() ಡಗಿ   

ತಾ. ಸೇಡಂ
ದೂರ : ೧೦ ಕಿ.ಮೀ.

ಸೇಡಂನಿಂದ ೧೦ ಕಿ.ಮೀ. ಹಂಗನಹಳ್ಳಿ ರೈಲ್ವೆ ನಿಲ್ದಾಣದಿಂದ ಪೂರ್ವಕ್ಕೆ ೨ ಕಿ.ಮೀ. ಅಂತರದಲ್ಲಿ ಉಡಗಿ ಇದೆ.  “ಕಲೋಕೇಶ್ವರ” ದೇವಾಲಯದ ಸಂಕೀರ್ಣದಲ್ಲಿ ಸುಮಾರ ೯-೧೦ನೇ ಶತಮಾನಕ್ಕೆ ಸೇರಿದ ಹಲವಾರು ಮೂರ್ತಿ ಶಿಲ್ಪಗಳಿವೆ.  ಗರ್ಭಗೃಹ, ತೆರೆದ ಅರ್ಧ ಮಂಟಪ ಹಾಗೂ ನವರಂಗಗಳನ್ನು ಹೊಂದಿರುವ ಈ ಗುಡಿಯು ಗರ್ಭಗೃಹದಲ್ಲಿ ಬಲಹರಿ ಶಿವಲಿಂಗವಿದೆ.  ಇದರ ಬಾಗಿಲ ಚೌಕಟ್ಟು ಆಕರ್ಷಕವಾದ ಪಂಚಶಾಖಾಲಂಕೃತ ಕೆತ್ತನೆಯಿಂದ ಕೂಡಿದ್ದು ಸುಂದರವಾಗಿದೆ.  ಇದರ ಅಂತರಾಳದ ಛತ್ತನ್ನು ದೊಡ್ಡದಾದ ಕಮಲದಿಂದ ಅಲಂಕೃತಗೊಂಡಿದ್ದು ಒಂದರ ಮೇಲೆ ನರಿ – ದ್ರಾಕ್ಷಿ(?)ಯ ಪಂಚತಂತ್ರ ಶಿಲ್ಪವಿರುವಂತೆ ತೋರುತ್ತದೆ. ಈ ದೇವಾಲಯದ ಪರಿಸರದಲ್ಲಿ ಭೈರವ, ಕಾರ್ತಿಕೇಯ ಹಾಗೂ ಗಣೇಶನ ಬಿಡಿ ಶಿಲ್ಪಗಳನ್ನು ನೋಡಬಹುದಾಗಿದೆ.  ಜೊತೆಗೆ ಕಾಲಾರಿ ಶಿವ, ಕಾಲ ಭೈರವಿ ಮುಂತಾದ ರಾಷ್ಟ್ರಕೂಟ ಶಿಲ್ಪಗಳನ್ನು ಕಾಣಬಹುದಾಗಿದೆ.

 

ಮುಧೋಳ

ತಾ. ಸೇಡಂ
ದೂರ: ೩೨ ಕಿ.ಮೀ.

ಮುಧೋಳವು ತಾಲೂಕಾ ಕೇಂದ್ರ ೩೨ ಕಿ.ಮೀ. ದೂರದಲ್ಲಿದೆ. ಪ್ರಾಚೀನ ಶಾಸನಗಳಲ್ಲಿ “ಮುದುವೂಳಲು” ಎಂದೇ ಉಲ್ಲೇಖಿತಗೊಂಡಿರುವ ಈ ಊರಿನಲ್ಲಿ ರಾಷ್ಟ್ರಕೂಟ ಕನ್ನರದೇವನ ಕಾಲಕ್ಕೆ ಸೇರಿದ ಶಾಸನ ಒಂದು ವರದಿಯಾಗಿದೆ.  ಸುಮಾರು ೧೦ನೇ ಶತಮಾನಕ್ಕೆ ಸೇರಿದ ಈ ಶಾಸನವು ಇಲ್ಲಿನ ರಾಮಲಿಂಗೇಶ್ವರ ಗುಡಿಯ ಕಂಬವೊಂದರ ಮೇಲಿದೆ.  ಈ ಗುಡಿಯ ಕಂಬ ಒಂದರ ಮೇಲಿದೆ. ಈ ಗುಡಿಯನ್ನು ಗೊಳಿಗಾವುಂಡನು ನಿರ್ಮಿಸಿದನು.  ದೇವಾಲಯವು ಗರ್ಭಗೃಹ, ತೆರೆದ ಅಂತರಾಳ ಹಾಗೂ ನವರಂಗಗಳನ್ನು ಹೊಂದಿದ್ದು ಗರ್ಭಗುಡಿಯಲ್ಲಿ ಬಲಹರಿ ಶಿವಲಿಂಗವಿದೆ. ಇದರ ಬಾಗಿಲ ವಾಡದಲ್ಲಿ ಮುರು ಅಲಂಕಾರಿಕ ಶಾಖೆಗಳಿವೆ.  ಲಲಾಟದಲ್ಲಿ ಗಜಲಕ್ಷ್ಮಿ ಇದೆ. ಈ ಗುಡಿಯು ಮುಂದೆ ಮೂರು  ವೀರಗಲ್ಲುಗಳು ವಿಶಿಷ್ಟವಾಗಿ. ಉಳಿದಂತೆ ಊರಲ್ಲಿ ಗೋಪಾಲಸ್ವಾಮಿ, ವಿಠಲ, ಗಣೇಶನ, ನೀಲಕಂಠೇಶ್ವರ, ವೀರಭದ್ರ, ಹನುಮಂತ, ಉರಡಮ್ಮ, ಎಲ್ಲಮ್ಮ, ಅಂಬಾಭವಾನಿ, ಚೌಡಮ್ಮ, ದ್ಯಾವಮ್ಮ, ಮರಗಮ್ಮ ಮುಂತಾದ ನವೀನ ಗುಡಿಗಳು ಇವೆ.

 

ದೇಗುಲಗಳ ತಾಣ ಸೇಡಂ ಪಟ್ಟಣ

ಕಲ್ಬುರ್ಗಿಯಿಂದ ೫೨ ಕಿ.ಮೀ. ದೂರದಲ್ಲಿರುವ ತಾಲೂಕಾ ಹಾಗೂ ಉಪವಿಭಾಗ ಕೇಂದ್ರ ಸೇಡಂ ಪಟ್ಟಣವು ದೇಗುಲಗಳ ತಾಣವೇ ಆಗಿದೆ.  ಇದಕ್ಕೆ ಶಾಸನೋಕ್ತ ಹೆಸರು “ಸೇಡಿಂಬ” ಅದು ಬರಬರುತ್ತ ಸೇಡಂ, ಸೇರಂ ಎಂದಾಗಿದೆ.  ರಾಷ್ಟ್ರಕೂಟ ಕಲ್ಯಾಣ ಚಾಲುಕ್ಯರಂತಹ ಶ್ರೇಷ್ಠ ವಂಶಗಳ ಆಳ್ವಿಕೆಯಲ್ಲಿ ರಾಜಕೀಯ ಆಡಳಿತದ ಘಟಕವಾಗಿ ಅಗ್ರಹಾರದಂತಹ ಶಿಕ್ಷಣ ಕೇಂದ್ರವಾಗಿ ನೂತನ ಚಟುವಟಿಕೆಗಳಿಗೆ ಸ್ಪೂರ್ತಿಯ ಆಗರವೇ ಸೇಡಂ ಪಟ್ಟಣವಾಗಿತ್ತು.  ಅಸಂಖ್ಯಾತ ಮಂದಿರಗಳು ನೂರಾರು ಶಿಲ್ಪ ಸ್ಮಾರಕಗಳು ಭೂಮಿಯಲ್ಲಿ ಹೂತು ಹೋಗಿವೆ.  ಹೆಜ್ಜೆ ಹೆಜ್ಜೆಗೂ ದೇಗುಲಗಳು, ಸಾಲು ಮಂಟಪಗಳು, ಶಾಸನ, ಸ್ಮಾರಕಗಳು ನಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುತ್ತದೆ.

ಪಂಚಲಿಂಗೇಶ್ವರ, ಬಾಣಂತಿಕಂಬ, ಮಾಣಿಕೇಶ್ವರ ದೇವಾಲಯ, ಮಾಧವ ತ್ರೈಲಿಂಗೇಶ್ವರ ಈಶ್ವರ, ಕೊತ್ತಲ ಬಸವೇಶ್ವರ ದೇವಾಲಯಗಳು, ಜೈನ, ಸರಸ್ವತಿ ಮಂದಿರಗಳು, ಲಕ್ಷ್ಮಿನಾರಾಯಣ ಮಂದಿರಗಳು, ಮುಸ್ಲಿಂ ಸ್ಮಾರಕಗಳು, ನಾಗ, ಗಣಪ ನವಕೋಟಿ ನಾರಾಯಣ, ಜ್ವಾಲಾಮಾಲಿನಿ ವಿಗ್ರಹಗಳು, ಸೇಡಂ ಕೋಟೆ ಹೀಗೆ ಪ್ರಾಚೀನ ಅವಶೇಷಗಳ ತಾಣ ಸೇಡಂ ನಗರವಾಗಿದೆ.

 

ಮಾನ್ಯಖೇಟ ಕೋಟೆ    

ತಾ. ಸೇಡಂ
ದೂರ: ೧೮ ಕಿ.ಮೀ.

ಸೇಡಂ ತಾಲ್ಲೂಕಿನ ಮಾನ್ಯಖೇಟವು (ಮಳಖೇಡ) ರಾಷ್ಟ್ರಕೂಟರ ಕಾಲದಲ್ಲಿ ಪ್ರಸಿದ್ಧ ರಾಜಧಾನಿಯಾಗಿ ಅಗ್ರಹಾರ, ವಾಣಿಜ್ಯ, ಧಾರ್ಮಿಕ ಕೇಂದ್ರವಾಗಿ ಮೆರೆದಿತ್ತು. ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೆ ವಿಶಾಲ ಸಾಮ್ರಾಜ್ಯದ ರಾಜಧಾನಿ ಮಾನ್ಯಖೇಟವಾಗಿತ್ತು.  ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ ಕವಿರಾಜ ಮಾರ್ಗ ಸೃಷ್ಟಿಯಾದ ಪುಣ್ಯಭೂಮಿ ಇದಾಗಿತ್ತು. ಇಲ್ಲಿಯ ಹಲವಾರು ಅವಶೇಷಗಳು, ಸ್ಮಾರಕಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈಶ್ವರ ದೇವಾಲಯ, ಜೈನ ಮಂದಿರ, ಟೇಕಾಚಾರ್ಯರ ವೃಂದಾವನ, ಸಂತಾನ ಗೋಪಾಲ ಕೃಷ್ಣನ ಮಂದಿರ, ಮಲಯಾದ್ರಿ ಮಾಧವ, ಕೊತ್ತಲು, ವೀರಗಲ್ಲುಗಳು ಹನುಮಾನ ಮಂದಿರ ಇತ್ಯಾದಿಗಳು.

ಮಾನ್ಯಖೇಟವು ಕಾಗಿಣಾನದಿ ದಂಡೆಯ ಮೇಲೆ ನಿಸರ್ಗದ ವಾತಾವರಣದಲ್ಲಿದೆ. ರಾಷ್ಟ್ರಕೂಟರ ಅರಸ ೩ನೇ ಗೋವಿಂದನಿಂದ ಈ ಕೋಟೆಯು ನಿರ್ಮಿಸಲು ಆರಂಭವಾಗಿ ನೃಪತುಂಗ ಚಕ್ರವರ್ತಿಯ ಕಾಲಕ್ಕೆ ಪೂರ್ಣಗೊಂಡಿತು.  ಇದು ಎರಡು ಸುತ್ತಿನ ದುರ್ಗವಾಗಿದ್ದು ಅಲ್ಲಲ್ಲಿ ಗೋಪುರಗಳನ್ನು ನಿರ್ಮಿಸಲಾಗಿದೆ. ಕೋಟೆಯ ಪ್ರವೇಶಕ್ಕೆ ಎರಡು ದ್ವಾರಗಳಿವೆ. ಒಳಭಾಗದಲ್ಲಿ ಕೋಟೆಯ ಕಾವಲುಗಾರರ ಕೋಣೆಗಳಿದ್ದು ಪರಾಕ್ರಮಗಳ ಹೊಡೆತಕ್ಕೆ ಎದುರುಗೊಳ್ಳುವ ಈ ಸೈನಿಕರ ವಸತಿ ಗೃಹಗಳು ಎಚ್ಚರ ಪಡೆಯುತ್ತಿದ್ದವು.  ಇಂತಹ ಭವ್ಯಕೋಟೆಗೆ ಧಕ್ಕೆ ಬಿದ್ದಿದ್ದು ರಾಷ್ಟ್ರಕೂಟರ ಕರ್ಕನ ಕಾಲದಲ್ಲಿ ಕಲ್ಯಾಣದ ಚಾಲುಕ್ಯರ ಅರಸ ತೈಪನು ದಾಳಿಯಿಟ್ಟು ದ್ವಂಸ ಮಾಡಿದನು.  ನಂತರ ಕಸ್ಯಾಣದ ಚಾಲುಕ್ಯರೆ ಈ ಕೋಟೆಯನ್ನು ಪುನರ್ ನಿರ್ಮಿಸಿ ಆಳ್ವಿಕೆ ನಡೆಸಿದರು.

 

ಬಾಣಂತಿ ಕಂಬ ತಾ. ಸೇಡಂ ದೂರ: ಕಿ.ಮೀ.

ಪಂಚಲಿಂಗೇಶ್ವರ ದೇವಾಲಯದ ಹತ್ತಿರವೆ ಇರುವ ಬಾಣಂತಿ ಕಂಬವು ೪೨ ಅಡಿ ಎತ್ತರದ ಏಕ ಶಿಲಾ ಕಂಬವಾಗಿದ್ದು ತಳಭಾಗದಲ್ಲಿ ಚೌಕಾಕಾರವಾಗಿದ್ದು ಮೇಲಕ್ಕೆ ಹೋದಂತೆಲ್ಲ ಗೋಲಾಕಾರವಾಗಿ ಸಣ್ಣದಾಗುತ್ತಾ ಹೋಗುತ್ತದೆ. ಜೈನರ ವಾಸ್ತು ಶಿಲ್ಪದ ಶೈಲಿಯ ಪ್ರಕಾರ ಇದೊಂದು ಮಾನ ಸ್ತಂಭವಾಗಿದೆ. ಕ್ರಿ.ಶ. ೧೧೨೪ ನೇ ಸೇಡಂ ಶಾಸನದ ಪ್ರಕಾರ ಸೇಡಿಂಬದ ೩೦೦ ಮಹಾರಾಜರು ಶಾಂತಿನಾಥ ಚೈತ್ಯಾಲಯವನ್ನು ನಿರ್ಮಿಸಿ ಸುವರ್ಣ ಕಳಾಸರೋಹಣ ಮಾಡಿ ಜೀನಾಲಯವೆಂದು ಹೆಸರಿಟ್ಟರು.  ಈ ಎಲ್ಲವನ್ನು ಪರಿಶೀಲಿಸಿದರೆ ಇದೊಂದು ಮಾನಸ್ತಂಭವಾಗಿದೆ.

ದಂತ ಕಥೆಯ ಪ್ರಕಾರ ಘಟೋತ್ಗಜನ ಜನನದ ನಂತರ ಆತನ ತಾಯಿ ಹಿಡಂಬೆ ರಾಕ್ಷಸಿಯು ಈ ಕಂಬವನ್ನು ತಂದು ನಿಲ್ಲಿಸಿದ್ದಳೆಂದು ಅದಕ್ಕೆ ಈ ನಗರಕ್ಕೆ ಹಿಡಂಬೆ ಹಿಡಂಬಪುರ ಎಂದು ಕರೆಯಲಾಯಿತು ಎಂಬುದು ಪ್ರತೀತಿ ಇದೆ.

 

ಕನ್ನಡ ಪಾಠಶಾಲೆ ಹಂದರ್ಕಿ      

ತಾ. ಸೇಡಂ
ದೂರ: ೨೫ ಕಿ.ಮೀ.

ಸೇಡಂದಿಂದ ೨೫ ಕಿ.ಮೀ. ದೂರವಿರುವ ಹಂದರ್ಕಿಯು ಐತಿಹಾಸಿಕ ಗ್ರಾಮವಾಗಿದೆ.  ಪ್ರಾಚೀನ ಕಾಲದ ಧಾರ್ಮಿಕ, ಕಲಾತ್ಮಕ ಮತ್ತು ಶೈಕ್ಷಣಿಕ ಕೇಂದ್ರಮಾಗಿತ್ತು. ಇದರ ಪ್ರಾಚೀನ ಹೆಸರು ಪಂದರ್ಕಿಯಾಗಿತ್ತು.  ಇಲ್ಲಿಯ ಲೋಕೇಶ್ವರ ಹಾಗೂ ಜನಮೇಶ್ವರ ದೇವಾಲಯಗಳು ನಾಡಿನ ಚರಿತ್ರೆ ನಿರ್ಮಿಸುತ್ತವೆ.  ಅರಳು ಮುನ್ನೂರ (ಈಗಿನ ಚಿತ್ತಾಪೂರ ತಾಲೂಕಿನ ಅಲ್ಲೂರ) ಹೈಹಯ ವಂಶಸ್ಥರ ಆಡಳಿತಕ್ಕೆ ಒಳಪಟ್ಟ ಈ ಗ್ರಾಮವು ಕಲ್ಯಾಣ ಚಾಲುಕ್ಯರ ಅಧೀನದಲ್ಲಿ ಶಿಕ್ಷಣ ನೀಡುವ ಕೇಂದ್ರವಾಗಿ ಪ್ರಸಿದ್ಧಿ ಹೊಂದಿತ್ತು.  ಇಲ್ಲಿ ಕನ್ನಡ ಪಾಠ ಶಾಲೆಯು ಕ್ರಿ.ಶ. ೧೧೮ ರ ಶಾಸನದ ಪ್ರಕಾರ ವಿದ್ಯಾರ್ಥಿ ಮಾನಿಗಳಿಗೆ ಓದಿಸುವ ಉಪಾಧ್ಯಾಯರು ಎಂಬ ಶಾಸನದ ನುಡಿಗಳೇ ಸಾಕ್ಷಿಯಾಗಿವೆ.  ದೇವಸ್ಥಾನದ ಮಂಟಪದಲ್ಲಿ ಕನ್ನಡ ಪಾಠ ಶಾಲೆಯಲ್ಲಿ ನೂರಾರು ಮಕ್ಕಳು ಭಾಷೆಯನ್ನು ಕಲಿಯುತಿದ್ದರು ಎನ್ನುವುದನ್ನು ಗಮನಿಸಿದರೆ ಖಂಡಿತ ಅಂದು ಕನ್ನಡಕ್ಕೆ ಕೊಟ್ಟ ಮಹತ್ವವನ್ನು ತಿಳಿಸುತ್ತದೆ.