ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಬಾಗೇಶಪುರದ
ಭಾಗವತ ಚಿಕ್ಕೇಗೌಡರು ೦೮-೦೨-೧೯೩೧ರ ಪ್ರತಿಯಿಂದ ಹಾಸನ ಜಿಲ್ಲೆ,
ಅರಸೀಕೆರೆ ತಾಲ್ಲೂಕು ಕೆಲ್ಲಂಗೆರೆ ಶೆಟ್ಟರ ಮಕ್ಕಳಾದ ಭಾಗವತ ಚನ್ನಪ್ಪನವರು
ತಾರೀಕು ೦೨-೦೮-೧೯೬೧ ರಂದು ಪ್ರತಿಮಾಡಿದ್ದು

 

ಶ್ರೀ ಗುರುವೇನಃ

ಶ್ರೀ ಗಂಗಮಾಳಮ್ಮ ಪ್ರಸನ್ನ

ಸೂರ‌್ಯ ವಿವಾಹ ಬರೆಯುವುದಕ್ಕೆ ಶುಭಮಸ್ತು

ಗಣಸ್ತುತಿ

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕದಂತಂ ಭಕ್ತಾನಾಂ  ಏಕದಂತ ಮುಪಾಸ್ಮಯೇ ॥

ಶಾರದಾ ಸ್ತೋತ್ರ

ನಮಸ್ತೇ ಶಾರದಾದೇವಿ  ಕಾಶ್ಮೀರಪುರ
ವಾಸಿನಿ  ತ್ಪಾ ಮನಂ  ಪ್ರಾರ್ಥೆಯೆ ದೇವಿ
ವಿದ್ವಾ  ರಂಚ  ದೇಯಿಮೇ ॥

ಗುರು ಸ್ತೋತ್ರ

ಗುರು ಬ್ರಹ್ಮ  ಗುರು ರ್ವಿಷ್ಣು  ಗುರುರ್ದೇವೋ ಮ
ಹೇಶ್ವರಾಃ  ಗುರು ಸಾಕ್ಷಾತ್  ಪರಬ್ರಹ್ಮಾ  ತ
ಸ್ಮೈಶ್ರೀ  ಗುರುವೇ ನಮಃ ॥

ಮಹಾಕಾಳಿ ಸ್ತೋತ್ರ

ಮಹಾಕಾಳಿ ಪಾರ್ವತದೇವಿ  ಪಾಲಿಸೇ
ಅನುದಿನ  ನಿಮ್ಮನು  ಭಕ್ತಿಯಿಂದಲಿ
ಕರಮುಗಿದು  ಬೇಡುವೆ  ಮಹಾತಾಯೆ
ಅಮ್ಮಾ ॥ಮಹಾಂಕಾಳಿ ॥ಅರಿಯದ  ನಮ್ಮನು
ಕರುಣದಿಂದಲಿ  ನೀವು  ಕರುಣಿಸಿ ಕಾಪಾ
ಡು  ಮಹತಾಯೆ  ಅಮ್ಮಾ  ಮಹಂಕಾಳಿ ॥

ಗಣಪತಿ ಸ್ತೋತ್ರ

ಗಜರಾಜನೆ  ನಮಗೆ  ಪಾಲಿಸು  ವರಬೇಗ
ಕರುಣಿಸು  ಗಜರಾಜ  ವರ ನಮಗೆ ಬೇಗಾ ॥

ಶಾರದಾ ಸ್ತೋತ್ರ

ಶಾರಾದಾಂಬೆಯೆ  ನೀನು  ಪಾಲಿಸು  ವರ
ನಮಗೆ  ಕರುಣಿಸು  ಮಹತಾಯೆ  ವರ
ನಮಗೆ ಬೇಗಾ ॥

ಗಣಪತಿ: ಭಲೈ ! ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ ಭಲೈ ಮಾನುಷ್ಯನೆ ಹೀಗೆ ಬಂದವರು ಧಾರು ಧಾರೆಂದು ಪರಿಪರಿ ಕೃತಾಂಚರಿತ ಬದ್ಧನಾಗಿ ಮಾತು ಮಾತಿಗೆ ಭೀತಿಯಂ ಪಟ್ಟು ಮಾತನಾಡಿಸುವ ಮಾನುಷ್ಯ ನೀ ಧಾರೋ ಹೀಗೆ ಬಾರೋ ಭಲೈ ಮಾನುಷ್ಯನೇ ನಾವು ಧಾರೆಂದರೆ ಕೈಲಾಸದಲ್ಲಿ ವಾಸವಾಗಿರುವ ಪರಮೇಶ್ವರನ ಪುತ್ರನಾದ ವಿಘ್ನೇಶ್ವರನೆಂದು ತಿಳಿಯಲೈ ಸಾರಥಿ ಸಂಧಾನಮತಿ.

ಭಲೈ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ನೀವು ಮಾಡುವ ಸೂರ‌್ಯ ವಿವಾಹವೆಂಬ ಕಥೆಗೆ ಯಾವ ವಿಘ್ನವು ಬಾರದಂತೆ ವರವನ್ನು ಕೊಟ್ಟಿರುತ್ತೇನೆ ಭಲೈ ಸಾರಥಿ ನಾವು ಬಂದು ಬಹಳ ಹೊತ್ತಾಯಿತು ನಾವಾದರೆ ಕೈಲಾಸಕ್ಕೆ ತೆರಳುತ್ತೇನೈ ಸಾರಥಿ ಸಂಧಾನಮತಿ.

ಬಾಲಕ್ರಿಷ್ಣ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ ಭಲೈ ಮಾನುಷ್ಯನೇ ಹೀಗೆ ಬಂದವರು ಧಾರು ಧಾರೆಂದು ಪರಿಪರಿ ಕೃತಾಂಚರಿತ ಬದ್ಧನಾಗಿ ಮಾತು ಮಾತಿಗೆ ಭೀತಿಯಂ ಪಟ್ಟು ಮಾತನಾಡಿಸುವ ಮಾನುಷ್ಯ ನೀ ಧಾರೋ ಹೀಗೆ ಬಾರೋ.

ಭಲೈಸಾರಥಿ ನಮ್ಮ ವೃತ್ತಾಂತ್ತವನ್ನು ಹೇಳುತ್ತೇನೆ ಕೇಳುವಂಥವನಾಗು.

ಪದ

ಭೂಮಿಯ ಜನರನ್ನು  ಪ್ರೇಮದಿಂ  ಪೊರೆವಂಥ
ಹರುಷದಿಂ  ಮೆರೆವಂಥ  ಹರಿಯು  ನಾನಲ್ಲವೆ ॥

ಬಾಲಕೃಷ್ಣ: ಭಲೈ ಸಾರಥಿ ಈ ಲೋಕವನ್ನು ಉತ್ಪತ್ತಿ ಮಾಡುವುದಕ್ಕೆ ಬ್ರಹ್ಮನೇ ಕರ್ತನು ಆತನು ಉತ್ಪತ್ತಿ ಮಾಡಿದ ಸಚರಾಚರ ಪ್ರಾಣಿಗಳನ್ನು ಸಲಹುವುದಕ್ಕೆ ನಾನೇ ಕರ್ತನು ಪ್ರಳಯ ಕಾಲಕ್ಕೆ ರುದ್ರನೇ ಕರ್ತನು ಭಲೈ ಸಾರಥಿ ಮತ್ತೂ ಹೇಳುತ್ತೇನೆ.

ಪದ

ಶರಧಿಯ  ಮಧ್ಯದಿ ಇರುವ  ದ್ವಾರಕಾವತಿಯ
ಹರುಷದಿಂ  ಮೆರೆವಂಥ  ಹರಿಯು  ನಾನಲ್ಲವೇ
ಹರೇನಂದಾ  ಇಂದು ವದನ ದೇವಾ ॥

ಬಾಲಕೃಷ್ಣ: ಭಲೈ ಸಾರಥಿ ಸಿಂಧುವಿನ ಮಧ್ಯದಲ್ಲಿರುವ  ಅಂದವಾದ ದ್ವಾರಾಕಾವತಿ ಪಟ್ಟಣವನ್ನು ಪರಿಪಾಲಿಸುವಂಥ ಶ್ರೀ ಕೃಷ್ಣಮೂರ್ತಿ ನಾನೇ ಅಲ್ಲವೇನೈ ಸಾರಥಿ ಸಂಧಾನಮತಿ  ಮತ್ತೂ ಹೇಳುತ್ತೇನೆ.

ಪದ

ದೇವಕಿ  ಯೊಳು  ಪುಟ್ಟಿ  ಮಾವ ಕಂಸನ  ಕೊಂದೆ
ಹರು  ಷದಿ  ಮೆರೆವಂಥ  ಹರಿಯು
ನಾನಲ್ಲವೇ  ಹರೇನಂದಾ  ಇಂದುವದನ ದೇವಾ ॥

ಬಾಲಕೃಷ್ಣ: ಭಲೈ ಸಾರಥಿ ದೇವಕಿದೇವಿಯು ಗರ್ಭದೋಳ್ ಜನಿಸಿ ಮಾವನಾದ ಕಂಸಾಸುರನನ್ನು ಕೊಂದಂಥ ಶ್ರೀ ಕೃಷ್ಣ ಮೂರ್ತಿ ನಾನೇ ಅಲ್ಲವೇನೈ ಸಾರಥಿ ಸಂಧಾನಮತಿ.

ಕಥಾ ಪ್ರಾರಂಭ

(ಮಯಬ್ರಹ್ಮನ ಸಭೆ)

ತ್ರಿವುಡೆ

ಇಂದು  ಬಿನ್ನಹ  ನಿಮಗೆ  ಮುನಿಪತಿ  ಭಾನುದೇವಗೆ
ಲಗ್ನ ಮಾಡಿದ  ಪರಿಯ  ಪೇಳುವೆ
ಮುದದೀ  ನಾನು ನಿಮಗೆ  ಕೇಳು ಧರ್ಮಜ
ಮುದದಿ  ಪೇಳುವೆ  ಮಯ ಬ್ರಹ್ಮನ
ಕುವರಿಯನ್ನು  ಬಯಸಿ  ಸೂರ‌್ಯನು  ಮುನಿದ
ನಾರದ  ಮಾಡಿದ ಪರಿಯಾ  ಧರಣಿಯೊಳು
ಮಯಬ್ರಹ್ಮನೆಂಬನು  ಧರ್ಮ  ಕರ್ಮವ ಬಿಡದೆ
ಪಾಲಿಪ  ಅರಸರಾದ್ಯರು  ಎಲ್ಲಿರುವರು  ವಿಧೇಯರಾಗಿ ॥
ಇಂದು  ಮಯಬ್ರಹ್ಮನಿಗೆ  ಸೌಗ್ನದೇವಿ  ಯೆಂಬ  ಹೆಸರಿನ
ಚಂದ್ರನಂದದಿ ರೂಪು  ವುಳ್ಳ  ಚೆಲ್ವೆ ಇಹಳು
ಆಕೆ ರೂಪಿಗೆ ಮೆಚ್ಚಿ ಸೂರ‌್ಯನು  ಚಂಚಲಾಕ್ಷಿಯ  ತರುವ
ಕಾರಣ ದಂದೆ  ಮಕ್ಕಳು ಕೂಡಿಕೊಂಡು  ಮುದದಿ  ಯೋಚಿಸಿದ ॥

ಮಯಬ್ರಹ್ಮ: ಭಲೈ ಸಾರಥಿ ನಾವು ಧಾರೆಂದರೆ ಈ ಬ್ರಹ್ಮಾಂಡದೋಳ್ ಅಖಂಡವಾದ ಹಸ್ತದೋಳ್ ಬಾಣವಂ ಪಿಡಿದು ಧೈರ‌್ಯದಿಂದ ನಿಂತುಕೊಂಡು ಮಂಡಿತವಾದ ಖಡ್ಗಾಯುಧದಿಂದ ಕಾಲಮಂಡೆಯಿಂತೆ ಅವರ ರುಂಡವಂ ಕಂಡ್ರಿಸಿ ಯಕ್ಷ ರಕ್ಷ ದಾನವರಿಗೆ ಮತ್ತು ಈ ಸೃಷ್ಟಿ ಸ್ಥಿತಿ ಲಯಗಳಿಗೆ ವಡೆಯನಾದ ಮಯ ಬ್ರಹ್ಮದೇವರೆಂದು ತಿಳಿಯೈ ಸಾರಥೀ ಸಂಧಾನಮತಿ. ಭಲೈ ಸಾರಥಿ ಈ ವರ ಸಭೆಗೆ  ಬಂದ ಕಾರಣವೇನೆಂದರೆ ನನ್ನ ಪ್ರಧಾನ ಮಂತ್ರಿಯನ್ನು ಆಸ್ಥಾನಕ್ಕೆ ಬರಮಾಡು.

ಮಂತ್ರಿ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ ಭಲೈ ಮಾನುಷ್ಯನೆ ನಮ್ಮ ಯದುರಿನಲ್ಲಿ ಬಂದು ನಿಂತು, ಭಯವಿಲ್ಲದೆ ಮಾತನಾಡಿಸುವ, ಮಾನುಷ್ಯ, ನೀ ಧಾರೋ, ಹೀಗೆ ಬಾರೋ. ಭಲೈ ಸಾರಥಿ! ನಾವು ಧಾರೆಂದರೆ ಈ ಸೃಷ್ಟಿಗೆ ಶ್ರೇಷ್ಟವಾದ ಪಂದೋಟಪುರವನ್ನು ಪರಿಪಾಲಿಸುವಂಥ ಮಯಬ್ರಹ್ಮದೇವರಿಗೆ ಪ್ರೇಮದ  ಮಂತ್ರೀಶನೆಂದು ತಿಳಿಯುವಂಥವನಾಗೋ ಸಾರಥಿ ಸಂಧಾನಮತಿ ಭಲೈ ಸಾರಥಿ ! ಈ ವರ ಸಭೆಗೆ ಬಂದ ಕಾರಣವೇನೆಂದರೆ ! ನಮ್ಮ ಮಯಬ್ರಹ್ಮದೇವರು ಕರೆಸಿಕೊಂಡ ಕಾರಣ ಬಾಹೋಣವಾಯಿತು. ಜಾಗ್ರತೆಯಾಗಿ ತೋರಿಸುವಂಥವನಾಗೋ ಸಾರಥಿ ಸಂಧಾನಮತಿ.

ಮಂತ್ರಿ: ಮಯಬ್ರಹ್ಮ ದೇವರಿಗೆ ನಮುಸ್ಕರಿಸುವೆನು.

ಮಯಬ್ರಹ್ಮ: ನಿನಗೆ ಮಂಗಳವಾಗಲಿ ಮೇಲಕ್ಕೆಳೈ ಮಂತ್ರಿ ಕಾರ್ಯದಲ್ಲಿ ಸ್ವತಂತ್ರಿ.

ಮಂತ್ರಿ: ರಾಜೇಂದ್ರ ! ನನ್ನನ್ನು ! ಇಷ್ಟು ಜಾಗ್ರತೆಯಾಗಿ ಬರಮಾಡಿಕೊಂಡ ಕಾರಣವೇನು ಜಾಗ್ರತೆಯಾಗಿ ಪೇಳುವಂಥವರಾಗಿರಿ.

ಮಯಬ್ರಹ್ಮ: ಅಯ್ಯ ಮಂತ್ರಿ ಹೇಳುತ್ತೇನೆ ಕೇಳುವಂಥವನಾಗು.

ಪದ

ಮಂತ್ರಿ  ಶೇಖರ ಕೇಳು  ಪೇಳುವೆ ನಾನೀಗ
ಸರ‌್ವ ಪ್ರಜೆಗಳು ಎಲ್ಲ  ಕಪ್ಪ ಕಾಣಿಕೆಯಾ ॥

ಮಯ: ಅಯ್ಯ ಮಂತ್ರಿ ! ಈ ಧಾರುಣಿಯ ಮೇಲಿರುವ ರಾಜಾಧಿರಾಜರೆಲ್ಲರು ಕಾಲಕಾಲಕ್ಕೆ ಕಪ್ಪ ಕಾಣಿಕೆಯನ್ನು ತಂದು ವಪ್ಪಿಸುವರೊ ಹೇಗೆ ಜಾಗ್ರತೆಯಾಗಿ ಪೇಳಬೇಕೈ ಮಂತ್ರಿ ಕಾರ್ಯದಲ್ಲಿ ಸ್ವತಂತ್ರಿ.

ಮಂತ್ರಿ: ರಾಜೇಂದ್ರ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ರಾಜ ಲಾಲಿಸು  ಎನ್ನ  ಬಿನ್ನಪವನ್ನು
ಬೇಗ ಸರ‌್ವ ಪ್ರಜೆಗಳು  ಎಲ್ಲ  ಕಪ್ಪ ಕಾಣಿಕೆಯ ॥

ಮಂತ್ರಿ: ರಾಜೇಂದ್ರ ನಮ್ಮ ರಾಜ್ಯಕಾರ್ಯವು ಹ್ಯಾಗಿರುವುದೆಂದರೆ ತಮ್ಮ ಆಜ್ಞೆಯಂತೆ ಸರ‌್ವರು ಸುಭಿಕ್ಷೆಯಲ್ಲಿ ಇರುವರಲ್ಲದೆ ಕಾಲ ಕಾಲಕ್ಕೆ ಸರಿಯಾಗಿ ಕಪ್ಪಕಾಣಿಕೆಯನ್ನು ತಂದು ವಪ್ಪಿಸುತ್ತಾರೈ ರಾಜೇಂದ್ರ.

ಮಯಬ್ರಹ್ಮ: ಅಯ್ಯ ಮಂತ್ರಿ ಹೇಳುತ್ತೇನೆ ಕೇಳುವಂಥವನಾಗು.

ಪದ

ಕಾಲಕಾಲಕ್ಕೆ  ಮಳೆಯು  ನಡೆಸುವದೆ ಮಂತ್ರೀಶ
ಸರ‌್ವದೇಶಗಳೆಲ್ಲಾ ಸೌಖ್ಯದಿಂದಿಹರೆ ॥

ಮಯಬ್ರಹ್ಮ: ಅಯ್ಯ ಮಂತ್ರಿ ! ನಮ್ಮ ರಾಜ್ಯದಲ್ಲಿ ಕಾಲ ಕಾಲಕ್ಕೆ ಮಳೆಯಾಗಿ ಬೆಳೆಗಳು ಬೆಳೆಯುವುದಲ್ಲದೆ ಮತ್ತು ಅ ಕೈಲಾಸವಾಸನಾದ ಪರಮೇಶ್ವರನು ಲೋಕಕ್ಕೆ ಪಡಿಯನ್ನು ಅಳೆದು ಪ್ರಜೆಗಳನ್ನು ಕಾಪಾಡುವರೋ ಹೇಗೆ ಜಾಗ್ರತೆಯಾಗಿ ತಿಳಿಸುವಂಥವನಾಗು.

ಮಂತ್ರಿ: ರಾಜೇಂದ್ರ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಮನುಜರಂದದಿ ನೀವು  ಮಾತನಾಡುವುದ ನೋಡಿ
ಸರ‌್ವ  ಪ್ರಜೆಗಳು ಎಲ್ಲ  ನಿಮ್ಮಾಜ್ಞೆಯಂತೆ ॥

ಮಂತ್ರಿ: ರಾಜೇಂದ್ರ ತಾವು ಮನುಷ್ಯರಂತೆ ಮಾತನಾಡುವುದನ್ನು ನೋಡಿದರೆ ನನ್ನನ್ನು ಪರಿಹಾಸ್ಯ ಮಾಡುವ ಹಾಗೆ ಕಾಣುವುದು  ಸಮಸ್ತ ಲೋಕದಲ್ಲಿಯೂ ನಡೆಯುವ ವಿಚಾರವು ತಮ್ಮ ದ್ರಿಷ್ಟಿಗೆ ಗೋಚರವಾಗುವುದು. ಆದ್ದರಿಂದ ನನ್ನನ್ನು ಕೇಳಿದರೆ ನಾನು ನಿಮಗೆ ಹೇಳುವುದೇನೈ ರಾಜೇಂದ್ರ.

ಮಯ: ಅಯ್ಯ ಮಂತ್ರಿ ಹೇಳುತ್ತೇನೆ ಕೇಳು.

ಪದ

ಇಂತು  ಸಂಭ್ರಮದಿಂದ  ಕುಳಿತರೆ ಎಲ್ಲರು
ಕುರಿತು  ಮಾಡಿದ  ಕಾರ್ಯ  ಪೇಳು ॥

ಮಯ: ಅಯ್ಯ ಮಂತ್ರಿ, ನೀನು ಹೇಳಿದ ಮಾತನ್ನು ಕೇಳಿ ನನ್ನ ಮನಸ್ಸಿಗೆ ಬಹಳ ಸಂತೋಷವಾಯಿತು! ಅಯ್ಯ ಮಂತ್ರಿ, ನೀನು ಮಾತ್ರ ಸಮಸ್ತ ಕಾರ್ಯಗಳಲ್ಲಿ ಯಾರಿಗು ಅವಕಾಶ ಕೊಡದಂತೆ ಪ್ರಜೆಗಳು ನೇಮವನ್ನು ಅನುಸರಿಸುವಂತೆ ಈ ರಾಜ್ಯ ಕಾರ್ಯಗಳಲ್ಲಿ ನಿರತನಾಗಿರುವಂಥವನಾಗೈ ಮಂತ್ರಿ ಕಾರ್ಯದಲ್ಲಿ ಸ್ವತಂತ್ರಿ.

ಮಂತ್ರಿ: ರಾಜೇಂದ್ರ ನಿಮ್ಮ ಅಪ್ಪಣೆಯಂತಾಗಲಿ.

ಭಾಮಿನಿ

ಇತ್ತಲಾ ಮಯಬ್ರಹ್ಮನು ತನ್ನ ಮಂತ್ರಿಯೊಡನೆ
ರಾಜ್ಯಭಾರ ಕ್ರಮವ, ಸಂಭಾಷಣೆಯ ಮಾಡಿ,
ಅರಮನೆಗೆ ತೆರಳಲಾಗಿ ಲಾಕ್ಷಣ ಇತ್ತಲಾ ತನ್ನ
ಕುಮಾರಿಯಾದ ಸೌಗ್ನಾದೇವಿಯು  ಸಂಭ್ರಮದಿ ಬರುತಿರಲಾಗ ॥

(ಸಂಜ್ಞಾದೇವಿ ಬರುವುದು)

ಶ್ರೀ ಕಮಲದಳ ನಯನೆ  ಕಾರುಣ್ಯಸದನೆ ಸಂಗ ! ಸಖಿಯರು !
ಕೂಡಿ  ತುಂಗ ! ಸ್ನಾನವ ಮಾಡಿ ಕಂಗೊಳಿಪ ಸೀರೆಯನು
ಕಾಂತೆ ತಾನುಟ್ಟು  ನಿಲುವು ಕನ್ನಡಿ ತರಿಸಿ ಚಲುವೆ
ತಾಮುಖವ ನೋಡಿ ಈ ರೂಪು ಈ ಸೊಬಗು
ಸುಖಿಸುವ ತಕ್ಕ ಪುರುಷನಿಲೆಂದೆನುತ ತೆರೆಯೊಳಗೆ
ಬಂದು ನಿಂತಳಾ ಅಂಬುಜಾಕ್ಷಿ ॥

ಸಂಜ್ಞಾದೇವಿ: ಅಪ್ಪಾ ಮಾನವ ಹೀಗೆ ಬಾ ಮತ್ತೂ ಹೀಗೆ ಬಾ ! ಮಾನವ ಚತುರತನಗಳಿಂದಲಿ ಕೈಗಳಂ ಮುಗಿದು ವುತ್ತಮ ತರದ ವಸ್ತ್ರಗಳಂ ಪಿಡಿದು ಅಮ್ಮಯ್ಯ ನೀವು ಧಾರೆಂದು ಕೇಳುವ ಮಾನುಷ್ಯ ನೀ ಧಾರೋ ಹೀಗೆ ಬಾರೋ.

ಅಣೈಯಾ ಸಾರಥಿ ನಾವು ಧಾರೆಂದರೆ ಸ್ವರ್ಗ ಮರ್ತ್ಯ ಪಾತಾಳದಲಿರ್ಪ ಪೆಂದೋಟಪುರಕ್ಕೆ ಅಧಿಪತಿಯಾದ ಸುರನರ ಗರುಡ ಗಾಂಧರ್ವರಿಂದ ಹೊಗಳಿಸಿಕೊಳ್ಳುವ ಮಯಬ್ರಹ್ಮದೇವರಿಗೆ ಮಡದಿಯಳಾದಂಥ ತ್ರಿಮೂರ್ತಿಗಳ ಪತ್ನಿಯರಿಂದ ಹೊಗಳಿಸಿಕೊಳ್ಳುವ ಶಾಂತಾದೇವಿಯ ಗರ್ಭಾಂಬುಧಿಯೊಳ್ ಜನಿಸಿ ಸೌಂದರ‌್ಯವತಿಯಳಾದ ಸಂಜ್ಞಾದೇವಿಯೆಂದು ತಿಳಿಯಪ್ಪಾ ಮಗು ಬಾಲಕಾ.

ಅಪ್ಪಾ ! ಸಾರಥಿ ಈವರ ಸಭೆಗೆ ಬಂದಕಾರಣವೇನೆಂದರೆ ನನ್ನ ಪ್ರಾಣಪ್ರಿಯಳಾದ ಸಖೀಮಣಿಯನ್ನು ಆಸ್ಥಾನಕ್ಕೆ ಬರಮಾಡು.

ಪದ್ಮಾಕ್ಷಿ: ಅಪ್ಪಾ ಮಾನವ ಹೀಗೆ ಬಾ ಮತ್ತೂ ಹೀಗೆ ಬಾ ಈ ಶೃಂಗಾರವಾದ ರಂಗು ಮಂಟಪದಲ್ಲಿ ಬಂದು ನಿಂತು ಬಹುವಿನಯ ವಚನದಿಂದ ಮಾತನಾಡಿಸುವ ಮಾನುಷ್ಯ ನೀ ಧಾರೋ ರನ್ನ ಗುಣಸಂಪನ್ನ.

ಅಣೈಯ್ಯ ಸಾರಥಿ ನಾವು ಧಾರೆಂದರೆ ಈ ಸೃಷ್ಟಿಗೆ ಶ್ರೇಷ್ಟವಾದಂಥ ಪೆಂದೋಟಪುರವನ್ನು ಪರಿಪಾಲಿಸುವಂಥ ಮಯಬ್ರಹ್ಮದೇವರಿಗೆ ಪ್ರಧಾನಮಂತ್ರಿಯಾದ ಮಂತ್ರಿಶೇಖರನಿಗೆ ಕುಮಾರಿಯಳಾದಂಥ ಪದ್ಮಾಕ್ಷಿಯೆಂದು ತಿಳಿಯಪ್ಪಾ ಬಾಲಕ.

ಅಣೈಯಾ ! ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ನನ್ನ ವಡತಿಯಳಾದ ಸಂಜ್ಞಾದೇವಿಯು ಕರೆಸಿಕೊಂಡ ಕಾರಣ ಬಾಹೋಣವಾಯಿತು  ಜಾಗ್ರತೆಯಾಗಿ ತೋರಿಸುವಂಥವನಾಗು.

ನಮೋ ನಮೋ ದೊರೆಸಾನಿ ದಿವ್ಯಸುಜ್ಞಾನಿ. ಅಮ್ಮಾ ! ದೊರೆಸಾನಿ ನನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು. ಜಾಗ್ರತೆಯಾಗಿ ಪೇಳಬೇಕಮ್ಮಾ ದೊರೆಸಾನಿ ದಿವ್ಯಸುಜ್ಞಾನಿ.

ಸಂಜ್ಞಾದೇವಿ: ಅಮ್ಮಾ ! ಸಖೀಮಣಿಯೆ ಹೇಳುತ್ತೇನೆ ಕೇಳು.

ಪದ

ಸಖಿಯಳೆ, ಕೇಳಮ್ಮಾ ಹರುಷದಿಂ ಪೇಳುವೆನು
ಪೆಂದೋಟವನಕ್ಕೋಗಿ ಸರಸನಾಡುವುದಕ್ಕೆ ಮರುಗ
ಮಲ್ಲಿಗೆ  ಜಾಜಿ  ಸುರಗಿ ಶಾವಂತಿಗೆಯ  ಸಂಭ್ರಮ  ದಿಂ
ತರಲು  ಪೋಗೋಣ ಬಾರಮ್ಮಾ ॥

ಸಂಜ್ಞಾದೇವಿ: ಅಮ್ಮಾ ! ಸಖೀಮಣಿಯೆ, ಇಂದಿನ ದಿವಸ ನನ್ನ ಮನಸ್ಸಿಗೆ ಆನಂದವಾದ್ದರಿಂದ ನಮ್ಮ ಶ್ರುಂಗಾರವನಕ್ಕೆ ಹೋಗಿ ನಮಗೆ ಬೇಕಾದ ಮರುಗ ಮಲ್ಲಿಗೆ ಸುರಗಿ ಶಾವಂತಿಗೆ ಹೂವುಗಳನ್ನು ಕೊಯಿದುಕೊಂಡು ನಮ್ಮ ಬೇಸರಿಕೆಯನ್ನು ತೀರಿಸಿಕೊಂಡು ಬರೋಣ ನಡಿಯಮ್ಮ ಸಖೀಮಣಿ.

ಪದ್ಮಾಕ್ಷಿ: ಅಮ್ಮಾ ದೊರೆಸಾನಿ ಹೇಳುತ್ತೇನೆ ಕೇಳು.

ಪದ

ಜನಕಾನಪ್ಪಣೆಯಿಲ್ಲಾ  ಪೋಗುವುದು  ತರವಲ್ಲಾ
ಅಪವಾದ ಬರುವುದು  ಕೇಳಮ್ಮಾ ತಾಯೆ

ಪದ್ಮಾಕ್ಷಿ: ಅಮ್ಮಾ ದೊರೆಸಾನಿ, ನಿಮ್ಮ ತಂದೆಯವರ ಅಪ್ಪಣೆಯಿಲ್ಲದೆ ವಂಟಿಯಾಗಿ ಹೋದರೆ ತಂದೆಯವರು ಕೋಪಿಸಿಕೊಳ್ಳುವರು. ಆದ ಕಾರಣ ಖಂಡಿತವಾಗಿ ಹೋಗಲಾಗದಮ್ಮಾ ದೊರೆಸಾನಿ ದಿವ್ಯ ಸುಜ್ಞಾನಿ.

ಸಂಜ್ಞಾದೇವಿ: ಅಮ್ಮಾ ಸಖೀಮಣಿಯೆ ಹೇಳುತ್ತೇನೆ ಕೇಳು.

ಪದ

ನಿಮಿಷ ಮಾತ್ರದಿ  ನಾವು  ಮರಳಿ  ದಯಮಾಡುವುದು
ಪರಿಯೇನು  ಇದ್ದರು  ಹೇಳಮ್ಮಾ ॥

ಸಂಜ್ಞಾದೇವಿ: ಅಮ್ಮಾ ಸಖೀಮಣಿಯೆ ನಮಗೆ ವುದ್ಯಾನವನದಲ್ಲಿ ಕಾಲಹರಣ ಮಾಡಲು ಕಾರಣವೇನಿರುವುದು ನಮಗೆ ಬೇಕಾದ ಸುವಾಸನೆಯುಳ್ಳ ಪುಷ್ಪಗಳನ್ನು ಕೊಯ್ದುಕೊಂಡು ನಿಮಿಷ ಮಾತ್ರದಲ್ಲಿ ಅರಮನೆಗೆ ಬರೋಣ ನಡಿಯಮ್ಮ  ಸಖೀಮಣಿಯೆ ॥

ಪದ್ಮಾಕ್ಷಿ: ಅಮ್ಮಾ ದೊರೆಸಾನಿ ನಿಮ್ಮ ಇಷ್ಟದಂತೆ ಆಗಲಿ ॥

ಸಂಜ್ಞಾದೇವಿ: ಅಮ್ಮಾ ಸಖೀಮಣಿಯೆ ಇಲ್ಲಿ ನೋಡು. ಮರುಗ ಮಲ್ಲಿಗೆ ಸುರಗಿ ಶಾವಂತಿಗೆ ಹೂವುಗಳು ಎಷ್ಟು ಮನೋಹರವಾಗಿರುವುವು ನೋಡಿದೆಯೇನಮ್ಮಾ ಸಖೀಮಣಿಯೆ ಇದೂ ಅಲ್ಲದೆ ಆ ಕುಸುಮವನ್ನು ನೋಡಲು ಮನ್ಮಥನೆಂಬ ಬಾಣವು ನನ್ನ ಎದೆಗೆ ಬಡಿದಂತಾಗುವುದಲ್ಲಮ್ಮಾ ಸಖೀಮಣಿಯೆ.

ಪದ್ಮಾಕ್ಷಿ: ಅಮ್ಮಾ ದೊರೆಸಾನಿ ಹೇಳುತ್ತೇನೆ ಕೇಳು.

ಪದ

ಕಾಲವು  ಕಳೆಯಿತು  ಕಳವಳ ಪಡುತಲಿ
ನಿಮ್ಮ  ಮುಖ ಕಾಂತಿಯು  ಬಾಡಿರುವುದು  ತಾಯೆ ॥

ಪದ್ಮಾಕ್ಷಿ: ಅಮ್ಮಾ ದೊರೆಸಾನಿ, ಪುಷ್ಪಗಳಿಗೆ ಸಕಾಲವಾದ್ದರಿಂದ ತಳತಳಾಯ ಮಾನವಾಗಿ ಕಾಣಿಸುತ್ತವೆ ಅಲ್ಲದೆ, ನಿಮಗೆ ಕಾಮನ ಕಾಲವಾದ್ದರಿಂದ ಈ ರೀತಿಯಾಗುವುದಮ್ಮಾ ದೊರಸಾನಿ ದಿವ್ಯ ಸುಜ್ಞಾನಿ.

ಸಂಜ್ಞಾದೇವಿ: ಅಮ್ಮಾ ಸಖೀಮಣಿಯೆ ಹೇಳುತ್ತೇನೆ ಕೇಳು.

ಪದ

ಕುಸುಮಗಳನ್ನು  ನೋಡು  ಕುಸುಮಗಳ ತೆನೆಯನ್ನ
ಮನಕೆ  ಆನಂದವು  ಆಗುವುದಮ್ಮಾ  ಸಖಿಯೆ ॥

ಸಂಜ್ಞಾದೇವಿ: ಅಮ್ಮಾ ಸಖೀಮಣಿಯೆ ನನ್ನ ಮನಕ್ಕೆ ಆನಂದವಾಗುವಂತೆ ಪುಷ್ಪವನ್ನು ನೋಡುವಲ್ಲಿ ಆ ಕುಸುಮವೆಂಬ ಮನ್ಮಥನ ಬಾಣವು ನನ್ನ ಎದೆಗೆ ಬಡಿಯುತ್ತಿರುವುದು. ಆ ಕಾಮನ ಬಾಣವನ್ನು ನಾನು ಖಂಡಿತವಾಗಿ ಸೈರಿಸಲಾರೆನಮ್ಮಾ ಸಖೀಮಣಿಯೆ.

ಪದ

ಸೈರಿಸೆನ್ನಮ್ಮ  ತಾಯೆ  ಸೈರಿಸು  ಸೈರಿಸು
ಸೈರಿಸು  ಮನದೊಳು  ಸೈರಿಸು ತಾಯೆ ॥

ಪದ್ಮಾಕ್ಷಿ: ಅಮ್ಮಾ ದೊರಸಾನಿ ! ತಾವು ಈಗಿನ ಕಾಲದಲ್ಲಿ ಯೋಚನೆ ಮಾಡುವುದು ಸರಿಯಲ್ಲಾ  ತಮಗೆ ಕಾಮನ  ಕಾಲವಾದ್ದರಿಂದ  ಈ ರೀತಿ ಆಗುವುದಮ್ಮಾ ! ದೊರೆಸಾನಿ  ದಿವ್ಯ  ಸುಗ್ನಾನಿ॥

ಸಂಜ್ಞಾದೇವಿ: ಅಮ್ಮಾ ! ಸಖೀಮಣಿಯೆ  ಹೇಳುತ್ತೇನೆ ಕೇಳು ॥

ಪದ

ತ್ರಾಸು ವಂದನು  ನಾನು  ವರುಷವೆಂದೆನುತಲಿ
ಕಾಲವ ಕಳೆಯುವೆ  ಕೇಳಮ್ಮಾ ಸಖಿಯೆ ॥

ಸಂಜ್ಞಾದೇವಿ: ಅಮ್ಮಾ ಸಖೀಮಣಿಯೆ ನಾನು ವಿರಹ ತಾಪವನ್ನು ತಡೆದುಕೊಂಡು ವಂದು ಘಳಿಗೆ ಎಂಬುದು ವಂದು ವರುಷವೆಂದು ಕಳೆಯುತ್ತಿರುವೆನು. ಹೀಗಾಗಲು ಕಾರಣವೇನಮ್ಮ ಸಖೀಮಣಿಯೆ.

ಪದ

ಬಿಸಿಲೊಳು ಬಳಲುತ್ತ ಬಂದ ಕಾರಣದಿಂದ
ತಾಪವು ಹೆಚ್ಚಿತು ಕೇಳಮ್ಮ ತಾಯೆ ॥

ಪದ್ಮಾಕ್ಷಿ: ಅಮ್ಮ ದೊರೆಸಾನಿ, ಕಾಮನ ಶರೀರವಾದ್ದರಿಂದ ಮತ್ತು ಬಿಸಿಲಿನಿಂದ ಬಂದ ಕಾರಣದಿಂದಲು ಬುದ್ದಿ ವಿಕಲ್ಪವಾಗಿರುವುದು. ಆದ ಕಾರಣ ಯೀ ಚಂದ್ರಕಾಂತ ಶಿಲೆಯ ಮೇಲೆ ಮೈಯೊಡ್ಡಿ ಆನಂದ ನಿದ್ರೆಯನ್ನು ಮಾಡಬಹುದಮ್ಮಾ ದೊರಸಾನಿ ದಿವ್ಯ ಸುಜ್ಞಾನಿ.

ಸಂಜ್ಞಾದೇವಿ: ಅಮ್ಮಾ ಸಖೀಮಣಿಯೆ, ನೀನು ಹೇಳಿದಂತೆ ಯೀ ಚಂದ್ರಕಾಂತಿ ಶಿಲೆಯ ಮೇಲೆ ಮಲಗುತ್ತೇನಮ್ಮಾ ಸಖೀಮಣಿಯೆ.

ಭಾಮಿನಿ

ಇತ್ತಲಾ ! ಮಯಬ್ರಹ್ಮನ ಕುಮಾರಿಯಾದ ಸಂಜ್ಞಾದೇವಿಯು
ವುದ್ಯಾನವನದ ಚಂದ್ರಕಾಂತಿಯ ಶಿಲೆಯ
ಮೇಲೆ ಮಲಗುವ ಸಮಯದೊಳಾಗಲಾಕ್ಷಣ ಇದು
ತಿಳಿದ ಸೂರ‌್ಯದೇವನು ಸಂಭ್ರಮದಿ ಬರುತಿರಲಾಗಾ ॥

ಸೂರ್ಯದೇವ: ಭಲೈ ಮಾನುಷ್ಯನೆ ಹೀಗೆ ಬಾ ಮತ್ತೂ ಹೀಗೆ ಬಾ. ಬಂದವರು ಧಾರು ಧಾರೆಂದು ಪರಿಪರಿ ಕೃತಾಂಚರಿತ ಬದ್ಧನಾಗಿ ಮಾತು ಮಾತಿಗೆ ಭೀತಿಯಂ ಪಟ್ಟು ನಿಟಿಲಾಂಬಕನಂತೆ ಮಾತನಾಡಿಸುವ ಮಾನುಷ್ಯ ನೀ ಧಾರೋ ಹೀಗೆ ಬಾರೋ.

ಭಲೈ ಸಾರಥಿ ನಾವು ಧಾರೆಂದರೆ ಈ ಚತುರ್ದಶ ಲೋಕಂಗಳಿಗೆ ಕಾಲಕರ್ಮವನ್ನು ತಿಳಿದು ಅಧಿಕಾರವನ್ನು ವಹಿಸಿಕೊಂಡು ಯಡಬಿಡದೆ ಸಂಚರಿಸಿ, ಪೂಜಿಸಿಕೊಳ್ಳುತ್ತಾ ಘನಮಾರ್ಗವನ್ನು ಅನಾಯಾಸದಿಂದ ಸಂಚರಿಸುತ್ತ ಸಹಸ್ರ ಸಂಖ್ಯೆಯುಳ್ಳ ಕಮಲನಿಗೆ ಧಾರೆಂದು ತಿಳಿಯಬಲ್ಲೆ ಭಲೈ ಸಾರಥಿ ಇನ್ನೂ ಗೊತ್ತಾಗಲಿಲ್ಲವೆ ಮುನಿಮುಖ್ಯರೋಳ್ ಶ್ರೇಷ್ಟರೆಂದೆನಿಸಿರ್ಪ ಕಾಶ್ಯಪರ ಧರ್ಮಪತ್ನಿಯರಾದ ಅಧಿತಿ ದೇವಿಯ ಗರ್ಭಾಂಬುಧಿಯೊಳ್ ಪುಟ್ಟಿ ಸುಕುಮಾರನೆಂದೆನಿಸಿ ಸಪ್ತ ಅಶ್ವಂಗಳನ್ನು ಕಟ್ಟುವ ಭಾನುದೇವನೆಂದು ತಿಳಿಯುವಂಥವನಾಗೈ ಸಾರಥಿ ಸಂಧಾನಮತಿ.

ಭಲೈ ಸಾರಥಿ ಈ ವರ ಸಭೆಗೆ ಬಂದ ಕಾರಣವೇನೆಂದರೆ ಈ ವನಾಂತರವನ್ನು ಹೊಕ್ಕು ಪರಿಮಳ ವಾಸನೆಯುಳ್ಳ ಪುಷ್ಪಗಳನ್ನು ಕೊಯ್ದುಕೊಂಡು ಪೋಗಬೇಕೆಂದು ಬಂದಿರುತ್ತೇನೆ ಜಾಗ್ರತೆಯಾಗಿ ವುದ್ಯಾನವನದ ಬಾಗಿಲನ್ನು ತೆಗೆಯುವಂಥವನಾಗು ಆಹಾ ಈ ವನಾಂತರವನ್ನು ನೋಡಿದರೆ, ನನ್ನ ಮನಸ್ಸಿಗೆ ಬಹಳ ಆನಂದವಾಗುತ್ತಿರುವುದು.

ಆಹಾ ! ಇದೇನಾಶ್ಚರ‌್ಯ ಈ ವುದ್ಯಾನವನದ ಮಧ್ಯದಲ್ಲಿ ಓರ್ವ ಸ್ತ್ರೀಯಳು ಮಲಗಿರುವಳಲ್ಲಾ, ಈಕೆ ಯಾರಾಗಿರಬಹುದು, ವಿಚಾರಿಸಿ ನೋಡುವೆನು.