ಸೂರ್ಯನ ಬೆಳಕು ಜೀವಜಗತ್ತಿನ ಚೇತನ.  ಬೆಳಗಿನ ಬೆಳಕು ಮೂಡಣದಲ್ಲಿ ಮೂಡುತ್ತಿದ್ದಂತೆ ನಲಿವ ಸಸ್ಯಸಂಕುಲ, ಪಕ್ಷಿಸಂಕುಲ, ಪ್ರಾಣಿಸಂಕುಲಗಳೇ ಇದಕ್ಕೆ ಸಾಕ್ಷಿ.  ಪ್ರಕೃತಿಯ ಸಂತಸದ ಸ್ವರ ಮೌನದೊಳಕ್ಕೆ ಮುತ್ತಿನಂತೆ ಅಮೂಲ್ಯ.  ಇಡೀ ಜೀವಜಗತ್ತಿನ ಬದುಕೇ ಬೆಳಕಿನ ಮೇಲೆ ನಿಂತಿದೆ.

ಸೂರ್ಯನ ಬೆಳಕು ಹಾಗೂ ಗಾಳಿಯಲ್ಲಿರುವ (ಇಂಗಾಲ) ಕಾರ್ಬನ್ ಡೈ ಆಕ್ಸೈಡ್ ಹೀರಿಕೊಂಡು ಸಸ್ಯಗಳು ದ್ಯುತಿ ಸಂಶ್ಲೇಷಣೆಯೆಂಬ ಕ್ರಿಯೆ ನಡೆಸುತ್ತವೆ.  ಅದರಿಂದ ಗ್ಲೂಕೋಸ್, ಫ್ರುಕ್ಟೋಸ್, ಸುಕ್ರೋಸ್ ಹೀಗೆ ಅನೇಕ ರೀತಿಯ ಸಕ್ಕರೆಗಳನ್ನು ಉತ್ಪಾದಿಸುತ್ತವೆ.  ಇವು ಶಕ್ತಿಯಾಗಿ, ಆಹಾರವಾಗಿ, ಪೋಷಕಾಂಶವಾಗಿ ಏನೆಲ್ಲಾ ಆಗಿ ನಾನಾ ವಿಧದ ರೂಪ ತಳೆಯುತ್ತವೆ.  ಮುಂದೆ ಕಟ್ಟಿಗೆ, ಕಾಂಡ, ನಾರು, ಹೂವು, ಸಿಹಿ-ಕಹಿ, ಔಷಧ, ರಾಸಾಯನಿಕ ಹೀಗೆ ಎಷ್ಟೆಲ್ಲಾ ವಸ್ತುಗಳ ಉತ್ಪಾದನೆಗೆ ಮೂಲವಾಗುತ್ತವೆ.

ಇಂತಹ ಸಂಪತ್ತಿನ ಉಪಯೋಗ ನಾವೆಷ್ಟು ಮಾಡುತ್ತಿದ್ದೇವೆ?  ಕೃಷಿಯಲ್ಲಿ ಸೂರ್ಯನ ಬಳಕೆಯನ್ನು ಉದ್ದೇಶಪೂರ್ವಕವಾಗಿ ಮಾಡಿದ್ದು ಎಷ್ಟು? ಬೆಳೆಗಳಿಗೆ ಸಾಕಷ್ಟು ಬೆಳಕು ಸಿಗುವಂತೆ ನಮ್ಮ ಕೃಷಿಯನ್ನು ರೂಪಿಸಿದ್ದೇವೋ? ನಾಟಿ ಮಾಡಿದ್ದೇವೋ? ಅತ್ಯಂತ ಹೆಚ್ಚು ಬೆಳಕನ್ನು ಕೃಷಿಗೆ ಬಳಸುವುದು ತಿಳಿದಿದೆಯೋ? ಅದರ ಉಪಯೋಗ, ಪರಿಣಾಮ, ಸಾಧ್ಯತೆಗಳು ಹೀಗೆ ಏನೆಲ್ಲಾ ನಮಗೆ ಇನ್ನೂ ತಿಳಿಯಲಿಕ್ಕಿದೆ.  ಆ ದಿಕ್ಕಿನಲ್ಲಿ ಇಲ್ಲೊಂದು ಪ್ರಯೋಗ ನಡೆದಿದೆ.

ಇಂದು ಕೃಷಿ ಕೇವಲ ನೀರು ಕೇಂದ್ರಿತವಾಗಿದೆ.  ನೀರು ಕೊಟ್ಟು ಏನು ಬೇಕಾದರೂ ಬೆಳೆಯಬಹುದು ಎಂಬುದು ರೈತಜನಿತ.  ಆದರೆ ಮಹಾರಾಷ್ಟ್ರ ಗಡಿಪ್ರದೇಶದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದ ಪ್ರಗತಿಪರ ಸಾವಯವ ಕೃಷಿಕ ಸುರೇಶ್ ದೇಸಾಯಿಯವರ ಕೃಷಿಯಲ್ಲಿ ನೀರಿಗೆ ನಾಲ್ಕನೆಯ ಸ್ಥಾನ!!! ಮೊದಲ ಸ್ಥಾನ ಸೂರ್ಯನ ಬೆಳಕಿಗೆ.  ಸೂರ್ಯನ ಬೆಳಕಿನಿಂದ ಯಾವುದೇ ಕೃಷಿಯಲ್ಲೂ ಅತ್ಯಧಿಕ ಫಸಲು, ಅತ್ಯಧಿಕ ಇಳುವರಿ ಪಡೆಯಬಹುದು.  ಕೃಷಿಯಲ್ಲಿ ಸೂರ್ಯನ ಬೆಳಕಿನ ಕೊಯ್ಲೇ ಅತ್ಯಂತ ಪ್ರಮುಖ ಎಂಬುದನ್ನು ಸ್ವತಃ ಸಾಧಿಸಿದ್ದಾರೆ.

ಸುರೇಶ ದೇಸಾಯಿಯವರಿಗೆ ಬೇಡಕಿಹಾಳದಲ್ಲಿ ಐದು ಎಕರೆ ಹೊಲವಿದೆ ಹಾಗೂ ಮಹಾರಾಷ್ಟ್ರದ ರಂಗೋಲಿಯಲ್ಲಿ ಆರು ಎಕರೆ ಹೊಲವಿದೆ.  ಮುಖ್ಯಬೆಳೆ ಕಬ್ಬು.  ಅಂತರ ಬೆಳೆಯಾಗಿ, ಮಿಶ್ರಬೆಳೆಯಾಗಿ ಶೇಂಗಾ, ತೊಗರಿ, ಗೋಧಿ, ಹಸಿರುಗೊಬ್ಬರದ ಎಲೆಗಳು ಹೀಗೆ ವಿಭಿನ್ನ ಬೆಳೆಗಳನ್ನು ಬೆಳೆಯುತ್ತಾರೆ.  ಒಮ್ಮೆ ಏಕದಳ ಧಾನ್ಯ, ಮತ್ತೊಮ್ಮೆ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಇವರ ಕ್ರಮ.

ಕಬ್ಬು ಬೆಳೆಯಲು ನೀರೇ ಮುಖ್ಯ ಎನ್ನುವುದು ರೈತರ ನಂಬಿಕೆ.  ಆದರೆ ಕಡಿಮೆ ನೀರು ಬಳಸಿ, ಸೂರ್ಯನ ಬೆಳಕಿನ ಕೊಯ್ಲಿನಿಂದಲೂ ಅದೇ ಪ್ರಮಾಣದ ಇಳುವರಿ ಪಡೆಯಬಹುದು ಎನ್ನುವ ಪ್ರಯೋಗವನ್ನು ಸುರೇಶ್ ದೇಸಾಯಿಯವರು ಮಾಡಿದ್ದಾರೆ.

ಸಸ್ಯಗಳು ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಸುವುದೇ ಸೂರ್ಯನ ಬೆಳಕನ್ನು ಆಧರಿಸಿ.  ಸೂರ್ಯನ ಬೆಳಕಿನಲ್ಲಿ ಅನೇಕ ರೀತಿಯ ಶಕ್ತಿ ಇದೆ.  ಅದೇ ರೀತಿ ರೋಗನಿರೋಧಕ ಶಕ್ತಿಯೂ ಇದೆ.  ಹೀಗೆ ಒಂದು ಗಿಡಕ್ಕೆ ಅತ್ಯಧಿಕ ಸೂರ್ಯನ ಬೆಳಕನ್ನು ಒದಗಿಸಿದರೆ ಅದು ಅತ್ಯಂತ ಹೆಚ್ಚು ಆಹಾರ ಉತ್ಪಾದನೆ ಮಾಡುತ್ತದೆ.  ರೋಗನಿರೋಧಕ ಶಕ್ತಿಯನ್ನೂ ಪಡೆಯುತ್ತದೆ.  ಆರೋಗ್ಯಯುತವಾಗಿದ್ದು ಅತ್ಯಂತ ಹೆಚ್ಚು ಮರಿಸಸಿಗಳು ಹುಟ್ಟುತ್ತವೆ.  ಬೇರುಗಳು ಅತ್ಯಧಿಕ ಸಂಖ್ಯೆಯಲ್ಲಿ ಹರಡಿಕೊಳ್ಳುತ್ತವೆ.

ಸ್ವಾಭಾವಿಕವಾಗಿ ನಾಟಿ ಮಾಡಿದ ಕಬ್ಬಿನ ಹೊಲದಲ್ಲಿ ಒಂದು ಗಿಣ್ಣು ಅಥವಾ ಕಣ್ಣಿನಿಂದ ೧೨ರಿಂದ ೧೫ ಮರಿಸಸಿಗಳು ಹುಟ್ಟುತ್ತವೆ.  ಆದರೆ ಗಾಳಿ, ಬೆಳಕು ಎಲ್ಲಾ ಸಸಿಗಳಿಗೂ ಸಿಗುವಂತೆ ವಿರಳವಾಗಿ ನಾಟಿ ಮಾಡಿದಾಗ ೨೦ಕ್ಕೂ ಹೆಚ್ಚು ಮರಿಸಸಿಗಳು ಮೂಡುತ್ತವೆ.  ಇವುಗಳಿಗೆ ಸಿಗುವ ಗಾಳಿ, ಬೆಳಕಿನಿಂದಾಗಿ ಸಸಿಗಳು ಸದೃಢವಾಗಿ, ಅಧಿಕ ತೂಕದಿಂದ ಕೂಡಿರುತ್ತವೆ.

ಹೊಲದಲ್ಲಿ ಕಬ್ಬಿನ ಸಸಿಗಳು ವಿರಳವಾಗಿ ಇದ್ದಾಗ ಗಾಳಿ, ಬೆಳಕು ಸಸಿಗಳ ಬುಡದವರೆಗೂ ಸಿಗುತ್ತದೆ.  ಇದರಿಂದ ಸಸಿಗಳ ಬುಡದಲ್ಲಿ ಗಾಳಿಯಾಡಿ ಬೇರಿಗೆ ಹೆಚ್ಚು ಗಾಳಿ ಸಿಗುತ್ತದೆ.  ಬಲಿತ ಎಲೆಗಳಿಗೆ ಸೂರ್ಯನ ಬೆಳಕು ಅಧಿಕವಾಗಿ ಸಿಗುತ್ತದೆ.  ಇದರಿಂದ ದ್ಯುತಿ ಸಂಶ್ಲೇಷಣಾ ಕ್ರಿಯೆ ಅಧಿಕವಾಗಿ ನಡೆಯಲು ಕಾರಣವಾಗುತ್ತದೆ.

ಸುರೇಶ್ ದೇಸಾಯಿಯವರು ಇದಕ್ಕೊಂದು ಲೆಕ್ಕಾಚಾರ ನೀಡುತ್ತಾರೆ.  ಕಬ್ಬು ವಾರ್ಷಿಕ ಬೆಳೆ.  ಮೊದಲ ೬೫ ದಿನಗಳು ಬಾಲ್ಯಾವಸ್ಥೆಯಲ್ಲಿರುತ್ತವೆ.  ಅನಂತರದ ದಿನಗಳಲ್ಲಿ ಅಧಿಕ ಬೆಳಕು, ಗಾಳಿ ಸಿಕ್ಕರೆ ದಿನಕ್ಕೆ ನಾಲ್ಕು ಗ್ರಾಂ ಸಕ್ಕರೆ ಉತ್ಪಾದನೆಯಾಗುತ್ತದೆ.  ಒಂದು ಗ್ರಾಂ ಬೆಳವಣಿಗೆಗೆ ಹೋದರೆ ಮೂರು ಗ್ರಾಂ ಶೇಖರವಾಗುತ್ತದೆ.  ಈ ರೀತಿ ೩೦೦ ದಿನಗಳಿಗೆ ೯೦೦ ಗ್ರಾಂ ಸಕ್ಕರೆ ಶೇಖರವಾಗಿರುತ್ತದೆ.  ಇದರೊಂದಿಗೆ ಮೂರುಪಟ್ಟು ನೀರು ಸೇರಿ ಒಂದು ಕಬ್ಬು ೩.೬ ಕಿಲೋಗ್ರಾಂ ತೂಕ ಪಡೆಯುತ್ತದೆ.  ಎಲೆ, ಬೇರು, ರವದಿ, ಸಿಪ್ಪೆ ಇವುಗಳ ತೂಕ ಕಳೆದು ೨.೫ಕಿಲೋಗ್ರಾಂ ತೂಕ ಉಳಿದರೂ, ಎಕರೆಗೆ ೪೦ ಸಾವಿರ ಕಬ್ಬು ಸಿಗುತ್ತದೆ ಎಂದುಕೊಂಡರೆ ೧೦೦ ಟನ್ ಸಿಕ್ಕಿದಂತಾಗುತ್ತದೆ.  ಒಂದು ಎಕರೆಗೆ ನೂರು ಟನ್!!

ಆದರೆ ಇಷ್ಟು ಇಳುವರಿ ಪಡೆಯುವುದು ಸುಲಭವಲ್ಲ.  ಇದಕ್ಕಾಗಿ ಮೊದಲು ಅನುಸರಿಸಬೇಕಾದ್ದು ನಾಟಿ ಮಾಡುವ ಪದ್ಧತಿ.  ಕಬ್ಬಿಗೆ ನೀಡಬೇಕಾದ ಗೊಬ್ಬರ, ಹದವಾದ ಮಣ್ಣು, ಅತ್ಯಧಿಕ ಬೆಳಕು, ಗಾಳಿ ಸಿಗುವ ವ್ಯವಸ್ಥೆ ಹಾಗೂ ನೀರು.

ಸೂರ್ಯೋದಯ ಪೂರ್ವದಿಂದ ಪ್ರಾರಂಭವಾಗಿ ಚಲನೆ ಪಶ್ಚಿಮಕ್ಕಿರುವಂತೆ ಗಾಳಿಯ ಚಲನೆಯೂ ಸೂರ್ಯನನ್ನೇ ಅವಲಂಬಿಸಿದೆ.  ಗಿಡಗಳಿಗೆ ಬೆಳಗಿನ ಹಾಗೂ ಸಂಜೆಯ ಬೆಳಕು ಸಿಕ್ಕರೆ ಹೆಚ್ಚು ಸೂಕ್ತ.  ಅದಕ್ಕಾಗಿ ಸಸಿಗಳನ್ನು ದಕ್ಷಿಣ-ಉತ್ತರವಾಗಿ ನಾಟಿ ಮಾಡಬೇಕೆಂಬ ಸಲಹೆ ಸುರೇಶ್ ದೇಸಾಯಿಯರದು.  ಸೂರ್ಯನ ಬೆಳಕು ಎಲ್ಲಾ ಗಿಡಗಳಿಗೂ ಸಿಗುವಂತಾಗಲು ಜೋಡುಸಾಲು ಪಟ್ಟಾ ಪದ್ಧತಿ ಒಳ್ಳೆಯದು.  ಅಂದರೆ ರೈತರು ಇಳುಕಲಿಗೆ ಎದುರಾಗಿ ಸಾಲು ಹೊಡೆಯುತ್ತಾರೆ.  ಮೂರು ಅಡಿ ಅಂತರ ಬಿಟ್ಟು ಸಾಲುಗಳು ಇರುತ್ತವೆ.  ಎರಡು ಸಾಲು ಕಬ್ಬು ನಾಟಿ ಮಾಡುವುದು, ಎರಡು ಸಾಲು ಅಂತರಬೆಳೆ ನಾಟಿ ಮಾಡುವುದರಿಂದ ಕಬ್ಬಿಗೆ ಸಾಕಷ್ಟು ಗಾಳಿ, ಬೆಳಕು ದೊರೆಯುತ್ತದೆ.  ಆದರೆ ಅಂತರಬೆಳೆಗಳು ಯಾವಾಗಲೂ ಎರಡು ಅಡಿಗಳಿಗಿಂತಲೂ ಎತ್ತರವಾಗುವ ಬೆಳೆಯಾಗಿರಬಾರದು.  ಹೀಗೆ ಗಾಳಿ, ಬೆಳಕು ಜಿಗ್‌ಜಾಗ್ ರೀತಿಯಲ್ಲಿ ಬೆಳೆಗಳಿಗೆ ದೊರೆಯುತ್ತಿರುತ್ತದೆ.  ಎಲ್ಲಾ ಗಿಡಗಳಿಗೂ ಬುಡದವರೆಗೂ ಗಾಳಿ, ಬೆಳಕು ಸಿಗುತ್ತದೆ.

ಒಂದೊಮ್ಮೆ ಇಳುಕಲು ದಕ್ಷಿಣ ಅಥವಾ ಉತ್ತರ ದಿಕ್ಕಿಗಿದ್ದಾಗ ಸಾಲುಗಳು ಪೂರ್ವ-ಪಶ್ಚಿಮವಾಗಿರುತ್ತವೆ.  ಆಗ ನಾಟಿ ಮಾಡುವ ರೀತಿಯನ್ನು ಬದಲಿಸಬೇಕು.  ಅಂದರೆ ಪ್ರತಿಸಾಲಿನಲ್ಲೂ ಎರಡು ಕಬ್ಬಿನ ಸಸಿಗಳು ನಾಲ್ಕು ಅಂತರಬೆಳೆ ಸಸಿಗಳು ಮತ್ತು ಕಬ್ಬು ಮತ್ತು ಅಂತರಬೆಳೆ ಹೀಗೆ.

ಯಾವುದೇ ಸಸ್ಯವನ್ನು ಸುಟ್ಟರೂ ಉಳಿಯುವುದು ಹಿಡಿಯಷ್ಟು ಬೂದಿ ಮಾತ್ರ.  ಒಂದು ಕಬ್ಬು ಒಂದು ಕಿಲೋಗ್ರಾಂ ತೂಕವಿದೆ ಎಂದರೆ ಅದರಲ್ಲಿ ಆಮ್ಲಜನಕ ೪೪೦ ಗ್ರಾಂ, ಕಾರ್ಬನ್ ಡೈ ಆಕ್ಸೈಡ್ ೪೪೦ಗ್ರಾಂ, ಜಲಜನಕ ೬೦ಗ್ರಾಂ, ಸಾರಜನಕ ೩೫ಗ್ರಾಂ ಇದ್ದರೆ ೨೫ಗ್ರಾಂನಷ್ಟು ಖನಿಜಪದಾರ್ಥಗಳಿವೆ.  ಅಂದರೆ ೯೭೫ಗ್ರಾಂ ಗಾಳಿ, ಬೆಳಕಿನಿಂದ ದೊರೆತ ವಸ್ತುಗಳು ಮತ್ತು ಕೇವಲ ೨೫ಗ್ರಾಂ ಮಾತ್ರ ಮಣ್ಣಿನಿಂದ ದೊರೆತಿದ್ದಾಗಿರುತ್ತದೆ.

ಸಸ್ಯಗಳು ಗಟ್ಟಿಯಾಗಿ ನಿಲ್ಲುವುದರಿಂದ ಹಿಡಿದು ಆರೋಗ್ಯಯುತವಾಗಿ ಜೀವನಚಕ್ರ ಪೂರೈಸಲು ಫಲವತ್ತಾದ ಮಣ್ಣು ಬೇಕೇಬೇಕು.  ಅದಕ್ಕಾಗಿ ಸುರೇಶ್ ದೇಸಾಯಿಯವರು ಅಂತರಬೆಳೆಯಾಗಿ ಹಸಿರೆಲೆ ಗೊಬ್ಬರದ ಗಿಡಗಳನ್ನು ಬೆಳೆಯತೊಡಗಿದರು. ಉಳಿದ ಬೆಳೆಗಳಲ್ಲಿಯೂ ಫಸಲನ್ನು ಮಾತ್ರ ಪಡೆದುಕೊಂಡು ಸೊಪ್ಪು ಕಡ್ಡಿಗಳನ್ನು ಅಲ್ಲಿಯೇ ಕೊಳೆಯಲು ಬಿಡತೊಡಗಿದರು.  ಪರಂಪರಾಗತ ಪದ್ದತಿಯಂತೆ, ಒಮ್ಮೆ ಏಕದಳ, ಮತ್ತೊಮ್ಮೆ ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣು ಫಲವತ್ತಾಗಿಯೇ ಉಳಿಯುತ್ತದೆ ಎನ್ನುವುದು ತಿಳಿದಿತ್ತು.  ಇಡೀ ಹೊಲಕ್ಕೆ ಏಕದಳ ಹಾಗೂ ದ್ವಿದಳ ಧಾನ್ಯಗಳನ್ನು ಬಿತ್ತಿ ಅದರ ಗಿಡಗಳನ್ನೆಲ್ಲಾ ಹೊಲದ ಮಣ್ಣಿಗೆ ಬೆರೆಸುವುದರಿಂದ ಹೊಲ ಇನ್ನಷ್ಟು ಫಲವತ್ತಾಗಬಹುದು ಎನ್ನುವ ಆಲೋಚನೆಗೆ ಕೆಲವು ಚರ್ಚಾಸಭೆಗಳಲ್ಲಿ ಪುಷ್ಟಿಯೂ ದೊರಕಿತು.  ಅದರಂತೆ ಅನೇಕ ಏಕದಳ, ದ್ವಿದಳ ಧಾನ್ಯಗಳನ್ನು ಹೊಲಕ್ಕೆ ಬಿತ್ತತೊಡಗಿದರು.  ಪಾಂಡಿಚೆರಿಯಲ್ಲಿ ಪತ್ರಿಕೆಯೊಂದರಲ್ಲಿ ಓದಿದ ಆರೋಗ್ರೀನ್ ಬೀಜಗಳನ್ನು ತಂದು ಹೊಲವನ್ನು ಹಸಿರೆಲೆ ಗೊಬ್ಬರಗಳಿಂದ ತುಂಬಿಸಿ ಫಲವತ್ತಾಗಿಸತೊಡಗಿದರು.

ಕಬ್ಬಿನ ಎಲೆಗಳು, ಕಸಗಳನ್ನೆಲ್ಲಾ ಹೊಲದಲ್ಲೇ ಮುಚ್ಚಿಗೆಯಾಗಿ ಬಳಸತೊಡಗಿದರು.  ಹೀಗೆ ಮಣ್ಣು ನೇರವಾಗಿ ಸೂರ್ಯನ ಬಿಸಿಲಿಗೆ ಸಿಗದೆ ಜೀವಾಣುಗಳು ಅಧಿಕ ಸಂಖ್ಯೆಯಲ್ಲಿ ವೃದ್ಧಿಯಾಗಲೂ ಕಾರಣವಾಯಿತು.

ಇತ್ತೀಚೆಗೆ ಸುರೇಶ್ ದೇಸಾಯಿಯವರು ಆರೋಗ್ರೀನ್ ಹಸಿರೆಲೆ ಗೊಬ್ಬರದ ಬೀಜಗಳನ್ನು ಬಿತ್ತುವುದನ್ನು ನಿಲ್ಲಿಸಿದ್ದಾರೆ.  ಅದರ ಬದಲು ಹೊಲದಲ್ಲಿ ಹುಟ್ಟುವ ಕಳೆಗಳನ್ನೇ ಕಬ್ಬಿಗೆ ಮುಚ್ಚಿಗೆಯಾಗಿ ಬಳಸುತ್ತಿದ್ದಾರೆ.  ಕಳೆಗಳಲ್ಲಿ ಅನೇಕ ವಿಧಗಳಿವೆ.  ಒಂದೊಂದು ಕಳೆಯೂ ಒಂದೊಂದು ಖನಿಜಾಂಶ ಹೊಂದಿದೆ.  ಅವು ಕಬ್ಬಿಗೆ ಪೋಷಣೆ ಒದಗಿಸುತ್ತವೆ ಎನ್ನುವ ಅನುಭವವ ಅವರದು.

ಅಷ್ಟೇ ಅಲ್ಲ, ಕೊಟ್ಟಿಗೆ ಗೊಬ್ಬರ, ಎರೆಗೊಬ್ಬರ, ಕೋಳಿ, ಕುರಿ ಹೀಗೆ ಯಾವ ಗೊಬ್ಬರವನ್ನೂ ಹೊಲಕ್ಕೆ ಹಾಕುವುದಿಲ್ಲ.  ಮುಚ್ಚಿಗೆ ಹಾಗೂ ಹಸಿರೆಲೆಗಳೇ ಏನೆಲ್ಲಾ ಪೋಷಣೆ ನೀಡುತ್ತವೆ ಎನ್ನುವ ಪ್ರತಿಪಾದನೆ.  ಮನೆಯಲ್ಲಿ ಇರುವುದು ಒಂದು ಎಮ್ಮೆ ಹಾಗೂ ಕರು.  ಅದರ ಹಾಲು ಮನೆಯ ಉಪಯೋಗಕ್ಕೆ.  ಹೊಲದಲ್ಲಿ ಸಿಗುವ ಎಲೆ, ಸೊಪ್ಪುಗಳೇ ಅವಕ್ಕೆ ಮೇವು.  ಅದರಿಂದ ಸಿಗುವ ಸಗಣಿಯನ್ನು ಪ್ರತಿ ಗಿಡದ ಸುತ್ತಲೂ ಹಾಕುತ್ತಾರೆ.  ಗೊಬ್ಬರ ಮಾಡಿ ಹಾಕುವ ಪದ್ಧತಿಯನ್ನು ಕೈಬಿಟ್ಟಿದ್ದಾರೆ.  ಕಾರಣ ಕಾಡು ಕಲಿಸಿದ ಪಾಠ ಎನ್ನುತ್ತಾರೆ ಸುರೇಶ್ ದೇಸಾಯಿ.  ಕಾಡು ಜೀವವೈವಿಧ್ಯಗಳ ಆಗರ.  ಅಲ್ಲಿ ಗಿಡಮರಗಳಿಗೆ ಯಾರೂ ಗೊಬ್ಬರ, ನೀರು ಕೊಡುವುದಿಲ್ಲ, ಸಗಣಿಯನ್ನೂ ಹಾಕುವುದಿಲ್ಲ.  ಆದರೂ ಯಾವ ರೋಗಗಳಿಲ್ಲದೇ ಗಿಡಮರಗಳು ಬೆಳೆಯುವುದಿಲ್ಲವೇ?  ಅದೇ ರೀತಿ ನಮ್ಮ ಹೊಲದಲ್ಲೂ ಜೀವವೈವಿಧ್ಯಗಳನ್ನು ಹೆಚ್ಚಿಸಿದರೆ ಯಾವ ಗೊಬ್ಬರವೂ ಬೇಕಾಗಿಲ್ಲ ಎನ್ನುವ ತತ್ವವನ್ನು ಪ್ರತಿಪಾದಿಸುತ್ತಾರೆ.  ಅಗ್ರಿಕಲ್ಚರ್ ಎಂದರೆ ಮಣ್ಣು, ಗಾಳಿ, ಬೆಳಕು, ನೀರು ಹಾಗೂ ಜೀವವೈವಿಧ್ಯಗಳೊಂದಿಗೆ ಅಗ್ರಿಮೆಂಟ್ ಮಾಡಿಕೊಳ್ಳುವುದು ಎನ್ನುವ ಪದಚಿಂತನೆ ದೇಸಾಯಿಯವರದು.

ಸ್ವಾಭಾವಿಕವಾಗಿ ಸಗಣಿಯನ್ನು ಗೊಬ್ಬರವಾಗಿ ಮಾಡುವಾಗಲೇ ಸಗಣಿ ಹಾಗೂ ಹಸಿರೆಲೆ, ದರಕು ಇವುಗಳಲ್ಲಿರುವ ಶಕ್ತಿ ನಾಶವಾಗುತ್ತದೆ.  ಅದರ ಬದಲು ಗಿಡದ ಬುಡದಲ್ಲೇ ಗೊಬ್ಬರವಾಗುವ ಪ್ರಕ್ರಿಯೆ ನಡೆಯುವುದೇ ಮುಖ್ಯ.  ಒಂದು ಎಕರೆಗೆ ೧೦ ಕಿಲೋಗ್ರಾಂ ಸಗಣಿ ಸಾಕು.  ಬದುಗಳಲ್ಲಿ ನೀರು ಬಿಡುವಾಗ ನೀರಿನೊಂದಿಗೆ ಸ್ವಲ್ಪ ನೀಡಿದರೂ ಆದೀತು.  ಸಗಣಿ ಎನ್ನುವುದು ಹಾಲಿಗೆ ಹೆಪ್ಪು ಹಾಕಿದಂತೆ.  ಸೂಕ್ತ ವಾತಾವರಣ, ಹವಾಮಾನ, ಉಷ್ಣತೆ ಇವೆಲ್ಲಾ ಇದ್ದರೆ ಮೊಸರು ಚೆನ್ನಾಗಿ ಆಗುತ್ತದೆ.  ಅದೇ ರೀತಿ ಗೊಬ್ಬರವಾಗಲೂ ಇವೆಲ್ಲಾ ಸೂಕ್ತ ರೀತಿಯಲ್ಲಿ ಇರಬೇಕು.  ಸಗಣಿಯು ಗೊಬ್ಬರದ ಪ್ರಕ್ರಿಯೆಯಲ್ಲಿ ಒಂದು ವೇಗವರ್ಧಕ ಮಾತ್ರ ಎನ್ನುವುದನ್ನು ತಮ್ಮ ನಿರಂತರ ಪ್ರಯೋಗಗಳಿಂದಲೇ ಕಂಡುಕೊಂಡಿದ್ದನ್ನು ಸುರೇಶ್ ದೇಸಾಯಿ ತಿಳಿಸುತ್ತಾರೆ.  ಹಿಂದೆ ಪ್ರತಿ ಎಕರೆಗೆ ಹತ್ತು ಬಂಡಿಗಳಷ್ಟು ಸಗಣಿ ಗೊಬ್ಬರ ನೀಡುತ್ತಿದ್ದುದನ್ನು ಬಿಟ್ಟಿರುವುದರಿಂದ ಯಾವುದೇ ನಷ್ಟವಾಗಿಲ್ಲ.  ಈಗ ಮಾಡುತ್ತಿರುವ ಪ್ರಯೋಗ ಹೆಚ್ಚು ಉಪಯುಕ್ತವಾಗಿರುವುದನ್ನು ಹೋಲಿಸಿ ಹೇಳುತ್ತಾರೆ.  ಹೀಗಾಗಿ ಇವರ ಕೃಷಿಯಲ್ಲಿ ಗೊಬ್ಬರದ ಖರ್ಚು ಇಲ್ಲ.  ಕಳೆದ ೧೨ ವರ್ಷಗಳಿಂದ ಮಾಡುತ್ತಾ ಬಂದಿರುವ ಈ ಪ್ರಯೋಗ ಇನ್ನೂ ಬದಲಾಗಲೂಬಹುದಂತೆ.

ಕಬ್ಬು ಅತ್ಯಂತ ಹೆಚ್ಚು ನೀರು ಬಯಸುವ ಬೆಳೆ.  ಆದರೆ ದೇಸಾಯಿಯವರ ಹೊಲದಲ್ಲಿ ನೀರಿಗೆ ನಾಲ್ಕನೆಯ ಸ್ಥಾನ ಅಥವಾ ಕೊನೆಯ ಸ್ಥಾನ.  ಕಬ್ಬು ಬಯಸುವುದು ನೀರನ್ನಲ್ಲ, ತೇವಾಂಶವನ್ನು ಎನ್ನುತ್ತಾರೆ ದೇಸಾಯಿಯವರು.  ಅದಕ್ಕಾಗಿ ನೀರನ್ನು ೧೦ ಅಥವಾ ೧೫ ದಿನಗಳಿಗೊಮ್ಮೆ ನೀಡಿದರೂ ಸಾಕು.  ಆದರೆ ಗಾಳಿ, ಬೆಳಕು ಹಾಗೂ ಹಸಿರೆಲೆ ಮುಚ್ಚಿಗೆ ಅಂದರೆ ಮಣ್ಣಿನ ಫಲವತ್ತತೆಯನ್ನು ಸರಿಯಾಗಿ ನಿಭಾಯಿಸಿರಬೇಕು.  ಗಾಳಿಯ ನಿಯಂತ್ರಣದಿಂದ ಇಡೀ ಹೊಲದೊಳಗೆ ಹಸಿರುಮನೆ ಪರಿಣಾಮವಾಗುತ್ತಿರುತ್ತದೆ.  ಹೀಗಾಗಿ ನೀರು ಕೊಟ್ಟಾಗ ಅದು ತೇವಾಂಶವಾಗಿ ಬದಲಾಗುತ್ತದೆ.  ಹೀಗೆ ಅಧಿಕ ಸಮಯ ಹೊಲದಲ್ಲಿ ತೇವಾಂಶ ಇರುವುದರಿಂದ ಕಬ್ಬಿನ ಬೆಳವಣಿಗೆಗೆ ಪೂರಕವಾಗುತ್ತದೆ.  ಹೊಲದಲ್ಲಿನ ಮುಚ್ಚಿಗೆಯಿಂದಾಗಿ ಮಣ್ಣಿಗೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚುತ್ತದೆ ಹಾಗೂ ನೀರು ಆಳಕ್ಕಿಳಿಯದೇ ಬೇರುಗಳ ಬುಡದಲ್ಲೇ ಉಳಿಯುತ್ತದೆ.  ಅಧಿಕ ಬೆಳಕು ಸಿಕ್ಕುವುದರಿಂದ ವೇಗವಾಗಿ ನಡೆಯುವ ದ್ಯುತಿಸಂಶ್ಲೇಷಣಾ ಕ್ರಿಯೆಯೊಂದಿಗೆ ಈ ತೇವಾಂಶವೂ ಸೇರಿ ಕಬ್ಬು ಹೆಚ್ಚು ತೂಕಯುತವಾಗುತ್ತದೆ.  ಗಾಳಿ, ಬೆಳಕು, ಮಣ್ಣಿನ ಫಲವತ್ತತೆ ಹೆಚ್ಚಿಸದೇ ಕೇವಲ ನೀರು ಮಾತ್ರ ನೀಡುವುದರಿಂದ ಆಗುವ ಉಪಯೋಗ ಅತಿ ಕಡಿಮೆ.  ಅದಕ್ಕಾಗಿಯೇ ಸುರೇಶ್ ದೇಸಾಯಿಯವರ ಹೊಲದಲ್ಲಿ, ಹನಿ ನೀರಾವರಿ ಪದ್ಧತಿಯಾಗಲೀ, ತುಂತುರು ನೀರಾವರಿ ಪದ್ಧತಿಯಾಗಲೀ ಇಲ್ಲ.  ಒಣಭೂಮಿಯಲ್ಲೂ ಸಿಕ್ಕಷ್ಟೇ ನೀರಿನಿಂದ ಕಬ್ಬು ಬೆಳೆಯಬಹುದೆನ್ನುವುದನ್ನು ಹೀಗೆ ಪ್ರಮಾಣೀಕರಿಸಿ ಒಣಭೂಮಿ ರೈತರಿಗೆ ಕಬ್ಬು ಬೆಳೆಯುವ ರೀತಿಯನ್ನು ತಿಳಿಸುತ್ತಾರೆ.  ಕೇವಲ ಸಾಲುಗಳ ಮಧ್ಯೆ ನೀರು ಹಾಯಿಸುವಿಕೆ ಮಾತ್ರದಿಂದಲೇ ಕಬ್ಬಿಗೆ ಸಾಕಾಗುಷ್ಟು ನೀರು ನೀಡಬಹುದೆನ್ನುವುದೂ ಇವರ ಹೊಲದಲ್ಲಿ ಕಾಣಿಸುತ್ತದೆ.  ನೀರಾವರಿಗೋಸ್ಕರ ಯಾವ ಖರ್ಚುಗಳೂ ಇಲ್ಲ.

ಹೀಗೆ ಕಳೆ ತೆಗೆಸುವ ಖರ್ಚು ಇಲ್ಲ, ಗೊಬ್ಬರದ ಖರ್ಚು ಎಲ್ಲ, ನೀರಾವರಿ ಖರ್ಚು ಇಲ್ಲ ಹಾಗೂ ನೀರುಳಿತಾಯವೂ ಇದೆ.  ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಖರ್ಚಂತೂ ಇಲ್ಲವೇ ಇಲ್ಲ.  ಹೀಗಾಗಿ ಬರುವ ಆದಾಯವೆಲ್ಲಾ ನಿವ್ವಳ ಲಾಭವೇ ಆಗುತ್ತದೆ.  ಅಂತರಬೆಳೆಗಳು, ಮಿಶ್ರಬೆಳೆಗಳು ಪರೋಕ್ಷ ಲಾಭ ನೀಡುವುದು ಕಾಣಿಸದಿದ್ದರೂ ಮುಖ್ಯಬೆಳೆಯ ಇಳುವರಿಗೆ ಪೂರಕವಾಗಿವೆ.

ಇಷ್ಟಾಗಿಯೂ ಸುರೇಶ್ ದೇಸಾಯಿಯವರು ಒಂದು ಎಕರೆಗೆ ಈಗಲೂ ಸುಮಾರು ೪೦ರಿಂದ ೪೫ ಟನ್ ಕಬ್ಬಿನ ಇಳುವರಿಯನ್ನು ಪಡೆಯುತ್ತಾರೆ.  ಮಿಶ್ರಬೆಳೆ ಹಾಗೂ ವಿರಳವಾಗಿ ನಾಟಿ ಮಾಡುವ ಪದ್ಧತಿಯು ಎಕರೆವಾರು ಇಳುವರಿಯನ್ನು ಕಡಿಮೆ ಮಾಡಿಲ್ಲ.  ಉಳಿದವರ ಹೊಲಗಳಲ್ಲಿ ಬರುವಷ್ಟೇ ಇಳುವರಿ ಇವರ ಹೊಲದಲ್ಲೂ ಬರುತ್ತದೆ.

ಜೈವಿಕ ರೋಗ ನಿವಾರಣೋಪಾಯಗಳು

ಸಾಕಷ್ಟು ಸೂರ್ಯನ ಬೆಳಕು ಸಿಗುವುದರಿಂದ ರೋಗನಿರೋಧಕ ಶಕ್ತಿಯನ್ನು ಗಿಡಗಳು ತಾನಾಗೇ ಹೊಂದಿರುತ್ತವೆ.  ಆದರೂ ಕೆಲವು ಟಾನಿಕ್‌ಗಳು ಒಮ್ಮೊಮ್ಮೆ ಅವಶ್ಯಕವಾಗಬಹುದು.  ಅತಿಯಾದ ನೀರಿನ ಬಳಕೆಯಿಂದಲೇ ಬಿಳಿ ಉಣ್ಣೆಯಂತಹ ಕೀಟಬಾಧೆ ಕಾಣಿಸಿಕೊಳ್ಳುತ್ತದೆ ಎನ್ನುವ ಅಭಿಪ್ರಾಯ ದೇಸಾಯಿಯವರದು.  ಅದಕ್ಕೆ ಜೈವಿಕ ಉಪಾಯವೆಂದರೆ ಐದು ಲೀಟರ್ ಆಕಳ ಮೂತ್ರ, ಐದು ಲೀಟರ್ ಮಜ್ಜಿಗೆ ಹಾಗೂ ಎರಡು ಕಿಲೋಗ್ರಾಂ ಈರುಳ್ಳಿಯನ್ನು ಜಜ್ಜಿ ಮಿಶ್ರಣ ಮಾಡಬೇಕು.  ಅದನ್ನು ತಾಮ್ರದ ಪಾತ್ರೆಯಲ್ಲಿ ಎಂಟು ದಿನಗಳವರೆಗೆ ಇಡಬೇಕು.  ದ್ರಾವಣವನ್ನು ಸೋಸಿ ೧೦೦ ಲೀಟರ್ ನೀರಿಗೆ ಬೆರೆಸಿ ಕಬ್ಬಿಗೆ ಸಿಂಪಡಿಸಿದರೆ ಬಿಳಿ ಉಣ್ಣೆ ನಿಯಂತ್ರಣವಾಗುತ್ತದೆ.

ಆದರೆ ರೋಗ ಬಾರದಂತೆ ಮಾಡುವ ಉಪಾಯವೇ ಹೆಚ್ಚು ಸುಲಭವಾಗಿದೆ.  ಕಬ್ಬಿನ ಮಧ್ಯೆ ಮಧ್ಯೆ ಈರುಳ್ಳಿ, ಕಡಲೆ, ಕೊತ್ತಂಬರಿ, ಮೆಂತೆ ಮುಂತಾದ ಬೀಜಗಳನ್ನು ಬಿತ್ತನೆ ಮಾಡಬೇಕು.  ಇವು ಅಲ್ಲಿ ಗಿಡಗಳಾಗಿ ಬೆಳೆಯುತ್ತವೆ.  ಎರಡು ತಿಂಗಳುಗಳ ನಂತರ ಅವುಗಳನ್ನು ಕಟಾವು ಮಾಡಿ ಭೂಮಿಗೆ ಸೇರಿಸಬೇಕು.  ಈರುಳ್ಳಿಯಲ್ಲಿರುವ ಗಂಧಕಾಂಶವು ಬಿಳಿ ಉಣ್ಣೆಗೆ ಮಾರಕವಾಗಿದೆ.  ಮೆಂತೆಯಲ್ಲಿರುವ ಕಬ್ಬಿಣದ ಅಂಶ, ಕಡಲೆಯಲ್ಲಿರುವ ಅಮೈನೊ ಆಸಿಡ್ ಹೀಗೆ ಎಲ್ಲವೂ ಬಿಳಿ ಉಣ್ಣೆಗೆ ಶತ್ರುಗಳೇ ಆಗಿರುವ ಕಾರಣ ಕೀಟಬಾಧೆ ಉಂಟಾಗುವುದಿಲ್ಲ.  ಹೀಗೆ ಕಬ್ಬಿನೊಂದಿಗೆ ಬೆಳೆಯುವ ಈ ಬೆಳೆಗಳು ಗೊಬ್ಬರವೂ ಹೌದು, ಕೀಟನಾಶಕವೂ ಆಗಿದೆ.

ಇದೇ ರೀತಿ ಕಬ್ಬಿನೊಂದಿಗೆ ಆರೋಗ್ರಿನ್, ಹಸಿರೆಲೆ ಗೊಬ್ಬರಕ್ಕಾಗಿ ಧಾನ್ಯಗಳನ್ನೂ ಬಿತ್ತನೆ ಮಾಡಬಹುದು.  ಒಂದು ಎಕರೆಗೆ ಕಡಲೆ ಮೂರು ಕಿಲೋಗ್ರಾಂ, ಬಿಳಿ ಎಳ್ಳು ೧೦೦ ಗ್ರಾಂ, ರಾಜಗಿರಿ ೧೦೦ ಗ್ರಾಂ, ಮೆಂತೆ, ಸಜ್ಜೆ, ಹೆಸರು, ಉದ್ದು, ಕೊತ್ತಂಬರಿ ಇವೆಲ್ಲಾ ಒಂದೊಂದು ಕಿಲೋಗ್ರಾಂ, ಕರಿ ಎಳ್ಳು ೨೦೦ ಗ್ರಾಂ, ಪುಂಡಿಬೀಜ ೨೦೦ ಗ್ರಾಂ, ಮೆಣಸಿನ ಬೀಜ ೫೦೦ ಗ್ರಾಂ, ಅಲಸಂದಿ ೫೦೦ ಗ್ರಾಂ ಮಿಶ್ರಣ ಮಾಡಿ ಬಿತ್ತಬೇಕು.  ಎರಡು ತಿಂಗಳ ನಂತರ ಹುಟ್ಟಿದ ಗಿಡಗಳನ್ನೆಲ್ಲಾ ಭೂಮಿಗೆ ಸೇರಿಸಬೇಕು.

ಕಾಯಿಸಿ ಆರಿಸಿದ ಒಂದು ಲೀಟರ್ ಹಾಲಿಗೆ ೧೫ ಲೀಟರ್ ನೀರು ಸೇರಿಸಿ ಸಿಂಪಡಿಸುತ್ತಿರಬೇಕು.  ಅದೇ ರೀತಿ ಐದು ದಿನ ಹುಳಿ ಬಂದಿರುವ ಒಂದು ಲೀಟರ್ ಮಜ್ಜಿಗೆಗೆ ೧೫ ಲೀಟರ್ ನೀರು ಸೇರಿಸಿ ಸಿಂಪಡಿಸಬೇಕು.  ಅದೇ ರೀತಿ ಪಂಚಗವ್ಯ, ತಾಮ್ರದ ಪಾತ್ರೆಯಲ್ಲಿ ಐದು ದಿನ ಇಟ್ಟ ಗೋಮೂತ್ರ ಇವೆಲ್ಲಾ ಸಸ್ಯಗಳಿಗೆ ಸಿಂಪಡಿಸುವುದರಿಂದ ರೋಗಬಾಧೆ, ಕೀಟಬಾಧೆ ಇರುವುದಿಲ್ಲ.

ದೇಸಾಯಿಯವರ ಸಲಹೆಗಳು

ಉಳಿದೆಲ್ಲಾ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಜೀವವೈವಿಧ್ಯ, ಸೂರ್ಯನ ಬೆಳಕು, ಗಾಳಿ, ಮಳೆ ಹೀಗೆ ಪ್ರಾಕೃತಿಕ ಸಂಪತ್ತು ವಿಫುಲವಾಗಿದೆ.  ಇದನ್ನೆಲ್ಲಾ ಬಳಸಿಕೊಂಡು ಇರುವಷ್ಟೇ ಜಾಗದಲ್ಲಿ ರೋಗರಹಿತ, ರಾಸಾಯನಿಕರಹಿತ ಬೆಳೆ ಬೆಳೆದು ಜಾಗತೀಕರಣವನ್ನು ಸಮರ್ಥವಾಗಿ ಎದುರಿಸಬಹುದು.

ಅಕ್ಕಪಕ್ಕದವರು ರಾಸಾಯನಿಕ ಬಳಸುತ್ತಿದ್ದರೆ ನಮ್ಮ ಹೊಲಕ್ಕೂ ಅಪಾಯವಿದೆ.  ಅದಕ್ಕಾಗಿ ಆಳವಾದ ಟ್ರೆಂಚ್‌ಗಳನ್ನು ನಮ್ಮ ಹೊಲದ ಸುತ್ತಲೂ ತೆಗೆಸಬೇಕು.  ಜೀವಂತ ಬೇಲಿಗಳನ್ನು ನಿರ್ಮಿಸಬೇಕು.  ಬದುಗಳ ಮೇಲೆ ಗ್ಲಿರಿಸೀಡಿಯಾ ಮುಂತಾದ ಮರವಾಗಿ ಬೆಳೆವ ಗಿಡಗಳನ್ನು ಬೆಳೆಸಬೇಕು.

ಕಳೆಗಳನ್ನು ಸಹ ಮುಚ್ಚಿಗೆಯಾಗಿ ಬಳಸಬಹುದೆನ್ನುವ ಪ್ರಯೋಗ ಸುರೇಶ್ ದೇಸಾಯಿಯವರದು.  ಕಳೆಗಳನ್ನು ಹುಲುಸಾಗಿ ಏಳಲು ಬಿಡಬಾರದು.  ಅವುಗಳಲ್ಲಿಯೂ ಅನೇಕ ವೈವಿಧ್ಯಗಳಿವೆ.  ಒಂದೊಂದು ಕಳೆಯೂ ಒಂದೊಂದು ಪೋಷಕಾಂಶ ನೀಡುತ್ತದೆ.  ಆದರೆ ಅವು ಮುಖ್ಯ ಬೆಳೆಯೊಂದಿಗೆ ಸೂರ್ಯನ ಬೆಳಕಿಗಾಗಿ ಸ್ಪರ್ಧೆ ಮಾಡದಂತೆ ನೋಡಿಕೊಳ್ಳಬೇಕಾದ್ದು ಮುಖ್ಯ.  ಕಳೆಗಳನ್ನು ಕಿತ್ತು ಮುಚ್ಚಿಗೆಯಾಗಿ ಮುಖ್ಯಬೆಳೆಯ ಸುತ್ತಲೂ ಹಾಕಬೇಕು.

ನಾವು ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ ಹೀಗೆ ರಾಸಾಯನಿಕಗಳನ್ನು ತಿನ್ನುತ್ತೇವೋ ಅಥವಾ ಆಹಾರವನ್ನೋ, ಹಾಗೇ ಸಸ್ಯಪೋಷಣೆಗೂ ಸಹ ಆಹಾರವನ್ನೇ ನೀಡಬೇಕು.  ಅವು ತಮಗೆ ಬೇಕಾದ್ದನ್ನು ಆರಿಸಿಕೊಂಡು ಅವಯವಗಳನ್ನು ಕಾಳು, ಹೂವು, ಹಣ್ಣು ಹೀಗೆ ಏನೆಲ್ಲಾ ರೂಪಿಸುತ್ತದೆ.

ಸಾವಯವ ಬೆಲ್ಲ ತಯಾರಿಸುವಾಗ ಒಂದು ಕೊಪ್ಪರಿಗೆಗೆ ಮೊದಲು ಬೆಂಡೆಗಿಡಗಳನ್ನು ಜಜ್ಜಿ ಲೋಳೆ ಬರಿಸಿ ಹಾಕುತ್ತಾರೆ.  ಇದರಿಂದ ಮೇಲಿನ ಕಾಕಂಬಿಯನ್ನು ಸುಲಭವಾಗಿ ತೆಗೆಯಬಹುದು.  ಅನಂತರ ಒಳ್ಳೆಯ ಪಾಕಕ್ಕಾಗಿ ೧೦೦ಮಿಲಿಲೀಟರ್ ಶೇಂಗಾ ಎಣ್ಣೆ ಹಾಗೂ ಅರ್ಧ ಕಿಲೋಗ್ರಾಂ ಸುಣ್ಣ ಬೆರೆಸುತ್ತಾರೆ.