ಭಾಮಿನಿ

ಇತ್ತಲಾ  ಪಾರ್ವತಾದೇವಿಯು
ಪತಿ ಪುತ್ರರು  ಧರಣಿಯ  ಮೇಲೆ
ಮಲಗಿರುವುದ ಕಂಡು ಶೋಕಾಂಬುಧಿಯೊಳಿರುವ
ಸಮಯದೊಳಾಗಲಾಕ್ಷಣ  ಇದ  ತಿಳಿದ
ಪರಮೇಶ್ವರನು  ಷಣ್ಮುಖದೇವರು
ಮೂರ್ಛೆಯಿಂದ ಏಳುತಿರಲಾಗಾ ॥

ಷಣ್ಮುಖ: ಮಾತಾ ಪಿತರಿಗೆ ನಮಸ್ಕರಿಸುವೆನು.

ಪಾರ್ವತಾದೇವಿ: ಕಂದಾ ನಿನಗೆ ಮಂಗಳವಾಗಲಿ.

ಷಣ್ಮುಖ: ಅಮ್ಮಾ ಜನನಿ, ನೀವು ತಂದೆಯವರೊಡನೆ ಕೈಲಾಸ ಪಟ್ಟಣಕ್ಕೆ ತೆರಳುವಂಥವರಾಗಿರಿ. ನಾನು ಆ ಖೂಳನಾದ ಮಯಬ್ರಹ್ಮನೊಡನೆ ಖಾಡಾಖಾಡಿ ಯುದ್ಧವನ್ನು ಮಾಡಿ ವಿಜಯ ಸಿದ್ಧಿಯನ್ನು ಹೊಂದಿ ಬರುತ್ತೇನಮ್ಮಾ ತಾಯೆ.

ಪಾರ್ವತಾದೇವಿ: ಅಪ್ಪಾ ಕಂದ. ಸೂರ‌್ಯನು ಪಶ್ಚಿಮಾಂಬುಧಿಯಲ್ಲಿ ಮುಳುಗುವಂಥವನಾದನು. ಕತ್ತಲೆಯು ಕವಿಯಿತು. ನಮ್ಮ ಕೈಲಾಸ ಪಟ್ಟಣಕ್ಕೆ ಹೋಗೋಣ ಬಾರಪ್ಪ ಮಗು ಷಣ್ಮುಖನೆ.

ಷಣ್ಮುಖ: ತಾಯೆ ನಿಮ್ಮ ಇಷ್ಟದಂತೆ ಆಗಲಿ ನಡೆಯಿರಿ ಹೋಗೋಣ.

ಭಾಮಿನಿ

ಇತ್ತಲಾ  ಸೂರ‌್ಯನು  ಪಶ್ಚಿಮಾಂಬುಧಿಯೊಳಗಿಳಿಯಲು
ಕತ್ತಲೆಯು  ಕವಿಯಲಾಕ್ಷಣ ಇತ್ತಲಾ ಮಯಬ್ರಹ್ಮನು
ನಾಳೆ  ಸೂರ‌್ಯೋದಯಕೆ ಬರಬೇಕೆಂದು  ತಿಳಿಸು
ಎಂದೆನುತ ಚಾರಕನೊಡನೆ ತಿಳಿಸಲಾಗಲಾಕ್ಷಣ ॥

ಮಯಬ್ರಹ್ಮ: ಯಲೈ ಸೇವಕಾ ಈ ದಿವಸ ಸೂರ‌್ಯನು ಪಶ್ಚಿಮಾಂಬುಧಿಯಲ್ಲಿ ಮುಳುಗುವಂಥವ ನಾದನು. ಆದಕಾರಣ ಆ ಭ್ರಷ್ಟರನ್ನು  ನಾಳೆ ದಿವಸ ಯುದ್ಧಕ್ಕೆ ಬರಬೇಕೆಂದು ತಿಳಿಸಿ ಜಾಗ್ರತೆಯಾಗಿ ನಮ್ಮ ಪಟ್ಟಣಕ್ಕೆ ರಥವನ್ನು ಹೊಡೆಯುವಂಥವನಾಗು.

ಚಾರಕ: ಮಯ ಬ್ರಹ್ಮದೇವ ನಿಮ್ಮ ಇಷ್ಟದಂತೆ ಆಗಲಿ.

ಭಾಮಿನಿ

ಇತ್ತಲಾ  ಮಯಬ್ರಹ್ಮದೇವನು  ಚಾರಕನಿಗೆ
ತಿಳಿಸಲಾಗಲಾಕ್ಷಣ  ಇತ್ತಲಾ ಶ್ರೀ ಕೃಷ್ಣ ಪರಮಾತ್ಮನು
ಪೆಂದೋಟಪುರಕೆ  ಹೋಗಬೇಕೆಂದೆನುತ
ಹೊಡಹಿಸಿದನು  ಪುರದೊಳಗೆ  ಡಂಗುರವಾ ॥

ಕೃಷ್ಣ: ಅಯ್ಯ ಸೇವಕಾ ನಾಳೆ ದಿವಸ ಆ ಪೆಂದೋಟಪುರಕ್ಕೆ ರಣಾಗ್ರಕ್ಕೆ ಹೋಗಬೇಕಾಗಿದೆ. ಜಾಗ್ರತೆಯಾದ ನಮ್ಮ ಪುರದೊಳಗೆ ಡಂಗೂರವನ್ನು ಹೊಡೆಯುವಂಥವನಾಗು.

ಚಾರಕ: ಸ್ವಾಮಿ ನಾರಾಯಣ ದೇವರೆ ನಿಮ್ಮ ಇಷ್ಟದಂತೆ ಆಗಲಿ.

ನೋಡ್ರಪ್ಪೋ ಕೇಳಿದ್ರು ಕೇಳಿಲ್ಲಾಂದಿರಾ ನಾಳೆ ದಿವಸ ನಮ್ಮ ಶ್ರೀಕೃಷ್ಣ ದೇವರು ಮಯಬ್ರಹ್ಮನ ಪಟ್ಟಣಕ್ಕೆ ಯುದ್ಧಕ್ಕೆ ಹೋಕ್ತಾರಂತೆ ನೀವು ಎಲ್ಲರು ಬರಬೇಕು ಇಲ್ಲದೆಹೋದ್ರೆ ಆರು ರೂಪಾಯಿ ಎಂಟಾಣೆ ಜುಲ್ಮಾನೆ ಕೊಡಬೇಕು. ಹೇಳಿಲ್ಲಾಂದಿರಾ ಪೋಟೋಗೀಟೊ ತೆಕ್ಕೊಳಿ ನಿಮ್ಮ ಪಾದಧೂಳು ನಿಮ್ಮ ಚಾಪೆ ಮೇಲೆ ಇರ್ಲಿ ವಿಶ್ವಾಸವಿರ್ಲಿ ನಾನು ಹೋಗಿ ಬರ‌್ತೇನೆ.

ಭಾಮಿನಿ

ಇತ್ತಲಾ  ಚಾರಕನು  ಪುರದೊಳಗೆ
ಡಂಗೂರವ  ಹೊಡೆಯುವ
ಸಮಯದೊಳಾಗಲಾಕ್ಷಣಾ  ಇದ ತಿಳಿದ
ಲಕ್ಷ್ಮೀದೇವಿಯು  ಮನದೊಳಗೆ
ತಾ ನೊಂದು  ಶಿವಶಿವ  ಮೋಸ ಬಂದಿತೆ
ಎಂದೆನುತ  ತನ್ನ ಸಖಿಯೊಡನೆ  ಇಂತೆಂದಳಾಗಾ ॥

ಲಕ್ಷ್ಮಿದೇವಿ: ಯಾರಲ್ಲಿ ನನ್ನ ಸಖೀಮಣಿಯನ್ನು ಆಸ್ಥಾನಕ್ಕೆ ಬರಮಾಡು.

ಸಖಿ: ತಾಯೆ ನಮಸ್ಕರಿಸುವೆನು.

ಲಕ್ಷ್ಮಿದೇವಿ: ನಿನಗೆ ಮಂಗಳವಾಗಲಿ ಮೇಲಕ್ಕೇಳಮ್ಮಾ ಸಖೀಮಣಿಯೆ.

ಸಖಿ: ಅಮ್ಮಾ ತಾಯೆ, ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು. ಜಾಗ್ರತೆಯಾಗಿ ಪೇಳುವಂಥವರಾಗಿರಿ.

ಪದ

ಸಖಿಯಳೆ  ಕೇಳಮ್ಮಾ  ಹರುಷದಿಂ ಪೇಳುವೆನು
ವಾದ್ಯಗೋಷ್ಠಿಗಳೇನು  ಹೇಳಮ್ಮಾ ಸಖಿಯೇ ॥

ಲಕ್ಷ್ಮಿ: ಅಮ್ಮಾ ಸಖೀಮಣಿಯೇ ನಿನ್ನನ್ನು ಕರೆಸಿಕೊಂಡ ಕಾರಣವೇನೆಂದರೆ ನಮ್ಮ ಪಟ್ಟಣದಲ್ಲಿ ಸುಂದರವಾದ ವಾದ್ಯಗಳು ಮತ್ತು ಗಾನಗಳು ನಡೆಯಲು ಕಾರಣವೇನಮ್ಮಾ ಸಖಿಯೆ.

ಸಖೀ: ಅಮ್ಮಾ ತಾಯೆ ಹೇಳುತ್ತೇನೆ ಕೇಳಿ.

ಪದ

ಲೋಕಮಾತೆಯೆ  ಕೇಳು  ನಿಮ್ಮಯ ರಮಣರು
ಸಮರಕ್ಕೆ ಹೋಗುವರು  ಕೇಳಮ್ಮಾ ತಾಯೆ ॥

ಸಖಿ: ಅಮ್ಮಾ ದೊರೆಸಾನಿ, ನಿಮ್ಮ ಪ್ರಾಣಕಾಂತರು ಆ ಮಯಬ್ರಹ್ಮನಲ್ಲಿ ಯುದ್ಧವನ್ನು ಮಾಡಿ ಆತನ ಮಗಳಾದ ಸಂಜ್ಞಾದೇವಿಯನ್ನು ಲಗ್ನವಾಗುವುದಕ್ಕೆ ಹೋಗುವರಮ್ಮಾ ದೊರೆಸಾನಿ ದಿವ್ಯ ಸಂಜ್ಞಾನಿ.

ಲಕ್ಷ್ಮಿ: ಅಮ್ಮಾ ಸಖೀಮಣಿಯೆ, ಈಗಿನ ವೇಳೆಯಲ್ಲಿ ನೀನು ನನಗೆ ಹೇಳಿದ ಮಾತು ಕೇಳಿ ಕ್ಷೀರವನ್ನು ಭಕ್ಷಿಸಿದಂತಾಯಿತು. ಅಮ್ಮಾ ಸಖೀಮಣಿಯೆ ನಾನು ಪ್ರಾಣಕಾಂತರ ಸನ್ನಿಧಿಗೆ ಹೋಗುತ್ತೇನೆ. ನೀನು ಅರಮನೆಗೆ ತೆರಳಮ್ಮಾ ಸಖೀಮಣಿಯೆ.

ಸಖಿ: ಅಮ್ಮಾ ದೊರೆಸಾನಿ ನಿಮ್ಮ ಇಷ್ಟದಂತೆ ಅರಮನೆಗೆ ತೆರಳುತ್ತೇನೆ.

ಲಕ್ಷ್ಮಿದೇವಿ: ಪ್ರಾಣಕಾಂತ ನಮಸ್ಕರಿಸುವೆನು.

ಕೃಷ್ಣ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ಕಾಂತೆ ಮತಿಗುಣವಂತೆ ಹೇ ರಮಣಿ ನೀನು ಅರಮನೆಯಲ್ಲಿ ಸುಖವಾಗಿರುವುದನ್ನು ಬಿಟ್ಟು ಇಲ್ಲಿಗೆ ಬರಲು ಕಾರಣವೇನು.

ಪದ

ಅರಮನೆಯೊಳಗೊಂದು  ಸುದ್ದಿ ಪುಟ್ಟಿತು ಕಾಂತ
ಹರುಷದಿಂ  ಚಾರಕನು  ಪೇಳಿದ  ನನಗೆ ॥

ಲಕ್ಷ್ಮಿ: ಪ್ರಾಣಕಾಂತ ಅರಿಕೆ ಮಾಡಿಕೊಳ್ಳುತ್ತೇನೆ ಹೇ ರಮಣಾ ಇಂದಿನಾ ದಿವಸ ಪಟ್ಟಣದಲ್ಲಿ ವಂದು ವರ್ತಮಾನವನ್ನು ಕೇಳಿ ಬಂದೆನು. ಜಾಗ್ರತೆಯಾಗಿ ಪೇಳಬೇಕೈ ಕಾಂತ ಮತಿಗುಣವಂತ.

ಪದ
ನಾಗವೇಣಿಯ  ತರಲು ನಾನು  ಪೋಗಿ ಬರುವೆನೆ
ಧುರದೊಳ್  ಅವನ ಜೈಸಿ ನಾನು  ಕನ್ಯಮಣಿಯ  ತರುವೆನೀಗಾ ॥

ಕೃಷ್ಣ: ಹೇ ರಮಣಿ ಹೇಳುತ್ತೇನೆ ಕೇಳು. ಈ ಸೃಷ್ಟಿಗೆ ಶ್ರೇಷ್ಟವಾದ ಪೆಂದೋಟಪುರವನ್ನು ಪರಿಪಾಲಿಸುವ ಆ ಮಯಬ್ರಹ್ಮನ ಕುಮಾರಿಯನ್ನು ತಂದು ಲಗ್ನವಾಗಬೇಕೆಂದು ಹೊರಟಿರುವೆನು. ಜಾಗ್ರತೆಯಾಗಿ ನನಗೆ ವೀಳ್ಯವನ್ನು ಕೊಟ್ಟು ಕಳಿಸುವಂಥವಳಾಗೆ ಕಾಂತೆ ಮತಿಗುಣವಂತೆ.

ಪದ

ಬೇಡಾ ಬೇಡವೋ  ಕಾಂತ ಬೇಡಿಕೊಂಬೆನು  ನಾನು
ಕೇಡು ಬರುವುದು  ಮುಂದೆ, ಧಾರುಣಿಯೊಳಗೆ

ಲಕ್ಷ್ಮಿ: ಪ್ರಾಣಕಾಂತ ನೀವು ಯುದ್ಧಕ್ಕೆ ಹೋಗುವೆನೆಂದು ಹೊರಟಿರುವರಲ್ಲಾ. ಆ ವೀರನಾದ ಮಯಬ್ರಹ್ಮನು ಯಾರಿಗೂ ಸಿಕ್ಕುವುದಿಲ್ಲಾ. ನೀವು ಖಂಡಿತವಾಗಿ ಹೋಗಬೇಡವೈ ಕಾಂತ ಮತಿಗುಣವಂತ.

ಪದ

ಕಾಂತೆ ಲಕ್ಷ್ಮಿಯೆ  ಕೇಳು  ಪೆಂದೋಟಪುರದರಸ
ಮಯಬ್ರಹ್ಮನ ಕುವರಿಯ  ತರುವೆನು ನಾನು ॥

ಕೃಷ್ಣ: ಹೇ ರಮಣಿ, ಇಂದಿನ ದಿವಸ ಒಂದು ತ್ವರಿತವಾದ ಕಾರ್ಯವಿರುವುದು ನಾನು ಆ ಮಯಬ್ರಹ್ಮನ ಕುಮಾರಿಯನ್ನು ತಂದು ಲಗ್ನವಾಗಬೇಕೆಂದು ಹೊರಟಿರುವೆನು. ಇದು ನಿನಗೆ ಸಮ್ಮತವೋ ಹೇಗೆ.

ಪದ

ಪೋಗಾ ಬೇಡವೋ ಕಾಂತ  ಬೇಡಿಕೊಂಬೆನು  ನಾನು
ಪೋಗಬೇಡಿರಿ ನೀವು  ಕೇಡು ಬರುವುದು ಮುಂದೆ  ಕಾಂತಾ ರಮಣಾ ॥

ಲಕ್ಷ್ಮಿ: ಪ್ರಾಣಕಾಂತ ಅರಿಕೆ ಮಾಡಿಕೊಳ್ಳುತ್ತೇನೆ ಪ್ರಾಣಕಾಂತ ಸಮರವೆಂಬುದು ಸಾಮಾನ್ಯವಲ್ಲಾ ಆ ವೀರನಾದ ಮಯಬ್ರಹ್ಮನನ್ನು ಕೊಲ್ಲುವುದು ಪರಮೇಶ್ವರನಿಗೂ ಕೂಡಾ ಅಸಾಧ್ಯವಾಗಿರುವುದು ನಾನು  ಕರಮುಗಿದು ಬೇಡಿಕೊಳ್ಳುತ್ತೇನೆ ಕಾಂತ ಮತಿಗುಣವಂತ.

ಪದ

ಎಷ್ಟು  ಮಾತ್ರಕ್ಕೂ  ನಾನು  ಬಿಡುವುದಿಲ್ಲವೆ ನಾರಿ
ತರುಣಿಯ  ತರುವೆನು  ತೆರಳು ನೀ ಅರಮನೆಗೆ ॥

ಕೃಷ್ಣ: ಹೇ ರಮಣಿ ಈ ಭೂಮಿಯಲ್ಲಿ ಬೆಳೆಯುವ ಹತ್ತಿ ಹೂವನ್ನಾದರೂ ನೋಡಬಹುದು. ಆಕಾಶದಲ್ಲಿ ಹಾರುವ ಬಿಳಿಕಾಗೆಯನ್ನಾದರೂ ನೋಡಬಹುದು. ಆದರೆ ಸ್ತ್ರೀಯರ ಮನೋಗತವನ್ನು ತಿಳಿಯುವುದಕ್ಕೆ ಅಜ ರುದ್ರಾದಿಗಳಿಗೂ ಅಸಾಧ್ಯವಾಗಿರುವುದು ಆದ್ದರಿಂದ ಚಾರನ ಮುಖೇನ ರಣಾಗ್ರಕ್ಕೆ ಬರುತ್ತೇನೆಂದು ವರ್ತಮಾನವನ್ನು ಕೊಟ್ಟಿರುವೆನು. ನೀನು ನನ್ನನ್ನು ತಡೆಯಬೇಡ. ನೀನು ನನ್ನನ್ನು ತಡೆದರೆ ಇದೋ ನನ್ನ ಚಕ್ರದಿಂದ ನಿನ್ನ ಶಿರವನ್ನು ಕತ್ತರಿಸುತ್ತೇನೆ ನಾರಿ ಮದನವೈಯಾರಿ.

ಲಕ್ಷ್ಮಿ: ಆಹಾ ಪ್ರಾಣಕಾಂತ ಕೆಟ್ಟೆನು ಕೆಟ್ಟೆನು. ನಿಮ್ಮ ಇಷ್ಟ ಬಂದಂತೆ ಮಾಡಿ, ನಾನು ಅರಮನೆಗೆ ತೆರಳುತ್ತೇನೆ.

ಭಾಮಿನಿ

ಇತ್ತಲಾ ನಾರಾಯಣನೂ  ಪರಮಾತ್ಮನೂ
ತನ್ನ ಸತಿಯಾದ  ಲಕ್ಷ್ಮಿದೇವಿಗೆ  ಬುದ್ಧಿಯ
ಹೇಳಿ ಅರಮನೆಗೆ  ಕಳಿಸಲಾಗಲಾಕ್ಷಣ
ಇತ್ತಲಾ ಮಯಬ್ರಹ್ಮನ ಪಟ್ಟಣಕ್ಕೆ
ಸಮರಕೆ ಹೋಗಬೇಕೆಂದೆನುತ ಚಾರನೊಡನೆ
ಸಂಭ್ರಮದಿ  ನುಡಿಯುತಿರಲಾಗಾ ॥

ಕೃಷ್ಣ: ಸೇವಕಾ ಜಾಗ್ರತೆಯಾಗಿ ಅ ಮಯಬ್ರಹ್ಮನ ಪಟ್ಟಣಕ್ಕೆ ಹೋಗಿ ಶ್ರೀಕೃಷ್ಣದೇವರು ನಿನ್ನ ಮೇಲೆ ಮತ್ತೊಂದು ಸಾರಿ ಯುದ್ಧಕ್ಕೆ ಬಂದಿರುವರೆಂದು ತಿಳಿಸುವನಾಗು,

ಚಾರಕ: ಮಹಾಸ್ವಾಮಿ ನಿಮ್ಮ ಅಪ್ಪಣೆಯಂತೆ ತಿಳಿಸುವೆನು.

ಚಾರಕ: ಮಯಬ್ರಹ್ಮದೇವರಿಗೆ ಜಯವಾಗಲಿ.

ಮಯಬ್ರಹ್ಮ: ಚಾರನೆ ವರ್ತಮಾನವೇನು.

ಚಾರಕ : ಸ್ವಾಮಿ ಮಯಬ್ರಹ್ಮದೇವರೆ ಆ ಶ್ರೀಕೃಷ್ಣದೇವರು ಮತ್ತೊಂದು ಸಾರಿ ನಿಮ್ಮ ಮೇಲೆ ಯುದ್ಧಕ್ಕೆ ಬಂದಿದ್ದಾರೆ ಸ್ವಾಮಿ.

ಮಯಬ್ರಹ್ಮ: ಸೇವಕಾ  ಬಂದರು  ಬರಲಿ  ನಾನು  ನೋಡಿಕೊಳ್ಳುತ್ತೇನೆ ॥

ಪದ

ನಿನ್ನ ಶೌರ‌್ಯವ  ನಾನು ನೋಡುವೆ  ಭರದೊಳು
ಸಮರದೊಳ್  ಹಾರಿಸುವೇ ಶಿರವನ್ನು  ನಾನು ॥

ಕೃಷ್ಣ: ಯಲವೋ ಅಧಮನಾದ ಮಯಬ್ರಹ್ಮನೆ ಕೇಳು ನಿನ್ನ ಧರ್ಮಶಾಸ್ತ್ರವನ್ನು ಯಾರೂ ಕೇಳುವುದಿಲ್ಲಾ. ನಿನ್ನ ಹಲ್ಲನ್ನು ಮುರಿಯುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ಅಸಮ  ಸಾಹಸವಂತ  ಬಲುಶೂರ  ನಿನ್ನಯ
ಶೌರ‌್ಯವ  ನೋಡುವೆ  ಭರದೊಳು  ನಾನು ॥

ಮಯಬ್ರಹ್ಮ: ಯಲವೋ ಕಳ್ಳಕೃಷ್ಣ ನನ್ನಲ್ಲಿ ರಣಾಗ್ರವನ್ನು ಮಾಡಲು ಬಹಳ ಶೌರ‌್ಯದಿಂದ ಬಂದಿರುವೆಯಾ ಈ ದಿವಸ ನಿನ್ನ ಪ್ರಾಣವನ್ನು ವುಳಿಸಿಕೊಂಡು ಹೋಗುವೆನೆಂಬ ಆಸೆಯನ್ನು ಬಿಟ್ಟು ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗಲೋ ಅಧಮಾ.

ಪದ

ನೋಡೆಲೋ  ಅಧಮನೆ  ಬಿಡುವೆನು
ಬಾಣವ  ಸಮರದೊಳ್  ನಾನೀಗಾ ॥

ಕೃಷ್ಣ: ಯಲವೋ ಅಧಮನಾದ ಮಯಬ್ರಹ್ಮನೆ ಕೇಳು. ನೀನು ಬಿಟ್ಟಿರುವ ಬಾಣವನ್ನು ಮಧ್ಯಮಾರ್ಗದಲ್ಲಿ ಕತ್ತರಿಸಿ ಹೊಸದಾಗಿ ಶರವನ್ನು ಹೂಡಿ ಹೊಡೆಯುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗುವಂಥವನಾಗು.

ಪದ

ದುರುಳ  ನಿನ್ನಯ  ಶಿರವ  ಹರಿಸುವೆ  ನಾನೀಗ
ಸಮರದೊಳ್  ಹಾರಿಸುವೆ  ಶಿರವನ್ನು  ನಾನು ॥

ಮಯಬ್ರಹ್ಮ: ಯಲವೋ ಕಳ್ಳ ಕೃಷ್ಣ ನೀನು ಬಿಟ್ಟಿರುವ ಬಾಣವನ್ನು ಮಧ್ಯಮಾರ್ಗದಲ್ಲಿ ನನ್ನ ಅಸ್ತ್ರಬಾಣವನ್ನು ಹೂಡಿ ಹೊಡೆಯುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗು ವಂಥವನಾಗು.

ಪದ

ನಿನ್ನ ಶೌರ‌್ಯವ ನಾನು  ನೋಡುವೆ  ನಾನೀಗಾ  ಬಂದೆ
ಬಗುಳುವೆ ಯಾಕೋ  ಅಧಮನೆ  ನೀನು ॥

ಕೃಷ್ಣ: ಯಲವೋ ಅಧಮನಾದ ಮಯಬ್ರಹ್ಮನೆ ಕೇಳು. ನೀನು ಬಿಟ್ಟಿರುವ ಬಾಣವನ್ನು ಮಧ್ಯಮಾರ್ಗದಲ್ಲಿ ಕತ್ತರಿಸಿ ನನ್ನ ಚಕ್ರದಿಂದ ನಿನ್ನ ತಲೆಯನ್ನು ಹಾರಿಸುತ್ತೇನೆ. ಜಾಗ್ರತೆಯಾಗಿ ಯುದ್ಧಕ್ಕೆ ಯದುರಾಗಲೋ ಅಧಮಾ.

(ಯುದ್ಧಕೃಷ್ಣನ ಮೂರ್ಛೆ)

ಮಯಬ್ರಹ್ಮ: ಯಲವೋ ಭ್ರಷ್ಟ ನಿನ್ನ ಪಾಡೇನಾಯಿತು ನೋಡಿದೆಯೋ ಮತ್ತಾರಿರುವರು ಬನ್ನಿ ನೋಡಿಕೊಳ್ಳುತ್ತೇನೆ.

ಭಾಮಿನಿ

ಇತ್ತಲಾ  ಶ್ರೀಹರಿಯು  ಮಯಬ್ರಹ್ಮನ
ಬಾಣದಿಂದ ಮೂರ್ಛಿಸಲು  ಇತ್ತಲಾ
ಮಯಬ್ರಹ್ಮ  ತನ್ನ ಮಂತ್ರಿಯೊಡನೆ
ಪಟ್ಟಣಕ್ಕೆ ಹೋಗಬೇಕೆಂದೆನುತ  ಹೇಳುತಿರಲಾಗಾ ॥

ಮಯಬ್ರಹ್ಮ: ಅಯ್ಯ ಮಂತ್ರಿ, ಆ ಕಳ್ಳ ಕೃಷ್ಣನು ನನ್ನಲ್ಲಿ ರಣಾಗ್ರವನ್ನು ಮಾಡಿ ಸೋತು ಹೋದನು. ಪುನಹ ಯುದ್ದಕ್ಕೆ ಬರುವನೋ ಹೇಗೆ ನೋಡುವಂಥವನಾಗು.

ಪದ

ಇಂದು  ಬಿನ್ನಹ  ನಿಮಗೆ  ಮಹಾರಾಜ
ದೊರೆ ಕೇಳು  ವಿನಯದಿಂ  ಪೇಳುವೆನು ॥

ಮಂತ್ರಿ: ರಾಜೇಂದ್ರ ಅರಿಕೆ ಮಾಡಿಕೊಳ್ಳುತ್ತೇನೆ. ರಾಜೇಂದ್ರ ನೀವು ಈಗಿನ ವೇಳೆಯಲ್ಲಿ ಕಡುರೋಷವನ್ನು ಬಿಟ್ಟು ಶಾಂತರಾಗಿ ಅರಮನೆಗೆ ತೆರಳಬೇಕೈ ರಾಜೇಂದ್ರ.

ಮಯಬ್ರಹ್ಮ: ಅಯ್ಯ ಮಂತ್ರಿ ಆ ಕಳ್ಳ ಕೃಷ್ಣನು ಪುನಃ ಯುದ್ದಕ್ಕೆ ಬರುವನೋ ಹೇಗೆ ನೋಡು.

ಮಂತ್ರಿ: ರಾಜೇಂದ್ರ ನೀವು ಹೇಳಿದಂತೆ ಆ ಕೃಷ್ಣನನ್ನು ನೋಡುವಲ್ಲಿ ನೀವು ಬಿಟ್ಟ ಬಾಣದ ಜ್ವಾಲೆಯನ್ನು ತಡೆಯಲಾರದೆ ಮೂರ್ಛೆಯಿಂದ ಮಲಗಿರುವನಲ್ಲದೆ ಮತ್ತೆ ಬೇರೆ ಇಲ್ಲವೈ ರಾಜೇಂದ್ರ. ನಾವು ಪಟ್ಟಣವನ್ನು ಬಿಟ್ಟು ಬೆಳಿಗ್ಗೆ ಬಂದೆವು. ನಮಗೆ ಅನ್ನ ಆಹಾರಗಳಿಲ್ಲದೆ ಬಹಳ ಹಸಿವಾಗಿರುವುದು ಮತ್ತು ನಮ್ಮ ಕುದುರೆಗಳು ಬಾಯಾರಿರುವುವು. ಆದ್ದರಿಂದ ನಮ್ಮ ಪಟ್ಟಣಕ್ಕೆ ಹೋಗೋಣ ಬಾರೈ ರಾಜೇಂದ್ರ. ಇದೂ ಅಲ್ಲದೆ ಆ ಕೃಷ್ಣನು ಯುದ್ಧಕ್ಕೆ ಬಂದರೆ ಚಾರಕನ ಮುಖೇಣ ವರ್ತಮಾನವನ್ನು ಕೊಡುವನೈ ರಾಜೇಂದ್ರ.

ಮಯಬ್ರಹ್ಮ: ಅಯ್ಯ ಮಂತ್ರಿ ಹಾಗಾದರೆ ನಮ್ಮ ಪಟ್ಟಣಕ್ಕೆ ಹೋಗೋಣ ನಡೆ.

ಭಾಮಿನಿ

ಇತ್ತಲಾ  ಮಯಬ್ರಹ್ಮನು  ಮಂತ್ರಿಯೊಡನೆ
ಪಟ್ಟಣಕ್ಕೆ ತೆರಳಲಾಗಾಕ್ಷಣ  ಇತ್ತಲಾ ಪರಮೇಶ್ವರನು
ಮಯಬ್ರಹ್ಮನ  ಪಟ್ಟಣಕೆ  ಸಮರಕೆ
ಹೋಗಬೇಕೆಂದೆನುತ  ನುಡಿದರಾಗಾ ॥

ಈಶ್ವರ: ಸೇವಕಾ ಆ ಮಯಬ್ರಹ್ಮನಲ್ಲಿಗೆ ಹೋಗಿ ಪರಮೇಶ್ವರ ದೇವರು ಮತ್ತೊಂದು ಸಾರಿ ಯುದ್ಧಕ್ಕೆ ಬರುವರೆಂದು ತಿಳಿಸುವನಾಗು.

ಚಾರಕ: ಸ್ವಾಮಿ ಪರಮೇಶ್ವರ ದೇವರೆ ನಿಮ್ಮ ಅಪ್ಪಣೆಯಂತೆ ತಿಳಿಸುತ್ತೇನೆ.

ಚಾರಕ: ಮಯಬ್ರಹ್ಮ ದೇವರಿಗೆ ಜಯವಾಗಲಿ.

ಮಯಬ್ರಹ್ಮ: ಚಾರನೆ ವರ್ತಮಾನವೇನು.

ಚಾರಕ: ಸ್ವಾಮಿ ಮಯಬ್ರಹ್ಮ ದೇವರೆ ಪರಮೇಶ್ವರ ದೇವರು ಮತ್ತೊಂದು ಸಾರಿ ಯುದ್ಧಕ್ಕೆ ಬರುತ್ತಾರಂತೆ.

ಮಯಬ್ರಹ್ಮ: ಅಯ್ಯ ಮಂತ್ರಿ ಆ ಶಂಕರನು ಮತ್ತೊಂದು ಸಾರಿ ಯುದ್ಧಕ್ಕೆ ಬರುವನಂತೆ ಜಾಗ್ರತೆಯಾಗಿ ಯುದ್ಧಕ್ಕೆ ಬರಬೇಕೆಂದು ಪುರದೊಳಗೆ ಡಂಗೂರವನ್ನು ಹೊಡೆಸುವಂಥವನಾಗು.

ಮಂತ್ರಿ: ರಾಜೇಂದ್ರ ನಿಮ್ಮ ಇಷ್ಟದಂತೆ ಆಗಲಿ.

ಭಾಮಿನಿ

ಇತ್ತಲಾ  ಮಯಬ್ರಹ್ಮದೇವರು
ಪರಮೇಶ್ವರನ ಮೇಲೆ  ಸಮರಕೆ
ಹೋಗಬೇಕೆಂದೆನುತ  ಹೊರಡುವ
ಸಮಯದೊಳಾಗಲಾಕ್ಷಣ  ಇದಂ ತಿಳಿದ
ಆತನ ಸತಿಯಾದ ಶಾಂತಾದೇವಿಯು
ಸಂಭ್ರಮದಿ  ಬರುತಿರಲಾಗಲಾಕ್ಷಣಾ ॥

ಶಾಂತಾದೇವಿ: ಅಪ್ಪಾ ಮಾನವ ಹೀಗೆ ಬಾ ಮತ್ತೂ ಹೀಗೆ ಬಾ ಅಪ್ಪಾ ಮಾನವಾ ಈ ಶ್ರುಂಗಾರವಾದ ರಂಗು ಮಂಟಪದಲ್ಲಿ ಬಂದು ನಿಂತು ಬಹು ವಿನಯ ವಚನದಿಂದ ಮಾತನಾಡಿಸುವ ಮಾನುಷ್ಯ ನೀ ಧಾರೋ ಹೀಗೆ ಬಾ. ಅಣೈಯಾ ಸಾರಥಿ ನಾವು ಧಾರೆಂದರೆ ಈ ಸೃಷ್ಟಿಗೆ ಶ್ರೇಷ್ಟವಾದ ಪೆಂದೋಟಪುರವನ್ನು ಪರಿಪಾಲಿಸುವ ಮಯಬ್ರಹ್ಮದೇವರಿಗೆ ಪ್ರೇಮದ ಪತ್ನಿಯಾದ ಶಾಂತಾದೇವಿಯೆಂದು ತಿಳಿಯಪ್ಪಾ ಬಾಲಕ.

ಅಣೈಯ್ಯ ಸಾರಥಿ ಈ ವರಸಭೆಗೆ ಬಂದ ಕಾರಣವೇನೆಂದರೆ ಪ್ರಾಣಕಾಂತರು ರಗ್ರಕ್ಕೆ ಹೋಗುತ್ತಾರೆಂಬ ವಾರ್ತೆಯನ್ನು ಕೇಳಿ ಬಂದಿರುತ್ತೇನೆ. ಜಾಗ್ರತೆಯಾಗಿ ನನ್ನ ಸಖೀಮಣಿಯನ್ನು ಆಸ್ಥಾನಕ್ಕೆ ಬರುಮಾಡು.

ಸಖಿ: ಅಣೈಯ್ಯ ಸಾರಥಿ ನಾವು ಧಾರೆಂದರೆ ಪೆಂದೋಟಪುರವನ್ನು ಪರಿಪಾಲಿಸುವ ಮಯಬ್ರಹ್ಮದೇವರಿಗೆ ಪತ್ನಿಯಳಾದಂಥ ಶಾಂತಾದೇವಿಗೆ ಸೇವಕಳಾದಂಥ ಸಖೀಮಣಿಯೆಂದು ತಿಳಿಯಪ್ಪಾ ಸಾರಥಿ ಸಂಧಾನಮತಿ. ಅಣೈಯ್ಯ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ಶಾಂತಾದೇವಿಯು ಕರೆಸಿಕೊಂಡ  ಕಾರಣ ಬಾಹೋಣವಾಯಿತು. ಜಾಗ್ರತೆಯಾಗಿ ತೋರಿಸುವಂಥವ ನಾಗಪ್ಪಾ ಮಗು ಬಾಲಕ.

ಸಖಿ: ನಮೋ ನಮೋ ದೊರೆಸಾನಿ ದಿವ್ಯ ಸುಜ್ಞಾನಿ.

ಶಾಂತಾದೇವಿ: ಅಮ್ಮಾ ಸಖೀಮಣಿಯೆ ನಿನಗೆ ಮಂಗಳವಾಗಲಿ ಮೇಲಕ್ಕೇಳು. ಅಮ್ಮಾ ದೊರೆಸಾನಿ ಹೇಳುತ್ತೇನೆ ಕೇಳಿ.

ಪದ

ಅರಸಿ ನೀ  ಕೇಳಮ್ಮಾ  ಕರೆಸೀದ  ಪರಿಯೇನು
ಸಂಭ್ರಮದಿಂದ  ಹೇಳಮ್ಮಾ  ತಾಯೆ ॥

ಸಖಿ: ಅಮ್ಮಾ ದೊರೆಸಾನಿ, ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಹೇಳುವಂಥವರಾಗಿರಿ.

ಪದ

ಕೇಳಮ್ಮ  ಸಖೀಮಣಿಯೆ  ಹರುಷದಿಂ ಪೇಳುವೆ
ಪ್ರಾಣಕಾಂತರು  ಈಗ  ಸಮರಕ್ಕೆ  ಹೋಗುವರು ॥

ಶಾಂತಾದೇವಿ: ಅಮ್ಮಾ ಸಖೀಮಣಿಯೆ, ಪ್ರಾಣಕಾಂತರು ಶಂಕರನೊಂದಿಗೆ ರಣಾಗ್ರವನ್ನು ಮಾಡುವುದು  ಸರಿಯಲ್ಲಾ. ಅವರನ್ನು ಮಕ್ಕಳೋಪಾದಿಯಲ್ಲಿ ಕಾಣಬೇಕು. ಆದ್ದರಿಂದ ಅವರೊಡನೆ ರಣಾಗ್ರವನ್ನು ಮಾಡುವುದು ಸರಿಯಲ್ಲವೆಂದು ಹೇಳಬೇಕಮ್ಮಾ ಸಖೀಮಣಿಯೆ.

ಪದ

ಅರಸಿ ಕೇಳಮ್ಮಾ  ವಿವರವೇನಿರುವದು  ಅದರ
ಮರ್ಮವು  ನನಗೆ  ತಿಳಿಯದು  ತಾಯೆ ॥

ಸಖಿ: ಅಮ್ಮಾ ದೊರೆಸಾನಿ, ನಿಮ್ಮ ರಮಾರಮಣರು ರಣಾಗ್ರಕ್ಕೆ ಹೋದರೆ ಯಾವ ತೊಂದರೆಯು ಆಗುವುದಿಲ್ಲಾ. ನೀವು ಎಷ್ಟು ಮಾತ್ರಕ್ಕೂ ಚಿಂತಿಸಬೇಡಮ್ಮಾ ದೊರೆಸಾನಿ ದಿವ್ಯ ಸುಜ್ಞಾನಿ.

ಶಾಂತಾದೇವಿ: ಅಮ್ಮಾ ಸಖೀಮಣಿಯೆ ಹೇಳುತ್ತೇನೆ ಕೇಳು.

ಪದ

ರಮಣಾ  ನಲ್ಲಿಗೆ  ನಾನು  ಹೋಗುವೆನಮ್ಮ  ಸಖಿಯೆ
ತೆರಳು  ನೀ ಅರಮನೆಗೆ  ತೆರಳಮ್ಮಾ  ಸಖಿಯೆ ॥

ಶಾಂತಾದೇವಿ: ಅಮ್ಮಾ ಸಖೀಮಣಿಯೆ ನಾನು ಪ್ರಾಣಕಾಂತರಲ್ಲಿಗೆ ಹೋಗುತ್ತೇನೆ. ನೀನು ಅರಮನೆಗೆ ತೆರಳುವಂಥವಳಾಗಮ್ಮಾ ಸಖಿಮಣಿಯೆ.

ಸಖಿ: ಅಮ್ಮಾ ದೊರೆಸಾನಿ ನಿಮ್ಮ ಇಷ್ಟದಂತೆ ಅರಮನೆಗೆ ತೆರಳುತ್ತೇನೆ.

ಭಾಮಿನಿ

ಇತ್ತಲಾ  ಶಾಂತಾದೇವಿಯು  ತನ್ನ
ಸಖಿಯೊಡನೆ  ಸಂಭಾಷಣೆಯ ಮಾಡಿ
ತನ್ನ  ಪತಿಯಾದ  ಮಯಬ್ರಹ್ಮದೇವರಲ್ಲಿಗೆ
ಸಂಭ್ರಮದಿ  ಬರುತಿರಲಾಗಲಾಕ್ಷಣಾ ॥

ಶಾಂತಾದೇವಿ: ಪ್ರಾಣಕಾಂತ ನಮಸ್ಕರಿಸುವೆನು.

ಮಯಬ್ರಹ್ಮ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ಕಾಂತೆ ಮತಿ ಗುಣವಂತೆ. ಹೇ ರಮಣಿ ನೀನು ಅರಮನೆಯಲ್ಲಿ ಸುಖವಾಗಿ ಇರುವುದನ್ನು ಬಿಟ್ಟು ಇಲ್ಲಿಗೆ ಬರಲು ಕಾರಣವೇನು.