ಕರ್ನಾಟಕದ ಸಮಾಜವಾದಕ್ಕೆ ಸಂಬಂಧಪಟ್ಟ ಅಧ್ಯಯನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲೆಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ.ರಾಮಮನೋಹರ ಲೋಹಿಯಾ ಅಧ್ಯಯನ ಪೀಠವು ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಿದೆ. ರಾಮಮನೋಹರ ಲೋಹಿಯಾ ಅವರು ಧೀಮಂತ ರಾಜಕಾರಣಿ ಮಾತ್ರವಲ್ಲದೆ, ೨೦ನೇ ಶತಮಾನದ ಭಾರತದ ಪ್ರಮುಖ ಚಿಂತಕರಲ್ಲಿ ಸಹ ಒಬ್ಬರು. ಅವರ ಸಂಪರ್ಕವು ಕರ್ನಾಟಕಕ್ಕೆ ೧೯೫೦ರ ದಶಕದಲ್ಲಿ ಹಲವು ಚಾರಿತ್ರಿಕ ಕಾರಣಗಳಿಂದ ಒದಗಿ ಬಂದಿತು. ಮುಂದೆ ಅದು ಒಂದು ದೊಡ್ಡ ಪ್ರಭಾವವಾಗಿ ಕರ್ನಾಟಕದ ರಾಜಕಾರಣ, ಚಳುವಳಿ, ತಾತ್ವಿಕ ಚಿಂತನೆ ಹಾಗೂ ಸಾಹಿತ್ಯವನ್ನು ವ್ಯಾಪಿಸಿತು. ಈ ಪ್ರಭಾವವು, ೨೦ನೇ ಶತಮಾನದ ಕೊನೆಯ ಅರ್ಧಭಾಗದ ಕರ್ನಾಟಕದ ರಾಜಕಾರಣ, ಚಿಂತನೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಜಗತ್ತನ್ನು ಲೋಹಿಯಾ ಅವರನ್ನು ಕೈಬಿಟ್ಟು ಚರ್ಚಿಸಲು ಸಾಧ್ಯವಿಲ್ಲ ಎಂಬಂತೆ ಆವರಿಸಿಕೊಂಡಿದೆ. ವಿಶಾಲ ನೆಲೆಯಲ್ಲಿ ಲೋಹಿಯಾ ಪೀಠವು ಲೋಹಿಯಾವಾದಿ ಪ್ರಭಾವವನ್ನು ಒಳಗೊಂಡಂತೆ ಎಲ್ಲ ಬಗೆಯ ಸಮಾಜವಾದಿ ಚಿಂತನೆಗಳಿಗೆ ಒಂದು ವೇದಿಕೆ ಆಗಬೇಕೆಂಬುದು ವಿಶ್ವವಿದ್ಯಾಲಯದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅದು ಕಳೆದ ಹಲವಾರು ವರ್ಷಗಳಿಂದ ಕೆಲವು ಉಪಯುಕ್ತವಾದ ಕಮ್ಮಟಗಳನ್ನೂ ವಿಚಾರ ಸಂಕಿರಣಗಳನ್ನೂ ಹಮ್ಮಿಕೊಂಡು ಬಂದಿದೆ. ಹಲವು ಪ್ರಕಟಣೆಗಳನ್ನು ಮಾಡಿಕೊಂಡು ಬಂದಿದೆ. ಈ ಪರಂಪರೆಯನ್ನು ಮುಂದುವರೆಸಿ, ೨೦೦೫-೦೭ನೇ ಸಾಲಿನಲ್ಲಿ ಎರಡು ಬರೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಅವುಗಳಲ್ಲಿ ಮೊದಲನೆಯದು ಉಪನ್ಯಾಸ ಯೋಜನೆ. ಎರಡನೆಯದು ಸಂಶೋಧನ ಯೋಜನೆ. ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುವಲ್ಲಿ, ಪೀಠಕ್ಕೆ ಎರಡು ಮುಖ್ಯ ಆಶಯಗಳಿದ್ದವು. ೧. ಈ ಯೋಜನೆಗಳು ಕರ್ನಾಟಕದ ಸಮಾಜವಾದಿ ಚಿಂತನೆ, ಚಳುವಳಿ, ಸಾಹಿತ್ಯ ಹಾಗೂ ರಾಜಕಾರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಚರ್ಚೆಗೆ ಬಾರದ ಆದರೆ ತಾತ್ವಿಕವಾಗಿ ಮಹತ್ವದ ಸಂಗತಿಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು. ೨. ಈ ಯೋಜನೆಗಳು ಕರ್ನಾಟಕದ ಸಮಕಾಲೀನ ರಾಜಕೀಯ ಸಾಮಾಜಿಕ ಬದುಕಿಗೆ ಲಗತ್ತನ್ನು ಪಡೆದುಕೊಂಡು ಒಂದು ಬಗೆಯ ಚಲನಶೀಲತೆಯನ್ನು ಪ್ರೇರಿಸುವಂತಿರಬೇಕು.

ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ‘ಕರ್ನಾಟಕದಲ್ಲಿ ಹಿಂದುಳಿದ ಸಮುದಾಯಗಳ ಹೊಸ ರಾಜಕೀಯ ಸಮೀಕರಣಗಳು’ ಎಂಬ ವಿಷಯ ಕುರಿತು ದಿನಾಂಕ. ೧೯.೧೦.೨೦೦೬ ರಂದು, ವಿಶ್ವವಿದ್ಯಾಲಯದ ಆವರಣದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಲೋಹಿಯಾ ಚಿಂತನೆಗಳನ್ನು ಅನುವಾದ ಮಾಡಿಸಿ ಸಂಪಾದಿಸಿ ಕೊಟ್ಟಿರುವ ಹಾಗೂ ಲೋಹಿಯಾ ಸಮಾಜವಾದದ ಹಿನ್ನೆಲೆಯಲ್ಲಿ ಕರ್ನಾಟಕದ ಸಾಹಿತ್ಯ ರಾಜಕಾರಣ ಸಮಾಜಗಳನ್ನು ಸೂಕ್ಷ್ಮವಾಗಿ ಸೈದ್ಧಾಂತಿಕ ಪ್ರಬುದ್ಧತೆಯಲ್ಲಿ ವಿಶ್ಲೇಷಿಸುವ ಡಾ.ನಟರಾಜ ಹುಳಿಯಾರ್ ಅವರು ಈ ಉಪನ್ಯಾಸ ನಡೆಸಿಕೊಟ್ಟರು. ಎರಡನೆಯ ಹಂತದಲ್ಲಿ ಮೂರು ಸಂಶೋಧನ ಯೋಜನೆಗಳನ್ನು ಹಂಪಿ ಪರಿಸರದ ಪ್ರತಿಭಾವಂತರೂ ಹೊಸ ತಲೆಮಾರಿನ ಲೇಖಕರೂ ಆದ ಮುರು ಯುವಕರಿಗೆ ನೀಡಲಾಯಿತು. ಆಯೋಜನೆಗಳೆಂದರೆ ೧. ಸಮಾಜವಾದಿ ಚಳುವಳಿಗಾರರ ಸಂದರ್ಶನ ಸಂಪುಟ –ಬಿ. ಪೀರ್ ಬಾಷಾ. ೨. ಸೊಂಡೂರು ಭೂಹೋರಾಟ-ಅರುಣ್ ಜೋಳದಕೂಡ್ಲಿಗಿ. ೩.ಹೆಬ್ಬಳ್ಳಿ ಭೂಹೋರಾಟ-ಡಾ.ಸತೀಶ್ ಪಾಟೀಲ್. ಈ ಮೂರು ಯೋಜನೆಗಳು ಪೂರ್ಣಗೊಂಡು ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿವೆ.

ಈ ಕೃತಿಯನ್ನು ರಚಿಸಿಕೊಟ್ಟಿರುವ ಶ್ರೀ. ಅರುಣ್ ಜೋಳದಕೂಡ್ಲಿಗಿ ಅವರು ಕನ್ನಡದ ಹೊಸತಲೆಮಾರಿನ ಲೇಖಕರಲ್ಲಿ ಒಬ್ಬರು. ಸೊಂಡೂರು ಭೂಹೋರಾಟ ನಡೆದ ಸ್ಥಳದ ಅಸುಪಾಸಿನ ಊರಿನವರು. ಅವರು ಈ ಪುಸ್ತಕ ರಚನೆಗಾಗಿ ಅನೇಕ ಹಳ್ಳಿಗಳನ್ನು ತಿರುಗಿ ಹೋರಾಟದಲ್ಲಿ ಪಾಲುಗೊಂಡ ಜನರನ್ನೂ ನಾಯಕರನ್ನೂ ಭೇಟಿಮಾಡಿದ್ದಾರೆ. ಪತ್ರಿಕಾಲಯ, ತಾಲೂಕು ಕಛೇರಿ, ರಾಜ್ಯಪತ್ರಾಗಾರ ಇಲಾಖೆ ಹಾಗೂ ಪೊಲೀಸ್ ಠಾಣೆಗಳಿಗೆ ಹೋಗಿ ವರದಿಗಳನ್ನು ಸಂಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಇರುವ ಕಲಾಪದ ವರದಿಯ ಸಂಪುಟಗಳನ್ನು ಅಧ್ಯಯನ ಮಾಡಿ ಅಮೂಲ್ಯ ಮಾಹಿತಿಯನ್ನು ಪಡೆದಿದ್ದಾರೆ. ಕರ್ನಾಟಕದ ಭೂಹೋರಾಟಗಳ ಬಗ್ಗೆ ಬಂದಿರುವ ಮುಖ್ಯ ಬರಹಗಳ ಓದಿ ಅವುಗಳ ಸಾರವನ್ನು ಈ ಕಥನದಲ್ಲಿ ಬಳಸಿಕೊಂಡಿದ್ದಾರೆ. ಹೀಗೆ ನಾನಾ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ತಾತ್ವಿಕ ವಿಶ್ಲೇಷಣೆಗೆ ಒಳಪಡಿಸಿ, ತಮ್ಮ ಆಕರ್ಷಕ ಭಾಷೆಯಲ್ಲಿ ಈ ರಾಜಕೀಯ ಚರಿತ್ರೆಯ ಕಥನವನ್ನು ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಕರ್ನಾಟಕದ ಸಮಾಜವಾದಿ ರಾಜಕಾರಣ ಹಾಗೂ ಚಳುವಳಿಗಳ ಬಗ್ಗೆ ಒಂದು ಉಪಯುಕ್ತವಾದ ಹೊರಳು ನೋಟವನ್ನು ಒದಗಿಸಿದ್ದಾರೆ. ಕರ್ನಾಟಕದ ಅಷ್ಟು ಚರ್ಚೆಗೆ ಬಾರದ ಒಂದು ರಾಜಕೀಯದ ಮುಖವನ್ನು ಹೊರತೆಗೆದಿದ್ದಾರೆ. ಚರಿತ್ರೆಯ ಸೊಂಡೂರು, ಚಳುವಳಿಯ ಸಂದರ್ಭದ ಸೊಂಡೂರು ಹಾಗೂ ಈಗಿನ ಗಣಿಗಾರಿಕೆಗೂ ಗಣಿಹಗರಣಗಳಿಗೂ ಕಾರಣವಾಗಿರುವ ಸೊಂಡೂರು-ಹೀಗೆ ಸೊಂಡೂರಿನ ಮೂರು ಅವಸ್ಥೆಗಳನ್ನು ಹಿಡಿದುಕೊಟ್ಟಿದ್ದಾರೆ. ಚಳವಳಿಗೆ ಸಂಬಂಧಿಸಿದ ಅಪರೂಪದ ಫೋಟೊಗಳನ್ನು ಒದಗಿಸಿದ್ದಾರೆ. ಗ್ರಂಥಸೂಚಿಯನ್ನೂ ವಿಷಯಸೂಚಿಯನ್ನೂ ಒದಗಿಸಿದ್ದಾರೆ. ಒಟ್ಟಿನಲ್ಲಿ ಈ ಕೃತಿಯನ್ನು ಕರ್ನಾಟಕದ ಚರಿತ್ರೆ, ರಾಜಕಾರಣ ಹಾಗೂ ಚಳುವಳಿಗಳ ಅಧ್ಯಯನದಲ್ಲಿ ಮಹತ್ವದ ಆಕರಗ್ರಂಥವಾಗಿ ಬಳಕೆಯಾಗುವಂತೆ ರೂಪಿಸಿದ್ದಾರೆ. ಈ ಕೆಲಸ ಮಾಡಿದ ಅರುಣ್ ಅವರನ್ನು ಅಭಿನಂದಿಸುತ್ತೇನೆ.

ಬೇರೆ ಬೇರೆ ರಾಜಕೀಯ ಪಕ್ಷಗಳಿಂದಲೂ ಸಂಘಟನೆಗಳಿಂದಲೂ ಕರ್ನಾಟಕದಲ್ಲಿ ಹಲವಾರು ಭೂಹೋರಾಟಗಳು ನಡೆದಿವೆ. ಅವುಗಳಲ್ಲಿ ಸೊಂಡೂರು ಭೂಹೋರಾಟವು ವಿಶಿಷ್ಟವಾದುದು. ಇದು ಒಬ್ಬ ಭೂಸ್ವಾಮಿಯ ವಿರುದ್ಧ ಮಾತ್ರವಲ್ಲದೆ, ಒಬ್ಬ ಮಾಜಿ ದೊರೆಯೂ ಹಾಲಿ ಅಧಿಕಾರದಲ್ಲಿದ್ದ ಮಂತ್ರಿಯ ವಿರುದ್ಧವೂ ಸಂಘಟನೆಗೊಂಡ ಚಳುವಳಿಯೂ ಆಗಿತ್ತು. ಸೊಂಡೂರು ಒಂದು ಸ್ವತಂತ್ರ ಪ್ರಾಂತ್ಯವಾಗಿದ್ದು, ೧೯೪೭ರಲ್ಲಿ ಬ್ರಿಟಿಶರು ರಾಜಕೀಯ ಅಧಿಕಾರ ಬಿಟ್ಟುಕೊಟ್ಟ ಬಳಿಕ ಭಾರತದೊಳಗೆ ವಿಲೀನಗೊಳ್ಳಲು ನಿರಾಕರಿಸಿದ ಪ್ರಾಂತ್ಯಗಳಲ್ಲಿ ಒಂದು. ಅದು ಕಾಂಗ್ರೆಸ್ ಚಳುವಳಿಯನ್ನು ನಿಷೇಧಿಸಿತ್ತು. ಅದು ಕೋಟ್ಯಂತರ ಬೆಲೆಬಾಳುವ ಕಬ್ಬಿಣದ ಅದುರಿನ ಬೆಟ್ಟಗಳನ್ನೂ ಘನವಾದ ಕಾಡನ್ನೂ ಸಾವಿರಾರು ಎಕರೆ ಜಮೀನನ್ನೂ ಪಡೆದಿತ್ತು. ಅದರಲ್ಲಿ ಇಲ್ಲಿನ ಸುಪ್ರಸಿದ್ಧ ಕುಮಾರಸ್ವಾಮಿಯ ಗುಡಿಗೆ ಸೇರಿದ ಭೂಮಿಯೂ ಸೇರಿತ್ತು. ಹೀಗಾಗಿ ಈ ಭೂಹೋರಾಟದಲ್ಲಿ ಕುಮಾರಸ್ವಾಮಿ ದೈವವೂ ಒಂದು ಪಾತ್ರವಾಗಿದೆ. ಹೀಗೆ ರಾಜಕಾರಣ, ಧರ್ಮ ಹಾಗೂ ಆರ್ಥಿಕ ಆಯಾಮಗಳನ್ನು ಉಳ್ಳ ಈ ಭೂಹೋರಾಟವು ವಿಶಿಷ್ಟವಾದುದು. ಈ ಹೋರಾಟದ ರೂವಾರಿಗಳಲ್ಲಿ ಮುಖ್ಯರಾದವರು ಕೆ.ಜಿ. ಮಹೇಶ್ವರಪ್ಪ, ಎಲಿಗಾರ ತಿಮ್ಮಪ್ಪ, ಯಜಮಾನ್ ಶಾಂತರುದ್ರಪ್ಪ, ಎಸ್‌.ಎಸ್‌. ಕುಮಟ ಅವರು. ಇವರು ಕರ್ನಾಟಕದ ಸಮಾಜವಾದಿ ಚಳವಳಿಯಲ್ಲಿ ಅಷ್ಟೊಂದು ಪ್ರಸಿದ್ಧಿ ಪಡೆಯದ ಅಜ್ಞಾತರು. ಆದರೆ ಬಹಳ ಶ್ರದ್ಧೆಯಿಂದ ತಮ್ಮನ್ನು ತೊಡಗಿಸಿಕೊಂಡು ಹೋರಾಟ ಮಾಡಿದವರು. ಇಂತಹವರ ಪಾತ್ರವನ್ನು ಈ ಕೃತಿಯು ಇಲ್ಲಿ ಎತ್ತಿತೋರಿಸಿದೆ. ಈ ಹೋರಾಟದಲ್ಲಿ ಬಿಹಾರ ಮತ್ತು ಮಹಾರಾಷ್ಟ್ರಗಳಿಂದ ಸಮಾಜವಾದಿ ನಾಯಕರು ಬಂದು ಭಾಗವಹಿಸಿದರು. ಕರ್ನಾಟಕದ ಲೇಖಕರೂ ಚಿತ್ರನಟಿಯರೂ ಛಾಯಾಚಿತ್ರಗಾರರೂ ಇದಕ್ಕೆ ಬೆಂಬಲ ಸೂಚಿಸಿದರು. ವಿಶೇಷವೆಂದರೆ, ನಾಡಿನ ಬೇರೆಬೇರೆ ಪತ್ರಿಕೆಗಳು ಈ ಹೋರಾಟದಲ್ಲಿ ಪರವಿರೋಧದ ನಿಲುವನ್ನು ತಾಳಿ ವಹಿಸಿದ ಪಾತ್ರ. ಈ ಕುರಿತ ಅಧ್ಯಾಯವು ಕುತೂಹಲಕರವಾಗಿದೆ. ಕೊನೆಗೆ ಈ ಹೋರಾಟವು ಒಂದು ಕಾದಂಬರಿಗೆ ಕೂಡ ವಸ್ತುವಾಯಿತು. ಎಲ್ಲ ಕಾರಣಕ್ಕೆ ಇದೊಂದು ಅಪೂರ್ವ ಮಾಹಿತಿ ಮತ್ತು ವಿಶ್ಲೇಷಣೆಯುಳ್ಳ ಕೃತಿಯಾಗಿದೆ.

ಲೋಹಿಯಾ ಪೀಠದ ಯೋಜನೆಗಳ ಹಿಂದೆ ಆಡಳಿತಾತ್ಮಕವಾಗಿ ಮಾತ್ರವಲ್ಲದೆ ಸೈದ್ಧಾಂತಿಕವಾಗಿ ಕೂಡ ಬೆಂಬಲವಾಗಿ ನಿಂತವರು ಮಾನ್ಯ ಕುಲಪತಿಯವರಾದ ಡಾ. ಬಿ.ಎ. ವಿವೇಕ ರೈ ಅವರು. ತಮ್ಮ ಸಮಾಜವಾದಿ ಒಲವಿನ ಕಾರಣ, ಅವರು ಪೀಠದ ಯೋಜನೆಗಳನ್ನು ರೂಪಿಸಲು ಬೇಕಾದ ಎಲ್ಲ ಮಾರ್ಗದರ್ಶನವನ್ನು ನೀಡಿದರು. ಅವರ ವಿಶ್ವಾಸವನ್ನು ಹಾಗೂ ಬೌದ್ಧಿಕ ನೆರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಪ್ರಸ್ತುತ ಕೃತಿಯು ಹೀಗೆ ಉಪಯುಕ್ತವಾಗಿ ರೂಪುಗೊಳ್ಳಲು ಕಾರಣಕರ್ತರಾದವರು ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ.ಕಾಳೇಗೌಡ ನಾಗವಾರ ಹಾಗೂ ಪ್ರೊ. ಕೆ. ಫಣಿರಾಜ ಅವರು. ಅವರು ಲೇಖಕರ ಜತೆ ನಡೆಸಿದ ಚರ್ಚೆಯಿಂದ ಮತ್ತು ಕೊಟ್ಟ ಸೂಚನೆಗಳ ಕಾರಣದಿಂದ ಈ ಕೃತಿಗೆ ಪ್ರಯೋಜನವಾಗಿದೆ. ಈ ಇಬ್ಬರು ಚಿಂತಕರ ನೆರವನ್ನು ಇಲ್ಲಿ ನೆನೆಯುತ್ತೇನೆ. ಈ ಪುಸ್ತಕದ ಅಕ್ಷರ ಜೋಡಣೆ ಮಾಡಿದವರು ಫಾಂಟ್‌ಲೈನ್ ಗ್ರಾಫಿಕ್ಸಿನ ಉಲ್ಲಾಸ್. ಜಿ, ಜಿ.ಶಿವಕುಮಾರ್ ಅವರು. ಇದರ ವಿನ್ಯಾಸವನ್ನು ಮಾಡಿದವರು ಸುಜ್ಞಾನಮೂರ್ತಿ ಅವರು. ಮುಖಪುಟವನ್ನು ರಚಿಸಿದವರು ಕೆ.ಕೆ.ಮಕಾಳಿ ಅವರು. ಈ ಪುಸ್ತಕವನ್ನು ಪ್ರೀತಿಯಿಂದಲೂ ವಿಶ್ವಾಸದಿಂದಲೂ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರು ಪ್ರಕಟಿಸುತ್ತಿರುವರು. ಇವರೆಲ್ಲರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಈ ಪುಸ್ತಕವನ್ನು ಪ್ರೀತಿಯಿಂದ ಬರಮಾಡಿಕೊಳ್ಳಬೇಕು ಎಂದು ಓದುಗರಲ್ಲಿ ವಿನಂತಿಸುತ್ತೇನೆ.

ರಹಮತ್ ತರೀಕೆರೆ
ಸಂಚಾಲಕರು
ಡಾ. ರಾಮಮನೋಹರ ಲೋಹಿಯಾ ಅಧ್ಯನ ಪೀಠ