‘ಅದೆಷ್ಟು ಸಾವಿರ ವರ್ಷಗಳ ಹಿಂದೆಯೊ ಏನೋ, ಕ್ರಿಸ್ತನಿಗೂ ಹಿಂದೆ. ಬುದ್ಧನಿಗೂ ಹಿಂದೆ. ಕಾಣಿಸ್ತ ಇದೆಯ? ಎದುರು ಬಂಡೆ ಮೇಲೆ? ಅದು ಆ ಮಾನವ ಬಿಡಿಸಿದ ಚಿತ್ರ. ಕೆಮ್ಮಣ್ಣನ್ನೂ ಹಂದಿಯ ರಕ್ತವನ್ನೂ ಬಳಸಿರಬೇಕು. ಎಷ್ಟು ಕಂದಿದರೂ ಕಾಣುವಂತೆ ಇದೆ. ಖಂಡಿತ ನಾನು ನೀನು ನೋಡಿ ಮೆಚ್ಚಲೆಂದು ಇದನ್ನು ನಮ್ಮ ಪೂರ್ವಿಕ ಚಿತ್ರಿಸಿದ್ದಲ್ಲ. ಕಾಲಿರುವ ಯಾವ ಪ್ರಾಣಿಗೂ ಇಲ್ಲಿ ಬರುವುದು ಎಷ್ಟು ಕಷ್ಟವೆಂದು ನೀನೆ ಅನುಭವಿಸಿದೀಯ’.

ಕಾಲೇಜು ದಿನಗಳಿಂದಲೂ ಜೀವಗಳಲ್ಲನಾಗಿದ್ದ ಕೃಷ್ಣಸ್ವಾಮಿಯ ಕಡೆ ತುಂಟಾಗಿ ನೋಡಿ ಸೋಮನಾಥ ಮಾತನಾಡಿದ:

‘ಯಾವುದೋ ತಾಂತ್ರಿಕ ಕಟ್ಟಳೆಯನ್ನು ನಡೆಸಲಿಕ್ಕಾಗಿ ಈ ಚಿತ್ರ ಹುಟ್ಟಿರಬಹುದು ಎಂದು ನನ್ನ ಅನುಮಾನ. ಋಗ್ವೇದದ ಋಷಿಗಳು ಮಂತ್ರಗಳನ್ನು ಪಡೆಯುತ್ತಿದ್ದ ಕಾಲದಲ್ಲೇ ಇರಬಹುದು. ಈ ನಮ್ಮ ಪೂರ್ವಿಕ ಈ ಚಿತ್ರವನ್ನು ಪಡೆದಿದ್ದಾನೆ. ಆವೇಶದಲ್ಲಿ ಪಡೆದಿದ್ದಾನೆ. ಕೊಲ್ಲಲು ಓಡುತ್ತಿರುವ ಬೇಟೆಗಾರನನ್ನೂ ಬದುಕಲು ಓಡುತ್ತಿರುವ ಜಿಂಕೆಯನ್ನೂ ಸಮದೃಷ್ಟಿಯಲ್ಲೂ ಬೆರಗಿನಲ್ಲೂ ಕಂಡಿದ್ದಾನೆ. ’

ಸೋಮನಾಥ ಬೊಟ್ಟು ಮಾಡಿ ತೋರಿಸಿದ್ದನ್ನು ಕೃಷ್ಣಸ್ವಾಮಿ ವಿಧೇಯನಾಗಿ ನೋಡಿದ.

ಒಂದು ಓಡುವ ಜಿಂಕೆ, ಅದರ ಹಿಂದೆ ಈಟಿ ಹಿಡಿದ ಬೆನ್ನಟ್ಟುತ್ತಿರುವ ಮನುಷ್ಯ. ದಿಟ್ಟಿಸುತ್ತಿದ್ದಂತೆ ಕಣ್ಣಿಗೆ ಚಿತ್ರ ಉದ್ಭವಿಸುತ್ತ ದಿಟವಾಯಿತು.

ಅರ್ಧರ್ಧ ಪಾದಗಳನ್ನು ಮಾತ್ರ ಊರಬಹುದಾದ ಕಡಿದಾದ ಒಂದು ಬಂಡೆಯಂಚಿನ ಮೇಲೆ ನಡೆಯಲು ಇದ್ದ ಆಸರೆಯೆಂದರೆ ಒಂದು ದೈತ್ಯಮರದ ನೆತ್ತಿಯ ಕೊಂಬೆ. ಈ ಮರ ಊರಿನಿಂತದ್ದು ಎಲ್ಲೋ ಪಾತಾಳದಲ್ಲಿ. ಕಣ್ಣಿಗೆ ಮರದ ಮೂಲ ಕಾಣಿಸದು. ಯಾಕೆ? ದೈತ್ಯಬಾಹುಗಳಿಂತಿದ್ದ ಅದರ ಕೊಂಬೆಗಳನ್ನು ಚಾಚಿಕೊಂಡ ಅದರ ಕಾಂಡವೂ ಕಾಣಿಸದು. ತಮ್ಮ ಪಾದಗಳಿಗೆ ಅವಕಾಶವನ್ನು ಕಿಂಚಿತ್ತಾಗಿ ದಯಪಾಲಿಸಿದ ಕಡಿದಾದ ಬಂಡೆಗೆ ಈ ಕೊಂಬೆಗಳು ಅಲ್ಲಿ ಇಲ್ಲಿ ತೂರಿ ಒತ್ತಿಕೊಂಡಿದ್ದು, ಇನ್ನೂಹೆಚ್ಚಿನ ಅವಕಾಶ ಬಯಸಿ ತಲೆಯ ಎತ್ತರದಲ್ಲಿ ಬಂಡೆಯ ಆಚೆಯೂ ಬೆಳೆಯಲು ಹವಣಿಸಿದ್ದವು. ಈ ಕೊಂಬೆಗಳನ್ನು ಒಂದರ ನಂತರ ಇನ್ನೊಂದರಂತೆ ಬಲಗೈಯಲ್ಲಿ ಹಿಡಿದು ತಮ್ಮ ಎದೆತಾಗುವಷ್ಟು ಎತ್ತರದ ಎದುರಿನ ಬಂಡೆಯ ಹಾಸನ್ನು ಎಡಗೈಯಿಂದ ತಡಕಾಡುತ್ತ ಸರಿದೂ ಸರಿದೂ ಸೋಮನಾಥನ ಗುಪ್ತ ತೆವಲಿನ ಈ ದೃಶ್ಯವನ್ನು ಕಾಣಲೆಂದೇ ಕೃಷ್ಣಸ್ವಾಮಿ ಜೀವವನ್ನು ಕೈಯಲ್ಲಿ ಹಿಡಿದು ಬಂದದ್ದು.

ಇಷ್ಟನ್ನು ಕಾಣಲು ಅದೆಷ್ಟು ಆತಂಕ ಪಡಬೇಕಾಯಿತು ಎಂದು ಚಿತ್ರ ಕಣ್ಣಲ್ಲಿ ಮೂಡುತ್ತ ಹೋದದ್ದೆ ಕೃಷ್ಣಸ್ವಾಮಿಗೆ ನಿರಾಶೆಯಾಯಿತು. ಆರಾಮಾಗಿ ಭೀಮ್ ಭೈಟಕ್‌ನಲ್ಲಿ ಇಂತಹ ಎಷ್ಟು ಚಿತ್ರಗಳನ್ನು ಅವನು ನೋಡಿಲ್ಲ? ಆ ಬಗ್ಗೆ ಲೆಕ್ಚರ್ ಕೊಟ್ಟಿಲ್ಲ.

ಕೃಷ್ಣಸ್ವಾಮಿ ಮರದ ಕೊಂಬೆಯನ್ನೂ ಎದುರಿನ ಬಂಡೆಯನ್ನೂ ಗಟ್ಟಿಯಾಗಿ ಹಿಡಿದು, ಆಯ ತಪ್ಪದಂತೆ ಕೊಂಚ ಸಮಾಧಾನಿಸಿ ಸುತ್ತಲೂ ನೋಡಿದ. ತಾವು ನಿಂತ ತಾಣದ ಆಚೆ ಈಚೆ ಏನೂ ಕಾಣಿಸದು – ಶ್ರುಭವಾದ ನೀಲ ಆಕಾಶಬಿಟ್ಟರೆ. ಬೆನ್ನಿನ ಹಿಂದೆ ಐವತ್ತೊ ಅರವತ್ತೊ ಅಡಿಗಳ ತಳದಿಂದ ಬಂಡೆಗಳನ್ನು ಸೀಳಿ ಬೆಳೆದು ನಿಂತ ವೃಕ್ಷಗಳು. ಅವುಗಳ ಹಿಂದೆ ದೂರದಲ್ಲೊಂದು ಹಳ್ಳಿಯಿರಬಹುದು. ಇನ್ನೂ ದೂರದಲ್ಲಿ ಭೂಪಟದ ಪ್ರಕಾರ ಅರಬ್ಬೀಸಮುದ್ರ. ಬೆನ್ನಿಗೆ ಪ್ರಖರವಾದ ಪಶ್ಚಿಮದ ಸೂರ್ಯ.

‘ನಾನು ನೀನು ಬಿಟ್ಟರೆ ಮತ್ತೆ ಯಾರೂ ಈ ಕಾಲದಲ್ಲಿ ಈ ದೃಶ್ಯವನ್ನು ನೋಡಿರಲಾರರು. ಈ ಮರದ ಬುಡದಲ್ಲಿ ಈ ತಾಣವನ್ನು ಕಾಯುವ ಭೂತಗಳು ಇವೆ. ನಾಗದೇವತೆ ಇದೆ. ಯಾರೂ ಈ ಮರಗಳನ್ನು ಹತ್ತಿ ಕಡಿಯುವುದಿಲ್ಲ. ಒಣಗಿ ಬಿದ್ದ ಜಿಗ್ಗನ್ನೂ ಆರಿಸುವುದಿಲ್ಲ’.

ಕೃಷ್ಣಸ್ವಾಮಿಗೆ ಸದ್ಯದ ಚಿಂತೆ: ಸುಮಾರು ಎರಡು ಕಿಲೋಮೀಟರ್ ಆಚೆ ಬಿಟ್ಟು ಬಂದ ಜೀಪನ್ನು ಮತ್ತೆ ಹೇಗೆ ತಲುಪುವುದು? ಹೀಗೆ ನಿಂತಿದ್ದು ಕಾಲುಗಳು ಒತ್ತಿ ಬಿಟ್ಟರೆ ಹಿಂದಕ್ಕೆ ಹೇಗೆ ಹೋಗುವುದು?

ಎರಡು ಕೈಗಳನ್ನೂ ಎದುರು ಬಂಡೆಯ ಮೇಲೆ ಊರಿ, ಮೈಭಾರ ಮುಂದಕ್ಕೆ ಹಾಕಿ ನಲವತ್ತು ಅಡಿ ಉದ್ದ, ಐವತ್ತು ಅಡಿ ಅಗಲವಾದರೂ ಇದ್ದ ಬಂಡೆಯನ್ನೇನೋ ಏರಿ ಬಿಡಬಹುದು. ಆದರೆ ಕಾಲಿಗೆ ಮತ್ತೆ ಅದೇ ಸಂದು ಸಿಗುವಂತೆ ಕೆಳಗೆ ಇಳಿಯುವುದು ಅಷ್ಟು ಸುಲಭವಲ್ಲ. ಮಾಸಿದ ಕೆಂಬಣ್ಣದ ಚಿತ್ರವನ್ನು ಪಡೆದ ಎದುರಿನ ಕಪ್ಪು ಬಂಡೆಯೋ? ಚಿತ್ರವನ್ನು ಪಡೆದ ಪ್ರದೇಶ ಒಂದು ಗುಹೆಯಂತಿದ್ದು ಅದರ ಮೇಲೆ ನುಣುಪಾಗಿ, ನೇರವಾಗಿ, ನೆತ್ತಿಯಲ್ಲಿ ಚೂಪಾಗಿ, ಒಂದು ಬೃಹತ್ ಲಿಂಗದಂತೆ ಆಕಾಶಕೆ ಎತ್ತಿಕೊಂಡು ನಿಂತಿದೆ. ಅದನ್ನು ಏರಿ ಮೇಲೆ ಹೋಗುವಂತಿಲ್ಲ, ಆಚೆಯೇನಿದೆ ಕಾಣುವಂತಿಲ್ಲ.

ತಾನು ಸೋಮನಾಥನ ಕಲೆಗಾರಿಕೆಯ ಮೇಲೆ ಇಂಗ್ಲಿಷಿನಲ್ಲಿ ಬರೆಯಬೇಕೆಂದಿದ್ದ ಪುಸ್ತಕದಲ್ಲಿ, ಅವನ ಅಲೌಕಿಕ ಹೊಳಪಿನ ವಿಲಕ್ಷಣ ಚಿತ್ರಗಳನ್ನು ವ್ಯಾಖ್ಯಾನಿಸಲು ಈ ಅನುಭವ ಅಗತ್ಯವಾದೀತು ಎಂಬುದೊಂದೇ ಸಮಾಧಾನ. ಸೋಮನಾಥನ ಕಲೆಯ ಗುಣಕ್ಕೂ ದೋಷಕ್ಕೂ ಅಥವಾ ಗುಣದ ಅತಿರೇಕತೆಯಿಂದಾಗಿಯೇ ಹುಟ್ಟಿಕೊಳ್ಳುವ ಕೊರತೆಗೂ… ಇತ್ಯಾದಿಯಾಗಿ ತನ್ನ ಸೊಫಿಸ್ಟಿಕೇಟೆಡ್ ಸೊಗಸಿನ ಪದ ಗುಚ್ಛಗಳಲ್ಲಿ ಹವಣಿಸುತ್ತಿದ್ದಾಗ ಕೃಷ್ಣಸ್ವಾಮಿಗೆ ಏನೋ ಕಂಡಂತಾಯಿತು. ಬೋಳಾದ ಬಂಡೆಯ ಮೇಲೆ ಬಿದ್ದ ಬೆಳಕಿನಲ್ಲಿ ಉಬ್ಬು ಚಿತ್ರದಂತೆ ಕಂಡದ್ದು: ಒಂದು ಓತಿಕೇತ.

ಪ್ರಾಗೇತಿಹಾಸ ಕಾಲದಿಂದ ಹುಟ್ಟುತ್ತ, ಸಾಯುತ್ತ, ತೆವಳುತ್ತ, ಸಿಕ್ಕಿದ್ದನ್ನು ಸಿಕ್ಕಾಗ ತಿನ್ನುತ್ತ, ಇರುವ ಕ್ಷಣದಲ್ಲಿ ಇರುವ ಜಾಗದ ಬಣ್ಣವನ್ನು ಪಡೆಯುತ್ತ, ಶಾಶ್ವತವಾಗಿ ಉಳಿದುಬಿಟ್ಟ ಈ ಜಂತು ಬಣ್ಣ ಕಂದುತ್ತ ಹೋದ ಈ ಚಿತ್ರದ ಜೊತೆ ಸೋಮನಾಥನ ಕಣ್ಣಿಗೆ ಏಕೆ ಬಿದ್ದಿಲ್ಲ? ಅಥವಾ ಬಿದ್ದಿದೆಯೊ? ಸೋಮನಾಥ ತನ್ನ ಚಿತ್ರದ ಬಲ ಬುಡದಲ್ಲಿ ಹಾಕುತ್ತಿದ್ದ ಸಹಿಯಂತೆ ಓತಿಕೇತ ಕಾಣಿಸಿಕೊಂಡಿತು.

ಸೋಮನಾಥ ಮೈ ಪರಿವೆಯಿಲ್ಲದವನಂತೆ ಉಕ್ಕುತ್ತ ಮತ್ತೆ ಮಾತಿಗೆ ಶುರುಮಾಡಿದ. ಹಿಡಿದ ಕೊಂಬೆ ಕಡಿದು ಕೊಂಡರೆ, ಕಾಲು ಬತ್ತಿ ಬಂದು ಜಾರಿದರೆ ಎಂದು ಆತಂಕಪಡುತ್ತ ಕೃಷ್ಣಸ್ವಾಮಿ ಕೇಳಿಸಿಕೊಂಡ.

ಬಾಲಕನಾಗಿದ್ದಾಗ ಸೋಮನಾಥನಿಗೆ ಜೇನಿನ ಬೇಟೆಯ ಹುಚ್ಚು. ಅಅಡಿಕೆ ತೋಟದ ವ್ಯವಸಾಯ, ಹೋಮ ಹವನಗಳ ಮಂತ್ರ – ಇಷ್ಟು ಬಿಟ್ಟು ಇನ್ನನೂ ಗೊತ್ತಿರದ ತಂದೆಯ ಕಣ್ಣಿಗೂ ಬೀಳದಂತೆ, ಕೆಲಸದ ಆಳುಗಳಿಗೂ ಮನೆಗೆ ಬಂದು ಹೋಗುವ ನೆಂಟರಿಷ್ಟರಿಗೂ ಗಂಜಿ ಕಡುಬು ಇತ್ಯಾಗಳ ತಯ್ಯಾರಿಯಲ್ಲಿಯೇ ಮಗ್ನಳಾಗಿದ್ದ ತಾಯಿಯ ಕಣ್ಣಿಗೂ ಬೀಳದಂತೆ ಸ್ಕೂಲಿಗೆ ಚಕ್ಕರ್ ಹಾಕಿ ಅಡ್ಡಾಡುವುದೇ ಅವನ ಉದ್ಯೋಗ. ಸ್ಲೇಟು ಪುಸ್ತಕಗಳಿದ್ದ ಚೀಲವನ್ನು ಒಂದು ದೊಡ್ಡ ಹಲಸಿನ ಮರದ ಪೊಟರೆಯಲ್ಲಿಟ್ಟು ಅದರಲ್ಲಿ ಅವಿತಿಟ್ಟಿದ್ದ ಕಂಬಳಿ ಕೊಪ್ಪೆಯನ್ನು ಮುಖದ ರಕ್ಷಣೆಗಾಗಿ ತೊಟ್ಟು, ತೋಟದ ಆಳು ಮಕ್ಕಳಂತೆಯೇ ಕಾಣುತ್ತ, ಚೆಡ್ಡಿ ಜೇಬಲ್ಲಿ ಚಾಟರಿ ಬಿಲ್ಲನ್ನು ಆವಿಸಿಕೊಂಡು ಪ್ರಶಸ್ತವೆನ್ನಿಸದಿ ದಿವಸ ಅವನು ಕಾಡಿನಲ್ಲಿ ಜೇನಿನ ಬೇಟೆಯಾಡುವುದು. ಒಂದು ದಿನ ಅಲೆದಾಡುತ್ತ, ಇದೇ ಬಂಡೆಯ ಇದೇ ಸಂದಿಯ ಮೇಲೆ ಇದೇ ಮರದ ಅವತ್ತಿನ ಕೊಂಬೆಯನ್ನು ಹಿಡಿದು ನಿಂತಾಗ, ಜೇನಿನಗೂಡು ಎಲ್ಲಿಯೋ ತೂಗಿ ಬಿದ್ದಿರಬಹುದು ಎಂದು ಸೂಚನೆ ಕೊಡುವಂತೆ ಜೇನ್ನೊಣಗಳು ಧಾರಾಳ ಅರಳಿದ ಮರದ ಹಳದಿ ಹೂಗಳ ಮೇಲೆ ಕಪ್ಪಾಗಿ ಕೂತಿರುವುದು ಕಂಡಿತು. ಬಂಡೆಯ ಸಂದಿಯಲ್ಲಿ ಇವತ್ತಿನಂತೆಯೇ ಅರ್ಧಪಾದ ಊರುತ್ತ, ಆ ಕೊಂಬೆಯಿಂದ ಈ ಕೊಂಬೆಯನ್ನು, ಮತ್ತೆ ಮುಂದಿನ ಕೊಂಬೆಯನ್ನು, ಬಿಟ್ಟು, ಹಿಡಿದು, ಹಸಿರು ಹಾವಿನಂತೆ ಸಾಗುತ್ತ ಈ ಸ್ಥಳಕ್ಕೆ ಬಂದು ನೋಡಿದರೆ ಜೇನ್ನೊಣಗಳಿಂದ ತುಡಿಯುತ್ತ ಭಾರವಾಗಿ ಒಂದು ಜೀವಂತ ಜಂತುವಿನಂತೆ ಜೋತು ಬಿದ್ದ ಜೇನಿನ ಸಹಸ್ರಾರು ಬಿಡಾರಗಳ ಗೂಡು. ಬೆನ್ನಿಗೆ ಜೇನಾದರೆ, ಎದುರು ತಟಸ್ಥವಾದ, ಆದರೆ ತಟಸ್ಥವಾಗಿದ್ದೇ ಚಿರಕಾಲದಲ್ಲಿ ಪ್ರಾನದ ಚಲನೆ ಮಿಡಿಯುವ ಈ ಚಿತ್ರ. ಜೇನು ಮರೆಯಿತು. ಲೋಕ ಮರೆಯಿತು. ಕೆಳಗಿನ ಭೂತಗಳು ಏನೋ ಗುಟ್ಟು ಹೇಳುವಂತೆ ಅನ್ನಿಸಿತು.

ಸೋಮನಾಥ ತನ್ನ ಕಲೆಯನ್ನು ಕುದುರಿಸಿಕೊಳ್ಳಲು ಫ್ರಾನ್ಸ್, ಇಟಲಿ, ಮೆಕ್ಸಿಕೊ, ಆಫ್ರಿಕಾ, ಅಮೆರಿಕಾ ಎಲ್ಲೆಲ್ಲೂ ಸುತ್ತುತ್ತಿದ್ದಾಗಲೂ ತನ್ನ ಧ್ಯಾನದ ವಸ್ತು – ಈ ತಾಣ. ನೀರವ ನಿಸರ್ಗದಲ್ಲಿ ಅವಿತುಕೊಂಡ ಈ ದೃಶ್ಯ.

ಬಂಡೆಗೆ ಒಗ್ಗುವಂತಿದ್ದ ತನ್ನ ಬೂದು ಬಣ್ಣದ ಜುಗುಪ್ಸೆ ಹುಟ್ಟಿಸುವ ಮೈಯನ್ನು ಕೊಂಚ ಬಳುಕಿಸಿ, ಸದಾ ಎತ್ತಿದ ತಲೆಯನ್ನು ಒಪ್ಪಿಗೆ ಸೂಚಿಸುವಂತೆ, ಮುಂದೆ ಹಿಂದೆ ಮಾಡಿ, ಓತಿಕೇತ ಚಲಿಸಿತೋ, ಇಲ್ಲವೊ ಎಂದು ಅನುಮಾನವಾಗುವಂತೆ ಚಲಿಸುತ್ತಿದೆ ಎಂದು ಕೃಷ್ಣಾಸ್ವಾಮಿಗೆ ತೋರಿತು. ಅವನ ಕಿವಿಯಲ್ಲಿ ಮಾತ್ರ ಸೋಮನಾಥನ ಕಥನ ಸಾಗಿತ್ತು.

‘ನಾನೊಬ್ಬ ಕಳ್ಳ – ದಿವ್ಯದ ಕಳ್ಳ. ಇದು ನನಗೆ ಬಾಲ್ಯದಿಂದ ಪವಿತ್ರವಾದ ಗುಪ್ತ ತಾಣ. ನನ್ನ ಕಲೆಯ ಮೂಲಪ್ರೇರಣೆಯಿರುವುದು ಇಲ್ಲೇ.

ಸೋಮನಾಥ ತನ್ನ ಮಾಂತ್ರಿಕ ಕಥನದಲ್ಲಿ ಕೈ ಬಿಟ್ಟ ಸಂಗತಿಗಳನ್ನು ಕೃಷ್ಣಸ್ವಾಮಿ ಓತಿಕೇತವನ್ನು ನೋಡುತ್ತ ನೆನೆದ.

ಎಲ್ಲ ಹಂಗು ಬಿಟ್ಟ ಈ ಮಹಾ ಕಲಾವಿದ ಮಾತ್ರ ತಾಯಿ ತಂದೆಯ ಇಷ್ಟಾನುಸಾರ ಮದುವೆಯಾಗಿದ್ದು; ತಾಯಿಯ ಅಣ್ಣನ ಮಗಳನ್ನೇ ಮದುವೆಯಾದ್ದು. ಅವನ ತಾಯಿಗೆ ಅವಳು ಹಾಗೂ ಸೊಸೆ, ಹೀಗೂ ಸೊಸೆ, ಹೀಗಾಗಿ ಊರುರು ಸುತ್ತುತ್ತ ತನ್ನ ಇಷ್ಟಾನುಸಾರ ಬದುಕುವುದು ಸುಗಮವಾಯಿತಲ್ಲವೆ? ಈ ಅಲೆದಾಟಗಳ ನಡುವೆ ಸೋಮನಾಥ ಹುಟ್ಟಿಸುತ್ತಿದ್ದ ವಂಶೋದ್ಧಾರಕರನ್ನು ಹೆರೆಸಿ, ಸೊಸೆಯ ಬಾಣಂತನ ಮಾಡಿ ಸಲಹುವುದೆಲ್ಲ ತಾಯಿಯ ಪ್ರಿಯವಾದ ಕರ್ತವ್ಯವಾಗಿ ಬಿಟ್ಟಿತಲ್ಲವೆ? ಈಗ ಸೊಗಸಾಗಿ ಪೆಪರ್ ಸಾಲ್ಟಾಗಿ ಹಣ್ಣಾಗುತ್ತಿದ್ದ ಉದ್ದನೆಯ ಗಡ್ಡ ಬೆಳೆಸಿಕೊಂಡ , ಹೆಗಲ ಮೇಲೆ ಕೂದಲು ಅಸ್ತವ್ಯಸ್ತ ಚೆಲ್ಲುವಂತೆ ನಿರ್ಲಕ್ಷಿಸಿ, ಬಿಚ್ಚೋಲೆ ಗೌರಮ್ಮನಂತಹ ಹೆಂಡತಿ ತೇಪೆ ಹಾಕಿ ಕೊಟ್ಟಿದ್ದೇ ಪ್ಯಾಶನ್ ಆದ ಹಸಿರು ಜುಬ್ಬವನ್ನು ತೊಟ್ಟು, ಬ್ಯಾರಿಗಳಂತೆ ಒಂದು ಮುಂಡನ್ನುಸುತ್ತಿಕೊಂಡು ಪೂರ್ವಕಾಲದ ಋಷಿಯಂತೆ ಕಾಣುವ ಈ ಸಪುರವಾದ ಆಕರ್ಷಕ ನೀಲ ನಿಲುವಿನ ಸೋಮನಾಥ ಖಂಡಿತವಾಗಿ ಕಳ್ಳನೇ.

ದಿವ್ಯದ ಕಳ್ಳ ಮಾತ್ರನಲ್ಲ; ಲೌಕಿಕದ ಮಳ್ಳನೂ ಕೂಡ ಈ ಬಡ್ಡಿ ಮಗ. ಇವನೊಬ್ಬ ಸಂಪ್ರದಾಯಸ್ಥ ಮಲೆನಾಡಿನ ವೈದಿಕ ಮನೆತನದಲ್ಲಿ ಹುಟ್ಟಿ ಬೆಳೆದವನೆಂದು ಯಾರೂ ಅವನ ಮಾತಿನಿಂದಾಗಲಿ, ರೂಪದಿಂದಾಗಲಿ ಊಹಿಸಲಾರರು. ಕಾಲೇಜಿನಿಂದ ಗೆಳೆಯನಾಗಿ ಉಳಿದ ತನಗೆ ಮಾತ್ರ ಅದು ಗೊತ್ತು. ಅದೂ ಹೊಟ್ಟೆಕಿಚ್ಚಿನಲ್ಲಿ ಹೀಗೆ ಭಾವಿಸಿದಾಗ ಮಾತ್ರ ತನಗೆ ಗೊತ್ತು. ಬಡ್ಡಿಮಗ ಬದುಕುತ್ತಾನೆ. ನನ್ನ ಅನುಮಾಗಳನ್ನೆಲ್ಲ ಗೆಲ್ಲುವಂತೆ ತನ್ನ ಭಾವನೆಗಳ ಉತ್ಕರ್ಷದಲ್ಲಿ ಸದಾ ಇರುತ್ತಾನೆ.

ಸೋಮನಾಥನ ಮೋಡಿಯಿಂದ ಬಿಡುಗಡೆಯಾದಂತೆನಿಸಿ ಖುಷಿಯಾಯಿತು. ಗೆಳೆಯನ ಬಗ್ಗೆ ಪ್ರೀತಿಯೂ ಹುಟ್ಟಿತು. ಮತ್ತೆ ಚಿತ್ರವನ್ನು ನೋಡಿದಾಗ ಅದು ತನಗೆ ಬೇರೊಂದು ಅರ್ಥವನ್ನು ಕೊಡುತ್ತಿದೆ. ಉಬ್ಬಿದ ಕಣ್ಣುಗಳ, ಎತ್ತಿದ ತಲೆಯ ಓತಿಕೇತ ಹೇಳುವುದೇ ಬೇರೆ. ಆದಿಮಾನವನಿಗೆ ಕೂಡ ಈಗ ತನಗೆ ಹೇಳಿದ್ದನ್ನೆ ಹೇಳಿದೆ. ಒಳಗಿಂದೊಳಗೆ ಒಂದು ಕಳ್ಳ ನಗು ಹುಟ್ಟಿಕೊಂಡಿತು.

ಸೋಮನಾಥ ತನ್ನಲ್ಲೇ ಮಾತಾಡಿಕೊಳ್ಳುವಂತೆ ಮುಂದುವರಿದ:

‘ನನ್ನ ಅಪ್ಪ ಅಮ್ಮ ಹಾಸಿಗೆ ಹಿಡಿದಿದ್ದರೆ ಎಂದು ಕೇಳಿದೆ. ಈ ಹಳ್ಳಿಯಲ್ಲೇ ಬದುಕುವುದೆಂದು ನಿಶ್ಚಯಿಸಿ ಹಿಂದಕ್ಕೆ ಬಂದೆ. ನನ್ನ ಹೆಂಡತಿಯೋ ಮಹರಾಯಿತಿ ಮಕ್ಕಳನ್ನು ಬೆಳೆಸುತ್ತಾ ನನ್ನ ತಾಯಿ ತಂದೆಯರ ಶುಶ್ರೂಷೆ ಮಾಡಿಕೊಂಡು ನನಗಾಗಿ ಕಾದಿದ್ದಳು. ನಾವು ದುಷ್ಟನೂ ಅಲ್ಲ, ನಿನ್ನಂತೆ ನೀತಿವಂತ ಸಭ್ಯನೂ ಅಲ್ಲ. ಅಪ್ಪ ಅಮ್ಮ ಸತ್ತರು. ತೋಟವನ್ನು ಮಾರಲಿಲ್ಲ. ಬೇಸಾಯಕ್ಕೆಂದು ಬೇರೆಯವರಿಗೆ ವಹಿಸಿದೆ. ನಿತ್ಯ ಇಲ್ಲಿಗೆ ಬಂದು ಇಲ್ಲೇ ನಿಂತಿದ್ದು ಮನೆಗೆ ಹೋಗುತ್ತಿದ್ದೆ. ಬಾಲ್ಯ ಕಾಲದಿಂದ ಇಲ್ಲಿ ಏನೆಂದರೆ ಏನೂ ಬದಲಾಗಿಲ್ಲ. ನಾಣು ಮಾತ್ರ ಬದಲಾಗುತ್ತ ಹೋದೆ. ಅಂದರೆ ಈ ಚಿತ್ರಕ್ಕೆ ಹತ್ತಿರವಾಗುತ್ತ ಹೋದ’.

ಶೂನ್ಯವನ್ನು ದಿಟ್ಟಿಸುವಂತೆ ತಲೆಯೆತ್ತಿ ನೋಡುತ್ತಿದ್ದ ಓತಿಕೇತ ಬಾಯಿಯನ್ನು ತೆರೆದು ಮುಚ್ಚಿದಂತೆ ಕಂಡಿತು. ತಾನಾಗಿ ಬಾಯಿಗೆ ಸಿಕ್ಕಿದ್ದನ್ನು ನುಂಗಿರಬೇಕು. ಅದರ ಕತ್ತು ಉಬ್ಬುತ್ತ ಇಳಿಯುತ್ತ ಅದರ ಉಸಿರಾಟ ನಡೆದಿತ್ತು. ಬೇಟೆಗಾರನ ಚಿತ್ರದ ಪ್ರಾಣಶಕ್ತಿಯ ಧಾವಂತವನ್ನು ಓತಿಕೇತದ ಕ್ವಚಿತ್ತಾದ ಇರುವಿಕೆ ಹಂಗಿಸುವಂತೆ ಕೃಷ್ಣಾಸ್ವಾಮಿಗೆ ಅನ್ನಿಸಿ ತಾನು ಬಂಡೆಯನ್ನು ಏರಿಯೇ ಬಿಡುವುದೆಂದು ನಿಶ್ಚಯಿಸಿದ. ಪಾತಾಳದ ಭೂತವೊಂದು ಸೋಮನಾಥ ಬಿದಿರು ಬೊಂಬಿನಂತಹ ಮೈಯನ್ನು ಹೊಕ್ಕು ಅವನನ್ನು ಊದುತ್ತಿರಬೇಕು… ಪ್ರಾಣಶಕ್ತಿಯ ಉಪಾಸನೆಯ ಅವನ ಘೋಷ ಕೊಂಚ ತಮಾಷೆಯೆಂಬಂತೆ ತೋರಿತು. ಜಡವಾದ ಕಲ್ಲೇ ಎಷ್ಟು ಬೇಕೋ ಅಷ್ಟೇ ಜೀವ ಪಡೆದ ಈ ಓತಿಕೇತದಲ್ಲಿ ಪ್ರಾಣಸ್ಥವಾಗಿರುವ ನೆಮ್ಮದಿಯ ಆಸೆ ಬಲವಾಗಿ ಮರದ ಕೊಂಬೆಯನ್ನು ಕೃಷ್ಣಸ್ವಾಮಿ ಬಿಟ್ಟ; ಮುಂಭಾಗಕ್ಕೆ ತನ್ನ ತೂಕ ರವಾನಿಸಿದ: ಎರಡು ಕೈಗಳನ್ನೂ ಮೇಲಿನ ಬಂಡೆಯ ಮೇಲೆ ಊರಿ ಹೆಬ್ಬಾವಿನಂತೆ ಬಂಡೆಯ ಮೇಲೆ ತೆವಳುತ್ತ ಏರಿದ. ತನ್ನ ಒಣ ಗಾಂಭೀರ್ಯ ಕಳೆದುಕೊಂಡು ಹೀಗೆ ಜೀವ ಹೇಡಿಯಾದ್ದರಿಂದ ಅವನಿಗೆ ಆರಾಮೆನ್ನಿಸಿತು.

ಚಿತ್ರವನ್ನು ಬರೆದ ಬೆತ್ತಲೆ ದೇಹದ ಆದಿಮ ಸೃಷ್ಟಿಕರ್ತನಂತೆ ತಾನೂ ಆಗಲು ಹವಣಿಸಿ ಆರ್ತ ಭಾವದಲ್ಲಿ ನಿಂತಿದ್ದ ಸೋಮನಾಥನಿಗೆ ಶುಭ ಹಾರೈಸಿ, ಕೃಷ್ಣಸ್ವಾಮಿ ಕಳ್ಳ ನಗುವಿನಿಂದ ಪುಳಕಗೊಂಡ.

ಸೋಮನಾಥ ಇನ್ನೇನೊ ಪುರಾಣ ಶುರು ಮಾಡಲಿದ್ದ. ಆದರೆ ಕೃಷ್ಣ ಸ್ವಾಮಿ ಹೀಗೆ ತೆವಳಿ ಏರಿ ಬಂಡೆಯ ಮೇಲೆ ಕ್ಷಣ ಕೂತಿದ್ದು, ನಿರಂಬಳವಾದ ಅಸಡ್ಡೆಯಲ್ಲಿ ಎದ್ದು ನಿಂತಿದ್ದನ್ನು ಕಂಡು ಸಿಟ್ಟಾದ.

‘ಕಿಟ್ಟು, ನೆವರ್ ಡು ದಿಸ್ ಎಗೈನ್. ನಾನು ಎಂದೂ ಬಂಡೆಯನ್ನು ಹತ್ತಿದ್ದು ಇಲ್ಲ. ಆ ಮಹಾನುಭಾವ ನಿಂತು ಚಿತ್ರ ಬರೆದ ಜಾಗವನ್ನು ನನ್ನ ಈ ಕಾಲುಗಳು ಮುಟ್ಟ ಕೂಡದು. ಅವನು ಧ್ಯಾನಿಸುತ್ತ ಪರವಶನಾಗುತ್ತ ಓಡಾಡಿದಲ್ಲಿ ನಾನು ಓಡಾಡಕೂಡದು. ನನ್ನದು ಮೂಢನಂಬಿಕೆಯೆಂದುನೀನು ಬೇಕಾದರೆ ಅಂದುಕೊ. ’

ಕೃಷ್ಣಸ್ವಾಮಿಗೆ ಇದು ಸಿಲ್ಲಿ ಎನ್ನಿಸಿದರೂ ‘ಸಾರಿ’ ಎಂದ. ಆದರೆ ಮರುಕ್ಷಣವೇ ಸೋಮನಾಥ ಹಗುರಾಗಿ ನಗುತ್ತ ಹೇಳಿದ :

‘ನಿನಗೆ ಪರವಾಗಿಲ್ಲ ಅನ್ನು. ನಾನು ಈ ಸ್ಥಳದ ಉಪಾಸಕ, ನೀನು ಅಲ್ಲ. ನೀನು ನಾಗರಿಕತೆಯ ಉಪಾಸಕ, ವಿಚಾರವಾದಿ, ಆದರೆ ಯಾಕೊ ಏನೊ ನನ್ನ ಪರಮಮಿತ್ರ. ನನ್ನ ಗುಟ್ಟನ್ನ ಇಟ್ಟುಕೊ ಎಂದು ಕೊಟ್ಟಿದೇನೆ. ಈ ಬಗ್ಗೆ ನೀನೇನಾದರೂ ಬರೆದುಗಿರಿದರೆ ನಮ್ಮ ಗೆಳತನ ಕೊನೆಯಾಯ್ತು ಅಂತ ತಿಳುಕೋ’.

ಕೃಷ್ಣಸ್ವಾಮಿ ಪ್ರಾಮಿಸ್ ಮಾಡಿ ‘ಸೋಮನಾಥ ಪುರಾಣ ಮುಂದುವರಿಯಲಿ’ ಎಂದ, ತನ್ನ ಎಂದಿನ ಸಖ್ಯದ ಮರ್ಜಿಯಲ್ಲಿ. ಈ ಕಥೆ ತನಗೆ ಒಡ್ಡಬಹುದಾದ ದಿವ್ಯವನ್ನು ಕೃಷ್ಣಸ್ವಾಮಿ ನಿರೀಕ್ಷಿಸಿರಲ್ಲ.

ಸೋಮನಾಥ ಇಲ್ಲಿದಾನೆ ಅಂತ ತಿಳಿದು ಒಬ್ಬ ಶಿಷ್ಯೆ ಅವನಿಗೆ ಗಂಟು ಬಿದ್ದಳು. ಪುರಾತನ ದೇವಾಲಯಗಳಿಗೆ ಪ್ರಸಿದ್ಧವಾದ ಈ ಪ್ರದೇಶದಲ್ಲಿ ಹತ್ತು ಹಲವು ಉಪಾಸನಾ ವಿಧಿಗಳು ಯಾವ ಕಾಲದಿಂದಲೋ ಇವತ್ತಿವರೆಗೂ ಜೀವಂತ ಉಳಿದಿವೆ. ಅವು ಗೊತ್ತಾದರೆ ಉಂಟು ಇಲ್ಲವಾದರೆ ಇಲ್ಲ. ಅವು ಉಳಿದಿರೋದು ಹಾಗೆಯೇ – ತಮ್ಮ ಗುಪ್ತ ಭಕ್ತಾದಿಗಳಿಗಾಗಿ ಮಾತ್ರ. ಆದರೆ ಫ್ರಾನ್ಸಿನಲ್ಲಿ ಈ ಬಗ್ಗೆ ಕುತೂಹಲ ಇದೆ. ತನ್ನ ಮಲತಂದೆಯ ಟ್ರಸ್ಟಿನಿಂದ ಈ ಅವನ ಶಿಷ್ಯೆ – ಜ್ಯೋತಿ – ಒಂದು ಫೆಲೋಶಿಪ್ ಪಡೆದು ಬಂದಳು. ಮುಖ್ಯ ಅವಳು ಬಂದದ್ದು ಸೋಮನಾಥನ ಸಹವಾಸಕ್ಕಾಗಿ. ಅವಳೂ ಫ್ರಾನ್ಸಿನಲ್ಲಿ ಕಲಿತ ಕಲಾವಿದೆ; ಸೋಮನಾಥನ ಕಲೆಯನ್ನು ಮೆಚ್ಚಿಕೊಂಡವಳು. ಭೂತಗಳ ಬಗ್ಗೆಯೂ ಕೆಲಸ ಮಾಡಬಹುದಲ್ಲ ಎಂಬ ನೆವದಿಂದ ಅವಳು ಬಂದದ್ದು.

ಕೆಲವು ಪ್ರಸಿದ್ಧವಾದ ಭೂತಗಳು. ರಾಮ, ಶಿವ, ಕೃಷ್ಣ, ನಾರಾಯಣ ಇತ್ಯಾದಿ ದೇವಾಲಯಗಳ ಹಿಂಭಾಗದಲ್ಲಿ ಮರಗಳ ಬುಡದಲ್ಲಿ ಇವುಗಳ ವಾಸ್ತವ್ಯ. ಇವಲ್ಲದೆ ಹಲವು ಕಳ್ಳ ಭೂತಗಳೂ ಉಂಟು. ನಗುವ ಭೂತ, ಕಿರುಚುವ ಭೂತ, ಕೇಕೆ ಹಾಕುವ ಭೂತ, ದರೋಡೆಕೋರರ ಭೂತ, ಹದರಗಿತ್ತಿಯರ ಭೂತ, ತಟವಟದ ಭೂತ ಇವೆಲ್ಲವಕ್ಕೂ ಕಳ್ಳಿನ ನೈವೇದ್ಯವೇ ಆಗಬೇಕು. ಹಲ್ಲಿನಿಂದ ಕಚ್ಚಿ ಸಿಗಿದು ಕೋಳಿಗಳ ಬಿಸಿ ರಕ್ತ ಹೀರಬೇಕು. ಸಿಂಗಾರದಿಂದ ಚಾಮರ ಸೇವೆಯಾಗಬೇಕು. ನಿಷ್ಠೆ ತಪ್ಪಿತೋ? ಕಾಡಿನಲ್ಲಿ ಕತ್ತಲಲ್ಲಿ ಬರುವಾಗ ಸಿಳ್ಳೆ ಹಾಕಿ ಕಣ್ಕಟ್ಟು ಮಾಡಿ ವಂಚಿಸಿ ಈ ಭೂತಗಳು ದಿಕ್ಕು ತಪ್ಪಿಸುತ್ತವೆ.

ಈ ಭೂತಗಳ ಉಪಾಸನಾ ವಿಧಿಗಳನ್ನೂ, ಅದ್ಭುತ ರಮ್ಯ ಕಥೆಗಳನ್ನೂ ವಿಡಿಯೋದಲ್ಲಿ ರೆಕಾರ್ಡ್ ಮಾಡುವುದರಲ್ಲಿ ಸೋಮನಾಥ ಜೋತಿಗೆ ನೆರವಾದ. ಸೋಮನಾಥನ ಚಿತ್ರಗಳನ್ನು ಜೋತಿ ಒಂದೊಂದಕ್ಕೂ ನಾಲ್ಕು ಐದು ಲಕ್ಷ ಕೊಟ್ಟು ಖರೀದಿ ಮಾಡಿದಳು – ಅವಳ ಫ್ರೆಂಚ್ ಮಲ ತಂದೆಗಾಗಿ, ಈ ಫ್ರೆಂಚ್ ಮಹಾನುಭಾವ ಕೇವಲ ಕಲಾಪ್ರೇಮಿ ಎಂದುಕೊಳ್ಳಬಾರದು. ಅವನೊಬ್ಬ ಮಲ್ಟಿನ್ಯಾಷನಲ್ ಕಳ್ಳ. ಈ ಪ್ರದೇಶದಲ್ಲಿ ಲಾಭದಾಯಕವಾದ ಖನಿಜವಿದೆಯೆಂದು ಗಣಿ ಉದ್ಯಮದ ಆ ಮುದಿ ಕಳ್ಳನಿಗೆ ಗೊತ್ತು. ಪ್ರದೇಶದ ಜನರನ್ನು ಒಲೆಸಿಕೊಳ್ಳಲೆಂದು ಅವನು ಮೊದಲು ತನ್ನ ಮಲ ಮಗಳನ್ನು ಕಳಿಸಿದ್ದು. ಜೋತಿಯೂ ಕಳ್ಳಿಯೇ – ಅವಳಿಗೆ ಅವಳದೇ ಆದ ತೆವಲು – ಮಲ ತಂದೆಯನ್ನು ಉಪಯೋಗಿಸಿಕೊಂಡು ಸೋಮನಾಥನಿಗೆ ಹತ್ತಿರವಾದಳು.

‘ನೀನೂ ಕಳ್ಳನೇ… ಈ ಪ್ರದೇಶದ ಎಲ್ಲ ಗುಪ್ತ ಉಪಾಸನೆಗಳನ್ನೂ ಮಲ್ಟಿನ್ಯಾಶನಲ್ ಕಂಪನಿಯ ಆಂಥ್ರೋಪಾಲಜಿ ಪ್ರಾಜೆಕ್ಟ್‌ಗೆ ತಿಳಿಸಿಕೊಟ್ಟ. ’

ಕೃಷ್ಣಸ್ವಾಮಿಯ ಕುಹಕದಿಂದ ಸೋಮನಾಥ ಸಿಟ್ಟಾಗಲಿಲ್ಲ. ನಗುತ್ತ ಮುಂದುವರೆದ: ಆದರೆ ಮಾತ್ರ ಯರಿಗೂ ತನಗೆ ಆಪ್ತಳಾದ ಜೋತಿಗೂ ಯಾಖೆ ತನ್ನ ಹೆಂಡತಿಗೂ ಈ ಜಾಗವೊಂದನ್ನು ಮಾತ್ರ ಅವನು ತೋರಿಸಿಲ್ಲ. ಜೋತಿಗೆ ಇಂಥದೊಂದು ಚಿತ್ರ ತನ್ನ ಕಲೆಗೆ ಮೂಲವೆಂದು ಹೇಳಿದ್ದಾನೆ; ಆದರೆ ಈ ಚಿತ್ರ ಇಲ್ಲೇ ಇದೆ ಎಂದು ಮಾತ್ರ ಹೇಳಿಲ್ಲ. ಮಲತಂದೆಗೆ ಹೇಳಿ ಆ ತುಂಟಿ ಬಂಡೆಗೆ ಮೆಟ್ಟಿಲು ಕಟ್ಟಿಸಿ ಇದನ್ನು ಟೂರಿಸ್ಟ್ ತಾಣ ಮಾಡಿಸಿಬಿಟ್ಟರೂ ಬಿಟ್ಟಳೆ! ಸೋಮನಾಥನ ಕೆಲಯ ಗುಟ್ಟು ತಿಳಿಯಲು ಜೋತಿ ಪಂಚಾಗ್ನಿಗಳ ಮಧ್ಯೆ ಕೂತ ಗೌರಿಯಂತೆ ತಪ್ಪಸ್ಸು ಮಾಡುತ್ತಿದ್ದಾಳೆ. ಎಂಥ ದಿವ್ಯದ ಕಳ್ಳಿ ಅವಳೆಂದರೆ ಯಾರಾದರೂ ಒಂದು ಚಿತ್ರವನ್ನು ನೋಡುತ್ತಿದ್ದಂತೆಯೇ ಅವಳಿಗೆ ಅದರ ಸೃಷ್ಟಿಯ ಮೂಲದ ಗುಟ್ಟು ತಿಳಿದುಬಿಡುತ್ತದೆ. ಅವಳು ಎಲ್ಲ ಮಹಾನುಭಾವರಿಂದಲೂ ಕದ್ದೂ ಕದ್ದೂ ತನ್ನ ಚಿತ್ರಗಳಲ್ಲಿ ಮಾತ್ರ ತಾನು ನಾಪತ್ತೆಯಾಗಿ ಬಿಟ್ಟಿದ್ದಾಳೆ. ಅವಳು ಕೂಡಾ ತನ್ನದೇ ಆದ ಇಂಥ ಒಂದು ಗುಡಿಯನ್ನು ಕಂಡುಕೊಂಡಾಳೆಂಬ ಭರವಸೆ ಅವನಿಗಿದೆ. ಈ ಚಿತ್ರದಲ್ಲಿ ತುಡಿಯುವ ಪ್ರಾಣಶಕ್ತಿಯನ್ನು ಅವಳಲ್ಲಿ ಸೋಮನಾಥ ಗುರುತಿಸಿದ್ದಾನೆ.

ಕೃಷ್ಣಸ್ವಾಮಿ ಕಾಲುಚಾಚಿ ಕೂತು ಬಂಡೆಯ ಮೇಲಿನ ಚಿತ್ರವನ್ನು ಸೋಮನಾಥನಂತೆಯೇ ಉಪಾಸಕ ಕಣ್ಣುಗಳಿಂದ ನೋಡಲು ಪ್ರಯತ್ನಿಸಿದ. ಬೇಟೆಗಾರ ತನ್ನ ದೇಹದ ಪರಾಕಾಷ್ಠ ಶಕ್ತಿಯನ್ನೆಲ್ಲ ಮುಂದಕ್ಕೆ ಚಾಚಿ ಈಟಿಯಲ್ಲಿ ಕೇಂದ್ರಿಕರಿಸಿ ಓಡುತ್ತಿರುವ ಕ್ರಮವಾಗಲಿ, ಅವನ ದಾಪುಗಾಲಿನ ಆತುರವಾಗಲಿ ಕೃಷ್ಣಸ್ವಾಮಿಗೆ ಹೊಳೆಯಿಸಿದ್ದೇ ಬೇರೆ. ತಂತ್ರಜ್ಞನೂ ಆಸೆ ಬುರುಕನೂ ಆದ ಆಧುನಿಕ ಮಾನವ ಬೀಜ ಈ ಆದಿಮ ಮಾನವ ಹಿಡಿದ ಈಟಿಯಲ್ಲೇ ಅಡಗಿದೆ ಎನ್ನಿಸಿತು. ಬೇಟೆಗಾರನಿಗೆ ಜಿಂಕೆ ಮಾಂಸದ ತೆವಲು, ಸೋಮನಾಥನಿಗೆ ಚಿತ್ರದ ತೆವಲು, ಜೋತಿಗೆ ಸೋಮನಾತ ಕಲೆಯ ಗುಟ್ಟಿನ ತೆವಲು – ಈ ಎಲ್ಲ ತೆವಲನ್ನೂ ಬಳಸಿ ನುಂಗುವ ತೆವಲೆಂದರೆ ಫ್ರೆಂಚ್ ಮನುಷ್ಯನ ಖನಿಜದ ತೆವಲು. ತನಗೆ ಇವೆಲ್ಲವನ್ನೂ ತಿಳಿಯುವ ತೆವಲು, ಆದರೆ ಯಾವ ತೆವಲೂ ಇಲ್ಲದ್ದೆಂದರೆ ಈ ಓತಿಕೇತ ಎಂದು ತನ್ನೊಳಗಿನ ಕಳ್ಳ ನಗುವನ್ನು ಕೃಷ್ಣಸ್ವಾಮಿ ಪ್ರೋತ್ಸಾಹಿಸುತ್ತ ಕೂತ.

ಸೋಮನಾಥನ ಪುಣ್ಯಕ್ಕೆ ಅವನು ಹಿಡಿದ ಮರದ ಕೊಂಬೆ ತುಯ್ಯುಷ್ಟು ಗಾಳಿ ಜೋರಾಗಿ ಬೀಸುತ್ತಿರಲಿಲ್ಲ. ಮಂದವಾದ ಗಾಳಿಗೆ ಎಲೆಗಳು ಅಲಗುತ್ತ, ಪಶ್ಚಿಮ ಸೂರ್ಯನ ಕಿರಣಗಳನ್ನು ಸೋಸುತ್ತ, ಎದುರಿಗಿದ್ದ ಚಿತ್ರದ ಮೇಲೆ ನೆರಳು ಬೆಳಕಿನ ಚಿತ್ತಾರವಾಗಿತ್ತು. ತಾನು ಕೂತಲ್ಲಿನ ಕಲ್ಲಿನ ನುಣುಪಾದ ಬಂಡೆ ಮಲಗಿ ಹೊರಳುವಷ್ಟು ಪ್ರಶಸ್ತವಾಗಿದೆ ಎನಿಸಿ ಕೃಷ್ಣಸ್ವಾಮಿಯ ಮನಸ್ಸು ಉಲ್ಲಾಸಗೊಂಡಿತು. ಕಾಲುಚಾಚಿ ಕೈಯನ್ನೂರಿ ಕೂತ.

ಸೋಮನಾಥನೂ ಮಾತು ನಿಲ್ಲಿಸಿದ್ದ. ತನ್ನ ಉದ್ದವಾದ ಗಡ್ಡವನ್ನು ಎಡಗೈನಿಂದ ನೀವಿಕೊಂಡು, ಹೆಬ್ಬೆರಳಿನಿಂದ ಉಳಿದ ಬೆರಳುಗಳನ್ನು ಒತ್ತಿ ನೆಟ್ಟಿಗೆ ಮುರಿದು, ಜುಬ್ಬದ ಜೇಬಿನೊಳಗಿಂದ ಬೀಡಿಯ ಕಟ್ಟೊಂದನ್ನು ಹೊರ ತೆಗೆದ. ಅದರಿಂದ ಒಂದು ಬೀಡಿಯನ್ನು ಬಾಯಿಗಿಟ್ಟು ಕಚ್ಚಿದ. ಮತ್ತೆ ಜೇಬಿಗೆ ಕೈಹಾಕಿ ಬೀಡಿಕಟ್ಟನ್ನು ಅದರಲ್ಲಿ ತುರುಕಿ ಒಂದು ಬೆಂಕಿ ಪೊಟ್ಟಣವನ್ನು ಕೊಂಬೆ ಹಿಡಿದ್ದ ಬಲಗೈಗೆ ರವಾನಿಸಿ ಎಡಗೈಯಲ್ಲಿದ್ದ ಕಡ್ಡಿಯನ್ನು ಅದರ ಮೇಲೆ ಗೀರಿ ಜ್ವಾಲೆ ಪಡೆದು ಬೀಡಿ ಹತ್ತಿಸಿದ. ತನ್ನ ಕ್ಯಾನ್ವಾಸ್‌ನ ಎದುರಲ್ಲಿ ಸೋಮನಾಥ ಆರಾಮಾಗಿ ನಿರಾಂತಕನಾಗಿ ಧ್ಯಾನಿಸುತ್ತ ನಿಂತಂತಿತ್ತು.

‘ಮುಚ್ಚು ಮರೆ ಮಾಡದೇ, ಕದಿಯದೇ ಪವಿತ್ರವಾದ್ದನ್ನು ನಾವು ಕಾಪಾಡಲಾರೆವು ಅಂತ ಕಾಣುತ್ತೆ. ಯಾವ ನರಪ್ರಾಣಿಯೂ ಎಂದೂ ಕಣ್ಣು ಹಾಯಿಸಿದ ಗುಪ್ತಸ್ಥಳ ಈ ಭೂಮಿಯಲ್ಲಿ ಇದ್ದೇ ಇರುತ್ತದೆಂದು ನನ್ನ ಭರವಸೆ. ’

ಸೋಮನಾಥ ನಗುತ್ತ ಇಷ್ಟು ಮಾತಾಡಿ ಬೀಡಿಯನ್ನು ನುರಿದು ಎಸೆದ. ಮತ್ತೆ ಹಿಂದಕ್ಕೆ ತಿರುಗಿ ನೋಡಿದ ಕೃಷ್ಣಾಸ್ವಾಮಿಗೆ ತನ್ನ ಮಣಿಗಳಂತಹ ಉಬ್ಬು ಕಣ್ಣುಗಳಿಂದ ಓತಿಕೇತ ಎದುರಾಯಿತು. ಈ ದೃಷ್ಟಿಯಲ್ಲಿ ಯಾವ ನಿರೀಕ್ಷೆಯೂ ಇರಲಿಲ್ಲ. ಬಂಡೆಯ ಒಂದು ನಾಳದಂತೆ ಅದರ ಕತ್ತು ಉಸಿರಾಟದಲ್ಲಿ ಮಿಡಿಯುತ್ತಿತ್ತು.

ಇದ್ದಕ್ಕಿದ್ದಂತೆಯೇ ಕೃಷ್ಣಾಸ್ವಾಮಿಗೆ ಒಂದು ಸನ್ನೆಯಾಯಿತು. ಚಿತ್ರದ ತಳಭಾಗದಲ್ಲಿ ಏನೋ ಫಳ್ಳನೆ ಹೊಳೆದಂತಾಯಿತು. ಅವನು ತುಂಬ ಕಚಕುಳಿಯ ಮನುಷ್ಯ – ಯಾರಾದರೂ ಕಚಕುಳಿ ಇಡುತ್ತೇನೆಂದು ದೂರದಿಂದ ಬೆರಳುಗಳನ್ನು ಅಡಿಸುತ್ತ ಹತ್ತಿರ ಬರುವಂತೆ ನಟಿಸಿದರೂ ಸಾಕು ಕೃಷ್ಣಸ್ವಾಮಿ ಗಹಗಹಿಸುತ್ತಾ ಬಿದ್ದು ಒದ್ದಾಡುವ ಆಸಾಮಿ. ಚಿತ್ರದ ಬುಡದಲ್ಲಿ ಏನೋ ಫಳ್ಳನೆ ಹೊಳೆದದ್ದು ತನಗೆ ಎಂದು ಭಾಸವಾಗಿ, ಕಚಕುಳಿಯಾಗಿ ಅವನ ಇಡೀ ಮೈ ಪುಳಕಗೊಂಡಿತು.

ಚಿತ್ರದ ಸನ್ನೆಗೆ ತನ್ನನ್ನು ತೆರೆದುಕೊಳ್ಳುತ್ತ ಪುರಾತನ ಋಷಿಯಂತೆ ಸೋಮನಾಥ ಮೌನವಾಗಿ ಎದುರು ನಿಂತಿದ್ದರೆ, ಅಳ್ಳಕವಾದ ಹುಲಿಪಟ್ಟೆಯ ಅಂಗಿಯನ್ನು ತೊಟ್ಟು ಜೀನ್ಸ್ ಧರಿಸಿದ ಸೊಗಸುಗಾರನಾದ ತಾನೂ ಈ ಪುರಾತನ ಬಂಡೆಯಿಂದ ಒಂದು ಅಪರೂಪದ ಸನ್ನೆ ಪಡೆಯುತ್ತಿರಬಹುದೆಂದು ಕೃಷ್ಣಾಸ್ವಾಮಿಗೆ ಅನುಮಾನವಾಯಿತು. ನೀಳವಾದ ರೆಪ್ಪೆಯಿಂದ ಆಕರ್ಷಕನಾಗಿದ್ದ ತನ್ನ ಕಣ್ಣುಗಳನ್ನು ಉಜ್ಜಿಕೊಂಡ. ಐವತ್ತು ವರ್ಷಗಳ ನಂತರವೂ ಕನ್ನಡಿಯಲ್ಲಿ ತನಗೆ ಪ್ರಿಯವಾಗಿ ಉಳಿದಿದ್ದ, ತುಸು ಉದ್ದವಾದ ಆದರೆ ಚೂಪಾದ ಮೂಗಿನ ತನ್ನ ಮುಖವನ್ನು ಕರ್ಚೀಪಿನಿಂದ ಒರೆಸಿಕೊಂಡ. ಅನಿರೀಕ್ಷಿತ ಆಗಂತುಕನನ್ನು ನಿರೀಕ್ಷಿಸುತ್ತ ಮುಚ್ಚಿದ ಬಾಗಿಲನ್ನು ತೆರೆಯುವವನಂತೆ ಎದ್ದು ನಿಂತ. ಹಣೆಯ ಮೇಲೆ ಬಿದ್ದ ಕೂದಲನ್ನು ಹಿಂದೆ ತಳ್ಳಿಕೊಂಡ. ಏನೋ ಹೊಳೆದಂತೆ ಭಾಸವಾದ ಮೂಲೆಯತ್ತ ದಿಟ್ಟಿಸಿದ. ತನಗಾಗುತ್ತಿರುವ ನಿರೀಕ್ಷೆಯ ಬೆರಗು ಈ ಬಡ್ಡೀಮಗ ಸೋಮನಾಥನ ಸೋಂಕಿನ ಫಲ ಎಂದು ಅನುಮಾನಿಸುತ್ತಲೇ ದಿಟ್ಟಿಸಿದ.

ಈಟಿಯಲ್ಲಿ ತನ್ನೆಲ್ಲ ಶಕ್ತಿಯನ್ನು ಸಂಚಯಿಸಿದ ಬೇಟೆಗಾರನ ಸನ್ನಾಹ, ಈಟಿಗೆ ಗುರಿಯಾಗಬಾರದೆಂಬ ಆತಂಕದಲ್ಲಿ ತನ್ನ ಪ್ರಾಣಸ್ಥ ದೇಹವನ್ನು ಕುಗ್ಗಿಸಿಕೊಳ್ಳುವ ಜಿಂಕೆಯ ಸನ್ನಾಹ, ಲೀಲಾತ್ಮಕವಾದ ಪ್ರಾಣಶಕ್ತಿಯ ತುಡಿತದ ಗುಟ್ಟನ್ನು ಅರಿಯಬೇಕೆಂಬ ಸೋಮನಾಥನ ಸನ್ನಾಹ – ಇವುಗಳ ನಡುವೆ ಕೃಷ್ಣಸ್ವಾಮಿ ತನಗೊಂದು ಅಜ್ಞಾತದಿಂದ ಸನ್ನೆಯಾಗುತ್ತಿದೆಯೆಂದು ತನ್ನನ್ನು ತಮಾಷೆಯಲ್ಲಿ ಉಬ್ಬಿಸಿಕೊಂಡ.

ಸೋಮನಾಥನ ಸೊಂಕಿಲ್ಲದಿದ್ದರೆ, ಆತಂಕದ ಹೆಜ್ಜೆಯಿಟ್ಟು ತಾನಿಲ್ಲಿ ಬಂದಿರದಿದ್ದರೆ, ದುರ್ಗಮ ಪ್ರದೇಶದಲ್ಲಿ ಹೀಗೆ ಕಾಣ್ಕೆಗೂ ಕಣ್ಕಟ್ಟಿಗೂ ತಾನು ಒಳಗಾಗಿರದೆ ಇದ್ದರೆ ಬೇಟೆಗಾರ ಮತ್ತು ಜಿಂಕೆಯ ಚಿತ್ರ ಸಪ್ಪೆಯೆನ್ನಿಸಬಹುತ್ತು. ತನ್ನ ಸಾಮಜಿಕ ಸಭತ್ಯೆಯಲ್ಲಿ ಎಂದೋ ಜಡಿದುಕೊಂಡು ಬಿಟ್ಟಿದ್ದ ಒಂದು ಅಗಳಿ ತೆರೆಯುತ್ತಿದ್ದ ಎನ್ನಿಸಿತು. ಅದೊಂದು ಕಳ್ಳ ಅಗಳಿಯೇ ಇರಬೇಕು.

ಮತ್ತದು ಫಳ್ಳನೆ ಹೊಳೆದಂತಾಗಿ, ಒಳಗಿನ ಕಳ್ಳ ಆಗುಳಿಯನ್ನು ಸೂಕ್ಷ್ಮವಾಗಿ ಬೆರಳು ಮುಟ್ಟಿ ನೋಡಿದಂತಾಗಿ ಕಚಕುಳಿಯ ನೀರಿಕ್ಷೆಯಲ್ಲಿ ರೋಮಾಂಚಿತವಾದ. ಮರದ ಸಹಸ್ರಾರು ಎಲೆಗಳಲ್ಲಿ ಯಾವುದೋ ಎಲೆಗಳ ಸಮೂಹ – ಆ ಕ್ಷಣದ ಬಿಸಿಲಿನ ಕಿರಣಗಳಿಗೇ ಅಡ್ಡವಾಗಿದ್ದ ಎಲೆಗಳ ಸಮೂಹ – ಮಂದವಾಗಿ ಚಲಿಸಿದ ಗಾಳಿಗೆ ತಮ್ಮನ್ನು ಒಡ್ಡಿಕೊಂಡು, ತುಸು ಅತ್ತಲೋ ಇತ್ತಲೋ ಚಲಿಸಿ, ಸೂರ್ಯನ ಕಿರಣ ತೂರಿ ಹೊಮ್ಮಲು ಎಡೆಯಾಗಿರಬೇಕು. ಆ ಕಿರಣ ಮುಟ್ಟಿದ ಸಾದಾಕಪ್ಪು ಬಂಡೆಯ ಕೆಳಗಿನದೊಂದು ಸಂದಿ ಹೊಳೆದಿತ್ತು. ಸುಮ್ಮನೇ ನಿಂತಿದ್ದ ಸೋಮನಾಥ ಥಟ್ಟನೇ ಮಾತಿಗೆ ಪ್ರಾರಂಭಿಸಿದ.

‘ಇವತ್ತು ಸಂಜೆ ನೀನು ಜೋತಿಯನ್ನು ನೋಡುತ್ತಿ. ಇಲ್ಲಿನ ಎಲ್ಲ ಭೂತಗಳ ಗುಟ್ಟು ಅವಳಿಗೆ ಗೊತ್ತು. ಅವಳ ಹತ್ತಿರ ಅವು ಮಾತಾಡುತ್ತವೆ. ಈ ಚಿತ್ರವೂ ಅವಳ ಜೊತೆ ಮಾತಾಡುವ ದಿನ ದೂರವಿಲ್ಲ; ಅವಳು ಇನ್ನೂ ಅರ್ಹಳಾಗಲು ನಾನು ಕಾದಿದೇನೆ. ’

‘ಅಥವಾ ಅವಳ ಮಲತಂದೆ ಈ ಚಿತ್ರದ ಒಡೆಯನಾಗುವ ದಿನ ಕಾದಿದೀಯ ಎಂದೂ ಅನ್ನಬಹುದಲ್ಲ?’

‘ಫೂಲ್ ಕೇಳು. ಬೇಟೆಗಾರನಿಗೆ ಆ ಜಿಂಕೆ – ದುಷ್ಯಂತ ಅಟ್ಟಿಕೊಂಡು ಹೋಗಿ ಶಕುಂತಲೆಯನ್ನು ಪ ಪಡೆದದ್ದಕ್ಕೂ ಪೂರ್ವದ ಜಿಂಕೆ – ನೋಡೋಫೂಲ್ – ನೋಡು – ಅದೆಷ್ಟೋ ಸಾವಿರ ವರ್ಷಗಳಿಂದ ಸಿಗದೆ ಉಳಿದಿದೆಯಲ್ಲವೆ? ಅದು ಕಲೆಯ ಸತ್ಯ ಸೋಜಿಗ. ’

ಸೋಮನಾಥ ಉಡಾಫೆಯ ಗರ್ವದಲ್ಲಿ ಹೀಗೆ ಮಾತಾಡುತ್ತಿದ್ದಾನೆಯೆ ಎಂದು ಕೃಷ್ಣಸ್ವಾಮಿಗೆ ಸಂಶಯವಾಯಿತು. ಎಲ್ಲವೂ ಅವನಿಗೆ ಒಗಟಾಗಲು ತೊಡಗಿತ್ತು. ಬಂಡೆಯ ಮೂಲೆ ಪುನಃ ತನ್ನನ್ನು ನೋಡೆಂದು ಕರೆಯುವಂತೆ ಹೊಳೆಯಿತು. ಆಶ್ಚರ್ಯವೆಂದರೆ ನೆರಳು – ಬೆಳಕಿನ ಸೂಕ್ಷ್ಮಗಳನ್ನೆಲ್ಲ ಒಂದು ಅಲೌಕಿಕ ಹೊಳಹಿನಲ್ಲಿ ಕಾಣಬಲ್ಲ ಸೋಮನಾಥನಿಗೆ ಈ ಮೂಲೆ ಮಿಂಚಿದಂತೆ ಕಾಣಲಿಲ್ಲ. ಪ್ರಾಯಶಃ ಅವನು ನಿಂತಲ್ಲಿನ ನೋಟಕ್ಕೆ ಅದು ಲಭ್ಯವಿರಲಿಲ್ಲ.

ಮಿಂಚಿದ್ದು ಪರಮಾರ್ಥವಿರದೆ ಒಂದು ಸಾಮಾನ್ಯ ಪದಾರ್ಥವಿರಬಹುದು. ಈಗ ಕಂದಕವಾದಲ್ಲಿ ಯಾವುದೋ ಹಿಂದಿನ ಕಾಲದಲ್ಲಿ ಹೀಗೆ ಬಂಡೆಗಳು ಇದ್ದಿರಬಹುದು. ಆ ಬಂಡೆಗಳ ಮೇಲೂ ಆ ಮಾನವ ಬಿಟ್ಟು ಹೋದ ಗುರುತುಗಳಾಗಿ ಚಿತ್ರಗಳು ಇದ್ದಿರಬಹುದು. ಭೂಮಿ ಕುಸಿದು ಆ ಬಂಡೆಗಳೆಲ್ಲ ಕೆಳಗೆ ಉರುಳಿರಬಹುದು. ಕುಸಿದಲ್ಲಿ ಮರಗಳು ಹುಟ್ಟಿ ಅರಣ್ಯವಾಗಿದೆ. ಇದೊಂದು ಬಂಡೆ ಅಕಸ್ಮಾತ್ ಉಳಿದು, ಅಕಸ್ಮಾತ್ತಾಗಿ ಇನ್ನೊಂದು ನರ ಮನುಷ್ಯನ ಕಣ್ಣಿಗೂ, ಈ ಓತಿಕೇತಕ್ಕೂ, ಹಾರುವ ಪಕ್ಷಿಗಳಿಗೂ ದಕ್ಕಿದೆ.

ಒಂದಲ್ಲ ಒಂದು ದಿನ ಈ ಚಿತ್ರವು ಫ್ರೆಂಚ್ ಮನುಷ್ಯನ ದೈತ್ಯ ಕಂಪನಿಯ ರಿಸರ್ಚಿನ ವಿಷಯವಾಗುತ್ತದೆ. ಇದರ ಪ್ರತಿಕೃತಿ ಕಂಪನಿಯ ಹೆಬ್ಬಾಗಿಲ ಮೇಲಿರುತ್ತದೆ. ‘ಆದಿಮ ಸ್ಥಿತಿಯಿಂದ ಆಧುನಿಕಕ್ಕೆ’ ಎಂದು ಜಾಹೀರಾತು ಹಾಕಿ ಕಂಪನಿ ತನ್ನ ಸಾಧನೆಯನ್ನು ಕೀರ್ತಿಸಿಕೊಳ್ಳುತ್ತದೆ.

ಸೋಮನಾಥ ಸನ್ನೆ ಮಾಡಿ ಕೃಷ್ಣಾಸ್ವಾಮಿಯನ್ನು ಕರೆದ. ಹೊಳೆದ ಮೂಲೆಯನ್ನು ನೋಡಲು ಪತ್ತೆಯಾಗದಂತೆ ಅತ್ತ ಚಲಿಸಬೇಕೆಂದಿದ್ದ ಕೃಷ್ಣಸ್ವಾಮಿ ಕಿರಿಕಿರಿಪಡುತ್ತ ಸೋಮನಾಥ ನಿಂತಲ್ಲಿಗೆ ಹೋದ.

‘ನನ್ನ ಎರಡು ಕೈಗಳನ್ನೂ ಗಟ್ಟಿಯಾಗಿ ಹಿಡಿದುಕೊ’

ಸೋಮನಾಥ ಕೊಂಬೆ ಬಿಟ್ಟು ತನ್ನ ಬಲಗೈಯನ್ನು ಚಾಚಿದ. ಕೃಷ್ಣಸ್ವಾಮಿ ಅವನ ಎರಡು ಕೈಗಳೂ ತನ್ನ ಸೊಂಟ ತಬ್ಬುವಂತೆ ಕಾಲನ್ನು ಇಳಿಬಿಟ್ಟು ಬಂಡೆಯ ಮೇಲೆ ಕೂತ. ಸೋಮನಾಥ ಒಂದೊಂದಾಗಿ ತನ್ನ ಪಾದವನ್ನು ಬಂಡೆಯ ಸಂದಿಯಿಂದ ಹೊರಗೆ ತಂದು ಪಾದಗಳಿಗೆ ವ್ಯಾಯಾಮವಾಗುವಂತೆ ಮಾಡಿ ಕೃಷ್ಣಾಸ್ವಾಮಿಯ ಮುಖವನ್ನು ನಸುನಗುತ್ತ ನೋಡಿದ. ಅವನು ಹಾಗೆ ನೋಡಿದ್ದು ಕೃಷ್ಣಸ್ವಾಮಿಗೆ ಒಗಟಾಯಿತು. ಅವನ ಕಣ್ಣುಗಳು ತುಂಟಾಗಿ ಹೊಳೆದವು.

‘ನಿನಗೆ ತುಂಬ ಆಕರ್ಷಳಾಗಿದ್ದ ಮುಸ್ಲಿಂ ಹುಡುಗಿಯೊಬ್ಬಳಿದ್ದಳು. ಅವಳ ಹೆಸರೇನು ಹೇಳು. ’

‘ಹಸೀನ. ’

‘ನಿನ್ನ ಪ್ರಭಾವದಿಂದ ಬದಲಾದ ಹೆಸರು?’

‘ತುಷಾರ’

‘ಬಾಂಬೆ ಬ್ಲಾಸ್ಟ್‌ನಲ್ಲಿ ಅವಳು ಹೋದ ವರ್ಷ ಸತ್ತಾಗ ಅವಳ ಹೆಸರು ನರ್ಗೀಸ್ ಮಿಚೆಲ್. ನಿನಗದು ಗೊತ್ತಿಲ್ಲ. ಇರಲಿ ಅವಳ ಮಗಳ ಹೆಸರು?’

‘ಪಾಪಿ’

ಸೋಮನಾಥ ಅವನನ್ನು ಅನಾವರಣಗೊಳಿಸುವ ತುಂಟ ಹೊಂಚಿಕೆಯಲ್ಲಿದ್ದಂತೆ ಕಂಡು ಕೃಷ್ಣಸ್ವಾಮಿಗೆ ಗಲಿಬಿಲಿಯಾಯಿತು. ಆದರೆ ಅದನ್ನು ತೋರಗೊಡದಂತೆ, ಇದೊಂದು ಆಟವೆಂಬಂತೆ ಅವನ ಹೆಗಲಿನ ಮೇಲೆ ಕಾಲೇಜು ದಿನಗಳ ಸಖ್ಯದಲ್ಲಿ ತನ್ನ ಕೈಗಳನ್ನಿಟ್ಟ.

‘ತಾಯಿ ಕರೀತಿದ್ದ ಪಾಪಿ. ಆದರೆ ನಿಜವಾದ ಹೆಸರು?’

ಕೃಷ್ಣಸ್ವಾಮಿಗೆ ನೆನಪಾಯಿತು. ಬೆನ್ನಿನ ತುಂಬ ಕಜ್ಜಿಯಿದ್ದ ಎರಡು ಜಡೆಯ ಹುಡುಗಿಯ ಇಟ್ಟ ಹೆಸರು ಜೋತಿ.

‘ಹೌದು. ಅದೇ ಜೋತಿ. ನನ್ನ ಶಿಷ್ಯೆ. ಪ್ಯಾರಿಸ್‌ನಿಂದ ಇಲ್ಲಿಗೆ ಬಂದವಳು. ಅವಳಿಗೆ ತಾಯಿ ನಿನ್ನ ಬಗ್ಗೆ ಎಲ್ಲ ಹೇಳಿದಾಳೆ. ’

ಸೋಮನಾಥ ಕಣ್ಣು ಮುಟುಕಿಸಿದ. ಕೃಷ್ಣಾಸ್ವಾಮಿಗೆ ಗೆಳೆಯನ ಸ್ಪರ್ಶದಿಂದ ದೂರವಾಗಬೇಕೆನ್ನಿಸಿ.

‘ನನ್ನ ಪೆನ್ನನ್ನು ಬಂಡೆ ಕೆಳಗೆ ಬೀಳಿಸಿಕೊಂಡೆಂತ ಕಾಣುತ್ತೆ. ಎದ್ದು ತರಲ?’ ಎಂದು ಸುಳ್ಳು ಹೇಳಿದ್ದ. ವಿಶ್ರಾಂತಿ ಪಡೆದಿದ್ದ ಸೋಮನಾಥ – ‘ನಿನಗೆ ಗೊತ್ತಿಲ್ಲದೇ ಇರುವ ತುಂಬ ಸಂಗತಿ ಇದೆ – ಹಸೀನ ದುರ್ಗಿಯಂತೆ ಒಬ್ಬ ಮಹಾಮಾತೆ. ಹೋಗೋಣ ಬಾ’ ಎಂದು ಮತ್ತೆ ಮರದ ಕೊಂಬೆ ಹಿಡಿದು ನಿಂತು, ಹಿಂದಿನಂತೆಯೇ ಬೀಡಿ ಹೊತ್ತಿಸಿದ.

ಆಗ ಹೊಳೆದು ಈಗ ಮರೆಯುವುದರಲ್ಲಿದ್ದ ಬಂಡೆಯ ಬುಡಕ್ಕೆ ಕೃಷ್ಣಸ್ವಾಮಿ ಪೆನ್ನು ಹುಡುಕುವ ನೆವದಲ್ಲಿ ಹೋದ. ಚಿತ್ರದ ಮೂಲೆಯ ಬಂಡೆಯ ಸಂದಿಯಲ್ಲಿ ಮತ್ತೆ ಅದು ಹೊಳೆಯಲಿಲ್ಲ. ಏನೂ ಕಾಣಲಿಲ್ಲ. ಈ ಪ್ರದೇಶದಲ್ಲಿ ಯಥೇಚ್ಛ ಸಿಗುತ್ತಿದ್ದ ಕಾಗೆ ಬಂಗಾರದ ಇದ್ದೀತು. ಕಿರಣ ದಕ್ಕುವ ಮುಹೂರ್ತ ಮೀರಿದ್ದರಿಂದ ಅದು ಇನ್ನು ಈ ದಿನ ಹೊಳೆಯದೇನೊ….

ಬಂಡೆಗೆ ಅಂಟಿಕೊಂಡ ಓತಿಕೇತದ ಉಬ್ಬು ಕಣ್ಣುಗಳು ಅವನಿಗೆ ನಿರ್ಲಕ್ಷ್ಯದಲ್ಲಿ ಓತಿಕೇತ ಇದ್ದದ್ದು ಆಚೆ, ಅವನ ಬಲಭಾಗದಲ್ಲಿ, ಚಿತ್ರವಿದ್ದ ಎತ್ತರದಲ್ಲಿ. ಏನೋ ಹೊಳೆದದ್ದು ತನ್ನ ಎಡಕ್ಕೆ, ಈಚೆ. ಚಿತ್ರದ ಬುಡದಲ್ಲಿ. ಬಂಡೆಗಳು ಕೂಡುವ ಸಂದಿಯಲ್ಲಿ. ಪ್ರಾಣಭಯಂದ ತನ್ನ ಹಿಂಬದಿಯನ್ನು ಕುಗ್ಗಿಸಿಕೊಂಡಿದ್ದ ಜಿಂಕೆಯನ್ನು ಬೆರಳಿನಲ್ಲಿ ಸವರಿದ. ಬಾಗಿ ಚಿತ್ರದ ಕೆಳಗೆ ಕೂತ. ಕೂತು ಹುಡುಕುತ್ತ ನೋಡಿದ. ಅಲ್ಲೊಂದು ಪುಟ್ಟ ದೋಣಿಯಾಕಾರದ ಗುಳಿ.

ಅಲ್ಲೇ ಆಗ ಬಿಸಿಲಲ್ಲಿ ಹೊಳೆದದ್ದು, ಈಗ ನೆರಳಿನಲ್ಲಿ ಕಂಡದ್ದು – ಗಾಜಿನ ಬಳೆಯ ಚೂರುಗಳು. ಹಸಿರು ಚೂರುಗಳು, ಕೆಂಪು ಚೂರುಗಳು. ಅದರಲ್ಲೊಂದು ಚೂರನ್ನು ಅಚ್ಚರಿಯಲ್ಲಿ ಎತ್ತಿ ಜೇಬಿಗೆ ಹಾಕಿಕೊಂಡ. ಪೆನ್ನು ಸಿಕ್ಕಿತೆಂದು ಸೋಮನಾಥನಿಗೆ ಭಾಸವಾಗುವಂತೆ.

ಕೃಷ್ಣಸ್ವಾಮಿಗೆ ಅವ್ಯಕ್ತ ಹೆಣ್ಣೊಬ್ಬಳ ಬೆರಳುಗಳ ಆಯಸ್ಥಳ ಮುಟ್ಟಿದಂತಾಗಿ ಮೈಯೆಲ್ಲ ಪುಳಕಗೊಂಡಿತು.

ಸಂಭೋಗದ ಪರಾಕಾಷ್ಠ ಉಮ್ಮಳದಲ್ಲಿ ಯಾವಳೋ ತನ್ನ ಕೈಗಳನ್ನು ಮೇಲಕ್ಕೆತ್ತಿ ಚೆಲ್ಲಿರಬೇಕು. ಮೈಮರೆತು ಹೊರಳಾಡಿರಬೇಕು. ಯಾವಳೋ, ಯಾವ ಕಾಲದವಳೋ, ನಿನ್ನೆಯೋ, ಮೊನ್ನೆಯೋ, ನೂರು ವರ್ಷಗಳ ಹಿಂದೆಯೋ, ಬಂಡೆಗಳು ಕುಸಿಯುವ ಮುನ್ನವೊ, ದಿವ್ಯ ಕಳ್ಳನ ಕಣ್ಣಿಗೆ ಬೀಳದ ಈ ಸನ್ನೆಯ ಅರ್ಥ ತನ್ನ ಪಾಲಿಗೆ ಏನು? ಇಲ್ಲಿ ಚತುರ್ಭುಜರಾಗಿ ಹೊರಳಾಡಿದವರು ತನಗೇನು ಹೇಳುತ್ತಿದ್ದಾರೆ.

ಪ್ಯಾಂಟಿನ ಜೇಬಿನಲ್ಲಿ ಕೈಯಿಟ್ಟು ಬಳೆಯ ಚೂರನ್ನು ಸ್ಪರ್ಶಿಸುತ್ತ ಋಗ್ವೇದದ ಕಾಲದ ಋಷಿಯ ಮೊರೆಯ ಸೋಮನಾಥನಿಗೆ ಎದುರಾಗಿ ನಿಂತ. ಅವನಿಗೆ ತಾನು ಹೇಳಲು ಇಚ್ಚಿಸದ ಗುಟ್ಟೊಂದು ಅನಿಗೆ ಈ ತಾಣದಲ್ಲೇ ಕೃಪೆಯಾಗಿತ್ತು.

ಖುಷಿಯಲ್ಲಿ ಹೇಳಿಕೊಂಡ: ಏಯ್ ಅಧಿಕಪ್ರಸಂಗಿ ಬಡ್ಡೀಮನಗ, ಸಾವಿರಾರು ವರ್ಷಗಳ ಹಿಂದೆ ಇಲ್ಲಿಗೆ ಗುಟ್ಟಾಗಿ ಮಜಾ ಮಾಡಲು ಬಂದವರೂ ಇರಬಹುದೋ; ಇಲ್ಲಿ ನಿನ್ನ ಚಿತ್ರದಷ್ಟೇ ಪುರಾತನವಾದ ಓತಿಕೇತವೊಂದು ಹುಟ್ಟುತ್ತ ಸಾಯುತ್ತ ಉಳಕೊಂಡಿದೆಯೊ.

ಅರ್ಧ ವೃತ್ತಾಕಾರದ ಬಂಡೆಯನ್ನು ದಾಟಿ ಹೋಗುವುದು ಬಂದಾಗಿನಷ್ಟು ಕಷ್ಟವಾಗಿರಲಿಲ್ಲ. ಅಕಸ್ಮಾತ್ ಕಾಲು ಜಾರಿದರೆ ಮರದ ಕೊಂಬೆಗಳು ರಕ್ಷಣೆ ಕೊಡಬಲ್ಲಷ್ಟು ದಟ್ಟವಾಗಿಯೂ ದೃಢವಾಗಿಯೂ ಇದ್ದವು. ಬಳಿಸಿ ದಾಟಿದ ಮೇಲೆ ಸುಮಾರು ಎರಡು ಕಿಲೋಮೀಟರಿನಷ್ಟು ದೂರ ಕಾಡಿನಲ್ಲಿ ನಡೆದು ಜೀಪ್ ಕಾಯುತ್ತಿದ್ದ ರಸ್ತೆಯನ್ನು ತಲುಪಿದ್ದಾಯಿತು. ಹೂಬಿಟ್ಟ ಮರಗಳಿಂದಾಗಿಯೂ, ಅಲ್ಲಲ್ಲಿ ಕಡಿದುಪೇರಿಸಿಟ್ಟ ಹಸಿ ಸೌದೆಯಿಂದಾಗಿಯೂ, ಪ್ರಾಯಶಃ ಪುನುಗು ಬೆಕ್ಕಿನಂತಾಗಿಯೂ, ಮೊಟ್ಟುಗಳಲ್ಲಿ ಸರ ಸರ ಸದ್ದು ಮಾಡುವ ವಿಚಿತ್ರವಾಸನೆಯ ಕೊಳಕು ಮಂಡಳ ಹಾವುಗಳಿಂದಾಗಿಯೂ ಕಾಡು ಗಂಧವತಿಯಾಗಿತ್ತು.

ಪರಸ್ಪರ ಕಥಿಸಿಕೊಳ್ಳುವುದು ಶುರುವಾಯಿತು. ಸೋಮನಾಥ ಕಿಲಾಡಿ ಮೂಡಿನಲ್ಲಿ ಮಾತಾಡಲು ತೊಡಗಿದ್ದ. ಉತ್ಕಟತೆಯನ್ನು ಹೆಚ್ಚು ಹೊತ್ತು ತಾಳಲಾರದೆ ಎಲ್ಲ ಘನತೆಯನ್ನೂ ಅನುಮಾನದಿಂದ ನೋಡುವುದರಲ್ಲಿ ನಿಷ್ಣಾತನಾಗುತ್ತ, ಅದನ್ನೇ ತನ್ನ ಬರವಣಿಗೆಯ ಮೂಲದ್ರವ್ಯ ಮಾಡಿಕೊಂಡಿದ್ದ ಕೃಷ್ಣಸ್ವಾಮಿಗೆ ಸೋಮನಾಥ ಅನಾಯಾಸವಾಗಿ ಪಡೆಯುವ ಈ ಧಾಟಿ ಕಾಲೇಜುದಿನಗಲಿಂದ ಪ್ರಿಯವಾದ್ದು.

ನೆನಪಾಯಿತು. ಸೋಮನಾಥ ಎಲ್ಲರಂತೆ ಪರೀಕ್ಷೆಗೆಂದು ಪರದಾಡುವವನಲ್ಲ. ಉರು ಹಚ್ಚುವವನಲ್ಲ. ಹಸೀಕಳ್ಳ ಅವನು. ಹಲವು ಜಂತುಗಳಂತೆಯೂ ಕೀಟಗಳಂತೆಯೂ ಭಾಸವಾಗುವ ತನ್ನದೇ ಒಂದು ಶೀಘ್ರಲಿಪಿಯನ್ನವನು ಸೃಷ್ಟಿ ಮಾಡಿಕೊಂಡಿದ್ದ. ಆ ಗುಪ್ತಲಿಪಿಯಲ್ಲಿ ಊಹಿಸಿದ ಜಟಿಲವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತು ಹಾಕಿಕೊಂಡು ಪರೀಕ್ಷೆಯಲ್ಲಿ ಯಾರಿಗೂ ಗುಮಾನಿ ಬರದಂತೆ ಕಾಪಿ ಹೊಡೆದು ಪಾಸಗುತ್ತ ಹೋದವನು ಈ ತನ್ನ ಖದೀಮ ಗೆಳೆಯ.

ಸೋಮನಾಥನಿಗೆ ತನ್ನ ಕಥೆಯಲ್ಲಿ ಗೊತ್ತಿಲ್ಲದೇ ಇದ್ದದ್ದು ಕಡಿಮೆ. ಅವನ ಸ್ಟಾರ್ ಶಿಷ್ಯೆ ಜೋತಿ ತಾಯಿ ಅವಳಿಗೆ ಹೇಳಿದ್ದನ್ನೆಲ್ಲ ಸೋಮನಾಥನಿಗೆ ಹೇಳಿದಂತಿತ್ತು.

ಇಪ್ಪತ್ತೈದು ವರ್ಷಗಳ ಕೆಳಗೆ ಕೃಷ್ಣಸ್ವಾಮಿ ಲೆಕ್ಚರರ್ ಆಗಿ ಮೈಸೂರಿನ ಒಂದು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯಾರ್ಥಿಗಳ ಕಣ್ಮಣಿ. ಹಾಸನದಲ್ಲಿ ಬ್ಯಾಂಕ್ ಒಂದರಲ್ಲಿ ಇವನ ಹೆಂಡತಿಗೆ ಕೆಲಸ – ಹಾಸನದಲ್ಲೆ ಅವಳ ವಾಸ. ಯಾವಗಲೋ ಒಮ್ಮೊಮ್ಮೆ ಅವರ ಭೇಟಿ, ಯಾರಾದರೂ ಕೇಳಿದರೆ ಕೊಡುವ ಕಾರಣ – ಅವಳ ತಾಯಿತಂದೆ ಮುದುಕರು ಎಂದು. ಮನೆಯಲ್ಲಿ ಶಿಸ್ತಾಗಿ ಒಬ್ಬನೇ ಬದುಕಿಕೊಂಡಿದ್ದು, ಮಧ್ಯರಾತ್ರಿಯ ತನಕ ಗೆಳೆಯರ ಜೊತೆ ಬಿಯರ್ ಕುಡಿಯುತ್ತ ಕೂತಿದ್ದು, ವಿಚಾರ ವಿನಿಮಯ ಮಾಡುವವನೆಂದು ಪ್ರಖ್ಯಾತನಾದ ಕೃಷ್ಣಸ್ವಾಮಿ ಅವರಿವರೆಂಬ ಬೇಧವಿಲ್ಲ . ವಿದ್ಯಾರ್ಥಿಗಳ ಜೊತೆಯೂ ಕ್ಯಾಂಟೀನ್‌ನಲ್ಲಿ ಕೂತು ಅವನು ಹರಟುವನು. ಕುಮಾರ ವ್ಯಾಸ, ಥಾಮಸ್ ಮನ್, ಕಾಫ್ಕಾ, ಲಾರೆನ್ಸ್ ಅವನ ಪ್ರೀತಿಯ ವಿಷಯಗಳು. ಪ್ರೀತಿಯ ವಿಷಯದ ಬಗ್ಗೆಯೂ ಅನುಮಾನಗಳನ್ನು ಸೂಚಿಸುವ ಅವನ ಬುದ್ಧಿಯ ಪಟುತ್ವ ಎಲ್ಲರಿಗೂ ಮೆಚ್ಚು.

ಒಂದು ಕ್ಲಾಸು ಮಾತ್ರ ಇವನಿಗೆ ಅತ್ಯಂತ ಪ್ರಿಯವಾದದ್ದು. ಅದು ಆನರ್ಸ್ ಕ್ಲಾಸು. ಅದರಲ್ಲಿ ಅವನನ್ನು ತುಂಬ ಆಕರ್ಷಿಸಿದ್ದ ಹಸೀನ ಇದ್ದಳು. ಕೂರ್ಗಿನ ಮುಸ್ಲಿಂ ಹುಡುಗಿ ಅವಳು. ಅವಳ ತಂದೆ ಆಟೋ ರಿಕ್ಷಾ ಇಟ್ಟಿದ್ದ. ಸುಮಾರು ಇಪ್ಪತ್ತು ವರ್ಷದ ಈ ಹುಡುಗಿ ಉದ್ದನೆಯ ತೋರವಾದ ಬಾರವಾದ ಜಡೆಯನ್ನು ತನ್ನ ತುಂಬಿದ ಎದೆಯ ಮೇಲೆ ಚೆಲ್ಲಿ, ತನ್ನ ಆಕರ್ಷಕ ತುಂಟು ಕಣ್ಣುಗಳಿಂದ ನೋಡುತ್ತ ಕೂತಿರುತ್ತದ್ದಳು. ಎಲ್ಲಿ ಎಷ್ಟು ಬೇಕೋ ಅಷ್ಟು ಮೈ ತುಂಬಿ ಎತ್ತರವಾಗಿದ್ದ ಅವಳ ಮೈಕಟ್ಟು ಬಳ್ಳಾರಿಯ ಬಿಸಿಲಿನಲ್ಲಿ ಮಿಂದು ತುಸು ಎಣ್ಣೆ ಗಂಪಾಗಿತ್ತು. ಬಡವರ ಮೆನಯ ಹುಡುಗಿಯಾದ್ದರಿಂದ ತನ್ನ ಶಾಲಾ ಜೀವನವನ್ನು ಅವಳು ಬಳ್ಳಾರಿಯಲ್ಲಿ ವರ್ತಕನಾಗಿದ್ದ ಚಿಕ್ಕಪ್ಪನ ಮನೆಯಲ್ಲಿ ಕಳೆದಿದ್ದಳು. ತಂದೆ ಕೊಂಚ ಒರಟ ಮತ್ತು ಬೇಜವಾಬ್ದಾರಿಯ ಎರಡು ಮದುವೆಯಾದ ಮನುಷ್ಯ. ಮನೆಯೆಂದರೆ ನಿರ್ಲಕ್ಷ್ಯ ಅವನಿಗೆ.

ಹಸೀನ ಇದ್ದಕ್ಕಿದ್ದಂತೆ ದೊಡ್ಡ ಕುಂಕುಮವಿಟ್ಟು, ಜಡೆಯ ಮೇಲೆ ಮಲ್ಲಿಗೆ ದಂಡೆ ಮುಡಿದು ಕ್ಲಾಸಿಗೆ ಬರುವಳು. ಹಾಗೆಯೇ ಥೇಟು ಮುಸ್ಲಿಂ ಹುಡುಗಿಯೆಂದು ಕಾಣುವಂತೆ ಮಿನುಗುವ ಪಂಜಾಬಿ ಡ್ರೆಸ್ ತೊಟ್ಟು ಕಿವಿಯಲ್ಲಿ ಲೋಲಾಕ್ ಹಾಕಿ, ಕೈತುಂಬ ಗಜಿನ ಬಳೆ ತೊಟ್ಟು ಬರುವಳು. ಅವಳು ನಡೆದರೆ ಕಾಲಿನ ಗೆಜ್ಜೆ ಸದ್ದು; ಹತ್ತಿರ ಸುಳಿದರೆ ಅತ್ತರಿನ ವಆಸನೆ; ನಕ್ಕರೆ ಕೊಂಚ ಎದ್ದು ಕಾಣುವ ಶುಭ್ರವಾದ ಅಂದವಾದ ಹಲ್ಲುಗಳು.

ತಾನು ಪಠ ಮಾಡುವ ಪದ್ಯದಲ್ಲಿ ಯಾವುದಾದರೂ ಅವಳಿಗೆ ಎಷ್ಟು ಇಷ್ಟವಾಯಿತು ಅಥವಾ ಇಷ್ಟವಾಗಲೇ ಇಲ್ಲ ಎಂದು ಸೂಚಿಸಲು ತಮಗಿಬ್ಬರಿಗೆ ಮಾತ್ರ ಗೊತ್ತಿದ್ದ ಹಲವು ಸನ್ನೆಗಳಿದ್ದವು. ಎರಡು ಕಣ್ಣುಗಳು, ಎರಡು ಹುಬ್ಬುಗಳು, ಎರಡು ಆಕರ್ಷಕವಾದ ತುಟಿಗಳು ಇವೇ, ಈ ಎಲ್ಲ ಸನ್ನೆಗಳನ್ನೂ ಮಾಡುವ ಅವಳ ಸಾಧನಗಳಾಗಿದ್ದವು. ಕತ್ತಿನ ಸರವನ್ನೆತ್ತಿ ಅವಳು ಕಚ್ಚಿದರಂತೂ ಕೃಷ್ಣಸ್ವಾಮಿಗೆ ಸ್ವರ್ಗ. ಹಸೀನಳಿಂದಾಗಿ ಅವನಿಗೆ ಪ್ರಿಯರಾದ ಲೇಖಕರೆಲ್ಲರೂ ಇನ್ನಷ್ಟು ಹೆಚ್ಚು ಪ್ರಿಯರಾಗಿದ್ದರು.

ಒಂದು ದಿನ ಕ್ಲಾಸಿನಲ್ಲಿ ಕೃಷ್ಣಸ್ವಾಮಿ ಹುಡುಗರೂ ಹುಡಗಿಯರೂ ಬೇರೆ ಬೇರೆಯಾಗಿ ಕೂರದೇ ಒಟ್ಟಾಗಿ ಕೂರುವುದ ಹೆಚ್ಚು ಆರೋಗ್ಯಕರ ಎಂದು ಬಿಟ್ಟಿದ್ದ. ಅದರ ಮಾರನೇ ದಿನವೇ ಗೋವಿಂದರಾವ್ ಎಂಬ ಗೋಟು ಮೋರೆಯ ಮೀಸೆ ಬಿಟ್ಟ ಹುಡುಗನೂ, ಹಸೀನಳೂ ಇಬ್ಬರೇ ಒಂದು ಬೆಂಚಿನ ಮೇಲೆ ಒಟ್ಟಾಗಿ ಕೂತೇ ಬಿಟ್ಟು ಎಲ್ಲ ಉಪಾಧ್ಯಾಯರಿಗೂ ಕ್ಲಾಸಿಗೆ ಹೋದಾಗ ಮುಜುಗರವಾಗುವಂತೆಯೇ, ತಾವು ತಾವೇ ಮಾತಾಡಿಕೊಳ್ಳುವಾಗ ಕಡುಕೋಪ ಉಕ್ಕುವಂತೆಯೂ ಮಾಡಿದ್ದರು. ಹೀಗೆ ತನ್ನ ಸಹೋದ್ಯೋಗಿಗಳ ಕಣ್ಣಿನಲ್ಲಿ ತಾನು ಸೈತಾನನಾಗಿರುವುದು ಕಂಡು ಕೃಷ್ಣಸ್ವಾಮಿ ಆಪ್ತರ ಜೊತೆ ಹಿಗ್ಗಿದ್ದ. ಆದರೆ ಗೋವಿಂದರಾವ್‌ನಂತಹ ಬೆರಕೆ ಹುಡುಗನೊಬ್ಬ ಹಸೀನಳ ದವಿಯ ಸ್ನೇಹಕ್ಕೆ ನಾಲಾಯಕ್ಕಾದವ ಎಂದು ಒಳಗೊಳಗೇ ಕಸಿವಿಸಿಗೊಂಡಿದ್ದ. ಈ ಕಸಿವಿಸಿಗೆ ವೈಯಕ್ತಿಕ ಕಾರಣವೂ ಇತ್ತು. ಅವನ ಜೊತೆ ಕೂರುವುದು ಮೊದಲಾದ ಮೇಲೆ ಹಸೀನ ತನ್ನ ಸನ್ನೆಗಳ ಮೂಲಕ ಕೃಷ್ಣಸ್ವಾಮಿಯ ರಸಾನುಭವವನ್ನು ಹಿಗ್ಗಿಸುವುದು ಕೊನೆಯಾಗಿತ್ತು.

ಒಂದು ದಿನ ಇಬ್ಬರೂ ತಾನೂ ಕೂತಿದ್ದ ಕೋಣೆಗೆ ಬಂದರು. ಹಸೀನ ಮುಂದಾಗಿ ಹೇಳಿದಳು. ‘ಸಾರ್ ನಾವು ಹೆಸರನ್ನು ರಿಜಿಸ್ಟ್ರಾರ್ ಹತ್ತಿರ ಹೋಗಿ ಬದಲಾಯಿಸಿಕೊಂಡು ಬಂದಿದ್ದೇವೆ. ನಾನಿನ್ನು ಮುಂದೆ ತುಷಾರ. ಇವನು ವಿಂದ. ’

ಕೃಷ್ಣಸ್ವಾಮಿಗೆ ಏನು ಹೇಳಬೇಕು ತೋಚದೆ ತನ್ನ ಪಾಂಡಿತ್ಯವನ್ನು ಪ್ರದರ್ಶಿದ:

‘ಶೇಕ್ಸ್‌ಪಿಯರ್ ಹೇಳಿಲ್ಲವೆ? ಹೆಸರಿನಲ್ಲಿ ಏನಿದೆ? ಹೇಗೆ ಕರೆದೂ ಗುಲಾಬಿ ಗುಲಾಬಿಯೇ. ’

‘ನಮ್ಮ ಅಟೆಂಡೆನ್ಸ್ ರಿಜಿಸ್ಟರ್‌ನಲ್ಲಿ ಬದಲಾಯಿಸಿದ ಹೆಸರನ್ನು ಬರೆಸಬೇಕು ಸಾರ್, ಪ್ರಿನ್ಸಿಪಲ್ ಶಾಂತಾಗೆ ನಮ್ಮನ್ನು ಕಂಡರೆ ಆಗದು. ನಿಮ್ಮ ಇಂಟರ್‌ವೆನ್‌ಶನ್ನಿಗೆಂದು ಬಂದಿದೇವೆ’ ಹಸೀನ ಗಂಭೀರವಾಗಿ ಕೋರಿದ್ದಳು.

ಇದಾದ ಮೇಲೆ ಒಂದೆರಡು ತಿಂಗಳಲ್ಲಿ ಅವರು ಕಣ್ಮರೆಯಾದರು. ಒಂದು ಕಚಡಾ ಹೋಟೆಲ್‌ನಲ್ಲಿ ಅವರಿಬ್ಬರೂ ಇರುವ ಸುದ್ದಿ ತಿಳಿದ ಕಾಲೇಜಿನ ಸೆಕ್ಯುರಿಟಿ ಆಫೀಸರು ಪೋಲಿಸರನ್ನು ಕರೆದುಕೊಂಡು ಹೋಗಿ ಅವರನ್ನು ಅರೆಸ್ಟ್ ಮಾಡಿಸಿ ತಂದ. ಅವರಿಬ್ಬರೂ ಕಟ್ಟಬೇಕದ ಹಾಸ್ಟೆಲಿನ ಬಾಕಯನ್ನು ಗದರಿಸಿ ತೆಗೆದುಕೊಂಡು, ಕಾಲೇಜಿನಿಂದ ವಜಾಮಾಡಿ ಎಲ್ಲ ವಿದ್ಯಾರ್ಥಿಗಳ ಎದುರು ಛೀಮಾರಿ ಹಾಕಿ ಅವರನ್ನು ಅಟ್ಟಿದರು. ಅವರಿಬ್ಬರೂ ಕೈ ಕೈ ಹಿಡಿದು ನಡೆದು ಹೋಗುವುದನ್ನು ನೋಡುತ್ತ ಕೃಷ್ಣಸ್ವಾಮಿ ಇದಕ್ಕೆಲ್ಲ ಮೂಲ ಕಾರನ ತಾನೆಂದು ಗಲಿಬಿಲಿಗೊಂಡ. ಸ್ವಲ್ಪ ಹೊತ್ತಿನ ನಂತರ ಸ್ಕೂಟರ್ ಮೇಲೆ ಹೋಗಿ ಅವರ ಬಳಿ ನಿಲ್ಲಿಸಿದ. ಹಸೀನಾಳಿಗೆ ಪಿಲಿಯನ್ ಮೇಲೆ ಕೂರೆಂದು ಹೇಳಿ ಗೋವಿಂದರಾವ್‌ಗೆ ಬಸ್ಸು ಹಿಡಿದು ಮನೆಗೆ ಬಾ ಎಂದ.

ಹಸೀನಾಗೆ ಯಾವ ಪಶ್ಚಾತ್ತಾಪವೂ ಇರಲಿಲ್ಲ. ಮನೆಗೆ ಅವಳನ್ನು ಕರೆದು ತಂದು ಕೂರಿಸಿ, ಬೆಳಿಗ್ಗೆ ಅಡಿಗೆಯವನು ತಯಾರಿಸಿಟ್ಟಿದ್ದ ಉಪ್ಪಿಟ್ಟನ್ನೂ ಬಾಳೆಯ ಹಣ್ಣನ್ನೂ ಕೊಟ್ಟ. ‘ಥ್ಯಾಂಕ್ಸ್’ ಎಂದು ಅವಳು ಅದನ್ನು ತೆಗೆದುಕೊಂಡು ಹೊಟ್ಟೆ ತುಂಬುವಂತೆ ತಿಂದಳು. ತಾವು ಇಲ್ಲಿಂದ ಬೇಗ ಕಣ್ಮರೆಯಾಗಬೇಕೆಂದೂ, ಇಲ್ಲದ್ದರೆ ತಮ್ಮಿಬ್ಬರ ತಂದೆಯರಿಗೆ ಪತ್ತೆಯಾಗಿ ತಮ್ಮನ್ನು ಚಚ್ಚಿ ಸಾಯಿಸುವರೆಂದು ಹೇಳಿದಳು.

‘ನೀವಿನ್ನೂ ಮದುವೆಯಾಗಿಲ್ಲವೆ? ಇಬ್ಬರೂ ಕಾನೂನಿನ ಪ್ರಕಾರ ಅಡಲ್ಟ್ಸ್. ಚಿಂತಿಸಬೇಕಿಲ್ಲ’ ಎಂದು ಕೃಷ್ಣಸ್ವಾಮಿ ಧೈರ್ಯ ಹೇಳಿದ. ಮಚೂರಾದ ಅಧ್ಯಾಪಕನ ರೋಲನ್ನು ಕಷ್ಟಪಡುತ್ತ ನಿರ್ವಹಿಸಿದ್ದ.

ಹಸೀನ ತನ್ನ ಕೈಯಲ್ಲಿದ್ದ ಎರಡು ಬಳೆಗಳನ್ನೂ ಕತ್ತಿನ ಸರವನ್ನು ಕಿವಿಯ ಓಲೆಯನ್ನೂ ಮಾರಿ ಚೀಪದ ಹೋಟೆಲಲ್ಲಿ ಈ ತನಕ ಇದ್ದದ್ದು. ತಮ್ಮಲ್ಲಿ ಉಳಿದಿದ್ದ ಹಣವನ್ನೆಲ್ಲ ಕಾಲೇಜು ಹಾಸ್ಟೆಲಿನ ಬಾಕಿಯೆಂದು ಫಿಲಸ್ಟೈನ್ ಗೂಬೆಗಳು ವಸೂಲಿ ಮಾಡಿಯಾಯಿತು ಎಂದು ಹಸೀನ ನಸು ನಗುತ್ತಲೇ ಹೇಲಿ ಕೃಷ್ಣಸ್ವಾಮಿಯನನ್ನು ದಿಟ್ಟವಾಗಿ ನೋಡಿದಳು. ತನ್ನ ಸಂಸಾರವನ್ನು ಏನಕೇನ ನಿರ್ವಹಿಸುವ ಅವಳ ಕೌಶಲ್ಯದ ಮೊದಲನೇ ಸೂಚನೆ ಇದಾಗಿತ್ತು.

‘ವಿಂದ ಯಾವುದಾದರೂ ಹೋಟೆಲಿನಲ್ಲಿ ಸರ್ವರ್ ಆಗಿ ಕೆಲಸ ಮಾಡ್ತೀನಿ ಅಂದಿದ್ದಾನೆ. ನನಗೆ ಟೈಲರಿಂಗ್ ಬರುತ್ತೆ. ಒಂದು ಮೆಶಿನ್ ಕೊಂಡು ಹೊಲಿತೇನೆ. ಹೇಗೋ ಜೀವನ ಆಗತ್ತೆ. ಬೆಂಗಳೂರಿಗೆ ಹೋಗಿರ‍್ತೀವಿ. ಅಲ್ಲೇ ರಿಜಿಸ್ಟರ‍್ಡ್ ಮದುವೆ ಆಗ್ತೀವಿ’ ಎಂದು ಹಸೀನ ತನ್ನ ವಿಂದ ದೂರದಲ್ಲಿ ಬರುತ್ತಿರುವುದನ್ನು ಹೊರಗೆ ಹೋಗಿ ನೋಡಿ, ಸಮಾಧಾನಪಟ್ಟು ಒಳಂದು ಕೂತಳು.

‘ನಿಮ್ಮಿಂದಲೇ ನಾವು ಧೈರ್ಯ ಪಡೆದದ್ದು ಸಾರ್. ’

ಅವಳ ಮಾತಿನಲ್ಲಿ ತುಂಟತನವಿತ್ತೆ? ಕೃಷ್ಣಸ್ವಾಮಿ ಮತ್ತೆ ಮತ್ತೆ ಆಶ್ಚರ್ಯ ಪಟ್ಟಿದ್ದಿದೆ.

ಕೃಷ್ಣಸ್ವಾಮಿ ಮಲಗುವ ಕೋಣೆಗೆ ಹೋದ. ಶಾಂತಿನಿಕೇತನದಿಂದ ಕೊಂಡು ತಂದಿದ್ದ ಹೊಸದಾದ ಒಂದು ಪರ್ಸಿನಲ್ಲಿ ಗರಿ ಗರಿಯಾದ ಎರಡು ಸಾವಿರ ರೂಪಾಯಿಗಳನ್ನು ಮಡಿಸಿಟ್ಟು ತಂದ. ಅವಳ ತೊಡೆಯ ಮೇಲೆ ಅದನ್ನು ಇಟ್ಟ. ಸ್ವಲ್ಪ ಯೋಚಿಸಿ ಮತ್ತೆ ಒಳಗೆ ಹೋದ. ಮದುವೆಯಾಗಲು ಇರುವ ತನ್ನ ತಂಗಿಗೆಂದು ಕೊಂಡು ಇಟ್ಟಿದ್ದ, ಇನ್ನೂ ಆನ್‌ಪ್ಯಾಕ್ ಮಾಡದ ಸಿಂಗರ್ ಎಲೆಕ್ಟ್ರಿಕ್ ಹೊಲಿಗೆ ಯಂತ್ರವನ್ನು ಅವಳ ಎದುರಿನ ಮೇಜಿನ ಮೇಲೆ ಇಟ್ಟ.

‘ಇವೆರಡೂ ನಿನಗೆ ನನ್ನ ಉಡುಗೊರೆ, ನಿನಗೆ ಒಳ್ಳೆಯದಾಗಲಿ’ ಎಂದ.

ಅಷ್ಟು ಹೊತ್ತಿಗೆ ಗೋವಿಂದರಾವ್ ವಕ್ಕರಿಸಿದ್ದ. ಅವನ ಮುಖದಲ್ಲಿ ಎಳ್ಳಷ್ಟೂ ಗೆಲುವು ಕಾಣಲಿಲ್ಲ. ಅವನು ದಿಗಿಲು ಪಟ್ಟವನಂತೆ ಕಂಡು ಕೃಷ್ಣ ಸ್ವಾಮಿಗೆ ಸಿಟ್ಟಾಯಿತು. ನಮಸ್ಕಾರ ಸಾರ್ ಎಂದ ಗೋವಿಂದರಾಯ ಕೃಷ್ಣಸ್ವಾಮಿಗೆ ಕೊಂಚವೂ ಇಷ್ಟವಾಗದ ಸಲಿಗೆಯಲ್ಲಿ

‘ಮಿಸ್ಟರ್‌ ವಿಂದ, ಒಂದು ಟಾಂಗಾನ್ನ ಸ್ಟಾಂಡಿನಿಂದ ತಗೊಂಡು ಬನ್ನಿ’ ಎಂದು ಯಾವತ್ತೂ ಬಳಸದ ಬಹುವಚನದಲ್ಲಿ ಹೇಳಿದ. ಗೋವಿಂದರಾಯ ಕದಲಿಲ್ಲ. ಹಸೀನಳನ್ನು ಜೊತೆಯಲ್ಲಿ ಕರೆದುಕೊಂಡು, ಮೆಶೀನನ್ನು ಅವಳಿಂದಲೇ ಹೊತ್ತಿಸಿಕೊಂಡು ಹೋಗಲು ಅವನು ಹೊಂಚಿದಂತಿತ್ತು.

ತೋರವಾದ ಜಡೆಯ, ಕೈತುಂಬ ಬಳೆಯ ಎಂದಿನ ಹುಡುಗಿಯಂತೆಯೇ ಹಸೀನ ಪರಿಸ್ಥಿತ ಗಮನಿಸಿ ತುಂಟಾಗಿ ನಕ್ಕಳು. ಗೋವಿಂದರಾಯ ಬೆನ್ನಿಗೆ ಗುದ್ದಿ, ಹುಸಿಕೋಪದಲ್ಲಿ ಅವನನ್ನು ಮುದ್ದಾಗಿ ನೋಡಿ ಹೊಲಿಗೆ ಮಿಶನನ್ನು ಅವನ ಕೈಯಲ್ಲಿಟ್ಟಳು. ಉದಾಸೀನನಾಗಿ ಗೋವಿಂದರಾಯ ಮೆಶಿನನ್ನು ಅವಳಿಂದ ಪಡೆದ ರೀತಿ ಕಂಡು ಈ ದಾಂಪತ್ಯದಿಂದ ಹಸೀನಾಗೆ ಸುಖವಿಲ್ಲ ಎನ್ನಿಸಿತು ಕೃಷ್ಣಸ್ವಾಮಿಗೆ, ಬಸ್‌ಸ್ಟಾಂಡಿಗೆ ನಡೆದೇ ಹೋಗಲು ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ಉದ್ಯುಕ್ತಳಾ ಹಸೀನ ಹೇಳಿದಳು:

‘ಕಾಗದ ಬರೀತೀನಿ ಸಾರ್. ನೀವು ಬರಿಬೇಕು. ಈಗ ಸೀದಾ ಬೆಂಗಳೂರಿಗೆ ಕಾಳು ಕೀಳ್ತೀವಿ. ’

ಅವಳು ಧಾರಾಳವಾಗಿ ತನ್ನನ್ನು ಮೈತುಂಬ ಎನ್ನುವಂತೆ ನೋಡಿದ ರೀತಿ ಕಂಡು ಕೃಷ್ಣಸ್ವಾಮಿಗೆ ತಾನು ಸೋತೆ ಎಂಬ ದುಃಖ ಹುಟ್ಟಿಕೊಂಡಿತು.

ಕೃಷ್ಣಸ್ವಾಮಿ ಲೆಕ್ಕ ಹಾಕುತ್ತ ಯೋಚಿಸಿದ. ಅದು ಎಪ್ಪತ್ತ ಒಂದನೆಯಿಸವಿ. ಆಗ ಹಸೀನಾಗೆ ಇಪ್ಪತ್ತು ವರ್ಷ. ತನಗೆ ಮುವ್ವತ್ತು ವರ್ಷ. ಅಂತರ ಅಷ್ಟೇನೂ ಹೆಚ್ಚಲ್ಲ. ಅಪ್ರಿಯಳಾದ ಹೆಂಡತಿಯನ್ನು ಬಿಟ್ಟು ಅವಳನ್ನು ಕೂಡಿಕೊಳ್ಳಬಹುದಿತ್ತು. ಮೈಸೂರು ಕಷ್ಟವೆಂದು ಕಂಡರೆ ಬೇರೆ ಎಲ್ಲಾದರೂ ಕೆಲಸವನ್ನು ಪಡೆಯಬಹುದಿತ್ತು.

ಬೆಂಗಳೂರಿಗೆ ಹೋದ ಮೇಲೆ ಹಸೀನ ದಟ್ಟ ದಾರಿದ್ರ್ಯದಲ್ಲಿ ಬದುಕಬೇಕಾಯಿತು. ಗೋವಿಂದರಾವ್ ಪರಮ ಆಲಸ್ಯದ ಖದೀಮ. ಹಸೀನ ಸ್ಲಮ್ಮಿನಲ್ಲಿ ಬಟ್ಟೆ ಹೊಲಿದು ಅಲ್ಪಸ್ವಲ್ಪ ಗಂಜಿಗಾಗುವಷ್ಟು ದುಡಿಯುವುದು. ಗೋವಿಂದರಾವ್ ಅದನ್ನು ತಿಂದು ಪೋಲಿ ಅಲೆಯುವುದು, ಪುಂಡರ ಜೊತೆ ಕೂಡಿಕೊಂಡು ಇಸ್ಪೀಟಾಡುವುದು. ಗಾಂಜಾವನ್ನು ಮಾರುವುದು, ಸೇದುವುದು, ಮನೆಗೆ ಕುಡಿದುಬಂದು ಹಸೀನಾಳನ್ನು ಹೊಡೆಯುವುದು.

ಇಷ್ಟರ ನಡುವೆ ಹಸೀನಾ ಬಸುರಿಯಾಗಿ ಈ ಜೋತಿಯನ್ನು ಹೆತ್ತಳು. ಆಮೇಲೆ ತನ್ನ ಹಿಂದಿನ ಗೆಳೆಯರು ಗೆಳತಿಯರ ಮನೆಗೆ ಮಗಳನ್ನು ಎತ್ತಿಕೊಂಡು ಹೋಗಿ ಹಣವನ್ನು ಬೇಡಲು ತೊಡಗಿದ್ದಳು. ಇಂಥ ಅಪೇರುಗಳನ್ನು ಇಷ್ಟಪಡದ ಕೃಷ್ಣಸ್ವಾಮಿಯ ಅಸೂಯಾಪರರಾದ ವಿದ್ಯಾರ್ಥಿಗಳು ಹೇಳುವ ಪ್ರಕಾರ ಕದಿಯಲೂ ತೊಡಗಿದಳು.

ಒಂದು ದಿನ ಬೆಳಗಿನ ಝಾವ ಅವನು ಪೇಪರ್ ಓದುತ್ತಾ ಕೂತಿದ್ದಾಗ ಹಸೀನ ಮೈಸೂರಿನ ಷಾಪಸಂದ್ ಗಾಡಿಯಿಂದ ಕೆಳಗಿಳಿದಳು. ಒಂದುಕೈಯಲ್ಲಿ ಸಣ್ಣದೊಂದು ಟ್ರಂಕನ್ನೂ ಇನ್ನೊಂದರಲ್ಲಿ ಮಗಳನ್ನೂ ಹಿಡಿದಿದ್ದಳು. ತನ್ನನ್ನು ನೋಡಿದ್ದೇ ಹಿಂದಿನ ಆತ್ಮೀಯತೆಯಲ್ಲಿ ನಗಲು ಪ್ರಯತ್ನಪಟ್ಟಳು. ಅವಳ ಕಣ್ಣಿನಲ್ಲಿ ಹೊಳಪಿರಲಿಲ್ಲ, ಮುಖ ಸೊರಗಿತ್ತು. ಅವಳು ಉಟ್ಟು ಸೀರೆ ಬಾಡಿದ ಸೊಪ್ಪಿನಂತಿತ್ತು. ಒಳಗೆ ಬಂದಳು.

ಎಲ್ಲೆಲ್ಲೂ ಸುಂದರವಾದ ಬೊಂಬೆಗಳನ್ನೂ ಕಲಾಕೃತಿಗಳನ್ನೂ ಶುಭ್ರವಾದ ಗಾಜಿನ ಮೇಲಿಟ್ಟು, ಕೂರಲು ಹಿತವಾದ ಹಗುರವಾದ ಮೆತ್ತೆ ಹಾಕಿದ ಬೆತ್ತದ ಕುರ್ಚಿಗಳನ್ನು (ಅದರಲ್ಲಿ ಕೂತವರು ಆತ್ಮೀಯವಾದೊಂದು ಕುಟುಂಬವಾಗುವಂತೆ ಜೋಡಿಸಿಟ್ಟಿದ್ದ ಕೋಣೆಯನ್ನು) ಕಂಡದ್ದೇ ಜೋತಿ ಚುರುಕಾದಳು. ಕಲಾಕೃತಿಗಳನ್ನು ಅವಳು ಕುತೂಹಲದಲ್ಲಿ ಎತ್ತಿ ನೋಡುವುದನ್ನು ಹಸೀನ ಗದರಿಸಿ ತಡೆಯಲಿಲ್ಲ. ಕೃಷ್ಣಸ್ವಾಮಿ ತನ್ನ ಆತಂಕವನ್ನು ಮುಚ್ಚಿಕೊಂಡು ಹಸೀನಾಗೆ ಟೀ ಮಾಡುವಂತೆ ತನ್ನ ಆಳಿಗೆ ಕೂಗಿಹೇಳಿದ. ಜೋತಿಯ ಹೊಟ್ಟೆ ಉಬ್ಬರಿಸಿದಂತಿತ್ತು. ಅವಳ ಮುಖ ಬಿಳುಚಿಕೊಂಡಿತ್ತು. ಮಗು ಉಟ್ಟಲಂಗ ಹರಿದಿತ್ತು.

“ನಾನಿಲ್ಲಿ ಇರಬಹುದೆ?”

ಹಸೀನ ಕಣ್ಣಲ್ಲಿನ ನೀರನ್ನು ತಡೆಹಿಡಿದು ಗದ್ದವಾದ ಗಂಟಲಲ್ಲಿ ಕೇಳಿದಳು. ಕೃಷ್ಣಸ್ವಾಮಿ ಅವಳ ಟ್ರಂಕನ್ನು ಎತ್ತಿಕೊಂಡು ಅತಿಥಿಗಳಿಗೆಂದು ಇದ್ದ ಕೋಣೆಯಲ್ಲಿ ಅದನ್ನುಇಟ್ಟು ಬಂದು,

“ಟೀ ಕುಡಿದಾದ ಮೇಲೆ ಸ್ನಾನ ಮಾಡು. ಮಗುವಿಗೆ ಈಗಲೇ ತಿನ್ನಲು ಏನಾದರೂ ಕೊಡಲ?” ಎಂದ.

“ಎಸ್. ಪ್ಲೀಸ್”

ಹಸೀನ ಕಣ್ಣೊರಸಿಕೊಂಡಳು. ಕೃಷ್ಣಸ್ವಾಮಿ ಬಿಸ್ಕತ್ತನ್ನು ತಂದುಕೊಟ್ಟ. ಜೋತಿ ಚಾಪೆಯ ಮೇಲೆಲ್ಲ ಅದರ ಪುಡಿ ಚೂರುಗಳು ಬೀಳುವಂತೆ ಅವಸರ ಅವಸರವಾಗಿ ತಿಂದಳು. ಕೃಷ್ಣಸ್ವಾಮಿ ತಂದುಕೊಟ್ಟ ಹಾಲನ್ನು ಮೈಮೇಲೆ ಚೆಲ್ಲಿಕೊಳ್ಳುತ್ತ ಕುಡಿದಳು.

ಗಂಡನನ್ನು ಬಿಟ್ಟು ಬಂದೆಯೆ? ಎಂದು ಕೇಳಬೇಕೊ ಬೇಡವೊ ತಿಳಿಯದೆ ಕೃಷ್ಣಸ್ವಾಮಿ ಹಸೀನ ಮಾತಿಗೆ ಕಾದ. ಅವಳು ಎಲ್ಲ ಮುಗಿಯಿತು ಎಂದು ಅರ್ಥಗರ್ಭಿತವಾಗಿ ಹೇಳಿ ಸ್ನಾನಕ್ಕೆ ಹೋದಳು. ಮೊದಲು ಮಗಳಿಗೆ ಸ್ನಾನ ಮಾಡಿಸಿ, ತಾನೂ ಮಾಡಿದಳು. ಟ್ರಂಕ್‌ನಲ್ಲಿದ್ದ ಶುಭ್ರವಾದೊಂದು ಸೀರೆಯನ್ನು ತಾನುಟ್ಟು, ಮಗಳಿಗೂ ಶುಭ್ರವಾದ ಬಟ್ಟೆ ತೊಡಿಸಿ ಕೃಷ್ಣಸ್ವಾಮಿಯ ಪಕ್ಕ ಬಂದು ಕೂತಳು. ಆದರೆ ಅವಳು ಅದೇ ಹಸೀನಳಾಗಿ ಉಳಿದಿರಲಿಲ್ಲ.

ಕೃಷ್ಣಸ್ವಾಮಿ ಜೋತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ. ಹೊಟ್ಟೆಯಲ್ಲಿನ ಹುಳಕ್ಕೂ, ಬೆನ್ನ ಮೇಲಿನ ಕಜ್ಜಿಗೂ, ರಕ್ತ ಹೀತನೆಗೂ ಔಷಧಿ ಕೊಡಿಸಿದ. ಆರೋಗ್ಯಕರವಾದ ಹಣ್ಣು ಹಂಪಲಗಳನ್ನು ತಿನ್ನಿಸಿ, ಹಾಲು ಕುಡಿಸಿ ಒಂದು ತಿಂಗಳಲ್ಲೇ ಅವಳು ಗುಣವಾಗುವಂತೆ ಮಾಡಿದ. ಹಸೀನಳಿಗೆ ಹೊಸ ಬಟ್ಟೆ ತಂದು ಕೊಟ್ಟ. ಹೋಟೆಲಿಂದ ಚಿಕನ್ ಬಿರಿಯಾನಿ ಕಟ್ಟಿಸಿ ತಂದ: ಬಿಯರ್ ಕುಡಿಸಿದ. ಆದರೆ ಅವನ ಕರುಣೆ ಅವಳ ದೈನ್ಯವನ್ನು ಹೆಚ್ಚು ಮಾಡಿತ್ತು. ಹಿಂದಿನ ಅನ್ಯೋನ್ಯ ಆಕರ್ಷಣೆ, ತುಂಟು ನಡೆತೆ, ಸನ್ನೆಯ ಮೂಲಕ ಒಬ್ಬರಿಗೊಬ್ಬರು ತಿಳಿಯುವ ರೀತಿ ಉಳಿದಿರಲಿಲ್ಲ.

ಅಂಕೆಯಿಲ್ಲದೆ ಬೆಳೆದಿದ್ದ ಜೋತಿಗೆ ನಯನಾಜೂಕು, ಶಿಸ್ತು ಕಲಿಸಲು ನೋಡಿದ. ಈ ಕಲಿಸುವ ಕ್ರಿಯೆ ಕೃಷ್ಣಸ್ವಾಮಿಯ ಕಿರಿಕಿರಿಯನ್ನು ವ್ಯಕ್ತಗೊಳಿಸುವ ವಿಧಾನವಾಯಿತೇ ವಿನಹ, ಅದರಲ್ಲಿ ಅಕ್ಕರೆ ಇರಲಿಲ್ಲ. ಇದನ್ನು ಮೌನದಲ್ಲಿ ಗಮನಿಸುತ್ತಿದ್ದ ಹಸೀನ ಉಂಡು ತಿಂದು ಆರೋಗ್ಯವಂತವಾದರೂ ಕೊರುಗುವಂತೆ ಕಂಡಳು.

ಒಂದು ದಿನ ಅವನು ಲೇಟಾಗಿ ಮನೆಗೆ ಬಂದಾಗ ಗೋವಿಂದರಾಯ ಮನೆಯ ಮೆಟ್ಟಿಲು ಇಳಿಯುತ್ತಿದ್ದ. ಕೃಷ್ಣಸ್ವಾಮಿ ಮಾತನಾಡದೆ ಒಳಗೆ ಹೋಗಿ ಕೋಣೆಯ ಬಾಗಿಲು ಹಾಕಿಕೊಂಡ. ಸ್ವಲ್ಪ ಹೊತ್ತಾದ ಮೇಲೆ ಹಸೀನ ಬಾಗಿಲು ತಟ್ಟಿ ಒಳಗೆ ಬಂದು ಅವನ ಪಕ್ಕ ಕೂತಳು.

“ವಿಂದ ಹಸಿದು ಬಂದಿದ್ದ. ಪಾಪ ಎನ್ನಿಸಿತು. ಅವನಿಗೆ ನಿಮ್ಮ ಟ್ರಂಕಿನಿಂದ ಐನೂರು ರೂಪಾಯಿ ತೆಗೆದು ಕೊಟ್ಟೆ.

ಹಸೀನ ನೇರವಾಗಿ ಕೃಷ್ಣಸ್ವಾಮಿಯ ಮುಖ ನೋಡುತ್ತ ಹೇಳಿದಳು. ಅವನು ಮೌನವಾಗಿರುವುದು ಕಂಡು ಬೇಕೆಂದೇ ಕೆಣಕಿದಳು.

“ನಾನು ಬೇರೆಯವರ ಮನೆಯಲ್ಲಿ ಕದ್ದಿದ್ದೇನೆ. ಆದರೆ ನಿಮ್ಮ ಮನೆಯಲ್ಲಿ ಕದ್ದಿಲ್ಲ. ನೀವು ವಿಂದಾ ಬಂದದ್ದನ್ನು ಇವತ್ತು ನೋಡಿರದಿದ್ದರೂ ಈ ವಿಷಯ ತಿಳಿಸುತ್ತಿದ್ದ. ”

ಕೃಷ್ಣಸ್ವಾಮಿ ರೇಗಿದ್ದರೆ ಹಸೀನಳಿಗೆ ಸಮಾಧಾನವಾಗುತ್ತಿತ್ತೇನೊ. ಅವನು ಶ್ರೀಮದ್ಗಾಂಭೀರ್ಯದ ಮುದ್ರೆಯನ್ನು ಮುಖಕ್ಕೊತ್ತಿಕೊಂಡು ಮೌನವಾಗಿ ಕೂತಿದ್ದ.

”ವಿಂದಾ ನನ್ನ ಹಡೊಎದಿದ್ದಾನೆ. ಒದಿದ್ದಾಣೆ. ಉಪವಾಸ ಕೆಡವಿದಾನ, ರಾಸ್ಕಲ್ ಆದರೂ ಅವನೇ ನನಗೆ ಯಾಕೆ ಇಷ್ಟ ಹೇಳಿ? ಅವನೊಬ್ಬ ಮನುಷ್ಯ, ನಾನು ಇನ್ನೇನು ಅವನಿಗೆ ಕೊಟ್ಟೆ ಗೊತ್ತ? ಅದನ್ನ ನಿಮ್ಮಿಂದ ಮುಚ್ಚಿಡಬೇಕೂಂತ ಇದ್ದೆ. ಆದರೆ ಹೇಳಬಿಡ್ತೇನೆ ಕೇಳಿ. ನೀವು ಬೀರುವಿನೊಳಗೆ ಇಟ್ಟುಕೊಂಡಿದೀರಲ್ಲ, ಪಿಕ್ನಿಕ್ ಹೋದಾಗ ನೀವು ಉಪಯೋಗಿಸುವ ಕ್ಯಾಸೆಟ್ ಟೆಪ್‌ರಿಕಾರ್ಡ್‌ರ್ ಅದನ್ನೂ ಅವನಿಗೆ ಕೊಟ್ಟೆ. ದರಿದ್ರ ಲೋಫರ್ – ಅದನ್ನೂ ಮಾರಿಕೊಳ್ಳುತ್ತೋ ಏನೊ? ಕೇಳಿದಾಂತ ಕೊಟ್ಟೆ ಅಷ್ಟೆ. ಸರಿ.

ಹಸೀನ ವಿಕಾರವಾಗಿ ನಕ್ಕಳು. ಕೃಷ್ಣಸ್ವಾಮಿ ಎದ್ದು ಹೋಗಿ ಗ್ಲಾಸಿನಲ್ಲಿ ವಿಸ್ಕಿ ಸುರಿದುಕೊಂಡು ನೀಟ್ ಕುಡಿದ. ಅವಳ ಕಡೆ ನೋಡಲಿಲ್ಲ.

“ನನ್ನನ್ನು ಹೊಡೆದಾದರೂ ಹೊಡೀರಿ. ನಿಮ್ಮನ್ನ ನಾನು ಪ್ರೀತಿಸ್ತೀನಿ ಅಂತ ಗೊತ್ತಾಗದೇನೇ ಇರುವಷ್ಟು ಜಂಟಲ್‌ಮನ್ ನೀವು? ನಿಮಗೆ ಫೀಲಿಂಗ್ಸೆ ಇಲ್ಲವ?”

ಇನ್ನೊಂದು ವಿಸ್ಕಿಯನ್ನು ಕೃಷ್ಣಸ್ವಾಮಿ ಸುರಿದುಕೊಳ್ಳಲು ನಿರ್ಭಾವದಲ್ಲಿ ಎದ್ದದ್ದು ನೋಡಿ ಹಸೀನ ತನ್ನ ಕೋಣೆಗೆ ಬಿರ ಬಿರನೆ ಹೋಗಿ ಬಿಟ್ಟಳು.

ಬೆಳಗಾಗುವ ಮುಂಚೆ ನೋಡಿದರೆ ಅವಳೂ ಅವಳ ಮಗಳೂ ಹೋಗಿ ಬಿಟ್ಟಿದ್ದರು. ಕೃಷ್ಣಸ್ವಾಮಿ ಟ್ರಂಕ್ ತೆಗೆದು ನೋಡಿದ. ತಾನು ಬೇಸಿಗೆ ರಜೆಯಲ್ಲಿ ಪುರಿಯ ಜಗನ್ನಾಥ ದೇವಾಲಯದ ಕಲೆಯನ್ನು ಅಭ್ಯಾಸ ಮಾಡಿ ಬರಲೆಂದು ಜೋಪಾನವಾಗಿ ಇಟ್ಟಿದ್ದ ನೋಟಿನ ಇಡೀ ಕಂತೆ ಮಾಯವಾಗಿತ್ತು. ಅವಳ ಕೈಚಳಕ ತನ್ನೊಳಗಿನ ಕಳ್ಳ ಅಗುಳಿಯನ್ನು ಎಂದೋ ತೆರೆಯಬಹುದಿತ್ತು.

ಇವೆಲ್ಲವನ್ನೂ ಸೋಮನಾಥನಿಗೆ ತಾನು ಹೇಳಿಕೊಳ್ಳಲಾರೆ, ಹೇಳಿದರೂ ಪ್ರಯೋಜನವಿಲ್ಲವೆಂದುಕೊಂಡು ಜೀಪಿನಲ್ಲಿ ಸೋಮನಾಥನ ಹಳೆಯ ಕಾಲದ ಚೌಕಿಮನೆ ಸೇರಿದ. ಪ್ಯಾಂಟಿನಲ್ಲಿ ಬಳೆಯ ಚೂರನ್ನು ಅದೊಂದು ವ್ಯಸನವೆಂಬಂತೆ ಮತ್ತೆ ಮತ್ತೆ ಮುಟ್ಟಿ ನೋಡಿ, ಪುಳಕಗೊಂಡ ಕ್ಷಣವನ್ನು ನೆನೆಯುತ್ತ ಸ್ನಾನಕ್ಕೆ ಸಿದ್ಧನಾದ.

ಹಿತ್ತಲಿನ ಹಲಸಿನ ಮರದ ಕೆಳಗೆ ಬೆತ್ತದ ಕುರ್ಚಿಯಲ್ಲಿ ಇಬ್ಬರೂ ಕೂತರು. ಉಗುರು ಬೆಚ್ಚನೆಯ ನೀರಿನಲ್ಲಿ ಮಾಡಿದ ಸ್ನಾನ ಹಿತವಾಗಿತ್ತು. ಹಿಟ್ಟಿನ ರಂಗೋಲಿಯಿಂದ ಅಲಂಕೃತವಾದ, ದೊಡ್ಡ ಕಂಬಗಳನ್ನೂ, ಗುಪ್ತ ನಾಗಂದಿಗೆಗಳನ್ನೂ ಪಡೆದ ಹಳೆಯ ಕಾಲದ ಮನೆ ಕತ್ತಲು ಕತ್ತಲಾಗಿ, ತಂಪಾಗಿ ಮನಸ್ಸಿಗೆ ನೆಮ್ಮದಿ ತಂದಿತು. ಸೋಮನಾಥ ಒಂದು ಬಾಟಲ್ ರಮ್ಮನ್ನು ನ್ಯೂಸ್ ಪೇಪರಿನಲ್ಲಿ ಸುತ್ತಿ ತಂದು,

“ಏ ಬೃಹಸ್ಪತಿ, ಹೀಗೆ ಸುತ್ತಿರೋದು ಯಾಕೆ ಹೇಳು” ಎಂದು ಎರಡು ಗ್ಲಾಸಿಗ ರಮ್ಮನ್ನು ಸುರಿದು, ನೀರು ಬೆರೆಸಿ, ಲಿಂಬೆ ಹಣ್ಣನ್ನು ಧಾರಾಳವಾಗಿ ಅವುಗಳಲ್ಲಿ ಹಿಂಡಿ ತಾನು ಕತ್ತರಿಸಿ ತಂದಿದ್ದ ಮೆಣಸಿನಕಾಯಿಯನ್ನು ಅವುಗಳಲ್ಲಿ ಹಾಕಿದ. ಶಿವಾ ಎನ್ನುತ್ತ ತನ್ನ ಎಂದಿನ ಚಿಯರ‍್ಸ್ ಹೇಳಿ ತಾನೇ ಉತ್ತರ ಕೊಟ್ಟ.

“ಇದೂ ಒಂದು ನನ್ನ ಕಳ್ಳತನ. ನನ್ನ ಪೆದ್ದು ಹೆಂಡತಿಗೆ ನಾನೆಷ್ಟು ರಮ್ ಸುರಿದುಕೋತೀನ ಗೊತ್ತಾಗಬಾರದು ಅಂತ. ಸುಮ್ಮನೇ ಕಿರಿಕಿರಿ ಮಾಡ್ತಾಳೆ… ”

ಇಬ್ಬರಿಗೂ ರಮ್ಮನ್ನು ಸುರಿದು ಕೂತಾಗ ಯಾರೋ ಬಾಗಿಲ ಹೊರಗೆ ನಿಂತು ಕರೆದಂತಾಯಿತು. ಸೋಮನಾಥನ ಹೆಂಡತಿ ನರ್ಮದೆ ಹಿತ್ತಲಿಗೆ ಬಂದು ಮೆತ್ತನೆಯ ಗೌರವದ ಸ್ವರದಲಿ ‘ಸೆಬಾಶ್ಚಿಯನ್ ಬಂದಿದಾರೆ’ ಎಂದಳು. ಇಲ್ಲಗೆ ಕರೀ ಸೋಮನಾಥ ಅಸಡ್ಡೆಯಲ್ಲಿ ಹೇಳಿದ. ನರ್ಮದೆ ಕ್ಷಣ ಹಿಂದೆಗೆದರೂ ಹೊರಗೆ ಹೋಗಿ ಇಂಗ್ಲಿಷನಲ್ಲಿ ಪ್ಲೀಸ್ ಕಮ್ ಇನ್ ಎಂದಳು.

ಟೈ ಕಟ್ಟಿ, ನೀಟಾಗಿ ಬಿಳಿಯ ಅಂಗಿ ಕಪ್ಪು ಪ್ಯಾಂಟುಗಳನ್ನು ತೊಟ್ಟ ಸೆಬಾಶ್ಚಿಯನ್ ತನ್ನ ಶೂಗಳನ್ನು ಹೊರಗೆ ಬಿಟ್ಟು ಹಿತ್ತಲಿಗೆ ಬಂದು ಬಲು ನಮ್ರವಾಗಿ ನಮಸ್ಕಾರ ಮಾಡಿದ. ಸೋಮನಾಥ ಹಲಸಿನ ಮರದ ಬೇರಿನ ಮೇಲೆ ತಾನು ಕೂತು, ಕುರ್ಚಿಯನ್ನು ಸೆಬಾಶ್ಚಿಯನ್ನಿಗೆ ತೋರಿಸಿದ. ರಮ್ ಕುಡಿಯುತ್ತೀಯ?’ ಎಂದ.

ಸೆಬಾಶ್ಟಿಯನ್ ನೋ ಥ್ಯಾಂಕ್ಸ್ ಎಂದು ತನ್ನನ್ನು ಕೃಷ್ಣಸ್ವಾಮಿಗೆ ಸೋಮನಾಥ ಪರಿಚಯಿಸಲು ಕಾದ. ಇದನ್ನು ಗ್ರಹಿಸಿದ ಸೋಮನಾಥ ಇವರು ಡಾ. ಸೆಬಾಶ್ಟಿಯನ್. ಬನವಾಸಿ ಮಲ್ಟಿ ನ್ಯಾಷನಲ್‌ನ ಪಿ. ಆರ್. ಒ. ನಾವು ಮಾಡಿದ ಕೆಲಸವನ್ನೆಲ್ಲ ಯೋಜಿಸಿದವರು ಇವರು. ಜೋತಿಯ ಫ್ರೆಂಡ್. ಅವಳು ಪ್ಯಾರಿಸ್‌ನಲ್ಲಿದ್ದ ಕಾಲದಿಂದ ಇವರು ನನ್ನ ಗಎಳೆಯ ಫೇಮಸ್ ರೈಟರ್ ಕೃಷ್ಣಸ್ವಾಮಿ ನನ್ನ ಮೇಲೆ ಬರೆಯಲೆಂದು ನೀವು ಕೊಟ್ಟ ಫೆಲೋಶಿಪ್ ಪಡೆದು ಬಂದವರು “

ಕೈಕುಲುಕಿದ ಮೇಲೆ ಕೃಷ್ಣಸ್ವಾಮಿಯನ್ನು ಉದ್ದೇಶಿಸಿ ಸೆಬಾಶ್ಟಿಯನ್ ಇಂಗ್ಲಿಷಿನಲ್ಲಿ ಹೇಳಿದ:

“ನಿಮ್ಮಿಂತಹ ಪ್ರಸಿದ್ಧ ಲೇಖಕರ ಪರಿಚಯವಾಗಿ ಧನ್ಯವಾದೆ. ನಮ್ಮ ಎಂ. ಡಿ. ಬೆಂಗಳೂರಿಗೆ ಹೋಗಬೇಕಾಗಿ ಬಂದು ನಿಮ್ಮನ್ನು ನೋಡಲಾಗಲಿಲ್ಲ. ನಿಮಗೆ ಗ್ರೀಟಿಂಗಸ್ ಕಳಿಸಿದಾರೆ. ನಮ್ಮ ಗೆಸ್ಟ್ ಹೌಸ್‌ನಲ್ಲಿ ತಮ್ಮನ್ನು ಉಳಿಸುವಂತೆ ಹೇಳಿದಾರೆ. ಗೆಸ್ಟ್‌ಹೌಸ್ ನದಿಯ ತೀರದಲ್ಲಿ ಇದೆ. ಬರೆಯಲು ಪ್ರಶಸ್ತವಾದ ಸ್ಥಳ.

ನಿಮಗೀಗ ತೊಂದರೆ ಕೊಡುವುದಿಲ್ಲ. ಜೋತಿ ನಿಮ್ಮ ಬಗೆ ಎಲ್ಲ ಹೇಳಿದ್ದಾರೆ. ಶುಕ್ರವಾರ ನಮ್ಮ ಕಂಪನಿ ಈ ಊರಿನಲ್ಲಿ ಬಂದು ಅರಿಕಾ ರಿಸರ್ಚ್ ಸ್ಟೇಶನ್ನನೂ, ಮಂಗನ ಕಾಯಿಲೆ ಬಗ್ಗೆ ಒಂದು ರಿಸರ್ಚ್ ಲ್ಯಾಬನ್ನೂ ತೆರೆಯಲಿದೆ. ಈ ಪ್ರದೇಶಕ್ಕೆ ಅತ್ಯಂತ ಅಗತ್ಯವಾದ ಸೇವೆ ಇದು. ತಾವು ಈ ಎರಡನ್ನೂ ಇನಾಗ್ಯರೇಟ್ ಮಾಡಬೇಕೆಂದು ನಮ್ಮ ಎಂಡಿ ಕೋರಿದ್ದಾರೆ.’

ಕೃಷ್ಣಸ್ವಾಮಿ ‘ಓಕೆ’ ಎಂದು ಕೈಕುಲುಕಿದ. ಸೋಮನಾಥ ತನ್ನ ಬಾಲ್ಯದ ಕಿಲಾಡಿತನದಲ್ಲಿ ಕಣ್ಣು ಮಿಟುಕಿಸುವ ಸನ್ನೆ ಮಾಡಿದ.

“ಇದನ್ನೆಲ್ಲ ಫಿಕಸ್ ಮಾಡಿರೋದು ಜೋತಿ. ಅವಳ ತಾಯಿಯನ್ನ ಮದುವೆಯಾಗಿದ್ದ ಅವಳ ಮಲತಂದೆ ಫ್ರೆಂಚ್‌ಮನ್ ಈ ಕಂಪನಿಯ ಒಬ್ಬ ಮುಖ್ಯ ಷೇರುದಾರ. ಅದೊಂದು ಕಥೆ. ಜೋತಿಯ ತಾಯಿ, ಅದೇ ನಿನ್ನ ಭಗ್ನ ಪ್ರಣಯಿ, ಬೊಂಬಾಯಿಗೆ ಮಗಳನ್ನೂ ತನ್ನ ನಿರುಪಯೋಗಿ ಗಂಡನನ್ನೂ ಕರೆದುಕೊಂಡು ಹೋದಳಂತೆ. ಜೋತಿಗೆ ಆಗು ಆರು ವರ್ಷ. ತನ್ನ ಹೆಸರನ್ನು ನಿನ್ನ ಹಸೀನ ನರ್ಗೀಸ್‌ವಿಂದ ಎಂದು ಬಲದಾಯಿಸಿಕೊಂಡು ಬೊಂಬಾಯಿಯಲ್ಲಿ ಎಲ್ಲರ ಹೃದಯ ಕದಿಯಲು ತೊಡಗಿದಳು. ಸಂಜಯ ಬ್ರಿಗೇಡಿನ ಮುಂದಾಳುವಾಗಿ ಅವಳು ಮಾಡುತ್ತಿದ್ದ ಭಾಷಣಗಳು ಎಲ್ಲ ಪೇಪರುಗಳಲ್ಲಿ ಬರತೊಡಗಿದವು. ಪ್ರಸಿದ್ಧ ಫಿಕ್ಸರ್ ಆದಳು. ಸ್ಲಮ್ಮಿನ ಬಡ ಮಕ್ಕಳಿಗೆ ಶಾಲೆಗಳನ್ನು ತೆರೆದಳು. ಯಂಗ್ ಡಾಕ್ಟರುಗಳನ್ನು ಸ್ಲಮ್ಮುಗಳಿಗೆ ಕರೆದುಕೊಂಡು ಹೋಗಿ ರೋಗಿಗಳ ಶುಶ್ರೂಷೆ ಮಾಡಿದಳು. ಅವಳ ಕೈಯಲ್ಲಿ ಲಕ್ಷಾಂತರ ರೂಪಾಯಿ ಓಡಾಡಲು ಪ್ರಾರಂಭವಾಯಿತು. ಸಂಜಯಗಾಂಧಿ ಜೊತೆ, ಇಂದಿರಾಗಾಂಧಿ ಜೊತೆ ಅವಳು ಇರುವ ಚಿತ್ರಗಳ ಒಂದು ದೊಡ್ಡ ಆಲ್ಬಮ್ಮೇ ಜೋತಿ ಹತ್ತಿರವಿದೆ. ಜೋತಿಯ ಅಪ್ಪ ಇಡೀದಿನ ಕುಡಿಯುತ್ತ ಇಸ್ಪೀಟಾಡುತ್ತಾ ಕಾಲ ಕಳೆದ. ನರ್ಗೀಸ್ ವಿಂದಾ ಕಳ್ಳ ಸಾಗಣೆ ಮಾಡುವ ಫಟಿಂಗರ ಗುಪ್ತರಾಣಿಯೂ ಆದಳು. ಎಲ್ಲ ದೊಡ್ಡ ಅಧಿಕಾರಿಗಳೂ ಅವಳ ಸ್ನೇಹಿತರೇ. ಸ್ಕ್ಯಾಂಡಲ್ಸ್‌ನಿಂದ ಅವಳ ಕಳೆ ಕುಂದಲಿಲ್ಲ; ಬೆಳೆಯಿತು.

ಅವಳ ದಗ, ಅವಳ ವಂಚನೆ, ಅವಳ ರಾಜಕೀಯ, ಅವಳ ಸ್ತ್ರೀವಾದಿ ಉಗ್ರ ಹೋರಾಟ, ಅವಳ ಮರ ನೆಡುವ ಚಳವಳಿ – ಈ ಎಲ್ಲದರ ಹಿಂದಿದ್ದ ಉದ್ದೇಶ, ಜೋತಿಯ ಪ್ರಕಾರ, ಮಗಳ ಮೇಲಿನ ಪ್ರೇಮ ಮತ್ತು ಗಂಡನ ಮೇಲಿನ ಕನಿಕರ.

ನರ್ಗೀಸ್ ವಿಂದ ಆಮೇಲೆ ಒಬ್ಬ ಫ್ರೆಂಚ್‌ಮನ್ನಿನ ಸಹಾಯಕಳಾದಳು. ಸಹಾಯಕಳಾದವಳು ಪ್ರಣಯಿಯಾದಳು. ಪ್ರಣಯಿಯಾದವಳು ಅವನನ್ನು ಒಲೆಸಿ ಜೋತಿಯನ್ನು ಪ್ಯಾರಿಸ್‌ನಲ್ಲಿ ಓದಲು ಕಳಿಸಿದಳು, ಅವನ ಹೆಸರು ಮರೆತಿದ್ದೇನೆ. ನರ್ಗೀಸ್ ವಿರುದ್ಧ ಸುಮಾರು ಮುವತ್ತೈದು ವರ್ಷಗಳ ಕಣ್ಣು ಕೋರೈಸುವಂತಿದ್ದ ಮದನಪುತ್ಥಳಿ, ಥೇಟು ರತಿ; ಅವನು ಐವತ್ತೈದು ವರ್ಷಗಳ ಶ್ರೀಮಂತ, ಮೋಜುಗಾರ ಪೆದ್ದ, ಆದರೆ ಸಭ್ಯ ವಿಲಾಸಿ.

ಹ್ಯಾಪನಾಗುತ್ತ ಹೋದ ಗಂಡ ಅಡ್ಡಿ ಮಾಡುವುದಿರಲಿ ಅವಳಿಗೆ ಪಿಂಪ್‌ನಂತೆ ಆಗಿಬಿಟ್ಟಿದ್ದ. ನರ್ಗೀಸ್ ವಿಂದ ಗಂಡನನ್ನು ಬಿಟ್ಟು ಅವನನ್ನು ಮದುವೆಯಾದಳು. ಈಗ ನೆನಪಾಯಿತು ಅವನ ಹೆಸರು – ಅಂದ್ರೆ ಮಿಚೆಲ್. ನರ್ಗೀಸ್ ವಿಂದ ನರ್ಗೀಸ್ ಮಿಚೆಲ್ ಆದಳು. ಮೇದಂ ಮಿಚೆಲ್ ಪ್ಯಾರಿಸ್ಸಿಗೂ ಬೊಂಬಾಯಿಗೂ ಓಡಾಡುತ್ತ ಬಿಟ್ಟ ಗಂಡನನ್ನು ಸಲಹಿದಳು; ಕಟ್ಟಿಕೊಂಡವನನ್ನು ತಣಿಸಿದಳು; ಮಗಳನ್ನು ಪೊರೆದಳು; ಸಂಜಯ ಗಾಂಧಿ ಬ್ರಿಗೇಡಿನ ಸ್ಟಾರ್ ಆದಳು. ಅವಳ ಹತ್ತಿರ ಎಷ್ಟು ದುಡ್ಡು ಓಡಾಡಲು ತೊಡಗಿತೆಂದರೆ ಕದಿಯುವುದೆಂದೂ ಅವಳಿಗೆ ಅಗತ್ಯವಾಗಲಿಲ್ಲ. ಆದರೂ ಮದುವೆಯಾದ ಫ್ರೆಂಚ್ ಗಂಡನ ಜೇಬಿನಿಂದ ಅಷ್ಟಿಷ್ಟು ಹಣ ಎತ್ತುವುದರಲ್ಲೇ ಅವಳಿಗೇನೊ ಸುಖ. ಯಾಕೆಂದರೆ ತಾನು ಬಿಟ್ಟ ಗಂಡನನ್ನು ಗುಪ್ತವಾಗಿ, ಅವನನ್ನು ಬೈದು, ಅವನ ಕುಡಿತಕ್ಕೆ ಅದನ್ನು ಕೊಡಬಹುದೆಂದು. ದುರ್ಬಲನಾಗುತ್ತ ಹೋದ ಗೋಟು ಮುಖದ ಹಿಂದಿನ ಗಂಡ ಸೇಡಿಗಾದರೂ ವ್ಯಭಿಚಾರಿಕೂಡ ಆಗಲಾರದಷ್ಟು ವ್ಯಸನಿಯಾಗಿ ಬಿಟ್ಟಿದ್ದ. ಹಸೀನಳಿಗೆ ತನ್ನ ಎಲ್ಲ ವ್ಯವಹಾರಗಳ ನಡುವೆ ಅದೇ ಕೊರಗು.

ಸೋಮನಾಥ ತನ್ನ ಕಥೆ ಕೃಷ್ಣಸ್ವಾಮಿಯ ಮೇಲೆ ಯಾವ ಪರಿಣಾಮ ಮಾಡಬಹುದೆಂದು ಊಹಿಸಿರಲಿಲ್ಲ. ಬಂಡೆಯ ಕೆಳಗೆ ಹೊಳೆದ ಬಳೆಯ ಚೂರನ್ನೂ, ನಿರ್ವಿಕಾರದ ಓತಿಕೇತವನ್ನೂ, ಬೇಟೆಯ ಚಿತ್ರದ ಪ್ರಾಣ ಶಕ್ತಿಯನ್ನೂ, ಕಾಣಿಸುವ ಋಷಿಯಂತೆ ಸೋಮನಾಥ ಎದುರು ನಿಂತಿದ್ದನ್ನೂ ಕೃಷ್ಣಸ್ವಾಮಿ ಕಥೆ ಕೇಳಿಸಿಕೊಳ್ಳುತ್ತ ನೆನೆದಿದ್ದ.

ಭಾವವಶನಾಗದೆ ತನಗೇ ಹೇಳಿಕೊಂಡ: ನಾನು ಇರುವುದು ಹೀಗೆ, ಕೆಲವರು ಇರುವುದು ಹೀಗೇ. ಹೀಗೆನ್ನಿಸುವುದರಿಂದ ಅವನಿಗೆ ಸಮಾಧಾನವೂ ಆಗಲಿಲ್ಲ; ಕಸಿವಿಸಿಯೂ ಆಗಲಿಲ್ಲ. ಒಳಗಿನ ಕಳ್ಳ ಅಗುಳಿ ತೆರೆದುಕೊಳ್ಳುವಂತೆ ಬಳೆಯ ಚೂರು ಹೊಳೆದಾಗ ತನಗೊಂದು ಸನ್ನೆಯಾಗಿರಬಹುದು. ಆದರೆ ಸನ್ನೆಗಳು ಆಗುತ್ತವೆ, ಹೋಗುತ್ತವೆ, ಮರೆಯುತ್ತವೆ. ಹಸೀನಳಿಂದ ತಾನು ಪಡೆದಿದ್ದ ಸನ್ನೆಗಳ ಹಾಗೆ. ಅವಳು ಆ ರಾತ್ರೆ ತನ್ನನ್ನು ಕೆಣಕಿದ್ದಳು. ದುಡ್ಡು ಕದ್ದಿದ್ದಳು. ಹೇಳದೇ ಹೊರಟು ಹೋಗಿದ್ದಳು, ತಾನೂ ಈ ಎಲ್ಲವನ್ನೂ ಮರೆತವನಂತೆ ಬದುಕುತ್ತ ಹೋದೆ. ಅವಳೂ ಬದುಕುತ್ತ ಹೋದಳು. ಮಗಳಿಗಾಗಿ, ಮತ್ತು ನಿರುಪಯೋಗಿ ಗಂಡನ ರಕ್ಷಣೆಗಾಗಿ, ಪ್ರಾಯಶಃ ತನ್ನ ಸ್ವಂತ ತೆವಲಿಗಾಗಿಯೂ ಕಳ್ಳಿಯಾದಳು. ಅಂತರರಾಷ್ಟ್ರೀಯ ಕ್ರೂಕ್ ಆದಳು. ಮದನ ಪುತ್ಥಳಿಯಂತೆ ಚೆಲುವೆಯಾಗುತ್ತ ತನ್ನ ಪ್ರಾಣಶಕ್ತಿಯನ್ನು ಉಕ್ಕಿಸುತ್ತ ಬೆಳಗಿ ಮಾಯವಾದಳು. ತಾನು ಸಜ್ಜನನಾಗಿ, ಇವೆಲ್ಲವನ್ನೂ ತಿಳಯಬಲ್ಲವನಾಗಿ, ತಿಳಿಯುವುದೊಂದನ್ನೇ ತೆವಲು ಮಾಡಿಕೊಂಡವನಾಗಿ ಹೀಗೇ ಉಳಿದುಬಿಟ್ಟೆ, ಇದು ಜಾಯಮಾನ.

‘ಅದೇನು ಯೋಚಿಸ್ತ ನಿಂತೀದಿಯೊ ಮಂಕೆ? ಆ ಬೇಟೆಗಾರನಂತೆ ಸನ್ನದ್ಧನಾಗಿ ಇರಬೇಕು. ಆ ಜಿಂಕೆಗಿರುವಂತೆ ಏಕಾಗ್ರವಾದ ಆತಂಕದ ಎಚ್ಚರ ಇರಬೇಕು. ಆ ಚಿತ್ರ ನೋಡಿದಾಗ ಜಿಂಕೆ ಅವನ ಈಟಿಗೆ ಸಿಗಲಾರದು ಎನ್ನಿಸೋ ಹಾಗಿದೆ ನೋಡು. ಆದರೆ ಚಿತ್ರವನ್ನು ಬರೆಸಿದ್ದು ಜಿಂಕೆ ಬೇಟೆಗೆ ಸಿಗಬೇಕು ಎನ್ನುವ ಬೇಟೆಗಾರ ಕಲಾವಿದನ ಅಭೀಪ್ಸೆಯೇ… ಪ್ರಾಣಶಕ್ತಿಯ ವಿಲಾಸ ಅದು. ’

ಕುಶಾಲಿಯಲ್ಲಿ ಸೋಮನಾಥ ಆಡಿದ ಮಾತಿಗೆ ‘ಓಕೆ ಸೋಮ ಋಷಿಗಳೇ’ ಎಂದು ಕೃಷ್ಣಸ್ವಾಮಿ ಕನ್ನಡಿ ನೋಡಿ ತಲೆಯನ್ನು ಬಾಚಿಕೊಂಡ.

‘ನಿನ್ನ ಗರ್ಲ್ ಫ್ರೆಂಡಿನ ಮಗಳು ನಿನಗಾಗಿ ಕಾದಿದಾಳೆ. ಅವಳೇ ಗೆಸ್ಟ್‌ಹೌಸಿಗೆ ನಿನ್ನ ಕರಕೊಂಡು ಹೋಗ್ತಾಳಂತೆ. ಮೊದಲು ತಿಂಡಿ ತಿನ್ನು – ಬಾ. ನರ್ಮದ ಕಾದಿದಾಳೆ. ’

ಅರಿಸಿನ ಕುಂಕುಮ ಹಚ್ಚಿಕೊಂಡ ನರ್ಮದೆ ಮಂಗಳಗೌರಿಯಂತೆ ಶೋಭಿಸುತ್ತ ಬಾಳೆಲೆ ಹಾಕಿ ಕೈಯಲ್ಲಿ ಸಟ್ಟುಗ ಹಿಡಿದು ಕಾದಿದ್ದಳು. ಮಣೆಯ ಮೇಲೆ ಕೂರಿಸಿ ಉಪ್ಪಿಟ್ಟು ಬಡಿಸಿ ಉಪಚಾರ ಮಾಡಿದಳು. ಚಟ್ನಿಪುಡಿ ಬಡಿಸಲೆ? ಖಾರವಾಯಿತ? ಮೊಸರು ಬಡಿಸಲೆ?

– ಇತ್ಯಾದಿಯಾಗಿ. ಕೃಷ್ಣಸ್ವಾಮಿ ಸಂಕೋಚದಲ್ಲಿ ಉಪಚಾರಗಳನ್ನೆಲ್ಲ ಸ್ವೀಕರಿಸಿದ. ನರ್ಮದ ಜೋತಿಯ ಬಗ್ಗೆ ಮಾತು ಶುರು ಮಾಡಿದಳು.

‘ಅಯ್ಯೋ ಅವಳು ಥೇಟು ದುರ್ಗೆಯಂತೆ ಕಾಣುತ್ತಾಳೆ ಕಣ್ರೀ. ಅವಳಿಗೆ ಪ್ರತಿ ತಿಂಗಳು ಬಳೆಗಾರನನ್ನು ಮನೆಗೆ ಕರೆದು ನಾನೇ ಕೈತುಂಬ ಗಾಜಿನ ಬಳೆ ತೊಡಿಸೋದು. ನಿಮಗೆ ಗೊತ್ತು – ನಾನು ತುಂಬ ಮಡಿ ಮೈಲಿಗೆಯವಳು. ನಮ್ಮ ಇವರಿಗೇ ನಾನು ಅಡಿಗೆ ಮನೇಗೆ ಬರಕ್ಕೆ ಮಾಡ್ತ ಇರಲಿಲ್ಲ. ನನ್ನ ಮಾತನ್ನ ನಂಬಿದರೆ ನಂಬಿ, ಬಿಟ್ಟರೆ ಬಿಡಿ. ’

ಸೋಮನಾಥ ಕಿಲಾಡಿತನದಲ್ಲಿ ಕಣ್ಣು ಮಿಟುಕಿಸಿ ಹೇಳಿದ.

“ಎಸ್. ತುಂಬ ಚೆಲುವಾಗಿದ್ದಾಳೆ ಹುಡುಗಿ. ಅವಳ ದೇಹದ ಕಾಂತಿಯೇ ಆರ್ಟಿಸ್ಟ್‌ ಆಗಿ ಅವಳ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದರೂ ಸರಿಯೇ. ನೀನು ನೋಡಲು ಎಷ್ಟು ಚೆಂದವಾಗಿದಿ ಎಂದರೆ ನನ್ನ ತಾಯೀನ್ನ ನೀನು ನೋಡಬೇಕಿತ್ತು ಅಂತಾಳೆ. ಚಂದವಾಗಿ ಕಾಣುವ ಯುವಕರೆಲ್ಲ ಸ್ಟುಪಿಡ್ ಬೋರುಗಳು, ಆದರೆ ನಾನು ಇಷ್ಟಪಡುವ ನಿನ್ನಂಥವರು ಮುದಿಗೂಬೆಗಳು ಎಂದು ಹಾಸ್ಯ ಮಾಡ್ತಾಳೆ. ”

ನರ್ಮದ ನಕ್ಕಳು. ಆನಾರ್ಕಿಸ್ಟ್ ಪ್ರತಿಭೆಯ ಗೆಳೆಯನ ನೆಮ್ಮದಿಯ ಸಾಂಸಾರಿಕತೆ ಕಂಡು ಕೃಷ್ಣಸ್ವಾಮಿಗೆ ಅಸೂಯೆಯಾಯಿತು. ಈ ದಿವ್ಯದ ಕಳ್ಳ ಮಳ್ಳ ಮಾತ್ರನಲ್ಲ, ಕಚ್ಚೆಹರುಕನಾದ ಋಷಿ ಕೂಡ. ತನಗೋ ವೇದ ಕಾಲದ ಋಷಿ ಎದುರಾದಾಗಲೂ ಬೆರಗಿನ ಜೊತೆಗೇ ಏನೋ ಗುಮಾನಿ.

ನರ್ಮದ ಕೇಳಿದಳು:

‘ನಿಮಗೆ ಗಂಡೆಷ್ಟು? ಹೆಣ್ಣೆಷ್ಟು ಕೇಳಲೆ ಇಲ್ಲ ನಾನು ನೋಡಿ’

‘ಒಬ್ಬ ಗಂಡುಮಗ; ಅಮೆರಿಕಾದಲ್ಲಿ ಇದಾನೆ, ನನ್ನ ಹೆಂಡತಿಯೂ ಅವನ ಜೊತೆ ಇದಾಳೆ. ಅವಳ ಹತ್ತಿರದ ಸಂಬಂಧಿ ಹುಡುಗಿಯನ್ನೇ ಅವನಿಗೆ ತಂದದ್ದು. ಹೋದ ವರ್ಷ’

‘ಒಳ್ಳೇದು. ಆಗಲೇ ಹೊಂದಿಕೊಂಡು ಹೋಗೋದು ನೋಡಿ, ಈ ಸಂಸಾರ ಅನ್ನೋದು’

ಮಾಲಿನ್ಯ ಕಿಂಚಿತ್ತೂ ಇಲ್ಲದ ಶುಭ್ರವಾದ ಬೆಳಗಿನಲ್ಲಿ ದೂರದ ಗುಡ್ಡಗಳ ಮೇಲೆಲ್ಲ ಇಬ್ಬನಿ ಬಿದ್ದ ಹಸಿರು ಹೊಳೆದವು. ಇನ್ನು ಎಷ್ಟು ಕಾಲ ಈ ಪ್ರದೇಶ ಹೀಗೇ ಉಳಿಯುವುದೋ ಎಂದು ಅನುಮಾನಿಸುತ್ತ, ಮಲ್ಟಿನ್ಯಾಶನಲ್ ಕಂಪನಿಯನ್ನು ನೈತಿಕ ಸಮಾಧಾನಕ್ಕಾಗಿ ಮನಸ್ಸಿನಲ್ಲೇ ಶಪಿಸುತ್ತ ಅದೇ ಕಂಪನಿಯ ಜೀಪ್ ಹತ್ತಿ ಜೋತಿಗೆ ಅವರು ಕಟ್ಟಿಸಿಕೊಟ್ಟಿದ್ದ ಬಂಗಲೆಗೆ ಹೋದ.

ಗೇಟಿನಲ್ಲಿ ಜೋತಿ ಕಾದಿದ್ದಳು. ಅವಳ ಧಾರಾಳವಾದ ಕೂದಲು ಅವಳ ಇಡೀ ಬೆನ್ನಿನ ಮೇಲೆ ಹರಡಿತ್ತು. ನುಣುಪಾದ ಕಪ್ಪಾದ ಕೂದಲು. ಹಣೆಯ ಮೇಲೆ ಅವಳು ಕುಂಕುಮವಿಟ್ಟು, ಕೊರಳಲ್ಲಿ ಶಂಖಗಳ ಸರವೊಂದನ್ನು ತೊಟ್ಟು, ನೀಳವಾದ ಕೈಗಳ ತುಂಬ ಗಾಜಿನ ಬಳೆಗಳನ್ನು ಹಾಕಿಕೊಂಡು ಸಾಕ್ಷಾತ್ ದುರ್ಗಿಯಂತೆ ಕಾಣುತ್ತ ಸ್ವಾಗತಿಸಿದಳು. ಹತ್ತಿರ ಬಂದು ತಬ್ಬಿದಳು.

‘ನಿನ್ನ ಮನೆಯ ಗೋಡೆಯ ಮೇಲೆಲ್ಲ ಗೀಚಿ ನಿನ್ನಿಂದ ದಂಡಿಸಿಕೊಂಡ ಕಜ್ಜಿ ಬುರುಕಿಯ ನೆನಪು ಆಯಿತ?’

ಕೊರಳಿನ ಸರವನ್ನು ಬಾಯಲ್ಲಿ ಕಚ್ಚಿ, ತಾಯಿಯಂತೆಯೇ ಸನ್ನೆ ಮಾಡಿದ್ದಳು, ನಾಚುವಾಗ ಇವಳೂ ಮದನ ಪುತ್ಥಳಿಯೇ.

ಕೃಷ್ಣಸ್ವಾಮಿ ಯಾವ ಉತ್ತರವನ್ನೂ ಕೊಡಬೇಕಾದ ಅಗತ್ಯವಿರಲಿಲ್ಲ. ಹಾಗೆ ಅವಳು ಉಕ್ಕುತ್ತ ಹೋದಳು. ಚೂರು ಚೂರು ಕನ್ನಡ ಬೆರಸಿ ಅವಳು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದಳು. ಆಗೊಂದು ಈಗೊಂದು ಫ್ರೆಂಚ್ ಶಬ್ದವೂ ಇಣುಕುತ್ತಿತ್ತು.

ಹತ್ತು ನಿಮಿಷಗಳ ಒಳಗೆ ಅವಳ ರಾಜಕೀಯ ಅಭಿಪ್ರಾಯಗಳನ್ನೂ, ಕಲಾ ಸಿದ್ಧಾಂತಗಳನ್ನೂ, ಸೋಮನಾಥನ ಬಗ್ಗೆ ಅವಳ ಮೆಚ್ಚುಗೆ ಅನುಮಾನಗಳನ್ನೂ, ತಾಯಿಯಿಂದ ಕೇಳಿಸಿಕೊಂಡ ತನ್ನ ಚರಿತ್ರೆಯನ್ನೂ ಅವಳು ಬಡಬಡಿಸಿದ್ದಳು. ನಕ್ಕಿದ್ದಳು. ಕಣ್ಣಲ್ಲಿ ನೀರು ಉಕ್ಕುವಷ್ಟು ನಕ್ಕಿದ್ದಳು. ’ಇಗೋ ನಿನಗಾಗಿ ಪ್ಯಾರಿಸ್‌ನಿಂದ ತಂದದ್ದು’ ಎಂದು ಕೋನ್ಯಾಕಿನ ಬಾಟಲನ್ನು ಕೊಟ್ಟಳು. ಒಂದು ಸೊಗಸಾದ ಅಂಗಿಯನ್ನು ಕೊಟ್ಟಳು. ಕುಡಿಯುವುದರಿಂದ ಶುರುವಾಗಿ ಏನೇನು ಅವಳ ತಾಯಿ ತನ್ನಿಂದ (ಬೊಟ್ಟುಮಾಡಿ ನಗುತ್ತ ‘ಈ ಕೃಷ್ಣನಿಂದ’) ಕಲಿತಳು ಹೇಳಿದಳು. (ತನ್ನನ್ನು ‘ಕೃಷ್ಣ’ ಎಂದು ಕರೆದವಳು ಅವಳೊಬ್ಬಳೆ) ಮತ ಧರ್ಮಗಳ ತಾತ್ಸಾರವನ್ನು ತನ್ನಿಂದ ಪಡೆದು (‘ಈ ಪ್ರೇಮಕೃಪಣ ಕೃಷ್ಣನಿಂದಲೇ ಪಡೆದು’) ಇಷ್ಟಪಟ್ಟವನನ್ನು ಮದುವೆಯಾಗಿ, ಗಂಡನನ್ನು ಬಿಟ್ಟರೂ ಕನಿಕರ ಕಳೆದುಕೊಳ್ಳದೆ ಕೊನೆಗೆ ಅವನ ಜೊತೆ ಕೂತಿದ್ದಂತೆ ಕಾರಿನಲ್ಲಿ ಸತ್ತಿದ್ದನ್ನು ಹೇಳಿದಳು. ಹಿಂದೂ – ಮುಸ್ಲಿಂ ತಿಕ್ಕಾಟ, ಅಯೋಧ್ಯೆ ನೆನಪಾಗಿರಬೇಕು.

ಮಸೀದಿ, ದೇವಸ್ಥಾನ, ಚರ್ಚು ಎಲ್ಲ ನಾಶವಾಗಿಬಿಡಬೇಕು. ವೇದದ ಋಷಿಗಳು ಗ್ರಹಿಸಿದಂತೆ ನಾವು ಮತ್ತೆ ದೇವರನ್ನು ಅನುಭವಿಸಬೇಕೆಂದು ಇದ್ದರೆ ಭೂತಕಾಲದ ನೆನಪುಗಳನ್ನೆಲ್ಲ ನಮ್ಮ ಮೇಲೆ ಹೇರಿ ನಮ್ಮ ಪ್ರಾಣಶಕ್ತಿಯನ್ನು ಜಡ್ಡುಗಟ್ಟಿಸುವ ಈ ಸಂಕೇತಗಳೆಲ್ಲ ನಾಶವಾಗಬೇ‘ಕು, ಏನೂಂತಿಯ? ನಿನೇ, ಸಾಕ್ಷಾತ್ ಕೃಷ್ಣನ ಹೆಸರನ್ನು ಇಟ್ಟುಕೊಂಡ ಪ್ರಣಯ – ಪುಕ್ಕ ಈ ನೀನೆ, ತಾಯಿಯಲ್ಲಿ ಹುಟ್ಟಿಸಿದ ಶಕ್ತಿಯಿದು. ’

ಫ್ರೆಂಚ್ ಉಚ್ಛಾರದ ಇಂಗ್ಲಿಷ್‌ಗೆ ಅವಳು ಆಡಿಸುವ ಕೈಗಳ ಗಾಜಿನ ಬಳೆಗಳ ನಾದವೂ ಬೆರೆತು ಅವಳ ಮುದ್ದಾದ ಮೂದಲಿಕೆ ಹಿತವೆನ್ನಿಸಿತು. ಸೋಮನಾಥನ ಮಾತುಗಳು, ತನ್ನದೇ ಎಂದಿನ ಹಳಸು ವಿಚಾರಗಳು, ನಿಶೇಯೇರಿದ ಹಲವು ರಾತ್ರಿಗಳು ನೆನಪಾದವು. ಒಳಗಿನಿಂದ ಹಂಗಿಸುವ ಮಾತೊಂದು ಹುಟ್ಟಿಕೊಂಡಿತು. ಏಯ್ ನನ್ನ ಮದ್ದು ಹುಡುಗೀ, ನಿನ್ನ ತೆವಲನ್ನೂ, ನನ್ನ ತೆವಲನ್ನೂ ಬಡ್ಡಿ ಮಗ ಸೋಮ ಋಷಿಯ ದಿವ್ಯಕಲೆಯನ್ನೂ ಬಳಸಿಕೊಂಡು ಫ್ರೆಂಚ್ ಮಲ್ಟಿನ್ಯಾಷನಲ್ ಕಂಪನಿ ಈ ಊರಲ್ಲಿ ಮಾಡುತ್ತಿರೊದು ಏನು? ಎಲ್ಲ ಜಾತಿಧರ್ಮಗಳ, ಅವುಗಳಿಂದ ಹುಟ್ಟಿಕೊಂಡ ಎಲ್ಲ ಹಳೆಯ ಸಂಕೇತಗಳ ನಾಶವಲ್ಲದೆ ಮತ್ತೇನು? ತನ್ನ ಗುಮಾನಿಯನ್ನು ಮುಚ್ಚಿಟ್ಟುಕೊಂಡು ನಗುತ್ತ ಜೋತಿಯ ಸಿಟ್ಟಿನ ಸಡಗರವನ್ನು ಮೆಚ್ಚುತ್ತ ನೋಡಿದ. ಹಸೀನಳೇ ಎದುರು ಕೂತಂತೆ ಅನ್ನಿಸಿತು. ಕೊಂಚ ದಿಗಿಲಾಯಿತು.

‘ನನಗೆ ಇಲ್ಲಿನ ಭೂತಗಳೆಂದರೆ ಇಷ್ಟ. ಅವು ನನ್ನ ಹತ್ತಿರ ಮಾತಾಡುತ್ತವೆ ಎಂದು ನನಗೆ ಅನ್ನಿಸುತ್ತೆ. ಅವುಗಳ ಸಿಟ್ಟು,ದುಮ್ಮಾನ, ಮೋಸ, ಸೇಡು, ಕೃಪೆ ಇವೆಲ್ಲವೂ ನನಗೆ ನಿಜವೆನ್ನಿಸುತ್ತೆ. ಬಾ ನೋಡು. ’

ಕೈ ಹಿಡಿದು ಜೋತಿ ತನ್ನದೊಂದು ರೂಮಿಗೆ ಕರೆದೊಯ್ದಳು. ಅದರ ಗೋಡೆಯ ಮೇಲೆಲ್ಲ ಪೋಸ್ಟರ್ ಮಾದರಿಯ ಕೆಂಪು ಹಳದಿ ಬಣ್ಣಗಳೇ ಮುಂದಾದ ದೊಡ್ಡ ದೊಡ್ಡ ಭೂತದ ಚಿತ್ರಗಳಿದ್ದವು. ಭೂತಗಳ ಕೆಳಗೆ ಅವಳ ಸಹಿಯೆಂದರೆ ಒಂದು ಪುಟ್ಟ ನವಿಲಿನ ಚಿತ್ರ.

‘ನಿನ್ನ ಗೋಡೆಗಳ ಅಂದ ಕೆಡಿಸುತ್ತಿದ್ದ ನನ್ನ ನವಿಲುಗಳು ನೆನಪಾಗುತ್ತವೆ?’

ಜೋತಿಯಿಂದ ಬಚ್ಚಿಡುವುದು ಏನೂ ಉಳಿದಿಲ್ಲವೆಂದು ಕೃಷ್ಣಾಸ್ವಾಮಿಗೆ ಮುಜುಗರವಾಯಿತು.

‘ನೀನು ಕಳಕೊಂಡದ್ದನ್ನು ತೋರಿಸುತ್ತೇನೆ ಬಾ’ ಎಂದು ಕೈ ಹಿಡಿದು ಅವನ ಮೈಗೆ ತನ್ನ ತುಂಬ ಅಕ್ಕರೆಯಿಂದ ಅವನ ಮುಖ ನೋಡಿದಳು. ಅವನ ಕೆನ್ನೆಯನ್ನು ಸವರಿ,

‘ನನ್ನ ಗುರುಗಳಂತೆ ನೀನೇಕೆ ಗಡ್ಡ ಬಿಟ್ಟಿಲ್ಲ’ ಎಂದಳು.

‘ನೀನು ಹೇಳಿದ ಮೇಲೆ ಬಿಡ್ತೀನಿ’ ಎಂದ ಕೃಷ್ಣಸ್ವಾಮಿ.

‘ಇಲ್ಲ. ನೀನು ಬಿಡಲ್ಲ. ನನಗೆ ಗೊತ್ತು. ಬರೀ ಹೆಸರಿಗೆ ನೀನು ಕೃಷ್ಣ’ ಎಂದು ಜೋತಿ ಥಟ್ಟನೆ ಮಾತು ಬದಲಾಯಿಸಿದಳು.

‘ನೀನು ಸೋಮನಾಥನ ಮೇಲೆ ಬರಿ ಬೇಕೂಂತ ಇದೀಯ ಅಲ್ವ? ನನ್ನದೇ ಐಡಿಯ ಅದು. ನನ್ನ ಮಲತಂದೆಯೊಂದು ಫಿಲಿಸ್ಟೈನ್ ಗೂಬೆ. ನಾನು ಹೇಳಿದಂತೆ ಕೇಳತ್ತೆ’.

ತನ್ನಿಂದ ಹಸೀನ ಕಲಿತ ಮಾತನ್ನು ಈಗ ಅವಳ ಮಗಳು ಬಳಸುವುದು ಕಂಡು, ಅದರ ಹಿಂದಿನ ಸೊಗಸನ್ನೂ ಸೊಕ್ಕನ್ನೂ ಕಂಡು ಕೃಷ್ಣಸ್ವಾಮಿ ಚಕಿತನಾದ.

‘ಸೋಮನಾಥನ ಈಚಿನ ಒಂದು ಚಿತ್ರವನ್ನು ಐದು ಲಕ್ಷ ಕೊಟ್ಟು ನನ್ನ ಮಲತಂದೆ ಕೊಂಡ. ಅವನೂ ಖದೀಮನೆ. ಪ್ಯಾರಿಸ್‌ನಲ್ಲಿ ಅವನ ಅದನ್ನ ಹರಾಜು ಹಾಕಿ ಇನ್ನೈದು ಲಕ್ಷ ಗಳಿಸ್ತಾನೆ ಬಿಡು. ಯಾಕೆ ಈ ಮಾತಿಗೆ ನಾನು ಬಂದೆನೆಂದರೆ.. ಮರೆತೇ ಹೋಯಿತು. ನಿನ್ನಿಂದ ನಾನು ಬಂದೆನೆಂದರೆ… ಮರೆತೇ ಹೋಯಿತು. ನಿನ್ನಿಂದ ನಾನು ತುಂಬ ಎಕ್ಸೈಟೆಡ್ ಆಗಿ ಬಿಟ್ಟಿದ್ದೇನೆ. ನನ್ನ ತಾಯಿ ನಿನಗೆ ಒಂದು ಎನಿಗ್ಮಾ ಆದಳಲ್ಲವ? ನೀನೊಬ್ಬ ಸ್ಟುಪಿಡ್‌ಫೂಲ್ ಅವಳೆಷ್ಟು ನಿನ್ನ ಕೊನೆಯವರೆಗೂ ಪ್ರತಿಸ್ತ ಇದ್ದಳು ನಿನಗೆ ಗೊತ್ತೇ ಇಲ್ಲ. ಒಂಟಿ ಪಿಶಾಚಿಯಾಗಿರೋದೇ ನಿನ್ನ ಜಾಯಮಾನ ಅಂತಿದ್ದಳು ನನ್ನ ತಾಯಿ.

ತಾನು ಅಚ್ಚರಿಯ ಬಿಡುಗಣ್ಣಿನಿಂದ ಅವಳನ್ನು ನೋಡುತ್ತಿದ್ದಾಗ ನಾಚಿ ಮುಖ ಮುಚ್ಚಿಕೊಂಡು ನಕ್ಕವಳು ಇನ್ನೂ ಒಬ್ಬ ಪುಟ್ಟ ಹುಡುಗಿ ಎನ್ನಿಸಿ ಬೆಂಚಿನ ಮೇಲೆ ಕೂತ ಹಸೀನ ನೆನಪಾದಳು. ಹಸೀನಳೂ ಅಷ್ಟೆ: ಬಾಯಿಗೆ ಬಂದದ್ದನ್ನ ಹೇಳಿಬಿಡುವ ದಿಟ್ಟೆ; ಹಾಗೆ ನಾಚಿಕೆಯಲ್ಲಿ ಮುಗ್ಧಳಾಗಿ ಬಿಡುವ ಕನ್ನೆ..

‘ಅರೇ ನೋಡು ನನ್ನ ಧಿಮಾಕನ್ನ. ಏನೇನೋ ಬಾಯಗೆ ಬಂದದ್ದನ್ನು ಬಡಬಡಿಸ್ತ ಇದೀನಿ. ಸೋಮನಾಥನ ಕಲೆಯ ಅಲೌಕಿಕ ಹೊಳಪಿನ ಗುಟ್ಟೇನು ಅಂತ ನಿನ್ನ ಹತ್ತಿರ ಮಾತಾಡಬೇಕು ಅಂದುಕೊಂಡಿದ್ದೆ. ನೀನು ಅವನ ಪುರಾತನ ಗೆಳೆಯ ಅಲ್ಲವೆ? ನಾನು ಕೇಳಿದರೆ ಅವನು ನಗ್ತಾನೆ. ನಿನ್ನದೇ ಆದ ಒಂದು ಗುಟ್ಟನ್ನ ಕಂಡುಕೊ ಕಳ್ಳಿ ಅಂತಾನೆ.

ಇವತ್ತು ಬೇಡ ಸೋಮನಾಥನ ಒಂದು ಚಿತ್ರವನ್ನು ನಾಳೆ ತೋರಿಸ್ತೇನೆ. ಇವತ್ತು ತನ್ನ ತಾಯಿಗೆ ಮೀಸಲು’

ಆದರೆ ತಾನು ಹೇಳಿದ್ದನ್ನು ಕ್ಷಣದಲ್ಲಿ ಮರೆತವಳಂತೆ ಮೇಲೆ ತೋರಿಸಬೇಕೆಂದುಕೊಂಡ ಚಿತ್ರವನ್ನು ಈಗಲೇ ವಿವರಿಸಲು ಜೋತಿ ತೊಡಗಿದಳು. ಅವಳ ಸಂಭ್ರಮವೆಲ್ಲ ತನಗಾಗಿ ಎಂದು ತೋರಿ ಕೃಷ್ಣಸ್ವಾಮಿ ಹುಡುಗನಂತೆ ಪುಳಕಗೊಂಡ.

‘ಅದೊಂದು ವಿಲಕ್ಷಣವಾದ ಬೆಳಕಿನಿಂದ ಹೊಳೆಯುವ ಚಿತ್ರ. ಸೀದಾ ಅಂದರೆ ತೀರಾ ಸೀದ ಎನ್ನಿಸುವ ವಸ್ತು. ಅದರಲ್ಲಿ ಏನೂ ಇಲ್ಲ. ಒಂದು ದೊಡ್ಡ ಬಂಡೆ. ಆಕಾರದಲ್ಲಿ ಅದಕ್ಕಿರುವ ಗುರುತ್ವ ಅದರ ನಿಜಸ್ಥಿತಿಯಲ್ಲಿ ಇಲ್ಲ. ಭೂಮಿಯ ಆಧಾರವಿಲ್ಲದೆ ಅದು ನಿಂತಿದೆ. ಒಂದು ನಶ್ವರ ನೋಡಿಸಿಕೊಳ್ಳುವುದೆಂದರೆ ಈ ಹಗುರವೆನ್ನಿಸುವ ಘನವಾದ ಬಂಡೆಯ ತುದಿಯಲ್ಲಿರುವ ಒಂದು ಓತಿಕೇತ. ಕತ್ತೆತ್ತಿದ್ದ ಅದರ ಮಣಿಗಳಂತೆ ಹೊಳೆಯುವ ಉಬ್ಬಿದ ಕಣ್ಣುಗಳು. ಶೂನ್ಯವನ್ನು ದಿಟ್ಟಿಸುವ ಕಣ್ಣುಗಳು, ರಿಯಲ್ಲಿ ಸ್ಟನಿಂಗ್. ಸಾಂಕೇತಿವಾದ ಬಂಡೆಯ ಮೇಲೆ ಅತ್ಯಂತ ನಿಜವೆಂದು ಕಾಣುವ ಓತಿಕೇತ. ಅದು ಇದು ಒಟ್ಟಾಗಿ ಒಂದು ಸನ್ನೆಯಂತೆ ಭಾಸವಾಗುತ್ತದೆ. ಚಿತ್ರ ಕಾರಣವೋ ನಾನು ಕಾರಣವೋ ಹೇಳಲಾರೆ; ಎರೋಟಿಕ್‌ನ ಒಂದಂಶವೂ ಈ ಬೋಳು ಚಿತ್ರದಲ್ಲಿ ಇಲ್ಲ. ಆ ಚಿತ್ರ ಎಷ್ಟು ಬೋಳು ಎಂದರೆ, ಏರೋಟಿಕ್ ಭಾವನೆ ಚಿತ್ರದಲ್ಲಿ ಎಷ್ಟು ಕಂಪ್ಲೀಟಾಗಿ ಅಬ್ಸೆಂಟೆಂದರೆ, ಅದರ ಅಬ್ಸೆನ್ಸೇ ನನಗೆ ಅವ್ಯಕ್ತವಾದ ಪ್ರೆಸೆನ್ಸ್ ಆಗಿದೆ ಎನ್ನಿಸುತ್ತೆ. ’

ಕೃಷ್ಣಸ್ವಾಮಿ ಬಾಯಿಕಟ್ಟಿದವನಂತೆ ಅವಾಕ್ಕಾಗಿ ಕೇಳಿಸಿಕೊಂಡ. ಅಸೂಯೆಯಲ್ಲಿ ಮೆಚ್ಚುಗೆಯಲ್ಲಿ, ಬೆರಗಿನಲ್ಲಿ “ಬಡ್ಡೀಮಗನೆ” ಎಂದುಕೊಂಡ.

ಜೋತಿ ಮತ್ತೆ ಮಾತು ಬದಲಾಯಿಸಿದಳೆಂದು ಹಗುರವಾಯಿತು. ಈಗ ತಾಯಿಯ ವಿಷಯ ಹೇಳತೊಡಗಿದಳು. ಇಂಡಿಯಾಕ್ಕೋ ಫ್ರಾನ್ಸಿಗೂ ನಡುವೆ ಬಿಸಿನೆಸ್ ಕುದುರಿಸುವುದರಲ್ಲಿ ಅವಳು ನಿಷ್ಣಾತಳಾದಳು. ಆಪ್ತವಾಗಿ ಮಗಳ ಜೊತೆಮಾತಾಡುವಾಗಲೆಲ್ಲ ಕೃಷ್ಣಸ್ವಾಮಿಯ ವಿಷಯ ಎತ್ತುವಳು. ಅಥವಾ ತಾನು ಬಿಟ್ಟು ಬಂದ ಜೋತಿಯ ಅಪ್ಪನ ಬಗ್ಗೆ. ಅವನಿಗೆ ಕಾಯಿಲೆ ಎಂದು ತಿಳಿದ ಕೂಡಲೇ ಬೊಂಬಾಯಿಗೆ ಹೋಗಿ ಅವನನ್ನ ತನ್ನ ಫ್ಲಾಟಿನಲ್ಲಿಟ್ಟುಕೊಂಡು ತಾನೇ ದಾದಿಯಾಗಿ ಅವನ ಸೇವೆ ಮಾಡಿದಳು. ಆಸ್ಪತ್ರೆಗೆ ಅವನನ್ನು ಕರೆದುಕೊಂಡು ಹೋಗುವಾಗ ಬ್ಲಾಸ್ಟಿನಲ್ಲಿ ಸಿಕ್ಕಿಬಿದ್ದು ಅವಳು ಸತ್ತದ್ದು. ಅವಳ ಅನುಪಮ ಸೌಂದರ್ಯದ ದೇಹ ನುಚ್ಚುನೂರಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು… ಜೋತಿ ಅಳುತ್ತ ಕಣ್ಣುಗಳನ್ನು ಒರೆಸಿಕೊಂಡಳು. ಎದ್ದು ನಿಂತು ಕೃಷ್ಣ ಸ್ವಾಮಿಯನ್ನು ತಬ್ಬಿಕೊಂಡು ಅವನ ಎದೆಯ ಮೇಲೆ ತಲೆಯಿಟ್ಟು ಮತ್ತಷ್ಟು ಅತ್ತಳು. ಕೃಷ್ಣಸ್ವಾಮಿಗೆ ಅವಳು ಮುದ್ದು ಎನ್ನಿಸಿ ಅವಳ ಬೆನ್ನನ್ನು ತಡವಿ ಮುತ್ತಿಟ್ಟು ಸಂತೈಸಿದ. “ಬಾ” ಎಂದು ಅವನ ಕೈ ಹಿಡಿದು ತನ್ನ ಮಲಗುವ ಕೋಣೆಗೆ ಕರೆದುಕೊಂಡು ಹೋದಳು:

ಜೋತಿಯ ಹಾಸಿಗೆಗೆ ಎದುರಾಗಿಗೋಡೆಯ ಮೇಲೆ ಆಳೆತ್ತರದ ಹಸೀನಳ ಚಿತ್ರವಿತ್ತು. ಚಿತ್ರದ ಕೆಳಗೆ ಮಣ್ಣಿನ ಹಣತೆಯಲ್ಲಿ ಹೊತ್ತಿಸಿದ ದೀಪ. ಕೃಷ್ಣಸ್ವಾಮಿ ಕೈ ಮುಗಿದು ಮಂಡಿಯ ಮೇಲೆ ಕೂತು ಕಣ್ಣು ಮುಚ್ಚಿದ. ಜೊತಿ ನಮಾಜು ಮಾಡುವಂತೆ ಹಣೆಯನ್ನು ನೆಲಕ್ಕೆ ತಾಗಿಸಿ ಕಣ್ಣು ಮುಚ್ಚಿ ಕೂತಳು.

ಮತ್ತೇನೋ ನೆನಸಕೊಂಡವಳಂತೆ ಮರದ ಬೀರಿನ ಬಾಗಿಲು ತೆರೆದು ಅಂದಳು.

‘ಅಮ್ಮ ಎಷ್ಟೇ ಶ್ರೀಮಂತಳಾದರೂ ನಿನ್ನಿಂದ ಅವಳು ಕದ್ದಿದ್ದ ಟೇಪ್ ರಿಕಾರ್ಡರಿನಲ್ಲೇ ಅವಳು ತನಗೆ ಇಷ್ಟವಾದ ರಾಕಪೂರ್ ಸಿನಿಮಾದ ಹಾಡುಗಳನ್ನು ಕೇಳಿಸಿಕೊಳ್ಳೋದು. ರಿಪೇರಿ ಮಾಡಿಸಿ ನೀನು ಕೊಟ್ಟದ್ದನ್ನ ಪ್ಯಾರಿಸ್‌ಗೂ ತಂದಿದ್ಳು. ಇಪ್ಪತ್ತು ವರ್ಷಗಳಾದರೂ ಅವಳು ಇಟ್ಟುಕೊಂಡಿದ್ದ ಆ ಟೇಪ್ ರಿಕಾರ್ಡರಿನ ಒಳಗಿನ ಪ್ರತಿಯೊಂದು ಪಾರ್ಟೂ ಹೊಸದು. ಆದರೂ ಅದು ನಿನ್ನ ನೆನಪಿನದು. ಹಾಗೆಯೇ ನೀನು ಕೊಟ್ಟ ಹೊಲಿಗೆಯಂತ್ರ. ನನಗೆ ಅಮ್ಮನ ಬಳುವಳಿ ಅವು.’

ಹಾಸಿಗೆಯ ಪಕ್ಕದಲ್ಲಿದ್ದ ಬೀರಿನ ಬಾಗಿಲು ತೆರೆದಳು. ಅದರಲ್ಲಿದ್ದ ಬಟ್ಟೆಗನ್ನು ಸರಿಸಿ ಹಳೆಯ ಇನ್‌ ನ್ ಫಿಲಿಪ್ಸ್ ಟೇಪ್ ರಿಕಾರ್ಡರನ್ನು ಜೋಪಾನವಾಗಿ ಎತ್ತಿ ತಂದಳು. ಅದನ್ನು ಕೃಷ್ಣಸ್ವಾಮಿ ಮುಟ್ಟಿ ಸವರಿದ.

‘ಅಮ್ಮನಿಗೆ ಪ್ರಿಯವಾದ ಹಾಡು ಯಾವುದು ಗೊತ್ತ?’ ಎಂದು ಸ್ವಿಚ್ ಒತ್ತಿದಳು.

ಆವಾರಾ ಗೀತೆ ಶುರುವಾಯಿತು. ಕೃಷ್ಣಸ್ವಾಮಿಯ ಕಣ್ಣು ಹನಿಯಿತು.

‘ಕಜ್ಜಿ ಬುರುಕಿಯಾಗಿದ್ದಾಗ ನಿನ್ನನ್ನು ಏನೂಂತ ಕರೀತಿದ್ದೆ ಅಮ್ಮ ನನಗೆ ಹೇಳಿಲ್ಲ. ಈಗೇನು ಕರಿಬೇಕು ಹೋಳಿತಾ ಇಲ್ಲ. ಕಾಫಿ ಮಾಡಿ ತರ‍್ತೇನೆ. ಅಷ್ಟು ಹೊತ್ತು ಇಲ್ಲೇ ಅಮ್ಮನ ಜೊತೆಗಿರು. ನೀನು ರೆಡಿಯಾಗಿದ್ದರೆ ನಮ್ಮ ಗುರುಗಳ ಚಿತ್ರ ಇವತ್ತೇ ತೋರಿಸ್ತೇನೆ. ಆಲ್ ರೈಟ್?

‘ಎಸ್’ ಎನ್ನಲು ಪ್ರಯತ್ನಿಸುತ್ತ ಕೃಷ್ಣಸ್ವಾಮಿ ಜೋತಿಯ ಮುಖವನ್ನು ಅಕ್ಕರೆಯಲ್ಲಿ ನೋಡಿದ. ಜೋತಿ ಲಗುಬಗೆಯಿಂದ ತಾನೇ ಕಾಫಿ ಮಾಡಿ ತರಲು ಒಳಗೆ ಹೋದಳು.

ಬಳೆಯ ಚೂರನ್ನು ಕೃಷ್ಣಸ್ವಾಮಿ ತನ್ನ ಜೀನ್ಸ್‌ನ ಜೇಬಿನಿಂದ ತೆಗೆದು ನೋಡಿದ. ಇನ್ನೂ ಹಸಿರಾಗಿ ಉಳಿದ ಚೂರು. ಝರಿ ಸೀರೆಯುಟ್ಟು ಮಲ್ಲಿಗೆ ಮುಡಿದು ತುಂಟಾಗಿ ನಗುವ ಹಸೀನಾಳ ಚಿತ್ರದ ಕೆಳಗೆ, ಉರಿಯುತ್ತಿದ್ದ ಮಣ್ಣಿನ ಹಣತೆಯ ಎದುರಿಗೆ, ಅದನ್ನು ಇಟ್ಟ…

ಇನ್ನೊಂದು ಸನ್ನೆಗಾಗಿ ಆದ. ಸಾವಿನಾಚೆಯ ಮೌನದಿಂದ.

‘ನಿನ್ನ ಅಮ್ಮ ಬದುಕಿದಳು. ನಾನು ಬದುಕಲೇ ಇಲ್ಲ. ಬದುಕದೇ ಇರುವುದು ಅಕ್ಷಮ್ಯ’

ಕಾಫಿ ತಂದ ಜೋತಿಗೆ ಹೇಳಿದ.

ದೊಡ್ಡ ಮಾತಾಡಿಬಿಟ್ಟೆ ಎನ್ನಿಸಿ ನಾಚಿಯಾಯಿತು. ಜೋತಿ ತಂದ ಘಮಘಮಿಸುವ ಮಲೆನಾಡಿನ ಕಾಫಿಯನ್ನು ಕುಡಿಯುತ್ತ ಹಗುರಾಗಿ ಹೇಳಿದ:

‘ಸೋಮನಾಥನನ್ನು ನಾನು ಬಡ್ಡೀಮಗನೆ ಎಂದು ಪ್ರೀತಿಯಲ್ಲಿ ಇನ್ನೂ ಕರೆಯೋದು. ಅವನ ಚಿತ್ರ ತೋರಿಸು, ಬಾ. ಅದರಲ್ಲಿ ನಿನಗೆ ಕಂಡದ್ದು ನನಗೂ ಕಾಣಿಸುತ್ತೊ ನೋಡುತ್ತೀನಿ.

* * *