ಲೋಕಸಭೆ ಮತ್ತು ವಿಧಾನಸಭಾ ಕಲಾಪಗಳನ್ನು ನಾವೀಗ ಲೈವ್ ಟೀವಿಯಲ್ಲಿ ನೋಡುತ್ತೇವೆ. ಜನಪ್ರತಿನಿಧಿಗಳು ಏನು ಮಾಡುತ್ತಾರೆ ಎನ್ನುವುದನ್ನು ಇದರಿಂದ ತಿಳಿಯಬಹುದು. ಅಳುವ ಪಕ್ಷ ಸಮರ್ಥನೆ, ವಿರೋಧ ಪಕ್ಷದ ವಿರೋಧಿಸುವಿಕೆಗೆ ಈಗ ಅಂತಹ ಗಟ್ಟಿಯಾದ ಉದ್ದೇಶಗಳು ಉಳಿದಂತೆ ಕಾಣುವುದಿಲ್ಲ. ಆಳುವ ಪಕ್ಷದ ಎಲ್ಲವನ್ನು ವಿರೋಧಿಸಲಿಕ್ಕಾಗಿಯೇ ವಿರೋಧಿಸುವುದು,. ವಿರೋಧ ಪಕ್ಷದವರಿಗೆ ವಿರೋಧಿಸುವ ಕೆಲಸ ಎಂದು ಆಳುವ ಪಕ್ಷ ತಿಳಿಯುವುದು ಇವು ಪರಸ್ಪರ ಹೊಂದಾಣಿಕೆಯ ವಾಸ್ತವಾಂಶಗಳಾಗಿವೆ. ಇಂದಿನ ಚರ್ಚೆಗಳು ರಾಜಕೀಯ ಬಲಾಬಲದ ಸೆಣಸಾಟದತ್ತಲೇ ಕೇಂದ್ರಿಕರಿಸುತ್ತಿವೆ. ಜಗಳ, ಕೂಗಾಟ, ಕಿರುಚಾಟ, ಸಭಾತ್ಯಾಗ, ಅಸಭ್ಯವರ್ತನೆಗಳು ಒಂದು ರೋಗದಂತೆ ಪರಿಣಮಿಸಿದೆ. ಈ ಎಲ್ಲದರ ಮಧ್ಯೆ ಅಂತಹ ಗದ್ದಲದಲ್ಲಿ ಜಗತ್ತಿನ ಪರಿವೆ ಇಲ್ಲದಂತೆ ನಿದ್ದೆಗೆ ಶರಣಾದ ಸದಸ್ಯರುಗಳು ಇಲ್ಲದಿಲ್ಲ. ಈ ದೇಶದ ನಿಜವಾದ ಸಮಸ್ಯೆಗಳು ಚರ್ಚೆ ಆಗುವುದು. ಆ ಸಮಸ್ಯೆಗಳಿಗೆ ಇಲ್ಲರೂ ಸಮಾನ ಮನಸ್ಥಿತಿಯಿಂದ ಪರಿಹಾರ ಕಂಡುಕೊಳ್ಳುವುದು ಕಲಾಪಗಳಲ್ಲಿ ಈಗಲೂ ಸಾಧ್ಯವಾಗದ ಸಂಗತಿ. ರಾಜ್ಯ ಪತ್ರಗಾರ ಇಲಾಖೆಯಲ್ಲಿರುವ ೬೦,೭೦ರ ದಶಕದ ವಿಧಾನ ಮಂಡಲ ಕಲಾಪಗಳನ್ನು ಗಮನಿಸಬೇಕು. ಅಲ್ಲಿನ ಚರ್ಚೆಯಲ್ಲಿದ್ದ ಸಾಮಾಜಿಕ ಕಳಕಳಿ, ಪಕ್ಷಾತೀತ ನಿಲುವುಗಳು, ನಿರ್ದಯ ಧೋರಣೆಗಳು ಅಚ್ಚರಿಗೊಳಿಸುತ್ತವೆ. ಅಂದ ಮಾತ್ರಕ್ಕೆ ಆಗಿನ ಕಲಾಪಗಳಲ್ಲಿ ಜಗಳ, ವೈಯಕ್ತಿಕ ದ್ವೇಷಗಳು ಇರಲಿಲ್ಲವೆಂತಲ್ಲ, ಇದ್ದರೂ ಅವುಗಳಿದ್ದ ಪ್ರಾಶಸ್ತ್ಯ ಕಡಿಮೆ. ೧೯೭೩ರ ವಿಧಾನ ಮಂಡಲದ ಕಲಾಪಗಳಲ್ಲಿ ಸೊಂಡೂರು ರೈತ ಹೋರಾಟದ ಕುರಿತಾಗಿ ಚರ್ಚೆಗಳು ನಡೆದವು. ಚರ್ಚೆಯ ಸಂದರ್ಭವನ್ನು ಕಟ್ಟಿಕೊಡಲು ಅವನ್ನು ಮೂಲ ಸ್ವರೂಪದಲ್ಲಿಯೇ ಕೊಡಲಾಗಿದೆ.

೧೯೭೨ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಬಾಚಿಗೊಂಡನಹಳ್ಳಿ ಕೆ. ಚೆನ್ನಬಸವನ ಗೌಡ ಅವರು ಪರಿಷತ್ತಿನ ಕಲಾಪದಲ್ಲಿ ಎಂ.ವೈ. ಘೋರ್ಪಡೆಯವರ ವಿರುದ್ಧ ಆರೋಪಿಸಿದರು. ಅವುಗಳೆಂದರೆ ಒಂದು: ಮ್ಯಾಂಗನೀಸ್ ಅದಿರನ ಪ್ರದೇಶವನ್ನು ಯಾವುದೇ ಕಂಪನಿಗೆ ೧೦ ಚದರ ಮೈಲು ಪ್ರದೇಶಕ್ಕಿಂತ ಹೆಚ್ಚು ಕೊಡಬಾರದೆಂದು ಮೈನಿಂಗ್ ನಿಯಮವಿದೆ. ಈ ಕಾನೂನನ್ನು ಉಲ್ಲಂಘಿಸಿ ರಾಜಮನೆತನ ಎಸ್.ಎಂ. ಆಂಡ್ ಐ.ಒ. ಕಂಪನಿಯು ೨೯ ಚದರ ಮೈಲು ಮ್ಯಾಂಗನೀಸ್ ಅದುರು ಪ್ರದೇಶವನ್ನು ೨೦ ವರ್ಷಗಳ ಅವಧಿಯವರೆಗೆ ಗುತ್ತಿಗೆಗೆ ಪಡೆದಿದೆ. ಎರಡು: ವ್ಯಾಸನ ಕೆರೆಯಲ್ಲಿ ರಾಜಮನೆತನದ ಬೀಡು ಕಬ್ಬಿಣ ಕಾರ್ಖಾನೆಯು ಮೈಸೂರು ವಿದ್ಯುತ್ ಶಕ್ತಿ ಮಂಡಳಿಗೆ ಕೊಡಬೇಕಾಗಿರುವ ೨೭ ಲಕ್ಷ ರೂಪಾಯಿಗಳ ಬಾಕಿಯನ್ನು ರಾಜ್ಯಪಾಲ ಧರ್ಮವೀರರಿಂದ ವಜಾ ಮಾಡಿಸಿಕೊಂಡಿದ್ದಾರೆ. ಮೂರು: ಕುಮಾರಸ್ವಾಮಿ ಇನಾಂ ಭೂಮಿಯು ಗೇಣಿದಾರರನ್ನು ಬಲತ್ಕಾರವಾಗಿ ಒಕ್ಕಲೆಬ್ಬಸಲಾಗಿದೆ. ಹೊಗೆಸೊಪ್ಪಿನ ಭೂಮಿ ೧೦೦೦ ಎಕರೆಯಲ್ಲಿ ರಾಜಮನೆತನ ಅನುಭವಿಸುತ್ತಿದೆ. ನಾಲ್ಕು: ಶಿವಪುರ ಶಿಕ್ಷಣ ಸಮಿತಿಯ ಜಿಲ್ಲಾ ಮಂಡಳಿಯು ಶಾಲೆಯ ಕಟ್ಟಡವನ್ನು ರೆಸಿಡೆನ್ಸಿಯಲ್ ಶಾಲೆಗಾಗಿ  ಒಂದು ರೂಪಾಯಿ ಬಾಡಿಗೆಗೆ ಸರಕಾರದಿಂದ ಪಡೆದಿದೆ.

ಜೂನ್ ೨೬,೧೯೭೨ರಲ್ಲಿ ಎಂ.ವೈ. ಘೋರ್ಪಡೆಯವರು ಕೆ. ಚೆನ್ನಬಸವನ ಗೌಡರು ಮಾಡಿದ ಆರೋಪಗಳಿಗೆ ಪರಿಷತ್ತಿನಲ್ಲಿ ನೇರವಾಗಿ ನಿರ್ದಿಷ್ಟವಾಗಿ ಉತ್ತರ ಕೊಡದೆ ತೇಲಿಕೆಯ ಉತ್ತರ ಕೊಟ್ಟು ವಸ್ತು ಸ್ಥಿತಿಯನ್ನು ಮರೆಮಾಚಿದರು. ಅವರು ಕೊಟ್ಟ ಜಾರಿಕೆ ಉತ್ತರ ಹೀಗಿತ್ತು: ”೨೬ ಚದರ ಮೈಲು ಅದುರು ಪ್ರದೇಶವನ್ನು ೧೦ ಚದರ ಮೈಲಿ ವಿಸ್ತೀರ್ಣದ ಪಾಕೆಟ್ಟುಗಳನ್ನಾಗಿ ಮಾಡಿ ಬೇರೆ ಕಂಪನಿಗಳಿಗೆ ಗುತ್ತಿಗೆಗೆ ಕೊಟ್ಟರೆ ಗಣಿ ಉದ್ಯಮಕ್ಕೆ ತೊಂದರೆ ಆಗುತ್ತದೆ. ಕುಮಾರಸ್ವಾಮಿ ದೇವಸ್ಥಾನದ ಬಳಿ ೭೦.೮೦ ಎಕರೆ ಜಮೀನು ತಮ್ಮ ತಂದೆಯ ಧರ್ಮದರ್ಶಿತ್ವದಲ್ಲಿದೆ. ಹೊಗೆಸೊಪ್ಪಿನ ಭೂಮಿಯನ್ನು ಎಸ್. ಎಂ. ಅಂಡ್ ಐ.ಒ. ಕಂಪನಿಗಳು ಕಾರ್ಮಿಕರಿಗಾಗಿ ಹೆಚ್ಚು ಆಹಾರ ಬೆಳೆಯುವ ಯೋಜನೆಯಲ್ಲಿ ಗುತ್ತಿಗೆಗೆ ಹಿಡಿಯಲಾಗಿದೆ.” ಅಂದು ಕೆ. ಚೆನ್ನಬಸವನಗೌಡರು ನಿರ್ದಿಷ್ಟ  ಉತ್ತರಕ್ಕಾಗಿ ಪಟ್ಟುಹಿಡಿದರೂ ಅವರನ್ನು ಬೆಂಬಲಿಸುವವರು ಇರಲಿಲ್ಲ. ಕನ್ನಡದ ಖ್ಯಾತ ಕಾದಂಬರಿಕಾರಿ ಬಸವರಾಜ ಕಟ್ಟಿಮನಿ ಅವರು ೧೯೨೨ರಲ್ಲಿ ವಿದಾನಪರಿಷತ್ ಸದಸ್ಯರಾಗಿದ್ದರು. ಅವರು ಜೂನ್ ೨೪, ೧೯೭೭ರಂದು ವಿಧಾನಪರಿಷತ್ತಿನಲ್ಲಿ ಹಣಕಾಸು ಮಂತ್ರಿಗಳಾಗಿದ್ದ ಎಂ.ವೈ. ಘೋರ್ಪಡೆ ಅವರನ್ನು ಹೊಗಳುತ್ತಾ, ಹಿಂದಿನ ಹಣಕಾಸು ಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ತೆಗಳುತ್ತಾ ಮಾತನಾಡಿದರಂತೆ. ಚನ್ನಬಸವನಗೌಡರು ಕಟ್ಟಿಮನಿಯವರನ್ನು ಟೀಕಿಸಿದಾಗ ಅವರು ಅದನ್ನು ಸಮರ್ಥಿಸಿಕೊಂಡರಂತೆ. ಇದನ್ನು ಚನ್ನಬಸವನಗೌಡರು ತಮ್ಮ ‘ನಾನೊಬ್ಬ ಸಾರ್ವಜನಿಕ’ ಆತ್ಮಕತೆಯಲ್ಲಿ ಬರೆಯುತ್ತಾರೆ. ನೃಜನಶೀಲ ಸಮಾಜಮುಖಿ ಲೇಖಕರೊಬ್ಬರು ಅಧಿಕಾರಶಾಹಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಂತಹ ವರ್ತನೆ ಅಚ್ಚರಿಯನ್ನುಟ್ಟಿಸುತ್ತದೆ. ಹಾಗಾಗಿ ಅವರ ಆರೋಪಗಳಿಗೆ ತಕ್ಕ ಪ್ರತಿಕ್ರಿಯೆ ಸಿಗಲಿಲ್ಲ. ಮುಂದೆ ೧೯೭೩ರ ಹೋರಾಟಕ್ಕೆ ಈ ಆರೋಪಗಳೂ ಕಾರಣವಾದವು.

೧೦ ಸೆಪ್ಟಂಬರ್, ೧೯೭೩

೧೯೭೩ ಸೆಪ್ಟಂಬರ್ ೧೦ ರಂದು ಸೊಂಡೂರಿನಲ್ಲಿ ರೈತ ಚಳುವಳಿ ಪ್ರಾರಂಭವಾಗುತ್ತಲೂ ಅದೇ ದಿನ ವಿಧಾನ ಸಭಾ ಕಲಾಪದಲ್ಲಿ ಕೋಣಂದೂರು ಲಿಂಗಪ್ಪ ಪ್ರಸ್ತಾಪಿಸಿದರು.

ಕೋಣಂದೂರು ಲಿಂಗಪ್ಪ ಮಾನ್ಯ ಅಧ್ಯಕ್ಷರೆ, ಈ ದಿವಸ ರಾಜ್ಯದ ಒಂದು ಭಾಗದಲ್ಲಿ ಬಹಳ ಗಂಭೀರವಾದ ತುರ್ತು ಪರಿಸ್ಥೀತಿಯುಂಟಾಗಿದೆ. ಅದೇನೆಂದರೆ ಆ ಸೊಂಡೂರು ಕ್ಷೇತ್ರದಲ್ಲಿ ಯಾವ ಬಹಿರಂಗ ಸಭೆಗಳನ್ನು.

ಅಧ್ಯಕ್ಷರು : ನಾನು ಸರ್ಕಾರದಿಂದ ರಿಪೋರ್ಟನ್ನು ಕಾಲ್ ಫಾರ್ ಮಾಡಿದ್ದೇನೆ. ಕೋಲಿಂಗಪ್ಪ: ಅಲ್ಲಿ ಮಾಜಿ ರಾಜಮನೆತನದವರು ಗೂಂಡಾಗಳನ್ನು ಬಿಟ್ಟು ಜನರನ್ನು ಹೊಡೆಸುತ್ತಿದ್ದಾರೆ. ಈಗ ಅಲ್ಲಿ ಸ್ವಾತಂತ್ಯ್ರ ಹೋರಾಟ ಪ್ರಾರಂಭವಾದಂತೆ ಕಾಣುತ್ತದೆ..

ಅಧ್ಯಕ್ಷರು : ಮಾನ್ಯ ಸದಸ್ಯರು ಈಗೇನು ವಿಚಾರ ಎತ್ತುತ್ತಿದ್ದಾರೆ. ಆ ವಿಷಯದಲ್ಲಿ ಅವರು ಒಂದು ನೋಟಿಸನ್ನು ಕೊಟ್ಟಿಲ್ಲ. ಆದರೆ ಹಾಗೆ ಸಭೆಯಲ್ಲಿ ತಮಗೆ ಮನಸ್ಸಿಗೆ ಬಂದ ವಿಷಯಗಳನ್ನು ಹೇಳಬಹುದೆಂದು ಅವರು ಭಾವಿಸಿದಂತಿದೆ. ಅದುದರಿಂದ ಮಾನ್ಯ ಲಿಂಗಪ್ಪನವರು ದಯಮಾಡಿ ಕುಳಿತುಕೊಳ್ಳಿ.

೧೧ ಸೆಪ್ಟೆಂಬರ್ ೧೯೭೩

ಕೋ. ಲಿಂಗಪ್ಪ : ಮಾನ್ಯ ರೆವಿನ್ಯೂ ಮಂತ್ರಿಗಳ ಮೇಲೆ ೩ ದಿನಗಳ ಹಿಂದೆ ಹಕ್ಕು ಬಾಧ್ಯದ ನಿರ್ಣಯವನ್ನು ಕಳುಹಿಸಿದ್ದೆ. ಕಳೆದ ಅದಿವೇಶನದಲ್ಲಿ ಸೊಂಡೂರು ಇನಾಂ ರದ್ದಿಯಾತಿ ಕಾನೂನನ್ನು ಸಭೆಯಲ್ಲಿ ಮಂಡಿಸುತ್ತೇವೆಂದು ಹೇಳಿದರು. ಕಳೆದ ಅಧಿವೇಶನ ಮುಗಿದು ಹೋಯ್ತು. ಇದುವರೆಗೆ ಮಂಡಿಸಲಿಲ್ಲ. ಈ ಸಭೆಯಲ್ಲಿ ತೀರ್ಪುಗಾರರಿಗೆ ಹೇಳಿದ್ದಾರೆ ಹಕ್ಕು ಬಾಧ್ಯತಾ ನಿರ್ಣಯವನ್ನು ಕಳುಹಿಸಿದ್ದೇವೆ ಎಂದು. ಆದರೆ ರೆವಿನ್ಯೂ ಮಂತ್ರಿಗಳು ಏನು ಹೇಳುತ್ತಾರೆ.

ಕಾಗೋಡುತಿಮ್ಮಪ್ಪ : ಈ ಒಂದು ಅಧಿವೇಶನದಲ್ಲೇ ಮಸೂದೆಯನ್ನು ಮಂಡಿಸುತ್ತೇವೆ ಎಂದು ಪ್ರಶ್ನೆ ಕೇಳಿದಾಗ ಮಂತ್ರಿಗಳು ಹೇಳಿದರು, ಮತ್ತೊಂದು ಗಮನ ಸೆಳೆಯುವ. ಸೂಚನೆಯಲ್ಲಿ ಪ್ರಸ್ತಾವನೆ ಮಾಡಿದಾಗ ಇದೇ ರೀತಿ ಹೇಳಿದರು. ಆದರೆ ಇದುವರೆಗೂ ಮಂಡಿಸಲಿಲ್ಲ.

ಹುಚ್ಚು ಮಾಸ್ತಿಗೌಡ : ಕಳೆದ ಅಧಿವೇಶನದಲ್ಲಿ ನಾನು ಭರವಸೆ ಕೊಟ್ಟಿದ್ದು ನಿಜ. ಆದರೆ ನಾನು ಮಸೂದೆ ಕಾನೂನನ್ನು ತಯಾರು ಮಾಡುವುದರೊಳಗಾಗಿ ಅಧಿವೇಶನ ಆರಂಭವಾದುದರಿಂದ ಮಂಡಿಸುವುದಕ್ಕೆ ಆಗಿರಲಿಲ್ಲ. ಈಗ ತಯಾರಾಗಿದೆ. ಈ ಅಧಿವೇಶನದಲ್ಲಿ ಸಭೆಯ ಮುಂದೆ ತರುತ್ತೇನೆ.

೧೨ ಸೆಪ್ಟಂಬರ್ ೧೯೭೩

ಈ ದಿನ ವಿಧಾನ ಸಭಾಧಿವೇಶನದಲ್ಲಿ ವಿವರವಾಗಿ ಇನಾಂ ರದ್ದಿಯಾತಿ ಮಸೂದೆಯು ಮಂಡಿಸಲ್ಪಟ್ಟಿತು. ಈ ಮಸೂದೆಯಲ್ಲಿ ಸೊಂಡೂರು ಪ್ರದೇಶದ ಎಲ್ಲ ಬಗೆಯ ಇನಾಂ ಗ್ರಾಮಗಳ (ಅವುಗಳು ಒಳಗೊಂಡ ಜಮೀನು, ಸಹಿತ) ರದ್ದಿಯಾತಿ, ತತ್ಸಂಬಂಧೀ ಶಬ್ದಗಳ ವಿವರ ಭೂ ದಾಖಲೆಗಳು, ಶಾಶ್ವತ ಗೇಣಿ ವಕ್ಕಲು, ದೇವದಾಯ ಅಥವಾ ಧರ್ಮಾದಾಯ ವೆನಿಸಿದ ಖಾಸಗಿ ಇನಾಂ, ನಿಗದಿತ ದಿನಾಂಕದೊಳಗೆ ಸತತ ಕನಿಷ್ಟ ೧೨ ವರ್ಷಗಳಿಗೆ ಕಡಿಮೆ ಇಲ್ಲದಂತೆ ಸ್ವತಃ ಸಾಗುವಳಿ ಮಾಡಿದಂತ ಗೇಣಿ ಒಕ್ಕಲನ್ನು ರಕ್ಷಿತ ಗೇಣಿದಾರರೆಂಬ ಪರಿಗಣನೆ, ಧಾರ್ಮಿಕ ಸಂಸ್ಥೆ ಇತ್ಯಾದಿ ಪದಗಳ ವಿವರವೆಲ್ಲ ಒಳಗೊಂಡಂತೆ ಸುದೀರ್ಘವಾಗಿ ಕಂದಾಯ ಮಂತ್ರಿ ಹುಚ್ಚು ಮಾಸ್ತಿಗೌಡರು ಮಂಡಿಸಿದರು.

ಈ ಮಸೂದೆಯನ್ನು ಮಂಡಿಸಿದ ನಂತರ ಸಭಾ ಕಲಾಪವನ್ನುದ್ದೇಶಿಸಿ ಮಾತನಾಡುತ್ತಾ ಹಿಡುವಲಿ ಇಡೀ ರಾಜ್ಯದಲ್ಲಿ ಏಕರೂಪತೆಗೆ ಬರಬೇಕು ಎನ್ನುವುದೇ ಇದರ ಮೂಲ ಉದ್ದೇಶ. ಸೊಂಡೂರು ತಾಲೂಕಿನಲ್ಲಿ ಕೆಲವು ಇನಾಂ ಗ್ರಾಮಗಳನ್ನು ರದ್ದು ಮಡಿದ ಕೂಡಲೆ ಏಕರೂಪದ ಹಿಡುವಳಿ ತರಲೆಂದು ಈ ಮಸೂದೆ ಮಂಡಿಸಿದೆ. ಅಲ್ಲಿ ಒಟ್ಟು ೨೩ ಇನಾಂ ಗ್ರಾಮಗಳ ಪೈಕಿ ೮ ಗ್ರಾಮಗಳು ರಿಲಿಜಿಯಸ್ ಅಂಡ್ ಚಾರಿಟಬಲ್ ಎಂಡೋನ್‌ಮೆಂಟ್ಸ್‌ಗೆ ಸಂಬಂಧಿಸಿದ ಇನಾಂ ಆಗಿ ಅವುಗಳ ವರಮಾನ ಕಾರ್ತೀಕೇಶ್ವರ ಹಾಗೂ ಶ್ರೀ ನರಸಿಂಹಸ್ವಾಮಿ ದೇಗುಲಗಳಿಗೆ ಮುಡಿಪು ಎಂದಿದೆ. ದೇವಸ್ಥಾನದ ಕೆಲಸಗಳನ್ನು ವಂಶಪಾರಂಪರ್ಯವಾಗಿ ಮಾಡಿಕೊಂಡು ಬರಬೇಕೆಂದು ಎಮ್ಮಿ ಹತ್ತಿ, ವಿಠಲನಗರ ಹಾಗೂ ಮುರಾರಿ ಪುರ, ಇತ್ಯಾದಿ ಖಾಸಗಿ ಇನಾಂ ಗ್ರಾಮ (Personal Incom Village) ಗಳು ಇದ್ದು ಈ ಕುರಿತು ಮಸೂದಾ ಕಾನೂನು ಇದು. ಮೈನರ್ ಟೆನೆಂಟುಗಳಾಗಲಿ, ಪ್ರೊಟೆಕ್ಟೆಡ್ ಟೆನೆಂಟುಗಳಾಗಲಿ, ಈ ಗ್ರಾಮಗಳಲ್ಲಿ ಇಲ್ಲದ ಕಾರಣ ಈ ಮೂರು ಗ್ರಾಮದವರಿಗೆ ಯಾವ ವಿಧವಾದ ಹಕ್ಕು ಈವರೆಗೂ ದೊರೆತಿಲ್ಲ, ಅಂತಾಗಿ ಸಣ್ಣ ಜಮೀನು ಕೃಷಿ ಗೇಣಿದಾರರಿಗೆ ಅದರ ಪೂರ್ಣ ಹಕ್ಕು ಕೊಡಬೇಕೆಂದು ಮಸೂದೆಯಲ್ಲಿದೆ. ಅದರೆ ಶಾಶ್ವತ ಗೇಣಿದಾರರಿಗೆ ಭೂಮಿಯ ಮೇಲೆ ಪೂರ್ಣ ಹಕ್ಕು ಕೊಡಬೇಕೆಂದೂ, ಅವರು ಭೂ ಕಂದಾಯದ ೨೦ರಷ್ಟು ಅಕ್ಯುಪೆನ್ಸಿ ಹಣವನ್ನು ಕೊಡಬೇಕೆಂದೂ, ರಕ್ಷಿತ ಗೇಣಿದಾರರು ಭೂ ಕಂದಾಯದ ೫೦ ರಷ್ಟು ಮೊತ್ತ ನೀಡಬೇಕೆಂದೂ, ತಿಳಿಸಲಾಗಿದೆ ಎಂದರು. ಹೀಗೆಯೇ  ಜಮೀನುದಾರರು ಕೊಡಬೇಕಾದ ಭೂ ಕಂದಾಯುದ ಮೊತ್ತ, ಅರ್ಚಕ ವರ್ಗದ ಹಕ್ಕು, ಭೂಮಿಯ ವರಮಾನ ಅನುಸರಿಸಿ ಪಡೆಯಬೇಕಾದ ಕಂದಾಯದ ವಿವರಗಳನ್ನು ನೀಡುತ್ತ, ಒಟ್ಟಾರೆ ಈ ಮಸೂದೆ ಸದರಿ ಗ್ರಾಮಗಳ ಗೇಣಿದಾರರಿಗೆ ಹಕ್ಕು ಕೊಡುವ ಅವಕಾಶ ಒದಗಿಸುತ್ತದೆ ಎಂದು ಹೇಳಿ ಸಭೆಯ ಸಮ್ಮತಿಯನ್ನು   ತೋರಿದರು.

ಈ ಮಸೂದೆಗೆ ಪ್ರತಿಕ್ರಿಯಿಸಿ ಕಾಗೋಡು ತಿಮ್ಮಪ್ಪನವರು ಈ ಮಸೂದೆ ಕಾನೂನಿನಡಿಯಲ್ಲಿ ಪರ್ಸನಲ್ ಮೈನರ್ ಮತ್ತು ಧರ್ಮ ಸಂಸ್ಥೆಗಳಿಗೆ ಸೇರಿರುವ ಇನಾಂಗಳನ್ನು ರದ್ದು  ಮಾಡುವ ಮುಖಾಂತರ ಸೊಂಡೂರಿನ ಭಾಗದಲ್ಲಿ ಬಹುಭಾಗದಿಂದ ಇದ್ದಂಥ ಇನಾಂ, ರದ್ದತಿ ಕ್ರಮ ಜಾರಿಗೆ ಬಂದಂತಾಗುತ್ತದೆ. ಆದರೆ ಇದಕ್ಕೆ ಅನೇಕ ತರಹವಾದ ಅಸ್ವಶಕ್ತಿಗಳು ಇದ್ದುದರಿಂದ ಆ ಭಾಗದಲ್ಲಿ ಇದುವರೆಗೆ ಜಾರಿಗೆ ಬಂದಿರಲಿಲ್ಲ. ಈಗ ಅವುಗಳನ್ನು ದಾಟಿ ಬಂದಿರುವುದು ನಮಗೆ ಸಂತೋಷವಾಗಿದೆ. ಏಕೆಂದರೆ ಈ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ಕೂಡಲೆ ಈ ಇನಾಂಗಳನ್ನು ರದ್ದು ಮಾಡುವಂತಹ ಕೆಲಸ ಮೊದಲೇ ಆಗಬೇಕಿತ್ತು. ಆದರೆ ಟ್ರಸ್ಟಿಯವರು ಸೊಂಡೂರಿನ ೮ ಗ್ರಾಮಗಳು ಇರುವಂಥ ದೇವಸ್ಥಾನಗಳ ಮೇಲ್ವಿಚಾರಣೆಗೆ ಒಂದು ಟ್ರಸ್ಟ್ ಮಾಡಿಕೊಂಡರು. ಪ್ರೊಕ್ಲಮೇಷನ್ ಆಕ್ಟ್ ಮಾಡಿಕೊಂಡಿದ್ದ ರಿಂದ ಟ್ರಸ್ಟೀಸ್ ಗೆ ಈವೊತ್ತಿನವರೆಗೂ ೩೬ ಸಾವಿರ ರೂಗಳನ್ನು ಕೊಡುತ್ತಾ ಬರಲಾಗಿದೆ. ಅದರೆ ಈತನಕ ಕೂಡ ಅವರು ಇದನ್ನು ಹೇಗೆ ಖರ್ಚು ಮಾಡಿದರು ಎನ್ನುವ ಬಗ್ಗೆ ಲೆಕ್ಕವನ್ನು ಯಾರೂ ಕೇಳಿಲ್ಲ. ಅದರ ಪ್ರಸ್ತಾಪವನ್ನೇ ಮಾಡಿಲ್ಲ. ಈವೊತ್ತು ಈ ಬಗ್ಗೆ ನಾವು ಒಂದು ಕಾನೂನು ಕ್ರಮದಲ್ಲಿ ಜಮೀನನ್ನು  ತೆಗೆದುಕೊಳ್ಳುತ್ತಿದ್ದೇವೆ. ಆದುದರಿಂದ ಆ ದೇವಸ್ಥಾನದಲ್ಲಿ ಏನು ಆಸ್ತಿ ಇದೆಯೋ ಅದು ಸಾರ್ವಜನಿಕ ಸ್ವತ್ತು ಎಂದಾಗುತ್ತದೆ. ಎನ್ನುವುದನ್ನು ಘೋಷಿಸಬೇಕು. ಹಿಂದೆ ಮೇಲ್ವಿಚಾರಣೆಗೆ ಒಂದು ಟ್ರಸ್ಟ್ ಮಾಡಿ ಏನೊಂದು ಹೆರಿಡಿಟರಿ ಪದ್ಧತಿ ಇತ್ತೋ ಅದನ್ನು ತೆಗೆದು ಹಾಕಬೇಕು ಎನ್ನುವುದು ನನ್ನವಾದ. ಹಾಗೆಯೇ ಈ ಪ್ರದೇಶದಲ್ಲಿರುವ ಗಂದದ ಮರ ಮತ್ತು ಖನಿಜ ಸಂಪತ್ತು ಸರ್ಕಾರಕ್ಕೆ ಸೇರಿದ್ದು ಎಂದು ಮಾಡಬೇಕು. ಇನಾಂ ರದ್ದಾದ ಮೇಲೆ ಈ ಗ್ರಾಮಗಳು ಸರ್ಕಾರದ ಸುಪರ್ದಿಗೆ ಬರುತ್ತವೆ. ಹಾಗೆಯೇ ದೇವಸ್ಥಾನಗಳು ಸರ್ಕಾರಕ್ಕೆ ಸೇರುತ್ತವೆ. ಮೇಲ್ವಿಚಾರಣೆ ಜವಾಬ್ದಾರಿ ಆಗ ಸರ್ಕಾರವಾಗುತ್ತದೆಯೇ ಹೊರತು ಮತ್ತಾರೂ ಟ್ರಸ್ಟೀಸ್ ಆಗುವುದಿಲ್ಲ. ಈ ಜಮೀನೆಲ್ಲ ಸರ್ಕಾರಕ್ಕೆ ಸೇರಿದ ಮೇಲೆ ಮತ್ತಾರೂ ಟ್ರಸ್ಟೀಸ್ ಆಗುವುದಿಲ್ಲ. ಟ್ರಸ್ಟೀಸ್ ಹೆಸರಿನಲ್ಲಿ ಅವರು ೩೬ ಸಾವಿರ ರೂ  ಪಡೆದು ಖರ್ಚು ಮಾಡುವುದಕ್ಕೆ ಅವಕಾಶವನ್ನು ನೀಡಕೂಡದು. ಶೃಂಗೇರಿ, ಕೆಳದಿ ದೇವಸ್ಥಾನಗಳಿಗೆ ಸಂಬಂಧ ಪಟ್ಟ ಹಾಗೆ ಧರ್ಮದರ್ಶಿಗಳ ಒಂದು ಕಮಿಟಿಯ ವ್ಯವಸ್ಥೆ ಇರುವಂತೆ ಸೊಂಡೂರು ದೇವಸ್ಥಾನ ಗಳಿಗೂ ಬಂದರೆ ನಮ್ಮದೇನೂ ಅಭ್ಯಂತರವಿಲ್ಲ ಸಾರ್ವಜನಿಕ ಹಣವಾದ ೩೬ ಸಾವಿರ ರೂಪಾಯಿಗಳನ್ನು ಖರ್ಚು ಮಾಡುವಾಗ ಅದನ್ನು ಖರ್ಚು ಮಾಡತಕ್ಕ ವಿದಾನವನ್ನು ಮಸೂದೆಯಲ್ಲಿ ಸೂಚಿಸಿ. ಸರ್ಕಾರದ ಮೇಲ್ವಿಚಾರಣೆಯಲ್ಲಿ ಇದನ್ನು ಖರ್ಚು ಮಾಡಬೇಕು” ಎಂದೆಲ್ಲಾ ತಮ್ಮ ಸಲಹೆಗಳನ್ನು ಕೊಟ್ಟರು.

ಸಚಿವ ಶ್ರೀ ಎನ್. ಹುಚ್ಚು ಮಾಸ್ತಿಗೌಡರು, ಕಾಗೋಡು ತಿಮ್ಮಪ್ಪನವರ ಸಲಹೆಗಳನ್ನು ಸ್ವಾಗತಿಸುತ್ತ, ಮಾನ್ಯ ಸಭೆಗೆ ಭರವಸೆ ಕೊಟ್ಟಿರುವ ಹಾಗೆ ಏಕರೂಪವಾದ ಕಾನೂನನ್ನು ಈ ಧಾರ್ಮಿಕ ಸಂಸ್ಥೆಗಳ ವಿಷಯದಲ್ಲಿ ತರಬೇಕಾಗಿತ್ತು. ಸಲಹೆಗಳನ್ನು ಅದರಲ್ಲಿ ಅಳವಡಿಸುವುದಕ್ಕೆ ಸಾಧ್ಯವಾಗಬಹುದೆಂದು ನನ್ನ ಅಭಿಪ್ರಾಯ. ಸದ್ಯ ಸೇರಿಸುವುದಕ್ಕೆ ಸಾಧ್ಯವಿಲ್ಲದೆ ಇರಬಹುದು. ಆದರೂ ಇದನ್ನು ಪರಿಶೀಲನೆ ಮಾಡಬೇಕಾಗಿ ಬರುತ್ತದೆ. ಈಗ ಬಹುಮುಖ್ಯ ಪ್ರಶ್ನೆ ಎಂದರೆ ಇನಾಂದಾರು ಇನಾಂ ರದ್ದಯಾತಿ ಆಗುವುದಕ್ಕೆ ಮುಂಚಿತವಾಗಿ ಇತರರ ಜೊತೆಯಲ್ಲಿ ಕೆಲವು ಒಪ್ಪಂದಗಳನ್ನು ಹಾಗೂ ಕರಾರುಗಳನ್ನು ಮಾಡಿಕೊಂಡಿದ್ದಾರೆ. ಅವು ಊರ್ಜಿತವಾಗಬೇಕೆ ಬೇಡವೇ ಎಂಬುದು. ಅವು ಯಾವ ರೀತಿಯಲ್ಲಿ ಈ ಒಂದು ಕಾನೂನಿನ ಮಿತಿಯಲ್ಲಿ ಬರಬೇಕೆಂಬುದನ್ನು ನಾವು ಯೋಚನೆ ಮಾಡಬೇಕು. ಕಾನೂನು ಮಾಡುವಾಗ ಇದನ್ನು ಕೂಲಂಕಶವಾಗಿ ಚರ್ಚೆ ಮಾಡಿ ಎಲ್ಲೆಲ್ಲಿ ದೋಷಗಳಿವೆಯೋ ಅಲ್ಲಿ ಅವು ಇಲ್ಲದಂತೆ ಮಾಡುವುದಗತ್ಯ. ಈಗಾಗಲೇ ಅವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಟ್ಟು ಅಲ್ಲಿ ಚರ್ಚೆ ಮಾಡಿ ಅವುಗಳಲ್ಲಿರುವ ತಪ್ಪುಗಳನ್ನು ತಿದ್ದುವುದಕ್ಕೆ ಪ್ರಯತ್ನ ನಡೆಸಿದ್ದೇವೆ. ಅದೇ ರೀತಿ ಈ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವಾಗ ಗೇಣಿದಾರರಿಗೆ ಎಷ್ಟರ ಮಟ್ಟಿಗೆ ಇದರಿಂದ ಪೂರ್ಣ ಲಾಭ ಸಿಗುತ್ತದೆ? ಸರ್ಕಾರಕ್ಕೆ ನೇರವಾಗಿ ವರಮಾನ ಎಷ್ಟು ದೊರಕಬೇಕಾದ್ದು ಇದೆ? ಮತ್ತು ಹಿಂದಿನಿಂದಲೂ ಆಸಕ್ತಿ ಇರುವ ರಾಜಮನೆತದವರಿಗೆ ಇದರಿಂದ ಲಾಭ  ಗಳಿಸುವುದನ್ನು ಯಾವ ರೀತಿ ತಪ್ಪಿಸಬೇಕು? ಎಂಬ ಪ್ರಶ್ನೆಗಳು ಇದರಲ್ಲಿ ಅಡಗಿವೆ. ಅಂತಾಗಿ ಈ ಮಸೂದೆಯನ್ನು ಜಂಟಿ ಪರಿಶೀಲನಾ ಸಭೆಗೆ ಕಳುಹಿಸಿ ಅಲ್ಲಿ ಚರ್ಚಿತವಾದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಅವಶ್ಯ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ ಈ ಮಸೂದೆಯನ್ನು ಜಂಟಿ ಪರಿಶೀಲನಾ ಸಮಿತಿಗೆ ಕಳುಹಿಸುವುದ ಕ್ಕೊಸ್ಕರ ಈ ಸಭೆಯ ಮುಂದೆ ಇದನ್ನು ಮಂಡಿಸುವುದಕ್ಕೆ ಇಷ್ಟ ಪಡುತ್ತೇನೆ ಎಂದರು. ತದನುಗುಣವಾಗಿ ನಿರ್ಣಯವು ಅಂಗೀಕೃತವಾಯಿತು. ಸದಸ್ಯರ ಜಂಟಿ ಪರಿಶೀಲನಾ ಸಮಿತಿ ಯಲ್ಲಿ ೧೫ ವಿಧಾನ ಸಭಾ ಸದಸ್ಯರು ೫ ವಿಧಾನ ಪರಿಷತ್ ಸದಸ್ಯರು ಇರುವ ಸಮಿತಿಯ ಸದಸ್ಯರ ಹೆಸರುಗಳನ್ನು ಸಭೆಯು ಅನುಮೋದಿಸಿತು.

೨೦ ಸೆಪ್ಟಂಬರ್ ೧೯೭೩

ಶೂನ್ಯ ವೇಳೆಯಲ್ಲಿ ಪ್ರಶ್ನೆ ಎತ್ತಿದ ಕೋಣಂದೂರು ಲಿಂಗಪ್ಪ ”ಸೆಪ್ಟಂಬರ್ ೧೦ ರಿಂದ ಸೊಂಡೂರಿನಲ್ಲಿ ರೈತರ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಈವರೆಗೆ ೨೭೪ ಮಂದಿ ದಸ್ತಗಿರಿಯಾಗಿದ್ದಾರೆ. ಅಲ್ಲಿನ ರಾಜಮನೆತನದವರು ಕುಮಾರಸ್ವಾಮಿ ದೇವಾಲಯದ ಹೆಸರಿನ್ಲಲಿ ೮೦೦೦ ಎಕರೆ ಭೂಮಿಯನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ದೇವಾಲಯದ ಆಡಳಿತಕ್ಕಾಗಿ ಸರ್ಕಾರದಿಂದ ವಾರ್ಷಿಕ ೩೬,೦೦೦ ರೂಗಳನ್ನು ಪಡೆಯುತ್ತಿದ್ದಾರೆ. ಬೇಟೆಯಾಡುವುದಕ್ಕೆಂದು ೨೦೦೦ ಎಕರೆ ಕಾಡು ತಮ್ಮ ವಶದಲ್ಲಿ ಹೊಂದಿರುವುದು ಸ್ವತಂತ್ರ ರಾಷ್ಟ್ರದಲ್ಲಿ ತರವಲ್ಲ. ರೈತರಿಗೆ ಸಿಗಬೇಕಾಗಿದ್ದ ಭೂಮಿಯಲ್ಲಿ ರಾತ್ರೋ ರಾತ್ರಿ ತೋಟಗಾರಿಕೆಯ ಪ್ರಯತ್ನ ನಡೆದಿದೆ ಎಂದು ತಿಳಿಸಿ ಸರಕಾರದಿಂದ ಖಚಿತ ಹೇಳಿಕೆ ಕೋರಿದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವರಾಜ ಅರಸು ”ಅವರು ಹೇಳುತ್ತಿರುವುದರಲ್ಲಿ ಸತ್ಯಕ್ಕೆ ದೂರವಾದ ಅಂಶಗಳಿವೆ. ಅದು ಎಷ್ಟು ಸರಿ? ಎಷ್ಟು ಸ್ವಂತದ ಆಸ್ತಿ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ನಮ್ಮ ಸ್ನೇಹಿತರು ಚಳುವಳಿಗೆ ತಪ್ಪು ಸ್ಥಳವನ್ನು ಆರಿಸಿಕೊಂಡಿದ್ದಾರೆ, ಒಂದು ವೇಳೆ ಸರಕಾರದ ಭೂಮಿ ಎಂದಾದರೆ ಅದನ್ನು ನಾನು ವಶಕ್ಕೆ ತೆಗೆದುಕೊಳ್ಳುವುದು ಖಂಡಿತ. ಈಗಾಗಲೇ ನಾನು ವಾಗ್ದಾನ ನೀಡಿದಂತೆ ಸೊಂಡೂರು ಇನಾಂ ರದ್ದತಿ ಮಸೂದೆ ಸಭೆಯ ಮುಂದಿದೆ” ಸದಸ್ಯರ ಬೇಡಿಕೆಗಳ ಬಗ್ಗೆ ತಾವು ಸೊಂಡೂರು ಚಳವಳಿಗೆ ಪೂರಕವಾದ ಹೇಳಿಕೆಯೊಂದನ್ನು ಕೂಡಲೇ ನೀಡಲಿರುವುದಾಗಿ ತಿಳಿಸಿದರು.

ಸೆಪ್ಟಂಬರ್ ೨೧.೧೯೭೩

ಸೋಷಲಿಸ್ಟ್ ಪಾಟೀಯ ಕೋಣಂದೂರು ಲಿಂಗಪ್ಪ ಅವರಿಗೂ ಹಣಕಾಸು ಮಂತ್ರಿ ಶ್ರೀ ಘೋರ್ಪಡೆ ಅವರಿಗೂ ಮಾತಿನ ಚಕಮಕಿ ನಡೆಯಿತು. ರಾಜ್ಯದ ತಲಾ ವರಮಾನ ವರ್ಷಕ್ಕೆ (ಸರಾಸರಿ) ೫೧೫ ರೂಪಾಯಿ ಬಂದರೆ, ದಿನಕ್ಕೆ ಒಂದೂವರೆ ರೂಪಾಯಿ ಆಯಿತೆಂದು ವಾದ. ಇಲ್ಲಿ ಅದು ದಿನಕ್ಕೆ ಮುವತ್ತೈದು ಪೈಸೆಗೂ ಕಡಿಮೆ.. ಎನ್ನುತ್ತ ‘ಬೇಕಿದ್ದರೆ ನಿಮ್ಮ ಸೊಂಡೂರಿಗೇ ಹೋಗಿ ಜನರನ್ನು ಕೇಳಿ” ಎಂದು ಘೋರ್ಪಡೆಯವರಿಗೆ ಹೇಳಿದರು. ಆಗ ಘೋರ್ಪಡೆಯವರು ‘ಸೊಂಡೂರು ವಿಚಾರ ಹಾಗೆಲ್ಲಾ ಲಘುವಾಗಿ ಮಾತಾಡೋದು ಸರಿಯಲ್ಲಿ. ಅಲ್ಲಿನ ಜನರಿಗೆ ಉದ್ಯೋಗ ಇದೆ. ಅದಕ್ಕೆ ನಿಮ್ಮ ಚಳವಳಿಗೆ ತೊಂದರೆ ಆಗಿರೋದು’ (ಒಂದಷ್ಟು ಸಭೆ ಮೌನ). ನಂತರ ಅವರೇ ಮುಂದುವರಿದು ಶ್ರೀ ಲಿಂಗಪ್ಪ ಅವರಿಗೆ ಎಲ್ಲಿ ನೋಡಿದರೂ ಸೊಂಡೂರೇ ಕಾಣುತ್ತೆ. ಆದರೆ ಆ ಜನ ಇವರ ಮಾರ್ಗದರ್ಶನಕ್ಕೆ ಸಿದ್ದವಾಗಿಲ್ಲ” ಎಂದರು. ಕೋಣಂದೂರು ಲಿಂಗಪ್ಪ ಮತ್ತೇನನ್ನೋ ಪ್ರತಿಕ್ರಿಯಿಸುವ ಹೋತ್ತಿಗೆ ಅನೇಕರ ಪ್ರಶ್ನೆ: ‘ಸರ್ಕಾರಿ ನೌಕರರಿಗೆ ಮೂರುವರೆ ಕೋಟಿ ಕೋಟ್ಟಿದ್ದೀರಿ ರೈತರಿಗೇನು ಕೊಟ್ಟೀದ್ದೀರಿ?’ ಘೋರ್ಪಡೆಯವರು ಸಿಟ್ಟಿನಿಂದ ‘ಅಭಾವ ಪರಿಹಾರಕ್ಕೆ ೪೪ ಕೋಟಿ ರೂಗಳನ್ನು ವೆಚ್ಚ ಮಾಡಲಿಲ್ಲವೇ?’ ಎನ್ನುತ್ತಲೂ ಚರ್ಚೆ ಬೇರೆಯ ಸ್ವರೂಪವನ್ನು ಪಡೆಯಿತು.

ಸೆಪ್ಟಂಬರ್ ೨೮.೧೯೭೩

ಕೋಣಂದೂರು ಲಿಂಗಪ್ಪ : ಅಧ್ಯಕ್ಷರೇ ಕಳೆದ ಒಂದು ವಾರದ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ಸೊಂಡೂರಿನ ಬಗ್ಗೆ ಒಂದು ಹೇಳಿಕೆಯನ್ನು ಕೊಡುತ್ತೇನೆ ಎಂದು ಆಶ್ವಾಸನೆಯನ್ನು ಕೊಟ್ಟಿದ್ದರು. ಪ್ರತಿಬಾರಿಯೂ ನಾವು ಹೇಳಿದಾಗಲೆಲ್ಲ. ಹೇಳಿಕೆ ಕೋಡುತ್ತೇವೆ. ಎಂದು ಹೇಳುತ್ತಿದ್ದಾರೆ. ಅದರ ಅರ್ಥ ನಮಗೆ ಗೊತ್ತಾಗುತ್ತಿಲ್ಲ.

ಅಧ್ಯಕ್ಷರು : ಮುಖ್ಯಮಂತ್ರಿಗಳು ಬರಲಿ ವಿಚಾರಿಸೋಣ

ಕೋಣಂದೂರು ಲಿಂಗಪ್ಪ : ನೋ… ನೋ…

ಅಧ್ಯಕ್ಷರು : ಇದೇನು ಇದು ತಾವು ಚಿಕ್ಕ ಮಕ್ಕಳು ಕೇಳಿದ ಹಾಗೆ ಕೇಳುತ್ತಿದ್ದೀರಲ್ಲ

ಬಿ.ಪುಟ್ಟಸ್ವಾಮಯ್ಯ : ಇಲ್ಲಿ ಮಂತ್ರಿಗಳು ಇಲ್ಲದೆ ಹೋದರೆ ನಾವು ದೇವರಿಗೆ ಹೇಳೋಣವೆ ಯಾರಿಗೆ ಹೇಳೋಣ ತಾವೇ ಹೇಳಿ. ಅವರನ್ನು ಕರೆ ಕಳುಹಿಸಿ (೪ ಜನ ಸದಸ್ಯರು ಎದ್ದು ಇದೇ ಮಾತನ್ನು ಪುನರುಚ್ಚರಿಸಿದರು)

ಅಧ್ಯಕ್ಷರು : ತಾವು ಹೀಗೆ ೩-೪ ಜನ ಎದ್ದು ಮಾತನಾಡಿದರೆ ನನಗೆ ಏನೂ ಅರ್ಥವಾಗುವುದಿಲ್ಲ.

ಬಿ.ಪುಟ್ಟಸ್ವಾಮಯ್ಯ : ಸಭೆ ನಡೆಯುವಾಗ ಮಂತ್ರಿಗಳು ಇರಬೇಕಾದುದು ಅಗತ್ಯ ಅಲ್ಲವೇ?

ಅಧ್ಯಕ್ಷರು : ನಾನು ನಿಂತಿರುವಾಗ ಆದರೂ ತಾವು ಕುಳಿತುಕೊಳ್ಳಿ. ಮಂತ್ರಿಗಳು ಬರಲಿ ನಾನು ಅವರನ್ನು ಕೇಳಿ ನಿಮಗೆ ಹೇಳುತ್ತೇನೆ.

ಕೋಣಂದೂರು ಲಿಂಗಪ್ಪ : ಮಾನ್ಯ ಮಂತ್ರಿಗಳು ಒಂದು ವಾರದ ಹಿಂದೆ ನಾವು ಪ್ರಸ್ತಾಪ ಮಾಡಿದಾಗಲೆಲ್ಲಾ ನಾಳೆ ಸ್ಟೇಟ್ ಮೆಂಟ್ ಕೊಡುತ್ತೇನೆ ಎಂದು ಹೇಳುತ್ತಿರುತ್ತಾರೆ. ಅರ್ಥ ಮಂತ್ರಿ ಶ್ರೀ ಘೋರ್ಪಡೆಯವರನ್ನು ರಕ್ಷಣೆ ಮಾಡುವುದಕ್ಕೋಸ್ಕರ ಈ ರೀತಿ ಮಾಡುತ್ತಿದ್ದಾರೆಯೇ? ಅದೇ ರೀತಿಯ ಉದ್ದೇಶವಿರಬೇಕು. ಈ ಸರ್ಕಾರ ಮಾಜಿ ರಾಜ ಮಹಾರಾಜರುಗಳನ್ನು ಸಂರಕ್ಷಣೆ ಮಾಡುವ ಪಟ್ಟಭದ್ರ ಹಿತಗಳನ್ನು ರಕ್ಷಣೆ ಮಾಡುವ ಗುರಾಣಿ ಎಂದು ನಾನು ಹೇಳುತ್ತಿದ್ದೇನೆ.

(ಕಲಾಪಕ್ಕೆ ಮುಖ್ಯಮಂತ್ರಿ ದೇವರಾಜ ಅರಸು ಅವರು ಬರುತ್ತಾರೆ.)

ಕೋಣಂದೂರು ಲಿಂಗಪ್ಪ: ಈಗ ಮುಖ್ಯಮಂತ್ರಿಗಳು ಬಂದಿದ್ದಾರೆ. ಸೊಂಡೂರಿನ ಬಗ್ಗೆ ಅವರು ಸ್ಟೇಟ್‌ಮೆಂಟ್‌ ಮಾಡುತ್ತೇನೆಂದು ಹೇಳಿದ್ದರು. ಅದನ್ನು ಯಾವಾಗ ಮಾಡುತ್ತಾರೆಂದು ಕೇಳುವುದಕ್ಕೆ ಇಷ್ಟಪಡುತ್ತೇನೆ ಎಂದರು. ಮುಖ್ಯಮಂತ್ರಿಗಳು ಅದಕ್ಕೆ ಉತ್ತರವಾಗಿ ಸ್ಟೇಟ್‌ಮೆಂಟನ್ನು ನೀಡಿದರು. ಈ ಹೇಳಿಕೆ ಹೋರಾಟದ ಕೆಲವು ಸಮಸ್ಯೆಗಳನ್ನು ಮಾತ್ರ ಕೇಂದ್ರೀಕರಿ ಸಿತ್ತು. ಹೊರನೋಟಕ್ಕೆ ಅರ್ಥ ಮಂತ್ರಿಗಳನ್ನು ರಕ್ಷಿಸುತ್ತಿದ್ದಾರೆ ಎನ್ನುವುದು ಈ ಸ್ಟೇಟ್‌ಮೆಂಟಿನಿಂದ ಕಾಣುತ್ತಿತ್ತು. (ಈ ಸ್ಟೇಟ್‌ಮೆಂಟಿನ ಪೂರ್ಣ ಭಾಗವನ್ನು ಹೋರಾಟದ ೪೬ ದಿನಗಳು ಭಾಗದಲ್ಲಿ ವಿವರಿಸಲಾಗಿದೆ.)

ಈ ಸ್ಟೇಟ್‌ಮೆಂಟಿಗೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪನವರು ಮಾತನಾಡಿ ಸೊಂಡೂರಿನ ಇನಾಂ ಅನ್ನು ರದ್ದು ಮಾಡುವುದಕ್ಕಾಗಿ ಮಸೂದೆಯನ್ನು ತಂದ ಬಗ್ಗೆ ನಾವು ತಮಗೆ ಕೃತಜ್ಞತೆಯನ್ನು ಅರ್ಪಿಸಿದ್ದೆವು. ಅದನ್ನು ಆದಷ್ಟು ಬೇಗ ಮಂಜೂರಾತಿ ಬರುವಂತೆ ಮಾಡಬೇಕು. ಜೊತೆಗೆ ಅಲ್ಲಿನ ಅರಣ್ಯ ಪ್ರದೇಶವನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಸರ್ಕಾರ ಅದನ್ನು ಅರಣ್ಯ ಇಲಾಖೆಯಿಂದ ಕೂಡಲೇ ವಶಪಡಿಸಿ ಕೊಳ್ಳಬೇಕು. ಜೊತೆಗೆ ಸಂಬಂಧಪಟ್ಟ ಭೂಮಿಯಲ್ಲಿ ಇನ್ನೂ ಆರ್ಟ್‌ಕಲ್ಚರ್ ಫಾರಂ ಅನ್ನು ಮಾಡುವ ನಿರ್ಣಯ ಆಗಿಲ್ಲ ಎಂದು ಹೇಳಿದ್ದಾರೆ. ಇದನ್ನು ಸರ್ಕಾರಕ್ಕೆ ತೆಗೆದುಕೊಳ್ಳುವ ಬಗ್ಗೆ ಮಾನ್ಯ ರೆವಿನ್ಯೂ ಮಂತ್ರಿಗಳು ಪರಿಶೀಲನೆ ಮಾಡುತ್ತೇವೆಂದು ಹೇಳಿದ್ದಾರೆ. ಇದರ ಬಗ್ಗೆ ಒಂದು ತೀರ್ಮಾನವನ್ನು ಕಂಡುಹಿಡಿಯುತ್ತೇವೆಂದೂ ಅವರು ಹೇಳಿದ್ದಾರೆ. ಅವರು ಆ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ನನ್ನನ್ನು ಕೂಡ ಬನ್ನಿ ಎಂದು ಹೇಳಿದ್ದಾರೆ. ಅದನ್ನು ಅವರೂ ಕೂಡ ನಡೆಸಿಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಎಂದರು.

ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಪರಿಹಾರದ ಸೂಚನೆಗಳಿಲ್ಲ ಎಂದು ಚಳವಳಿಗಾರರು ಸೊಂಡೂರಿನಲ್ಲಿ ಪ್ರತಿಕ್ರಿಯೆ ನೀಡಿದರು. ಆದರೂ ಸೊಂಡೂರು ಚಳುವಳಿಗೆ ಪೂರಕವಾದ ಅನೇಕ ಅಂಶಗಳಿಗೆ ಈ ವ್ಯಾಖ್ಯಾನ ಬೆಳಕು ಚೆಲ್ಲಿತ್ತು. ಸರ್ಕಾರ ಸೊಂಡೂರು ಬಗೆಗೆ ಗಮನ ಹರಿಸುತ್ತಿದೆ ಎನ್ನುವುದು ತಡವಾಗಿಯಾದರೂ ಮನಗಾಣಿಸಿತು.

ಇಲ್ಲಿಯ ಚರ್ಚೆಗಳನ್ನು ಗಮನಿಸಿದರೆ ವಿಧಾನಸಭಾ  ಕಲಾಪದಗಳಲ್ಲಿಯೂ ಒಂದು ಹೋರಾಟ ನಡೆದಂತೆ ಕಾಣುತ್ತದೆ. ೧೯೭೨ರಲ್ಲಿ ಬಾಚಿಗೊಂಡನಹಳ್ಳಿಯ ಕೆ. ಚೆನ್ನ ಬಸವನ ಗೌಡರು ಗಂಭೀರವಾಗಿ ಆರೋಪಿಸಿದರು. ಆದರೆ ಎಂ.ವೈ. ಘೋರ್ಪಡೆಯವರು ತೇಲಿಕೆಯ ಉತ್ತರ ಕೊಟ್ಟು ವಿಷಯಾಂತರ ಮಾಡಿದ್ದರು. ನಿರ್ದಿಷ್ಟ ಉತ್ತರಕ್ಕಾಗಿ ಗೌಡರೊಂದಿಗೆ ಯಾರೋಬ್ಬರೂ ಮಾತೆತ್ತಲಿಲ್ಲ. ಬಸವರಾಜ ಕಟ್ಟಿಮನಿ ಅವರಂತಹ ಗಂಭೀರ ಕಾದಂಬರಿ ಕಾರರು ಎಂ.ವೈ. ಘೋರ್ಪಡೆಯವರನ್ನು ಹೊಗಳುತ್ತ ಸಮರ್ಥಿಕೊಳ್ಳತ್ತಾರೆ. ಇದು ಒಬ್ಬ ಲೇಖಕನಿಗಿರುವ ಸಾಮಾಜಿಕ ಬದ್ಧತೆಯನ್ನೇ ಪ್ರಶ್ನಾರ್ಥಕಗೊಳಿಸುತ್ತದೆ. ಕಾರಣ ಆಳುವ ಸರ್ಕಾರದ ಪ್ರಾಬಲ್ಯ. ಎಂ.ವೈ. ಘೋರ್ಪಡೆಯವರು ಅರ್ಥ ಸಚಿವರಾಗಿದ್ದರು. ಅಂತೆಯೇ ಕೇಂದ್ರ ಸರ್ಕಾರದ ಇಂದಿರಾಗಾಂಧಿಯವರೊಂದಿಗೆ ಉತ್ತಮ ಸಂಬಂಧವಿರಿಸಿಕೊಂಡಿದ್ದರು. ಈ ಮುಂಚೆಯೂ ಇಂತಹ ಪ್ರಶ್ನೆಗಳು ಎದ್ದಾಗಲೂ ಅದರ ಬಗಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಪ್ರಭುತ್ವವು ತನ್ನನ್ನು ತಾನು ಸುಭದ್ರವಾಗಿರಿಸಿಕೊಳ್ಳಲು ಇಂತಹ ವ್ಯವಸ್ಥೆಯನ್ನು ರೂಪಿಸಿಕೊಂಡಿರುತ್ತದದೆ. ಪ್ರಭುತ್ವಕ್ಕೆ ಚ್ಯುತಿ ಬಂದಾಗಲೆಲ್ಲಾ ಆ ವ್ಯವಸ್ಥೆಗೆ ಜೀವಂತಿಕೆ ಬರುತ್ತದೆ.

ಇಲ್ಲಿಯ ಕಲಾಪಗಳನ್ನು ನೋಡಿದರೆ ಮುಖ್ಯಮಂತ್ರಿಗಳ ಗೈರು ಹಾಜರಿಯೇ ಹೆಚ್ಚು. ದೇವರಾಜ ಅರಸು ಸೊಂಡೂರು ಬಗೆಗಿನ ಚರ್ಚೆಯಲ್ಲಿ ತೀವ್ರವಾಗಿ ಭಾಗವಹಿಸಲಿಲ್ಲ. ಅವರ ಪ್ರತಿಕ್ರಿಯೆಯೂ ಮೆದುವಾಗಿತ್ತು. ಅಂತೆಯೇ ಚಳುವಳಿಗೆ ಆಯ್ಕೆ ಮಾಡಿಕೊಂಡ ಸ್ಥಳವೇ ಸರಿಯಾದುದಲ್ಲ ಎಂದಿದ್ದರು? ಹೆಚ್ಚು ಕಡಿಮೆ ೮೦೦೦ ಸಾವಿರ ಎಕರೆಗಳ ಇನಾಂ ಭೂಮಿಯನ್ನು ಇರಿಸಿಕೊಂಡ ರಾಜವಂಶದೆದುರು ಚಳವಳಿ ಮಾಡಿದ್ದು ಅರಸರಿಗೆ ತಪ್ಪು ಸ್ಥಳವಾಗಿತ್ತು. ಭೂಮಿಯ ಬಗ್ಗೆ ತೀವ್ರ ಆಸ್ಕತಿಯನ್ನು ಇರಿಸಿಕೊಂಡು ರೈತಪರವಾಗಿದ್ದ ಅರಸರು ಹೀಗೇಕೆ ಪ್ರತಿಕ್ರಿಯಿಸಿದರು? ಅವರಿಗಿದ್ದ ಒತ್ತಡಗಳೇನು? ಭೂ ಸುಧಾರಣೆಯ ಹರಿಕಾರರೆಂದು ಹೇಳುವ ಹೊತ್ತಿಗೆ ಸೊಂಡೂರಿನ ಭೂಮಿ ವಿಷಯವಾಗಿ ಅವರು ತಾಳಿದ ನಿಲುವೇನು? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಇನ್ನು ಕಲಾಪಗಳಲ್ಲಿ ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪನವರು ಮಾತ್ರ ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಿದರು.  ಆಗಲೇ  ಸೊರಬ ಕ್ಷೇತ್ರದಲ್ಲಿ ಸೋಷಲಿಸ್ಟ್ ಪಾರ್ಟಿಯಿಂದ ಗೆದ್ದ ಎಸ್. ಬಂಗಾರಪ್ಪ ಚರ್ಚೆಯಲ್ಲಿ ಧ್ವನಿ ಎತ್ತಲಿಲ್ಲ. ಇವರ ಮೌನದ ಅರ್ಥವೇನು? ಯಾಕಾಗಿ ಸುಮ್ಮನಿದ್ದರು ಎನ್ನುವ ಅನುಮಾನಗಳು ಕಾಡುತ್ತವೆ. ಇಡಿಯಾದ ಚರ್ಚೆಗಳಲ್ಲಿ ಗಮನಾರ್ಹ ಸಂಗತಿಯೆಂದರೆ ಅರೋಗ್ಯಕರ ಮುಖಾಮುಖಿ ಪಕ್ಷಾತೀತವಾದ ಧೋರಣೆಗಳು, ಸಮಾಜಮುಖಿಯಾಗಿ ಆಗಿನ ಜನಪ್ರತಿನಿಧಿಗಳಿಗಿದ್ದ ಬದ್ಧತೆ.