ಪದ
ಯಾರಿವಳೀ ಸುಂದರೀಮಣಿಯಳು ಮಲಗಿರುವಳು
ಇವಳ ಅಂದವ ನಾನು ನೋಡುವೆನೀಗಾ ॥
ಸೂರ್ಯ: ಆಹಾ ಈ ಚಂದ್ರಕಾಂತಿ ಶಿಲೆಯ ಮೇಲೆ ಮಲಗಿರುವ ಈ ತರುಣೀಮಣಿಯು ಯಾರಾಗಿರಬಹುದು ಇವಳನ್ನು ನೋಡಿದರೆ ಹುಣ್ಣಿಮೆಯ ಚಂದ್ರನಂತೆ ತೋರುವಳಲ್ಲಾ. ಆಹಾ! ಇವಳನ್ನು ನೋಡಿದ ಮಾತ್ರವೆ ನನ್ನ ನೇತ್ರವು ! ಮುಚ್ಚುತ್ತಿರುವುದು. ಈಕೆ ಯಾರೆಂದು ಗೊತ್ತಾಗಲಿಲ್ಲವಲ್ಲಾ! ವಳ್ಳೇದು ಇವಳನ್ನು ಮಾತನಾಡಿಸಿ ನೋಡುತ್ತೇನೆ.
ಪದ
ತರುಣಿ ಮಣಿಯಳ ವಿವರವು ತಿಳಿಯದು
ಇವಳ ಅಂದವ ನೋಡಿ ಸೈಸೆನು ॥
ಸೂರ್ಯ: ಆಹಾ ! ಈಕೆಯನ್ನು ನೋಡಿದರೆ ಹಸ್ತಿನಿ ಪದ್ಮಿನಿ ಚಿತ್ತಿನಿ ಶಂಕಿನಿ ಎಂಬ ನಾಲ್ಕು ವರ್ಣದ ಸ್ತ್ರೀಯರಿಗಿಂತ ಹೊಳೆಯುತ್ತಿರುವಳಲ್ಲಾ ಇದೂ ಅಲ್ಲದೆ ಮುದ್ದು ಮುಖದಿಂದ ಮಲ್ಲಿಗೆ ಹೂವಿನಂತಿರುವಾ ಇವಳನ್ನು ನೋಡಿದರೆ ನನ್ನ ಮನಸ್ಸು ತಲ್ಲಣಿಸುತ್ತಿರುವುದು ಅಲ್ಲದೆ ಪಂಚ ಬಾಣವನ್ನು ಪಿಡಿದ ಮನ್ಮಥನು ನನ್ನನ್ನು ಬಾಧಿಸುತ್ತಿರುವನಲ್ಲಾ ಇದಕ್ಕೆ ನಾನೇನು ಮಾಡಲಿ. ಇರಲಿ! ಮತ್ತೊಂದು ಸಾರಿ ಮಾತನಾಡಿಸುವೆನು.
ಪದ
ಸುಂದರಿಯೊಳು ಮತ್ತೊಂದು ಮಾತನಾಡಲಿಲ್ಲ.
ಸೂರ್ಯ: ಕನ್ಯಾಮಣಿ ನಿನ್ನನ್ನು ಅಗಲಿ ಹೋಗುವೆನೆಂದರೆ ಕಾಮನು ನನ್ನನ್ನು ಬಾಧಿಸುವನಲ್ಲಾ. ಇವಳನ್ನು ನೋಡಿದರೆ ತಾವರೆಯ ಕಮಲದ ಎಸಳಿನಂತೆ ತೋರುವಳು. ಇವಳ ಹಲ್ಲುಗಳನ್ನು ನೋಡಿದರೆ ದಾಳಿಂಬದ ಬೀಜದಂತೆ ಕಾಣುತ್ತಿರುವುದು. ಇವಳ ನಡುವು ಸಿಂಹದ ನಡುವಿನಂತೆ ಕಾಣುತ್ತಿರುವುದು. ಈ ತರುಣೀ ಮಣಿಯು ಮೇಲಕ್ಕೆ ಏಳಲಿಲ್ಲವಲ್ಲಾ ! ಮತ್ತೊಂದು ಸಾರಿ ಮಾತನಾಡಿಸಿ ನೋಡುತ್ತೇನೆ.
ಪದ
ಯೀಶನ ! ಸತಿಯಾದ ಗಿರಿಜೆಯಾಗಿರುವಳೊ ಇಂದ್ರನ
ಸತಿಯಾದ ಶಚಿದೇವಿ ಇವಳೋ ॥
ಸೂರ್ಯ: ಆಹಾ ! ಇವಳು ಯೀಶ್ವರನ ಸತಿಯಾದ ಪಾರ್ವತಾ ದೇವಿಯಾಗಿರಬಹುದೆ ! ಇಲ್ಲಾ ಇಂದ್ರನ ಸತಿಯಾದ ಶಚಿದೇವಿಯಾಗಿರಬಹುದೆ ಯಾರಾದರೇನು ಮಾತನಾಡಿಸಿ ನೋಡುತ್ತೇನೆ.
ಪದ
ಉದ್ಯಾನ ವನದೊಳು ಇರಲು ಕಾರಣವೇನು ನಿನ್ನನ್ನು
ಪಡೆದಂಥ ತಂದೆ ತಾಯಿಗಳ್ಯಾರು ॥
ಸೂರ್ಯ: ಯಲೈ ಮುದ್ದು ಮೋಹಿನಿ ಎದ್ದುಬಂದು ಮಾತನಾಡು. ನೀನು ಯಾರು ನಿನ್ನ ಹೆಸರೇನು ಅಹಾ ! ಈ ಉದ್ಯಾನ ವನದೊಳಗಿರುವ ಲಕ್ಷ್ಮೀದೇವಿಯಾಗಿರಬಹುದೆ ಇದೂ ಅಲ್ಲದೆ ಬ್ರಹ್ಮನ ಸತಿಯಾದ ಸರಸ್ವತಿಯಾಗಿರಬಹುದೆ ಅಯ್ಯೋ! ಈ ಕನ್ಯಾಮಣಿಯು ಮೇಲಕ್ಕೇಳಲಿಲ್ಲವಲ್ಲಾ ಮತ್ತೊಂದು ಸಾರಿ ಮಾತನಾಡಿಸಿ ನೋಡುತ್ತೇನೆ.
ಪದ
ಸುಂದರಿ ಅಂದವ ನೋಡಿ ಸೈರಿಸಲಾರೆನು ನಾನು
ಮಾತನಾಡೆಲೆ ರಮಣಿ ನೀನೀಗ ಬೇಗ ॥
ಸೂರ್ಯ: ಆಹಾ ! ಇವಳನ್ನು ನೋಡಿದರೆ ನನ್ನ ಕಣ್ಣಿಗೆ ಗಜನಿಂಬೆ ಹಣ್ಣಿನಂತೆ ತೋರುವಳು ! ಆದರೆ ಇವಳು ನನ್ನನ್ನು ಆಲಂಗಿಸುತ್ತಾಳೋ ಇಲ್ಲವೋ ನೋಡುತ್ತೇನೆ ನಾನು ಇಲ್ಲಿ ಇರಬಾರದು ಸ್ವಲ್ಪ ಮರೆಯಾಗಿ ನಿಂತು ಪರೀಕ್ಷಿಸುತ್ತೇನೆ.
ಭಾಮಿನಿ
ಇತ್ತಲಾ ಉದ್ಯಾನವನದ ಚಂದ್ರಕಾಂತಿಯ
ಶಿಲೆಯ ಮೇಲೆ ಮಲಗಿರುವ
ಸಂಜ್ಞಾದೇವಿಯು ಕನಸಿನೊಳು
ಸೂರ್ಯ ಪ್ರಕಾಶವಾದ, ಪುರುಷನಂ
ಕಂಡು ಸಖಿಯೊಡನೆ ವೃತ್ತಾಂತವನು
ಹೇಳುತ್ತಿರಲಾಕ್ಷಣ ॥
ಸಂಜ್ಞಾದೇವಿ: ಆಹಾ ! ಇದೇನಾಶ್ಚರ್ಯ ಅಮ್ಮಾ ಸಖೀಮಣಿಯೆ ನನ್ನ ಸ್ವಪ್ನದಲ್ಲಿ ಸೂರ್ಯ ಪ್ರಕಾಶಮಾನವಾದ ಪುರುಷನನ್ನು ಕಂಡೆನಲ್ಲಾ ಇದೇನಮ್ಮಾ ಸಖಿಯೆ.
ಸಖಿ: ಅಹುದಮ್ಮಾ ಅಹುದು ನಾನು ಮೊದಲೇ ಹೇಳಲಿಲ್ಲವೇನಮ್ಮಾ. ನಾವು ಒಂಟಿಯಾಗಿ ಹೋಗಬಾರದೆಂದು ಹೇಳಲಿಲ್ಲವೇ.
ಪದ
ಸುಂದರ ಇವನ್ಯಾರು ಹೇಳಮ್ಮ ಸಖೀಮಣಿಯೆ
ಕೋಟಿ ಮನ್ಮಥನಂತೆ ಹೊಳೆಯುತ್ತಲಿಹರು ॥
ಸಂಜ್ಞಾದೇವಿ: ಅಮ್ಮಾ ಸಖೀಮಣಿಯೆ ಇಂಥ ಸುಂದರ ಪುರುಷರನ್ನು ನಾನು ಎಲ್ಲಿಯೂ ಕಾಣಲಿಲ್ಲಾ ಯಾರಾದರೇನು ಅರಮನೆಗೆ ಹೋಗೋಣ ಬಾರಮ್ಮಾ ಸಖಿಯೆ.
ಪದ
ಸುಂದರಿ ಇವಳನ್ನು ಎಂದಿಗೆ ಕೂಡುವೆನು
ಲಗ್ನವಾಗದೆ ನಾನು ಬಿಡುವನಲ್ಲಾ ॥
ಸೂರ್ಯ: ಆಹಾ ಈ ಕಾಮಿನಿಯನ್ನು ನಾನು ಎಂದಿಗೆ ಕೂಡುವೆನೋ ತಿಳಿಯದಲ್ಲ ಆ ಮೋಹನಾಂಗಿಯು ಯಾರಾಗಿರಬಹುದು ವಿಚಾರಿಸುತ್ತೇನೆ. ಎಲೈ ! ಕಾಮಿನಿ ನೀನು ಯಾರು ನಿನ್ನ ಹೆಸರೇನು ನಿನ್ನನ್ನು ಪಡೆದಂಥ ತಂದೆ ತಾಯಿಗಳ್ಯಾರು ಮರಮಾಜದೆ ನನ್ನೊಡನೆ ಪೇಳಬೇಕೈ ನಾರಿ ಮದನ ವೈಯ್ಯರಿ.
ಸಂಜ್ಞಾದೇವಿ: ಅಯ್ಯ ! ಪುರುಷನೆ ನಾವು ಯಾರೆಂದರೆ ಈ ಸೃಷ್ಟಿಗೆ ಶ್ರೇಷ್ಟವಾದ ಪೆಂದೋಟಪುರವನ್ನು ಪರಿಪಾಲಿಸುವಂಥ ಮಯಬ್ರಹ್ಮ ದೇವರಿಗೆ ಕುಮಾರಿಯಳಾದಂಥ ಸಂಜ್ಞಾದೇವಿಯೆಂದು ಕರೆಯುವರು. ನನ್ನ ತಂಟೆ ನಿಮಗೇತಕ್ಕೆ. ನೀವು ಬಂದ ದಾರಿಯನ್ನು ಹಿಡಿದುಕೊಂಡು ಹೊರಡುವಂಥವರಾಗಿರಿ. ಅಮ್ಮಾ ಸಖೀಮಣಿಯೆ ಅರಮನೆಗೆ ಹೋಗೋಣ ಬಾ.
ಸೂರ್ಯದೇವ: ಆಹಾ ! ಯೇನಾದರು ಆಗಲಿ. ಆ ಪೆಂದೋಟಪುರದ ಮಯಬ್ರಹ್ಮನ ಕುಮಾರಿಯಾದ ಸಂಜ್ಞಾದೇವಿಯನ್ನು ತಂದು ಲಗ್ನವಾಗಬೇಕು. ಎಂದಿಗು ಬಿಡುವುದಿಲ್ಲಾ. ಸಾರಥಿ ನಮ್ಮ ತಂದೆಯವರಾದ ಕಶ್ಯಪ ಮಹಾಮುನಿಗಳನ್ನು ಬರಮಾಡು.
ಭಾಮಿನಿ
ಇತ್ತಲಾ ಚಾರಕನು ಭಾನು ದೇವನು ಹೇಳಿದ
ವಿಷಯವಂ ಪರಿಗ್ರಹಿಸಿ ಕಶ್ಯಪ ಮುನಿಗಳ ಆಶ್ರಮಕೆ ಬರುತಿರಲು
ಇತ್ತ ಕಶ್ಯಪ ಮುನಿಗಳು ಸಂಭ್ರಮದಿ ಬರುತಿರಲಾಗ ॥
(ಕಶ್ಯಪ ಋಷಿಗಳ ಪ್ರವೇಶ)
ಪದ
ಹರಿಹರಿ ಶ್ರೀಪತಿ ಮುರಹರ ಕಾಂತಕ ಪರಮ
ಪುರುಷ ನೀನೆ ಕಾಪಾಡೊ ದೇವನೆ
ಸ್ಮರಿಸುವೆ ನಿನ್ನಯ ಚರಣ ಕಮಲವನು
ಸುರಚಿರ ಪದ ವಿಯ ಕೊಡು ದೇವನೆ
ಹರಿಹರಿ ಶ್ರೀಪತಿ ಮುರಹರ ಕಾಂತಕ ಪರ
ಪುರುಷ ನೀನೆ ಕಾಪಾಡೋ ದೇವನೆ ॥
ಕಶ್ಯಪ: ಅಯ್ಯ ಸಾರಥಿ ಶಾಂತಭಾವದಿಂದ ಬದ್ಧ ಪಾಣಿಯಾಗಿ ಮೃದು ವಚನದಿಂದ ಪಾದ ಪದ್ಮಂಗಳಿಗೆ ವಂದಿಸಿ ಬಂದವರಿಗೆ ಸನ್ಮಾನದಿಂದ ವಿಚಾರಿಸುವ ನೀನು ಯಾರು ನಿನ್ನ ನಾಮಾಂಕಿತವೇನು ಅಯ್ಯ ! ಸಾರಥಿ ನಾವು ಧಾರೆಂದರೆ ಜಪ ತಪಗಳನ್ನು ಮಾಡುವ ಕಶ್ಯಪ ಮುನಿಗಳೆಂದು ಕರೆಯುತ್ತಾರಪ್ಪಾ ! ಸಾರಥಿ. ಅಯ್ಯ ಸಾರಥಿ ನಾವು ಇಲ್ಲಿಗೆ ಬಂದ ಕಾರಣವೇನೆಂದರೆ ವನ ಸಂಚಾರಕ್ಕೆ ಬಂದಿರುತ್ತೇವಯ್ಯ ಸಾರಥಿ.
ಸಾರಥಿ: ಕಶ್ಯಪ ಮಹಾ ಮುನಿಗಳಿಗೆ ನಮಸ್ಕರಿಸುವೆನು ಸ್ವಾಮಿ ಕಶ್ಯಪಮುನಿಗಳೆ ನಿಮ್ಮ ಕಂದನಾದ ಸೂರ್ಯದೇವನು ನಿಮ್ಮನ್ನು ಕರೆದುಕೊಂಡು ಬರುವಂತೆ ಹೇಳಿರುವರು.
ಕಶ್ಯಪ: ಸಾರಥಿ ವಳ್ಳೇದು ಈಗಲೇ ಬರುವನು. ಸಾರಥಿ ನಾರದರನ್ನು ಬರಮಾಡು.
ನಾರದರ ಪ್ರವೇಶ
ಪದ
ಹರಿ ನಾರಾಯಣ ಹರಿ ನಾರಾಯಣ
ಹರಿ ನಾರಾಯಣ ಯನು ಮನವೆ ನಾರಾಯಣನೆಂಬೊ
ನಾಮದ ಮಂತ್ರವ ನಾರದ ಬಿತ್ತಿದ
ಧರೆಯೊಳಗೆ ನಾರಾಯಣ ದೇವಾ ॥
ನಾರದ: ಅಯ್ಯ ಸಾರಥಿ ಮುನಿಶ್ರೇಷ್ಠರ ಮನೋಭೀಷ್ಟವನ್ನು ತಿಳಿಯದೆ ಏಕನಿಷ್ಟೆಯಿಂದ ಪಾದಾಂಗುಷ್ಟಕ್ಕೆ ಸಾಷ್ಟಾಂಗ ಮಾಡುವ ಮಾನುಷ್ಯ ನೀಧಾರು ನಿನ್ನ ನಾಮಾಂಕಿತವೇನು.
ಅಯ್ಯ ಸಾರಥಿ ನಾವು ಧಾರೆಂದರೆ ಈ ಜಗದೋತ್ಪತ್ತಿಗ ಕಾರಣ ಕರ್ತರಾದ ನಾರಾಯಣನ ನಾಭಿ ಕಮಲದಲ್ಲಿ ಪುಟ್ಟಿದ ಚತುರ್ಮುಖ ಬ್ರಹ್ಮನ ಮಾನಸ ಪುತ್ರನಾಗಿ ಗಾನವಿದ್ಯ ಸಕಲಲೋಕಂಗಳನ್ನು ಸಂಚರಿಸುವ ಕಲಹ ಪ್ರಿಯರಾದ ನಾರದ ಮುನಿಗಳೆಂದು ತಿಳಿಯುವಂಥವನಾಗಪ್ಪಾ ಮಗು.
ಅಯ್ಯ ಸಾರಥಿ ಈವರ ಸಭೆಗೆ ಬಂದ ಕಾರಣವೇನೆಂದರೆ ಕಶ್ಯಪ ರುಷಿಗಳು ಕರೆಸಿದ ಕಾರಣ ಬಾಹೋಣವಾಯಿತು ಜಾಗ್ರತೆಯಾಗಿ ತೋರಿಸುವಂಥವನಾಗು.
ಕಶ್ಯಪ ಮುನಿಗಳಿಗೆ ನಮಸ್ಕರಿಸುವೆನು.
ಕಶ್ಯಪ: ನಿನಗೆ ಮಂಗಳವಾಗಲಿ ಮೇಲಕ್ಕೇಳೈ ನಾರದ.
ನಾರದ: ಸ್ವಾಮಿ ಕಶ್ಯಪರೆ ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಹೇಳುವಂಥವರಾಗಿರಿ.
ಕಶ್ಯಪ: ನಾರದ ! ಹೇಳುತ್ತೇನೆ ಕೇಳು.
ಪದ
ನಾರದ ಮುನಿ ಕೇಳು ಯನ್ನಯ
ಕುವರನು ಕಳುಹಿದ ಪರಿಯು
ತಿಳಿಯದು ನನಗೆ ದಿವಿಜರೊಡಗೂಡಿ
ಬರಬೇಕೆಂದೆನುತ ತಿಳಿಸಿರುವನು ಕೇಳು ನೀನು ॥
ಕಶ್ಯಪ: ಅಯ್ಯ ! ನಾರದ ನನ್ನ ಕಂದನಾದ ಸೂರ್ಯದೇವನು ಅಮರಪತಿಯಾದ ದೇವೇಂದ್ರನನ್ನು ನನ್ನನ್ನು ನಿಮ್ಮನ್ನು ಸಹ ಕರೆಯುವುದಕ್ಕೆ ಕಳಿಸಿರುವನು. ವಿಚಾರವೇನು ತಿಳಿಯದು ಜಾಗ್ರತೆಯಾಗಿ ಹೊರಡಬೇಕು.
ಪದ
ಹೊರಡೈ ಬೇಗ ಕಶ್ಯಪ ಮುನಿಯೆ
ಸುರಪತಿಯನ್ನು ಜೊತೆಗೊಂಡು ಬಾಲನ ಪರಿಯು
ತಿಳಿಯುವ ತನಕ ತಿಳಿಯದು
ನಮಗೆ ಮುನಿವರ ಕೇಳೈ ॥
ನಾರದ: ಸ್ವಾಮಿ ಕಶ್ಯಪ ಮುನಿಗಳೇ ಸುರಪತಿ ದೇವೇಂದ್ರನನ್ನು ಕರೆದುಕೊಂಡು ಹೋದರೆ ಯಾವ ವಿಚಾರವು ಗೊತ್ತಾಗುತ್ತದೆ. ಆದಕಾರಣ ನಿಮ್ಮ ಕಂದನಾದ ದೇವೇಂದ್ರನನ್ನು ಕರೆಸುವಂಥವರಾಗಿರಿ.
ಕಶ್ಯಪ: ಸಾರಥಿ ನನ್ನ ಕಂದನಾದ ದೇವೇಂದ್ರನನ್ನು ಜಾಗ್ರತೆಯಾಗಿ ಬರಮಾಡು.
(ದೇವೇಂದ್ರನ ಸಭೆ)
ದೇವೇಂದ್ರ: ಭಲೈ ! ಮಾನುಷ್ಯನೆ, ಹೀಗೆ ಬಾ ಮತ್ತೂ ಹೀಗೆ ಬಾ ಭಲೈ ಮಾನುಷ್ಯನೆ ಹೀಗೆ ಬಂದವರು ಧಾರು ಧಾರೆಂದು ಪರಿಪರಿ ಕ್ರುತಾಂತರಿತಬದ್ಧನಾಗಿ ಮಾತುಮಾತಿಗೆ ಭೀತಿಯಂ ಪಟ್ಟುಮಾತನಾಡಿಸುವ ಮಾನುಷ್ಯ ನೀ ಧಾರೋ ಹೀಗೆ ಬಾರೋ.
ಭಲೈ ಸಾರಥಿ, ನಾವು ಧಾರೆಂದರೆ ಅಮರಾವತಿ ಪಟ್ಟಣವನ್ನು ಪರಿಪಾಲಿಸುವಂಥ ದೇವೇಂದ್ರ ಮಹಾರಾಜರಿಗೆ ಕಾರ್ಯಾಲೋಚನೆಯನ್ನು ತಿಳಿಸುವಂಥ ಮಂತ್ರಿ ಶ್ರೇಷ್ಟನೆಂದು ತಿಳಿಯುವಂಥವನಾಗೋ ಸಾರಥಿ ಸಂಧಾನಮತಿ.
ಭಲೈ ಸಾರಥಿ ! ಈ ವರ ಸಭೆಗೆ ಬಂದ ಕಾರಣವೇನೆಂದರೆ ನಮ್ಮ ದೊರೆಯಾದ ದೇವೇಂದ್ರ ಮಹರಾಜರು ಕರೆಸಿಕೊಂಡ ಕಾರಣ ಬಾಹೋಣವಾಯಿತು. ಜಾಗ್ರತೆಯಾಗಿ ತೋರಿಸುವಂಥವನಾಗು.
ದೇವೇಂದ್ರ ಮಹಾರಾಜರಿಗೆ, ನಮಸ್ಕರಿಸುವೆನು ರಾಜೇಂದ್ರ ನನ್ನನ್ನು ಇಷ್ಟು ಜಾಗ್ರತೆಯಾಗಿ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಪೇಳುವಂಥವರಾಗಿರಿ.
ದೇವೇಂದ್ರ: ಅಯ್ಯ ಮಂತ್ರಿ ಹೇಳುತ್ತೇನೆ ಕೇಳು.
ಪದ
ಸಚಿವಾ ಶ್ರೇಷ್ಟನೆ ಮಂತ್ರಿ ನಿಚಯಾರು ಕಪ್ಪವನು
ವಚಿಸಿ ವಪ್ಪಿಸುತಿಹರೇ ಹೇಳೈಯ್ಯ ಮಂತ್ರಿ ॥
ದೇವೇಂದ್ರ: ಅಯ್ಯ ಮಂತ್ರಿ ! ನಮ್ಮ ರಾಜ್ಯದಲ್ಲಿ ರಾಜ್ಯಭಾರ ಮಾಡುವ ಯಮ ವರುಣ ಕುಭೇರರಾದಿಯಾಗಿ ಕಪ್ಪ ಕಾಣಿಕೆಯನ್ನು ತಂದು ವಪ್ಪಿಸುತ್ತಾರೇನೈಯ್ಯಾ ಮಂತ್ರಿ ಕಾರ್ಯದಲ್ಲಿ ಸ್ವತಂತ್ರಿ.
ಮಂತ್ರಿ: ರಾಜೇಂದ್ರ ಹೇಳುತ್ತೇನೆ ಕೇಳುವಂಥವರಾಗಿರಿ.
ಪದ
ಸರ್ವ ಪ್ರಜೆಗಳು ಎಲ್ಲಾ ಸೌಖ್ಯದಿಂದಿರುತಿಹರು
ಕಪ್ಪ ಕಾಣಿಕೆಯನು ವಪ್ಪಿಸುತಿಹರು ॥
ಮಂತ್ರಿ: ರಾಜೇಂದ್ರ ನಮ್ಮ ರಾಜ್ಯದಲ್ಲಿ ರಾಜ್ಯಭಾರ ಮಾಡುವ ಯಮ ವರುಣ ಕುಭೇರರಾದಿಯಾಗಿ ಕಪ್ಪ ಕಾಣಿಕೆಯನ್ನು ತಂದೊಪ್ಪಿಸುತ್ತಾರೈ ರಾಜೇಂದ್ರ.
ದೇವೇಂದ್ರ: ಅಯ್ಯ ಮಂತ್ರಿ ಹೇಳುತ್ತೇನೆ ಕೇಳು.
ಪದ
ಬ್ರಹ್ಮ ಕ್ಷತ್ರಿಯರೆಲ್ಲ ಸೌಖ್ಯದಿಂದಿರುತಿಹರೆ ॥
ದೇವೇಂದ್ರ: ಅಯ್ಯ ಮಂತ್ರಿ ನಮ್ಮ ರಾಜ್ಯದಲ್ಲಿ ವಿಶಾರದರಾದ ಬ್ರಾಹ್ಮಣೋತ್ತಮರಿಗೆ ಆದರಿಸಿ ಹುಣ್ಣಿಮೆ ಅಮವಾಸ್ಯೆ ಇತ್ಯಾದಿ ಕಾರ್ಯಗಳಲ್ಲಿ ಮಾಡುವ ಅಗ್ನಿಗೋತ್ರದ ದೆಸೆಯಿಂದ ಮಾಸ ಮಾಸಕ್ಕೆ ಸರಿಯಾಗಿ ಪದಾರ್ಥಗಳನ್ನು ವದಗಿಸಿಕೊಟ್ಟು ಈ ಸತ್ಯ ಸಿಂಹಾಸನಕ್ಕೆ ವುತ್ತಮವಾದ ಕಾರ್ಯವನ್ನು ನಡೆಸುತ್ತಿರುವೇನೈಯ್ಯಿ ಮಂತ್ರಿ ಕಾರ್ಯದಲ್ಲಿ ಸ್ವತಂತ್ರಿ.
ಮಂತ್ರಿ: ರಾಜೇಂದ್ರ ಅರಿಕೆ ಮಾಡಿಕೊಳ್ಳುತ್ತೇನೆ.
ಪದ
ಸರ್ವವರ್ಣದ ಜನರು ವ್ರತಗಳ ತಾವು ಬಿಡದೆ
ನಿರುತರಾಗಿಹರೈಯ್ಯ ಮಹಾರಾಜ ಕೇಳು ॥
ಮಂತ್ರಿ: ರಾಜೇಂದ್ರ ನಮ್ಮ ರಾಜ್ಯದಲ್ಲಿ ಸಮಸ್ತ ಪ್ರಜೆಗಳು ತಮ್ಮ ತಮ್ಮ ಆಚಾರ ವ್ಯವಹಾರಗಳನ್ನು ಬಿಡದೆ ಬಹಳ ನಿಷ್ಟೆಯಿಂದ ಇರುವರೈ ರಾಜೇಂದ್ರ.
ದೇವೇಂದ್ರ: ಅಯ್ಯ ಮಂತ್ರಿ ಹೇಳುತ್ತೇನೆ ಕೇಳು.
ಪದ
ಕಾಲಕಾಲಕೆ ಮಳೆಯು ನಡೆಸುವದೆ ಮಂತ್ರೀಶ ಸರ್ವ
ಪ್ರಜೆಗಳು ಎಲ್ಲಾ ಸೌಖ್ಯದಿಂದಿಹರೆ ॥
ದೇವೇಂದ್ರ: ಅಯ್ಯ ಮಂತ್ರಿ ನಮ್ಮ ರಾಜ್ಯದಲ್ಲಿ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗಿ ಬೆಳೆಗಳು ಬೆಳೆಯುವುದಲ್ಲದೆ ಗೋವುಗಳು ಅಮೃತವನ್ನು ಸುರಿಸುವುವೇನೈಯ್ಯ ಮಂತ್ರೀಶಾ.
ಮಂತ್ರಿ: ರಾಜೇಂದ್ರ ಅರಿಕೆ ಮಾಡಿಕೊಳ್ಳುತ್ತೇನೆ.
ಪದ
ಕಾಲಕಾಲಕ್ಕೆ ಮಳೆಯು ನಡೆಸುವುದು ರಾಜೇಂದ್ರ ಸರ್ವ
ಪ್ರಜೆಗಳು ಎಲ್ಲ್ಲ ಸೌಖ್ಯದಿಂದಿಹರು ॥
ಮಂತ್ರಿ: ರಾಜೇಂದ್ರ ನಮ್ಮ ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆಯಾಗಿ ಬೆಳೆಗಳು ಬೆಳೆಯುವುದಲ್ಲದೆ ಗೋವುಗಳು ಅಮೃತವನ್ನು ಸುರಿಸುತ್ತಿರುವವೈ ರಾಜೇಂದ್ರ.
ದೇವೇಂದ್ರ: ಅಯ್ಯ ನಿನ್ನಂಥ ಮಂತ್ರಿಯು ನನ್ನ ರಾಜ್ಯದಲ್ಲಿ ಇರುವಾಗ್ಗೆ ಯಾವುದಕ್ಕೆ ತೊಂದರೆ ಎಂದರೇನು. ಅಯ್ಯ ಮಂತ್ರಿ ರಂಭಾ ಸ್ತ್ರೀಯರನ್ನು ಆಸ್ಥಾನಕ್ಕೆ ಬರಮಾಡು.
ಮಂತ್ರಿ: ರಾಜೇಂದ್ರ ನಿಮ್ಮ ಇಷ್ಟದಂತೆ ಬರಮಾಡುತ್ತೇನೆ ಯಾರಲ್ಲಿ ! ರಂಭಾ ಸ್ತ್ರೀಯರನ್ನು ಜಾಗ್ರತೆ ಬರ ಮಾಡು.
(ರಂಬಾಸ್ತ್ರೀಯರು ಬರುವುದು)
ದ್ವಿಪದೆ
ಶ್ರೀ ಕಮಲದಳನಯನೆ ಕಾರುಣ್ಯ
ಮದನೆ ಸಂಗ ಸಖಿಯರು ಕೂಡಿ
ತುಂಗಸ್ನಾನವ ಮಾಡಿ ಕಂಗೊಳಿಪ ಸೀರೆಯನು
ಕಾಂತೆ ತಾನುಟ್ಟು ನಿಲುವು ಕನ್ನಡಿ ತರಿಸಿ
ಚಲುವೆ ತಾ ಮುಖವ ನೋಡಿ
ಈ ರೂಪು ಈ ಸೊಗಸಿಗೆ ತಕ್ಕ ಪುರುಷನಿಲ್ಲೆಂದೆನುತ
ತೆರೆಯೊಳಗೆ ನಿಂದಳಾ ಅಂಬುಜಾಕ್ಷಿ॥
ರಂಭಾ: ಅಪ್ಪಾ ಮಾನವ ಹೀಗೆ ಬಾ ! ಮತ್ತೂ ಹೀಗೆ ಬಾ. ಈ ಶ್ರುಂಗಾರವಾದ ರಂಗು ಮಂಟಪದಲ್ಲಿ ಬಂದು ನಿಂತು ಬಹಳ ವಿನಯ ವಚನದಿಂದ ಮಾತನಾಡಿಸುವ ಮಾನುಷ್ಯ ನೀ ಧಾರೋ ರನ್ನಾ ಗುಣ ಸಂಪನ್ನ.
ಅಣೈಯ್ಯ ಸಾರಥಿ ನಾವು ಧಾರೆಂದರೆ ಅಮರಾವತಿ ಪಟ್ಟಣವನ್ನು ಪರಿಪಾಲಿಸುವ ದೇವೇಂದ್ರ ಮಹರಾಜರಿಗೆ ಪ್ರೇಮದ ಪತ್ನಿಯಾದ ರಂಭೆಯೆಂಬುವ ದೇವನಾರಿಯು ನಾನೇ ಅಲ್ಲವೇನಪ್ಪಾ ಮಗು.
ಅಂಣೈಯ್ಯ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ಪ್ರಾಣಕಾಂತನು ಕರೆಸಿಕೊಂಡ ಕಾರಣ ಬಾಹೋಣವಾಯಿತು ಜಾಗ್ರತೆಯಾಗಿ ನನ್ನ ತಂಗಿಯಾದ ಊರ್ವಶಿಯನ್ನು ಆಸ್ಥಾನಕ್ಕೆ ಬರಮಾಡು.
ಊರ್ವಶಿ: ಅಪ್ಪಾ ಮಾನವ ಹೀಗೆ ಬಾ ಮತ್ತೂ ಹೀಗೆ ಬಾ ನೀತಿಚತುರತೆಯಿಂದ ಪ್ರೀತಿಯುಳ್ಳವನಾಗಿ ವಿನಯ ವಚನದಿಂದ ಮಾತನಾಡಿಸುವ ಮಾನುಷ್ಯ ನೀ ಧಾರೋ ರಂನ್ನ ಗುಣಸಂಪನ್ನ.
ಅಣೈಯ್ಯ ಸಾರಥಿ ನಾವು ಧಾರೆಂದರೆ ಅಮರಾವತಿ ಪಟ್ಟಣವನ್ನು ಪರಿಪಾಲಿಸುವಂಥ ದೇವೇಂದ್ರ ಮಹಾರಾಜರಿಗೆ ಪ್ರೇಮದ ಪತ್ನಿಯಾದ ಊರ್ವಶಿ ಎಂಬ ದೇವನಾರಿಯು ನಾನೇ ಅಲ್ಲವೇನಪ್ಪಾ ಸಾರಥಿ ಸಂಧಾನಮತಿ.
ಅಣೈಯ್ಯ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ನಮ್ಮ ಅಕ್ಕಯ್ಯನಾದ ರಂಭೆಯು ಕರೆಸಿಕೊಂಡ ಕಾರಣ ಬಂದಿರುತ್ತೇನೆ ಜಾಗ್ರತೆಯಾಗಿ ಕೂರಿಸುವಂಥವನಾಗು ॥
ಅಕ್ಕಯ್ಯ ನಮಸ್ಕರಿಸುವೆನು.
ರಂಭೆ: ತಂಗಿ ನಿನಗೆ ಮಂಗಳವಾಗಲಿ ಮೇಲಕ್ಕೇಳು.
ಊರ್ವಶಿ: ಅಕ್ಕಯ್ಯ ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಪೇಳುವಂಥವಳಾಗು.
ರಂಭೆ: ತಂಗಿ ಹೇಳುವೆನು ಕೇಳು.
ಪದ
ಕೇಳಮ್ಮ ತಂಗಿಯೆ ಕರೆಸಿದ ಪರಿಯನ್ನು
ಸಂಭ್ರಮ ದಿಂದ ಪೇಳೈ ಕೇಳಮ್ಮಾ ತಂಗಿ ಪ್ರಾಣ
ಕಾಂತರು ನಮ್ಮ ಕರೆಸಿರುವರು ಕೇಳು ಪೋಗೋಣ
ಬಾರಮ್ಮಾ ಬಾರಮ್ಮಾ ತಂಗಿ ॥
ರಂಭೆ: ಅಮ್ಮಾ ತಂಗಿ ನಿನ್ನನ್ನು ಕರೆಸಿಕೊಂಡ ಕಾರಣವೇನೆಂದರೆ ಪ್ರಾಣಕಾಂತರು ಈ ದಿವಸ ಸಭಾಗಾಯನಕ್ಕೆ ಕರೆಸಿರುವರು ಹೋಗೋಣ ಬಾರಮ್ಮಾ ತಂಗಿ.
ಊರ್ವಶಿ: ಅಕ್ಕಯ್ಯ ನಿನ್ನ ಇಷ್ಟದಂತೆ ಆಗಲಿ.
ಪದ
ಬಾ ಬಾ ಬಾರೆ ಬಾ ಸುಖಸಾರೆ ಬಾರೆ ನೀರೆ ಬಾ ವೈಯಾರೆ
ಮಿತಿ ಮೀರಿ ಸೇರಿ ಮೆರೆವೆ ಸಿತಕಾಂತಳಾಗಿ ನಲಿವೆ
ಬಾ ಬಾ ॥ಸುಂದರರಾಜ ತೇಜ ಚರಣಕ್ಕೆ ಎರಗುವೆವು ಪರಿಪರಿ
ಯಿಂದಲಿ ಪೇಳೈ ಬಾ ಬಾ ಬಾರೈ ಪರಿಪರಿ ಪುಷ್ಪದ
ಹಾರ ಕೊರಳಿಗೆ ಹಾಕುವೆ ಹಾರ ಕರೆಸೀದ ಕಾರಣವೇನೈ
ಪರಿಪರಿಯಿಂ ದಲಿ ಪೇಳೈ ಬಾ ಬಾರೆ ॥
ರಂಭೆ: ಪ್ರಾಣಕಾಂತರೆ ನಮಸ್ಕರಿಸುವೆವು.
ದೇವೇಂದ್ರ: ನಿಮಗೆ ಮಂಗಳವಾಗಲಿ ಮೇಲಕ್ಕೇಳಿರೈ ಕಾಂತಾಮಣಿಯರೆ.
ಊರ್ವಶಿ: ಪ್ರಾಣಕಾಂತರೆ ನಮ್ಮನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಜಾಗ್ರತೆಯಾಗಿ ಹೇಳುವಂಥವರಾಗಿರಿ.
ದೇವೇಂದ್ರ: ಯಲೌ ನಾರಿಯರೆ ನಿಮ್ಮನ್ನು ಕರೆಸಿಕೊಂಡ ಕಾರಣವೇನೆಂದರೆ ಇಲ್ಲಿ ಕುಳಿತಿರುವ ಸಭಿಕರ ಮನಸ್ಸು ನನ್ನ ಮನಸ್ಸು ಆನಂದವಾಗುವಂತೆ ನಿಮ್ಮ ಗಾನನಾಂಟ್ಯವನ್ನು ತೋರಿಸುವಂಥ.
ರಂಭೆ: ಪ್ರಾಣಕಾಂತರೆ ನಿಮ್ಮ ಇಷ್ಟದಂತೆ ಆಗಲಿ.
(ರಂಭೆ ಊರ್ವಶಿರ ನೃತ್ಯ)
ರಂಭೆ: ಪ್ರಾಣಕಾಂತರೆ ನಿಮ್ಮ ಅಪ್ಪಣೆಯಂತೆ ಗಾನನಾಂಟ್ಯವನ್ನು ಆಡಿದ್ದಾಯಿತು ಮತ್ತೇನಪ್ಪಣೆ.
ದೇವೇಂದ್ರ: ಯಲೌನಾರಿಯರೆ ನಿಮ್ಮ ಗಾನ ನಾಂಟ್ಯಕ್ಕೆ ಬಹಳ ಸಂತೋಷವಾಯಿತು ಅಯ್ಯ ಮಂತ್ರಿ, ಇವರಿಗೆ ಬೇಕಾದ ವುಡುಗೊರೆ ಬಹುಮಾನಗಳನ್ನು ಕೊಟ್ಟು ಕಳಿಸುವಂಥವನಾಗು.
ಮಂತ್ರಿ: ರಾಜೇಂದ್ರ ನಿಮ್ಮ ಅಪ್ಪಣೆಯಂತೆ ಕೊಡುತ್ತೇನೆ ಯಲೌ ನಾರಿಯರೆ ನಾನು ಕೊಡುವ ಉಡುಗೊರೆ ಬಹುಮಾನಗಳನ್ನು ತೆಗೆದು ಕೊಳ್ಳುವಂಥವರಾಗಿರಿ.
ರಂಭೆ ಊರ್ವಶಿ: ಹಾಗಾದರೆ ಕೊಡುವಂಥವರಾಗಿರಿ.
ಊರ್ವಶಿ: ಅಕ್ಕಯ್ಯ ಹೇಳುತ್ತೇನೆ ಕೇಳು.
ಪದ
ನಾಥನ ಮನಸಿನ ರೀತಿಯ ನೋಡಿದೆಯಾ
ಯಾತರ ಮನಸ್ಸಿದು ಖ್ಯಾತಿ ಪಡೆಯುವುದು
ಊರ್ವಶಿ: ಅಕ್ಕಯ್ಯನಾದ ರಂಭೆಯೆ ಕೇಳು ನೆನ್ನೆಯದಿವಸ ಸ್ಮರನ ಕಾರ್ಮುಖಕ್ಕೆ ನಿತ್ತರಿಸಲಾರದೆ ಸುರನಾಥರಾದ ದೇವೇಂದ್ರ ಭೂಪಾಲರು ಬರುವ ಮಾರ್ಗವಂ ಹಿಡಿದು ನಟನೆಯಂ ತೋರಿ ಆ ಮಂಜುಭಾಷಿಣಿಯು ಸರಸ ಸಲ್ಲಾಪಕ್ಕೆ ಕರೆದುಕೊಂಡು ಹೋದಳಂತೆ. ನನ್ನಲ್ಲಿ ರೂಪುಗುಣ ಯೌವನ ಇವು ಮೂರರೊಳ್ ಯಾವುದು ತಾನೆ ಕಮ್ಮಿಯಾಗಿರುವುದೆ ಅಕ್ಕಯ್ಯ.
ರಂಭೆ: ತಂಗಿ ಹೇಳುತ್ತೇನೆ ಕೇಳು.
ಪದ
ಬಾರಾದ ಪುರುಷರು ಸೇರಾರು ಎನ್ನುತ
ನಾರಿ ಮಣಿಯೆ ನಿನ್ನ ಊರ್ವಶಿ ಎನುತಾ ॥
ರಂಭೆ: ತಂಗಿಯೆ ತತ್ಕಾಲ ಭ್ರಮೆಗೆ ಅಲ್ಪರಿದು ಮನುಷ್ಯನ ಮಂದಿರಕ್ಕೆ ಬಾರೆನೆಂದು ಕಾಮನ ಲಂಪಟಕ್ಕೆ ಅಥವಾ ಕಂದರ್ಪನ ಬಾಣಕ್ಕೆ ತತ್ತರಪಡುವುದು ಸರಿಯೆ ಮನ್ಮಥನ ಸಿರಿಯೆ.
ಊರ್ವಶಿ: ಅಕ್ಕಯ್ಯ ನಿನ್ನ ಇಷ್ಟದಂತೆ ಆಗಲಿ.
ರಂಭೆ: ತಂಗಿ ಹಾಗಾದರೆ ಅರಮನೆಗೆ ಹೋಗೋಣ ಬಾ.
ಊರ್ವಶಿ: ಅಕ್ಕಯ್ಯ ಹೋಗೋಣ ನಡಿ.
ಚಾರಕ: ದೇವೇಂದ್ರ ಮಹಾರಾಜರಿಗೆ ಜಯವಾಗಲಿ.
Leave A Comment