01ಸೂಕ್ಷ್ಮಜೀವಾಣುಗಳು ಈ ಜಗತ್ತಿಗೆ ನಮಗಿಂತಲೂ ಹಳಬರೇ. ಆದರೂ ಅವುಗಳ ಬಗ್ಗ ನಮಗೆ ತಿಳಿದದ್ದು ತಡವಾಗಿ; ಸೂಕ್ಷ್ಮಜೀವಾಣುವಿಜ್ಞಾನದ ದಾಖಲೀಕೃತ ಇತಿಹಾಸ ಸರಿ ಸುಮಾರು ೧೭ನೆಯ ಶತಮಾನದಿಂದ ಪ್ರಾರಂಭವಾಗುತ್ತದೆ. ಆದರೆ ಇದಕ್ಕೂ ಸಾವಿರಾರು ವರ್ಷಗಳ ಮೊದಲೇ ವೇದಗಳಲ್ಲಿ, ಜೈನರ ರೋಮನ್ನರ ಇಸ್ಲಾಮಿನ ಗ್ರಂಥಗಳಲ್ಲಿ ಸೂಕ್ಷ್ಮಜೀವಾಣುಗಳ ಬಗ್ಗೆ ವಿಸ್ತೃತ ವಿವರಣೆ ಇದೆ; ಸೂಕ್ಷ್ಮ ಜೀವಿಗಳನ್ನು ಕಣ್ಣಾರೆ ಕಾಣಲು ಸಹಾಯ ಮಾಡುವ ಯಾವುದೇ ಸಾಧನಗಳು ಲಭ್ಯವಿಲ್ಲದಿದ್ದರೂ, ಅವುಗಳ ಇರುವನ್ನು ಸಾರುವ ಹಾಲು ಮೊಸರಾಗುವ ವಿದ್ಯಮಾನ, ಹಿಟ್ಟು ಹುದುಗುವ ಪ್ರಕ್ರಿಯೆ, ಮದ್ಯ ತಯಾರಿಯಂತಹ ದಿನನಿತ್ಯದ ಸಂಗತಿಗಳಿಂದ ‘ಅಗೋಚರ’ ಕ್ರಿಮಿಗಳ ಬಗ್ಗೆ ಅಂದಿನ ಜನರು ತಿಳಿದಿದ್ದರು. ಪರೋಕ್ಷ ಪರೀಕ್ಷೆಗಳಿಂದಲೇ, ಸೂಕ್ಷ್ಮಜೀವಾಣುಗಳ ಮೂಲಭೂತ ಗುಣಲಕ್ಷಣಗಳು ಮತ್ತು ಸರಳ ವರ್ಗೀಕರಣವನ್ನೂ ಮಾಡಿದ್ದರು.

ಇದಾದ ನಂತರವೂ, ಹಲವು ದಶಕಗಳವರೆಗೆ, ಕಣ್ಣಿಗೆ ಕಾಣದ ಸೂಕ್ಷ್ಮಜೀವಾಣುಗಳ ಇರುವಿನ ಬಗ್ಗೆ ಸಾಮಾನ್ಯ ಜನರು ಅಜ್ಞಾನಿಗಳಾಗಿದ್ದರು; ಹೀಗೆ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ಎಲ್ಲೆಲ್ಲೂ ಇವೆ ಎಂದು ವೈಜ್ಞಾನಿಕ ಆಸಕ್ತಿ ಹಾಗೂ ಮನೋಭಾವ ಹೊಂದಿರುವವರು ಹೇಳಿದರೂ, ಜನರು ನಂಬಲು ತಯಾರಿರಲಿಲ್ಲ. ಇದಕ್ಕೆ ಮೊದಲ ಕಾರಣ, ಇವುಗಳ ಇರುವಿಗೆ ಸಾಕ್ಷ್ಯಸಹಿತ ವಿವರಣೆ ಇಲ್ಲದಿರುವುದು; ಜನರು ಸೂಕ್ಷ್ಮಜೀವಾಣುಗಳ ಬಗ್ಗೆ ಕಣ್ಣಗಲಿಸಿ ನೋಡುವಂತೆ ಮಾಡಿದ್ದು, ಆಂಟೋನಿ ವಾನ್ ಲೀವನ್ಹೊಕ್; ಆಂಟೋನಿ ವಾನ್ ಲೀವನ್ಹೊಕ್ ಹಾಲೆಂಡ್ ದೇಶದ ಒಬ್ಬ ವ್ಯಾಪಾರಿ ಹಾಗೂ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದ ವ್ಯಕ್ತಿ. ಈತ ತನ್ನ ವ್ಯಾಪಾರದ ಸಲುವಾಗಿ ಗಾಜನ್ನು ಹಲವು ಪ್ರಕ್ರಿಯೆಗಳಿಗೆ ಒಳಪಡಿಸಿ, ಮನೆಯಲ್ಲೇ ಮಸೂರಗಳನ್ನು ತಯಾರಿಸುತ್ತಿದ್ದ. ತಾನು ತಯಾರಿಸಿದ ಮಸೂರಗಳನ್ನು ಬಳಸಿ, ತನ್ನ ಸುತ್ತಮುತ್ತಿನ ಎಲ್ಲವನ್ನೂ ಕೂಲಂಕುಶವಾಗಿ ಗಮನಿಸಿ ಅಭ್ಯಸಿಸುವುದು ಈತನ ಅಭ್ಯಾಸವಾಗಿತ್ತು. ವೈಜ್ಞಾನಿಕ ಆಸಕ್ತಿ ಉಳ್ಳವನಾದ್ದರಿಂದ ತಾನು ಗಮನಿಸಿದ್ದ ವಿಶೇಷ ಸಂಗತಿಗಳನ್ನು ದಾಖಲಿಸುತ್ತಿದ್ದುದೂ ಉಂಟು. ಕೊಳದ ನೀರನ್ನು ತನ್ನ ಸರಳ ಸೂಕ್ಷ್ಮದರ್ಶಕದಲ್ಲಿ ಗಮನಿಸುತ್ತಿದ್ದಾಗ, ಅತೀ ಸಣ್ಣ ಚಲಿಸುವ ಜೀವಿಯೊಂದನ್ನು ಕಂಡು, ಅದಕ್ಕೆ ‘ಅನಿಮಲ್ಕ್ಯೂಲ್ಸ್’ ಎಂದು ನಾಮಕರಣ ಮಾಡಿದ. ಲಾಟಿನ್ ಭಾಷೆಯ ಪ್ರಕಾರ, ಅನಿಮಲ್ಕ್ಯೂಲ್ಸ್ ಎಂದರೆ ಅತೀ ಸಣ್ಣ ಕ್ರಿಮಿ ಎಂದರ್ಥ. ನಂತರ ತಿಳಿದುಬಂದ ವಿಷಯವಂದರೆ, ಲೀವನ್ಹೊಕ್ ಮೊತ್ತಮೊದಲ ಬಾರಿಗೆ ಅನಿಮಲ್ಕ್ಯೂಲ್ ಅಂದರೆ ‘ಬ್ಯಾಕ್ಟೀರಿಯಾ’ವನ್ನು ಸೂಕ್ಷ್ಮದರ್ಶಕದ ಮೂಲಕ ಕಂಡಿದ್ದ ಹಾಗು ಸಾಕ್ಷ್ಯ ಸಮೇತ ದಾಖಲಿಸಿದ್ದ. ಸೂಕ್ಷ್ಮಜೀವಾಣುವಿಜ್ಞಾನಕ್ಕೆ ಇಂತಹ ಮೊತ್ತಮೊದಲ ಕೊಡುಗೆ ನೀಡಿದ ಆಂಟೋನಿ ವಾನ್ ಲೀವನ್ಹೊಕ್, ಸೂಕ್ಷ್ಮಜೀವಾಣುವಿಜ್ಞಾನದ ಪಿತಾಮಹ ಎನಿಸಿಕೊಂಡಿದ್ದಾನೆ. ರಾಬರ್ಟ್ ಹೂಕ್ ಎಂಬ ಆಂಗ್ಲ ವಿಜ್ಞಾನಿ ಕೂಡ ಸೂಕ್ಷ್ಮಾಣುಜೀವಿಗಳ ಬಗ್ಗೆ ಅಧ್ಯಯನ ಆರಂಭಿಸಿದ್ದ ಮತ್ತು ಮೊದಲ ಬಾರಿಗೆ ಶಿಲೀಂಧ್ರದ (ಫಂಗಸ್) ಜೀವಕೋಶವುಳ್ಳ ಎಳೆಗಳನ್ನು ಕಂಡು ದಾಖಲಿಸಿದ್ದ ಎಂಬುದು ಅಜಮಾಸು ಅದೇ ಸಮಯಕ್ಕೆ ಜಗತ್ತಿಗೆ ತಿಳಿದುಬಂತು; ಆದರೆ ಆಂಟೋನಿ ವಾನ್ ಲೀವನ್ಹೊಕ್ಗಿಂತಾ ಎರಡು ದಶಕಗಳ ಮೊದಲೇ, ೧೭ನೆಯ ಶತಮಾನದ ಮೊದಲಾರ್ಧದಲ್ಲೇ, ರಾಬರ್ಟ್ ಹೂಕ್, ತನ್ನ ಬಳಿ ಸರಳ ಸೂಕ್ಷ್ಮದರ್ಶಕವನ್ನು ಹೊಂದಿದ್ದು, ಸೂಕ್ಷ್ಮಾಣುಜೀವಿಗಳನ್ನು ಗಮನಿಸಿ ದಾಖಲಿಸಿದ್ದ ಎನ್ನುತ್ತಾರೆ ಕೆಲವು ಇತಿಹಾಸತಜ್ಞರು.

ಸೂಕ್ಷ್ಮಜೀವಾಣುಗಳ ಇರುವನ್ನು ಜನರು ನಂಬದೆ ಇರಲು ಮತ್ತೊಂದು ಕಾರಣ, ಆಗ ಪ್ರಚಲಿತವಿದ್ದ ‘ ಸ್ವಾಭಾವಿಕ ಜೀವೊತ್ಪಾದನ ಸಿದ್ಧಾಂತ’. ಈ ಸಿದ್ಧಾಂತದ ಪ್ರಕಾರ, ಯಾವುದೇ ಅಂಡ, ಬೀಜ ಅಥವಾ ಜೀವಕೋಶದ ಸಹಾಯವಿಲ್ಲದೇ, ತನ್ನಿಂತಾನೆ ಅಜೈವಿಕ ವಸ್ತುಗಳಿಂದ ಜೀವಿಯ ಉತ್ಪಾದನೆ ಸಾಧ್ಯ. ಈ ಸಿದ್ಧಾಂತಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ; ಇದು ಕೇವಲ ಮೂಢನಂಬಿಕೆಗಳ ಆಧಾರದ ಮೇಲೆ ಹುಟ್ಟಿದ ಸಿದ್ಧಾಂತ. ಆದರೆ ಈ ಸಿದ್ಧಾಂತಕ್ಕೆ ಜೋತುಬಿದ್ದ ಜನತೆ, ಸೂಕ್ಷ್ಮಜೀವಾಣುವಿಜ್ಞಾನದ ಬಗ್ಗೆ ಆಸಕ್ತಿಯಾಗಲೀ, ನಂಬಿಕೆಯಾಗಲೀ ಹೊಂದಿರಲಿಲ್ಲ. ಹಾಗಾಗಿ ಲೀವನ್ಹೊಕ್ ಹಾಗೂ ರಾಬರ್ಟ್ ಹೂಕ್ ಮಾಡಿದ ಆವಿಷ್ಕಾರಗಳ ನಂತರವೂ ಸೂಕ್ಷ್ಮಜೀವಾಣುವಿಜ್ಞಾನದ ವಿಕಾಸ ಹಲವು ದಶಕಗಳ ಕಾಲ ತಟಸ್ಥವಾಗಿತ್ತು. ಈ ಮೂಢನಂಬಿಕೆ ಆಧಾರಿತ ಸಿದ್ಧಾಂತದ ಬುಡಕ್ಕೆ ಕೊಡಲಿಪೆಟ್ಟು ನೀಡಿದ್ದು, ವಿಜ್ಞಾನಿಗಳಾದ ಫ್ರಾನ್ಸೆಸ್ಕೋ ರೀಡಿ, ಲಾಜ್ಹಾರೋ ಸ್ಪಾಲಾಂಜ್ಹಾನಿ ಹಾಗೂ ಲೂಯಿ ಪಾಶ್ಚರ್.

ಜನರು ನಂಬಿದ್ದಂತೆ, ಮಾಂಸದ ರಸದಿಂದ ಹುಳುಗಳು ತನ್ನಿಂತಾನೆ ಜನ್ಮತಾಳುವುದಿಲ್ಲ, ಸರಿಯಾಗಿ ಮುಚ್ಚದ ಪಾತ್ರೆಯಲ್ಲಿದ್ದ ಮಾಂಸದ ರಸಕ್ಕೆ, ಹೊರಗಿನಿಂದ ಹಾರುವ ಹುಳುಗಳ ಭ್ರೂಣವೋ, ಮೊಟ್ಟೆಯೋ ಸೇರುತ್ತವೆ ಮತ್ತು ಇದರ ಫಲವಾಗಿ ಹುಳುಗಳ ಜನನವಾಗುತ್ತದೆ ಎಂಬುದನ್ನು ಫ್ರಾನ್ಸೆಸ್ಕೋ ರೀಡಿ ಸಾಧಿಸಿ ತೋರಿಸಿದನು. ಒಂದು ಮುಚ್ಚಿದ ಪಾತ್ರೆ ಮತ್ತೊಂದು ತೆರೆದ ಪಾತ್ರೆಯಲ್ಲಿ ಮಾಂಸದ ರಸವನ್ನು ಇರಿಸಿ, ಕಾಲಾನುಕ್ರಮದಲ್ಲಿ, ತೆರೆದ ಪಾತ್ರೆಯಲ್ಲಿ ಮಾತ್ರ ಹುಳುಗಳು ಹುಟ್ಟುವುದನ್ನು ಸಾಕ್ಷ್ಯ ಸಮೇತ ಜನರ ಮುಂದಿರಿಸಿದನು. ತಕ್ಕ ಮಟ್ಟಿಗೆ ಯಶ  ಕಂಡ ಈ ಪ್ರಯೋಗವು ಒಮ್ಮೊಮ್ಮೆ ವಿಫಲವಾಗುತ್ತಿತ್ತು. ಇದಕ್ಕೆ ಕಾರಣ, ಪಾತ್ರೆಯನ್ನು ಮುಚ್ಚುವ ಮೊದಲೇ, ಮಾಂಸದ ರಸದಲ್ಲಿದ್ದ ಕ್ರಿಮಿಗಳು ಅಥವಾ ಕ್ರಿಮಿಗಳ ತತ್ತಿಗಳು. ಹಾಗಾಗಿ ಜನರು ಫ್ರಾನ್ಸೆಸ್ಕೋ ರೀಡಿಯ ಮಾತನ್ನು ನಂಬಲು ತಯಾರಿರಲಿಲ್ಲ. ರೀಡಿಯ ಪ್ರಯೋಗಕ್ಕೆ ಪುಷ್ಟಿಕೊಡುವಂತಹ ಪ್ರಯೋಗವನ್ನು ರೂಪಿಸಿದವನು ಲಾಜ್ಹಾರೋ ಸ್ಪಾಲಾಂಜ್ಹಾನಿ. ತೆರೆದ ಅಥವಾ ಮುಚ್ಚಿದ ಪಾತ್ರೆಯಲ್ಲಿ ಇರಿಸುವ ಮೊದಲೇ, ಮಾಂಸದ ರಸವನ್ನು ಕುದಿಸಲಾಯಿತು; ಕುದಿಸಿದ ರಸದಲ್ಲಿ ಯಾವ ರೀತಿಯ ಕ್ರಿಮಿ ಅಥವಾ ಕ್ರಿಮಿಯ ತತ್ತಿಗಳು ಉಳಿಯುವ ಸಾಧ್ಯತೆ ಇರಲಿಲ್ಲವಾದ್ದರಿಂದ, ಕೇವಲ ತೆರೆದ ಪಾತ್ರೆಯಲ್ಲಿ ಹೊರಗಿನಿಂದ ಬಂದ ಹುಳುವಿನ ಕಾರಣದಿಂದ ಹುಳುಗಳ ಜನನವಾಯಿತೇ ಹೊರತು ತನ್ನಿಂತಾನೆ ಅಲ್ಲ ಎಂಬುದು ಇದರಿಂದ ಸಾಬೀತಾಯಿತು. ಕೆಲವರು ಇದರಿಂದ ಸಂತುಷ್ಟರಾದರೆ ಮತ್ತೂ ಕೆಲವರು ಇದನ್ನು ಒಪ್ಪಲು ತಯಾರಿರಲಿಲ್ಲ.

ಇದರ ನಂತರ, ೧೯ನೆಯ ಶತಮಾನದಲ್ಲಿ ಲೂಯಿ ಪಾಶ್ಚರ್ನ ಪ್ರಯೋಗಗಳಿಂದ ಶಾಶ್ವತವಾಗಿ ‘ ಸ್ವಾಭಾವಿಕ ಜೀವೊತ್ಪಾದನ ಸಿದ್ಧಾಂತ’ದ ಕೊನೆಯಾಯಿತು. ಫ್ರೆಂಚ್ ರಸಾಯನಶಾಸ್ತ್ರಜ್ಞ ಹಾಗೂ ಸೂಕ್ಷ್ಮಜೀವಾಣುವಿಜ್ಞಾನಿಯಾದ ಪಾಶ್ಚರ್, ಹಿಟ್ಟು ಹುದುಗುವ ಪ್ರಕ್ರಿಯೆ ಮತ್ತು ದಿನ ಕಳೆದ ನಂತರ ಹುದುಗಿದ ಹಿಟ್ಟು ಹುಳಿಯಾಗುವ ಹಿಂದಿನ ಕಾರಣವನ್ನು ಅಧ್ಯಯಿಸುತ್ತಿದ್ದ. ದ್ರಾಕ್ಷಿಯಿಂದ ಮಾಡಲಾದ ವೈನ್ ಕೂಡ ಇದೇ ಪ್ರಕ್ರಿಯೆಯಿಂದ ತಯಾರಾದರೂ, ಅದರ ರುಚಿ, ಅದಕ್ಕೆ ಬೇಕಾದ ತಾಪಮಾನ ಹಾಗೂ ಸಮಯ ಬೇರೆಯದ್ದೇ ಎಂಬುದನ್ನು ಅಭ್ಯಾಸದಿಂದ ಅರಿತ. ಈ ಹುಳಿಯಾಗುವ ಪ್ರಕ್ರಿಯೆಯು ಹಿಟ್ಟು/ವೈನ್ ನ ಆರೋಗ್ಯ ಕೆಡುವುದು ಎಂಬರ್ಥದಲ್ಲಿ ಪರಿಗಣಿಸಿದರೆ, ಆರೋಗ್ಯ ಕೆಡುವುದಕ್ಕೆ ಅಗೋಚರ ಕ್ರಿಮಿಗಳೇ ಕಾರಣ; ಇದರ ಆಧಾರದ ಮೇಲೆ ಮಾನವರಲ್ಲಿ ಹಾಗೂ ಪ್ರಾಣಿ ಪಕ್ಷಿಗಳಲ್ಲಿ ಉಂಟಾಗುವ ರೋಗಕ್ಕೆ, ರೋಗಕಾರಕ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳೇ ಕಾರಣ ಎಂಬ ತೀರ್ಮಾನಕ್ಕೆ ಬಂದ. ಇದರಿಂದ ಹುಟ್ಟಿಕೊಂಡ ಸಿದ್ದಾಂತವೇ ‘ರೋಗದ ಸೂಕ್ಷ್ಮಾಣು ತತ್ವ’. ಪಾಶ್ಚರನ ಈ ಸಿದ್ಧಾಂತವನ್ನು ಸರ್ವವಿದಿತಗೊಳಿಸಲು, ‘ ಸ್ವಾಭಾವಿಕ ಜೀವೊತ್ಪಾದನ ಸಿದ್ಧಾಂತ’ದ ಸೋಲು ಅತ್ಯವಶ್ಯಕವಾಗಿತ್ತು. ಹಾಗಾಗಿ ಲೂಯಿ ಪಾಶ್ಚರ್ ಹೊಸದೊಂದು ಪ್ರಯೋಗವನ್ನು ರೂಪಿಸಿದ. ‘ಹಂಸ ಕತ್ತಿನ ಸೀಸೆಯ ಪ್ರಯೋಗ’ ಎಂದೇ ಜನಜನಿತವಾದ ಈ ಪ್ರಯೋಗದಲ್ಲಿ, ಒಂದು ಹಂಸದ ಕುತ್ತಿಗೆಯಂತೆ ಬಾಗಿದ ಮೂತಿಯುಳ್ಳ ಸೀಸೆಯನ್ನು ಬಳಸಿ, ಅದರಲ್ಲಿ ಮಾಂಸದ ರಸವನ್ನು ಇರಿಸಿ ಕುದಿಸಲಾಯಿತು; ಹೀಗೆ ಕುದ್ದಿರುವ ರಸದಲ್ಲಿ ಯಾವ ಜೀವಿಯ ಕುರುಹೂ ಇಲ್ಲ, ಆದರೆ, ಸೀಸೆಯ ಬಾಯಿ ತೆರೆದಿರುವ ಕಾರಣ ಸೂಕ್ಷ್ಮಾಣು ಜೀವಿಗಳು ಹೊರಗಿನಿಂದ ಒಳಬಂದು, ರಸವನ್ನು ಕೆಡಿಸಬಹುದು; ಆದರೆ, ಹಂಸದ ಕುತ್ತಿಗೆಯಂತೆ ಬಾಗಿದ ಮೂತಿಯುಳ್ಳ ಸೀಸೆಯಾದ್ದರಿಂದ, ಬಾಗಿರುವ ಭಾಗದಲ್ಲಿ ಸೂಕ್ಷ್ಮಜೀವಾಣುಗಳು ಹಾಗೂ ಧೂಳು ಜಮೆಯಾಗುತ್ತವೆಯೇ ಹೊರತು, ಒಳಗಿನ ತನಕ ತಲುಪಿ, ರಸವನ್ನು ಹಾಳುಗೆಡವಲು ಸಾಧ್ಯವಿಲ್ಲ; ಅದೇ ಸೀಸೆಯ ಹಂಸದ ಕತ್ತಿನ ಮೂತಿಯನ್ನು ಮುರಿದು, ಸೀಸೆಯನ್ನು ತೆರೆದಿಟ್ಟರೆ, ತತ್ಕ್ಷಣದಿಂದಲೇ ಸೂಕ್ಷ್ಮಜೀವಾಣುಗಳು ಒಳನುಗ್ಗಿ, ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡು, ರಸವನ್ನು ಹಾಳುಗೆಡವುತ್ತವೆ. ಈ ಪ್ರಯೋಗದಿಂದ, ಜೀವೊತ್ಪಾದನೆಗೆ ಜೀವಿಯ ಅಗತ್ಯವನ್ನು ನಿಚ್ಚಳವಾಗಿ ತೋರಿಸಿಕೊಟ್ಟ ಲೂಯಿ ಪಾಸ್ಚರ್, ‘ ಸ್ವಾಭಾವಿಕ ಜೀವೊತ್ಪಾದನ ಸಿದ್ಧಾಂತ’ಕ್ಕೆ ಮಂಗಳ ಹಾಡಿದನು.

sc1

ಲೂಯಿ ಪಾಶ್ಚರ್ನಂತೆಯೇ ಆತನ ಸಮಕಾಲೀನರಾದ ಎಡ್ವರ್ಡ್ ಜೆನ್ನರ್, ರಾಬರ್ಟ್ ಕೋಚ್, ಜೋಸೆಫ್ ಲಿಸ್ತರ್ ಹಲವು ಕೊಡುಗೆ ನೀಡಿ ಸೂಕ್ಷ್ಮಜೀವಾಣುವಿಜ್ಞಾನವನ್ನು ಶ್ರೀಮಂತಗೊಳಿಸಿದರು. ಪಾಸ್ಚರ್ ಪ್ರತಿಪಾದಿಸಿದ ‘ರೋಗದ ಸೂಕ್ಷ್ಮಾಣು ತತ್ವ’ವನ್ನು ರಾಬರ್ಟ್ ಕೋಚ್ ತನ್ನ ಪ್ರಯೋಗದ ಮೂಲಕ ಸಾಬೀತುಪಡಿಸಿದನು. ೧೮೮೦ನೆಯ ಇಸವಿಯಲ್ಲಿ, ಅಂಥ್ರಾಕ್ಸ್ ರೋಗದಿಂದ ಬಳಲುತ್ತಿದ್ದ ಜಾನುವಾರಿನಿಂದ ರಕ್ತಸಾರವನ್ನು ತೆಗೆದು ಇಲಿಗಳಿಗೆ ಚುಚ್ಚುಮದ್ದಿನ ಮುಖಾಂತರ ನೀಡಿದನು; ಇದರ ಫಲಿತಾಂಶವಾಗಿ ಇಲಿಯು ಸಾವನ್ನಪ್ಪಿತು. ಇಲಿಗಳಿಂದ ರಕ್ತಸಾರವನ್ನು ತೆಗೆದು ಪರೀಕ್ಷಿಸಿದಾಗ, ಜಾನುವಾರಿನಲ್ಲಿದ್ದ ರೋಗಗಾರಕ ಕ್ರಿಮಿಯೇ ಇಲ್ಲೂ ಇದ್ದದ್ದು ಕಂಡುಬಂದಿತು. ಇದರಿಂದ ಸಾಬೀತಾದ ಅಂಶವೆಂದರೆ, ಒಂದು ರೋಗವನ್ನು ಉಂಟುಮಾಡಲು ರೋಗಕಾರಕ ಜೀವಿ ಬೇಕು; ಅಷ್ಟೇ ಅಲ್ಲದೆ, ನಿರ್ದಿಷ್ಟ ರೋಗವನ್ನು ಉಂಟುಮಾಡಲು ನಿರ್ದಿಷ್ಟ ಬಗೆಯ ರೋಗಕಾರಕ ಕ್ರಿಮಿಯ ಅವಶ್ಯಕತೆ ಇದೆ ಎಂಬುದು.

sc2

೧೭೯೬ನೆಯ ಇಸವಿಯಲ್ಲೇ ಇದನ್ನು ತನ್ನ ಪರಿವೀಕ್ಷಣಾ ಅವಲೋಕನದಿಂದ ತಿಳಿದಿದ್ದ ಎಡ್ವರ್ಡ್ ಜೆನ್ನರ್, ತನ್ನ ಕುಟುಂಬದ ಸದಸ್ಯರನ್ನೂ ಒಳಗೊಂಡಂತೆ ಹಲವರನ್ನು ತನ್ನ ಪ್ರಯೋಗಕ್ಕೆ ಗುರಿಯಾಗಿಸಿಕೊಂಡು, ಲಸಿಕೆಯನ್ನು ಕಂಡುಹಿಡಿದಿದ್ದ. ಜಾನುವಾರನ್ನು ನೋಡಿಕೊಳ್ಳುವ ದಾದಿಯರಿಗೆ ಸಿಡುಬು ಕಾಡುವುದು ಕಡಿಮೆ, ಅಥವಾ ಸಿಡುಬು ಬೇಗನೆ ಗುಣವಾಗುತ್ತದೆ ಎಂಬುದನ್ನು ಗಮನಿಸಿದ ಜೆನ್ನರ್, ಇದಕ್ಕೆ ಕಾರಣವನ್ನೂ ಊಹಿಸಿದ. ದನದ ಸಿಡುಬಿನ ವ್ರಣದ ರಸ ಈ ದಾದಿಯರಿಗೆ ಸಾಮಾನ್ಯವಾಗಿ ತಾಗಿ, ಅದರಿಂದ ಲಘುವಾದ ಸಿಡುಬು ಇವರಲ್ಲಿ ಕಾಣಿಸಿಕೊಂಡು, ಇದರ ಫಲಿತಾಂಶವಾಗಿ, ತೀವ್ರತರವಾದ ಸಿಡುಬಿನ ವಿರುದ್ಧ ಇವರ ದೇಹವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಳೆಸಿಕೊಂಡಿರುತ್ತದೆ ಎಂಬುದನ್ನು ಅರಿತ. ದನದ ಸಿಡುಬಿನ ರೋಗಕಾರಕ ಸೂಕ್ಷ್ಮಾಣು ಜೀವಿಯನ್ನು ಬಳಸಿಕೊಂಡು, ಜಗತ್ತಿನ ಮೊತ್ತಮೊದಲ ಲಸಿಕೆಯನ್ನು ಕಂಡುಹಿಡಿದ. ಸಿಡುಬಿನ ವಿರುದ್ಧ ಈ ಲಸಿಕೆಯನ್ನು ಬಳಸಿಯೇ, ಭಾರತವೂ ಸೇರಿದಂತೆ ಜಗತ್ತಿನ ಬಹುಪಾಲು ದೇಶಗಳು ಇಂದು ಸಿಡುಬಿನಿಂದ ಮುಕ್ತವಾಗಿವೆ.

ಬ್ರಿಟಿಶ್ ವಿಜ್ಞಾನಿ, ಶಸ್ತ್ರಚಿಕಿತ್ಸಕ ಮತ್ತು ನಂಜುನಿರೋಧಕ ಶಸ್ತ್ರಚಿಕಿತ್ಸೆಯ ಪ್ರವರ್ತಕನಾದ ಜೋಸೆಫ್ ಲಿಸ್ತರ್ ಕೂಡ ಸೂಕ್ಷ್ಮಾಣು ಜೀವಿಗಳ ಬಗ್ಗೆ ಆಳವಾದ ಅರಿವನ್ನು ಹೊಂದಿದ್ದನು. ಸೂಕ್ಷ್ಮಾಣು ಜೀವಿಗಳ ಕಾರಣದಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಂಜು ಉಂಟಾಗುತ್ತದೆ ಎಂಬುದನ್ನು ಅರಿತ ಈ ವೈದ್ಯ, ಹಾನಿಕಾರಕ ಸೂಕ್ಷ್ಮ ಜೀವಾಣುಗಳನ್ನು ನಿವಾರಿಸಲು ಮೊದಲ ಬಾರಿಗೆ ೧೮೬೫ನೆ ಇಸವಿಯಲ್ಲಿ, ರಾಸಾಯನಿಕವನ್ನು ಬಳಸಿದನೆಂಬ ಖ್ಯಾತಿಗೆ ಪಾತ್ರನಾಗಿದ್ದಾನೆ. ಅಂದಿಗೆ ಕಾರ್ಬೋಲಿಕ್ ಆಮ್ಲ ಎಂಬ ಹೆಸರಿನಿಂದ ಗುರುತಿಸಲಾಗುತ್ತಿದ್ದ ಇಂದಿನ ‘ಪ್ಹೀನಾಲ್”ಅನ್ನು ಅಂದಿನಿಂದ ಇಂದಿನವರೆಗೂ ಕೀವುನಾಶಕ ಅಥವಾ ನಂಜುನಾಶಕವಾಗಿ ಬಳಸಲಾಗುತ್ತಿದೆ.

೧೯ನೆಯ ಶತಮಾನದ ಕೊನೆಯ ವರ್ಷಗಳು ಹಾಗೂ ೨೦ನೆಯ ಶತಮಾನವನ್ನು, ಸೂಕ್ಷ್ಮಜೀವಾಣುವಿಜ್ಞಾನದ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಜೀವವಿಜ್ಞಾನದ ಈ ಶಾಖೆಯು ಅತ್ಯಂತ ಹೆಚ್ಚಿನ ಬೆಳವಣಿಗೆಯನ್ನೂ, ವಿಸ್ತಾರವನ್ನೂ ಕಂಡಿದೆ. ಇದರ ಹಿಂದಿರುವ ಪ್ರಮುಖ ಕಾರಣಗಳಲ್ಲಿ ಒಂದು, ‘ಎಲೆಕ್ಟ್ರಾನ್ ಸೂಕ್ಷ್ಮದರ್ಶಕ’ದ ನಿರ್ಮಾಣ. ೧೯೪೦ನೆಯ ಇಸವಿಯಲ್ಲಿ ಬಳಕೆಗೆ ಬಂದ ಈ ಸೂಕ್ಷ್ಮದರ್ಶಕದ ಸಹಾಯದಿಂದ, ಬ್ಯಾಕ್ಟೀರಿಯಾಗಿಂತಲೂ ಕಿರಿದಾದ ಸೂಕ್ಷ್ಮಜೀವಾಣುಗಳನ್ನು ಅಧ್ಯಯನ ಮಾಡಬಹುದು ಮತ್ತು ಇದರ ಮುಖಾಂತರ, ಸೂಕ್ಷ್ಮಜೀವಾಣುವಿಜ್ಞಾನದ ಮತ್ತೂ ಆಳದ ತಿಳುವಳಿಕೆ ಸಾಧ್ಯ. ಇನ್ನು ೧೮೯೨ನೆಯ ಇಸವಿಯಲ್ಲಿ, ದಿಮಿತ್ರಿ ಇವನೋವ್ಸ್ಕಿಹಾಗೂ ಮಾರ್ತಿನಸ್ ಬೈಜೆರಿನ್ಕ್ನಿಂದ ‘ವೈರಸ್’ಗಳ ಆವಿಷ್ಕಾರವಾಯಿತು. ಬ್ಯಾಕ್ಟೀರಿಯಾಗಳಿಗಿಂತಲೂ ಅತ್ಯಂತ ಕಿರಿದಾದ ವೈರಸ್ಗಳು, ನಿಜವಾದ ಜೀವಿಯೋ ಅಥವಾ ಕೇವಲ ಸಂತಾನೋತ್ಪತ್ತಿ ಮಾಡುವ ಜೀವರಾಸಾಯನಿಕ ಪದಾರ್ಥವೋ ಎಂಬುದರ ಬಗೆಗಿನ ಜಿಜ್ಞಾಸೆ ಇಂದಿನ ವಿಜ್ಞಾನಿಗಳಲ್ಲೂ ಇದೆ. ಇಂತಹ ವೈರಸ್ಗಳನ್ನು ಮತ್ತು ಇತರ ಸೂಕ್ಷ್ಮಾಣುಜೀವಿಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಲು ಬೇಕಾಗುವ ‘ಸಂವರ್ಧನ ಸಂಗೋಪನ ಕೌಶಲ’ಗಳನ್ನೂ, ಬೈಜೆರಿನ್ಕ್ ವಿನ್ಯಾಸ ಮಾಡಿದ್ದಾನೆ. ಈ ‘ಸಂವರ್ಧನ ಸಂಗೋಪನ ಕೌಶಲ’ಗಳನ್ನು ( ಎನ್ರಿಚ್ಮೆಂಟ್ ಕಲ್ಚರ್ ಟೆಕ್ನಿಕ್) ಅಂದರೆ, ಯಾವ ಬಗೆಯ ಸೂಕ್ಷ್ಮಾಣು ಜೀವಿಗೆ ಯಾವ ಪೋಷಕಾಂಶವುಳ್ಳ ಮಾಧ್ಯಮದ ಅವಶ್ಯಕತೆಯಿದೆ,  ಬೇರೆಬೇರೆ ಸಂವರ್ಧನ ಸಂಗೋಪನ ಮಾಧ್ಯಮಗಳಿಗೆ ಬೇರೆಬೇರೆ ಅಮ್ಲೀಯತೆ, ಕ್ಷಾರೀಯತೆ, ತಾಪಮಾನದಂತಹ ನಿಯತಾಂಕಗಳ ಬಳಕೆ ಹೇಗೆ ಎಂಬುದನ್ನು ಬೈಜೆರಿನ್ಕ್ ವಿನ್ಯಾಸ ಮಾಡಿದ್ದಾನೆ. ಇದರ ಸಹಾಯದಿಂದ ಸಾವಿರಾರು ಬಗೆಯ ಸೂಕ್ಷ್ಮಾಣುಜೀವಿಗಳನ್ನು ಪ್ರಯೋಗಾಲಯದಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ ಮತ್ತು ಅವುಗಳ ಮೇಲೆ ವಿವಿಧ ಸಂಶೋಧನೆಗಳನ್ನು ನಡೆಸಬಹುದಾಗಿದೆ. ಇದೇ ಸುವರ್ಣಯುಗದಲ್ಲಿ, ಸೂಕ್ಷ್ಮಜೀವಿಗಳು ಭೂರಾಸಾಯನಿಕ ಪ್ರಕ್ರಿಯೆಗಳಲ್ಲಿ ವಹಿಸುವ ಮೂಲಭೂತ ಪಾತ್ರವನ್ನು ಸರ್ಜೈ ವಿನೋಗ್ರಾಡ್ಸ್ಕಿ ಎಂಬ ವಿಜ್ಞಾನಿ ಬಹಿರಂಗಪಡಿಸಿದನು. ಇದರ ಫಲಿತಾಂಶವಾಗಿ ಸೂಕ್ಷ್ಮಜೀವಿಗಳು ಮತ್ತು ಪರಿಸರ ವ್ಯವಸ್ಥೆಯ ನಡುವಿನ ಸಂಬಂಧದ ಮೇಲೆ ಬೆಳಕು ಹರಿದು, ಹಲವು ಪರಿಸರೀಯ ಹಾಗೂ ಕೈಗಾರಿಕಾ ಕ್ಷೇತ್ರದ ಕೊಡುಗೆಗಳಿಗೆ ನಾಂದಿಯಾಯಿತು. ಇದೇ ಯುಗದ ಅನ್ವೇಷಣೆಗಳಾದ ಆಂಟಿಬಯೋಟಿಕ್ ಅಥವಾ ಪ್ರತಿಜೀವಕಗಳ ಹಾಗೂ ವಿಶಿಷ್ಟ ನಿರ್ದಿಷ್ಟ ಲಸಿಕೆಗಳಿಂದ, ಇಡೀ ಜಗತ್ತೇ ನೂರಾರು ಮಾರಕ ರೋಗಗಳ ಕಬಂಧಬಾಹುವಿನಿಂದ  ಪಾರಾಯಿತು. ಮಾನವನ ಜೀವನದಲ್ಲಿ ಹಾಗೂ ಭೂಮಿಯ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸೂಕ್ಷ್ಮಾಣುಜೀವಿಗಳ ಅಧ್ಯಯನವಾದ ಸೂಕ್ಷ್ಮಜೀವಾಣು ವಿಜ್ಞಾನವು, ಅಧುನಿಕ ತಂತ್ರಜ್ಞಾನದ ಸಹಾಯದಿಂದ ಹಾಗೂ ವಿಜ್ಞಾನದ ಇತರ ಶಾಖೆಗಳಲ್ಲಿ ಆಗುತ್ತಿರುವ ಸಮಕಾಲೀನ ಬೆಳವಣಿಗೆಗಳಿಂದ, ದಿನೇ ದಿನೇ ಹೊಸ ದಿಕ್ಕಿನತ್ತ ಸಾಗಿದೆ.