ಎಲಿಗಾರ ತಮ್ಮಪ್ಪನ ಮಗ ನಾಗರಾಜಪ್ಪ ಪತ್ರಿಕಗಳ ಬಗ್ಗೆ ಹೀಗೆ ಹೇಳುತ್ತಾರೆ. “ಆಗ ಬಳ್ಳಾರಿ ಜಿಲ್ಲೆಯ ಪತ್ರಕರ್ತರೆಲ್ಲದ ರಾಜವಂಶದ ಪರವಾಗಿದ್ದರು. ಯಾರೂ ರಾಜರ ವಿರುದ್ಧವಾಗಿ ಬರೆಯುವಂತಹ ಸ್ಥಿತಿ ಇರಲಿಲ್ಲ. ಚಳವಳಿ ನಡೆಯುವಾಗ ನಾನು ಬಿ.ಎಸ್ಸಿ ಓದುತ್ತಿದ್ದ ಹುಡುಗ. ಎರಡು ದಿನಕ್ಕೊಮ್ಮೆ ಚಳವಳಿ ನಡೆದ ವರದಿಯನ್ನು ನಾನೇ ಸ್ವತಃ ಬೆಂಗಳೂರಿಗೆ ಹೋಗಿ ಪತ್ರಿಕ ಕಛೇರಿಗಳಿಗೆ ತಲುಪಿಸುತ್ತಿದ್ದೆ. ಆಗ ವರದಿಗಳು ಪ್ರಕಟವಾಗುತ್ತಿದ್ದವು” ಚಳವಳಿಗಾರರಿಗೆ ಚಳವಳಿಯ ಸುದ್ದಿ ವರದಿಯಾಗಬೇಕು, ರಾಜ್ಯ ದಾದ್ಯಂತ ಪ್ರಜ್ಞಾವಂತ ಸಮುದಾಯಕ್ಕೆ ತಿಳಿಯಬೇಕೆಂಬ ಜಾಗ್ರತೆ ಇತ್ತು. ದಿನಪತ್ರಿಕೆಗಳ ವರದಿಯನ್ನು ನೋಡಿದರೆ ಪರ ವಿರೋಧಗಳ ಮಧ್ಯೆಯೂ ಸುದ್ದಿಯನ್ನು ನಿಷ್ಠೆಯಿಂದ ಪ್ರಕಟಿಸುವುದು ಮುಖ್ಯವಾಗಿತ್ತು. ರಾಜ್ಯಮಟ್ಟದ ದಿನಪತ್ರಿಕೆಗಳಿಗೂ, ಸ್ಥಳೀಯ ದಿನ ಪತ್ರಿಕೆಗಳಿಗೂ ಭಿನ್ನ ದಾರಿಗಳಿದ್ದವು. ಹುಬ್ಬಳ್ಳಿಯಿಂದ ಬರುತ್ತಿದ್ದ ‘ಪ್ರಪಂಚ’ ಪತ್ರಿಕೆಯಲ್ಲಿ ಓದುಗರು ಕೇಳಿದ ಒಂದು ಪ್ರಶ್ನೆಯಿದೆ. “ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳೇಕೆ ಸೊಂಡೂರು ರಾಜದ ಶೋಷಣೆಯ ಬಗ್ಗೆ ಬರೆಯುವುದಿಲ್ಲ?” : ಅದಕ್ಕೆ ಪಾಟೀಲ ಪುಟ್ಟಪ್ಪನವರ ಉತ್ತರವೆಂದರೆ ‘ಗಾಜಿನ ಮನೆಯಲ್ಲಿದ್ದವರು ಇನ್ನೊಂದು ಗಾಜಿನ ಮನೆ ಮೇಲೆ ಕಲ್ಲು ತೂರುವುದಿಲ್ಲ’, ಅಂದರೆ ಪ್ರಭುತ್ವವನ್ನು ಪತ್ರಿಕೆಗಳೂ ಪೋಷಿಸುತ್ತಿದ್ದವು. ಚಳವಳಿಯ ಪ್ರಾರಂಭದಿಂದ ಮುಗಿಯುವ ತನಕ ‘ವಿಶಾಲ ಕರ್ನಾಟಕ’ ವರದಿ ಮಾಡಿತು. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಹೋರಾಟದ ವರದಿ ಮಾಡಿದ್ದು ಮೊದಲು ‘ಕನ್ನಡಪ್ರಭ’, ಎರಡನೆಯದು ‘ಪ್ರಜಾವಾಣಿ’, ಸಂಯುಕ್ತ ಕರ್ನಾಟಕವಂತೂ ಚಳುವಳಿಯನ್ನು ವಿರೋಧಿಸುತ್ತಿದ್ದ ಇನ್ನೊಂದು ಮುಖವನ್ನು ವರದಿ ಮಾಡುತ್ತಿತ್ತು.

ಸೊಂಡೂರಿನಲ್ಲಿ ಸೋಷಲಿಸ್ಟ್ ಪಕ್ಷದ ಚಳವಳಿ ಆರಂಭ, ಬೇಡಿಕೆ ಈಡೇರಿಕೆ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪಟೇಲ್ ಆಗ್ರಹ, ಸೊಂಡೂರು ಸತ್ಯಾಗ್ರಹ ವಿಧಾನ ಸಭೆಯಲ್ಲಿ ಪ್ರಸ್ತಾಪ, ಸೊಂಡೂರಿನ ವ್ಯವಹಾರ ಕುರಿತು ಅರಸು ಹೇಳಿಕೆ, ಸತ್ಯಾಗ್ರಹ ನಿಲ್ಲದು ಸೊಂಡೂರು ಸತ್ಯಾಗ್ರಹ  ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಪರಿಹಾರ ಸೂತ್ರವಿಲ್ಲ. ಇಂತಹ ಸುದ್ದಿಯನ್ನು ಪ್ರಕಟಿಸಿದ ‘ಕನ್ನಡಪ್ರಭ’ ಚಳವಳಿಯನ್ನು  ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಅಂತೆಯೇ ಈ ಸುದ್ದಿಯ ಹಿಂದಿರುವ ಧೋರಣೆ ರೈತ ಪರವಾಗಿತ್ತು. ಚಳವಳಿಯ ನಲವತ್ತಾರು ದಿನಗಳ ವರದಿ ಸಂಪೂರ್ಣವಾಗಿ ‘ಕನ್ನಡಪ್ರಭ’ ಮತ್ತು ‘ವಿಶ್ವವಾಣಿ’ಯಲ್ಲಿ ಮಾತ್ರ ದೊರೆಯುತ್ತದೆ. ಈ ವರದಿಯು ರಾಜ್ಯಮಟ್ಟದ ಚಳವಳಿ ಎನ್ನುವ ವ್ಯಾಪ್ತಿಯನ್ನು ವಿಸ್ತರಿಸುವಂತಿತ್ತು. ‘ಪ್ರಜಾವಾಣಿ’ಯೂ ಇದಕ್ಕೆ ಭಿನ್ನವಾಗಿಯೇನೂ ಇರಲಿಲ್ಲ. ಆದರೆ ‘ಕನ್ನಡಪ್ರಭ’ ಸೂಕ್ಷ್ಮವಾಗಿ ಗಮನಿಸದಷ್ಟು ಈ ಪತ್ರಿಕೆಗೆ ಸಾಧ್ಯವಾಗಲಿಲ್ಲ. ಆದರೆ ವರದಿಯ ಧೋರಣಿ ಮಾತ್ರ ರೈತ ಪರವಾಗಿಯೇ ಇತ್ತು. ಮಾರ್ಚ್ ೨೪.೧೯೭೩ ರಂದು ಸೊಂಡೂರು ಸತ್ಯಾಗ್ರಹದ ಪೂರ್ವ ತಯಾರಿಯಾಗಿ ಬೆಂಗಳೂರಿನಲ್ಲೊಂದು ಮೆರವಣಿಗೆ ನಡೆಯಿತು. ಅಂದು ‘ಪ್ರಜಾವಣಿ’ಯಲ್ಲಿ ಮೆರವಣಿಗೆಯ ಫೋಟೊದೊಂದಿಗೆ ‘ಅಂದು ಕಾಗೋಡು ಇಂದು ಸೊಂಡೂರು’. ಎಂಬ ಶೀರ್ಷಿಕೆಯಡಿ ಸುದ್ದಿಯಾಯಿತು. ”ವಿಧಾನಸೌಧದ ಮುಂದೆ ಕಬ್ಬನ್ ಪಾರ್ಕ್‌ನಲ್ಲಿ ಸಮಾವೇಶಗೊಂಡಿದ್ದ ಸತ್ಯಾಗ್ರಹಿಗಳ ಒಂದು ಭಿತ್ತಿಪತ್ರ ಅವರ ಇತಿಹಾಸ ಉದ್ದೇಶವನ್ನು ಪತ್ರಿಬಿಂಬಿಸಿತು. ದೂರದ ಸೊಂಡೂರು ತಾಲ್ಲೂಕಿನಿಂದ ಬಂದಿದ್ದ ರೈತರ ಯೋಗಕ್ಷೇಮ ವಿಚಾರಿಸಲು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸರು ವಿಧಾನಸೌಧದಿಂದ ಕಬ್ಬನ್ ಪಾರ್ಕ್‌ನ ಮರದಡಿಗೆ ಇಳಿದು ಬಂದರು” ಇಂತಹ ಸುದ್ದಿಗಳಲ್ಲಿ ಪ್ರಚೋದನೆಯಾಗಲಿ, ಸೊಂಡೂರು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಧೋರಣೆಯಾಗಲಿ ಇರಲಿಲ್ಲ. ‘ಕನ್ನಡಪ್ರಭ’ ಮತ್ತು ‘ಪ್ರಜಾವಾಣಿ’ ಸುದ್ದಿಯನ್ನು ಪ್ರಕಟಿಸುವಲ್ಲಿ ಆಸಕ್ತಿ ತೋರಿದವು. ಕಾಳಜಿ ವಹಿಸಿದವು. ಆದರೆ ರಕ್ಷಣಾತ್ಮಕ ಆಟವೆಂಬಂತೆ ನಿರ್ಲಿಪ್ತತೆಯನ್ನು ತಾಳಿದವು.

ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಚಳವಳಿಯ ಕಡಿಮೆ ಸುದ್ದಿ ಪ್ರಕಟಿಸಿದ್ದೆಂದರೆ ‘ಸಂಯುಕ್ತ ಕರ್ನಾಟಕ’. ‘ರೈತರ ಚಳುವಳಿಯನ್ನು ವಿರೋಧಿಸಲು ಮನವಿ’ ‘ಸಮಾಜವಾದಿ ಸತ್ಯಾಗ್ರಹಿಗಳ  ಬಂಧನ’, ‘ನಂದಿಹಳ್ಳಿಯಲ್ಲಿರುವ ಪದವಿಯೋತ್ತರ ತಾಂತ್ರಿಕ ಕೇಂದ್ರ ಸ್ಥಾಪನೆ’ ‘ಸೊಂಡೂರು ಹೋರಾಟ ನಿಲ್ಲಿಸಲು ಮನವಿ’, ‘ಸೊಂಡೂರಿನಲ್ಲಿ ಲಾಠಿ ಪ್ರಯೋಗ ಆಗಿಲ್ಲ’ ಇಂತಹ ಚಳವಳಿಯ ವರದಿಗಳು ಇಲ್ಲಿನ ರೈತರಲ್ಲಿ ಭಯವನ್ನು ಹುಟ್ಟಿಸುವಂತಿದ್ದವು. ಅಂತೆಯೇ ಚಳವಳಿಯನ್ನು ವಿರೋಧಿಸಲು ಜನರ ಮನಸ್ಥಿತಿಯನ್ನು ಬದಲಾಯಿಸುವ ಧೋರಣೆಯಿತ್ತು. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸೊಂಡೂರು ರಾಜರ ಶಿವಪುರ ಪ್ಯಾಲೆಸ್‌ಗೆ ಹೋಗಿ, ಅರಮನೆಯ ಮುಂದಿನ ಕಛೇರಿಯಲ್ಲಿ ಕುಳಿತಾಗ ಅಲ್ಲಿನ ಅಧಿಕಾರಿಯೊಬ್ಬರ ಬಳಿ ಮಾತನಾಡಿದೆ. ಸಂಯುಕ್ತ ಕರ್ನಾಟಕದ ವರ್ಷದ ಕ್ಯಾಲೆಂಡರ್ ಗೋಡೆಯ ಮೇಲಿತ್ತು. ಅದೇ ಪತ್ರಿಕೆಯನ್ನು ಆತ ಓದುತ್ತಿದ್ದ. ಯಾಕೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ಪತ್ರಿಕೆಗಳನ್ನು ಕಛೇರಿಗೆ ತರಿಸುವುದಿಲ್ಲವೇ? ಎಂದು ಕೇಳಿದೆ. ಆತ ಇದು ಹಿಂದಿನ ಕಾಲದಿಂದಲೂ ರಾಜರ ಬಗ್ಗೆ ಗೌರವ ಇಟ್ಟುಕೊಂಡು ಪತ್ರಿಕೆ ರೀ ಇವೆಲ್ಲ ಈಗ ಬಂದೋವು” ಎಂದರು. ಒಂದು ಕಾಲದಲ್ಲಿ ರಾಜರ ಪರ ಬರೆದ ಪತ್ರಿಕೆ ಈಗಲೂ ರಾಜಪರ ಧೋರಣೆಗಳನ್ನು ಹೇಗೆ ವಿಸ್ತರಿಸಿಗೊಳ್ಳುತ್ತಿದೆ ಎಂದು ಸೋಜಿಗವಾಯಿತು.

ಹಾಗೆ ನೋಡಿದರೆ ರಾಜವಂಶದ ಜೊತೆ ಪತ್ರಿಕೆಗಳು ನಿರಂತರವಾಗಿ ಸಂಘರ್ಷ ಮಾಡುತ್ತಲೇ ಬಂದಿವೆ. ೧೯೫೩ರಲ್ಲಿ ಎಂ.ಜಿ. ಕರುಣಾಳ್ ಸಂಪಾದಕತ್ವದ ‘ಕರ್ಮಯೋಗಿ’ ಬೆಂಗಳೂರಿನಿಂದ ಬರುತ್ತಿತ್ತು. ಆಗ ಯಶವಂತರಾವ್ ಘೋರ್ಪಡೆ ಮತ್ತು ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಸಂಬಂಧ ಕುರಿತು ಬರೆಯಿತು. ”ಹನುಮಂತಯ್ಯನವರೇ ನೂತನ ಬಳ್ಳಾರಿ ಜಿಲ್ಲೆಯನ್ನು ಬಂಡವಾಳಗಾರರ ಕೈಯಿಂದ ಕಾಪಾಡಿ” ಎನ್ನುವ ಶೀರ್ಷಿಕೆಯಲ್ಲಿ ಪ್ರಕಟಿಸಿತು. ಅದರ ಒಂದು ಭಾಗ ಹೀಗಿದೆ:

ಸೊಂಡೂರು ಸಂಸ್ಥಾನವು ಬಳ್ಳಾರಿ ಜಿಲ್ಲೆಯಲ್ಲಿ ವಿಲೀನಿಕರಣದಿಂದ ಮೈಸೂರು ಸೇರಿ ತಷ್ಟೆ.. ಅಲ್ಲಿ ಸೊಂಡೂರು ಜನರಲ್ ಮೈನಿಂಗ್ ಕಂಪನಿ ಎಂಬ ಒಂದು ಸಂಸ್ಥೆ ಬೆಲ್ಜಿಯಂ ಬಂಡವಾಳಗಾರರ ನೇತೃತ್ವದಲ್ಲಿ ನಡೆಯುತ್ತಿದೆ. ಕೋಟ್ಯಾಂತರ ರೂಪಾಯಿಗಳಷ್ಟು ಬೆಲೆಯುಳ್ಳ ಅದುರುಗಳು ಇಲ್ಲಿಂದ ಪಾಶ್ಚಾತ್ಯ ದೇಶದ ಕೈಗಾರಿಕಾ ಸಂಸ್ಥೆಗಳಿಗೆ ತಲುಪುತ್ತಿದೆ. ಸುವ್ಯವಸ್ಥಿತವಾದ ವಿದೇಶಿ ಬಂಡವಾಳಗಾರರ ಸಂಸ್ಥೆಯನ್ನು ತಮ್ಮ ವಶಕ್ಕೆ ಕೊಡುವುದಾದರೆ ೬೦ ಕೋಟಿ ರೂಪಾಯಿ ಕೊಡುತ್ತೇವೆಂದು ಅಮೇರಿಕನ್ನರು ಬೆಲ್ಜಿಯಂಗೆ ಆಸೆ ತೋರಿಸಿದೆ. ಸೊಂಡೂರು ಮಹರಾಜರು ಸುಮಾರು ೩೨ ಚದರ ಮೈಲು ಪ್ರದೇಶವನ್ನು ರಾಯಲ್ಟಿ ಆಧಾರದ ಮೇಲೆ ತಮಗೆ ಕೊಡಿಸಬೇಕೆಂದು ಮೈಸೂರು ಸರ್ಕಾರವನ್ನು ಕೇಳುತ್ತಿದ್ದಾರೆ. ದೊಡ್ಡ ವ್ಯವಹಾರದ ಕೇಳಿಕೆ ಹೇಳಿಕೆಗಳ ಒಳ ಸ್ವರೂಪವೆಲ್ಲಾ ಏಕಾದಿಪತ್ಯ ವೆಂಬ ಅಕ್ರಮಕ್ಕೆ ಸಹಾನುಭೂತಿ ಕೇಳುವಂತಿದೆ. (ಏಪ್ರಿಲ್ ,೧೯೫೩)

ಈ ವರದಿ ಬಂಡವಾಳಶಾಹಿ ಏಕಾಧಿಪತ್ಯದ ವಿರುದ್ಧ ಬಿಗಿಯಾದ ನಿಲುವು ತಾಳಿದೆ. ಇಂದು ಸಹ ಗಣಿಗಾರಿಕೆಯ ರಾಜ್ಯ ಸರ್ಕಾರವನ್ನು ನಿಯಂತ್ರಿಸುತ್ತಿದೆ. ಬಹುಶಃ ಇಂತಹ ನಿಯಂತ್ರಣ ೫೦ರ ದಶಕದಿಂದ ನಡೆಯುತ್ತ ಬಂದಿದೆ. ಕೆಂಗಲ್ ಹನುಮಂತಯ್ಯನವರಿಂದ ಹಿಡಿದು ಇವತ್ತಿನ ರಾಜಕಾರಣಿಗಳವರೆಗೆ ಗಣಿಗಾರಿಕೆಯೊಂದಿಗೆ ಸಂಬಂಧವಿದೆ. ಈ ಬಗೆಯಲ್ಲಿ ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಗಣಿಗಾರಿಕೆಯ ಜೊತೆ ಪರಿಶೀಲಿಸುವ ಅಗತ್ಯವಿದೆ.

ಪಾಟೀಲ್ ಪುಟ್ಟಪ್ಪನವರ ‘ಪ್ರಪಂಚ’ ಹುಬ್ಬಳ್ಳಿಯಿಂದ ಬರುತ್ತಿದ್ದ ಕೋ. ಚನ್ನಬಸಪ್ಪನವರ ಸಂಪಾದಕತ್ವದಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ‘ರೈತ’ ಮುಂತಾದ ಪತ್ರಿಕೆಗಳು ಸೊಂಡೂರು ರಾಜ ಮನೆತನದ ಬಗೆಗೆ ಬರೆಯುತ್ತ  ಬಂದವು. ಜಗಳ ಕಾದವು. ಪತ್ರಿಕಾ ವರದಿಗೆ ಆಡಳಿತ ಸರ್ಕಾರ ಸ್ಪಂದಿಸದಿದ್ದಾಗ ಆಕ್ರೋಶ ವ್ಯಕ್ತವಾಯಿತು.  ಸೊಂಡೂರು ಸಂಸ್ಥಾನ ಸ್ವಾತಂತ್ರ ನಂತರವೂ ತನ್ನ ಅಧಿಕಾರವನ್ನು ಚಲಾಯಿಸತೊಡಗಿತು. ಪ್ರಜಾಪ್ರಭುತ್ವ ಸರ್ಕಾರ ಎಂಬ ಹೊತ್ತಲ್ಲೆ ರಾಜಶಾಹಿ ಇಲ್ಲಿತ್ತು. ಇದನ್ನು ಮನಗಾಣಿಸಲು ಪಾಪು ಹಲವು ಬಾರಿ ಬರೆದು ಸುಸ್ತಾದರು. ಒಂದೆರಡು ವರದಿಗಳನ್ನು ನೋಡಬಹುದು.

ಸೊಂಡೂರು ಮಾಜಿ ದೊರೆ ದೇವಾಲಯದ ಹಣವನ್ನು ಸ್ವಂತಕ್ಕೆ ಬಳಸುತ್ತಿದ್ದಾರೆ ಎನ್ನುವ ಶೀರ್ಷಿಕೆಯಲ್ಲಿ ೧೦ ಸೆಪ್ಟಂಬರ್ ೧೯೫೯ರಲ್ಲಿ ಪ್ರಕಟಿಸಿದ ವರದಿ ಭಾರತವು ಪ್ರಜಾ ರಾಜ್ಯವಾಗಿ ಹನ್ನೆರಡು ವರ್ಷ ಸಂದು ಹೋದರೂ ಚಿಲ್ಲರೆ ರಾಜ ಮಹಾರಾಜರುಗಳ ದರ್ಪ ಇನ್ನೂ ನಿಂತಿಲ್ಲವೆನ್ನುವುದಕ್ಕೆ ಸೊಂಡೂರಿನ ಮಾಜಿ ದೊರೆ ಯಶವಂತರಾವ್ ಘೋರ್ಪಡೆಯವರು ಸಾಕ್ಷಿಯಾಗಿದ್ದರೆ. ಅವರದರ್ಭಾರಿನಡತೆಯನ್ನು ನೋಡಿ, ಅವರಿನ್ನು ತಾವು ಸೊಂಡೂರಿನ ದೊರೆಗಳಂತೆ ಭಾವಿಸಿದ್ದಾರೆ.

* ಡಿಸೆಂಬರ್ ೧೮.೧೯೫೯ರಲ್ಲಿ ಪ್ರಕಟವಾದ ವರದಿಜಮೀನುದಾರರು ಜಿಂಕೆಗಳಿಗೆ ಜಾಗ ಸಾಲದೆಂದು ಜನರನ್ನು ಜಮೀನಿನಿಂದ ಓಡಿಸಿ ಅಲ್ಲಿ ಜಿಂಕೆಗಳನ್ನು ಸಾಕಿದಂತ ಉದಾಹರಣೆ ನಿಮಗೆ ಗೊತ್ತೆ? ಉಳುವ ಭೂಮಿಯನ್ನು ಬಿಡಿಸಿ ಭೂಮಿಯಲ್ಲಿ ಜಮೀನುದಾರರು ಕುರಿ ಸಾಕಿದ್ದನ್ನು ನಂಬುತ್ತೀರಾ? ನಂಬುವುದು ಕಷ್ಟ ಆದರೆ ವಾಸ್ತವವಾಗಿ ಇಂಗ್ಲೆಂಡ್ ಮತ್ತು ಸ್ಕಾಟ್ ಲ್ಯಾಂಡಿನಲ್ಲಿ ಹೀಗೆ ನಡೆಯಿತು ಎಂದು ಬರ್ನಾಡ್ ಷಾ ತಮ್ಮ ಗ್ರಂಥ ‘Intelligent womans Guide’ದಲ್ಲಿ ಬರೆಯುತ್ತಾರೆ. ಇಂಗ್ಲೆಂಡಿನ ಭೂ ಸ್ವಾಮಿಗಳಿಗೆ ಜನಗಳಿಗಿಂತಲೂ ಜಿಂಕೆ, ಕುರಿಗಳೇ ಹೆಚ್ಚು ಪ್ರಯೋಜನಕಾರಿಯಾಗಿ ಕಂಡುಬಂದವು. ಹೀಗೆ ಜನಗಳ ಬೆಲೆ ಮೂಕ ಪ್ರಾಣಿಗಳ ಬೆಲೆಗಿಂತ ಅಗ್ಗವಾಗಿತ್ತು. ರೈತರನ್ನು ದೇಶಾಂತರ ಅಟ್ಟಿದ ಜನ ಅಮೇರಿಕಾದಲ್ಲಿ ನೆಲೆಸಿದರು. ಇಂದು ಅವರು ಜಗತ್ತಿನ ಕುಬೇರರು ಎನ್ನುತ್ತಾರೆ.

ಷಾ ಹೇಳುವ ಮಾತು ಮಧ್ಯಯುಗದ ಅನಾಗರಿಕ ಜನರ ಕ್ರೂರವರ್ತನೆ, ಇಂದೆಲ್ಲಿ ಅಂಥ ಅನ್ಯಾಯ ನಡೆದೀತು? ಎಂದು ಕೆಲವರು ಭಾವಿಸಬಹುದು. ಅದು ಸಹಜವೂ ಕೂಡ. ಆದರೆ ವಾಸ್ತವದಲ್ಲಿ ಇಂದಿಗೂ ನಮ್ಮ ದೇಶದ ಪ್ರತಿಯೊಂದು ಜಮೀನುದಾರರಲ್ಲೂ ಜಹಗೀರಿಯಲ್ಲೂ ರಾಜರ ಖಾಸಗೀ ಆಸ್ತಿಗಳಲ್ಲೂ ರೀತಿಯಾಗಿ ಜನರನ್ನು ಭೂಮಿಯಿಂದ ಬಿಟ್ಟು ಓಡಿಸುವ ಉದಾಹರಣೆಗಳಿವೆ. ಅಂಥವರಲ್ಲಿ ಸೊಂಡೂರಿನ ಯಶವಂತರಾವ್ ಘೋರ್ಪಡೆಯವರು ಒಬ್ಬರು.

ಇಂತಹುದೇ ವರದಿಗಳ ರಾಜವಂಶದ ವಿರುದ್ಧ ಪ್ರಪಂಚದಲ್ಲಿ ಪ್ರಕಟವಾಗುತ್ತಿದ್ದವು. ಈ ವರದಿಗಳ ಧೋರಣೆ ಪ್ರಜಾಪ್ರಭುತ್ವ ಸರ್ಕಾರದಲ್ಲಿ ರಾಜಶಾಹಿಯು ನಿರ್ಮೂಲವಾಗಬೇಕು ಎನ್ನುವುದು; ಆಗ ನಂಬಿದ್ದು ಭೂಮಿ ಎಲ್ಲರಿಗೂ ಸೇರಬೇಕು ಎಂಬ ತತ್ವವನ್ನು ‘ದೇವರಿತ್ತ ಧರಣಿಯು ಎಲ್ಲರಿಗೂ ಸೇರಿದೆ. ಯಾರೋಬ್ಬರೂ ಅದರಲ್ಲಿ ಸರ್ವಸ್ವತಂತ್ರ ಅಧಿಕಾರವಿಲ್ಲ ಎಂದು ಒಪ್ಪಿಕೊಂಡ ಅರ್ಥಶಾಸ್ತ್ರಜ್ಞರು. ಸಮಾಜ ಕಲ್ಯಾಣಕಾಂಕ್ಷಿಗಳು ಮಾನವೀಯ ದೃಷ್ಟಿಯುಳ್ಳವರು ಕಾಲ ಕಾಲಕ್ಕೂ ಹೇಳುತ್ತಾ ಬಂದಿದ್ದಾರೆ. ಭೂಮಿಯ ಮೇಲೆ ಎಲ್ಲರಿಗೂ ಸಮನವಾದ ಹಕ್ಕಿದೆ. ಅದನ್ನು ಯಾರೂ ಹೇಗೂ ಕಿತ್ತುಕೊಳ್ಳಕೂಡದು. ಇದೇ ನ್ಯಾಯ; ಇದೇ ಧರ್ಮ; ಇದೇ ಮಾನವೀಯತೆಯೂ ಕೂಡ. ಜಮೀನುದಾರಿ ಪದ್ಧತಿ ತೊಲಗಬೇಕು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನವಯುಗವಾಣಿಯನ್ನು  ಎಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದು ಪಾಪುರವರೇ ಬರೆಯುತ್ತಾರೆ. ಮಾನವೀಯ ನೆಲೆಯ ತುಡಿತವಿರುವ ವರೆಲ್ಲ ರಾಜಶಾಹಿಯನ್ನು ವಿರೋಧಿಸಬೇಕಾದ ಒಂದು ಮನಸ್ಥಿತಿಯನ್ನು ಸಿದ್ಧಗೊಳಿಸುವ ಹಾಗೆ ಪತ್ರಿಕೆಗಳು ಕೆಲಸ ಮಾಡುತ್ತಿದ್ದವು.

ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಪಾಪು ಅರವರನ್ನು ಭೇಟಿ ಮಾಡಲಾಯಿತು. ಸೊಂಡೂರು ಮಾಜಿ ದೊರೆಗಳ ಸುದ್ದಿಯ ಪ್ರಸ್ತಾಪಿಸಿದಾದ  ಇದ್ದಕ್ಕಿದ್ದಂತೆ ‘ಅವ್ರು ಬಿಡ್ರಿ ಸ್ವರ್ಗದಿಂದ ಇಳಿದು ಬಂದ ದೊರೆಗಳಂತೆ ಮಾಡ್ತಿದ್ರು’ ಎಂದು ಆಕ್ರೋಶದಿಂದ ಮಾತನಾಡಿದರು. ಅವರ ಬಗ್ಗೆ ನಮ್ಮ ‘ಪ್ರಪಂಚದಲ್ಲಿ ಧೈರ್ಯದಿಂದ ನಾನೆ ಮೊದ್ಲು  ಬರೆದದ್ದು ಹೇಳೋದೇನಿದೆ ಪತ್ರಿಕೆ ನೋಡಿ’ ಎಂದು ಗ್ರಂಥಾಲಯದ ಸಹಾಯಕರನ್ನು ಕರೆದು ಪತ್ರಿಕೆ ತೋರಿಸಲು ಹೇಳಿದರು. ಈ ಇಳಿ ವಯಸ್ಸಿನಲ್ಲಿಯೂ ಅವರ ಸಿಟ್ಟು ಆಕ್ರೋಶ ನೇರವಂತಿಕೆಗೆ ಮುಪ್ಪು ಬಂದಿರಲಿಲ್ಲ.

೧೯೫೯ರಲ್ಲಿ ಸೊಂಡೂರಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಂ.ವೈ. ಘೋರ್ಪಡೆಯವರಿಗೆ ಕಾಂಗ್ರೇಸ್ ಸೀಟು ದೊರಕಿಸುವ ಪ್ರಯತ್ನ ನಡೆಯಿತು. ಇದನ್ನು ಬೆಂಗಳೂರಿನಿಂದ ಬರುತ್ತಿದ್ದ ‘ಜ್ವಾಲಾಮುಖಿ’ ಪತ್ರಿಕೆ ‘ಸೊಂಡೂರಿನ ರಜ್ವಿಗೆ ಕಾಂಗ್ರೆಸ್ ಟಿಕೆಟ್’ ಎಂದು ವರದಿ ಮಾಡಿತು. ‘ಹೈದಾರಾಬಾದಿನ ರಜಾಕಾರರ ಚಳುವಳಿಯ ಮುಖಂಡ ಕಾಸಿಂ ರಜ್ವಿ ಪಾಕಿಸ್ತಾನದಲ್ಲಿ ನೆಲೆಸದೆ ಭಾರತದಲ್ಲಿ ನೆಲೆಸಿ ಕಾಂಗ್ರೆಸ್ ಪಕ್ಷ ಸೇರಿದರೆ ಆತನೂ ಸಚಿವನಾಗುತ್ತಿದ್ದ. ತಮ್ಮ ರಾಷ್ಟ್ರ ವಿದ್ರೋಹಿ ಚಟುವಟಿಕೆಗಳಲ್ಲಿ  ರಜ್ವಿಯನ್ನು ಮೀರಿಸುವ ಸೊಂಡೂರಿನ ಮಹಾರಾಜ ಯಶವಂತರಾವ್ ಘೋರ್ಪಡೆಯವರ ಪುತ್ರ ಮುರಾರಿರಾವ್ ಘೋರ್ಪಡೆಯವರಿಗೆ ವಿಧಾನ ಸಭೆಗೆ ಟಿಕೆಟ್ ದೊರಕಿಸಲು ಕೆಲವು ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಿದ್ದಾರೆ” ಎಂಬ ವರದಿಯಲ್ಲಿ ಸೊಂಡೂರು ರಾಜರನ್ನು ಕಾಶೀಂರಜ್ವಿಗೆ ಹೋಲಿಸಲಾಗಿದೆ. ರಜಕರರ ಹೆಸರಲ್ಲಿ ಪೈಶಾಚಿಕ ಕೃತ್ಯಗಳಿಗೆ  ಹೆಸರಾದ ರಜ್ವಿಯ ರೂಪಕವನ್ನು ಬಳಸುವುದಾದರೆ, ಸೊಂಡೂರಿನ ಮಹಾರಾಜರು ಪ್ರಜೆಗಳನ್ನು ಹೇಗೆ ನಡೆಸಿಕೊಳ್ಳುತ್ತಿರಬಹುದು ಎಂಬ ಪ್ರಶ್ನೆ ಕಾಡುತ್ತದೆ. ಅಥವಾ ಇದು ನೈತಿಕತೆಯ ಅತಿನಿಷ್ಠೆಯಿಂದಾಗಿ ತೆಗಳಿಕೆಯ  ಅತಿಗೆ ಹೋಗಿರಬಹುದೇ? ಎನ್ನುವ ಅನುಮಾನಗಳು ಕಾಡುತ್ತವೆ.

ಕೋ.ಚನ್ನಬಸಪ್ಪ ತಮ್ಮ ‘ರೈತ’ ಪತ್ರಿಕೆಯಲ್ಲಿ ಸೊಂಡೂರು ಮಾಜಿ ರಾಜರ ಅಧಿಕಾರ ದುರುಪಯೋಗದ ಬಗ್ಗೆ ಬರೆಯುತ್ತಿದ್ದರು. ಪಾಪು ಹಾಗೂ ಕೋಚೆಯವರ ಬರಹಗಳು ಸ್ಪರ್ಧೆಗಿಳಿದಂತೆ ನೈತಿಕತೆಯ ಅಧಃಪತನವನ್ನು ದಾಖಲಿಸುತ್ತಿದ್ದವು. ಮೇ ೧೧.೧೯೫೯ರ ಕೋಚೆಯವರ ಒಂದು ವರದಿ ಹೀಗಿದೆ:

ಜತ್ತಿ, ಸೊಂಡೂರಿನ ಮಾಜಿ ದೊರೆಯನ್ನು ಏಕೆ-ಸಹಿಸುತ್ತಾರೆ? ಅದರ ಗುಟ್ಟು ಇಲ್ಲಿದೆ ಎನ್ನುವ ಲೇಖನದಲ್ಲಿ ಕಳೆದ ವಾರ ವಿಧಾನ ಸಭೆಯಲ್ಲಿ ಶ್ರೀಮತಿ ನಾಗರತ್ನಮ್ಮ ಹಿರೇಮಾಠರು ಸೊಂಡೂರು ಕುಮಾರಸ್ವಾಮಿ ದೇವಸ್ಥಾನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ಕೊಡುತ್ತ ರೆವಿನ್ಯೂ ಮಂತ್ರಿ ಕಡಿದಾಳ ಮಂಜಪ್ಪ. ಹಾಗೂ ಮುಖ್ಯಮಂತ್ರಿ ಜತ್ತಿಯವರು ಸೊಂಡೂರಿನ ಮಾಜಿ ದೊರೆ ಯಶವಂತರಾವ್ ಘೋರ್ಪಡೆಯವರನ್ನು ಎತ್ತಿಹಿಡಿದು  ಅವರ ಎಲ್ಲ ಘೋರ ಕೃತ್ಯಗಳಿಗೂ ಮನ್ನಣೆಯನ್ನು ಕೊಟ್ಟಿದ್ದಾರೆ. ಸೊಂಡೂರಿನ ಮಾಜಿ ದೊರೆ ದೇವಸ್ಥಾನದ ಅನುವಂಶಿಕ ಟ್ರಸ್ಟಿಯೆಂದೂ. ಅವರು ದೇವಸ್ಥಾನವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದೂ ಮೇಲುಗಟ್ಟಿದ್ದಾರೆ. ದೊರೆಯ ವಿರುದ್ಧ ಅಸಂಖ್ಯಾತ  ಸಾರ್ವಜನಿಕ ದೂರು ಸರ್ಕಾರಕ್ಕೆ ಹೋಗಿದ್ದರೂ ಯಾವ ಪರಾಮರ್ಶೆ ಮಾಡದೆ ಅವರ ಬೆನ್ನು ತಟ್ಟುವ ರಹಸ್ಯವೇನೆಂಬುದು ಈಗ ಯಾರಿಗಾದರೂ ಸ್ಪಷ್ಟವಾಗುವಂತಿದೆ. ಮುಖ್ಯಮಂತ್ರಿಗಳು ಸೊಂಡೂರು ದೊರೆಯ ಮುಲಾಜಿಗೊಳಗಾಗಿ ಸತ್ಯವನ್ನು ಹೇಗೆ ಮರೆ ಮಾಚುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ನಿದರ್ಶನ ಇನ್ನೇನು ಬೇಕು?

ಹೀಗೆ ಕೋಚೆಯವರು ೧೯೫೯ರಲ್ಲಿ ಜತ್ತಿ ಮತ್ತು ಸೊಂಸೂರು ಸಂಸ್ಥಾನದ ಸಂಬಂಧದ ಬಗ್ಗೆ ಬರೆದರು. ಇಲ್ಲಿ ಜನಪರವಾದ ಆಶಯವೊಂದು ನಿಷ್ಠುರವಾಗಿ ಕೆಲಸ ಮಾಡಿದೆ. ಅದೇ ಹೊತ್ತಿನ ದಿನಪತ್ರಿಕೆಗಳನ್ನು ನೋಡಿದರೆ. ಎಲ್ಲವೂ ಸರಿಯಾಗಿದೆ ಎನ್ನುವ ಧೋರಣೆಯನ್ನು ತಾಳುತ್ತಿದ್ದವು. ಆದರೆ ವಾರಪತ್ರಿಕೆ, ಮಾಸಪತ್ರಿಕೆಗಳು ಸಮಾಜದ ಕೊಳಕನ್ನು ಸರಿಪಡಿಸುವಲ್ಲಿ ಚಡಪಡಿಸುತ್ತಿದ್ದವು. ಈ ಮಧ್ಯೆಯೂ ಸರ್ಕಾರದ ಪರ ಬರೆಯುವ ಪತ್ರಿಕೆಗಳು ಇರಲಿಲ್ಲವೆ? ಅಥವಾ ಎಲ್ಲಾ ಪತ್ರಿಕೆಗಳು ನಿಷ್ಠುರತೆಯನ್ನು ಮಾನದಂಡವಾಗಿಸಿಕೊಂಡಿದ್ದವೆ? ಎಂದುಕೊಂಡರೆ ಅಂತಹ ಪತ್ರಿಕೆಗಳೂ ಇದ್ದವು ಆದರೆ ಅವುಗಳು ಓದುಗ ಸಮುದಾಯವನ್ನು ಅಷ್ಟಾಗಿ ಆವರಿಸಿರಲಿಲ್ಲ. ಇದೆ ಹೊತ್ತಿಗೆ ಹೊಸಪೇಟೆಯಿಂದ ಬರುತ್ತಿದ್ದ ಸ್ವತಂತ್ರ ಎಂಬ ಪತ್ರಿಕೆಯೊಂದು ಸೊಂಡೂರು ರಾಜಮನೆತವನ್ನು ವೈಭವಿಕರಿಸಿಯೆ ಬರೆಯುತ್ತಿತ್ತು. ಬಳ್ಳಾರಿಯ ಎಸ್.ಎಂ. ಕೊಟ್ರಯ್ಯ ಎಂಬುವರು ಇದರ ಸಂಪಾದಕರಾಗಿದ್ದರು.

”ಸೊಂಡೂರಿನಲ್ಲಿ ನಡೆದಿರುವ ಈ ಅನ್ಯಾಯ ನಿಲ್ಲಲಿ, ಕರ್ನಾಟಕ ಸರಕಾರ ಇಲ್ಲಿನ ಅಪಚಾರಗಳ ಬಗ್ಗೆ ಗಮನಿಸಲಿ. ಜನತೆ ಹೋರಾಟ ಸಫಲವಾಗಲಿ” ಎಂದು ಬೆಂಗಳೂರಿನ ‘ಸಂಗ್ರಾಮ’ ಪತ್ರಿಕೆ ವರದಿ ಮಾಡಿತು. ಅಂತೆಯೇ ಮೈಸೂರಿನಿಂದ ಬರುತ್ತಿದ್ದ ಪಿ.ಆರ್. ರಾಮಯ್ಯನವರ ಸಂಪಾದಕತ್ವದ ‘ತಾಯಿನಾಡು’ ವಾರಪತ್ರಿಕೆ ಬಿ.ಎನ್. ಗುಪ್ತರ ‘ಪ್ರಜಾಮತ’, ‘ಪ್ರಜಾಮಿತ್ರ’, ‘ಜನವಾಣಿ’, ‘ಜನಪ್ರಗತಿ’, ಪ್ರಾಸಂಗಿಕವಾಗಿ ಸೊಂಡೂರು ರಾಜಮನೆತನದ ಬಗೆಗೆ ಬರೆಯುತ್ತಿದ್ದವು. ಆದರೆ ಸೊಂಡೂರು ರಾಜಮನೆತನವನ್ನೇ ಪ್ರಧಾನವಾಗಿ ಗಮನಿಸುತ್ತಿದ್ದ ಪತ್ರಿಕೆಗಳು ಇದ್ದವು. ಅವುಗಳೆಂದರೆ ಬಳ್ಳಾರಿಯಿಂದ ಬರುತ್ತಿದ್ದ ‘ಬುಲೆಟಿನ್’, ಬೆಂಗಳೂರಿನ ರಣಧೀರ, ಹುಬ್ಬಳ್ಳಿಯ ‘ವಿಶಾಲ ಕರ್ನಾಟಕ’.

ಬೆಂಗಳೂರಿನ ಸಮಾಜವಾದಿ ಪಕ್ಷದ ಮುಖವಾಣಿ ಪತ್ರಿಕೆ ‘ರಣಧೀರ’. ಇದರ ಸಂಪಾದಕರು ಎಸ್. ಭಕ್ತವತ್ಸಲ. ಈ ಪತ್ರಿಕೆಯು ”ಸೊಂಡೂರು ಮಹಾರಾಜರ ಪ್ರಕರಣ” ಎಂಬ ಸರಣಿ ಲೇಖನಗಳನ್ನು ಪ್ರಕಟಿಸಿತು. ಪತ್ರಿಕೆಯ ಕಾಯಿದೆ ಸಲಹೆಗಾರರು ಕೆ.ಜಿ. ಮಹೇಶ್ವರಪ್ಪ. ಸರಣಿ ಲೇಖನಗಳ ಶೀರ್ಷಿಕೆಗಳು ಹೀಗಿದ್ದವು. ”ದೇವನೊಬ್ಬ ನಾಮ ಹಲವು, ದೇವರುಗಳ ಹೆಸರಿನಲ್ಲಿ ದೇಶದ ಸಂಪತ್ತಿನ ಲೂಟಿ” ”ಇಂಡಿಕೇಟ್ ಸಮಾಜವಾದಿ ಸೊಂಡೂರು ಮಹಾರಾಜರ ಮೋಘಲ್ ಷಾಹಿ ದೌಲತ್ತು”, ”ಸೊಂಡೂರು ಮಹಾರಾಜರಿಗೆ ಕೊಂಬಿದೆಯೆ? ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆಯೇ? ”ಸಂಸ್ಥಾನದ ಜನತೆ ದಂಗೆ ಏಳಬೇಕಾಗುತ್ತದೆ”. ಇಂತಹ ತಲೆಬರಹದ ಲೇಖನಗಳು ಉಗ್ರವಾದ ಧೋರಣೆ ಹೊಂದಿದ್ದವು. ಇಲ್ಲಿನ ಬರಹದಲ್ಲಿ ಸಾಮಾನ್ಯ ಜನರನ್ನು ಎಚ್ಚರಗೊಳಿಸುವ ಜರೂರು ಕಾಣುತ್ತದೆ. ಪತ್ರಿಕೆಯ ಧ್ಯೇಯವೆ ಸಮಾಜವಾದಿ ಧೋರಣೆಯಾಗಿದ್ದರಿಂದ ‘ರಾಜಶಾಹಿ’ಯನ್ನು  ಬೆಂಬಲಿಸುವ ಎಲ್ಲ ವಿಷಯಗಳ ಬಗ್ಗೆ ತುಂಬ ನಿಷ್ಠುರವಾಗಿ ಜನರಲ್ಲಿ ಸಂಚಲನವನ್ನುಂಟು ಮಾಡುವಂತೆ ವರದಿಗಳಿರುತ್ತಿದ್ದವು. ‘ರಣಧೀರ ಪತ್ರಿಕೆ’ಯು ಈ ಲೇಖನ ಸರಣಿ ಪ್ರಾರಂಭಿಸುವ ಮುನ್ನ ಒಂದು ಪ್ರತಿಜ್ಞೆಯನ್ನು ಪ್ರಕಟಿಸಿತು. ಆದರ ಒಂದು ಭಾಗ ಹೀಗಿದೆ :

ಸೊಂಡೂರು ರಾಜ ಯಶವಂತರಾವ್ ಹಿಂದೂರಾವ್ ಘೋರ್ಪಡೆಯವರ ಬಗ್ಗೆಯಾಗಲಿ, ಅವರ ಪುತ್ರ ಎಂ.ವೈ. ಘೋರ್ಪಡೆಯವರ ಬಗ್ಗೆಯಾಗಲಿ ಮತ್ತು ಅವರ ಹುಜೂರ್ ಕಾರ್ಯದರ್ಶಿಯವರಾದ ಮಾನ್ ಸಿಂಗ್ ಪೋಲೆಯವರ ಬಗ್ಗೆಯಾಗಲಿ ನಮಗೆ ವಯಕ್ತಿಕ ದ್ವೇಶವಿಲ್ಲ. ಸೊಂಡೂರು ರಾಜರಿಗೆ ಸೇರಿದ ಖಾಸಗಿ ಆಸ್ತಿಯ ಮತ್ತು ದೇವಸ್ಥಾನಗಳಿಗೆ ಸೇರಿದ ಆಸ್ತಿಯು ವಿಚಾರವಾಗಿ ಪರಿಶೀಲನೆ ನಡೆಸಿದರೆ ಗಹನವಾದ ಪ್ರಶ್ನೆಗಳು ಉದ್ಭವಿಸುತ್ತವೆ. ನಮ್ಮ ಬಡ ದೇಶದಲ್ಲಿ ಯಾವುದೇ ವ್ಯಕ್ತಿ ಶರೀರ ಶ್ರಮವಿಲ್ಲದೆ ಭೋಗ ಜೀವನ ನಡೆಸಿಕೊಂಡು ಬರುವ ವ್ಯವಸ್ಥೆಯನ್ನು ಇನ್ನೆಲ್ಲಿಯವರೆಗೆ ಉಳಿಸಿಕೊಳ್ಳುವುದು? ದೃಷ್ಟಿಯಿಂದ ಸೊಂಡೂರಿನ ಮಹಾರಾಜರ ನಿದರ್ಶನವನ್ನು ನಾವು ಜನತೆಯ ಮುಂದೆ ಇಟ್ಟಿದ್ದೇವೆ. ಬಂಡವಾಳಷಾಹಿ ಮತ್ತು ರಾಜಷಾಹಿ ಎಲ್ಲಾ ದುಷ್ಟಶಕ್ತಿಗಳು ಒಬ್ಬ ವ್ಯಕ್ತಿಯಲ್ಲಿದ್ದರೂ ಹೇಗೆ ಸಾಮಾನ್ಯ ಜನತೆಯ ಮುಂದೆ ಜನಪ್ರಿಯವಾಗಿ ಮೆರೆಯಬಲ್ಲನು ಎಂಬುದಕ್ಕೆ ರಾಜರು ಸಮರ್ಥ ಉದಾಹರಣೆ. ಪರಮ ದೈವ ಭಕ್ತರಂತೆ ದೇಶಕ್ಕೆ ತೋರಿಸಿ, ದೇವರನ್ನೇ ನುಂಗುವ ಸಮಾಜವಾದಿ ನಾಯಕರಂತೆ ನಂಬಿಸಿ, ಜನರ ರಕ್ತಹೀರುತ್ತ ಸನ್ಯಾಸಿ ವೇಷಧಾರಿಯಾಗಿ ವಂಚಿಸುವ ಮಹಾನುಭಾವರು ನಮ್ಮ ದೇಶದಲ್ಲಿದ್ದಾರೆ. ಇಂತಹ ಕಪಟ ನಾಟಕಗಳನ್ನು ಬಯಲು ಗೊಳಿಸುವುದೇ ರಣಧೀರ ಪತ್ರಿಕೆಯ ಪ್ರತಿಜ್ಞೆ (ನವೆಂಬರ್ .೧೯೭೧)

ಹೀಗೆ ಪತ್ರಿಕೆಯೊಂದು ಪ್ರತಿಜ್ಞೆ ಮಾಡುವ ಮೂಲಕ ‘ಸಮಾಜವಾದಿ’ ಆಶಯವನ್ನು ವ್ಯಕ್ತಪಡಿಸುವುದು ವಿಶೇಷವಾಗಿದೆ. ಇದು ಅಕ್ಷರ ಕ್ರಾಂತಿಯಂತೆ ಕಾಣುತ್ತದೆ. ಎಂ.ವೈ. ಘೋರ್ಪಡೆಯವರು ಹಣಕಾಸು ಮಂತ್ರಿಗಳಾಗಿದ್ದ ಸಂದರ್ಭದಲ್ಲಿಯೂ ”ರಾಜ್ಯದ ಹಣಕಾಸಿನ ಮಂತ್ರಿಗಳಿಗೆ ರಣಧೀರನ ಬಹಿರಂಗ ಪತ್ರ” ಎಂದು ಹತ್ತಾರು ಸಮಸ್ಯೆಗಳನ್ನು ಪ್ರಶ್ನೆ ಮಾಡಿತು. ಇಂತಹದ್ದೇ ಸರಣಿ ಲೇಖನಗಳನ್ನು ಪ್ರಕಟಿಸಿದ್ದು ‘ವಿಶಾಲ ಕರ್ನಾಟಕ’ ವಾರಪತ್ರಿಕೆ. ಆರ್.ವೈ. ಜಠಾರ, ಕೆ.ಎಸ್. ಪಟೇಲ್ ಇವರ ಸಂಪಾದಕತ್ವದಲ್ಲಿ ಹುಬ್ಬಳ್ಳಿಯಿಂದ ಬರುತ್ತಿದ್ದ ಪತ್ರಿಕೆ ಆರ್. ಟಿ. ಮಜ್ಜರಿಗಿ ಎಂಬುವರು ”ಸೊಂಡೂರು ಕುಮಾರಸ್ವಾಮಿ ವಿಮೋಚನೆ” ಎಂಬ ಲೇಖನ ಮಾಲೆಯನ್ನು ಐದು ಕಂತುಗಳಲ್ಲಿ ಬರೆದರು ”ಮಾಜಿರಾಜರ ಮಸಲತ್ತು” ”ಸತ್ಯಕ್ಕೆ ಅಪಚಾರ” ”ಝಂಡಾ ಹಾರಿಸುವ ಯಲಾಮ್ ರದ್ದಾದದ್ದು ಸಾರ್ವಜನಿಕ ವಂಚನೆ” ”ಮುಕ್ತದರ್ಶನ ಅಗತ್ಯ” ”ಶೃಂಖಲೆ ಕಳಚಲಿ” ಎಂಬ ಶೀರ್ಷಿಕೆಗಳಲ್ಲಿ ಪ್ರಕಟವಾದ ಲೇಖನಗಳು ಮಾಜಿ ಮಹಾರಾಜರ ಬಗೆಗೆ ಹಲವು ಒಳನೋಟಗಳನ್ನು ಕೊಡುತ್ತದೆ. ಈ ಬರಹಗಳು ಮುಖ್ಯವಾಗಿ ಕುಮಾಸ್ವಾಮಿ ದೇವಸ್ಥಾನ ವಿಮೋಚನೆಯತ್ತ ಗಮನ ಹರಸಿವೆ. ಯಜಮಾನ ಶಾಂತರುದ್ರಪ್ಪ  ನವರು ಹೊರಡಿಸಿದ ಕರಪತ್ರಗಳೇ ಇಲ್ಲಿ ಲೇಖನಗಳಾದಂತೆ ಕಾಣುತ್ತಿದೆ. ಈ ಪತ್ರಿಕೆ ಹುಬ್ಬಳ್ಳಿಯಿಂದ ಬರುತ್ತಿದ್ದರಿಂದ ಉತ್ತರ ಕರ್ನಾಟಕದಲ್ಲಿ ಸೊಂಡೂರಿನ ಮಹಾರಾಜರ ವಾಸ್ತವ ಚಿತ್ರಣ ಪ್ರಚಾರವಾಯಿತು.

ಬಳ್ಳಾರಿಯಿಂದ ಬರುತ್ತಿದ್ದ ‘ಬುಲೆಟಿನ್’ ಪತ್ರಿಕೆ ಸಂಪಾದಕರ ಹೆಸರಲ್ಲಿ ‘ಬುಲೆಟಿನ್ ಶಾಂತಿಯುಗ’ ಎಂದು ಪ್ರಕಟಿಸುತ್ತಿತ್ತು. ಸಿದ್ದಪ್ಪ ಬುಕ್ಕಪ್ಪ ಇಟಿಗಿಯವರು ಇದರ ಸಂಪಾದಕರಾಗಿದ್ದರು. ಬಳ್ಳಾಗಿಯ ‘ಸೊಂಡೂರು ವಿವೋಚನ ಸಮರ ಸಮಿತಿಯ’ ಪ್ರತಿ ಹೋರಾಟಕ್ಕೂ ಪತ್ರಿಕೆ ಮುಖವಾಣಿಯಾಗಿತ್ತು. ಈ ಪತ್ರಿಕೆಯ ಬರಹವೂ ಅಬ್ಬರದಿಂದಿತ್ತು. ವರದಿಯ ಒಂದು ಭಾಗವನ್ನು ನೋಡಬಹುದು.

ಸೊಂಡೂರು ಮಾಜಿ ರಾಜ ದೇವರಸೊತ್ತನ್ನು ತಿನ್ನುವ ಭಾರಿ ದರೋಡೆಕೋರ, ಹಿಂದೆ ರಾಷ್ಟ್ರಧ್ವಜವನ್ನು ಕಿತ್ತು ಸುಟ್ಟ.. ಸೊಂಡೂರು ರಾಜ ಈಗ ಗಾಂಧಿ ಭಕ್ತ ಎಂಬ ಲೇಖನದಲ್ಲಿ (ಏಪ್ರಿಲ್ ೩೦.೧೯೬೭) ಬಳ್ಳಾರಿ ಜನರೇ ಏಳಿ ಎದ್ದೇಳಿ ಎಚ್ಚರವಾಗಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಮುಂದೆ ಬನ್ನಿ, ಯಶವಂತರಾವ್ ಘೋರ್ಪಡೆ ಇವರು ಯಾವ ತಲೆಮಾರಿನಲ್ಲಿಯೋ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದು ಸೇರಿ ಆಲದ ಮರದಂತೆ ಬೇರು ಬಿಟ್ಟು, ಭದ್ರವಾಗಿ ಕುಳಿತಿದ್ದಾರೆ. ಇಂತಹ ಭ್ರಷ್ಟವ್ಯಕ್ತಿಯ ಬೆನ್ನು ತಟ್ಟುವವರು ಭ್ರಷ್ಟಾಚಾರಕ್ಕೆ ಒಳಗಾದವರಲ್ಲವೆ? ನಮ್ಮ ಆರೋಪಗಳು ಸರಿಯಲ್ಲವೆಂದು ಹೇಳುವ ವೀರರು ಮುಂದೆ ಬರಲಿ. ಹೀಗೆ ಮಾಜಿರಾಜರಾಗಲಿ ಆತನ ಅನುಯಾಯಿಗಳಾಗಲಿ ಉತ್ತರ ಕೊಡದಿದ್ದರೆ ನಮ್ಮ ಆರೋಪಗಳೇ ಸತ್ಯವೆಂದು ಜನತೆ ನಿರ್ಧಾರ ಮಾಡಬೇಕಾಗುತ್ತದೆ.

ಹೀಗೆ ‘ಬುಲೆಟನ್’ ಪತ್ರಿಕೆ ಮಾಜಿದೊರೆಗಳ ವಿರುದ್ಧ ಯುದ್ಧವನ್ನೇ ಸಾರಿದಂತೆ ಪ್ರತಿ ಸಂಚಿಕೆಯಲ್ಲಿ ಬರೆಯುತ್ತಿತ್ತು. ಸೊಂಡೂರು ಮಾಜಿರಾಜರನ್ನು ವಿರೋಧಿಸುವ ಒಂದು ಪತ್ರಿಕಾ ಬಳಗವೇ ಇತ್ತು. ಇಂತಹ ಹಿನ್ನೆಲೆಯಿರುವ ಪತ್ರಿಕಾ ವರದಿಗಳನ್ನು ಪರಿಶೀಲಿಸಿದರೆ, ೧೯೭೩ರ ರೈತ ಹೋರಾಟದ ಹೊತ್ತಿಗೆ ಇವುಗಳ ಕ್ರಾಂತಿಯ ಸ್ವರೂಪ ಸೌಮ್ಯವಾದಂತೆ ಕಾಣುತ್ತದೆ. ಬಹುತೇಕ ಪತ್ರಿಕೆಗಳು ತಮ್ಮ ಪ್ರಕಟಣೆಯನ್ನು ನಿಲ್ಲಿಸಿದ್ದವು. ಪಾಪು ೬೦ರ ದಶಕದಿಂದ ಸೊಂಡೂರು ಸಂಸ್ಥಾನದ ಬಗ್ಗೆ ಬರೆದೂ ಬರೆದು ದಣಿದಂತಿದ್ದರು. ೧೯೭೦ರಲ್ಲಿ ಓದುಗರೊಬ್ಬರು ಪ್ರಪಂಚಕ್ಕೆ ‘ಸೊಂಡೂರು ದೊರೆಯ ಬಗೆಗೆ ನೀವು ಇತ್ತೀಚೆಗೆ ಏನೂ ಬರೆದಿಲ್ಲ ಇದರಿಂದ ನಿಮ್ಮದು ಇಳಿಮುಖವಾಯಿತೆಂದು ತಿಳಿಯೋಣವೆ? ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಪಾಪುರವರು ‘ಪತ್ರಿಕೆಯು ಗುರಿಯನ್ನು ಮಾತ್ರ ತೋರಿಸುತ್ತದೆ. ಆ ಗುರಿಯ ಕಡೆಗೆ ಹೊಡೆಯುವುದು ಆಡಳಿತದ ಕೆಲಸ, ಆಡಳಿತವು ಅತ್ತ ಹೊಡೆಯುವುದಿಲ್ಲ ಅಂತಾದರೆ ಅಂಥ ಆಡಳಿತವನ್ನು ಪಡೆದ ಜನರು ತಲೆತಗ್ಗಿಸಬೇಕು’ ಎಂದು ಉತ್ತರಿಸಿದ್ದರು. ಭೂ ಹೋರಾಟದ ಸಂದರ್ಭಕ್ಕೆ ಅವರ ಸಂಪಾದಕತ್ವದ ‘ವಿಶ್ವವಾಣಿ’ ದಿನಪತ್ರಿಕೆ ಪ್ರತಿ ದಿನದ ವರದಿ ಮಾಡಿತು. ಚಳುವಳಿಯ ನಾಯಕರು ಮಾಡಿದ ಭಾಷಣಗಳನ್ನು ಸಹ ಪ್ರಕಟಿಸಿತು. ‘ಪ್ರಪಂಚ’ ಪತ್ರಿಕೆ ಬಗ್ಗೆ ಬಾಬುರೆಡ್ಡಿ ತುಂಗಳ್‌ರವರು ಹೀಗೆ ಬರೆಯುತ್ತಾರೆ: ‘ಆ ಕಾಲದಲ್ಲಿ ಪಾಟೀಲ್ ಪುಟ್ಟಪ್ಪ ನವರ ಪ್ರಪಂಚ ವಾರಪತ್ರಿಕೆ ಕರ್ನಾಟಕದ ಮನೆಮಾತಾಗಿತ್ತು. ಅದನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದರು. ನಮಗಂತೂ ‘ಪ್ರಪಂಚ’ದ ಹುಚ್ಚೇ ತಲೆಯಲ್ಲಿ ತುಂಬಿಕೊಂಡಿತ್ತು. ಅದಕ್ಕಾಗಿ ಬಾಗಲಕೋಟೆ ರೈಲ್ವೆ ಸ್ಟೇಷನ್ನಿನಲ್ಲಿ ರೈಲು ಬರುವವರೆಗೆ ಕಾಯುತ್ತಿದ್ದೆವು. ಬಂಡಲ್ ಹೊಡೆದ ಕೂಡಲೆ ಪತ್ರಿಕೆ ಕೊಳ್ಳಲು ನುಗ್ಗತ್ತಿದ್ದೆವು. ೧೯೫೦ರ ದಶಕದಲ್ಲಿ ‘ಪ್ರಪಂಚ’ ಪತ್ರಿಕಾ ರಂಗದಲ್ಲೊಂದು ಕ್ರಾಂತಿಯನ್ನೇ ಮಾಡಿತು. ಹಲವಾರು ಪ್ರತಿಭಾವಂತರನ್ನು ಅದು ಸಾರಸ್ವತ ಲೋಕಕ್ಕೆ ಪರಿಚಯಿಸಿತು. ಉತ್ತರ ಕರ್ನಾಟಕದ ಮುಖವಾಣಿಯಾಗಿ ಪ್ರಪಂಚ ಹಳ್ಳಿಹಳ್ಳಿಯನ್ನು ತಲುಪಿಬಿಟ್ಟಿತು. ಆಗಿನ ನಾಡಿನ ಜನತೆ ಪಾಪುರವರಿಗೆ ಪತ್ರಿಕಾ ರಂಗದ ಧೀಮಂತ ಎಂಬ ಪಟ್ಟ ಕಟ್ಟಿದ್ದರು. ಹುಬ್ಬಳ್ಳಿಯ ಟ್ರಾಫಿಕ್ ಐರ್ಲಾಂಡ್ ಪತ್ರಿಕಾ ಪ್ರಿಯರ ಕಾಶಿಯೆನಿಸಿತು. ನಾವೆಲ್ಲ ಪಾಪು ಭಕ್ತಮಂಡಳಿಯನ್ನು ಗೊತ್ತಿಲ್ಲದಂತೆ ಸೇರಿಕೊಂಡೆವು’ ಹಗರಿಬೊಮ್ಮನಹಳ್ಳಿಯ ಸಾಹಿತಿ ಗುರುಮೂರ್ತಿ ಪೆಂಡಕೂರರೊಂದಿಗೆ ಮಾತನಾಡುತ್ತಿದ್ದಾಗ ‘ರಾಜಕಾರಣಿಗಳ ಫೋಟೋವನ್ನು ಮೊದಲು ಪ್ರಪಂಚ ಪ್ರಕಟಿಸುತ್ತಿತ್ತು. ಜನ ಆವಾಗ್ಲೆ ಅವರ ಮುಖ ನೋಡ್ತಿದ್ದು…’ ಎಂದರು. ಒಂದು ಪತ್ರಿಕೆ ತನ್ನ ಕಾಲದ ನಾಡಿ ಮಿಡಿತವಾದಲ್ಲಿ ಅದು ಸಂಚಲನವನ್ನುಂಟು ಮಾಡಬಲ್ಲದು ಎಂಬುದಕ್ಕೆ ಪಾಪುರವರ ‘ಪ್ರಪಂಚ’ವೇ ಸಾಕ್ಷಿ.

೧೯೭೩ರ ಚಳುವಳಿಯ ಬಗೆಗೆ ಇಂಗ್ಲಿಷ್ ಪತ್ರಿಕೆಗಳಾದ ‘ಡೆಕ್ಕನ್ ಹೆರಾಲ್ಡ್’, ‘ದಿ ಹಿಂದೂ’, ‘ಇಂಡಿಯನ್ ಎಕ್ಸ್ ಪ್ರೆಸ್’ಗಳು  ತುಣುಕು ಸುದ್ದಿಯಾಗಿ ಪ್ರಕಟಿಸಿದವು. ಸೆಪ್ಟಂಬರ್ ೧೩.೧೯೭೩ರಂದು ‘ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಹೋರಾಟದ ಸುದ್ದಿ ”Sondur stir Fizzles out” ಎಂದು ಪ್ರಕಟವಾಯಿತು. ಈ ವರದಿ ”ರೈತರಿಂದ ಸೊಂಡೂರಿನಲ್ಲಿ ಕೋಲಾಹಲವನ್ನು ಎಬ್ಬಿಸಲಾಗಿದೆ. ಇದೊಂದು ವ್ಯರ್ಥ ಪ್ರಯತ್ನ” ಎನ್ನುವಂತಿತ್ತು. ಇದನ್ನು ವಿರೋಧಿಸಿ ಯಜಮಾನ ಶಾಂತರುದ್ರಪ್ಪನವರು ಪತ್ರಿಕಾ ಕಚೇರಿಗೆ ಬಂದು ಪತ್ರ ಬರೆದರು. ಅದರಲ್ಲಿ ಬಳ್ಳಾರಿಯ ಪತ್ರಿಕಾ ಪ್ರತಿನಿಧಿ ಸತ್ಯಾನಂದ ಇವರನ್ನು ದೂಷಿಸಲಾಗಿತ್ತು. ”ನಿಮ್ಮ ಪತ್ರಿಕಾ ಪ್ರತಿನಿಧಿ ರೈತ ಹೋರಾಟವನ್ನು ಕಡೆಗಣಿಸಿ ಬರೆದಿದ್ದಾರೆ. ಅರ್ಥ ಸಚಿವರ ಪರವಾದ ಈ ವರದಿ ಸತ್ಯಕ್ಕೆ ದೂರವಾಗಿದೆ. ಜಾರ್ಜ್ ಫರ್ನಾಂಡಿಸ್ ಅಂತವರ ಮುಖಂಡತ್ವದ ಈ ಹೋರಾಟವನ್ನು ಕೇವಲ ಕೋಲಾಹಲ ದೊಂಬಿ ಎಂದು ಅವಮಾನಿಸಿದ್ದಾರೆ. ಹಾಗಾಗಿ ಪತ್ರಿಕೆ ವಿಚಾರಣೆ ನಡೆಸಿ ಕ್ಷಮಾಪಣೆ ಕೇಳಬೇಕೆಂದು ವಿನಂತಿಸಿಕೊಳ್ಳುತ್ತೇವೆ” ಎಂದು ಬರೆಯಲಾಗಿತ್ತು. ಹೀಗೆ ಪತ್ರಿಕೆಗಳೊಂದಿಗೂ ಹೋರಾಟಗಾರರ ಲಿಖಿತ ಘರ್ಷಣೆಗಳು ನಡೆದವು.

ಇಲ್ಲಿಯ ಪತ್ರಿಕಾ ಬರಹಗಳನ್ನು ಗಮನಿಸಿದರೆ ಕೆಲವು ಸಂಗತಿಗಳು ಸ್ಪಷ್ಟವಾಗುತ್ತವೆ. ಒಂದು: ೧೯೭೩ರ ಭೂ ಹೋರಾಟವನ್ನು ಪತ್ರಿಕೆಗಳು ವರದಿ ಮಾಡುವ ಮೂಲಕ ಹೇಗೆ ಬೆಂಬಲಿಸಿದವು. ಎರಡು: ಒಂದು ರಾಜಮನೆತನದ ವಿರುದ್ಧ ಪತ್ರಿಕೆಗಳ ಪ್ರತಿರೋಧದ ಚರಿತ್ರೆ. ಈ ಎರಡೂ ಅಂಶಗಳು ಒಂದಕ್ಕೊಂದು ಪೂರಕವಾದವುಗಳು ಅಥವಾ ಪತ್ರಿಕೆಗಳ ಮಾಜಿರಾಜರ ವಿರುದ್ಧದ ನಿರಂತರ ಪ್ರತಿರೋಧವೇ ೧೯೭೩ರ ಭೂ ಹೋರಾಟಕ್ಕೆ ಪರೋಕ್ಷ ಕಾರಣವೂ ಕೂಡ. ಇಲ್ಲಿ ಬಳಸಿರುವ ಭಾಷೆ, ತಳೆದಿರುವ ಧೋರಣೆ ಹೇಳಹೊರಟಿಸುವ ಶೈಲಿ, ಓದುಗರ ಮೇಲೆ ಇಟ್ಟುಕೊಂಡ ದೃಷ್ಟಿ ಎಲ್ಲವೂ ಪತ್ರಿಕಾ ಚರಿತ್ರೆಯ ಭಿನ್ನ ಆಯಮಾಮಗಳೇ. ಪತ್ರಿಕೆ ಯೊಂದು ಸಮಾಜದ ‘ಶಸ್ತ್ರಚಿಕಿತ್ಸಕ’ ಎಂಬ ಜಯಮಾನವನ್ನು ೬೦ರ ದಶಕ ಪತ್ರಿಕೆಗಳು ಪಾಲಿಸಿದವು. ಹಾಗಾಗಿಯೇ ಇಲ್ಲಿ ಪರ ವಿರೋಧದ ರಾಜಕಾರಣ ಕೆಲಸ ಮಾಡದೆ ಪತ್ರಿಕಾ ನಿಷ್ಠೆ ಮಾತ್ರ ಇತ್ತು. ಇಲ್ಲಿನ ಧೋರಣೆಗಳು ಪ್ರಜಾಪ್ರಭುತ್ವ ಸರ್ಕಾರದಲ್ಲಿ ಎಲ್ಲರೂ ಸಮಾನರು ಎಂಬ ತತ್ವವನ್ನು ತೀವ್ರವಾಗಿ ನಂಬಿದ್ದವು. ಹಾಗಾಗಿಯೇ ಈ ಸಮಾನತೆ ಎಲ್ಲೆಲ್ಲಿ ಅಸಮಾನತೆಯ ರೂಪ ತಾಳುತ್ತದೆಯೋ ಅಲ್ಲಿ ಪತ್ರಿಕೆಗಳು ಉಗ್ರ ಸ್ವರೂಪವನ್ನು ತಾಳುತ್ತಿದ್ದವು. ಮೇಲಿನ ಪತ್ರಿಕೆಗಳ ಮಾಹಿತಿಯನ್ನು ಕೇವಲ ಸೊಂಡೂರು ಸಂಸ್ಥಾನವನ್ನು ಕೇಂದ್ರಕರಿಸಿ ನೋಡುವುದು ಒಂದು ವಿಧಾನವಾದರೆ, ಇದರ ಮೂಲಕವೇ ಕರ್ನಾಟಕ ಪತ್ರಿಕಾ ಚರಿತ್ರೆಯ ಕವಲುಗಳನ್ನು ಕರ್ನಾಟಕದ ರಾಜಕೀಯ ಚರಿತ್ರೆಯ ಭಿನ್ನ ಮಗ್ಗಲುಗಳನ್ನು ನೋಡಲು ಸಾಧ್ಯವಿದೆ.

‘ಆಧುನಿಕ ಸಾರ್ವಭೌಮ’, ‘ಮೊಘಲ್ ಶಾಹಿ ದೌಲತ್ತು’, ‘ಮಹಾರಾಜರಿಗೆ ಕೊಂಬು ಬಂದಿದೆಯೇ”? ‘ಕುಮಾರಸ್ವಾಮಿ ವಿಮೋಚನೆಯಾಗಲಿ’, ‘ಶೃಂಖಲೆ ಕಳಚಲಿ’ ಈ ಬಗೆಯ ಪದ ಬಳಕೆ ಭಾಷೆಯೆ ಸ್ವಾತಂತ್ರವನ್ನು, ಪ್ರಜಾಪ್ರಭುತ್ವವನ್ನು ಹಂಬಲಿಸುವಂತಿದೆ. ರೋಚಕ ನಿರೂಪಣೆಗಳು, ಅಬ್ಬರವಾದ ಬೈಗುಳಗಳು, ಸ್ಫೋಟಕ ಸಾಲುಗಳು, ಭಾಷೆಯು ಪತ್ರಿಕಾ ರಂಗದಲ್ಲಿ ಪಡೆಯುವ ಭಿನ್ನ ಆಯಾಮಗಳನ್ನು ತಿಳಿಸುತ್ತದೆ. ಒಂದು ಕಾಲದ ಚರಿತ್ರೆಯನ್ನು ದಾಖಲಿಸುವ ಸಂದರ್ಭದಲ್ಲಿ ಇಂತ ಭಾಷೆಯ ಬಳಕೆಯೂ ದಾಖಲಾಗುವ ಅಗತ್ಯವಿದೆ. ಆ ಕಾರಣಕ್ಕಾಗಿಯೇ ಪತ್ರಿಕೆಗಳ ಉಧೃತ ಭಾಗಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಪತ್ರಿಕೆಗಳ ಕಣ್ಣಿಂದ ೧೯೭೩ರ ಚಳವಳಿಯನ್ನು ನೋಡುವ ಕ್ರಮ ಇಲ್ಲಿದೆ. ಸ್ವಾತಂತ್ಯ್ರನಂತರದಿಂದ ಪತ್ರಿಕೆಗಳು, ಅಷ್ಟು ನೇರವಾಗಿ ಸೊಂಡೂರು ಮಾಜಿರಾಜರ ಅಪರಾಧಗಳನ್ನು ಬರೆಯುತ್ತ ಬಂದವು. ಆದರೆ ಇದಕ್ಕೆ ಸರ್ಕಾರ ಸ್ಪಂದಿಸಿದ್ದು ಮಾತ್ರ ತುಂಬ ಕಡಿಮೆ. ಈ ವರದಿಯಿಂದ ಜನ ಎಚ್ಚೆತ್ತು ಹೋರಾಟವನ್ನೇನು ರೂಪಿಸಲಿಲ್ಲ. ಆದರೆ ಅಂತಹ ವಾತಾವರಣವನ್ನು ಕ್ರಮೇಣ ರೂಪಿಸುತ್ತಾ ಬಂದವು. ಅದು ನಿಧಾನಗತಿಯ ಪ್ರತಿಫಲವಾಗಿ ೧೯೭೩ರ ಚಳುವಳಿ ನಡೆಯಿತು.