ ಪ್ರಾಣಿ ಸಂಗ್ರಹಾಲಯಗಳು, ೪೯ ಜಿಂಕೆ ಉದ್ಯಾನಗಳು ಹಾಗೂ ೨೪ ನಿಸರ್ಗ/ತಳಿ ಅಭಿವೃದ್ಧಿ ಕೇಂದ್ರಗಳಿವೆ. ಕೆಲವು ಪ್ರಾಣಿ ಸಂಗ್ರಹಾಲಯಗಳಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಅಭಿವೃದ್ಧಿ ನಡೆದಿದೆ. ಒರಿಸ್ಸಾ ರಾಜ್ಯದ ನಂದನಕಾನನ್ ಪ್ರಾಣಿ ಉದ್ಯಾನದಲ್ಲಿ ಈಗ ೩೪ ಬಿಳಿ ಹುಲಿಗಳಿವೆ. ನಮ್ಮ ದೇಶದಲ್ಲಿ ಬಿಳಿ ಹುಲಿಗಳಿರುವುದು ಇಲ್ಲಿ ಮಾತ್ರ. ಅನೇಕ ಸಸ್ಯೋದ್ಯಾನಗಳಲ್ಲಿ ವಿವಿಧ ಬಗೆಯ ಸಸ್ಯಗಳನ್ನು ಬೆಳಸಿ, ವಂಶವಾಹಿ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದಾರೆ.

೧೯೮೬ರಲ್ಲಿ ಜೈವಿಕ ತಂತ್ರಜ್ಞಾನದ ಇಲಾಖೆಯೊಂದು ಸ್ಥಾಪನೆಯಾಯಿತು. ಇಲ್ಲಿ ಸೂಕ್ಷ್ಮಾಣು, ಹಸಿರು ನೀಲಿ ಪಾಚಿ, ಸೈನೋಬ್ಯಾಕ್ಟೀರಿಯಾ, ಊತಕ ಕೃಷಿ, ಜನಟಿಕ್ ಇಂಜಿನಿಯರಿಂಗ್, ಜೀವ ರಸಾಯನಿಕ ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿ ಸಂರಕ್ಷಿತ ವನ್ಯ ಪ್ರಾಣಿಗಳು

ನಮ್ಮ ದೇಶವನ್ನೂ ಸೇರಿಸಿ ಎಲ್ಲ ದೇಶಗಳು ಹಾಗೂ ಎಲ್ಲ ರಾಜ್ಯಗಳು ಜೈವಿಕ ಲಾಂಛನಗಳನ್ನು ಹೊಂದಿವೆ. ಇದರ ಮುಖ್ಯ ಉದ್ದೇಶ ಅಳಿವಿನ ಅಂಚಿನಲ್ಲಿರುವ ಸಸ್ಯ, ಪ್ರಾಣಿಗಳ ರಕ್ಷಣೆ ಮಾಡುವುದೇ ಆಗಿದೆ. ಅಲ್ಲದೆ ಕಾಲಕಾಲಕ್ಕೆ ಪ್ರತಿ ದೇಶವೂ ಅಳಿವಿನಂಚಿನಲ್ಲಿರುವ ಸಸ್ಯ, ಪ್ರಾಣಿಗಳನ್ನು ಅಂಚೆ ಚೀಟಿಯಲ್ಲಿ ಮುದ್ರಿಸಿ ಅವುಗಳನ್ನು ಸಂರಕ್ಷಿಸಲು ಜನರಿಗೆ ಕೇಳಿಕೊಳ್ಳುತ್ತದೆ. ಚಿತ್ರ ೪.೨, ಕೋಷ್ಟಕ ೪.೮ ಮತ್ತು ೪.೯ 

 

ಚಿತ್ರ ೪.೨ ಅಂಚೆ ಚೀಟಿಯಲ್ಲಿ ಜೀವಿವೈವಿಧ್ಯ.

ಕೋಷ್ಟಕ . ಭಾರತ ಹಾಗೂ ವಿವಿಧ ರಾಜ್ಯಗಳ ಜೈವಿಕ ಲಾಂಛನಗಳು (ಪ್ರಾಣಿಗಳು)

ಭಾರತ
ಪ್ರಾಣಿ: ಹುಲಿ
ಪಕ್ಷಿ : ನವಿಲು

ರಾಜ್ಯಗಳಜೈವಿಕಲಾಂಛನಗಳು

(ಬಟಾನಿಕಲ್ ಸರ್ವೆ ಆಫ್ ಇಂಡಿಯಾ, ಜೂಲಾಜಿಕಲ್ ಸರ್ವೆ ಆಫ್ ಇಂಡಿಯಾ, ನ್ಯಾಶನಲ್ ಬಯೋಸ್ಪಿಯರ್ ರಿಸರ್ವ್ ಆಫ್ ಇಂಡಿಯಾ, ಮತ್ತು ಬ್ಯುರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್‌) ಆಗಾಗ ಈ ಲಾಂಛನಗಳು ಬದಲಾಗುತ್ತಿರುತ್ತವೆ.

ಕ್ರ ಸಂ

ರಾಜ್ಯ

ಪ್ರಾಣಿ

ಪಕ್ಷಿ

೧. ಅಂದಮಾನ ಮತ್ತು ನಿಕೋಬಾರ ಏಡಿಭಕ್ಷಕ ಮಂಗ ಮಾಲಿಕೋಳಿ
೨. ಅರುಣಾಚಲ ಪ್ರದೇಶ ಟಾಕಿನ್ ನವಿಲಕೆಂಬೂತ
೩. ಅಸ್ಸಾಂ ಘೇಂಡಾಮೃಗ ಬಿಳಿರೆಕ್ಕೆಯ ಮರಬಾತು
೪. ಆಂಧ್ರಪ್ರದೇಶ ಚೌಸಿಂಗ್ ಹೆಜ್ಜಾರ್ಲೆ
೫. ಉತ್ತರಪ್ರದೇಶ ಚಿರತೆ ಸಾರಸ ಕೊಕ್ಕರೆ
೬. ಒರಿಸ್ಸಾ ಸಾಂಬಾರ್ ನೀಲಕಂಠ
೭. ಕರ್ನಾಟಕ ಕಾಡುಪಾಪ ಕೋಡುಕೊಕ್ಕು
೮. ಕೇರಳ ಸಿಂಗಳೀಕ ತಂತುಬಾಲದ ಭುಜಂಗ
೯. ಗುಜರಾತ ಸಿಂಹ ರಾಜಹಂಸ
೧೦. ಗೋವಾ ಮೂಷಿಕ ಜಿಂಕೆ ಕಂದು ತಲೆಯ ಕಡಲ ಕಾಗೆ
೧೧. ಜಮ್ಮು ಮತ್ತು ಕಾಶ್ಮೀರ ಕಾಶ್ಮೀರ ಸಾರಂಗ ವೆಸ್ಟ್ರೆನ್ ಟ್ರಾಗೋಪಾನ್
೧೨. ತಮಿಳುನಾಡು ನೀಲಗಿರಿ ತ್ಹಾರ್ ಚಮಚಕೊಕ್ಕು
೧೩. ತ್ರಿಪುರ ಫಾರ್ಯೆ ಬೆಳ್ಳಿ ಎಲೆ ಮಂಗ ಗಂಧರ್ವ ಪಕ್ಷಿ
೧೪. ದೆಹಲಿ ಹನುಮಾನ ಲಂಗೂರ್ ಬೂದುಗೌಜಲಕ್ಕಿ
೧೫. ನಾಗಾಲ್ಯಾಂಡ್ ಹೊಗೆ ಚಿರತೆ ರಾಜ ಪಾರಿವಾಳ
೧೬. ಪಂಜಾಬ ಕೃಷ್ಣಮೃಗ ಚಂದ್ರಮುಕುಟ
೧೭. ಪಶ್ಚಿಮಬಂಗಾಲ ಆನೆ ಮಾಸಲುಗೂಬೆ
೧೮. ಬಿಹಾರ ಸೋಮಾರಿ ಕರಡಿ ಗುಬುಟು ಬಾತು
೧೯. ಮಧ್ಯಪ್ರದೇಶ ಬಾರಾಸಿಂಗ್ ರಾಜಹಕ್ಕಿ
೨೦. ಮಣಿಪುರ ಥಾಮಿನ್ ಹ್ಯೂಮ್ಸಿ ಬಾರ್ ಬ್ಯಾಕ್ಡ್ ಫೇಸೆಂಟ್
೨೧. ಮಹಾರಾಷ್ಟ್ರ ಕಾಟ ಬೂದು ಕಾಡುಕೋಳಿ
೨೨. ಮಿಜೋರಾಮ್ ಬಂಗಾರದ ಬೆಕ್ಕು ಬೂದುಹೊಟ್ಟೆಯ ಕೆಂಬೂತ
೨೩. ಮೇಘಾಲಯ ಬಿಟುರಾಂಗ್ ಬೆಟ್ಟ ಗೊರವಂಕ
೨೪. ರಾಜಸ್ಥಾನ ಚಿಗರಿ ಇಂಡಿಯನ್ ಬಸ್ಟರ್ಡ್
೨೫. ಸಿಕ್ಕಿಂ ಕೆಂಪು ಪಾಂಡಾ ರಕ್ತ ಕೆಂಬೂತ
೨೬. ಹರಿಯಾಣ ನೀಲಿಹಸು ಕಪ್ಪು ಗೌಜಲಕ್ಕಿ
೨೭. ಹಿಮಾಚಲ ಪ್ರದೇಶ ಕಸ್ತೂರಿಮೃಗ ಮೊನಾಲ್ ಕೆಂಬೂತ

ಕೋಷ್ಟಕ . ಭಾರತ ಹಾಗೂ ರಾಜ್ಯಗಳ ಲಾಂಛನಗಳು (ಸಸ್ಯಗಳು)

ಭಾರತ
ಸಸ್ಯ: ಅರಳಿ ಮರ
ಹೂವು: ಕಮಲ

ರಾಜ್ಯಲಾಂಛನಗಳಾದಸಸ್ಯಮತ್ತುಹೂವುಗಳು

ಕ್ರ ಸಂ

ರಾಜ್ಯ

ಸಸ್ಯ

ಹೂವು

೧. ಅಂದಮಾನ ಮತ್ತು ನಿಕೋಬಾರ್ ಅಂದಮಾನ ಪಡೌಕ್ ಕಿಯಾ
೨. ಅರುಣಾಚಲ ಪ್ರದೇಶ ಚರಲೆಂಜಿ ಫಾಕ್ಸ ಟೈಲ್ ಆರ್ಕಿಡ್
೩. ಅಸ್ಸಾಂ ಬೊಂಬು ಸಂಪಿಗೆ
೪. ಆಂಧ್ರಪ್ರದೇಶ ಕೆಂಪುಸ್ಯಾಂಡರ್ಸ್ ಮಲ್ಲಿಗೆ
೫. ಉತ್ತರ ಪ್ರದೇಶ ಸಾಲವೃಕ್ಷ ಬ್ರಹ್ಮಕಮಲ
೬. ಒರಿಸ್ಸಾ ಟೆಂಡು ಅಶೋಕ
೭. ಕರ್ನಾಟಕ ಶ್ರೀಗಂಧ ನಂದಿವರ್ಧನ
೮. ಕೇರಳ ಬೀಟೆ, ಇಬಡಿ ಊದಾ ಇಕ್ಸೋರಾ
೯. ಗುಜರಾತ ಬೇವು ಕಕ್ಕೆಹೂವು
೧೦. ಗೋವಾ ದಾಸವಾಳ ಕಾಡುಉಗಸಿ
೧೧. ಜಮ್ಮುಮತ್ತು ಕಾಶ್ಮೀರ ಕಾಡು ಚೆಸ್ನಟ್ ಮರ ನೀಲಿಗಸೆಗಸೆ
೧೨. ತಮಿಳುನಾಡು ಹುಣಸೆ ಪವಲ್‌ಕುರಿಂಜಿ
೧೩. ತ್ರಿಪುರಾ ಅಗರ ನಾಗಸಂಪಿಗೆ  
೧೪. ದೆಹಲಿ ಬಿಳಿಮತ್ತಿ ಚನ್ನಂಗಿ ಮರ, ಬಿಳಿನಂದಿ
೧೫. ನಾಗಾಲ್ಯಾಂಡ್ ಅಡಕೆ ನೀಲಿವಾಂಡಾ
೧೬. ಪಂಜಾಬ ಬಿಂಡಿ, ಸಿಸ್ಸೂ ಹಾಲವಾಳ
೧೭. ಪಶ್ಚಿಮ ಬಂಗಾಲ ಗೊಬ್ರಿ ನೇರಳೆ ಪಾರಿಜಾತ
೧೮. ಬಿಹಾರ ಕಾಡು ಹಿಪ್ಪೆ ಕಾಡುಮಂದಾರ
೧೯. ಮಧ್ಯಪ್ರದೇಶ ಆಲ ಭೂತಾಳೆ
೨೦. ಮಣಿಪುರ ನಂದಿವೃಕ್ಷ ಮಣಿಪುರದ ಲಿಲಿ
೨೧. ಮಹಾರಾಷ್ಟ್ರ ತೇಗ ಹೊಳೆದಾಸವಾಳ
೨೨. ಮಿಜೋರಾಮ್ ಬಿಳಿ ಸಂಪಿಗೆ ಕಾಡುಕಣಗಲು
೨೩. ಮೇಘಾಲಯ ಕಾಡುಕಿತ್ತಳೆ ಹೂಜಿ ಹೂವು
೨೪. ರಾಜಸ್ಥಾನ ಕ್ರೇಜ್ರಿ ಕರಿಲ್
೨೫. ಸಿಕ್ಕಿಂ ರೋಡೋ ಡೆಂಡ್ರಾನ್ ನೋಬೆಲ್ ಆರ್ಕಿಡ್
೨೬. ಹರಿಯಾಣ ಕರಿಜಾಲಿ ಆಡುಸೋಗೆ
೨೭. ಹಿಮಾಚಲ ಪ್ರದೇಶ ದೇವದಾರು ಆಟಸ್

ಭಾರತದಲ್ಲಿಸಂರಕ್ಷಿತವನ್ಯಪ್ರಾಣಿಗಳು

 

೧. ಸಿಂಹ ೨. ಹುಲಿ ೩. ಬಿಳಿಹುಲಿ
೪.ಕಿರುಬ ೫. ಪಟ್ಟೆ ಹುಲಿ ೬. ಹಿಮ ಚಿರತೆ
೭. ಕಾಡುಬೆಕ್ಕು ೮. ಚುಕ್ಕೆ ಲಿನ್‌ಸಾಂಗ್ ೯. ಬಂಗಾರದ ಬೆಕ್ಕು
೧೦. ಮಾರ್ಬಲ್ ಬೆಕ್ಕು ೧೧. ಚಿಟ್ಟೆ ಬೆಕ್ಕು ೧೨. ಸುವರ್ಣ ಲಂಗೂರ
೧೩. ಪಾಂಡ ೧೪. ಬಾರಾಸಿಂಗ ೧೫. ಥಾಮಿನ್ ಜಿಂಕೆ
೧೬. ಚೌಸಿಂಗ್ ೧೭. ಕಪ್ಪುಹರಿಣ ೧೮. ಚಿಂಕಾರ
೧೯. ಕಾಶ್ಮೀರಿ ಜಿಂಕೆ ೨೦. ಕಸ್ತೂರಿ ಮೃಗ ೨೧.ಖಡ್ಗಮೃಗ
೨೨. ಆನೆ ೨೩. ಕಾಡುಕೋಣ ೨೪. ಪಿಗ್ಮಿಹಂದಿ
೨೫. ಮಾರ್ಖೋರ್ ೨೬. ಶಾಪು ೨೭. ಕಾಡುಕತ್ತೆ
೨೮. ತಾಕಿನ್ ೨೯. ಮೊಸಳೆ ೩೦. ಹೆಬ್ಬಾವು
೩೧. ಇರುವೆ ಭಕ್ಷಕ ೩೨. ಬಸ್ಟರ್ಡ್ ೩೩. ನವಿಲು
೩೪. ಬಿಳಿರೆಕ್ಕೆ ಕಾಡು ಬಾತು ೩೫. ಕೇಸರಿ ತಲೆಯ ಬಾತುಕೋಳಿ ೩೬. ತ್ರಾಗೋಪನ್
೩೭. ಪತಂಗಗಳು    

(ಆಧಾರ : GOI Wildilife brochure 1971).

 ಜೀವಿವೈವಿಧ್ಯರಕ್ಷಣೆಯಲ್ಲಿತಾಳಬೇಕಾದನಿಲುವುಗಳು

ನಮ್ಮ ಭೂಮಿಯ ಮೇಲಿರುವ ಸಮಸ್ತ ಜೀವಿವೈವಿಧ್ಯವನ್ನು ರಕ್ಷಿಸುವ ಸಲುವಾಗಿ ನಾವೆಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗಿದೆ.

 • ಜೈವಿಕ ವೈವಿಧ್ಯತೆಯನ್ನು ನಾಶಮಾಡುವ ಕಾರ್ಯಗಳನ್ನು ನಿಲ್ಲಿಸುವುದು ಅಥವಾ ಕಡಿಮೆಮಾಡುವುದು
 • ಜೀವಿವೈವಿಧ್ಯದ ನೆಲೆಗಳನ್ನು ಸಂರಕ್ಷಿಸುವುದು.
 • ‘ಜೈವಿಕ ನಿಧಿ’ಗಳನ್ನು ಸ್ಥಾಪಿಸುವುದು.
 • ಅನ್ಯ ಸ್ಥಾನೀಯವಾಗಿಯೂ ಜೀವಿವೈವಿಧ್ಯವನ್ನು ರಕ್ಷಿಸುವುದು.
 • ಯಾವುದೇ ನೆಲೆಯಲ್ಲಿ ಹೊಸ ಪ್ರಭೇದಗಳನ್ನು ಸೇರಿಸುವ ಮುನ್ನ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು.
 • ಖಾಸಗಿಯವರಿಗೆ ಜೀವಿವೈವಿಧ್ಯವನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವುದು.
 • ವಂಶಪಾರಂಪರ್ಯವಾಗಿ ಬಳಸಿಕೊಂಡು ಬಂದಿರುವ ಜೀವಿವೈವಿಧ್ಯ ಮಾದರಿಗಳು ರೈತರಿಗೆ ಸೇರಬೇಕು.
 • ಸ್ಥಳೀಯ ಪರಿಣತಿ, ಪರಂಪರಾಗತ ಪದ್ಧತಿಗಳನ್ನು ಗುರುತಿಸಿ ಜೀವಿವೈವಿಧ್ಯ ಮಾದರಿಗಳು ರೈತರಿಗೆ ಸೇರಬೇಕು.
 • ಜೀವಿವೈವಿಧ್ಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಸಂಶೋಧನೆ ಹಾಗೂ ತರಬೇತಿಗೆ ಪ್ರೋತ್ಸಾಹ ಕೊಡುವುದು.
 • ಸೂಕ್ಷ್ಮಾಣು ಸಸ್ಯ ಹಾಗೂ ಪ್ರಾಣಿಗಳ ರಾಷ್ಟ್ರೀಯ ಮಟ್ಟದ ದಾಖಲೆ ಪುಸ್ತಕ ಇಡುವುದು.
 • ಪರಿಸರಕ್ಕೆ ಹಾನಿಯಾಗದಂತೆ ಜನರಿಗೆ ಬೇಕಾದ ಸಂಪತ್ತನ್ನು ಒದಗಿಸುವುದು.
 • ಶಿಕ್ಷಣ ಹಾಗೂ ತಿಳುವಳಿಕೆಯಿಂದ ಸಂರಕ್ಷಣೆಯ ಮಹತ್ವ ತಿಳಿಸುವುದು.
 • ಕಟ್ಟುನಿಟ್ಟಿನ ಕಾಯ್ದೆಗಳನ್ನು ಜಾರಿಗೆ ತರುವುದು.
 • ಸಂಘ, ಸಂಸ್ಥೆ, ಸ್ಥಳೀಯರು ಹಾಗೂ ಪ್ರಮುಖರನ್ನು ಉಪಯೋಗಿಸಿಕೊಂಡು ಸ್ಥಳೀಯ ಜೀವಿವೈವಿಧ್ಯವನ್ನು ಸಂರಕ್ಷಿಸುವುದು.

* * *