ಹಲವಾರು ದೇಶಗಳಲ್ಲಿ ಲಕ್ಷಾಂತರ ಕಂಪ್ಯೂಟರಗಳ ಕಾರ್ಯಾಚರಣೆಗೆ ಅಡ್ಡಿಪಡಿಸುವ ವಾನ್ನಾ ಕ್ರೈ, ಪೆಟ್ಯಾದಂತಹ ಸೈಬರ್ ದಾಳಿಗಳು ನೆಡೆದಾಗ, ನಮ್ಮನ್ನು ಕಾಡುವ ಪ್ರಶ್ನೆ, ಇವುಗಳನ್ನು ತಡೆಯಲು ಸಾಧ್ಯವಿಲ್ಲವೇ?
ಸುಮಾರು 9-10 ವರ್ಷಗಳ ಹಿಂದೆ ದಿನಕ್ಕೆ ಸರಾಸರಿ 200 ಸೈಬರ್ ದಾಳಿಯ ಪ್ರಯತ್ನಗಳು ನೆಡೆಯುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ದಿನಕ್ಕೆ 4,00,000ಕ್ಕೂ ಹೆಚ್ಚು ಸೈಬರ್ ದಾಳಿಯ ಪ್ರಯತ್ನಗಳು ನೆಡೆಯುತ್ತಿವೆ. ಅಂದರೆ ನಿಮಿಷಕ್ಕೆ ಸುಮಾರು 277 ಸೈಬರ್ ದಾಳಿಯ ಪ್ರಯತ್ನಗಳು ನೆಡೆಯುತ್ತಿವೆ..
ಬ್ಯಾಂಕಿನ ಖಾತೆಯಿಂದ ಹಣ ಕದಿಯುವುದು, ಕ್ರೆಡಿಟ್/ಡೆಬಿಟ್ ಕಾರ್ಡ ದುರ್ಬಳಕೆ, ಇ-ಮೇಲ್ ದುರ್ಬಳಕೆ, ವೈರಸ್, ವರ್ಮ, ಟ್ರೋಜಾನ್ಗಳನ್ನು ಅಭಿವೃದ್ಧಿ ಪಡಿಸಿ ಅವುಗಳನ್ನು ಅಂತರಜಾಲ ಮತ್ತು ನೆಟ್ವರ್ಕ್ಗಳ ಮೂಲಕ ಹರಡುವಂತೆ ಮಾಡುವುದು, ಅಂತರಜಾಲ ತಾಣ ಮತ್ತು ಅನ್ವಯಿಕ ತಂತ್ರಾಂಶಗಳನ್ನು ಹ್ಯಾಕ್ ಮಾಡುವುದು – ಹೀಗೆ ನೆಡೆಯುತ್ತಿದ್ದ ಸೈಬರ್ ಅಪರಾಧಗಳು, ಈಗ ದೇಶವೊಂದರ ಟಿವಿ, ದೂರವಾಣಿ, ವಿದ್ಯುತ್, ವಿಮಾನ ನಿಲ್ದಾಣ, ಮೆಟ್ರೋ, ಅಣುವಿದ್ಯುತ್ ಸ್ಥಾವರ, ಬೃಹತ್ ಉದ್ಯಮಗಳು, ಬಂದರುಗಳು, ಸರಕು ಸಾಗಾಣಿಕೆ ವ್ಯವಸ್ಥೆ, ಪೋಲಿಸ್ ಮತ್ತು ಮಿಲಿಟರಿ ವ್ಯವಸ್ಥೆಯ ಕಾರ್ಯಾಚರಣೆಯನ್ನು ವಿಫಲಗೊಳಿಸುವಷ್ಟು ಬೃಹದಾಕಾರವಾಗಿ ಬೆಳೆದಿವೆ. ಅನುಭವಿ ಸೈಬರ್ ತಂತ್ರಜ್ಞರನ್ನು ಬಳಸಿಕೊಂಡು, ಅತ್ಯಂತ ವ್ಯವಸ್ಥಿತವಾಗಿ ಸೈಬರ್ ದಾಳಿಗಳನ್ನು ರೂಪಿಸುತ್ತಾರೆ ಮತ್ತು ನೆಡೆಸುತ್ತಾರೆ.
ಇಂತಹ ಸೈಬರ್ ದಾಳಿಗಳು ಪ್ರಾರಂಭವಾದಾಗ, ಅವುಗಳನ್ನು ವಿಫಲಗೊಳಿಸುವುದು ಮತ್ತು ಅವುಗಳಿಂದಾಗುವ ನಷ್ಟವನ್ನು ನಿಯಂತ್ರಿಸುವುದು ಒಂದು ವಿಧವಾದರೆ, ಈ ದಾಳಿಗಳನ್ನು ಮಾಡಿದವರು ಯಾರು ಮತ್ತು ಅವರ ಉದ್ದೇಶಗಳೇನು ಎಂದು ತನಿಖೆ ಮಾಡಲು ಸೈಬರ್ ವಿಧಿವಿಜ್ಞಾನ ಬಳಸುವುದು ಮತ್ತೊಂದು ವಿಧ. ಈಗ ಸೈಬರ್ ದಾಳಿ ಆಗುವ ಮೊದಲೇ ಮುನ್ಸೂಚನೆ ನೀಡುವ ತಂತ್ರಾಂಶಗಳ ಅಭಿವೃದ್ಧಿ ನೆಡೆದಿದೆ. ಈ ಮೂರು ವಿಧಾನಗಳಲ್ಲಿ ಅನೆಲೆಟಿಕ್ಸ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಡೇಟಾ ಮೈನಿಂಗ್, ಡೇಟಾ ಮೇಲ್ವಿಚಾರಣೆ, ಮುನ್ಸೂಚನೆ ವರದಿಗಳು, ಮೆಷೀನ್ ಲರ್ನಿಂಗ್, ಹೀಗೆ ಅನೆಲೆಟಿಕ್ಸ್ನ ವ್ಯಾಪ್ತಿ ವಿಶಾಲವಾಗಿದೆ. ಸೈಬರ್ ಸುರಕ್ಷತೆಯ ವಿಷಯದಲ್ಲಿ ಅನೆಲೆಟಿಕ್ಸ್ ನ್ನು ವಿವಿಧ ಮೂಲಗಳಿಂದ ಮತ್ತು ವಿವಿಧ ಸ್ವರೂಪದರಲ್ಲಿರುವ ಸುರಕ್ಷತೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಣೆ ಮಾಡಲು ಬಳಸಲಾಗುತ್ತದೆ. ಇದರಿಂದಾಗಿ ಸೈಬರ್ ಅಪರಾಧದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅಗತ್ಯವಾದ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಸೈಬರ್ ಅಪರಾಧಗಳನ್ನು ಕುರಿತು ಮುನ್ನೆಚರಿಕೆ ನೀಡಲು, ಸೈಬರ್ ಅಪರಾಧಗಳಿಂದ ರಕ್ಷಣೆ ನೀಡಲು ಮತ್ತು ಸೈಬರ್ ದಾಳಿಯನ್ನು ನಿಗ್ರಹಿಸಲು ಅನೆಲೆಟಿಕ್ಸ್ ಉಪಯುಕ್ತವಾಗುತ್ತದೆ.
ಡೇಟಾವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ, ಅದರಿಂದ ದೊರೆಯುವ ಫಲಿತಾಂಶದ ಆಧಾರದ ಮೇಲೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ವಿಧಾನ, ತಂತ್ರಜ್ಞಾನವನ್ನು ಅನೆಲೆಟಿಕ್ಸ್ ಎಂದು ಕರೆಯಬಹುದು ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಸೈಬರ್ ಸುರಕ್ಷತೆ ಕ್ಷೇತ್ರದಲ್ಲಿ ಅನೆಲೆಟಿಕ್ಸ್ ವಿಕಸನ ಹೇಗಾಯಿತು ಎಂದು ಈಗ ತಿಳಿದುಕೊಳ್ಳೋಣ.

ಅನೆಲೆಟಿಕ್ಸ್ 1.0
ಸೈಬರ್ ಅಪರಾಧ ಅಥವಾ ಅಪರಾಧದ ಪ್ರಯತ್ನ ನೆಡೆದ ನಂತರ ಆ ಕುರಿತು ಆಂತರಿಕ ಮೂಲಗಳಿಂದ ಲಭ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸಿ, ತನಿಖೆ ನೆಡೆಸಲು ಅನೆಲೆಟಿಕ್ಸ್ ಬಳಸಲಾಗುತ್ತದೆ. ಹೀಗೆ ಮಾಡುವುದರಿಂದ, ಸೈಬರ್ ಅಪರಾಧ ನೆಡೆದಾಗ ಏನಾಯಿತು? ಈ ಅಪರಾಧ ಹೇಗಾಯಿತು? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಮಾಡಲಾಗುತ್ತದೆ. ಇಲ್ಲಿ ಬಳಸುವ ಅನೆಲೆಟಿಕ್ಸ್ ತನಿಖೆ ಮತ್ತು ತನಿಖೆಯ ನಂತರ ಅಪರಾಧ ಕುರಿತು ಸಮಗ್ರ ವಿವರಣೆಗಾಗಿ ಬಳಸುವ ಅನೆಲೆಟಿಕ್ಸ್ ತಂತ್ರಾಂಶಗಳಾಗಿರುತ್ತದೆ. ಇಂತಹ ತಂತ್ರಾಂಶವನ್ನು ಹಲವಾರು ಸಂಸ್ಥೆಗಳು ಅಭಿವೃದ್ಧಿ ಪಡಿಸಿ, ಮಾರಾಟ ಮಾಡುತ್ತಿವೆ.

ಇಲ್ಲಿ ಘಟನೆ ನೆಡೆದ ನಂತರ ತನಿಖೆ ಮತ್ತು ವಿಶ್ಲೇಷಣೆ ನೆಡೆಯುತ್ತದೆ. ಪ್ರಸಕ್ತ ಕಾಲಮಾನದಲ್ಲಿ ವಿಶ್ವಾದಂತ್ಯ ನೆಡೆಯುವ ಪ್ರತಿಯೊಂದು ಸೈಬರ್ ಅಪರಾಧ ಅಥವಾ ಪ್ರಯತ್ನದಿಂದ ಕಲಿತ ಪಾಠಗಳು ಮತ್ತು ಇವುಗಳನ್ನಾಧರಿಸಿ ಅಗತ್ಯ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅನುಕೂಲವಾಗುವ ಅನೆಲೆಟಿಕ್ಸ್ ತಂತ್ರಜ್ಞಾನ ಮತ್ತು ತಂತ್ರಾಂಶದ ಅಗತ್ಯವಿದೆ.

ಅನೆಲೆಟಿಕ್ಸ್ 2.0

ಬಿಗ್ಡೇಟಾ ಮತ್ತು ಅತೀ ವೇಗದ ನೆಟ್ವರ್ಕ್ಗಳ ಬಳಕೆ ಜನಪ್ರಿಯವಾಗುತ್ತಿದೆ. ಹೀಗಾಗಿ ಸೈಬರ್ ಅಪರಾಧ ಕುರಿತು ಅಂತರಿಕ ಮತ್ತು ಬಾಹ್ಯ ಮೂಲಗಳಿಂದ ದೊರೆಯುವ ಡೇಟಾ ಪ್ರಮಾಣವು ಹೆಚ್ಚಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ಡೇಟಾವನ್ನು ಸಂಗ್ರಹಿಸಿ, ವಿಶ್ಲೇಷಿಸಲು ಅನೆಲಿಟಿಕ್ಸ್ ತಂತ್ರಾಂಶಗಳನ್ನು ಬಳಸಲಾಗುತ್ತಿದೆ. ಇಲ್ಲಿ ಕೂಡಾ ತನಿಖೆ, ತನಿಖೆಯ ನಂತರ ಅಪರಾಧ ಕುರಿತು ಸಮಗ್ರ ವರದಿ ನೀಡುವ ಅನೆಲಿಟಿಕ್ಸ್ ಬಳಸಲಾಗುತ್ತಿದೆ.

ಅನೆಲೆಟಿಕ್ಸ್ 3.0

ಸೈಬರ್ ಅಪರಾಧ ನೆಡೆಯುವ ಮೊದಲು ಮುನ್ಸೂಚನೆ ಪಡೆಯಲು ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಹಾಯ ಮಾಡುವ ಅನೆಲೆಟಿಕ್ಸ್ ತಂತ್ರಜ್ಞಾನ ಮತ್ತು ತಂತ್ರಾಂಶಗಳು ಈಗ ಹೆಚ್ಚು ಜನಪ್ರಿಯವಾಗುತ್ತಿವೆ. ಸೈಬರ್ ಅಪರಾಧ ನೆಡೆಯುವ ಮೊದಲು ಇಂತಹ ಅಪರಾಧ ನೆಡೆಯಬಹುದು ಎಂದು ತಿಳಿಯಲು, ಬಿಗ್ಡೇಟಾ ಜೊತೆಯಲ್ಲಿ ಮೆಷೀನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್ ಬಳಸುವುದರಿಂದಾಗಿ, ಸೈಬರ್ ಅಪಾಯದ ಮುನ್ಸೂಚನೆ ಪಡೆಯಲು ಮತ್ತು ಇಂತಹ ಅಪಾಯ ಎದುರಾದಾಗ ಹೇಗೆ ಅದನ್ನು ಸಮರ್ಥವಾಗಿ ಎದುರಿಸಬೇಕು ಎಂದು ತಿಳಿಯಲು ಸಾಧ್ಯವಾಗುತ್ತಿದೆ. ಇಂತಹ ಅನೆಲೆಟಿಕ್ಸ್ ತಂತ್ರಜ್ಞಾನ ಮತ್ತು ತಂತ್ರಾಂಶಗಳನ್ನು ಈಗ ರಾನ್ಸಮ್ವೇರ್, ಬಾಟ್ನೆಟ್ ಮತ್ತು ಮುಂದುವರೆದ ಮಾಲ್ವೇರ್ ರೀತಿಯ ಸೈಬರ್ ದಾಳಿಗಳಿಗಾಗಿ ಬಳಸಲಾಗುತ್ತಿದೆ.

ವಿವಿಧ ರೀತಿಯ ಅನೆಲೆಟಿಕ್ಸ್ ತಂತ್ರಾಂಶಗಳು:
1) ವಿವರಣೆ ಕೇಂದ್ರಿಕೃತ ಅನೆಲೆಟಿಕ್ಸ್ ( ಡಿಸ್ಕ್ರಿಪ್ಟಿವ್ ಅನೆಲೆಟಿಕ್ಸ್)

ಸೈಬರ್ ಅಪರಾಧ ಪೂರ್ವದ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಲು ಮತ್ತು ಅಪರಾಧ ಹೇಗೆ ನೆಡೆಯಿತು, ಆ ಸಂದರ್ಭದಲ್ಲಿ ಏನು ಘಟನೆಗಳು ನೆಡೆದವು ಎಂದು ತಿಳಿದುಕೊಳ್ಳಲು ಹಾಗೂ ಮುಂದಿನ ಹಂತದ ವಿಶ್ಲೇಷಣೆಗೆ ಅಗತ್ಯವಾದ ಮಾಹಿತಿಯನ್ನು ಸಿದ್ಧಪಡಿಸಲು ಈ ಅನೆಲೆಟಿಕ್ಸ್ ತಂತ್ರಾಂಶಗಳನ್ನು ಬಳಸಲಾಗುತ್ತದೆ.

2) ತನಿಖೆ ಕೇಂದ್ರಿಕೃತ ಅನೆಲೆಟಿಕ್ಸ್ ( ಡಯಾಗ್ನಾಸ್ಟಿಕ್ ಅನೆಲೆಟಿಕ್ಸ್)

ಡೇಟಾ ಮೈನಿಂಗ್, ಡೇಟಾ ಡಿಸ್ಕವರಿ ಮೊದಲಾದ ವಿಧಾನಗಳನ್ನು ಬಳಸಿ, ಸೈಬರ್ ಅಪರಾಧ ಏಕೆ ಆಯಿತು ಎಂದು ತಿಳಿದುಕೊಳ್ಳಲು ಈ ಅನೆಲೆಟಿಕ್ಸ್ ತಂತ್ರಾಂಶಗಳನ್ನು ಬಳಸಲಾಗುತ್ತದೆ.

3) ಮುನ್ಸೂಚನೆ ಕೇಂದ್ರಿಕೃತ ಅನೆಲೆಟಿಕ್ಸ್ ( ಪ್ರೆಡೆಕ್ಟಿವ್ ಅನೆಲೆಟಿಕ್ಸ್)

ಸೈಬರ್ ಅಪರಾಧ ಕುರಿತು ಮುನ್ಸೂಚನೆ ಪಡೆಯಲು ಈ ಅನೆಲೆಟಿಕ್ಸ್ ಬಳಸಲಾಗುತ್ತದೆ. ಈ ಮೊದಲು ನೆಡೆದಿರುವ ಲಕ್ಷಾಂತರ ಸಂಖ್ಯೆಯ ಸೈಬರ್ ಅಪರಾಧಗಳು ಮತ್ತು ಅಪರಾಧ ಯತ್ನಗಳ ಮಾಹಿತಿಯನ್ನು ವಿವರಣೆ ಕೇಂದ್ರಿಕೃತ ಅನೆಲೆಟಿಕ್ಸ್ ಮತ್ತು ತನಿಖೆ ಕೇಂದ್ರಿಕೃತ ಅನೆಲೆಟಿಕ್ಸ್ ತಂತ್ರಾಂಶಗಳನ್ನು ಬಳಸಿ ಅದ್ಯಯನ ಮಾಡಲಾಗುತ್ತದೆ. ನಂತರ ಮುನ್ಸೂಚನೆ ಕೇಂದ್ರಿಕೃತ ಅನೆಲೆಟಿಕ್ಸ್ ತಂತ್ರಾಂಶಗಳನ್ನು ಬಳಸಿ ಯಾವ ರೀತಿಯ ಸೈಬರ್ ಅಪರಾಧಗಳು ನೆಡೆಯಬಹುದು ಎಂದು ತಿಳಿದುಕೊಳ್ಳಲು ಸಹಾಯಕವಾಗುತ್ತದೆ.

4) ಪರಿಹಾರ ಕೇಂದ್ರಿಕೃತ ಅನೆಲೆಟಿಕ್ಸ್ ( ಪ್ರಿಸಕ್ರಿಪ್ಟೀವ್ ಅನೆಲೆಟಿಕ್ಸ್)

ಮುನ್ಸೂಚನೆ ಕೇಂದ್ರಿಕೃತ ಅನೆಲೆಟಿಕ್ಸ ಸಂಭವನೀಯ ಸೈಬರ್ ಅಪರಾಧಗಳನ್ನು ಕುರಿತು ನೀಡಿದ ಮಾಹಿತಿಯನ್ನು ಬಳಸುವ ಪರಿಹಾರ ಕೇಂದ್ರಿಕೃತ ಅನೆಲೆಟಿಕ್ಸ್ ತಂತ್ರಾಂಶಗಳು ಸಂಭವನೀಯ ಸೈಬರ್ ಅಪರಾಧ ಅಥವಾ ಅಪರಾಧ ಪ್ರಯತ್ನಗಳು ಯಾವ ರೀತಿ ಆಗುತ್ತವೆ ಎಂದು ವಿವರಣೆ ನೀಡುತ್ತವೆ. ಇದನ್ನು ಬಳಸಿ ಸೂಕ್ತ ಸೈಬರ್ ಸುರಕ್ಷತಾ ಕ್ರಮಗಳನ್ನು ಸೈಬರ್ ತಂತ್ರಜ್ಞರು ಕೈಗೊಳ್ಳುತ್ತಾರೆ.
ಅನೆಲೆಟಿಕ್ಸ್ 3.0 ರಲ್ಲಿ ಮೆಷೀನ್ ಲರ್ನಿಂಗ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮುನ್ಸೂಚನೆ ಕೇಂದ್ರಿಕೃತ ಅನೆಲೆಟಿಕ್ಸ್ ಮತ್ತು ಪರಿಹಾರ ಕೇಂದ್ರಿಕೃತ ಅನೆಲೆಟಿಕ್ಸ್ ತಂತ್ರಾಂಶಗಳ ಜೊತೆಯಲ್ಲಿ ಆಟೋಮೇಷನ್ ವಿಧಾನ ಬಳಸುವುದರಿಂದ, ಸೈಬರ್ ಅಪರಾಧ ಕುರಿತು ಹೊಸ ಡೇಟಾ – ಅಂತರಿಕ ಮೂಲಗಳಿಂದ ಅಥವಾ ಬ್ಯಾಹ್ಯ ಮೂಲಗಳಿಂದ, ದೊರೆತಾಗ ಅದನ್ನು ವಿಶ್ಲೇಷಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮೆಷೀನ್ ಲರ್ನಿಂಗ್ ನಲ್ಲಿ ಸಾಧ್ಯವಾಗುತ್ತದೆ. ಹೀಗಾಗಿ ದಿನಕ್ಕೆ 4,00,000ಕ್ಕೂ ಅಧಿಕ ಸೈಬರ್ ಅಪರಾಧ ಯತ್ನಗಳು ನೆಡೆದರೂ, ಅನೆಲೆಟಿಕ್ಸ್ 3.0 ನಿಂದ ಸೂಕ್ತ ಸೈಬರ್ ಸುರಕ್ಷತೆ ಒದಗಿಸಲು ಸಾಧ್ಯವಾಗುತ್ತದೆ.

ಸೈಬರ್ ಸುರಕ್ಷತೆಯಲ್ಲಿ ಅನೆಲೆಟಿಕ್ಸ್ ಬಳಸುವುದರಿಂದ ಭಾರತಕ್ಕೆ ಆಗುವ ಪ್ರಯೋಜನಗಳೇನು? :
ವಿಶ್ವದ ಹಲವಾರು ದೇಶಗಳಂತೆ, ಭಾರತದ ಮೇಲೆ ನಿರಂತರವಾಗಿ ನೆಡೆಯುತ್ತಿರುವ ಗಂಭೀರ ಸ್ವರೂಪದ ಸೈಬರ್ ದಾಳಿಗಳು ಮತ್ತು ದೇಶದ ಒಳಗೆ ಮತ್ತು ಹೊರಗೆ ನೆಡೆಯುತ್ತಿರುವ ಸೈಬರ್ ಅಪರಾಧಗಳನ್ನು ಸಮರ್ಥವಾಗಿ ಎದುರಿಸಲು ಇಂತಹ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದೆ. ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ನಮ್ಮ ದೇಶದಲ್ಲಿ ಹೆಚ್ಚಾಗಿದೆ ಆದರೆ ಸೈಬರ್ ಸುರಕ್ಷತೆ ಕುರಿತು ಎಲ್ಲಾ ಬಳಕೆದಾರರಲ್ಲಿ ಅರಿವು ಮೂಡಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ಐ.ಓ.ಟಿಯಂತಹ ತಂತ್ರಜ್ಞಾನಗಳ ಬಳಕೆ ಭಾರತದಲ್ಲಿ ಜನಪ್ರಿಯವಾಗಲಿದೆ. ಅವುಗಳಿಗೆ ಬೇಕಾದ ಸೈಬರ್ ಸುರಕ್ಷತೆ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸಲು ಪ್ರಾರಂಭಿಸಬೇಕಾಗಿದೆ.
ಸೈಬರ್ ಸುರಕ್ಷತೆಯಲ್ಲಿ ಬೇರೆ ದೇಶಗಳೊಡನೆ ಸೇರಿ ಭಾರತ ಕೆಲಸ ಮಾಡಬೇಕಾಗುತ್ತದೆ. ಹೀಗಾದಾಗ ಉನ್ನತ ತಂತ್ರಜ್ಞಾನವನ್ನು ಬಳಸುವ ದೇಶಗಳಂತೆ ನಾವು ಕೂಡಾ ಇಂತಹ ತಂತ್ರಜ್ಞಾನಗಳನ್ನು ಬಳಸುವುದು ಅಗತ್ಯವಾಗಿದೆ. ಸೈಬರ್ ದಾಳಿ ಕುರಿತು ಮಾಹಿತಿ ವಿನಿಮಯ, ಸಂಘಟಿತ ಹೋರಾಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸೈಬರ್ ದಾಳಿಗಳನ್ನು ಎದುರಿಸುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಬಹುದಾಗಿದೆ.
ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಖ್ಯಾತಿ ಪಡೆದಿರುವ ಭಾರತದಲ್ಲಿ ಉನ್ನತ ಸೈಬರ್ ತಂತ್ರಜ್ಞಾನದಲ್ಲಿ ಕೆಲಸ ಮಾಡಲು ವಿಫುಲ ಅವಕಾಶಗಳಿವೆ. ಇದಕ್ಕೆ ಅಗತ್ಯವಾದ ತರಬೇತಿ ಮತ್ತು ಮಾರ್ಗದರ್ಶನವನ್ನು ಆಸಕ್ತ ಮತ್ತು ಅರ್ಹ ಯುವಕ-ಯುವತಿಯರಿಗೆ ನೀಡಲು ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮ ಜೊತೆಗೊಡಿ ಕೆಲಸ ಮಾಡಬೇಕಾಗಿದೆ. ಸೈಬರ್ ಸುರಕ್ಷತೆಯಲ್ಲಿ ಅನೆಲೆಟಿಕ್ಸ್ ಬಳಕೆ ಜನಪ್ರಿಯವಾದಂತೆ, ಭಾರತಕ್ಕೆ ಹೊಸ ಉದ್ಯೋಗ ಸೃಷ್ಟಿ ಮತ್ತು ನವೋದ್ಯಮಗಳ ಸ್ಥಾ ಪನೆ ಸಾಧ್ಯವಾಗುತ್ತದೆ.

ಉದಯ ಶಂಕರ ಪುರಾಣಿಕ