ಪ್ರಾಕ್ತನ ಮಾನವನನ್ನು ಗಾಬರಿಗೀಡುಮಾಡಿದ ಎರಡು ಪ್ರಾಕೃತಿಕ ಶಕ್ತಿಗಳೆಂದರೆ ಸೂರ‍್ಯ ಮತ್ತು ಚಂದ್ರ. ಒಬ್ಬ ತಾಪದಾಯಕನು; ಇನ್ನೊಬ್ಬ ಸದಾ ತಂಪನ್ನೀಯುವವನು, ಒಬ್ಬನು ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಿದರೆ ಇನ್ನೊಬ್ಬನು ದಿನದಿನಕ್ಕೂ ತನ್ನ ಅವಸ್ಥೆಗಳನ್ನೂ ಬದಲಿಸುತ್ತಾ ಇಂದು ವೃದ್ಧಿಯಾಗಿ ನಾಳೆ ಕ್ಷೀಣಿಸುವವನು. ಈ ಈರ್ವರ ಈ ವೈಚಿತ್ರ್ಯ ಸಹಜವಾಗಿ ಪ್ರಾಕ್ತನ ಮಾನವನ ಕುತೂಹಲ ಕೆರಳಿಸಿತು. ಅವನು ತನ್ನ ಪರಿಸರದ ಜೀವಿಗಳೊಡನೆ ನಿಕಟ ಸಂಪರ್ಕವನ್ನು ಏರ್ಪಡಿಸಿಕೊಂಡಿರದಿದ್ದರೆ, ನೈಸರ್ಗಿಕ ವ್ಯಾಪಾರಗಳನ್ನು ತನ್ನದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಂಡಿರದಿದ್ದರೆ, ಇನ್ನೂ ಪ್ರಾಕ್ತನ ಮಾನವನಾಗಿಯೇ ಉಳಿಯುತ್ತಿದ್ದನೊ ಏನೊ. ’ಕುತೂಹಲ, ವೀಕ್ಷಣ, ಕಲ್ಪನೆ, ಚಿಂತನೆ, ಮತ್ತು ಪ್ರಯೋಗಶೀಲತೆಗಳು ಮಾನವನ ಮೂಲ ಪ್ರವೃತ್ತಿಗಳು’

[1]. ಸಹಜವಾಗಿಯೇ ನಿಸರ್ಗದ ಪ್ರತಿಯೊಂದು ವಸ್ತುವೂ- ಆಕಾಶ, ಸೂರ‍್ಯ, ಚಂದ್ರ, ನಕ್ಷತ್ರ, ಮೋಡ-ಮಳೆ, ಗಾಳಿ, ಬೆಂಕಿ, ನೀರು, ಕಲ್ಲು, ಮಣ್ಣು ಇತ್ಯಾದಿ-ಅವನ ಕುತೂಹಲವನ್ನು ಕೆರಳಿಸಿದವು; ಚಿಂತನೆಯನ್ನು ಪ್ರೇರಿಸಿದವು; ಕಲ್ಪನೆಯನ್ನು ಜಿಗಿಸಿದವು.

ಯಾವುದಾದರೂ ವಸ್ತುವಿಷಯದ ಇತಿಹಾಸವನ್ನು ಹೇಳುವಾಗ ಸೂರ‍್ಯಚಂದ್ರರಂತೆ ಅನಾದಿಯಾದುದು ಎಂದು ಹೇಳುವುದು ವಾಡಿಕೆ. ಇಂಥ ಆದಿ ಅನಾದಿತ್ವವನ್ನು ಪಡೆದಿರುವ ಸೂರ‍್ಯನ ಬಗೆಗೆ ಪ್ರಪಂಚದಾದ್ಯಂತ ಅಪಾರ ಜಾನಪದ ಸಾಮಗ್ರಿ ಲಭಿಸುತ್ತದೆ. ಸೂರ‍್ಯ- ಅವನ ಹುಟ್ಟು, ಅವನ ವಾಹನ, ಆರಾಧನೆ, ಚಂದ್ರನೊಡನೆ ಅವನ ಸಂಬಂಧ. ಸೂರ‍್ಯ ಗ್ರಹಣ, ಸೂರ‍್ಯನ ಬಗೆಗಿನ ನಂಬಿಕೆಗಳು, ಸಂಪ್ರದಾಯಗಳು, ಆಚರಣೆಗಳು, ಕಥೆ ಪುರಾಣಗಳು ಒಟ್ಟಾರೆಯಾಗಿ ಸೂರ‍್ಯ ಸಂಬಂಧಿಯಾದ ಎಲ್ಲ ಬಗೆಯ ಜ್ಞಾನ ಅಥವಾ ತಿಳಿವಳಿಕೆ (lore)ಯನ್ನು ಸೂರ‍್ಯ ಜಾನಪದ ಎಂದು ಗುರುತಿಸಲಾಗಿದೆ. ಡಾ. ಎಂ. ಚಿದಾನಂದಮೂರ್ತಿ ಅವರ ’ಪೂರ್ಣ ಸೂರ‍್ಯಗ್ರಹಣ’ (೧೯೮೨) ಕೃತಿಯನ್ನು ಹೊರತುಪಡಿಸಿದರೆ ವಿಶಿಷ್ಟಪೂರ್ಣವಾದ ಸೂರ‍್ಯ ಸಂಬಂಧಿ ಜಾನಪದ ಸಾಮಗ್ರಿಯ ಸಮಗ್ರ ಸಂಗ್ರಹಕಾರ್ಯ ಇನ್ನೂ ವ್ಯಾಪಕವಾಗಿ ನಡೆಯಬೇಕಾಗಿದೆ: ಕ್ರಮಬದ್ಧವಾದ ಗಂಭೀರ ಅಧ್ಯಯನ ಸಾಗಬೇಕಗಿದೆ.

ಪ್ರಕೃತ ಪ್ರಬಂಧ ’ಸೂರ‍್ಯ ಜಾನಪದ’ವನ್ನು ಕುರಿತಿರುವುದು ಸರಿಯಷ್ಟೆ. ಆದರೆ ಸೂರ‍್ಯನ ಬಗೆಗೆ ಆಧುನಿಕ ವಿಜ್ಞಾನ ತಳೆದಿರುವ ನಿಲುವು, ಹೊರಗೆಡವಿರುವ ಸಂಗತಿಗಳು ಈ ಪ್ರಬಂಧದವ್ಯಾಪ್ತಿಯಿಂದ ಹೊರಗು. ಜನಪದರು ಸೂರ‍್ಯನನ್ನು ಅರ್ಥಮಾಡಿಕೊಂಡ ರೀತಿ, ಸೂರ‍್ಯನ ಕುರಿತಾದ ಅವರ ತಿಳಿವಳಿಕೆಯಷ್ಟೇ ಇಲ್ಲಿ ಪರಿಶೀಲನೆಗೊಳಗಾದ ಸಂಗತಿಗಳು; ವಸ್ತು ವಿಷಯಗಳು.

ಪ್ರಪಂಚದ ಎಲ್ಲ ಸಂಸ್ಕೃತಿ, ಭಾಷೆ, ಸಾಹಿತ್ಯಗಳಲ್ಲೂ ಸೂರ‍್ಯನ ಪ್ರಸ್ತಾಪ ಸಾಮಾನ್ಯವಾಗಿ ಕಂಡುಬರುತ್ತದೆ. ಸೂರ್ಯೋದಯ, ಸೂರ್ಯಾಸ್ತಗಳ ವರ್ಣನೆಯಂತೂ ಕಡ್ಡಾಯವೇನೋ ಎನ್ನುವಂತೆ ಬಹುತೇಕ ಎಲ್ಲ ಕವಿ ಕಾವ್ಯಗಳಲ್ಲೂ ಇದೆ. ಆದರೆ ಸೂರ‍್ಯನ ಬಗೆಗೆ ಜನಪದರಲ್ಲಿ ಪ್ರಚಲಿತವಿದ್ದ ಪರಂಪರಾಗತ ಜ್ಞಾನ (traditional lore)ವನ್ನು ಯಾವ ಗಣ್ಯ ಕವಿಯೂ ವಿಶದವಾಗಿ ಪ್ರಸ್ತಾಪಿಸದಿರುವುದು ದೊಡ್ಡ ಲೋಪವೆಂದೇ ಹೇಳಬೇಕಗಿದೆ. ಇಷ್ಟಾದರೂ ಸದ್ಯ ಲಭ್ಯವಿರುವ ಸೂರ‍್ಯ ಸಂಬಂಧಿ ಜಾನಪದ ಸಾಮಗ್ರಿ ಅಧ್ಯಯನ ಯೋಗ್ಯವಾಗಿದೆ.

ವೇದ, ಪುರಾಣ, ಕಾವ, ಕಥೆಗಳಲ್ಲಿ ಸೂರ‍್ಯನಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ದೊರೆಯುತ್ತದೆ. ವೇದದಲ್ಲಿ ’ಸೂರ‍್ಯ’ನಿಗೆ ಮಿತ್ರ, ಪೂಷಾ, ಭುಗಃ, ಆದಿತ್ಯ, ಸವಿತೃ, ಅರ್ಕ, ಭಾಸ್ಕರ ಹೀಗೆ ಅನೇಕ ಹೆಸರುಗಳಿವೆ. ಇವುಗಳಲ್ಲಿ ಸವಿತಾ, ಪೂಷಾ, ಭಗಃ ಎಂಬ ಶಬ್ದಗಳು ಸೂರ‍್ಯನೆಂಬ ಅರ್ಥವನ್ನು ಬೋಧಿಸುವುದರಲ್ಲಿ ಹೆಚ್ಚು ಪ್ರಯುಕ್ತವಾಗಿವೆ ಎಂದು ಹೇಳಿದೆ.[2] ಋಗ್ವೇದ ವ್ಯಾಖ್ಯಾನಕಾರರು ’ಆದಿತ್ಯ’ ಪ್ರಯೋಗ ಕುರಿತು ಚರ್ಚಿಸುತ್ತಾ ಅದು ಕೆಲವು ಕಡೆಗಳಲ್ಲಷ್ಟೇ ’ಸೂರ‍್ಯ’ ಎಂದರ್ಥದಲ್ಲಿ ಪ್ರಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕತ್ತಲೆ ಅಥವಾ ಅಜ್ಞಾನವನ್ನು ತೊಲಗಿಸುವವನು ಎಂಬರ್ಥದಲ್ಲಿ ’ಆದಿತ್ಯ’ ಪ್ರಯೋಗ ಆಗಿದೆ ಎಂದೂ ಕೆಲವರ ಅಭಿಮತ.[3] ಮಿತ್ರ (ಹಗಲಿದೆ ಅಧಿಪತಿ), ವರುಣ (ರಾತ್ರಿಗೆ ಅಧಿಪತಿ), ಅರ್ಯಮಾ ಎಂಬುವವರು ಅದಿತಿಯ ಪುತ್ರರೆಂದೂ ಆದ್ದರಿಂದಲೇ ಇವರನ್ನು ಆದಿತ್ಯರೆಂದು ಅನೇಕ ಕಡೆಗಳಲ್ಲಿ ಕರೆದಿದೆ.[4] ’ಮಿತ್ರ’ ಸಂಕೇತವು ಸೂರ‍್ಯವಾಚಕ ಎಂಬುದು ಸರ್ವಮಾನ್ಯವಿದೆ. ಅಗ್ನಿಮಿತ್ರ ವರುಣರಿಗೆ ಸೂರ‍್ಯನೇ ನೇತ್ರನೆಂದು (ಋ. ಸಂ. ೧೦-೩೭-೧) ಒಂದು ಋಕ್ಕಿನಲ್ಲಿ ಸ್ಪಷ್ಟಪಡಿಸಿದೆ. ಇಲ್ಲೆಲ್ಲಾ ದೈವತ್ವವೇ ಪ್ರಧಾನವೆಂಬ ಗ್ರಹಿಕೆಗೆ ಆಸ್ಪದವಿದೆ. ’ವರುಣ’ನು ರಾತ್ರೀದೇವರೆಂದು ಸೂಚಿಸುವ ಸೂಕ್ತಿಗಳೇ ಇವೆ (ಹೀಗೆ ಸೂರ‍್ಯನು ರಾತ್ರಿಯ ಪುತ್ರನೆಂದು ವರ್ಣಿಸುವ ವೇದದ ಕವಿಯು ಸೂರ‍್ಯ-ಚಂದ್ರ ಇವರಿಬ್ಬರೊಳಗಿನ ಅಂತರವನ್ನು ಇಲ್ಲವಾಗಿಸಿದ್ದಾನೆ). ಯುರೋಪಿನಲ್ಲಿ ಹಿಂದೆ ರಾತ್ರಿ ಸೂರ‍್ಯ  (Nocturnal Sun)ನ ಆರಾಧನೆ ಹೆಚ್ಚು ಪ್ರಚುರನಾಗಿದ್ದ ಕಾಲದಲ್ಲಿ ಸುಮೇರಿನಲ್ಲಿ ಸೂರ‍್ಯ ಸಂಬಂಧ. ವಾದ ಸಾಮೂಹಿಕ ಆಚರಣೆ (ಒಂದು fertility cult ಆಗಿ ರೂಢಿಯಲ್ಲಿತ್ತೆಂದು ಕಾಣುತ್ತದೆ) ನಡೆಯುತ್ತಿದ್ದುದನ್ನು ಸಂಶೋಧಕರು ಗುರುತಿಸಿದ್ದಾರೆ. ಆಗ ಚಾಂದ್ರ ಸಂಪ್ರದಾಯ ಪ್ರಧಾನವಾಗಿದ್ದ ಇಜಿಪ್ತಿನಲ್ಲಿಯೂ ಸೂರ‍್ಯನ ಆರಾಧನೆಯು ಇದ್ದಿತು, ಆದರೆ ಆ ಸೂರ‍್ಯ ರಾತ್ರಿ ಸೂರ‍್ಯನೇ ಇರಬೇಕು ಎಂದು ಶಂ. ಬಾ. ಜೋಶಿ ಅವರು ಅಭಿಪ್ರಾಯ ಪಟ್ಟಿದ್ದಾರೆ.[5]

ಸೌರಪಂಥೀಯ ಭಾಷೆಯಲ್ಲಿ ಸೂರ‍್ಯ-ಸವಿತೃ ಇವು ಜ್ಞಾನದ ಪ್ರತೀಕಗಳು[6] ಋಗ್ವೇದದಲ್ಲಿ ಸೂರ‍್ಯ ಮತ್ತು ಸವಿತೃ ಎಂಬ ಇಬ್ಬರು ಸೂರ‍್ಯರ ಪ್ರಸ್ತಾಪವಿದೆ. ಒಬ್ಬನು ಭೌತಸೂರ‍್ಯನು; ’ಸವಿತೃ’ (ಭೌತ ಸೂರ‍್ಯನಲ್ಲ) ಸಂಕೇತವು (ಜ್ಞಾನ) ಪ್ರೇರಕ ಎಂಬರ್ಥದ ಸೂ ಸವ್ ಆಖ್ಯಾತದಿಂದ ನಿರ್ಮಿತವಾಗಿದೆ. ದೈವತ ಕಥೆಗಳಲ್ಲಾದರೂ ಸೂರ‍್ಯ-ಸವಿತೃ ಇಬ್ಬರನ್ನು ಪ್ರಕಾಶತತ್ತ್ವದ ಪ್ರತೀಕವಾಗಿಯೇ ಕಾಣಲಾಗಿದೆ. ವಾಸ್ತವವಾಗಿ ದೈವತ ಕಥೆಗಳೊಳಗಿನ ಸೂರ‍್ಯ=ಸವಿತೃವು ಶುದ್ದ ಸಾಂಕೇತಿಕ ಪ್ರತಿಮೆಯಾಗಿದೆ. ಪುರಾತನರಿಗೆ ಜೀವನ ಪ್ರೇರಣೆ ಪಡೆಯಲು ಕಾರಣವಾದ ಎರಡು ದಿವ್ಯ ದೈನತ ಪ್ರತಿಮೆಗಳೇ ಸೂರ‍್ಯ ಮತ್ತು ಚಂದ್ರರು. ಅವರು ತಮ್ಮ ಜೀವನಾನುಭವದ ಅರ್ಥವನ್ನು ಮೂರ್ತರೂಪದಲ್ಲಿ ಕಾಣುವಾಗಿನ ಸಾಂಕೇತಿಕ ಮಾನದಂಡವು ಮಾತ್ರ ಈ ಚಂದ್ರ ಅಥವಾ ಸೂರ‍್ಯ ಎಂದು ಶಂ. ಬಾ. ಜೋಶಿ ಅವರು ಹೇಳಿರುವುದು ಸುವರ್ಥನೀಯವೇ ಆಗಿದೆ.[7] ವೃತ್ರ ಹಂತಕನಾದ ಇಂದ್ರನು ಸೂರ‍್ಯನಪರ್ಯಾಯ ಸಂಕೇತವಾದರೆ ವೃತ್ರನು ಚಂದ್ರನ ಪರ್ಯಾಯ ಸಂಕೇತ ಎಂದು ವೇದದಲ್ಲಿ ಹೇಳಿದೆ. ಎಂದರೆ ಇಂದ್ರ=ಸೂರ‍್ಯ = ಸರ್ಪ; ಸರ್ಪ=ವೃತ್ರ=ಚಂದ್ರ ಎಂದು ಸಮೀಕರಿಸಿದಂತಾಗಿದೆ.[8] ಇಷ್ಟೇ ಅಲ್ಲ, ವ್ಯಾಖ್ಯಾನಕಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ’ಇರುಳಿನಿಂದ ಹಗಲು, ಮೃತ್ಯುವಿನಿಂದ ಜೀವ ಸೃಷ್ಟಿ’ ಎಂಬ ಸಿದ್ಧಾಂತವನ್ನನುಸರಿಸಿ ಸೂರ‍್ಯ ಚಂದ್ರರಲ್ಲಿ ಜನ್ಯ ಜನಕ ಭಾವವನ್ನು ಗುರುತಿಸಿರುವುದುಂಟು. ಅದರಂತೆ ಸರ್ಪಸೂರ‍್ಯರು ಪರಸ್ಪರರಿಗೆ ಜನ್ಮಕೊಡಬಲ್ಲರು. ರಾತ್ರಿ, ಸೂರ‍್ಯನಿಗೆ ತಾಯಿಯಾದರೆ ಸೂರ‍್ಯ ರಾತ್ರಿಗೆ ತಂದೆ ಎಂದು ವಿವರಿಸಲಾಗಿದೆ. ಇಲ್ಲಿ ಸೂರ‍್ಯ ಚಂದ್ರರನ್ನು ಸಮ ಸಮವಾಗಿ ಕಂಡಂತೆ ಭಾಸವಾಗುವುದಾದರೂ ಪ್ರಕೃತಿದೇವತೆಗಳಲ್ಲೆಲ್ಲ ಸೂರ‍್ಯನೇ ಹೆಚ್ಚು ಪವಿತ್ರ; ಅವನು ದೇವತೆಗಳ ದೇವತೆ ಎಂದು ಋಗ್ವೇದ ಹೊಗಳಿರುವುದನ್ನು ನಿರ್ಲಕ್ಷಿಸಲು ಆಗುವುದಿಲ್ಲ.

ಭಾರತೀಯ ಪುರಾಣಗಳಲ್ಲಿ ಸೂರ‍್ಯನ ಬಗೆಗೆ ವಿಫುಲವಾದ ಸಾಮಗ್ರಿ ಇದೆ. ಭಾರತೀಯ ಪುರಾಣಗಳ ಪ್ರಕಾರ ಸೂರ‍್ಯನು ಕಶ್ಯಪ ಮುನಿಯಿಂದ ಅದಿತಿಯಲ್ಲಿ ಜನಿಸಿದವನು. ಅವನಿಗೆ ಅನೇಕ ಹೆಂಡಿರು. ತ್ವಷ್ಟೃವಿನ ಮಗಳಾದ ಸಂಜ್ಞಾದೇವಿಯನ್ನು ಮದುವೆಯಾಗ ಯಮ, ಮನು, ಯಮುನೆಯೆಂಬ ಮೂವರು ಮಕ್ಕಳನ್ನು ಪಡೆದನು ಸೂರ‍್ಯನ ತೀಕ್ಷ್ಮ ಕಿರಣಗಳನ್ನು ತಾಳಿಕೊಳ್ಳಲಾರದೆ ತನ್ನ ನೆರಳಾದ ’ಛಾಯಾ’ಳನ್ನು ತನ್ನ ಜಾಗದಲ್ಲಿರಿಸಿ ಅವಳು ಓಡಿ ಹೋದ ಮೇಲೆ ಸೂರ‍್ಯನು ಛಾಯಾಳಿಂದ ಸಾವರ್ಣ ಶನೈಶ್ಚರರೆಂಬ ಇಬ್ಬರು ಪುತ್ರರನ್ನು ಪಡೆದ. ಸಂಜ್ಞಾಳು ಕುದುರೆ ರೂಪದಲ್ಲಿದ್ದಾಗ ಗಂಡು ಕುದುರೆಯಾಗಿ ಹೋಗಿ ಅವಳನ್ನು ಕೂಡಿ ಅಶ್ವಿನಿದೇವತೆಗಳನ್ನು ಹೊಂದಿದ.[9] ವಿಷ್ಣುಪುರಾಣ ಪ್ರಕಾರ ಸೂರ‍್ಯ ಜಾತರು ಒಂಬತ್ತು ಮಂದಿ.[10]

’ಸಂಜ್ಞಾ ಸೂರ‍್ಯನೊಂದಿಗಿದ್ದಾಗ ಸಂಜ್ಞಾಳ ತಂದೆ ವಿಶ್ವಕರ್ಮನು ಸೂರ‍್ಯನ ಜ್ಯೋತಿಯ ಒಂದು ಭಾಗವನ್ನು ಕತ್ತರಿಸಿದ. ಜ್ಯೋತಿಭಾರ್ಗದಿಂದ ಬೇರೆ ಬೇರೆ ದೇವತೆಗಳಿಗೆ ಆಯುಧಗಳನ್ನು ಮಾಡಿಕೊಟ್ಟ (ಉದಾ. ಶಿವನ ತ್ರಿಶೂಲ, ಸ್ಕಂದನ ಈಟಿ, ವಿಷ್ಣುವಿನ ಚಕ್ರ ಇತ್ಯಾದಿ). ಪ್ರತಿಯೊಬ್ಬ ದೇವತೆಯ ಬಳಿಯೂ ಸೂರ‍್ಯನ ಅಂಶವಿರುವುದರಿಂದ ಎಲ್ಲ ಹಿಂದೂದೇವಾಲಯಗಳಲ್ಲೂ ಸೂರ‍್ಯನ ವಿಗ್ರಹವಿರುತ್ತದೆ. ಸಂಜ್ಞಾ ಮತ್ತು ಛಾಯಾ ಇವರು ಕ್ರಮವಾಗಿ ಜೀವನ ಮತ್ತು ಮೃತ್ಯುವಿನ ಸಂಕೇತವಾಗಿರುವುದರಿಂದ ಸೂರ‍್ಯನು ಜೀವನ ಮೃತ್ಯುಗಳೆರಡರ ಅಧಿದೇವತೆಯೂ ಹೌದು.’[11]

ಪುರಾಣಗಳಲ್ಲಿ ಸೂರ‍್ಯನ ಬಗೆಗೆ ಇನ್ನೂ ಹೆಚ್ಚಿನ ವಿವರಗಳಿವೆ. ಸೂರ‍್ಯನ ಅಂಶದಿಂದ ಸುಗ್ರೀವ ಜನಿಸಿದ್ದು, ಸೂರ‍್ಯನಿಂದ ಕುಂತಿ ಕರ್ಣನನ್ನು ಪಡೆದದ್ದು (ಕರ್ಣನು, ಚಂದ್ರನಿಂದ ಕುಂತಿಯಲ್ಲಿ ಹುಟ್ಟಿದವನು ಎಂದು ಶಂ. ಬಾ. ಜೋಶಿ ಅವರು ಪ್ರತಿಪಾದಿಸಿದ್ದಾರೆ.[12] ರಾಹುವಿನ ಕೋಟಲೆಯನ್ನ ಸಹಿಸಲಾರದೆ ಕೋಪಿಸಿಕೊಂಡದ್ದು, ದೇವತೆಗಳು ಸೂರ‍್ಯನಿಗೆ ಅರುಣನನ್ನು ಸಾರಥಿಯಾಗಿ ನೇಮಿಸಿಕೊಟ್ಟದ್ದು, ವಸಿಷ್ಠ ಸೂರ‍್ಯನನ್ನು ಸ್ತುತಿಸಿದ್ದು, ಅಕ್ಷಯ ಪಾತ್ರೆಯನ್ನು ಪಡೆಯುವುದಕ್ಕಾಗಿ ಯುಧಿಷ್ಠಿರ ಸೂರ‍್ಯನನ್ನು ಸ್ತುತ್ತಿಸಿದ್ದು, ಶ್ರೀರಾಮ ರಾವಣನ ವಧೆಗೆ ಮುಂಚಿತವಾಗಿ ಸೂರ‍್ಯನನ್ನು ಹೊಗಳಿದ್ದು, ಯಾಜ್ಞವಲ್ಕ್ಯಮುನಿ ತನ್ನ ಗುರುವಾದ ವೈಶಂಪಾಯನನಿಂದ ಶಾಪಸವನ್ನು ಪಡೆದು, ಆತನಲ್ಲಿ ಕಲಿತ ವಿದ್ಯೆಯನ್ನೆಲ್ಲ ವಮನ ಮಾಡಿದ ತರುವಾಯ ಮರಳಿ ವೇದಾಭ್ಯಾಸಕ್ಕಾಗಿ ಸೂರ‍್ಯನನ್ನು ಹೊಗಳಿದ್ದು, ಸೂರ‍್ಯ ಕರ್ಣನಿಗೆ ಸ್ವಪ್ನದಲ್ಲಿ ಮೈದೋರಿ ’ಇಂದ್ರ ಅರ್ಜುನನಿಗೆ ಹಿತವನ್ನು ಮಾಡುವ ಉದ್ದೇಶದಿಂದ ಬ್ರಾಹ್ಮಣ ರೂಪವನ್ನು ಧರಿಸಿ, ನಿನ್ನಲ್ಲಿಗೆ ಬಂದು ನಿನ್ನ ಜನ್ಮಸಿದ್ಧವಾದ ಕವಚವನ್ನೂ ಕರ್ಣ ಕುಂಡಲವನ್ನೂ ಬೇಡುವನು. ನೀನು ಅದನ್ನು ಅವನಿಗೆ ಕೊಡಲಾಗದು’ ಎಂದು ಮುಂತಾಗಿ ಉಪದೇಶಿಸಿದ್ದು, ರೇಣುಕೆ ಬಿಸಿಲಿನಲ್ಲಿ ನಡೆಯಲಾರದೆ ತಲ್ಲಣಿಸುತ್ತಿದ್ದಾಗ ಅದನ್ನು ಕಂಡು ಭೃಗು ಮಹರ್ಷಿ ಛತ್ರವನ್ನೂ ಪಾದುಕೆಗಳನ್ನೂ ಸೃಷ್ಟಿಸಲಾಗಿ, ಛತ್ರ ಪಾದುಕೆಗಳ ವಿಷಯವಾಗಿ ಸೂರ‍್ಯನಿಗೂ ಜಮದಗ್ನಿ ಮಹರ್ಷಿಗೂ ಸಂವಾದ ನಡೆದುದ್ದು, ಬ್ರಾಹ್ಮಣ ಮಹಿಮೆ ಮತ್ತು ಪತಿವ್ರತೆಯರ ಮಹಿಮೆಯ ವಿಷಯವಾಗಿ ಸೂರ‍್ಯನಿಗೂ ಶಚೀದೇವಿಗೂ ನಡೆದ ಸಂವಾದ, ಸೂರ‍್ಯ ಊರ್ವಶಿಯನ್ನು ಅಂಗೀಕರಿಸಿದ ಕಾರಣ ಊರ್ವಶಿ ಭೂಲೋಕದ ಮನುಷ್ಯರಿಗೆ ಪತ್ನಿಯಾಗುವಂತೆ ಶಾಪಕೊಟ್ಟದ್ದು, ಭಾರತಯುದ್ಧದ ಹದಿನಾಲ್ಕನೆಯ ದಿನದ ಯುದ್ಧದಲ್ಲಿ ಜಯದ್ರಥನ ವಧೆಗೆ ಸ್ವಲ್ಪ ಮುಂಚಿತವಾಗಿ ಶ್ರೀಕೃಷ್ಣ ತನ್ನ ಚಕ್ರಾಯುಧದಿಂದ ಸೂರ‍್ಯ ಮಂಡಲವನ್ನು ಮರೆಮಾಡಿದ್ದು[13] ಇವೇ ಮುಂತಾದ ಪ್ರಸಂಗ ವಿವರಗಳು ಸೂರ‍್ಯನಿಗೆ ಭಾರತೀಯ ಪುರಾಣಗಳು ನೀಡಿದ ಮಹತ್ವವನ್ನು ಸ್ಪಷ್ಟಪಡಿಸುತ್ತವೆ.

ಜೈನ ಪುರಾಣಗಳ ಸೂರ‍್ಯ ಇನ್ನೂ ಹೆಚ್ಚಿನ ಮಹಿಮಾಪೂರ್ಣ. ಶ್ವೇತಾಂಬರ ಜೈನ ಆಗಮ (canon)ಗಳಲ್ಲಿ ಸೂರ‍್ಯ ಪ್ರಜ್ಞಪ್ತಿ ಮತ್ತು ಚಂದ್ರ ಪ್ರಜ್ಞಪ್ತಿ ಎಂಬ ಎರಡು ಉಪಾಂಗಗಳಿವೆ. ಇವುಗಳು ಸೂರ‍್ಯ ಚಂದ್ರ ಮತ್ತು ನಕ್ಷತ್ರಗಳ ಗತಿಗಳನ್ನು ವಿಸ್ತಾರವಾಗಿ ನಿರೂಪಿಸಿವೆ.[14] ಜೈನಧರ್ಮ, ತತ್ತ್ವ ಜ್ಞಾನ, ನೀತಿ, ಮತ್ತು ಸಂಸ್ಕಾರಗಳಿಗೆ ಸಂಬಂಧಿಸಿದಂತೆ ಜೈನವಿಶ್ವಕೋಶವೆಂದು ಹೇಳಬಹುದಾದ ಜಿನಸೇನರ ಆದಿಪುರಾಣದಲ್ಲಿ (ಕ್ರಿ.ಶ. ಎಂಟನೆಯ ಶತಮಾನ) ಆದಿಕಾಲದ ಮನುಷ್ಯನು ಸೂರ‍್ಯ ಚಂದ್ರರ ಬಗೆಗೆ ತಳೆದಿದ್ದ ತಿಳಿವಳಿಕೆಯನ್ನು ಕುರಿತು ಕೆಲವು ಮಾಹಿತಿಗಳನ್ನು ತನ್ನದೇ ಆದ ವಿಶಿಷ್ಟ ಕ್ರಮದಲ್ಲಿ ನೀಡುತ್ತದೆ. ಜೈನ ಪರಿಗಣನೆಯ ಕಾಲವಿಭಾಗದಂತೆ ಈ ಅವಸರ್ಪಿಣಿ ಕಾಲದೆ ಸುಷಮಾ ದುಷಮಾ ಎಂಬ ಮೂರನೆಯ ಕಾಲವಿಭಾಗದ ಅಂತ್ಯ ಭಾಗದಲ್ಲುಂಟಾದ ಕೆಲವು ಭೌತಿಕ ಮಾರ್ಪಾಡುಗಳು ಸೂರ‍್ಯ ಚಂದ್ರರ ಬಗೆಗೆ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತವೆ. ಅಲ್ಲಿಯವರೆಗೆ ಆ ಕಾಲದ ಜನ ದಶವಿಧ ಕಲ್ಪವೃಕ್ಷಗಳಲ್ಲೊಂದಾದ ಜ್ಯೋತಿರಂಗ ಕಲ್ಪವೃಕ್ಷಗಳಿಂದ ಬೆಳಕನ್ನು ಪಡೆಯುತ್ತಿದ್ದರು. ಈ ಮೂರನೆಯ ಕಾಲದ ಅಂತ್ಯಭಾಗದಲ್ಲಿ ಎಲ್ಲ ಕಲ್ಪವೃಕ್ಷಗಳಂತೆಯೇ ಜ್ಯೋತಿರಂಗ ಕಲ್ಪವೃಕ್ಷಗಳ ಪ್ರಭಾವವೂ ಕುಗ್ಗಿ ಅವುಗಳಿಂದ ಬರುತ್ತಿದ್ದ ಪ್ರಕಾಶ ಮಂದವಾಯಿತು. ಒಂದು ಆಷಾಢ ಶುದ್ಧ ಹುಣ್ಣಿಮೆಯ ಸಂಜೆ ಆಕಾಶದಲ್ಲಿ ಪೂರ್ವದಿಗಂತದಲ್ಲಿ ಚಂದ್ರನೂ ಪಶ್ಚಿಮ ದಿಗಂತದಲ್ಲಿ ಸೂರ‍್ಯನೂ ಏಕಕಾಲಕ್ಕೆ ಕಾಣಿಸಿಕೊಂಡರು. ಆ ಸೂರ‍್ಯ ಚಂದ್ರರು ಜ್ಯೋತಿರಂಗ ಕಲ್ಪ ವೃಕ್ಷಗಳ ಪ್ರಕಾರ ಪ್ರಜ್ವಲವಾಗಿದ್ದಾಗ ಕಾಣಿಸುತ್ತಿರಲಿಲ್ಲ; ಅವುಗಳ ಪ್ರಕಾಶ ಮಂದವಾದಾಗ ವಾದಾಗ ಅವು ಕಾಣಿಸಿಕೊಂಡವು. ಈ ಮೊದಲು ಎಂದೂ ಕಾಣದಿದ್ದ ಅಪೂರ್ವವಾದ ಹೊಳೆಯುವ ಕೆಂಡದಂತಿದ್ದ ಆ ಸೂರ‍್ಯ ಚಂದ್ರರನ್ನು ನೋಡಿ ಪ್ರಜೆಗಳು ಭಯ ಭೀತರಾದರು. ಅವರಿಗೆ ಆ ಸೂರ‍್ಯ ಚಂದ್ರರ ಸ್ವರೂಪವನ್ನು ತಿಳಿಸಿ ಅವು ಕಾಣಿಸಿದುದರ ಕಾರಣವನ್ನು ಹೇಳಿ ಪ್ರಜೆಗಳ ಭಯವನ್ನು ದೂರಮಾಡಿದವನು ಪ್ರತಿಶ್ರುತಿ ಎಂಬ ಮೊದಲನೆಯ ಮನುಃ ’ಎಲೈ ಭದ್ರ ಪುರಷರೇ, ಆಕಾಶದಲ್ಲಿ ಹೊಳೆಯುವ ಈ ಎರಡು ಪದಾರ್ಥಗಳು ಸೂರ‍್ಯ ಚಂದ್ರ ಗ್ರಹಗಳು. ಸುಷಮಾ ದುಷಮಾ ಕಾಲವು ಮುಗಿಯುತ್ತ ಬಂದುದರಿಂದ ಜ್ಯೋತಿರಂಗ ಕಲ್ಪವೃಕ್ಷಗಳ ಪ್ರಭೆಕಡಿಮೆಯಾಯಿತು. ಇದರಿಂದ ಈ ಗ್ರಹಗಳು ಕಾಣಿಸುತ್ತವೆ. ಇಲ್ಲಯವರೆಗೆ ಜ್ಯೋತಿರಂಗ ಕಲ್ಪವೃಕ್ಷಗಳ ಪ್ರಕಾಶದಲ್ಲಿ ಸೂರ‍್ಯಚಂದ್ರರು ಕಾಣುತ್ತಿರಲಿಲ್ಲ. ಅಂದರೆ ಸೂರ‍್ಯನ ಪ್ರಕಾಶದಲ್ಲಿ ದೀಪದ ತೇಜವು ಕಾಣುವುದೆ? ಕಾಣಲಾರದು. ಇದೇ ರೀತಿ ಕಲ್ಪವೃಕ್ಷಗಳ ತೇಜದಲ್ಲಿ ಸೂರ‍್ಯ ಚಂದ್ರರ ಪ್ರಕಾಶ ಅಡಗಿತ್ತು. ಅಧಿಕವಾದ ಕಾಂತಿಯುಳ್ಳ ಸೂರ‍್ಯ ಚಂದ್ರ ಯಾವಾಗಲೂ ಆಕಾಶದಲ್ಲಿ ತಿರುಗುತ್ತವೆ. ಅವುಗಳಿಂದ ನಿಮಗೇನೂ ಭಯವಿಲ್ಲ. ಹೆದರಬೇಡಿರಿ’ ಎಂದು ಧೈರ್ಯವಚನವನ್ನು ನೀಡಿದ. ನಂತರ ಎಷ್ಟೋ ಕಾಲದ ಮೇಲೆ ಜ್ಯೋತಿರಂಗ ಕಲ್ಪವೃಕ್ಷಗಳ ಪ್ರಭೆ ಇನ್ನೂ ಕಡಿಮೆಯಾಯಿತು. ಹೀಗೆ ಸಂಪೂರ್ಣವಾಗಿ ಆ ಪ್ರಭೆಯು ನಾಶವಾಗುತ್ತಿರಲು ಒಂದು ದಿನ ರಾತ್ರಿಯ ಪ್ರಾರಂಭದಲ್ಲಿ ಸ್ವಲ್ಪ ಕತ್ತಲೆಯಾಗುವಾಗ ಆಕಾಶದ ತುಂಬೆಲ್ಲ ನಕ್ಷತ್ರಗಳು ಕಾಣಸಿದವು. ಅಕಸ್ಮಾತ್ ಆ ನಕ್ಷತ್ರಗಳನ್ನು ನೋಡಿ ಭೋಗ ಭೂಮಿಯ ಜನರು ಭಯಪಟ್ಟರು. ಭಯ ಭೀತರಾದ ಪ್ರಜೆಗಳನ್ನು ಕುರಿತು ’ಎಲೈ ಭದ್ರ ಪುರುಷರೇ ಇದು ಯಾವುದೂ ಕೆಡುಲ್ಲ. ಇದಕ್ಕಾಗಿ ನೀವು ಹೆದರ ಬೇಕಾಗಿಲ್ಲ. ಇವು ತಾರೆಗಳು. ಇವು ಅಶ್ವಿನೀ ಭರಣಿ ಕೃತಿಕಾ ಮೊದಲಾದ ನಕ್ಷತ್ರ ಮಂಡಲಗಳು. ಇವು ಯಾವಾಗಲೂ ಪ್ರಕಾಶಿಸುತ್ತಿರುವ ಆದಿತ್ಯ, ಸೋಮ ಮೊದಲಾದ ಗ್ರಹಗಳು. ಇದು ತಾರೆಗಳುಳ್ಳ ಆಕಾಶ. ಇದು ಜ್ಯೋತಿಶ್ಚಕ್ರ, ಗ್ರಹ ನಕ್ಷತ್ರಾದಿ ಜ್ಯೋತಿರ್ದೇವತೆಗಳ ಸಮೂಹವು, ಯಾವಾಗಲೂ ಆಕಾಶ ಮಾರ್ಗದಲ್ಲಿ ಇರತಕ್ಕವು. ಈಗ ಜ್ಯೋತಿರಂಗ ಕಲ್ಪವೃಕ್ಷಗಳ ಪ್ರಭೆಯು ಕಡಿಮೆಯಾಗಿ ಹೋದುದರಿಂದ ಈ ಜ್ಯೋತಶ್ಚಕ್ರವು ಕಾಣಿಸಿಕೊಂಡಿತು. ಇಲ್ಲಿಂದ ಮುಂದೆ ಸೂರ‍್ಯ, ಚಂದ್ರ ಮತ್ತು ತಾರೆಗಳ ಉದಯ ಅಸ್ತಮಾನಗಳಿಂದ ಹಗಲು ರಾತ್ರಿ ಎಂಬ ವಿಭಾಗ ಉಂಟಾಗುವುದು. ಸೂರ‍್ಯ ಚಂದ್ರರ ಗ್ರಹವೂ ಗ್ರಹಗಳ ಸಂಚಾರವೂ, ದಿನ, ಆಯನ, ಸಂಕ್ರಾಂತಿ – ಇವು ಜ್ಯೋತಿಶ್ಯಾಸ್ತ್ರದ ಜ್ಞಾನಕ್ಕೆ ಕಾರಣಗಳು ಎಂದು ಸನ್ಮತಿ ಎಂಬ ಎರಡನೆಯ ಮನು ಅವರಿಗೆ ಧೈರ್ಯ ತಿಳಿವಳಿಕೆಯನ್ನು ನೀಡಿದನು. ನಿರ್ಭಯರಾದ ಪ್ರಜೆಗಳು ಈ ವಚನದಿಂದ ನೆಮ್ಮದಿ ಹೊಂದಿದರು[15]– ಬೆಳಕು, ಭರವಸೆ ಮತ್ತು ಜೀವಗಳ ಸಂಕೇತವಾದ ಸೂರ‍್ಯನ ಬಗೆಗೆ ಜೈನಧರ್ಮದ ಕಲ್ಪನೆ ಮತ್ತು ಚಿಂತನೆಗಳು ಯಾವ ಸ್ವರೂಪದವು ಎಂಬುದನ್ನು ಈ ವಿವರಗಳು ಸಾದರಪಡಿಸುತ್ತವೆ.

ಸೂರ‍್ಯ, ಸೂರ‍್ಯ ಗ್ರಹಣ ಮತ್ತು ಸೌರಪಂಥ ಕುರಿತು ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ವಿರಳ ಉಲ್ಲೇಖಗಳಿವೆಯಾದರೂ ಸೂರ್ಯೋದಯ ಮತ್ತು ಸೂರ್ಯಾಸ್ತ ವರ್ಣನೆಗಳಂತೆ ಎಲ್ಲ ಕವಿ ಕಾವ್ಯಗಳಲ್ಲೂ ಸಾಮಾನ್ಯವಾಗಿ ಅವು ಕಂಡುಬರುವುದಿಲ್ಲ. ಮುಖ್ಯವಾಗಿ ಸೂರ‍್ಯನ ಬಗೆಗಿನ ಪರಂಪರಾಗತ ಜ್ಞಾನವನ್ನು ಕನ್ನಡ ಕಾವ್ಯಗಳು ಅಲಕ್ಷಿಸಿವೆ ಎಂದೇ ಹೇಳಬೇಕಾಗಿದೆ. ಇಷ್ಟಾದರೂ ಸೂರ‍್ಯ ಮತ್ತು ಸೂರ‍್ಯ ಪಂಥ ಕುರಿತಾದ ಬೆರಳೆಣಿಕೆಯ ಉಲ್ಲೇಖಗಳು ಪರಿಶೀಲನಾರ್ಹವಾದವು. ಸೂರ‍್ಯನನ್ನು ಸ್ತುತಿಸುವ ನೆವದಲ್ಲಿ ಅರಿಕೇಸರಿಗಿದ್ದ ಪ್ರಚಂಡ ಮಾರ್ತಾಂಡನೆಂಬ ಬಿರುದನ್ನು ವರ್ಣಿಸುವ ಪಂಪ ಮಹಾಕವಿಯ ಒಂದು ಪದ್ಯ ಹೀಗಿದೆ.

ಚಂಡ ವಿರೋಧಿ ಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀ
ಷಂಡಮರಲ್ದು ರಾಗದಿನೊಱಲ್ದಿರೆ ಯಾಚಕ ಭೃಂಗ ಕೊಲು ಕೈ
ಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವ ಪ್ರಚಂಡ ಮಾ
ರ್ತಾಂಡ ನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ ||೨||[16]

– ಇಲ್ಲಿ ಕವಿ ಸೂರ‍್ಯ ಸ್ತುತಿಗೈಯುವ ಕಾವ್ಯ ಪರಂಪರೆಯನ್ನು ತೋರಿದ್ದಾನೆ. ಇನ್ನೊಂದೆಡೆ ’ಕೋಟಿ ಸೂರ‍್ಯರು’ ಎಂಬ ಪ್ರಯೋಗ ಮಾಡಿದ್ದಾನೆ. ಈ ಶಬ್ದ ಪ್ರಯೋಗದಿಂದ ಸೂರ‍್ಯರು ಅನೇಕರಿದ್ದರು ಎಂದರ್ಥವಾಗುವುದಾದರೂ ಇಲ್ಲಿ ನಕ್ಷತ್ರಗಳು ಎಂಬ ಧ್ವನಿ ಇರುವುದನ್ನು ಗುರುತಿಸದಿರಲು ಆಗುವುದಿಲ್ಲ. ಇದು ಆಕಾಶಕಾಯಗಳ ಬಗೆಗೆ ಆಗಿನ ಕವಿಗಳಿಗಿದ್ದ ವೈಜ್ಞಾನಿಕ ತಿಳಿವಳಿಕೆಯನ್ನು ಸಾದರಪಡಿಸುತ್ತದೆ.

ಪೊನ್ನನ ’ಶಾಂತಿಪುರಾಣಂ’ ಕಾವ್ಯದಲ್ಲಿಯೂ ಸೂರ‍್ಯನ ಪ್ರಸ್ತಾಪವಿದೆ. ಪದ್ಯಕಂದದಲ್ಲಿದೆ.

ಧನದ ಹರಿದಭಿಮುಖಂ ವಿಭು
ಜಿನ ಚಂದ್ರಂ ನಡೆದುದೀಚ್ಯರಂ ಕಪ್ಪಂಗೊಂ
ಡಿನ ನುತ್ತರಾಯಣದೊಳನು
ದಿನಂ ರಸಜ್ಞಾನಿ ನೀರನೊಸೆವಂತೊಸೆದಂ||೨೫||[17]

– ಇಲ್ಲಿ ಕವಿ ಉತ್ತರಾಯಣಕಾಲದ ರಸಜ್ಞ ಸೂರ‍್ಯನು ರಸವನ್ನು ಹೀರಿ ಸಂತೋಷ ಪಡುವಂತೆ ಜಿನೇಂದ್ರನು ಉತ್ತರಕ್ಕೆ ನಡೆದು ಔತ್ತರೇಯ ಕಪ್ಪ ಪಡೆದನೆಂದು ವರ್ಣಿಸಿದ್ದಾನೆ. ಉತ್ತರಾಯಣ ಕಾಲದ ಸೂರ‍್ಯನ ಪ್ರಸ್ತಾಪ ಇಲ್ಲಿ ಗಮನಾರ್ಹ. ಉತ್ತರಾಯಣ ಸೂರ್ಯಾರಾಧಕರಿಗೆ ಮಹತ್ವದ ಕಾಲ, ಆ ಕಾಲದಲ್ಲಿ ’ಮಕರ ಸಂಕ್ರಾಂತಿ’ ಎಂಬ ಒಂದು ಹಬ್ಬವನ್ನೇ ಆಚರಿಸುತ್ತಾರೆ. ’ಹಿಂದೆ ಸೂರ‍್ಯನೇ ಅತಿಶ್ರೇಷ್ಠ ದೈವನೆಂದೂ ಎಂಬ ಒಂದು ಹಬ್ಬವನ್ನೇ ಆಚರಿಸುತ್ತಾರೆ. ’ಹಿಂದೆ ಸೂರ‍್ಯನೇ ಅತಿಶ್ರೇಷ್ಠ ದೈವನೆಂದೂ ಅವನೇ ಸೃಷ್ಠಿಕರ್ತನೆಂದೂ ನಂಬಿದ್ದ ’ಸೌರ’ ಎಂಬ ಪಂಥೀಯರಿದ್ದರು. ಆನಂದಗಿರಿ ತನ್ನ ’ಶಂಕರ ವಿಜಯ’ ದಲ್ಲಿ ಆರು ಬಗೆಯ ಸೌರರನ್ನು ಹೇಳುತ್ತಾನೆ. ಅವರೆಲ್ಲ ಕೆಂಪು ಗಂಧ ಧರಿಸಿ ಕೆಂಪು ಹೂ ಮುಡಿದು ಸೂರ‍್ಯನ ಅಷ್ಟಾಕ್ಷರೀ ಮಂತ್ರವನ್ನು ಜಪಿಸುತ್ತಿದ್ದರು.[18]

ಡಾ. ಎಂ. ಚಿದಾನಂದ ಮೂರ್ತಿ ಅವರ ಪ್ರಕಾರ, ಸೌರಸಾಧಕರ ಬಗೆಗೆ ಹಲವು ವಿವರಗಳನ್ನು ಒದಗಿಸಿರುವ ಬ್ರಹ್ಮ ಶಿವ (ಸು. ೧೧೫೦)ನ ’ಸಮಯ ಪರೀಕ್ಷೆ’ ಒಂದು ಮಹತ್ವದ ಸೂರ‍್ಯಸಂಬಂಧಿ ಗ್ರಂಥ. ಈ ಗ್ರಂಥದಲ್ಲಿ ಸೂರ‍್ಯ ಭಕ್ತರು, ಸೌರ ಸಂಹಿತೆಯನ್ನು ಶಿವನು ಷಣ್ಮುಖನಿಗೆ ಬೋಧಿಸಿದ ಸಂಗತಿ. ’ಆದಿತ್ಯ ಹೃದಯ’ವನ್ನು ಕೃಷ್ಣ ಅರ್ಜುನನಿಗೆ ಬೋಧಿಸಿದ್ದು ಮಯೂರನ ’ಸೂರ‍್ಯ ಶತಕದ’ ಪ್ರಸ್ತಾಪ, ಸೂರ್ಯಾರ್ಚನೆ ಕಾಲದಲ್ಲಿ ಚಂದ್ರ, ಬುಧ ಇತ್ಯಾದಿ ಗ್ರಹಗಳನ್ನೂ ಒಂದೇ ಮಣೆಯಲ್ಲಿ ಕೂರಿಸಿ ಉಪಾಸನೆ ಗೈಯುತ್ತಿದ್ದುದು, ಸೂರ‍್ಯನ ವಿಗ್ರಹಗಳ ಸ್ವರೂಪ, ಸೌರಾರಾಧನೆಯ ಪ್ರಭೇದಗಳು, ಸೂರ‍್ಯನನ್ನು ವೇದಸ್ವರೂಪನೆಂದು ಕರೆಯಲು ಕಾರಣ, ಸೂರ‍್ಯ ವಿಗ್ರಹದ ಕೈಯಲ್ಲಿ ಪದ್ಮವಿದ್ದುದು, ಸೂರ‍್ಯನ ಸಾರಥಿ ಹೆಳವ ಅರುಣ, ಸಪ್ತಾಶ್ವಗಳಿಗೆ ಕಟ್ಟಿ ಹಿಡಿದ ಹಗ್ಗ ಆದಿಶೇಷನ ಕುರಿತು, ರಥಕ್ಕೆ ಒಂದೇ ಚಕ್ರವಿದ್ದ ಬಗ್ಗೆ, ಸೂರ‍್ಯ ಗ್ರಹಣಕಾಲದಲ್ಲಿ ಅಗ್ನಿ- ಪ್ರವೇಶ ಮಾಡುವ ಸಂಪ್ರದಾಯವಿದ್ದುದು. ಗ್ರಹಣಗಳ ದಿವಸ ಶಾಂತಿಕಾರ‍್ಯಗಳಿಗಾಗಿ ದಾನಗಳನ್ನು ನೀಡುತ್ತಿದ್ದುದು[19] ಮುಂತಾಗಿ ಬ್ರಹ್ಮಶಿವನು ನೀಡಿರುವ ವಿವರಗಳು ಸೌರಪಂಥದ ಉಚ್ಛ್ರಾಯ ಪರಂಪರೆಯನ್ನು ತಿಳಿಸುತ್ತವೆ. ಕವಿಯ ಕಾಲದಲ್ಲಿ ರೂಢಿಯಲ್ಲಿದ್ದ ಗ್ರಹಣ ಕಾಲದ ಸಂಪ್ರದಾಯಾಚರಣೆಗಳು ಯಾವ ಬದಲಾವಣೆಯನ್ನು ಸಾಧಿಸಿಕೊಳ್ಳದೆ ಇಂದಿಗೂ ಉಳಿದು ಬಂದಿರುವುದು ಗಮನಾರ್ಹ. ಗ್ರಹಣ ಅಮಂಗಲಕರ ಎಂಬ ಭಯ ಭೀತ ನಂಬಿಕೆ ಇವತ್ತಿನವರೆಗೂ ಪ್ರಬಲವಾಗಿರುವುದರಿಂದ ಆ ಬಗೆಗಿನ ನಂಬಿಕೆ ಆಚರಣೆಗಳು ಚಾಚೂತಪ್ಪದೆ ಅನುಷ್ಠಾನಗೊಳ್ಳುತ್ತಿವೆ. ಬ್ರಹ್ಮಶಿವನ ಕಾಲದಲ್ಲಿ ಸೌರಪಂಥ ಉಚ್ಛ್ರಾಯವಾಗಿದ್ದರಿಂದ ಕರ್ನಾಟಕದ ಹಲವೆಡೆಗಳಲ್ಲಿ ಸೂರ‍್ಯದೇವಾಲಯಗಳೂ ದೊಡ್ಡ ಸಂಖ್ಯೆಯಲ್ಲಿ ನಿರ್ಮಾಣಗೊಂಡಿದ್ದವು. ಇದಕ್ಕೆ ಪ್ರಬಲ ಸಾಕ್ಷ್ಯಾಧ್ಯಾರಗಳಿವೆ.[20] ಕನ್ನಡದ ವಚನಕಾರರಲ್ಲಿಯೂ ಸೌರಮತದ ಉಲ್ಲೇಖಗಳು ಕಂಡುಬಂದಿದ್ದು ಅವು ಅಕಾಲದಲ್ಲಿ ಸೌರಮತಾನುಯಾಯಿಗಳ ಕುರುಹಿಗೆ ಸಾಕ್ಷಿಯಾಗಿವೆ ಎಂದು ಅಭಿಪ್ರಾಯಪಡಲಾಗಿದೆ.[21]

ಸೂರ‍್ಯಸಂಬಂಧಿ ತಿಳಿವಳಿಕೆಯನ್ನು ಪ್ರಸ್ತುತಪಡಿಸುವ ಇನ್ನೊಂದು ಗ್ರಂಥ ನಿಜಗುಣ ಶಿವಯೋಗಿ (ಕಾಲ-೧೫-೧೬ ನೆಯ ಶತಮಾನ) ಯ ’ವಿವೇಕ ಚಿಂತಾಮಣಿ’ ಕವಿಯು ತನ್ನ ಕಾಲದಲ್ಲಿ ಪ್ರಚಲಿತವಿದ್ದ ಸೂರ‍್ಯ ಮತ್ತು ಸೂರ‍್ಯ ಗ್ರಹಣ ಸಂಬಂಧವಾದ ಜ್ಞಾನವನ್ನು ಕೃತಿಯಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ. ನಿಜಗುಣನ ಮಾತುಗಳ ಸಾರಸಂಗ್ರಹವನ್ನು ಚಿದಾನಂದಮೂರ್ತಿಗಳು ಒದಗಿಸಿದ್ದಾರೆ.[22] ಸೂರ‍್ಯ ಸಂಬಂಧಿ ಜನಪ್ರಿಯ ಕಥೆಗಳನ್ನೊಳಗೊಂಡಿರುವ ಕಾವ್ಯಗಳೂ ಕನ್ನಡದಲ್ಲಿವೆ. ಮುಮ್ಮಡಿ ಕೃಷ್ಣರಾಜ ವಿರಚಿತ ಎಡತೊರೆ ’ಅರ್ಕಪುಷ್ಕರಿಣಿ ಮಹಾತ್ಮೆ’ ಕೃತಿ ಅಂಥ ಒಂದು ರಚನೆ ಎಂದು ಹೇಳಲಾಗಿದೆ. ಇದರಲ್ಲಿ ಎಡತೊರೆಯ ಅರ್ಕೇಶ್ವರ ದೇವಾಲಯ, ಅಲ್ಲಿನ ಪುರಾಣ, ತೀರ್ಥಗಳನ್ನು ವಿಸ್ತಾರವಾಗಿ ವರ್ಣಿಸಿರುವುದು ಕಂಡು ಬರುತ್ತದೆ[23] ಸೂರ‍್ಯ ಸಿದ್ಧಾಂತ ಕುರಿತ ಒಂದು ರಚನೆಯಾ ಕನ್ನಡದಲ್ಲಿದೆ. ಇದರ ರಚನೆಕಾರ ರಾಜೇಂದ್ರದೇವ. ಈತನ ಕಾಲ ಗೊತ್ತಿಲ್ಲ. ಸೂರ್ಯ ಗ್ರಹಣಧಿಕಾರದಿಂದ ಆರಂಭಗೊಂಡಿರುವ ಈ ಕೃತಿ ಅಸಮಗ್ರವಾಗಿದೆ. ಕೃತಿಯ ಒಂದು ಪ್ರತಿ ಮೈ. ವಿ. ವಿ. ದ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿದೆ.

ಸೂರ‍್ಯಸಂಬಂಧಿ ತಿಳಿವಳಿಕೆಗಾಗಿ ಕನ್ನಡ ಶಾಸನಗಳ ಅಧ್ಯಯನವೂ ಉಪಯುಕ್ತವಾಗಿ ಕಾಣುತ್ತದೆ. ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ಅನೇಕ ಸೂರ‍್ಯ ದೇವಾಲಯಗಳಿದ್ದವು ಎನ್ನುವುದಕ್ಕೆ ಶಾಸನಾಧಾರಗಳಿವೆ; ಶಾಸನಗಳ ಪ್ರಕಾರ ಇಂದೋರ್, ಮಂದಸೋರ್, ಗೋಪಾದ್ರಿ, ಆರಾದಲ್ಲಿ ಸೂರ‍್ಯದೇವಾಲಯಗಳಿದ್ದವು. ಜೋದ್-ಪುರದ ರಣ್ಪೂರ್ ಮತ್ತು ಬಮ್ನೇವ, ರಾಜಾಸ್ಥಾನದ ಒಸಿಯ, ಆಂಧ್ರದ ಆಲಂಪೂರ್, ಮಧ್ಯಪ್ರದೇಶದ ಭೂಮಾರಗಳಲ್ಲಿ ಈಗಲೂ ಸೂರ‍್ಯದೇವಾಲಯಗಳಿವೆ.[24] ಉತ್ತರದ ಕಾಶ್ಮೀರದಲ್ಲಿನ ಮಾರ್ತಾಂಡ ದೇವಾಲಯ, ಪಶ್ಚಿಮದ ಉತ್ತರ ಗುಜರಾತಿನ ಮೊಧೇರ ಗ್ರಾಮದಲ್ಲಿನ ಸೂರ‍್ಯ ದೇವಾಲಯ, ಪೂರ್ವದ ಉತ್ಕಲ ದೇಶದ ಜಗನ್ನಾಥ ಪುರಿಯ ಬಳಿಯಲ್ಲಿನ ಕೋಣಾರ್ಕ ದೇವಾಲಯ, ದಕ್ಷಿಣದ ತಂಜಾವೂರಿನ ಸೂರ‍್ಯನಾಯರ್ ಕೋಯಿಲ್‌ಗಳು ಪ್ರಸಿದ್ಧ ಸೂರ‍್ಯ ದೇವಾಲಯಗಳಾಗಿವೆ[25] ಕರ್ನಾಟಕದಲ್ಲೂ ಸೂರ‍್ಯನಿಗೇ ಮೀಸಲಾದ ಕೆಲವು ದೇವಾಲಯಗಳಿದ್ದುದಕ್ಕೆ ಶಾಸನಾಧಾರಗಳಿವೆ.[26] ಇದರಿಂದ ಮಧ್ಯಯುಗೀನ ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಸೂರ‍್ಯದೇವಾಲಯಗಳು ನಿರ್ಮಾಣಗೊಂಡಿದ್ದು ಸೂರ್ಯಾರಾಧನೆ ಸಾಕಷ್ಟು ಪ್ರಬಲವಾಗಿಯೇ ಪ್ರಚುರವಾಗಿದ್ದಿತೆಂದು ಹೇಳಬಹುದು.

ಸೂರ‍್ಯಸಂಬಂಧವಾದ ಪರಂಪರಾಗತವಾದ ಜ್ಞಾನ ಶಿಷ್ಟಮೂಲದ ವಿವರಗಳಿಂದ ತೀರ ಭಿನ್ನವಲ್ಲವಾದರೂ ವಿಶಿಷ್ಟ ಸ್ವರೂಪದ್ದಾಗಿದೆ. ಪ್ರಪಂಚದ ಬೇರೆಲ್ಲಾ ಭಾಷೆ, ಸಾಹಿತ್ಯದಲ್ಲಿನಂತೆ ಕನ್ನಡ ಜನಪದರಲ್ಲೂ ಸೂರ‍್ಯ ಸಂಬಂಧಿ ಜನಪ್ರಿಯ ಪುರಾಣ ಮತ್ತು ಕಥೆಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ಪ್ರಚಲಿತವಾಗಿವೆ. ನೈಜವಾದ ಪುರಾಣಗಳಿರುವುದು ಇಲ್ಲಿನ ವಿಶೇಷ. ಸೂರ‍್ಯನ ಜೊತೆಗೆ ಇತರ ಆಕಾಶಕಾಯಗಳ ಬಗೆಗೂ ಮಾಹಿತಿ ನೀಡುವ ಈ ರಚನೆಗಳು ಸ್ವಭಾವದಲ್ಲಿ ವಿವರಣಾತ್ಮಕವಾದವು. ಸೂರ‍್ಯನ ಬೆಳಕು ಚಂದ್ರನ ಬೆಳಕಿಗಿಂತ ಏಕೆ ಭಿನ್ನ? ಹಗಲಿನಲ್ಲಿ ಮಾತ್ರ ಸೂರ‍್ಯ ಪ್ರಸನ್ನವಾಗಿರಲು ಕಾರಣವೇನು? ಚಂದ್ರ ಮತ್ತು ನಕ್ಷತ್ರಗಳು ರಾತ್ರಿವೇಳೆಯಲ್ಲಷ್ಟೇ ಪ್ರಕಾಶಮಾನವಾಗಿರಲು ಕಾರಣವೇನು? ನಕ್ಷತ್ರಗಳು ರಾಶಿರಾಶಿಯಾಗಿ ಏಕೆ ಕಾಣಿಸುತ್ತವೆ? ಇವೇ ಮುಂತಾದ ಪ್ರಶ್ನೆಗಳಿಗೆ ಜನಪದರು ಪುರಾಣ ಮತ್ತು ಕಥೆಗಳ ರೂಪದಲ್ಲಿ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದಾರೆ. ನೈಸರ್ಗಿಕ ವ್ಯಾಪಾರಗಳನ್ನು ಅರ್ಥಮಾಡಿಕೊಳ್ಳಲು ಜನಪದ ಮನಸ್ಸು ನಡೆಸಿರುವ ಗಂಭೀರ ಯತ್ನಗಳೇನು? ಆಕಾಶಕಾಯಗಳ ಬಗೆಗೆ ಈ ಮನಸ್ಸಿನ ಚಿಂತನೆಗಳೇನು? ಅವುಗಳ ಬಗೆಗಿನ ಜನಪದ ಕಲ್ಪನೆಗಳೇನೆಂಬುದನ್ನು ನೋಡಲು ಈ ಸೂರ‍್ಯ ಜಾನಪದವನ್ನು ಅಭ್ಯಸಿಸಬೇಕಾಗಿದೆ.

ಸೂರ‍್ಯ ಚಂದ್ರ ಸಂಬಂಧಿ ಜನಪದ ಪುರಾಣಗಳು ಸರಳವಾಗಿದ್ದರೂ ರೋಚಕವಾಗಿವೆ. ಇವುಗಳಲ್ಲಿ ಜನಪದರು ಸೂರ‍್ಯನನ್ನು ಹಲವು ವಿಧದಲ್ಲಿ ಕಲ್ಪಿಸಿಕೊಂಡಿರುವುದನ್ನು ನೋಡಬಹುದು. ಕೆಲವು ಪುರಾಣಗಳಲ್ಲಿ ಸೂರ‍್ಯ ಚಂದ್ರರು ಅಣ್ಣತಂಗಿಯರಂತೆ ಚಿತ್ರಿತರಾಗಿದ್ದರೆ ಮತ್ತೆ ಕೆಲವು ರಚನೆಗಳಲ್ಲಿ ಅವರನ್ನು ಒಡಹುಟ್ಟಿದ ಸೋದರರನ್ನಾಗಿ ಕಲ್ಪಿಸಿಕೊಳ್ಳಲಾಗಿದೆ. ಜನಪದ ಮನಸ್ಸಿನ ಕಲ್ಪನಾ ಚಾತುರ‍್ಯವನ್ನು ನೋಡುವುದಕ್ಕಾಗಿ ಇಲ್ಲಿ ಆಯ್ದ ಕೆಲವು ರಚನೆಗಳನ್ನು ನೋಡಬಹುದು. ಸೂರ‍್ಯ ಚಂದ್ರರನ್ನು ಸೋದರರಾಗಿ ಕಂಡಿರುವ ಒಂದು ಪುರಾಣ ಹೀಗಿದೆ: ಪುರಾಣ: ಸೂರ‍್ಯ ಚಂದ್ರರು ಅಣ್ಣ ತಮ್ಮಂದಿರು, ಅವರು ತಾಯಿಗೆ ದಿನದ ಕೆಲಸ ಮುಗಿದ ಮೇಲೆ ಸ್ನಾನ ಮಾಡುವ ಬಯಕೆಯಾಯಿತು. ಅವಳು ’ಮಕ್ಕಳೇ, ನಾನು ಸ್ನಾನ ಮಾಡಬೇಕು. ನೀವಿಬ್ಬರೂ ಮರದ ಕೆಳಗೆ ಹೋಗಿ ನನ್ನ ಕಡೆ ಬೆನ್ನು ಮಾಡಿ ನಿಂತುಕೊಳ್ಳಿ’ ಎಂದಳು, ಇಬ್ಬರೂ ಮರದ ಕೆಳಗೆ ಹೋಗಿ ನಿಂತರು. ಚಂದ್ರನು ನೆಲದ ಕಡೆಗೆ ದೃಷ್ಟಿ ನೆಟ್ಟು ನಿಂತನು. ಸೂರ‍್ಯನು ತಾಯಿ ಸ್ನಾನಮಾಡುತ್ತಿದ್ದುದನ್ನು ಓರೆಗಣ್ಣಿನಲ್ಲಿ ನೋಡುತ್ತಾ ನಿಂತಿದ್ದನು. ತಾಯಿ ಅದನ್ನು ಗಮನಿಸಿದಳು. ಅವಳಿಗೆ ಸಿಟ್ಟು ಬಂದಿತು. ಸಿಟ್ಟಿನ ಭರದಲ್ಲಿ ’ನಿನಗೆ ಒಂದೇ ಕಣ್ಣಿರಲಿ’ ಎಂದು ಶಪಿಸಿದಳು. ಅಂದಿನಿಂದ ಸೂರ‍್ಯನಿಗೆ ಒಂದೇ ಕಣ್ಣು. ಯಾರೇ ಆಗಲಿ ಅವನನ್ನು ನೋಡಬಯಸಿದರೆ ಅವರೂ ಒಂದೇ ಕಣ್ಣಿನಿಂದ ನೋಡಬೇಕು-ಇದು ಜನಪದರು ಸೂರ‍್ಯನನ್ನು ಕಲ್ಪಿಸಿಕೊಂಡ ಒಂದು ಬಗೆ. ಇಲ್ಲಿ ಸೂರ‍್ಯನನ್ನು ವಾರೆಗಣ್ಣಿನಲ್ಲಿ ನೋಡುವಂತಾದುದೇಕೆ ಎಂಬುದರ ವಿವರಣೆಯಿದೆ.

ಸೂರ‍್ಯ ತಾಪದಾಯಕನೂ ಚಂದ್ರ ತಂಪನ್ನೀಯುವವನೂ ಆದುದು ಹೇಗೆ ಎಂಬುದನ್ನು ವಿವರಿಸುವ ಪುರಾಣ ಈ ಕೆಳಕಂಡಂತಿದೆ.

ಪುರಾಣ: ಸೂರ‍್ಯ ಚಂದ್ರರು ಅಣ್ಣತಂಗಿಯರು. ಒಂದು ಸಲ ಅವರ ತಾಯಿಗೆ ಹುಷಾರು ತಪ್ಪಿತು. ಒಲೆ ಹೊತ್ತಿಸಲು ದಿಕ್ಕಿಲ್ಲ. ಮಗನಿಗೆ ಹೊತ್ತಿಸಿ ಕೊಡುವಂತೆಯೂ ಮಗಳಿಗೆ ಪಾತ್ರೆಯಲ್ಲಿ ನೀರುತರಲೂ ಆದೇಶವಿತ್ತಳು. ಸೂರ‍್ಯ ಮನಸ್ಸಿಲ್ಲದ ಮನಸ್ಸಿನಿಂದ ಒಲೆ ಹೊತ್ತಿಸಿ ಹೊತ್ತಿಕೊಂಡಿದ್ದ ಕೆಂಡವೊಂದನ್ನು ತಂದು ತೋರಿಸುವ ಭರದಲ್ಲಿ ತಾಯಿಯ ದಾರದ ಮಂಚದ ಮೇಲೆ ಅದನ್ನು ಬೀಳಿಸಿದನು. ಮಂಚಕ್ಕೆ ಬೆಂಕಿ ಹೊತ್ತಿಕೊಂಡಿತು. ಮಗಳು ನೀರು ತಂದು ಬೆಂಕಿಯನ್ನು ಆರಿಸಿದಳು, ಕೋಪೋದ್ರೇಕಗೊಂಡ ತಾಯಿ ಮಗನಿಗೆ ’ಸದಾ ನೀನು ಹೀಗೇ ಉರಿಯುತ್ತಿರು’ ಎಂದು ಶಪಿಸಿ ಮಗಳಿಗೆ ’ನೀನು ಸದಾ ತಂಪಾಗಿರು, ಎಂದು ಹರಸಿದಳು – ಇದು ಸೂರ‍್ಯ ಉರಿಯಲು ಮತ್ತು ಚಂದ್ರ ತಂಪಾಗಿರಲು ಕಾರಣವೇನೆಂಬುದನ್ನು ಜನಪದ ಮನ ವಿವರಿಸುವ ರೀತಿ. ಕಲ್ಪನೆಯಂತೆ ರಚನೆಯೂ ಸರಳವಾಗಿದೆ.

ಸೂರ‍್ಯನು ತಾಪದಾಯಕನಾಗಿರಲು ಮತ್ತು ಚಂದ್ರನು ಎಲ್ಲಕಾಲದಲ್ಲಿಯೂ ತಂಪಾಗಿ ಹಿತಕರನಾಗಿರಲು ಇರುವ ನಿಜವಾದ ಕಾರಣಗಳೇನೆಂಬುದನ್ನು ವಿವರಿಸುವ ಮತ್ತೊಂದು ಪುರಾಣ ಹೀಗಿದೆ.: ಪುರಾಣ: ಒಂದು ದಿನ ಸೂರ‍್ಯ ಚಂದ್ರರು ತಮ್ಮ ಚಿಕ್ಕಪ್ಪ, ಚಿಕ್ಕಮ್ಮಂದಿರಾದ ಮಿಂಚುಗುಂಡುಗಗಳ ಮನೆಗೆ ಔತಣ ಕೂಟಕ್ಕಾಗಿ ಹೋದರು. ಅವರ ತಾಯಿ (ನಕ್ಷತ್ರ) ತಾನು ಒಬ್ಬಂಟಿಯಾಗಿ ಮನೆಯಲ್ಲಿ ಕುಳಿತು, ಮಕ್ಕಳು ಎಷ್ಟು ಹೊತ್ತಿಗೆ ಹಿಂದಿರುಗುತ್ತವೊ ಎಂದು ನಿರೀಕ್ಷಿಸುತ್ತಿದ್ದಳು.

ಚಿಕ್ಕಪ್ಪನ ಮನೆಯಲ್ಲಿ ಊಟ ಭರ್ಜರಿಯಾಗಿತ್ತು. ರುಚಿ ರುಚಿಯಾದ ಭಕ್ಷ್ಯಗಳು, ಹಣ್ಣುಗಳು, ಪಾನೀಯಗಳು ಎಲ್ಲವನ್ನು ತೃಪ್ತಿಯಾಗಿ ತಿಂದರು. ಚಂದ್ರ ಮಾತ್ರ ತನ್ನ ಪಾಲಿನ ಭಕ್ಷ್ಯ ಹಣ್ಣುಗಳ ಪೈಕಿ ಉತ್ತಮವಾದವು ಒಂದೊಂದನ್ನು ತನ್ನ ತಾಯಿಗಾಗಿ ಉಳಿಸಿಕೊಂಡು, ಅವನ್ನು ಒಂದು ಕೈವಸ್ತ್ರದಲ್ಲಿ ಕಟ್ಟಿಟ್ಟುಕೊಂಡನು. ಮನೆಗೆ ಹಿಂದಿರುಗಿದ ನಂತರ ತಾಯಿ ತನ್ನ ಮಗನನ್ನು ಕರೆದು ’ಅಪ್ಪಾ ಔತಣಕೂಟದಿಂದ ನೀನು ನನಗಾಗಿ ಏನನ್ನಾದರೂ ತಂದಿದ್ದೀಯಾ? ಎಂದು ಕೇಳಿದಳು. ಸೂರ‍್ಯನು ’ಊಟದ ಅವಸರದಲ್ಲಿ ನನಗೆ ನಿನ್ನ ನೆನಪೇ ಬರಲಿಲ್ಲ’ ಎಂದನು. ಚಂದ್ರನನ್ನು ಕೇಳಿದಾಗ ಅವನು ’ಅಮ್ಮಾ ನನ್ನ ಭಾಗದ ಭಕ್ಷ್ಯ ಭೋಜ್ಯ ಹಣ್ಣುಗಳಿಂದ ಅತ್ಯುತ್ತಮವಾದವು ಒಂದೊಂದನ್ನೂ ನಿನಗೂ ತಂದಿದ್ದೀನಿ’ ಎಂದು ತನ್ನ ಗಂಟನ್ನು ಕೊಟ್ಟನು. ಅಪರೂಪವೂ ತುಂಬ ಪ್ರಿಯವೂ ಆದ ಆ ಪದಾರ್ಥಗಳನ್ನು ಅವನ ತಾಯಿ ತೆಗೆದುಕೊಂಡಳು. ಅವಳಿಗೆ ತುಂಬ ಆನಂದವಾಯಿತು. ಆಮೇಲೆ ಅವಳು ಸೂರ‍್ಯನನ್ನು ಕರೆದು ’ಮಗನೆ ನೀನು ಸ್ವಾರ್ಥಿ, ನಿನ್ನ ವಿನೋದದಲ್ಲಿ ನಿನಗೆ ತಾಯಿಯ ನೆನಪೂ ಬರಲಿಲ್ಲ. ನಿನ್ನ ಕಿರಣಗಳು ಎಲ್ಲರನ್ನೂ ದಹಿಸುವುದಾಗಲಿ, ಎಲ್ಲರಿಗೂ ನಿನ್ನಲ್ಲಿ ಕೋಪ ಬರಲಿ, ನಿನ್ನನ್ನು ಕಂಡಕೂಡಲೇ ಎಲ್ಲರೂ ತಲೆಗೆ ಮುಸುಗು ಹಾಕಿಕೊಂಡು ನಿನ್ನನ್ನು ನೋಡದೆ ಓಡಲಿ. ನೀನು ತಾಪದಾಯಕನಾಗಿರು’ ಎಂದು ಶಪಿಸಿದಳು. ಅದರಿಂದಲೇ ಸೂರ‍್ಯನು ಯಾವಾಗಲೂ ಸುಡುತ್ತಿರುವುದು. ಚಂದ್ರನ ಮೇಲೆ ತಾಯಿಗೆ ವಿಶೇಷ ಮಮತೆ ಇತ್ತು. ಅವಳು ಚಂದ್ರನಿಗೆ ’ಅಪ್ಪಾ, ನೀನು ನಿನ್ನ ಸೌಖ್ಯದ ಕಾಲದಲ್ಲಿಯೂ ತಾಯಿಯನ್ನು ಮರೆಯಲಿಲ್ಲ. ನಿನಗೆ ದೊರೆತ ಆಹಾರ ಪಾನೀಯಗಳನ್ನು ನನಗೂ ತಂದುಕೊಟ್ಟಿ. ಆದುದರಿಂದ ನಿನ್ನಲ್ಲಿ ಇಂದಿನಿಂದ ಯಾವಾಗಲೂ ತಂಪು ಶಾಂತಿ ಸುಖವಾದ ಬೆಳುದಿಂಗಳು ಇರಲಿ. ನಿನ್ನ ಅಮೃತ ಕಿರಣಗಳಲ್ಲಿ ಯಾವ ಕೆಡಕಿನ ಅಂಶವೂ ಸೇರದಿರಲಿ. ನಿನ್ನನ್ನು ಜನ ಯಾವಾಗಲೂ ಪ್ರಿಯನಾದ ಮಿತ್ರ ಎಂದು ಕೊಂಡಾಡಲಿ, ನಿನ್ನ ರೂಪ ಮನೋಹರವಾಗಿರಲಿ’ ಎಂದು ಹರಸಿದಳು. ಆದುದರಿಂದಲೇ ಚಂದ್ರನು ಎಲ್ಲ ಕಾಲದಲ್ಲಿಯೂ ತಂಪಾಗಿ ಎಲ್ಲರಿಗೂ ಹಿತವನ್ನುಂಟುಮಾಡುವ ಸ್ವಭಾವ, ರೂಪುಳ್ಳವನಾಗಿದ್ದಾನೆ – ಈ ಪುರಾಣದಲ್ಲಿ ಸೂರ‍್ಯ ಹಿತವನ್ನುಂಟುಮಾಡುವ ಸ್ವಭಾವ, ರೂಪುಳ್ಳವನಾಗಿದ್ದಾನೆ – ಈ ಪುರಾಣದಲ್ಲಿ ಸೂರ‍್ಯ ಚಂದ್ರರಿಗೆ ಮಾನವ ಗುಣಸ್ವಭಾವಗಳನ್ನು ಆರೋಪಿಸಲಾಗಿದೆ. ಅಲ್ಲದೆ ಅತ್ಯಂತ ನೈಜವಾದ ರೀತಿಯಲ್ಲಿ ಅವರ ನಡವಳಿಕೆಗಳನ್ನು ಕುರಿತು ಚಿಂತನೆ ನಡೆಸಿದ್ದಾರೆ. ರಚನೆ ಬೋಧಪ್ರದವಾಗಿದೆ.

ಸೂರ‍್ಯ ಏಕೆ ಪೂರ್ಣಿಮೆಯ ದಿನ ಅಗೋಚರನಾಗಿರುತ್ತಾನೆ? ಇದನ್ನು ಜನಪದ ಮನಸ್ಸು ಶೋಧಿಸುವ ರೀತಿ  ಇದು:*      ಈ ಪ್ರಬಂಧವನ್ನು ಸಿದ್ಧಪಡಿಸುವ ವಿವಿಧ ಹಂತದಲ್ಲಿ ಸೂಕ್ತ ಮಾಹಿತಿ, ಸಲಹೆಗಳನ್ನು ನೀಡುವುದರ ಮೂಲಕ ನನಗೆ ನೆರವಾದವರು ರಾಜೂರಿನ ಮಲ್ಲಿಕಾರ್ಜುನ ಕುಂಬಾರ, ಡಾ. ಜೀ.ಶಂ. ಪರಮಶಿವಯ್ಯ, ಎನ್. ಬಸವಾರಾಧ್ಯ, ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಮತ್ತು ಎಂ.ಬಿ. ಸಕೇತ ಅವರು ಈ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.

[1]      ದೇಜಗೌ, ಜಾನಪದ ಅಧ್ಯಯನ, ಡಿ.ವಿ.ಕೆ. ಮೂರ್ತಿ, ಮೈಸೂರು, ೧೯೭೬, ಪು. ೧೫೭.

[2]      ವೆಂಕಟರಾವ್, ಎಚ್.ಪಿ. (ಅನು), ಋಗ್ವೇದ ಸಂಹಿತಾ, ಭಾಗ-೩೪ ನಿರುಕ್ತದ ಮೊದಲನೆಯ ಭಾಗ, ಮೈಸೂರು, ೧೯೬೧, ಪು. ೧೭೩.

[3]      ಅದೇ. ಪು. ೧೭೭

[4]       ಅದೇ ಪು. ೯೩೨.

[5]      ಶಂ.ಬಾ.ಜೋಶಿ, ಋಗ್ವೇದಸಾರ; ನಾಗಪ್ರತಿಮಾ ವಿಚಾರ, ಪ್ರಸಾರಾಂಗ, ಮೈ.ವಿ.ವಿ. ೧೯೭೧ ಪು.೧೯

[6]      ಶಂ.ಬಾ ಜೋಶಿ, ಋಗ್ವೇದ ಸಾರ; ನಾಗಪ್ರತಿಮಾ ವಿಚಾರ, ಪು. ೧೪೩.

[7]       ಅದೇ ಪು. ೮೪.

[8]      ಅದೇ. ಪು. ೫೪೭.

[9]       ಬೆನಗಲ್ ರಾಮರಾವ್ ಮತ್ತು ಪಾನ್ಯಂ ಸುಂದರ ಶಾಸ್ತ್ರಿ, ಪುರಾಣನಾಮ ಚೂಡಾಮಣಿ, ಮೈ. ವಿ. ವಿ. ಮೈಸೂರು, ೧೯೫೯, ಪು. ೬೬೩.

[10]     ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ, ಶ್ರೀವತ್ಸನಿಘಂಟು, ಶಾರದಾ ಮಂದಿರ, ಮೈಸೂರು, ೧೯೭೧ ಪು. ೪೯೪.

[11]     ಡಾ. ಎಂ. ಚಿದಾನಂದಮೂರ್ತಿ, ಪೂರ್ಣ ಸೂರ‍್ಯ ಗ್ರಹಣ, ಐ.ಬಿ.ಎಚ್., ಬೆಂಗಳೂರು, ೧೯೮೨ ಪು. ೧೬೬.

[12]     ಪೂರ್ವೋಕ್ಷ, ಪು. ೩೬೪. ಉಲ್ಲೇಖ ವಿವರಗಳಿಗೆ ನೋಡಿ.

[13]     ಬೆನಗಲ್ ರಾಮರಾವ್ ಮತ್ತು ಪಾನ್ಯಂ ಸುಂದರ ಶಾಸ್ತ್ರೀ, ಪುರಾಣನಾಮ ಚೂಡಾಮಣಿ, ಪು. ೬೬೩.

[14]     ಪ್ರಾಚೀನ ಭಾರತೀಯ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮಾನ್ಯತೆಗಳ ಬಗೆಗೆ ಅಧ್ಯಯನ ಮಾಡಲುಇವು ಮಹತ್ವಪೂರ್ಣ ಗ್ರಂಥಗಳಾಗಿವೆ ಎಂಬುದು ಜೈನ ಸಾಹಿತ್ಯ ಚರಿತ್ರಕಾರರ ಅಭಿಪ್ರಾಯ

[15]     ಮಿರ್ಜಿ ಅಣ್ಣಾರಾಯ, ಮಹಾಪುರಾಣಸಾರ, ಶಾಂತಿ ಸೇವಾ ಸದನ, ಸೇಡಬಾಳ, ೧೯೬೨, ಪು. ೮-೯.

[16]     ಬೆಳ್ಳಾವೆ ವೆಂಕಟನಾರಾಯಣಪ್ಪ (ಸಂ), ಪಂಪಕವಿ ವಿರಚಿತಂ ವಿಕ್ರಮಾರ್ಜುನ ವಿಜಯಂ, ಪ್ರಥಮಾಶ್ವಾಸಂ, ಮೂರನೆಯ ಪದ್ಯ, ಪ್ರಸಾರಾಂಗ, ಮೈ.ವಿ.ವಿ. ೧೯೭೩, ಪು.೧

[17]      ಹಂ.ಪ. ನಾಗರಾಜಯ್ಯ (ಸಂ) ಪೂನ್ನ ಕವಿ ವಿರಚಿತ ಶಾಂತಿ ಪುರಾಣಂ, ಕ.ಸಾ.ಪ. ಬೆಂಗಳೂರು ೧೯೮೨ ಪು. ೪೫೧.

[18]      ಡಾ. ಎಂ.ಚಿದಾನಂದಮೂರ್ತಿ, ಪೂರ್ಣ ಸೂರ‍್ಯಗ್ರಹಣ, ಐ.ಬಿ.ಎಚ್. ಪ್ರಕಾಶನ, ಬೆಂಗಳುರು, ೧೯೮೨, ಪು. ೧೬೬-೧೬೭.

[19]      ವಿವರಗಳಿಗೆ ನೋಡಿ: ಅದೇ. ಪು. ೧೬೭-೧೬೮

[20]     ಅದೇ. ಪು. ೧೬೯.

[21]     ಅಲ್ಲೇ

[22]     ಅದೇ ಪು. ೧೭೦.

[23]     ಶಾಂತ ಟಿ.ಆರ್. (ಸಂ) ಮುಮ್ಮಡಿ ಡಿ ಕೃಷ್ಣರಾಜ ವಿರಚಿತ ಎಡತೊರೆ ’ಅರ್ಕಪುಷ್ಕರಿಣಿ ಮಹಾತ್ಮೆ’ ಬೆಂಗಳೂರು, ೧೯೭೯.

[24]     ಡಾ. ಎಂ. ಚಿದಾನಂದಮೂರ್ತಿ, ಪೂರ್ಣ ಸೂರ್ಯಗ್ರಹಣ ಪು. ೧೭೨-೧೭೩.

[25]     ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ, ಶ್ರೀ ವತ್ಸನಿಘಂಟು, ಪು. ೪೯೪.

[26]     ನೋಡಿ: ಡಾ. ಎಂ. ಚಿದಾನಂದಮೂರ್ತಿ, ಪೂರ್ಣ ಸೂರ್ಯಗ್ರಹಣ, ಪು.೧೭೩-೧೭೬.