ಭಾಮಿನಿ

ಇತ್ತಲಾ  ಕಶ್ಯಪ  ರುಷಿಗಳು
ಹರಿಹರರು  ಪೆಂದೋಟಪುರಕೆ
ಹೋಗಬೇಕೆಂದೆನುತ  ಸಂಭ್ರಮದಿಂದ
ಓರ್ವ ಚಾರಕನ ಕರೆದು  ಮಯಬ್ರಹ್ಮನ ಪಟ್ಟಣಕ್ಕೆ
ಹೋಗಿ  ಕಶ್ಯಪರುಷಿಗಳು  ಬರುವರೆಂದು
ತಿಳಿಸಬಾರೆಂದೆನುತ  ನುಡಿದರು ॥

ಕಶ್ಯಪ: ಅಯ್ಯ ಸೇವಕಾ ಆ ಮಯಬ್ರಹ್ಮನಲ್ಲಿಗೆ ಹೋಗಿ ಕಶ್ಯಪರುಷಿಗಳು ನಿಮ್ಮ ಪಟ್ಟಣಕ್ಕೆ ಬರುವರೆಂದು ಜಾಗ್ರತೆ ಹೋಗಿ ತಿಳಿಸು.

ಚಾರಕ: ಸ್ವಾಮಿ ಕಶ್ಯಪರೆ ನಿಮ್ಮ ಅಪ್ಪಣೆಯಂತೆ ಈಗಲೇ ಹೋಗಿ ತಿಳಿಸುತ್ತೇನೆ.

ಚಾರಕ: ಮಯಬ್ರಹ್ಮದೇವರಿಗೆ ಜಯವಾಗಲಿ.

ಮಯಬ್ರಹ್ಮ: ಚಾರನೆ ವರ್ತಮಾನವೇನು.

ಚಾರಕ: ಸ್ವಾಮಿ ಮಯಬ್ರಹ್ಮ ದೇವರೆ, ಕಶ್ಯಪ ಮುನಿಗಳು ನಿಮ್ಮ ಪಟ್ಟಣಕ್ಕೆ ಬರುತ್ತಾರಂತೆ.

ಮಯಬ್ರಹ್ಮ: ಸೇವಕಾ ವಳ್ಳೇದು ಬಹಳ ಸಂತೋಷ ಅಯ್ಯ ಮಂತ್ರಿ ಜಾಗ್ರತೆಯಾಗಿ ನಮ್ಮ ಪಟ್ಟಣವನ್ನು ಶೃಂಗಾರ ಮಾಡಿಸು.

ಮಂತ್ರಿ: ರಾಜೇಂದ್ರ ನಿಮ್ಮ ಇಷ್ಟದಂತೆ ಆಗಲಿ.

ಭಾಮಿನಿ

ಇತ್ತಲಾ  ಕಶ್ಯಪರು  ಹರಿಹರರು
ಆ ಪೆಂದೋಟಪುರಕೆ
ಸಂಭ್ರಮದಿ  ಬರುತಿರಲಾಗಾ ॥

ಕಶ್ಯಪರು: ಸೇವಕಾ ಆ ಮಯಬ್ರಹ್ಮನಲ್ಲಿಗೆ ಹೋಗಿ ಕಶ್ಯಪ ರುಷಿಗಳು ದ್ವಾರಬಾಗಿಲಲ್ಲಿ ನಿಂತಿರುವರೆಂದು ತಿಳಿಸುವನಾಗು.

ಚಾರಕ: ಸ್ವಾಮಿ ಕಶ್ಯಪರುಷಿಗಳೆ ಈಗಲೇ ಹೋಗಿ ತಿಳಿಸುತ್ತೇನೆ.

ಚಾರಕ: ಮಯಬ್ರಹ್ಮ ದೇವರಿಗೆ ಜಯವಾಗಲಿ.

ಮಯಬ್ರಹ್ಮ: ಚಾರನೆ ವರ್ತಮಾನವೇನು.

ಚಾರಕ: ಸ್ವಾಮಿ ಮಯಬ್ರಹ್ಮ ದೇವರೆ ಕಶ್ಯಪರುಷಿಗಳು ಬಂದು ದ್ವಾರಬಾಗಿಲಲ್ಲಿ ನಿಂತಿರುವರು.

ಮಯಬ್ರಹ್ಮ: ಸೇವಕಾ ಬಹಳ ಸಂತೋಷ ಅಯ್ಯ ಮಂತ್ರಿ ಜಾಗ್ರತೆಯಾಗಿ ಬಂಗಾರದ ಪಲ್ಲಕ್ಕಿಯನ್ನು ತೆಗೆದುಕೊಂಡು ಹೋಗಿ ಕರೆದುಕೊಂಡು ಬರುವನಾಗು.

ಮಂತ್ರಿ: ರಾಜೇಂದ್ರ ನಿಮ್ಮ ಅಪ್ಪಣೆಯಂತೆ ಈಗಲೇ ಕರೆದುಕೊಂಡು ಬರುತ್ತೇನೆ.

ಮಂತ್ರಿ: ಸೇವಕಾ ಜಾಗ್ರತೆಯಾಗಿ ಬಂಗಾರದ ಪಲ್ಲಕ್ಕಿಯನ್ನು ಸಿದ್ಧಪಡಿಸಿಕೊಂಡು ಹೊರಡುವಂಥವ ನಾಗು.

ಮಂತ್ರಿ: ಕಶ್ಯಪರೆ ಹರಿಹರರೆ ನಮಸ್ಕರಿಸುವೆನು.

ಕಶ್ಯಪರುಹರಿಹರರು: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಮಂತ್ರೀಶಾ.

ಮಂತ್ರಿ: ಸ್ವಾಮಿ ಕಶ್ಯಪರೆ ಹರಿಹರರೆ ಈ ಬಂಗಾರದ ಪಲ್ಲಕ್ಕಿಯಲ್ಲಿ ಕುಳಿತು ಕೊಳ್ಳುವಂಥವರಾಗಿರಿ.

ಕಶ್ಯಪರು: ಅಯ್ಯ ಮಂತ್ರಿ ಈಗಲೇ ಹೊರಡುತ್ತೇವೆ.

ಮಯಬ್ರಹ್ಮ: ಕಶ್ಯಪರೆ ಹರಿಹರರೆ ನಿಮಗೆ ನಮಸ್ಕರಿಸುವೆವು.

ಕಶ್ಯಪರುಹರಿಹರರು: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಮಯಬ್ರಹ್ಮದೇವಾ.

ಮಯಬ್ರಹ್ಮ: ಸ್ವಾಮಿ ಕಶ್ಯಪರೆ ಹರಿಹರರೆ ನೀವುಗಳು ನನ್ನ ಪಟ್ಟಣಕ್ಕೆ ಬಂದಿದ್ದು ನನ್ನ ಭಾಗ್ಯೋದಯವೇ ಸರಿ. ಬಡವನು ನಡೆಯುವ ದಾರಿಯಲ್ಲಿ ಧನದ ಬಿಂದಿಗೆಯನ್ನು ಎಡವಿ ಬಿದ್ದಂತಾಯಿತು. ರೋಗದಿಂದ ವ್ಯಾಕುಲನಾದವನು ವೈದ್ಯವನ್ನು ಕಂಡಂತೆ ನಿಮ್ಮ ದರುಷನದಿಂದ  ನಾನು ಧನ್ಯನಾದೆನು. ನಮ್ಮನ್ನು ಆಶ್ರಯಿಸಿಕೊಂಡಿದ್ದ ಪಾಪವೆಂಬ ವೃಕ್ಷವು ಕಡಿದು ಹೋಯಿತು. ಈ ಬಂಗಾರದ ಸಿಂಹಾಸನದಲ್ಲಿ ಕುಳಿತುಕೊಳ್ಳುವಂಥವರಾಗಿರಿ. ಸ್ವಾಮಿ ಕಶ್ಯಪರುಷಿಗಳೆ ನೀವು ನಂದಿ ವಾಹನನಾದ ಶಂಕರನು ಗರುಡ ವಾಹನನಾದ ಹರಿಯು ಕಲಹಕಂಟಕರಾದ ನಾರದರು ಸಹ ಬಂದ ವಿಚಾರವನ್ನು ತಿಳಿಸುವಂಥವರಾಗಿರಿ.

ಮಯಬ್ರಹ್ಮ: ಅಯ್ಯ ಮಯಬ್ರಹ್ಮ ದೇವ. ನನ್ನ ಕಂದನಾದ ಸೂರ‌್ಯದೇವನಿಗೆ ನಿನ್ನ ಮಗಳನ್ನು ತಂದು ಲಗ್ನಮಾಡಿಕೊಂಡು ನನ್ನ ವಂಶಾಭಿವೃದ್ಧಿಯನ್ನು ಮಾಡಿಕೊಳ್ಳಬೇಕೆಂದು ಬಂದಿರುತ್ತೇನೆ. ಇದಕ್ಕೆ ನಿಮ್ಮ ಇಷ್ಟವೇನು.

ಮಯಬ್ರಹ್ಮ: ಕುಮಾರಿಯನ್ನು ಕೊಡಲು ನನ್ನ ಯತ್ನವೇನಿರುವುದು. ವಿಧಿಬರಹವನ್ನು ಮೀರಿ ನಡೆಯಲು ಯಾರಿಂದ ತಾನೆ ಸಾಧ್ಯವಾದೀತು. ನಿಮ್ಮ ಇಷ್ಟದಂತೆ ಆಗಲಿ. ಅಯ್ಯ ಮಂತ್ರಿ ಪುರೋಹಿತರನ್ನು ಪಂಚಾಂಗವನ್ನು ತೆಗೆದುಕೊಂಡು ಬರುವಂತೆ ಹೇಳು.

ಮಂತ್ರಿ: ರಾಜೇಂದ್ರ ನಿಮ್ಮ ಇಷ್ಟದಂತೆ ಕರೆಸುತ್ತೇನೆ.

ಮಂತ್ರಿ: ಸೇವಕಾ ಜಾಗ್ರತೆಯಾಗಿ ಪುರೋಹಿತರನ್ನು ಬರಮಾಡು.

ಚಾರಕ: ಸ್ವಾಮಿ ನಿಮ್ಮ ಇಷ್ಟದಂತೆ ಬರಮಾಡುತ್ತೇನೆ.

ಪುರೋಹಿತರು: ಬನ್ನಿರೈಯ್ಯಿ ಬನ್ನಿರಿ ರಾಮಶಾಸ್ತ್ರಿ ಭೀಮಶಾಸ್ತ್ರಿ ಬನ್ನಿರೈಯ್ಯಿ ನೀವ್ಗಳು.

ಮಯಬ್ರಹ್ಮ: ಪುರೋಹಿತರಿಗೆ ನಮುಸ್ಕರಿಸುವೆನು.

ಪುರೋಹಿತರು: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಮಯಬ್ರಹ್ಮಾದೇವಾ, ಅಯ್ಯ ಮಯಬ್ರಹ್ಮದೇವ ನಮ್ಮನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು.

ಮಯಬ್ರಹ್ಮ: ಸ್ವಾಮಿ ಪುರೋಹಿತರೆ ನಿಮ್ಮನ್ನು ಕರೆಸಿಕೊಂಡ ಕಾರಣವೇನೆಂದರೆ ನನ್ನ ಮಗಳಾದ ಸಂಜ್ಞಾದೇವಿಯನ್ನು ಕಶ್ಯಪರ ಪುತ್ರನಾದ ಸೂರ‌್ಯದೇವನಿಗೆ ಕೊಟ್ಟು ವಿವಾಹ ಮಾಡಬೇಕು. ಆದ್ದರಿಂದ ಪಂಚಾಂಗವನ್ನು ನೋಡಿ ದಿನ ವಾರ ನಕ್ಷತ್ರ ಯಾವಾಗ ಚೆನ್ನಾಗಿದೆ ನೋಡಿ ಹೇಳುವರಾಗಿರಿ.

ಪುರೋಹಿತರು: ಸ್ವಾಮಿ ಶಾಮಶಾಸ್ತ್ರಿಗಳೆ ಬನ್ನಿ ಕೂತುಕೊಳ್ಳಿ ಮೀನ ಮೇಷ ವೃಷಭ ಮಿಥುನ ಕನ್ಯಾ  ಏನು ಸ್ವಾಮಿ ಮೀನ ಚೈತ್ರ ಕಳೆದು ಹೋಯ್ತು ನಾಳೆ ದಿವಸ ವೈಶಾಖಶುದ್ಧ ಪಂಚಮಿ ಲಗ್ನ ಪ್ರಶಸ್ತವಾಗಿದೆ. ಈ ಲಗ್ನ ಬಿಟ್ರೆ ಮುಂದೆ ಆರು ತಿಂಗಳು ಚೆನ್ನಾಗಿಲ್ಲಾ ಸ್ವಾಮಿ.

ಮಯಬ್ರಹ್ಮ: ಪುರೋಹಿತರೆ ನಿಮ್ಮ ಇಷ್ಟದಂತೆ ಆಗಲಿ.

ಮಯಬ್ರಹ್ಮ: ಅಯ್ಯ ಮಂತ್ರಿ ಇವರಿಗೆ ವುಡುಗೊರೆ ಬಹುಮಾನಗಳನ್ನು ಕೊಡುವಂಥವನಾಗು.

ಮಂತ್ರಿ: ರಾಜೇಂದ್ರ ನಿಮ್ಮ ಇಷ್ಟದಂತೆ ಕೊಡುತ್ತೇನೆ.

ಮಯಬ್ರಹ್ಮ: ಸ್ವಾಮಿ ಕಶ್ಯಪರುಶಿಗಳೆ, ತಮ್ಮ ಇಷ್ಟದಂತೆ ನಾಳೆ ಪಂಚಮಿ ದಿವಸ ಸಕಲ ಬಂಧುಗಳನ್ನು ನನ್ನ ಕುಮಾರಿಗೆ ತಕ್ಕ ವಡವೆ ವಸ್ತ್ರಭರಣಗಳನ್ನು ನಾಂಟ್ಯ ಸ್ತ್ರೀಯರನ್ನು ಕರೆದುಕೊಂಡು ಬರುವಂಥವರಾಗಿರಿ. ಇಗೋ ಲಗ್ನಪತ್ರಿಕೆಯನ್ನು ಕೊಡುತ್ತೇನೆ ತೆಗೆದುಕೊಳ್ಳುವಂಥವರಾಗಿರಿ.

ಕಶ್ಯಪ: ಅಯ್ಯ ಮಯಬ್ರಹ್ಮ ಭೂಪಾಲ, ನಿನ್ನಂಥ ವಳ್ಳೆಯ ಮನುಷ್ಯನನ್ನು ನಾನು ಯಲ್ಲಿಯೂ ನೋಡಲಿಲ್ಲ. ನಾವು ಸಕಲ ಸಾಮಾನುಗಳನ್ನು ತೆಗೆದುಕೊಂಡು ಬರುತ್ತೇವೆ. ನಾವು ಗಮನ ಮಾಡುತ್ತೇವೆ ಮಯಬ್ರಹ್ಮ.

ಮಯಬ್ರಹ್ಮ: ಸ್ವಾಮಿ ಹರಿಹರರೇ, ನೀವು ನಿಮ್ಮ ಪಟ್ಟಣಕ್ಕೆ ಹೋಗಿ, ನಿಮ್ಮ ಪತ್ನಿ ಸಮೇತ ಬಂದು ಈ ಕಾರ‌್ಯವನ್ನು ನಡೆಸಿಕೊಡಬೇಕೆಂದು ಬೇಡಿಕೊಳ್ಳುತ್ತೇನೆ.

ಕಶ್ಯಪ: ಮಗು ದೇವೇಂದ್ರ ಸೂರ‌್ಯನು ಲಗ್ನಕ್ಕೆ ಬಂದರೆ ಈ ಲೋಕವನ್ನು ಪರಿಪಾಲನೆ ಮಾಡುವರ‌್ಯಾರು.

ದೇವೇಂದ್ರ: ತಂದೆಯವರೆ ನೀವು  ಹೇಳುವಂಥ ಮಾತಿಗೆ ಪ್ರತಿಯಾಗಿ ಹೇಳುವುದಕ್ಕೆ ಸಾಧ್ಯವಿಲ್ಲವೈ ತಂದೆ.

ಕಶ್ಯಪ: ಸೇವಕಾ ನನ್ನ ಕಂದನಾದ ಅರ್ಕನನ್ನು ಬರು ಮಾಡು.

ಅರ್ಕ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ. ಭಲೈ ಮಾನುಷ್ಯನೆ ನಮ್ಮ ಯದುರಿನಲ್ಲಿ ನಿಂತು ಭಯವಿಲ್ಲದೆ ಮಾತನಾಡಿಸುವ ಮಾನುಷ್ಯ ನೀ ಧಾರೋ ಹೀಗೆ ಬಾರೋ. ಭಲೈ ಸಾರಥಿ ನಾವು ಧಾರೆಂದರೆ ಸುರ ನರ ಗರುಡ ಗಾಂಧರ‌್ವರೊಳ್ ಹೊಗಳಿಸಿಕೊಳ್ಳುವಂಥ ಕಶ್ಯಪರ ಧರ್ಮಪತ್ನಿಯಳಾದ ಅದಿತಿದೇವಿಯ ಗರ್ಭಾಂಬುಧಿಯೊಳ್ ಜನಿಸಿ ಧನುರ್ವಿದ್ಯ ನಿಪುಣನಾದ ಅರ್ಕದೇವನೆಂದು ತಿಳಿಯಲೈ ಸೇವಕಾ ಭಯತೃಣ ಪಾವಕ. ಭಲೈ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ನಮ್ಮ ತಂದೆಯವರಾದ ಕಶ್ಯಪ ಮುನಿಗಳು ಕರೆಸಿದ ಕಾರಣ ಬಂದಿರುತ್ತೇನೆ. ಜಾಗ್ರತೆಯಾಗಿ ತೋರಿಸುವಂಥವನಾಗು.

ಅರ್ಕ: ತಂದೆಯವರ ಪಾದಕ್ಕೆ ನಮಸ್ಕರಿಸುವೆನು.

ಕಶ್ಯಪ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ಕಂದಾ ನನ್ನ ಮನಕಾನಂದ.

ಅರ್ಕ: ತಂದೆಯವರೆ ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಪೇಳುವಂಥವರಾಗಿರಿ.

ಕಶ್ಯಪ: ಕಂದನಾದ ಅರ್ಕನೆ ಕೇಳು. ನಿನ್ನನ್ನು ಕರೆಸಿಕೊಂಡ ಕಾರಣವೇನೆಂದರೆ ನಿನ್ನ ಅಗ್ರಜನಾದ ಸೂರ‌್ಯನಿಗೆ ಲಗ್ನ ಮಾಡಬೇಕು. ಅವನು ಬರುವವರೆವಿಗೂ ಅವನ  ರಥವನ್ನು ಹೊಡೆಯುವವನಾಗು.

ಅರ್ಕ: ತಂದೆಯವರೆ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ತಂದೆ  ಲಾಲಿಸಿ ಕೇಳಿ  ನೀಚಕಾರ್ಯವ ನಾನು
ಮಾಡುವದಿಲ್ಲ  ಜನಕ ಪೇಳುವೆ  ನಾನು ॥

ಅರ್ಕ: ತಂದೆಯವರೆ, ಆ ನೀಚರಾದ ಅಷ್ಟಗ್ರಹಗಳಲ್ಲಿ ನಾನು ಜೀವಿಸಲಾರೆನು. ಈ ಕಾರ‌್ಯವು ನನ್ನಿಂದ ಸಾಧ್ಯವಿಲ್ಲವೈ ತಂದೆಯವರೇ.

ಪದ

ಜನಕನ ವಚನವ  ಛೇ  ಹುಸಿಯ ಮಾಡುವೆ
ನೀನು  ಹಿಡಿ ಹಿಡಿ  ಶಾಪವ ॥ಛೇ ॥
ಕೊಡುವೆನು ನಿನಗೇ  ಮರ್ಕಟ ಜನ್ಮವನೆತ್ತಿ
ಪರಿಪರಿ ॥ಕಷ್ಟವ ಪಡಬೇಕು  ಅರ್ಕನೇ ॥

ಕಶ್ಯಪ: ಛೇ ಪಾಪಿಯಾದ ಅರ್ಕನೆ ಕೇಳು. ನಿನ್ನ ನುಡಿಯನ್ನು ಕೇಳಿದಾಕ್ಷಣವೇ ನಿನ್ನನ್ನು ಸುಟ್ಟು ಬಿಡುತ್ತಿದ್ದೆನು ಮನ್ನಿಸಿರುವೆನು. ಛೇ ಪಾಪಿ ನೀನು ಕಪಿಜನ್ಮವನ್ನು ಎತ್ತಿ ಕಾಡಿನಲ್ಲಿ ಗೆಡ್ಡೆ ಗೆಣೆಸು ಹಣ್ಣು ಹಂಪಲುಗಳನ್ನು ತಿಂದು ಜೀವಿಸು ಹೋಗು. ಮುಖವನ್ನು ತೋರಿಸಬೇಡ,

ಅರ್ಕ: ಹಾ ಕೆಟ್ಟೆನು ಕೆಟ್ಟೆನು ತಂದೆಯವರೆ ಅರಿಕೆಮಾಡಿಕೊಳ್ಳುತ್ತೇನೆ.

ಪದ

ಕ್ಷಮಿಸೆನ್ನಪರಾಧವ  ತಂದೆ  ಕಶ್ಯಪ ಮುನಿಯೆ
ಕೊಟ್ಟ ಶಾಪವ ನಾನು  ಸೈಸಲಾರೆನು ಜನಕಾ ॥
ತಿಳಿಯದೆ  ಮಾಡಿದ  ಅಪರಾಧವನ್ನು
ನೀವು ಮನ್ನಿಸಬೇಕು  ಜನಕ  ಬೇಡುವೆ  ನಾನು ॥

ಅರ್ಕ: ಅಯ್ಯೋ ತಂದೆಯವರೆ ನಾನು ತಿಳಿವಳಿಕೆ ಇಲ್ಲದೆ ಮಾಡಿದ ಅಪರಾಧವನ್ನು ಮನ್ನಿಸಬೇಕು. ನೀವು ಕೊಟ್ಟ ಶಾಪವು ಯಾವಾಗ ವಿಮೋಚನೆಯಾಗುತ್ತದೆ. ಶಾಂತರೀತಿಯಿಂದ ಹೇಳಬೇಕೈ ತಂದೆಯವರೆ.

ಕಶ್ಯಪ: ಯಲವೋ ಅರ್ಕನೆ ಹೇಳುತ್ತೇನೆ ಕೇಳು.

ಪದ

ಕೊಟ್ಟ  ಶಾಪವು  ನಿನಗೆ ಹೋಗಬೇಕಾದರೆ  ತ್ರೇತಾಯುಗದಲ್ಲಿ
ಕೇಳು  ನೀನು  ಶ್ರೀಹರಿಯು  ರಾಮಾವತಾರವ  ಎತ್ತುವನು
ಕೇಳು  ಕೇಳೈಯ್ಯ  ನೀನು  ಆತನ  ಸೇವೆಯ
ಮಾಡಿದ ಮೇಲೆ  ನಿನಗೆ  ಶಾಪವಿಮೋಚನೆ ಆಗುವದೈಯ್ಯ ॥

ಕಶ್ಯಪ: ಯಲವೋ ಅರ್ಕನೆ ಕೇಳು. ನಿನ್ನ ಶಾಪವು ಹೋಗಬೇಕಾದರೆ ನಾರಾಯಣನು ರಾಮ ಅವತಾರವನ್ನು ಎತ್ತಿ  ಅರಣ್ಯಕ್ಕೆ ಹೋದಾಗ ನೀನು ಆತನ ಸೇವೆಯನ್ನು ಮಾಡುತ್ತಾ ಇರು. ಆಗ ನಿನ್ನ ಶಾಪವು ವಿಮೋಚನೆ ಆಗುವುದು. ಆವಾಗ ನಿನಗೆ ಸುಖವುಂಟಾಗುವುದು ಮತ್ತು ಆವಾಗ ಸೂರ‌್ಯನನ್ನು ಅರ್ಕನೆಂದು ಕರೆಯುವರು. ಹೋಗು ಮುಖವನ್ನು ತೋರಿಸಬೇಡ.

ಪದ

ಗತಿ ಯಾರು  ನನಗಿನ್ನು  ಪರದೇಶಿಯಾದೆನು
ಸೈರಿಸಲಾರೆನು  ದೇವಾ  ಸೈರಿಸಲಾರೆನು  ನಾನು  ದೇವಾ ॥

ಅರ್ಕ: ಅಯ್ಯೋ ದೈವವೆ. ನಾನು ಅರಿಯದೆ ಮಾಡಿದ ಅಪರಾಧಕ್ಕೆ ತಂದೆಯವರು ಶಾಪವನ್ನು ಕೊಟ್ಟರಲ್ಲಾ. ಅಯ್ಯೋ ವಿಧಿಯೆ ನಾನು ಖಂಡಿತವಾಗಿ ಸೈರಿಸಲಾರೆನು.

ಪದ

ತಂದೆಯು  ಮಗನಿಗೆ  ಶಾಪವ ಕೊಟ್ಟರು
ಎಂಬ ವಾರ್ತೆಯಾ  ನಾನು  ಎಂತು ಸೈರಿಸಲೀಗಾ
ಲೋಕದ  ಅಪವಾದವ  ಸೈರಿಸಲಾರೆನು  ದೇವಾ
ಮನ್ನಿಸಿ  ಕಾಪಾಡು  ಕಾಪಾಡು ದೇವಾ ॥

ಅರ್ಕ: ಅಯ್ಯೋ ತಂದೆಯು ಮಗನಿಗೆ ಶಾಪವನ್ನು ಕೊಟ್ಟರೆಂಬ ವಾರ್ತೆಯನ್ನು ಈ ಮೂರು ಲೋಕದಲ್ಲಿಯೂ ಕಾಣಲಿಲ್ಲಾ. ಅಯ್ಯೋ ದೈವವೆ ನಾನು ಹ್ಯಾಗೆ ಮುಖವನ್ನು ತೋರಿಸಲಿ. ನನ್ನ ಕಷ್ಟವನ್ನು ನೀನೇ ಕಾಪಾಡಬೇಕೈ ಯೀಶಾ ಮಹೇಶಾ.

ಭಾಮಿನಿ

ಇತ್ತಲಾ ಕಶ್ಯಪ ಮುನಿಗಳು  ಕಂದನಾದ ಅರ್ಕನಿಗೆ
ಶಾಪವ ಕೊಡಲಾಗಲಾಕ್ಷಣ  ಇತ್ತಲಾ  ಕಂದನಾದ
ತಪನನ್ನು  ಕರೆಸಬೇಕೆಂದು  ಸಂಭ್ರಮದಿ  ನುಡಿಯುತಿರಲಾಗಾ ॥

ಕಶ್ಯಪ: ಸೇವಕಾ ನನ್ನ ಕಂದನಾದ ತಪನನ್ನು ಬರ ಮಾಡು.

ತಪ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ ಭಲೈ ಮಾನುಷ್ಯನೆ ನಮ್ಮ ಎದುರಿನಲ್ಲಿ ಬಂದು ನಿಂತು ಕಟುಕರ ಭಯವಿಲ್ಲದೆ ಮಾತನಾಡಿಸುವ ಮಾನುಷ್ಯ ನೀ ಧಾರೋ ಹೀಗೆ ಬಾರೋ. ಭಲೈ ಸಾರಥಿ ನಾವು ಧಾರೆಂದರೆ ಸಪ್ತರುಷಿಗಳೋಳ್ ಶ್ರೇಷ್ಠರಾದ ಕಶ್ಯಪ ಮುನಿಗಳ ಪುತ್ರನಾದ ತಪನೆಂದು ತಿಳಿಯುವಂಥವನಾಗು. ಭಲೈ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ತಂದೆಯವರಾದ ಕಶ್ಯಪ ಮುನಿಗಳು ಕರೆಸಿಕೊಂಡ ಕಾರಣ ಬಾಹೋಣವಾಯ್ತು. ಜಾಗ್ರತೆಯಾಗಿ ತೋರಿಸುವಂಥವನಾಗು.

ತಪ: ತಂದೆಯವರ ಪಾದಕ್ಕೆ ನಮಸ್ಕರಿಸುವೆನು.

ಕಶ್ಯಪರುಷಿ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ಕಂದ.

ತಪ: ತಂದೆಯವರೆ ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು. ಜಾಗ್ರತೆಯಾಗಿ ಹೇಳುವಂಥವರಾಗಿರಿ.

ಪದ

ಕೇಳೈ  ಕುವರನೆ  ನಾಳೆಯದಿವಸ  ಕಂದ  ಸೂರ‌್ಯನಿಗೆ
ಲಗ್ನವ ಮಾಡಬೇಕು  ಕೇಳೈಯ್ಯ  ನೀನು
ನಾವು ಬರುವ  ಪರಿಯಂಥ  ರಥವನ್ನು
ನಡೆಸಬೇಕೈಯ್ಯ  ನಡೆಸಬೇಕು  ಕಂದಾ ॥

ಕಶ್ಯಪ: ಮಗು ತಪನೆ, ನಿನ್ನ ಅಗ್ರಜನಾದ ಸೂರ‌್ಯನಿಗೆ ನಾಳೆ ದಿವಸ ಲಗ್ನಕ್ಕೆ ಹೋಗಬೇಕು. ನಾವು ಬರುವವರೆವಿಗೂ ಆತನ ರಥವನ್ನು ನೀನು ನಡೆಸುವನಾಗಪ್ಪಾ ಕಂದಾ.

ತಪ: ತಂದೆಯವರೆ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ನಿಮ್ಮ  ವಾಕ್ಯವ  ನಾನು  ನಡೆಸುವೆನು
ನಾ ಜನಕಾ  ಅಷ್ಟಗ್ರಹಗಳ  ಬಾಧೆಯ ನಾನು
ಸೈಸಲಾರೆನು  ಜನಕ  ಪಾಲಿಸಿ ವರವನ್ನು
ಬೇಡುವೆ  ನಾ ಜನಕಾ  ಬೇಡುವೆ ನಾನು ॥

ತಪ: ತಂದೆಯವರೆ, ಭಾನುದೇವನ ಕಾರ್ಯವನ್ನು ವಹಿಸಿಕೊಂಡು ಸಂಚಾರ ಮಾಡುವ ಕಾಲದಲ್ಲಿ ಅಷ್ಟಗ್ರಹಗಳ ಪೈಕಿ ಬುಧ ರಾಹು ಕೇತುಗಳಿಂದ ತೊಂದರೆಯು ಬರುವುದು. ಅವನ್ನು ಹಿಂದಕ್ಕೆ ಕಳಿಸುವ ಶಕ್ತಿಯು ನನಗಿಲ್ಲಾ. ನನಗೆ ಆಶೀರ‌್ವದಿಸಿ ಕಳಿಸಬೇಕೈ ತಂದೆಯವರೆ.

ಪದ

ಪೆಂದೋಟ ಪುರದಿಂದ  ಬರುವ  ಪರಿಯ ತೊಂದರೆ
ಬರದಂತೆ  ಕೊಡುವೆನು  ವರವಾ  ಭೀತಿಯ
ಪಡಬೇಡ  ಕೊಡುವೆನುವರವಾ  ಹೊರಡೈಯ್ಯ
ಕಂದಾ  ಹೊರಡೈಯ್ಯ ನೀನು ॥

ಕಶ್ಯಪ: ಕಂದ ನಾವು ಲಗ್ನ ಕಾರ್ಯವನ್ನು ಪೂರೈಸಿಕೊಂಡು ಬರುವವರೆವಿಗೂ ನಿನಗೆ ಯಾವ ತೊಂದರೆಯೂ ಬಾರದಂತೆ ವರವನ್ನು ಕೊಟ್ಟಿರುತ್ತೇನೆ. ನೀನು ಜಾಗ್ರತೆಯಾಗಿ ಹೋಗುವನಾಗು.

ತಪ: ತಂದೆಯವರೆ ಅಗ್ರಜನಾದ ಅರ್ಕನನ್ನು ಎಲ್ಲಿಗೆ ಕಳಿಸಿರುವಿರಿ. ಜಾಗ್ರತೆಯಾಗಿ ಪೇಳುವಂಥವರಾಗಿರಿ.

ಪದ

ಕೇಳೈ  ಕಂದ  ಹೇಳಿದ  ಕಾರ್ಯವಾ
ಭಂಗ ಮಾಡಿದ  ಅವನು  ಕೇಳೈಯ್ಯ ನೀನು
ಕೊಟ್ಟೆನು ಶಾಪವ  ಕಪಿಜನ್ಮವ
ಅವಗೆ ಕೊಟ್ಟಿರುವೆನು  ಕೇಳು  ಕೇಳೈಯ್ಯ ಕಂದಾ ॥

ಕಶ್ಯಪ: ಕಂದ ನಿನ್ನ ಅಣ್ಣನಾದ ಅರ್ಕನಿಗೆ ಈ ವಿಚಾರವನ್ನು ಹೇಳಿದೆನು. ಅದಕ್ಕೆ ಅವನು ಯದುರು ವುತ್ತರವನ್ನು ಕೊಟ್ಟನು. ನನಗೆ ಕೋಪಬಂದು ಕಪಿಜನ್ಮವನ್ನು ಎತ್ತಿ ಕಾಡಿನಲ್ಲಿ ಗೆಡ್ಡೆ ಗೆಣೆಸು ಹಣ್ಣು ಹಂಪಲುಗಳನ್ನು ತಿಂದು ಜೀವಿಸು ಎಂದು ಶಾಪವನ್ನು ಕೊಟ್ಟಿರುವೆನು.

ಪದ

ತಂದೆಯು  ಮಗನಿಗೆ  ಶಾಪವ ಕೊಡುವರೆ
ಅಪವಾದ  ಬಂದೀತು  ಕೇಳೈ ಜನಕಾ ॥

ತಪ: ಅಯ್ಯೋ ತಂದೆಯವರೆ, ತಂದೆಯು ಮಗನಿಗೆ ಶಾಪವನ್ನು ಕೊಟ್ಟರೆಂಬ ವಾರ್ತೆಯನ್ನು ನಾನು ಎಲ್ಲಿಯೂ ಕೇಳಲಿಲ್ಲಾ. ನನ್ನ ಅಗ್ರಜನಾದ ಅರ್ಕನನ್ನು ತೋರಿಸುವಂಥವರಾಗಿರಿ. ಆ ರಾಮ ಕಾರ್ಯವ ಮಾಡಿದ ಮೇಲಿನ್ನು ಪುನರಪಿ ಜನ್ಮವ ಎತ್ತಿ ಬರುವನು.

ಕಶ್ಯಪ: ಕಂದನಾದ ತಪನೆ ಕೇಳು. ನಿಮ್ಮ ಅಗ್ರಜನಾದ ನಾರಾಯಣನು ರಾಮ ಅವತಾರವನ್ನು ಎತ್ತಿ ಅರಣ್ಯಕ್ಕೆ ಹೋಗುವನು. ಆವಾಗ ಅವನ ಸೇವೆಯನ್ನು ಮಾಡಿದರೆ ಅವನ ಶಾಪವು ಹೋಗಿ ಸುಖದಿಂದ ಪುನಹ ಬರುವನು. ಆದ್ದರಿಂದ ನೀನು ಜಾಗ್ರತೆಯಾಗಿ ನಿಮ್ಮ ಅಣ್ಣನಾದ ಸೂರ‌್ಯನನ್ನು ಕಳಿಸುವಂಥವನಾಗು.

ತಪ: ತಂದೆಯವರೆ ನಿಮ್ಮ ಇಷ್ಟದಂತೆ ಆಗಲಿ.

ಭಾಮಿನಿ

ಇತ್ತಲಾ  ಕಶ್ಯಪರ  ಪುತ್ರನಾದ  ತಪನು  ತಂದೆಯಿಂದಾಶೀರ‌್ವಾದವಂ
ಕೈಕೊಂಡು  ಸೂರ‌್ಯದೇವನ ಕಳಿಸಬೇಕೆಂದೆನುತ
ಸಂಭ್ರಮದಿ  ಬರುತಿರಲಾಗಲಾಕ್ಷಣಾ ॥

ತಪ: ಅಗ್ರಜಾ ನಮಸ್ಕರಿಸುವೆನು.

ಸೂರ್ಯದೇವ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ತಮ್ಮಾ ಅನುಜಾ.

ತಪ: ಅಗ್ರಜಾ ನಿಮ್ಮ ಆಶೀರ‌್ವಾದದಿಂದ ನಾನು ಧನ್ಯನಾದೆನು.

ಸೂರ್ಯದೇವ: ಅನುಜ ನೀನು ಬಂದ ವಿಚಾರವೇನು.

ತಪ: ಅಗ್ರಜ, ತಂದೆಯವರು ಪೆಂದೋಟಪುರಕ್ಕೆ ಹೋಗಬೇಕಾಗಿರುವುದರಿಂದ ನಾನು ನೀವು ಬರುವವರೆಗೂ ನಿಮ್ಮ ರಥವನ್ನು ನಡೆಸುತ್ತೇನೆ. ನೀವು ಜಾಗ್ರತೆಯಾಗಿ ಹೊರಡಬೇಕೈ ಅಗ್ರಜಾ.

ಸೂರ್ಯದೇವ: ಅನುಜ ಅಗ್ನಿಯೋಪಾದಿಯಲ್ಲಿರುವ ಕಿರೀಟವನ್ನು ಧರಿಸಿಕೊಂಡು ದುಷ್ಟ ಗ್ರಹಗಳ ನೆರಳು ಬೀಳದಂತೆ ಸಂಚಾರ ಮಾಡು.

ತಪ: ಅಗ್ರಜ ನಿಮ್ಮ ಇಷ್ಟದಂತೆ ಆಗಲಿ.

ಸೂರ್ಯದೇವ: ಸೇವಕಾ, ಅನುಜನಿಗೆ ಅನುಭವವಿಲ್ಲವಾದ ಕಾರ್ಯವನ್ನು ನೇಮಿಸಿರುತ್ತೇನೆ ನೀನು ವುಪಾಯದಿಂದ ರಥವನ್ನು ಹೊಡೆಯುವನಾಗು.

ಭಾಮಿನಿ

ಇತ್ತಲಾ  ಸೂರ‌್ಯದೇವನು  ತನ್ನ ಅನುಜನಾದ
ತಪನಿಗೆ  ರಥದ  ಕಾರ್ಯವ  ನೇಮಿಸಿ
ತನ್ನ  ತಂದೆಯವರಾದ  ಕಶ್ಯಪ ಮುನಿಗಳ
ನೋಡಬೇಕೆಂದೆನುತ  ಸಂಭ್ರಮದಿ  ಬರುತಿರಲಾಗ ॥

ಸೂರ್ಯದೇವ: ತಂದೆಯವರ ಪಾದಕ್ಕೆ ನಮಸ್ಕರಿಸುವೆನು.

ಕಶ್ಯಪ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ಕಂದ ಸೂರ‌್ಯದೇವ.

ಸೂರ್ಯದೇವ: ತಂದೆಯವರೆ ನಿಮ್ಮ ಆಶೀರ‌್ವಾದದಿಂದ ನಾನು ಧನ್ಯನಾದೆನು.

ಕಶ್ಯಪ: ಕಂದ, ನಿನ್ನ ಇಷ್ಟದಂತೆ ಪೆಂದೋಟಪುರದ ಮಯಬ್ರಹ್ಮನ ಮಗಳನ್ನು ಗೊತ್ತು ಮಾಡಿರುವೆನು. ದೇವೇಂದ್ರನನ್ನು ಕರೆದುಕೊಂಡು ಬರುವೆ ನಾನು.

ಸೂರ್ಯದೇವ: ತಂದೆಯವರೆ ನಿಮ್ಮ ಇಷ್ಟದಂತೆ ಆಗಲಿ. ಸೇವಕಾ ದೇವೇಂದ್ರ ಭೂಪಾಲನನ್ನು ಆಸ್ಥಾನಕ್ಕೆ ಬರಮಾಡು.

ಪದ

ಅನುಜಾ  ಲಾಲಿಸಿ ಕೇಳು
ವಿನಯದಿಂ ಪೇಳುವೆ  ಆ ಮಯಬ್ರಹ್ಮನೊಡನೆ
ಹರಿಹರರುಗಳೆಲ್ಲಾ  ಯುದ್ಧವ ಮಾಡಿ ಅವರು
ಮೂರ್ಛೆಯಿಂದಲಿ  ಮಲಗಿದ್ದರು ಕೇಳು ॥

ದೇವೇಂದ್ರ: ಅನುಜನಾದ ಸೂರ‌್ಯನೆ ಕೇಳು ತಂದೆಯವರು ನಾನು ಹೋಗುತ್ತಿರುವಾಗ ಆ ಮಯಬ್ರಹ್ಮನೊಡನೆ ಖಾಡಾ ಖಾಡಿ ಯುದ್ಧವನ್ನು ಮಾಡಿ ಹರಿಹರರು ಮೂರ್ಛೆಯಿಂದ ಮಲಗಿದ್ದರು. ಅವರನ್ನು ಕಂಡು ಸಂತೈಸಿ ಅವರು ನಾವು ಜೊತೆಯಲ್ಲಿ ಹೋದೆವು. ಆ ಮಯಬ್ರಹ್ಮನು ನಮ್ಮಗಳನ್ನು ಬಂಗಾರದ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೋದನು. ಆವಾಗ ನಾವು ನಿನ್ನ ಕುಮಾರಿಯಾದ ಸಂಜ್ಞಾದೇವಿಯನ್ನು ನಮ್ಮ ಸೂರ‌್ಯ ನಾರಾಯಣನಿಗೆ ಕೊಡಬೇಕೆಂದು ಕೇಳಿದೆವು. ಅದಕ್ಕೆ ವಪ್ಪಿ ಪುರೋಹಿತರನ್ನು ಕರೆಸಿ ನಾಮ ನಕ್ಷತ್ರವನ್ನು ನೋಡಿಸಿ ಲಗ್ನಪತ್ರಿಕೆಯನ್ನು ಕೊಟ್ಟಿರುವನೈ ಅನುಜಾ.