ಭಾರತದಲ್ಲಿರುವ 100 ಕೋಟಿ ಮಂದಿಯಲ್ಲಿ 80 ಕೋಟಿ ಮಂದಿಯಾದರೂ ಸೆಲ್ಫೋನ್ಗಳನ್ನು ಹಿಡಿಯುವಂತೆ ಮಾಡಬೇಕೆಂದು ಸೆಲ್ಫೋನ್ ಕಂಪೆನಿಗಳು ಕಸರತ್ತು ಮಾಡುತ್ತಿರುವುದು ಗೊತ್ತಿದೆಯಷ್ಟೆ. ಎರಡು ದಶಕಗಳ ಹಿಂದೆ ಸೆಲ್ಫೋನ್ ಎಂದರೆ ಹಾಲಿವುಡ್ನ ವಿಲನ್ಗಳ ಕೈಯಲ್ಲಿ ಅಥವಾ ಅಮೆರಿಕೆಯ ಕೋಟ್ಯಾಧೀಶರ ಲಕ್ಸುರಿ ಸಾಧನವೆಂದೇ ತಿಳಿಯುತ್ತಿದ್ದರು. ಮಾತನ್ನೇ ಆಡದೆ ಸುಮ್ಮನೆ ಇಟ್ಟುಕೊಂಡಿದ್ದರೂ ಕಾಸು ಖರ್ಚಾಗುವ ಲಕ್ಸುರಿ ಸಾಧನ ಅದಾಗಿತ್ತು. ಇಂದು ಕಾಲ ಬದಲಾಗಿದೆ. ಮನೆ, ಮನೆಯಲ್ಲೂ ಎಲ್ಲ ಮಂದಿಯ ಕೈಯಲ್ಲೂ ಸೆಲ್ಫೋನ್ ಓಡಾಡುತ್ತಿದೆ. ಖಸೆಲ್ಫೋನ್ ಇಲ್ಲದವ ಮರುಳ, ಎಸ್ಎಂಎಸ್ ಮಾಡದವ ಮೂರ್ಖಖ ಎನ್ನುವ ಮಟ್ಟಿಗೆ ಸೆಲ್ಫೋನ್ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ.

ಅಷ್ಟೇ ಅಲ್ಲ. ಸೆಲ್ಫೋನ್ ಕೇವಲ ಫೋನ್ ಆಗಿ ಉಳಿದಿಲ್ಲ. ದೂರದಲ್ಲೆಲ್ಲೋ ಇರುವವರ ಜೊತೆ ಸಂಭಾಷಣೆ ನಡೆಸುವುದರ ಜೊತೆಗೇ ಒಂದು ಪುಟ್ಟ ಕಂಪ್ಯೂಟರ್ನಂತೆಯೂ ಇದು ಉಪಯುಕ್ತ. ಇತ್ತೀಚೆಗೆ ಹಾದಿಬದಿಯಲ್ಲಿಯೂ ಮಾರಾಟವಾಗುವ ಚೀನೀ ಫೋನುಗಳು ಇನಿಯಳ ಫೋಟೋ ತೆಗೆಯಬಲ್ಲುವು. ಬೇಸರವಾದಾಗ ರೇಡಿಯೋ ಕೇಳಿಸಬಲ್ಲುವು. ಟೈಂಪಾಸಿಗೆ ಆಟ, ವ್ಯಾಪಾರಕ್ಕೆ ಕ್ಯಾಲ್ಕುಲೇಟರು, ಎಚ್ಚರಿಸಲು ಅಲಾರಂ, ಜಾಗಿಂಗ್ನವರಿಗೆ ಸ್ಟಾಪ್ವಾಚ್- ಹೀಗೆ ಅಂಗೈಯೊಳಗೆ ಅದ್ಭುತವನ್ನೇ ಕಾಣಿಸುವ ಸಾಧನ ಸೆಲ್ಫೋನ್. ಈಗ ಈ ಬಹೂಪಯೋಗಿ ಸಾಧನದ ಉಪಯುಕ್ತತೆಯನ್ನು ಇನ್ನಷ್ಟು ಹೆಚ್ಚಿಸುವ ಸುದ್ದಿ ಬಂದಿದೆ. ಅಮೆರಿಕೆಯ ಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ (ಯುಸಿಎಲ್ಎ) ಇಲೆಕ್ಟ್ರಾನಿಕ್ ಇಂಜಿನೀಯರುಗಳು ಸೆಲ್ಫೋನ್ನ ಸಾಧ್ಯತೆಗಳನ್ನು ಇನ್ನಷ್ಟು ಹಿಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಸೆಲ್ಫೋನ್ನಿಂದ ರಕ್ತಪರೀಕ್ಷೆ ಮಾಡುವ ಸರಳ ಸಾಧನವನ್ನು ರೂಪಿಸಿದ್ದಾರೆ. ಕರಕ್ತದ ಸೂಕ್ಷ್ಮಚಿತ್ರಗಳನ್ನು ಚಿತ್ರಿಸುವುದರ ಜೊತೆಗೇ ಅದನ್ನು ನೇರವಾಗಿ ಎಲ್ಲೋ ದೂರದಲ್ಲಿರುವ ವೈದ್ಯರಿಗೆ ಕಳುಹಿಸಬಲ್ಲುದು. ಜೊತೆಗೆ ವಿಶ್ಲೇಷಣೆಯನ್ನೂ ಮಾಡಿ ರೋಗಪತ್ತೆಗೆ ನೆರವಾಗಬಲ್ಲುದುಕಿ ಎನ್ನುತ್ತಾರೆ ಈ ಸಾಧನವನ್ನು ರಚಿಸಿರುವ ವಿಜ್ಞಾನಿಗಳ ತಂಡದ ಮುಖ್ಯಸ್ಥ ಡೇನಿಯೆಲ್ ಫ್ಲೆಚರ್.  ಫ್ಲೆಚರ್ ಮತ್ತು ಸಂಗಡಿಗರ ಈ ಸಾಧನದ ವಿವರಗಳು ಪಿಎಲ್ಓಎಸ್ಒನ್ ಸಂಶೋಧನಾ ಪತ್ರಿಕೆಯ ಜುಲೈ ಸಂಚಿಕೆಯಲ್ಲಿ ಪ್ರಕಟವಾಗಿದೆ.

ವೈದ್ಯಕೀಯದಲ್ಲಿ ರೋಗಪತ್ತೆಗೆ ಸೂಕ್ಷ್ಮದರ್ಶಕದ ಬಳಕೆ ಸಾಮಾನ್ಯ. ಅದರಲ್ಲೂ ಟೈಫಾಯಿಡ್, ಮಲೇರಿಯಾ, ಕಾಲರಾ ಮುಂತಾದ ಸೋಂಕುರೋಗಗಳನ್ನು ಪತ್ತೆ ಮಾಡಲು ಸೂಕ್ಷ್ಮದರ್ಶಕದ ಅಡಿಯಲ್ಲಿ ರಕ್ತದ ಪರೀಕ್ಷೆ ಅವಶ್ಯಕ. ರೋಗಾಣುಗಳನ್ನು ಗುರುತಿಸುವ ತಂತ್ರಗಳಲ್ಲಿ ಹಲವಾರು ಸುಧಾರಣೆಗಳು ಆಗಿವೆ.  ರೋಗಾಣುಗಳನ್ನಷ್ಟೆ ಬೆಳಗುವ ವಿಶಿಷ್ಟ ಬಣ್ಣಗಳು, ರೋಗಾಣುಗಳಿಗಷ್ಟೆ ಅಂಟಿಕೊಂಡು ಅವನ್ನು ಬೆಳಗಿಸುವ ಆಂಟಿಬಾಡಿ (ಪ್ರತಿಕಾಯ ಪ್ರೊಟೀನು)ಗಳ ಬಳಕೆ,  ಊದಾತೀತ ಕಿರಣಗಳನ್ನು ಬಳಸುವ ಸೂಕ್ಷ್ಮದರ್ಶಕಗಳು ಇತ್ಯಾದಿ ಹಲವು ಹೊಸ ತಂತ್ರಗಳನ್ನು ಬಳಸಲಾಗುತ್ತಿದೆ. ಈ ತಂತ್ರಗಳ ಸಾರ್ಥಕ ಬಳಕೆಗೂ ಸೂಕ್ಷ್ಮದರ್ಶಕ ಬೇಕೇ ಬೇಕು. ಹೀಗಾಗಿ ವೈದ್ಯಕೀಯದಲ್ಲಿ ರೋಗಪತ್ತೆ ಎನ್ನುವುದು ವಿಶೇಷ ಪ್ರಯೋಗಾಲಯಗಳಲ್ಲಿಯಷ್ಟೆ ನಡೆಯುವ ಕೆಲಸ. ಎಲ್ಲೆಂದರಲ್ಲಿ ರೋಗಪತ್ತೆ ಮಾಡುವ ತಂತ್ರಗಳು ಇನ್ನೂ ಕೈಗೆಟುಕಿಲ್ಲ.

ಮಲೇರಿಯಾ, ಫಿಲೇರಿಯಾ (ಆನೆಕಾಲು ರೋಗ), ಎಚ್ಐವಿ, ಸಿಕಲ್ಸೆಲ್ ಅನೀಮಿಯದಂತಹ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ರಕ್ತವನ್ನು ವಿಶಿಷ್ಟ ಪ್ರಯೋಗಾಲಯದಲ್ಲಿಯಷ್ಟೆ ನಡೆಸಬೇಕಾಗಿರುವುದು ಒಂದು ತೊಂದರೆಯೇ ಸರಿ. ಏಕೆಂದರೆ ಈ ರಕ್ತಪರೀಕ್ಷೆಯ ವಿವರಗಳು ಬರುವವರೆವಿಗೂ ವೈದ್ಯರು ಚಿಕಿತ್ಸೆಯನ್ನು ಕೇವಲ ರೋಗಿಯ ದೇಹಲಕ್ಷಣಗಳನ್ನು ಅನುಸರಿಸಿ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಸೂಕ್ಷ್ಮದರ್ಶಕಗಳಲ್ಲಿ ರಕ್ತದ ಚಿತ್ರಗಳನ್ನು ನೇರವಾಗಿ ಗಮನಿಸಿ ಅಥವಾ ಕ್ಯಾಮೆರಾ ಬಳಸಿ ತೆಗೆದ ಅದರ ಚಿತ್ರಗಳನ್ನು ವಿಶ್ಲೇಷಿಸಬೇಕಾಗುತ್ತದೆ. ವಿಶೇಷವಾಗಿ ತರಬೇತಿ ಪಡೆದ ತಂತ್ರಜ್ಞರು ಸೂಕ್ಷ್ಮದರ್ಶಕದ ಅಡಿಯಲ್ಲಿ ಕಂಡ ಚಿತ್ರಗಳನ್ನು ಪರಿಶೀಲಿಸುವುದೂ ಉಂಟು. ಇದಕ್ಕಾಗಿ ಕಂಪ್ಯೂಟರ್ ನೆರವನ್ನೂ ಪಡೆಯಬೇಕಾಗಬಹುದು. ಭಾರತದಂತಹ ವಿಶಾಲವಾದ ರಾಷ್ಟ್ರದ ಮೂಲೆ, ಮೂಲೆಗೂ ಹೋಗಿ ರಕ್ತಪರೀಕ್ಷೆ ನಡೆಸಿ ರೋಗಪ್ರವರವನ್ನು ಕಂಡು ಹಿಡಿಯುವುದು ಸುಲಭವಾದ ಕೆಲಸವಲ್ಲ. ಇತ್ತೀಚೆಗೆ ಸುದ್ದಿಯಲ್ಲಿರುವ ಟೆಲಿಮೆಡಿಸಿನ್ನಲ್ಲೂ ಟೆಲಿಫೋನ್ ಬಳಸಿ ರೋಗಿಯ ಲಕ್ಷಣಗಳನ್ನು ಪರಿಣತರಿಗೆ ತಲುಪಿಸುವ ಸಾಧನಗಳನ್ನು ಬಳಸುತ್ತಿದ್ದಾರೆ. ಆದರೆ ಇವು ಇಸಿಜಿ, ನಾಡಿಬಡಿತ, ರೋಗಿಯ ಚಿತ್ರ ಮುಂತಾದವನ್ನು ವೈದ್ಯರಿಗೆ ತಲುಪಿಸಬಲ್ಲುವೇ ಹೊರತು, ರಕ್ತಪರೀಕ್ಷೆಯ ಚಿತ್ರ ಮತ್ತು ವಿವರಗಳಂತಹ ಸೂಕ್ಷ್ಮವಿಶ್ಲೇಷಣೆಯನ್ನಲ್ಲ. ಟೆಲಿಮೆಡಿಸಿನ್ ಬಳಸುವ ವೈದ್ಯರುಗಳೂ ರಕ್ತಪರೀಕ್ಷೆಯ ವಿವರಗಳಿಗಾಗಿ ಪ್ರಯೋಗಾಲಯದಿಂದ ಬರುವ ವರದಿಗಳಿಗಾಗಿ ಕಾಯಲೇ ಬೇಕು. ಆದರೆ ದೇಶದ ಮೂಲೆ, ಮೂಲೆಯಲ್ಲಿಯೂ ದೊರಕುವ ಸೆಲ್ಫೋನ್ನ್ನೇ ಈ ಕೆಲಸಕ್ಕೆ ಬಳಸಿದರೆ ಹೇಗಿದ್ದೀತು ಎನ್ನುವುದೇ ಫ್ಲೆಚರ್ ತಂಡದ ಆಲೋಚನೆ.  ಆಗ ರಕ್ತಪರೀಕ್ಷೆಯ ಚಿತ್ರ ಹಾಗೂ ವಿವರಗಳನ್ನು ನೇರವಾಗಿ ವೈದ್ಯರಿಗೇ ತಲುಪಿಸಬಹುದು ಎನ್ನುವುದೆ ಇವರ ಆಲೋಚನೆ.

ಇದು ಕೇವಲ ಕಲ್ಪನೆಯಾಗಿ ಉಳಿದಿಲ್ಲ.  ರಕ್ತದ ಚಿತ್ರಣವನ್ನು ನೇರವಾಗಿ ವೈದ್ಯರಿಗೇ ತಲುಪಿಸುವ ರೀತಿಯಲ್ಲಿ ಸೆಲ್ಫೋನ್ನ್ನು ರೂಪಿಸಬಹುದು ಎಂದು ಫ್ಲೆಚರ್ ತಂಡ ನಿರೂಪಿಸಿದೆ. ನೋಕಿಯ ಕಂಪೆನಿಯ ಫೋನ್ ಒಂದನ್ನು ವೈದ್ಯಕೀಯ ಸೂಕ್ಷ್ಮದರ್ಶಕದ ಪ್ರಮುಖ ಭಾಗಗಳೊಂದಿಗೆ ತಳುಕಿ ಹಾಕಿದ್ದಾರೆ ಫ್ಲೆಚರ್ ತಂಡ. ಸೂಕ್ಷ್ಮದರ್ಶಕದಲ್ಲಿ ಇಣುಕುವ ಭಾಗವನ್ನು ನೇರವಾಗಿ ಸೆಲ್ಫೋನ್ನ ಕ್ಯಾಮೆರಾಗೆ ಜೋಡಿಸಿ, ಅದರಲ್ಲಿ ರಕ್ತ ಬಳಿದ ಗಾಜಿನ ತುಂಡು ಇಟ್ಟು ನೋಡಿದ್ದಾರೆ. ಗಾಜನ್ನು ಬೆಳಗಲು ಸುಲಭವಾಗಿ ದೊರೆಯುವ ಎಲ್ಇಡಿ (ಪ್ರಕಾಶ ಬೀರುವ ಡಯೋಡ್)ಗಳನ್ನು ಬಳಸಿದ್ದಾರೆ. ಹೀಗೆ ಬೆಳಗಿದ ಗಾಜಿನ ತುಂಡಿನ ಚಿತ್ರವನ್ನು ಸೆಲ್ಫೋನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಕ್ಷಯ ರೋಗಿಯ ಉಗುಳಿನಲ್ಲಿರುವ ರೋಗಾಣುಗಳ ಚಿತ್ರ, ಮಲೇರಿಯಾ ರೋಗಿಯ ರಕ್ತದಲ್ಲಿರುವ ರೋಗಾಣುವಿನ ಚಿತ್ರವನ್ನೂ ಸೆಲ್ಫೋನ್ ಮೂಲಕ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಚಿತ್ರಗಳೂ ಸಾಕಷ್ಟು ಸ್ಪಷ್ಟವಾಗಿವೆಯಲ್ಲದೆ, ಸೆಲ್ಫೋನ್ ಮೂಲಕ ಅವನ್ನು ಬೇರೆಡೆಗೆ ರವಾನಿಸಬಹುದು. ಅಷ್ಟೇ ಅಲ್ಲದೆ, ಸೆಲ್ಫೋನ್ನಲ್ಲಿರುವ ಮೆಮೊರಿಕಾರ್ಡ್ನಲ್ಲಿ ರಕ್ತದ ಚಿತ್ರವನ್ನು ವಿಶ್ಲೇಷಿಸಬಲ್ಲ ತಂತ್ರಾಂಶವನ್ನೂ ಸೇರಿಸಿದರೆ, ರಕ್ತದಲ್ಲಿರುವ ಸೋಂಕಿನ ಪ್ರಮಾಣ ಎಷ್ಟು ಎಂಬುದನ್ನೂ ಅದರಲ್ಲೇ ಪತ್ತೆ ಮಾಡಿದ್ದಾರೆ. ಈ ಎಲ್ಲ ವಿವರಗಳನ್ನೂ ನೇರವಾಗಿ ವೈದ್ಯರಿಗೆ ಫೋನ್ ಮೂಲಕವೇ ರವಾನಿಸಿಯೂ ನೋಡಿದ್ದಾರೆ. ಹೀಗೆ ಸೆಲ್ಫೋನ್ ಅನ್ನೇ ಟೆಲಿಮೆಡಿಸಿನ್ನ ಸಾಧ್ಯತೆಗಳನ್ನು ಹೆಚ್ಚಿಸುವ ಉಪಕರಣವನ್ನಾಗಿ ರೂಪಿಸಬಹುದು ಎನ್ನುವುದು ಫ್ಲೆಚರ್ ತಂಡದ ಆಸೆ.

ಒಟ್ಟಾರೆ ಇನ್ನು ಎಸ್ಎಂಎಸ್ ಕಳುಹಿಸುವ ಸಾಧನ ನಿಮ್ಮ ರೋಗಸ್ಥಿತಿಯನ್ನೂ ವೈದ್ಯರಿಗೆ ತಿಳಿಸುವ ದಿನಗಳು ದೂರವಿಲ್ಲ.