ಅತ್ಯಂತ ವಿಶಾಲ ಕ್ಷೇತ್ರವುಳ್ಳ ಆವಾಸಗಳು ಉತ್ತರ ಮತ್ತು ದಕ್ಷಿಣ ದೃವಗಳಿಂದ ಹಿಡಿದು ಅರಣ್ಯಗಳವರೆಗೆ, ಹವಳ ದಿಬ್ಬಗಳಿಂದ ಹಿಡಿದು ಆಳವಾದ ಸಾಗರ ಆವಾಸಗಳವರೆಗೆ ಮತ್ತು ಭೂ ಹಾಗೂ ಇತರ ಜಲಾವಾಸಗಳು ಭೂಮಿಯ ಮೇಲಿವೆ. ಜೀವ ಪರೆಯ ನಿರ್ವಹಣೆ ಹಾಗೂ ಅದರ ರಕ್ಷಣೆಯಲ್ಲಿ ನೈಸರ್ಗಿಕ ಪರಿಸರಗಳ ವರ್ಗೀಕರಣವು ಪ್ರಮುಖ ಪಾತ್ರವಹಿಸುತ್ತದೆ. ಜೀವಿಗಳ ವರ್ಗೀಕರಣಕ್ಕಿಂತ ಆವಾಸಗಳ ವರ್ಗಿಕರಣವು ಬಹಳ ಕಠಿಣ. ಯಾಕೆಂದರೆ ಜೀವಪರೆಯಲ್ಲಿ ನೈಸರ್ಗಿಕ ಪರಿಸರವು ಬಿಡಿಬಿಡಿಯಾಗಿರುವುದಿಲ್ಲ. ಅಲ್ಲದೆ ಯಾವುದು ಎಲ್ಲಿಗೆ ಮುಗಿಯಿತು ಹಾಗೂ ಯಾವುದು ಎಲ್ಲಿಂದ ಪ್ರಾರಂಭವಾಯಿತು ಎಂದು ಹೇಳುವುದು ಕಠಿಣ. ಪರಿಸರ ಶಾಸ್ತ್ರದಲ್ಲಿ ಅನೇಕ ಪದಗಳಾದ ನಿವಾಸಿ, ಸಮೂಹ, ಪರಸರ ವ್ಯವಸ್ಥೆ ಮತ್ತು ಬಯೋಮ್ (ದೊಡ್ಡಗಾತ್ರದ ಪರಿಸರ ವ್ಯವಸ್ಥೆ) ಮುಂತಾದವುಗಳನ್ನು ಬಳಸಲಾಗುತ್ತದೆ. ಈ ಎಲ್ಲ ಪದಗಳು ಪರಿಸರ ವಿಜ್ಞಾನವನ್ನು ಅಭ್ಯಾಸ ಮಾಡಲು ಸಹಕಾರಿಯಾಗಿವೆ.

ಒಂದು ಪ್ರದೇಶದಲ್ಲಿಯ ಭೌತ ಪರಿಸರ ಹಾಗೂ ಜೀವ ಪರಿಸರವನ್ನು ಅಭ್ಯಾಸಮಾಡಿ ಅಲ್ಲಿಯ ಪರಿಸರ ವ್ಯವಸ್ಥೆಯನ್ನು ವರ್ಗೀಕರಿಸುತ್ತಾರೆ. ಜೀವಿಗಳಿಗೆ ನಾಲ್ಕು ಮುಖ್ಯ ಆವಾಸಗಳಿವೆ.

೧. ಉಪ್ಪು ನೀರಿನ ಆವಾಸ
೨. ಅಳಿವೆ ಆವಾಸ
೩. ಸಿಹಿ ನೀರಿನ ಆವಾಸ ಹಾಗೂ
೪. ಭೂ ಆವಾಸ.

ಭೂ ಆವಾಸವನ್ನು ಅರಣ್ಯ, ಹುಲ್ಲುಗಾವಲು ಮತ್ತು ಬೆಳೆ ಆವಾಸಗಳಾಗಿ ವರ್ಗೀಕರಿಸಲಾಗಿದೆ.

ನಮ್ಮ ದೇಶದ ಉಷ್ಣವಲಯದ ಮಳೆಗಾಡುಗಳಿಂದ ಹಿಡಿದು ಮರಳು ಮುಳ್ಳುಗಾಡಿನವರೆಗೆ, ಹಿಮಾಲಯದ ಎತ್ತರದ ಪ್ರದೇಶಗಳು, ಸಿಹಿ ನೀರಿನ ತರಿ ಭೂಮಿಯಿಂದ ಹಿಡಿದು ಆಳವಾದ ಸಮುದ್ರದ ವರೆಗೆ, ಉಷ್ಣವಲಯದ ಸವಾನಾ (ಹುಲ್ಲುಗಾವಲು) ದಿಂದ ಹಿಡಿದು ಸಮಶೀತೋಷ್ಣ ಹುಲ್ಲುಗಾವಲಿನವರೆಗೆ ಪರಿಸರ ವ್ಯವಸ್ಥೆ ಹರಡಿದೆ.

ಅನೇಕ ಪರಿಸರ ವಿಜ್ಞಾನಿಗಳು ನಮ್ಮ ದೇಶದಲ್ಲಿಯ ಪರಿಸರ ವ್ಯವಸ್ಥೆಗಳನ್ನು, ಆ ವ್ಯವಸ್ಥೆಯಲ್ಲಿಯ ಸಸ್ಯ, ತಾಪಮಾನ, ಮಳೆ, ಭೌತ ಪರಿಸರ ಹಾಗೂ ಜೀವ ಪರಿಸರಕ್ಕನುಗುಣವಾಗಿ ವರ್ಗೀಕರಿಸಿದ್ದಾರೆ.

ಭಾರತದಸಸ್ಯಪ್ರದೇಶಗಳು(ನಕ್ಷೆ.)

. ಪಶ್ಚಿಮ ಹಿಮಾಲಯ: ಕಾಶ್ಮೀರದಿಂದ ಉತ್ತರ ಪ್ರದೇಶದ ಕುಮಾನ್‌ದ ವರೆಗೆ ಈ ಪ್ರದೇಶ ಹರಡಿದೆ. ಇಲ್ಲಿ ೧೦೦-೨೦೦ ಸೆಮೀ. ವರೆಗೆ ಮಳೆಯಾಗುತ್ತದೆ. ಎತ್ತರಕ್ಕನುಗುಣವಾಗಿ ಸಸ್ಯರಾಶಿಯಲ್ಲಿ ಬದಲಾವಣೆಗಳಾಗುತ್ತವೆ. ಈ ಪ್ರದೇಶವನ್ನು ಅರೆ ಉಷ್ಣವಲಯ, ಉಷ್ಣವಲಯ ಹಾಗೂ ಅಲ್ಪೈನ್ ವಲಯಗಳನ್ನಾಗಿ ವಿಂಗಡಿಲಾಗಿದೆ. ಈ ಪ್ರದೇಶ ೧೫೦೦-೪೫೦೦ಮೀ. ಎತ್ತರವಿದೆ.

. ಪೂರ್ವ ಹಿಮಾಲಯ: ಪಶ್ಚಿಮ ಹಿಮಾಲಯಕ್ಕಿಂತಲೂ ಈ ವಲಯದಲ್ಲಿ ಆದ್ರತೆ ಹೆಚ್ಚು. ಇದರಲ್ಲಿ ಕೂಡ ಉಷ್ಣವಲಯ, ಸಮಶೀತೋಷ್ಣ ವಲಯ ಹಾಗೂ ಆಲ್ಪೈನ್ ವಲಯಗಳೆಂದು ವಿಂಗಡಿಸಲಾಗಿದೆ. ಈ ಪ್ರದೇಶ ೧೮೦೦-೫೦೦೦ ಮೀ. ಎತ್ತರವಿದೆ.

. ಸಿಂಧೂ ಸಮತಟ್ಟು ಪ್ರದೇಶ: ಇಲ್ಲಿ ೭೫ ಸೆಮೀ. ಗಿಂತ ಕಡಿಮೆ ಮಳೆಯಾಗುತ್ತದೆ. ರಾಜಸ್ಥಾನ, ಕಛ್ ಹಾಗೂ ಪಂಜಾಬದ ಶುಷ್ಕ ಹಾಗೂ ಅರೆಶುಷ್ಕ ಪ್ರದೇಶಗಳನ್ನೊಳಗೊಂಡಿದೆ. ಈ ಪ್ರದೇಶದಲ್ಲಿರುವ ಉಷ್ಣವಲಯದ ಕಾಡು ಗಳಲ್ಲಿ ಮುಳ್ಳುಗಳಲಿಂದ ಕೂಡಿದ ಸಸ್ಯಗಳಿವೆ.

. ಗಂಗಾನದಿ ಸಮತಟ್ಟು ಪ್ರದೇಶ: ಇಲ್ಲಿ ೧೫೦ ಸೆಮೀ. ದಷ್ಟು ಮಳೆಯಾಗುತ್ತದೆ. ಉತ್ತರ ಪ್ರದೇಶ, ಬಂಗಾಲ, ಬಿಹಾರ ಹಾಗೂ ಒರಿಸ್ಸಾದ ಕೆಲಭಾಗಗಳನ್ನು ಒಳಗೊಂಡಿದೆ. ಇದು ನೆರೆಮಣ್ಣು ಭೂಮಿಯಿಂದ ಒಳಗೊಂಡಿದ್ದು ಬಹಳ ಫಲವತ್ತಾದ ಮಣ್ಣು ಇಲ್ಲಿದೆ. ಉಷ್ಣವಲಯದ ಆರ್ದ್ರ ಮಿಶ್ರಿತ ಎಲೆ ಉದುರುವ ಕಾಡು ಹಾಗೂ ಶುಷ್ಕ ಎಲೆ ಉದುರುವ ಕಾಡುಗಳನ್ನು ಇಲ್ಲಿ ಕಾಣಬಹುದು.

. ಮಧ್ಯಭಾರತ: ಇಲ್ಲಿ ೧೫೦-೨೦೦ ಸೆಮೀ. ದಷ್ಟು ಮಳೆಯಾಗುತ್ತದೆ. ಮಧ್ಯಪ್ರದೇಶದವರೆಗೂ ಈ ಪ್ರದೇಶವಿದೆ. ಇಲ್ಲಿ ತೇಗಿನ ಅರಣ್ಯಗಳು ಬಹಳ ಸಾಮಾನ್ಯ.

. ಪಶ್ಚಿಮ ಘಟ್ಟಗಳು: ಗುಜರಾತದಿಂದ ಕನ್ಯಾಕುಮಾರಿಯವರೆಗೆ ಈ ಘಟ್ಟಗಳು ಹಬ್ಬಿವೆ. ಇಲ್ಲಿ ಸುಮಾರು ೨೫೦ ಸೆಮೀ. ದಷ್ಟು ಮಳೆ ಬೀಳುತ್ತದೆ. ಪಶ್ಚಿಮಕ್ಕೆ ಉಷ್ಣವಲಯದ ನಿತ್ಯ ಹರಿದ್ವರ್ಣ ಅರಣ್ಯಗಳಿವೆ. ಅರೆಹರಿದ್ವರ್ಣ ಅರಣ್ಯಗಳು ಮಧ್ಯದಲ್ಲಿವೆ. ನೀಲಗಿರಿ ಪ್ರದೇಶದಲ್ಲಿ ಸಮಶೀತೋಷ್ಣ ನಿತ್ಯಹರಿದ್ವರ್ಣ ಹಾಗೂ ಅರೆ ಉಷ್ಣವಲಯದ ಕಾಡುಗಳಿವೆ. ಕರಾವಳಿಯಲ್ಲಿ ಕಾಂಡ್ಲವನಗಳಿವೆ.

ನಕ್ಷೆ ೩.೧: ಭಾರತದ ಸಸ್ಯ ಶಾಸ್ತ್ರೀಯ ಪ್ರದೇಶಗಳು

 . ದಕ್ಕನ್ ಪ್ರಸ್ತಭೂಮಿ: ಮೂರೂ ಕಡೆ ನೀರಿನಿಂದ ಸುತ್ತುವರಿದ ಭಾರತದ ಪ್ರದೇಶಕ್ಕೆ ದಕ್ಕನ ಪ್ರಸ್ತಭೂಮಿ ಎನ್ನುತ್ತಾರೆ. ಇಲ್ಲಿ ಸುಮಾರು ೧೦೦ ಸೆಮೀ. ಮಳೆ ಬೀಳುತ್ತದೆ. ಉಷ್ಣವಲಯದ ಶುಷ್ಕ ಎಲೆ ಉದುರುವ ಮತ್ತು ಮುಳ್ಳಿನಿಂದ ಕೂಡಿದ ಅರಣ್ಯಗಳು ಇಲ್ಲಿವೆ.

. ಅಸ್ಸಾಮ್: ಇಲ್ಲಿ ೨೫೦ ಸೆಮೀ. ದಷ್ಟು ಮಳೆ ಸುರಿಯುತ್ತದೆ. ನಿತ್ಯಹರಿದ್ವರ್ಣ ಕಾಡುಗಳು ಅಥವಾ ಅರೆ ಉಷ್ಣವಲಯದ ಆರ್ದ್ರ ಕಾಡುಗಳು ಅಥವಾ ಸೂಚಿಪರ್ಣಿ ಅರಣ್ಯಗಳು ಇಲ್ಲಿವೆ. ಬಂಬು ಇಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

. ಅಂದಮಾನ ಮತ್ತು ನಿಕೋಬಾರ್ ದ್ವೀಪಗಳು: ಈ ದ್ವೀಪಗಳಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತದೆ. ಆರ್ದ್ರ ಉಷ್ಣವಲಯದ ನಿತ್ಯಹರಿದ್ವರ್ಣ ಅರಣ್ಯಗಳು, ಉಷ್ಣವಲಯದ ಅರೆ ನಿತ್ಯಹರಿದ್ವರ್ಣ ಅರಣ್ಯಗಳು ಇಲ್ಲವೆ. ಜೌಗು ಅರಣ್ಯ ಹಾಗೂ ಕಾಂಡ್ಲ ವನಗಳು ಕರಾವಳಿಗುಂಟ ಕಾಣಿಸುತ್ತವೆ. (ನಕ್ಷೆ ೩.೨).

ಜಲಚಕ್ರ

ಬಂಗಾರದ ಬೆಲೆಯುಳ್ಳ ನೀರು, ಈ ಸೃಷ್ಟಿಯ ಅತ್ಯಮೂಲ್ಯ ಕೊಡುಗೆ. ಜೀವಿಗಳು ಬದುಕುಳಿಯಲು ಗಾಳಿಯನ್ನು ಬಿಟ್ಟರೆ ಅತ್ಯಂತ ಅವಶ್ಯಕವಾದುದು ನೀರು. ತಾಯಿಯ ಗರ್ಭದಲ್ಲಿ ಮಗು ಬೆಳೆಯುವುದು ನೀರಿನಲ್ಲಿಯೇ. ನೀರು ಜೀವನದ ಉಸಿರು. ಗ್ರೀಕ್ ದೇಶದ ತತ್ವಜ್ಞಾನಿಯೊಬ್ಬರು ನೀರನ್ನು “ಸೃಷ್ಟಿಯ ತಳಹದಿ” ಎಂದು ಕರೆದಿದ್ದಾರೆ. ಜೀವರಕ್ಷಕವೂ, ಜೀವನಾವಶ್ಯಕವೂ ಆಗಿರುವ ನೀರನ್ನು ನಮ್ಮ ಪೂರ್ವಜರು ದೈವತ್ವಕ್ಕೆ ಏರಿಸಿದ್ದಾರೆ.

ಭೂಮಿಯ ಮೇಲೆ ೧.೫ ಬಿಲಿಯನ್ ಘನ ಕಿ.ಮೀ. ನಷ್ಟು ನೀರಿದೆ. ಅದರಲ್ಲಿ ಮಹಾಸಾಗರ ಹಾಗೂ ಸಮುದ್ರಗಳಲ್ಲಿರುವ ನೀರು ಸೇಕಡಾ ೯೭.೧ರಷ್ಟು, ಹಿಮ ಬಂಡೆಗಳ ರೂಪದಲ್ಲಿ ಸೇಕಡಾ ೨.೨೪ರಷ್ಟು, ಹಿಮ ನೀರಿನ ಕೆರೆಗಳಲ್ಲಿರುವುದು ಸೇಕಡಾ ೦.೦೦೯ರಷ್ಟು, ಉಪ್ಪು ನೀರಿನ ಕೆರೆಗಳಲ್ಲಿ ಸೇಕಡಾ ೦.೦೦೮ರಷ್ಟು, ಭೂಮಿಯ ಮೇಲಿರುವ ನದಿಗಳಲ್ಲಿ ಸೇಕಡಾ ೦.೦೦೧ರಷ್ಟು ಹಾಗೂ ಭೂಮಿಯಾಳದಲ್ಲಿ ಸೇಕಡಾ ೦.೬೧ರಷ್ಟು ನೀರಿದೆ.

ಒಂದು ಟನ್ ಗೋದಿ ಬೆಳೆಯಲು ೯.೧೦ಲಕ್ಷ ಲೀಟರ್ ನೀರು, ಒಂದು ಟನ್ ಅಕ್ಕಿ ಬೆಳೆಯಲು ೧೬ ಲಕ್ಷ ಲೀಟರ್ ನೀರು, ಹಸುವಿಗೆ ದಿನಾಲು ಕುಡಿಯಲು ೩೦.೭೫ ಲೀಟರ್ ನೀರು ಮಾನವನಿಗೆ ಕುಡಿಯಲು ದಿನಕ್ಕೆ ೨-೩ ಲೀಟರ್ ನೀರು ಬೇಕು. 

ಚಿತ್ರ ೩.೧ ಜಲಚಕ್ರ

 ಜಲಚಕ್ರ ಅಧಿಪತಿ ಸೂರ್ಯ. ಸೂರ್ಯನ ಶಾಖದಿಂದ ಸಾಗರ, ಸರೋವರ ಹಾಗೂ ನದಿಗಳ ನೀರು ಆವಿಯಾಗಿ ವಾತಾವರಣವನ್ನು ಸೇರುತ್ತದೆ. ಸಸ್ಯಗಳು ಭೂಮಿಯಿಂದ ನೀರನ್ನು ಹೀರಿಕೊಂಡು ಸುಮಾರು ಸೇಕಡಾ ೯೮-೯೯ರಷ್ಟು ನೀರನ್ನು ಮತ್ತೆ ವಾತಾವರಣಕ್ಕೆ ಬಿಟ್ಟುಕೊಡುತ್ತವೆ. ಇದಕ್ಕೆ “ಬಾಷ್ಪೀಭವನ” ಎನ್ನುತ್ತಾರೆ. ಪ್ರಾಣಿಗಳ ದೇಹದಲ್ಲಿರುವ ನೀರೂ ಕೂಡ ವಾತಾವರಣ ಸೇರುತ್ತದೆ. ಈ ಎಲ್ಲ ನೀರು ಆವಿಯಾಗುತ್ತದೆ. ಆವಿಗೆ ತಂಪಾದಾಗ ಮೋಡಗಳಾಗುತ್ತವೆ. ಮೋಡಗಳಿಗೆ ತಂಪಾದಾಗ ಚಿಕ್ಕ ಚಿಕ್ಕ ನೀರಿನ ಕಣಗಳು ಉತ್ಪತ್ತಿಯಾಗುತ್ತವೆ. ಚಿಕ್ಕ ನೀರಿನ ಕಣಗಳು ಬೆಳೆಯುತ್ತ ದೊಡ್ಡ ನೀರಿನ ಹನಿಗಳಾಗಿ, ಮಳೆಯ ರೂಪದಲ್ಲಿ ಭೂಮಿಗೆ ಹಿಂತಿರುಗುತ್ತದೆ. ಮಳೆಯ ನೀರಿನಲ್ಲಿ ಸ್ವಲ್ಪ ನೀರು ಭೂಮಿಯಲ್ಲಿ ಇಂಗುತ್ತದೆ. ಉಳಿದ ನೀರು ಹರಿದು ಹೋಗಿ ಮತ್ತೆ ಸಮುದ್ರ ಸೇರುತ್ತದೆ. ಆವೀಕರಣ ಹಾಗೂ ಭಾಷ್ಪೀಭವನ ಕ್ರಿಯೆಯಿಂದ ಮತ್ತೆ ವಾತಾವರಣ ಸೇರಿ ಮತ್ತೆ ಮಳೆಯಾಗುತ್ತದೆ. ಇದೇ ಜಲಚಕ್ರ. (ಚಿತ್ರ ೩.೧)

ನೀರು ಅಜೈವಿಕ ಸಂಯುಕ್ತ ವಸ್ತು. ಸಸ್ಯಗಳು ಭೂಮಿಯಿಂದ ನೀರನ್ನು, ವಾತಾವರಣದಿಂದ ಕಾರ್ಬನ್‌ಡೈ ಆಕ್ಸೈಡ್ ಅನಿಲವನ್ನು ಹೀರಿಕೊಂಡು ಸೂರ್ಯನ ರಶ್ಮಿಯಲ್ಲಿ ಆಹಾರವನ್ನು ತಯಾರಿಸುತ್ತವೆ. ಅಂದರೆ ನೀರಿಲ್ಲದೆ ಸಸ್ಯಗಳಿರಲಾರವು, ಸಸ್ಯಗಳಿಲ್ಲದೆ ಆಹಾರವಿರಲಾರದು, ಆಹಾರವಿಲ್ಲದೆ ಪ್ರಾಣಿಗಳಿರಲಾರವು.

ಮಳೆಯ ಪ್ರಮಾಣಕ್ಕನುಗುಣವಾಗಿ ಅರಣ್ಯಗಳು ಬೆಳೆಯುತ್ತವೆ. ಅರಣ್ಯಕ್ಕನುಗುಣವಾಗಿ ಪ್ರಾಣಿಗಳಿರುತ್ತವೆ. ಅರಣ್ಯ ಪ್ರಾಣಿಗಳು ಹೇರಳವಾಗಿದ್ದರೆ ಮಾನವನ ಬದುಕು ಬಂಗಾರವಾಗಬಲ್ಲದು.

ಅರಣ್ಯಗಳು

ನಮ್ಮ ದೇಶದಲ್ಲಿ ಸುಮಾರು ೩.೭೮ ಕೋಟಿ ಹೆಕ್ಟರ್‌ಗಳಷ್ಟು ಸಂವೃತ ಅರಣ್ಯವಿದೆ. ನಮ್ಮ ದೇಶದಲ್ಲಿಯ ಒಟ್ಟು ಅರಣ್ಯ ಪ್ರದೇಶ ೭.೫ ಕೋಟಿ ಹೆಕ್ಟರುಗಳು. ಅರಣ್ಯ ನಾಶದಿಂದ ಬಹಳಷ್ಟು ಜೀವಿವೈವಿಧ್ಯ ನಶಿಸಿದೆ. ಅರಣ್ಯ ನಾಶದಿಂದ ಸೂಕ್ಷ್ಮಾಣು ಜೀವಿವೈವಿಧ್ಯ ಹಾಗೂ ಇತರ ಸಸ್ಯ-ಪ್ರಾಣಿಗಳು ಜೀವವೈವಿಧ್ಯದ ಮೇಲೆ ದುಷ್ಪರಿಣಾಮಗಳಾಗುತ್ತಲಿವೆ.

ವಾಣಿಜ್ಯಕ್ಕಾಗಿ ಅಘಾದವಾದ ಅರಣ್ಯ ನಾಶವಾಗಿದೆ. ನಾವು ಸುಮಾರು ೧.೨ಕೋಟಿ ಘನ ಮೀಟರ್‌ನಷ್ಟು ಮರವನ್ನು ಅರಣ್ಯಕ್ಕೆ ಯಾವ ತೊಂದರೆ ಇಲ್ಲದೆ ಬಳಸಬಹುದು. ಆದರೆ ನಮಗೆ ಬೇಕಾದ ಒಟ್ಟು ಮರದ ಪ್ರಮಾಣ ೨.೭೮ ಕೋಟಿ ಘನ ಮೀಟರ್‌ನಷ್ಟು. ಪಶ್ಚಿಮ ಕರಾವಳಿ, ಅಂದಮಾನ ಮತ್ತು ನಿಕೋಬಾರ್ ಹಾಗೂ ಅಸ್ಸಾಮ್‌ಗಳಲ್ಲಿಯ ನಿತ್ಯಹರಿದ್ವರ್ಣ ಅರಣ್ಯಗಳನ್ನು ಮರಕ್ಕಾಗಿ ಮಿತಿ ಮೀರಿ ಬಳಸಿದ್ದರಿಂದ ಸಾಕಷ್ಟು ತೊಂದರೆಯಾಗಿದೆ. ಹಿಮಾಲಯವೂ ಸೇರಿ ಉತ್ತರ ಪ್ರದೇಶದಲ್ಲಿಯ ಪರಿಸರ ವ್ಯವಸ್ಥೆ ಹಾಗೂ ಅರಣ್ಯ ನಾಶವಾಗಿರುವುದರಿಂದ ಮಣ್ಣಿನ ಸವಕಳಿ, ಹೂಳು ತುಂಬುವುದು, ನೆರೆಗಳಿಂದ ಕಾಲುವೆಗಳು ಹಾಳಾಗುವುದು ಸೇರಿ ಅಣೆಕಟ್ಟುಗಳ ಆಯಸ್ಸು ಕಡಿಮೆಯಾಗಿದೆ. 

ನಕ್ಷೆ ೩.೨: ಕೇಂದ್ರ ಸರಕಾರದ ಪರಿಸರ ಹಾಗೂ ಅರಣ್ಯ ಇಲಾಖೆಯವರು ಸಂರಕ್ಷಿಸುತ್ತಿರುವ ತರಿ ಭೂಮಿ, ಕಾಂಡ್ಲವನ ಹಾಗೂ ಹವಳದ ದಿಬ್ಬಗಳು.

ಅಭಿವೃದ್ಧಿ ಯೋಜನೆಗಳು ಹಾಗೂ ಕಾರ್ಯಚಟುವಟಿಕೆಗಳು ಅರಣ್ಯ ಹಾಗೂ ಜೀವಿವೈವಿಧ್ಯದ ಮೇಲೆ ತುಂಬ ಒತ್ತಡವನ್ನುಂಟುಮಾಡಿವೆ. ಅಣೆಕಟ್ಟುಗಳ ನಿರ್ಮಾನ, ವಿದ್ಯುತ್ ಯೋಜನೆಗಳು, ಕಾರ್ಖಾನೆಗಳ ನಿರ್ಮಾಣ, ಮಾನವ ಆವಾಸ ನಿರ್ಮಾನ, ರಸ್ತೆ ನಿರ್ಮಾಣ ಹಾಗೂ ಗಣಿಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶ ಮಾಡುತ್ತವೆ. ಇದರಿಂದ ಸ್ಥಳೀಯ ಸಸ್ಯ-ಪ್ರಾಣಿ ಪ್ರಭೇದಗಳ ಮೇಲೆ ದುಷ್ಪರಿಣಾಮವಾಗುತ್ತದೆ. ಸುಮಾರು ೪೦.೨೩ ಲಕ್ಷ ಹೆಕ್ಟರ್‌ಗಳಷ್ಟು ಅರಣ್ಯವನ್ನು ಖಾಸಗಿ ಉಪಯೋಗಕ್ಕಾಗಿ ೧೯೫೧-೧೯೮೦ರ ಅವಧಿಯಲ್ಲಿ ಕೊಡಲಾಗಿದೆ.

ಅಘಾಧ ಪ್ರಮಾಣದಲ್ಲಿ ಬೇಕಾದ ಉರುವಲು ಹಾಗೂ ಚೌಬಿನೆ ಮರಗಳಿಗಾಗಿ ಹಾಗೂ ಪ್ರಾಣಿಗಳ ಮೇವಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ. ನಮ್ಮ ದೇಶದಲ್ಲಿ ಉರುವಲಿಗಾಗಿ ಸುಮಾರು ೪ ಕೋಟಿ ಘನ ಮೀ. ದಷ್ಟು ಮರವನ್ನು ಅರಣ್ಯಕ್ಕೆ ತೊಂದರೆಯಾಗದೆ ಬಳಸಬಹುದಾಗಿದೆ. ಆದರೆ ನಮಗೆ ಬೇಕಾದ ಒಟ್ಟು ಉರುವಲು ಮರದ ಪ್ರಮಾಣ ೨೩.೫ ಘನ ಮೀ.ಗಳಷ್ಟು. ಹೀಗಿದ್ದಾಗ ಅರಣ್ಯಗಳು ಉಳಿದಾವೆಯೇ?

ನಮ್ಮ ದೇಶದಲ್ಲಿ ಸುಮಾರು ೫೦ ಕೋಟಿ ಜಾನುವಾರುಗಳಿವೆ. ಅವಕ್ಕೆ ೮೮.೨ ಕೋಟಿ ಟನ್‌ಗಳಷ್ಟು ಮೇವು ಬೇಕು. ಆದರೆ ಅವಕ್ಕೆ ಸಿಗುತ್ತಿರುವ ಮೇವು ಕೇವಲ ೪೩.೪ ಕೋಟಿ ಟನ್‌ಗಳಷ್ಟು.

ನಮ್ಮಲ್ಲಿ ಜನಸಂಖ್ಯಾ ಸ್ಪೋಟವಾಗಿದೆ. ಸಿಕ್ಕಾಪಟ್ಟೆ ಜನಸಂಖ್ಯೆ ಹೆಚ್ಚಿದೆ. ಹುಟ್ಟಿದ ಪ್ರತಿಯೊಬ್ಬನಿಗೂ ಆಹಾರಕ್ಕಾಗಿ ಕೃಷಿ ಭೂಮಿಯಲ್ಲಿ ಹೆಚ್ಚಳವಾಗಬೇಕಿದೆ, ಅವರ ನೆಲೆಗಾಗಿ ಅಘಾದವಾದ ಭೂಮಿ ಬೇಕು. ೧೯೫೧-೧೯೮೦ರ ಮಧ್ಯದಲ್ಲಿ ೨೦.೬೨ಲಕ್ಷ ಹೆಕ್ಟರ್ ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾರ್ಪಡಿಸಲಾಗಿದೆ. ಜೊತೆಗೆ ಸಾಕಷ್ಟು ಭೂಮಿ ಮಾನವನ ನೆಲೆಗಾಗಿ ನಾಶವಾಗಿದೆ. ಪರದೇಶದಿಂದ ತಂದ ಸಸ್ಯ ಹಾಗೂ ಕಳೆಗಳನ್ನು ನಮ್ಮ ದೇಶದ ಅರಣ್ಯಗಳಲ್ಲಿ ಬೆಳೆಯಲು ಬಿಟ್ಟಿದ್ದರಿಂದ ಅರಣ್ಯ ಪರಿಸರ ವ್ಯವಸ್ಥೆಯ ಮೇಲೆ ದುಷ್ಪರಿಣಾಮವಾಗಿದೆ.

ವಾಯು ಮಲಿನತೆಗೆ ಅರಣ್ಯಗಳು ಸಂವೇದನಶೀಲವುಳ್ಳವು. ಕಾಖಾನೆಗಳಿಂದ ಉಂಟಾದ ಮಲಿನತೆಯಿಂದ ಅರಣ್ಯಗಳ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳಾಗಿವೆ. ಕೀಟನಾಶಕಗಳನ್ನು ಮಿತಿ ಮೀರಿ ಬಳಸಿದ್ದರಿಂದ ಮಣ್ಣಿನಲ್ಲಿಯ ಸೂಕ್ಷ್ಮಾಣುಗಳು, ಕೀಟ ಹಾಗೂ ಇತರ ಸಸ್ಯ-ಪ್ರಾಣಿಗಳ ಮೇಲೂ ಪರಿಣಾಮವಾಗಿದೆ.

ಕಾಡು ಬೆಂಕಿ ಬರ ಮತ್ತು ನೆರೆಗಳು ಅರಣ್ಯವನ್ನು ಹಾಳುಮಾಡುತ್ತವೆ. ಮಾನವನು ಕಾಡಿಗೆ ಬೆಂಕಿಯನ್ನು ಪದೇ ಪದೇ ಹಚ್ಚುವುದರಿಂದ ಬೆಂಕಿ ನಿರೋಧಕ ಪ್ರಭೇದಗಳು ಮಾತ್ರ ಉಳಿದುಕೊಳ್ಳುತ್ತವೆ. ಉಳಿದ ಪ್ರಭೇದಗಳು ಬೆಂಕಿಯ ಪಾಲಾಗುತ್ತವೆ. ೧೯೮೦-೮೫ರ ನಡುವೆ ಸುಮಾರು ೫೦ ಸಾವಿರ ಹೆಕ್ಟರ್ ಅರಣ್ಯವು ಬೆಂಕಿ ಪಾಲಾಗಿದೆ.

ಭೂಮಿಯ ಮೇಲೆ ಒಟ್ಟು ೮೦ ಲಕ್ಷ ಚದರ ಕಿಮೀದಷ್ಟು ಉಷ್ಣವಲಯದ ಅರಣ್ಯವಿದೆ. ಈ ಅರಣ್ಯಗಳಲ್ಲಿ ಜೀವಿವೈವಿಧ್ಯ ಹೆಚ್ಚು. ಪ್ರಪಂಚದ ಸೇಕಡಾ ೫೦ರಷ್ಟು ಕಶೇರುಕಗಳು, ಸೇಕಡಾ ೬೦ರಷ್ಟು ಸಸ್ಯ ಪ್ರಭೇದಗಳು ಹಾಗೂ ಸೇಕಡಾ ೮೦ರಷ್ಟು ಜೀವರಾಶಿಗಳು ಉಷ್ಣವಲಯದ ಕಾಡುಗಳಲ್ಲಿವೆ. ಉಷ್ಣವಲಯದ ಆರ್ದ್ರ ಕಾಡುಗಳು ಕೇವಲ ಸೇಕಡಾ ೬-೭ರಷ್ಟಿದ್ದರೂ ಕೂಡ ಇಲ್ಲಿ ಜೀವವೈವಿಧ್ಯ ಹೆಚ್ಚು. ಒಂದು ಹೆಕ್ಟರ್ ಮಳೆಗಾಡಿನಲ್ಲಿ ೩೦೦ರಷ್ಟು ಪ್ರಭೇದಗಳಿರುತ್ತವೆ. ಇಡೀ ಉತ್ತರ ಅಮೆರಿಕೆಯ ಖಂಡದಲ್ಲಿ ಕೇವಲ ೭೦೦ ಪ್ರಭೇದಗಳುಂಟು.

ಆಗ್ನೇಯ ಏಸಿಯಾ ಹಾಗೂ ಪ್ಯಾಸಿಫಿಕ್‌ನಲ್ಲಿ ಸುಮಾರು ೨೫-೪೦ ಸಾವಿರ ವರ್ಷಗಳ ಹಿಂದೆ ಮಾನವನು ಅರಣ್ಯವನ್ನು ಅತಿಕ್ರಮಣ ಮಾಡಿದ ಎಂಬುದು ತಿಳಿದಿದೆ. ಮಾನವ ಅಮೆಜಾನ್ ಪ್ರದೇಶವನ್ನು ೧೦ ಸಾವಿರ ವರ್ಷಗಳ ಹಿಂದೆ ಹಾಗೂ ಆಫ್ರಿಕಾವನ್ನು ೩೦೦೦ ವರ್ಷಗಳ ಹಿಂದೆ ಅತಿಕ್ರಮಿಸಿದಂದಿನಿಂದ ಇತ್ತೀಚಿನವರೆಗೂ ಜನಸಂಖ್ಯಾ ಸಾಂದ್ರತೆ ಕಡಿಮೆ ಇತ್ತು. ಮಾನವನ ಪ್ರಭಾವ ಉಷ್ಣ ವಲಯದ ಕಾಡುಗಳ ಮೇಲೆ ಅಷ್ಟೊಂದಿರಲಿಲ್ಲ. ಕ್ರಿ.ಶ. ೧೬೦೦ರಿಂದ ಈಚೆಗೆ ಹೊಸ ತಳಿಗಳ ಅಭಿವೃದ್ಧಿಯಿಂದ ಉಷ್ಣವಲಯದ ಕಾಡುಗಳಲ್ಲಿ ಬದಲಾವಣೆ ಕಂಡುಬಂತು. ಹಣಕಾಸಿನ ಬೆಳೆಗಳನ್ನು ಬೆಳೆಯಲು ಅರಣ್ಯಗಳನ್ನು ಕಡಿಯಲಾಯಿತು.

ಶಿಂಪರ್ ಎಂಬ ವಿಜ್ಞಾನಿಯು ಕ್ರಿ.ಶ. ೧೯೦೩ರಲ್ಲಿ ಮೊಟ್ಟ ಮೊದಲು “ಮಳೆಗಾಡುಗಳು” ಎಂಬ ಪದವನ್ನು ಬಳಸಿದನು. ಇವಕ್ಕೆ ಉಷ್ಣವಲಯದ ಆರ್ದ್ರ ಅರಣ್ಯಗಳೆಂದೂ ಕರೆಯುತ್ತಾರೆ. ಇವು ಭೂಭಾಗದ ಸೇಕಡಾ ೬-೭ರಷ್ಟು ಭೂಮಿಯನ್ನು ಆವರಿಸಿವೆ. ಸೇಕಡಾ ೫೦ಕ್ಕಿಂತ ಹೆಚ್ಚು ಸಸ್ಯ-ಪ್ರಾಣಿ ಪ್ರಭೇದಗಳನ್ನು ಈ ಅರಣ್ಯಗಳಲ್ಲಿ ಕಾಣಬಹುದು.

ಅರಣ್ಯಗಳು ಲಕ್ಷಾನುಲಕ್ಷ ಜನರಿಗೆ ಆಧಾರವಾಗಿವೆ. ಇವು ಆಶ್ರಯ, ಉರುವಲು, ಆಹಾರ, ವಸ್ತ್ರ, ಔಷಧಿ, ಮನೆಕಟ್ಟುವ ಸಾಮಾನುಗಳು ಮುಂತಾದವುಗಳನ್ನು ಒದಗಿಸುತ್ತವೆ. ಜೊತೆಗೆ ಚೌಬಿನೆ, ಔಷಧಿ, ರಬ್ಬರ್, ಗೋಂದು, ಮೇವು, ಮತ್ತು ಇತರ ಅರಣ್ಯ ಸಾಮಗ್ರಿಗಳನ್ನು ಒದಗಿಸುತ್ತವೆ. ಜಲಚಕ್ರದಲ್ಲಿ ಅರಣ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಸ್ಥಳೀಯ ತಾಪಮಾನವನ್ನು ಕಾಪಾಡುತ್ತವೆ ಮತ್ತು ಮಣ್ಣಿನ ಸವಕಳಿಯನ್ನು ತಡೆಯುತ್ತವೆ. ಮಳೆ ಕಡಿಮೆ ಆಗುವುದಕ್ಕೂ ಹಾಗೂ ಅರಣ್ಯ ನಾಶಕ್ಕೂ ಸಂಬಂಧವಿದೆ ಎಂದು ನಂಬಲಾಗಿದೆ.

ಕಾಡುಗಳ ನಾಶಕ್ಕೆ ಅನೇಕ ಕಾರಣಗಳುಂಟು. ಚೌಬಿನೆ ಮರಗಳಿಗಾಗಿ ಈ ಕಾಡುಗಳ ನಾಶ ಹೆಚ್ಚಿದೆ. ಗಣಿಗಾರಿಕೆ ಹಾಗೂ ತೈಲಭಾವಿಗಳನ್ನು ಕೊರೆಯುವುದರಿಂದ ಉಂಟಾದ ಮಲಿನತೆಯಿಂದ, ಉರುವಲಿಗಾಗಿ, ಕೃಷಿಗಾಗಿ ಈ ಅರಣ್ಯಗಳ ವಿಸ್ತಾರ ಕ್ಷೀಣಿಸುತ್ತಿದೆ. ಜೊತೆಗೆ ಬಡತನ, ಜನಸಂಖ್ಯಾ ಸ್ಫೋಟ ಹಾಗೂ ಭೂಮಿಯ ಅಸಮ ಹಂಚಿಕೆಯಿಂದಲೂ ಅರಣ್ಯ ನಾಶವಾಗುತ್ತಲಿದೆ. ರಸ್ತೆ ಹಾಗೂ ರೈಲು ಮಾರ್ಗ ನಿರ್ಮಾಣಗಳಿಂದಲೂ ಹಾಗೂ ಅಣೆಕಟ್ಟುಗಳ ನಿರ್ಮಾಣದಿಂದಲೂ ಅರಣ್ಯಗಳ ಕ್ಷೇತ್ರ ಕಡಿಮೆಯಾಗಿದೆ.

ಸೋಮರ್ (೧೯೭೬) ಎಂಬ ವಿಜ್ಞಾನಿಯ ಪ್ರಕಾರ ಜಾಗತಿಕವಾಗಿ ಸುಮಾರು ೯೩೫೦ ಕೋಟಿ ಚದರ ಕಿಮೀ. ದಷ್ಟು ಅರಣ್ಯ ಉಷ್ಣವಲಯದ ಅಮೇರಿಕೆಯಲ್ಲಿ ಹಾಗೂ ೨.೫೪ ಕೋಟಿ ಚ. ಕಿಮೀದಷ್ಟು ಏಸಿಯಾದಲ್ಲಿದೆ (ಕೋಷ್ಟಕ ೩.೧). ೧೯೮೦ರಲ್ಲಿ ಸುಮಾರು ೧.೨ ಕೋಟಿ ಚ. ಕಿ.ಮೀ.ದಷ್ಟು ಸಂವೃತ ಹಾಗೂ ೭೦.೩೪ ಲಕ್ಷ ಚ. ಕಿಮೀದಷ್ಟು ತೆರೆದ ಸಸ್ಯಗಳು ಉಷ್ಣವಲಯದ ಪ್ರಕಾರ ಸುಮಾರು ೭೫ ಸಾವಿರ ಚ. ಕಿಮೀ. ದಷ್ಟು ಸಂವೃತ ಮತ್ತು ೩೮ ಸಾವಿರ ಚ. ಕಿಮೀದಷ್ಟು ತೆರೆದ ಅರಣ್ಯವು ೧೯೮೦-೮೫ರ ವರೆಗೆ ಪ್ರತಿ ವರ್ಷ ನಾಶವಾಗಿದೆ (ಕೋಷ್ಟಕ ೩.೩), (ಕೋಷ್ಟಕ ೩.೪) ಮತ್ತು (ಕೋಷ್ಟಕ ೩.೫) ಕೋಷ್ಟಕ ೩.೬ ಹಾಗೂ ೩.೭ ಕರ್ನಾಟಕದ ವಿವಿಧ ಅರಣ್ಯಗಳು ಹಾಗೂ ಅಲ್ಲಿ ಬೆಳೆಯುವ ಪ್ರಮುಖ ಸಸ್ಯಗಳನ್ನು ಸೂಚಿಸುತ್ತವೆ.

ಕೋಷ್ಟಕ . ಉಷ್ಣವಲಯದ ಮಳೆ ಕಾಡುಗಳ ವಿಸ್ತಾರ (ಸೋಮರ್ ೧೯೭೬)

ಕ್ರ ಸಂ

ಪ್ರದೇಶ

ಮಳೆಗಾಡಿನ ಈಗಿನ ವಿಸ್ತಾರ (ಚ.ಕಿಮೀ. ಸಾವಿರ)

ಪ್ರಪಂಚದ ಮಳೆಗಾಡಿನ ಸೇಕಡಾವಾರು

೧. ಏಷ್ಯ

೨೫೪೦

೨೭.೨

೨. ಆಫ್ರಿಕಾ

೧೭೫೦

೧೮.೭

೩. ಲ್ಯಾಟಿನ್ ಅಮೇರಿಕ

೪೭೨೦

೫೦.೫

೪. ಮಧ್ಯ ಅಮೇರಿಕ ಮತ್ತು ಕ್ಯಾರಿಬಿಯನ್

೩೪೦

೩.೬

ಒಟ್ಟು

೯೩೫೦

೧೦೦.೦೦

 ಕೋಷ್ಟಕ . ಉಷ್ಣವಲಯದ ಮಳೆಗಾಡಿನ ವಿಸ್ತಾರ (೧೯೮೦)

ಕ್ರ ಸಂ

ಪ್ರದೇಶ

ಸಂವೃತ ಅರಣ್ಯ (ಚ.ಕಿಮೀ)

ವ್ಯಾವೃತ ಅರಣ್ಯ (ಚ.ಕಿಮೀ)

೧. ಉಷ್ಣವಲಯದ ಅಮೇರಿಕ

೬೭೮೬೫೫೦

೨೧೬೯೯೭೦

೨. ಉಷ್ಣವಲಯದ ಆಫ್ರಿಕಾ

೨೧೬೬೩೪೦

೪೮೬೪೪೫೦

೩. ಉಷ್ಣವಲಯದ ಏಸಿಯಾ

೩೦೫೫೧೦೦

೩೦೯೪೮೦

ಒಟ್ಟು

೧೨೦೦೭೯೯೦

೭೩೪೩೯೦೦

ಜಾಗತಿಕ ಆಹಾರ ಮತ್ತು ಕೃಷಿ ಸಂಸ್ಥೆ

 ಕೋಷ್ಟಕ . ಪ್ರತಿವರ್ಷ ನಾಶವಾಗುವ  ಅರಣ್ಯ ಪ್ರದೇಶ ಹಾಗೂ ಸೇಕಡಾವಾರು ನಾಶ

ಕ್ರ ಸಂ

ಪ್ರದೇಶ

ನಾಶವಾದ ಒಟ್ಟು ಅರಣ್ಯ ಪ್ರದೇಶ (೧೯೮೧-೧೯೮೫) ಚ.ಕಿಮೀ

ನಾಶವಾದ ಅರಣ್ಯದ ಸೇಕಡಾವಾರು (೧೯೮೧-೧೯೮೫)

ಸಂವೃತ
ಅರಣ್ಯ

ವ್ಯಾವೃತ ಅರಣ್ಯ

ಸಂವೃತ
ಅರಣ್ಯ

ವ್ಯಾವೃತ ಅರಣ್ಯ

೧. ಅಮೇರಿಕ ೪೩೩೯೦ ೧೨೭೨೦ ೦.೬೩ ೦.೫೯
೨. ಆಫ್ರಿಕಾ ೧೩೩೩೧೦ ೧೨೪೫೦ ೦.೬೧ ೦.೪೮
೩. ಏಷ್ಯ ೧೮೨೬೦ ೧೯೦೦ ೦.೬೦ ೦.೬೧
ಒಟ್ಟು ೭೪,೯೬೦ ೩೮,೦೭೦ ೦೬೨ ೦.೫೨

ಜಾಗತಿಕ ಆಹಾರ ಮತ್ತು ಕೃಷಿ ಸಂಸ್ಥೆ

 ಕೋಷ್ಟಕ . ಅರಣ್ಯ ಕ್ಷೇತ್ರ ಹಾಗೂ ಸೇಕಡಾವಾರು ಅರಣ್ಯನಾಶ (ಎಫ್..)

ಕ್ರ ಸಂ

ಅರಣ್ಯ ಕ್ಷೇತ್ರ (ಚ.ಕಿಮೀ)

ವಾರ್ಷಿಕ ಅರಣ್ಯನಾಶ (ಚ.ಕಿಮೀ)

ಸೇಕಡವಾರು ಅರಣ್ಯನಾಶ

೧.

೧೯,೩೫೦,೦೦೦

೧೧೩,೦೦೦(೧೯೮೧-೮೫)

೦.೬

೨.

೧೮,೮೨೦,೦೦

೧೬೯,೦೦೦(೧೯೮೫-೯೦)

೦.೯

ಜಾಗತಿಕ ಆಹಾರ ಮತ್ತು ಕೃಷಿ ಸಂಸ್ಥೆ

ಕೋಷ್ಟಕ . ಆಯ್ದ ದೇಶಗಳಲ್ಲಾದ ಸಂವೃತ ಉಷ್ಣವಲಯದ ಕಾಡುಗಳ ನಾಶ (೧೯೮೧೮೫ ಎಫ್ಎಒ)

ಕ್ರ ಸಂ

ದೇಶ

ವಾರ್ಷಿಕ ನಾಶ (ಚ.ಕಿಮೀ)

ವಾರ್ಷಿಕ ಸೇಕಡಾವಾರು ನಾಶ

೧. ಬ್ರಾಝಿಲ್

೧೪,೮೦೦

೦.೪

೨. ಕ್ಯಾಮೆರೂನ್‌

೮೦೦

೦.೪

೩. ಕೋಸ್ಟಾರಿಕಾ

೬೫೦

೪.೦

೪. ಕೊಲಂಬಿಯಾ

೮೨೦೦

೦.೪

೫. ಭಾರತ

೧೪೭೦

೦.೩

೬. ಗ್ಯಾಬಾನ್

೧೫೦

೦.೧

೭. ಇಂಡೋನೇಷ್ಯಾ

೬೦೦೦

೦.೫

೮. ಮಾಯನ್ಮಾರ್

೧೦೫೦

೦.೩

೯. ಪೆರು

೨೭೦೦

೦.೪

೧೦. ಫಿಲಿಪೈನ್ಸ್

೯೨೦

೧.೦

೧೧. ಥೈಲ್ಯಾಂಡ್

೩೭೯೦

೨.೪

೧೨. ಮಲೇಶಿಯಾ

೨೫೫೦

೧.೨

೧೩. ವಿಯೆಟ್‌ನಾಮ್

೬೫೦

೦.೭

ಚೌಬಿನೆ ಹಾಗೂ ಇತರ ಮರಗಳ ಉತ್ಪನ್ನಗಳ ಸರಬರಾಜಿನ ಸಲುವಾಗಿ, ನೆಲ-ಜಲ ಸಂರಕ್ಷಣೆಯ ಸಲುವಾಗಿ ಹಾಗೂ ಜೀವಿವೈವಿಧ್ಯದ ಸಂರಕ್ಷಣೆಗಾಗಿ ಜಾಗತಿಕ ನಿಸರ್ಗ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಸಂಸ್ಥೆಯು ಉಷ್ಣವಲಯದ ಅರಣ್ಯಗಳ ನಿರ್ವಹಣೆಗಾಗಿ ಆರು ಮುಖ್ಯ ನಿರ್ವಹಣಾ ವಿಧಾನಗಳನ್ನು ಸೂಚಿಸಿದೆ.

೧. ಉಷ್ಣವಲಯದ ಭೂಮಿಯನ್ನು ಅಭಿವೃದ್ಧಿ ಪಡಿಸಲು ಪರಿಸರ ನಿರ್ಭಂಧವನ್ನು ಗಣನೆಗೆ ತೆಗೆದುಕೊಳ್ಳಬೇಕು.

೨. ಉಷ್ಣವಲಯದ ಭೂಮಿಯನ್ನು ಇತರ ಉಪಯೋಗಕ್ಕೆ ಕೊಡುವ ಮೊದಲು ಸಾಮಾಜಿಕ, ಆರ್ಥಿಕಹಾಗೂ ಪರಿಸರದ ಮೇಲಾಗುವ ಪರಿಣಾಮಗಳನ್ನು ಅಭ್ಯಾಸ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು.

೩. ಉಷ್ಣವಲಯದ ಅರಣ್ಯವನ್ನು ಇತರ ಉಪಯೋಗಕ್ಕೆ ಕೊಟ್ಟರೆ ಅದಕ್ಕೆ ಹೆಚಚು ಹಾನಿಯಾಗದೆ, ನಮಗೆ ಲಾಭವು ಬಹಳ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

೪. ಈಗಾಗಲೇ ಹಾಳಾದ ಉಷ್ಣವಲಯದ ಅರಣ್ಯಭೂಮಿಯಲ್ಲಿ ಮತ್ತೆ ಅರಣ್ಯ ಬೆಳೆಸಬೇಕು.

೫. ನೀರಿನ ನಿರ್ವಹಣೆಯಲ್ಲಿ ಉಪಯುಕ್ತವಾದ ಹಾಗೂ ಜೀವಿವೈವಿಧ್ಯವನ್ನು ಕಾಪಾಡುವ ಉಷ್ಣವಲಯದ ಕಾಡುಗಳನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕು.

೬. ಉಷ್ಣವಲಯದ ಕಾಡುಗಳ ಹತ್ತಿರ ವಾಸಿಸುವ ಜನರು ಅರಣ್ಯದ ಬಗ್ಗೆ ಬಹಳ ಕಾಳಜಿ ವಹಿಸಬೇಕು.

ಸೇಕಡಾ ೪ರಷ್ಟುಳ್ಳ ಜಾಗತಿಕ ಉಷ್ಣವಲಯದ ಅರಣ್ಯಗಳನ್ನು ರಕ್ಷಿಸುವುದರಿಂದ ಹೆಚ್ಚು ಜೀವಿವೈವಿಧ್ಯವನ್ನು ರಕ್ಷಿಸಿಕೊಳ್ಳಬಹುದು. ಒಳ್ಳೆಯ ನಿರ್ವಹಣೆಗೆ ಲಾಭ ಸಿಗುವಂತಾಗಬೇಕು. ಸ್ಥಳೀಯರಿಗೆ ಅರ್ಧ ಲಾಭ ಕೊಟ್ಟರೆ ಅವರು ಇನ್ನೂ ಹೆಚ್ಚುಕಾಳಜಿ ವಹಿಸುತ್ತಾರೆ. ನಮ್ಮ ದೇಶದಲ್ಲಿ ಕೇವಲ ೨೨,೬೮೮ ಚ.ಕಿಮೀದಷ್ಟು ರಕ್ಷಿತ ಉಷ್ಣವಲಯದ ಕಾಡಿದೆ.

ಉಷ್ಣವಲಯದ ವಿಶಾಲವಾದ ಪ್ರದೇಶದಲ್ಲಿ ಶುಷ್ಕ ಅರಣ್ಯಗಳಿವೆ. ಉಷ್ಣವಲಯದ ಎಲೆ ಉದುರುವ ಅರಣ್ಯಗಳಲ್ಲಿ ಮಳೆ ಕಡಿಮೆ. ಆದ್ದರಿಂದ ಇಲ್ಲಿ ಜೀವ ವೈವಿಧ್ಯವೂ ಕಡಿಮೆ. ಇಲ್ಲಿ ಜೀವಿಸುವಂಥ ಜೀವಿಗಳು ಒಣ ಪ್ರದೇಶಕ್ಕೆ ಹಾಗೂ ಹೆಚ್ಚಿನ ತಾಪಮಾನಕ್ಕೆ ಹೊಂದಿಕೊಳ್ಳುವ ಗುಣ ಪಡೆದಿದೆ. ಅಂದರೆ ಇಲ್ಲಿ ಪ್ರಭೇದಗಳ ಅನುವಂಶಿಕ ವೈವಿಧ್ಯ ಹೆಚ್ಚು. ಈ ಅರಣ್ಯಗಳೂ ಈಗ ಕಡಿಮೆಯಾಗುತ್ತಲಿವೆ.

ಕೋಷ್ಟಕ . ಕರ್ನಾಟಕದ ವಿವಿಧ ಅರಣ್ಯಗಳು

ಕ್ರ ಸಂ

ಅರಣ್ಯಗಳು

ವಿಸ್ತೀರ್ಣ

ಸೇಕಡಾವಾರು ಕಾಡು

೧. ನಿತ್ಯಹರಿದ್ವರ್ಣ ಮತ್ತು ಅರೆಹರಿದ್ವರ್ಣ ಕಾಡುಗಳು

೫೮೦೦ ಚ.ಕಿಮೀ

೧೫.೧೧%

೨. ತೇವಪರ್ಣಪಾತಿ ಮತ್ತು ಮಿಶ್ರಪರ್ಣಪಾತಿ ಕಾಡುಗಳು

೫೭೮೦ ಚ.ಕಿಮೀ.

೧೫.೦೬%

೩. ಶುಷ್ಕ ಪರ್ಣವಾತಿ ಕಾಡುಗಳು

೧೫೪೫೫ ಚ.ಕಿಮೀ

೪೦.೨೫%

೪. ಕುರುಚಲು ಕಾಡುಗಳು ಹಾಗೂ ಬಂಜರುಗಳು

೧೧೬೧೦ ಚ.ಕಿಮೀ.

೨೯.೫೮%

ಒಟ್ಟು

೩೮೬೪೫ ಚ.ಕೀ

೧೦೦.೦೦

ಕೋಷ್ಟಕ . ಕರ್ನಾಟಕದ ಅರಣ್ಯಗಳಲ್ಲಿ ದೊರೆಯುವ ಪ್ರಮುಖ ಸಸ್ಯಗಳು

 

೧. ಬಲಗಿ ೨. ದ್ರೂಮ ೩. ನಾಗಸಂಪಿಗೆ
೪. ಸುರಹೊನ್ನೆ ೫. ಕಾಡಿಧೂಪ ೬. ಕರಿಬಾಳೆ
೭. ಹೆಬ್ಬಲಸು ೮. ಸಲ್ಜಗ ೯. ಕರಿಬಾಳೆ
೧೦. ರಂಜ ೧೧. ಹಡಸಾಲೆ ೧೨. ಹೊಳೆಗಾರ
೧೩. ಚುಂಗ ೧೪. ದೇವಗರಿಗೆ ೧೫. ಬನಾಟೆ
೧೬. ಮಾವು ೧೭. ಗುಳಮಾವು ೧೮. ನೀಲಿ
೧೯. ಅಜ್ಜನ ಪಟ್ಟೆ ೨೦. ಲಕೂತ ೨೧. ರಾಮನಡಿಕ
೨೨. ಕನಕ ಚಂಪಕ ೨೩. ಕಾಸರ್ಕ ೨೪. ಬಗನಿ
೨೫. ಬೆತ್ತ ೨೬. ಬೀಟೆ ೨೭. ಹೊನ್ನೆ
೨೮. ಸಂಪಿಗೆ ೨೯. ಬೆಳಂಗಿ ೩೦. ಚನ್ನಂಗಿ
೩೧. ನೇರಳೆ ೩೨. ಹಾಲುಮಡ್ಡಿ ೩೩. ಹಲಸು
೩೪. ಕಲ್ಗರಿಗೆ ೩೫. ಗಂಧಗರಿಗೆ ೩೬. ಮಾಕಾಳಿ
೩೭. ಕೆಂದಾಳ ೩೮. ಮದ್ದಾಲೆ ೩೯. ಜಿಂಬೆ
೪೦. ತೊರೆಮತ್ತಿ ೪೧. ಮತ್ತಿ ೪೨. ತಾರೆ
೪೩. ನಂದಿ ೪೪. ಸಾಗುವಾನಿ ೪೫. ಶಿವಾನೆ
೪೬. ಬೆಂಡೆ ೪೭. ಬೂರುಗ ೪೮. ತಡಸಲ್
೪೯. ಬಿಲ್ವಾರ ೫೦. ಕದಂಬ ೫೧. ಕಡವಾಳ
೫೨. ದೊಡತೊಪ್ಪೆ ೫೩. ತಪಸಿ ೫೪. ಜುಮ್ಮೀಮರ
೫೫. ಇಪ್ಪೆ ೫೬. ನವಿಲಾಡಿ ೫೭. ಕಾಡುಗುಂಬಳ
೫೮. ದಿಂಡಿಗ ೫೯. ಹುರುಗಲು ೬೦. ಹುಣಿಸಿ
೬೧. ಬೇಲ ೬೨. ಸೋಮ ೬೩. ಹೆಮ್ಮರ
೬೪. ಗೊಬ್ಬಳಿ ೬೫. ಕಗ್ಗಲಿ ೬೬. ಬನ್ನಿ
೬೭. ಬಾಗೆ ೬೮. ಸೀಗೆ ೬೯. ಗುಗ್ಗುಳ ಧೂಪ
೭೦. ಅಮಟೆ ೭೧. ನೆಲ್ಲಿ ೭೨. ಅಂಟುವಾಳ
೭೩. ಗೇರು ೭೪. ಮುತ್ತುಗ ೭೫. ಅತ್ತಿ
೭೬. ಆಲ ೭೭. ಗೋಣಿ ೭೮. ಬಸರಿ
೭೯. ಡಿವಿಡಿವಿ ೮೦. ನೀಮಹಣಸೆ ೮೧. ಕಕ್ಕೆ
೮೨. ಹಾಲೆ ೮೩. ಕೊಡನಿಗ ೮೪. ರಂಗುಮಾಲೆ
೮೫. ತಂಗಡಿ ೮೬. ತುಪ್ರ ೮೭. ಅರಿಶಿನ
೮೮.ಬೂರುಗ ೮೯. ಅಂಕೋಲೆ ೯೦. ಬಳ್ಳಾರಿ ಜಾಲಿ
೯೧. ಭೂತಾಳೆ ೯೨. ಕೊಂಡಮಾವು ೯೩. ಹಾಲುವಾಳ
೯೪. ಇಳಿರಂಗ ೯೫. ಇಂಗಳ ೯೬. ಬಂದರಿಕೆ