ಸೂರ್ಯದೇವ: ಅಗ್ರಜಾ, ಮಾವಯ್ಯನವರು ಲಗ್ನಕ್ಕೆ ಬೇಕಾದ ವಸ್ತುಗಳನ್ನು ಏನೇನು ತರಬೇಕೆಂದು ಹೇಳಿರುವರು.

ದೇವೇಂದ್ರ: ಅನುಜಾ ಲಗ್ನಕ್ಕೆ ಬೇಕಾದ ವಸ್ತ್ರಾಭರಣಗಳು ಮಾಂಗಲ್ಯ ವಡವೆಗಳು ರಂಭೆ ಮೇನಕೆ ಕಾಮಧೇನು ಕಲ್ಪವೃಕ್ಷ ಗಂಧ ಕಸ್ತೂರಿ ಮೊದಲಾದ ಸಾಮಾನುಗಳನ್ನು ತರಬೇಕೆಂದು ಹೇಳಿರುವರು.

ಸೂರ್ಯದೇವ: ಅಗ್ರಜಾ ನಿಮ್ಮ ಇಷ್ಟದಂತೆ ಆಗಲಿ.

ದೇವೇಂದ್ರ: ಸೇವಕಾ ಪುರೋಹಿತರನ್ನು ಬರಮಾಡು.

ಪುರೋಹಿತ: ನಾರಾಯಣ ನಾರಾಯಣ.

ದೇವೇಂದ್ರ: ಪುರೋಹಿತರಿಗೆ ನಮಸ್ಕರಿಸುವೆನು.

ಪುರೋಹಿತರು: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ದೇವೇಂದ್ರ ಭೂಪಾಲ.

ಪುರೋಹಿತ: ಅಯ್ಯ, ದೇವೇಂದ್ರ ಭೂಪಾಲ ನಮ್ಮನ್ನು ಇಷ್ಟು ಜಾಗ್ರತೆಯಿಂದ ಬರಮಾಡಿಕೊಂಡ ಕಾರಣವೇನು.

ದೇವೇಂದ್ರ: ನಾಳೆಯ ದಿವಸ ನನ್ನ ಅನುಜನಾದ ಸೂರ‌್ಯನಿಗೆ ಲಗ್ನವಿರುವುದು. ನೀವು ಜಾಗ್ರತೆಯಾಗಿ ಹೊರಡುವಂಥವರಾಗಿರಿ.

ಪುರೋಹಿತ: ದೇವೇಂದ್ರ ಭೂಪಾಲ ನಿನ್ನ ಇಷ್ಟದಂತೆ ಆಗಲಿ.

ಸೂರ್ಯದೇವ: ತಂದೆಯವರೆ ಲಗ್ನ ಕಾರ್ಯಗಳಲ್ಲಿ ಯಾವ ತೊಂದರೆಗಳು ಬಂದಾಗ್ಯೂ ನೀವು ಮನ್ನಿಸಬೇಕೆಂದು ಬೇಡುತ್ತೇನೈ ತಂದೆಯವರೆ.

ಕಶ್ಯಪ: ಕಂದ ನಿನ್ನ ಇಷ್ಟದಂತೆ ಆಗಲಿ.

ದೇವೇಂದ್ರ: ಸೇವಕಾ ಜಾಗ್ರತೆಯಾಗಿ ನಮ್ಮ ಸೇನಾ ಸಮೂಹವನ್ನು ಸಿದ್ಧಪಡಿಸಿಕೊಂಡು ಆ ಪೆಂದೋಟಪುರಕ್ಕೆ ರಥವನ್ನು ಹೊಡೆಯುವನಾಗು.

ಚಾರಕ: ದೇವೇಂದ್ರ ಭೂಪಾಲ ನಿಮ್ಮ ಇಷ್ಟದಂತೆ ಹೊಡೆಯುತ್ತೇನೆ.

ಭಾಮಿನಿ

ಇತ್ತಲಾ  ಕಶ್ಯಪ  ಮುನಿಗಳು
ಸಖ ಬಂಧುಗಳನ್ನು  ಹರಿಹರರು  ಸಹಿತ
ಸಂಭ್ರಮದಿಂದ  ಬರುವುದು ಕಂಡು
ಮಯಬ್ರಹ್ಮನ ಕುಮಾರಿಯಾದ
ಸಂಜ್ಞಾದೇವಿಯು  ತನ್ನ ತಾಯಿಯಾದ
ಶಾಂತಾದೇವಿಯೊಡನೆ  ಸಂಭ್ರಮದಿ  ಹೇಳುತಿರಲಾಗಾ ॥

ಸಂಜ್ಞಾದೇವಿ: ತಾಯೆ ನಮಸ್ಕರಿಸುವೆನು.

ಶಾಂತಾದೇವಿ: ನಿನಗೆ ಮಂಗಳವಾಗಲಿ ಮೇಲಕ್ಕೇಳಮ್ಮಾ ಮಗಳೆ.

ಪದ

ಮಾತೆಯೆ  ಏನಿದು  ಆಶ್ಚರ‌್ಯವು  ನೋಡು ಗಗನ
ಮಾರ್ಗದಿ ನೋಡು  ಬರುವ  ಸಂಭ್ರಮವಾ ॥

ಸಂಜ್ಞಾದೇವಿ: ಅಮ್ಮಾ ಜನನಿ ಗಗನ ಮಾರ್ಗದಲ್ಲಿ ಬರುವ ಆಶ್ಚರ‌್ಯವನ್ನು ನೋಡು ಪರಿಪರಿಯ ಗಾನಗಳು ವಾದ್ಯಗಳು ನಡೆಯಲು ಕಾರಣವೇನಮ್ಮಾ ತಾಯೆ.

ಪದ

ಕಾಮಧೇನು  ಕಲ್ಪ  ವೃಕ್ಷ  ವಜ್ರಾಯುಧವು
ಕಮಲ ಬಾಂಧವರಂತೆ  ಹೊಳೆಯುತ್ತಲಿಹರು ॥

ಶಾಂತಾದೇವಿ: ಅಮ್ಮಾ ಜನನಿ ಅಲ್ಲಿ ನೋಡು ಕಾಮಧೇನು ಕಲ್ಪವೃಕ್ಷ ದೇವತಾ ಸ್ತ್ರೀಯರು ಬರುತ್ತಾ ಇರುವರು. ಇದೂ ಅಲ್ಲದೆ ಕಮಲಬಾಂಧವರಂತೆ ಹೊಳೆಯುತ್ತಿರುವರು ಯಾರಾಗಿರಬಹುದಮ್ಮಾ ಜನನಿ.

ಪದ

ಕಮಲ  ಬಾಂಧವರಂತೆ  ಸುರರನ್ನು  ವಡಗೂಡಿ
ಬರುವ  ಆತನ  ನೋಡು  ಪ್ರೇಮದ ಅಳಿಯಾ ॥

ಶಾಂತಾದೇವಿ: ಅಮ್ಮಾ ಮಗಳೆ, ನಿಮ್ಮ ತಂದೆಯವರು ಕಮಲ ಬಾಂಧವರಿಗೆ ನಿನ್ನನ್ನು ಕೊಟ್ಟು ಲಗ್ನ ಮಾಡುವೆನೆಂದು ಮಾತು ಕೊಟ್ಟಿರುವರು. ಅವರೇ ಅಲ್ಲವೇನಮ್ಮಾ ನಮ್ಮ ಅಳಿಯಂದಿರು.

ಪದ
ಮಾತೆ ಲಾಲಿಸಿ  ಕೇಳು  ಕಮಲಬಾಂಧವನನ್ನು  ಲಗ್ನವಾಗುವುದಿಲ್ಲಾ
ಕೇಳಮ್ಮ ತಾಯೆ  ಪ್ರೇಮದ ಅಳಿಯಗೆ  ಮನೆಯಿಲ್ಲ  ಮಠವಿಲ್ಲಾ
ಪರಿವಾರ ಮೊದಲಿಲ್ಲಾ  ಬೇಡಮ್ಮ ತಾಯೆ ॥

ಸಂಜ್ಞಾದೇವಿ: ಅಮ್ಮಾ ಜನನಿ ನಾನು ಆತನನ್ನು ಖಂಡಿತವಾಗಿ ಲಗ್ನವಾಗುವುದಿಲ್ಲಾ ಹಿಂದಕ್ಕೆ ಕಳಿಸಬೇಕಮ್ಮಾ ತಾಯೆ.

ಪದ
ತಾಯಿ  ವಾಕ್ಯವ  ನೀನು  ಮೀರಿನಡೆದರೆ  ಕಂದ
ಧರಣಿಯೊಳ್  ಜನರೆಲ್ಲಾ  ನಗುವರು  ಕೇಳು ॥

ಶಾಂತಾದೇವಿ: ಅಮ್ಮಾ ಮಗಳೆ, ತಂದೆ ತಾಯಿಗಳ ಮಾತನ್ನು ಮೀರಿ ನಡೆಯುತ್ತಾಳೆಂದು ಈ ಲೋಕದ ಜನರು ನಗುವುದಿಲ್ಲವೇನಮ್ಮಾ ಮಗಳೆ ಎಷ್ಟು ಕಾಲವಿದ್ದರು ಮರಣ ತಪ್ಪುವುದಿಲ್ಲಾ ಲಗ್ನವಾಗುವುದಿಲ್ಲಾ ಕೇಳಮ್ಮಾ ತಾಯೆ.

ಸಂಜ್ಞಾದೇವಿ: ಅಮ್ಮಾ ಜನನಿ ಎಷ್ಟು ಕಾಲ ಬಾಳಿದರು ಮರಣವು ತಪ್ಪುವುದಿಲ್ಲಾ. ಬಾಳಬೇಕಾದರೆ ಸುಖವಾಗಿ ಬಾಳಬೇಕಮ್ಮಾ ತಾಯೆ.

ಪದ

ತಂದೆಯ  ವಾಕ್ಯವ  ಮೀರಿ ನಡೆವರೆ  ಮಗಳೆ
ಅಪವಾದ  ಬರುವುದು  ಕೇಳಮ್ಮಾ ಮಗಳೆ ॥

ಶಾಂತಾದೇವಿ: ಅಮ್ಮಾ ಮಗಳೆ, ನಿಮ್ಮ ತಂದೆಯವರಾದ ಮಯಬ್ರಹ್ಮದೇವರು ಬಹಳ ಪರಾಕ್ರಮ ಶಾಲಿಗಳು ಎಂದು ಹೊಗಳಿಸಿಕೊಳ್ಳುವರು. ಅವರ ಮಾತನ್ನು ಮೀರಿ ನಡೆದರೆ ಈ ಲೋಕದ ಜನರು ನಗುವುದಿಲ್ಲವೇನಮ್ಮಾ ಮಗಳೆ.

ಪದ
ಮಾತೃ  ವಾಕ್ಯವ ನಾನು  ಮೀರಿ ನಡೆಯುವಳೆಂದು
ಅಪವಾದ  ಬರಲಮ್ಮಾ  ಲಗ್ನವು ಬೇಡಾ॥

ಸಂಜ್ಞಾದೇವಿ: ಅಮ್ಮಾ ಜನನಿ ತಂದೆಯವರಿಗೂ ಸಹಾ ಮೀರಿ ನಡೆಯುತ್ತಾಳೆಂದು ಕೋಪಬಂದರು ಬರಲಿ. ಖಂಡಿತವಾಗಿ ನಾನು ಲಗ್ನವಾಗುವುದಿಲ್ಲ ಜನನಿ.

ಶಾಂತಾದೇವಿ: ಅಮ್ಮಾ ಮಗಳೆ, ಈ ವಿಚಾರವನ್ನು ನಿಮ್ಮ ತಂದೆಯವರೊಡನೆ ತಿಳಿಸುತ್ತೇನಮ್ಮಾ ಮಗಳೆ.

ಶಾಂತಾದೇವಿ: ಪ್ರಾಣಕಾಂತ ನಮಸ್ಕರಿಸುವೆನು.

ಮಯಬ್ರಹ್ಮ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ಕಾಂತೆ ಮತಿಗುಣವಂತೆ.

ಪದ

ಕಾಂತ ಲಾಲಿಸಿ ಕೇಳಿ  ಪೇಳುವೆ
ನಾನೀಗ ನಿಮ್ಮಯ  ಮಗಳು  ಭಾನುದೇವನಾ
ಲಗ್ನವಾಗುವುದಿಲ್ಲಾ ಎಂದು ನನಗೆ
ಪೇಳುವಳು  ರಮಣರೆ ಪೇಳುವಳೀಗಾ ॥

ಶಾಂತಾದೇವಿ: ಪ್ರಾಣಕಾಂತರೆ ನಿಮ್ಮ ಮಗಳಾದ ಸಂಜ್ಞಾದೇವಿಯು ಭಾನುದೇವನನ್ನು ಲಗ್ನವಾಗುವುದಿಲ್ಲವೆಂದು ಹಟ ಹಿಡಿದಿರುತ್ತಾಳೆ. ನೀವಾದರು ಮಗಳಿಗೆ ಬುದ್ಧಿ ಹೇಳಬಾರದೆ ಕಾಂತ ಮತಿಗುಣವಂತ.

ಮಯಬ್ರಹ್ಮ: ಹೇ ರಮಣಿ ಹಾಗಾದರೆ ನಾನು ಮಗಳಿಗೆ ಬುದ್ಧಿಯನ್ನು ಹೇಳುತ್ತೇನೆ ನೀನು ಅರಮನೆಗೆ ತೆರಳುವಂಥವಳಾಗೆ ಕಾಂತೆ ಮತಿಗುಣವಂತೆ.

ಸಂಜ್ಞಾದೇವಿ: ತಂದೆಯವರ ಪಾದಕ್ಕೆ ನಮಸ್ಕರಿಸುವೆನು.

ಮಯಬ್ರಹ್ಮ: ನಿನಗೆ ಮಂಗಳವಾಗಲಿ ಮೇಲಕ್ಕೇಳಮ್ಮಾ ಮಗಳೆ. ಅಮ್ಮಾ ಮಗಳೆ ನಿನ್ನನ್ನು ಭಾನುದೇವನಿಗೆ ಕೊಟ್ಟು ವಿವಾಹ ಮಾಡುತ್ತೇನೆಂದು ವಾಗ್ದಾನ ಕೊಟ್ಟಿರುವೆನು. ಲಗ್ನಕ್ಕೆ ಬೇಕಾದ ವಡವೆ ವಸ್ತ್ರಾಭರಣಗಳನ್ನು ಸಹ ತರಬೇಕೆಂದು ಹೇಳಿರುವೆನಮ್ಮಾ ಮಗಳೆ.

ಪದ
ವಡವೆ  ವಸ್ತುಗಳಿಂದ  ಏನು ಕಾರಣ  ನಮಗೆ
ಪತಿಯೊಳು  ಹಿತವಿಲ್ಲ  ಲಗ್ನವು ಬೇಡ ॥

ಸಂಜ್ಞಾದೇವಿ: ತಂದೆಯವರೆ ವಡವೆ ವಸ್ತ್ರಾಭರಣಗಳಿಂದ ಏನು ಪ್ರಯೋಜನ. ನಿಮ್ಮ ಪ್ರೇಮದ ಅಳಿಯನಿಗೆ ಮನೆ ಇಲ್ಲ ಮಠವಿಲ್ಲಾ ಇಂಥಾ ಅಳಿಯನನ್ನು ನೋಡಿ ಸಕಲರು ನಗುವುದಿಲ್ಲವೈ ತಂದೆಯವರೆ.

ಮಯಬ್ರಹ್ಮ: ಅಮ್ಮಾ ಮಗಳೆ ನಾನು ನಿನ್ನನ್ನು ಕೊಡುತ್ತೇನೆಂದು ಮಾತು ಕೊಟ್ಟಿರುವೆನು. ನೀನು ಈ ರೀತಿಯಾಗಿ ಹೇಳುವುದು ಸರಿಯಲ್ಲಮ್ಮಾ ಮಗಳೆ.

ಪದ

ನಿಮಿಷ  ಮಾತ್ರದಿ ಆತ ಗೃಹದೊಳಗಿರಲಿನ್ನು
ಅಧಿಕಾರವಿಲ್ಲ  ಕೇಳೈ  ಜನಕಾ ॥

ಸಂಜ್ಞಾದೇವಿ: ತಂದೆಯವರೆ ಭಾನುದೇವರಿಗೆ ದಿನಕ್ಕೆ ಒಂದು ಮುಹೂರ್ತ ಸಮಯವಲ್ಲದೆ ಜಾಸ್ತಿ ಇರಲು ಅವಕಾಶವಿಲ್ಲಾ  ನಾನು ಖಂಡಿತವಾಗಿ ಅತನನ್ನು ಲಗ್ನವಾಗುವುದಿಲ್ಲವೈ ತಂದೆಯವರೆ.

ಮಯಬ್ರಹ್ಮ: ಭಾನು ನಂದನನಿಗೆ ಓರ್ವಳ ಬಿಡದಂತೆ ಹೇಳುವೆನಮ್ಮ ಮಗಳೆ ವಚನವ ಮೀರಬೇಡ ಕಂದಾ.

ಪದ
ಅವರ ಜ್ವಾಲೆಯ ನಾನು  ತಡೆಯಲಾರೆನು ಜನಕಾ
ಗರುಡ ಗಾಂಧರ‌್ವರೋಳ್  ಯಾರು ಇಲ್ಲವೆ  ತಂದೆ

ಸಂಜ್ಞಾದೇವಿ: ತಂದೆಯವರೆ ಭಾನುದೇವರ ಜ್ವಾಲೆಯನ್ನು ನಾನು ಖಂಡಿತವಾಗಿ ತಡೆಯಲಾರೆನು. ನಾನು ಅವರ ಮಾತಿನಂತೆ ನಡೆಯದೆ ಹೋದರೆ ನನ್ನನ್ನು ಸುಟ್ಟು ಬಿಡುವರು. ನಾನು ಏನು ಮಾಡಲೈ ತಂದೆಯವರೆ.

ಮಯಬ್ರಹ್ಮ: ಅಮ್ಮಾ ಮಗಳೆ ನೀನು ಸಂತೋಷವಾದರೆ ನಿನ್ನ ಪತಿಯ ಜೊತೆಯಲ್ಲಿರು ಇಲ್ಲವಾದರೆ ನನ್ನ ಅರಮನೆಯಲ್ಲಿರು. ನನ್ನ ಮಾತನ್ನು ನಡೆಸಬೇಕಮ್ಮಾ ಮಗಳೆ.

ಪದ
ನಿಮ್ಮ  ವಾಕ್ಯವ  ನಾನು  ನಡೆಸುವೆನು  ಜನಕಾ
ಮಾನಾಭಿಮಾನವು  ನಿಮ್ಮದೆ  ತಂದೆ ॥

ಸಂಜ್ಞಾದೇವಿ: ತಂದೆಯವರೆ ನಿಮ್ಮ ಅಪ್ಪಣೆಯಂತೆ ನಡೆಯುತ್ತೇನೆ ಮುಂದೆ ಯಾವ ತೊಂದರೆ ಬಂದರು ನೀವೇ ಅನುಭವಿಸಬೇಕಲ್ಲದೆ ಮತ್ತೆ ಬೇರೆ ಇಲ್ಲ ತಂದೆಯವರೆ ನಿಮ್ಮ ಇಷ್ಟದಂತೆ ಆಗಲಿ.

ಮಯಬ್ರಹ್ಮ: ಅಮ್ಮಾ ಮಗಳೆ ಅರಮನೆಗೆ ತೆರಳುವಂಥವಳಾಗು.

ಸಂಜ್ಞಾದೇವಿ: ತಂದೆಯವರೆ ನಿಮ್ಮ ಇಷ್ಟದಂತೆ ಆಗಲಿ.

ಮಯಬ್ರಹ್ಮ: ಹೇ ರಮಣಿ ಸಕಲ ಬಂಧುಗಳು ಬರುವರು. ಲಗ್ನದ ಸಾಮಗ್ರಿಗಳನ್ನು ಸಿದ್ಧಪಡಿಸು ವಂಥವಳಾಗು.

ಶಾಂತಾದೇವಿ: ಪ್ರಾಣಕಾಂತರೆ ಸಕಲ ಸಾಮಗ್ರಿಗಳೆಲ್ಲ ಸಿದ್ಧವಾಗಿರುವುವು.

ಮಯಬ್ರಹ್ಮ: ಅಯ್ಯ ಮಂತ್ರಿ ಪಟ್ಟಣವನ್ನು ಶ್ರುಂಗಾರಮಾಡಿಸಿ ಕೇರಿ ಕೇರಿಗಳಲ್ಲಿ ರಂಗೋಲೆಯನ್ನು ಬಿಡಿಸಿ ಚಪ್ಪರಕ್ಕೆ ಮುತ್ತಿನ ತೋರಣಗಳನ್ನು ಕಟ್ಟಿಸುವನಾಗು.

ಮಂತ್ರಿ: ರಾಜೇಂದ್ರ ನಿಮ್ಮ ಅಪ್ಪಣೆಯಂತೆ ಸಿದ್ಧಪಡಿಸುತ್ತೇನೆ. ಸೇವಕಾ  ಪುರೋಹಿತರನ್ನು ಬರಮಾಡು.

ಪುರೋಹಿತ: ರಾಜರ ಮನೆಯೊಳು ಭೋಜನವೆಂದರೆ ಯೋಜನವಾದರು ಹೋಗುವೆವು ಹಪ್ಪಳ ಸಂಡಿಗೆ ವುಪ್ಪಿನಕಾಯ್ಗಳ ಎಪ್ಪತ್ತಾರು ತಿನ್ನುವೆವು ಲಾಡುಗಳಾ ಪೇಣಿಗಳಾ ಎಪ್ಪತ್ತಾದರು ತಿನ್ನುವೆವು ನಾರಾಯಣಾ.

ಮಯಬ್ರಹ್ಮ: ಪುರೋಹಿತರಿಗೆ ನಮಸ್ಕರಿಸುವೆನು.

ಪುರೋಹಿತ: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಮಯಬ್ರಹ್ಮದೇವ.

ಮಯಬ್ರಹ್ಮ: ಸ್ವಾಮಿ ಪುರೋಹಿತರೆ ಈ ದಿವಸ ಲಗ್ನಕಾರ್ಯವನ್ನು ಸಾಂಗವಾಗಿ ನಡೆಸುವಂಥವರಾಗಿರಿ.

ಪುರೋಹಿತ: ಮಯಬ್ರಹ್ಮ ದೇವ ಸಕಲ ಸಾಮಾನುಗಳು ಸಿದ್ಧವಾಗಿರುವುವೋ.

ಮಯಬ್ರಹ್ಮ: ಅಯ್ಯ ಮಂತ್ರಿ ಪುರೋಹಿತರಿಗೆ ಸಕಲ ಸಾಮಾನುಗಳನ್ನು ಸಿದ್ಧಪಡಿಸುವಂಥವನಾಗು.

ಮಂತ್ರಿ: ರಾಜೇಂದ್ರ ಸಕಲ ಸಾಮಾನುಗಳು ಸಿದ್ಧವಾಗಿರುವುವು.

ಭಾಮಿನಿ

ಇತ್ತಲಾ  ಕಶ್ಯಪರುಷಿಗಳು  ಹರಿಹರರು  ಸಕಲಬಂಧುಗಳು
ಕಮಲ ಬಾಂಧವನು ಸಹಿತ  ಸಕಲ ಸಂಭ್ರಮದಿಂದ  ಮಯಬ್ರಹ್ಮನ
ಪಟ್ಟಣದ ದ್ವಾರಬಾಗಿಲೊಳ್ ಬಂದು  ಇರುತಿರಲಾಗಲಾಕ್ಷಣಾ ॥

ಕಶ್ಯಪರುಷಿ: ಸೇವಕಾ ಮಯಬ್ರಹ್ಮನಲ್ಲಿಗೆ ಹೋಗಿ ಸಕಲಬಂಧುಗಳು ಬಂದು ದ್ವಾರಬಾಗಿಲಲ್ಲಿ ನಿಂತಿರುವರೆಂದು ತಿಳಿಸು.

ಚಾರಕ: ಮಯಬ್ರಹ್ಮ ದೇವರಿಗೆ ಜಯವಾಗಲಿ.

ಮಯಬ್ರಹ್ಮ: ಚಾರನೇ ವರ್ತಮಾನವೇನು.

ಚಾರಕ: ಅಪ್ಪೊಂದೆ ನೆಂಟ್ರೆಲ್ಲಾ ಬಂದು ದ್ವಾರಬಾಗಿಲಲ್ಲಿ ನಿಂತಿದ್ದಾರೆ ಕಣಪ್ಪೊ.

ಮಯಬ್ರಹ್ಮ: ಸೇವಕಾ ಬಹಳ ಸಂತೋಷ. ಅಯ್ಯ ಮಂತ್ರಿ ಬಂಗಾರದ ಪಲ್ಲಕ್ಕಿಯನ್ನು ತೆಗೆದುಕೊಂಡು ಪುರದ ಜನರನ್ನು ಮತ್ತು ಸಕಲ ಬಿರುದಾವಳಿಗಳನ್ನು ತೆಗೆದುಕೊಂಡು ಹೋಗಿ ನಮ್ಮ ಬಂಧುಗಳನ್ನು ಕರೆದುಕೊಂಡು ಬರುವಂಥವನಾಗು.

ಮಂತ್ರಿ: ರಾಜೇಂದ್ರ ನಿಮ್ಮ ಅಪ್ಪಣೆಯಂತೆ ಈಗಲೇ ಹೋಗಿ ಕರೆದುಕೊಂಡು ಬರುತ್ತೇನೆ.

ಮಂತ್ರಿ: ಸೇವಕಾ ಸಕಲ ಬಿರುದಾವಳಿಗಳನ್ನು ವಾದ್ಯಗಳನ್ನು ಸಿದ್ಧಪಡಿಸಿಕೊಂಡು ಜಾಗ್ರತೆಯಾಗಿ ಹೊರಡುವಂಥವನಾಗು.

ಚಾರಕ: ನಿಮ್ಮ ಇಷ್ಟದಂತೆ ಹೊರಡುತ್ತೇನೆ.

ಮಂತ್ರಿ: ಸಕಲ ಬಾಂಧವರೆ ನಮಸ್ಕರಿಸುವೆನು.

ಕಶ್ಯಪರುಷಿಹರಿಹರರು: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಮಂತ್ರೀಶಾ.

ಮಂತ್ರಿ: ಸಕಲ ಬಾಂಧವರೆ ನಾನು ತಂದಿರುವ ಬಂಗಾರದ ಪಲ್ಲಕ್ಕಿಯಲ್ಲಿ ಕುಳಿತು ಕೊಳ್ಳುವಂಥವರಾಗಿರಿ.

ಕಶ್ಯಪರುಹರಿಹರರು: ಅಯ್ಯ ಮಂತ್ರಿ ನಿನ್ನ ಇಷ್ಟದಂತೆ ಆಗಲಿ.

ಮಯಬ್ರಹ್ಮ: ಸಕಲಬಾಂಧವರೆ ನಮಸ್ಕರಿಸುವೆನು.

ಕಶ್ಯಪರುಹರಿಹರರು: ನಿನಗೆ ಮಂಗಳವಾಗಲಿ ಮೇಲಕ್ಕೇಳೈಯ್ಯ ಮಯಬ್ರಹ್ಮದೇವಾ.

ಮಯಬ್ರಹ್ಮ: ಸಕಲ ಬಾಂಧವರೆ ಮುಂದಿನ ಕಾರ್ಯವನ್ನು ನಡೆಸುವಂಥವರಾಗಿರಿ.

ಕಶ್ಯಪರುಹರಿಹರರು: ಅಯ್ಯ ಮಯಬ್ರಹ್ಮದೇವಾ ನಿನ್ನ ಇಷ್ಟದಂತೆ ಆಗಲಿ.

ಶಾಂತಾದೇವಿ: ಅಮ್ಮಾ ಸಖೀಮಣಿಯೆ ನನ್ನ ಮಗಳಾದ ಸಂಜ್ಞಾದೇವಿಗೆ ವಡವೆ ವಸ್ತ್ರಾಭರಣಗಳನ್ನು ಧರಿಸುವಂಥವಳಾಗು.

ಸಖಿ: ಅಮ್ಮಾ ದೊರೆಸಾನಿ ನಿಮ್ಮ ಇಷ್ಟದಂತೆ ವಡವೆ ವಸ್ತ್ರಾಭರಣಗಳನ್ನು ಧರಿಸುತ್ತೇನೆ.

ಮಯಬ್ರಹ್ಮ: ಪುರೋಹಿತರೆ ಮುಂದಿನ ಕಾರ್ಯವನ್ನು ನಡೆಸುವಂಥವರಾಗಿರಿ.

ಪುರೋಹಿತರು
ವರನು  ಹೀಗೆ ಬರಬೇಕು
ವಧುವು  ಹೀಗೆ ಬರಬೇಕು ॥

ಮಂತ್ರ

ಶುಭಲಗ್ನ ಸಾವಧಾನ
ಶುಭಮೂರ್ತೆ  ಸಾವಧಾನ
ಧನಂ  ಧಾನ್ಯಂ  ಬಹುಪುತ್ರ ಲಾಭಂ
ಶತಸಂವತ್ಸರಂ  ದಂಪತಿ
ದೀರ್ಘಮಾಯುಃ ॥

ಪುರೋಹಿತರು: ಸೂರ‌್ಯ ದೇವಾ ಮಾಂಗಲ್ಯ ಧಾರಣೆ ಮಾಡು.

ಸೂರ್ಯದೇವ: ಪುರೋಹಿತರೆ ಈಗಲೇ ಧರಿಸುತ್ತೇನೆ.

ಮಯಬ್ರಹ್ಮ್ಮ: ಅಮ್ಮ ಮಗಳೆ ಸಕಲ ಬಾಂಧವರು ಬಂದಿರುವರು. ನಿನ್ನ ರಮಣನಿಗೆ ಹೂ ಮಾಲೆಯನ್ನು ಧರಿಸುವಂಥವಳಾಗು.

ಸಂಜ್ಞಾದೇವಿ: ತಂದೆಯವರೆ ನಿಮ್ಮ ಇಷ್ಟದಂತೆ ಧರಿಸುತ್ತೇನೆ.

ಪದ

ಸುಂದರಾಂಗನ  ಪ್ರೇಮಭಾವದೊಳ್
ಇಂದು ಮುದದಿಂ  ಒಲಿಸುವೆ  ಕಂತು ಕೊರಳಿಗೆ
ಕಂತು ಪುರುಷಗೆ  ಚಂದ್ರಹಾರವ ಹಾಕುವೆ ॥

ಸೂರ್ಯದೇವ: ಹೇ ರಮಣಿ ನಾನು ನಿನ್ನನ್ನು ವರಿಸಿ ನಿನ್ನ ಕೊರಳಿಗೆ ಹಾರವನ್ನು ಹಾಕಿರುತ್ತೇನೆ. ಬಾ ನಾವೀರ‌್ವರು ಸಂತೋಷದಿಂದ ಕುಳಿತುಕೊಳ್ಳೋಣ.

ಸಂಜ್ಞಾದೇವಿ: ಪ್ರಾಣಕಾಂತರೆ ನಿಮ್ಮ ಇಷ್ಟದಂತೆ ಆಗಲಿ.

ಸೋಬಾನ ಪದ:
ಕಲ್ಯಾಣವೆಂಬುದ  ಇನ್ಯಾರು  ಬಲ್ಲರು
ಭೂಮಿಗೆ ಹಿರಿಯ ಬಸವಯ್ಯ  ಸೋಬಾನವೆ  ಸೋಬಾನ ವೆನ್ನಿರೆ
ಸೋಬಾನ ವೆನ್ನಿರೆ  ಸೋಬಾನ ವೆನ್ನಿ  ಶುಭವೆನ್ನಿ  ಸೋಬಾನವೆ
ಚಿನ್ನದ ಚಪ್ಪರಕೆ  ರನ್ನದ ಮಣಿಕಟ್ಟು
ಸೂರ‌್ಯದೇವನನ್ನು  ಕರೆತನ್ನಿ ॥ಸೋಬಾನವೆನ್ನಿರೆ ॥೩ ॥
ಚಿನ್ನದಗಿಂಡಿಯಲ್ಲಿ  ರನ್ನದೊಂಬಾಳೆಯಿಟ್ಟ
ಸಂಜ್ಞಾದೇವಿಯನ್ನೆ  ಕರೆತನ್ನಿ  ಸೋಬಾನ ॥೪ ॥
ಮುತ್ತೈದೆರೆಲ್ಲರೂ  ಮುತ್ತಿನಾರುತಿ ಮಾಡಿ
ಕನ್ನೆ ಗೌರಮ್ಮನನ್ನೆ  ಕರೆತನ್ನಿ  ಸೋಬಾನ ॥೫ ॥
ಅಟ್ಟಹಾಸದಿ  ನೀವು  ಅಟ್ಟಿ ಹಸೆಗೆ ಬೇಗಾ
ಪನ್ನಗ  ಧರ  ಶಿವನ  ಕರೆತನ್ನಿ  ಸೋಬಾನ ವೆನ್ನಿರೆ॥

ಹಸೆಗೆ ಕರೆಯುವ ಪದ

ಬಾರೆ  ಹಸೆಗೆ  ಭಾಮಿನಿ  ದುರಿತಾಮಣಿ  ವನಜಲೋಚನೇ  ಮಾನಿನಿ ॥೧ ॥
ಬಗೆಬಗೆ  ಯಿಂದಲಿ  ಭಜಿಸುವೆ ನಿನ್ನನು  ನಗಧರನ  ಅರಸಿಯೆ
ವನಿತಾಮಣಿ  ವನಜಲೋಚನೆ  ಮಾನಿನಿ  ಬಾರೆ ॥೨ ॥
ಮಲ್ಲಿಗೆ ಲತೆಗಳು  ತಲ್ಲಣಿಸುತ್ತಿರೆ  ಕುಲ್ಲ ಲೋಚನೆ  ಬಾರೆ ನೀ
ವನಿತಾಮಣಿ  ವನಜಲೋಚನೆ  ಮಾನಿನಿ  ಬಾರೆ
ಹಸೆಗೆ  ಭಾಮಿನಿ  ವನಿತಾಮಣಿ  ವನಜಲೋಚನೆ  ಮಾನಿನಿ ॥

ಮಂಗಳ

ಮಂಗಳವಾಗಿಹುದೆ  ಜಯ ಜಯ  ಮಂಗಳವಾಗಿಹುದೆ ॥೧ ॥
ಕಂಗಳ ಕೊನೆಯೊಳು  ಥಳ ಥಳ  ಹೊಳೆಯುವ
ತಿಂಗಳ ಬೆಳಕಿನ  ತಿಳಿರಸ  ವುಕ್ಕುತ  ಮಂಗಳವಾಗಿಹುದೆ  ಜಯ ॥
ಆರು ಚಕ್ರವ  ಮೀರಿ  ಸೂಕ್ಷ್ಮ  ದ್ವಾರದೊಳಗೆ ಸೇರಿ
ಸಸರದೊಳು  ಪದ್ಮ  ಸಿಂಹಾಸನ  ಭೂರಿ ಬ್ರಹ್ಮಾನಂದ
ಪದವಿಯ ಸೇರಲು ॥ಮಂಗಳವಾಗೀದೆ  ಜಯ ಜಯಾ ॥೩ ॥
ವಿರತಿ ಎಂಬುವ ಭಕ್ತಿ  ಭಕ್ತಿಗೆ  ಎರಕವಾಗಿದೆ  ಕೈಲಿ
ಯರಡು ವಂದಾಗಿಹ  ಇರುಳೆಂಬ  ಜೊರೆಯ ವುಂಯಲು
ತಾಮಸ  ಕತ್ತಲೆ  ಕಳೆಯೊಳು  ಮಂಗಳವಾಗೀದೆ
ಜಯ  ಜಯಾ  ಮಂಗಳವಾಗೀದೆ ಶಿವಶಿವ  ಮಂಗಳವಾಗಿದೆ
ಜಯಾ  ಜಯ ನಮಃ ಪಾರ್ವತೀಪತೆ  ಹರಹರ  ಮಹಾದೇವಾ ॥

ಮಂಗಳಮಸ್ತು

ಸೂರ್ಯ ವಿವಾಹ ಇಲ್ಲಿಗೆ ಸಂಪೂರ್ಣ

,”s�%E�”>��`�^pan>ಸಂಭ್ರಮದಿಂದ  ಹೇಳಮ್ಮಾ  ತಾಯೆ ॥

 

ಸಖಿ: ಅಮ್ಮಾ ದೊರೆಸಾನಿ, ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಹೇಳುವಂಥವರಾಗಿರಿ.

ಪದ

ಕೇಳಮ್ಮ  ಸಖೀಮಣಿಯೆ  ಹರುಷದಿಂ ಪೇಳುವೆ
ಪ್ರಾಣಕಾಂತರು  ಈಗ  ಸಮರಕ್ಕೆ  ಹೋಗುವರು ॥

ಶಾಂತಾದೇವಿ: ಅಮ್ಮಾ ಸಖೀಮಣಿಯೆ, ಪ್ರಾಣಕಾಂತರು ಶಂಕರನೊಂದಿಗೆ ರಣಾಗ್ರವನ್ನು ಮಾಡುವುದು  ಸರಿಯಲ್ಲಾ. ಅವರನ್ನು ಮಕ್ಕಳೋಪಾದಿಯಲ್ಲಿ ಕಾಣಬೇಕು. ಆದ್ದರಿಂದ ಅವರೊಡನೆ ರಣಾಗ್ರವನ್ನು ಮಾಡುವುದು ಸರಿಯಲ್ಲವೆಂದು ಹೇಳಬೇಕಮ್ಮಾ ಸಖೀಮಣಿಯೆ.

ಪದ

ಅರಸಿ ಕೇಳಮ್ಮಾ  ವಿವರವೇನಿರುವದು  ಅದರ
ಮರ್ಮವು  ನನಗೆ  ತಿಳಿಯದು  ತಾಯೆ ॥

ಸಖಿ: ಅಮ್ಮಾ ದೊರೆಸಾನಿ, ನಿಮ್ಮ ರಮಾರಮಣರು ರಣಾಗ್ರಕ್ಕೆ ಹೋದರೆ ಯಾವ ತೊಂದರೆಯು ಆಗುವುದಿಲ್ಲಾ. ನೀವು ಎಷ್ಟು ಮಾತ್ರಕ್ಕೂ ಚಿಂತಿಸಬೇಡಮ್ಮಾ ದೊರೆಸಾನಿ ದಿವ್ಯ ಸುಜ್ಞಾನಿ.

ಶಾಂತಾದೇವಿ: ಅಮ್ಮಾ ಸಖೀಮಣಿಯೆ ಹೇಳುತ್ತೇನೆ ಕೇಳು.

ಪದ

ರಮಣಾ  ನಲ್ಲಿಗೆ  ನಾನು  ಹೋಗುವೆನಮ್ಮ  ಸಖಿಯೆ
ತೆರಳು  ನೀ ಅರಮನೆಗೆ  ತೆರಳಮ್ಮಾ  ಸಖಿಯೆ ॥

ಶಾಂತಾದೇವಿ: ಅಮ್ಮಾ ಸಖೀಮಣಿಯೆ ನಾನು ಪ್ರಾಣಕಾಂತರಲ್ಲಿಗೆ ಹೋಗುತ್ತೇನೆ. ನೀನು ಅರಮನೆಗೆ ತೆರಳುವಂಥವಳಾಗಮ್ಮಾ ಸಖಿಮಣಿಯೆ.

ಸಖಿ: ಅಮ್ಮಾ ದೊರೆಸಾನಿ ನಿಮ್ಮ ಇಷ್ಟದಂತೆ ಅರಮನೆಗೆ ತೆರಳುತ್ತೇನೆ.

ಭಾಮಿನಿ

ಇತ್ತಲಾ  ಶಾಂತಾದೇವಿಯು  ತನ್ನ
ಸಖಿಯೊಡನೆ  ಸಂಭಾಷಣೆಯ ಮಾಡಿ
ತನ್ನ  ಪತಿಯಾದ  ಮಯಬ್ರಹ್ಮದೇವರಲ್ಲಿಗೆ
ಸಂಭ್ರಮದಿ  ಬರುತಿರಲಾಗಲಾಕ್ಷಣಾ ॥

ಶಾಂತಾದೇವಿ: ಪ್ರಾಣಕಾಂತ ನಮಸ್ಕರಿಸುವೆನು.

ಮಯಬ್ರಹ್ಮ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ಕಾಂತೆ ಮತಿ ಗುಣವಂತೆ. ಹೇ ರಮಣಿ ನೀನು ಅರಮನೆಯಲ್ಲಿ ಸುಖವಾಗಿ ಇರುವುದನ್ನು ಬಿಟ್ಟು ಇಲ್ಲಿಗೆ ಬರಲು ಕಾರಣವೇನು.