ಸೂರ‍್ಯನಿಗೆ ಸಂಬಂಧಿಸಿದ ನಂಬಿಕೆಗಳು:

೧ ಸೂರ್ಯಾಸ್ತ್ರದ ನಂತರ ದೇವರಿಗೆ ದೀಪ ಹಚ್ಚಿ ನಮಸ್ಕರಿಸಿದರೆ ಒಳ್ಳೆಯದಾಗುತ್ತದೆ.

೨ ಸೂರ್ಯೋದಯಕ್ಕೆ ಮುಂಚೆಯೇ ಬಾಗಿಲು ಕಸಗುಡಿಸಿ ನೀರು ಹಾಕಿ ರಂಗವಲ್ಲಿ ಬಿಡಬೇಕು.

೩ ಸೂರ‍್ಯ ಮುಳುಗಿದ ಮೇಲೆ ತೆಂಗಿನಮರವನ್ನು ಹೆತ್ತಬಾರದು.

೪ ಮೂಳೆಕಾಯಿಲೆ ಮಕ್ಕಳನ್ನು ಬಿಸಿಲಿನಲ್ಲಿ ಮಲಗಿಸಿದರೆ ಒಳ್ಳೆಯದು.

೫ ಸೂರ‍್ಯನು ಒಂದೊಂದು ರಾಶಿಯಲ್ಲಿ ಒಂದೊಂದು ತಿಂಗಳಿರುತ್ತಾನೆ.

೬ ಸೂರ‍್ಯ ಚಳಿಗಾಲದಲ್ಲಿ ಚಳಿಗೆ ಹೆದರಿ ಬೇಗ ಮುಳುಗುತ್ತಾನೆ.

೭ ನೂಲು ಹುಣ್ಣಿಮೆಗೆ ನೂಲಿನಷ್ಟು ಹೊತ್ತು ಕಡಿಮೆಯಾಗುವುದಂತೆ.

೮ ಹೊಸ್ತಿಲು ಹುಣ್ಣೆಮೆಗೆ ಅತ್ತೆಮನೆಸೊಸೆ ಹೊಸ್ತಿಲು ದಾಟುವುದರಲ್ಲಿ ಹೊತ್ತು ಮುಳುಗುವುದಂತೆ.

೯ ಸೂರ‍್ಯಕಾಂತಿ ಗಿಡಕ್ಕೂ ಸೂರ‍್ಯನಿಗೂ ನಂಟುಂಟು. ಅದಕ್ಕೇ ಅದು ಸೂರ‍್ಯನ ಕಡೆ ಮುಖ ಮಾಡಿರುತ್ತದೆ.

೧೦ ಸಂಕ್ರಾಂತಿ ದಿನ ಎಕ್ಕದ ಎಲೆಯನ್ನು ತಲೆಮೇಲಿಟ್ಟು ಸ್ನಾನ ಮಾಡಬೇಕು.

೧೧ ಸೂರ್ಯಾಸ್ತದ ನಂತರ ಮನೆ ಹಿಂದಿನ ಬಾಗಿಲು ಹಾಕಿದಿದ್ದರೆ ಲಕ್ಷ್ಮಿಹೊರಗೆ ಹೋಗುತ್ತಾಳೆ.

೧೨ ಸೂರ‍್ಯಗೂಡು ಕಟ್ಟಿದರೆ ಮಳೆ ಬರುತ್ತದೆ.

೧೩ ಸೂರ‍್ಯ ಸತ್ಯದ ದೇವರು; ಅವರ ಹೆಸರಿನಲ್ಲಿ ಪ್ರಮಾಣ ಮಾಡುವುದು ಶ್ರೇಷ್ಠ.

ಜನಪದರು ಸೂರ‍್ಯನನ್ನು ಪರಮ ಪವಿತ್ರ ದೇವರೆಂದು ಬಗೆದಿದ್ದಾರೆ. ಸೂರ‍್ಯನ ಹೆಸರಿನಲ್ಲಿ ಪ್ರಮಾಣ ಮಾಡುವುದೇ ಶ್ರೇಷ್ಠ ಎಂದು ತಿಳಿದಿರುವುದು ಸೂರ‍್ಯನಿಗೆ ಜನಪದ ಜೀವನದಲ್ಲಿ ಕಲ್ಪಿತವಾದ ಸ್ಥಾನ ಏನೆಂಬುದನ್ನು ತಿಳಿಸುತ್ತದೆ. ಜನಪದರು ತಮ್ಮ ಎಲ್ಲ ಆಗುಹೋಗುಗಳಿಗೂ ಸೂರ‍್ಯನೇ ಕಾರಣ ಎಂದು ನಂಬುತ್ತಾರೆ. ತಮ್ಮ ಎಲ್ಲ ಶ್ರೇಯಸ್ಸಿಗೂ ಅವನೇ ಕಾರಣ ಎಂದು ತಿಳಿಯುತ್ತಾರೆ. ಅವರ ಬದುಕಿನ ಕೇಂದ್ರಶಕ್ತಿ ಅವನು. ಈ ಅಂಶವನ್ನು ಮೇಲಿನ ನಂಬಿಕೆಗಳು ಇನ್ನಷ್ಟು ದೃಢಪಡಿಸುತ್ತವೆ. ಮೇಲೆ ಪಟ್ಟಿ ಮಾಡಿರುವ ನಂಬಿಕೆಗಳಲ್ಲಿ ಕೆಲವು ವೈಜ್ಞಾನಿಕವಾಗಿ ಸಮರ್ಥನೀಯವಾದವು. ಮೂಳೆಕಾಯಿಲೆಗೆ ತುತ್ತಾದ ಮಕ್ಕಳನ್ನು ಬಿಸಿಲಿನಲ್ಲಿ ಮಲಗಿಸುವುದರಿಂದ ಮೂಳೆರೋಗ ಗುಣವಾಗುವುದು ಎಂಬುದು ಅಂಥ ಒಂದು ನಂಬಿಕೆ. ಬಿಸಿಲಿನ ಕಿರಣಗಳಿಗೆ ಪೋಷಕಾಂಶ ಶಕ್ತಿ ಇರುವುದರಿಂದ ಆ ಕ್ರಮ ಔಚಿತ್ಯಪೂರ್ಣವಾದುದು. ಸೂರ‍್ಯ ಮುಳುಗಿದ ಮೇಲೆ ಮನೆಬಾಗಿಲು ಮುಚ್ಚುವುದು ತಮ್ಮನ್ನೂ, ತಮ್ಮ ಮನೆ ಆಸ್ತಿಪಾಸ್ತಿಯನ್ನೂ ರಕ್ಷಿಸಿಕೊಳ್ಳುವುದಕ್ಕಾಗಿ, ಪ್ರಾಣಿಪಕ್ಷಿಗಳ ಮತ್ತು ಕಳ್ಳಕಾಕರ ಭಯದಿಂದಲೂ ರಾಶಿಯಲ್ಲಿ ಒಂದೊಂದು ತಿಂಗಳಿರುತ್ತಾನೆಂಬ ನಂಬಿಕೆ ಜನಪದರ ಖಗೋಳ ಜ್ಞಾನದ ಮೇಲೆ ಬೆಳಕು ಚೆಲ್ಲುತ್ತದೆ. ಸೂರ್ಯೋದಯಕ್ಕೆ ಮೊದಲೇ ಬಾಗಿಲು ಕಸಗುಡಿಸಿ ನೀರು ಹಾಕಿ ರಂಗದಲ್ಲಿ ಬಿಡುವುದು ಮೊದಲು ಮನೆಗೆ ಸೂರ‍್ಯನ ಪ್ರವೇಶವಾಗಲಿ ಎಂದು. ರಂಗವಲ್ಲಿ ಹಾಕಿದ ಮೇಲೆ ಭೂತಪಿಶಾಚಿ ಇತ್ಯಾದಿ ಯಾವ ಕ್ಷುದ್ರಶಕ್ತಿಗಳೂ ಪ್ರವೇಶ ಹೊಂದಲಾರವೆಂದೇ ತಿಳಿವಳಿಕೆ. ರಂಗವಲ್ಲಿಗೆ ಆ ಶಕ್ತಿಗಳು ಒಳಪ್ರವೇಶಿಸಿದಂತೆ ತಡೆಯುವ ಮಾಂತ್ರಿಕ ಶಕ್ತಿಯಿದೆ ಎಂಬುದು ಸಾಮಾನ್ಯ ಅಭಿಪ್ರಾಯ. ಕೆಲವು ನಂಬಿಕೆಗಳು ಜನಪದರ ಆಲೋಚನಾ ರೀತಿಯನ್ನು ಪರಿಚಯ ಮಾಡಿಕೊಡುತ್ತವೆ: ಉದಾ.೧. ಸೂರ‍್ಯ-ಚಳಿಗಾಲದಲ್ಲಿ ಚಳಿಗೆ ಹೆದರಿ ಬೇಗ ಮುಳುಗುತ್ತಾನೆ. ೨. ಸೂರ‍್ಯಕಾಂತಿ ಸೂರ‍್ಯನ ಕಡೆ ಮುಖ ಮಾಡಿಕೊಂಡಿರುವುದರಿಂದ ಅದಕ್ಕೂ ಸೂರ‍್ಯನಿಗೂ ವಿಶೇಷ ನಂಟಿದೆ. ಮಕರಸಂಕ್ರಾಂತಿ ದಿನ ಎಕ್ಕದ ಎಲೆಯನ್ನು ತಲೆ ಮೇಲಿಟ್ಟು ಸ್ನಾನ ಮಾಡಬೇಕು ಎಂಬುದು ಒಂದು ಸಂಪ್ರದಾಯ. ಇದು ಸೂರ‍್ಯಸಂಬಂಧವಾದ ಸೂರ್ಯೋಪಾಸಕರ ಮಹತ್ವದ ಹಬ್ಬವಾದ ಸಂಕ್ರಾಂತಿಯನ್ನು ಅರ್ಕದ ಎಲೆಗೆ ಸಿಕ್ಕಿರುವ ಪ್ರಾಶಸ್ತ್ಯವನ್ನು ಹೇಳುತ್ತದೆ.

ಗ್ರಹಣಕ್ಕೆ ಸಂಬಂಧಿಸಿದ ನಂಬಿಕೆಗಳು:

೧. ಗ್ರಹಣ ಕಾಲದಲ್ಲಿ ಜನಿಸಿದ ಮಗು ಸಾಯುತ್ತದೆ ಇಲ್ಲವೆ ಅಂಗವಿಕಲವಾಗಿರುತ್ತದೆ.

೨. ಸೂರ‍್ಯಗ್ರಹಣ ಸಂಭವಿಸಿದ ರಾಶಿಗೆ ಸೇರಿದವರಿಗೆ ಅನಿಷ್ಟ. ಬ್ರಾಹ್ಮಣರಿಗೆ ದಾನ ಮಾಡಿದರೆ ಆ ಅನಿಷ್ಡದೂರಾಗುತ್ತದೆ.

೩. ಗ್ರಹಣಕಾಲದಲ್ಲಿ ಊಟ ಮಾಡಬಾರದು; ಏನನ್ನೂ ಕುಡಿಯಬಾರದು. ತಪ್ಪಿ ಮಾಡಿದರೆ ಪ್ರಾಯಶ್ಚಿತ್ತವಾಗಿಮೂರು ದಿನ ಉಪವಾಸವಿರಬೇಕು.

೪. ಗ್ರಹಣಕಾಲದಲ್ಲಿ ಗೋವು, ಭೂಮಿ, ಹಿರಣ್ಯದಾನಗಳು ಭೂದಾನಕ್ಕೆ ಸಮನಾದವು; ಎಲ್ಲಾ ಜಲವು ಗಂಗಾಜಲಕ್ಕೆ ಸಮಾನ, ಎಲ್ಲ ಬ್ರಾಹ್ಮಣರೂ ವ್ಯಾಸರ ಸಮಾನ.

೫. ಗ್ರಹಣ ಕಾಲದಲ್ಲಿ ಗ್ರಹಣ ಹಿಡಿದ ಪೂರ್ವದಲ್ಲಿನ ನೀರನ್ನು ಚೆಲ್ಲಿ ಹೊಸ ನೀರನ್ನು ತರಬೇಕು. ಸ್ನಾನ ಮಾಡುವುದಕ್ಕೆ ಮೊದಲೆ ಹೊಸ ನೀರು ತರಬಾರದು, ಅದು ಸೂತಕದ ನೀರಾಗುತ್ತದೆ.

೬. ಗುರುಮಂತ್ರ ದೀಕ್ಷೆ ಹೊಂದಿದವರು ಗ್ರಹಣಕಾಲದಲ್ಲಿ ಪಠನಮಾಡದಿದ್ದರೆ ಆ ಮಂತ್ರಕ್ಕೆ ಮಾಲಿನ್ಯ ಉಂಟಾಗುತ್ತದೆ. ನದಿ ನೀರಿನಲ್ಲಿ ನಿಲ್ಲಲಾಗದಿದ್ದರೂ ಮನೆಯಲ್ಲಿ ಪಾತ್ರೆಯೊಳಗಿನ ನೀರಿನಲ್ಲಾದರೂ ನಿಂತು ಪಠಿಸಬೇಕು.

೭. ಮಾಟ ಮಂತ್ರ ಮಾಡುವವರು ಗ್ರಹಣಕಾಲದಲ್ಲಿ ನೀರಿನಲ್ಲಿ ನಿಂತು ಜಪ ಮಾಡದಿದ್ದರೆ ಎಲ್ಲಾ ಮಂತ್ರಗಳು ಸುಳ್ಳಾಗಿ ಹೋಗುತ್ತವೆ.

೮. ಗ್ರಹಣಕಾಲದಲ್ಲಿ ಬಟ್ಟೆ ಸಹಿತ ಸ್ನಾನ ಮಾಡಬೇಕು; ಪುಣ್ಯ ಹೆಚ್ಚು.

೯. ಗ್ರಹಣ ಕಾಲದಲ್ಲಿ ಮಾರುತಿ ಗುಡಿಯಲ್ಲಿ ಕುಳಿತು ಆಂಜನೇಯ ಜಪ ಮಾಡಿದರೆ ಕೋತಿಗಳು ವಶವಾಗುತ್ತವೆ.

೧೦. ಸರ್ಪಾಕ್ಷಿ ಮಂತ್ರ ಜಪಿಸಿದರೆ ಸರ್ಪಗಳು ವಶವಾಗುತ್ತವೆ.

೧೧. ಸೂರ‍್ಯ ಗ್ರಹಣ ಕಾಲದಲ್ಲಿ ನಕ್ಷತ್ರ ಕಂಡರೆ ಅದು ಅನಿಷ್ಟದ ಸೂಚನೆ.

೧೨. ಗ್ರಹಣಕಾಲದಲ್ಲಿ ಒನಕೆ ನೀರಿನಲ್ಲಿ ನಿಲ್ಲುತ್ತದೆ.

೧೩. ಗ್ರಹಣಕಾಲದಲ್ಲಿ ಉಪ್ಪಿನ ಕಾಯಿ ಕೆಡುವುದರಿಂದ ಮೇಲೆ ದರ್ಭೆ ಹಾಕಬೇಕು.

೧೪. ಗ್ರಹಣಕಾಲದಲ್ಲಿ ಕಾಮನಬಿಲ್ಲು ನೋಡಬಾರದು.

೧೫. ರಾಹುಕೇತುಗಳ ಹಿಡಿತದಿಂದ ಸೂರ‍್ಯ ಚಂದ್ರರನ್ನು ಪಾರಾಗಿಸಲು ದಾನ ಹರಕೆಗಳನ್ನು ಸಲ್ಲಿಸಬೇಕು.

ಈ ನಂಬಿಕೆಗಳು ಜನಪದರು ನೈಸರ್ಗಿಕ ಘಟನೆಯೊಂದನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂಬುದಕ್ಕೆ ಉತ್ತಮ ನಿದರ್ಶನಗಳಾಗಿವೆ. ಗ್ರಹಣಕಾಲದಲ್ಲಿ ಮಾರುತಿ ಗುಡಿಯಲ್ಲಿ ಕುಳಿತು ಅಂಜನೇಯ ಮಂತ್ರ ಪಠಿಸಿದರೆ ಕೋತಿಗಳು ವಶವಾಗುವುದು, ಸರ್ಪಾಕ್ಷಿ ಮಂತ್ರ ಜಪಿಸಿದರೆ ಸರ್ಪಗಳು ವಶವಾಗುವುದು ಇತ್ಯಾದಿ ಜನಪದ ಸಮಾಜದ ನಂಬಿಕೆ ವ್ಯವಸ್ಥೆಗಳನ್ನು ದೃಢಪಡಿಸುತ್ತವೆ. ಈ ಬಗೆಯ ನಂಬಿಕೆಗಳು ಪ್ರಾಕೃತಿಕ ಬದುಕನ್ನು ಬದುಕುತ್ತಿರುವ ಜನಪದರು ಪ್ರಕೃತಿಯ ಜೊತೆ ಎಂಥ ನಿಕಟ ಸಂಬಂಧವನ್ನು ಸಾಧಿಸಿಕೊಂಡಿದ್ದಾರೆಂಬುದನ್ನು ತಿಳಿಸುತ್ತವೆ. ಮಾಟ ಮಂತ್ರಗಳಲ್ಲಿ ನಂಬಿಕೆಯಿರದವರಿಗೆ ಈ ಸಮಾಜದ ನಂಬಿಕೆ ವ್ಯವಸ್ಥೆ ವಿಚಿತ್ರವಾಗಿ ಕಾಣುತ್ತದೆ. ಜನಪದ ಸಮಾಜಕ್ಕೆ ಸೂರ‍್ಯ ಅತಿಶ್ರೇಷ್ಠದೈವ. ಅವನು ಸೃಷ್ಟಿಕರ್ತ. ಅವನ ಕೃಪೆಯಿಂದಲೇ ಪ್ರಪಂಚಕ್ಕೆ ಬೆಳಕು ಲಭ್ಯವಾಗಿರುವುದು. ಪ್ರಪಂಚದ ಉಳಿವು ಅಳಿವು ಕೂಡ ಅವನ ಕೈಯಲ್ಲೀ ಇದೆ. ಇಂಥ ಸರ್ವಶಕ್ತ ಸೂರ‍್ಯನಿಗೆ ಒದಗಿ ಬರುವ ಕಷ್ಟಕೋಟಲೆಗಳು ಪ್ರಪಂಚಕ್ಕೆ ಒದಗಿದ ಸಂಕಷ್ಟಗಳು ಎಂಬುದು ಅವರ ತಿಳಿವಳಿಕೆ. ಗ್ರಹಣಕಾಲದಲ್ಲಿ ಊಟ ನಿಷಿದ್ಧವಾಗಿರುವುದು, ಗ್ರಹಣ ಬಿಟ್ಟ ಮೇಲೆ ಸೂತಕದ ಬಟ್ಟೆ ಸಮೇತ ಸ್ನಾನ ಮಾಡುವುದು, ಗ್ರಹಣಕಾಲದಲ್ಲಿ ದಾನ ಮಾಡುವುದು – ಸೂರ‍್ಯನಿಗೆ ಒಳಿತಾಗಲಿ ಎಂಬ ಹಾರೈಕೆಯಿಂದ. ಜನಪದರ ದೃಷ್ಟಿಯಲ್ಲಿ ಗ್ರಹಣವು ಸೂರ‍್ಯದೇವನಿಗೆ ಒದಗಿದ ಕಷ್ಟಕಾಲ. ತಾವು ಶ್ರದ್ಧಾ ಭಕ್ತಿಯಿಂದ ನಡೆಸುವ ಉಪಾಸನೆಗಳು ಅವನ ಕಷ್ಟಗಳನ್ನು ದೂರ ಮಾಡುತ್ತವೆ ಮತ್ತು ಸೂರ‍್ಯನ ವೈರಿಯಿಂದ ತಮಗೆ ಒದಗಬಹುದಾಗಿದ್ದ ಕಷ್ಟ ಸಂಕಷ್ಟಗಳಿಗೂ ಈ ಉಪಾಸನೆಗಳು ಪರಿಹಾರ ನೀಡುತ್ತವೆ ಎಂಬ ವಿಶ್ವಾಸ.

ಕರ್ನಾಟಕದ ಜನತೆ ಬೇರೆ ಬೇರೆ ಕಾಲಗಳಲ್ಲಿ ಅನೇಕ ವ್ರತ, ಉತ್ಸವ, ಸಮಾರಾಧನೆ  ಮತ್ತು ಹಬ್ಬ ಜಾತ್ರೆಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅವುಗಳಲ್ಲಿ ಕೆಲವು ವ್ರತಗಳು ಮತ್ತು ಹಬ್ಬಗಳು ಸ್ವಲ್ಪ ಮಟ್ಟಿಗೆ ಸೌರ ಸಂಪ್ರದಾಯಕ್ಕೆ ಸಂಬಂಧಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.:

ಆದಿತ್ಯವ್ರತ: ಕರ್ನಾಟಕದಲ್ಲಿ ನೆಲೆಸಿರುವ ಕೆಲವು ಮರಾಠಿ ಕುಟುಂಬಗಳಲ್ಲಿ ಇದು ಪ್ರಚಲಿತವುಂಟು. ಇದು ಆರು ತಿಂಗಳ ಕಾಲ ನಡೆಯುವ ವ್ರತ. ವ್ರತ ಈ ಕ್ರಮದಲ್ಲಿ ಜರುಗುತ್ತದೆ.: ಶ್ರಾವಣ ಮಾಸದ ಮೊದಲನೆಯ ಆದಿತ್ಯವಾರ ಮುಂಜಾನೆ ವಸ್ತ್ರಸಹಿತ ಸ್ನಾನ ಮಾಡಬೇಕು. ಹೊಸ ನೀರು ತರಬೇಕು. ನಾಗವಲ್ಲಿಯ ಎಲೆಯ ಮೇಲೆ ಕೆಂಪು ಚಂದನದಿಂದ ಸೂರ‍್ಯನ ಚಿತ್ರವನ್ನು ರಚಿಸಬೇಕು. ಆರು ಗೆರೆಗಳ ಮಂಡಲ ಹಾಕಬೇಕು. ಎಳೆಯ ನೂಲು ತೆಗೆಯಬೇಕು ಅದನ್ನು ಆರುಗುಂಟು ಹಾಕಬೇಕು. ಅಚ್ಚ ಹೊಸ ಹೂವನ್ನು ಅದಕ್ಕೆ ಮುಡಿಸಬೇಕು. ಆಮೇಲೆ ಪೂಜೆ ನೆರವೇರಿಸಿ ನೈವೇದ್ಯ ಸಲ್ಲಿಸಬೇಕು. ಇದನ್ನು ಸತತವಾಗಿ ಆರು ತಿಂಗಳವರೆಗೆ ಮುಂದುವರೆಸಿ ಮಾಘ ಸಪ್ತಮಿಯಂದು ಮುಕ್ತಾಯಗೊಳಿಸಬೇಕು. ವ್ರತದ ಕಡೆಯ ದಿನದ ಅಂಗವಾಗಿ ವಿಶೇಷ ಅಡುಗೆಯನ್ನು ಅಣಿಗೊಳಿಸಿರಬೇಕು. ಆಹ್ವಾನಿತರಿಗೆ ಉಡುಗೊರೆಯಾಗಿ ಉಡುಗೆ ತೊಡುಗೆಗಳನ್ನು ನೀಡಬೇಕು. ಈ ಕ್ರಮದಲ್ಲಿ ವ್ರತವನ್ನು ನೆರವೇರಿಸಿದರೆ ಸೂರ‍್ಯ ನಾರಾಯಣ ಪ್ರಸನ್ನವಾಗಿ ಶಾಂತಿ ಲಭಿಸುತ್ತದೆ ಎಂದು ನಂಬಿಕೆ.

ಪ್ರತಿ ಆದಿತ್ಯವಾರ ಸೂರ‍್ಯವ್ರತ ಆಚರಿಸುವ ಸಂಪ್ರದಾಯ ಕೆಲವು ಸೌರ ಮತ ನಿಷ್ಠರಲ್ಲಿದೆ. ಅಂದು ಉಪವಾಸ ಆಚರಿಸುವುದು ಕ್ರಮ. ಆ ದಿನದ ಸೂರ‍್ಯ ಪ್ರಜೆಯಲ್ಲಿ ಸೂರ್ಯಾಸ್ಥದ ನಮಸ್ಕಾರಕ್ಕೆ ಹೆಚ್ಚು ಮಹತ್ವ ನೀಡುವುದು ವಿಶೇಷ. ವ್ರತವನ್ನು ಪಾಲಿಸುವವರು ಸಾಮಾನ್ಯವಾಗಿ ಊಟಕ್ಕೆ ಪಲಾಶದ ಎಲೆಯ ಪತ್ರಾವಳಿಗಳನ್ನು ತೆಗೆದುಕೊಳ್ಳುವುದು ವೈಶಿಷ್ಟ್ಯ.

ರಥಸಪ್ತಮಿ ವೃತ: ಮಾಘ ಶುದ್ಧ ಸಪ್ತಮಿಯ ದಿನ ನಡೆಯುವ ವ್ರತವಿದು. ಷಷ್ಟಿದಿನ ಸ್ನಾನಾ ನಂತರ ದೇವಾಲಯಕ್ಕೆ ಹೋಗಿ ಸೂರ‍್ಯನನ್ನು ಪೂಜಿಸಿ ಮನೆಯಲ್ಲಿ ಪಂಚಯಜ್ಞಗಳನ್ನು ಮಾಡಿ ಎಲ್ಲರ ಊಟವಾದ ಮೇಲೆ ತಾನು ಎಣ್ಣೆಯಿಲ್ಲದ ಊಟ ಮಾಡಿ ದೇವತಾಧ್ಯಾನದಲ್ಲಿ ಹಗಲನ್ನು ಕಳೆದು ರಾತ್ರಿ, ’ನಾನು ವ್ರತ ಮಾಡುತ್ತೇನೆ’ ಎಂದು ಸೂರ‍್ಯನಿಗೆ ಹೇಳಿಕೊಂಡು ಸಂಕಲ್ಪ ಮಾಡಬೇಕು, ರಾತ್ರಿ ನೆಲದ ಮೇಲೆ ಮಲಗಿದ್ದು ಮಾರನೆಯ ದಿನ-ಸಪ್ತಮಿಯ ದಿನ-ಸ್ನಾನ ಸಂಧ್ಯಾದಿಗಳು ಮುಗಿದ ಮೇಲೆ ಸೂರ‍್ಯ ರಥವನ್ನು ಚಿನ್ನ ಅಥವಾ ಬೆಳ್ಳಿ ಅಥವಾ ತಾಮ್ರದಲ್ಲಿ ಮಾಡಿಸಿಟ್ಟು ಮಧ್ಯಾಹ್ನ ಜಲಾಶಯದಲ್ಲಿ ಸ್ನಾನ ಮಾಡಿ ಸೂರ‍್ಯ ಸೂಕ್ತವನ್ನು ಜಪಿಸುತ್ತ ಹೂವು ಚಿಗುರುಗಳ ಮಧ್ಯೆ ರಥವನ್ನಿಟ್ಟು ಪೂಜಿಸಬೇಕು. ಬಳಿಕ ಅದರಲ್ಲಿ ಸೂರ‍್ಯನ ವಿಗ್ರಹವನ್ನಿಟ್ಟು ಪೂಜೆ ಧೂಪ ದೀಪ ನೈವೇದ್ಯಗಳಿಂದ ಸ್ತುತಿಸಿ ’ನನ್ನ ಇಷ್ಟಾರ್ಥಗಳನ್ನು ಸಲ್ಲಿಸು’ ಎಂದು ಪ್ರಾರ್ಥಿಸಬೇಕು. ಇಡೀ ದಿನ ಉಪವಾಸವಿದ್ದು ಶಯನವನ್ನು ತೊರೆಯಬೇಕು. ಆ ರಾತ್ರಿಯೆಲ್ಲ ಮತ್ತೆ ರಥವನ್ನೂ ವಿಗ್ರಹವನ್ನೂ ಪೂಜಿಸಿ ಸೌರಮಂತ್ರ ಜಪ, ಸೂರ‍್ಯಪುರಾಣ ವಾಚನಗಳನ್ನು ಮಾಡುತ್ತ ಕಾಲ ಕಳೆದು ಮಾರನೆಯ ದಿನ ಬ್ರಾಹ್ಮಣರಿಗೆ ದಾನ ದಕ್ಷಿಣೆ ಕೊಡಬೇಕು. ಸೂರ‍್ಯ ರಥವನ್ನು ಆಚಾರ‍್ಯನಿಗೆ ದಾನ ಮಾಡಬೇಕು. ಈ ವ್ರತದಿಂದ ಅಶ್ವಮೇಧಯಾಗ ಫಲವು ಲಭಿಸುತ್ತದೆ.’

[1]

ನಿರಶನಾರ್ಕವಾರ ವ್ರತ: ಈ ವ್ರತ ಮಾಡುವವರು ಶನಿವಾರ ಏಕ ಭುಕ್ತಿ (ಒಪ್ಪೊತ್ತು) ಯಲ್ಲಿದ್ದು ಭಾನುವಾರ ನಿರಾಹಾರಿಯಾಗಿದ್ದು ಆ ದಿನ ಜಾಗರಣ ಮಾಡಿ ಸೋಮವಾರ ವಿಧಿವತ್ತಾಗಿ ಪೂಜಿಸಿ ಪಾರಣೆ ಮಾಡಬೇಕು. ಅರಿತೋ ಅರಿಯದೆಯೋ ಮಾಡಿದ ಪಾಪ ಪರಿಹಾರಕ್ಕೆ, ಆರೋಗ್ಯಕ್ಕಾಗಿ, ಉತ್ತರಾಯಣ ಪುಣ್ಯಕಾಲದಲ್ಲಿ ಮರಣ ಹೊಂದಿ ಸೂರ‍್ಯ ಲೋಕವನ್ನು ಹೊಂದಲಿಕ್ಕಾಗಿ ಈ ವ್ರತಾಚರಣೆ ವಿಶೇಷವಾಗಿ ಆಕಾಲರತಿಯಿಂದ ಸ್ತ್ರೀ ಪುರುಷರಿಗೆ ಉಂಟಾಗುವ ರಜಸ್ಸೆಂಬಂಧವಾದ ದೋಷ ಪರಿಹಾರಕ್ಕೆ ಇದು ಉತ್ತಮ ಫಲಕಾರಿ. ಈ ವ್ರತವನ್ನು ಆಚರಿಸುವವರಿಗೆ ಸೂರ‍್ಯ ದೇವನು ಆರೋಗ್ಯವನ್ನೂ ಸರ್ವಮಂಗಳಗಳನ್ನೂ ದಯಪಾಲಿಸುತ್ತಾನೆ.

ವ್ರತದ ವಿಧಾನ ಹೀಗೆ: ವ್ರತ ಸಂಕಲ್ಪಾ ನಂತರ ಸೂರ‍್ಯ ಮಂಡಲವನ್ನೂ ಸೂರ‍್ಯ ಬಿಂಬವನ್ನೂ ಬರೆದು ಗಣಪತಿ ವಿಗ್ರಹವನ್ನು ಸ್ಥಾಪಿಸಿ ಪೂಜಿಸಬೇಕು. ಅರುಣ, ಸೂರ‍್ಯ, ನಾರಾಯಣರನ್ನು ಅಲ್ಲಿಗೆ ಆವಾಹನೆ ಮಾಡಬೇಕು. ಬಳಿಕ ಸೂರ್ಯಾಷ್ಟೋತ್ತರ ಶತನಾಮ ಪೂಜೆಯನ್ನು ಮಾಡಬೇಕು; ’ಸೂರ‍್ಯ ನಮಸ್ಕಾರ’ಗಳ ಪೂರ್ವಕ ’ಪ್ರದಕ್ಷಿಣ ನಮಸ್ಕಾರ’ಗಳ ಮೂಲಕ ಸೂರ‍್ಯ ಸ್ತೋತ್ರವನ್ನು ಮಾಡಬೇಕು. ರಾಮಾಯಣದ ಯುದ್ಧಕಾಂಡದಲ್ಲಿ ನಿರೂಪಿತವಾದ ಅಗಸ್ತ್ಯ ರಾಮನಿಗೆ ಬೋಧಿಸಿದ ’ಆದಿತ್ಯ ಹರದಯ’ವನ್ನು ಜಪಿಸಬೇಕು’.[2]

ಧನುರ್ಮಾಸ: ಸೂರ‍್ಯದೇವ ವೃಶ್ಚಿಕ ಮಾಸದಿಂದ ಸಂಕ್ರಮಿಸಿ ಧನುರಾಶಿಗೆ ಪ್ರವೇಶ ಮಾಡುವ ದಿನ ಮೊದಲ್ಗೊಂಡು ಆತ ಮಕರ ಸಂಕ್ರಾಂತಿ ಪ್ರವೇಶಿಸುವವರೆಗೂ ಧನುರ್ಮಾಸವೆನ್ನುತ್ತಾರೆ. ಮಹಾ ವಿಷ್ಣುವನ್ನು ಸೂರ್ಯೋದಯಕ್ಕೆ ಮುಂಚಿತವಾಗಿಯೇ ಷೋಡಶೋಪಚಾರಗಳಿಂದ ಪೂಜಿಸಿ ಹುಗ್ಗಿಯನ್ನು ನಯವೇದ್ಯಮಾಡಬೇಕೆಂಬುದು ವಿಧಿ. ತಿಂಗಳಲ್ಲಿ ಒಂದು ದಿನ ವಾದರೂ ಹುಗ್ಗಿ ಮಾಡಿ ದಾನಮಾಡಿದರೆ ಸೂರ‍್ಯದೇವ ಪ್ರಸನ್ನನಾಗಿ ಶಾಂತಿ, ನೆಮ್ಮದಿ ಲಭಿಸುತ್ತದೆಂದು ನಂಬಿಕೆ.

ಮಕರ ಸಂಕ್ರಮಣ: ಸೂರ‍್ಯ ಮಕರರಾಶಿಗೆ ಪ್ರವೇಶಿಸುವ ದಿನ. ಉತ್ತರಾಯಣ ಪುಣ್ಯಕಾಲವೆಂದು ಆಚರಣೆಯಲ್ಲಿದೆ. ಎಳ್ಳು ಬೀರುವುದು ಅಂದಿನ ವಿಶೇಷ. ಜನಪದರಿಗೆ ಇದು ಸಂಭ್ರಮದ ಸಂದರ್ಭ. ಸುಗ್ಗಿ ಮುಗಿದು ರೈತರಿಗೆ ಬಿಡುವು. ಕೈತುಂಬ ಹಣವೂ ಇರುತ್ತದೆ. ಅದರಿಂದಾಗಿ ಹಬ್ಬವನ್ನು ತುಂಬ ಸಂಭ್ರಮಮೋತ್ಸಾಹದಿಂದ ಆಚರಿಸುತ್ತಾರೆ. ಸಂಕ್ರಾಂತಿಯ ದಿನ ಸ್ವರ್ಗದ ಬಾಗಿಲು ತೆರೆಯುತ್ತದೆಂದು ಅವರ ನಂಬಿಕೆ. ಅಂದು ಅವರು ತಮ್ಮ ಜಾನುವಾರುಗಳಿಗೆ ಮೈ ತೊಳೆದು ಕೊಂಬಿಗೆ ವಿವಿಧ ಬಣ್ಣಗಳನ್ನು ಲೇಪಿಸಿ ಬಣ್ಣದ ಕಾಗದಗಳನ್ನು ಅಂಟಿಸಿ ಚೆನ್ನಾಗಿ ಸಿಂಗರಿಸಿ ಮೆರವಣಿಗೆ ಮಾಡುತ್ತಾರೆ. ಸಾಯಂಕಾಲ ಹೊಲಗಳಿಂದ ಮೇದು ಬರುವಾಗ ಕಿಚು, ಹಾಯಿಸುವುದು ಅಂದಿನ ವಿಶೇಷ ಆಕರ್ಷಣೆ. ಗ್ರಾಮದ ಪುರುಷರು ಪಂಜು ಹಿಡಿದ್ಲು ಓಡುವ ಪದ್ಧತಿಯೂ ಉಂಟು, ತಮ್ಮ ಗ್ರಾಮದಗಡಿಯವರೆಗೆ, ಧನಕರುಗಳಿಗೆ ಸಾಂಕ್ರಾಮಿಕ ರೋಗ ರುಜಿನಗಳು ಬರುವುದನ್ನು ತಡೆಗಟ್ಟಲು ಈ ಕ್ರಮ.

ಮೇಲೆ ನಿರೂಪಿಸಿರುವ ಐದು ವ್ರತಗಳಲ್ಲಿ ಮೊದಲಿನ ನಾಲ್ಕು ಶಿಷ್ಟರಲ್ಲೂ ಕೊನೆಯದು ಮಾತ್ರ ಜನಪದರಲ್ಲೂ ಹೆಚ್ಚು ಜನಪ್ರಿಯವಾಗಿವೆ. ಆದಿತ್ಯ ವ್ರತ ರಥಸಪ್ತಮಿ ವ್ರತ ಮತ್ತು ನಿರಶನಾರ್ಕವಾರ ವ್ರತಗಳು ಇಂದಿಗೂ ಸೌರಮತನಿಷ್ಠರಲ್ಲಿ ಉಳಿದು ಬಂದಿರುವ ಪ್ರಮುಖ ಹಬ್ಬಾಚರಣೆಗಳು. ಈ ಎಲ್ಲ ವ್ರತಗಳಲ್ಲೂ ಮುಖ್ಯವಾಗಿ ಆರಾಧಿಸುವ ದೈವ ಸೂರ‍್ಯನೇ ಆಗಿರುವುದು ಗಮನಾರ್ಹ. ಮಕರ ಸಂಕ್ರಮಣ ಜನಪದ ಮತ್ತು ಶಿಷ್ಟ-ಇಬ್ಬರಲ್ಲೂ ವ್ಯಾಪಕವಾಗಿ ಪ್ರಚಾರದಲ್ಲಿರುವ ಹಬ್ಬ. ಸೂರ‍್ಯ ಮಕರರಾಶಿಗೆ ಸಂಕ್ರಮಣಗೊಳ್ಳುವುದರ ಅಂಗವಾಗಿ ಆಚರಿಸಲ್ಪಡುವ ಹಬ್ಬವಿದಾದುದರಿಂದ ಇದು ಸೌರಸಂಪ್ರದಾಯದ ಹಬ್ಬಗಳ ವ್ಯಾಪ್ತಿಗೆ ಸೇರುತ್ತದೆ. ಏನೇ ಇರಲಿ, ಈ ಎಲ್ಲ ಹಬ್ಬಗಳೂ ಸೂರ್ಯೋಪಾಸಕರಿಗೆ ಮಹತ್ವದ ಹಬ್ಬಗಳೇ. ಈ ಎಲ್ಲ ಹಬ್ಬಗಳಲ್ಲೂ, ಎಳ್ಳಿಗೆ ಹೆಚ್ಚು ಪ್ರಾಶಸ್ತ್ಯವಿರುವುದು ಒಂದು ವೈಶಿಷ್ಟ್ಯ. ಎಳ್ಳು ಸ್ನೇಹ ಸಂವರ್ಧನೆಯ ಪ್ರತೀಕ ಎಂಬುದನ್ನು ಮನಗಂಡಾಗ ಈ ಹಬ್ಬಗಳ ಔಚಿತ್ಯ ಏನೆಂಬುದು ತಿಳಿಯುತ್ತದೆ. ಅಖಂಡ ಸೌಭಾಗ್ಯ ಪ್ರಾಪ್ತಿಗಾಗಿ ಕನ್ಯೆಯರು ಎಳ್ಳಿನ ವ್ರತವನ್ನೇ ಆಚರಿಸುವುದಂತೂ ಎಳ್ಳಿಗೆ ಸೌರ ಸಂಪ್ರದಾಯ ನೀಡಿರುವ ಮಹತ್ವವನ್ನು ಹೇಳುತ್ತದೆ.

ಕೊನೆಯದಾಗಿ, ಸೂರ‍್ಯವಾಹನ ಸಂಬಂಧವಾಗಿ ಜನಪದರಲ್ಲಿ ಪ್ರಚಲಿತವಿರುವ ಜ್ಞಾನವನ್ನು ದಾಖಲಿಸದಿದ್ದರೆ ಈ ಪ್ರಬಂಧ ಅಸಮಗ್ರವಾಗುತ್ತದೆ. ಶಾಸನ, ಶಿಲೆಗಳಲ್ಲಿ ಚಿತ್ರಿತನಾಗಿರುವ ಸೂರ‍್ಯನನ್ನೇ ಜನಪದರು ಪರೀಭಾವಿಸಿಕೊಂಡಿರುವುದರಿಂದ ಸೂರ‍್ಯವಾಹನದ ಬಗೆಗಿನ ಪರಂಪರಾಗತ ತಿಳಿವಳಿಕೆ ಪೌರಾಣಿಕ ವಿವರಗಳಿಂದ ತೀರ ಭಿನ್ನವೇನಲ್ಲ. ಅವರ ಪ್ರಕಾರ, ಸೂರ‍್ಯ ಒಂದು ತಲೆಯ ಹಲವು ಕೈಗಳ ಆಯುಧ ಹಿಡಿದ ರೌದ್ರಶಾಂತಮೂರ್ತಿ. ಅವನ ರಥ ಒಂಟಿಗಾಲಿಯದು. ಅದಕ್ಕೆ ಸಪ್ತಾಶ್ವಗಳು. ರಥದ ಚಾಲಕ ಹೆಳವ ಅರುಣ. ರಥದ ಹಿಡಿಹಗ್ಗ ಆದಿಶೇಷ. ಕೆಲವೆಡೆಗಳಲ್ಲಿ ಇನ್ನೂ ಸ್ವಾರಸ್ಯಕರವಾದ ಕಲ್ಪನೆಗಳಿವೆ. ಬಿಜಾಪುರದ ಕಡೆಯ ಜನಪದರ ವಾದವನ್ನು ಚಿದಾನಂದ ಮೂರ್ತಿ ಅವರುಹೀಗೆ ದಾಖಲಿಸಿದ್ದಾರೆ.[3] ’ವಿಜಯದಶಮಿಯಿಂದ ಸಂಕ್ರಾಂತಿಯವರೆಗೆ ಹಗಲು ಚಿಕ್ಕದಾಗುತ್ತ ರಾತ್ರಿ ದೀರ್ಘವಾಗುತ್ತ ಹೋಗುತ್ತದೆ. ಇದಕ್ಕೆ ಕಾರಣ ಸೂರ‍್ಯ ತನ್ನ ರಥಕ್ಕೆ ಹಗಲು ಕುದುರೆಗಳನ್ನು ಕಟ್ಟಿ ರಾತ್ರಿಕೋಣಗಳನ್ನು ಕಟ್ಟುತ್ತಾನೆ. ಕುದುರೆಗಳ ವೇಗ ಜಾಸ್ತಿ. ಕೋಣಗಳ ವೇಗ ಕಡಿಮೆ. ಆ ಕಾರಣ ಹಗಲು ಚಿಕ್ಕದು, ರಾತ್ರಿ ಸುದೀರ್ಘ ಮತ್ತು ಬೆಳೆಗಳು ದೊಡ್ಡದಾಗುವುದು ಅಥವಾ ಬೆಳೆಯುವುದು ರಾತ್ರಿಯೇ. ಸೂರ‍್ಯ ವಿಜಯದಶಮಿಯಿಂದ ಸಂಕ್ರಾಂತಿಯವರೆಗೆ ಬೇಕೆಂದೇ ರಾತ್ರಿ ಕೋಣಗಳನ್ನು ರಥಕ್ಕೆ ಹೂಡಿ ರಾತ್ರಿಯನ್ನು ಸುದೀರ್ಘ ಮಾಡಿ ಬೆಳೆಗಳು ದೊಡ್ಡವಾಗುವುದಕ್ಕೆ ಅವಕಾಶ ಮಾಡಿ ಕೊಡುತ್ತಾನೆ.

ಸೂರ‍್ಯ ಸಂಕ್ರಾಂತಿಯಿಂದ ಮುಂದಕ್ಕೆ ಹಗಲು ಕೋಣಗಳನ್ನು ಹೂಡಿ ರಾತ್ರಿ ಕುದುರೆಗಳನ್ನು ಹೂಡುತ್ತಾನೆ. ಆ ಕಾರಣ, ಹಗಲು ದೊಡ್ಡದಾಗುತ್ತ ರಾತ್ರಿ ಚಿಕ್ಕದಾಗುತ್ತ ಬರುತ್ತದೆ’. ಇದು ಹಗಲು ಚಿಕ್ಕದಾಗಲು ಮತ್ತು ರಾತ್ರಿ ದೀರ್ಘವಾಗಲು ಹಾಗೂ ಹಗಲು ದೀರ್ಘವಾಗಲು ಮತ್ತು ರಾತ್ರಿ ಚಿಕ್ಕದಾಗಲು ಇರುವ ಕಾರಣಗಳನ್ನು ಹುಡುಕುವ ಒಂದು ಯತ್ನ. ಇಲ್ಲಿ ಜನಪದ ಮನಸ್ಸಿನ ಸರಳ ತಾರ್ಕಿಕತೆ ಚುರುಕಾಗಿ ಕೆಲಸ ಮಾಡಿರುವುದನ್ನು ಗಮನಿಸಬಹುದು.

ಉಪಸಂಹಾರ:

ಮೇಲಿನ ವಿವರಗಳು ಜನಪದರ ಬದುಕಿಗೆ, ಅವರ ಮನೋಭಾವಗಳಿಗೆ ಮತ್ತು ಆಚರಣೆಗಳಿಗೆ ಸಂಬಂಧಿಸಿದವಾಗಿವೆ. ಇಲ್ಲಿನ ಬಹುತೇಕ ವಿವರಗಳು ಕರ್ನಾಟಕದಲ್ಲೇ ಏಕೆ ಪ್ರಪಂಚದ ಎಲ್ಲೆಡೆ ಹೆಚ್ಚು ವ್ಯತ್ಯಾಸಗಳಿಲ್ಲದೆ ದೊರಕುವಂಥವೇ ಆಗಿವೆ. ಸೂರ‍್ಯನನ್ನು ಕುರಿತು ಬೇರೆ ಬೇರೆ ಪ್ರದೇಶದ ಭಿನ್ನ ಸಮಾಜ ಸಂಸ್ಕೃತಿಗಳ ಜನ ಒಂದೇ ರೀತಿಯಾಗಿ ಪ್ರತಿಕ್ರಿಯಿಸುವುದರಲ್ಲಿ ಆಶ್ಚರ‍್ಯವೇನೂ ಕಾಣಿಸದು. ಆದರೆ ಸೂರ‍್ಯ ಸಂಬಂಧಿ ಪುರಾಣಗಳು ಮತ್ತು ಆಚರಣೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಸರಣಗೊಂಡಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲು ಆಗುವುದಿಲ್ಲ. ಈಗ ಇಲ್ಲಿ ವಿವೇಚನೆಗೆ ಒಳಪಡಿಸಿರುವ ಮಾಹಿತಿಯ ಆಧಾರದ ಮೇಲೆ ಕೆಳಕಂಡ ತೀರ್ಮಾನಗಳಿಗೆ ಬರಬಹುದು.

೧. ಸೂರ‍್ಯ ಮತ್ತು ಸೂರ‍್ಯಗ್ರಹಣಕ್ಕೆ ಸಂಬಂಧಿಸಿದ. ಮನುಷ್ಯನ ನಡವಳಿಕೆಯಲ್ಲಿ ಸಮಾನ ಅಂಶಗಳು ಕಂಡು ಬರುತ್ತವೆ. ದೇಹ ಕಾಂತಿಯನ್ನು ವೃದ್ಧಿಸಿಕೊಳ್ಳಲು ಸೂರ‍್ಯಸ್ನಾನ ಮಾಡುವುದು, ಪುತ್ರಪ್ರಾಪ್ತಿಗಾಗಿ ಸೂರ‍್ಯನಿಗೆ ತೊಟ್ಟಿಲು ಹರಕೆ ಸಲ್ಲಿಸುವುದು, ಮಜ್ಜಿಗೆ ಕಡೆಯುವ ಕಡಗೋಲನ್ನು ಸೂರ‍್ಯನಿಗೆ ತೋರಿಸುವುದು, ಸ್ವಸ್ತಿಕ ಚಿಹ್ನವೆಂದು ಪರಿಗಣಿಸುವುದು, ಅರ್ಘ್ಯನೀಡುವುದು, ಗ್ರಹಣಕಾಲದಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ಪಾಲಿಸುವ ನಿಷೇಧಗಳು, ಆಹಾರ ಪದಾರ್ಥಗಳಿಗೆ ಗರುಕೆ ಹುಲ್ಲು ಹಾಕಿಡುವುದು, ಯಂತ್ರ ತಂತ್ರ ಸಾಧನೆಗೆ ಗ್ರಹಣಕಾಲ ಪ್ರಶಸ್ತವೆಂದು ನಂಬುವುದು, ಗೆದ್ದಲು ಮರಗಳನ್ನು ಕಡಿಯುವುದು, ನೀರಿನಲ್ಲಿ ಒನಕೆ ನಿಲ್ಲಿಸುವುದು ಇತ್ಯಾದಿ ಆಚರಣೆಗಳು ಬಹುತೇಕ, ಎಲ್ಲಕಡೆಯೂ ಒಂದೇ ಬಗೆಯಲ್ಲಿ ಕಂಡು ಬರುವಂಥವು.

೨. ಮಧ್ಯಯುಗೀನ ಕರ್ನಾಟಕದಲ್ಲಿ ಸೂರ್ಯಾರಾಧನೆ ಪ್ರಬಲವಾಗಿಯೇ ಪ್ರಚುರವಾಗಿದ್ದಿತು. ಹದಿಮೂರನೆಯ ಶತಮಾನದಿಂದೀಚಿನ ಶಾಸನಗಳಲ್ಲಿ ಗ್ರಹಣ ಸಂಬಂಧೀ ವಿಪುಲ ವಿವರಗಳ ಜೊತೆಯಲ್ಲಿ ಸೂರ‍್ಯಕುಲ.[4] ಸೂರ್ಯಮಠ,[5] ಸೂರ‍್ಯದೇವ ರ್ಕೊಯಿಲ್,[6] ಸೂರ್ಯದೇವರ ಪ್ರತಿಷ್ಠೆ[7] ಕುರಿತ ಉಲ್ಲೇಖಗಳು ಕಾಣಸಿಗುತ್ತವೆ. ಈ ಶಾಸನಾಧಾರಗಳೇ ಅಲ್ಲದೇ ಪ್ರಾಚೀನ ಕಾವ್ಯ ಮತ್ತು ಪುರಾಣಗಳೂ ಅದಕ್ಕೆ ಪ್ರಬಲ ಸಾಕ್ಷ್ಯಾಧಾರಗಳನ್ನು ಒದಗಿಸುತ್ತವೆ.

೩. ಸೂರ್ಯಾರಾಧನೆ ಆರ‍್ಯಮೂಲದ್ದು, ಆರ‍್ಯಮೂಲದವರಷ್ಟೇ ಸೂರ‍್ಯ ಸಂಪ್ರದಾಯಗಳು ಕಂಡುಬರುವುದು ಅದಕ್ಕೆ ಆಧಾರ.

೪. ಜನಪದ ಸೂರ‍್ಯ ಪುರಾಣಗಳಲ್ಲಿ ಸೂರ‍್ಯನಿಗೆ ಮಾನವತ್ವವನ್ನು ಆರೋಪಿಸಿದ್ದು ಅವನನ್ನು ಗಂಡಾಗಿ ಕಲ್ಪಿಸಿವೆ.

೫. ಸೂರ‍್ಯ ಜ್ಞಾನವಿವರಗಳಲ್ಲಿ ಶಿಷ್ಟಪುರಾಣ ಮತ್ತು ಜನಪದ ಪುರಾಣಗಳ, ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ.

೬. ಸೂರ‍್ಯನಿಗೆ ಜನಪದರು ಚಂದ್ರನಿಗೆ ನೀಡುವಷ್ಟು ಮಹತ್ವ ನೀಡುವುದಿಲ್ಲ ಆಕಾಶದಲ್ಲಿ ಸೂರ‍್ಯ ಒಬ್ಬಂಟಿ ಎಂಬುದು, ಚಂದ್ರನು ಅಸಂಖ್ಯಾತ ನಕ್ಷತ್ರಗಳ ಒಡನಾಡ ಹೊಂದಿದವನು ಎಂಬ ಸಾಮಾನ್ಯ ತಿಳಿವಳಿಕೆಯೇ ಅದಕ್ಕೆ ಕಾರಣವಿರಬಹುದು.

೭. ಜನಪದರಿಗೆ ತಕ್ಕಮಟ್ಟಿನ ಖಗೋಳಜ್ಞಾನವೂ ಇದೆ.

೮. ಒಟ್ಟಿನಲ್ಲಿ ಸೂರ‍್ಯ ಜಾನಪದ ಕುತೂಹಲಕರವಾಗಿದ್ದು ಅಭ್ಯಾಸಯೋಗ್ಯವಾಗಿದೆ.[8]
*      ಈ ಪ್ರಬಂಧವನ್ನು ಸಿದ್ಧಪಡಿಸುವ ವಿವಿಧ ಹಂತದಲ್ಲಿ ಸೂಕ್ತ ಮಾಹಿತಿ, ಸಲಹೆಗಳನ್ನು ನೀಡುವುದರ ಮೂಲಕ ನನಗೆ ನೆರವಾದವರು ರಾಜೂರಿನ ಮಲ್ಲಿಕಾರ್ಜುನ ಕುಂಬಾರ, ಡಾ. ಜೀ.ಶಂ. ಪರಮಶಿವಯ್ಯ, ಎನ್. ಬಸವಾರಾಧ್ಯ, ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಮತ್ತು ಎಂ.ಬಿ. ಸಕೇತ ಅವರು ಈ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.

[1]       ಡಾ. ಎಂ. ಚಿದಾನಂದಮೂತಿ, ಪೂರ್ಣ ಸೂರ್ಯಗ್ರಹಣ, ಬೆಂಗಳೂರು, ೧೯೮೨, ಪು. ೧೮೪.

[2]      ಅದೇ ಪು. ೧೮೪-೧೮೫.

[3]      ಅದೇ ಪು. ೧೭೮.

[4]      Epigraphia Carnation, Institate of Kannada Studies, Mysore, Vol. 3, 1974, P. 364

[5]      EC Vol. 4, 1975, P. 364

[6]              ”              P.335

[7]         ”              7, 1979, P.98

[8]       ಈ ಪ್ರಬಂಧ ಸಿದ್ಧಪಡಿಸುವಲ್ಲಿ, ಕೆಲವು ಸೈದ್ಧಾಂತಿಕ ಸಂಗತಿ ಮತ್ತು ವಿವರಗಳಿಗೆ ಡಾ. ಎಂ. ಚಿದಾನಂದಮೂರ್ತಿ ಅವರ ’ಪೂರ್ಣ ಸೂರ‍್ಯಗ್ರಹಣ’ ಕೃತಿಗೆ ಋಣಿಯಾಗಿದ್ದೇನೆ.)