01

ಕಣ್ಣಿಗೆ ಕಾಣುವುದಷ್ಟೇ ಸತ್ಯವಲ್ಲ; ನಮ್ಮ ಬರಿಗಣ್ಣಿಗೆ ಗೋಚರವಾಗದ ಸಂಗತಿಗಳೆಷ್ಟೋ ಇವೆ ಈ ಜಗತ್ತಿನಲ್ಲಿ. ಅಕ್ಷರಶಃ ನಮ್ಮ ಬರಿಗಣ್ಣಿಗೆ ಕಂಡುಬರದ ಪುಟ್ಟ ಪುಟಾಣಿ ಗಿಡಗಳೂ ಪ್ರಾಣಿಗಳೂ ಇವೆ ಎಂದರೆ ನೀವು ನಂಬಲೇಬೇಕು. ಆದರೆ, ಅವು ದೊಡ್ಡ ಗಿಡಮರಗಳಂತೆಯೇ ಪ್ರಾಣಿಗಳಂತೆಯೇ ಸಂಪೂರ್ಣವಾಗಿ ಇರದಿದ್ದರೂ, ಅವುಗಳ ನಡುವೆ ಮೂಲಭೂತವಾಗಿ ಬಹಳಷ್ಟು ಹೋಲಿಕೆ ಖಂಡಿತಾ ಇದೆ. ಇಂತಹ ಜೀವಿಗಳು ಕೇವಲ ಒಂದೇ ಜೀವಕೋಶವನ್ನು ಹೊಂದಿರಬಹುದು ಅಥವಾ ಹತ್ತಾರು ಜೀವಕೋಶಗಳ ವಸಾಹತು ನಿರ್ಮಿಸಿಕೊಂಡಿರಬಹುದು. ಇಂತಹ ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಗಳನ್ನು, ಸೂಕ್ಷ್ಮಾಣು ಅಥವಾ ಸೂಕ್ಷ್ಮಜೀವಾಣು ಎಂದು ಕರೆಯುತ್ತೇವೆ. ಇವುಗಳ ಬಗ್ಗೆ ಅಧ್ಯಯನ ನಡೆಸಲು ಇರುವ ವಿಜ್ಞಾನದ ಶಾಖೆಯನ್ನು ಸೂಕ್ಷ್ಮಜೀವಾಣುವಿಜ್ಞಾನ ಎನ್ನುತ್ತೇವೆ. ಇಂಗ್ಲೀಷಿನಲ್ಲಿ, ಸೂಕ್ಷ್ಮಜೀವಾಣುವಿಜ್ಞಾನವನ್ನು ‘ಮೈಕ್ರೋಬಯೋಲೊಜಿ’ ಎನ್ನುತ್ತಾರೆ. ಈ ಪದದ ವ್ಯುತ್ಪತ್ತಿಯನ್ನು ಗಮನಿಸಿದರೆ, ಇದರ ಮೂಲ ಗ್ರೀಕ್ ಭಾಷೆಯ ಪದಗಳು; ಗ್ರೀಕ್ ಭಾಷೆಯಲ್ಲಿ ‘ಮೈಕ್ರೊಸ್’ ಎಂದರೆ ‘ಚಿಕ್ಕ’, ‘ಬಯೋಸ್’ ಎಂದರೆ ‘ಜೀವ’ ಮತ್ತು ‘ಲೋಜಿಯ’ ಎಂದರೆ ಅಧ್ಯಯನ.

ಸೂಕ್ಷ್ಮಜೀವಾಣುವಿಜ್ಞಾನದ ತಳಹದಿಯೇ ಸೂಕ್ಷ್ಮದರ್ಶಕ; ಹಲವಾರು ಬಗೆಯ ಮಸೂರಗಳನ್ನು, ಕನ್ನಡಿಗಳನ್ನು ಬಳಸಿಕೊಂಡು ತಯಾರಿಸಲಾದ ಸೂಕ್ಷ್ಮದರ್ಶಕದ ಮೂಲಕವಷ್ಟೇ ಸೂಕ್ಷ್ಮಜೀವಾಣುಗಳ ಕೂಲಂಕುಶ ಅಧ್ಯಯನ ಸಾಧ್ಯ. ಕಣ್ಣಿಗೆ ಕಾಣದ ಅಷ್ಟು ಪುಟ್ಟ ಜೀವಿಗಳ ಅಧ್ಯಯನವಾದರೂ ಏಕೆ ಬೇಕು ಎನ್ನುತ್ತೀರಾ? ಈ ಸೂಕ್ಷ್ಮಜೀವಾಣುಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತವೆ; ಎಷ್ಟರ ಮಟ್ಟಿಗೆ ಇವು ನಮಗೆ ಮುಖ್ಯ ಎಂದರೆ, ಇವಿಲ್ಲದೇ ನಾವು ನೀವು ಬದುಕಲೇ ಸಾಧ್ಯವಿಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ. ನಮಗೂ ಸೂಕ್ಷ್ಮಜೀವಾಣುಗಳಿಗೂ ನಮ್ಮ ಹುಟ್ಟಿನ ಮುಂಚಿನಿಂದಲೂ ಶುರುವಾಗುವ ಸಂಬಂಧ, ನಮ್ಮ ಸಾವಿನವರೆಗೂ ಮತ್ತು ಸಾವಿನ ನಂತರವೂ ಮುಂದುವರೆಯುತ್ತದೆ; ಇವುಗಳೊಂದಿಗೆ ನಮ್ಮದು ಅವಿನಾಭಾವ ಬಾಂಧವ್ಯ. ತಾಯ ಗರ್ಭದಲ್ಲಿ ನಾವು ಶಿಶುವಿನ ರೂಪ ಪಡೆಯುತ್ತಿರುವಾಗಲೇ, ಗರ್ಭವೇಷ್ಟನದ( ಜರಾಯು ಅಥವಾ ಪ್ಲಾಸೆಂಟ) ಮುಖಾಂತರ ನಮಗೆ ಸೂಕ್ಷ್ಮಜೀವಾಣುಗಳ ಮೊದಲ ಕಂತೆ ಸಿಗುತ್ತದೆ. ನಂತರ ಅವುಗಳು ನಮ್ಮ ದೇಹದೊಳಗೇ ಸಂತಾನೋತ್ಪತ್ತಿ ನಡೆಸಿ, ಕ್ಷಣಕ್ಷಣಕ್ಕೂ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತವೆ. ಇನ್ನು ನಾವು ತಾಯ ಗರ್ಭದಿಂದ ಹೊರಬಂದಾಗ, ಮೊದಲ ಬಾರಿ ಉಸಿರಾಡುವ ಗಾಳಿಯಲ್ಲಿ ಕೋಟ್ಯಂತರ ಸೂಕ್ಷ್ಮಜೀವಾಣುಗಳು ಇದ್ದು, ಸಲೀಸಾಗಿ ನಮ್ಮ ಜೀವ ವ್ಯವಸ್ಥೆಯ ಭಾಗವಾಗುತ್ತವೆ. ನಮ್ಮ ಸುತ್ತಲಿನವರ ಮಾತು, ಉಸಿರಾಟ, ಸ್ಪರ್ಶದಿಂದ ನಾವು ನಮ್ಮ ಸೂಕ್ಷ್ಮಜೀವಾಣುಗಳ ಸಂಖ್ಯೆ ಮತ್ತು ವೈವಿಧ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತೇವೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ, ನಿಂತಿರುವ ನೆಲ ಎಲ್ಲವೂ ಸೂಕ್ಷ್ಮಜೀವಾಣುಮಯವೇ. ಇನ್ನು ಸತ್ತನಂತರ, ಮಾನವ ದೇಹದ ಕಣಕಣವನ್ನೂ ಮಣ್ಣಲ್ಲಿ ಒಂದಾಗಿಸುವುದೂ ಕೂಡ ಇದೇ ಸೂಕ್ಷ್ಮಜೀವಾಣುಗಳು. ಅಷ್ಟೇ ಅಲ್ಲದೆ ಸಾವಿರಾರು ಬಗೆಯ ರೋಗಗಳನ್ನು, ಮನುಷ್ಯರಲ್ಲಿ ಮತ್ತು ಮನುಷ್ಯರಿಗೆ ಒಂದಲ್ಲ ಒಂದು ರೀತಿಯಲ್ಲಿ ಬೇಕಾದ ಸಸ್ಯ, ಪ್ರಾಣಿ ಪಕ್ಷಿಗಳಲ್ಲಿ ಉಂಟು ಮಾಡುವುದು ಕೂಡ ಇವೇ ಸೂಕ್ಷ್ಮಜೀವಾಣುಗಳು. ಇದಲ್ಲದೇ, ಇಡ್ಲಿ ದೋಸೆಗೆ ಬೇಕಾದ ಹಿಟ್ಟಿನ ಹುದುಗು ಪ್ರಕ್ರಿಯೆಯಿಂದಾ ಪ್ರಾರಂಭಿಸಿ ಜೀವರಕ್ಷಕ ಔಷಧಿಗಳ ತಯಾರಿಕೆಯವರೆಗೂ ಸೂಕ್ಷ್ಮಜೀವಾಣುಗಳು ಅತ್ಯಗತ್ಯ. ಹಾಗಾಗಿ, ಇವುಗಳ ಬಗ್ಗೆ ತಿಳಿದುಕೊಳ್ಳಬೇಕಾದ, ಅಧ್ಯಯನ ನಡೆಸಬೇಕಾದ ಅನಿವಾರ್ಯತೆ ಜಗತ್ತಿಗಿದೆ.

ಸೂಕ್ಷ್ಮಜೀವಾಣುಗಳ ಬಗ್ಗೆ ಸಂಪೂರ್ಣ ಕ್ರಮಬದ್ಧ ಅಧ್ಯಯನಕ್ಕೆ ಮೀಸಲಾದ ಸೂಕ್ಷ್ಮಾಣುಜೀವವಿಜ್ಞಾನಕ್ಕೆ ಮುಖ್ಯವಾಗಿ ಎರಡು ಶಾಖೆಗಳಿವೆ ಮತ್ತು ಆ ಎರಡು ಶಾಖೆಗಳಲ್ಲೂ ಹಲವಾರು ಉಪಶಾಖೆಗಳಿವೆ. ಸೂಕ್ಷ್ಮಜೀವಾಣುವಿಜ್ಞಾನದ ಎರಡು ಶಾಖೆಗಳು – ಶುದ್ಧ ಸೂಕ್ಷ್ಮಜೀವಾಣುವಿಜ್ಞಾನ (ಪ್ಯೂರ್ ಮೈಕ್ರೋಬಯೋಲೊಜಿ) ಮತ್ತು ಆನ್ವಯಿಕ ಸೂಕ್ಷ್ಮಜೀವಾಣುವಿಜ್ಞಾನ( ಅಪ್ಲೈಡ್ ಮೈಕ್ರೋಬಯೋಲೊಜಿ). ಶುದ್ಧ ಸೂಕ್ಷ್ಮಜೀವಾಣುವಿಜ್ಞಾನ ಮತ್ತು ಅದರ ಉಪಶಾಖೆಗಳು, ಬಗೆಬಗೆಯ ಸೂಕ್ಷ್ಮಜೀವಾಣುಗಳ ಬಗ್ಗೆ ಮತ್ತು ಮೂಲಭೂತವಾಗಿ ಸೂಕ್ಷ್ಮಜೀವಾಣುಗಳ ರಚನೆ, ಬೆಳವಣಿಗೆ, ವರ್ಗೀಕರಣ, ನಾಮಕರಣದಂತಹ ಅತ್ಯಂತ ಪ್ರಮುಖ ವಿಚಾರಗಳ ಸುತ್ತ ಗಿರಕಿ ಹೊಡೆಯುತ್ತವೆ. ಆನ್ವಯಿಕ ಸೂಕ್ಷ್ಮಜೀವಾಣುವಿಜ್ಞಾನವು, ವಿವಿಧ ಕ್ಷೇತ್ರಗಳಲ್ಲಿ ಸೂಕ್ಷ್ಮಜೀವಾಣುವಿಜ್ಞಾನದ ಅನ್ವಯಿಕೆಯ ರೀತಿ ಮತ್ತು ಉಪಯೋಗಗಳ ಬಗ್ಗೆ ತಿಳಿಸಿಕೊಡುತ್ತದೆ.

ಶುದ್ಧ ಸೂಕ್ಷ್ಮಜೀವಾಣುವಿಜ್ಞಾನದ ಮುಖ್ಯ ಉಪಶಾಖೆಗಳು ಹಲವಾರಿವೆ; ಸೂಕ್ಷ್ಮಜೀವಾಣುಗಳಲ್ಲೇ ಅತ್ಯಂತ ಸುಲಭವಾಗಿ ಎಲ್ಲೆಡೆಯೂ ಲಭ್ಯವಿರುವುದು ಬ್ಯಾಕ್ಟೀರಿಯಾಗಳು; ಇಂತಹ ಸರ್ವತ್ರ ಉಪಸ್ಥಿತ ಬ್ಯಾಕ್ಟೀರಿಯಾಗಳ ಬಗೆಗಿನ ಅಧ್ಯಯನವನ್ನು ಬ್ಯಾಕ್ಟೀರಿಯೋಲೊಜಿ ಎನ್ನುತ್ತಾರೆ. ಅದರಂತೆಯೇ, ಶಿಲೀಂಧ್ರಗಳ (ಫಂಗಸ್) ಬಗೆಗಿನ ಅಧ್ಯಯನವನ್ನು ಮೈಕೋಲೊಜಿ, ವೈರಸ್ಗಳ ಬಗೆಗಿನ ಅಧ್ಯಯನವನ್ನು ವೈರೋಲೊಜಿ ಹಾಗೂ ಆಲ್ಗೆಗಳ ಬಗೆಗಿನ ಅಧ್ಯಯನವನ್ನು ಅಲ್ಗೋಲೊಜಿ ಎನ್ನುತ್ತಾರೆ.

ಇತರೆ ಜೀವಿಗಳ ದೇಹದೊಳಗೆ ಹೊಕ್ಕು, ಆ ಜೀವಿಗಳ ಚಯಾಪಚಯ ಕ್ರಿಯೆಯಿಂದ ತನಗೆ ಬೇಕಾದ ಶಕ್ತಿಯನ್ನು ಪಡೆಯುವ ಪರಾವಲಂಬಿಗಳ ಬಗೆಗಿನ ಅಧ್ಯಯನವನ್ನು ಪ್ಯಾರಾಸೈಟೋಲೊಜಿ ಎನ್ನುತ್ತಾರೆ. ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಅದರಲ್ಲಿ ಸೂಕ್ಷ್ಮಾಣುಜೀವಿಗಳ ಪಾತ್ರದ ಬಗೆಗಿನ ಅಧ್ಯಯನವನ್ನು ಇಮ್ಯುನೋಲೊಜಿ ಅಥವಾ ಪ್ರತಿರಕ್ಷಾವಿಜ್ಞಾನ ಎನ್ನುತಾರೆ. ಅಮೀಬಾದಂತಹ ಪ್ರೊಟೋಝೋವಾಗಳ ಬಗೆಗಿನ ಅಧ್ಯಯನವು ‘ಪ್ರೊಟೋಝುವೊಲೊಜಿ’. ಸೂಕ್ಷ್ಮಜೀವಿಗಳ ಜೀವಕೋಶದ ಸೂಕ್ಷ್ಮ ಮತ್ತು ಉಪಸೂಕ್ಷ್ಮದರ್ಶಕೀಯ ವಿವರಗಳ ಅಧ್ಯಯನವು ‘ಸೂಕ್ಷ್ಮಜೀವಿಯ ಜೀವಕೋಶವಿಜ್ಞಾನ’ ಅಥವಾ ‘ಮೈಕ್ರೋಬಿಯಲ್ ಸೈಟೋಲೊಜಿ’ ಎನಿಸಿಕೊಳ್ಳುತ್ತದೆ.

ಸೂಕ್ಷ್ಮಜೀವಿಗಳಲ್ಲಿ ಜೀನ್‌ಗಳ ಕ್ರಮಬದ್ಧ ಆಯೋಜನೆ ಮತ್ತು ಜೀನ್‌ಗಳಿಗೂ ಜೀವಕಣಗಳ ಕಾರ್ಯಲಕ್ಷಣಗಳ ನಿಯಂತ್ರಣಕ್ಕೂ ಇರುವ ಸಂಬಂಧದ ಅಧ್ಯಯನವನ್ನು ‘ಸೂಕ್ಷ್ಮಜೀವಿಯ ತಳಿಶಾಸ್ತ್ರ’ ಅಥವಾ ‘ಮೈಕ್ರೋಬಿಯಲ್ ಜೆನೆಟಿಕ್ಸ್’ ಎನ್ನುತ್ತಾರೆ. ಮತ್ತೊಂದು ಉಪಶಾಖೆಯಾದ ‘ಸೂಕ್ಷ್ಮಜೀವಿಯ ಶರೀರ ವಿಜ್ಞಾನ’ ಅಥವಾ ‘ಮೈಕ್ರೋಬಿಯಲ್ ಫಿಸಿಯೋಲೊಜಿ’ಯು ಸೂಕ್ಷ್ಮಜೀವಿಯ ಜೀವಕೋಶವು ಹೇಗೆ ಜೀವರಾಸಾಯನಿಕವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದಷ್ಟೇ ಅಲ್ಲದೆ, ಸೂಕ್ಷ್ಮಜೀವಿಯ ಬೆಳವಣಿಗೆ, ಚಯಾಪಚಯ ಕ್ರಿಯೆ ಮತ್ತು ಕೋಶ ರಚನೆಗಳ ಅಧ್ಯಯನವನ್ನು ಒಳಗೊಂಡಿದೆ. ಸೂಕ್ಷ್ಮಜೀವಿಗಳು ಮತ್ತು ಅವುಗಳ ಪರಿಸರದ ನಡುವಿನ ಸಂಬಂಧದ ಬಗ್ಗೆ ‘ಸೂಕ್ಷ್ಮಜೀವಿಯ ಪರಿಸರ ವಿಜ್ಞಾನ’ ಅಥವಾ ‘ಮೈಕ್ರೋಬಿಯಲ್ ಎಕೊಲೋಜಿಯ’ ಮೂಲಕ ತಿಳಿಯಬಹುದು.

ಸೂಕ್ಷ್ಮಜೀವಾಣುವಿಜ್ಞಾನ ಮತ್ತು ಜೀವಕೋಶವಿಜ್ಞಾನದ ನಡುವಿನ ಸಂಬಂಧದ ಅಧ್ಯಯನವನ್ನು ‘ಜೀವಕಣಗಳ ಸೂಕ್ಷ್ಮಜೀವಾಣುವಿಜ್ಞಾನ’ ಅಥವಾ ‘ಸೆಲ್ಯುಲಾರ್ ಮೈಕ್ರೋಬಯೋಲೊಜಿ’ ಎನ್ನುತ್ತಾರೆ. ಸೂಕ್ಷ್ಮಜೀವಿಗಳ ಶರೀರವೈಜ್ಞಾನಿಕ ಪ್ರಕ್ರಿಯೆಗಳ ಹಿಂದಿರುವ ಆಣ್ವಿಕ ತತ್ವಗಳ ಅಧ್ಯಯನವೇ ‘ಆಣ್ವಿಕ ಜೀವವಿಜ್ಞಾನ ಅಥವಾ ಮೊಲಿಕ್ಯುಲಾರ್ ಮೈಕ್ರೋಬಯೋಲೊಜಿ’. ಸೂಕ್ಷ್ಮಜೀವಿಗಳ ಕ್ರಮಬದ್ಧ ನಾಮಕರಣ ಮತ್ತು ವರ್ಗೀಕರಣದ ಅಧ್ಯಯನವು ‘ಸೂಕ್ಷ್ಮಜೀವಿಯ ವರ್ಗೀಕರಣ’ ಅಥವಾ ‘ಮೈಕ್ರೋಬಿಯಲ್ ಟ್ಯಾಕ್ಸೊನೊಮಿ’ ಎನಿಸಿಕೊಳ್ಳುತ್ತದೆ.

‘ಮೈಕ್ರೋಬಿಯಲ್ ಸಿಸ್ಟೆಮಾಟಿಕ್’ ಉಪಶಾಖೆಯು, ಸೂಕ್ಷ್ಮಜೀವಿಗಳ ವಿವಿಧತೆ ಮತ್ತು ಆನುವಂಶಿಕ ಸಂಬಂಧದ ಅಧ್ಯಯನ. ಬರಿಗಣ್ಣಿಗೆ ಕಾಣದಷ್ಟು ಕಿರಿದಾಗಿರುವ ಸೂಕ್ಷ್ಮಜೀವಿಗಳ ಅಧ್ಯಯನವನ್ನು ನ್ಯಾನೋ ಮಟ್ಟದಲ್ಲಿ ನಡೆಸಿದಾಗ ಅದನ್ನು ‘ನ್ಯಾನೋ ಸೂಕ್ಷ್ಮಜೀವಾಣುವಿಜ್ಞಾನ’ ಎನ್ನುತ್ತಾರೆ.

ಅನ್ಯಗ್ರಹದಲ್ಲಿ ಜೀವ ಇದೆಯೋ ಇಲ್ಲವೋ, ಆದರೆ ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳಂತೂ ಇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ ವಿಜ್ಞಾನಿಗಳು. ಬಾಹ್ಯಾಕಾಶದಲ್ಲಿರುವ ಈ ಸೂಕ್ಷ್ಮಜೀವಿಗಳ ಬಗೆಗಿನ ಅಧ್ಯಯನವನ್ನು ‘ಬಾಹ್ಯಾಕಾಶ ಸೂಕ್ಷ್ಮಜೀವಾಣುವಿಜ್ಞಾನ’ ಅಥವಾ ‘ಎಕ್ಸೋ ಮೈಕ್ರೋಬಯೋಲೊಜಿ’ ಅಥವಾ ‘ಆಸ್ಟ್ರೋ ಮೈಕ್ರೋಬಯೋಲೊಜಿ’ ಎನ್ನುತ್ತಾರೆ. ಎರಡು ಮಹಾಯುದ್ಧಗಳು ಮತ್ತು ಎಲ್ಲೆಡೆಯೂ ನಡೆಯುತ್ತಿರುವ ಬಗೆಬಗೆಯ ಭಯೋತ್ಪಾದಕ ಕೃತ್ಯಗಳಿಂದ ಪಾಠ ಕಲಿಯದ ಮಾನವನು, ಹೊಸ ಬಗೆಯ ಯುದ್ಧ ಶಸ್ತ್ರಾಸ್ತ್ರಗಳನ್ನು ತಯಾರಿಸುವಲ್ಲಿ ಹಿಂದೆ ಮುಂದೆ ಯೋಚಿಸುವ ಪ್ರಮೇಯವೇ ಇದ್ದಂತಿಲ್ಲ; ಇಂತಹ ಒಂದು ಭವಿಷ್ಯದ ದೊಡ್ಡ ಆತಂಕವೆನ್ನಬಹುದಾದ ಜೈವಿಕ ಶಸ್ತ್ರಾಸ್ತ್ರದ ಭಾಗವಾಗಿ ಸೂಕ್ಷ್ಮಜೀವಾಣುಗಳನ್ನು ಬಳಸಲಾಗುತ್ತದೆ. ಜೈವಿಕ ಯುದ್ಧಕ್ಕೆ ಬೇಕಾಗುವಂತಹ ಶಸ್ತ್ರಗಳನ್ನು ತಯಾರು ಮಾಡುವ ಕೈಗಾರಿಕೆಗಳಲ್ಲಿ, ಬಳಸಲಾಗುವ ಸೂಕ್ಷ್ಮಜೀವಿಗಳ ಅಧ್ಯಯನವು ‘ಜೈವಿಕ ಕಾರ್ಯಭಾರಿ ಸೂಕ್ಷ್ಮಜೀವಾಣುವಿಜ್ಞಾನ’ ಎನಿಸಿಕೊಳ್ಳುತ್ತದೆ.

ಸೂಕ್ಷ್ಮಜೀವಾಣುವಿಜ್ಞಾನದ ಮತ್ತು ಇತರ ವಿಜ್ಞಾನ ಶಾಖೆಗಳ ನಡುವಿನ ಸಂಬಂಧವನ್ನು ತಿಳಿಸುವ ಆನ್ವಯಿಕ ಸೂಕ್ಷ್ಮಜೀವಾಣುವಿಜ್ಞಾನದ(ಅಪ್ಲೈಡ್ ಮೈಕ್ರೋಬಯೋಲೊಜಿ) ಉಪಶಾಖೆಗಳೂ ಬಹಳಷ್ಟಿವೆ. ಯಾಂತಿಕ ಜೀವನಕ್ಕೆ ಒಗ್ಗಿರುವ ಜನರ ಪ್ರತಿಯೊಂದು ಅಗತ್ಯವನ್ನು ಪೂರೈಸಲು ಇಂದು ಯಂತ್ರಗಳ ಅಥವಾ ಸಿದ್ಧವಸ್ತುಗಳ ತಯಾರಿಕೆಯ ಅನಿವಾರ್ಯತೆಯಿದೆ; ಹಾಗಾಗಿ ಅನೇಕ ಕೈಗಾರಿಕೆಗಳು ಹುಟ್ಟಿಕೊಂಡಿವೆ. ಇನ್ನು, ಇಂತಹ ಕಾರ್ಖಾನೆಗಳಿಂದ ಮತ್ತು ಮಾನವನ ನಿತ್ಯದ ಚಟುವಟಿಕೆಗಳಿಂದ ಉತ್ಪಾದನೆಯಾಗುವ ತ್ಯಾಜ್ಯದ ಸಂಸ್ಕರಣೆ ಒಂದು ಭೂತಾಕಾರದ ಸಮಸ್ಯೆಯೇ ಆಗಿದೆ. ಇಂತಹಾ ಹಲವಾರು ಕಾರ್ಖಾನೆಗಳಲ್ಲಿನ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಸೂಕ್ಷ್ಮಜೀವಿಗಳ ಬಳಕೆಯ ಮತ್ತು ತ್ಯಾಜ್ಯ ನೀರಿನ ಸಂಸ್ಕರಣೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರದ ಅಧ್ಯಯನವನ್ನು ‘ಕೈಗಾರಿಕಾ ಸೂಕ್ಷ್ಮಜೀವಾಣುವಿಜ್ಞಾನ’ ಅಥವಾ ‘ಇಂಡಸ್ಟ್ರಿಯಲ್ ಮೈಕ್ರೋಬಯೋಲೊಜಿ’ಯು ಒಳಗೊಂಡಿದೆ.

ಆಹಾರದ ಹಳಸುವಿಕೆ ಹಾಗೂ ಆಹಾರದ ಮೂಲಕ ಉಂಟಾಗುವ ಅಸ್ವಸ್ಥತೆಯ ಹಿಂದಿರುವ ಸೂಕ್ಷ್ಮಜೀವಿಗಳ ಪಾತ್ರವಷ್ಟೇ ಅಲ್ಲದೇ, ಆಹಾರ ತಯಾರಿಕೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರವೇನು ಎಂಬುದರ ಅಧ್ಯಯನವನ್ನು ‘ಆಹಾರ ಸೂಕ್ಷ್ಮಜೀವಾಣುವಿಜ್ಞಾನ’ ಅಥವಾ ‘ಫುಡ್ ಮೈಕ್ರೋಬಯೋಲೊಜಿ’ ಎನ್ನುತ್ತಾರೆ. ‘ಮಣ್ಣಿನ ಸೂಕ್ಷ್ಮಜೀವಾಣುವಿಜ್ಞಾನ’ ಅಥವಾ ‘ಸಾಯಿಲ್ ಮೈಕ್ರೋಬಯೋಲೊಜಿ’ಯು ಮಣ್ಣಿನಲ್ಲಿ ಕಂಡುಬರುವ ಸೂಕ್ಷ್ಮಜೀವಿಗಳ ಅಧ್ಯಯನವಾಗಿದೆ ಹಾಗೂ ‘ಜಲ ಸೂಕ್ಷ್ಮಜೀವಾಣುವಿಜ್ಞಾನ’ ಅಥವಾ ‘ವಾಟರ್ ಮೈಕ್ರೋಬಯೋಲೊಜಿ’ಯು, ನೀರಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳ ಅಧ್ಯಯನಕ್ಕೆ ಮೀಸಲಾಗಿದೆ. ಗಾಳಿಯಲ್ಲೇ ಬದುಕಲು ಸಾಧ್ಯವಾಗದಿದ್ದರೂ, ವಾಯುಗಾಮಿ ಸೂಕ್ಷ್ಮಜೀವಿಗಳು ಬೇಕಾದಷ್ಟಿವೆ. ಅವುಗಳ ಅಧ್ಯಯನವನ್ನು ‘ವಾಯು ಸೂಕ್ಷ್ಮಜೀವಾಣುವಿಜ್ಞಾನ’ ಅಥವಾ ‘ಏರ್ ಮೈಕ್ರೋಬಯೋಲೊಜಿ’ ಎನ್ನುತ್ತಾರೆ.

ಮಣ್ಣಿನ, ನೀರಿನ, ಗಾಳಿಯ, ಮರಗಿಡಗಳ ಗುಣಲಕ್ಷಣಗಳು ಒಂದು ಸ್ಥಳಕ್ಕಿಂತಾ ಮತ್ತೊಂದೆಡೆ ಭಿನ್ನವಾಗಿರುತ್ತವೆ; ಹಾಗಾಗಿ ಇವುಗಳ ಮೇಲೆ ಅವಲಂಬಿತ ಸೂಕ್ಷ್ಮಜೀವಿಗಳೂ ಕೂಡ, ಒಂದು ಸ್ಥಳದಲ್ಲಿರುವಂತೆಯೇ ಮತ್ತೊಂದೆಡೆ ಇರುವುದಿಲ್ಲ. ತಮ್ಮ ಪರಿಸರದೊಂದಿಗಿನ ಇವುಗಳ ಬೆಸುಗೆಯನ್ನು ಅರ್ಥೈಸಿಕೊಳ್ಳುವುದು, ಇವುಗಳನ್ನು ಸರಿಯಾಗಿ ಅರಿಯಲು ಬಹಳ ಮುಖ್ಯವಾಗುತ್ತದೆ. ನೈಸರ್ಗಿಕ ಪರಿಸರಗಳಲ್ಲಿ ಸೂಕ್ಷ್ಮಜೀವಿಗಳ ವೈವಿಧ್ಯದ ಅಧ್ಯಯನವು ‘ಪರಿಸರೀಯ ಸೂಕ್ಷ್ಮಜೀವಾಣುವಿಜ್ಞಾನ’ ಅಥವಾ ‘ಎನ್ವಿರಾನ್ಮೆಂಟಲ್ ಮೈಕ್ರೋಬಯೋಲೊಜಿ’ ಎನಿಸಿಕೊಳ್ಳುತ್ತದೆ. ಪ್ರಾಣಿಗಳಂತೆಯೇ ಸಸ್ಯಗಳಲ್ಲೂ ಸೂಕ್ಷ್ಮಜೀವಿಗಳು ವಾಸಿಸುತ್ತವೆ; ಕೆಲವು ತಮಗೆ ಆಸರೆ ನೀಡಿದ ಸಸ್ಯಗಳಿಗೆ ಉಪಕಾರ ಮಾಡಿದರೆ, ಮತ್ತೂ ಕೆಲವು ಸೂಕ್ಷ್ಮಜೀವಿಗಳು ಸಸ್ಯಗಳಲ್ಲಿ ರೋಗವನ್ನುಂಟುಮಾಡುತ್ತವೆ. ಸಸ್ಯಗಳ ಮತ್ತು ಸೂಕ್ಷ್ಮಜೀವಿಗಳ, ಅದರಲ್ಲೂ, ಮುಖ್ಯವಾಗಿ ಸಸ್ಯರೋಗಕಾರಕಗಳ ನಡುವಿನ ಪರಸ್ಪರ ಸಂಬಂಧದ ಅಧ್ಯಯನವನ್ನು ‘ಸಸ್ಯ ಸೂಕ್ಷ್ಮಜೀವಾಣುವಿಜ್ಞಾನ ಮತ್ತು ಸಸ್ಯ ರೋಗಲಕ್ಷಣವಿಜ್ಞಾನ’ ಅಥವಾ ‘ಪ್ಲಾಂಟ್ ಮೈಕ್ರೋಬಯೋಲೊಜಿ ಮತ್ತು ಪ್ಲಾಂಟ್ ಪೆಥೋಲೊಜಿ’ ಎನ್ನುತ್ತಾರೆ.

ಕೇವಲ ಪ್ರಾಣಿ ಪಕ್ಷಿ ಗಿಡ ಮರಗಳಲ್ಲದೇ ಮಾನವನಲ್ಲೂ ಸಾವಿರಾರು ಕಾಯಿಲೆಗಳನ್ನು ಉಂಟುಮಾಡುವುದು ಈ ಸೂಕ್ಷ್ಮಜೀವಾಣುಗಳೇ; ಆದರೆ, ಸೂಕ್ಷ್ಮಜೀವಾಣುಗಳನ್ನೇ ಬಳಸಿಕೊಂಡು ಆ ಕಾಯಿಲೆಗಳಿಗೆ ಔಷಧಿಯನ್ನೂ ತಯಾರಿಸಿದ ಬುದ್ಧಿವಂತ ಮಾನವ. ರೋಗಕಾರಕ ಸೂಕ್ಷ್ಮಜೀವಿಗಳ ಅಧ್ಯಯನ ಮತ್ತು ಮಾನವನ ಅಸ್ವಸ್ಥತೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರದ ಅಧ್ಯಯನವನ್ನು ‘ವೈದ್ಯಕೀಯ ಸೂಕ್ಷ್ಮಜೀವವಿಜ್ಞಾನ’ ಅಥವಾ ‘ಮೆಡಿಕಲ್ ಮೈಕ್ರೋಬಯೋಲೊಜಿ’ ಎನ್ನುತ್ತಾರೆ. ಪ್ರತಿಜೀವಕಗಳು, ಕಿಣ್ವಗಳು, ಜೀವಸತ್ವಗಳು, ಲಸಿಕೆಗಳು ಮತ್ತು ಇತರ ಔಷಧೀಯ ಉತ್ಪನ್ನಗಳ ತಯಾರಿಯಲ್ಲಿ ಹಾಗೂ ಔಷಧಿಗಳು ಹಾಳಾಗುವ ಪ್ರಕ್ರಿಯೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರದ ಅಧ್ಯಯನವನ್ನು ‘ಔಷಧೀಯ ಸೂಕ್ಷ್ಮಜೀವಾಣುವಿಜ್ಞಾನ’ ಅಥವಾ ‘ಫಾರ್ಮಾಸ್ಯುಟಿಕಲ್ ಮೈಕ್ರೋಬಯೋಲೊಜಿ’ ಎನ್ನುತ್ತಾರೆ. ಪಶುವೈದ್ಯಕೀಯ ಔಷಧದಲ್ಲಿ ಸೂಕ್ಷ್ಮಜೀವಿಗಳ ಪಾತ್ರದ ಅಧ್ಯಯನಕ್ಕಾಗಿ ಮೀಸಲಿರುವ ಮತ್ತೊಂದು ಉಪಶಾಖೆಯನ್ನು ‘ಪಶುವೈದ್ಯಕೀಯ ಸೂಕ್ಷ್ಮಜೀವಾಣುವಿಜ್ಞಾನ’ ಎನ್ನುತ್ತಾರೆ.

ಹೀಗೆ, ಹತ್ತು ಹಲವು ಶಾಖೆಗಳ ಮುಖಾಂತರ ಸಂಕೀರ್ಣ ಆದರೂ ಸರಳವಾಗುತ್ತಾ ಸಾಗುವ ಸೂಕ್ಷ್ಮಜೀವಾಣುಶಾಸ್ತ್ರವು ಅಚ್ಚರಿಗಳ ಊಟೆ, ಉಪಯುಕ್ತತೆಯ ಆಗರ.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]