ಸೊಂಡೂರಿನಲ್ಲಿ ರೈತರು ಭೂಮಿಗಾಗಿ ಹೋರಾಟ ಮಾಡಿ ಇಲ್ಲಿಗೆ ಮೂವತ್ನಾಲ್ಕು ವರ್ಷ. ಭೂಮಿ ಪಡೆದು ಹೊಲದಲ್ಲಿ ಮೈನಿಂಗ್‌ ಕಲ್ಲು ಇರುವವರು ತಾವು ಸ್ವತಃ ಮೈನಿಂಗ್‌ ವ್ಯಾಪಾರ ಮಾಡಿಯೋ, ಗಣಿಧನಿಗಳಿಗೆ ಗುತ್ತಿಗೆ ಕೊಟ್ಟೋ ಸುಖವಾಗಿದ್ದಾರೆ. ಇನ್ನು ಮೈನಿಂಗ್‌ ಕಲ್ಲು ಇರದ ಕೃಷಿಯನ್ನು ಮಾತ್ರ ನಂಬಿದವರು ಕೃಷಿ ಮಾಡುತ್ತ ಬಾರದ ಮಳೆಯನ್ನು, ಮೇಲೇಳದ ಬೆಳೆಯನ್ನೂ ಕಂಡು ಭೂಮಿ ಯಾಕಾದರೂ ಸಿಕ್ತೋ ಅನ್ನುವ ದಯನೀಯ ಸ್ಥಿತಿಯಲ್ಲಿದ್ದಾರೆ. ಇನಾಮು ಭೂಮಿ ಇಲ್ಲದೆ, ಇತರರಿಗೆ ಭೂಮಿ ಕೊಡಿಸಲಿಕ್ಕಾಗಿ ಹೋರಾಟದಲ್ಲಿ ಭಾಗವಹಿಸಿದ ಕೆಲವು ಹೋರಾಟಗಾರರು ಶೋಚನೀಯವಾಗಿ ಬದುಕುತ್ತಿದ್ದಾರೆ. ಇವರ ಈ ಬದುಕಿಗೆ ‘ಕುಮಾರಸ್ವಾಮಿ ಭೂಮಿಗಾಗಿ ಹೋರಾಟ ಮಾಡಿದ್ರಿಂದ ದೇವರ ಶಾಪ ಅವರಿಗೆ ತಟ್ಟಿದೆ’ ಎನ್ನುವವರೂ ಇದ್ದಾರೆ. ಸ್ವತಃ ಅವರೇ ‘ಯಾಕಾದ್ರೂ ಹೋರಾಟ ಮಾಡಿದೆವೋ. ನಮಿಗೆ ಒಳ್ಳೇದಾಗ್ಲಿಲ್ಲ’ ಎನ್ನುತ್ತಾರೆ. ಇದು ಒಂದು ಹೋರಾಟ ಉಂಟು ಮಾಡಿದ ಪರಿಣಾಮಗಳ ಈ ಹೊತ್ತಿನ ಚಿತ್ರ. ಇದರ ಮೂಲಕ ಒಂದು ಹೋರಾಟವನ್ನು ಹೇಗೆ ಅರ್ಥಮಾಡಿಕೊಳ್ಳುವುದು? ವರ್ತಮಾನದ ಕಣ್ಣೋಟದಿಂದ ಭೂತವನ್ನು ಕಾಣುವಾಗ ಅವೆರಡರ ಮುಖಾಮುಖಿಯನ್ನು ಅರ್ಥೈಸುವ ವಿಧಾನ ಯಾವುದು? ಎನ್ನುವ ಪ್ರಶ್ನೆಗಳು ಎದುರಾಗುತ್ತವೆ.

ಹಾಗೆ ನೋಡಿದರೆ ಭೂಮಿಗಾಗಿ ರೈತರು ಮಾಡಿದ ಹೋರಾಟಗಳಿಗೆ ಕರ್ನಾಟಕದಲ್ಲಿ ಒಂದು ಪರಂಪರೆಯೇ ಇದೆ. ೧೬೮೩ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ ಎದುರು ಭೂತೆರಿಗೆಯ ಹೇರಿಕೆ ವಿರೋಧಿಸಿ ನಡೆದ ಹೋರಾಟದಿಂದ, ಈಗಿನ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಪ್ರೀಂಕೋರ್ಟಿನ ತೀರ್ಪನ್ನು ವಿರೋಧಿಸುವವರೆಗೆ ಅದರ ಹರವು ದೊಡ್ಡದು. ಮೊದಲ ಹಂತದ ಹೋರಾಟಗಳು ಭೂಮಿಯ ತೆರಿಗೆ, ಕಂದಾಯ, ಗೇಣಿಯನ್ನು ವಿರೋಧಿಸಿ ನಡೆದವು. ೧೯೪೭ರ ಈಚೆಗೆ ಭೂಮಿಯನ್ನು ಪಡೆಯುವ ಹಕ್ಕಿಗಾಗಿ, ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಉಳುವವನೆ ಭೂಒಡೆಯ ಎನ್ನುವ ನೆಲೆಯಲ್ಲಿ ಹೋರಾಟಗಳಾದವು. ಆ ಹೊತ್ತಿಗಾಗಲೆ ಭಾರತದ ಇತರೆ ಕಡೆಗಳಲ್ಲಿ ಆದ ಮಾಪಿಳ್ಳೆ ದಂಗೆಗಳು, ಬಾರ್ಡೋಲಿ ಸತ್ಯಾಗ್ರಹ, ವಾರಲಿ ಆದಿವಾಸಿಗಳ ಹೋರಾಟ, ಆಂಧ್ರದ ತೆಲಂಗಾಣ ಹೋರಾಟಗಳ ಪರಿಣಾಮ ಕರ್ನಾಟಕದ ರೈತ ಹೋರಾಟಗಳ ಮೇಲಾಗಿತ್ತು. ಭೂಮಾಲಿಕಶಾಹಿಯನ್ನು ನಾಶಗೊಳಿಸಬೇಕೆಂಬ ಕಮ್ಯುನಿಷ್ಟರು, ಆರ್ಥಿಕ ಸ್ವಾತಂತ್ರ್ಯದ ಮೂಲಕ ಸಮಾಜವಾದಿ ಸಮಾಜ ನಿರ್ಮಿಸಬೇಕೆಂಬ ಸೋಷಲಿಸ್ಟರು, ರೈತರ ಬಗ್ಗೆ ಆಳುವ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ರೈತ ಸಂಘದವರು ಬೇರೆ ಬೇರೆ ಆಯಾಮಗಳಲ್ಲಿ ರೈತ ಹೋರಾಟಗಳನ್ನು ರೂಪಿಸಿದರು.

‘ಕಮ್ಯುನಿಸ್ಟರಾಗಲಿ ಅಥವಾ ಸಮಾಜವಾದಿಗಳಾಗಲಿ ಪರಿಣಾಮಕಾರಿಯಾದ ರೈತ ಚಳುವಳಿಯನ್ನು ಸಂಘಟಿಸುವಲ್ಲಿ ವಿಫಲರಾಗಿದ್ದಾರೆ. ಕಮ್ಯುನಿಸ್ಟರು ವಿಫಲರಾಗಿರುವುದು ರೈತ ಚಳುವಳಿಯನ್ನು ತಪ್ಪಾಗಿ ಅರ್ಥೈಸಿರುವುದರಿಂದ ಹಾಗೂ ಸೋಷಲಿಸ್ಟರು ವಿಫಲವಾಗಿರುವುದು ಸಂಘಟನಾ ನ್ಯೂನ್ಯತೆಗಳಿಂದ’ ಎಂದು ಸಮಾಜವಾದಿ ನಾಯಕರಲ್ಲಿ ಒಬ್ಬರಾದ ಕಿಶನ್‌ಪಟ್ಯಾಯಕ್‌ ಹೇಳುತ್ತಾರೆ. ಹಾಗೆಯೆ ಸಮಾಜವಾದಿ ಲೇಖಕರಾದ ಪಿ.ಲಂಕೇಶ್‌ ಅವರು ‘ಭೂಸುಧಾರಣೆ ಪ್ರಮಾಣಿಕವಾಗಿ ಜಾರಿಗೆ ಬಂದಿದೆ ಎಂದು ಇಟ್ಟುಕೊಂಡರೂ, ಕರ್ನಾಟಕದಲ್ಲಿ ಅವಿಭಕ್ತ ಕುಟುಂಬಗಳು, ಬೇನಾಮಿ ಸ್ವಾಮ್ಯ ಇತ್ಯಾದಿಗಳಿಂದಾಗಿ ದೊಡ್ಡ ಹಿಡುವಳಿದಾರ ರೈತರಿದ್ದಾರೆ. ಬಹುಸಂಖ್ಯಾತ ರೈತರು ಅಷ್ಟಿಷ್ಟು ಜಮೀನಿನ ಒಡೆತನ ಹೊಂದಿದ್ದಾರೆ. ಹಳ್ಳಿಯ ಸಂದರ್ಭದಲ್ಲಿ ಭೂಸ್ವಾಮ್ಯ ಪಡೆದ ರೈತರು ಇತರಿಗಿಂತ ಸ್ವಲ್ಪ ನೆಮ್ಮದಿ ಮತ್ತು ಪ್ರಭಾವ ಹೊಂದಿದವರು. ಹಳ್ಳಿಯಲ್ಲಿ ಶಿಕ್ಷಣ ಪಡೆದು ನಗರದತ್ತ ಹೋದ ಬಹುಪಾಲು ಹುಡುಗರು ಕೂಡ ಇಂಥ ರೈತ ಕುಟುಂಬದವರು. ಈ ರೈತ ಕುಟುಂಬದವರೇ ರಾಜಕೀಯರಾಗಿ ಕೂಡ ಸ್ಥಾನಮಾನಗಳನ್ನು ಗಳಿಸಿರುವವರು. ಇವತ್ತು ರೈತರು ತಮ್ಮ ಸಂಘಗಳನ್ನು ರೂಪಿಸಿಕೊಂಡು ಸರ್ಕಾರದ ಎದುರು ನಿಂತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅದಕ್ಕೆ ಕಾರಣ ಕೂಡ ಭೂಸ್ವಾಮ್ಯ ಹೊಂದಿದ ರೈತರ ಸ್ಥಿತಿವಂತಿಕೆ’ ಎನ್ನುತ್ತಾರೆ. ಈ ಇಬ್ಬರ ಮಾತುಗಳು ಕರ್ನಾಟಕದ ಭೂಹೋರಾಟಗಳನ್ನು ಅರ್ಥಮಾಡಿಕೊಳ್ಳಲು ಮುಖ್ಯ ಒಳನೋಟಗಳನನು ಕೊಡುತ್ತವೆ. ಈ ಹೊತ್ತಿನಲ್ಲಿ ರೈತ ಹೋರಾಟವನ್ನು ಅಧ್ಯಯನ ಮಾಡುವುದೆಂದರೆ ಭೂತದ ಮೂಲಕ ವರ್ತಮಾನವನ್ನು ಕಟ್ಟಿಕೊಳ್ಳುವ ಕಾಣ್ಕೆಗಳನ್ನು ಪಡೆಯುವುದು ಅಂದೇ ಅರ್ಥ. ನಡೆದಿದೆ ಎನ್ನಲಾಗುವ ಭೂಹೋರಾಟದ ಕಥನ ವರ್ತಮಾನದ ಕಥನವು ಕೂಡ.

ಸೊಂಡೂರು ಒಂದು ಸ್ವತಂತ್ರ ಸಂಸ್ಥಾನ. ಜನರು ರಾಜರ ನೇರ ಆಳ್ವಿಕೆಗೆ ಒಳಪಟ್ಟಿದ್ದರು. ೧೯೪೭ರ ನಂತರವೂ ಈ ಆಳ್ವಿಕೆ ಬೇರೆಯದೇ ಸ್ವರೂಪದಲ್ಲಿ ಮುಂದುವರೆಯಿತು. ೧೫,೦೦೦ ಎಕರೆಯಷ್ಟು ಸಾರ್ವಜನಿಕ ಭೂಮಿಯನ್ನು ರಾಜಸಂಸ್ಥಾನ ವಶಪಡಿಸಿಕೊಂಡಿತು. ರೈತರು ಈ ಭೂಮಿಗೆ ಇಂತಿಷ್ಟು ಗೇಣಿ ನೀಡಿ ಸಾಗುವಳಿ ಮಾಡುತ್ತಿದ್ದರು. ಅದು ೧೯೭೩ರವರೆಗೂ ಮುಂದುವರಿದಿತ್ತು. ಈ ನಡುವೆ ರಾಜಶಾಹಿಯನ್ನು ವಿರೋಧಿಸಿ ಜನರ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರಜಾಪ್ರಭುತ್ವ ಸರ್ಕಾರದೊಂದಿಗೆ ‘ರಾಜರು’ ವಿಲೀನಗೊಂಡಿದ್ದರಿಂದ ಅವುಗಳು ಶಕ್ತಿಕಳೆದುಕೊಂಡವು. ಹೀಗಿದ್ದೂ ಮೊದಲ ಬಾರಿಗೆ ಇನಾಮು ಭೂಮಿಯ ಹಕ್ಕಿಗಾಗಿ ೧೯೭೩ರಲ್ಲಿ ರೈತರ ಹೋರಾಟ ನಡೆಯಿತು. ಸೋಷಲಿಸ್ಟ್‌ ಪಾರ್ಟಿ ಈ ಹೋರಾಟದ ನಾಯಕತ್ವ ವಹಿಸಿತು. ೪೬ ದಿನಗಳ ಸುದೀರ್ಘ ಹೋರಾಟದಿಂದ ಇನಂ ರದ್ದಾಯಿತು. ಈ ಹೋರಾಟವು ಹಲವು ಸಂಘರ್ಷಗಳ ಫಲವಾಗಿತ್ತು. ೧೯೪೭ಕ್ಕೂ ಮುಂಚೆ ರಾಜರ ಆಡಳಿತ ಅನುಭವಿಸಿದ ಜನ, ಆನಂತರ ಪ್ರಜಾಪ್ರಭುತ್ವ ಸರ್ಕಾರಕ್ಕೂ ಒಗ್ಗಿಕೊಳ್ಳತೊಡಗಿದ್ದರು. ಈ ಎರಡು ಸ್ಥಿತಿಗಳ ಆಕರ್ಷಣೆ ಹಾಗೂ ವಿಕರ್ಷಣೆಯ ಗುಣಗಳು ಹೋರಾಟವನ್ನು ಪ್ರಭಾವಿಸಿದವು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕ ಸ್ವಾತಂತ್ರ್ಯ ಪಡೆಯಬೇಕೆಂಬ ಕನಸಿನ ಸೋಷಲಿಸ್ಟ್‌ ಪಾರ್ಟಿ, ಈ ದೇಶದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎನ್ನುವ ಕಾಂಗ್ರೆಸ್‌ ಸರ್ಕಾರ- ಈ ಬಗೆಯ ಆದರ್ಶ ವ್ಯಾಖ್ಯಾನಗಳ ನಿಜದ ಮುಖಾಮುಖಿಯಾಗಿ ಈ ಹೋರಾಟವನ್ನು ಕಾಣಬಹುದು. ‘ತಾತ್ವಿಕವಾಗಿ ರಾಜಪ್ರಭುತ್ವದ ನಾಶಕ್ಕಾಗಿ, ಭೂಮಿಯ ಮೇಲಿನ ಹಕ್ಕಿಗಾಗಿ, ನಡೆದ ಹೋರಾಟ ಭೂಮಿಯನ್ನು ಪಡೆದ ನೆಪದಲ್ಲಿ, ಜನತಾಂತ್ರಿಕ ವ್ಯವಸ್ಥೆಯೊಳಗೆ ಪ್ರಭುತ್ವದ ಹೊಸರೂಪಕ್ಕೆ ಕಾರಣವಾಯಿತು’ ಎಂದು ಹೋರಾಟವನ್ನು ವ್ಯಾಖ್ಯಾನಿಸಬಹುದು. ೭೦ರ ದಶಕದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪರಿಸರವನ್ನು ಈ ಹೋರಾಟದಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿದೆ.

ಸೊಂಡೂರು ಸಂಸ್ಥಾನದ ಬಗ್ಗೆ ಅಧ್ಯಯನ ಮಾಡಲೆಂದು ಈ ಭಾಗದವರೊಬ್ಬರು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿಗೆ ನೊಂದಾಯಿಸಿ, ರಾಜರ ಬಗೆಗೆ ಬರೆಯುವುದು ಕಷ್ಟ ಎಂದು ನೊಂದಾವಣಿಯನ್ನು ರದ್ದುಗೊಳಿಸಿದ್ದರು. ಕ್ಷೇತ್ರಕಾರ್ಯದ ಸಂದರ್ಭದಲ್ಲಿಯೂ ರಾಜರ ವಿರುದ್ಧ ಆದ ಹೋರಾಟವನ್ನು ಹೇಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹಾಗೆಯೇ ಈ ಅಧ್ಯಯನ ಮಾಡುವ ಬಗ್ಗೆಯೂ ಭಯವನ್ನು ಹುಟ್ಟಿಸಿದರು. ಇನ್ನು ಮಹಾರಾಜರ ಕರಕುಶಲ ಕೇಂದ್ರ, ಅರಮನೆ ಮುಂತಾದ ಕಡೆ ಒಂದು ಛಾಯಾಚಿತ್ರ ತೆಗೆಯಲು ಸೆಕ್ಯುರಿಟಿ ಗಾರ್ಡ್‌ಗಳು ಅವಕಾಶ ಮಾಡಿಕೊಡಲಿಲ್ಲ. ಇದೆಲ್ಲವೂ ಒಂದು ಕಾಲದ ರಾಜ ಪ್ರಭುತ್ವನ್ನು ಅಧ್ಯಯನ ಮಾಡುವವರು ಎದುರಿಸಬೇಕಾದ ವಾಸ್ತವಿಕ ಸಮಸ್ಯೆಗಳಾಗಿವೆ. ಹಾಗೆಯೆ ರಾಜರ ಪ್ರಭಾವವು ಈ ಹೊತ್ತಿನಲ್ಲಿಯೂ ಹೇಗೆ ಜನರಲ್ಲಿ ಉಳಿದಿದೆ ಎನ್ನುವದಕ್ಕೆ ಸಾಕ್ಷಿ ಕೂಡ. ಇನ್ನು ಕೆಲವರು ‘ಇಲ್ಲಿ ಹೋರಾಟವೆ ನಡೆದಿಲ್ಲ. ಯಾರೋ ಬೆಂಗಳೂರಿನ ಕೆಲ ಕಿಡಿಗೇಡಿಗಳು ಬಂದು ಗದ್ದಲ ಮಾಡಿದರು’ ಎನ್ನುವವರು ಇದ್ದಾರೆ. ೧೯೭೩ರಲ್ಲಿ ನಡೆದ ಹೋರಾಟವನ್ನು ಅಧ್ಯಯನ ಮಾಡಹೊರಟಾಗ ಎದುರಾದ ಚಿತ್ರಗಳಿವು. ರಾಜರ ಬಗೆಗಿರುವ ಈ ಬಗೆಯ ಮನಸ್ಥಿತಿ ಭಯದ್ದೋ, ಆತಂಕದ್ದೋ, ಗೌರವದ್ದೋ- ಅರ್ಥಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಈ ಅಧ್ಯಯನವೇ ‘ರಾಜರ ವಿರುದ್ಧ’ ಎನ್ನುವ ಅಭಿಪ್ರಾಯಗಳು ಬಂದವು. ನಿಜವೆಂದರೆ ಒಬ್ಬ ಭೂಸ್ವಾಮಿಯ ಜತೆ ತಾನು ಉಳುವ ಭೂಮಿಯ ಮೇಲಿನ ಹಕ್ಕಿಗಾಗಿ ಸಾಮಾನ್ಯ ರೈತರು ಹೋರಾಟ ಮಾಡಿದ ಒಂದು ಸಂಘರ್ಷದ ಕಥನವಿದು.

ಭೂಹೋರಾಟಗಳನ್ನು ಅಧ್ಯಯನ ಮಾಡಹೊರಟಾಗ ಕೆಲವು ಸಿದ್ಧ ಮಾದರಿಗಳಿವೆ. ಕರ್ನಾಟಕದಲ್ಲಿ ನಡೆದ ಭೂಹೋರಾಟಗಳ ಸಂಖ್ಯೆಗೆ ಹೋಲಿಸಿದರೆ ಆ ಕುರಿತು ನಡೆದ ಅಧ್ಯಯನಗಳು ತುಂಬ ಕಡಿಮೆ. ಹೆಚ್ಚಿನವು ಮಾಹಿತಿ ಪ್ರಧಾನವಾಗಿವೆ. ಇದು ಚರಿತ್ರೆಯನ್ನು ದಾಖಲಿಸುವ ಸಾಂಪ್ರದಾಯಿಕ ಕ್ರಮ. ಹೋರಾಟದಲ್ಲಿ ಭಾಗವಹಿಸಿದವರು ಆತ್ಮಕಥನ ಮಾದರಿಯಲ್ಲಿ ನಿರೂಪಿಸುವ ಇನ್ನೊಂದು ಕ್ರಮವಿದೆ. ಅದು ಕನ್ನಡದಲ್ಲಿ ಪ್ರಯೋಗವಾದ್ದು ಕಡಿಮೆ. ಎರಡನೆಯ ಕ್ರಮದ ಮಿತಿಯೆಂದರೆ ಸ್ವವಿಮರ್ಶೆಗಿಂತ ಸ್ವಮೋಹವೆ ಹೆಚ್ಚಾಗಿರುವುದು. ಮಹಾರಾಷ್ಟ್ರದಲ್ಲಿ ಆದಿವಾಸಿಗಳ ಬದುಕಿನ ಭಾಗವಾಗಿ ಭೂಹೋರಾಟ ಸಂಘಟಿಸಿದ್ದ ಗೋದಾವರಿ ಪರುಳೇಕಾರರ ಕಥನವನ್ನು (‘ಮಾನವ ಎಚ್ಚೆತ್ತಾಗ’) ಈ ನೆಲೆಯಲ್ಲಿ ನೋಡಬಹುದು. ಮೂರನೆಯದಾಗಿ ಹೋರಾಟ ನಡೆದ ಕಾಲಘಟ್ಟದ ಆಸುಪಾಸಿನವರು ಹೋರಾಟದಲ್ಲಿ ಭಾಗವಹಿಸಿದವರನ್ನು ಸಂದರ್ಶಿಸಿ, ಪತ್ರಿಕಾ ಬರಹ, ಕರಪತ್ರ ಮುಂತಾದ ಆಕರಗಳನ್ನು ಬಳಸಿಕೊಂಡು ಒಂದು ಹೋರಾಟದ ಚರಿತ್ರೆಯನ್ನು ಕಟ್ಟುವ ಕ್ರಮ ಜನಪ್ರಿಯವಾಗಿದೆ. ಈ ನೆಲೆ ಕನ್ನಡದಲ್ಲಿ ಹೆಚ್ಚು ಬಳಕೆಯಾಗಿದೆ. ಈ ನೆಲೆಯಲ್ಲಿಯೆ ವರ್ತಮಾನದ ಎಚ್ಚರಗಳ ಮೂಲಕ ಗತವನ್ನು ಪರಿಶೀಲಿಸುವ ಒಂದು ಮಾದರಿಯಿದೆ. ಪ್ರಸ್ತುತ ಅಧ್ಯಯನವು ಅಂತಹ ಮಾದರಿಯನ್ನು ಅನುಸರಿಸಿದೆ. ಕನ್ನಡದಲ್ಲಿ ಜಿ.ರಾಜಶೇಖರ ಅವರು ‘ಕಾಗೋಡು ಸತ್ಯಾಗ್ರಹ’ ಎಂಬ ತಮ್ಮ ಕೃತಿಯಲ್ಲಿ ಈ ಪ್ರಯೋಗವನ್ನು ಮಾಡಿದ್ದಾರೆ. ಇದು ಭೂಹೋರಾಟದ ಅಧ್ಯಯನಗಳಿಗೆ ಒಂದು ಕೃತಿಯಾಗಿದೆ. ಒಂದು ಭೂ ಹೋರಾಟವನ್ನು ಅದರ ವರ್ತಮಾನದ ಪರಿಣಾಮಗಳ ಮೂಲಕ ನೋಡುವ, ಹೋರಾಟ ಸಂದರ್ಭದ ರಾಜಕೀಯ, ಸಾಂಸ್ಕೃತಿ, ಸಾಮಾಜಿಕ ಪರಿಧಿಯಲ್ಲಿಟ್ಟು ಪರೀಕ್ಷಿಸುವ, ಶುದ್ಧ ರಾಜಕೀಯ ಚರಿತ್ರೆಯ ಕಥನವನ್ನಾಗಿಸುವ, ಮಾಹಿತಿಯೊಂದಿಗೆ ಸರಿದೂರವನ್ನು ನಿರ್ಮಿಸಿಕೊಂಡು ವಿಶ್ಲೇಷಿಸುವ, ಒಂದು ಕಾಲಘಟ್ಟದ ಸಾಂಸ್ಕೃತಿಕ ಕಥನವನ್ನಾಗಿಸುವ ಮೂಲಕ ಗತ ವರ್ತಮಾನವನ್ನು ಬೆಳೆಯುವ ಸೂಕ್ಷ್ಮತೆಯಲ್ಲಿ ಒಂದು ಹೋರಾಟವನ್ನು ದಾಖಲಿಸುವ ತುರ್ತು ಈ ಕಾಲಕ್ಕಿದೆ. ಪ್ರಸ್ತುತ ಈ ಅಧ್ಯಯನವು ವರ್ತಮಾನದ ಕಣ್ಣೋಟದಿಂದ ಗತವನ್ನು ಪರಿಶೀಲಿಸುವ ಸಾಂಸ್ಕೃತಿಕ ಕಥನದ ಮಾದರಿಯನ್ನು ಅನುಸರಿಸಿದೆ.

ಒಂದು ಚರಿತ್ರೆಯಾಗಿ ಈ ಅಧ್ಯಯನ ದಾಖಲಾಗುತ್ತಿದೆ. ದಾಖಲೆಗಳನ್ನು ಮಾತ್ರ ಐತಿಹಾಸಿಕ ತಿಳುವಳಿಕೆ ಎಂಬ ‘ಆಧಾರವಾದಿ’ ಚರಿತ್ರೆಯ ವಿಧಾನವೊಂದಿದೆ. ಆದರೆ ಈ ಅಧ್ಯಯನ ಇತಿಹಾಸವೆಂಬುದು ವೈಯಕ್ತಿಕ ವ್ಯಾಖ್ಯಾನಗಳ ವ್ಯಕ್ತಿನಿಷ್ಠ ಕಲ್ಪನಾ ಪ್ರತಿಭೆ, ವಾಸ್ತವಾಂಶಗಳು ಬೆರೆತುಕೊಂಡ ಕಥನ ಕಲೆ ಹಾಗೂ ಇದೊಂದು ಭಾಷಿಕ ಸಂಕಥನ ಎನ್ನುವುದನ್ನು ತಾತ್ವಿಕ ಭ್ತಿಯಾಗಿಸಿಕೊಂಡಿದೆ. ಮಾಹಿತಿಗಳನ್ನಷ್ಟೇ ಜೋಡಿಸುತ್ತಾ ಹೋದಾಗ ಅವು ಬೆದರು ಗೊಂಬೆಗಳಂತೆ ಭಯವನ್ನು ಹುಟ್ಟಿಸುತ್ತವೆ. ಆದರೆ ಆ ಗೊಂಬೆಗಳಿಗೆ ಜೀವವಿರುವುದಿಲ್ಲ. ಬೊಂಬೆಗಳನ್ನೇ ಕಥನದ ಪಾತ್ರಗಳನ್ನಾಗಿಸಿ, ಸೂತ್ರ ಹಿಡಿದು ಆಡಿಸುವ ತೊಗಲುಗೊಂಬೆ ಕಲಾವಿದ ಕಥನವನ್ನು ಮುನ್ನಡೆಸುತ್ತಾನೆ. ಅಂತೆಯೇ ಈ ಅಧ್ಯಯನದ ಮಾಹಿತಿಗಳಿಗೆ ಸೂತ್ರ ಹಿಡಿದು ಆಡಿಸುವ ಸೃಜನಶೀಲ ಮಾದರಿಯಿದೆ. ಒಂದು ಕಡೆ ಸೊಂಡೂರಿನ ರಾಜವಂಶ, ಇನ್ನೊಂದೆಡೆ ಆಳಿಸಿಕೊಳ್ಳುವ ಜನಸಮುದಾಯ, ಹೀಗೆ ರಾಜ ಮತ್ತು ಸಾಮಾನ್ಯ ಪ್ರಜೆಗಳ ನಡುವಿನ ಸಂಘರ್ಷದ ತುಣುಕು ಕಿಡಿಗಳು ಕಾಲದಿಂದ ಕಾಲಕ್ಕೆ ಸಿಡಿದು ಬೆಳಕು ಕಾಣುವ ಮುನ್ನ ನಂದುತ್ತ ಕಾಣೆಯಾಗಿದ್ದವು. ಈ ರೀತಿ ಕಾಣೆಯಾದ ಕಿಡಿಗಳ ಆತ್ಮಗಳೇ ಒಟ್ಟಾಗಿ ೧೯೭೩ರಲ್ಲಿ ಸ್ಫೋಟವನ್ನು ಸಾಧ್ಯವಾಗಿಸಿದವು ಎಂದು ಇಡಿಯಾದ ಹೋರಾಟದ ಸಂಕ್ಷಿಪ್ತ ಚಿತ್ರ ಕೊಡಬಹುದು.

ಆದಾಗ್ಯೂ ಅಧ್ಯಯನಕ್ಕೆ ಕೆಲವು ಮಿತಿಗಳಿವೆ. ಪತ್ರಿಕಾ ವರದಿಗಳನ್ನು ಆ ಕಾಲದ ಖಚಿತ ಮಾಹಿತಿ ಎಂದು ನಂಬಲಾಗಿದೆ. ಕೆಲವು ಕಡೆ ಮಾತ್ರ ವರದಿಗಳನ್ನು ಪರೀಕ್ಷಿಸಲು ಸಾಧ್ಯವಾಗಿದೆ. ಭೂಮಿ ಕಳೆದುಕೊಂಡವರ ನಿಲುವು ದಾಖಲಿಸಲು ಎಂ.ವೈ. ಘೋರ್ಪಡೆಯವರೊಂದಿಗೆ ಮಾತುಕತೆ ಸಾಧ್ಯವಾಗಲಿಲ್ಲ. ಹೋರಾಟದ ಸಮಗ್ರ ಚಿತ್ರ ಕೊಡಲು, ಆ ಮೂಲಕ ಓದುಗರಿಗೂ ಅಧ್ಯಯನಕಾರರಿಗಿಂತ ಭಿನ್ನವಾಗಿ ಆಲೋಚಿಸಲು ಅನುವಾಗಲೆಂದು ಹೇರಳ ಮಾಹಿತಿ ಕೊಡಲಾಗಿದೆ. ಹಾಗಾಗಿ ಈ ಅಧ್ಯಯನದಲ್ಲಿ ಮಾಹಿತಿಯ ಭಾರವು ಇದೆ. ಆಧಾರ ಸಹಿತ ಮಾಹಿತಿ ವಿಶ್ಲೇಷಣೆಗೆ ಮೌಖಿಕ ಸಂದರ್ಶನದ ಭಾಗಗಳನ್ನು ಬಳಸಿಕೊಳ್ಳಲಾಗಿದೆ. ನಿರೂಪಣೆಯಲ್ಲಿ ಅಧ್ಯಯನವು ರಾಜವಂಶದ ವಿರೋಧಿ ಎನ್ನುವಂತೆ ಕೆಲವು ಕಡೆ ಕಾಣಬಹುದು. ಆದರೆ ಮಾಹಿತಿಯೇ ಹೀಗೆ ಕಾಣಿಸಿದೆ ಹೊರತು ಅಧ್ಯಯನವಲ್ಲ. ಒಂದು ಕಾಲದ ಭಾಷೆ ಮತ್ತು ಸಂದರ್ಭವನ್ನು ನೈಜವಾಗಿ ಕಟ್ಟಿಕೊಡಲು ಪತ್ರಿಕೆಗಳ ವರದಿಯನ್ನು, ಸದನದ ಕಲಾಪವನ್ನು, ಯಜಮಾನರ ಕಾದಂಬರಿಯನ್ನು ದೀರ್ಘವಾಗಿ ಉದ್ದರಿಸಲಾಗಿದೆ. ಇಷ್ಟು ಮಿತಿಗಳ ನಡುವೆ ಈ ಅಧ್ಯಯನ ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವ ಬಹು ಮುಖ್ಯ ಆಕರಗಳಲ್ಲಿ ಒಂದಾಗುವುದೆಂಬ ಭರವಸೆ ಈ ಅಧ್ಯಯನ ಕಾರನದು. ಇದು ನನ್ನ ಸಂಶೋಧನೆಯ ಮೊದಲ ಕೃತಿ. ಓದಿ ಅರೆ-ಕೊರೆಗಳನ್ನು ತಿದ್ದುತ್ತೀರೆಂದು ಭಾವಿಸುತ್ತೇನೆ. ಓದುಗರ ಪ್ರತಿಕ್ರಿಯೆಗಳನ್ನು ಪ್ರೀತಿಯಿಂದ ಮುಕ್ತವಾಗಿ ಸ್ವಾಗತಿಸುತ್ತೇನೆ.

ಈ ಅಧ್ಯಯನಕ್ಕೆ ಕಾರಣವಾದವರನ್ನು ಕೃತಜ್ಞತಾ ಭಾವದಿಂದ ನೆನೆಯಬೇಕಿದೆ. ವಿದ್ಯಾರ್ಥಿಗಳ ಮೇಲೆ ಅಪಾರ ಪ್ರೀತಿ ಕಾಳಜಿ ಇರುವ ಮಾನ್ಯ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ಅವರು ವಿದ್ಯಾರ್ಥಿ ದೆಸೆಯಲ್ಲಿ ಇಂಥದ್ದೊಂದು ಸಂಶೋಧನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಪ್ರೀತಿ ಒತ್ತಾಸೆ ಇಲ್ಲದಿದ್ದರೆ ಈ ಅಧ್ಯಯನ ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಸಣ್ಣಪುಟ್ಟ ಲೇಖನ, ಪಿಎಚ್‌.ಡಿ., ಕಾವ್ಯ ಎಂದುಕೊಂಡಿದ್ದವನಿಗೆ ಇಂತಹ ಒಂದು ಸವಾಲಿನ ಜವಾಬ್ದಾರಿಯನ್ನು ಕೊಟ್ಟು ಯೋಜನೆಯ ಕೊನೆಯವರೆಗೆ ಮಾರ್ಗದರ್ಶನ ಮಾಡಿದ ಲೋಹಿಯಾ ಅಧ್ಯಯನ ಪೀಠದ ಸಂಚಾಲಕರಾದ ಪ್ರೊ. ರಹಮತ್ ತರೀಕೆರೆ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ. ಅಧ್ಯಯನದ ಬಗೆಗೆ ತಾತ್ವಿಕ ತಿಳುವಳಿಕೆ ನೀಡಿದ ಪೀಠದ ಸಲಹಾ ಸಮಿತಿ ಸದಸ್ಯರುಗಳಾದ ಡಾ.ಕಾಳೇಗೌಡ ನಾಗವಾರ, ಕೆ.ಫಣಿರಾಜ್, ಡಾ.ನಟರಾಜ ಹುಳಿಯಾರ್ ಅವರಿಗೂ ಪ್ರೀತಿಯ ಕೃತಜ್ಞತೆಗಳು.

ಈ ಯೋಜನೆಯ ಜತೆಗಾರರಾದ ಬಿ. ಪೀರಬಾಷ, ಡಾ. ಸತೀಶ್ ಪಾಟೀಲ್ ಅವರಿಗೂ, ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕರು ಹಾಗೂ ಸಿಬ್ಬಂದಿಯವರಿಗೂ, ಮಾಹಿತಿ ಒದಗಿಸಿದ ‘ಪ್ರಜಾವಾಣಿ’ ‘ಕನ್ನಡ ಪ್ರಭ’ ‘ಸಂಯುಕ್ತ ಕರ್ನಾಟಕ’ ‘ಪ್ರಪಂಚ’ ಪತ್ರಿಕೆಗಳ ಸಂಪಾದಕರುಗಳಿಗೂ, ಪಿಎಚ್‌.ಡಿ., ಸಂಶೋಧನೆಯ ಮಧ್ಯೆಯೇ ಇಂಥದ್ದೊಂದು ಯೋಜನೆ ಪೂರೈಸಲು ಅವಕಾಶ ಕಲ್ಪಿಸಿದ ಪ್ರೀತಿಯ ಮಾರ್ಗದರ್ಶಕರಾದ ಡಾ.ಹೆಬ್ಬಾಲೆ ಕೆ.ನಾಗೇಶ ಅವರಿಗೂ, ಹಸ್ತಪ್ರತಿ ಓದಿ ಸಲಹೆ ನೀಡಿದ ಡಾ. ಮೃತ್ಯುಂಜಯ ರುಮಾಲೆ ಹಾಗೂ ಡಾ. ಶ್ರೀಧರ ಪಿಸ್ಸೆ ಅವರಿಗೂ, ಕರಡು ತಿದ್ದುವಲ್ಲಿ ಸಹಕರಿಸಿದ ಚಂದ್ರಪ್ಪ ಸೊಬಟಿ, ನಿಂಗಪ್ಪ ಹೊಸಳ್ಳಿ ಅವರಿಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸ್ನೇಹಿತರಿಗೂ, ಅನುಬಂಧದಲ್ಲಿ ಹೆಸರಿಸಲಾದ ಮಾಹಿತಿದಾರರಿಗೂ, ಆಲೋಚಿಸುವುದನ್ನು ಕಲಿಸಿದ ಕನ್ನಡ ವಿಶ್ವವಿದ್ಯಾಲಯದ ಪರಿಸರಕ್ಕೂ, ಕ್ಷೇತ್ರಕಾರ್ಯಕ್ಕೆ ನೆರವಾದ ಜಿ. ಪರಮೇಶ, ಜಿ. ಪ್ರಕಾಶ್, ಡಿ.ಎಂ. ಘನಶ್ಯಾಮ, ಆನಂದ ಋಗ್ವೇದಿ ಅವರಿಗೂ, ನನ್ನ ಬರಹವನ್ನು ಬೆರಗಿನಿಂದ ನೋಡುವ ನನ್ನ ಮನೆಯವರಿಗೂ, ಪ್ರಸಾರಾಂಗದಿಂದ ಪ್ರಕಟಿಸುತ್ತಿರುವ ಮತ್ತು ನನ್ನ ಆಲೋಚನೆಯನ್ನು ವಿಸ್ತರಿಸಿದ ಪ್ರೀತಿಯ ಮೇಷ್ಟ್ರು ಹಾಗೂ ಪ್ರಸಾರಾಂಗದ ನಿರ್ದೇಶಕರೂ ಆದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರಿಗೂ, ಮುಖಪುಟ ವಿನ್ಯಾಸ ಮಾಡಿದ ಕೆ.ಕೆ. ಮಕಾಳಿಯವರಿಗೂ, ಪುಟ ವಿನ್ಯಾಸಗೊಳಿಸಿದ ಸುಜ್ಞಾನಮೂರ್ತಿಯವರಿಗೂ, ಡಿ.ಟಿ.ಪಿ. ಮಾಡಿದ ಉಲ್ಲಾಸ್, ಜಿ.ಶಿವಕುಮಾರ್ ಅವರಿಗೂ, ಈ ಅಧ್ಯಯನಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರ ಪ್ರೀತಿ ವಿಶ್ವಾಸಕ್ಕೂ, ಈಗ ಪುಸ್ತಕ ಓದುತ್ತಿರುವ ನಿಮಗೂ ತುಂಬು ಹೃದಯದ ಕೃತಜ್ಞತೆಗಳು.

ಅರುಣ್ ಜೋಳದಕೂಡ್ಲಿಗಿ
ಲೋಹಿಯಾ ಜನ್ಮದಿನ, ೨೦೦೭
ಜೋಳದಕೂಡ್ಲಿಗಿ