ಹಿಂದೀ ಸಾಹಿತ್ಯಾಕಾಶದ ಸೂರ್ಯ! ಕೃಷ್ಣ ಭಕ್ತಿಯ ಸಾಗರ! ವಾತ್ಸಲ್ಯರಸದ ಅದ್ವಿತೀಯ ಕವಿ! ಮಾಧುರ್ಯ ಭಾವಗಳ ಜನಕ! ಇಷ್ಟೇ ಅಲ್ಲ, ಇಂಥ ನೂರು ಹೊಗಳಿಕೆಗಳು ಸೂರದಾಸರಿಗೆ ಸಲ್ಲುತ್ತವೆ. ಸೂರದಾಸರು ಹುಟ್ಟು ಕುರುಡರು. ಕಣ್ಣಿನ ಗುಡ್ಡೆಗಳೇ ಇರಲಿಲ್ಲ. ಆದರೆ ಜಗತ್ತಿನ ಎಲ್ಲ ಸಂಗತಿಗಳನ್ನೂ ಇತರ ಇಂದ್ರಿಯಗಳಿಂದ ಅರಿತ ಅಪಾರ ಶಕ್ತಿವಂತರು.

ಸಂತ, ಕವಿ

ಇಂಪಾದ ದನಿ, ಸ್ಪಷ್ಟ ವಿಚಾರ, ಕಾವ್ಯಲಕ್ಷಣಗಳಿಂದ ಕೂಡಿದ ಕವಿತೆ ರಚಿಸುವ ಸಾಮರ್ಥ್ಯ; ಇವು ಸೂರದಾಸರ ಹುಟ್ಟು ಗುಣಗಳು. ಭಗವಂತನ ಶಕ್ತಿಯಲ್ಲಿ ನಂಬಿಕೆ, ಶ್ರೀಕೃಷ್ಣನ ಬಾಲ್ಯ, ಕೌಮಾರ್ಯ, ತಾರುಣ್ಯದ ಲೀಲೆಗಳ ಸುಂದರ ಕಲ್ಪನೆಗಳು, ವೈರಾಗ್ಯ, ಭಕ್ತಿಭಾವಗಳು; “ನೀನಲ್ಲದೆ ಬೇರೆ ಗತಿ ಇಲ್ಲ”! ಎಂಬ ಅನನ್ಯ ಶರಣ ಭಾವ-ಇವು ಸೂರದಾಸರನ್ನು ಅಮರ ಕವಿ, ಸಂತರನ್ನಾಗಿ ಮಾಡಿದವು.

ಸೂರದಾಸರ ಜನಪ್ರಿಯತೆ ಎಷ್ಟಿತ್ತೆಂದರೆ ಅವರ ಕಾಲ ಹದಿನಾಲ್ಕನೆಯ ಶತಮಾನದಿಂದ ಇಂದಿನ ಇಪ್ಪತ್ತನೆಯ ಶತಮಾನದವರೆಗೂ ಅವರ ಹುಟ್ಟು, ಸಾವು ಬದುಕು, ಬಾಲ್ಯ, ತಾರುಣ್ಯ, ಸಾಧನೆ, ಭಾವನೆ, ಕಾವ್ಯರಚನೆ, ಕಲ್ಪನೆಗಳನ್ನು ಕುರಿತು ನೂರಾರು ದಂತಕಥೆಗಳು, ಹತ್ತಾರು ಪವಾಡಗಳು ಹಬ್ಬಿಕೊಂಡಿವೆ. ಹಲವು ಜನ ವಿದ್ವಾಂಸರು ಸೂರದಾಸರ ಕೃತಿಗಳನ್ನು ಕುರಿತು ಗ್ರಂಥ ರಚನೆ ಮಾಡಿದ್ದಾರೆ. ಆದರೂ ಇಂದೂ ಅವರ ಕವಿತೆಗಳಲ್ಲಿ ದಿನವೂ ಹೊಸಹೊಸ ಅರ್ಥವನ್ನು ಕಾಣಬಹುದು. ಅವನ್ನು ಹೊಸಹೊಸ ರಾಗಗಳಲ್ಲಿ ಹಾಡಬಹುದು. ಇಂದು ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಸೂರದಾಸರ ಪದ್ಯಗಳ ಅನುವಾದ ಸಿಕ್ಕುತ್ತದೆ.

ಅಯ್ಯೋ, ಕುರುಡನೆ?

ಉತ್ತರ ಭಾರತದ ಉತ್ತರ ಪ್ರದೇಶ.

ದೆಹಲಿಗೆ ಹತ್ತಿರದಲ್ಲಿ ಸಾಹೀ ಎಂಬ ಒಂದು ಸಣ್ಣ ಗ್ರಾಮ. ಅಲ್ಲಿ ಬಡ ದಂಪತಿಗಳು. ವಿಕ್ರಮ ಶಕ ೧೫೩೫ರ (ಕ್ರಿ.ಶ. ೧೪೭೮) ವೈಶಾಖ ಶುಕ್ಲ ಪಂಚಮಿ ಮಂಗಳವಾರ ಈ ದಂಪತಿಗಳಿಗೆ ಒಬ್ಬ ಮಗ ಹುಟ್ಟಿದ. ಗುಂಗುರು ಕೂದಲು, ನೀಳ ನಾಸಿಕ, ಮುದ್ದಾದ ತುಟಿಗಳು, ಅಗಲವಾದ ಹಣೆ, ನಸುಗೆಂಪು ಮೈಬಣ್ಣ, ಸುಂದರವಾದ ಕೈಕಾಲುಗಳು, ದಷ್ಟಪುಷ್ಟವಾದ ಶರೀರ. ಮಗು ಮುದ್ದಾಗಿದೆ-ಹುಣ್ಣಿಮೆಯ ಚಂದ್ರನಂತೆ.

ಆದರೆ-

ಆದರೆ ಕಣ್ಣುಗಳು?

ಕಣ್ಣುಗಳಿಲ್ಲ. ಕಣ್ಣುಗುಡ್ಡೆಯೇ ಇಲ್ಲ. ಬಿಲ್ಲಿನಂತೆ ಬಾಗಿದ ಹುಬ್ಬುಗಳು ಮಾತ್ರ. ಇಂಥ ಮಗುವಿಗೆ ಕಣ್ಣಿಲ್ಲವೆಂದರೆ….

“ಅಯ್ಯೋ! ನನ್ನ ಕಂದನಿಗೆ ಕಣ್ಣುಗಳಿಲ್ಲವೇ?!

– ತಾಯಿ ಗೋಳಾಡಿದಳು. ಜನ ಸಹಾನುಭೂತಿ ವ್ಯಕ್ತಪಡಿಸಿದರು.

“ಕಣ್ಣಿಲ್ಲದಿದ್ದರೆ ಏನಂತೆ? ನನ್ನ ಮಗ ಕಣ್ಣಿಲ್ಲದೇ ಎಲ್ಲವನ್ನೂ ತಿಳಿಯಬಲ್ಲ. ದೇವರ ಇಚ್ಛೆ ಏನಿದೆಯೋ ಯಾರು ಬಲ್ಲರು?”

– ತಂದೆ ಸಮಾಧಾನ ತಂದುಕೊಂಡು, ಮಗನನ್ನು ಮುದ್ದಾಡಿದರು. ಹೆಂಡತಿಯನ್ನು ಸಂತೈಸಿದರು.

ಮಗನಿಗೆ “ಸೂರ”ನೆಂದು ನಾಮಕರಣ ಮಾಡಿದರು.

ತಂದೆ ತಾಯಿಗಳಿಗೆ ಸೂರನನ್ನು ಎತ್ತಿಕೊಂಡರೆ ಹಸಿವು ಮಾಯವಾಗುತ್ತಿತ್ತು. ಅಪ್ಪಿಕೊಂಡರೆ ಎದೆ ತುಂಬ. ಎತ್ತಿದರೆ ತೋಳು ತುಂಬ. ಮಗು ನೋಡಲು ಬಂದವರು ಹಾಲು ಹಣ್ಣು ತರುತ್ತಿದ್ದರು. ಕೆಲವರು ನಾಣ್ಯಗಳನ್ನು ಕೊಡುತ್ತಿದ್ದರು.

 

ಎಲ್ಲರ ಮುದ್ದು ಕಂದ

ಸೂರ ಈಗ ಓಡಾಡುತ್ತಿದ್ದಾನೆ. ಮುದ್ದಾಗಿ ಬೆಳೆದಿದ್ದಾನೆ. ಇಂಪಾಗಿ ಹಾಡುತ್ತಾನೆ. ತಾಯಿ ಹಾಡುತ್ತಿದ್ದ ಭಜನೆಯೆಲ್ಲ ಅವನ ಬಾಯಲ್ಲಿತ್ತು. ಸ್ಪಷ್ಟ ಉಚ್ಛಾರ. ಇನ್ನೂ ಕೇಳಬೇಕು ಎನ್ನುವಂಥ ಸ್ವರ.

ಕುಳಿತಲ್ಲಿ ನಿಂತಲ್ಲಿ ಭಜನೆ ಹೂಡುತ್ತಾನೆ. ಹಾಡುತ್ತಾ ಕುಣಿಯುತ್ತಾನೆ.

ನೆರೆಮನೆಯವರಿಗೆ, ಊರಿನವರಿಗೆ ಸೂರನ ಹಾಡು ಪಾಯಸದಂತೆ ಇಷ್ಟ. ಎಲ್ಲರೂ ಮನೆಗೆ ಕರೆದು ತಿಂಡಿ ಕೊಟ್ಟು ಹಾಡಿಸುವವರೇ. ಅದೆಷ್ಟೋ ಸಲ ಸೂರ ಮನೆಯಿಂದ ದೂರಹೋಗಿ ಎಲ್ಲಾದರೊಂದು ಕಡೆ ಹಾಡುತ್ತಾ ಕುಳಿತುಬಿಡುತ್ತಿದ್ದ. ಹಗಲು ರಾತ್ರಿಗಳು ಅವನಿಗೆ ತಿಳಿಯದು. ಒಬ್ಬನೇ ದಡದಡನೆ ನಡೆದುಬಿಡುತ್ತಿದ್ದ. ದಾರಿ ನಡೆಯಲು ಯಾರ ಸಹಾಯವೂ ಬೇಡ. ಅವನ ಓಡಾಟ ನೋಡಿದರೆ “ಕಣ್ಣು ಕಾಣಿಸುವುದಿಲ್ಲ” ಎಂದು ಯಾರೂ ಹೇಳುವಂತಿರಲಿಲ್ಲ.

ಒಂದು ದಂತಕಥೆ: ಒಮ್ಮೆ ಸೂರ ಬಾವಿಯೊಂದರಲ್ಲಿ ಬಿದ್ದನಂತೆ. ಒಂದು ವಾರ ಅಲ್ಲೇ ಇದ್ದನಂತೆ. ಕೊನೆಗೆ ಶ್ರೀಕೃಷ್ಣ ಬಂದು ಅವನನ್ನೆತ್ತಿ ದೃಷ್ಟಿಯನ್ನು ನೀಡಿದನಂತೆ. ಆದರೆ ಶ್ರೀಕೃಷ್ಣನನ್ನು ಕಂಡ ಸೂರ, “ನಿನ್ನನ್ನು ನೋಡಿದ ಬಳಿಕ ನನಗೇಕೆ ಕಣ್ಣುಗಳು” ಅವನ್ನು ನೀನೇ ತೆಗೆದುಕೋ” ಎಂದನಂತೆ. ಇದೊಂದು ಭಕ್ತರು ಕಟ್ಟಿದ ಕಥೆ.

ಚಿನ್ನದ ನಾಣ್ಯ

ಒಂದು ದಿನ ಸಂಜೆ ಸೂರನ ತಂದೆ ಸಂತೋಷದಿಂದ ಮನೆಗೆ ಬಂದರು. ಅಂದು ಯಾರೋ ಅವರಿಗೆ ಎರಡು ಚಿನ್ನದ ನಾಣ್ಯ ದಾನ ಕೊಟ್ಟಿದ್ದರು. ಚಿನ್ನದ ನಾಣ್ಯ ಇದುವರೆಗೂ ನೋಡದ ಅವರಿಗೆ ಸ್ವರ್ಗ ಸಿಕ್ಕಂತಾಯಿತು. “ನೋಡಿದೆಯೇನೇ ಎರಡು ಚಿನ್ನದ ನಾಣ್ಯ!” ಎಂದು ಹೆಂಡತಿಗೆ ಹೇಳಿದರು. “ನೋಡಪ್ಪ ಸೂರ, ಎರಡು ಚಿನ್ನದ ನಾಣ್ಯ” ಎಂದು ಮಗನ ಕೈಗಿತ್ತರು.

“ನಾಳೆ ಬೆಳಗ್ಗೆ ಈ ಮನೆ ಬಿಡುವ. ಈ ಊರಿನ ಬಡತನದ ಜೀವನ ಇನ್ನು ಸಾಕು. ಜನ ನಮ್ಮನ್ನು ನೋಡಿ ಕನಿಕರ ಪಡುವುದೂ ಬೇಡ. ದಾನ ಕೊಡುವುದೂ ಬೇಡ. ಮಥುರಾದಲ್ಲಿ ನಮಗೆ ಜೀವನಕ್ಕೆ ಕಷ್ಟವೇ ಇಲ್ಲ. ಅಲ್ಲಿಯವರೆಗಿನ ದಾರಿ ಖರ್ಚಿಗೆ ಹಣ ಸಿಕ್ಕಿತು.”

ರಾತ್ರಿ ಗಂಡಹೆಂಡತಿ ನಿರ್ಧರಿಸಿದರು. ಚಿನ್ನದ ನಾಣ್ಯಗಳನ್ನು ಚಿಂದಿ ಬಟ್ಟೆಗಳಲ್ಲಿ ಕಟ್ಟಿ ಗೋಡೆಯ ಗೂಡಿನಲ್ಲಿರಿಸಿದರು.

ಬೆಳಗಾಯಿತು. ಅವಸರ ಅವಸರವಾಗಿ ಇದ್ದ ಮುರುಕು ಪಾತ್ರೆ, ಹರಕು ಬಟ್ಟೆ ಗಂಟು ಕಟ್ಟಿ ಹೊರಡಲು ಸಿದ್ಧರಾದರು. ಇನ್ನೇನು ಹೊರಡಬೇಕು. “ಆಹ್! ಚಿನ್ನದ ನಾಣ್ಯಗಳು!”

ಚಿನ್ನದ ನಾಣ್ಯಗಳು ಗೂಡಿನಲ್ಲಿರಲಿಲ್ಲ! ಎಲ್ಲಿ ಹೋಯಿತು? ಹುಡುಕಿದರು. ಸಂದಿಗೊಂದಿಗಳಲ್ಲಿ ತಡಕಿದರು. ಕಟ್ಟಿದ ಗಂಟು ಬಿಚ್ಚಿ ನೋಡಿದರು. ಚಡಪಡಿಸಿದರು. ಸಿಟ್ಟಾದರು. ಕೊನೆಗೆ ಸಿಟ್ಟು ಮಲಗಿದ್ದ ಮಗನ ಮೇಲೆ ಹರಿಯಿತು.

“ಅಯ್ಯೋ ದಾರಿದ್ರ್ಯವೇ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಈ ಕುರುಡು ಶನಿಯೇ ಅನಿಷ್ಟ!” ತಂದೆ ರೇಗಾಡಿದರು.

ಬೊಬ್ಬೆ ಕೇಳಿ ನೆರೆಕರೆಯವರು ಗುಂಪು ಸೇರಿದರು. “ಏನು? ಏನಾಯಿತು? ಯಾಕೆ ಕೂಗಾಡುತ್ತೀರಿ?”!

“ಏನು ಹೇಳಲಿ? ಎರಡು ಚಿನ್ನದ ನಾಣ್ಯ ನಿನ್ನೆ ರಾತ್ರಿ ಗೂಡಿನಲ್ಲಿರಿಸಿದ್ದೆ. ಈಗ ಇಲ್ಲ, ಸರ್ವನಾಶವಾಯಿತು.”

ಗದ್ದಲ ಕೇಳಿ ಸೂರ ಎಚ್ಚರಗೊಂಡ.

“ಅಪ್ಪಾ, ಏನು ಹುಡುಕುತ್ತಿದ್ದೀರಿ? ಚಿನ್ನದ ನಾಣ್ಯಗಳೇ?”

“ಹೌದು, ಎಲ್ಲ ನಿನ್ನಿಂದ ಹಾಳಾಯಿತು. ನಿನಗೇನು ಗೊತ್ತು? ಬಿದ್ದುಕೋ” – ತಂದೆ ಗದರಿಸಿ ಕಾಲಿನಿಂದ ಒದ್ದರು.

ಸೂರ ಅಳುತ್ತ ಹೇಳಿದ, “ಬಹುಶಃ ಅವುಗಳನ್ನು ಇಲಿ ಒಯ್ದಿರಬಹುದು. ಮನೆಯ ಹಿಂದೆ ಬಿಲದಲ್ಲಿ ನೋಡಿ.”

ಗಂಡ ಹೆಂಡತಿ ಇಬ್ಬರೂ ಓಡಿದರು. ತಿಪ್ಪೆಯ ಬಳಿ, ಇಲಿ ಬಿಲದ ಬಾಯಲ್ಲಿ, ಚಿನ್ನದ ನಾಣ್ಯಗಳು ಹೊಳೆಯುತ್ತಿದ್ದವು.

ಆಶ್ಚರ್ಯ!

“ಇವನಿಗೆ ಹೇಗೆ ತಿಳಿಯಿತು?”

“ಕಣ್ಣೇ ಇಲ್ಲ, ಹೇಗೆ ಹೇಳಿದ?”

“ಈಗ ತಾನೇ ಎದ್ದ! – ಜನ ಬೆರಗಾಗಿ ನೋಡಿದರು ಸೂರನನ್ನು. ಮನಬಂದಂತೆ ಮಾತಾಡಿಕೊಂಡರು.

“ನಾನು ಹೇಳಲಿಲ್ಲವೇ? ಏನೇ ಆದರೂ ನನ್ನ ಮಗ ಕಣ್ಣಿಲ್ಲದೇ ಎಲ್ಲವನ್ನೂ ಕಾಣಬಲ್ಲ ಸೂರ್ಯ. ಪರಮಜ್ಞಾನಿ.”

ತಾಯಿ ಮಗುವನ್ನು ಮುದ್ದಾಡಿದಳು. ಅಪ್ಪನ ಸಿಟ್ಟೂ ಇಳಿಯಿತು. ರಾತ್ರಿ ಇಲಿಗಳ ಓಡಾಟದ ಸದ್ದಿನಿಂದಲೇ ಸೂರ ಗ್ರಹಿಸಿದ್ದ – “ಇಲಿಗಳೇ ನಾಣ್ಯದ ಕಟ್ಟು ಒಯ್ದಿರಬೇಕು” ಎಂದು. ಮರುದಿನ ಮನೆಬಿಡುವ ಸುದ್ದಿಯಿಂದ ನಿದ್ರೆ ಮಾಡಲು ಆಗಲಿಲ್ಲ. ಬುದ್ಧಿಯ ಬಲದಿಂದ ನಾಣ್ಯದ ಪತ್ತೆ ಹೇಳಿದ್ದ. ಸಾಮಾನ್ಯವಾಗಿ ಕಣ್ಣಿಲ್ಲದವರಿಗೆ ಕಿವಿ, ಮೂಗು, ನಾಲಿಗೆ, ಚರ್ಮಗಳು ಚುರುಕಾಗಿ ಇರುತ್ತವೆ. ಅವೇ ಕಣ್ಣಿನ ಕೆಲಸ ಮಾಡುತ್ತವೆ.

ಜನ ಸೂರನನ್ನು “ಮಹಾತ್ಮ”ನೆಂದು ಪರಿಗಣಿಸಿದರು. ಆದರೆ ಸೂರ ತನ್ನ ಕುರುಡತನವನ್ನು ಕುರಿತು ಚಿಂತಿಸುತ್ತ ಕುಳಿತಿರುತ್ತಿದ್ದ. ಊರು ಬಿಡುವ ಕಾರ್ಯಕ್ರಮವನ್ನು ಕೈಬಿಟ್ಟಾಯಿತು.

ಅರಳೀಮರದ ಕೆಳಗೆ

ಸೂರ ಈಗ ಮನೆಯಲ್ಲಿಲ್ಲ. ಮನೆಬಿಟ್ಟು ಕೆಲವು ದಿನಗಳಾದವು. ಊರ ಹೊರಗಿನ ಕೊಳದ ಬಳಿಯ ಅರಳೀಮರದಡಿಯಲ್ಲೇ ಅವನೀಗ ಇರುವುದು. ಊರವರು ಅಲ್ಲೇ ಒಂದು ಕುಟೀರ ಕಟ್ಟಿದ್ದರು. ಭಜನೆ, ದೇವರನಾಮ, ಭಕ್ತಿಯ ಪದಗಳನ್ನು ಹಾಡುವುದು ಸೂರನ ದಿನಚರಿ.

ಹಾಲು, ಹಣ್ಣು, ರೊಟ್ಟಿ ಊರವರೇ ಕೊಡುತ್ತಿದ್ದರು. ತಂದೆ ತಾಯಿಗಳು ಮಗನನ್ನು ಮನೆಗೆ ಕರೆತರಲು ಬಹಳ ಪ್ರಯತ್ನ ಮಾಡಿದರು. ಊರ ಜನರ ಮನಸ್ಸು ಸೂರೆಗೊಂಡ ಸೂರ ಮರಳಿ ಮನೆಗೆ ಬರಲಿಲ್ಲ.

ಬೆಳಗ್ಗೆ, ಮಧ್ಯಾಹ್ನ, ಸಂಜೆ ಮರದಡಿಯ ಕುಟೀರದ ಬಳಿ, ಭಜನೆ, ಸಂಕೀರ್ತನೆ.

ನಡುನಡುವೆ ಪರೀಕ್ಷೆಯ ಪ್ರಶ್ನೆಗಳು.

ನಾನು ಯಾರು ಹೇಳು?’

ನೀನು ಗುಲಾಬಚಂದನಲ್ಲವೆ? ’

ಈಗ ಆ ಚಿಕ್ಕ ಮಗು ಏನು ಮಾಡುತ್ತಿದೆ?’

ಅದು ಕೇಕೆ ಹಾಕುತ್ತ ಕೈತಟ್ಟಿ ನಗುತ್ತಿದೆ.’

ಈಗ ಎಷ್ಟು ಹೊತ್ತಾಗಿದೆ ಸೂರಸ್ವಾಮಿ?’

ಮಧ್ಯಾಹ್ನದನಂತರ ಮೂರು ಘಳಿಗೆ.’

ಪೊಟ್ಟಣದಲ್ಲಿ ಏನಿದೆ ಸೂರ?’

ಅದರಲ್ಲಿ ಪೂರಿ ಮತ್ತು ಹಲ್ವಾ ಇದೆ.’

ಬಾಲಕ ಸೂರ ಇದ್ದಲ್ಲಿ ಭಜನೆ

“ಭಲೆಭಲೆ, ಭೇಷ್. ಎಷ್ಟು ಚುರುಕು ಬುದ್ಧಿ! ಎಂಥ ತಿಳುವಳಿಕೆ!”- ನೆರೆದ ಜನ ಚಪ್ಪಾಳೆ ತಟ್ಟುತ್ತಿದ್ದರು. ಬೆರಗಾಗುತ್ತಿದ್ದರು. ಸಮಯೋಚಿತ ಚಾತುರ್ಯದ ಉತ್ತರದಿಂದ ಸಂತೋಷಪಡುತ್ತಿದ್ದರು. ಆಕರ್ಷಕ ರೂಪದ ಸೂರಸ್ವಾಮಿ ಊರವರ ಕಣ್ಮಣಿ. ಯಾವ ಕೊರತೆಯೂ ಇಲ್ಲದ ಜೀವನ. ಆದರೆ ಮನಸ್ಸಿಗೆ ನೆಮ್ಮದಿ ಇಲ್ಲ. “ಈ ದೀನನನ್ನು ರಕ್ಷಿಸು ತಂದೆ” ಎಂದು ಅನವರತವೂ ದೇವರಲ್ಲಿ ಪ್ರಾರ್ಥಿಸುತ್ತಿದ್ದ.

‘ನನ್ನ ಹಸುಗಳು ಎಲ್ಲಿವೆ?

ಒಂದು ದಿನ ಊರ ಮುಖಂಡ ಬನವಾರೀ ಸೂರಸ್ವಾಮಿಯ ಬಳಿಗೆ ಓಡೋಡಿ ಬಂದ.

“ಸೂರಸ್ವಾಮೀ, ಸರ್ವನಾಶವಾಯಿತು.”
“ಏನಪ್ಪಾ, ಏನಾಯಿತು?”
“ನನ್ನ ಹನ್ನೆರಡು ಹಸುಗಳು ಕಾಣೆಯಾಗಿವೆ.”
“ಹೌದೇ, ನಾನೇನು ಮಾಡಲಿ ಹೇಳು?”
“ಅವೆಲ್ಲಿವೆ ಎಂದು ಹೇಳಿ ಸ್ವಾಮಿ”

“ನನ್ನನ್ನು ಜ್ಯೋತಿಷಿ ಎಂದು ತಿಳಿದೆಯಾ? ನಾನು ಹೇಗೆ ಹೇಳಲಿ? ಅವು ಶ್ರೀಕೃಷ್ಣನ ಸೇವೆ ಮಾಡಲು ಹೋಗಿವೆ. ಸೇವೆ ಮುಗಿದ ನಂತರ ಅವನೇ ಹಿಂದೆ ಕಳಿಸುತ್ತಾನೆ. ಬರುತ್ತವೆ. ನೀನು ಹೋಗು.” ಸೂರಸ್ವಾಮಿಯ ಚುಟುಕು ಉತ್ತರ. ಎಲ್ಲೆಡೆಯೂ ಶ್ರೀಕೃಷ್ಣನ ಲೀಲಾ ವೈಭವದ ದರ್ಶನ. ದೇವರ ಶಕ್ತಿಯಲ್ಲಿ ಅಪಾರ ನಂಬಿಕೆ. ಒಂದು ಭಜನೆ ಹಾಡಿದ.

ಚರಣ ಕಮಲ ಬಂದೌ ಹರಿರಾಯೀ
ಜಾಕೀ ಕೃಪಾ ಪಂಗು ಗಿರಿ ಲಂಘೈ
ಅಂಧೇ ಕೋ ಸಬ ಕುಛ ದರಸಾಯೀ
ಬಹಿರೌ ಸುನೈ, ಮೂಕ ಪುನಿ ಬೋಲೈ
ರಂಕ ಚಲೈ ಸಿರ ಛತ್ರ ಧರಾಯೀ
ಸೂರದಾಸಸ್ವಾಮಿ ಕರುಣಾಮಯ
ಬಾರ್ ಬಾರ್ ವಂದೌ ತೇಹಿ ಪಾಯೀ

(ಶ್ರೀ ಹರಿಯ ಪಾದರವಿಂದಕ್ಕೆ ನಮನ ಅವನ ಕೃಪೆಯಿಂ ಹೆಳವ ಗಿರಿಯನೇರುವನು ಕುರುಡನಿಗೆ ಎಲ್ಲವೂ ಕಾಣಿಸುವುದು ಕಿವುಡ ಕೇಳುವ ಮೂಗ ಸಿಹಿ ಮಾತನಾಡುವನು ಬಡವ ನಡೆವನು ತಲೆಗೆ ಬೆಲ್ಗೊಡೆಯ ಹಿಡಿಸಿ ಸೂರಸ್ವಾಮಿಯೆ ನೀನು ಕರುಣಾ ಸಮುದ್ರನಲೆ ಸಲಸಲವು ವಂದನವು ನಿನ್ನ ಚರಣಕ್ಕೆ)

ಹಾಡು ಕೇಳಿದ ಬನವಾರೀ ಸಮಾಧಾನದಿಂದ ಮನೆಗೆ ಹೋದ.

ಮಧ್ಯರಾತ್ರಿಯ ವೇಳೆ ಕೊಟ್ಟೆಗೆಯಲ್ಲಿ ಗಂಟೆಗಳ ಶಬ್ದ. ಎದ್ದು ಬಂದು ನೋಡಿದ. ಹನ್ನೆರಡು ಹಸುಗಳೂ ಬಂದಿದ್ದವು.

ಮಾಯೆಯಿಂದ ದೂರ

ಊರ ಮುಖಂಡ ಬನವಾರೀ ಸಂತೋಷದಿಂದ ಕುಣಿದಾಡಿದ. ಮರುದಿನ ಸೂರಸ್ವಾಮಿಯ “ಶಕುನ ಜ್ಞಾನ”ದ ಖ್ಯಾತಿ ಸುತ್ತಲ ಊರೆಲ್ಲ ಹರಡಿತು. ಸುದ್ದಿಗೆ ಕಿವಿ, ಕಾಲು, ಬಾಲ, ಗರಿ, ಬಣ್ಣ ಸೇರಿತು. ಇನ್ನು ದೂರದೂರ ಹಬ್ಬಿತು.

ಮುಖಂಡ ಬನವಾರೀ ಸೂರಸ್ವಾಮಿಗೆ ಒಂದು ಪಕ್ಕಾ ಮಂದಿರ ಕಟ್ಟಿಸಿದ. ಕ್ರಮೇಣ ಶಿಷ್ಯರ ಸಂಖ್ಯೆ ಬೆಳೆಯಿತು. ಸೂರಸ್ವಾಮಿಯ ಖ್ಯಾತಿಯೂ ಬೆಳೆಯಿತು. ಉಡುಗೊರೆ, ಕಾಣಿಕೆಗಳು ಬರತೊಡಗಿದವು. ಸೂರಸ್ವಾಮಿಗೆ ಬೇಡವಾದರೂ ಶಿಷ್ಯರಿಗೆ ಬೇಡವೇ? ಆಶ್ರಮದಲ್ಲಿ ಹಣ ಝಣಝಣ!

ಹಾ! ಘಾತವಾಯಿತು. ಇದೇನು ಮಾಡಿದೆ ನಾನು? ಹಣದ ಹಗರಣ ಕೇಳಲಾರದೆ ಮನೆಬಿಟ್ಟು ಬಂದರೆ ಇಲ್ಲಿಯೂ ಅದೇ ಹಣ. ಹಣ ಮಾಯೆ! ಅದೇ ನರಕದ ದಾರಿ.

ಸೂರಸ್ವಾಮಿಯ ಮನಸ್ಸು ಮುಜುಗರಗೊಂಡಿತು.

ಒಂದು ದಿನ ಮುಂಜಾನೆ ಊರ ಮುಖಂಡನನ್ನು ಕರೆಸಿದ ಸೂರಸ್ವಾಮಿ ಆಶ್ರಮದ ಸಂಪತ್ತನ್ನೆಲ್ಲ ತನ್ನ ತಂದೆತಾಯಂದಿರಿಗೆ, ಊರವರಿಗೆ ದಾನಮಾಡುವಂತೆ ಹೇಳಿ, ಕೈಯಲ್ಲಿ ಕೋಲೆತ್ತಿಕೊಂಡು ಹೊರಟರು. ಕುರುಡನಿಗೆ ಕೋಲೇ ನಂಟು. ದಾರಿಯ ಬಂಟ. ಜನ ಗೋಳಾಡಿದರು. ಪರಿಪರಿಯಾಗಿ ಪ್ರಾರ್ಥಿಸಿದರು.

ಸೂರಸ್ವಾಮಿ ನಿಲ್ಲಲಿಲ್ಲ. ನಿಧಾರ ಬದಲಾಯಿಸಲಿಲ್ಲ.

‘ಈ ಮಾಯೆಯಿಂದ ದೂರ ಹೋಗಬೇಕು. ಇದು ನನ್ನನ್ನು ಪಾಪಕೂಪದಲ್ಲಿ ಕೆಡವೀತು. ಒಂದು ಕ್ಷಣವೂ ಇಲ್ಲಿರಲಾರೆ.’ ಸೂರಸ್ವಾಮಿ ಹೊರಟೇಬಿಟ್ಟರು. ಕೆಲವು ಶಿಷ್ಯರು ಜೊತೆಗೆ ಬಂದರು.

ಶ್ರೀಕೃಷ್ಣನ ಭಕ್ತ, ಕುರುಡ ಕವಿ, ಗಾಯಕ ಇನ್ನೆಲ್ಲಿ ಹೋದಾರು? ಶ್ರೀಕೃಷ್ಣನ ಜನ್ಮಲೀಲಾ ಕ್ಷೇತ್ರ ಮಥುರಾಕ್ಕಿಂತ ಉತ್ತಮ ಜಾಗ ಬೇರೆಲ್ಲಿದೆ ಅವರಿಗೆ?

ಇಲ್ಲಿಯೂ ಬೇಡ

ಆದರೆ ಮಥುರಾಕ್ಕೆ ಹೋದರೂ ಮಾಯೆ ಬೆನ್ನುಬಿಡಲಿಲ್ಲ. ಅಲ್ಲಿಯೂ ಭಕ್ತರ ಗುಂಪು. ಶಿಷ್ಯರ ಪರಿವಾರ. ಕಾಣಿಕೆ ದಕ್ಷಿಣೆ!

ಊರ ಪೂಜಾರಿಗಳಿಗೆ ಸೂರಸ್ವಾಮಿಯನ್ನು ಕಂಡು ಅಸೂಯೆ!

“ಈ ಕುರುಡ ಗಾಯಕನೆಲ್ಲಿಂದ ಬಂದನಪ್ಪಾ!

“ಅವನಿದ್ದ ಕಡೆಗೇ ಜನ ಓಡುತ್ತಾರೆ. ನಾವು ಕರೆದರೂ ಬರುವುದಿಲ್ಲ.”

“ಕಾಣಿಕೆಗಳೆಲ್ಲಾ ಅವನಿಗೇ, ನಮಗೆ ಏನೂ ಇಲ್ಲ”

“ಇವನನ್ನು ಓಡಿಸಬಿಡಬೇಕು”-ಪೂಜಾರಿಗಳು ರೊಚ್ಚಿಗೆದ್ದರು.

“ನಾನು ಇಲ್ಲಿರುವುದು ತರವಲ್ಲ. ಹೊರಟು ಬಿಡಬೇಕು” ಎಂದು ನಿರ್ಧರಿಸಿದ ಸೂರಸ್ವಾಮಿ ಮತ್ತೆ ಜೋಳಿಗೆ ಹೆಗಲಿಗೆ ಏರಿಸಿ, ಕೋಲು ಹಿಡಿದರು. ಜೊತೆಗೆ ಬಂದ ಕೆಲವು ಶಿಷ್ಯರ ಜೊತೆಗೆ ಯುಮುನಾ ನದಿಯ ದಂಡೆಯಲ್ಲಿ ಸಾಗಿದರು.

ತಾರಣ್ಯ ಭಗವಂತನಿಗೆ ಅರ್ಪಣೆ

ಗವೂಘಾಟ್ ಯುಮುನಾತೀರದ ಒಂದು ಸುಂದರ ಸ್ಥಳ. ನದಿಯಲ್ಲಿ ಸಾಗುವ ದೋಣಿಗಳು ಅಲ್ಲಿ ನಿಲ್ಲುತ್ತಿದ್ದುವು. ಯಮುನೆಯನ್ನು ದಾಟುವುದು ಅಲ್ಲೇ. ಊರ ಜನರ ಸ್ನಾನ, ಸಂಧ್ಯಾವಂದನೆಗಳೂ ಅಲ್ಲೇ. ಸೂರಸ್ವಾಮಿ ತನ್ನ ಶಿಷ್ಯರೊಂದಿಗೆ ಅಲ್ಲೇ ತಂಗಿದರು. ಭಕ್ತಿ ವೈರಾಗ್ಯಗಳ ಪ್ರತಿಮೂರ್ತಿ, ತರುಣ ಸನ್ಯಾಸಿ, ಕವಿ, ಗಾಯಕ ಸೂರಸ್ವಾಮಿ ಅಲ್ಲಿ ತಂಗಿದುದು ಊರವರ ಪಾಲಿಗೆ ದೇವರೇ ಬಂದಂತೆ. ಸೂರಸ್ವಾಮಿಯ ಸ್ವಭಾವವನ್ನು ಮೊದಲೇ ತಿಳಿದಿದ್ದ ಜನ ಅವರನ್ನು ಕಾಡಿಸಲಿಲ್ಲ. ಪೀಡಿಸಲಿಲ್ಲ. ಪರೀಕ್ಷಿಸಲಿಲ್ಲ. ಆದರ ಗೌರವಗಳಿಂದ ಕಂಡರು. ಕಾಣಿಕೆ ಅರ್ಪಿಸಿ ಮನಸ್ಸು ನೋಯಿಸಲಿಲ್ಲ. ಕುರುಡನೆಂದು ನಿಂದಿಸಿ ದುಃಖ ಕೊಡಲಿಲ್ಲ. ಸೇವೆ ಮಾಡಿ ತೃಪ್ತಿಪಡಿಸಿದರು. ಸೂರಸ್ವಾಮಿಗೆ ನೆಮ್ಮದಿ ಬಂದಿತು.

ಭಜನೆ, ಭಕ್ತಿ, ವೈರಾಗ್ಯ, ಭಾವಗೀತೆಗಳ ರಚನೆ, ಗಾಯನ, ಆಧ್ಯಾತ್ಮ ಪ್ರವಚನಗಳಲ್ಲಿ ತನ್ಮಯರಾಗಿ ಜನರಲ್ಲಿ ಧಾರ್ಮಿಕ ಧೈರ್ಯ, ನೈತಿಕ ಬಲ, ಆಧ್ಯಾತ್ಮಿಕ ತೇಜಸ್ಸು ತುಂಬುತ್ತಿದ್ದ ಸೂರಸ್ವಾಮಿಗೆ ತನ್ನ ತಾರುಣ್ಯ ಕಳೆದುದೇ ತಿಳಿಯಲಿಲ್ಲ. ಭಗವಂತನಲ್ಲಿ ಭಕ್ತಿ ಹೆಚ್ಚಿದಂತೆಲ್ಲ ತನ್ನ ದೀನತೆಯ ಅರಿವು ಹೆಚ್ಚಿತು. ಈ ದೈನ್ಯ ಭಾವವನ್ನು ತೋಡಿಕೊಳ್ಳುವ ಹಾಡುಗಳೇ ರಚಿತವಾದವು.

ಕಣ್ಣುಗಳು ಹೀಗೆ ಹೋಗಿರಬಹುದೆ?

ಈ ಸಂದರ್ಭದಲ್ಲಿ ಇನ್ನೊಂದು ಜನಜನಿತ ಸಂಗತಿ.

ಅದು ಸೂರುದಾಸರ ಕುರುಡುತನಕ್ಕೆ ಸಂಬಂಧಪಟ್ಟದ್ದು. ಕೆಲವು ಜನ ಸಂಶೋಧಕರು “ಸೂರದಾಸರಿಗೆ ತಾರುಣ್ಯದವರೆಗೆ ಕಣ್ಣುಗಳು ಕಾಣಿಸುತ್ತಿದ್ದವು, ಅನಂತರ ಒಬ್ಬ ಯುವತಿಯಿಂದ ತಮ್ಮ ಕಣ್ಣುಗಳನ್ನು ಕೀಳಿಸಿಕೊಂಡರು” ಎಂದು ಅಭಿಪ್ರಾಯಪಡುತ್ತಾರೆ. ಇದಕ್ಕೆ ಹೊಂದುವ ಒಂದು ಘಟನೆಯನ್ನೂ ಹೇಳುವುದುಂಟು.

ಅದು ಹೀಗೆ:

‘ಜನ್ಮ ಜನ್ಮಾಂತರದಲ್ಲಿಯೂ ರಾಧಾಕೃಷ್ಣರ ಸನ್ನಿಧಿಯಲ್ಲಿ ವಾಸಿಸುವ ಭಾಗ್ಯ ದೊರೆಯಲಿ’

ಒಮ್ಮೆ ಸೂರದಾಸರು ಯಮುನೆಯ ದಡದಲ್ಲಿ ಧ್ಯಾನ ಮಗ್ನರಾಗಿ ಕುಳಿತಿದ್ದರು. ಅವರನ್ನು ನೋಡಲು, ಆಶೀರ್ವಾದ ಪಡೆಯಲು ಬರುವ ಜನ ಬಹಳ. ಬಂದವರು ಧ್ಯಾನಮಗ್ನರಾಗಿದ್ದ ಸೂರದಾಸರನ್ನು ಮಾತಾಡಿಸದೆ ದೂರ ನಿಂತಿದ್ದರು. ಗುಂಪಿನಲ್ಲಿ ಒಬ್ಬಾಕೆ ಸುಂದರ ಯುವತಿ ಇದ್ದಳು. ಅವರು ಸೂರಸ್ವಾಮಿಯ ರೂಪನೋಡಲು ಬಂದವಳು.

ಹತ್ತಿರ ಹೋಗಿ ಅವರನ್ನೇ ನೋಡುತ್ತ ನಿಂತಳು. ಸೂರದಾಸರ ಧ್ಯಾನ ಹರಿಯಿತು. ಮನಸ್ಸು ಚಂಚಲವಾಯಿತು. ಕಣ್ಣು ತೆರೆದು ನೋಡಿದಾಗ ಎದುರಿಗೆ ಲಾವಣ್ಯವತಿಯಾದ ಯುವತಿ. “ಸ್ವಾಮಿ, ನಾನು ತಮ್ಮ ಸೇವೆಗಾಗಿ ಬಂದವಳು. ಏನು ಮಾಡಲಿ?” ಎಂದಳು. ಮುಗುಳು ನಕ್ಕ ಸೂರದಾಸರು, “ತಾಯೀ, ಒಂದು ದಬ್ಬಳವನ್ನು ತಾ” ಎಂದರು. ಯುವತಿ ಗಾಬರಿಯಾಗಿ ನಿಂತಳು. “ನೀನು ಸೇವೆ ಮಾಡಲು ಬಂದವಳಲ್ಲವೇ? ತಾ, ದಬ್ಬಳ” ಎಂದು ಸೂರಸ್ವಾಮಿ ಆಜ್ಞಾಪಿಸಿದರು. ಯುವತಿ ಅಂಜುತ್ತ ಅಳುಕುತ್ತ ದಬ್ಬಳ ತಂದಳು. “ಇದನ್ನೇನು ಮಾಡಲಿ?” ಯುವತಿ ತೊದಲಿದಳು. “ಅದರಿಂದ ನನ್ನ ಕಣ್ಣುಗಳನ್ನು ಚುಚ್ಚು” ಸೂರಸ್ವಾಮಿ ಅಪ್ಪಣೆ ಮಾಡಿದರು. “ಅಯ್ಯೋ! ಇದೇನು ಹೇಳುತ್ತಿರುವಿರಿ? ನಾನೀ ಪಾಪಕರ್ಮ ಮಾಡಲು ಬಂದಿಲ್ಲ. ಮಾಡಲಾರೆ. ನಿಮ್ಮ ಕಣ್ಣುಕಿತ್ತು ನಾನಾವ ನರಕಕ್ಕೆ ಹೋಗಲಿ?” ಯುವತಿ ಚೀರುತ್ತ, ಅಳತೊಡಗಿದಳು.

ಸೂರದಾಸರು ನಗುತ್ತ ಹೇಳಿದರು: “ದೇವೀ, ಇದು ಪಾಪಕರ್ಮವಲ್ಲ. ಪುಣ್ಯಕಾರ್ಯ. ಮುಚ್ಚಿಕೊಂಡೇ ಈ ಕಣ್ಣು ನಿನ್ನ ರೂಪ ಮಾಧುರ್ಯವನ್ನು ಸವಿಯಿತು. ಮನಸ್ಸು ಚಂಚಲವಾಯಿತು. ತೆರೆದಿರುವ ಈ ಕಣ್ಣುಗಳಿದ್ದರೆ ದೇವರ ಧ್ಯಾನ ಮಾಡಲು ನನಗೆ ಸಾಧ್ಯವಾಗಲಾರದು. ದಯಮಾಡಿ ಚುಚ್ಚಿಬಿಡು” ಯುವತಿ ಒಪ್ಪಲಿಲ್ಲ. ಅಳುತ್ತ ನಿಂತಳು. ಕಡೆಗೆ ಅವಳು ಒಪ್ಪಲೇಬೇಕಾಯಿತು. ದಬ್ಬಳದಿಂದ ಕಣ್ಣುಗಳನ್ನು ಚುಚ್ಚಿದಳು, ಸೂರದಾಸರು ಕುರುಡರಾದರು.

ಹೀಗಿದೆ ಕಥೆ. ಕೇಳಲು ಚೆನ್ನಾಗಿದೆ. ಆದರೆ ನಂಬಲು ಧೈರ್ಯ ಬರುವುದಿಲ್ಲ. ಬಹಳ ಜನ ವಿದ್ವಾಂಸರೂ ಈ ಸಂಗತಿ ಒಪ್ಪುವುದಿಲ್ಲ. ಸೂರದಾಸರು ಹುಟ್ಟುಕುರುಡ., ಪರಮಜ್ಞಾನಿ, ಊಹಿಸಿ, ಕೇಳಿ, ಇತರ ಇಂದ್ರಿಯಗಳ ಸಹಾಯದಿಂದ ಎಲ್ಲವನ್ನೂ ತಿಳಿಯುವ ಶಕ್ತಿ ಅವನಲ್ಲಿತ್ತು ಎಂದೇ ಬಹುಜನ ವಿದ್ವಾಂಸರ ಮತ.

ವಲ್ಲಭ ಸಂದರ್ಶನ

ವಲ್ಲಭಾಚಾರ್ಯರ ಜನ್ಮಸ್ಥಾನ ಕಾಶಿ. ಸೂರದಾಸರು ಹುಟ್ಟಿದ ವರ್ಷವೇ ಇವರು ಹುಟ್ಟಿದರು. ಕಿರಿಯ ವಯಸ್ಸಿನಲ್ಲೇ ವೇದಶಾಸ್ತ್ರ ಪಾರಂಗತರಾದ ವಲ್ಲಭಚಾರ್ಯರು ಶಂಕರಾಚಾರ್ಯರಂತೆ ದಿಗ್ವಿಜಯ ಮಾಡಲು ಹೊರಟರು. ವೈಷ್ಣವ ಸಂಪ್ರದಾಯದ ಈ ಮಹಾಪಂಡಿತ ವಾಸಿಸುತ್ತಿದ್ದುದು ಪ್ರಯಾಗದಲ್ಲಿ. ಶ್ರೀಕೃಷ್ಣನ ಜನ್ಮಭೂಮಿ ಮಥುರಾ ಇವರ ಕಾರ್ಯಕ್ಷೇತ್ರ – ಯಾತ್ರಾಸ್ಥಳ. ಮೊದಲಸಲ ಹೋದಾಗಲೇ ಗೋವರ್ಧನಗಿರಿಯಲ್ಲಿ ಸಿಕ್ಕಿದ ಶ್ರೀನಾಥನ ವಿಗ್ರಹವನ್ನು ಅಲ್ಲೇ ಸ್ಥಾಪಿಸಿದರು. ಮಥುರಾ, ದ್ವಾರಕಾ, ಗೋಕುಲ, ಗೋವರ್ಧನಗಿರಿಯ ಸುತ್ತಮುತ್ತ ತನ್ನ ಶಿಷ್ಯವೃಂದ ಬೆಳೆಸಿದ ಆಚಾರ್ಯರು ಆಗಾಗ ಗೋವರ್ಧನಗಿರಿಯಲ್ಲಿನ ಶ್ರೀನಾಥ ದೇವಾಲಯಕ್ಕೆ ಬರುತ್ತಿದ್ದರು.

ಪ್ರಯಾಗದಿಂದ ಮಥುರಾದವರೆಗೆ, ಪರಿವಾರ ಸಮೇತ ಯಮುನಾ ನದಿಯಲ್ಲಿ ಯಾನ ಮಾಡುತ್ತಿದ್ದ ಆಚಾರ್ಯರು ಸೂರಸ್ವಾಮಿಯ ವಿಷಯ ಕೇಳಿ ತಿಳಿದಿದ್ದರು.

ಪಾಂಡಿತ್ಯ, ಪ್ರತಿಭೆ, ವಾಕ್‌ಚಾತುರ್ಯ, ಪ್ರವಚನ, ಶಾಸ್ತ್ರಜ್ಞಾನಗಳಿಂದ ಸುತ್ತಲ ಪ್ರಾಂತಗಳಲ್ಲಿ ಪ್ರಖ್ಯಾತರಾಗಿದ್ದ ವಲ್ಲಭಚಾರ್ಯರ ವಿಷಯವನ್ನು ಸೂರಸ್ವಾಮಿಯೂ ಕೇಳಿ ತಿಳಿದಿದ್ದರು.

ಮೂರನೆಯ ಸಲ ಮಥುರಾ ಯಾತ್ರೆಯ ಕಾಲದಲ್ಲಿ ವಲ್ಲಭಾಚಾರ್ಯರು ಸೂರಸ್ವಾಮಿಯನ್ನು ನೋಡುವ ನಿಶ್ಚಯ ಮಾಡಿ ಗವೂಘಾಟ್‌ನಲ್ಲಿ ಬೀಡುಬಿಟ್ಟರು. ಸೇವಕರಿಂದ ಸುದ್ದಿತಿಳಿದ ಸೂರಸ್ವಾಮಿ ಆಚಾರ್ಯರನ್ನು ಭೇಟಿಯಾಗಲು ಹೋದರು. ವಲ್ಲಭಾಚಾರ್ಯರು ಸನ್ಯಾಸಿಗಳಲ್ಲ. ವಿವಾಹಿತ ಗೃಹಸ್ಥ. ಪೂಜೆ, ಪ್ರವಚನ, ಊಟ ಮುಗುಸಿ ಗದ್ದುಗೆಯಲ್ಲಿ ಅನುಯಾಯಿಗಳ ಜೊತೆ ಮಂಡಿಸಿದ್ದರು. ಸೂರಸ್ವಾಮಿ ಆಚಾರ್ಯರಿಗೆ ವಂದಿಸಿ ಕುಳಿತರು. ಸೂರಸ್ವಾಮಿ ಸುಂದರ ವ್ಯಕ್ತಿತ್ವ ಆಚಾರ್ಯರನ್ನು ಆಕರ್ಷಿಸಿತು.

“ನಿಮ್ಮ ಬಗ್ಗೆ ಬಹಳ ಕೇಳಿದ್ದೇನೆ. ನೀವು ಚೆನ್ನಾಗಿ ಹಾಡುತ್ತೀರಂತೆ. ಒಂದೆರಡು ಭಜನೆಗಳನ್ನು ಹಾಡಿ, ಕೇಳುವ” ಎಂದರು ಆಚಾರ್ಯರು.

ಅತ್ಯಂತ ದೈನ್ಯಭಾವದ ಸುಂದರ ಕವಿತೆಗಳನ್ನು ಸೂರಸ್ವಾಮಿ ಹಾಡಿದರು. ಕವಿತಾ ಸಾಮರ್ಥ್ಯ, ಗಾಯನದ ಇಂಪು ಇವುಗಳಿಂದ ಆಚಾರ್ಯರ ಮನಸ್ಸು ಅರಳಿತು. ತಮ್ಮ ಮತ, ಧರ್ಮಪ್ರಚಾರ ಕಾರ್ಯದಲ್ಲಿ ಗಾಯಕರು ಬೇಕು ಎಂದು ಅವರು ಎಂದುಕೊಂಡಿದ್ದರು. ಸಮವಯಸ್ಸಿನ ಕವಿ, ಗಾಯಕ ದೊರೆತ ಸಂತಸದಲ್ಲಿ ಎದ್ದು ಬಂದ ಆಚಾರ್ಯರು ಸೂರಸ್ವಾಮಿಯನ್ನು ಆಲಂಗಿಸಿಕೊಂಡರು.

“ಶೂರನಾಗಿ ದೈನ್ಯತೆಯಿಂದ ಅಳಲುವುದೇಕೆ? ಶ್ರೀ ಕೃಷ್ಣನ ಲೀಲಾವಿಲಾಸಗಳನ್ನು ವರ್ಣಿಸಿ ಹಾಡಬಾರದೇ?” ಎಂದರು.

ಸೂರಸ್ವಾಮಿಗೂ ಅದೇ ಆಸೆ. ಗುರುಗಳಿಗೆ ವಂದಿಸಿದರು.

ಶಿಷ್ಯನ ಪೂರ್ವಾಪರಗಳನ್ನು ವಿಚಾರಿಸಿದ ಆಚಾರ್ಯರು ಸೂರಸ್ವಾಮಿಗೆ “ಸೂರದಾಸ” ನೆಂದು ನಾಮಕರಣ ಮಾಡಿದರು. ಬಂಗಾರದ ಹೂವಿಗೆ ಪರಿಮಳ ಬಂದಂತೆ ಸೂರಸ್ವಾಮಿ ಸೂರದಾಸರಾಗಿ ಪುಲಕಿತರಾದರು. ಮೂರು ದಿನಗಳವರೆಗೆ ವಲ್ಲಭಾಚಾರ್ಯರು ಶಿಷ್ಯನಿಗೆ “ಶ್ರೀಮದ್ಭಾಗವತ”ವನ್ನು ವಿವರಿಸಿ ಹೇಳಿ ಉಪದೇಶ ಮಾಡಿ, ಶ್ರೀಕೃಷ್ಣನ ಲೀಲಾ ವೈಭವಗಳ ಪರಿಚಯ ಮಾಡಿಕೊಟ್ಟರು. “ಪುರುಷೋತ್ತಮ ಸಹಸ್ರನಾಮ” ಕಲಿಸಿದರು. ಕೃಷ್ಣಭಕ್ತಿಯ ವಿವಿಧ ಮುಖಗಳನ್ನು ತೋರಿಸಿದರು. ಅಂದಿನಿಂದ ಸೂರದಾಸರು ಶ್ರೀಕೃಷ್ಣನ ಸೇವಕ, ಭಕ್ತ, ಸಖ ಪ್ರೇಮಿ ಆದರು. ಶ್ರೀಕೃಷ್ಣನೇ ಅವರ ಸರ್ವಸ್ವ.

ಶ್ರೀನಾಥ ಮಂದಿರದಲ್ಲಿ

ವಲ್ಲಭಚಾರ್ಯರು ಸೂರದಾಸರನ್ನು ಅವರ ಸೇವಕರ ಸಮೇತ ಮೊದಲ ಬಾರಿಗೆ ಗೋಕುಲಕ್ಕೆ ಕರೆದೊಯ್ದರು. ಗೋಕುಲದ ನೆಲದಲ್ಲಿ ಕಾಲಿರಿಸಿದ ಕೂಡಲೇ ಸೂರದಾಸರ ಹೃದಯದಲ್ಲಿ ಶ್ರೀಕೃಷ್ಣನ ಬಾಲಲೀಲೆಗಳ ಕಲ್ಪನೆಗಳ ಅಲೆಯಾಡಿದವು. ಮುದ್ದು ಕೃಷ್ಣನ ಚಪಲತೆ, ಅವರ ಕಣ್ಣಮುಂದೆ ಹರಿದಾಡಿದವು. ಒಡನೆಯೇ ಗಾನ ಮಾಧುರಿಯ ಜೊತೆಗೆ ಕವಿತೆ ಹರಿಯಿತು.

ಯಶೋದಾ ಹರಿ ಪಾಲನೇ ಝಲಾವೈ||

ಹಿಂದಿಯಲ್ಲಿ ಸೂರದಾಸರು ರಚಿಸಿದ ಸುಂದರವಾದ ಹಾಡನ್ನು ಕನ್ನಡದಲ್ಲಿ ಹೀಗೆ ಅನುವಾದ ಮಾಡಬಹುದು.

ಯಶೋದಾ ಹರಿಯನು ತೂಗುವಳು.
ಪ್ರೀತಿಸಿ ಮುದ್ದಿಸಿ ತೊಟ್ಟಿಲೊಳಿರಿಸಿ
“ನನ್ನ ಕಂದನಿಗೆ ಬಾರೇ ನಿದ್ರೆ,
ಏಕೆ ಬಂದು ನೀ ಮಲಗಿಸಲಾರೆ?
ಬೇಗನೇ ಬಾರೇ ಕರೆವನು ಕಣ್ಣಾ”
ಎಂದೇನೇನೋ ಹಾಡುವಳು.
ಹರಿ ರೆಪ್ಪೆ ಮುಚ್ಚುವ.
ಕಂದನು ಮಲಗಿದನೆಂದು ಯಶೋದೆ,
ಸನ್ನೆ ಮಾಡುವಳು “ಸುಮ್ಮನಿರಿ”.
ಅಗಲೇ ಕೃಷ್ಣನು ಮತ್ತೆ ಅಳುವನು.
ಮತ್ತೆ ಯಶೋದೆಯ ಮಧುರ ಗಾಯನ.
ಸುರಮುನಿ ದುರ್ಲಭ ಮುಖದರ್ಶನ ಸುಖ,
ನಂದನ ಭಾಮಿನಿ ಪಡೆಯುವಳು.

ಬಾಲಕೃಷ್ಣನ ಚಪಲತೆಯನ್ನು ವರ್ಣಿಸುವ ವಾತ್ಸಲ್ಯ ಭಾವದ ಹಾಡು ಕೇಳಿ ಮೆಚ್ಚಿದ ವಲ್ಲಭಾಚಾರ್ಯರು ಇಂಥದೇ ಇನ್ನೂ ಹಲವು ಹಾಡು ರಚಿಸಿ ಹಾಡುವಂತೆ ಹೇಳಿ, ಸಂದರ್ಭಗಳನ್ನು ವಿವರಿಸಿದರು. ಅನಂತರ ಸೂರದಾಸರು ಶ್ರೀಹರಿಯ ಬಾಲಲೀಲೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿ ನೂರಾರು ಪದ್ಯಗಳಿಂದ ಸ್ತುತಿಸಿದರು. ಕೃಷ್ಣನ ತುಂಟತನದ ವರ್ಣನೆಗಳಲ್ಲಂತೂ ಸೂರದಾಸರು ಎತ್ತಿದ ಕೈ. “ಮೈಯಾ ಮೋರಿ ಮೈ ನಹಿ ಮಾಖನ ಬಾಯೋ” ಎಂದು ಪ್ರಾರಂಭವಾಗುವ ಒಂದು ಪದ್ಯದ ಕನ್ನಡ ಅನುವಾದ ಹೀಗೆದೆ:

ನನ್ನಮ್ಮಾ, ನಾ ಬೆಣ್ಣೆಯ ತಿನ್ನಲಿಲ್ಲಾ
ತುಂಟಗೆಳೆಯರೆನ್ನ ಮುಖಕ್ಕೆ ಮೆತ್ತಿದರೇ||

ಸಿಕ್ಕಿದ ಮೇಲೆ ಎತ್ತರದಲ್ಲಿ, ಪಾತ್ರೆಯನಿಡುವವರಲ್ಲಾ
ನೀನೇ ನೋಡು ಈ ಚಿಕ್ಕ ಕೈಗಳು ಹೇಗದು ಎಟಕುವುದು.

ಬೆಣ್ಣೆಯ ದೊನ್ನೆಯ ಬೆಂಗಡೆ ಅಡಗಿಸಿ ಮೊಸರ ಬಾಯೊರಸಿ ಹೇಳುವ ಕೃಷ್ಣ

ಕೋಲನ್ನೆಸೆದು ನಗುತ ಯಶೋದೆ ಬಾಲನ ಮುದ್ದಿಪಳು.

ಬಾಲಲೀಲೆಯಲಿ ಮನವನು ಮೋಹಿಸಿ ಭಕ್ತಿಯ ಮಹಿಮೆಯ ತೋರಿದ ಸೂರ.

ಯಶೋದೆಗಿರುವ ಈ ಸುಖವನ್ನು ಹರವಿರಂಚಿಗಳೂ ಪಡೆಯಲಿಲ್ಲ.

ಇಂಥ ಹಲವು ಸುಂದರ ಭಾವನೆಗಳ ಮಧುರ ಪದ್ಯಗಳು ಸೂರದಾಸರ ಕಂಠದಿಂದ ಹೊರಹೊಮ್ಮಿದವು. ಆಚಾರ್ಯರು ಕೇಳಿ ಆನಂದಿತರಾಗುತ್ತಿದ್ದರು.

ವಲ್ಲಭಾಚಾರ್ಯರು ಶ್ರೀನಾಥ ಮಂದಿರವನ್ನು ನವೀಕರಿಸಿದ್ದರು. ಪೂಜಾಕಾರ್ಯಗಳ ಎಲ್ಲ ವ್ಯವಸ್ಥೆಯಾಗಿತ್ತು. ಸಂಕೀರ್ತನೆಯ ವ್ಯವಸ್ಥೆ ಆಗಿರಲಿಲ್ಲ. ಆಚಾರ್ಯರ ಸೂರದಾಸರಿಗೆ ಸಂಕೀರ್ತನೆಯ ಪಟ್ಟ ಕಟ್ಟಿದರು. ಇವರ ಜೊತೆಗೆ ಕುಂಭನದಾಸ, ಕೃಷ್ಣದಾಸ, ಪರಮಾನಂದದಾಸರೆಂಬ ಇತರ ಮೂವರು ಸಂತಗಾಯಕರೂ ಸೇರಿದರು.

ಮುಂದೆ ಸೂರದಾಸರಿಗೆ ಜೀವನವೆಲ್ಲ ಅದೇ ಕಾಯಕ. ತನ್ನ ೩೨ನೇ ಪ್ರಾಯದಲ್ಲಿ ವೈಷ್ಣವ ದೀಕ್ಷೆ ಪಡೆದು ಸ್ವಾಮಿ ಶ್ರೀನಾಥನ ಗಾಯನಸೇವೆಗೆ ಸಂದ ಸೂರದಾಸರು ಮುಂದಿನ ಎಪ್ಪತ್ತು ವರ್ಷಗಳ ಕಾಲ ಅವಿರತವಾಗಿ ಶ್ರೀ ಕೃಷ್ಣನ ಗುಣಗಾನ ಮಾಡಿದರು. ಸಹಸ್ರಾರು ಪದಗಳಲ್ಲಿ ಸುಂದರ ರಾಗಗಳಲ್ಲಿ “ಭಾಗವತ”ದ ಕಥೆ ಹಾಡಿದರು. ಆ ಕಾಲದ ಭಕ್ತಕವಿಗಳಿಗೆಲ್ಲ “ಶಿರೋಮಣಿ” ಆದರು.

೧೫೩೦ರಲ್ಲಿ ವಲಭಾಚಾರ್ಯರು ಸ್ವರ್ಗಸ್ಥರಾದ ನಂತರ ಎಂಟು ವರ್ಷಗಳ ಕಾಲ ಅವರ ಹಿರಿಯ ಮಗ ಗೋಪೀನಾಥರು ಆಚಾರ್ಯತ್ವ ವಹಿಸಿದರು. ಅವರು ಬಿಹಾರದ ಕಡೆ ಧರ್ಮಪ್ರಚಾರಕ್ಕೆ ಹೋದನಂತರ, ವಲ್ಲಭಾಚಾರ್ಯರ ಎರಡನೆಯ ಮಗ ವಿಠಲನಾಥ ಗೋಸ್ವಾಮಿಯವರು ಆಚಾರ್ಯತ್ವ ವಹಿಸಿಕೊಂಡರು. ಇವರ ಕಾಲದಲ್ಲಿ ಶ್ರೀನಾಥ ಮಂದಿರವು ಭಕ್ತಿಯ ಕೇಂದ್ರವಾಗಿ, ಧರ್ಮಪ್ರಚಾರದ ಕಾರ್ಯಾಲಯವಾಗಿ ಬೆಳಗಿತು.

ಸೂರದಾಸರ ಕಾಲದಲ್ಲಿ

೧೦೨ ವರ್ಷಗಳ ದೀರ್ಘಕಾಲ ಸೂರದಾಸರು ಬದುಕಿದರು ಎಂದು ನಮಗೆ ದೊರೆತಿರುವ ಸಾಕ್ಷ್ಯದಿಂದ ಹೇಳಬಹುದು. ೧೦೨ ವರ್ಷಗಳ ಕಾಲ ಸಣ್ಣದೇ? ಈ ಕಾಲದಲ್ಲಿ ಉತ್ತರ ಭಾರತ ಹಲವು ಬಾದಶಹರ ಆಳ್ವಿಕೆ ಕಂಡಿತು. ಆಡಳಿತ ಬದಲಾದಂತೆಲ್ಲಾ ಸರ್ಕಾರದ ನೀತಿ ಬದಲಾಗುತ್ತಿತ್ತು. ಸರ್ಕಾರದ ನೀತಿಯ ಜೊತೆಗೆ ಜನರ ಧಾರ್ಮಿಕ ಭಾವನೆ, ಸಾಂಸ್ಕೃತಿಕ ಸಂಗತಿಗಳಲ್ಲಿ ಗಡಿಬಿಡಿ ಉಂಟಾಗುತ್ತಿತ್ತು. ಜನರಿಗೆ ಧೈರ್ಯ ತಂದುಕೊಡುವ ಮಹಾಪುರುಷರೊಬ್ಬರ ಅಗತ್ಯವಿತ್ತು. ಈ ಕಾಲದಲ್ಲಿ ಸೂರದಾಸರು ಗೋವರ್ಧನಗಿರಿಯ ಶ್ರೀನಾಥ ಮಂದಿರದಲ್ಲಿ ಶ್ರೀಕೃಷ್ಣನ ಲೀಲಾ ವೈಭವಗಳ ಗುಣಗಾನ ಮಾಡುತ್ತಿದ್ದರು.

ವಲ್ಲಭಾಚಾರ್ಯರು ಧರ್ಮಪ್ರಚಾರಕರು. ಧರ್ಮದ ಪ್ರಚಾರಕ್ಕಾಗಿ ಉತ್ತರ ಭಾರತವನ್ನೆಲ್ಲ ಸಂಚರಿಸಿದ್ದರು. ಹಲವಾರು ಬಾದಶಹರು ತಮ್ಮ ಮತಪ್ರಚಾರಕ್ಕೆ ತಮ್ಮ ಅಧಿಕಾರದ ಶಕ್ತಿಯನ್ನು ಬಳಸುತ್ತಿದ್ದರೆ ಆಚಾರ್ಯರು ಸಂತರ, ಸನ್ಯಾಸಿಗಳ, ಕವಿಗಳ, ಗಾಯಕರ ಗುಂಪುಕಟ್ಟೆ ಸಂತ್ರಸ್ತ ಜನತೆಯಲ್ಲಿ ಸಾತ್ವಿಕ ಧೈರ್ಯ ತುಂಬುತ್ತಿದ್ದರು. ವಲ್ಲಭಾಚಾರ್ಯರ ಮಗ ವಿಠಲನಾಥರು ೧೫೬೬ರಲ್ಲಿ ಪ್ರಯಾಗದಿಂದ ವ್ರಜಪ್ರದೇಶಕ್ಕೆ ಬಂದು ನಾಲ್ಕು ವರ್ಷ ಮಥುರಾದಲ್ಲಿದ್ದು ಅನಂತರ ಗೋಕುಲದಲೇ ನೆಲೆಸಿದರು.

ವಿಠಲನಾಥರು ಉತ್ತಮ ಸಂಘಟಕ. ತಂದೆಯ ಪಾಂಡಿತ್ಯದ ಜೊತೆಗೆ ಅವರಲ್ಲಿ ವ್ಯವಹಾರ ಜ್ಞಾನವೂ ಕೂಡಿಕೊಂಡಿತ್ತು. ಶ್ರೀನಾಥ ಮಂದಿರದ ಕೀರ್ತನ ಸೇವೆಯನ್ನು ವಿಸ್ತರಿಸಿ ಇನ್ನೂ ನಾಲ್ವರು ಶಿಷ್ಯರನ್ನು ಸೇರಿಸಿದರು. ಚತುರ್ಭುಜದಾಸ, ಗೋವಿಂದಸ್ವಾಮಿ, ಛೀತಸ್ವಾಮಿ ಮತ್ತು ನಂದದಾಸರೆಂಬ ನಾಲ್ಕು ಜನ ಕವಿ, ಗಾಯಕರು ಬಂದನಂತರ ಎಂಟು ಜನ ಕವಿ, ಗಾಯಕರ ಗುಂಪಿಗೆ “ಅಷ್ಟಛಾಪ್” ಎಂದು ನಾಮಕರಣ ಮಾಡಿದರು.

ಸೂರದಾಸರೇ ಇದರ ಸರದಾರ. ಆಗಲೇ ಸೂರದಾಸರ “ಸೂರಸಾಗರ”ವೆಂಬ ದೊಡ್ಡ ಗ್ರಂಥದ ರಚನೆಯಾಯಿತು.

ವಿಠಲನಾಥರ ಕಾಲದಲ್ಲಿ ಅಕ್ಬರ್ ಬಾದಶನು ಆಳ್ವಿಕೆಗೆ ಬಂದಿದ್ದ. ೧೫೬೬ರಲ್ಲಿ ವಿಠಲನಾಥರ ಹೆಸರಿಗೆ ಹೊರಡಿಸಿದ ಶಾಹೀ ಫರಮಾನ್ (ರಾಜಾಜ್ಞೆ)ನಲ್ಲಿ ಅವರು ಗೋಕುಲದಲ್ಲಿ ತಮ್ಮ ಶಿಷ್ಯ ಸಮೂಹದೊಂದಿಗೆ ನಿರ್ಭಯವಾಗಿ ಇರಬಹುದು, ಗೋವುಗಳನ್ನು ಮೇಯಿಸಬಹುದು, ಸಾಕಬಹುದು, ಧರ್ಮಪ್ರಚಾರ ಮಾಡಬಹುದು, ಯಾವುದೇ ಕಂದಾಯ ಕೊಡಬೇಕಾಗಿಲ್ಲ ಎಂದು ತಿಳಿಸಲಾಗಿತ್ತು. ಈ ಫರಮಾನ್ ವಿಠಲನಾಥರ ಅನಂತರವೂ ಅವರ ಹೆಸರಿಗೇ ಜಾರಿಯಾಗುತ್ತಿತ್ತು. ಮುಂದೆ ಔರಂಗಜೇಬನ ಕಾಲದಲ್ಲಿ ನಿಂತಿತು.

ಇದಕ್ಕೆಲ್ಲ ಕಾರಣ ಸೂರದಾಸರ ಭಜನೆ, ಕೀರ್ತನೆ, ಗಾಯನ, ಕವಿತೆಗಳೇ. ಇವನ್ನು ಕೇಳಿ ತಿಳಿದ ಬಾದಶಹ ಅಕ್ಬರ್ ಸುಪ್ರೀತನಾಗಿದ್ದ. ೧೫೬೬ ರಲ್ಲಿ ಪ್ರಸಿದ್ಧ ಗಾಯಕ ತಾನಸೇನರು ಅಕ್ಬರನ ಆಸ್ಥಾನದಲ್ಲಿದ್ದರೆಂದು ಇತಿಹಾಸ ತಿಳಿಸುತ್ತದೆ. ಅವರು ಸೂರದಾಸರ ಕೀರ್ತನೆಗಳನ್ನು ಹಾಡುತ್ತಿದ್ದರು. ಆ ವೇಳೆಗಾಗಲೇ ಸಾವಿರಾರು ಕೀರ್ತನೆಗಳನ್ನು ರಚಿಸಿ ಸೂರದಾಸರು ಪ್ರಖ್ಯಾತರಾಗಿದ್ದರು.

ಸಂಗೀತ, ಸಾಹಿತ್ಯ ಪ್ರಿಯನಾದ ಅಕ್ಬರ್ ಮಥುರಾಕ್ಕೆ ಹೋಗಿ ಸೂರದಾಸರನ್ನು ಭೇಟಿ ಮಾಡಲೂ ನಿರ್ಧರಿಸಿದನಂತೆ.

ಸೂರದಾಸ – ಅಕ್ಬರರ ಭೇಟಿ

ಸೂರದಾಸ – ಅಕ್ಬರ್ ಭೇಟಿಯ ಕಥೆ ಸ್ವಾರಸ್ಯವಾಗಿದೆ. ಅಕ್ಬರ್ ಅಬುಲ್ ಫಜಲ್‌ನ ಮೂಲಕ ಸೂರದಾಸರಿಗೆ ಒಂದು ಪತ್ರ ಬರೆಸಿ ತನ್ನನ್ನು ಮಥುರಾದಲ್ಲಿ ಭೇಟಿಯಾಗಲು ವಿನಂತಿಸಿದ.

ನಿಶ್ಚಿತ ದಿನ ಸೂರದಾಸರು ತಮ್ಮ ಸೇವಕರ ಜೊತೆಗೆ ಬಾದಶಹನ ಭೇಟಿಗೆ ಬಂದರು. ಬಹಳ ಆದರ ಗೌರವಗಳಿಂದ ದಾಸರನ್ನು ಬರಮಾಡಿಕೊಂಡ ಬಾದಶಹ. “ಯಾವುದಾದರೂ ಕೀರ್ತನೆ ಹಾಡಿ ಸಂತೋಷಪಡಿಸಬೇಕು” ಎಂದ. ಸೂರದಾಸರು “ಬಿಲಾವಲ್” ರಾಗದ ಒಂದು ಗೀತೆ ಹಾಡಿದರು. ಅದು ವೈರಾಗ್ಯ, ಭಕ್ತಭಾವದ ಸಾಂಸಾರಿಕೆತೆಯಿಂದ ಚೇತರಿಸಿಕೊಳ್ಳಲು ಉಪದೇಶ ಮಾಡುವ ಹಾಡು. ಸುಂದರ ಉಪಮೆ, ಸರಸ ಶಬ್ದಗಳಿಂದ ಕೂಡಿದ ಈ ಗೀತೆಯಲ್ಲಿ ಪ್ರೇಮ, ಭಕ್ತಿಯ ಪ್ರತಿಪಾದನೆ, ಭಗವಂತನ ಅಪಾರ ಶಕ್ತಿಯ ಮಹಿಮೆ ಕೂಡಿಕೊಂಡಿತ್ತು.

ಅಕ್ಬರನ ಆಸ್ಥಾನದಲ್ಲಿ ಸೂರದಾಸರು.

ಹಾಡು ಕೇಳಿ ಸಂತಸಪಟ್ಟ ಬಾದಶಹ, “ನನಗೆ ದೇವರು ರಾಜ್ಯ, ಐಶ್ವರ್ಯ ಕೊಟ್ಟಿದ್ದಾನೆ. ಗುಣವಂತರು ತನ್ನ ಯಶೋಗಾನ ಮಾಡುತ್ತಾರೆ. ತಾವು ಕೂಡ ಹಾಗೇ ಮಾಡಬಾರದೇಕೆ?” ಎಂದ. ಆಗ ಸೂರದಾಸರು ಗೋಪಿಸಂವಾದ ಪ್ರಸಂಗದ ಒಂದು ಗೀತೆ ಹಾಡಿದರು. “ಶ್ರೀಕೃಷ್ಣನನ್ನು ಬಿಟ್ಟು ಬೇರೆಯವರ ಯಶೋಗಾನ ಮಾಡುವುದು ಅಸಾಧ್ಯ. ಮನಸ್ಸಿನಲ್ಲಿ ಶ್ರೀಕೃಷ್ಣನ ರೂಪ, ಲಲಿತ ಮನೋಹರ ಮೂರ್ತಿ, ಆತನ ಲೀಲಾ ಪ್ರಸಂಗಗಳಲ್ಲದೆ ಬೇರೇನೂ ಇಲ್ಲ. ಬಿಂದಿಗೆಯಲ್ಲಿ ಸಾಗರವು ತುಂಬಲಾರದು. ಬಿಂದಿಗೆ ತುಂಬಿದ್ದರೆ ಸಾಗರದ ಒಂದು ಹನಿಯೂ ಅದರಲ್ಲಿ ಹಿಡಿಸಲಾರದು. ಶ್ರೀಕೃಷ್ಣನ ಪ್ರೇಮ ತುಂಬಿದ ಹೃದಯದಲ್ಲಿ ದೇಶಾಧಿಪತಿಯ ವರ್ಣನೆ ಇರುವುದು, ಬರುವುದು ಹೇಗೆ ಸಾಧ್ಯ? ವಿರಹೀ ಗೋಪಿಯರಂತೆ ಸೂರದಾಸರ ಕಣ್ಣುಗಳು ಶ್ರೀಕೃಷ್ಣನ ದರ್ಶನಕ್ಕಾಗಿ ಬಾಯಾರಿ ಚಡಪಡಿಸುತ್ತವೆ” ಎಂದು ಅದರ ಅರ್ಥ. ಈ ಹಾಡಿನಿಂದ ಅಕ್ಬರನಿಗೆ ಅಸಮಾಧಾನವಾಯಿತು. ಆದರೂ ಸೂರದಾಸರು ಕೃಷ್ಣಭಕ್ತಿಗೆ ಮೆಚ್ಚಿದ. ದೈವಭಕ್ತ ಸೂರದಾಸರ ಬಗೆಗೆ ಗೌರವಭಾವ ತಳೆದ. “ತಾವು ಇಲ್ಲಿಯ ತನಕ ಬಂದು ನನಗೆ ದರ್ಶನವಿತ್ತು ಉಪಕಾರ ಮಾಡಿದಿರಿ. ಹಾಡಿನಿಂದ ಮನಸ್ಸು ಸಂತಸಪಡಿಸಿದ್ದೀರಿ. ನನ್ನಿಂದ ಏನನ್ನಾದರೂ ಸ್ವೀಕರಿಸಬೇಕು. ತಮಗೇನು ಬೇಕು ಕೇಳಿ ಕೊಡುತ್ತೇನೆ” ಎಂದ ಅಕ್ಬರ್. ಮುಗುಳುನಕ್ಕ ಸೂರದಾಸರು ತುಸುಹೊತ್ತು ಸುಮ್ಮನಿದ್ದರು. ಅನಂತರ ವಿನಯದಿಂದ, “ಇನ್ನೊಮ್ಮೆ ನನ್ನನ್ನು ಕರೆಸಬಾರದು, ನನ್ನನ್ನು ಭೇಟಿ ಮಾಡಲು ಬಯಸಬಾರದು, ಇದೇ ನನ್ನ ಬಯಕೆ” ಎಂದರಂತೆ. ಅಕ್ಬರ್ ಅವರ ಬೇಡಿಕೆ ಕೇಳಿ ಬೆರಗಾದ. ಖಿನ್ನನಾದ.

ಈ ಭೇಟಿಯಿಂದ ಸೂರದಾಸರಿಗೆ ಸಂತೋಷವಾಗಲಿಲ್ಲ. ಒಡನೆಯೇ ಶ್ರೀನಾಥನ ಸನ್ನಿಧಿ ಗೋವರ್ಧನಗಿರಿಗೆ ಧಾವಿಸಿದರು.

ಈ ಘಟನೆಯ ನಂತರ ಬಾದಶಹ ಅಕ್ಬರ್ ಸೂರದಾಸರ ಗೀತೆಗಳನ್ನು ಸಂಗ್ರಹಿಸತೊಡಗಿದನಂತೆ. ಪಾರಸೀಲಿಪಿಯಲ್ಲಿ ಅವುಗಳನ್ನು ಬರೆಸಿ, ಅನುವಾದ ಮಾಡಿಸಿ, ಓದಿ ಅವುಗಳ ಕಾವ್ಯ ಸೌಂದರ್ಯ, ಭಾವಮಾಧುರ್ಯ ಆಸ್ವಾದಿಸುತ್ತಿದ್ದನಂತೆ.

‘ಸೂರ ಸಾಗರ’

ಸೂರ ಸಾಗರದಲ್ಲಿರುವ ಪದ್ಯಗಳನ್ನೆಲ್ಲ ಸೂರದಾಸರೇ ಬರೆದರು ಎಂದು ಬಹುಜನ ವಿದ್ವಾಂಸರ ಅಭಿಪ್ರಾಯ.

ಸಾಗರದಂತೆ ವಿಶಾಲವಾದ ಹರಹು ಉಳ್ಳ ಈ ಗ್ರಂಥದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪದ್ಯಗಳಿವೆ. ಒಂದೂಕಾಲು ಲಕ್ಷ ಪದ್ಯಗಳನ್ನು ಸೂರದಾಸರು ರಚಿಸಿದ್ದಾರೆಂದು ಜನರ ನಂಬಿಕೆ, ಆದರೆ ಅತಿ ಅವು ಲಭ್ಯವಿಲ್ಲ.

ಭಾಗವತದಂತೆ ಹನ್ನೆರಡು ಸ್ಕಂಧ (ಭಾಗ)ಗಳುಳ್ಳ ಈ ಗ್ರಂಥದಲ್ಲಿ ಶ್ರೀಕೃಷ್ಣನ ಬಾಲ್ಯ, ಕೌಮರ್ಯ, ತಾರುಣ್ಯಗಳನ್ನು ರಸವತ್ತಾಗಿ ವರ್ಣಿಸಿದ್ದಾರೆ. ದಶಮಸ್ಕಂಧದಲ್ಲಿ ವಿಸ್ತಾರವಾದ ವಿವರಣೆ. ಈ “ಸಾಗರ”ದಲ್ಲಿ “ಬಿಂದುಗಳು ಸೇರಿವೆ. ವಿನಯ, ಭಕ್ತಿಗೆ ಸಂಬಂಧಿಸಿದ ಗೀತೆಗಳನ್ನು ಬಿಟ್ಟರೆ ಮತ್ತೆಲ್ಲವೂ ಶ್ರೀಕೃಷ್ಣಮಯ. ಸೂರಸಾಗರದಂತಹ ಕಾವ್ಯ. ಸಂಗೀತ, ಸಾಹಿತ್ಯಗಳ ತ್ರಿವೇಣಿ ಸಂಗಮ ಬೇರೊಂದು ಇಲ್ಲ.

ಶ್ರೀನಾಥನೇ ಶಿಷ್ಯ

ಸೂರದಾಸರನ್ನು ಕುರಿತು ಒಂದು ಸ್ವಾರಸ್ಯವಾದ ಕಥೆಯನ್ನು ಹೇಳುತ್ತಾರೆ.

ಒಮ್ಮೆ ಸೂರದಾಸರು ಊಟ ಮಾಡುತ್ತಿದ್ದರು. ಸೇವಕರಾರೂ ಹತ್ತಿರವಿರಲಿಲ್ಲ. ಗಂಟಲಲ್ಲಿ ತುತ್ತು ಸಿಕ್ಕಿಕೊಂಡಿತ್ತು. “ನೀರು, ನೀರು” ಎಂದು ಕೂಗಿದರು. ನೀರಿನ ಗಿಂಡಿಗಾಗಿ ತಡಕಾಡಿದರು. ಅದು ತುಸು ದೂರದಲ್ಲಿತ್ತು. ಶಿಷ್ಯರನ್ನು ಕರೆದರು. ಯಾರಿಗೂ ಕೇಳಿಸಲಿಲ್ಲ. ಆಗ ಗೋವರ್ಧನಗಿರಿಯ ಶ್ರೀನಾಥಸ್ವಾಮಿ ಭಕ್ತನ ಕೂಗು ಕೇಳಿ ಓಡಿಬಂದ. ಶಿಷ್ಯನ ರೂಪದಲ್ಲಿ ನಿಂತ. ನೀರಿನ ಗಿಂಡಿ ಸೂರದಾಸರ ಕೈಗಿತ್ತು ಗಾಳಿ ಬೀಸುತ್ತ ದೂರ ನಿಂತ. ಸೂರದಾಸರು, “ಎಲ್ಲಿ ಹೋಗಿದ್ದೆಯಪ್ಪಾ? ತುತ್ತು ಗಂಟಲಲ್ಲಿ ಸಿಕ್ಕಿಕೊಂಡಿತ್ತು” ಎಂದು ನೀರು ಕುಡಿದರು. “ಇಲ್ಲೇ ಇದ್ದೆನಲ್ಲಾ! ನಿಮ್ಮ ಬಳಿಯೇ ಇದ್ದೆ” ಎಂದ ಶಿಷ್ಯ ತಡವಾದುದಕ್ಕೆ ಕ್ಷಮೆ ಯಾಚಿಸಿದ. ಊಟ ಮುಗಿಯಿತು. ಕೈತೊಳೆದು ಒಂದೆಡೆ ಕೂತರು.

ತುಸು ಹೊತ್ತಿನಲ್ಲಿ ಶಿಷ್ಯರು ಬಂದರು. ದಾಸರ ಊಟ ಮುಗಿದಿತ್ತು. ನೀರಿನ ಗಿಂಡಿಯೂ ಅವರ ಹತ್ತಿರ. ಕೈಯೂ ತೊಳೆದಾಗಿದೆ. ಪರಸ್ಪರ ಮುಖ ನೋಡಿಕೊಂಡರು. ಏನೂ ಮಾತಾಡಲಿಲ್ಲ. ಏನನ್ನೂ ಕೇಳಲಿಲ್ಲ.

ಇಂಥ ಕಥೆಗಳನ್ನು ಎಲ್ಲ ಶ್ರೇಷ್ಠ ಭಕ್ತರನ್ನು ಕುರಿತು ಜನ ಹೇಳುತ್ತಾರೆ.

‘ದೇವರು ಕರೆಯುತ್ತಿದ್ದಾನೆ’

ಸೂರದಾಸರು ೧೫೮೦ರಲ್ಲಿ ಈ ಲೋಕ ಬಿಟ್ಟರು ಎಂದು ಕಾಣುತ್ತದೆ. “ಚೌರಸೀ ವೈಷ್ಣವನ್ ಕೀ ವಾರ್ತಾ”ದಲ್ಲಿ ವಿವರಿಸಿದ ಸೂರದಾಸರ ಅಂತ್ಯಕಾಲದ ವಿವರಣೆ ಈ ರೀತಿ ಇದೆ.

ಒಂದು ದಿನ ಶ್ರೀನಾಥಸ್ವಾಮಿಯ ಪ್ರಾತಃಕಾಲದ ದರ್ಶನದನಂತರ ಮಂಗಳಾರತಿ ನಡೆಯಿತು. ಸೂರದಾಸರು ನಿತ್ಯದಂತೆ ಆರತಿ ಕೀರ್ತನೆ ಹಾಡಿದರು. ಇದ್ದಕ್ಕಿದ್ದಂತೆಯೇ ಅವರಿಗೆ ಶ್ರೀನಾಥಸ್ವಾಮಿ ತನ್ನನ್ನು ಕರೆಯುತ್ತಿರುವಂತೆ ಭಾಸವಾಯಿತು.

‘ಬಂದೆ ಸ್ವಾಮೀ ಬಂದೆ’ ಎಂದು ಸೂರದಾಸರು ಎದ್ದರು. “ದೇವರು ನನ್ನನ್ನು ಕರೆಯುತ್ತಿದ್ದಾನೆ. ನಾನಿನ್ನು ಅವನ ಬಳಿ ಹೊರಡಬೇಕು” ಎಂದು ಸೂರದಾಸರು ನಿಧಾನವಾಗಿ ಗೋವರ್ಧನಗಿರಿಯಿಂದ ಇಳಿದು ಪರಸೋಲಿಗೆ ನಡೆದರು. ಪರಸೋಲಿ ಶ್ರೀಕೃಷ್ಣನ “ರಾಸಲೀಲಾ” ಕ್ಷೇತ್ರ. ಅಲ್ಲಿ ಒಂದು ಕಡೆ ಶ್ರೀನಾಥ ಮಂದಿರದ ಧ್ವಜದ ಕಡೆ ಮುಖ ಮಾಡಿ ನೆಲದ ಮೇಲೆ ಮಲಗಿದರು.

ಎರಡನೆಯ ಮಂಗಳಾರತಿಯ ಹೊತ್ತಿಗೆ ಸೂರದಾಸರನ್ನು ಕಾಣದ ವಿಠಲನಾಥರು ಗಾಬರಿಯಾದರು.
“ಸೂರದಾಸರೆಲ್ಲಿ”

“ಅವರು ಪರಸೋಲಿಯ ಕಡೆ ಹೋಗುತ್ತಿರುವುದನ್ನು ನೋಡಿದೆ” ಶಿಷ್ಯನೊಬ್ಬ ಹೇಳಿದ.

“ಸೂರದಾಸರ ಕೊನೆಗಾಲ ಸಮೀಪಸಿತು. ಶ್ರೀಕೃಷ್ಣನ ರಾಸಲೀಲಾ ಕ್ಷೇತ್ರದಲ್ಲಿ ಶರೀರ ತ್ಯಜಿಸಿ, ಶ್ರೀಕೃಷ್ಣನ ನಿತ್ಯಲೀಲೆಯಲ್ಲಿ ಸೇರಲು ಹೋಗಿದ್ದಾರೆ” ಎಂದು ವಿಠಲನಾಥರಿಗೆ ಅರ್ಥವಾಯಿತು. ಅಲ್ಲಿದ್ದ ಇತರ ಸಂತರನ್ನು ಸೇವಕರನ್ನೂ ಕರೆದು,

“ಹೋಗಿ ಯಾರಿಗೆ ಏನು ಬೇಕೋ ಅದನ್ನು ಪಡೆದುಕೊಳ್ಳಿ. ನಾನು  ಮಹಾಪೂಜೆ ಮಂಗಳಾರತಿ ಮುಗಿಸಿಬರುವೆನು. ದೇವರ ಇಚ್ಛೆಯಿದ್ದರೆ ಅದುತನಕ ಅವರು ಬದುಕಿರುತ್ತಾರೆ” ಎಂದರು.

ಮಧ್ಯಾಹ್ನದ ಮಂಗಳಾರತಿಯವರೆಗೂ ವಿಠಲನಾಥರು ಕ್ಷಣಕ್ಷಣಕ್ಕೂ ಸುದ್ದಿ ತಿಳಿಯುತ್ತಿದ್ದರು.

‘ಅವರು ಮೂರ್ಛೆಹೋದಂತೆ ಮಲಗಿದ್ದಾರೆ. ಮಾತಾಡುತ್ತಿಲ್ಲ’ ಎಂಬ ಸುದ್ದಿ ಬರುತ್ತಿತ್ತು.

‘ಜನ್ಮ ಜನ್ಮಾಂತರದಲ್ಲಿಯೂ-’

ವಿಠಲನಾಥರು ಮಹಾಪೂಜೆ ಮುಗಿಸಿಬಂದರು. ಅವರ ಜೊತೆಗೆ ಇತರ ಪ್ರಮುಖರೂ ಬಂದರು.

“ಸೂರದಾಸ್, ಹೇಗಿದ್ದೀರಾ” ವಿಠಲನಾಥರು ಮಾತಾಡಿಸಿದರು. ಚೇತರಿಸಿಕೊಂಡ ಸೂರದಾಸರು ವಿಠಲನಾಥನಿಗೆ ನಮಸ್ಕರಿಸಿ, “ನಾನು ಕೃತಾರ್ಥನಾದೆ, ನೀವು ಬಂದಿರಲ್ಲ! ನಿಮಗಾಗಿ ಕಾಯುತ್ತಿದ್ದೆ” ಎಂದು ಸಾಷ್ಟಾಂಗ ವಂದಿಸಿ ಗುರುವಿನ ಗುಣಗಾನ ಮಾಡಿದರು.

ಪ್ರಾಯದಲ್ಲಿ ಚಿಕ್ಕವರು. ತನ್ನ ಗುರುವಲ್ಲ, ಆದರು ಗುರುಸ್ಥಾನದಲ್ಲಿ ಗೋಸ್ವಾಮಿ ವಿಠಲನಾಥರನ್ನೇ ತನ್ನ ಗುರುವೆಂದು, ಗುರುವೇ ದೇವರೆಂದು ಸ್ತುತಿಮಾಡಿದರು.

‘ಕೃಷ್ಣನಿದ್ದ ಸ್ಥಳದಲ್ಲಿ ಸೌಭಾಗ್ಯ ತಮ್ಮಿಂದ ದೊರೆಯಿತು. ರಾಧಾಕೃಷ್ಣರ ಅನನ್ಯ ಪ್ರೇಮಭಾವ ನನ್ನ ಮನದಲ್ಲಿ ನೆಲೆಯಾದುದು ತಮ್ಮ ಅನುಗ್ರಹದಿಂದ. ಜನ್ಮಜನ್ಮಾಂತರದಲ್ಲಿಯೂ ಇದೇ ಸ್ಥಳದಲ್ಲಿ ರಾಧಾಕೃಷ್ಣರ ಸನ್ನಿಧಿಯಲ್ಲಿ ಕುಟೀರ ಮಾಡಿಕೊಂಡು ವಾಸಿಸುವ ಪುಣ್ಯ ದೊರೆಯಲಿ ಎಂಬ ಆಸೆ ನನ್ನ ಮನದಲ್ಲಿರುವುದು ತಮ್ಮ ದಯದಿಂದಲೇ’

ಎಂಬರ್ಥ ಬರುವ ಗೀತೆಯನ್ನು ಸೂರದಾಸರು ಹಾಡಿದರು.

ಆಚಾರ್ಯ ವಿಠಲನಾಥರು, ಶಿಷ್ಯವೃಂದ ನೋಡುತ್ತಿದ್ದಂತೆಯೇ ಯಮುನೆಯ ತೀರದಲ್ಲಿ ವಿಹರಿಸುತ್ತಿದ್ದ ಸೂರದಾಸರೆಂಬ ಕೃಷ್ಣಭಕ್ತಿಯ ಹಡಗು ಕೃಷ್ಣಭಕ್ತಿಯ ಸಾಗರದಲ್ಲಿ ತೇಲಿಹೋಯಿತು.