ಸೂಕ್ಷ್ಮಾಣು ಜೀವಿಗಳಲ್ಲಿ ಅತ್ಯಂತ ಹಳೆಯ ಸದಸ್ಯ, ಬ್ಯಾಕ್ಟೀರಿಯ. ಈಗ ಲಭ್ಯವಿರುವ ರೂಪದಲ್ಲೇ ಅಲ್ಲದಿದ್ದರೂ, ಅತ್ಯಂತ ಸರಳ ರೂಪದಲ್ಲಿ ಭೂಮಿಯಲ್ಲಿ ಕಂಡುಬಂದ ಜೀವಿಗಳಲ್ಲೇ ಮೊದಲಿಗ ಎಂಬ ಖ್ಯಾತಿ ಕೂಡ ಬ್ಯಾಕ್ಟೀರಿಯಾದ್ದೇ. ಇವು ನಮ್ಮ ದೇಹದ ಮೇಲೆ ಹಾಗೂ ಒಳಗೆ, ನಮ್ಮ ಸುತ್ತ ಮುತ್ತ ಎಲ್ಲೆಲ್ಲೂ ಕಂಡುಬರುತ್ತವೆ; ಇವು ವಾಸಿಸದ ಜಾಗವೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲವೇನೋ; ಏಕೆಂದರೆ ವಿಕಿರಣಶೀಲ ತ್ಯಾಜ್ಯ, ಬಾಹ್ಯಾಕಾಶ ಸೇರಿದಂತೆ ಯಾವುದೇ ಜೀವಿಯು ಬದುಕಲು ಸಾಧ್ಯವಾಗದಂತಹಾ ತಾಣಗಳಲ್ಲೂ ಇವು ಬದುಕಿ ಸೈ ಎನಿಸಿಕೊಂಡಿವೆ. ಇಲ್ಲೆಲ್ಲಾ ಬದುಕಿದ ಇವುಗಳಿಗೆ ಗಾಳಿ, ಮಣ್ಣು, ನೀರು, ಹಣ್ಣು ತರಕಾರಿ, ಗಿಡ ಮರ, ಮಾನವ ಹಾಗೂ ಇನ್ನಿತರ ಪ್ರಾಣಿಗಳ ದೇಹದ ಒಳಹೊರಗೆ ಬದುಕುವುದು ಕಷ್ಟವೇ? ಇನ್ನು, ಸಾಮಾನ್ಯವಾಗಿ ಬಹುಪಾಲು ಜನರಿಗೆ, ಬ್ಯಾಕ್ಟೀರಿಯಗಳೆಂದರೆ ಹಾನಿಕಾರಕ ಜೀವಿಗಳು ಎಂಬ ಭಾವನೆಯಿದೆ. ಈ ಭಾವನೆಯ ಹಿಂದಿರುವುದು ಭಾಗಶಃ ಸತ್ಯವಷ್ಟೇ. ಬ್ಯಾಕ್ಟೀರಿಯಾಗಳು ರೋಗಕಾರಕಗಳು, ಸರಿ; ಆದರೆ, ರೋಗಕಾರಕ ಬ್ಯಾಕ್ಟೀರಿಯಾಗಳಿಗಿಂತ ಹೆಚ್ಚಿನ ಬಗೆಯಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಉಪಕಾರಿ ಬ್ಯಾಕ್ಟೀರಿಯಾಗಳಿವೆ ಎಂಬುದು ಎಲ್ಲರಿಗೂ ಗೊತ್ತಿಲ್ಲ. ವಾಸ್ತವದಲ್ಲಿ, ಇವುಗಳಿಲ್ಲದೆ ನಾವು ಬದುಕುವುದೂ ಸಾಧ್ಯವಿಲ್ಲ ಎಂದರೆ ನಂಬುತ್ತೀರಾ? ಇಂತಹ ಬಹುಮುಖ್ಯ ಬಗೆಯ ಸೂಕ್ಷ್ಮಾಣುಜೀವಿಯ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಭೂಮಿಗೆ ಬ್ಯಾಕ್ಟೀರಿಯಾಗಳ ಪದಾರ್ಪಣೆ ಮತ್ತು ವಿಕಾಸ:

ಬ್ಯಾಕ್ಟೀರಿಯಾಗಳ ಪೂರ್ವಜವೆನಿಸುವ ಜೀವಿಗಳು ಭೂಮಿಯ ಮೇಲೆ ರೂಪುಗೊಂಡದ್ದು ಸುಮಾರು ೪ ಶತಕೋಟಿ ವರ್ಷಗಳ ಹಿಂದೆ. ಇವುಗಳ ಅತೀ ಪುರಾತನ ಪಳಯುಳಿಕೆ ಲಭ್ಯವಿದ್ದು, ಅದು ಪದರಗಳುಳ್ಳ ಶಿಲೆಯಂತೆ ಇರುವ ಕಾರಣ, ಅದನ್ನು ‘ಸ್ಟ್ರೋಮಟೋಲೈಟ್’ ಎನ್ನುತ್ತಾರೆ. ‘ಸೈನೋ ಬ್ಯಾಕ್ಟೀರಿಯಾ’ಗಳು ತಮ್ಮ ವಸಾಹತಿನ ಮೇಲೆ ಹೊಂದಿರುವ ಅಂಟಂಟು ಲೋಳಾಪದರಕ್ಕೆ ಹೊರಗಿನ ಮಣ್ಣು ಕಲ್ಲಿನ ಪುಡಿ ಮೆತ್ತಿಕೊಂಡು, ಅದು ಶಿಲೆಯಾಗಿ ಪರಿವರ್ತನೆಗೊಂಡಿದೆ ಮತ್ತು ಕಾಲ ಕಳೆದಂತೆ ಪಳಯುಳಿಕೆಯಾಗಿ ಮಾರ್ಪಾಟು ಹೊಂದಿದೆ. ಆದರೆ, ‘ಸ್ಟ್ರೋಮಟೋಲೈಟ್’ನ ಮೇಲ್ಮೈಯ ರಚನಾ ಸ್ವರೂಪವು ಅಷ್ಟು ಸ್ಪಷ್ಟವಾಗಿಲ್ಲದ ಕಾರಣ, ನಿಗಧಿತವಾಗಿ ಬ್ಯಾಕ್ಟೀರಿಯಾಗಳ ಹುಟ್ಟು ಯಾವಾಗ ಆಗಿರಬಹುದೆಂದು ಹೇಳಲು ಕಷ್ಟ ಸಾಧ್ಯ. ಆದಾಗ್ಯೂ, ಪಳಯುಳಿಕೆಯಲ್ಲಿದ್ದ ಬ್ಯಾಕ್ಟೀರಿಯಾದ ಜೀನ್ ಗಳನ್ನು ಅನುಕ್ರಮಗೊಳಿಸಿ, ಬ್ಯಾಕ್ಟೀರಿಯಾಗಳ ಜೀವವಿಕಾಸವನ್ನು ಪುನರ್ನಿರ್ಮಿಸಲಾಯಿತು. ಇದರಿಂದ ತಿಳಿದು ಬಂದ ವಿಷಯವೆಂದರೆ, ಇವುಗಳ ಪೂರ್ವಜ ಜೀವಿಯು ‘ಆರ್ಕಿಯ’ಗಳಾಗಿದ್ದವು ಮತ್ತು ಕಾಲಾನುಕ್ರಮದಲ್ಲಿ ಇವು ಬ್ಯಾಕ್ಟೀರಿಯಾಗಳ ರೂಪ ತಾಳಿದವು. ಈಗಲೂ ‘ಆರ್ಕಿಯ’ ಎಂಬ ಬೇರೆಯದೇ ಜೀವಿಯ ವರ್ಗವಿದ್ದರೂ, ಅವುಗಳಿಗೂ ಈಗಿರುವ ಬ್ಯಾಕ್ಟೀರಿಯಾಗಳಿಗೂ ಸ್ಪಷ್ಟ ವ್ಯತ್ಯಾಸಗಳಿವೆ.

ಬ್ಯಾಕ್ಟೀರಿಯಾಗಳ ಮೂಲಭೂತ ಗುಣಲಕ್ಷಣಗಳು:

ಇವು ಮೂಲಭೂತವಾಗಿ ಏಕಕೋಶೀಯ ಜೀವಿಗಳು, ಅರ್ಥಾತ್, ಒಂದೇ ಜೀವಕೊಶವೇ ಇವುಗಳ ಸಂಪೂರ್ಣ ದೇಹ. ಬ್ಯಾಕ್ಟೀರಿಯಾಗಳನ್ನು ‘ಪ್ರೋಕ್ಯಾರಿಯೋಟ್’ಗಳೆಂದು ವರ್ಗೀಕರಿಸಲಾಗಿದೆ. ‘ಪ್ರೋಕ್ಯಾರಿಯೋಟ್’ಗಳು ಒಂದೇ ಜೀವಕೋಶವನ್ನು ಹೊಂದಿದ್ದು, ಪೊರೆಯ ಪರಿಮಿತಿಯಿಲ್ಲದ ‘ನ್ಯೂಕ್ಲಿಯಸ್’ಅನ್ನು ಹೊಂದಿರುತ್ತದೆ; ಇದರ ಅರ್ಥ, ಸ್ಪಷ್ಟವಾದ ಸಂಪೂರ್ಣವಾಗಿ ರೂಪಗೊಂಡ ಪೊರೆ ಹೊಂದಿರುವ ನ್ಯೂಕ್ಲಿಯಸ್, ಬ್ಯಾಕ್ಟೀರಿಯಾಗಳಲ್ಲಿ ಅಥವಾ ಯಾವುದೇ ‘ಪ್ರೋಕ್ಯಾರಿಯೋಟ್’ಗಳಲ್ಲಿ ಇರುವುದಿಲ್ಲ. ಆದರೆ, ಇಡೀ ಜೀವಕೋಶಕ್ಕೆ ಎರಡು ಪದರಗಳ ಕವಚವಿರುತ್ತದೆ; ಒಂದು ಕೋಶ ಪೊರೆ ಮತ್ತು ಅದರ ಹೊರಗೆ ಕೋಶಗೋಡೆ. ಕೋಶಪೋರೆಯು ಜೀವಕೋಶದೊಳಗಿನ ವಸ್ತುಗಳು ಹೊರಕ್ಕೆ ಹರಿಯದಂತೆ ತಡೆಯುತ್ತದೆ. ಕೋಶಗೋಡೆಯು ಬ್ಯಾಕ್ಟೀರಿಯಾ ಜೀವಕೋಶಕ್ಕೆ ಒಂದು ನಿರ್ದಿಷ್ಟ ಆಕಾರ ನೀಡಿ, ಹೊರಗಿನ ವಾತಾವರಣದಿಂದ ಕೋಶವನ್ನು ರಕ್ಷಿಸುತ್ತದೆ. ಕೋಶಗೋಡೆ ಮತ್ತು ಕೋಶಪೊರೆಯ ಒಳಗೆ ನೀರಿನಂತಹ ಸಂಯೋಜನೆಯಿದ್ದು, ಇದನ್ನು ಕೋಶದ್ರವ್ಯ ಎನ್ನುತ್ತಾರೆ. ಇದು ಮುಖ್ಯವಾದ ಕಿಣ್ವಗಳು, ಲವಣಗಳು, ಜೀವಕೊಶೀಯ ಘಟಕಗಳು ಮತ್ತು ಅನೇಕ ಸಾವಯವ ಅಣುಗಳನ್ನು ಒಳಗೊಂಡಿರುತ್ತದೆ. ಇನ್ನು, ಬ್ಯಾಕ್ಟೀರಿಯಾದ ಅನುವಂಶಿಕ ಪದಾರ್ಥವಾದ ಡಿ.ಎನ್.ಎಯನ್ನು ಹೊಂದಿರುವ ಜೀವದ್ರವ್ಯದ ಪ್ರದೇಶವನ್ನು ‘ನ್ಯುಕ್ಲಿಯೋಯ್ದ್’ ಎನ್ನುತ್ತಾರೆ. ಈ ಪುಟ್ಟ ಪ್ರದೇಶವೇ ಬ್ಯಾಕ್ಟೀರಿಯಾದ ಮೆದುಳಿನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಜೀವನಕ್ರಮವನ್ನು ನಿರ್ದೇಶಿಸುತ್ತದೆ. ಬ್ಯಾಕ್ಟೀರಿಯಾಗಳು ರೈಬೋಸೋಮ್ ಎಂಬ ಪುಟ್ಟ ಪುಟ್ಟ ಗೋಲಿಯಾಕಾರದ ಘಟಕಗಳನ್ನು ಹೊಂದಿರುತ್ತವೆ. ಇವು, ಪ್ರೋಟೀನ್ ಉತ್ಪಾದನೆಯ ಜವಾಬ್ದಾರಿ ಹೊತ್ತ ರಚನೆಗಳು. ಈ ಬ್ಯಾಕ್ಟೀರಿಯಾಗಳು ಒಂದು ಸ್ಥಳದಿಂದ ಮತ್ತೊಂದೆಡೆಗೆ ಚಲಿಸಲು ನೆರವಾಗುವ ಒಂದು ಚಾಟಿಯಂತಹ ರಚನೆಯನ್ನು ಸಾಮಾನ್ಯವಾಗಿ ಹೊಂದಿರುತ್ತವೆ. ಅದನ್ನು ಹಂಬುಕಾಂಡ ಎನ್ನುತ್ತಾರೆ. ಇಂತಹ ಅಪ್ಪಟ ‘ಪ್ರೋಕ್ಯಾರಿಯೋಟ್’ ಗುಣಲಕ್ಷಣಗಳನ್ನು ಪ್ರತಿನಿಧಿಸುವ ಬ್ಯಾಕ್ಟೀರಿಯಾಗಳು, ‘ಪ್ರೋಕ್ಯಾರಿಯೋಟ್’ ವರ್ಗದ ಅತೀ ಸರಳ ಸದಸ್ಯ. ಈ ಮೂಲಭೂತ ಗುಣಲಕ್ಷಣಗಳನ್ನು ಹೊರತು ಪಡಿಸಿ, ಬಗೆ ಬಗೆಯ ವರ್ಣದ್ರವ್ಯಗಳನ್ನೋ, ಲೋಳೆ ಪದರಗಳನ್ನೋ, ಕಿಣ್ವಗಳನ್ನೋ ತನ್ನೊಳಗೆ ಇರಿಸಿಕೊಂಡು ತನ್ನ ಆವಾಸಸ್ಥಾನಕ್ಕೆ ಹೊಂದಿಕೊಳ್ಳುತ್ತವೆ ಬ್ಯಾಕ್ಟೀರಿಯಾಗಳು. ತನ್ನ ಸುತ್ತಲಿನ ಪರಿಸರವು ತನ್ನ ಅಸ್ತಿತ್ವಕ್ಕೆ ಒಡ್ಡುವ ಸವಾಲುಗಳಿಗೆ ಉತ್ತರಿಸಲು, ಬೇರೆ ಜೀವಿಗಳಂತೆಯೇ ಹೊಂದಿಕೊಳ್ಳುತ್ತಾ, ವಿಕಾಸಗೊಳ್ಳುತ್ತಾ ಸಾಗಿವೆ.

ಬ್ಯಾಕ್ಟೀರಿಯಾಗಳ ವರ್ಗೀಕರಣ:

ಬ್ಯಾಕ್ಟೀರಿಯಾಗಳನ್ನು ಹಲವಾರು ವೈಜ್ಞಾನಿಕ ಕ್ರಮಗಳ ಪ್ರಕಾರ ವರ್ಗೀಕರಿಸಬಹುದು. ಪ್ರಮುಖವಾಗಿ, ಅವುಗಳ ರಚನಾ ಸ್ವರೂಪ, ಅವುಗಳಿಗೆ ಇರುವ ಆಮ್ಲಜನಕದ ಅವಶ್ಯಕತೆ ಅಥವಾ ಅನಾವಶ್ಯಕತೆ, ಅವುಗಳ ಆಹಾರ ಕ್ರಮ ಮುಂತಾದವುಗಳ ಆಧಾರದ ಮೇಲೆ ಬ್ಯಾಕ್ಟೀರಿಯಾಗಳನ್ನು ವರ್ಗೀಕರಿಸಬಹುದಾಗಿದೆ.

ರಚನಾ ಸ್ವರೂಪ ಆಧಾರಿತ ವರ್ಗೀಕರಣ:

ಬ್ಯಾಕ್ಟೀರಿಯಾಗಳು ಹಲವಾರು ಆಕಾರ ಹಾಗೂ ಗಾತ್ರದಲ್ಲಿ ಕಂಡುಬರುತ್ತವೆ; ೦.೫ ಮೈಕ್ರೊಮೀಟರ್ಗಳಷ್ಟು ಅಳತೆಯ ಜೀವಕಣವನ್ನು ಹೊಂದಿರುವ ಬ್ಯಾಕ್ಟೀರಿಯಾಗಳು ಅತ್ಯಂತ ಕಡಿಮೆ ಗಾತ್ರದ ಬ್ಯಾಕ್ಟೀರಿಯಾಗಳಾಗಿದ್ದು ಇವು ಬರಿಗಣ್ಣಿಗೆ ಕಾಣಲು ಅಸಾಧ್ಯ. ಆದರೆ ಸೂಕ್ಷ್ಮಜೀವಾಣುವಾಗಿದ್ದರೂ ಸೂಕ್ಷ್ಮದರ್ಶಕದ ಅವಶ್ಯಕತೆಯಿರದಂತೆ ಬರಿಗಣ್ಣಿಗೆ ಕಾಣಬಹುದಾದ ಅರ್ಧ ಮಿಲಿಮೀಟರ್ ಅಳತೆಯ ‘ಥಯೋಮಾರ್ಗರೆಟ’ ಎಂಬ ಬ್ಯಾಕ್ಟೀರಿಯಾ ಕೂಡ ಉಂಟು. ಇದು ಬ್ಯಾಕ್ಟೀರಿಯಾಗಳ ಗಾತ್ರದ ವ್ಯಾಪಕ ಶ್ರೇಣಿಗೆ ಸಾಕ್ಷಿ. ಬ್ಯಾಕ್ಟೀರಿಯಾಗಳು ಗೋಲಾಕಾರವನ್ನು ಹೊಂದಿದ್ದರೆ ಅವುಗಳನ್ನು ಕಾಕಸ್(ಏಕ) ಅಥವಾ ಕಾಕೈ(ಬಹು) ಎನ್ನುತ್ತೇವೆ. ಗ್ರೀಕ್ ಭಾಷೆಯಲ್ಲಿ ‘ kókkos’ ಎಂದರೆ ಧಾನ್ಯದ ಬೀಜ ಎಂದರ್ಥ; ಹಾಗಾಗಿ ಧಾನ್ಯದಂತೆ ಕಂಡುಬರುವ ಪುಟ್ಟ ಪುಟ್ಟ ಗೋಲಾಕಾರದ ಬ್ಯಾಕ್ಟೀರಿಯಾಗಳು ಕಾಕಸ್ ಎನಿಸಿಕೊಳ್ಳುತ್ತವೆ. ಎರಡು ಕಾಕಸ್ ಗಳು ಜೋಡಿಯಾಗಿ ಕಂಡುಬಂದರೆ ಅವನ್ನು ಡಿಪ್ಲೋಕಾಕಸ್ ಎಂದೂ, ದ್ರಾಕ್ಷಿ ಗೊಂಚಲಿನಂತೆ ಹಲವಾರು ಕಾಕೈಗಳು ಒಂದಕ್ಕೊಂದು ಅಂಟಿಕೊಂಡಿದ್ದರೆ ಅವನ್ನು ಸ್ಟಫೈಲೋಕಾಕಸ್ ಎಂದೂ, ದಾರಕ್ಕೆ ಪೋಣಿಸಿದಂತೆ ಒಂದಕ್ಕೊಂದು ಅಂಟಿಕೊಂಡು ಸರ ಅಥವಾ ಹಾರದಂತೆ ಕಂಡುಬಂದರೆ ಅವನ್ನು ಸ್ಟ್ರೆಪ್ಟೋಕಾಕಸ್ ಎಂದೂ ಕರೆಯಲಾಗುತ್ತದೆ. ಕೆಲವು ಬ್ಯಾಕ್ಟೀರಿಯಾಗಳು ಕೋಲಿನಂತೆ, ಉದ್ದನೆಯ ದಂಡದಂತೆ ಕಂಡುಬರುತ್ತವೆ; ಲ್ಯಾಟಿನ್ ಭಾಷೆಯಲ್ಲಿ ‘ baculus’ ಎಂದರೆ ಕೋಲು ಎಂದರ್ಥ. ಹಾಗಾಗಿ ದಂಡದಾಕಾರದ ಬ್ಯಾಕ್ಟೀರಿಯಾಗಳನ್ನು ‘ಬ್ಯಾಸಿಲಸ್'(ಏಕ) ಅಥವಾ ‘ಬ್ಯಾಸಿಲ್ಲೈ'(ಬಹು) ಎನ್ನುತ್ತೇವೆ. ಕೆಲವು ಬ್ಯಾಕ್ಟೀರಿಯಾಗಳು ಬಾಗಿದ ಕೋಲಿನಂತೆ ಅಥವಾ ಅರ್ಧವಿರಾಮ ಚಿಹ್ನೆಯ ಆಕಾರದಲ್ಲಿದ್ದು, ಅವುಗಳನ್ನು ‘ವಿಬ್ರಿಯೋ’ ಎನ್ನುತ್ತೇವೆ. ಇನ್ನೂ ಕೆಲವು ಬ್ಯಾಕ್ಟೀರಿಯಾಗಳು ಸುರುಳಿಯಾಕಾರದಲ್ಲಿದ್ದು, ‘ಸ್ಪೈರಿಲ್ಲಾ’ ಎನಿಸಿಕೊಳ್ಳುತ್ತವೆ.

ಆಮ್ಲಜನಕದ ಅವಶ್ಯಕತೆ ಆಧಾರಿತ ವರ್ಗೀಕರಣ:
ಜೀವಿಯೊಂದು ಜೀವಂತಾಗಿರಲು ಆಮ್ಲಜನಕ ಬೇಕೇಬೇಕು; ಅದರ ಅನಾವಶ್ಯಕತೆಯ ಪ್ರಶ್ನೆಯೆಲ್ಲಿದೆ ಎಂದು ನಿಮಗೆನ್ನಿಸಬಹುದು; ಆದರೆ ಆಮ್ಲಜನಕವು ಇರುವ ಪರಿಸರದಲ್ಲಿ ಜೀವಿಸಲಾಗದೆ ಕೊನೆಯಾಗುವ ಕೆಲವು ಬಗೆಯ ಬ್ಯಾಕ್ಟೀರಿಯಾಗಳಿವೆ ಎಂದರೆ ನೀವು ನಂಬಲೇಬೇಕು. ಅಂತೆಯೇ ಸಾಮಾನ್ಯವಾಗಿ ಕಂಡುಬರುವ ಎಲ್ಲಾ ಜೀವಿಗಳಂತೆ ಆಮ್ಲಜನಕವಿಲ್ಲದೆ ಬದುಕಲು ಅಸಾಧ್ಯ ಎಂಬಂತಹ ಬ್ಯಾಕ್ಟೀರಿಯಾಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಏರೋಬಿಕ್ ಬ್ಯಾಕ್ಟೀರಿಯಾಗಳೆಂದರೆ ಜೀವಿಸಲು, ಬೆಳೆದು ವೃದ್ಧಿಸಲು ಆಮ್ಲಜನಕದ ಅತ್ಯಾವಶ್ಯಕತೆ ಇರುವ ಬ್ಯಾಕ್ಟೀರಿಯಾಗಳು; ಉದಾಹರಣೆಗೆ ‘ಮೈಕೊಬ್ಯಾಕ್ಟೀರಿಯಮ್’ ಪ್ರಭೇದಗಳು. ಅನೆರೋಬಿಕ್ ಎಂದರೆ ಆಮ್ಲಜನಕದ ಅವಶ್ಯಕತೆ ಲವಲೇಶವೂ ಇಲ್ಲದೆ, ಆಮ್ಲಜನಕದ ಉಪಸ್ಥಿತಿಯಲ್ಲಿ ಹಾನಿಗೂ ಒಳಗಾಗಬಹುದಾದ ಬ್ಯಾಕ್ಟೀರಿಯಾಗಳು; ಉದಾಹರಣೆಗೆ ‘ಕ್ಲಾಸ್ಟ್ರೀಡಿಯಂ’ ಪ್ರಭೇದಗಳು. ಇವೆರಡು ವರ್ಗಗಳ ನಡುವೆ ಎರಡು ವರ್ಗಕ್ಕೂ ಸಲ್ಲುವ ಅನುಜ್ಞಾತ್ಮಕ ಅನೆರೋಬಿಕ್ ಬ್ಯಾಕ್ಟೀರಿಯಾಗಳು ಕೂಡ ಇವೆ; ಇವಕ್ಕೆ ಜೀವಿಸಲು ಅಂದರೆ ಸಾಮಾನ್ಯ ಜೀವ ಪ್ರಕ್ರಿಯೆಗಳನ್ನು ಪೂರೈಸಲು ಆಮ್ಲಜನಕದ ಅವಶ್ಯಕತೆಯಿಲ್ಲ. ಆದರೆ ಆಮ್ಲಜನಕದ ಉಪಸ್ಥಿತಿಯು ಇವುಗಳಿಗೆ ಹಾನಿ ಉಂಟುಮಾಡದೇ, ಇವುಗಳ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಉದಾಹರಣೆಗೆ ‘ಈ.ಕೋಲೈ’ ಪ್ರಭೇದ.

ಆಹಾರಕ್ರಮ ಆಧಾರಿತ ವರ್ಗೀಕರಣ:

ಬ್ಯಾಕ್ಟೀರಿಯಾಗಳು ತಾವೇ ತಮಗೆ ಬೇಕಾದ ಆಹಾರ ತಯಾರಿಸಿಕೊಳ್ಳುತ್ತವೆಯೇ ಅಥವಾ ಸಿದ್ಧ ಆಹಾರದ ಮೊರೆಹೊಗುತ್ತವೆಯೇ ಎಂಬುದರ ಆಧಾರದ ಮೇಲೆ ಇವನ್ನು ಸ್ವಪೋಷಕ ಮತ್ತು ಭಿನ್ನಪೋಷಕ ಎಂದು ವರ್ಗೀಕರಿಸಲಾಗಿದೆ; ಸ್ವಪೋಶಕವಾಗಲೀ, ಭಿನ್ನಪೋಶಕವಾಗಲೀ ಆಹಾರವನ್ನು ತಯಾರಿಸಲು ಅಥವಾ ಆಹಾರವನ್ನು ಬಳಸಿಕೊಂಡು ಶಕ್ತಿ ಪಡೆಯಲು ಮೂಲಶಕ್ತಿ ಅತ್ಯಗತ್ಯ. ಯಾವ ಬಗೆಯ ಮೂಲಶಕ್ತಿ ಬಳಸುತ್ತವೆ ಎಂಬುದರ ಆಧಾರದ ಮೇಲೆ ಮತ್ತಷ್ಟು ಮುಂದುವರೆದ ವರ್ಗೀಕರಣ ಸಾಧ್ಯ.
ಸಸ್ಯಗಳಲ್ಲಿರುವ ಕ್ಲೋರೋಫಿಲ್ ಅಥವಾ ಅದರಂತೆಯೇ ಕಾರ್ಯನಿರ್ವಹಿಸುವ ಇತರ ವರ್ಣದ್ರವ್ಯಗಳನ್ನು ಕೆಲವು ಬ್ಯಾಕ್ಟೀರಿಯಾಗಳಲ್ಲಿ ಕಾಣಬಹುದು. ಅಂತಹ ಬ್ಯಾಕ್ಟೀರಿಯಾಗಳು ಈ ವರ್ಣದ್ರವ್ಯದ ಸಹಾಯದಿಂದ ಸೂರ್ಯನ ಬೆಳಕು ಮತ್ತು ಅಜೈವಿಕ ಇಂಗಾಲದ ಮೂಲವನ್ನು (ಉದಾಹರಣೆಗೆ: ಇಂಗಾಲದ ಡೈ ಆಕ್ಸೈಡ್) ಬಳಸಿಕೊಂಡು ಆಹಾರವನ್ನು ತಯಾರಿಸಿಕೊಳ್ಳುತ್ತವೆ. ಇಂತಹ ಬ್ಯಾಕ್ಟೀರಿಯಾಗಳನ್ನು ‘ಫೋಟೋ ಆಟೋಟ್ರೋಫ್’ ಅಂದರೆ ಬೆಳಕನ್ನು ಬಳಸಿಕೊಳ್ಳುವ ಸ್ವಪೋಷಕ ಬ್ಯಾಕ್ಟೀರಿಯಾ ಎನ್ನುತ್ತೇವೆ. ಮತ್ತೂ ಕೆಲವು ಬ್ಯಾಕ್ಟೀರಿಯಾ ವರ್ಣದ್ರವ್ಯಗಳ ಉಪಸ್ಥಿತಿ ಇಲ್ಲದಿರುವ ಕಾರಣ, ಬೆಳಕನ್ನು ಹೀರಿಕೊಳ್ಳುವ ಶಕ್ತಿಯನ್ನು ಪಡೆದಿರುವುದಿಲ್ಲ; ಆದರೂ ಅಮೋನಿಯಾ, ಮೀಥೇನ್ನಂತಹ ಹಲವು ರಾಸಾಯನಿಕ ಸಂಯುಕ್ತ ಪದಾರ್ಥಗಳ ಆಕ್ಸಿಡೀಕರಣ ಅಥವಾ ಉತ್ಕರ್ಷಣ ಪ್ರಕ್ರಿಯೆಯನ್ನು ನಡೆಸಿ, ಶಕ್ತಿಯನ್ನು ಹೀರಿಕೊಂಡು, ಇಂಗಾಲದ ಡೈ ಆಕ್ಸೈಡ್ ಅನ್ನು ಕಾರ್ಬೋಹೈಡ್ರೇಟ್/ ಪಿಷ್ಟವನ್ನಾಗಿ ಮಾರ್ಪಡಿಸುವಲ್ಲಿ ಯಶಸ್ವಿಯಾಗುತ್ತವೆ. ಇವು ಕೂಡ ಒಂದು ಬಗೆಯ ಸ್ವಪೋಶಕಗಳೇ ಅಲ್ಲವೇ? ಆದರೆ ಬೆಳಕಿನ ಹಂಗಿಲ್ಲ ಅಷ್ಟೇ. ಹಾಗಾಗಿ ಇವನ್ನು ‘ಕೀಮೋ ಆಟೋಟ್ರೋಫ್’ ಎನ್ನುತ್ತೇವೆ.
ಭಿನ್ನಪೋಷಕ ಬ್ಯಾಕ್ಟೀರಿಯಾಗಳು ಅಥವಾ ಹೆಟೆರೋಟ್ರೋಫ್ಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಅಸಮರ್ಥ ಜೀವಿಗಳು; ಆದರೆ ಸಿದ್ಧ ರೂಪದಲ್ಲಿ ಪರಿಸರದಲ್ಲಿ ಲಭ್ಯವಿರುವ ಕಾರ್ಬೋಹೈಡ್ರೇಟ್/ಪಿಷ್ಟ, ಪ್ರೋಟೀನ್ ಮುಂತಾದ ಸಂಯುಕ್ತ ಪದಾರ್ಥಗಳನ್ನು ಆಹಾರವಾಗಿ ಬಳಸಲು ಬೆಳಕಿನಿಂದ ಮೂಲಶಕ್ತಿ ಪಡೆದರೆ, ಅವು ‘ಫೋಟೋ ಹೆಟೆರೋಟ್ರೋಫ್ಗಳು’ ಎನಿಸಿಕೊಳ್ಳುತ್ತವೆ ಮತ್ತು ಇತರೆ ರಾಸಾಯನಿಕ ಪದಾರ್ಥಗಳಿಂದ ಮೂಲಶಕ್ತಿ ಪಡೆದರೆ ‘ಕೀಮೋ ಹೆಟೆರೋಟ್ರೋಫ್ಗಳು’ ಎನಿಸಿಕೊಳ್ಳುತ್ತವೆ. ಹೆಟೆರೋಟ್ರೋಫ್ಗಳಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಕೊಳೆಯುತ್ತಿರುವ ಜೈವಿಕ ಪದಾರ್ಥಗಳ ಮೇಲೆ ಜೀವಿಸುತ್ತವೆ ಮತ್ತು ಅದೇ ಕೊಳೆಯುತ್ತಿರುವ ಜೈವಿಕ ಪದಾರ್ಥಗಳಿಂದ ನೇರವಾಗಿ ಪೋಷಣೆ ಪಡೆಯುತ್ತವೆ; ಇಂತಹಾ ಬ್ಯಾಕ್ಟೀರಿಯಾಗಳನ್ನು ಪೂತಿಸಸ್ಯ ಅಥವಾ ಸಾಪ್ರೋಫೈಟ್ ಎನ್ನುತ್ತೇವೆ. ಇನ್ನೂ ಕೆಲವು ಬ್ಯಾಕ್ಟೀರಿಯಾಗಳು ಸಸ್ಯ ಅಥವಾ ಪ್ರಾಣಿಯ ಜೀವಕೋಶದೊಳಗೆ ಸೇರಿಕೊಂಡು, ಅತಿಥೇಯ ಜೀವಿಯ ಜೀವಕೋಶ ಸಾರವನ್ನು ಆಹಾರವಾಗಿ ಬಳಸಿಕೊಳ್ಳುತ್ತವೆ; ಇದರ ಫಲವಾಗಿ ಅತಿಥೇಯ ಜೀವಿಯು ರೋಗಗ್ರಸ್ತವಾಗಿ ಕಂಡುಬರುತ್ತದೆ. ಇಂತಹಾ ಪರ ಜೀವಿ ಪೀಡಕ ಬ್ಯಾಕ್ಟೀರಿಯಾಗಳನ್ನು ಪ್ಯಾರಸೈಟ್ಸ್ ಅಥವಾ ಪರಾವಲಂಬಿ ಬ್ಯಾಕ್ಟೀರಿಯಾ ಎನ್ನುತ್ತೇವೆ. ಮತ್ತೂ ಕೆಲವು ಬ್ಯಾಕ್ಟೀರಿಯಾಗಳು ಇತರೆ ಸಸ್ಯ, ಪ್ರಾಣಿ ಅಥವಾ ಸೂಕ್ಷ್ಮಾಣುಜೀವಿಗಳ ದೇಹದೊಳಗೆ ವಾಸ್ತವ್ಯ ಹೂಡಿ, ಪರಸ್ಪರ ಅನುಕೂಲಕಾರಿಯಾಗಿ ವರ್ತಿಸುತ್ತವೆ; ಅಂದರೆ, ಇಲ್ಲಿ ಬ್ಯಾಕ್ಟೀರಿಯಾಗಳಿಗೆ ಸಸ್ಯ, ಪ್ರಾಣಿ ಅಥವಾ ಸೂಕ್ಷ್ಮಾಣುಜೀವಿಯು ವಾಸ್ತವ್ಯ ಮತ್ತು ಆಹಾರ ನೀಡುತ್ತವೆ; ಇದಕ್ಕೆ ಬದಲಾಗಿ ಬ್ಯಾಕ್ಟೀರಿಯಾಗಳು ಸಾರಜನಕವನ್ನು ವಾತಾವರಣದಿಂದ ಹೀರಿಕೊಡುವುದು, ಕೆಲವು ಕಿಣ್ವಗಳ ತಯಾರಿ ಇತ್ಯಾದಿ ಪ್ರತ್ಯುಪಕಾರವನ್ನು ಮಾಡುತ್ತವೆ. ಹೀಗೆ ಪರಸ್ಪರ ಉತ್ತಮ ಬಾಂಧವ್ಯದಿಂದ ಎರಡೂ ಕಡೆಯ ಜೀವಿಗಳಿಗೂ ಲಾಭವಾಗುತ್ತದೆ. ಇಂತಹ ಬ್ಯಾಕ್ಟೀರಿಯಾಗಳನ್ನು ಸಹಜೀವಿ ಬ್ಯಾಕ್ಟೀರಿಯಾ ಅಥವಾ ಸಿಂಬಯೋಟಿಕ್ ಬ್ಯಾಕ್ಟೀರಿಯಾ ಎನ್ನುತ್ತೇವೆ.

ಉಪಯುಕ್ತತೆ ಅಥವಾ ಹಾನಿಕಾರಕ ಗುಣ ಆಧಾರಿತ ವರ್ಗೀಕರಣ:

ಮಾನವರಿಗೆ ಅಥವಾ ಒಟ್ಟಾರೆ ಭೂಮಿಯ ವಾತಾವರಣಕ್ಕೆ, ಭೂಮಿಯ ಎಲ್ಲಾ ಸಸ್ಯ, ಪ್ರಾಣಿ, ಪಕ್ಷಿ ಸಂಕುಲಕ್ಕೆ ಬ್ಯಾಕ್ಟೀರಿಯಾಗಳ ಉಪಯುಕ್ತತೆ ಅಥವಾ ಬ್ಯಾಕ್ಟೀರಿಯಾಗಳಿಂದ ಆಗುವ ಹಾನಿಯ ಆಧಾರದ ಮೇಲೆ ಸ್ಥೂಲವಾಗಿ ಅವುಗಳನ್ನು ಉಪಯುಕ್ತ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳೆಂದು ವಿಂಗಡಿಸಬಹುದು; ಆದರೆ ಈ ಬಗೆಯ ವಿಂಗಡಣೆ ಸರಿಯೇ ಎಂಬ ಮೂಲಭೂತ ಪ್ರಶ್ನೆಗೆ ಸರಳವಾದ ಉತ್ತರ ಲಭ್ಯವಿಲ್ಲ. ಇದರ ಹಿಂದಿರುವ ಕಾರಣವಿಷ್ಟೇ; ಯಾವುದೇ ಬ್ಯಾಕ್ಟೀರಿಯಾ ಕೇವಲ ಉಪಯುಕ್ತ ಅಥವಾ ಕೇವಲ ಹಾನಿಕಾರಕವಾಗಿರುವುದಿಲ್ಲ. ಹಾಗಾಗಿ, ಹೆಚ್ಚು ಹಾನಿಯುಂಟು ಮಾಡುವ ಬ್ಯಾಕ್ಟೀರಿಯಾವೋ, ಹೆಚ್ಚು ಉಪಯುಕ್ತ ಬ್ಯಾಕ್ಟೀರಿಯಾವೋ ಎಂದು ವಿಂಗಡಿಸುವ ಪ್ರಯತ್ನ ಮಾಡಬಹುದು. ಬ್ಯಾಕ್ಟೀರಿಯಾಗಳಿಂದ ಆಗುವ ಹಾನಿ. ಬ್ಯಾಕ್ಟೀರಿಯಾಗಳಿಂದ ನೈಸರ್ಗಿಕವಾಗಿ ಮತ್ತು ಮಾನವ ನಿರ್ಮಿತ ರೂಪದಲ್ಲಿ ಪಡೆಯಬಹುದಾದ ಉಪಯೋಗಗಳ ಬಗ್ಗೆ ಮುಂದಿನ ಲೇಖನದಲ್ಲಿ ಕೂಲಂಕುಶವಾಗಿ ಗಮನಿಸಬಹುದು. ಒಟ್ಟಾರೆ, ಬ್ಯಾಕ್ಟೀರಿಯಾಗಳು ಅತ್ಯಂತ ಹಳೆಯ ಸೂಕ್ಷ್ಮಜೀವಾಣುವಾದರೂ ಕಂಡು ಕೇಳರಿಯದ ಸಮಸ್ಯೆಗಳನ್ನು ಒಡ್ಡುವ ಮೂಲಕ, ಆಧುನಿಕ ಜಗತ್ತಿನ ಬುನಾದಿಯನ್ನೇ ಅಲುಗಾಡಿಸಬಹುದು; ಜೊತೆಗೇ, ಆಧುನಿಕ ಯುಗದ ಮಕ್ಕಳ ಜೀವಿತಾವಧಿಯನ್ನು ಚುಚ್ಚುಮದ್ದಿನ ಮುಖಾಂತರ ಹೆಚ್ಚಿಸಲೂಬಹುದು. ಜಗತ್ತಿನೊಂದಿಗೆ ಇಂತಹಾ ವಿಸ್ತೃತ ಸಂಬಂಧದಿಂದಾಗಿ, ಸೂಕ್ಷ್ಮಜೀವಿಗಳ ಲೋಕದಲ್ಲಿ ಬ್ಯಾಕ್ಟೀರಿಯಾಕ್ಕೆ ಬ್ಯಾಕ್ಟೀರಿಯಾವೇ ಸಾಟಿ.

– ಕ್ಷಮಾ.ವಿ.ಭಾನುಪ್ರಕಾಶ್