ಸಾಹಿತ್ಯದ ಸಂತೆಯಲ್ಲಿ ನನ್ನದು ಚಿಲ್ಲರೆ ಅಂಗಡಿ . ಸ್ವಲ್ಪ ವ್ಯಾಕರಣ, ಸ್ವಲ್ಪ ಕಥೆ, ಸ್ವಲ್ಪ ಕವಿತೆ, ಎಲ್ಲವೂ ಸ್ವಲ್ಪ. ಗಿರಾಕಿಗಳೂ ಸ್ವಲ್ಪ. ಎಂದು ಸೇಡಿಯಾಪು ತಮ್ಮ ಕೃತಿಗಳ ಕುರಿತು ವಿನಯದಿಂದ ಹೇಳಿಕೊಂಡಿದ್ದಾರೆ. ಇವರು ಬಹು ಭಾಷಾಪಂಡಿತರು. ವೈಯಾಕರಣಿಯಾಗಿ ಛಂದಸ್‌ತತ್ವಜ್ಞರಾಗಿ, ಅಧ್ಯಾಪಕರಾಗಿ, ಸೃಜನಶೀಲ ಸಾಹಿತಿಯಾಗಿ, ಪತ್ರಕರ್ತರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಇವರು ಕೊಟ್ಟ ಕೊಡುಗೆ ವಿಶಿಷ್ಟ ರೀತಿಯದು. ೧೯೦೨ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸೇಡಿಯಾಪು ಎಂಬಲ್ಲಿ ಹುಟ್ಟಿದ ಇವರು ಓದಿದ್ದು ಪುತ್ತೂರಿನಲ್ಲಿ. ವಿದ್ಯಾರ್ಥಿ ದೆಸೆಯಿಂದಲೇ ಗಾಂದಿಯವರ ಪ್ರಭಾವಕ್ಕೊಳಗಾದರು. ೧೯೨೦ ರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು.

ಖಾದಿ ಪ್ರಚಾರ ಮಾಡಿದರು. ಈ ವೇಳೆಗಾಗಲೇ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಸೇಡಿಯಾಪುವಿಗೆ ಜಯಕರ್ನಾಟಕದ ೧೯೨೩ ರ ಸೆಪ್ಟೆಂಬರ್ ಆವೃತಿಯಲ್ಲಿ ಪ್ರಕಟವಾದ ಅವರ ಕರ್ನಾಟಕ ಕವಿತಾ ಪ್ರಪಂಚ ವೆಂಬ ಲೇಖನ ಸಾಕಷ್ಟು ಕೀರ್ತಿಯನ್ನು ತಂದುಕೊಟ್ಟಿತು. ೧೯೨೭ ರ ಸುಮಾರಿಗೆ ತಮ್ಮ ಬಾಲ್ಯ ಮಿತ್ರನೊಡನೆ ಸೇರಿ ಮಂಗಳೂರಿನಲ್ಲಿ ಸಿದ್ಧೌಷದ ಭವನ, ಎಂಬ ಆಯುರ್ವೇದ ಚಿಕಿತ್ಸಾಲಯವನ್ನು ತೆರೆದರು.

ವೈದ್ಯರಾಗಿಯೂ ಯಶಸ್ವಿಯಾದರು. ಈ ಸಮಯದಲ್ಲಿ ಪಂಜೆ, ಮುಳಿಯ, ಕಡೆಂಗೋಡ್ಲು, ರವರ ಸಂಪರ್ಕವಾಯಿತು. ಇದೇ ಸಂದರ್ಭದಲ್ಲಿ ರಾಷ್ಟಬಂಧು ಪತ್ರಿಕೆಯ ಉಪಸಂಪಾದಕರಾದರು. ತದನಂತರ ಜಯಕರ್ನಾಟಕ ಪತ್ರಿಕೆಯಲ್ಲೂ ದುಡಿದರು. ಕನ್ನಡ ಮತ್ತು ಸಂಸ್ಕೃತಗಳನ್ನು ಆಳವಾಗಿ ಅಭ್ಯಸಿಸಿದ್ದ ಸೇಡಿಯಾಪು ೧೯೨೯ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ. ವಿದ್ವಾನ್ ಪದವಿಯನ್ನು ಪಡೆದರು. ಸೇಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ, ತದನಂತರ ೧೯೫೦ ರಲ್ಲಿ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾದರು.

ಕಥೆ, ಕಾವ್ಯ, ಶಾಸ್ತ್ರ-ಎಲ್ಲವೂ ಸೇರಿ ಇವರದು ಒಟ್ಟು ಎಂಟು ಕೃತಿಗಳು. ಮತ್ತು ಕೆಲವು ಸಣ್ಣ ಪುಟ್ಟ ಲೇಖನಗಳು. ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಛಂದಸ್ಸು, ಎಂಬ ದೀರ್ಘವಾದ ಪ್ರಬಂಧವನ್ನು ಓದಿದರು. ಇದು ಮುಂದೆ ಪರಿಷ್ಕೃತಗೊಂಡು ೧೯೮೮ ರಲ್ಲಿ ಪುಸ್ತಕವಾಗಿ ಪ್ರಕಟವಾಯಿತು. ಸೇಡಿಯಾಪು ೧೯೩೦-೪೦ ರ ದಶಕಗಳಲ್ಲಿ ಕಥೆ, ಕವನ, ಕಥನ ಕವನಗಳನ್ನು ಬರೆದರು. ಇವು ಭವಪ್ರಧಾನ ಹಾಗೂ ಶೃಂಗಾರಪ್ರಧಾನ. ಕವನಗಳು ಹಳೆಯ ಛಂದೋರೂಪಗಳಲ್ಲಿವೆ.

ಇವರ ಕನ್ನಡ ವರ್ಣಗಳು ಎಂಬ ಕೃತಿ ೧೯೫೦ ರ ಅವದಿಯಲ್ಲಿ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ಆಶ್ರಯದಲ್ಲಿ ಮಾಡಿದ ಮೂರು ಉಪನ್ಯಾಸಗಳ ಸಂಗ್ರಹ. ಅನಾರೋಗ್ಯದಿಂದ ದುರ್ಬಲ ದೇಹಿಯಾಗಿದ್ದರೂ, ದೃಷ್ಟಿ ಮಂದವಾಗಿದ್ದರೂ ಸಹ ಅವರು ಸಾಹಿತ್ಯ-ಸಂಶೋಧನೆಯಿಂದ ಎಂದೂ ದೂರ ಸರಿದವರಲ್ಲ. ಹಾಸಿಗೆಯಿಂದಲೇ ಅವರು ಹೇಳಿ ಬರೆಯಿಸಿದರು. ೧೯೭೫ ರಲ್ಲಿ ಕೆಲವು ದೇಶನಾಮಗಳು, ಎಂಬ ಕೃತಿ ಪ್ರಕಟವಾಯಿತು. ಇದು ಮೈಸೂರು ವಿಶ್ವವಿದ್ಯಾಲಯದ ಸ್ವರ್ಣ ಮಹೋತ್ಸವ ಪ್ರಶಸ್ತಿಯನ್ನು ಪಡೆದ ಶಬ್ದಾರ್ಥ ಸಂಶೋಧನ ಗ್ರಂಥ.

ಕೃಷ್ಣಭಟ್ಟರನ್ನು ಮುಖ್ಯವಾಗಿ ಗುರುತಿಸುವುದು ಛಂದಸ್ಸಿನಿಂದಲೇ. ಛಂದೋಗತಿ ಪ್ರಕಟವಾದದ್ದು ೧೯೮೫ ರಲ್ಲಿ ಇದು ಛಂದಸ್ಸಿನ ಕ್ಷೇತ್ರದಲ್ಲಿ ಅವರ ವಿದ್ವತ್ತನ್ನು ಎತ್ತಿಹಿಡಿಯುವ ಕೃತಿ ರಿದಂ, ಗೆ ಗತಿ ಯೆಂಬುದೇ ಸಮಾನಾರ್ಥಕ ಲಯ ಎಂಬ ಪದವು ಅನುಚಿತ ಎಂದು ಈ ಕೃತಿಯಲ್ಲಿ ಹಲವು ಉದಾಹರಣೆಗಳೊಂದಿಗೆ ತರ್ಕಬದ್ದವಾಗಿ ಪ್ರತಿಪಾದಿಸುತ್ತಾರೆ.

ಅವರ ಆರು ದಶಕಗಳಿಗೂ ಮೀರಿದಾಧ್ಯಯನದ ಫಲ ತಥ್ಯದರ್ಶನ, ಇದು ಭಾರತವನ್ನು ಕುರಿತ ಒಂದು ಪೌರ‍್ವಾತ್ಯ ಚಿಂತನೆ. ಭಾರತೀಯ ವಿಚಾರಗಳ ಬಗ್ಗೆ ಆರ್ಯ ದ್ರಾವಿಡ, ವರ್ಣ, ಜಾತಿ, ಲಿಂಗ ಎಂಬ ಪದಗಳ ಬಗ್ಗೆ ನಿಜವಾದ ಅರ್ಥಾನುಸಂಧಾನವನ್ನು ಕೃಷ್ಣಭಟ್ಟರು ಈ ಪುಸ್ತಕದಲ್ಲಿ ಮಾಡಿದ್ದಾರೆ. ಪಾಶ್ಚಾತ್ಯ ಶಾಸ್ತ್ರಕಾರರು ಹೇಳುವುದಕ್ಕಿಂತ ತೀರ ಬಿನ್ನವಾದ ವಿಚಾರಗಳನ್ನು ಮಂಡಿಸುವ ಸಂಶೋಧನ ಕೃತಿಯಿದು. ಆರ್ಯ ಎಂಬುದು ಒಂದು ಜನಾಂಗವಲ್ಲ ಅದು ಸಂಸ್ಕೃತಿಸೂಚಕವೆಂಬುದು ಇವರ ವಾದ. ತಥ್ಯದರ್ಶನ ಮಹಾಗ್ರಂಥವು ೧೯೯೬ ರಲ್ಲಿ ಡಿಸ್ಕವರಿ ಆಫ್ ಫ್ಯಾಕ್ಟ್ಸ್, ಎಂದು ಇಂಗ್ಲಿಷಿಗೆ ಅನುವಾದವೂ ಆಗಿದೆ.

ಸೇಡಿಯಾಪು ಕೃಷ್ಣಭಟ್ಟ ಇಬ್ಬರು ಗೆಳೆಯರೊಂದಿಗೆ ಕೂಡಿಕೊಂಡು ಕನ್ನಡ ನಿಘಂಟು ವನ್ನು ಸಂಪಾದಿಸಿದ್ದಾರೆ. ೧೯೯೨ ರಲ್ಲಿ ಪ್ರಕಟವಾದ ಇವರ ವಿಚಾರಪ್ರಪಂಚವು ವಿವಿಧ ವಿಷಯಗಳಿಗೆ ಸಂಬಂದಿಸಿದ ಎಪ್ಪತ್ತು ಲೇಖನಗಳನ್ನೊಳಗೊಂಡ ಸಂಗ್ರಹ. ಕರ್ನಾಟಕ ಸರ್ಕಾರ ಈ ಕೃತಿಗೆ ಪಂಪಪ್ರಶಸ್ತಿ (ಮರಣೋತ್ತರ) ನೀಡಿ ಸೇಡಿಯಾಪು ಕೃಷ್ಣಭಟ್ಟ ರನ್ನು ಗೌರವಿಸಿದೆ.

ತಮ್ಮ ಕೊನೆಯ ೨೫ ವರ್ಷಗಳನ್ನು ಮಣಿಪಾಲದಲ್ಲಿ ಕಳೆದ ಇವರು ಜೂನ್ ೮,೧೯೯೬ ರಂದು ತೀರಿಕೊಂಡರು. ಅವರ ಬಹಳಷ್ಟು ಕೃತಿಗಳು ರಚಿತವಾದದ್ದು ತೀವ್ರ ಅಸ್ವಾಸ್ಥ್ಸ್ಯದಿಂದ ಹಾಸಿಗೆಯಲ್ಲಿ ಕಳೆದ ದಿನಗಳಿಲ್ಲಿಯೆ. ಸಂಶೋಧನಾತ್ಮಕ ಮನಸ್ಸಿನವರಾದ ಇವರ ಎಲ್ಲ ಕೃತಿಗಳೂ ಸ್ವತಂತ್ರ ಚಿಂತನದ ಫಲಗಳು. ಅಲ್ಲಿ ಸೇಡಿಯಾಪು,ತನವಿದೆ. ತೀಡಿ ತಿದ್ದಿ ಬರೆವ ಸೇಡಿಯಾಪು ವಿರಳವರ್ಗಕ್ಕೆ ಸೇರೆದ ಉಚ್ಚಶ್ರೇಣಿಯ ಪಂಡಿತರು.

ಈಶ್ವರ ಸಂಕಲ್ಪ ಅಥವಾ ದೈವಲೀಲೆ ಎಂಬುದು ಸೇಡಿಯಾಪು ಕೃಷ್ಣಭಟ್ಟರ ಜೀವನದ ಕೆಲವು ವಿಶಿಷ್ಟ ಘಟನೆಗಳು ನಿರೂಪಗೊಂಡ ಆತ್ಮಚರಿತೆ. ಬರೆದಿರುವುದು ಕಡಿಮೆಯಾದರೂ ಕನ್ನಡ ಸಾಹಿತ್ಯ ಕಡೆಗಣಿಸಲಾಗದ ಲೇಖಕ.