ಪುರಾಣ: ಸೂರ‍್ಯನಿಗೆ ಮೊದಲು ಮದುವೆಯಾಯಿತು. ಆಗ ಚಂದ್ರನು ತನಗೂ ಮದುವೆ ಮಾಡಬೇಕೆಂದು ಹಟ ಹಿಡಿದನು. ಆಗ ಸೂರ‍್ಯನು ’ನೀನು ಇನ್ನೂ ಚಿಕ್ಕವನು. ಬೆಳೆದು ಬಾ’ ಎಂದನು ಅದಕ್ಕೇ ಚಂದ್ರನು ಪೂರ್ಣವಾಗಿ ಬೆಳೆದು ಸೂರ‍್ಯನಲ್ಲಿಗೆ ಹೋದಾಗಲೆಲ್ಲಾ ಸೂರ‍್ಯ ಕಣ್ಮರೆಯಾಗುತ್ತಿರುವುದು – ಇಲ್ಲಿ ಸೂರ‍್ಯನಿಗೆ ಜನಪದರು ತಮ್ಮನ ಮದುವೆ ಜವಾಬ್ದಾರಿ ಹೊರಿಸಿದ್ದಾರೆ. ಅವನು ಹುಣ್ಣಿಮೆ ದಿನ ಚಂದ್ರನಿಂದ ತಮ್ಮನ ಮದುವೆ ಜವಾಬ್ದಾರಿ ಹೊರಿಸಿದ್ದಾರೆ. ಅವನು ಹುಣ್ಣಿಮೆದಿನ ಚಂದ್ರನಿಂದ ಕಣ್ಮರೆಯಾಗುವುದು ಆ ಹೊಣೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಎಂದು ಜನಪದರ ಕಲ್ಪನೆ. ಸೂರ‍್ಯ ಚಂದ್ರರನ್ನು ಮಾನವ ಸಹಜವಾದ ಕೌಟುಂಬಿಕ ಜೀವನಕ್ಕೆ ಒಳಪಡಿಸುವುದರಿಂದ ಈ ಪುರಾಣ ಬಹು ಬೇಗ ಶ್ರೋತೃಗಳ ಮನಸ್ಸನ್ನು ಗೆಲ್ಲುತ್ತದೆ.

ಮೊದಲಿಗೆ ಚಂದ್ರನಷ್ಟೇ ಹಿತಕರನಾಗಿದ್ದ ಆದರೆ ಹೆಚ್ಚು ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದ್ದ ಸೂರ‍್ಯ ಹೇಗೆ ಹೊಳೆಯುವ ಅಗ್ನಿ ಕೆಂಡವಾದ ಎಂಬುದನ್ನು ವಿವರಿಸುವ ಒಂದು ರಚನೆ ಹೀಗಿದೆ:

ಪುರಾಣ: ಸೂರ‍್ಯದೇವನಿಗೆ ಒಬ್ಬ ಚಿಕ್ಕಮಗಳಿದ್ದಳು. ತಾನು ಸಂಚಾರಕ್ಕೆ ಹೋಗುವಾಗಲೆಲ್ಲ ಆ ಮಗುವನ್ನು ತನ್ನೊಡನೆ ಕರೆದೊಯ್ಯುತ್ತಿದ್ದೆ. ಒಮ್ಮೆ ಪ್ರಪಂಚ ಗತ್ಯಂತರವಿಲ್ಲದೆ ಮಗಳನ್ನೇ ಕತ್ತರಿಸಿ ತಿನ್ನಬೇಕಾಯಿತು. ತಿನ್ನುತ್ತಿದ್ದಾಗ ಮಗುವಿನ ಆತ್ಮ ತಪ್ಪಿಸಿಕೊಂಡು ನೆಲದ ಮೇಲೆ ಬಿದ್ದಿತು. ಆಗ ನೆಲಕ್ಕೆ ಕಿಚ್ಚಿಟ್ಟನು. ಬೆಂಕಿ ಹೊತ್ತಿಕೊಂಡಿತು. ಮಗುವಿನ ಆತ್ಮವೂ ಸುಟ್ಟುಹೋಯಿತು. ಅಂದಿನಿಂದ ಸೂರ‍್ಯ ಮೊದಲಿನಂತಿಲ್ಲದೆ ಅಗ್ನಿ ಕೆಂಡವಾಗಿ ಎಲ್ಲರನ್ನೂ ಸುಡಲಾರಂಭಿಸಿದ. ಇಲ್ಲಿ ಪ್ರಕಟಗೊಂಡಿರುವ ಜನಪದ ಮನಸ್ಸಿನ ಸರಳ ತರ್ಕ ನೈಜವಾದುದು. ಕಲ್ಪನಾ ಕುಶಲತೆ ಆಕರ್ಷಕವಾದುದು; ಅದ್ಭುತವಾದುದು.

ಪ್ರಾಕ್ತನ ಮಾನವ ಪ್ರಾಕೃತಿಕ ಬದುಕು ನಡೆಸುತ್ತಿದ್ದಾಗ ಪ್ರಕೃತಿಯ ವೈಚಿತ್ರ್ಯಗಳನ್ನು ಕಂಡು ಭೀತನಾದ; ಬೆರಗಾದ. ಈ ಭಯಭೀತ ಮನಸ್ಸು ಅವನಿಗೆ ಸಚರಾಚರ ವಸ್ತುಗಳ ಹುಟ್ಟನ್ನು ಕುರಿತು ಆಲೋಚಿಸುವಂತೆ ಮಾಡಿತು. ಸೂರ‍್ಯ ಚಂದ್ರರನ್ನು ಕುರಿತು ಕೂಡ ಚಿಂತನೆ ನಡೆಸಿದ. ಸೂರ‍್ಯ ಚಂದ್ರರ ಸೃಷ್ಟಿ ಹೇಗಾಯಿತೆಂಬುದನ್ನು ವರ್ಣಿಸುವ ಒಂದು ರಚನೆ ಕೆಳಕಂಡಂತಿದೆ.

ಪುರಾಣ: ಮೊದಲಿಗೆ ಮನುಷ್ಯರು ಕತ್ತಲಲ್ಲಿ ಜೀವನ ನಡೆಸುತ್ತಿದ್ದರು. ಎಲ್ಲರೂ ವಿಶ್ವದೇವತೆಯನ್ನು ನಂಬಿದ್ದರು. ಏಕೆಂದರೆ ಆಕೆಯೊಬ್ಬಳಿಗೆ ಮಾತ್ರ ಬೆಳಕನ್ನು ಕೊಡುವ ಚೈತನ್ಯವಿತ್ತು. ಕ್ರಮೇಣ ಜನರಿಗೆ ಕತ್ತಲು ಜೀವನ ದುಸ್ತರವಾಯಿತು. ಬೆಳಕಿಗಾಗಿ ದೇವಿಯನ್ನು ಓಲೈಸಿದರು; ಉಪಾಸನೆ ಗೈದರು. ದೇವಿ ಸಂತೃಪ್ತಳಾಗಿ ತನ್ನ ಕಣ್ಣಲ್ಲಿರುವ ಬೆಳಕಿನಿಂದ ಒಂದು ಹುಡುಗ ಮತ್ತೊಂದು ಹುಡುಗಿಯನ್ನು ಸೃಷ್ಟಿಸಿದಳು. ಹುಡುಗನ ಬೆಳಕು ಪ್ರಜ್ವಲಿಸುತ್ತಿತ್ತು. ಹುಡುಗಿಯು ಹೆಚ್ಚು ಪ್ರಖರವಾಗಿರಲಿಲ್ಲ. ಅವರೇ ಸೂರ‍್ಯ ಚಂದ್ರರು. ಇಬ್ಬರೂ ಬೆಳೆದು ದೊಡ್ಡವರಾದರು. ದೇವಿ ಅವರಿಬ್ಬರಿಗೂ ಮದುವೆ ಮಾಡಿಸಿದಳು. ಸೂರ‍್ಯ ಚಂದ್ರರಿಗೆ ಅಸಂಖ್ಯಾತ ಮಕ್ಕಳಾದರು. ಆ ಮಕ್ಕಳೇ ನಕ್ಷತ್ರಗಳು. ಈ ಅಸಂಖ್ಯಾತ ನಕ್ಷತ್ರಗಳಲ್ಲಿ ಇಬ್ಬರನ್ನುಳಿದು ಮಿಕ್ಕವರಾರೂ ತಂದೆಯನ್ನು ಹೋಲುತ್ತಿರಲಿಲ್ಲ. ಸೂರ‍್ಯನಿಗೆ ಹೆಂಡತಿಯ ಮೇಲೆ ಸಂಶಯ ಉಂಟಾಯಿತು. ಅವಳಿಂದ ದೂರನಾದ. ಅಂದಿನಿಂದ ಇಬ್ಬರೂ ದೂರ ಸರಿದರು. ಆದರೆ ಇಬ್ಬರಿಗೂ ತಿಂಗಳಿಗೊಮ್ಮೆಯಾದರೂ ಪರಸ್ಪರರನ್ನು ನೋಡಿಕೊಳ್ಳುವ ಆಸೆ. ಗಂಡ ಊಟಕ್ಕೆ ಕುಳಿತಾಗ ಅವಳು ಅವನ ನೆರವಿಗೆ ಬರುತ್ತಾಳೆ. ಅವನು ಊಟ ಮಾಡುವುದನ್ನು ಬಿಟ್ಟು ಅವಳನ್ನು ಹಿಡಿಯಲು ಯತ್ನಿಸುತ್ತಾನೆ. ಅವಳು ಇನ್ನೇನು ತನ್ನನ್ನು ಹಿಡಿದೇ ಬಿಟ್ಟವೆನ್ನುವಾಗ ಅವಳು ಕೆಂಪಾಗಿ ಬಹಿಷ್ಠೆಯಾಗಿರುವುದಾಗಿ ತಿಳಿಸುತ್ತಾಳೆ – ಇಲ್ಲಿ ಸೂರ‍್ಯ ಚಂದ್ರರನ್ನು ದಂಪತಿಗಳಾಗಿ ಕಲ್ಪಿಸಿದ್ದು ಅವರಿಗೆ ಅಸಂಖ್ಯಾತ ಮಕ್ಕಾಳಾದರೆಂಬ ಸಂಗತಿಯನ್ನು ತರಲಾಗಿದೆ. ಆ ಅಸಂಖ್ಯಾತ ಮಕ್ಕಳೇ ನಕ್ಷತ್ರಗಳು ಎಂಬುದು ಒಂದು ವಿಶಿಷ್ಟವಾದ, ಅಪೂರ್ವವಾದ ಕಲ್ಪನೆಯಾಗಿದೆ.

ಮೇಲಿನ ಆರೂ ಪುರಾಣಗಳು ಮುಖ್ಯವಾಗಿ ಸೂರ‍್ಯನನ್ನು ಕುರಿತದ್ದರೂ ಒಟ್ಟಾರೆಯಾಗಿ ಅವು ಆಕಾಶಕಾಯ (Celestial Bodies) ಗಳಿಗೆ ಸಂಬಂಧಿಸಿದವಾಗಿವೆ. ಮನುಷ್ಯ ಸೂರ‍್ಯನನ್ನು ನೇರವಾಗಿ ನೋಡಲು ಆಗದಿರುವುದು, ಹುಣ್ಣಿಮೆಯ ದಿನ ಅವನು ದೃಗ್ಗೋಚರನಾಗಿರುವುದು, ಚಂದ್ರನಂತೆ ತಂಪಾಗಿರದೆ ತಾಪದಾಯಕನಾಗಿರುವುದು ಇತ್ಯಾದಿ ಸಂಗತಿಗಳು ಜನಪದ ಮನಸ್ಸಿಗೆ ಅತ್ಯಾಶ್ಚರ‍್ಯಕರವಾಗಿ ಕಂಡವು. ತನ್ನ ಅನುಭವ ಮಿತಿಯಲ್ಲೇ ಅವನು ಚಿಂತನ ಮಂಥನ ನಡೆಸಿ ಆ ಸಂಗತಿಗಳಿಗೆ ಉತ್ತರ ಕಂಡು ಕೊಂಡ. ಆ ಉತ್ತರಗಳೇ ಈ ಪುರಾಣಗಳು. ಆಕಾಶಕಾಯಗಳು ಅವನ ಪಾಲಿಗೆ ಪವಿತ್ರದೇವತೆಗಳಷ್ಟೇ ಅಲ್ಲ. ಅವಕ್ಕೂ ತಮ್ಮಂಗೆ ಜೀವನವುಂಟು. ಸಾಂಸಾರಿಕ ಜೀವನವುಂಟು. ಮಾನವ ಜೀವನದಲ್ಲಿ ಎದುರಾಗುವ ಕಷ್ಟ, ಸುಖ-ದುಃಖ, ದಾರಿದ್ರ್ಯಗಳು ಅವಕ್ಕೂ ಎದುರಾಗುತ್ತವೆ. ಅವುಗಳ ಜೀವನ ಯಾವ ದೃಷ್ಟಿಯಿಂದಲೂ ಮಾನವ ಜೀವನ ವಿಧಾನದಿಂದ ಭಿನ್ನವಲ್ಲ. ಅವು ಮಾನವ ಕಷ್ಟಸುಖಗಳನ್ನು ವಿಚಾರಿಸಿಕೊಳ್ಳುವುದರ ಜೊತೆಗೆ ಅವನ ಮಕ್ಕಳೊಡನೆ ಕೂಡಿ ಆಡುತ್ತವೆ; ನಕ್ಕು ನಲಿಯುತ್ತವೆ ಎಂದು ಕಲ್ಪನೆ. ಆದ್ದರಿಂದಲೇ ಈ ರಚನೆಗಳಲ್ಲಿ ಸೂರ‍್ಯ ಚಂದ್ರರ ಮದುವೆಗಳು ಮಾನವರ ಮದುವೆಗಳಂತೆಯೇ ನಡೆದು ಹೋಗುತ್ತವೆ. (ಅದ್ಭುತವೂ ಅನೂಹ್ಯವೂ ಆದ ರೀತಿಯಲ್ಲಿ ಪ್ರಾಕೃತಿಕ ಸಂಗತಿಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದು ಜನಪದರಿಗೆ ಮಾತ್ರ) ಇಂಥ ಕಲ್ಪನೆ ಕೇವಲ ಮಿತಿ ಮೀರಿದ ಕಲ್ಪನೆಯಷ್ಟೇ ಅಲ್ಲ, ಪ್ರಕೃತಿಯೊಡನೆ ತಮ್ಮ ಬದುಕನ್ನು ಸಮೀಕರಿಸಿ ನೋಡುವ ಯತ್ನ. ಇಲ್ಲಿ ಸೂರ‍್ಯ ಚಂದ್ರರನ್ನು ಸಾಂಕೇತಿಕ ಮಾನದಂಡಗಳನ್ನು ಗಿಟ್ಟುಕೊಂಡು ಜೀವನಾನುಭವದ ಅರ್ಥವನ್ನು ಮೂರ್ತ ರೂಪದಲ್ಲಿ ಗ್ರಹಿಸುವ ಪ್ರಯತ್ನವೂ ಇದೆ.

ಮೇಲಿನ ೧ರಿಂದ ೬ರವರೆಗಿನ ಎಲ್ಲ ರಚನೆಗಳೂ ರೂಪರಚನೆಯ (Morphological) ದೃಷ್ಟಿಯಿಂದ ಒಂದೇ ಮಾದರಿಯಾಗಿವೆ. ಆರೂ ರಚನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರೂಪಾವಳಿಗಳು (paradigms) ಅದಕ್ಕೆ ಆಧಾರ. ಆ ರೂಪಾವಳಿಗಳಲ್ಲಿ ಮುಖ್ಯವಾದವು: ೧. ಸೂರ‍್ಯ ಚಂದ್ರರು ರಕ್ತ ಸಂಬಂಧಿಗಳು. ೨. ಸೂರ‍್ಯ ತಾಪದಾಯಕ; ಚಂದ್ರ ಮನೋಹರ ೩. ಸೂರ‍್ಯ ಪ್ರಖರವಾಗಿ ಪ್ರಜ್ವಲಿಸುತ್ತಾನೆ; ಚಂದ್ರ ಹಿತಕರವಾಗಿ ಬೆಳಗುತ್ತಾನೆ. ೪. ಅವರು ಪರಸ್ಪರರನ್ನು ಭೆಟ್ಟಿಯಾಗಲಾರರು. ೫. ನಕ್ಷತ್ರಗಳು ಅವರ ಮಕ್ಕಳು.

ಸೂರ‍್ಯ ಸಂಬಂಧಿಯಾದ ಜನಪದ ಕಥೆಗಳು ಕನ್ನಡದಲ್ಲಿ ಪ್ರಚಲಿತವಿವೆ. ಡಾ.ಜೀ.ಶಂ. ಪರಮಶಿವಯ್ಯ ಅವರ ’ಕನ್ನಡ ಜನಪದ ಕಥೆಗಳು’

[1] ಸಂಗ್ರಹದಲ್ಲಿ ಸಂಕಲಿತವಾಗಿರುವ ’ಸಾವಿತ್ರಮ್ಮ’ ಎಂಬ ಕಥೆಯಲ್ಲಿ ಸೂರ‍್ಯ ಅತಿಮಾನುಷ ಪರಿಯಾಗಿ ಕಾಣಿಸಿಕಂಡು ಹಂದಿರೂಪದ ರಾಜಕುಮಾರನ ಹುಟ್ಟಿಗೆ ಕಾರಣನಾಗುವ ವಿವರವಿದೆ (ದುರ್ಬಲರನ್ನು, ಅಸಹಾಯಕರನ್ನು ಸೂರ‍್ಯ ಕೈ ಬಿಡುವುದಿಲ್ಲ, ರಕ್ಷಿಸುತ್ತಾನೆ. ಎಂಬ ವಿಶ್ವಾಸ ಇಲ್ಲಿ ಪ್ರತಿಪಾದಿತವಾಗಿದೆ.) ಪ್ರಕೃತಿದೇವತೆಗಳಲ್ಲೆಲ್ಲಾ ಹೆಚ್ಚು ಪವಿತ್ರನಾದ ಸೂರ‍್ಯ ಮತ್ತು ಮಾನವ ಹೆಣ್ಣಿನೊಡನೆ ವೈವಾಹಿಕ ಸಂಬಂಧ ಕಲ್ಪಿಸುವ ಇಂಥ ಕಥೆಗಳು ಹೆಚ್ಚು ಸಂಖ್ಯೆಯಲ್ಲಿ ಲಭ್ಯವಿಲ್ಲವಾದರೂ ಈ ಆಶಯ (Motif) ವಿರುವ ಕಥೆಗಳು ಕನ್ನಡದಲ್ಲಿ ದೊಡ್ಡ ಪ್ರಮಾಣದಲ್ಲಿವೆ ಎಂಬುದು ಗಮನಾರ್ಹ. ಪ್ರಪಂಚಾದ್ಯಾಂತ ಅಸಂಖ್ಯಾತ ಭಿನ್ನ ರೂಪಗಳಲ್ಲಿ ದೊರಕುವ ಕಪ್ಪೆರಾಜನ ಕಥೆಯೂ ಸೂರ‍್ಯನ ಕಥೆಯೇ ಎಂದು ಮ್ಯಾಕ್ಸ್‌ಮುಲ್ಲರ್ ಒಂದೆಡೆ ಹೇಳಿದ್ದಾನೆ. ಸೂರ‍್ಯನಿಗೆ ’ಕಪ್ಪೆ’ ಎಂಬ ಹೆಸರು ಋಗ್ವೇದದಲ್ಲಿರುವುದನ್ನು ಅವನು ಪ್ರಸ್ತಾಪಿಸಿದ್ದಾನೆ. ಕಪ್ಪೆರಾಜನ ಕಥೆ ಸೂರ‍್ಯನಿಗೆ ಸಂಬಂಧಿಸಿದ್ದೆಂದು ಪ್ರತಿಪಾದಿಸಲು ಅವನು ಅನೇಕ ಜನಪದ ಸಂಸ್ಕೃತಿಗಳಲ್ಲಿ ಸೂರ‍್ಯನನ್ನು ಹೆಣ್ಣಾಗಿ ಕಲ್ಪಿಸಿರುವುದುನ್ನು ಉಲ್ಲೇಖಿಸಿದ್ದಾನೆ.

ಇಂದಿಗೂ ಸೂರ್ಯೋಪಾಸನೆಯನ್ನು ಸ್ವಲ್ಪಮಟ್ಟಿಗೆ ಉಳಿಸಿಕೊಂಡಿರುವ ಹವ್ಯಕ ಮತ್ತು ಹಾಲಕ್ಕಿ ಒಕ್ಕಲಿಗರಲ್ಲಿ ಪ್ರಚಲಿತವಿರುವ ಒಂದು ಕಥೆಯಲ್ಲಿ ಸೂರ‍್ಯ, ಚಂದ್ರ, ಸತ್ಯನಾರಾಯಣ, ಶುಕ್ರ, ಬೆಳ್ಳಿ-ಇವರು ಕುಂತಿಯ ಮಕ್ಕಳು. ಮುಟ್ಟಗಿ ಸಮುದ್ರ ಮೀಯಲು ಹೋದ ಗಂಗೆಯನ್ನು ಸೂರ‍್ಯ ಕತ್ತಲೆಯನ್ನುಂಟು ಮಾಡಿ ಕೂಡಿದ ಫಲವಾಗಿ ಬಿಸಿಲಿನಲ್ಲಿ ತಿರುಗಬೇಕೆಂಬ ಶಾಪವನ್ನು ತಾಯಿಯಿಂದ ಪಡೆಯುತ್ತಾನೆ. ಸೂರ‍್ಯನು ಸಮುದ್ರದಲ್ಲಿ ಮುಳುಗುವಂತೆ ಕಾಣುವ ದೃಶ್ಯವನ್ನು ಇಲ್ಲಿ ಆತ ಸೋದರಿ ಗಂಗೆಯೊಡನೆ ಸಂಬಂಧ ಮಾಡಿದನೆಂದು ಚತುರತೆಯಿಂದ ನಿರೂಪಿಸಲಾಗಿದೆ. ಸೋದರ ಸೋದರಿಯರ ನಡುವಿನ ಲೈಂಗಿಕ ಸಂಬಂದ (Incest)ವನ್ನು ಪ್ರಸ್ತಾಪಿಸುವ ಈ ಆಶಯ ವ್ಯಾಪಕ ಪ್ರಸರಣಕ್ಕೀಡಾದ ಒಂದು ಜನಪ್ರಿಯ ಆಶಯವಾಗಿದೆ.

ಸೂರ‍್ಯ ಗ್ರಹಣ ಸಂಬಂಧವಾಗಿ ಜನಪದರಲ್ಲಿ ವಿಫುಲ ಸಾಮಗ್ರಿ ಸಿಗುತ್ತದೆ. ಭಾರತಾದ್ಯಂತ ಜನಪ್ರಿಯವಾಗಿರುವ ಪುರಾಣ ಕಥೆಗಳು ಕರ್ನಾಟಕದಲ್ಲೂ ಪ್ರಸಿದ್ಧವಾಗಿವೆ. ರಾಹು ಕೇತು ರಾಕ್ಷಕಸರು ಸೂರ‍್ಯಚಂದ್ರರನ್ನು ನುಂಗುವುದರಿಂದ ಗ್ರಹಣಗಳಾಗುತ್ತವೆಂಬ ಪುರಾಣ ಚಿರಪರಿಚಿತವಾದುದು. ರಾಹುಕೇತುಗಳನ್ನು ಸೂರ‍್ಯ ಚಂದ್ರರ ವೈರಿಗಳೆಂದು ಪರಿಗಣಿಸಲಾಗಿದ್ದು ಅವರು ಹೊಲೆಮಾದಿಗ ಜಾತಿಗೆ ಸೇರಿದವರು ಎಂಬ ಕಲ್ಪನೆ ಜನಪದರಲ್ಲಿ ಜನಜನಿತವಾಗಿದೆ. ಹೊಲೆಮಾದಿಗರಿಗೆ ವಸ್ತ್ರದಾನ ಮಾಡದಿದ್ದರೆ ಗ್ರಹಣ ಬಿಡುವುದಿಲ್ಲ ಎಂಬ ನಂಬಿಕೆ ಎಲ್ಲೆಡೆ ಪ್ರಬಲವಾಗಿದೆ (ಅದರಿಂದಾಗಿಯೇ ಇಂದಿಗೂ ಹೊಲೆಮಾದಿಗರಿಗೆ ವಸ್ತ್ರದಾನ ಮಾಡುವ ಸಂಪ್ರದಾಯ ಉಳಿದು ಬಂದಂತೆ ತೋರುತ್ತದೆ) ಸೂರ‍್ಯ ಚಂದ್ರರು ಸಾಲಮರಪಾವತಿ ಮಾಡಲಾಗದೆ ಸಾಲಕೊಟ್ಟವನು ಬಂದಾಗ ಅವಿಸಿಕೊಳ್ಳುವ ಪುರಾಣವೂ ರಾಹುಕೇತು ಪುರಾಣದಷ್ಟೇ ಪ್ರಸಿದ್ಧವಾದುದು. ಈ ಪುರಾಣದ ಪ್ರಕಾರ ಸಾಲಕೊಟ್ಟವನು ಹಣವೂಸಲಿಗೆ ಬಂದಾಗಲೆಲ್ಲ ಸೂರ‍್ಯ ಚಂದ್ರರು ಆವಿಸಿಕೊಳ್ಳುತ್ತಾರೆ.  ಈ ಘಟನೆ ಆಗಾಗ್ಗೆ ಘಟಿಸುವುದರಿಂದಲೇ ನಾವು ಮತ್ತೆ ಮತ್ತೆ ಗ್ರಹಣಗಳನ್ನು ನೋಡಬೇಕಾಗಿದೆ! ಸೂರ‍್ಯ ಗ್ರಹಣ ಕಂಡಾಗ ತಮಗಾದ ನೈಜ ಅನುಭವವಿದು; ಆಗ ಥಟ್ಟನೆ ನೆನಪಿಗೆ ಬರುವ ಪುರಾಣ.

ಗ್ರಹಣ ಸಂಬಂಧಿ ಕಥೆಗಳೂ ಕುತೂಹಲಕರವಾಗಿವೆ. ಸೂರ‍್ಯಗ್ರಹಣ ಎಂದರೆ ಸೂರ‍್ಯನ ಎದುರಾಗಿ ಸೂರ‍್ಯನ ಮಗನಾದ ಶನಿ ನಿಲ್ಲುವುದು ಎಂಬ ಕಲ್ಪನೆ ಜನಪದ ಕಥೆಗಳ ರೂಪದಲ್ಲಿ ಹರಡಿಕೊಂಡಿದೆ. ಶನಿಯು ಸೂರ‍್ಯಛಾಯಾದೇವಿಯರ ಮಗನೆಂಬ ಪೌರಾಣಿಕ ತಿಳಿವಳಿಕೆಯೂ ಜನಪದರಿಗಿದ್ದಂತಿದೆ. ತಂದೆ ಮಕ್ಕಳಿಬ್ಬರಿಗೂ ಮನಸ್ತಾಪ ಬಂದು ಶನಿ ಸರ್ಪರೂಪದಲ್ಲಿ ಬಂದು ತಂದೆಗೆ ಕಾಟಕೊಡುತ್ತಾನೆಂದು ಒಂದು ಕಥೆಯೇ ಇದೆ. ಸೂರ‍್ಯ-ಶನಿಯರ ಪ್ರಸಂಗವನ್ನು ಪ್ರಸ್ತಾಪಿಸುವ ಯಕ್ಷಗಾನಗಳೂ ಕನ್ನಡದಲ್ಲಿವೆ. ’ಶನಿದೇವರ ಮಹಾತ್ಮೆ’[2] ಎಂಬ ಯಕ್ಷಗಾನದಲ್ಲಿ ಸೂರ‍್ಯ ಮತ್ತು ಶನಿಗಳಲ್ಲಿ ಯಾರು ದೊಡ್ಡ ಗ್ರಹ ಮತ್ತು ಹೆಚ್ಚು ಮಹಿಮಾಸಂಪನ್ನರು ಎಂಬ ಚರ್ಚೆ ನಡೆದು ಕೊನೆಯಲ್ಲಿ ಸೂರ‍್ಯನಿಗಿಂತ ಶನಿಯೇ ಹೆಚ್ಚು ಮಹಿಮಾ ಶಾಲಿ ಎಂದು ಸಾದರಪಡಿಸಲಾಗಿದೆ.

ಜನಪದ ಗೀತೆ, ಕಾವ್ಯಗಳಲ್ಲೂ ಸೂರ‍್ಯ ವಿಚಾರ ಬಂದಿದೆ. ವೃತ್ತಿಗಾಯಕ ಕಾವ್ಯಗಳಲ್ಲಿ ಕಡ್ಡಾಯವೇನೊ ಎನ್ನುವಂತೆ ಸೂರ‍್ಯಸ್ತೋತ್ರ ಬಂದಿರುವುದನ್ನು ಯಾರೂ ಗಮನಿಸಬಹುದು. ಆದರೆ ಸೂರ್ಯೋದಯ ಸೂರ್ಯಾಸ್ತ ವರ್ಣನೆಗಳಿಗೆ ಇಲ್ಲಿ ಕೊರತೆ ಇದೆ. ಇಷ್ಟಾದರೂ ಗೀತೆ, ಕಾವ್ಯಗಳಲ್ಲಿ ಚಿತ್ರಿತನಾಗಿರುವ ಸೂರ‍್ಯ ಸರ್ವಶಕ್ತ; ಜನಪದರ ಪರಮ ಪವಿತ್ರದೈವ. ಅನ್ನ ನೀರು, ಆರೋಗ್ಯ ಮತ್ತು ಸಂಪತ್ತನ್ನು ದಯಪಾಲಿಸುವವ ಭೂತ ಪಿಶಾಚಿಗಳಿಂದ ಅವರನ್ನು ರಕ್ಷಿಸುವವನು ಅವನು. ಅವರ ದೈನಂದಿನ ಕಾರ‍್ಯ ಚಟುವಟಿಕೆಗಳು ಆರಂಭವಾಗುವುದೇ ಸೂರ್ಯೋದಯದಿಂದ. ಹಾಗೆಯೇ ಅಂದಂದಿನ ಅವರ ಕೆಲಸ ಕಾರ್ಯಗಳು ಮುಗಿತಾಯಹೊಂದುವುದೂ ಸೂರ್ಯಾಸ್ತದಿಂದಲೇ. ಮುಂಜಾನೆ ಎದ್ದ ಕೂಡಲೆ ಸೂರ‍್ಯ ಸ್ತುತಿ ಮಾಡಿ ಅವನಿಗೆ ನಮಸ್ಕಾರ ಹೇಳುವುದು ಪದ್ಧತಿ.

ಮುಂಗೋಳಿ ಕೂಗ್ಯಾವು ಮೂಡುಕೆಂಪೇರ್ಯಾವು
ನಾರಾಯಣ ಸ್ವಾಮಿ ರಥುವೇರಿ| ಬರುವಾಗ
ನಾವೆದ್ದು ಕೈಯ ಮುಗಿದೇವು

– ಇಲ್ಲಿ ಸೂರ‍್ಯನನ್ನು ಸೂರ‍್ಯನಾರಾಯಣ (’ಸೂರಿಜ’ ಎಂದು ಕರೆಯುವುದೇ ಹೆಚ್ಚು) ಎಂದು ಸಂಭೋಧಿಸಲಾಗಿದೆ. ಅವನನ್ನು ದೈವ ಎಂಬು ಗ್ರಹಿಸಿರುವುದು ಸ್ಪಷ್ಟವಿದೆ. ಸೂರ‍್ಯನು ಉದಯವಾಗುವಾಗ ರಥವೇರಿ ಬರುತ್ತಾನೆಂಬ ಕಲ್ಪನೆ ಶಿಷ್ಟ ಮೂಲದ್ದು. ಪುರಾಣಗಳಲ್ಲಿ ಈ ಬಗೆಗೆ ಸಾಕಷ್ಟು ವಿವರಗಳಿವೆ. ಶಿಲೆ, ವೀರಗಲ್ಲು, ಮತ್ತು ವಿಗ್ರಹಗಳಲ್ಲಂತೂ ರಥದ ಚಿತ್ರ ಸಾಮಾನ್ಯವಾಗಿ ಕಂಡು ಬಂದಿದೆ. ಸೂರ್ಯೋದಯ ಕಾಲದಲ್ಲಿ ’ಮೂಡು ಕೆಂಪೇರುವುದು’ ಜನಪದ ಕವಿಯ ಪ್ರತ್ಯಕ್ಷ ಅನುಭವ.

ಹೆಣ್ಣುಮಗಳೊಬ್ಬಳು ಅದೇತಾನೆ ಹುಟ್ಟುತ್ತಿರುವ ಸೂರ‍್ಯನನ್ನು ತನ್ನ ಹಣೆಯ ಕುಂಕುಮಕ್ಕೆ ಹೋಲಿಸಿಕೊಂಡ ಚಿತ್ರವಿರುವ ’ಸೂಲಗರಾಯ’ ಎಂಬ ಶೀರ್ಷಿಕೆಯ ಹಾಡನ್ನು ಡಾ. ಎಂ. ಚಿದಾನಂದ ಮೂರ್ತಿ ಅವರು ಉದಾಹರಿಸಿದ್ದಾರೆ.[3]

ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಕಾಡಗೊಲ್ಲರ ಜನಪದ ಗೀತೆಗಳಲ್ಲಿ[4] ಸೂರ‍್ಯಸ್ತೋತ್ರ ವಿಶೇಷವಾಗಿ ಬಂದಿದೆ.

ಎತ್ತೋದರೂ ನಮ್ಮಾ ನೆತ್ತೀ ಮ್ಯಾಲಾಡುವವನೆ
ಲಕ್ಷಾಳಿಗು ಬೋಗಿ ಮೈಗಾವೆ=ಜುಂಜಪ್ಪಾನ
ಎತ್ತೋದರೂ ನಿನ್ನ ದಯವಿರಲೋ||
ಎಲ್ಲೋದರೂ ನಮ್ಮ ಬೆನ್ನ ಮ್ಯಾಲಾಡುವಾನೆ
ಸಾವ್ರಾಳಿಗೂ ಬೋಗಿ ಮೈಗಾವೆ-ಜುಂಜಪ್ಪಾನ
ಎಲ್ಲೀಗೋದರೂ ನಿನ್ನಾ ದಯವಿರಲೋ||

– ಈ ತ್ರಿಪದಿಗಳಲ್ಲಿ ಕಾಡುಗೊಲ್ಲರು ತಮ್ಮ ಕುಲದೇವರಾದ ಜುಂಜಪ್ಪನನ್ನು ಸ್ತುತಿಸುವ ನೆಪದಲ್ಲಿ ಸೂರ‍್ಯನ ಬಗೆಗಿನ ತಮ್ಮ ತಿಳಿವಳಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ’ನೆತ್ತೀಮ್ಯಾಲಾಡುವವನು’ ’ಬೆನ್ನಮ್ಯಾಲಾಡುವವನು’ ಪ್ರಯೋಗಗಳು ಗಮನಾರ್ಹವಾದವು. ಕೃಷಿಕರು ಸಾಮಾನ್ಯವಾಗಿ ತಮ್ಮ ಭೂಮಿ ವಾಸದ ನೆಲೆಗೆ ಪಶ್ಚಿಮದಿಕ್ಕಿನಲ್ಲಿದ್ದರೆ ಶ್ರೇಷ್ಟವೆಂದು ಪರಿಗಣಿಸುತ್ತಾರೆ. ಅದಕ್ಕೆ ಕಾರಣ ಅವರು ಭೂಮಿಗೆ ಹೋಗುವಾಗ ಬರುವಾಗ ತಮ್ಮ ಬೆನ್ನ ಹಿಂದೆ ಸೂರ‍್ಯ ಇರಲು ಸಾಧ್ಯವಾಗುವುದು ಆ ದಿಕಿನಲ್ಲಿದ್ದರೆ ಮಾತ್ರ.

ಕಾಡುಗೊಲ್ಲರು ಸೂರ್ಯೋದಯವನ್ನು ಗಮನಿಸಿರುವ ರೀತಿಯನ್ನು ವರ್ಣಿಸುವ ಒಂದು ರಚನೆ ಈ ಕೆಳಕಂಡಂತಿದೆ:

ಮೂಡೆಯ ತರುಕೆ ಮೂಡೀದ ಸೂರಿಜ
ಮೂಡಿದೇಳಾ ದಿನುಕೆ ರಥುವೇರಿದ[5]

– ರಚನೆ ಕಾವ್ಯಾತ್ಮಕವಾಗಿದೆ. ಇಲ್ಲಿ ಸೂರ‍್ಯ ’ಮೂಡೆಯ’ ತೆರನಲ್ಲಿ ಮೂಡಿದನೆಂಬ ಕಲ್ಪನೆ ವಿಶಿಷ್ಟವಾದುದು. ಯಾವುದೇ ವಸ್ತುವಾಗಿರಲಿ ಅದನ್ನು ತಮಗೆ ಚಿರಪರಿಚಯವಿರುವ ಮತ್ತೊಂದು ವಸ್ತುವಿನೊಂದಿಗೆ ಸಮೀಕರಿಸಿ ವಿವರಿಸುವ ಚಾಯಮಾನ ಜನಪದರದು. ಅದರಂತೆ ಇಲ್ಲಿ ಕಾಡುಗೊಲ್ಲರು ಸೂರ‍್ಯ ಮೂಡುವುದನ್ನು ತಮ್ಮ ಮನೆಯ ’ಮೂಡೆಯ (ಧಾನ್ಯ ಶೇಖರಿಸಿಡುವ ಸಾಧನ) ಗಾತ್ರಕ್ಕೆ ಹೋಲಿಸಿದ್ದಾರೆ. ಎರಡನೆಯ ಚರಣದಲ್ಲಿ ಸೂರ‍್ಯನು ಮೂಡಿದ ’ಏಳು’ ದಿನಕ್ಕೆ ರಥವೇರುವ ವಿವರವಿದೆ. ಇಲ್ಲಿ ’ಏಳು’ ಸಂಖ್ಯೆ ಗಮನಾರ್ಹ. ಇದು ಶಿಷ್ಟ ಪುರಾಣ, ಕಾವ್ಯ ಮತ್ತು ಶಾಸನ ಹಾಗೂ ವೇದಗಳಲ್ಲಿ ಸೂರ‍್ಯ ಕಿರಣಗಳ ಸಂದರ್ಭದಲ್ಲಿ ಆಗಾಗ ಬಳಸಲಾಗುವ ’ಸಪ್ತ’ ಶಬ್ದ ಪ್ರಯೋಗವನ್ನು ನೆನಪಿಗೆ ತರುತ್ತದೆ. ’ಸಪ್ತ’ ಅಥವಾ ಏಳು ಸಂಖ್ಯೆ ಪ್ರಯೋಗದ ಔಚಿತ್ಯವೇನು ಎಂಬ ಪ್ರಶ್ನೆಗೆ ದೊರಕುವ ಸಮಾಧಾನದ ಉತ್ತರವೆಂದೆ ಕಿರಣಗಳ ಪೃಥಕ್ಕರಣದಲ್ಲಿ, ಒಂದೊಂದು ಕಿರಣವೂ ಏಳು ಬಣ್ಣದ್ದಾಗಿ ಕಾಣುವುದು. ಪ್ರಾಯಃ ಇದೇ ಸೂರ‍್ಯನ ಪ್ರತಿಮೆಯಲ್ಲಿ ಅವನ ರಥಕ್ಕೆ ಏಳು ಕುದುರೆ ತೋರಿಸಬೇಕೆಂದು ಪ್ರೇರಿಸಿರಬೇಕು. ಏನೇ ಇರಲಿ, ’ಸಪ್ತ’ ಸಂಕೇತಕ್ಕೆ ಏಳು ಎಂಬ ಮೇಲ್ತೋರಿಕೆ ಅರ್ಥವಿದ್ದರೂ ’ಸಪ್ತ-ರಶ್ಮಿ’ ಸಂಕೇತದಲ್ಲಿ ಸೂರ‍್ಯನನ್ನು ಸರ್ಪವಾಗಿಸುವ ಹೊಂಚಿನ ಸೂಚನೆ ಇದೆ ಎಂದು ಶಂ.ಬಾ. ಜೋಶಿ ಅವರು ಅಭಿಪ್ರಾಯಪಟ್ಟಿದ್ದಾರೆ.[6] ಇದು ವಿಚಾರಣೀಯ ಅಂಶ. ಕರ್ನಾಟಕದಲ್ಲಿ ಚಂದ್ರನ ಆರಾಧನೆ (Moon cult) ಪ್ರಚಲಿತವಾಗಿರುವಂತೆ ಸೂರ್ಯಾರಾಧನೆ (Sun cult) ಪ್ರಚಲಿತವಾಗಿಲ್ಲ. ಅಲ್ಪ ಸ್ವಲ್ಪ ಏನಾದರೂ ಉಳಿದು ಬಂದಿದ್ದರೆ ಅದು ಹವ್ಯಕ ಮತ್ತು ಹಾಲಕ್ಕಿ ಒಕ್ಕಲಿಗರಲ್ಲಿ ಮಾತ್ರ. ಹವ್ಯಕರಿಗೆ ಸೂರ‍್ಯ ಸಪ್ತದೇವತೆಗಳಲ್ಲಿ ಒಬ್ಬ. ವಿನಾಯಕ, ದುರ್ಗೆ, ಶಿವ, ವಿಷ್ಣು, ಯಜ್ಞ ನಾರಾಯಣ ಮತ್ತು ಷಣ್ಮುಖ ಇತರ ದೇವತೆಗಳು. ಹವ್ಯಕರು ಹಾಡುವ ಒಂದು ಹಾಡಿನಲ್ಲಿ ಸೂರ‍್ಯ ಕುಲ ಮತ್ತು ಚಂದ್ರಕುಲಗಳ ಪ್ರಸ್ತಾಪವಿದೆ.** (ಸೂರ್ಯ ಚಂದ್ರರ ವಂಶ ವಿವರಗಳ ’ಸೂರ್ಯಚಂದ್ರಾದಿವಂಶಾವತರಣ’ ಎಂಬ ಕೃತಿಯ ಉಲ್ಲೇಖ ಶಾಸನದಲ್ಲಿ ಬಂದಿದೆ) ಸೂರ‍್ಯಕುಲದವರ ಹೆಣ್ಣು ಮಂಡೆಯ ಬಾಚುವಾಗ ಚಂದ್ರಕುಲದವರ ಮಗನೋಡುವ ಒಂದು ಸಂದರ್ಭ ಅದರಲ್ಲಿದೆ. ಆತ ಆ ಹೆಣ್ಣನ್ನು ಗೆಲ್ಲುವ ಪರಿ ಹೇಗೆ ಎಂದು ಆಲೋಚಿಸುವ ಒಂದು ಪ್ರಸಂಗ ಹಾಡಿನ ರೂಪದಲ್ಲಿ ಹೀಗಿದೆ.[7]

ಸೂರ‍್ಯ ಕುಲದವರ್ಹೆಣ್ಣು ಮಂಡೆಯ ಬಾಚುವಾಗ
ಚಂದ್ರಕುಲದವರ ಮಗ ಕಂಡ| ಯೀ ಹೆಣ್ಣು
ಯಿನ್ಯಾವ ಪರಿಯಲಿ ಗೆಲಲೆಂದ ||೩||
ಚಂದ್ರ ಕುಲದವರ್ಹೆಣ್ಣು ’ದಂಡೆಯ’ ಸೂಡುವಾಗ
ಸೂರ‍್ಯಕುಲದವರ ಮಗ ಕಂಡ| ಯೀ ಹೆಣ್ಣು
ಯಿನ್ಯಾವ ಪರಿಯಲಿ ಗೆಲಲೆಂದ ||೪||

ಕನ್ನಡ ಜನಪದಲ್ಲಿ ಸೂರ‍್ಯಗ್ರಹಣಕ್ಕೆ ಸಂಬಂಧಿಸಿದಂತೆ ಹಾಡುಗಳು ಪ್ರಚಲಿತವಿದ್ದಂತೆ ಕಾಣುವುದಿಲ್ಲ. ಇದ್ದರೂ ಸಧ್ಯ ಅವು ನಮಗೆ ಲಭ್ಯವಿಲ್ಲ. ರಾಜಾಸ್ಥಾನೀ[8] ಮತ್ತು ತೆಲುಗುಭಾಷೆಗಳಲ್ಲಿ ಗ್ರಹಣದ ಹಾಡುಗಳು ರೂಢಿಯಲ್ಲಿವೆ. ಇಲ್ಲಿ ತೆಲುಗಿನ ಸೂರ‍್ಯಗ್ರಹಣಕುರಿತ ಒಂದು ಹಾಡನ್ನು[9] ಉದ್ದರಿಸಬಹುದು:

ಊರಿಗೆ ಉತ್ತರದಲ್ಲಿ ದೊಡ್ಡದೊಂದಾಲದ ಮರ ರಾಮಾದಶರಥರಾಮಾ
ಆಲದ ಮರದಡಿಯಲ್ಲಿ ಬೆಳೆಯಿತೊಂದು ಮೊಳಕೆ ರಾಮಾ
ಬೆಳೆದ ಮೊಳಕೆ ಬಂಗಾದರ ಮೊಳಕೆ
ಆ ಮೊಳಕೆ ಆಯಿತು ಬಂಗಾರದ ಮರ
ಆ ಮರಕ್ಕೆ ಆಯಿತು ಬಂಗಾರದ ಹಣ್ಣು
ಕಣ್ಣಿಲ್ಲದ ಬಾಲೆ ನೋಡಿದಳು ಹಣ್ಣು
ಕಾಲಿಲ್ಲದ ಬಾಲೆ ಹತ್ತಿದಳು ಮರವ
ಕೈಯಿಲ್ಲದ ಬಾಲೆ ಕಿತ್ತಳು ಹಣ್ಣು
ಬೆರಳಿಲ್ಲದ ಬಾಲೆ ಆರಿಸಿದಳು ಹಣ್ಣು
ಅಡಿಯಿಲ್ಲದ ಕುಕ್ಕೆಗೆ ತುಂಬಿದಳು ಹಣ್ಣು
ಶಿರಸಿಲ್ಲದ ಬಾಲೆ ಎತ್ತಿದಳು ಹಣ್ಣು (ಹೊತ್ತಳು)
ತಿರುಪತಿಯಲ್ಲಿ ’ಹಣ್ಣಮ್ಮ ಹಣ್ಣು’
ಗೋವಿಂದರಾಜನು ಹೊರಗೆ ಬಂದನಪ್ಪ
’ಹಣ್ಣಿನ ಬೆಲೆಯೆಷ್ಟು ಹೇಳು ಬಾಲೆ’
ಆ ಹಣ್ಣು ಕೊಳ್ಳಲು ನಮಗೆ ಸಾಧ್ಯವಿಲ್ಲ
ಊರಿಗೆ ಉತ್ತದಲ್ಲಿ ದೊಡ್ಡದೊಂದಾಲದ ಮರ
ಆಲದ ಮರದಡಿ ಹುತ್ತವೋ ಹುತ್ತ
ಹುತ್ತದ ಹತ್ತಿರ ಹಣ್ಣು ಹಣ್ಣು
ಹುತ್ತದ ನಾಗೇಂದ್ರ ಹೊರಗೆ ಬಂದನು
ಕೆಲವರು ನೋಡಲು ಸ್ವಲ್ಪ ನುಂಗಿದನು
ಎಲ್ಲರೂ ನೋಡಲು ಪೂರ್ತಿ ನುಂಗಿದನು
ಚಿಕ್ಕ ಮಕ್ಕಳೆಲ್ಲಾ ’ಬಿಡು ಆ ಹಣ್ಣನು’
ದೊಡ್ಡ ಮನುಷ್ಯರೆಲ್ಲಾ ’ಬಿಡು ಆ ಹಣ್ಣನು’
ಕೆಲವು ನೋಡಲು ಸ್ವಲ್ಪ ಕಕ್ಕಿದನು
ಎಲ್ಲರೂ ನೋಡಲು ಎಲ್ಲವನು ಕಕ್ಕಿದನು[10]

– ಇಲ್ಲಿ ಸರ್ಪ ಸೂರ‍್ಯನನ್ನು ನುಂಗುವ ಜನಪ್ರಿಯ ಆಶಯವನ್ನು ಸಾಂಕೇತಿಕ ಪ್ರತಿಮಾ ವಿಧಾನದಲ್ಲಿ ಚಿತ್ರಿಸಲಾಗಿದೆ.

ಸೂರ‍್ಯ ಸಂಬಂಧಿಯಾದ ಒಗಟುಗಳೂ ಕನ್ನಡದಲ್ಲಿ ಚಾಲ್ತಿಯಲ್ಲಿವೆ. ಕುತೂಹಲಕ್ಕಾಗಿ ಇಲ್ಲಿ ಕೆಲವು ಒಗಟುಗಳನ್ನು ನೋಡಬಹುದಾಗಿದೆ.

೧          ದಾನ ಗುಂಬಳ
ಪಾನ ಗುಂಬಳ
ಊರಿಗೆಲ್ಲ ಒಂದೆಕುಂಬಳ[11]

೨          ಉರಿ ಹೋಗೋನು
ಸಿರಿ ಬರೋನು[12]

೩          ಈ ದೇಶದಿಂದ ಆ ದೇಶಕ್ಕೆ ಹೋದಾಗ ಬಾ
ಒಣಮರ ಮಾತಾಡಿದಾಗ ಬಾ
ಮುತ್ತಿನ ಒಟ್ಟು ಕೊಟ್ಟಾಗ ಬಾ[13]

೪         ಅಚ್ಚಯ್ಯನ ಅಂಗಡಿ
ಪಚ್ಚಯ್ಯನ ಅಂಗಡಿ
ಎತ್ತಗೆ ನೋಡಿದರೊಂದೇ ಅಂಗಡಿ[14]

೫         ಚಿಕ್ಕ ಚಿಕ್ಕ ಗುಂಬ ಚಿನ್ನ ಬೆಳ್ಳಿಗುಂಬ
ಲೋಕ ತಿರುಗೋವೆರಡೇ ಗುಂಬ [15]

೬          ಒಂದು ಮರ ಹುಟ್ಟಿ ಒಂಬತ್ತು ಕವಲೊಡೆದು
ಆದರೆ ಒಂದು ಕೊನೆಯಲ್ಲಿ ಹದಿನೈದು ಬಿಳಿದು ಹದಿನೈದು ಕರಿದು [16]

ಸೂರ‍್ಯನನ್ನು ಜನಪದರು ವಿವಿಧರೂಪದಲ್ಲಿ ಕಲ್ಪಿಸಿಕೊಂಡಿರುವುದನ್ನು ಈ ಒಗಟುಗಳಲ್ಲಿ ನೋಡಬಹುದು. ಕುಂಬಳದ ಆಕಾರದಲ್ಲಿ, ಚಿಕ್ಕಗುಂಬಳದ ಆಕೃತಿಯಲ್ಲಿ ಇನ್ನೂ ಅನೇಕ ಬಗೆಯಲ್ಲಿ ಸೂರ‍್ಯನನ್ನು ಕಲ್ಪಿಸಿಕೊಂಡಿರುವ ವೈಖರಿ ಅನನ್ಯವಾಗಿದೆ. ಕೊನೆಯ ಒಗಟಿನಲ್ಲಿ ನವಗ್ರಹಗಳ ಪ್ರಸ್ತಾಪವಿರುವುದರಿಂದ ಪರಿಶೀಲನಾರ್ಹವಾಗಿದೆ. ಸೂರ‍್ಯ ನವಗ್ರಹಗಳಲ್ಲಿ ಒಬ್ಬ ಎಂಬುದು ಸರ್ವಮಾನ್ಯ ಸಂಗತಿ. ಆದರೆ ಇಲ್ಲಿನ ಒಗಟಿನಲ್ಲಿ ಸೂರ‍್ಯನಿಂದಲೇ ಒಂಬತ್ತು ಗ್ರಹಗಳು ಜನಿಸಿದ್ದು ಎಂಬ ಅರ್ಥವಿದೆ. ಶುಕ್ಲಪಕ್ಷ ಮತ್ತು ಕೃಷ್ಣಪಕ್ಷಗಳಿಗೆ ಆ ಗ್ರಹಗಳೇ ಕಾರಣ ಎಂಬ ವಿವರವೂ ಬಂದಿದೆ.

ಸೂರ‍್ಯ ಜಾನಪದ ಅಧ್ಯಯನದಲ್ಲಿ ಬಹಳ ಮಹತ್ವದ ಭಾಗವೆಂದರೆ ಸೂರ‍್ಯ ಸಂಬಂಧಿ ನಂಬಿಕೆ, ಸಂಪ್ರದಾಯಾಚರಣಗಳ ಪರಿಶೀಲನೆ. ಜಾನಪದ ಜೀವನದಲ್ಲಿ ಸೂರ‍್ಯ ಸಂಬಂಧ ನಂಬಿಕೆಗಳು ಹಾಸು ಹೊಕ್ಕಾಗಿದ್ದು ಕೆಲವು ಸಂಪ್ರದಾಯಾಚರಣೆಗಳು ರೂಢಿಯಲ್ಲಿರುವುದು ಕಂಡುಬರುತ್ತದೆ. ಆದರೆ ಈ ಆಚರಣೆಗಳು ವ್ಯಾಪಕವಾಗಿ ಪ್ರಚಲಿತದಲ್ಲಿಲ್ಲದಿರುವುದು ಕುತೂಹಲದ ಸಂಗತಿಯಾಗಿದೆ. ಇದಕ್ಕೆ ಕಾರಣ ಸೌರಪಂಥೀಯರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿರುವುದೇ ಆಗಿದೆ. ಕರ್ನಾಟಕ ಒಂದು ಕಾಲದಲ್ಲಿ ಸೌರಪಂಥೀಯರು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದಪ್ರದೇಶವಾಗಿತ್ತು. ಮಧ್ಯಯುಗೀನ ಕರ್ನಾಟಕದಲ್ಲಿ ಸೌರಪಂಥ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಸ್ವತಂತ್ರದೇವಾಲಯಗಳಿದ್ದುದು, ಕಾವ್ಯ ಶಾಸನಗಳಲ್ಲಿ ಸೌರಪಂಥದ ಪ್ರಸ್ತಾಪವಿದ್ದುದು, ದತ್ತಿಶಿಲೆಗಳ ಮೇಲೆ ಕೆತ್ತಿರುವ ಸೂರ‍್ಯ ಚಂದ್ರರ ಚಿತ್ರಗಳು, ಸೂರ‍್ಯ ವಿಗ್ರಹಗಳು ಅದಕ್ಕೆ ಪ್ರಬಲ ಆಧಾರ ಎನಿಸಿವೆ. ಈಗಿನ ಪರಿಸ್ಥಿತಿಯೇ ಬೇರೆ. ಭಾರತಾದ್ಯಂತ ಸೌರಪಂಥ ಮೊದಲಿನ ಮಹತ್ವವನ್ನು ಉಳಿಸಿಕೊಂಡಿಲ್ಲ. ಇಷ್ಟಾದರೂ ಅತ್ಯಲ್ಪ ಸಂಖ್ಯೆಯಲಿರುವ, ಸಂಪೂರ್ಣವಾಗಿ ಪ್ರೌಢಸಂಸ್ಕೃತಿಗೆ ದಾಸರಾಗಿರುವ ಸೌರಪಂಥೀಯರ ಕೆಲವು ನಂಬಿಕೆ ಸಂಪ್ರದಾಯಗಳನ್ನು ಇಲ್ಲಿ ಗಮನಿಸಬಹುದಾಗಿದೆ.

ಸೂರ್ಯೋಪಾಸನೆಗಳಲ್ಲಿ ಸೂರ‍್ಯಸ್ನಾನ ಪ್ರಸಿದ್ಧವಾದುದು. ಸೂರ್ಯಾರಾಧಕರಿಗೆ ಸೂರ‍್ಯ ತೇಜಸ್ಸಿನ ಪುಂಜ; ಸೂರ‍್ಯ ಸ್ನಾನದಿಂದ ಶರೀರವು ಕಾಂತಿಯುಕ್ತವಾಗುವುದಲ್ಲದೆ ದೃಷ್ಟಿಗೆ ತೇಜಸ್ಸು ಲಭಿಸುತ್ತದೆಂದು ನಂಬಿಕೆ. ಸೂರ‍್ಯನಿಗೆ ಹರಕೆ ಕಟ್ಟಿದರೆ ಕಣ್ಣು ಬೇನೆ ದೂರವಾಗಿ ಉತ್ತಮವಾದ ದೃಷ್ಟಿ ಪ್ರಾಪ್ತವಾಗುತ್ತದೆ ಎಂಬ ತಿಳಿವಳಿಕೆಯುಂಟು. ಪುತ್ರ ಪ್ರಾಪ್ತಿಗಾಗಿ ಸ್ತ್ರೀಯರು ಹರಕೆ ಕಟ್ಟುವಾಗ ಕುಲಾಚಾರದಂತೆ ಸೂರ‍್ಯನಿಗೆ ತೊಟ್ಟಿಲನ್ನು ಅರ್ಪಿಸುವ ಸಂಪ್ರದಾಯವೂ ಇದೆ. ಹೆರಿಗೆಯ ಅನಂತರದಲ್ಲಿ ಸ್ತ್ರೀ ನಿರ್ದಿಷ್ಟ ದಿನಗಳ ತರುವಾಯ ಸೂರ‍್ಯದರ್ಶನ ಮಾಡಬೇಕೆಂಬ ಪದ್ಧತಿ ವಿಶೇಷವಾಗುಂಟು. ಈ ಸೂರ‍್ಯ ರಾಧಕರಲ್ಲಿ ಸರ್ವೇಸಾಮಾನ್ಯವಾಗಿರುವ ಹಾಗೂ ಜನಪದ ಜೀವನದಲ್ಲೂ ಕಂಡುಬರುವ ಕೆಲವು ಸಂಪ್ರದಾಯಾಚರಣೆಗಳಿವೆ: ಮಜ್ಶಿಗೆ ಕಡೆಯುವ ಕಡಗೋಲನ್ನು ಸೂರ‍್ಯನಿಗೆ ತೋರಿಸಿ ಅಕ್ಕಿಕಾಳು ಹಾಕುವುದು, ಕಡಗೋಲನ್ನು ಸೂರ‍್ಯನ ಪ್ರತೀಕ ಎಂದು ಪರಿಗಣಿಸಿರುವುದು, ಒನಕೆ, ಕಂಬ, ಇವುಗಳ ಪೂಜೆ ಎಂದರೆ ಸೂರ‍್ಯನ ಪೂಜೆ ಎಂದೇ ತಿಳಿದಿರುವುದು, ಸ್ವಸ್ತಿಕ ಚಿಹ್ನವನ್ನು ಸೂರ‍್ಯ ಚಿಹ್ನವೆಂದು ಪರಿಗಣಿಸಿರುವುದು, ಅರ್ಘ್ಯ, ನಿಡುವುದು ಅಂಥ ಕೆಲವು ಸಂಪ್ರದಾಯಾಚರಣೆಗಳು. ಇವು ಜನಪದ ಜೀವನದಲ್ಲಿ ಸೂರ‍್ಯನಿಗೆ ನೀಡಿರುವ ಮಹತ್ವವನ್ನು ಹೇಳುತ್ತವೆ.

ಗ್ರಹಣ ಕಾಲದ ನಂಬಿಕೆ ಆಚರಣೆಗಳು ತುಂಬ ಗಂಭೀರವಾದವು. ವಿದ್ಯಾವಂತರು, ಜನಪದರೆಂಬ ಭೇದವಿಲ್ಲದೆ ಸಮಾಜದ ಎಲ್ಲ ವರ್ಗಗಳಲ್ಲೂ ಈ ನಂಬಿಕೆ, ಆಚರಣೆಗಳು ಕಂಡು ಬರುವುದು ಒಂದು ವಿಶೇಷ. ಗ್ರಹಣಕಾಲ ಅಮಂಗಲ ಕಾಲ ಎಂಬುದು ಸಾರ್ವತ್ರಿಕ ನಂಬಿಕೆ. ಇದು ಜನಪದರು ಗ್ರಹಣವನ್ನು ತುಂಬ ಗಂಭೀರವಾಗಿ ಕಾಣುತ್ತಾರೆಂಬುದನ್ನು ಸೂಚಿಸುತ್ತದೆ. ಗ್ರಹಣಕಾಲದಲ್ಲಿ ಸೂತಕ ಆಚರಿಸುವುದು ಸಾಮಾನ್ಯ, ಗ್ರಹಣ ಬಿಟ್ಟ ಮೇಲೆ ಸ್ನಾನ, ಮಡಿ ಕಡ್ಡಾಯ. ಮನೆಮಾರು ಬಟ್ಟೆ ಬರಿ ಪಾತ್ರೆ ಪರಟಿಗಳನ್ನು ತೊಳೆದು ಶುಚಿಗೊಳಿಸುವುದು ಪದ್ಧತಿ. ಗ್ರಹಣ ಸಂಭವಿಸಿದಾಗ ಮನೆದೇವರ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಿಡುವುದು, (ಗ್ರಹಣಹಿಡಿಯುವುದನ್ನು ಮತ್ತು ಬಿಡುವುದನ್ನು ತಿಳಿಯಲು) ನೀರಿನಲ್ಲಿ ಒನಕೆ ನಿಲ್ಲಿಸಿಡುವುದು ವಾಡಿಕೆ. ಗ್ರಹಣ ಸಂಭವಿಸಿದಾಗ ಆಕಳು ಈಯುತ್ತಿದ್ದರೆ ಅದಕ್ಕೆ ಪ್ರದಕ್ಷಿಣೆ ಹಾಕುವುದು ಪದ್ಧತಿ. ಆದರಿಂದ ಭೂಪ್ರದಕ್ಷಿಣೆ ಮಾಡಿದ ಪುಣ್ಯ ಲಭಿಸುತ್ತದೆಂದು ನಂಬಿಕೆ. ಗೊಡ್ಡುಮರ ಅಥವಾ ಗೆದ್ದಲು ಹತ್ತಿದ ಗಿಡಗಳನ್ನು ಕಡಿಯುವುದು ಸಂಪ್ರದಾಯ. ಅನಂತರ ಆ ಸಸ್ಯಗಳು ಚೆನ್ನಾಗಿ ಚಿಗುರುತ್ತವೆ ಎಂದು ತಿಳಿವಳಿಕೆ. ಕೆಲವೆಡೆಗಳಲ್ಲಿ ಬಂಜೆ ಹೆಣ್ಣು ಮಕ್ಕಳಿಗೆ ಬರಲಿನಿಂದ ಹೊಡೆಯುವ ಪದ್ಧತಿಯುಂಟು. ಹಾಗೆ ಮಾಡಿದರೆ ಅವರ ಬಂಜೆತನ ನಿವಾರಣೆಯಾಗುತ್ತದೆ ಎಂದು ನಂಬಿಕೆ. ಮಾಟ ಮಂತ್ರಗಳನ್ನು ಅಭ್ಯಸಿಸುವವರು ಗ್ರಹಣ ಕಾಲದಲ್ಲಿ ಅಭ್ಯಾಸ ಆರಂಭಿಸುವುದು ವಾಡಿಕೆ. ಅದೇ ಹೆಚ್ಚು ಪ್ರಶಸ್ತಕಾಲ ಎಂಬುದು ನಂಬಿಕೆ.

ಸೂರ‍್ಯ ಮತ್ತು ಸೂರ‍್ಯಗ್ರಹಣಕ್ಕೆ ಸಂಬಂಧಿಸಿದಂತೆ ಜನಪದರಲ್ಲಿ ಇನ್ನೂ ಕೆಲವು ನಂಬಿಕೆ ಸಂಪ್ರದಾಯಗಳಿವೆ. ಅವುಗಳಲ್ಲಿ ಮುಖ್ಯವಾದವನ್ನು ಇಲ್ಲಿ ಪಟ್ಟಿ ಮಾಡಬಹುದು*      ಈ ಪ್ರಬಂಧವನ್ನು ಸಿದ್ಧಪಡಿಸುವ ವಿವಿಧ ಹಂತದಲ್ಲಿ ಸೂಕ್ತ ಮಾಹಿತಿ, ಸಲಹೆಗಳನ್ನು ನೀಡುವುದರ ಮೂಲಕ ನನಗೆ ನೆರವಾದವರು ರಾಜೂರಿನ ಮಲ್ಲಿಕಾರ್ಜುನ ಕುಂಬಾರ, ಡಾ. ಜೀ.ಶಂ. ಪರಮಶಿವಯ್ಯ, ಎನ್. ಬಸವಾರಾಧ್ಯ, ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಮತ್ತು ಎಂ.ಬಿ. ಸಕೇತ ಅವರು ಈ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.

[1]      ಡಾ. ಜೀ. ಶಂ. ಪರಮಶಿವಯ್ಯ (ಸಂ), ಕನ್ನಡ ಜನಪದ ಕತೆಗಳು, ಕ.ಅ.ಸಂ. ಮೈ.ವಿ.ವಿ, ಮೈಸೂರು ೧೯೭೦, ಪು.೪೯.

[2]      ನೋಡಿ: ಚಿನ್ಮಯದಾಸರಿಂದ ಯಕ್ಷಗಾನ ’ಶನಿದೇವರ ಮಹಾತ್ಮೆ, ಮೈಸೂರು ಬುಕ್ ಡಿಪೋ, ಬೆಂಗಳೂರು, ೧೯೭೧ (ಈ ಯಕ್ಷಗಾನದ ಉಲ್ಲೇಖವನ್ನು ಗಮನಕ್ಕೆ ತಂದವರು ಡಾ. ಜೀ.ಶಂ.ಪರಮಶಿವಯ್ಯ).

[3]      ಡಾ. ಎಂ. ಚಿದಾನಂದಮೂರ್ತಿ, ಪೂರ್ಣ ಸೂರ್ಯಗ್ರಹಣ, ೧೯೮೨, ಪು. ೧೯೭-೧೯೮.

[4]      ಎ. ಹಿರಿಯಣ್ಣ (ಸಂ), ಕಾಡುಗೊಲ್ಲರ ಜನಪದಗೀತೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೮, ಪು.೧೯೦.

[5]      ೩೦. ಅದೇ, ಪು. ೪೧೦

[6]      ಶಂ.ಬಾ. ಜೋಶಿ, ಋಗ್ವೇದಸಾರ: ನಾಗಪ್ರತಿಮಾ ವಿಚಾರ, ಮೈಸೂರು, ೧೯೭೧, ಪು. ೧೩೪.

**      EC, Vot 5, 1976, P.162

[7]      ಶಾಲಿನಿ ರಘುನಾಥ (ಸಂ) ಹವ್ಯಕರ ಹಾಡುಗಳು, ಕ,ಅ.ಸಂ. ಮೈ.ವಿ.ವಿ. ೧೯೭೯, ಪು. ೯೬.

[8]      Ahuja, D.R. Folklore of Rajasthan, NBT, New Delhi, 1980 P.28

[9]      ಡಾ. ಸುಂದರಂ ಮತ್ತು ಇತರರು ಸಂಪಾದಿಸಿರುವ ’ಅಲಿಚಿಪ್ಪಲು-ಆಣಿಮುತ್ಯಾಲು’ (ಜನಪದ ಗೀತೆಗಳ ಸಂಕಲನ) ಗ್ರಂಥದಿಂದ ಆಯ್ದುಕೊಂಡ ಹಾಡು’ ಇದನ್ನು ತೆಲುಗಿನಿಂದ ಕನ್ನಡಕ್ಕೆ ಅನುಮೋದಿಸಿಕೊಟ್ಟವರು ಡಾ. ಅರೀಯಸ್ ಸುಂದರಂ.

[10]     ವೃಕ್ಷ, ಚಂಚಮ್ಮ, ಮೇಡಿಕುರ್ತಿ, ವಾಯಲ್ಪಾಡು ತಾ. ಚಿತ್ತೂರು ಜಿಲ್ಲೆ.

[11]      ಈ ಒಗಟುಗಳನ್ನು ರಾಗೌ ಅವರ ’ನಮ್ಮ ಒಗಟುಗಳು’ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ. ನೋಡಿ: ನಮ್ಮ ಒಗಟುಗಳು, ಉಷಾ ಸಾಹಿತ್ಯಮಾಲೆ, ಮೈಸೂರು, ೧೯೭೦

[12]      ”

[13]     ”

[14]     ”

[15]     ಈ ಒಗಟುಗಳನ್ನು ಎಚ್.ಜೆ. ಲಕ್ಕಪ್ಪಗೌಡ ಅವರ ’ಒಗಟುಗಲು’ ಸಂಗ್ರಹದಿಂದ ಆಯ್ದು ಕೊಂಡಿದೆ. ನೋಡಿ ಒಗಟುಗಳು, ಮೈಸೂರು, ೧೯೭೩.

[16]     ”