ನಾವು ನಮ್ಮಂತೆಯೇ ಎಲ್ಲರೂ ಎಂದು ಭಾವಿಸುತ್ತೇವಲ್ಲಾ? ದೇವರಿಗೇ ಮಾನವನ ರೂಪ ಮತ್ತು ಗುಣಗಳನ್ನು ಆರೋಪಿಸುತ್ತೇವೆ. ಅದೇ ರೀತಿ, ನಮ್ಮ ಗುಣಗಳನ್ನೇ ಯಾವುದೋ ಪ್ರಾಣಿಯಲ್ಲೋ ಪಕ್ಷಿಯಲ್ಲೋ, ಕಡೆಗೆ, ಸೂಕ್ಷ್ಮಾಣುಜೀವಿಗಳಲ್ಲೂ ಹುಡುಕುತ್ತೇವೆ.  ಮಂಗಟ್ಟೆ (ಹಾರ್ನ್ಬಿಲ್) ಪಕ್ಷಿಗಳು ನಮ್ಮಂತೆಯೇ ಏಕಪತ್ನಿ/ಪತಿವ್ರತಸ್ಥ ಅಂತಲೋ, ‘ಮೆಕಾಕ್’ಗಳು ತಮ್ಮ ದವಡೆಯಲ್ಲಿ ಆಮೇಲೆ ಹಸಿವೆಯಾದಾಗ ತಿನ್ನೋಣ ಎಂದು ಆಹಾರವನ್ನು ಕೂಡಿಟ್ಟುಕೊಳ್ಳುವ ಸ್ವಭಾವದಲ್ಲೋ ನಾವು ನಮ್ಮ ಗುಣಗಳನ್ನು ಹುಡುಕುತ್ತೇವೆ. ಆದರೆ, ನಮ್ಮ ದುರ್ಗುಣಗಳೇನೂ ಕಡಿಮೆಯಿಲ್ಲವಲ್ಲ! ಕೆಲವೊಮ್ಮೆ ಆ ದುರ್ಗುಣಗಳು ವರವಾಗುವುದೂ ಉಂಟಂತೆ. ನಮ್ಮಲ್ಲಿ ಹಲವು ತೀವ್ರವಾದಿಗಳಿರುತ್ತಾರೆ; ತಮ್ಮ ಸಿದ್ಧಾಂತವೇ ಸರಿ ಎಂಬ ಪ್ರತಿಪಾದನೆಯಲ್ಲೋ, ಯಾರೂ ಒಪ್ಪದ ತಮ್ಮ ಸಿದ್ಧಾಂತವನ್ನು ತೀವ್ರತರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲೋ ಇತರರ ಕಣ್ಣಿಗೆ ಹಿಂಸ್ರಾಪಶುಗಳಂತೆ ಕಾಣುತ್ತಾರೆ. ನಮ್ಮಲ್ಲಿರುವಂತೆಯೇ ಸೂಕ್ಷ್ಮಾಣುಜೀವಿ ಲೋಕದಲ್ಲಿಯೂ ತೀವ್ರವಾದಿಗಳಿದ್ದು, ಅವುಗಳ ಗುಂಪಿನ ಹೆಸರು ‘ಆರ್ಕಿಯ’. ಇವುಗಳನ್ನು ತೀವ್ರವಾದಿಗಳು ಎಂದು ಕರೆಯಲು ಕಾರಣ, ಇವು ಯಾರಿಗೋ ಪಿರಿಪಿರಿಯನ್ನು ಉಂಟುಮಾಡಿರುವುದೋ ಅಥವಾ ಜಗತ್ತಿಗೆಲ್ಲಾ ತಮ್ಮ ನಂಬಿಕೆಯನ್ನು ತೀವ್ರ ಮಾರ್ಗಗಳಿಂದ ಹರಡುವುದನ್ನೋ ಮಾಡಿವೆ ಎಂದಲ್ಲ; ಇವು ಎಂತಹದ್ದೇ ತೀವ್ರತರವಾದ ವಾತಾವರಣದಲ್ಲೂ ಇದ್ದು, ಈಸಿ ಜಯಿಸಿ ತೋರಿಸಿವೆ ಎಂಬ ಕಾರಣಕ್ಕಾಗಿ ಮಾತ್ರ. ಅದು ಪರಮ ಗಂಧಕಯುಕ್ತ ಜ್ವಾಲಾಮುಖಿಯಾಗಿರಲೀ, ಉಪ್ಪಿನ ಊಟೆಯಾದ ನೀರಿನ ಪಾತ್ರವಾಗಿರಲೀ, ಅತ್ಯಂತ ಕಡಿಮೆ ತಾಪಮಾನವಿರುವ ಭೂಧ್ರುವಗಳಾಗಲೀಎಲ್ಲೆಡೆಯೂ ತಮ್ಮ ಧ್ವಜ ಊರಿ, ಇರವನ್ನು ಸಾರಿಬಿಡುತ್ತವೆ ಆರ್ಕಿಯ. ಅವುಗಳ ಇರುವನ್ನು ಪತ್ತೆಹಚ್ಚಲು, ಅಧ್ಯಯನ ಮಾಡಲು ನಾವು ಅತ್ಯಂತ ಪ್ರಯಾಸ ಪಡಬೇಕೇ ಹೊರತು, ಅಂತಹಾ ಪರಮ ಕ್ಲಿಷ್ಟ ವಾತಾವರಣದಲ್ಲೂ ಇವು ಸುಖ ಸಂಸಾರ ನಡೆಸುತ್ತವೆ. ಇಂತಹಾ ತೀವ್ರವಾದಿಗಳ ಬಗ್ಗೆ ಒಂದು ಸ್ಥೂಲ ಪರಿಚಯ ಇಲ್ಲಿದೆ.

ಜನನ. ವಿಕಾಸ ಮತ್ತು ವರ್ಗೀಕರಣ

ಸುಮಾರು ೨.೭ ದಶಲಕ್ಷ ವರ್ಷಗಳ ಹಿಂದೆಯೇ ಆರ್ಕಿಯ ಇದ್ದವು ಎಂಬುದನ್ನು ಪಳೆಯುಳಿಕೆಗಳು ದಾಖಲಿಸಿವೆ; ಅದಕ್ಕೂ ಮುನ್ನ ಇವು ಇದ್ದಿರಬಹುದು ಎಂಬುದನ್ನು ಹಲವಾರು ರಾಸಾಯನಿಕ ಪುರಾವೆಗಳು ಸೂಚಿಸುತ್ತವೆ. ಒಂದು ಜೀವಿಯಾಗಿ ಹುಟ್ಟುವ ಮೊದಲು, ಆರ್ಕಿಯ ಕೇವಲ ಒಂದು ಪೂರ್ವ-ಜೀವಕೋಶದ ಹಂತದಲ್ಲಿ ಬದುಕಿದ್ದು, ಯಾವುದೇ ಕೋಶಪೊರೆಯಿರದೇ ಅಸ್ತಿತ್ವದಲ್ಲಿದ್ದವು; ಆದರೆ, ತಮ್ಮ ಉಳಿವಿಗಾಗಿ ‘ಜೀನ್ ಪಲ್ಲಟ’ಗಳನ್ನು ನಡೆಸಿಕೊಂಡು, ಕೋಶಪೊರೆಯ ಸಮೇತ ಜೀವಿಯಾಗಿ ಮಾರ್ಪಾಟಾಗಿ, ಈಗಿರುವ ಆರ್ಕಿಯಾದ ರೂಪದಲ್ಲಿ ಅಸ್ತಿತ್ವಕ್ಕೆ ಬಂದವು ಎಂಬುದು ಸೂಕ್ಷ್ಮಜೀವಾಣುತಜ್ಞರ ಅಂಬೋಣ.

ಈ ಆರ್ಕಿಯ ಎಂಬ ಜೀವಿಗಳು ಅತ್ತ ಸಂಪೂರ್ಣವಾಗಿ ‘ಪ್ರೋಕಾರ್ಯೋಟ್’ ಅಲ್ಲ, ‘ಯೂಕಾರ್ಯೋಟ್’ ಕೂಡ ಅಲ್ಲ; ಹಾಗಾಗಿ ಆರ್ಕಿಯಾ, ಇವೆರಡೂ ಸಾಮ್ರಾಜ್ಯಗಳ ಮೂಲಭೂತ ಗುಣಲಕ್ಷಣಗಳಲ್ಲಿ ಆಯ್ದ ಕೆಲವನ್ನು ತಮ್ಮದಾಗಿಸಿಕೊಂಡು, ತಮ್ಮದೇ ವಿಶೇಷ ಸ್ಥಾನಮಾನ ಪಡೆದುಕೊಂಡಿವೆ. ಪ್ರೋಕಾರ್ಯೋಟ್‌ಗಳ ಮೂಲಭೂತ ಲಕ್ಷಣವಾದ ಸ್ಪಷ್ಟವಾದ ನ್ಯೂಕ್ಲಿಯಸ್‌ನ ಅಭಾವ, ಆರ್ಕಿಯಾದಲ್ಲೂ ಇದೆ. ಪ್ರೋಕಾರ್ಯೋಟ ಸಾಮ್ರಾಜ್ಯದ ಮುಖ್ಯ ಸದಸ್ಯನಾದ ಬ್ಯಾಕ್ಟೀರಿಯಾದಲ್ಲಿ ನಡೆಯುವ ಚಯಾಪಚಯ ಕ್ರಿಯೆಯು, ಆರ್ಕಿಯಾದಲ್ಲೂ ಕಂಡುಬಂದಿದೆ. ವೃತ್ತಾಕಾರದ ಡಿ.ಎನ್.ಏಯ ಇರುವು ಮತ್ತು ‘ಇನ್ಟ್ರಾನ್’ಗಳ ಅಭಾವದಂತಹಾ ಆರ್ಕಿಯಾದ ಗುಣವಿಶೇಷಗಳು ಥೇಟ್ ಬ್ಯಾಕ್ಟೀರಿಯಾದಂತೆಯೇ. ಆದಾಗ್ಯೂ, ಯೂಕಾರ್ಯೋಟ್‌ಗಳಲ್ಲಿರುವ ‘ಪೆಪ್ಟಿಡೋಗ್ಲಾಯ್ಕನ್’ನ ಅಭಾವ, ಆರ್ಕಿಯಾದ ಕೋಶಪೊರೆಯಲ್ಲೂ ಎದ್ದುಕಾಣುತ್ತದೆ. ಆರ್ಕಿಯಾದಲ್ಲಿ ಡಿ.ಎನ್.ಏಯ ಪ್ರತಿಕೃತಿ ರಚನೆ, ನಕಲು ಎಳೆಗಳ ತಯಾರಿ ಮತ್ತು ಡಿ.ಎನ್.ಏ ಯೊಳಗಿನ ಸಂಕೇತವನ್ನು ಆರ್.ಎನ್.ಎಯಾಗಿ ಅನುವಾದಗೊಳಿಸುವಂತಹಾ ಪ್ರಕ್ರಿಯೆಗಳು ‘ಯೂಕಾರ್ಯೋಟ್’ನಲ್ಲಿರುವಂತೆಯೇ ನಡೆಯುತ್ತವೆ ಎಂದು ಕಂಡುಬಂದಿದೆ. ಎರಡೂ ಸಾಮ್ರಾಜ್ಯದ ಕೆಲವು ಗುಣಗಳಷ್ಟೇ ಅಲ್ಲದೇ, ಮೀಥೇನ್ ಉತ್ಪಾದನೆ, ನಕಲಿ ‘ಪೆಪ್ಟಿಡೋಗ್ಲಾಯ್ಕನ್’ಯುಕ್ತ ಜೀವಕೋಶ ಪೊರೆಯಂತಹಾ ತಮ್ಮದೇ ಆದ ಕೆಲವು ವಿಶಿಷ್ಟ ಲಕ್ಷಣಗಳನ್ನೂ ಇವು ತೋರ್ಪಡಿಸುವುದರಿಂದ, ‘ಪ್ರೋಕಾರ್ಯೋಟಾ’, ‘ ಯೂಕಾರ್ಯೋಟಾ’ ಅಲ್ಲದೇ ಪ್ರತ್ಯೇಕವಾಗಿ ‘ಆರ್ಕಿಯ’ ಎಂಬ ಮೂರನೆಯ ಸಾಮ್ರಾಜ್ಯವನ್ನುಹುಟ್ಟುಹಾಕಿ, ಅದನ್ನು ಈ ವಿಶೇಷ ಜೀವಿಗಳಿಗೆ ಮೀಸಲಿಡಬೇಕಾಯ್ತು.

ಆವಾಸಸ್ಥಾನ

ಆರ್ಕಿಯಾ ಇಲ್ಲದ ಸ್ಥಳವನ್ನು ಹುಡುಕುವುದು ಅತ್ಯಂತ ಕ್ಲಿಷ್ಟ ಕಾರ್ಯ. ಏಕೆಂದರೆ, ಇವು ಬದುಕಲು ಇಂತಹದ್ದೇ ತಾಣ ಬೇಕೆಂದಿಲ್ಲ; ನೀರಲ್ಲೂ ಸೈ, ಮಣ್ಣಲ್ಲೂ ಸೈ, ಹಿಮಾವೃತ ಪರ್ವತದಲ್ಲೂ ಸೈ, ಜ್ವಾಲಾಮುಖಿಯಲ್ಲೂ ಸೈ. ಭೂಗೋಳದ ಉತ್ತರದ ತುತ್ತತುದಿಯಲ್ಲಿರುವ ಆರ್ಕ್ಟಿಕ್ ಧೃವದ  ಮೈನಸ್ ೪೦ರಿಂದ ಮೈನಸ್ ೬೦ ಡಿಗ್ರೀ ಸೆಲ್ಸಿಯಸ್ ತಾಪಮಾನವನ್ನು ಸಲೀಸಾಗಿ ತಾಳಿಕೊಂಡು, ಅಲ್ಲಿ ಲಭ್ಯವಿರುವ ಅಮೋನಿಯಾವನ್ನು ಆಹಾರವನ್ನಾಗಿಸಿಕೊಂಡು ಬದುಕುತ್ತವೆ. ನೈಸರ್ಗಿಕವಾಗಿ ಕುದಿಯುವ ನೀರನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವ ‘ಎಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನ’ದ ಬಿಸಿನೀರ ಊಟೆ ಮತ್ತು ಜಗತ್ತಿನ ಹಲವೆಡೆ ಕಂಡುಬರುವ ಬಿಸಿನೀರ ಬುಗ್ಗೆಗಳಲ್ಲಿ ಸುಲಭವಾಗಿ ಬದುಕುತ್ತವೆ, ‘ಥರ್ಮೊಫೈಲ್ಸ್’ ಎಂದು ಕರೆಯಲಾಗುವ ಆರ್ಕಿಯ. ‘ಮೆಥಾನೋಪೈರಸ್’ ಪ್ರಭೇದವಂತೂ ೧೨೨ ಡಿಗ್ರೀ ಸೆಲ್ಸಿಯಸ್ ತಾಪಮಾನದಲ್ಲೂ ಸುಲಭವಾಗಿ ಬದುಕಿ, ಸಂತಾನೋತ್ಪತ್ತಿಯನ್ನೂ ಮಾಡುತ್ತವಂತೆ. ‘ಪಿಕ್ರೋಫೈಲಸ್ ತಾರಿಡಸ್’ನಂತಹ ಹಲವು ಆರ್ಕಿಯ, ಅತ್ಯಂತ ತೀವ್ರತರವಾದ ಆಮ್ಲೀಯ ವಾತಾವರಣದಲ್ಲಿ ಅಂದರೆ ಪಿ.ಎಚ್ ೦ ವಾತಾವರಣದಲ್ಲಿ ಬದುಕುತ್ತವೆ; ಇವನ್ನು ‘ಅಸಿಡೊಫೈಲ್ಸ್’ ಎನ್ನುತ್ತೇವೆ. ‘ಹ್ಯಾಲೋಫೈಲ್ಸ್’ ಎಂಬ ಹೆಸರಿನಿಂದ ಕರೆಯಲಾಗುವ ಅರ್ಕಿಯ ಪ್ರಭೇದಗಳು ತೀವ್ರತರವಾದ ಅಂದರೆ ಸುಮಾರು ೨೫ರಿಂದ ೩೦% ಉಪ್ಪಿನಂಶ ಇರುವ ಜಲಪಾತ್ರಗಳಲ್ಲಿ ವಾಸಿಸುತ್ತವೆ. ‘ಆಲ್ಕಲೋಫೈಲ್ಸ್’ ಎಂಬ ಹೆಸರಿನಿಂದ ಕರೆಯಲಾಗುವ ಆರ್ಕಿಯ ಪ್ರಭೇದಗಳಂತೂ ತೀವ್ರತರವಾದ ಕ್ಷಾರೀಯ ವಾತಾವರಣದಲ್ಲಿ, ಅಂದರೆ ಪಿ.ಎಚ್ ೮ ರಿಂದ ೧೪ರ ವರೆಗಿನ ವಾತಾವರಣದಲ್ಲಿ ವಾಸಿಸುತ್ತವೆ. ಕೇವಲ ಇಂತಹಾತೀವ್ರವಾದಿಗಳಷ್ಟೇ ಅಲ್ಲದೆ, ಸಾಮಾನ್ಯವಾದ ಮಣ್ಣು, ಗಾಳಿ, ತಾಪಮಾನ, ನೀರಿನ ವಾತಾವರಣದಲ್ಲೂ ಬದುಕುವ ಸಾಮಾನ್ಯ ‘ಮೀಸೋಫೈಲ್’ ಸದಸ್ಯರೂ ‘ಆರ್ಕಿಯಾ’ ಸಾಮ್ರಾಜ್ಯದ ಭಾಗ. ಜವುಗು ಪ್ರದೇಶ, ಚರಂಡಿನೀರು, ಸಮುದ್ರ, ನದಿ,  ಕಾರ್ಖಾನೆಗಳ ಬಳಿಯಿರುವ ಮಣ್ಣು, ಹಲವು ಪ್ರಾಣಿಗಳ ಅನ್ನನಾಳವನ್ನೂ ಒಳಗೊಂಡಂತೆ ಆರ್ಕಿಯಾದ ಉಪಸ್ಥಿತಿಯು ಎಲ್ಲಿಲ್ಲ ಹೇಳಿ? ಹಾಗಾಗಿಯೇ ಇವು ಜಾಗತಿಕ ಪರಿಸರ ವ್ಯವಸ್ಥೆಯ ಪ್ರಮುಖ ಭಾಗ.

ರೂಪವಿಜ್ಞಾನ

ಸಾಮಾನ್ಯವಾಗಿ ಆರ್ಕಿಯಾದ ಗಾತ್ರವು ೦.೧ ಮೈಕ್ರೊಮೀಟರ್ನಿಂದ ಮೊದಲ್ಗೊಂಡು ೧೫ ಮೈಕ್ರೊಮೀಟರ್‌ನವರೆಗೆ ಇರುವುದು ಕಂಡುಬಂದಿದೆ. ಇವುಗಳ ವಿವಿಧ ಪ್ರಭೇದಗಳು ವಿವಿಧ ಆಕಾರದ ಜೀವಕೋಶವನ್ನು ಹೊಂದಿರುತ್ತವೆ. ದುಂಡಗೆ ಚೆಂಡಿನಂತೆ, ವೃತ್ತಾಕಾರವಾಗಿ, ಚಪ್ಪಟೆ ಚಚ್ಚೌಕವಾಗಿ, ಸೂಜಿಯಂತೆ, ಸುರುಳಿಯಾಕಾರದಲ್ಲಿ, ತಟ್ಟೆಯಂತೆ – ಹೀಗೆ ವಿವಿಧ ಆಕಾರದ ಆರ್ಕಿಯ ವಿವಿಧ ಆವಾಸಸ್ಥಾನಗಳಲ್ಲಿ ಲಭ್ಯ. ಇಂತಹ ಕೆಲವು ವಿಚಿತ್ರ ಆಕಾರಗಳನ್ನು ಇರುವ ಹಾಗೆಯೇ ಇರಿಸಲು ಆರ್ಕಿಯಾದ ಕೋಶಗೋಡೆ ಮತ್ತು ವಿಶಿಷ್ಟ ಕೊಶೀಯ ಹಂದರವು ಸಹಾಯ ಮಾಡುತ್ತವೆ. ಹಾಗೆಂದು, ಎಲ್ಲಾ ಬಗೆಯ ಆರ್ಕಿಯಾದಲ್ಲೂ ಕೋಶಗೋಡೆ ಕಡ್ಡಾಯವಾಗಿ ಇರುತ್ತದೆ ಎಂದೇನಿಲ್ಲ; ‘ಥರ್ಮೊಪ್ಲಾಸ್ಮ’,’ಫೆರೋಪ್ಲಾಸ್ಮ’ಗಳ ಪ್ರಭೇದಗಳಲ್ಲಿ ಕೋಶಗೋಡೆಯ ಅನುಪಸ್ಥಿತಿ ಅವುಗಳಿಗೆ ವಿಶಿಷ್ಟ ನಮ್ಯತೆ ಕೊಡಮಾಡುತ್ತದೆ. ಹಲವು ಆರ್ಕಿಯ ಪ್ರಭೇದಗಳು, ವಸಾಹತು ನಿರ್ಮಿಸಿಕೊಂಡು ಬದುಕುತ್ತವೆ; ಸಾಮಾನ್ಯವಾಗಿ ಲೋಳೆಯುಕ್ತ ಪದಾರ್ಥದ ಸಹಾಯದಿಂದ ಒಂದಕ್ಕೊಂದು ಅಂಟಿಕೊಂಡು ಜೈವಿಕಪದರವನ್ನು ರಚಿಸುತ್ತವೆ. ‘ಪೈರೋಡಿಕ್ಟಿಯಮ್’ ನಂತಹ ಕೆಲವು ಪ್ರಭೇದಗಳು ‘ಕ್ಯಾನುಲೇ’ ಎಂದು ಕರೆಯಲಾಗುವ ಕೊಳವೆಗಳಂತಹಾ ರಚನೆಗಳನ್ನು ತಮ್ಮ ವಸಾಹತಿನಲ್ಲಿ ಹೊರಚಾಚುತ್ತವೆ; ಈ ‘ಕ್ಯಾನುಲೇ’ಯ ಮುಖಾಂತರ ಪೋಷಕಾಂಶಗಳ ವಿನಿಮಯ ನಡೆಯುತ್ತದೆ.

‘ಯುಕಾರ್ಯೋಟ್’ಗಳಲ್ಲಿರುವಂತೆ ಹಲವು ಸಂಕೀರ್ಣ ಅಂಗಭಾಗಗಳು ಆರ್ಕಿಯಾ ಸದಸ್ಯರಲ್ಲಿ ಇರುವುದಿಲ್ಲ. ಆರ್ಕಿಯ ಜೀವಕೋಶವು ಬಹಳ ಸರಳವಾಗಿದ್ದು, ಅದರಲ್ಲಿಸ್ಪಷ್ಟವಾದ ನ್ಯೂಕ್ಲಿಯಸ್ನ ಬದಲಿಗೆ ವೃತ್ತಾಕಾರದ  ಡಿ.ಎನ್.ಏ, ಕೆಲವು ಮೂಲಭೂತ ಪ್ರೋಟೀನ್ ತಯಾರಿಕೆಗೆ ಬೇಕಾದ ಆರ್.ಎನ್.ಏ, ಕೋಶಪೊರೆ ಮತ್ತು ಕೋಶದ್ರವ್ಯ – ಇವಷ್ಟೇ ಕಂಡುಬರುತ್ತವೆ. ಇವುಗಳ ಜೊತೆಗೆ, ಮೇಲ್ಕಂಡ ವಿಶೇಷತೆಗಳು ಪ್ರಭೇದಗಳಿಗನುಸಾರವಾಗಿ ಉಪಸ್ಥಿತವಿರುತ್ತವೆ. ಚಲನೆಗೆ ಸಹಕಾರಿಯಾಗಿ ಕೆಲವು ಪ್ರಭೇದಗಳಲ್ಲಿ ಕಶಾಂಗಗಳಿದ್ದು, ಇವು ಬ್ಯಾಕ್ಟೀರಿಯಾದ ಕಶಾಂಗಗಳಿಗಿಂತಾ ಆಣ್ವಿಕವಾಗಿ ವಿಭಿನ್ನವಾಗಿರುತ್ತವೆ.

ಆಹಾರ ಸಂಪಾದನೆ ಮತ್ತು ಚಯಾಪಚಯಕ್ರಿಯೆ

ಆಹಾರ ಸಂಪಾದನೆಯ ಆಧಾರದ ಮೇಲೆ, ‘ಆರ್ಕಿಯ’ ಸಾಮ್ರಾಜ್ಯದ ಸದಸ್ಯರನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

ಮೊದಲನೆಯ ವಿಧವಾದ ದ್ಯುತಿಪೋಷಕಗಳು, ತಮ್ಮೊಳಗಿರುವ ವರ್ಣದ್ರವ್ಯದ ಸಹಾಯ ಪಡೆದು ಸೂರ್ಯನ ಬೆಳಕನ್ನು ಹೀರಿಕೊಂಡು, ಅದನ್ನು ರಾಸಾಯನಿಕ ಶಕ್ತಿ, ಅಂದರೆ, ಆಹಾರವನ್ನಾಗಿಸುತ್ತವೆ. ಇಲ್ಲಿ ಸಸ್ಯಗಳಲ್ಲಿ ಅಥವಾ ಬೇರೆ ದ್ಯುತಿಪೋಷಕ ಸೂಕ್ಷ್ಮಾಣುಜೀವಿಗಳಲ್ಲಿ ಇರುವ ಪತ್ರಹರಿತ್ತು ಇರುವುದಿಲ್ಲ; ಅದರ ಬದಲಾಗಿ ‘ಬ್ಯಾಕ್ಟೀರ್ಯೋರೋಡಾಪ್ಸಿನ್’ ಎಂಬ ವರ್ಣದ್ರವ್ಯವಿರುತ್ತದೆ. ಅದು ‘ಪ್ರೋಟಾನ್ ಪಂಪ್’ನಂತೆ ಕಾರ್ಯನಿರ್ವಹಿಸಿ, ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿಸಿ, ಆರ್ಕಿಯಾಕ್ಕೆ ಆಹಾರ ತಯಾರಿಸಿಕೊಡುತ್ತದೆ.  ದ್ಯುತಿಪೋಷಕ ಆರ್ಕಿಯಾದ ಪ್ರಮುಖ ಉದಾಹರಣೆಯೆಂದರೆ, ‘ಹ್ಯಾಲೊಬ್ಯಾಕ್ಟೀರಿಯಾ’

ಎರಡನೆಯ ವಿಧವಾದ ಇಂಗಾಲಪೋಷಕಗಳು, ಭಿನ್ನಪೋಷಕ ಜೀವಿಗಳಾಗಿದ್ದು, ದ್ಯುತಿಸಂಶ್ಲೇಷಣೆ ನಡೆಸಲು ಇವಕ್ಕೆ ಸಾಧ್ಯವಾಗದು. ಇವು ತಮ್ಮ ಸುತ್ತಲಿನ ಜೈವಿಕ ಸಂಯುಕ್ತ ಪದಾರ್ಥಗಳಿಂದ ಜಲಜನಕ, ಇಂಗಾಲ ಮತ್ತು ಎಲೆಕ್ಟ್ರಾನ್ ಪಡೆದು, ಜೊತೆಗೇ, ಅದೇ ಇಂಗಾಲಯುಕ್ತ ಜೈವಿಕ ಪದಾರ್ಥಗಳಿಂದ ತಮ್ಮ ಜೀವರಾಸಾಯನಿಕ ಪ್ರಕ್ರಿಯೆಗೆ ಬೇಕಾದ ಶಕ್ತಿಯನ್ನೂ ಪಡೆದು, ತಮ್ಮ ಚಯಾಪಚಯಕ್ರಿಯೆ ನಡೆಸುತ್ತವೆ. ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಇಂಗಾಲಪೋಷಕ ಆರ್ಕಿಯಾ ಎಂದರೆ ‘ಪೈರೋಕಾಕಸ್’, ‘ಸಲ್ಫೋಲೋಬಸ್’ ಮತ್ತು ‘ಮೆಥನೋಸಾರ್ಸಿನಾಲೆಸ್’.

ಮೂರನೆಯ ವಿಧವಾದಶಿಲಾಪೋಷಕಗಳು, ಖನಿಜಗಳಂತಹ ಅಜೈವಿಕ ಇಂಗಾಲಯುಕ್ತ ಸಂಯುಕ್ತ ಪದಾರ್ಥಗಳಿಂದ ಜೀವರಾಸಾಯನಿಕ ಪ್ರಕ್ರಿಯೆಗೆ ಬೇಕಾದ ಶಕ್ತಿಯನ್ನು ಮತ್ತು ಜೈವಿಕ ಇಂಗಾಲಯುಕ್ತ ಪದಾರ್ಥಗಳಿಂದ ಇಂಗಾಲವನ್ನು ಪಡೆದು, ಚಯಾಪಚಯಕ್ರಿಯೆ ನಡೆಸಿ, ಪೋಷಕಾಂಶವನ್ನು ಪಡೆಯುತ್ತವೆ. ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಶಿಲಾಪೋಷಕ ಆರ್ಕಿಯಾ ಎಂದರೆ ‘ಫೆರ್ರೋಗ್ಲೋಬಸ್’ ಮತ್ತು ‘ಪೈರೋಲೋಬಸ್’.

ಸಂತಾನೋತ್ಪತ್ತಿ

ಆರ್ಕಿಯಾ ಸಾಮ್ರಾಜ್ಯದ ಸದಸ್ಯ ಪ್ರಭೇದಗಳು, ಅಲೈಂಗಿಕ ಸಂತಾನೋತ್ಪತ್ತಿ ವಿಧಾನಗಳನ್ನು ಬಳಸುತ್ತವೆ. ದ್ವಿಮಾನ ವಿದಳನ, ಬಹು ವಿದಳನ, ವಿಘಟನೆ, ಮೊಳಕೆವಿಧಾನವೂ ಸೇರಿದಂತೆ ಹಲವು ಸರಳ ಬಗೆಯ ಅಲೈಂಗಿಕ ಸಂತಾನೋತ್ಪತ್ತಿ ವಿಧಾನಗಳನ್ನು ಇವು ಬಳಸುವುದು ಕಂಡುಬಂದಿದೆ.

ಜೈವಿಕ ಸಹಬಾಳ್ವೆ

ಮಾನವ ಹೇಗೆ ಸಂಘಜೀವಿಯೋ ಹಾಗೆಯೇ ಸಾಮಾನ್ಯವಾಗಿ ಬಹುಪಾಲು ಏಕಕೊಶೀಯ ಹಾಗೂ ಬಹುಕೊಶೀಯ ಜೀವಿಗಳೂ ಸಂಘಜೀವಿಗಳೇ; ಆರ್ಕಿಯಾ ಸಾಮ್ರಾಜ್ಯದ ಹಲವು ಸದಸ್ಯರೂ ಇದಕ್ಕೆ ಹೊರತಲ್ಲ. ಇವು ಇತರ ಜೀವಿಗಳೊಂದಿಗೆ ‘ಮ್ಯೂಚುವಾಲಿಸ್ಮ್’ ಅಥವಾ ಪರಸ್ಪರತೆ ಹಾಗೂ ‘ಕಮೆನ್ಸಾಲಿಸ್ಮ್’ ಅಥವಾ ಸಹಭಾಗಿತ್ವದಲ್ಲಿ ಜೀವನ ನಡೆಸುತ್ತವೆ. ಆರ್ಕಿಯಾ ಹಾಗೂ ಇನ್ನೊಂದು ಸೂಕ್ಷ್ಮಾಣು ಜೀವಿಯು ಪರಸ್ಪರತೆ ಎಂಬ ಸಂಬಂಧದಲ್ಲಿ ಜೀವಿಸುವಾಗ, ಎರಡು ಜೀವಿಗಳಿಗೂ ಪರಸ್ಪರ ಅನುಕೂಲತೆ ಇರುತ್ತದೆ. ಉದಾಹರಣೆಗೆ, ಗೆದ್ದಲು ಹುಳುಗಳ ಹೊಟ್ಟೆಯಲ್ಲಿ ಪ್ರೋಟೋಝೋವಾ ಮತ್ತು ಆರ್ಕಿಯ ಒಟ್ಟಿಗೆ ಜೀವಿಸುತ್ತವೆ; ಗೆದ್ದಲುಗಳ ಆಹಾರದಲ್ಲಿ ಇರುವ ಸೆಲ್ಯುಲೋಸನ್ನು ಜೀರ್ಣಿಸಲು ಗೆದ್ದಲಿಗೆ ಪ್ರೋಟೋಝೋವಾ ಸಹಾಯ ಮಾಡುವಾಗ, ಅಪಾರ ಪ್ರಮಾಣದ ಜಲಜನಕ ಉತ್ಪಾದನೆಯಾಗುತ್ತದೆ. ಹೀಗೆ ಪ್ರೋಟೋಝೋವಾ ಆರ್ಕಿಯಾಗೆ ಜಲಜನಕವನ್ನು ಒದಗಿಸಿ ಅನುಕೂಲ ಮಾಡಿಕೊಡುತ್ತದೆ; ಆರ್ಕಿಯಾ ಈ  ಜಲಜನಕವನ್ನು ‘ಮೀಥೇನ್’ ಆಗಿ ಪರಿವರ್ತಿಸುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಉತ್ಪಾದನೆಯಾದ ಅಪಾರ ಪ್ರಮಾಣದ ಶಕ್ತಿಯನ್ನು, ಪ್ರೋಟೋಝೋವಾಗೆ ಒದಗಿಸಿ, ಪ್ರತ್ಯುಪಕಾರ ಮಾಡುತ್ತದೆ.

ಕಮೆನ್ಸಾಲಿಸ್ಮ್ ಅಥವಾ ಸಹಭಾಗಿತ್ವದಲ್ಲಿ ಒಂದು ಜೀವಿಯು ಮತ್ತೊಂದು ಜೀವಿಯಿಂದ ಅನುಕೂಲತೆಗಳನ್ನು ಪಡೆಯುತ್ತದೆ; ಆದರೆ, ಪ್ರತಿಯಾಗಿ ಉಪಕಾರವನ್ನಾಗಲೀ, ಅಪಕಾರವನ್ನಾಗಲಿ ಎಸಗುವುದಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ, ನಮ್ಮ ಉದರದಲ್ಲಿರುವ ಆರ್ಕಿಯಾ. ಅವು ನಮ್ಮಿಂದ ಇರಲು ತಾಣ ಹಾಗೂ ಉಳಿವಿಗಾಗಿ ಪೋಷಕಾಂಶ ಪಡೆಯುತ್ತವೆ; ಪ್ರತಿಯಾಗಿ ನಮಗೆ ಏನೂ ತೊಂದರೆ ಅಥವಾ ಸಹಾಯ ಮಾಡದೇ ಉಳಿದುಬಿಡುತ್ತವೆ.

‘ಆರ್ಕಿಯಾ’ – ಹೇಗೆ ಉಪಯುಕ್ತ?

ಈ ಪುಟ್ಟ ತೀವ್ರವಾದಿ ಜೀವಿಗಳು ಜಾಗತಿಕವಾಗಿ ಆಹಾರ ಸರಪಳಿಗಳ ಭಾಗ ಮತ್ತು ಪರಿಸರ ವ್ಯವಸ್ಥೆಯ ಸಮತೋಲನ ಕಾಯ್ದುಕೊಳ್ಳಲು ಮತ್ಯಾವುದೇ ಜೀವಿಯಂತೆ ಬಹು ಮುಖ್ಯ.

ತೀವ್ರತರವಾದ ಆಮ್ಲೀಯ, ಕ್ಷಾರೀಯ, ಅತಿ ಹೆಚ್ಚು ಅಥವಾ ಕಡಿಮೆ ತಾಪಮಾನದ ವಾತಾವರಣದಲ್ಲಿ ಇವಕ್ಕೆ ಬದುಕನ್ನು ಸಾಗಿಸಲು ಸಹಾಯಕವಾಗಿರುವ ಪ್ರೋಟೀನ್ಗಳು, ವಿಶೇಷವಾಗಿ ಅನನ್ಯ ಕಿಣ್ವಗಳು, ನಮಗೆ ಬಹಳ ಉಪಯುಕ್ತ. ಆ ಕಿಣ್ವಗಳನ್ನು ಇವುಗಳಿಂದ ಹೊರತೆಗೆದು, ಅವುಗಳ ಮೇಲೆ ಹೆಚ್ಚೆಚ್ಚು ಅಧ್ಯಯನ ನಡೆಸಿ, ಅವುಗಳಲ್ಲಿನ ಆಣ್ವಿಕ ವಿಶೇಷತೆಯನ್ನು ಕೂಲಂಕುಶವಾಗಿ ಅರ್ಥೈಸಿಕೊಳ್ಳಲಾಗಿದೆ. ಇಂತಹಾ ಅಧ್ಯಯನಗಳು ಇನ್ನೂ ನಡೆಯುತ್ತಲೂ ಇವೆ. ಇದರ ಫಲವಾಗಿ ದೊರೆತ ‘ಡಿ.ಎನ್.ಏ ಪಾಲಿಮರೇಸ್’ನಂತಹ ಅತ್ಯುಪಯುಕ್ತ ಕಿಣ್ವಗಳನ್ನು, ‘ಅಬೀಜ ಸಂತಾನೋತ್ಪತ್ತಿ’ ಅಥವಾ ‘ಕ್ಲೋನಿಂಗ್’ನಂತಹಾ ಹಲವಾರು  ಸಂಶೋಧನೆಗಳಲ್ಲಿ ಬಳಸಿಕೊಳ್ಳಲಾಗಿದ್ದು, ಇವು ಆಣ್ವಿಕಜೀವವಿಜ್ಞಾನಕ್ಕೆ ಹೊಸ ಆಯಾಮವನ್ನೇ ನೀಡಿವೆ.

ಅತೀ ಹೆಚ್ಚಿನ ತಾಪಮಾನವನ್ನು ತಾಳಿಕೊಳ್ಳುವ ಕೆಲವು ಆರ್ಕಿಯಾದ ಜೀವಕೋಶದಿಂದ ಹೊರತೆಗೆದ ‘ಅಮೈಲೇಸ್’, ‘ಗಾಲಾಕ್ಟೊಸಿಡೆಸ್’, ‘ಪುಲ್ಲುಲನೇಸ್’ನಂತಹ ಕಿಣ್ವಗಳು ಹೆಚ್ಚಿನ ತಾಪಮಾನವನ್ನು ತಾಳಿಕೊಳ್ಳುವ ಹಾಲಿನ ಉತ್ಪನ್ನಗಳ ತಯಾರಿ ಸೇರಿದಂತೆ, ಹಲವು ಬಗೆಯ ಆಹಾರ ಉತ್ಪನ್ನಗಳ ಸಂಸ್ಕರಣೆಯಲ್ಲಿ ಬಳಸಲಾಗುತ್ತದೆ.

ಕೆಲವು ಮೀಥೇನ್ ಉತ್ಪಾದಕ ಆರ್ಕಿಯಾವನ್ನು ತ್ಯಾಜ್ಯ ವಿಘಟನೆಯಲ್ಲಿ ಮತ್ತು ಜೈವಿಕ ಅನಿಲದ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಆಮ್ಲೀಯ ವಾತಾವರಣಕ್ಕೆ ಒಗ್ಗಿಕೊಳ್ಳುವ ಆರ್ಕಿಯಾವನ್ನು, ಖನಿಜಗಳ ಸಂಸ್ಕರಣೆಯಲ್ಲಿ ಮತ್ತು ಚಿನ್ನ, ಕೊಬಾಲ್ಟ್, ತಾಮ್ರದಂತಹ ಲೋಹಗಳನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ.

ಇತ್ತೀಚಿಗೆ ವಿಜ್ಞಾನಿಗಳು ಆರ್ಕಿಯಾದಿಂದ ಕಂಡುಕೊಂಡ ಮತ್ತೊಂದು ಉಪಯೋಗವೆಂದರೆ, ಇವುಗಳು ವಿಶಿಷ್ಟವಾದ ಪ್ರತಿಜೀವಕಗಳನ್ನು ಉತ್ಪಾದನೆ ಮಾಡುತ್ತವೆ ಎಂಬುದು; ಬ್ಯಾಕ್ಟೀರಿಯ ಅಥವಾ ಶಿಲೀಂಧ್ರವು ಉತ್ಪಾದಿಸುವ ಪ್ರತಿಜೀವಕಗಳಿಗಿಂತಾ ಇವು ಭಿನ್ನವಾಗಿದ್ದು, ಇವು ಭರವಸೆದಾಯಕ ವಿನೂತನ ಔಷಧಗಳ ಹೊಸ ನಿಧಿಯೇ ಆಗಿವೆ.

ಆರ್ಕಿಯಾದಿಂದ ಇಂತಹ ಅನೇಕ ಅನುಕೂಲಗಳಿದ್ದು, ಅವನ್ನು ಒರೆಗೆ ಹಚ್ಚಿ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಮಾನವರು ಬದುಕಲು ಅನರ್ಹ ಎನಿಸಿರುವ ಅನೇಕ ಆಕಾಶಕಾಯಗಳ ಮೇಲೆ, ಇನ್ನಿತರ ಜೀವಿಗಳು ಬದುಕಬಹುದೇ ಎಂಬ ಪ್ರಶ್ನೆಗೆ ಉತ್ತರ ನೀಡಲು ಈ ತೀವ್ರವಾದಿ ಸೂಕ್ಷ್ಮಾಣು ಜೀವಿಗಳಿಂದಲೇ ಸಾಧ್ಯ; ಇದೇ ನಿಟ್ಟಿನಲ್ಲಿ ಯೋಚಿಸಿ, ಯೋಜನೆ ಸಿದ್ಧಪಡಿಸಿ, ಆರ್ಕಿಯಾಕ್ಕೆ ಖಗೋಳಯಾನವನ್ನೂ ಮಾಡಿಸುವ ಹುಮ್ಮಸ್ಸಿನಲ್ಲಿದ್ದಾರೆ ಖಗೋಳವಿಜ್ಞಾನಿಗಳು. ಅದು ಸಾಧ್ಯವಾದರೆ, ನಾವು ಹಿಂದೆಂದೂ ಕಂಡು ಕೇಳರಿಯದ ವೈಜ್ಞಾನಿಕ ಅಚ್ಚರಿ, ಅನುಭವ ಮತ್ತು ಸವಾಲುಗಳಿಗೆ ಬಾಗಿಲು ತೆರೆದಂತೆಯೇ.

– ಕ್ಷಮಾ ವಿ ಭಾನುಪ್ರಕಾಶ್