೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಅನಂತರ ಸುಭಾಷಚಂದ್ರ ಬೋಸರ “ಅಜಾದ ಹಿಂದ್ ಸೇನೆಗಳ ಘಟನೆಗಳನ್ನು ಬಿಟ್ಟಲ್ಲಿ ಭಾರತ ಸ್ವಾತಂತ್ರ್ಯದ ಹೋರಟದ ಇತಿಹಾಸದಲ್ಲಿ “ಚಿತ್ತಗಾಂಗ್ ಶಸ್ತ್ರಾಗಾರ ಕಾಂಡ” ಅತ್ಯಂತ ಪ್ರಮುಖ ಕ್ರಾಂತಿಕಾರಿ ಅಂದೋಳನ. ಇದರ ಕೇಂದ್ರಶಕ್ತಿ ಸೂರ್ಯಸೇನರು.

ಶಿಕ್ಷಕಕ್ರಾಂತಿಪಥದಲ್ಲಿ!

ಸೂರ್ಯಸೇನರು ಹುಟ್ಟಿದ್ದು ಭಾರತದ ಸ್ವಾತಂತ್ರ್ಯ ಅಂದೋಳನದ ಪರ್ವಕಾಲದಲ್ಲಿ, ಚಿತ್ತಗಾಂಗಿನ ಒಂದು ಸಾಮಾನ್ಯ ಕುಟುಂಬದಲ್ಲಿ. ೧೯೧೮ ರಲ್ಲಿ ಚಿತ್ತಗಾಂಗಿನಲ್ಲೇ ಬಿ.ಎ. ಪದವೀಧರರಾದ ಅವರು ಅವಲಂಬಿಸಿದ ಉದ್ಯೋಗ ಸಾಮಾನ್ಯ ಶಿಕ್ಷಕನದು. ಚಿತ್ತಗಾಂಗ್ ರಾಷ್ಟ್ರೀಯ ಹೈಸ್ಕೂಲಿನಲ್ಲಿ ಇವರು ಶಿಕ್ಷಕರಾಗಿ ಸೇರಿದರು. ಇವರ ಮನಸ್ಸು ಚಿಕ್ಕಂದಿನಿಂದಲೂ ಕ್ರಾಂತಿಕಾರಿಗಳತ್ತಲೇ ಇತ್ತು. ತಾನೂ ಒಬ್ಬ ಕ್ರಾಂತಿಕಾರಿ ಆಗಬೇಕೆನ್ನುವುದು ಸಣ್ಣ ವಯಸ್ಸಿನಿಂದ ಅವರ ಬಯಕೆ. ಕ್ರಾಂತಿಕಾರಿಗಳ ಕತೆ ಎಂದರೆ ಬಾಲಕ ಸೂರ್ಯಸೇನನಿಗೆ ಊಟ ತಿಂಡಿಯೂ ಬೇಕಿರಲಿಲ್ಲ. ಆದರೆ ಈ ಇಚ್ಛೆಗೆ ಸಕ್ರಿಯ ರೂಪ ಕೊಡುವ ಅವಕಾಶ ಸಿಗದೆ ಶಿಕ್ಷಕ ವೃತ್ತಿಗೆ ಸೇರಿದರು.

ಶಿಕ್ಷಕರಾದರೂ ಸೂರ್ಯಸೇನರು ಕ್ರಾಂತಿಯ ಉರಿಯನ್ನು ಹೊತ್ತಿಸುವ ಬಯಕೆಯನ್ನು ಬಿಟ್ಟಿರಲಿಲ್ಲ. ತನ್ನ ವಿದ್ಯಾರ್ಥಿಗಳನ್ನು ತನ್ನ ಕ್ರಾಂತಿಕಾರಿ ಮನೋಭಾವಕ್ಕೆ ತಕ್ಕಂತೆ ರೂಪಿಸುವುದು, ಅವರಲ್ಲಿ ಸಮರ್ಥರು ಎಂದು ತೋರಿದವರ ಜೊತೆಗೆ ನಿಕಟ ಸಂಪರ್ಕ ಬೆಳೆಸಿ ಅವರೊಂದಿಗೆ ಸಮಯ ಬಂದಾಗ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕುವುದು ಅವರ ಯೋಜನೆ ಆಗಿತ್ತು.

ಜಲಿಯನ್ ವಾಲಾ ಬಾಗ್ ಪ್ರೇರಣೆ

ಅವರ ಕ್ರಾಂತಿಕಾರಿ ಮನೋಭಾವದ ಉರಿಗೆ ತೈಲ ಎರೆಯುವನ್ತೆ ಒಂದು ಘಟನೆ ೧೯೧೯ ರಲ್ಲಿ ನಡೆಯಿತು. ಎಪ್ರಿಲ್ ೧೮ರಂದು ಅಮೃತಸರದ ಜಲಿಯನ್ ವಾಲಾಬಾಗ್ ಎನ್ನುವ ಹೆಸರನ ಆಯತಾಕಾರದ ಮೈದಾನದಲ್ಲಿ ಸುಮಾರು ೨೦,೦೦೦ ದೇಶಭಕ್ತರು ಸಭೆ ಸೇರಿದ್ದರು. ಆ ಮೈದಾನದಿಂದ ಹೊರಗೆ ಹೋಗಲು ಇದ್ದ ಕೆಲವೇ ಸಣ್ಣ ಬಾಗಿಲುಗಳಲ್ಲಿ ಶಸ್ತ್ರಸಜ್ಜಿತ ಸೈನಿಕರು ನಿಂತು ಯಾವುದೇ ಮುನ್ಸೂಚನೆ ನೀಡದೆ, ಶಾಂತ ಜನತೆಯ ಮೇಲೆ ಗುಂಡು ಹಾರಿಸಿದರು. ಒಟ್ಟು ೩೭೯ ಮಂದಿ ಸತ್ತು, ೧೧೩೭ ಮಂದಿ ಗಾಯಗೊಂಡರು.

ಸೂರ್ಯಸೇನರಲ್ಲಿ ಈ ಪ್ರಕರಣ ಪ್ರತಿಭಟನೆಯ ಕಿಡಿಯನ್ನು ಹೊತ್ತಿಸಿತು. ಘಟನೆಯ ವಿರುದ್ಧ ಪ್ರತಿಭಟಿಸಲು ಸೇರಿದ ವಿದ್ಯಾರ್ಥಿ ಸಭೆಯಲ್ಲಿ ಮಾತನಾಡಿದ ಕರ್ತವ್ಯ ಮುಗಿಯಿತೇನು?” ನಾವೊಂದು ಪ್ರತಿಭಟನಾ ನಿರ್ಣಯ ಕೈಗೊಂಡಾಕ್ಷಣ ಏನು ಸಾಧಿಸಿದಂತಾಯಿತು? ಈ ಹತ್ಯಾಕಾಂಡದ ಮೂಲಕ ಭಾರತ ಮಾತೆಗಾದ ಅಪಮಾನದ ಸೇಡನ್ನು ತೀರಿಸುವ ಪ್ರತಿಜ್ಞೆಯನ್ನು ವೀರಸಂಕಲ್ಪವನ್ನು ಯಾರು ಮಾಡಬೇಕು ?” ಎಂದು ಪ್ರಶ್ನಿಸಿದರು. ” ಈ ಸೇಡನ್ನು ನಾವು ತೀರಿಸುತ್ತೇವೆ” ಎಂದು ವಿದ್ಯಾರ್ಥಿಗಳಿಂದ ಉತ್ತರ ಬಂತು.

ಯೋಜನೆ

೧೯೨೧ ರಲ್ಲಿ ಮಹಾತ್ಮ ಗಾಂಧೀಜೀ ಕರೆ ನೀಡಿದ ಅಸಹಕಾರ ಅಂದೋಳನ”ದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ದೇಶದಾದ್ಯಂತ ಶಾಲಾ ಕಾಲೇಜುಗಳಿಗೆ ಬಹಿಷ್ಕಾರ ಹಾಕಿದರು. ಚಿತ್ತಗಾಂಗಿನಲ್ಲಿ ಅಂತಹ ಒಂದು ದಳಕ್ಕೆ ಸೂರ್ಯಸೇನ ನಾಯಕರಾದರು. ಆ ಚಳವಳಿಯ ಆಧಾರ ಅಹಿಂಸೆ. ಸೂರ್ಯಸೇನರಿಗಾದರೋ ಅದರಲ್ಲಿವಿಶ್ವಾಸವಿಲ್ಲ. ಆದರೆ ಮೊದಲಿಗೆ ಕೆಲವು ತರುಣರು ತಮ್ಮ ಹಿಡಿತಕ್ಕೆ ಬರಬೇಕೆನ್ನುವುದು ಅವರ ಉದ್ದೇಶವಿತ್ತು. ಈ ದಳದಿಂದ ಕೊನೆಗೆ ಅವರಿಗೆ ಇಬ್ಬರು ಶ್ರೇಷ್ಠ ಕ್ರಾಂತಿಕಾರಿ ತರುಣರು ದೊರೆತರು – ಗಣೇಶ್ ಘೋಷ ಹಾಗೂ ಅನಂತಸಿಂಹ.

ಸೂರ್ಯಸೇನರು ತಮ್ಮೊಡನೆ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ತರುಣರನ್ನು ಗಮನಿಸುತ್ತಿದ್ದರು. ಅವರಲ್ಲಿ ಕ್ರಾಂತಿಯ ಆಹ್ವಾನಕ್ಕೆ “ಓ” ಎನ್ನಬಲ್ಲವರು ಯಾರು ಎಂದು ಸೂರ್ಯಸೇನರು ತಮ್ಮ ಕ್ರಾಂತಿಕಾರಿ ಯೋಜನೆಯನ್ನು ತಮಗೆ ಸಮರ್ಥರೆಂದು ಕಂಡ ತರುಣರ ಮುಂದಿರಿಸಿದರು. “ಗುಪ್ತ ಸಮಿತಿ” ಗಳ ರಚನೆ, ಅವುಗಳ ನಾಯಕತ್ವಕ್ಕೆ ವಿಶ್ವಾಸಿ ಶಿಷ್ಯರ ನೇಮಕ ಆಯಿತು.

 

ಭಾರತಮಾತೆಗಾದ ಅಸಮಾನದ ಸೇಡನ್ನು ತೀರಿಸುವ ವೀರಸಂಕಲ್ಪವನ್ನು ಮಾಡಬೇಕು

ಚಿತ್ತಗಾಂಗ್ ಬೆಟ್ಟ ಹಾಗೂ ಕಾಡುಗಳಿಂದ ಸುತ್ತುವರಿದ ಒಂದು ಪಟ್ಟಣ. ಕ್ರಾಂತಿಕಾರಿಗಳು ಮಾಸ್ಟರ್ ದಾ(ಸೂರ್ಯಸೇನರನ್ನು ವಿದ್ಯಾರ್ಥಿಗಳು, ಇತರರು ಪ್ರೀತಿಯಿಂದ ಹೀಗೆ ಕರೆಯುತ್ತಿದ್ದರು.) ನಾಯಕತ್ವದಲ್ಲಿ ಈ ಗುಡ್ದಗಾಡುಗಳಲ್ಲಿ ತಮ್ಮ ಸಂಘಟನೆ ಬೆಳೆಸುವ ಕುರಿತು ಸಮಾಲೋಚನೆ ನಡೆಸುತ್ತಿದ್ದರು. ಇದೇ ವೇಳೆ ಕಲ್ಕತ್ತದ ಕ್ರಾಂತಿಕಾರಿ ನಾಯಕ ದೇವೇನ್ ಡೇ ನೆರವು ಮತ್ತು ಸಲಹೆ ಸೂರ್ಯಸೇನರಿಗೆ ತಾನಾಗಿ ದೊರಕಿದವು.

ಯೋಜನೆ ಏನೋ ಆಯಿತು. ಆದರೆ ಅದನ್ನು ಕಾರ್ಯಗತಗೊಳಿಸಲು ಹಣ ಎಲ್ಲಿಂದ?

ರೈಲು ದರೋಡೆ

ಚಿತ್ತಂಗಾಗ್ ಬಳಿಯ ನಿರ್ಜನ ಪ್ರದೇಶವೊಂದರಲ್ಲಿ ರೈಲ್ವೆ ಹಳಿಯ ಪಕ್ಕ ನಾಲ್ವರು ತರುಣರು ಕಾದು ಕುಳಿತರು. ಮಾಸಿಕ ವೇತನ ಕೊಂಡೊಯ್ಯುವ ರೈಲುಗಾಡಿ ದೂರದಲ್ಲಿ ಕಂಡೊಡನೆ ಎಲ್ಲರ ಕಣ್ಣು ಚುರುಕಾಯಿತು.ಗಾಡಿ ಹತ್ತಿರ ಬಂದೊಡನೆ ನಾಲ್ವರೂ ಜಿಗಿದು ನಿಂತರು. ದೇವೇನ್ ಡೇ ಹಾಗೂ ಅನಂತಸಿಂಹ ಪಿಸ್ತೂಲು ತೋರಿಸಿ ಗಾಡಿ ನಿಲ್ಲಿಸಿದರು. ರೈಲಿನಲ್ಲಿದ್ದ ಹಣ ಸಹಿತ ಕ್ರಾಂತಿಕಾರಿಗಳು ನಿರ್ಜನಾರಣ್ಯದಲ್ಲಿ ಕಣ್ಮರೆಯಾದರು. ಆದರೆ ಈ ಭಾರಿ ಸಾಹಸದಿಂದ ಅವರಿಗೆ ಸಿಕ್ಕಿದ್ದು ಕೇವಲ ಹದಿನೇಳು ಸಾವಿರ ರೂಪಾಯಿ.

ಚಿತ್ತಗಾಂಗಿನ ಅಧಿಕಾರಿಗಳಿಗೆ ತಮ್ಮ ಮೂಗಿನ ಕೆಳಗೇ ಕ್ರಾಂತಿಕಾರಿ ದಳವೊಂದು ಇದೆ ಎನ್ನುವುದು ಮೊದಲ ಬಾರಿಗೆ ತಿಳಿಯಿತು. ಎಲ್ಲ ಕ್ರಾಂತಿಕಾರಿಗಳನ್ನು ಹಿಡಿಯಲು ಅವರು ಸರ್ವಯತ್ನ ನಡೆಸಿದರು. ಆದರೆ ಸೂರ್ಯಸೇನರಾಗಲಿ ಅವರ ಜೊತೆಗಾರರಲ್ಲಿ ಯಾರೊಬ್ಬರಾಗಲಿ ಸೆರೆ ಸಿಕ್ಕಲಿಲ್ಲ. ಸೂರ್ಯಸೇನರ ಸಂಘಟನೆಯ ಯಶಸ್ಸಿನ ಬಂಡವಾಳ ಇದೇ ಆಗಿತ್ತು. ನಗರದಲ್ಲಿ ಸಂಘಟನೆ ಬೆಳೆಸಿದರೂ ಹಳ್ಳಿ-ಹಳ್ಳಿಗಳಲ್ಲಿ ಅವರ ಪ್ರಭಾವಲಯ ವಿಸ್ತರಿಸಿತ್ತು.ಗಲ್ಲಿ-ಗಲ್ಲಿಗಳ ಪ್ರತಿ ವ್ಯಕ್ತಿ ಅವರಿಗೆ ಆಪ್ತ.ಹೀಗಾಗಿ ಪೋಲೀಸರ ಕಣ್ಣಿಗೆ ಅವರು ಬೀಳುವ ಸಂಭವವೇ ಇರಲಿಲ್ಲ.

ಪೋಲಿಸರು ಎಲ್ಲ ಚೌಕಿದಾರರಿಗೆ ಆದೇಶ ಕಳುಹಿಸಿ ಯಾವ ಊರಿಗೆ ಯಾವೊಬ್ಬ ಹೊಸಬ ಬಂದರೂ ಠಾಣೆಗೆ ಸುದ್ದಿ ಕಳುಹಿಸಬೇಕೆಂದರು. ಈ ಉಪಾಯ ಫಲ ನೀಡಿತು.

ಹಳ್ಳಿಯೊಂದರಲ್ಲಿ ಒಂದು ಸಾಮಾನ್ಯ ಗುಡಿಸಿಲಿನಲ್ಲಿದ್ದ ಕ್ರಾಂತಿಕಾರಿಗಳ ಪತ್ತೆ ಪೋಲಿಸರಿಗೆ ತಿಳಿಯಿತು.ಅವರು ಗುಡಿಸಿಲ ಬಲಿ ಧಾವಿಸಿದರು. ಆದರೆ ಸುದ್ದಿ ತಿಳಿದ ಸೂರ್ಯಸೇನ್ ಹಾಗೂ ಇತರರು ಬಳಿ ಇದ್ದ ಶಸ್ತ್ರಾಸ್ತ್ರಗಳ ಸಹಿತ ಮನೆಯ ಹಿಂದಿದ್ದ ಕಾಡಿನತ್ತ ಓಡಿದರು.

ಪ್ರಥಮ ಹೋರಾಟ 

ಪೋಲೀಸರು ಅವರ ಬೆನ್ನು ಹತ್ತಿದರು. ಅವರು ದರೋಡಕೋರರೆಂದೂ ಅವರನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಕೊಡುವುದಾಗಿಯೂ ಪೋಲೀಸರು ಸಾರಿದರು. ಸತ್ಯಸಂಗತಿ ತಿಳಿಯದ ನೂರಾರು ಜನರು ಕ್ರಾಂತಿಕಾರಿಗಳ ಹಿಂದೆ ಬಿದ್ದರು. ಇನ್ನೇನು ಕ್ರಾಂತಿಕಾರಿಗಳು ಜನರ ಕೈಗೆ ಸಿಕ್ಕಿಬೀಳಬೇಕು, ಆಗ ಎಲ್ಲೆಲ್ಲೂ ನೋಟುಗಳು ಹಾರಿದವು. ಕ್ರಾಂತಿಕಾರಿಗಳು ಅಂತಿಮ ತಂತ್ರವಾಗಿ ತಮ್ಮ ಬಳಿ ಇದ್ದ ಸುಮಾರು ಎರಡು ಸಾವಿರ ರೂಪಾಯಿಗಳನ್ನು ಚೆಲ್ಲಿದ್ದರು. ಆದರೆ ಇದೂ ಹೆಚ್ಚು ಪ್ರಯೋಜನವಾಗಲಿಲ್ಲ. ಕೆಲ ನಿಮಿಷ ಹಣ ಹೆಕ್ಕುವುದರಲ್ಲಿ ತೊಡಗಿದ ಜನ ಮತ್ತೆ ಹಿಂದೆ ಬಿದ್ದರು. ಪೊಲೀಸರು ಬಂದರು. ಶಸ್ತ್ರ ಕೈಗೆತ್ತಿಕೊಂಡರು. ಪೊಲೀಸರೊಂದಿಗೆ ಹಲವು ಗಂಟೆಗಳ ಹೋರಾಟ ನಡೆಯಿತು. ತಮ್ಮ ಬಳಿಯ ಗುಂಡುಗಳ ಸಂಗ್ರಹ ಮುಗಿಯುವಷ್ಟರಲ್ಲಿ ಸೂರ್ಯಸೇನ್ ಇತರ ಮೂವರೊಂದಿಗೆ ಪರಾರಿಯಾದರು. ಗಾಯಗೊಂಡ ಇಬ್ಬರು ಕ್ರಾಂತಿಕಾರಿಗಳು ಸೆರೆ ಸಿಕ್ಕಿದರು.

ಸತ್ಯ ಸಂಗತಿ ತಿಳಿದ ನಂತರ ಊರಿನ ಜನರು ಪಶ್ಚಾತ್ತಾಪಪಟ್ಟರು. ತಮ್ಮ ಸ್ವಾತಂತ್ರ್ಯಕ್ಕಾಗಿ ಶ್ರಮಿಸುವ ಕ್ರಾಂತಿಕಾರಿಗಳನ್ನು ಹಿಡಿಯಲು ತಾವು ಪೊಲೀಸರಿಗೆ ನೆರವಾದುದಕ್ಕಾಗಿ ದುಃಖ ಪಟ್ಟರು.

ಆದರೆ ಪೋಲಿಸರಿಗೆ ಸೂರ್ಯಸೇನ್ ಬೇಕಿತ್ತು. ಅವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಲಾಯಿತು. ಆದರೆ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸುವುದರಲ್ಲಿ ಸೂರ್ಯಸೇನರು ಚಂದ್ರಶೇಖರ ಆಜಾದರ ತಮ್ಮ. ಒಂದು ಸಲ ಕಲ್ಕತ್ತದ ಬೀದಿಯಲ್ಲಿ ಕಂಡರೆ ಅವರು ಮರುಗಳಿಗೆಯಲ್ಲಿ ಬಾರಿಸಾಲ್ ನಲ್ಲಿ ಇರುತ್ತಿದ್ದರು.

೧೯೨೫ ರಲ್ಲಿ ಸೂರ್ಯಸೇನರು ಕಲ್ಕತ್ತದ ರಸ್ತೆಯೊಂದರಲ್ಲಿ ನಡೆದು ಹೋಗುತ್ತಿದ್ದಾಗ, ಪೊಲೀಸರ ಕೈಗೆ ಸಿಕ್ಕಿಬಿದ್ದರು. ಪೊಲೀಸರಿಗೆ ಪಾಯಸ ಕುಡಿದಷ್ಟು ಸಂತೋಷ ಆಯಿತು.

ಬಿಡುಗಡೆ

ಸೂರ್ಯಸೇನರಂತೆ ಬಂಗಾಳದಲ್ಲಿ ಹಾಗೂ ಚಿತ್ತಗಾಂಗಿನಲ್ಲಿ ಸುಮಾರು ಒಂದು ನೂರು ಕ್ರಾಂತಿಕಾರಿಗಳನ್ನು ಬಂಧನದಲ್ಲಿರಿಸಲಾಗಿತ್ತು. ಆದರೆ ಮೊಕದ್ದಮೆ ನಡೆಸಲು ಬೇಕಾದ ಸಾಕ್ಷ್ಯ ಪೋಲೀಸರಿಗೆ ಸಿಕ್ಕಿರಲಿಲ್ಲ. ಚಿತ್ತಗಾಂಗ ತಂಡದಲ್ಲಿ ಸೂರ್ಯಸೇನರಲ್ಲದೆ ಇಪ್ಪತ್ತು ಮಂದಿ ಜೈಲಿನಲ್ಲಿದ್ದರು.

ಆದರೆ, ಮೊಕದ್ದಮೆ ಹೂಡದೆ ಇವರನ್ನು ಹೆಚ್ಚು ಕಾಲ ಬಂಧನದಲ್ಲಿಡುವುದು ಕಾನೂನಿನ ಪ್ರಕಾರ ಸಾಧ್ಯ ವಿರಲಿಲ್ಲ. ಭಾರತದಾದ್ಯಂತ ಇವರ ಬಿಡುಗಡೆಗೆ ಒತ್ತಾಯ ಮಾಡಿ ಚಳವಳಿ ನಡೆಯಿತು. ೧೯೨೮ ರಲ್ಲಿ ಇಂಗ್ಲೆಂಡಿನ ಸಂಸತ್ತಿನಲ್ಲೂ ಭಾರತದ ಪರ ಸದಸ್ಯರು ಈ ರೀತಿಯ ಬಂಧನಗಳನ್ನು ಬಲವಾಗಿ ಪ್ರತಿಭಟಿಸಿದರು. ಮೊಕದ್ದಮೆ ನಡೆಸಿ ಅಥವಾ ಇವರೆಲ್ಲರನ್ನೂ ಬಂಧನದಿಂದ ಬಿಡಿ ಎಂದು ಒತ್ತಾಯ ಮಾಡಿದರು. ಅಂತಿಮವಾಗಿ ೧೯೨೮ ಸೆಪ್ಟೆಂಬರ್ ನಲ್ಲಿ ಎಲ್ಲರನ್ನೂ ಬಿಡುಗಡೆಗೊಳಿಸಬೇಕಾಯಿತು.

ಸೈನ್ಯ

೧೯೨೮ರ ಕಾಂಗ್ರೆಸ್ ಅಧಿವೇಶನ ಕಲ್ಕತ್ತದಲ್ಲಿ ಸೇರಿತ್ತು. ಅಧ್ಯಕ್ಷರು ಪಂಡಿತ್ ಮೋತಿಲಾಲ್ ನೆಹರೂ, ಎಳು ಸಹಸ್ರ ಕಾಂಗ್ರೆಸ್ ಸ್ವಯಂಸೇವಕರ ಶಿಸ್ತುಬದ್ಧ ಪಡೆಯೊಂದರ ನಾಯಕತ್ವ ವಹಿಸಿ, ಸೇನಾಪತಿಯಂತೆ ಸೈನಿಕ ಉಡಪಿನಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಈ ತನಕ ಕೇವಲ ಸರ್ಕಾರದ ಬಳಿ ಮಾತ್ರ ಸೇನಾ ಚಲನವಲನ ವೀಕ್ಷಿಸುತ್ತಿದ್ದ ಕ್ರಾಂತಿಕಾರಿಗಳಿಗೆ ಸುಭಾಷ್ ಬಾಬು ಅವರ ಈ “ಸೇನಾಪಡೆ” ನೋಡಿ ರೋಮಾಂಚನವಾಯಿತು.

ಕಾಂಗ್ರೆಸ್ ಪ್ರತಿನಿಧಿಯಾಗಿ ಅಧಿವೇಶನದಲ್ಲಿ ಸೂರ್ಯಸೇನ್ ಭಾಗವಹಿಸಿದ್ದರು. ಈ ದೃಶ್ಯದಿಂದ ಅವರಿಗೆ ಹೊಸ ಸ್ಫೂರ್ತಿ ಬಂದಿತು. ಕಲ್ಕತ್ತದಲ್ಲಿಈ ಬಗ್ಗೆ ಹಲವು ಕ್ರಾಂತಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕಲ್ಕತ್ತದಿಂದ ಚಿತ್ತಗಾಂಗಿಗೆ ಮರಳಿದರು.

ಚಿತ್ತಗಾಂಗಿನಲ್ಲಿ “ಪ್ರಜಾಸತ್ತಾತ್ಮಕ ಸೇನೆ” ಮೊದಲ್ ಘಟಕ ಸ್ಥಾಪನೆ ಆಯಿತು. ಪಡೆಗೆ ಸೇರಿದ ಕ್ರಾಂತಿಕಾರಿಯನ್ನು “ಸೈನಿಕ” ಎಂದೇ ಹೆಸರಿಸಲಾಯಿತು. ಸೈನಿಕ ಶಿಸ್ತು, ಸಂಘಟನೆ ಇಲ್ಲದೆ ಯಾವ ಕಾರ್ಯವೂ ಸಾಧಿಸಲಾಗುವುದಿಲ್ಲ ಎನ್ನುವ ಭಾವನೆಯನ್ನು ಎಳೆಯ ತರುಣರಲ್ಲಿ ಸೂರ್ಯಸೇನ್ ಬಲವಾಗಿ ಮೂಡಿಸಿದರು. ಸೈನಿಕ ಸಂಘಟನೆಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಸುರ್ಯಸೇನರು ಅಭ್ಯಾಸ ಮಾಡಿದರು. ಬಲವಾದ ರಹಸ್ಯ ಸಂಘಟನೆ ಬೆಳೆಸಿದರು. ಕ್ರಮೇಣ ದೇಶವ್ಯಾಪಿಯಾಗಿ ಈ ಸಂಘಟನೆ ಬೆಳೆಸುವುದು ಅವರ ಉದ್ದೇಶವಾಗಿತ್ತು.

ಕ್ರಾಂತಿಕಾರಿ ಕೆಲಸಗಳಿಗಾಗಿ ಬೇಕಾದ ಹಣಕ್ಕಾಗಿ ಡಕಾಯಿತಿ ನಡೆಸುವುದರಿಂದ ಪ್ರಯೋಜನವಿಲ್ಲ ಎನ್ನುವುದನ್ನು “ಕಾಕೋರಿ ರೈಲ್ವೆ ಡಕಾಯಿತಿಯಲ್ಲಿ ನಾಲ್ವರು ಕ್ರಾಂತಿಕಾರಿ ತರುಣರಿಗೆ ಮರಣದಂಡಣೆ ಶಿಕ್ಷೆ ಆಗಿತ್ತು. ಆಜಾದ್ ಮೊದಲಾದ ಇತರರು ಹಲವು ವರ್ಷಗಳ ಕಾಲ ತಲೆ ತಪ್ಪಿಸಿಕೊಂಡೇ ತಿರುಗಬೇಕಾಯಿತು.ಇವೆಲ್ಲದರ ಫಲವಾಗಿ ಸಿಕ್ಕಿದ ಹಣವಾದರೋ ಅತ್ಯಲ್ಪ. ಆದರೆ ಕ್ರಾಂತಿಕಾರಿಗಳ ಸರ್ವಶಕ್ತಿ ಇದರಲ್ಲೇ ವ್ಯಯವಾಗಿತ್ತು. ಆದುದರಿಂದ ಸೂರ್ಯಸೇನ್ ಡಕಾಯಿತಿಯ ಮಾರ್ಗ ಬಿಟ್ಟರು. ಜನತಾ ಸಂಪರ್ಕ ಬೆಳೆಸಿ, ಜನರಲ್ಲಿ ಕ್ರಾಂತಿಕಾರಿಗಳ ಕಾರ್ಯ ತಮ್ಮ ಕಾರ್ಯ ಎನ್ನುವ ಭಾವನೆಯನ್ನು ಜಾಗೃತಗೊಳಿಸಿ ಅವರಿಂದ ಚಂದಾ ಸಂಗ್ರಹಿಸಲು ಆರಂಭಿಸಿದರು. ಚಿತ್ತಗಾಂಗ್ ನ”ಪ್ರಜಾತಾಂತ್ರಿಕ ಸೇನೆ” ಸುಮಾರು ನಲ್ವತ್ತು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿತು.

ಸೂರ್ಯಸೇನರ ಸೈನಿಕ ಸಂಘಟನೆ ಅತ್ಯಂತ ಶಿಸ್ತುಬದ್ಧವೂ ಪರಿಪೂರ್ಣವೂ ಆಗಿತ್ತು. ಅವರ ಸೈನಿಕ ಪಡೆಯ ಪ್ರತಿಯೊಬ್ಬನಿಗೂ ಚಿತ್ತಗಾಂಗ್ ನ ಭೌಗೋಳಿಕ ಹಿನ್ನಲೆ, ರೈಲ್ವೆ ಜಾಲ, ಸರ್ಕಾರಿ ಕಛೇರಿಗಳು ಹಾಗೂ ಅವುಗಳ ಸಂಪರ್ಕ ಜಾಲ, ತಂತಿ ಮತ್ತು ಇತರ ಸಂಪರ್ಕ ಮಾರ್ಗಗಳು ಮೊದಲಾದವುಗಳ ವಿವರಗಳೆಲ್ಲಾ ತಿಳಿದಿದ್ದವು. ಈ ರೀತಿಯ ಎಲ್ಲ ಸಿದ್ದತೆ ಮುಗಿದ ಬಳಿಕ ಸೂರ್ಯಸೇನ್ ಆ ತನಕ ತಾವು ರಹಸ್ಯವಾಗಿ ರೂಪಿಸಿದ್ದ ಯೋಜನೆಯನ್ನು ತಮ್ಮ ಸಂಗಡಿಗರ ಮುಂದೆ ಇರಿಸಿದರು.

ಚಿತ್ತಗಾಂಗ್ ಗೆ ಸ್ವಾತಂತ್ರ್ಯ !

ಚಿತ್ತಗಾಂಗ್ ಜಲ್ಲೆಯನ್ನು ಇಂಗ್ಲೀಷರ ಆಡಳಿತದಿಂದ ಸ್ವತಂತ್ರಗೊಳಿಸುವುದು, ಭಾರತದ ಸ್ವಾತಂತ್ರ್ಯಕ್ಕೆ ಹೊಸ ದಾರಿಯನ್ನು ತೋರುವ ಮೊದಲನೆಯ ಹೆಜ್ಜೆಯನ್ನಾಗಿ ಚಿತ್ತಗಾಂಗ್ ವಿಮೋಚನೆಯನ್ನು ಮಾಡುವುದು !

ಇದು ಸೂರ್ಯಸೇನರ ಯೋಜನೆ. ಇದನ್ನು ಕೇಳಿದ ತರುಣರಿಗೆ ರೋಮಾಂಚನವಾಯಿತು.

ಸೈನಿಕರ ಕೆಲಸಗಳೇನು ?

ಸರ್ಕಾರಿ ಶಸ್ತ್ರಾಗಾರ ದೋಚುವುದು, ರೈಲ್ವೆ ವಿಭಾಗದ ಸಹಾಯಕ ಶಸ್ತ್ರಾಗಾರ ದೋಚುವುದು, ಚಿತ್ತಗಾಂಗ್ ನ ಅಂಚೆ ತಂತಿ ವಿನಿಮಯ ಕೇಂದ್ರದ ಮೇಲೆ ಆಕ್ರಮಣ ನಡೆಸಿ ಹೊರಗಿನ ಸಂಪರ್ಕ ಕಡಿದು ಹಾಕುವುದು, ಇಂಗ್ಲಿಷರಲ್ಲಿ ಭಯ ಹುಟ್ಟಿಸಲು ಅವರ ಕ್ಲಬ್ಬುಗಳ ಮೇಲೆ ಆಕ್ರಮಣ ಮಾಡುವುದು, ಸರ್ಕಾರಿ ಖಜಾನೆಯನ್ನು ವಶಪಡಿಸಿಕೊಳ್ಳುವುದು, ಜೈಲುಗಳ ಮೇಲೆ ಆಕ್ರಮಣ ಮಾಡಿ ಖೈದಿಗಳನ್ನು ಬಿಡುಗಡೆಗೊಳಿಸುವುದು, ನಗರದ ಶಸ್ತ್ರಾಸ್ತ್ರ ಅಂಗಡಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವುದು, ಅನಾಚಾರ ಹಾಗೂ ಅತ್ಯಾಚಾರಕ್ಕೆ ಕುಪ್ರಸಿದ್ಧರಾದ ಬಿಳಿಯ ಅಧಿಕಾರಿಗಳನ್ನು ಶಿಕ್ಷಿಸುವುದು, ಕಡೆಯದಾಗಿ ಚಿತ್ತಗಾಂಗ್ ನಲ್ಲಿ ರಾಷ್ಟ್ರೀಯ ಸರ್ಕಾರ ಸ್ಥಾಪಿಸುವುದು. ಇವು ಮುಕ್ತಿ ಯೋಜನೆಯ ಒಂಬತ್ತು ಪ್ರಧಾನ ಕಾರ್ಯಗಳು. ತಮ್ಮ ದಳದ ಅರವತ್ತು ಮೂರು ಸೈನಿಕರಲ್ಲಿ ಇವುಗಳನ್ನು ಹಂಚಿದ ಸೂರ್ಯಸೇನ್ ಪೂರ್ಣ ಯೋಜನೆಯನ್ನು ವಿವರಿಸಿದರು.

ಈ ಸೈನಿಕರಲ್ಲಿ ಬಹು ಮಂದಿ ಇನ್ನೂ ಕುಡಿ ಮೀಸೆ ಮೂಡಿರದ ಎಳೆಯ ತರುಣರು ಅಥವಾ ವಿದ್ಯಾರ್ಥಿಗಳು.

ಆದರೆ ತಮ್ಮ ನಾಯಕ ಮಾಸ್ಟರ ದಾ ಆಜ್ಞೆ ಎಂದರೆ ಇವರಿಗೆ ಪ್ರಾಣಕ್ಕೂ ಮಿಗಿಲು.

ಇದೇ ಸಭೆಯಲ್ಲಿ ಸೂರ್ಯಸೇನ್ ಪ್ರಜತಾಂತ್ರಿಕ ಸೇನೆಯ “ಸರ್ವಾಧಿನಾಯಕ” ಸ್ಥಾನವನ್ನು ವಹಿಸಿಕೊಂಡರು. ಎಲ್ಲ ಸೈನಿಕರೂ ಸರ್ವಾಧಿನಾಯಕನೂ ಒಂದು ಪ್ರತಿಜ್ಞೆ ಮಾಡಿದರು. ಸೂರ್ಯಸೇನರ ಪ್ರತಿಜ್ಞೆಯ ಸಾರಾಂಶ ಇದು:

“ನಾವೆಲ್ಲ ಭಾರತೀಯ ಪ್ರಜಾತಾಂತ್ರಿಕ ಸೇನೆಯ ಚಿತ್ತಗಾಂಗ್ ಶಾಖೆಯ ನೆಚ್ಚಿನ ಸೈನಿಕರು. ಈ ದಳದ ಸರ್ವಾಧಿನಾಯಕನಾಗಿ ದಳದ ಕಾರ್ಯಗಳ ಪೂರ್ಣಹೊಣೆ ಹೊತ್ತಿದ್ದೇನೆ. ನೀವೆಲ್ಲ ನನಗೆ ಒಪ್ಪಿಸಿದ ಕೆಲಸವನ್ನು ಪೂರ್ಣ ಜವಾಬ್ದಾರಿಯಿಂದ ನಿರ್ವಹಿಸುವುದು ಮತ್ತು ಸೇನೆಯ ಕೆಲಸ ಇವೇ ನನ್ನ ಎಕಮಾತ್ರ ಸಂಕಲ್ಪ ಎನ್ನುವ ಪ್ರತಿಜ್ಞೆಯನ್ನು ಈ ಮೂಲಕ ಮಾಡುತ್ತೇನೆ.

ಇತರ ಸೈನಿಕರೂ ತಮ್ಮನ್ನು ಸೈನ್ಯಕ್ಕೆ ಸಮರ್ಪಿಸಿಕೊಂಡು ಪ್ರಮಾಣ ಮಾಡಿದರು.

ಸೈನಿಕ ದಳವನ್ನು ಆರು “ಗಟ” (ತುಕಡಿ)ಗಳನ್ನಾಗಿ ವಿಂಗಡಿಸಲಾಯಿತು. ನಿರ್ಮಲಸೇನ್ , ಲೋಕನಾಥಬಲ್, ಅನಂತಸಿಂಹ, ಗಣೇಶ್ ಘೋಷ್, ಲಂಬಿಕಾ ಚಕ್ರವರ್ತಿ ಹಾಗೂ ಉಪೇಂದ್ರ ಭಟ್ಟಾಚಾರ್ಯ ಇವರಿಗೆ ಒಂದೊಂದು ಗಟದ ನಾಯಕರಾಗಿ ಹೊಣೆ ವಹಿಸಲಾಯಿತು. ಎಲ್ಲ ಸೈನಿಕರಿಗೂ ವಿಶೇಷ ಸೈನಿಕ ಸಮವಸ್ತ್ರ ನೀಡಲಾಯಿತು.

೧೯೩೦ ರ ಎಪ್ರಿಲ್ ೧೮ ರಂದು ರಾತ್ರಿ ೯.೪೫ ಗಂಟೆಗೆ ಸರಿಯಾಗಿ “ಚಿತ್ತಗಾಂಗ್ ಮುಕ್ತಿ ಯೋಜನೆ” ಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಯಿತು. ಸರ್ವಾಧಿನಾಯಕನು ಪ್ರತಿಯೊಬ್ಬ ಗಟ್ ನಾಯಕನನ್ನು ಭೇಟಿಯಾಗಿ ಅಂತಿಮ ಸಮಾಲೊಚನೆ ನಡೆಸಿದರು.

ನಿಮ್ಮ ಜೀವನ ಸಾರ್ಥಕವಾಗಲಿ”      

೧೯೩೦ ಎಪ್ರಿಲ್ ೧೮ -ಭಾರತದ ಕ್ರಾಂತಿ ಸಮರದ ಚರಿತ್ರೆಯ ಪುಟಗಳಲ್ಲಿ ರಕ್ತರಂಜಿತ ಅಕ್ಷರಗಳಿಂದ ಬರೆಯಲ್ಪಡಬೇಕಾದ ಐತಿಹಾಸಿಕ ದಿನ.

ಪ್ರಯತ್ನ ವಿಪಲವಾದರೆ ಸಾವೇ ಕಾದಿದೆ ಎಂದು ಅರವತ್ತಮೂರು ಮಂದಿಗೂ ತಿಳಿದಿತ್ತು.

ಆದರೆ ಅವರಲ್ಲಿ ಅಳುಕಿದವನು, ಚಿಂತಿಸಿದವನು ಒಬ್ಬನೂ ಇರಲಿಲ್ಲ.

ಸಂಜೆ ಮುಸುಕುತ್ತಲೇ ಎಲ್ಲ ಗಟಗಳೂ ತಮ್ಮ ತಮ್ಮ ಸಿದ್ಧತೆ ನಡೆಸಿದವು. ರೈಲ್ವೆಹಳಿಗಳನ್ನು ನಾಶಮಾಡುವ ಹೊಣೆ ಹೊತ್ತ ಗಟ ಮೊದಲು ಚಿತ್ತಗಾಂಗ್ ನಿಂದ ಹೊರಬಿದ್ದಿತು.

ಏಪ್ರಿಲ್ ೧೮ರ ಸಂಜೆ ಮನೆಯಿಂದ ಹೊರ ಬೀಳಬೇಕಾಗಿ ಬಂದ ಕ್ರಾಂತಿಕಾರಿಗಳು ಮನೆಯಿಂದ ವಿದಾಯ ಪಡೆದ ಒಂದೊಂದು ಘಟನೆಯೂ ರೋಮಾಂಚಕ.

ಹದಿನಾರು ವರ್ಷದ ಆನಂದಪ್ರಸಾದ್ ಗುಪ್ತ ಇಬ್ಬರೂ ಸೂರ್ಯಸೇನರ ಸೇನೆಯ ಸೈನಿಕರು. ಎಪ್ರಿಲ್ ೧೮ರ ರಾತ್ರಿ ೯ ಗಂಟೆ ಆಗುತ್ತಲೇ ಮನೆಯಿಂದ ಹೊರಬೀಳಲು ಸಿದ್ಧರಾಗಿ, ಇಬ್ಬರೂ ಸೈನಿಕ ಉಡುಪು ಧರಿಸಿದರು. ಅವರಿಗೆ ಇದ್ದ ಬಂಧು ಒಬ್ಬರೇ. ಅವರ ತಾಯಿ. ಆಕೆಯಿಂದ ವಿದಾಯ ಪಡೆಯಲು ಹೋದರು.

ಈ ಕ್ರಾಂತಿಕಾರಿ ಸುಪುತ್ರರನ್ನು ಭಾರತಮಾತೆಗೆ ನೀಡಿದ ಆ ಮಹಾಮಾತೆಗೆ ಇವರು ಯಾವುದೋ ಅಪಾಯದ ಯೋಜನೆಗೆ ಕೈ ಹಾಕಿದ್ದಾರೆ ಎನ್ನುವ ಅರಿವು ಮೊದಲಿನಿಂದಲು ಇತ್ತು. ಆದರೂ ಯಾವ ಕೆಲಸಕ್ಕೂ ಆಕೆ ಅಡ್ಡ ಬರಲಿಲ್ಲ. ಆಗಾಗ ಮಕ್ಕಳಿಂದ ಕ್ರಾಂತಿಯನ್ನು ಕುರಿತ ಪುಸ್ತಕಗಳನ್ನು ಪಡೆದು ಆಕೆ ಓದಿದ್ದರು. ಆಕೆಗೆ,ತಮ್ಮ ಮಕ್ಕಳು ಸಾಮಾನ್ಯರಂತೆ ಕೆಟ್ಟ ಸಹವಾಸ ಮಾಡದೆ ಸೂರ್ಯಸೇನ್, ಅನಂತಸಿಂಹ ಮೊದಲಾದ ಆದರ್ಶವಾದೀ ದೇಶಭಕ್ತರ ಸಹವಾಸ ಬೆಳೆಸಿದ್ದಾರೆ ಎನ್ನುವ ವಿಚಾರ ಹೆಮ್ಮೆ ಎನಿಸಿತು. ಮನೆಯಲ್ಲಿ ಕ್ರಾಂತಿಕಾರಿಗಳು ಬಾಂಬ್ ತಯಾರಿಯಲ್ಲಿದ್ದಾಗ ಆಕೆ ಮನೆಯ ಹೊರಗಿದ್ದು ಅಪರಿಚಿತರ ಬಗ್ಗೆ ಕಣ್ಣಿಡುತ್ತಿದ್ದರು.

ಕಡೆಯದಾಗಿ ಬೀಳ್ಕೊಡಲು ಮಕ್ಕಳು ಕಾಲಿಗೆರಗಿದರು. ಮತ್ತೆ ಮನೆಗೆ ಜೀವಂತ ಬರುವರೋ ಇಲ್ಲವೋ ತನ್ನ ಪಾದಗಳನ್ನು ಮುಟ್ಟಿ ತಲೆಬಾಗಿರುವ ಮಕ್ಕಳು! ಏನು ಹೇಳಬೇಕು ತಾಯಿ?

“ನಿಮ್ಮನ್ನು ಮತ್ತೆ ನೋಡುತ್ತೇನೋ ಇಲ್ಲವೋ ನನಗೆ ಸಂದೇಹ” ಎಂದು ಬಾಯಿ ಬಿಟ್ಟು ಹೇಳಿದರು ಆ ವೀರಮಾತೆ; “ನಿಮ್ಮ ಜೀವನ ಸಾರ್ಥಕವಾಗಲಿ” ಎಂದು ಹೃದಯತುಂಬಿ ಆಶೀರ್ವಾದ ಮಾಡಿದರು. ಅವರ ಕಣ್ಣುಗಳು ತುಂಬಿ ಬಂದವು. ತಮ್ಮ ಎರಡು ಕಣ್ಣುಗಳಂತಿದ್ದ ಪುತ್ರರನ್ನು ಹೆಚ್ಚು ಮಾತಿಲ್ಲದೆ, ಆ ವೀರಮಾತೆ ಭಾರತಮಾತೆಯ ಬಂಧ ವಿಮೋಚನೆಗಾಗಿ ಬಲಿ ವೇದಿಕೆಗೆ ಕಳುಹಿಸಿ ಕೊಟ್ಟರು. ಆಕೆಯ ಹೃದಯ ಎಷ್ಟೊಂದು ವಿಶಾಲ!

ಸೂರ್ಯಸೆನರ ದುರ್ಬಲ ಶರೀರದ ಪೋಲೀಸರ ಲಾಠಿಗಳು ತಿರುಗಿದವು

ಇಂತಹ “ವೀರಮಾತೆ” ಯರು ಇದ್ದುದರಿಂದಲೇ ೧೯೪೭ ರಲ್ಲಾದರೂ ಭಾರತ ಸ್ವತಂತ್ರವಾಯಿತು. ಇದೇ ರೀತಿ ಸ್ವಂತ ಮಗನನ್ನು ಕ್ರಾಂತಿಕಾರಿ ಬಲಿಗಂಬಕ್ಕೆ ನೀಡಿದ ತಂದೆಯರು, ಅಣ್ಣತಮ್ಮಂದಿರನ್ನು ರಕ್ತತಿಲಕವಿಟ್ಟು ಹರಸಿ ಕಳುಹಿಸಿದ ಅಕ್ಕತಂಗಿಯರು ಕ್ರಾಂತಿಕಾರಿ ಚರಿತ್ರೆಯಲ್ಲಿ ಪುಟಕ್ಕೊಬ್ಬರಂತೆ ಇದ್ದಾರೆ.

ವಿಮೋಚನೆಯ ಹೋರಾಟ ಪ್ರಾರಂಭವಾಯಿತು.

ಏಪ್ರಿಲ್ ೧೮ರ ಸಂಜೆಯ ಕತ್ತಲು ಅವರಿಸುತ್ತಿದ್ದಂತೆಯೇ ಬಾಡಿಗೆಗೆ ಪಡೆದ ಟ್ಯಾಕ್ಸಿಯೊಂದರಲ್ಲಿ ಲೋಕನಾಥ ಬಲ್ ನಗರದಿಂದ ಹೊರಕ್ಕೆ ನಡೆದ. ನಿರ್ಜನ ಪ್ರದೇಶದಲ್ಲಿ ವಾಹನವನ್ನು ನಿಲ್ಲಿಸಿದ. ಟ್ಯಾಕ್ಸಿ ನಿಂತೊಡನೆ ಚಾಲಕನ ಪಕ್ಕದಲ್ಲಿ ಕುಳುತಿದ್ದ ಕ್ರಾಂತಿಕಾರಿ ಕ್ಲೋರೋಫಾರಂನಲ್ಲಿ ಅದ್ದಿದ್ದ ಕರವಸ್ತ್ರವನ್ನು ಚಾಲಕನ ಮೂಗಿಗೆ ಹಿಡಿದ. ಚಾಲಕ ಪ್ರಜ್ಞ ತಪ್ಪಿದ. ಆತನನ್ನು ಕೆಳಗಿಳಿಸಿ ರಸ್ತೆ ಬದಿಯ ಪೊದೆಯೊಂದರಲ್ಲಿ ಮಲಗಿಸಿದ್ದಾಯಿತು. ಟ್ಯಾಕ್ಸಿ ಪುನಃ ನಗರದತ್ತ ಸಾಗಿತು.

ಇದೇ ವೇಳೆಗೆ ಗಣೇಶ್ ಘೋಷ್ ಮತ್ತು ಅನಂತಸಿಂಹ ಇನ್ನೊಂದು ಟ್ಯಾಕ್ಸಿ ಹಿಡಿದಿದ್ದರು. ಚಾಲಕನಿಗೆ ಪಿಸ್ತೂಲು ತೋರಿಸಿ, ಸ್ವಲ್ಪ ಗಲಭೆ ಎಬ್ಬಿಸಿದರೂ, ಕೊಲ್ಲುವುದಾಗಿ ಬೆದರಿಸಿದ ಗಣೇಶ್. “ನಿನಗೆ ಯವುದೇ ನಷ್ಟವುಂಟು ಮಾಡುವ ಇಚ್ಚೆ ನಮಗಿಲ್ಲ” ಎಂದರು. ಚಾಲಕನ ಕೈಕಾಲು ಕಟ್ಟಿ ಮನೆಯೊಂದರೊಳಗೆ ಕೂಡಿ ಹಾಕಲಾಯಿತು. ಹೊರಗೆ ಸಶಸ್ತ್ರ ಸೈನಿಕರ ಕಾವಲು ಇದೆ, ಕೂಗೆಬ್ಬಿಸಿದರೆ ಗುಂಡಿಗೆ ಬಲಿಯಾಗುತ್ತಿ ಎಂದು ಅವನಿಗೆ ಬೆದರಿಕೆ ಹಾಕಿದರು. ಮನೆಗೆ ಬೀಗ ಹಾಕಿ ಅವರು ಟ್ಯಾಕ್ಸಿಯಲ್ಲಿ ಹೊರಟು ಹೋದರು. ವಾಸ್ತವಿಕವಾಗಿ ಮನೆಯ ಹೊರಗೆ ಯಾರೂ ಇರಲಿಲ್ಲ.

ಪೋಲೀಸ್ ಶಸ್ತ್ರಾಗಾರ ವಶ

ಗಣೇಶ್ ಘೋಷ್ ಹಾಗೂ ಅನಂತಸಿಂಹ ಸ್ವತಃ ಚಾಲಕರಾದರು. ಎರಡೂ ಗಟಗಳು ಪೋಲೀಸ್ ಶಸ್ತ್ರಾಗಾರದ ಬಳಿ ಬಂದವು. ಹಿಂದೆಯೇ ಸೂರ್ಯಸೇನರ ಗಟವೂ ಬಂತು. ಎಲ್ಲರೂ ಸೈನಿಕ ಉಡುಪು ಧರಿಸಿದ್ದು, ಸೊಂಟದ ಪಟ್ಟಿಗೆ ಪಿಸ್ತೂಲು ತೂಗುತ್ತಿತ್ತು.

ಶಸ್ತ್ರಾಗಾರದ ಪಹರೆಗಾರರು ನಾಲ್ವರಿದ್ದರು. ಯಾರೋ ಅಧಿಕಾರಿಗಳು ಬಂದಿರಬೇಕು ಎಂದು ಕೊಂಡರು ಅವರು.

ಕಾವಲುಗಾರರೆಲ್ಲ ಗುಂಡಿಗೆ ಬಲಿಯಾದರು ಸರ್ವಾಧಿನಾಯಕ ಸೂರ್ಯಸೇನ್ ಮತ್ತು ಮೂವತ್ತು ಮಂದಿ ಒಳಗೆ ಸೇರಿದರು. ಪೆಟ್ಟಿಗೆ ಒಡೆಯುವ ಸಾಮಗ್ರಿಗಳು ಅವರ ಬಳಿ ಇದ್ದವು. ಶಸ್ತ್ರಾಗಾರದ ಪೆಟ್ಟಿಗೆಗಳನ್ನು ಒಡೆದರು. ಅಪಾರ ಶಸ್ತ್ರಾಸ್ತ್ರಗಳು ಕ್ರಾಂತಿಕಾರಿಗಳ ಕೈಗೆ ಬಂದವು.

ಲೋಕನಾಥ ಬಲ್ ನಾಯಕನಾಗಿದ್ದ ಗಟ ಇದೇ ವೇಳೆಗೆ ರೈಲ್ವೆಯ ಸಹಕಾರಿ ಶಸ್ತ್ರಾಗಾರವನ್ನು ವಶಪಡಿಸಿಕೊಂಡಿತು. “ಯಾರು” ಎಂದು ಪ್ರಶ್ನಿಸಿದ ಪಹರೆದಾರನಿಗೆ “ಸ್ನೇಹಿತರು” ಎಂದು ಬಲ್ ಉತ್ತರ ನೀಡಿದ. ಆಗಲೇ ಒಂದೇ ಗುಂಡಿಗೆ ಆತನ ಕತೆ ಮುಗಿಸಿದ್ದ. ಒಳಗೆ ಮೇಜವಾನಿಯಲ್ಲಿ ತೊಡಗಿದ್ದ ಆಂಗ್ಲ ಅಧಿಕಾರಿಗಳು ಗುಂಡಿನ ಶಬ್ದ ಕೇಳಿ ಹೊರಬಂದರು. ಅವರು ಪರಿಸ್ಥಿತಿ ಅರಿತುಕೊಳ್ಳುಷ್ಟರಲ್ಲಿ ಅವರ ಕತೆ ಮುಗಿಯಿತು. ಸುದ್ದಿ ತಿಳಿದು ಬೇರೆ ಕಡೆಯಿಂದ ಕಾರಿನಲ್ಲಿ ಬಂದ ಅಧಿಕಾರಿಗಳು ಹಾಗೆಯೇ ಪರಾರಿಯಾದರು.

ಆದರೆ ಶಸ್ತ್ರಾಗಾರದ ಬೀಗಗಳನ್ನು ಒಡೆಯುವ ಮೊದಲೇ ಬಿಲಿಯ ಸೈನಿಕರ ಧಾಳಿ ಆರಂಭವಾಯಿತು. ಕೊನೆಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಶಸ್ತ್ರಾಗಾರಕ್ಕೆ ಬೆಂಕಿ ಹಚ್ಚಲಾಯಿತು. ಹೊರಗೆ ಸಿಕ್ಕಿದ ಶಸ್ತ್ರಾಸ್ತ್ರಗಳೆಲ್ಲದರ ಸಹಿತ ಕ್ರಾಂತಿಕಾರಿಗಳು ಪರಾರಿಯಾದರು.

ಅಂಬಿಕಾ ಚಕ್ರವರ್ತಿ ತನಗೆ ವಹಿಸಿದ್ದ ಟೆಲಿಫೋನ್ ವಿನಿಮಯ ಕಛೇರಿಯ ಕತೆ ಮುಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿ ತಮ್ಮ ಸೇನೆಯ ಮುಖ್ಯ ಕಚೇರಿಗೆ ಬಂದಿದ್ದ.

ಸುತ್ತ ಸೈನಿಕರು

ಮುಖ್ಯ ಕಛೇರಿಯಲ್ಲಿ ಸರ್ವಾಧಿಕಾರಿ ಸೇನರಿಗೆ ಅವರ ಸೈನಿಕರು ಗೌರವ ರಕ್ಷೆ ನೀಡಿದರು. ಸೇನರ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರ ಸ್ಥಾಪಿತವಾಗಿದೆ” ಎಂದು ಘೋಷಿಸಿದರು.

ಆದರೆ ಒಂದು ಕ್ಷಣವನ್ನೂ ಸಂಭ್ರಮದಲ್ಲಿ, ಉತ್ಸವದಲ್ಲಿ ಕಳೆಯುವಂತಿರಲಿಲ್ಲ. ಈ ತನಕದ ಎಲ್ಲ ಕೆಲಸ ಮಿಂಚಿನಂತೆ ಆಗಿತ್ತು. ಆದರೆ ಇಷ್ಟರಲ್ಲೇ ಆಂಗ್ಲಸೇನೆಯ ಕೇಂದ್ರಕ್ಕೆ ಈ ಸುದ್ದಿ ತಿಳಿದಿದ್ದು, ಯಾವ ಘಳಿಗೆಯಲ್ಲಿ ಅವರ ದಾಳಿ ಸಾಧ್ಯವಿತ್ತು. ಪೊಲೀಸ್ ಶಸ್ತ್ರಾಗಾರದಿಂದ ಸಾಧ್ಯವಾದಷ್ಟು ಶಸ್ತ್ರಗಳನ್ನು ನಾಲ್ಕು ಕಾರುಗಳಲ್ಲಿ  ತುಂಬಿದ ನಂತರ, ಉಳಿದ ಶಸ್ತ್ರಾಗಾರಕ್ಕೆ ಬೆಂಕಿ ನೀಡಿ ನಿರುಪಯೋಗಗೊಳಿಸಲಾಯಿತು.

ಈ ವೇಳೆಗೆ ಹೊರಗಿನಿಂದ ಆಂಗ್ಲಸೇನೆ ಬಂದಿತ್ತು. ಕ್ರಾಂತಿಕಾರಿಗಳತ್ತ ಗುಂಡು ಹಾರುತ್ತಿತ್ತು. ಕೆಲವರು ಕ್ರಾಂತಿಕಾರಿಗಳ ಗಾಯಗೊಂಡಿದ್ದರು. ಎಲ್ಲರೂ ಗುಪ್ತ ಸ್ಥಾನಕ್ಕೆ ಹೋಗಬೇಕಾಗಿತ್ತು. ಅವರ ಬಲಿ ಶಸ್ತ್ರಗಳೇನೋ ಬೇಕಾದಷ್ಟಿತ್ತು. ಆದರೆ, ಅವರ ಸಂಖ್ಯೆ ಸ್ವಲ್ಪ. ಅವರಲ್ಲೂ ಕೆಲವರಿಗೆ ಗಾಯವಾಗಿತ್ತು. ಬ್ರಿಟಿಷ್ ಸೈನಿಕರದು ಭಾರಿಯ ಸಂಖ್ಯೆ, ಅವರೊಡನೆ ಇವರು ಹೋರಾಡುವುದು ಸಾಧ್ಯವೇ? ಗಾಯಾಳುಗಳನ್ನು ನಗರದ ಸುರಕ್ಷಿತ ಸ್ಥಾನಗಳಿಗೆ ಸಾಗಿಸುವ ಹೊಣೆಯನ್ನು ಅನಂತ ಸಿಂಹ ಹಾಗೂ  ಗಣೇಶ್ ಘೋಷರಿಗೆ ವಹಿಸಿ ಸೂರ್ಯಸೇನ್ ಇತರರೊಂದಿಗೆ ಚಿತ್ತಗಾಂಗ್‌ನ ಜಲಾಲಾಬಾದ್ ಪರ್ವತದತ್ತ  ಸಾಗಿ ಕಣ್ಮರೆಯಾದರು.

ಗುಪ್ತ ಸ್ಥಳವೊಂದರಲ್ಲಿ ಸೂರ್ಯಸೇನ್ ತಾವು ನಡೆಸಿದ ಕಾರ್ಯದ ಸಮಾಲೋಚನೆಯನ್ನು ವಿವರಿಸಿದರು. ಅಪಾರ ಶಸ್ತ್ರಾಸ್ತ್ರ ದೊರಕಿತ್ತು. ಆದರೆ ತಾವಿದ್ದ ಪರ್ವತದ ಸುತ್ತ ಸೈನಿಕರ ಹಾಗೂ ಪೊಲೀಸರ ಬಲವಾದ ಪಹರೆ ಇತ್ತು.

ಮೂರು ದಿನಗಳು

ಈ ಎಲ್ಲ ಕಾರ್ಯಗಳ ಯೋಜನಾಬದ್ಧ ತಯಾರಿ ನಡೆಸಿದ್ದ ಸೂರ್ಯಸೇನ್ ಒಂದು ತಪ್ಪು ಮಾಡಿದ್ದರು. ತರುಣ ಕ್ರಾಂತಿಕಾರಿಗಳಿಗೆ ಆಹಾರ ಬೇಕಲ್ಲ? ಅದನ್ನು ಪಡೆಯುವುದು ಹೇಗೆ? ಅವರು ಇದಕ್ಕೆ ಗಮನ ಕೊಟ್ಟಿರಲಿಲ್ಲ. ಪಾಪ, ತರುಣ ಕ್ರಾಂತಿಕಾರರು ತುಂಬಾ ಬಳಲಿದ್ದರು.  ತಡೆಯಲಾರದಷ್ಟು ಹಸಿವೆ, ಅರೆ ತಿನ್ನಲು ಏನೂ ಇರಲಿಲ್ಲ!

ಅಂಬಿಕಾ ಚಕ್ರವರ್ತಿ ವೇಷ ಮರೆಸಿ ಪಕ್ಕದ ಹಳ್ಳಿಗೆ ತೆರಳಿದ. ಆದರೆ ಎಲಸ ಸುಲಭವಿರಲಿಲ್ಲ ಕೊನೆಗೆ ಹೇಗೋ ಒಂದು ಹಂಡೆ ಗಂಜಿ ಸಂಪಾದಿಸಬೇಕಾದರೆ ಸಾಕು ಸಾಕಾಯಿತು. ಅದನ್ನೇ ಎಲ್ಲ ಕ್ರಾಂತಿಕಾರಿಗಳು ಹಂಚಿಕೊಂಡು ಉಂಡರು.

ಜಲಾಲಾಬಾದ್ ಪರ್ವತವು ನಗರದಿಂದ ಮೂರು ಮೈಲು ದೂರವಿತ್ತು. ಅಲ್ಲಿ ಕ್ರಾಂತಿಕಾರಿಗಳು ಅಡಗಿರುವ ಸಂಗತಿ ಪೊಲೀಸರಿಗೆ ತಿಳಿಯಿತು. ಸೈನಿಕರು ಹಾಗೂ ಪೊಲೀಸರು ಅಲ್ಲಿಗೆ ಧಾವಿಸಿದರು. ಒಬ್ಬೊಬ್ಬ ಕ್ರಾಂತಿಕಾರಿಯನ್ನು ಹಿಡಿದು ಕೊಟ್ಟವರಿಗೆ ಐದು ಸಹಸ್ರ ರೂಪಾಯಿ ಬಹುಮಾನ ಎಮದು ಉರಿನಲ್ಲೆಲ್ಲ ಸಾರಿದರು.

ಏಪ್ರಿಲ್ ೨೦ರಂದು ಪೊಲೀಸರ ನೆರವಿನ ನೌಕಾ ದಳದ ಸೈನಿಕರು ಬಮದರು. ಹೀಗೆ ಬೆರಳೆಣಿಕೆಯಷ್ಟಿದ್ದ ಕ್ರಾಂತಿಕಾರಿಗಳ ಮೇಲೆ ಒಮದು ಮಹಾ ಸಾಮ್ರಾಜ್ಯದ ಸರಕಾರ ಭಾರೀ ಆಕ್ರಮಣದ ಸನ್ನಾಹ ನಡೆಸಿತು.

ಕ್ರಾಂತಿಕಾರಿಗಳಿಗೆ ಮೂರು ದಿನಗಳಿಂದ ಆಹಾರ-ಪಾನೀಯಗಳಿರಲಿಲ್ಲ. ಗುಡ್ಡಗಾಡಿನಲ್ಲಿ ದಿನಗಳನ್ನು ಕಳೆದ ಅವರು ಬಳಲಿ ಹೋಗಿದ್ದರು. ಸುತ್ತ ಶತ್ರು ಸೈನ್ಯ! ಕಟ್ಟ ಕಡೆಯವರೆಗೂ ಹೋರಾಡಲು ಸಿದ್ಧ ಎಂದು ತೀರ್ಮಾನಿಸಿದರು.

ಜಲಾಲಾಬಾದ್ ಕದನ

೧೯೩೦ ರ ಏಪ್ರಿಲ್ ೨೨ ರಂದು ಸೂರ್ಯ ಹುಟ್ಟಿದ. ರೋಮಾಂಚನಕಾರಿ ಕದನ ನಡೆಯುವ ದಿನ ಪ್ರಾರಂಭವಾಯಿತು. ಎಂಟು ಗಂಟೆಗೆ ಇತಿಹಾಸ ಪ್ರಸಿದ್ಧ ಜಲಾಲಾಬಾದ್ ಕದನ ಆರಂಭವಾಯಿತು.

ಒಂದು ಕಡೆ ತರಬೇತಿ ಪಡೆದ ಶಸ್ತ್ರಸಜ್ಜಿತ ಸಾವಿರಾರು ಆಂಗ್ಲ ಸೈನಿಕರು. ಇನ್ನೊಂದು ಕಡೆ ಹಸಿದು ಕಂಗಾಲಾದ ಐವತ್ತೇಳು ಮಂದಿ ತರುಣ ಕ್ರಾಂತಿಕಾರಿಗಳು.

ಸಂಜೆ ೮ ಗಂಟೆಯವರೆಗೆ ಖಡಾಖಡಿ ಯುದ್ಧ ನಡೆಯಿತು.

ಹನ್ನೊಂದು ಮಂದಿ ಕ್ರಾಂತಿಕಾರಿಗಳು ಪ್ರಾಣವನ್ನು ಅರ್ಪಿಸಿ ಕಳಗುರುಳಿದರು. ಕೆಲವರು ಗಾಯಗೊಂಡರು.

ಸರಕಾರದ ಕಡೆ?

ಸರಕಾರದ ಕಡೆ ಅರವತ್ತನಾಲ್ಕು ಮಂದಿ ಸತ್ತರು ಎಂದು ಕೆಲವರು ಹೇಳುತ್ತಾರೆ. ಆದರೆ ಕ್ರಾಂತಿಕಾರಿ ಮೂಲಗಳು ನೀಡಿದ ವರದಿಯಂತೆ ೧೬೦ಕ್ಕೂ ಹೆಚ್ಚು ಆಂಗ್ಲ ಸೈನಿಕರು ಮೃತರಾದರು.

ಗಾಯಾಳುಗಳಾದ ಕೆಲವರನ್ನು ಸೆರೆ ಹಿಡಿದ ಪೊಲೀಸರು ಅಮಾನುಷ ಚಿತ್ರಹಿಂಸೆ ನೀಡಿದರೂ ತಮ್ಮ ಸೈನಿಕ ಸಂಘಟನೆಯ ರಹಸ್ಯವನ್ನು ಅವರು ಬಿಟ್ಟು ಕೊಡಲಿಲ್ಲ.

ಸೂರ್ಯಸೇನ್?

“ಸೋಲು ಖಚಿತ” ಎಂದು ಸೂರ್ಯಸೇನ್‌ಗೆ ತಿಳಿಯಿತು. ಅಂದು ರಾತ್ರಿಯೇ ಅಳಿದುಳಿದ ಕ್ರಾಂತಿಕಾರಿಗಳನ್ನು ಹಲವು ಗುಂಪುಗಳನ್ನಾಗಿ ವಿಂಗಡಿಸಿದರು. ಕಡೆಯ ಹನಿ ರಕ್ತ ಇರುವವರೆಗೂ ಗುಡ್ಡಗಾಡುಗಳಲ್ಲಿ ಅವಿತುಕೊಂಡಿದ್ದು ಸರಕಾರದ ಸೈನಿಕರ ಮೇಲೆ, ಪೊಲೀಸರ ಮೇಲೆ ಬಿದ್ದು ಆಮಗ್ಲರನ್ನು ಹಣ್ಣುಗಾಯಿ ನೀರುಗಾಯಿ ಮಾಡಬೇಕು ಎಂದು ಅವರಿಗೆ ತಿಳಿಸದರು. ಎಲ್ಲರೂ ಅಲ್ಲಿಂದ ಬೇರೆ ಬೇರೆ ದಿಕ್ಕಿನಲ್ಲಿ ಚದುರಿದರು.

“ಜಲಾಲಾಬಾದ್ ಕದನ” ಭಾರತದ  ಕ್ರಾಂತಿಕಾರಿ ಇತಿಹಾಸಕ್ಕೆ ಹೊಸ ಚೈತನ್ಯ ತುಂಬಿತು. ಗಂಡಸರು ಹೆಂಗಸರು ಎನ್ನದೆ ಸಾವಿರಾರು ಮಂದಿ ತರುಣ ವರ್ಗದವರು ಕ್ರಾಂತಿಕಾರಿ ಸಂಗಟನೆಗಳನ್ನು ಸೇರಿಕೊಂಡರು. ಎಷ್ಟೋ ಜನ ಬಿಳಿಯ ಅಧಿಕಾರಿಗಳ ಕೊಲೆಗೆ ಮುಂದೆ ಈ ಹೋರಾಟವೇ ಪ್ರೇರಣೆಯಾಯಿತು.

 

ಕಟ್ಟಕಡೆಯವರೆಗೂ ಹೋರಾಡಲು ಸಿದ್ಧ

ಪಿಶಾಚಿಯಂತಹ ಸರಕಾರ

 

ಜಿಲ್ಲೆಯಾದ್ಯಂತ ಸೈನಿಕ ಕಾನೂನನ್ನು ಜಾರಿ ಮಾಡಿತು. ಜನರನ್ನು ಹೆದರಿಸಿ ಕಂಗೆಡಿಸುವುದು ಸರಕಾರದ ಉದ್ದೇಶ. ಪೊಲೀಸರಿಗೆ ಸರ್ವಾಧಿಕಾರ ನೀಡಲಾಯಿತು. ಕ್ರಾಂತಿಕಾರಿಗಳ ಶೋಧದ ಹೆಸರಿನಲ್ಲಿ ಮನೆ ಮನೆಗೆ ನುಗ್ಗಿದ ಬಿಳಿಯ ಸೈನಿಕರು ವೃದ್ಧರೆನ್ನದೆ ಬಾಲಕರೆನ್ನದೆ ಎಲ್ಲರನ್ನೂ ಹಿಂಸಿಸಿದರು. ಮಾತೆಯರಿಗೆ, ಅಕ್ಕತಂಗಿಯರಿಗೆ ಅಪಮಾನ ಮಾಡಿದರು. ಆದರೆ ಈ ಭಯೋತ್ಪಾದಕ ಕೃತ್ಯಗಳಿಂದ ಚಿತ್ತಗಾಂಗ್‌ನ ದೇಶಭಕ್ತ ಜನತೆ ತಲ್ಲಣಗೊಳ್ಳಲಿಲ್ಲ. ಅದರ ಬದಲು ಕ್ರಾಂತಿಕಾರಿಗಳಿಗೆ ನೆರವಾಗಬೇಕು ಎಂಬ ದೃಢ ನಿಶ್ಚಯದಿಂದ ಎದ್ದು ನಿಂತಿತು. ಯಾವೊಬ್ಬ ಕ್ರಾಂತಿಕಾರಿಯನ್ನೂ ಹಿಡಿದು ಕೊಡಲು ಜನರು ನೆರವಾಗಲಿಲ್ಲ. ಬದಲು ಕ್ರಾಂತಿಕಾರಿಗಳಿಗೆ ಆಶ್ರಯ ನೀಡಿದರು.

ಈ ಅತ್ಯಾಚಾರದ ಕಳವಳಕಾರಿ ಸುದ್ದಿಯನ್ನು ಪ್ರತಿದಿನ ಕೇಳಿದ ಅನಂತಸಿಂಹ ತನ್ನಿಂದಾಗಿ ಇದೆಲ್ಲ ನಡೆಯುತ್ತಿದೆ ಎನ್ನುವ ಭಾವನೆಯಿಂದ ತಾನಾಗಿ ಪೊಲೀಸರಿಗೆ ಸೆರೆ ಸಿಕ್ಕಿದ. ಆದರೂ ಪೊಲೀಸರ ಅತ್ಯಾಚಾರ ಕಡಿಮೆ ಆಗಲಿಲ್ಲ. ಅವರಿಗೆ ನಾಯಕ ಸೂರ್ಯಸೇನ್ ಬೇಕಾಗಿದ್ದರು.

ಕಲ್ಕತ್ತದ ಚಂದನ ನಗರದ ಮನೆಯೊಂದಕ್ಕೆ ಒಂದು ರಾತ್ರಿ ಪೊಲೀಸರು ಮುತ್ತಿಗೆ ಹಾಕಿದರು. ಚಾರ್ಲ್ಸ ಟ್ರೇಗರ್ಟ್ ಎನ್ನುವ ಕುಖ್ಯಾತ ಪೊಲೀಸ್ ಅಧಿಕಾರಿ ಈ ಮುತ್ತಿಗೆಯ ನಾಯಕತ್ವ ವಹಿಸಿದರು. ಗುಂಡಿನ ಸಂಗ್ರಹ ಇರುವ ತನಕ ವೀರಾವೇಶದಿಂದ ಕಾದಾಡಿದ ಲೋಕನಾಥ ಭಲ್ ಹಾಗು ಇತರ ನಾಲ್ವರು ಕ್ರಾಂತಿಕಾರಿಗಳು ಸೆರೆ ಸಿಕ್ಕಿದರು.

ಸೂರ್ಯಸೇನರ ಆದೇಶದಂತೆ ಚಿತ್ತಗಾಂಗ್ ಬಾರಿ ಸಾಲ್ ಮೊದಲಾದ ಹಲವು ಕಡೆಗಳಲ್ಲಿ ಕ್ರಾಂತಿಕಾರಿ ತಂಡಗರು ಯುದ್ಧ ನಡೆಸುತ್ತಲೇ ಇದ್ದರು. ಚಿತ್ತಗಾಂಗ್ ಪೊಲೀಸ್ ಸ್ಟೇಷನ್‌ಗೆ ಪ್ರಧಾನ ಅಧಿಕಾರಿ ಕೇನ್ ಆಗಮಿಸಿದಾಗ ಅವರ ಮೇಲೆ ಗುಂಡಿನ ದಾಳಿ ನಡೆಯಿತು. ಆದರೆ ಕೇನ್ ಬದಲು ಇನ್ನೋರ್ವ ಕುಖ್ಯಾತ ಅಧಿಕಾರಿ ತಾರಣಿ ಮುಖರ್ಜಿ ಬಲಿಯಾದರು. ರಾಮಕೃಷ್ನ ಹಾಗು ಕಾಳಿಪಾದ ಚಕ್ರವರ್ತಿ ಸೆರೆಯಾದರು. ರಾಮಕೃಷ್ಣನಿಗೆ ಗಲ್ಲಿನ ಶಿಕ್ಷೆ, ಕಾಳಿಪಾದನಿಗೆ ಅಜನ್ಮ ಕಾರಾಗೃಹ ವಾಸದ ಶಿಕ್ಷೆ ನೀಡಲಾಯಿತು.

ದುಷ್ಟ ಶಕ್ತಿಯ ವಿರುದ್ಧ ಎಳೆಯ ಕೈ

೧೯೩೧ರ ಅಗಸ್ಟ್ ತಿಂಗಳ  ಒಂದು ದಿನ. ಚಿತ್ತಗಾಂಗ್‌ನ  ನಾಗರಿಕರ ಮೇಲೆ ಅತ್ಯಾಚಾರ  ನಡೆಸಿದ ಪ್ರಮುಖ ಪೊಲೀಸ್ ಅಧಿಕಾರಿ ಅಸನುಲ್ಲಾ ಸಹ ಪ್ರೇಕ್ಷಕರಲ್ಲಿದ್ದ.

ಹುಡುಗನೊಬ್ಬ ನೇರವಾಗಿ ಅಸನುಲ್ಲಾನ ಎದುರಿಗೆ ಹೋಗಿ ನಿಂತು ಗುಂಡು ಹಾರಿಸಿ ಅಸನುಲ್ಲಾನನ್ನು ಕೊಲೆ ಮಾಡಿದ.

ಗುಂಡು ಹಾರಿಸಿದ ಹುಡುಗ ಹರಿಪಾದನಿಗೆ ವಯಸ್ಸು ಹದಿನಾಲ್ಕು ವರ್ಷ.

ಹರಿಪಾದ ಸೆರೆ ಸಿಕ್ಕ ನಂತರ ಆತನ ವೃದ್ಧ ತಂದೆ ತಾಯಿಗಳ ಮೇಲೆ ಭಾರಿ ಅತ್ಯಾಚಾರ ನಡೆಸಲಾಯಿತು. ಹರಿಪಾದನ ತಮ್ಮ, ಹಾಲು ಕುಡಿವ ಸಣ್ಣ ಮಗುವನ್ನು ತಾಯಿಯ ಎದುರಿಗೇ ನೆಲಕ್ಕೆ ಅಪ್ಪಳಿಸಿ ಕೊಲ್ಲಲಾಯಿತು. ಹರಿಪಾದ ವೀರ ಬಾಲಕನಂತೆ ಎಲ್ಲ ಹಿಂಸೆಗಳನ್ನೂ ಸಹಿಸಿದ, ಆದರೆ  ಬಾಯಿ ಬಿಡಲಿಲ್. ಅನಂತರ ಆತನಿಗೆ ಅಜನ್ಮ ಕರಿನೀರು(ಕಾಲಾಪಾನಿ) ಶಿಕ್ಷೆ ನೀಡಿ ಅಂಡಮಾನಿಕಗೆ ಕಳುಹಿಸಲಾಯಿತು.

೧೯೩೨ರಲ್ಲಿ ಚಿತ್ತಗಾಂಗ್ ಶಸ್ತ್ರಾಗಾರ ಕಾಂಡದ ವಿಚಾರಂನೆ ಪೂರ್ಣವಾಯಿತು. ೧೪ ಜನ ಕ್ರಾಂತಿಕಾರಿ ತರುಣರಿಗೆ ಕರಿನೀರು ಶಿಕ್ಷೆ ನೀಡಲಾಯಿತು. ಆದರೆ ಸೂರ್ಯಸೇನ್ ಹಾಗು ಅವರ ಐದು ಮಂದಿ ಜೊತೆಗಾರರು ಇನ್ನು ಪೊಲೀಸರಿಗೆ ಸಿಕ್ಕಿರಲಿಲ್ಲ.

ಕ್ಯಾಮರನ್ ಗುಂಡಿಗೆ ಬಲಿ

೧೯೩೨ರ ಜೂನ್ ೧೪. ಕ್ಯಾಪ್ಟನ್ ಕ್ಯಾಮರನ್ ನಾಯಕತ್ವದ ಸೈನಿಕ ದಳ ಸೂರ್ಯಸೇನರು ಅಡಗಿದ್ದ ಹಳ್ಳಿಯ ಮನೆಯೊಂದರ ಮೇಲೆ ಆಕ್ರಮಣ ನಡೆಸಿತು. ಐವರು ಕ್ರಾಂತಿಕಾರಿಗಳು ಸೂರ್ಯಸೇನರ ನಾಯಕತ್ವದಲ್ಲಿ ನೂರಾರು ಸೈನಿಕರ ವಿರುದ್ಧ ವೀರಾವೇಶದಿಂದ ಕಾದಾಡಿದರು. ಮನೆಯ ಮಾಳಿಗೆ ಹತ್ತುತ್ತಿದ್ದಂತೆ ಕ್ಯಾಮರನ್ ಸೂರ್ಯಸೇನರ ಗುಂಡಿಗೆ ಆಹುತಿಯಾದ. ಇಬ್ಬರು ಕ್ರಾಂತಿಕಾರಿಗಳೂ ವೀರಸ್ವರ್ಗ ಸೇರಿದರು. ಸೂರ್ಯಸೇನರು ಪ್ರಿತಿಲತಾ ವದ್ದೆದಾರ್ ಹಾಗೂ ಕಲ್ಪನಾದತ್ ಎನ್ನುವ ಕ್ರಾಂತಿಕಾರಿ ತರುಣಿಯರೊಂದಿಗೆ ಪರಾರಿಯಾದರು.

ಪ್ರೀತಿಲತಾ ಹುತ್ಮಾತ್ಮಳಾದಳು

೧೯೩೨ರ ಸಪ್ಟಂಬರ್ ೨೨. ಚಿತ್ತಗಾಂಗ್‌ನ ಪಹರ್ತಲಿ ಎನ್ನುವಲ್ಲಿ ಬಿಳಿಯರು ಹಾಗೂ ಆಂಗ್ಲೋ ಇಂಡಿಯನ್ನರು ತಮ್ಮ ಕ್ಲಬ್ ಒಂದರಲ್ಲಿ ನರ್ತನ ಕೂಡದಲ್ಲಿ ಸೇರಿದ್ದರು.  ಪ್ರೀತಿಲತಾ ವದ್ದೆದಾರ್ ಕೆಲವು ಕ್ರಾಂತಿಕಾರಿ ತರುಣಿಯರೊಂದಿಗೆ ಹಠಾತ್ತಾಗಿ ದಾಲಿ ಮಾಡಿ ಕ್ಲಬ್ಬಿನ ನಡುವೆ ಬಾಂಬ್ ಎಸೆದಳು. ಬಿಳಿಯರೂ ಪಿಸ್ತೂಲು ಹಿಡಿದು ಕಾದಾಟ ನಡೆಸಿದರು. ಒಬ್ಬ  ಬಿಳಿಯ ಮಹಿಳೆ ಹಾಗೂ ಒಬ್ಬ ಅಧಿಕಾರಿ ಮಞರತರಾಗಿ ಇತರ ೧೩ ಜನ ಗಾಯಗೊಂಡರು. ಪ್ರೀತಿಲತಾಗೆ ಗುಂಡಿನ ಗಾಯವಾಗಿ ಓಡಲಾಗಲಿಲ್ಲ. ಆದರೆ ಸೆರೆ ಸಿಕ್ಕುವ ಅವಮಾನ ತಪ್ಪಿಸಲು ಬೇಕಾದ ತಯಾರಿಯೊಂದಿಗೆ ಬಂದ ಆ ವೀರವನಿತೆ ಪೊಟ್ಯಾಸಿಯಂ ಸೈನೈಡ್ ಎಂಬ ವಿಷಕಾರಿ ಆಮ್ಲ ಕುಡಿದು ವೀರಸ್ವರ್ಗ ಸೇರಿದಳು.

ಭಾರತದ ಸ್ತ್ರಿ ಕುಲಕ್ಕೆ ರತ್ನಪ್ರಾಯಳಾದಳು. ಆದರ್ಶಳಾದಳು. ಇಪ್ಪತ್ತು ವರ್ಷವನ್ನೂ ಕಾಣದಿದ್ದ ತರುಣಿ.

ಸೂರ್ಯಸೇನರಾದರೋ ಈ ಎಲ್ಲ ಯೋಜನೆಗಳ ಹಿಂದೆ ಸೂತ್ರಧಾರರಾಗಿದ್ದರು.  ಪ್ರೀತಿಲತಾ ಹುತಾತ್ಮಳಾದಾಗ ಅವರು ಎಳೆಯ ಬಾಲನಂತೆ ಕಣ್ಣೀರು ಹರಿಸಿದರು. ಆದರೆ ತಮ್ಮ ಸಂಕಲ್ಪದಿಂದ ಚ್ಯುತರಾಗಲಿಲ್ಲ.

ಆದರೆ ಕೊನೆಗೊಮ್ಮೆ, ನಿರ್ಮಲ ಹೃದಯದ ಸೂರ್ಯಸೇನ್ ಪೊಲೀಸರ ವಂಚನೆ ಅರಿಯದೆ ಹೋದರು. ಪೊಲೀಸ್ ಗುಪ್ತಚರನಾದ ಖುಫಿಯಾ ಎನ್ನುವ ವ್ಯಕ್ತಿ ಕ್ರಾಂತಿಕಾರನಂತೆ ಸೋಗು ಧರಿಸಿ ಸೂರ್ಯಸೇನರ ಶಿಷ್ಯನಾದ.

ಮೋಸ ಗೆದ್ದಿತು

೧೯೩೩ರ ಜನವರಿ ೧೬ ರಂದು ಸೂರ್ಯಸೇನರು ತಮ್ಮ ಕ್ರಾಂತಿಕಾರಿ ಶಿಷ್ಯೆ ಕಲ್ಪನಾ ದತ್ ಜೊತೆಗೆ ಗೊಯಿರಾಲ ಗ್ರಾಮದ ಮನೆಯೊಂದಕ್ಕೆ ಹೋದರು. ಈ ವಮಚಕ ಶಿಷ್ಯ ಹತ್ತಿರದ ಪೊಲೀಸ್ ಠಾಣೆಗೆ ಓಡಿದ. ಪೊಲೀಸರು ಮುತ್ತಿಗೆ ಹಾಕಿದರು. ಸೂರ್ಯಸೇನ್ ಮತ್ತು ಕಲ್ಪನಾದತ್ ದಿಟ್ಟ ಹೋರಾಟದ ನಡೆಸಿದರು. ಕಲ್ಪನಾ ದತ್ ಹೋರಾಟ ನಡೆಸುತ್ತಿದ್ದಾಗ ಸೂರ್ಯಸೇನ್ ಹತ್ತಿರದ ಕೊಳವೊಂದರಲ್ಲಿ ಮುಳುಗಿ ಕುಳೀತರು. ಆದರೆ ಅವರ ವಂಚಕ ಶಿಷ್ಯ ಇಲ್ಲೂ ಹಿಂಬಾಲಿಸಿದ್ದ. ಸೂರ್ಯಸೇನ್ ಅವರನ್ನು ಸೆರೆ ಹಿಡಿಯಲಾಯಿತು.

ಆದರೆ “ಕಳ್ಳ ಶಿಷ್ಯ” ಹೆಚ್ಚು ದಿನ ಬದುಕಿ ಉಳಿಯಲಿಲ್ಲ. ಸೂರ್ಯಸೇನರು ಗಲ್ಲಿಗೇರುವ ಮೊದಲೇ ಈತ ಕ್ರಾಂತಿಕಾರಿಗಳ ಗುಂಡಿನ ದಾಳಿಗೆ ಆಹುತಿಯಾದ. ಕಲ್ಪನಾದತ್ ಹಾಗು ಇನ್ನೋರ್ವ ಕ್ರಾಂತಿಕಾರಿ ತಾರಕೇಶ್ವರ ಸೆರೆಯಾದರು.

ಸೂರ್ಯಸೇನರನ್ನು ಸೆರೆ ಹಿಡಿದರೂ ಪೊಲೀಸರು ನಿರಾತಂಕವಾಗಿ ಉಸಿರಾಡಿಸಲಾರದೆ  ಹೋದರು. ಅವರು ಜೈಲಿನಿಂದಲೂ ಪರಾರಿ ಆಗಬಹುದು ಎನ್ನುವ ಭೀತಿ ಪೊಲೀಸರಿಗೆ. ಅದಕ್ಕಾಗಿ ಶೀಘ್ರವೇ ಅವರ ಮೊಕದ್ದಮೆಯ ವಿಚಾರಣೆಯನ್ನು ಜೈಲಿನಲ್ಲಿಯೇ ಮುಗಿಸಿ ಮಹಾನ್ ಕ್ರಾಂತಿಕಾರಿ ನಾಯಕ ಮಾಸ್ಟರ್ ದಾ ಅವರಿಗೆ ಮರಣ ದಂಡನೆ ನೀಡಲಾಯಿತು. ತಾರಕೇಶ್ವರನಿಗೆ ನೇಣುಗಂಬದ ಸೌಭಾಗ್ಯ ದೊರೆಯಿತು. ಕಲ್ಪನಾದತ್ ಮಾತ್ರ ಅಜನ್ಮ ಕರಿನೀರು  ಶಿಕ್ಷೆ ಪಡೆದು ಅಂಡಮಾನಿಗೆ ಸಾಗಿಸಲ್ಪಟ್ಟಳು.

ಮರಣದಂಡನೆಗೆ ಸೂರ್ಯಸೇನ್ ಮತ್ತು ತಾರಕೇಶ್ವರನನ್ನ ಚಿತ್ತಗಾಂಗ್ ಜೈಲಿಗೆ ತರಲಾಯಿತು. ಅಲ್ಲಿ ಮಾಸ್ಟರ್ ದಾ ಅವರು ಕೆಲವು ದಿನ ಸೆರೆಮನೆಯಲ್ಲಿ ಕಳೆಯಬೇಕಾಗಿ ಬಂದಾಗ, ಕೆಲವು ದಿನ ಸೆರೆಮನೆಯಲ್ಲಿ ಕಳೆಯಬೇಕಾಗಿ ಬಂದಾಗ, ಕೆಲವು ್ಪುಸ್ತಕಗಳನ್ನಾದರೂ ತಮಗೆ ಒದಗಿಸುವಂತೆ ಸರಕಾರವನ್ನು ಪ್ರಾರ್ಥಿಸಿದರು. ಆದರೆ ಸರಕಾರ ಇಷ್ಟಕ್ಕೂ ಒಪ್ಪಲಿಲ್ಲ. ಕೊನೆಗೆ ಬಿಳಿಯ ಅಧಿಕಾರಿಯೊಬ್ಬ ರಾಮಾಯಣದ ಪ್ರತಿಯೊಂದನ್ನು ಅವರಿಗೆ ನೀಡಿದ; ಕ್ರಾಂತಿಕಾರಿ ನಾಯಕನಿಗೆ ಅಂತಿಮ ಘಳಿಗೆಯಲ್ಲಿ ಆಶ್ಯಾತ್ಮಿಕ ಚಿಂತನೆಗೆ ಅವಕಾಶ ಮಾಡಿಕೊಟ್ಟ.

ಸೂರ್ಯಸೇನರನ್ನು ಸೆರೆ ಹಿಡಿದಲ್ಲಿ ಎಲ್ಲ ಕ್ರಾಂತಿಕಾರಿ ಚಟುವಟಿಕೆ ಮುಕ್ತಾಯಗೊಳ್ಳುವುದೆಂದು ಪೊಲೀಸರ ಲೆಕ್ಕವಾಗಿತ್ತು. ಆದರೆ ಅದು ಸುಳ್ಳಾಯಿತು.

ಕ್ರಿಕೆಟ್ ಮೈದಾನದಲ್ಲಿ ಎಂತಹ ಆಟ !

೧೯೩೪ರ ಜನವರಿ ೧೨. ಚಿತ್ತಗಾಂಗ್‌ನ ಬೃಹತ್ ಮೈದಾನದಲ್ಲಿ ಎರಡು ಬಿಳಿಯ ತಂಡಗಳೊಳಗೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ನೂರಾರು ಬಿಳಿಯರು ಪಂದ್ಯ ನೋಡುತ್ತಿದ್ದರು. ಅಷ್ಟರಲ್ಲಿ ನಾಲ್ಕು ಮಂದಿ ಕುಡಿ ಮೀಸೆಯ ತರುಣರು ಬಿಳಿಯರು ಮೇಲೆ ಹಠಾತ್ ಆಕ್ರಮಣ ಮಾಡಿದರ. ಅಂದು ಸೂರ್ಯಸೇನ್ ಮತ್ತು ತಾರಕೇಶ್ವರರನ್ನು ಗಲ್ಲಿಗೆ ಹಾಕುವ ದಿನ. ತಮ್ಮ ಕ್ರಾಂತಿಕಾರಿ ನಾಯಕನ ಅಂತ್ಯವನ್ನು ಸಹಿಸಲಾಗದ ಈ ನಾಲ್ವರು, ಬಿಳಿಯರಲ್ಲಿ ಶಾಶ್ವತ ಭೀತಿ ಹುಟ್ಟಿಸಲು ಸ್ವಪ್ರೇರಣೆಯಿಂದ ಈ ಸಾಹಸಕ್ಕೆ ಕೈ ಹಾಕಿದ್ದರು. ಹಲವು ಬಿಳಿಯರು ಮೃತರಾದರು. ಹಲವರು ಗಾಯಗೊಂಡರು. ಕ್ರಾಂತಿಕಾರಿಗಳಲ್ಲಿ ಇಬ್ಬರು ವೀರಸ್ವರ್ಗ ಪಡೆದರು. ಇನ್ನಿಬ್ಬರಿಗೆ ಮರಣದಂಡನೆಯಾಯಿತು.

ವಿಫಲ ಪ್ರಯತ್ನ

ಸೂರ್ಯಸೇನರನ್ನು ಜೈಲಿನಿಂದ ಪಾರು ಮಾಡುವ ಸಲುವಾಗಿಯೇ ಯತ್ನ ನಡೆದಿತ್ತು. ವಿನೋದ ಬಿಹಾರಿ ದತ್  ಹಾಗೂ ಇತರರು  ಸುರೇಶ ವಣಿಕ್  ಎನ್ನುವವರ ಮನೆಯಲ್ಲಿ ರಹಸ್ಯ ಸಭೆ ನಡೆಸಿ ಯೋಜನೆ ರೂಪಿಸಿದ್ದರು. ಆದರೆ ದುರದೃಷ್ಟವಷಾತ್ ಈ ಯೋಜನೆಯನ್ನು ಕಾರ್ಯರೂಪಕ್ಕೆ  ತರಲಾಗಲಿಲ್ಲ.

ವಿನೋದ ಬಿಹಾರಿಯನ್ನು ಸೆರೆ ಹಿಡಿಯಲು ಪೊಲೀಸರು ಸರ್ವಯತ್ನ ಮಾಡಿದ್ದರು. ೧೫ ಸಾವಿರ ರುಪಾಯಿ ಬಹುಮಾನ ಘೋಷಿಸಿದ್ದರು. ಆದರೆ ವಿನೋದ ಬಿಹಾರಿಯನ್ನು ಯಾರೂ ಹಿಡಿದು ಕೊಡಲಿಲ್ಲ.

ಸಿಂಹ ಕಡೆಯವರೆಗೂ ಸಿಂಹವೇ!

೧೯೩೪ರ ಜನವರಿ ೧೨ರ ಮಧ್ಯರಾತ್ರಿ, ಮಾಸ್ಟರ್ ದಾ ಧ್ಯಾನಮಗ್ನ ತಪಸ್ವಿಯಮತೆ ಕುಳಿತಿದ್ದರು. ಸಿಪಾಯಿಗಳು ಅವರನ್ನು ಎಚ್ಚರಿಸಿದರು. ದಾ ಅವರಿಗೆ ಅವರ ಕರೆ ಅರ್ಥವಾಗಿತ್ತು. ಎದ್ದು ಘರ್ಜಿಸುತ್ತಾ ಫಾಸಿ ಕಂಬದತ್ತ ನಡೆದರು. ಅವರ ವೀರಕಂಠ ಜೈಲಿನ ಆವರಣದಲ್ಲೆಲ್ಲ ಪ್ರತಿಧ್ವನಿಸಿತು. ವಿವಿಧ ಕೋಣೆಗಳಲ್ಲಿದ್ದ ಕ್ರಾಂತಿಕಾರಿ ಸಿಂಗಳು ಎಚ್ಚೆತ್ತು, ನಾಯಕನ ಘರ್ಜನೆಯ ಅರ್ಥ ಅರಿತವು. ಕೆಲವೇ ನಿಮಿಷಗಳಲ್ಲಿ ಜೈಲಿನ ಪ್ರತಿಯೊಂದು ಕಲ್ಲೂ “ವಂದೇ ಮಾತರಂ” ಘರ್ಜನೆಯಿಂದ ನಡುಗತೊಡಗಿತು.

ಮಾಸ್ಟರ್ ದಾ ಅವರನ್ನು ರಹಸ್ಯವಾಗಿ ಗಾಡಾಂಧಕಾರದಲ್ಲಿ ಗೆಲ್ಲಿಗೇರಿಸಬೇಕು ಎಂದು ಪೋಲಿಸರ ಹಂಚಿಕೆ. ಅದು ಈ ರೀತಿ ವಿಫಲವಾದಾಗ, ಮಾಸ್ಟರ್ ದಾ ಅವರ ದುರ್ಬಲ ಶರೀರದ ಮೇಲೆ ಪೊಲೀಸರ ಲಾಠಿಗಳು  ತಿರುಗಿದವು. ಆದರೆ ಒಂದೊಂದು ಏಟಿಗೂ “ವಂದೇ ಮಾತರಂ” ಇನ್ನಷ್ಟು ಜೋರಾಗಿ ಮೊಳಗಿತು. ಕೊನೆಗೆ ಏಟುಗಳನ್ನು ತಾಳಲಾರದೆ ನೆಲಕ್ಕೆ ಬಿದ್ದ ಅವರನ್ನು ಕೊಂಡೊಯ್ದು ನೇಣುಗಂಬಕ್ಕೆ ಬಿಗಿಯಲಾಯಿತು. ಅದೇ ವೇಳೆ ತಾರಕೇಶ್ವರ, ದಸ್ತಿದಾರರನ್ನೂ ಗಲ್ಲಿಗೆ ಹಾಕಲಾಯಿತು.

ಬೂದಿಯನ್ನು ಕಂಡರೂ ಸಾಮ್ರಾಜ್ಯಕ್ಕೆ ನಡುಕ !

ಹಳ್ಳಿಯಬಡ ರೈತನಿಂದ ಸುಶಿಕ್ಷಿತ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರವರೆಗೆ ಎಲ್ಲರಲ್ಲಿ ದೇಶಭಕ್ತಿಯ ಜಾಗೃತಿ ಉಂಟುಮಾಡಿದ ಮಹಾನ್ ದೇಶಪ್ರೇಮಿ, ಕುಶಲ ಸಂಘಟಕ ಸೂರ್ಯಸೇನ್‌ರ ಅಂತ್ಯವಾಯಿತು. ಆದರೆ ಅವರ ಮೃತದೇಹವನ್ನು ಜನರಿಗೆ ಬಿಟ್ಟು ಕೊಡಲು ಬಿಳಿಯ ಸರಕಾರಕ್ಕೆ ಅಂಜಿಕೆ. ಅವರನ್ನು ಸುಟ್ಟರೆ ಅವರ ಚಿತಾಭಸ್ಮದ ಕಣಗಳು ಗಾಲಿಯಲ್ಲಿ ಪಸರಿಸಿ ಕ್ರಾಂತಿಗೀತೆಯನ್ನು ಹಾಡುವವೋ ಎನ್ನುವ ಭೀತಿ. ಅದಕ್ಕಾಗಿ ಅವರು ಪಾರ್ಥಿವ ಶರೀರವನ್ನು ಭಾರವಾದ ಕಲ್ಲುಗಳಿಗೆ ಕಟ್ಟಿ ಸಾಗರದ ಮಧ್ಯ ಕೊಂಡೊಯ್ದು ಮೊಸಳೆ, ತಿಮಿಂಗಲಗಳಿಗೆ ಆಹಾರವಾಗಿ ಎಸೆಯಲಾಯಿತು.

ಆದರೆ ಸೂರ್ಯಸೇನ್ ಸ್ವಾತಂತ್ರ್ಯ ಇತಿಹಾಸದ ಅಗಸದಲ್ಲಿ ಚಿರತಾರೆಯಾಗಿ ಉಳಿದರು.

ಒಂದು ಸಾಮ್ರಾಜ್ಯ ಒಬ್ಬ ವ್ಯಕ್ತಿಗೆ ಬೆದರಿತೆಂದರೇ ಅಚ್ಚರಿಯಾಗುತ್ತದೆ.ಬದುಕಿದ್ದ ಸೂರ್ಯಸೇನರನ್ನು ಕಂಡರೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೆದರಿಕೆ, ಸತ್ತ ನಂತರ ಅವರ ಬೂದಿಯನ್ನು ಕಂಡರೂ ಈ ವಿಶಾಲ, ಪ್ರಬಲ ಸಾಮ್ರಾಜ್ಯಕ್ಕೆ ಹೆದರಿಕೆ ! ಅಂತಹ ವೀರ ಅಸಾಧಾರಣ ಸಂಘಟಕ, ಹುತಾತ್ಮ ಸೂರ್ಯಸೇನರು.