೨-೬-೧೯೧೮ ರಂದು ಜನಿಸಿರುವ ಸುಂದರೇಶನ್‌ ಸುಪ್ರಸಿದ್ಧ ವಿದ್ವಾಂಸ ಪಲ್ಲವಿ ಶೇಷ ಅಯ್ಯರ್ ಅವರ ಮೊಮ್ಮಗ. ಚಂಬೈ ವೈದ್ಯನಾಥ ಭಾಗವತರ ಶಿಷ್ಯರೂ, ಸಂಬಂಧಿಯೂ ಆಗಿದ್ದ ಸಿ.ಆರ್. ಅನಂತರಾಮ ಭಾಗವತರಲ್ಲಿ ಸಂಗೀತ ಶಿಕ್ಷಣ ಪಡೆದ ಸುಂದರೇಶನ್‌ ಬೆಂಗಳೂರು ನಾಗರತ್ನಮ್ಮ, ಸಂಗೀತ ಕಲಾನಿಧಿ, ಟಿ. ವಿಶ್ವನಾಥನ್‌ ಅವರಿಂದ ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡರು. ಆನೂರು ರಾಮಕೃಷ್ಣರವರಲ್ಲಿ ಪಿಟೀಲು ವಾದನದ ತಂತ್ರಗಳನ್ನು ಅಭ್ಯಸಿಸಿ ತಾವು ಸ್ಥಾಪಿಸಿರುವ ಪಂಚನಾದಂ ಸಂಗೀತ ಶಾಲೆಯಲ್ಲಿ ಗಾಯನ ಹಾಗೂ ಪಿಟೀಲು ವಾದನದಲ್ಲಿ ಹಲವಾರು ಆಸಕ್ತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ತಮಿಳು ಭಾಷೆಯ ಸಂಗೀತ ಕೃತಿಗಳ ಹಾಗೂ ತ್ಯಾಗರಾಜರ ಅಪರೂಪ ಕೃತಿಗಳ ಒಂದು ಹಿರಿದಾದ ಭಂಡಾರವೇ ಸುಂದರೇಶನ್‌ ಅವರ ಬಳಿ ಇದೆ. ಸಂಗೀತ ತ್ರಿಮೂರ್ತಿಗಳ ಅಪರೂಪ ಕೃತಿಗಳ ಬಗ್ಗೆ ಕಾರ್ಯಾಗಾರಗಳನ್ನು ನಡೆಸುತ್ತಿರುತ್ತಾರೆ. ಮಾರ್ಗದರ್ಶಕರಾಗಿ, ಗುರುವಾಗಿ ಅವರ ಸೇವೆ ಗಮನೀಯವಾದುದು.

ಬೆಂಗಳೂರಿನ ಸ್ವಾನಂದ ಗಣಪತಿ ಆಶ್ರಮದಿಂದ ‘ಗಾನ ಕಲಾನಿಧಿ’ ಪ್ರಶಸ್ತಿ ದೊರಕಿದೆ. ಗಾಯನ ಸಮಾಜ ಆರ್ಟ್ ಆಫ್‌ ಲಿವಿಂಗ್‌ ಫೌಂಡೇಶನ್‌, ಶ್ರೀ ಅಯ್ಯನಾರ್ ಕಾಲೇಜ್‌ ಆಫ್‌ ಮ್ಯೂಸಿಕ್‌, ಶ್ರೀ ಶಾರದ ಸಂಗೀತ ಸಭಾ ಟ್ರಸ್ಟ್‌ ಶ್ರೀ ನಾದರೂಪಿಣಿ ಸ್ಕೂಲ್‌ ಆಫ್‌ ಮ್ಯೂಸಿಕ್‌, ಶ್ರೀಲಕ್ಷ್ಮೀ ಕಲಾಲಯಂ, ನರ್ತನ ಕೀರ್ತನ ಮ್ಯೂಸಿಕ್‌ ಅಂಡ್‌ ಡಾನ್ಸ್ ಸ್ಕೂಲ್‌ ಮುಂತಾದ ಸಂಸ್ಥೆಗಳು ಇವರನ್ನು ಗೌರವಿಸಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೪-೦೫ರ ಸಾಲಿನ ಪ್ರಶಸ್ತಿ ನೀಡಿ ಶ್ರೀಯುತರನ್ನು ಸನ್ಮಾನಿಸಿದೆ.