ಅಂತರಜಾಲ ಮಾಹಿತಿಗಳ ಮಹಾಪೂರ. ನಿರಂತರವಾಗಿ ನಾವು ಅಂತರಜಾಲವನ್ನು ಬಳಸುತ್ತಲೇ ಇರುತ್ತೇವೆ. ಇತ್ತೀಚಿನ ದಿನಗಳಲ್ಲಿ ಎಲ್ಲದಕ್ಕೂ ಅಂತರಜಾಲವನ್ನು ಜಾಲಾಡುವುದು ಅಭ್ಯಾಸವಾಗಿದೆ. ಒಂದು ಮೂಲ ಪ್ರಕಾರ ಜಾಗತೀಕವಾಗಿ ಸುಮಾರು ಮೂರು ನೂರು ಕೋಟಿ ಜನ, ಸುಮಾರು ಎಪ್ಪತ್ತೈದು ಮಿಲಿಯನ್ ಜಾಲತಾಣಗಳನ್ನು ನೋಡುತ್ತಿದ್ದಾರೆ. ಬೃಹತ್ ಸಂಖ್ಯೆಯ ಅಂತರಜಾಲ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಅನೇಕರು ಅಂತರಜಾಲದಲ್ಲಿ ವಂಚನೆಯೇ ಮುಂತಾದ ಅಪರಾಧಗಳನ್ನು ಮಾಡುತ್ತಾರೆ. ಅಂತರಜಾಲದಲ್ಲಿ ಯಾವ ರೀತಿಯಲ್ಲಿ ಮೋಸಗಳು ನಡೆಯುತ್ತವೆ, ಅಂತರಜಾಲವನ್ನು ಬಳಸುತ್ತಲೇ ಇಂತಹ ಮೋಸದ ಜಾಲಗಳಿಂದ ಹೇಗೆ ದೂರ ಉಳಿಯಬೇಕು ಎಂಬುದನ್ನು ತಿಳಿಯುವುದು ಅಗತ್ಯ. ಅಂತರಜಾಲದಲ್ಲಿ ಯಾವ ರೀತಿಯ ಅಪರಾಧಗಳು (ಸೈಬರ್ ಕ್ರೈಮ್) ನಡೆಯುತ್ತವೆ ಎಂಬುದನ್ನು ನೋಡೋಣ:

ಅಂತರಜಾಲ ಅಪರಾಧಗಳಲ್ಲಿ ಮುಖ್ಯವಾಗಿ ಹ್ಯಾಕಿಂಗ್, ವೈರಸ್ಗಳು, ವಂಚನೆ, ಕಪ್ಪು ಹಣ ಬಿಳಿ ಹಣವಾಗಿಸುವುದು, ಬೇಹುಗಾರಿಕೆ, ವೇಶ್ಯಾವೃತ್ತಿ, ಜೂಜು, ಡ್ರಗ್ ಬಳಕೆ ಮತ್ತು ಕಳ್ಳಸಾಗಣೆ, ಆತ್ಮಹತ್ಯೆಗೆ ಪ್ರೇರೇಪಿಸುವುದು, ಮಾನಹಾನಿ ಮಾಡುವುದು, ಸೈಬರ್ ಸ್ಟಾಕಿಂಗ್, ಸೈಬರ್ ಭಯೋತ್ಪಾದನೆ ಮತ್ತು ಭಯೋತ್ಪಾದನೆಯೇ ಮೊದಲಾದವುಗಳು ಸೇರಿವೆ. ಇವುಗಳನ್ನು ವಿವರವಾಗಿ ನೋಡೋಣ.

ಹ್ಯಾಕಿಂಗ್:

ಹ್ಯಾಕಿಂಗ್ ಎಂದರೆ ಅನಧಿಕೃತವಾಗಿ ಇನ್ನೊಬ್ಬರ ಜಾಲ ತಾಣಗಳಿಗೆ, ನೆಟ್ವರ್ಕ್ಗಳಿಗೆ ನುಗ್ಗುವುದು. ಖಾಸಗಿ ನೆಟ್ವರ್ಕ್ಗಳಿಗೆ ನುಗ್ಗುವ ಮೂಲಕ ಅಲ್ಲಿರುವ ವಿಷಯಗಳನ್ನು ಹಾಳುಮಾಡುವುದು, ಬದಲಿಸುವುದು, ಅನಗತ್ಯವಾದುದನ್ನು ತುಂಬುವುದು ಮುಂತಾದವುಗಳನ್ನು ಹ್ಯಾಕ್ಮಾಡುವವರು ಮಾಡುತ್ತಾರೆ. ಅಷ್ಟೇ ಅಲ್ಲದೇ, ಬಳಕೆದಾರರು ಒಂದು ನಿರ್ದಿಷ್ಟ ಜಾಲತಾಣಕ್ಕೆ ಭೇಟಿ ನೀಡಲು ಪ್ರಯತ್ನಿಸಿದಾಗ ಅವರನ್ನು ಬೇರೆ ತಾಣಗಳೆಡೆಗೆ ನಿರ್ದೇಶಿಸುವುದು, ನೂರಾರು ಸಂದೇಶಗಳನ್ನು ಕಳಿಸುವ ಮೂಲಕ ಸರ್ವರ್ ಕುಸಿಯುವಂತೆ ಮಾಡುವುದು ಮುಂತಾದ ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಾರೆ. ಆದರೆ ಹ್ಯಾಕಿಂಗ್ ಸಂಪೂರ್ಣ ಕಾನೂನುಬಾಹಿರವಲ್ಲ. ಏಕೆಂದರೆ, ಒಂದು ನೆಟ್ವರ್ಕ್ಹ್ಯಾಕ್ ಮಾಡಲ್ಪಟ್ಟಿದೆ ಎಂದರೆ ಅದು ನೆಟ್ವರ್ಕ್ ದೌರ್ಬಲ್ಯ ಎಂದು ಪರಿಗಣಿಸಲಾಗುತ್ತದೆ. ಒಂದು ಹಂತದವರೆಗೆ ಹ್ಯಾಕಿಂಗ್ ಮೋಜಿನ ಕೆಲಸವಾಗಿರುತ್ತದಾದರೂ, ಅದು ಅಂತರಜಾಲದಲ್ಲಿ ನಡೆಯುವ ವ್ಯವಹಾರಗಳ ಮೇಲೆ ಕೆಟ್ಟ ಪರಿಣಾಮವನ್ನೂ ಬೀರುತ್ತದೆ.

ಹ್ಯಾಕ್ಮಾಡುವವರಲ್ಲಿ ಎರಡು ರೀತಿಯವರಿರುತ್ತಾರೆ. ವೈಟ್ಹ್ಯಾಟ್ ಹ್ಯಾಕರ್ಗಳಿಗೆ ಸಂಸ್ಥೆಯವರೇ ಉದ್ಯೋಗ ನೀಡಿ, ತಮ್ಮ ಸಂಸ್ಥೆಯ ಜಾಲತಾಣಗಳು ಮತ್ತು ನೆಟ್ವರ್ಕ್ಗಳಲ್ಲಿ ಯಾವುದಾದರೂ ದೋಷಗಳಿವೆಯೇ ಎಂಬುದನ್ನು ಕಂಡುಹಿಡಿಯಲು ನಿಯೋಜಿಸುತ್ತಾರೆ. ಇನ್ನು ಬ್ಲ್ಯಾಕ್ಹ್ಯಾಟ್ ಹ್ಯಾಕರ್ಗಳು ಗುಟ್ಟಾಗಿ ಇನ್ನೊಬ್ಬರ ನೆಟ್ವರ್ಕ್ ಸಿಸ್ಟಂಗಳ ಒಳಗೆ ನುಗ್ಗುತ್ತಾರೆ. ಇವರೆಡಲ್ಲದೇ ಇನ್ನೊಂದು ಗ್ರೇಹ್ಯಾಟ್ ಹ್ಯಾಕರ್ಗಳೆಂಬ ಇನ್ನೊಂದು ಪ್ರಕಾರವಿದ್ದು, ಅವರು ಮೇಲಿನ ಎರಡೂ ಕೆಲಸಗಳನ್ನೂ ಮಾಡುತ್ತಾರೆ! ಅಂದರೆ ದೋಷ ಹುಡುಕಿ ಸಹಾಯ ಮಾಡುವ ಭರದಲ್ಲಿ ಅವರು ಕೆಲವೊಮ್ಮೆ ಕಾನೂನನ್ನು ಮೀರುತ್ತಾರೆ.

ಬ್ಯಾಕ್ಡೋರ್ಎನ್ನುವ ಪ್ರೋಗ್ರಾಮ್ ಸಹಾಯದಿಂದ ಮೈಕ್ರೋಸಾಫ್ಟ್ ವಿಂಡೋಸ್ ಸ್ಥಾಪಿಸಲ್ಪಟ್ಟಿರುವ ಸಿಸ್ಟಂಗಳಿಗೆ ಹ್ಯಾಕರ್ಗಳು ಪ್ರವೇಶ ಮಾಡುತ್ತಾರೆ. ಇದರ ಸಹಾಯದಿಂದ ಕಂಪ್ಯೂಟರ್ ಸಿಸ್ಟಂನಲ್ಲಿ ಇರುವ ಮೈಕ್ರೋಫೋನ್ ಅಥವಾ ವೆಬ್ಕ್ಯಾಮ್ ಆರಂಭಿಸಿಬಿಡುತ್ತಾರೆ. ಪರಿಣಾಮ ಯೋಚಿಸಿ.

ವೈರಸ್ಗಳು

ವೈರಸ್‌ಗಳೆಂದರೆ ಚಿಕ್ಕ ಸಾಫ್ಟ್‌ವೇರ್ ಪ್ರೋಗ್ರಾಮ್‌ಗಳೇ ಆಗಿದ್ದು, ಅವು ಕಂಪ್ಯೂಟರ್‌ನಲ್ಲಿ ಬಳಸಲ್ಪಡುವ ಪ್ರೋಗ್ರಾಮ್‌ಗಳ ಮೇಲೆ ಸವಾರಿ ಮಾಡುತ್ತ, ಕೆಲಸಕ್ಕೆ ಅಡ್ಡಿಪಡಿಸುತ್ತವೆ. ಅಷ್ಟೇ ಅಲ್ಲದೇ ಅವು ಒಂದು ಕಂಪ್ಯೂಟರ್‌ ವ್ಯವಸ್ಥೆಯಿಂದ ಇನ್ನೊಂದಕ್ಕೆ ದತ್ತಾಂಶ ರವಾನೆ ಸಂದರ್ಭದಲ್ಲಿ ಮತ್ತು ಅಂತರಜಾಲದ ಮೂಲಕ ಹರಿದಾಡುತ್ತವೆ. ಅವು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲ್ಪಟ್ಟಿರುವ ವಿಷಯಗಳನ್ನು ಹಾಳುಮಾಡಬಹುದು, ಅಥವಾ ಸಂಪೂರ್ಣ ಅಳಿಸಿ ಹಾಕಬಹುದು. ವೈರಸ್‌ ಎಂಬ ಪದದ ಬಳಕೆಯನ್ನು ಜೀವಶಾಸ್ತ್ರದ ವೈರಸ್ ಎಂಬ ಜೀವಾಣುವಿನಿಂದಲೇ ತೆಗೆದುಕೊಳ್ಳಲಾಗಿದೆ. ವೈರಸ್ ಜೀವಾಣುಗಳು ತಮ್ಮಷ್ಟಕ್ಕೆ ತಾವೇ ಪಡಿಯಚ್ಚುಗಳನ್ನು ನಿರ್ಮಿಸಿಕೊಳ್ಳುವುದಿಲ್ಲ, ಬದಲಾಗಿ ಒಂದು ಜೀವಿಯ ದೇಹದ ಜೀವಕೋಶಗಳನ್ನು ಸೇರಿಕೊಂಡು ನಂತರದಲ್ಲಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಹೋಗುತ್ತವೆ. ಹಾಗೆಯೇ ಈ ಕಂಪ್ಯೂಟರ್ ವೈರಸ್‌ಗಳು ಕೂಡಾ ಯಾವುದಾದರೂ ಒಂದು ಸಾಫ್ಟ್‌ವೇರ್ ಪ್ರೋಗ್ರಾಮ್‌ನಲ್ಲಿ ಸೇರಿಕೊಂಡು ಕಂಪ್ಯೂಟರ್‌ನಲ್ಲಿರುವ ಇತರೆ ಪ್ರೋಗ್ರಾಮುಗಳು ಮತ್ತು ಕಡತಗಳಲ್ಲಿ ತನ್ನದೇ ನಕಲುಗಳನ್ನು ಸೇರಿಸುತ್ತಾ ಸಾಗುತ್ತದೆ. ಈ ಕಡತಗಳನ್ನು ಬೇರೆ ಕಂಪ್ಯೂಟರ್‌ಗಳಿಗೆ ವರ್ಗಾಯಿಸಿದಾಗ ಆ ಕಂಪ್ಯೂಟರ್‌ಗಳಿಗೂ ಈ ವೈರಸ್ ಸೇರುತ್ತದೆ.

ವರ್ಮ್: ವರ್ಮ್‌ಗಳು ಕಂಪ್ಯೂಟರ್ ಜಾಲಗಳಲ್ಲಿರುವ ಭದ್ರತಾ ದೋಷಗಳನ್ನು ಬಳಸಿಕೊಂಡು ಹರಡುತ್ತವೆ. ಒಂದು ಕಂಪ್ಯೂಟರ್‌ಗೆ ವರ್ಮ್ ಬಂದಿತೆಂದರೆ ಸಾಕು; ಅದೇ ಜಾಲದಲ್ಲಿರುವ ಇತರೆ ಕಂಪ್ಯೂಟರ್‌ಗಳಲ್ಲಿ ಇರಬಹುದಾದ ಭದ್ರತಾ ದೋಷಗಳನ್ನು ಹುಡುಕುವ ಆ ವರ್ಮ್‌ನ ಪ್ರತಿಗಳು ಒಂದರಿಂದ ಇನ್ನೊಂದು ಕಂಪ್ಯೂಟರ್‌ಗೆ ಹರಡುತ್ತಾ ಹೋಗುತ್ತವೆ. ವರ್ಮ್‌ಗಳಿಗೂ ವೈರಸ್‌ಗಳಿಗೂ ತಾಂತ್ರಿಕವಾಗಿ ವ್ಯತ್ಯಾಸವಿದೆ. ವರ್ಮ್‌ಗಳು ಯಾವುದೇ ಪ್ರೋಗ್ರಾಮ್‌ಗಳಲ್ಲಿ ಸೇರಿಕೊಂಡು ಕೆಲಸ ಮಾಡದೇ ಸ್ವತಂತ್ರವಾಗಿ ತಮ್ಮ ಕಾರ್ಯವನ್ನು ನಿರ್ವಹಿಸುವಂತಹ ಕೋಡ್‌ ಹೊಂದಿರುತ್ತವೆ. ಹಾಗಾಗಿ ಅವುಗಳು ಪಡಿಯಚ್ಚುಗಳನ್ನು ನಿರ್ಮಿಸಿಕೊಳ್ಳುವುದು ಮತ್ತು ಕಂಪ್ಯೂಟರ್‌ನಿಂದ ಕಂಪ್ಯೂಟರ್‌ಗೆ ಹರಿದಾಡುವುದು ಸುಲಭ.

ಹೆಚ್ಚಿನ ಮಾಲ್‌ವೇರ್‌ಗಳು (ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳು) ವರ್ಮ್‌ಗಳೇ ಆಗಿರುತ್ತವೆ ಮತ್ತು ಅವು ಹೆಚ್ಚಾಗಿ ಇಮೇಲ್ ಮುಖಾಂತರ ಪಸರಿಸಲ್ಪಡುತ್ತವೆ. ಅಂತರಜಾಲದ ಮುಖಾಂತರ ಸುಲಭವಾಗಿ ಹರಡುವಂತೆ ಅವುಗಳನ್ನು ರೂಪಿಸಲಾಗಿರುತ್ತದೆ. ದೊಡ್ಡ ದೊಡ್ಡ ಕಂಪ್ಯೂಟರ್ ವ್ಯವಸ್ಥೆಗಳನ್ನೂ ಹದಗೆಡಿಸಿದ ಇತಿಹಾಸ ಈ ಮಾಲ್‌ವೇರ್‌ಗಳಿಗಿದೆ.

ಇಮೇಲ್ ವೈರಸ್ಗಳು: ಈ ವೈರಸ್‌ಗಳು ಹೆಚ್ಚಾಗಿ ಇಮೇಲ್ ಲಗತ್ತಿನ ಮೂಲಕ ಹರಿದಾಡುತ್ತವೆ. ಹಾಗಾಗಿ ನಿಮಗೆ ಒಂದು ಇಮೇಲ್ ಬಂದಾಗ ಕಳಿಸಿದವರು ನಿಮಗೆ ಪರಿಚಯದವರಲ್ಲದಿದ್ದಾಗ ಅಂತಹ ಇಮೇಲ್‌ ಲಗತ್ತುಗಳನ್ನು ತೆರೆಯಲೇಬಾರದು. ಇಂತಹ ವೈರಸ್‌ಗಳು ಮೋಜಿನ ಚಿತ್ರಗಳು, ಗ್ರೀಟಿಂಗ್ ಕಾರ್ಡುಗಳು, ಸಂಗೀತ ಅಥವಾ ವೀಡಿಯೋಗಳ ರೂಪದಲ್ಲಿ ಇಮೇಲ್‌ ಲಗತ್ತುಗಳಾಗಿ ಬರುತ್ತವೆ.

ಒಂದು ಮೋಜಿನ ಸಂಗತಿಯೆಂದರೆ ಇಮೇಲ್ ಮೂಲಕ ಒಬ್ಬ ವ್ಯಕ್ತಿಯ ಕಂಪ್ಯೂಟರ್‌ಗೆ ಪ್ರವೇಶ ಪಡೆದ ವರ್ಮ್‌ಗಳು ಆ ಖಾತೆಯಲ್ಲಿ ಲಭ್ಯವಿರುವ ಇಮೇಲ್ ವಿಳಾಸಗಳನ್ನು ಪತ್ತೆ ಹಚ್ಚಿ ಅವುಗಳಿಗೆ ದೋಷಪೂರಿತ ಅಥವಾ ವರ್ಮ್ ಸೊಂಕಿರುವ ಇಮೇಲ್‌ ಸಂದೇಶಗಳನ್ನು ರವಾನಿಸತೊಡಗುತ್ತದೆ. ಹೀಗೆ ತನ್ನ ಇಮೇಲ್ ವಿಳಾಸದ ಮುಖಾಂತರ ದೋಷಪೂರಿತ ಇಮೇಲ್ ಸಂದೇಶಗಳು ರವಾನಿಸಲ್ಪಡುತ್ತಿವೆ ಎಂಬುದು ಆ ವ್ಯಕ್ತಿಗೆ ತಿಂಗಳುಗಳವರೆಗೆ ಗೊತ್ತಾಗದೇ ಇರಬಹುದು. ವರ್ಮ್‌ ದಾಳಿಗೊಳಗಾದ ಒಂದು ಕಂಪ್ಯೂಟರ್ ಮೂಲಕ ಸೊಂಕಿರುವ ಸಾವಿರಾರು ಸಂದೇಶಗಳು ಕಳಿಸಲ್ಪಡಬಹುದು.

ಟ್ರೋಜನ್ ಹಾರ್ಸ್: ಟ್ರೋಜನ್ ಹಾರ್ಸ್ ಸಹ ಒಂದು ಕಂಪ್ಯೂಟರ್ ಪ್ರೋಗ್ರಾಮ್. ಇದು ಒಂದು ಉಪಯುಕ್ತ ಪ್ರೋಗ್ರಾಮ್ ಎಂಬಂತೆ ತೋರಿಸಿಕೊಳ್ಳುತ್ತ, ಅದನ್ನು ಬಳಸಲು ತೆರೆದಾಗ ವ್ಯವಸ್ಥೆಯನ್ನು ಹದಗೆಡಿಸುತ್ತದೆ, ಅಲ್ಲದೇ ಮಾಹಿತಿಯನ್ನು ಅಳಿಸಿ ಹಾಕುತ್ತದೆ.

ಇವಲ್ಲದೇ ಆಡ್‌ವೇರ್‌ಗಳು (Adware), ಸ್ಪೈವೇರ್‌ಗಳು (Spyware) ಮುಂತಾದ ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳೂ ಕಂಪ್ಯೂಟರ್‍ ಪ್ರೋಗ್ರಾಮ್‌ಗಳನ್ನು ಅಡರಿಕೊಳ್ಳುತ್ತವೆ. ಅಂತರಜಾಲವನ್ನು ಬಳಸುವ ಸಮಯದಲ್ಲಿ ಅಥವಾ ಯಾವುದಾದರೂ ಪ್ರೋಗ್ರಾಮ್ ಸ್ಥಾಪಿಸಿಕೊಳ್ಳುವಾಗ ಈ ಸ್ಪೈವೇರ್‌ಗಳು ಬಳಕೆದಾರರ ಅರಿವಿಲ್ಲದೇ ಸೇರಿಕೊಂಡುಬಿಡುತ್ತವೆ. ಅವು ಬಳಕೆದಾರರ ಪಾಸ್‌ವರ್ಡ್‌ಗಳು, ಇಮೇಲ್ ವಿಳಾಸಗಳು, ಅಂತರಜಾಲ ಹುಡುಕಾಟದ ಇತಿಹಾಸ, ಅಂತರಜಾಲದ ಮೂಲಕ ಖರೀದಿ ವಿವರಗಳು, ವಯಸ್ಸು, ಲಿಂಗ ಮುಂತಾದವುಗಳ ಮಾಹಿತಿ ಕಲೆಹಾಕಿ, ಆ ಪ್ರೋಗ್ರಾಮ್ ರೂಪಿಸಿದವರಿಗೆ ರವಾನಿಸುತ್ತದೆ. ಆಡ್‌ವೇರ್‌ಗಳೂ ಕೂಡಾ ಈ ವಿವರಗಳನ್ನು ಕಲೆ ಹಾಕುತ್ತವೆ ಮತ್ತು ಜಾಹೀರಾತು ಪಾಪ್‌ಅಪ್ (ವೆಬ್ ಬ್ರೌಸಿಂಗ್ ಮಾಡುವಾಗ ಮಧ್ಯ ಮಧ್ಯದಲ್ಲಿ ಎದ್ದು ಬರುವ) ಜಾಹೀರಾತುಗಳನ್ನು ತೋರಿಸತೊಡಗುತ್ತವೆ. ಇವುಗಳು ಉತ್ಪಾದಕರಿಗೆ ಮತ್ತು ವ್ಯಾಪಾರಿ ಸಂಸ್ಥೆಗಳಿಗೆ ಅನೇಕ ಉಪಯುಕ್ತ ಮಾಹಿತಿ ನೀಡಲು ನಿಯೋಜಿಸಲ್ಪಟ್ಟಿರುತ್ತವೆ.

ಪೈರೇಟಿಂಗ್ ಅಥವಾ ಸ್ವಾಮ್ಯಚೌರ್ಯ

ಡಿಜಿಟಲ್ ತಂತ್ರಜ್ಞಾನದಿಂದಾಗಿ ಸ್ವಾಮ್ಯಚೌರ್ಯ ಬಹಳ ಸುಲಭವಾಗಿದೆ. ಸಂಗೀತ, ಸಿನೆಮಾಗಳು, ಪುಸ್ತಕಗಳು ಮುಂತಾದವುಗಳನ್ನು ನಕಲು ಮಾಡಿ ಕಡಿಮೆ ಬೆಲೆಗೆ ಮಾರುವುದು, ಅಥವಾ ಅಂತರಜಾಲದ ಮೂಲಕ ಅನಾಮದೇಯವಾಗಿ ಹಂಚಿಕೊಳ್ಳುವುದು ಮುಂತಾದವುಗಳು ಸ್ವಾಮ್ಯಚೌರ್ಯದ ಅಡಿಯಲ್ಲಿ ಬರುತ್ತವೆ.    

ಕಾನೂನು ಬಾಹಿರ ವ್ಯಾಪಾರ

ಚಾಟ್‍ರೂಮುಗಳು, ಬುಲೆಟಿನ್‌ ಬೋರ್ಡ್‌ಗಳು, ಸುದ್ದಿಗುಂಪುಗಳು ಮತ್ತು ಜಾಲತಾಣಗಳ ಮುಖಾಂತರ ಕಾನೂನು ಬಾಹಿರ ವ್ಯಾಪಾರ ನಡೆಯುತ್ತದೆ. ಒಂದು ಪ್ರತಿಷ್ಠಿತ ಸಂಸ್ಥೆಯು ಒಂದು ಉತ್ಪಾದಕ ಸಂಸ್ಥೆಯಿಂದ ಉತ್ಪನ್ನಗಳನ್ನು ತಯಾರಿಸಿಕೊಂಡು ಮಾರುವ ಸಂದರ್ಭದಲ್ಲಿ, ಆ ಉತ್ಪಾದಕ ಸಂಸ್ಥೆ ಅದೇ ಉತ್ಪನ್ನವನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಿ ಕಡಿಮೆ ಬೆಲೆ ಮಾರಾಟ ಮಾಡುತ್ತದೆ. ಒಂದೇ ಉತ್ಪನ್ನವು ಬೇರೆ ಬೆಲೆಯಲ್ಲಿ ಬೇರೆ ಮಾರುಕಟ್ಟೆಯಲ್ಲಿ ಮಾರಲ್ಪಡುವುದನ್ನು `ಪ್ಯಾರಲಲ್ ಟ್ರೇಡಿಂಗ್’ ಎನ್ನುತ್ತಾರೆ.

ವಂಚನೆ

ಬಳಕೆದಾರರನ್ನು ತಮ್ಮ ಬ್ಯಾಂಕಿನ ಪಾಸ್‌ವರ್ಡ್ ಮುಂತಾದ ವಿವರಗಳನ್ನು ನೀಡುವಂತೆ ಮಾಡಿ ಅವರ ಖಾತೆಗೆ ಲಗ್ಗೆ ಹಾಕುವುದು ಅಂತರಜಾಲದಲ್ಲಿ ಸಾಮಾನ್ಯವಾಗಿ ನಡೆಯುವ ಒಂದು ಪ್ರಕಾರದ ವಂಚನೆ. ಕೆಲವೊಮ್ಮೆ ಒಂದು ಸಂಸ್ಥೆಯ ಹೆಸರಲ್ಲಿ ಪಾಸ್‌ವರ್ಡ್ ದೃಢೀಕರಣಕ್ಕಾಗಿ ಇಮೇಲ್‌ ಕಳಿಸಿ ಬ್ಯಾಂಕ್ ಖಾತೆಯಿಂದ ಹಣ ಕದಿಯುತ್ತಾರೆ. ಕೆಲವು ಜಾಲತಾಣಗಳು ಉಚಿತ ಪ್ರಾಯೋಗಿಕ ಸದಸ್ಯತ್ವಕ್ಕಾಗಿ ಕ್ರೆಡಿಟ್ ಕಾರ್ಡ್ ವಿವರಗಳನ್ನು ತೆಗೆದುಕೊಂಡು ಮೋಸಗೈಯುತ್ತವೆ. ಇನ್ನು ಕೆಲವು ತಾಣಗಳಲ್ಲಿ ನೋಂದಾಯಿಸಿಕೊಂಡ ಮಾರಾಟಗಾರರು ತಮ್ಮಲ್ಲಿಲ್ಲದ ವಸ್ತುವನ್ನೂ ಅಂತರಜಾಲದಲ್ಲಿ ಹರಾಜಿಗೆ ಬಿಟ್ಟು, ದುಡ್ಡು ಹೊಡೆದುಕೊಂಡು ಹೋಗುತ್ತಾರೆ. ಒಂದು ಸುಳ್ಳು ವೆಬ್‌ಸೈಟ್ ನಿರ್ಮಿಸಿ ಅದರಲ್ಲಿ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ವಿವರಗಳು, ಪಾಸ್‌ವರ್ಡ್ ಮುಂತಾದವುಗಳನ್ನು ನೀಡುವಂತೆ ಕೇಳಿ ಮೋಸ ಮಾಡುವುದನ್ನು `ಫಿಷಿಂಗ್’ ಎಂದು ಕರೆಯುತ್ತಾರೆ.

ಔಷಧಿ ಮಾರಾಟ

ಅಂತರಜಾಲದ ಮುಖಾಂತರ ಔಷಧಿ ಮಾರಾಟ ಅಪರಾಧವಲ್ಲದಿದ್ದರೂ ಹೀಗೆ ಔಷಧಿಗಳನ್ನು ಕೊಳ್ಳುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಆದರೆ ಕಾನೂನುಬಾಹಿರ ಅಂತರಜಾಲ ಔಷಧಿ ಮಾರಾಟ ಅಪರಾಧ ಹೌದು.

ಮಾನಹಾನಿ

ಅಂತರಜಾಲದ ಮುಖಾಂತರ ಮಾನಹಾನಿ ಮಾಡುವುದು, ದ್ವೇಷದ ಪ್ರತಿಕ್ರಿಯೆ ಮುಂತಾದವುಗಳು ಅಂತರಜಾಲದಲ್ಲಿ ನಡೆಯುತ್ತವೆ. ವ್ಯಕ್ತಿಗಳ ಅಥವಾ ಸಂಸ್ಥೆಗಳ ಕುರಿತು ಅಪಮಾನಕಾರಿ ಬರಹಗಳನ್ನು ಬರೆಯುವುದು, ವಿರೂಪಗೊಳಿಸಿದ ಚಿತ್ರಗಳನ್ನು ಹಾಕುವುದು, ಅಶ್ಲೀಲ ಭಾಷೆ ಬಳಸಿ ವ್ಯಕ್ತಿಗಳ ಕುರಿತು ಅಂತರಜಾಲದಲ್ಲಿ ಪ್ರಕಟಿಸುವುದು ಮುಂತಾದವುಗಳ ಮೂಲಕ ಮಾನಹಾನಿ ಮಾಡಲಾಗುತ್ತದೆ.

ಸೈಬರ್ ಸ್ಟಾಕಿಂಗ್

ಅಂತರಜಾಲದ ಮುಖಾಂತರ ಯಾರಿಗೇ ಆದರೂ ತೊಂದರೆ ಕೊಡುವುದು, ಪದೇಪದೇ ಇಮೇಲ್‌ಗಳನ್ನು ಕಳಿಸುವುದು, ಅವರ ಇಚ್ಛೆಗೆ ವಿರುದ್ಧವಾಗಿ ವರ್ತಿಸುವುದು ಅಪರಾಧ. ಯುನಿಟೆಡ್ ಕಿಂಗ್‌‍ಡಮ್‌ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳ ಚಿತ್ರಗಳು ಮತ್ತು ವಿವರಗಳನ್ನು ವೇಶ್ಯಾವೃತ್ತಿ ಮಾಡುವವರ ಜಾಲತಾಣವೊಂದರಲ್ಲಿ ಸೇರಿಸಿದ್ದ. ಈ ಅಪರಾಧಕ್ಕಾಗಿ ಆತನಿಗೆ ೫ ತಿಂಗಳ ಸೆರೆವಾಸ ವಿಧಿಸಲಾಯಿತು.

ಅಂತರಜಾಲ ಭಯೋತ್ಪಾದನೆ

ಸೈಬರ್ ಟೆರರಿಸಮ್ ಅಥವಾ ಅಂತರಜಾಲ ಭಯೋತ್ಪಾದನೆ ಎಂದರೆ ಒಂದು ದೇಶದ ಅಥವಾ ಪ್ರಮುಖ ಸಂಸ್ಥೆಯೊಂದರ ಪ್ರಮುಖ ಅಂತರಜಾಲ ನೆಟ್‌ವರ್ಕ್‌ಗಳಲ್ಲಿ ನುಗ್ಗಿ ಮಾಹಿತಿಗಳನ್ನು ಕದಿಯುವುದು, ನಾಶಪಡಿಸುವುದು, ವ್ಯವಸ್ಥೆಯನ್ನು ಹದಗೆಡಿಸುವುದು ಮತ್ತು ಆ ಮೂಲಕ ರಾಷ್ಟ್ರೀಯ ಭದ್ರತೆಗೆ ದಕ್ಕೆ ತರುವುದಾಗಿದೆ. ಜಗತ್ತಿನ ಅನೇಕ ದೇಶಗಳಲ್ಲಿ ಪ್ರಮುಖ ಕಾರ್ಯಗಳು ಅಂತರಜಾಲದ ಸಹಾಯದಿಂದ ನಡೆಯುವುದರಿಂದ, ಆ ವ್ಯವಸ್ಥೆಗೆ ಹಾನಿ ಮಾಡುವ ಮೂಲಕ ಆ ರಾಷ್ಟ್ರದ ಆರ್ಥಿಕ ವ್ಯವಸ್ಥೆ ಮೇಲೆ ದಕ್ಕೆ ಮಾಡುವುದು ಸಾಧ್ಯವಿದೆ.

ಅಂತರಜಾಲದಲ್ಲಿ ಅಪರಾಧಗಳ ಪ್ರಕಾರಗಳು ಮತ್ತು ಸ್ವರೂಪಗಳ ಕುರಿತು ತಿಳಿದುಕೊಳ್ಳುವುದು ಎಲ್ಲರಿಗೂ ಅವಶ್ಯಕ. ಎಷ್ಟೋ ಬಾರಿ ತಮಗೆ ಅರಿವಿಲ್ಲದೇ ಬಳಕೆದಾರರು ಅಂತರಜಾಲದಲ್ಲಿ ಅಪರಾಧವೆಸಗುತ್ತಾರೆ, ಅಥವಾ ಅಪರಾಧಗಳಲ್ಲಿ ಭಾಗಿಯಾಗುತ್ತಾರೆ. ಅಂತರಜಾಲದಲ್ಲಿ ಒಬ್ಬ ಬಳಕೆದಾರ ಮಾಡುವ ಪ್ರತಿಯೊಂದು ಕಾರ್ಯವೂ ದಾಖಲಾಗುತ್ತಿರುತ್ತದೆ ಮತ್ತು ಯಾವುದೇ ರೀತಿಯ ಅಪರಾಧವೂ ಪತ್ತೆ ಹಚ್ಚಲ್ಪಡುತ್ತದೆ. ಹಾಗಾಗಿ, ಎಚ್ಚರ ಅತ್ಯಗತ್ಯ.