ಈ ವಿಶ್ವ ಒಳಗೊಂಡಿರುವ ಕೋಟ್ಯಂತರ ನಕ್ಷತ್ರಗಳಲ್ಲಿ ನಮಗೆ ಅತ್ಯಂತ ಮುಖ್ಯವೂ ಅತ್ಯಂತ ಹತ್ತಿರವೂ ಇರುವ ನಕ್ಷತ್ರವೇ ಸೂರ್ಯ. ಸೂರ್ಯನಿಲ್ಲದ ಭೂಮಿಯನ್ನಾಗಲೀ ಬದುಕನ್ನಾಗಲೀ ಊಹಿಸಿಕೊಳ್ಳಲಾಗದು, ಸಾಧ್ಯವೂ ಇಲ್ಲ. ಒಟ್ಟಿನಲ್ಲಿ ಸೂರ್ಯ ನಮಗೆ ಜೀವಾಧಾರವಾಗಿರುವ ನಕ್ಷತ್ರ. ಅದು ನಮ್ಮ ನಕ್ಷತ್ರ. ವಾಸ್ತವವಾಗಿ ವಿಶ್ವದಲ್ಲಿರುವ ಅನೇಕ ನಕ್ಷತ್ರಗಳು ಸೂರ್ಯನಿಗಿಂತಲೂ ದೊಡ್ಡವು. ಸೂರ್ಯನಿಗಿಂತ ಬಹಳ ಬಹಳ ತಾಪವುಳ್ಳ ನಕ್ಷತ್ರಗಳು ಇವೆ. ಅವು ಯಾವುವೂ ನಮಗೆ ಸೂರ್ಯನಷ್ಟು ದೊಡ್ಡದಾಗಿ ಕಾಣುವುದಿಲ್ಲ. ಅವು ನಮ್ಮಿಂದ ಬಹು ದೂರದಲ್ಲಿರುವುದೇ ಇದಕ್ಕೆ ಕಾರಣ. ಸೂರ್ಯ ನಮಗೆ ಅತ್ಯಂತ ಹತ್ತಿರದಲ್ಲಿ ಇರುವುದರಿಂದ, ನಕ್ಷತ್ರಗಳ ಸ್ವಭಾವ ಮತ್ತು ಅಲ್ಲಿ ಜರುಗುವ ಚಟುವಟಿಕೆಗಳನ್ನು ತಿಳಿಯುವುದಕ್ಕೆ ವಿಜ್ಞಾನಿಗಳು ಸೂರ್ಯನ ಅಧ್ಯಯನವನ್ನು ಹೆಚ್ಚು ಹೆಚ್ಚಾಗಿ ಮಾಡಿದ್ದಾರೆ.

ಸೂರ್ಯ ಒಂದು ಬೃಹತ್ ಅಗ್ನಿಗೋಲ. ಅದರಿಂದ ಹೊಮ್ಮುವ ಭಾರೀ ಶಕ್ತಿಗೆ ಅದರ ಅಂತರಾಳದಲ್ಲಿ ಜರುಗುತ್ತಿರುವ ಬೈಜಿಕ ಕ್ರಿಯೆಗಳು ಕಾರಣ. ವಾಸ್ತವವಾಗಿ ಸೂರ್ಯನಲ್ಲಿ ಹೈಡ್ರೊಜನ್ ಪರಮಾಣುಗಳ ಬೀಜಗಳು ಸಮ್ಮಿಲನಗೊಂಡು ಹೀಲಿಯಮ್ ಬೀಜಗಳಾಗುತ್ತಿವೆ.  ಈ ಸಮ್ಮಿಲನ ಕ್ರಿಯೆಯೇ ಸೂರ್ಯನ ನಿರಂತರ ಶಕ್ತಿಯ ಆಕರ. ಸೂರ್ಯನ ಮೇಲ್ಮೈ ತಾಪ ಸುಮಾರು 6000 K. ನಮಗೆ ವೃತ್ತಾಕಾರದಲ್ಲಿ ಕಾಣುವ ಸೂರ್ಯನ ಗೋಚರ ಬಿಲ್ಲೆಗೆ ತೇಜೋಮಂಡಲ (photosphere) ಎನ್ನುತ್ತಾರೆ. ಇದರ ಸುತ್ತ ಇರುವುದು ವರ್ಣಮಂಡಲ (Chromosphere). ವರ್ಣಮಂಡಲದ ಆಚೆಗೆ ಹಲವಾರು ಮಿಲಿಯ ಕಿಲೊಮೀಟರ್‌ವರೆಗೆ ಒಂದು ಪ್ರಕಾಶಮಾನವಾದ ಪ್ರಭಾವಳಿ ಇದೆ. ಇದಕ್ಕೆ ಕರೋನ ಎಂದು ಹೆಸರು. ಕರೋನ ಎಂಬುದು ಸೌರವಾತಾವರಣದ ಅತ್ಯಂತ ಹೊರ ಭಾಗ.  ಇದನ್ನು ವಿಜ್ಞಾನಿಗಳು K-ಕರೋನ ಮತ್ತು F-ಕರೋನ ಎಂದು ಎರಡು ಭಾಗಗಳಾಗಿ ವಿಂಗಡಿಸಿಕೊಂಡಿದ್ದಾರೆ. K-ಕರೋನ ಎಂಬುದು ಕರೋನದ ಒಳಭಾಗದ ಪ್ರದೇಶ.  ಇದು ಸೂರ್ಯನ ಮೇಲ್ಮೈನಿಂದ ಸುಮಾರು 75,000 ಕಿಮೀ ವರೆಗೆ ವ್ಯಾಪಿಸಿದೆ. ಇಲ್ಲಿ ತಾಪ 2,000,000 ಕೆಲ್ವಿನ್ (2×106 K) ಅಥವಾ ಅದರ ಆಸುಪಾಸಿನಲ್ಲಿ ಇರುತ್ತದೆ. ಕರೋನದ ಹೊರಭಾಗ ಅರ್ಥಾತ್ F-ಕರೋನವು ಹಲವು ಮಿಲಿಯ ಕಿಮೀ ವರೆಗೆ ವ್ರೋಚಾಚಿಕೊಂಡಿದೆ. ಇಲ್ಲಿ ತಾಪ K-ಕರೋನದಲ್ಲಿ ಇರುವಷ್ಟು ಇಲ್ಲ. ಕರೋನದ F-ಭಾಗದ ತಾಪವು ಸಾಪೇಕ್ಷವಾಗಿ ಕಡಿಮೆ.

ಸೂರ್ಯನ ಕರೋನದಲ್ಲಿ ಇರುವುದು ಏನು? ಕರೋನದ ಬಹುಭಾಗ ಅಯಾನೀಕೃತ ಅನಿಲಗಳಿಂದಾಗಿದೆ. ಅರ್ಥಾತ್ ಕರೋನದಲ್ಲಿ ಇರುವ ದ್ರವ್ಯ ಪ್ಲಾಸ್ಮಾ ಸ್ಥಿತಿಯಲ್ಲಿ ಇದೆ.  ಕರೋನ ಅಷ್ಟೊಂದು ಎತ್ತರಕ್ಕೆ ಚಾಚಿಕೊಂಡಿರುವುದಕ್ಕೆ ಮತ್ತು ಅದರ ಆಕಾರಕ್ಕೆ ಸೂರ್ಯನ ಪ್ರಬಲ ಕಾಂತಕ್ಷೇತ್ರವೇ ಕಾರಣ. ಕರೋನದ ಸ್ವರೂಪ ಒಂದೇ ತೆರನಾಗಿ ಇರುವುದಿಲ್ಲ.  ಸೂರ್ಯನಕಲೆಗಳ ಚಕ್ರದೊಂದಿಗೆ ಕರೋನ ಆಕಾರ ಕೂಡ ಬದಲಾಗುವುದು ಕಂಡು ಬಂದಿದೆ.  ಸೌರಕಲೆಗಳು ಗರಿಷ್ಠದಲ್ಲಿದ್ದಾಗ ಕರೋನವು ಸ್ಪಲ್ಪ ಹೆಚ್ಚು ಕಡಿಮೆ ಏಕರೂಪದಲ್ಲಿ ವ್ಯಾಪಿಸಿರುವ ಆವೃತ ಕುಣಿಕೆಗಳೋಪಾದಿಯಲ್ಲಿ ಇರುತ್ತದೆ. ಸೌರಕಲೆಗಳ ಚಟುವಟಿಕೆ ಕನಿಷ್ಠದಲ್ಲಿದ್ದಾಗ ಸೂರ್ಯನ ಸಮಭಾಜಕದ ಪ್ರದೇಶಗಳಿಂದ ಸೂರ್ಯನ ಇಕ್ಕೆಲಗಳಲ್ಲಿ ಚಾಚಿಕೊಂಡಿರುವ ಧಾರೆಗಳೋಪಾದಿಯಲ್ಲಿ ಇರುತ್ತದೆ. ಸೂರ್ಯನ ಕರೋನ ಸಾಮಾನ್ಯ ದಿನಗಳಲ್ಲಿ ನಮಗೆ ಕಾಣುವುದಿಲ್ಲ. ಸಂಪೂರ್ಣ ಸೂರ್ಯಗ್ರಹಣದ ಕಾಲದಲ್ಲಿ ಕರೋನ ಬರಿಗಣ್ಣಿಗೇ ಎದ್ದು ಕಾಣುತ್ತದೆ. ಅದೊಂದು ನಯನಮನೋಹರ ದೃಶ್ಯ.

ಸೂರ್ಯನ ಕೋರೈಸುವ ಭಾಗ ತೇಜೋಮಂಡಲ. ಅಲ್ಲಿ ಮೇಲ್ಮೈ ತಾಪ ಸುಮಾರು 6000 K. ಅಲ್ಲಿಂದ ಲಕ್ಷಾಂತರ ಕಿಮೀ ಆಚೆಯವರೆಗೂ ವ್ಯಾಪಿಸಿರುವ ಕರೋನದ ತಾಪ ಆಶ್ಚರ್ಯಗೊಳಿಸುವಷ್ಟು ಅಧಿಕ ಮಟ್ಟದಲ್ಲಿ ಇರುವುದು ಹೇಗೆ ಸಾಧ್ಯ?  ಇದು ವಿಜ್ಞಾನಿಗಳ ವಿಸ್ಮಯಗೊಳಿಸಿರುವ ಸಮಸ್ಯೆ. ಸೂರ್ಯನ ಮೇಲ್ಮೈನಿಂದ ದೂರ ದೂರಕ್ಕೆ ಹೋದಂತೆಲ್ಲಾ ತಾಪ ಕಡಿಮೆ ಆಗುತ್ತಾ ಹೋಗಬೇಕು. ಇದು ಸಹಜ ನಿರೀಕ್ಷೆ. ನಿರಂತರವಾಗಿ ಕರೋನ ಅಷ್ಟು ಉಚ್ಚ ತಾಪಗಳಲ್ಲಿ ಇರಬೇಕಾದರೆ ಅದಕ್ಕೆ ನಿರಂತರವಾಗಿ ಶಕ್ತಿ ಊಡಿಕೆ ಆಗುತ್ತಿರಲೇಬೇಕು. ಹಾಗೆ ಶಕ್ತಿ ಊಡಿಕೆ ಆಗುತ್ತಿರದಿದ್ದಲ್ಲಿ ಕರೋನದಲ್ಲಿ ಪ್ಲಾಸ್ಮಾ ಸ್ಥಿತಿಯಲ್ಲಿರುವ ದ್ರವ್ಯ ಕೇವಲ ಒಂದು ಗಂಟೆಯ ಒಳಗೆ ತಣ್ಣಗಾಗಿ ಬಿಡುತ್ತಿತ್ತು. ಕರೋನದ ತಾಪ ಅಷ್ಟು ಉಚ್ಚಮಟ್ಟದಲ್ಲಿ ಇರುವುದು ಬೆಳಕಿಗೆ ಬಂದಿದ್ದು 1940ರಲ್ಲಿ. ಆಗಿನಿಂದಲೂ ಕರೋನದ ತಾಪ ತೋಜೋಮಂಡಲಕ್ಕಿಂತಲೂ ಮತ್ತು ವರ್ಣಮಂಡಲಕ್ಕಿಂತಲೂ ಅಷ್ಟೊಂದು ಅಧಿಕವಾಗಿರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತಲೇ ಇದೆ. ಇಂದಿಗೂ ಅದು ಸಂಪೂರ್ಣವಾಗಿ ಅರ್ಥವಾಗಿಲ್ಲ. ಕರೋನದಲ್ಲಿ ಇರುವ ಉಚ್ಚ ತಾಪಗಳನ್ನು ವಿವರಿಸುವುದಕ್ಕೆ ವಿಜ್ಞಾನಿಗಳು ಹಲವು ವಾದಗಳನ್ನು ಮುಂದಿಟ್ಟಿದ್ದಾರೆ. ಅವುಗಳಲ್ಲಿ ಬಹು ಜನರ ಸ್ವೀಕೃತಿಗೆ ಪಾತ್ರವಾಗಿರುವ ವಾದ ಒಂದಿದೆ.  ಅದರ ಪ್ರಕಾರ ಸೂರ್ಯನ ಅಂತರಾಳದಿಂದ ಉಗಮಿಸಿ, ಸೂರ್ಯನ ಮೇಲ್ಮೈನಿಂದ ಬಲು ಎತ್ತರದವರೆಗೂ ಚಿಮ್ಮುವ ಕಾಂತೀಯ ಕುಣಿಕೆಗಳು ತಮ್ಮೊಂದಿಗೆ ಒಯ್ಯುವ ಶಕ್ತಿಯಿಂದ ಕರೋನದ ಕಾವು ಏರುತ್ತಿದೆ. ಯೋಹ್‌ಕೋಹ್ ಮತ್ತು ಸೋಹೊ (Solar and Heliospheric Observatory) ಮತ್ತು ಟ್ರೇಸ್ (Transition Region and Coronal Explorer) ವ್ರೋಒದಗಿಸಿರುವ ಮಾಹಿತಿಗಳು ಈ ವಾದಕ್ಕೆ ಪುಷ್ಟಿ ಕೊಡುವ ರೀತಿಯಲ್ಲಿ ಇವೆ.

ಈ ಮಾಹಿತಿಗಳಿಂದ ತಿಳಿದು ಬಂದಿರುವುದು ಏನು? ಸೂರ್ಯನ ಮೇಲ್ಮೈ ತುಂಬಾ ಅಸಂಖ್ಯಾತ ಚಿಕ್ಕ ಚಿಕ್ಕ ಕಾಂತಕ್ಷೇತ್ರಗಳು ಇರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇವನ್ನು ಕಾಂತೀಯ ಮಚ್ಚೆಗಳು ಎಂದು ಪರಿಗಣಿಸಬಹುದು. ಈ ಮಚ್ಚೆಗಳು ಬಲು ಬೇಗ ಬೇಗ ಉದ್ಭವಿಸುತ್ತವೆ ಮತ್ತು ಕಣ್ಮರೆಯಾಗುತ್ತಿರುತ್ತವೆ. ಇವುಗಳ ಆವರ್ತನದ ಅವಧಿ 40 ಗಂಟೆಗಳ ಆಸುಪಾಸಿನಲ್ಲಿ ಇರುವುದು ಕಂಡುಬಂದಿದೆ. ಈ ಕಾಂತೀಯ ಮಚ್ಚೆಗಳೇ ಕರೋನದ ಉಚ್ಚ ತಾಪಗಳಿಗೆ ಕಾರಣವಾಗಿರಬಹುದೇ? ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಅವರ ಪ್ರಕಾರ, ಸೂರ್ಯನ ಮೇಲ್ಮೈನಲ್ಲಿ ಅಲ್ಲಲ್ಲಿ ಹರಡಿಕೊಂಡಿರುವ ಪುಟ್ಟ ಪುಟ್ಟ ಕಾಂತೀಯ ಮಚ್ಚೆಗಳಿಂದ ಹೊಮ್ಮುವ ಕಾಂತೀಯ ಬಲರೇಖೆಗಳ ನಡುವೆ ಉಂಟಾಗುತ್ತಿರುವ ಅಂತರ್‌ಕ್ರಿಯೆಗಳಿಂದ ಕರೋನ ಕಾಯುತ್ತಿದೆ. ನಮಗೆಲ್ಲ ತಿಳಿದಿರುವ ಹಾಗೆ, ಕಾಂತೀಯ  ಬಲರೇಖೆಗಳು ಪರಸ್ಪರ ಛೇಧಿಸುವುದಿಲ್ಲ. ಹೀಗಾಗಿ ಬಲರೇಖೆಗಳು ಛೇಧಿಸುವಿಕೆ ಸನ್ನಿಹಿತವಾದಂತೆ ಅವು ಪುನರ್ ಸಂಯೋಜನೆಗೊಳ್ಳುವುದು ಅನಿವಾರ್ಯವಾಗುತ್ತದೆ. ಕಾಂತೀಯ ಬಲರೇಖೆಗಳು ಈ ರೀತಿ ಪುನರ್‌ಸಂಯೋಜನೆಗೆ ಒಳಗಾಗುವುದರಿಂದ ಕರೋನ ಬಿಸಿಯಾಗುತ್ತಿದೆ ಎಂಬುದು ವಿಜ್ಞಾನಿಗಳ ಊಹೆ. ಈ ಊಹೆ ನಿಜವೋ ಸುಳ್ಳೋ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಜ್ಞಾನಿಗಳು ಈಗ ಇನ್ನಷ್ಟು ಪುರಾವೆಗಳಿಗಾಗಿ ಹೆಣಗುತ್ತಿದ್ದಾರೆ.